Home / ಕಥೆ / ಸಣ್ಣ ಕಥೆ / ಪುನರ್‍ಮಿಲನ

ಪುನರ್‍ಮಿಲನ

ಮಂಗಳೂರು ವಿಮಾನ ನಿಲ್ದಾಣ. ಆಗ ತಾನೇ ನೆಲದಲ್ಲಿ ನೆಲೆನಿಂತ ವಿಮಾನದಿಂದ ಇಳಿದ ಯುವಕನೊಬ್ಬ ಜಾತ್ರೆಯ ತೇರನ್ನು ಕೈಯಲ್ಲಿ ಎಳೆದು ತರುವಂತೆ, ತನ್ನ ದಪ್ಪನೆಯ ಸೂಟ್‌ಕೇಸನ್ನು ಎಳೆದುಕೊಂಡು ಬರುತ್ತಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯೆಲ್ಲಾ ಮುಗಿದ ಮೇಲೆ ತನ್ನ ತಮ್ಮನ ಬರುವಿಕೆಗಾಗಿ ಅಲ್ಲೆ ಕಾದು ಕುಳಿತನು.

ಆತ ಪ್ರದೀಪ, ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ. ಈಗ ಎರಡು ವಾರಗಳ ರಜೆಯ ಮೇಲೆ ಊರಿಗೆ ಬಂದಿದ್ದಾನೆ. ವೆಂಕಟಕೃಷ್ಣ ಭಟ್ಟರ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವನು.

ಊರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಆರು ವರ್ಷಗಳ ಹಿಂದೆ ಉದ್ಯೋಗದ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿದ್ದ. ಉದ್ಯೋಗ ಎನ್ನುವುದು ಬೆಂಗಳೂರಿಗೆ ತೆರಳಲು ನಿಮಿತ್ತಮಾತ್ರವಾಗಿತ್ತು. ಅದರೊಳಗಿನ ಕಾರಣ ಬೇರೆಯೇ ಇತ್ತು. ಬೆಂಗಳೂರಿಗೆ ಹೋದ ಬಳಿಕ ಆತ ಊರಿಗೆ ಬಂದಿರುವುದು ಇದೇ ಮೊದಲು.

ಅವನ ಮುಖ ತನ್ನ ಹುಟ್ಟೂರು ತಲುಪಿದ ಸಂತೋಷದ ಬದಲಿಗೆ ಏನೋ ಒಂದು ರೀತಿಯ ಗೊಂದಲದ ಗೂಡಾಗಿ ಪರಿವರ್‍ತಿತವಾಗಿದೆ. ‘ಆ ಹುಡುಗಿ’ಯ ಸ್ನಿಗ್ದ ಸೌಂದರ್‍ಯ, ತನ್ನ ಮೊದಲ ಪ್ರೇಮ ನಿವೇದನೆ ತಮ್ಮಿಬ್ಬರ ಮಿಲನಕ್ಕೆ ಉಂಟಾದ ಅಡ್ಡಿ, ಹುಟ್ಟೂರು ಬಿಟ್ಟ ತಾನು ಬೆಂಗಳೂರು ಸೇರಿದ್ದು ಇದೆಲ್ಲಾ ಆತನ ಮನಸ್ಸಲ್ಲಿ ಹಾಗೆ ಬಂದು ಹೀಗೆ ಮಾಯವಾಯಿತು. ಅದೇ ವಿಚಾರವನ್ನು ಮತ್ತಷ್ಟು ಮನಸ್ಸಿಗೆ ತಂದುಕೊಳ್ಳುತ್ತಿದ್ದನೋ ಏನೋ, ಅಷ್ಟರಲ್ಲಿ ಆತನ ಭಾವನಾ ಬಂಧಕ್ಕೆ ಭಂಗತರುವಂತೆ ಆತನ ತಮ್ಮ ಸುದೀಪ್ ಅವಸರವಸರವಾಗಿ ಓಡೋಡಿ ಬಂದನು. ಬಂದವನೇ ‘ಹೇಗಿದ್ದಿಯಾ ಅಣ್ಣ? ಬಂದು ತುಂಬಾ ಹೊತ್ತಾಯಿತೇ? ಈಗ ಮಂಗಳೂರು ಕೂಡಾ ಬೆಂಗಳೂರಿನಂತಾಗಿಬಿಟ್ಟಿದೆ. ಟ್ರಾಫಿಕ್ ಜಾಮ್‌ನಿಂದಾಗಿ ತಡವಾಯಿತು’ ಎಂದವನೇ ತನ್ನ ಸೋದರನ ಬ್ಯಾಗನ್ನು ಆತನ ಕೈಯಿಂದ ತೆಗೆದುಕೊಂಡು ಹೋಗಿ ಕಾರಲ್ಲಿಟ್ಟು, ಕಾರಿನ ಮುಂಬಾಗಿಲನ್ನು ತೆರೆದು, ಅಣ್ಣನನ್ನು ಕೂರಿಸಿ, ಕಾರನ್ನು ಸ್ಟಾರ್ಟ್ ಮಾಡಿ ಹೊರಟನು.

ತಂದೆ-ತಾಯಿಯರ ಬಗ್ಗೆ, ಬೆಂಗಳೂರಿನಲ್ಲಿನ ಉದ್ಯೋಗ, ವಾಸ್ತವ್ಯ ಇವುಗಳ ಬಗ್ಗೆ ಅಣ್ಣ-ತಮ್ಮಂದಿರ ಮಾತುಕತೆ ಸಾಗುತ್ತಿತ್ತು. ಕಾರು ವೇದವ್ಯಾಸ ಭಟ್ಟರ ಮನೆಯ ಗೇಟಿನ ಎದುರು ಸಾಗುತ್ತಿದ್ದಂತೆ ಯಾಂತ್ರಿಕವಾಗಿ ಪ್ರದೀಪನ ಕಣ್ಣುಗಳು ಭಟ್ಟರ ಮನೆಯ ಕಡೆಗೆ ಹೊರಳಿ, ಏನೋ ಹುಡುಕಲಾರಂಭಿಸಿದವು. ಆತನ ನಾಲಿಗೆಗೆ ಅರೆಕ್ಷಣದ ಬ್ರೇಕ್ ಬಿದ್ದಿತ್ತು.

ಅಣ್ಣನಲ್ಲಾದ ಬದಲಾವಣೆಯನ್ನು ಅರಿತ ಸುದೀಪ ಆತನ ಗಮನವನ್ನು ತನ್ನ ಕಡೆಗೆ ಮತ್ತೆ ಹರಿಯುವಂತೆ ಮಾಡುವುದಕ್ಕಾಗಿ ‘ಅಣ್ಣ, ನಮ್ಮ ಮನೆ ಪಕ್ಕದ ಶ್ಯಾಮ ಶಾಸ್ತ್ರಿಗಳ ಮಗನಿಗೆ ಒಂದು ವಾರದ ಹಿಂದಷ್ಟೇ ಮದುವೆಯಾಯಿತು. ಹುಡುಗಿ ಶಿವಮೊಗ್ಗದವಳು’ ಎಂದು ಹೇಳತೊಡಗಿದ. “ಹ್ಞಾ” ಎಂಬ ಪ್ರತಿಕ್ರಿಯೆಯಷ್ಟೇ ಪ್ರದೀಪನಿಂದ ಹೊರಬಂತು.

ಮಣ್ಣರಸ್ತೆಯಲ್ಲಿ ಮೈಕುಲುಕಿಸುತ್ತಾ ಬಂದ ಕಾರು ಹೆಂಚಿನ ಮನೆಯೆದುರು ನಿಂತಿತ್ತು. ವೆಂಕಟಕೃಷ್ಣ ಭಟ್ಟರು ಮತ್ತು ಪತ್ನಿ ಗಿರಿಜಮ್ಮ ಮಗನ ಬರುವಿಕೆಗೆ ಅಂಗಳದಲ್ಲೇ ಕಾದುಕುಳಿತ್ತಿದ್ದರು. ಮಗನನ್ನು ಕಂಡಕೂಡಲೇ ಹರೆಯದ ಯುವಕ-ಯುವತಿಯರಂತಾದ ಭಟ್ಟರು ಮತ್ತು ಗಿರಿಜಮ್ಮ ಮಗನ ಮೈದಡವಿ, ಆನಂದದ ಕಣ್ಣೀರು ಹರಿಸುತ್ತಾ ದೃಷ್ಟಿಯಾರತಿಯನ್ನು ಎತ್ತಿ ಮಗನನ್ನು ಮನೆಯೊಳಕ್ಕೆ ಬರಮಾಡಿಕೊಂಡರು.

ವೆಂಕಟಕೃಷ್ಣ ಭಟ್ಟರು ಆರು ವರ್ಷಗಳ ಬಳಿಕ ಮತ್ತೆ ಊರಿಗೆ ಬಂದ ಮಗನೊಂದಿಗೆ ಮಾತನಾಡುತ್ತಾ ವರಾಂಡದಲ್ಲಿ ಕುಳಿತರೆ, ಗಿರಿಜಮ್ಮ ತನ್ನ ಮಗನಿಗೆ ಇಷ್ಟವಾದ ಮೈಸೂರುಪಾಕನ್ನು ತಯಾರಿಸುವುದರಲ್ಲಿ ನಿರತರಾಗಿದ್ದರು.

ಮಧ್ಯಾಹ್ನ ಊಟದ ಸಮಯ. ಮನೆಯಲ್ಲೆಲ್ಲಾ ನಗುವಿನ ಹೊಳೆಯೇ ಹರಿಯುತ್ತಿದೆ. ಈ ರೀತಿ ಮನೆಯವರೆಲ್ಲಾ ಒಟ್ಟಾಗಿ ಕುಳಿತು ಸಂತೋಷದಿಂದ ಊಟಮಾಡಿ ಆರು ವರ್ಷಗಳಾಯಿತಲ್ಲ. ಆರು ವರ್ಷಗಳಿಂದ ಕೂಡಿಟ್ಟ ಹರ್ಷವೆಲ್ಲಾ ಈ ಒಂದೇ ಹೊತ್ತಿನಲ್ಲಿ ಮನೆಮಂದಿಯ ಮುಖದಲ್ಲಿ ಪ್ರತಿಫಲಿಸುತ್ತಿದೆ.

ಮಾತನಾಡುತ್ತಾ ಗಿರಿಜಮ್ಮ ಮಗನ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲಿಯವರೆಗೂ ನಗು ಮನೆ ಮಾಡಿದ್ದ ಪ್ರದೀಪನ ಮುಖ ಕಳೆಗುಂದಿತು. ಆತನ ಸಪ್ಪಗಾದ ಮುಖವನ್ನು ಕಂಡು ಆತನ ಹೆತ್ತವರ ಮುಖವೂ ನಿಸ್ತೇಜವಾಯಿತು.

ಮಗನ ಅಂತರಾಳವನ್ನು ಅರೆಕ್ಷಣದಲ್ಲಿ ಅರ್ಥಮಾಡಿಕೊಂಡ ಗಿರಿಜಮ್ಮ. “ಅಲ್ಲ ಪ್ರದೀಪ, ಅವಳ ನೆನಪಲ್ಲೇ ಅದೆಷ್ಟು ಸಮಯ ಅಂತ ನೀನೂ ಹೀಗೆ ಇರ್‍ತಿಯಾ? ಅವಳೇನು ನಿನ್ನ ನೆನಪಲ್ಲೇ ಕುಳಿತಿದ್ದಾಳಾ? ನಿನ್ನನ್ನು ತಿರಸ್ಕರಿಸಿ, ಬೇರೆಯವನನ್ನು ಮದುವೆಯಾದಳು. ನಿನ್ನನ್ನು ತಿರಸ್ಕರಿಸಿದ್ದಕ್ಕೆ ಅವಳಿಗೆ ದೇವರು ತಕ್ಕ ಶಾಸ್ತಿಯೇ ಮಾಡಿದ್ದಾನೆ ಬಿಡು. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಅವಳ ಗಂಡ ಸ….”

“ಗಿರಿಜಾ”, ವೆಂಕಟಕೃಷ್ಣ ಭಟ್ಟರ ಏರು ಧ್ವನಿ ಗಿರಿಜಮ್ಮನ ಮಾತನ್ನು ತಡೆಯಿತು. “ಹೋಗಿ ಮೊಸರುತಾ” ಭಟ್ಟರು ಪತ್ನಿಯನ್ನೆ ದುರುಗುಟ್ಟಿ ನೋಡಿ ನುಡಿದರು. ಗಂಡ ಪ್ರದೀಪನಿಂದ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆಂದು ಅರ್ಥಮಾಡಿಕೊಂಡ ಗಿರಿಜಮ್ಮ, ತನ್ನ ತಪ್ಪನ್ನು ಅರಿತು ಮೊಸರನ್ನು ತರುವುದಕ್ಕಾಗಿ ಅಡುಗೆ ಕೋಣೆಗೆ ಹೋದರು. ಮತ್ತೇನೂ ಮಾತಿಲ್ಲದೆ ಊಟ ಮುಗಿದಿತ್ತು.

ಸಂಜೆ ಭಟ್ಟರು ಮನೆಯಿಂದ ಹೊರ ಹೋಗಿದ್ದರು. ಅದೇ ಸರಿಯಾದ ಸಮಯವೆಂದು ಅರಿತ ಪ್ರದೀಪ, ಅಮ್ಮನ ಬಳಿ ಹೋಗಿ “ಅಮ್ಮ, ಸಂಧ್ಯಾಳ ಬಗ್ಗೆ ಆಗ ಊಟ ಮಾಡುತ್ತಿದ್ದಾಗ ಏನೋ ಹೇಳುತ್ತಿದ್ದೆಯಲ್ಲ, ಏನದು?” ಎಂದ.

“ಅದೆಲ್ಲಾ ಈಗ ಯಾಕೋ?” ಗಂಡನಿಗೆ ಇಷ್ಟವಿರದಿದ್ದ ವಿಷಯವನ್ನು ಮಗನಿಗೆ ತಿಳಿಸುವುದು ಗಿರಿಜಮ್ಮನಿಗ್ಯಾಕೋ ಸರಿ ಕಾಣಲಿಲ್ಲ.

“ಅಮ್ಮ, ಫೀಸ್ ಹೇಳಮ್ಮ” ಪ್ರದೀಪ ಮತ್ತಷ್ಟು ಒತ್ತಾಯಿಸತೊಡಗಿದ.

“ಅದೇನು ಇಲ್ಲ ಪ್ರದೀಪ, ಅವಳ ಗಂಡ, ಅದೇ ಉಡುಪಿಯ ಹುಡುಗ, ಮದುವೆಯಾಗಿ ಒಂದು ತಿಂಗಳಾಗುವಷ್ಟರಲ್ಲಿ ಉಡುಪಿಯಲ್ಲಿ ನಡೆದ ಆಕ್ಸಿಡೆಂಟ್ನಲ್ಲಿ ತೀರಿಹೋದ್ರಂತೆ. ನಿನ್ನನ್ನು ಮದುವೆಯಾಗಿದ್ದರೆ ಅವಳಿಗೆ ಈ ದುಃಸ್ಥಿತಿ ಬರುತ್ತಿತ್ತೇ? ಅವಳ ಹೆತ್ತವರ ಅಹಂಕಾರಕ್ಕೆ ತಕ್ಕ ಪ್ರತಿಫಲವೇ ಆಯಿತು”. ಒಂದೇ ಉಸಿರಿಗೆ ನುಡಿದಿದ್ದರು ಗಿರಿಜಮ್ಮ.

“ಏನು ಗಂಡ ತೀರಿಕೊಂಡನಾ? ಸೋತಿರುವವರನ್ನು ಮತ್ತಷ್ಟು ತೆಗಳುವುದು ಸರಿ ಅಲ್ಲಮ್ಮ. ಈಗ ಅವಳು ಎಲ್ಲಿದ್ದಾಳೆ?” ಪ್ರದೀಪನ ಮಾತುಗಳು ಬೇಸರ ಮತ್ತು ಕುತೂಹಲ ಮಿಶ್ರಿತವಾಗಿತ್ತು.

“ಮದುವೆಯಾಗಿ ಮನೆಗೆ ಬಂದ ಸೊಸೆ ಮಗನನ್ನು ನುಂಗಿಕೊಂಡಳು ಎಂದು ಅಂದುಕೊಂಡು ಅವಳ ಅತ್ತೆ ಮನೆಯವರು ತವರು ಮನೆಗೆ ಅಟ್ಟಿದ್ದಾರೆ. ಈಗ ಇಲ್ಲೇ ತವರುಮನೆಯಲ್ಲಿದ್ದಾಳೆ. ಅವಳ ಅಣ್ಣನ ಹೆಂಡತಿ ಆಗಾಗ ಅವಳನ್ನು ಬೈಯ್ಯುವುದು, ಹೀಯಾಳಿಸುವುದು ಎಲ್ಲಾ ಮಾಡುತ್ತಿದ್ದಾಳಂತೆ, ಪಕ್ಕದ ಮನೆಯ ಸಾವಿತ್ರಿ ಹೇಳಿದಳು”. ಹೀಗೆ ಹೇಳುವಾಗ ಗಿರಿಜಮ್ಮನ ಮುಖದಲ್ಲಿ ಬೇಸರದಂತಹ ಭಾವವೊಂದು ವ್ಯಕ್ತವಾಯಿತು.

ಪ್ರದೀಪ ಮೌನವಾಗಿ ತಾಯಿಯನ್ನೇ ನೋಡುತ್ತಿದ್ದ. ನಿಟ್ಟುಸಿರೊಂದು ಆತನಿಂದ ಹೊರಬಂತು.

“ಹ್ಞಾ, ನಿನ್ನಪ್ಪ ಈ ವಿಚಾರವನ್ನು ನಿನಗೆ ತಿಳಿಸಬಾರದು ಅಂತ ಹೇಳಿದ್ದಾರೆ. ನಾನು ನಿನಗೆ ಈ ವಿಚಾರ ತಿಳಿಸಿದ್ದೇನೆಂದು ಗೊತ್ತಾದರೆ ನನಗಿನ್ನೆಷ್ಟು ಬೈಯ್ಯುತ್ತಾರೋ? ಅಪ್ಪನಲ್ಲಿ ನಿನಗೆ ಈ ವಿಚಾರ ಗೊತ್ತಾದಂತೆ ಮಾತನಾಡಬೇಡ. ಗೊತ್ತಾಯಿತೇನೋ ಪ್ರದೀಪ?”. ಗಿರಿಜಮ್ಮನ ಮಾತು ಪ್ರದೀಪನ ಕಿವಿಯೊಳಗೆ ಹೊಕ್ಕಂತೆ ಕಾಣಲಿಲ್ಲ. ಆತನ ತಲೆ ಇನ್ನಾವುದೋ ಯೋಚನೆಗೆ ಈಗಾಗಲೇ ಮುನ್ನುಡಿ ಬರೆದಿತ್ತು……

ಸಂಧ್ಯಾ. ವೇದವ್ಯಾಸ ಭಟ್ಟರ ಪ್ರೀತಿಯ ಮಗಳು. ಒಬ್ಬಳೇ ಮಗಳು ಎಂಬ ಕಾರಣಕ್ಕೋ, ಅವಳು ಹುಟ್ಟಿದ ಮೇಲೆಯೇ ತಾವು ಶ್ರೀಮಂತರಾದದ್ದು ಎಂಬ ಕಾರಣಕ್ಕೋ ವೇದವ್ಯಾಸ ಭಟ್ಟರಿಗೆ ಮಗನಿಗಿಂತಲೂ ಮಗಳ ಮೇಲೆ ಪ್ರೀತಿ ಜಾಸ್ತಿ.

ವೆಂಕಟಕೃಷ್ಣ ಭಟ್ಟರ ಮನೆಯಿಂದ ವೇದವ್ಯಾಸ ಭಟ್ಟರ ಮನೆಗೆ ಕೇವಲ ಹತ್ತು ನಿಮಿಷದ ಹಾದಿ. ಎರಡೂ ಕುಟುಂಬಗಳ ಮಧ್ಯೆ ಉತ್ತಮ ಸಂಬಂಧವಿತ್ತು. ಪ್ರದೀಪ ಮತ್ತು ಸಂಧ್ಯಾ ಚಿಕ್ಕಂದಿನಿಂದಲೂ ಜೊತೆಯಾಗಿಯೇ ಆಟವಾಡುತ್ತಾ ಬೆಳೆದವರು. ಅವರಿಬ್ಬರೂ ಶಾಲೆಗೆ ಹೋಗುತ್ತಿದ್ದದ್ದೂ ಜೊತೆಯಾಗಿಯೇ.

ಪ್ರದೀಪನಿಗೆ ಯಾವಾಗ ಚಿಗುರುಮೀಸೆ ಮೂಡಲಾರಂಭಿಸಿತ್ತೋ ಅಂದಿನಿಂದ ಸಂಧ್ಯಾಳ ಕುರಿತು ಭಿನ್ನ ಭಾವನೆ ಬೆಳೆಯಲಾರಂಭಿಸಿತ್ತು. ತಿದ್ದಿ ತೀಡಿದಂತಿದ್ದ ಅವಳ ಬೆಳ್ಳನೆಯ ದೇಹ, ಅವಳ ಸ್ನಿಗ್ಧ ನಗು, ಪೆದ್ದು ಮಾತುಗಳು ಇವೆಲ್ಲದರಲ್ಲೂ ಏನೋ ವಿಶೇಷತೆ ಇದೆ ಎಂದು ಪ್ರದೀಪನಿಗೆ ಅನ್ನಿಸತೊಡಗಿತ್ತು. ತನ್ನ ತರಗತಿಯ ಇತರ ಹುಡುಗಿಯರಿಗಿಂತ ಭಿನ್ನವಾಗಿ ಸಂಧ್ಯಾ ಆತನ ಕಣ್ಣಿಗೆ ಗೋಚರಿಸಲಾರಂಭಿಸಿದ್ದಳು.

ಇಷ್ಟು ಸಾಲದೆಂಬಂತೆ, ಪ್ರದೀಪ ಮತ್ತು ಸಂಧ್ಯಾ ಜೊತೆಜೊತೆಯಾಗಿ ನಡೆದುಕೊಂಡು ಬರುತ್ತಿದ್ದುದನ್ನು ದೂರದಿಂದ ನೋಡಿಯೇ ಆತನ ಗೆಳೆಯರು ಗುಟ್ಟಾಗಿ ಏನೋ ಹೇಳುತ್ತಾ ನಗುತ್ತಿದ್ದರು. ಇದು ಪ್ರದೀಪನಲ್ಲಿ ರೋಮಾಂಚನವನ್ನುಂಟುಮಾಡುತ್ತಿತ್ತು. ಪ್ರದೀಪನ ನೋಟ, ಮಾತು, ವರ್ತನೆ ಇವುಗಳಲ್ಲಾಗುತ್ತಿರುವ ಬದಲಾವಣೆ ಸಂಧ್ಯಾಳಿಗೆ ತಿಳಿಯದ್ದೇನಲ್ಲ. ಸಮಾನ ವಯಸ್ಕಳೂ, ಸಮಾನ ಮನಸ್ಕಳೂ ಅವಳಾಗಿದ್ದರಿಂದ ಪ್ರದೀಪನ ಬದಲಾಗುತ್ತಿದ್ದ ವರ್ತನೆ ಅವಳಿಗೆಂದೂ ವಿಚಿತ್ರವಾಗಿ ತೋರಿರಲಿಲ್ಲ. ಅಲ್ಲದೆ ಅವಳ ಮನಸ್ಸೂ ಸಹ ಪ್ರದೀಪನ ಸಂಗಾತವನ್ನೇ ಬಯಸುತ್ತಿತ್ತು. ಹೆಣ್ಣು ಮನಸ್ಸು ತನ್ನ ಭಾವನೆಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿತ್ತಷ್ಟೇ.

ಹಾಗೂ ಹೀಗೂ ಒಂದು ದಿನ ಪ್ರದೀಪ ತನ್ನ ಅಂತರಾಳವನ್ನು ಸಂಧ್ಯಾಳೆದುರು ಬಿಚ್ಚಿಟ್ಟಿದ್ದ. “ನನಗೆ ನಿನ್ನಂಥವಳೇ ಬಾಳ ಸಂಗಾತಿಯಾಗಿ ಬರಬೇಕೆಂದು ಆಸೆ” ಎಂದು ಪ್ರಾರಂಭಿಸಿದ ಮಾತನ್ನು “ನೀನು ನನ್ನನ್ನು ಮದುವೆಯಾಗುತ್ತೀಯಾ?” ಎಂಬ ಕೋರಿಕೆಯವರೆಗೆ ಕೊಂಡೊಯ್ದಿದ್ದ. ಅವಳು ಒಪ್ಪಿಗೆಯ ನಗುವನ್ನು ಚೆಲ್ಲುವುದರೊಂದಿಗೆ ಜೋಡಿ ಹಕ್ಕಿಗಳ ಪ್ರೇಮಯಾನ ಆರಂಭವಾಗಿತ್ತು.

ಪ್ರದೀಪ ಹಾಗೂ ಸಂಧ್ಯಾಳ ಪ್ರೇಮ ವಿಚಾರ ಊರವರ ಬಾಯಿಗೆ ಆಹಾರವಾಗಿ ಹೋಗಿತ್ತು. ಅವರಿಬ್ಬರ ನಡುವಿನ ಅನ್ನೋನ್ಯತೆ ಹೆಚ್ಚಾಗುತ್ತಾ ಹೋದಂತೆ ಜನರ ಗುಸುಗುಸು ಮಾತುಗಳೂ ಸಹ ಹೆಚ್ಚಾಗಿದ್ದವು. ಪ್ರೇಮಕಥೆಗೆ ರೆಕ್ಕೆಪುಕ್ಕಗಳೂ ಸೇರಿಕೊಂಡು ಮನೆಯಿಂದ ಮನೆಗೆ ಹಬ್ಬಲಾರಂಭಿಸಿತ್ತು.

ಊರೆಲ್ಲಾ ಹರಡುತ್ತಿದ್ದ ಪ್ರದೀಪ ಮತ್ತು ಸಂಧ್ಯಾಳ ಪ್ರಣಯ ಪ್ರಸಂಗ ವೇದವ್ಯಾಸ ಭಟ್ಟರಿಗೆ ತಿಳಿಯುವುದಕ್ಕೆ ಹೆಚ್ಚು ದಿನವೇನೂ ಹಿಡಿಯಲಿಲ್ಲ. ಈ ಕುರಿತಾಗಿ ಮಗಳನ್ನು ಪ್ರಶ್ನಿಸಿದ್ದರು. ಸಂಧ್ಯಾ ತನ್ನ ಪ್ರೀತಿಯನ್ನು ಮುಚ್ಚಿಡುವ ಕೆಲಸವನ್ನು ಮಾಡಲಿಲ್ಲ. ಪ್ರದೀಪ ಮತ್ತು ತನ್ನ ನಡುವಿನ ಪ್ರೀತಿಯನ್ನು ಭಟ್ಟರಿಗೆ ತಿಳಿಸಿದ್ದಳು. ತನ್ನ ನಿಷ್ಕಲ್ಮಶ ಪ್ರೀತಿಗೆ ಅಪ್ಪ ಅಡ್ಡಿಯಾಗಲಿಕ್ಕಿಲ್ಲ ಎಂಬ ನಂಬಿಕೆ ಅವಳಿಗಿತ್ತು. ವೇದವ್ಯಾಸ ಭಟ್ಟರೂ ಕೂಡಾ ಮಗಳು ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಹುಸಿಗೊಳಿಸಲಿಲ್ಲ. ಅವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡು, ಶೀಘ್ರವೇ ವಿವಾಹವನ್ನು ನಡೆಸುವ ನಿರ್ಧಾರವನ್ನು ಕೈಗೊಂಡರು.

ತಮ್ಮಿಬ್ಬರ ಮದುವೆಗೆ ಸಂಧ್ಯಾಳ ಮನೆಯವರು ಒಪ್ಪಿದ್ದಾರೆಂದು ತಿಳಿದ ಪ್ರದೀಪ ತನ್ನ ತಂದೆ-ತಾಯಿಯರಿಗೂ ವಿಷಯವನ್ನು ತಿಳಿಸಿ, ಅವರ ಒಪ್ಪಿಗೆಯನ್ನು ಪಡೆದುಕೊಂಡಿದ್ದ. ಸಂಧ್ಯಾ ಒಳ್ಳೆ ಗುಣದವಳೆಂಬುವುದು ಗೊತ್ತಿದ್ದುದರಿಂದ ಹಾಗೂ ತಮ್ಮ ಮನೆಗೆ ಹೊಂದಿಕೊಳ್ಳುವ ಹುಡುಗಿ ಅವಳು ಎಂದು ಅನಿಸಿದ್ದರಿಂದ ವೆಂಕಟಕೃಷ್ಣ ಭಟ್ಟರು ಮತ್ತು ಗಿರಿಜಮ್ಮ ಮದುವೆಗೆ ತಮ್ಮ ಸಮ್ಮತಿಯನ್ನೂ ಸೂಚಿಸಿದ್ದರು.

ನಿಶ್ಚಿತಾರ್ಥಕ್ಕೂ ಮುಂಚಿತವಾಗಿ ವೇದವ್ಯಾಸ ಭಟ್ಟರು ಪ್ರದೀಪ ಮತ್ತು ಸಂಧ್ಯಾಳ ಜಾತಕಫಲವನ್ನು ತಮ್ಮದೇ ಪರಿಚಯದ ಜೋಯಿಸರೊಬ್ಬರಲ್ಲಿ ಕೇಳಿದ್ದರು. ಪ್ರದೀಪ-ಸಂಧ್ಯಾಳ ಮದುವೆಗೆ ವಿಘ್ನ ಎದುರಾದದ್ದು ಇಲ್ಲಿಯೇ. ಜಾತಕ ಕೂಡಿ ಬರುವುದಿಲ್ಲವೆಂದೂ, ಹಾಗೇನಾದರೂ ಮದುವೆಯಾದರೆ ಸಂಸಾರಕ್ಕೆ ಕಂಟಕ ತಪ್ಪಿದಲ್ಲವೆಂದು ಜೋಯಿಸರು ನುಡಿದಿದ್ದರು. ವೇದವ್ಯಾಸ ಭಟ್ಟರಿಗೆ ಇಂತಹದ್ದರಲ್ಲಿ ನಂಬಿಕೆ ಜಾಸ್ತಿಯೇ. ಜೋಯಿಸರ ಮಾತನ್ನು ಬಲುವಾಗಿ ಹಚ್ಚಿಕೊಂಡ ಭಟ್ಟರು ತನ್ನ ಮಗಳನ್ನು ಯಾವುದೇ ಕಾರಣಕ್ಕೂ ಪ್ರದೀಪನಿಗೆ ಮದುವೆ ಮಾಡಿಕೊಡುವುದಿಲ್ಲವೆಂಬ ನಿರ್ಧಾರಕ್ಕೆ ಬಂದರು. ಇದನ್ನು ವೆಂಕಟಕೃಷ್ಣ ಭಟ್ಟರಲ್ಲಿ ತಿಳಿಸಿಯೂ ಬಿಟ್ಟರು. ತಮ್ಮ ಮಗಳಿಗೂ ಈ ವಿಚಾರವನ್ನು ತಿಳಿಸಿ, ಪ್ರದೀಪನನ್ನು ಮರೆತುಬಿಡುವಂತೆ ಹೇಳಿದರು. ಮಗಳು ಹಠ ಹಿಡಿದಾಗ ಸಾಯುವ ನಾಟಕವಾಡಿ, ಬಲವಂತವಾಗಿ ಅವಳನ್ನು ಪ್ರದೀಪನಿಂದ ದೂರವಾಗುವಂತೆ ಮಾಡಿದರು.

ವಿಷಯ ತಿಳಿದ ಪ್ರದೀಪ ದಂಗಾಗಿ ಹೋಗಿದ್ದ. ವೇದವ್ಯಾಸ ಭಟ್ಟರ ಮನೆಗೆ ಹೋಗಿ ಅವರನ್ನು ಬಗೆ ಬಗೆಯಾಗಿ ಒಪ್ಪಿಸಲು ಪ್ರಯತ್ನಿಸಿದ. ಆದರೆ ವೇದವ್ಯಾಸಭಟ್ಟರ ನಿರ್ಧಾರ ಬದಲಾಗದಷ್ಟು ಗಟ್ಟಿಯಾಗಿತ್ತು. “ನನ್ನನ್ನು ಮರೆತುಬಿಡು” ಎಂದು ಸಂಧ್ಯಾ ಹೇಳುವುದರೊಂದಿಗೆ ಅಷ್ಟು ವರ್ಷಗಳ ಪ್ರೀತಿಗೆ ತಿಲಾಂಜಲಿ ಇಟ್ಟಂತಾಗಿತ್ತು.

ಇದಾಗಿ ಕೆಲವೇ ದಿನಗಳಲ್ಲಿ ಭಟ್ಟರು ತಮ್ಮ ಮಗಳಿಗೆ ಉಡುಪಿಯ ಸಂಬಂಧವೊಂದನ್ನು ಗೊತ್ತುಮಾಡಿದ್ದರು. ನಿಶ್ಚಿತಾರ್ಥವನ್ನೂ ತುರಾತುರಿಯಲ್ಲಿ ಮಾಡಿ ಮುಗಿಸಿದ್ದರು. ಈ ವಿಷಯ ತಿಳಿದ ಪ್ರದೀಪ ಹುಚ್ಚನಂತಾಗಿ ಹೋಗಿದ್ದ. ಭಟ್ಟರ ಮನೆಗೆ ಹೋಗಿ ಅವರನ್ನು ಯದ್ವಾತದ್ವಾ ಬೈದು ಬಂದಿದ್ದ.

ಮಗನ ಪರಿಸ್ಥಿತಿ ಕಂಡು ವೆಂಕಟಕೃಷ್ಣ ಭಟ್ಟರು ಮತ್ತು ಗಿರಿಜಮ್ಮ ಆತಂಕಿತರಾಗಿ ಹೋಗಿದ್ದರು. ಇನ್ನು ತಾವು ಸುಮ್ಮನಿದ್ದರೆ ಮಗ ತಮ್ಮ ಕೈತಪ್ಪಿ ಹೋಗುತ್ತಾನೆ ಎಂದು ಅರಿತ ವೆಂಕಟಕೃಷ್ಣ ಭಟ್ಟರು ಬೆಂಗಳೂರಿನಲ್ಲಿದ್ದ ತನ್ನ ತಮ್ಮನನ್ನು ಮನೆಗೆ ಕರೆಸಿ, ಅವರ ಜೊತೆಗೆ ಪ್ರದೀಪನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬದಲಾದ ವಾತಾವರಣ ಪ್ರದೀಪನ ಮನೋಸ್ಥಿತಿಯನ್ನು ಬದಲಾಯಿಸುವಲ್ಲಿಯೂ ನೆರವಾಗಿತ್ತು. ತನ್ನ ವಿದ್ಯಾಭ್ಯಾಸಕ್ಕೆ ಅರ್ಹವಾದ ಉದ್ಯೋಗವನ್ನು ಗಳಿಸಿಕೊಂಡವನು ಆರು ವರ್ಷ ಊರಿನ ಕಡೆಗೆ ಮುಖವನ್ನೇ ಮಾಡಿರಲಿಲ್ಲ.

..ಯೋಚನಾ ಪ್ರಪಂಚದಿಂದ ನಿಧಾನವಾಗಿ ಪ್ರದೀಪನ ಮನಸ್ಸು ನೈಜ ಜಗತ್ತಿಗೆ ಕಾಲಿಟ್ಟಿತು. ತನ್ನ ಮತ್ತು ಸಂಧ್ಯಾಳ ನಡುವಿನ ಪ್ರೇಮ ಆ ಪ್ರೀತಿ ಹೊಸರೂಪಕ್ಕೆ ತಿರುಗುವಷ್ಟರಲ್ಲಿ ನೈಜರೂಪವನ್ನೂ ಕಳೆದುಕೊಂಡು ವಿರೂಪಗೊಂಡದ್ದು ಇವೆಲ್ಲಾ ನೆನೆದು ಆತನ ಕಣ್ಣಂಚು ತೇವಗೊಂಡಿತ್ತು.

ಬೆಂಗಳೂರಿನಲ್ಲಿ ಬಾಳುಕಟ್ಟಿಕೊಂಡ ಬಳಿಕ ಊರಲ್ಲಾದ ಬದಲಾವಣೆಗಳು ಪ್ರದೀಪನ ಅರಿವಿಗೇ ಬಂದಿರಲಿಲ್ಲ. ವಿಚಾರಿಸುವ ಆಸಕ್ತಿಯನ್ನೇ ಆತ ಕಳೆದುಕೊಂಡಿದ್ದ. ಆತನ ತಂದೆ-ತಾಯಿ ಉದ್ದೇಶಪೂರ್ವಕವಾಗಿಯೇ ಈ ವಿಚಾರಗಳನ್ನು ಮುಚ್ಚಿಟ್ಟಿದ್ದರು. ಈ ಕಾರಣದಿಂದಾಗಿಯೇ ಸಂಧ್ಯಾಳ ಗಂಡ ತೀರಿಕೊಂಡ ವಿಚಾರ ಪ್ರದೀಪನಿಗೆ ಇಷ್ಟು ವರ್ಷವಾದರೂ ತಿಳಿಯದೇ ಹೋದದ್ದು,

ಪ್ರದೀಪನ ಮನಸ್ಸು ಚಿಂತನೆಗೆ ತೊಡಗಿತ್ತು. ಮೆಹಂದಿಯ ಚಿತ್ತಾರ ಅಳಿಯುವ ಮೊದಲೇ ಗಂಡನನ್ನು ಕಳೆದುಕೊಂಡ ಸಂಧ್ಯಾಳ ಮನಸ್ಸು ಎಷ್ಟು ವೇದನೆಪಟ್ಟಿರಬಹುದು ಎಂಬಲ್ಲಿಂದ ಆರಂಭವಾದ ಆತನ ಯೋಚನೆ ಈಗಲೂ ಆಕೆಯ ಮನಸ್ಸಿನಲ್ಲಿ ತಾನು ಉಳಿದುಕೊಂಡಿರಬಹುದೇ ಎಂಬಲ್ಲಿಯವರೆಗೂ ಮುಂದುವರಿಯಿತು. ನಿಟ್ಟುಸಿರೊಂದು ಆತನಿಂದ ಹೊರ ಬಂತು. ಆ ನಿಟ್ಟುಸಿರು ಯಾವುದೋ ದೃಢ ನಿರ್ಧಾರದ ಪ್ರತಿನಿಧಿಯಂತೆ ತೋರುತ್ತಿತ್ತು.

ಮರುದಿನ ಬೆಳಗ್ಗಿನ ಸಮಯ, ಗಿರಿಜಮ್ಮ ಅಡುಗೆ ಕೋಣೆಯಲ್ಲಿದ್ದರು. ವೆಂಕಟಕೃಷ್ಣ ಭಟ್ಟರು ದಿನಪತ್ರಿಕೆಯನ್ನು ಓದುತ್ತಾ ಕುಳಿತ್ತಿದ್ದರು. ಅವರ ಬಳಿಗೆ ಬಂದ ಪ್ರದೀಪ “ಅಪ್ಪ, ನಿಮ್ಮಲ್ಲಿ ಮಾತನಾಡುವುದಕ್ಕಿದೆ” ಎಂದ.

ತಲೆಯೆತ್ತಿ ಮಗನನ್ನು ನೋಡಿದ ವೆಂಕಟಕೃಷ್ಣ ಭಟ್ಟರ ಕಣ್ಣುಗಳು ಮಾತಿಗೆ ಒಪ್ಪಿಗೆಯನ್ನು ಪ್ರದೀಪನಿಗೆ ರವಾನಿಸಿತ್ತು.

ಅಪ್ಪನ ಒಪ್ಪಿಗೆಯನ್ನು ಅರಿತ ಪ್ರದೀಪ ಮಾತುಗಳನ್ನು ಮುಂದುವರೆಸಿದ. “ಸಂಧ್ಯಾಳ ಗಂಡ ತೀರಿಹೋಗಿದ್ದಾನೆಂಬ ವಿಷಯ ನನಗೆ ನಿನ್ನೆ ತಿಳಿಯಿತು.”

ಮಗನಿಗೆ ಈ ವಿಚಾರ ತಿಳಿಯಲು ತಮ್ಮ ಹೆಂಡತಿಯೇ ಕಾರಣ ಎಂಬುವುದು ವೆಂಕಟಕೃಷ್ಣ ಭಟ್ಟರಿಗೆ ತಕ್ಷಣವೇ ತಿಳಿದುಹೋಗಿತ್ತು. “ಯಾರು ನಿನಗೆ ಈ ವಿಚಾರ ತಿಳಿಸಿದ್ದು?” ಭಟ್ಟರ ಕಣ್ಣುಗಳು ಪತ್ನಿ ಗಿರಿಜಮ್ಮನನ್ನೇ ದುರುಗುಟ್ಟಿ ನೋಡುತ್ತಿತ್ತು.

“ಯಾರು ಹೇಳಿದ್ದು ಅನ್ನುವುದು ಮುಖ್ಯವಲ್ಲ ಅಪ್ಪ, ಈ ವಿಚಾರ ನಿಜತಾನೇ?” ಪ್ರದೀಪನ ಮಾತುಗಳಲ್ಲಿ ಕುತೂಹಲವಿತ್ತು.

“ಹೌದು ನಿಜ, ಅದನ್ನೆಲ್ಲಾ ಈಗ ಯಾಕೆ ಕೇಳುತ್ತಿದ್ದೀಯಾ?” ಭಟ್ಟರು ಪ್ರಶ್ನಿಸಿದ್ದರು.

“ನಾನು ಸಂಧ್ಯಾಳನ್ನು ಮದುವೆಯಾಗಬೇಕೆಂದಿದ್ದೇನೆ” ಬಿಲ್ಲಿನಿಂದ ಹೊರಟ ಬಾಣದಂತಹ ಪರಿಣಾಮವನ್ನು ಪ್ರದೀಪನ ಈ ಒಂದು ಮಾತು ಉಂಟುಮಾಡಿತು.

“ಏನೋ ಹೇಳ್ತಿದ್ದೀಯಾ? ಗಂಡನನ್ನು ಕಳೆದುಕೊಂಡವಳನ್ನು ಮದುವೆಯಾಗಲು ಹೊರಟಿದ್ದೀಯಲ್ಲಾ, ನಿನಗೆ ಬುದ್ದಿ ಇದ್ಯಾ?” ಭಟ್ಟರ ಮಾತಿನಲ್ಲಿ ಕೋಪ ಮಿಶ್ರಿತ ಅತಂಕವಿತ್ತು.

“ಇಲ್ಲಪ್ಪ, ನಾನು ನಿರ್ಧರಿಸಿದ್ದಾಗಿದೆ. ನನ್ನ ಮುಂದಿರುವ ಆಯ್ಕೆ ಎರಡೇ. ಒಂದು ಅವಳನ್ನು ಮದುವೆಯಾಗುವುದು. ಇಲ್ಲವಾದಲ್ಲಿ ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಉಳಿಯುವುದು. ನಾನ್ಯಾವುದನ್ನು ಆರಿಸಿಕೊಳ್ಳಬೇಕೋ ನೀವೇ ಹೇಳಿ”. ಪ್ರದೀಪನ ನಿರ್ಧಾರ ಕಿತ್ತೊಗೆಯಲಾರದಷ್ಟು ಗಟ್ಟಿಯಾಗಿತ್ತು.

ಭಟ್ಟರು ಮತ್ತು ಗಿರಿಜಮ್ಮ ಆತನನ್ನು ಎಷ್ಟೇ ಒತ್ತಾಯಿಸಿದರೂ ಆತ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. ಕೊನೆಗೂ ತಂದೆ-ತಾಯಿ ತಮ್ಮ ಮಗನ ನಿರ್ಧಾರಕ್ಕೆ ಅನಿವಾರ್ಯವಾಗಿ ತಮ್ಮ ಒಪ್ಪಿಗೆಯನ್ನು ಸೂಚಿಸಬೇಕಾಯಿತು.

ಅದೇ ದಿನ ಸಂಜೆ ವೆಂಕಟಕೃಷ್ಣ ಭಟ್ಟರು ಮತ್ತು ಪ್ರದೀಪನ ಕಾಲುಗಳು ವೇದವ್ಯಾಸ ಭಟ್ಟರ ಮನೆಯ ಹಾದಿಯನ್ನು ತುಳಿದಿದ್ದವು. ನಾಯಿ ಒಂದೇ ಸಮನೆ ಬೊಗಳುತ್ತಿದ್ದುದನ್ನು ಕೇಳಿ ಹೊರಬಂದ ವೇದವ್ಯಾಸ ಭಟ್ಟರು ಅಂಗಳದಲ್ಲಿ ನಿಂತಿದ್ದ ವೆಂಕಟಕೃಷ್ಣ ಭಟ್ಟರು ಮತ್ತು ಪ್ರದೀಪರನ್ನು ಕಂಡು ಪೆಚ್ಚಾಗಿದ್ದರು.

ಆದರೂ ನಗುವನ್ನು ಕಷ್ಟಪಟ್ಟು ಮುಖದ ಮೇಲೆ ತಂದುಕೊಂಡು ಅವರನ್ನು ಮನೆಯೊಳಕ್ಕೆ ಆಹ್ವಾನಿಸಿದ್ದರು. ಉಭಯ ಕುಶಲೋಪರಿ ನಡೆದ ಮೇಲೆ ಬಂದ ಕಾರಣವೇನೆಂದು ಕೇಳಿದ್ದರು ವೇದವ್ಯಾಸ ಭಟ್ಟರು. ಅಷ್ಟರಲ್ಲಾಗಲೇ ಪ್ರದೀಪನ ಕಣ್ಣುಗಳು ಸಂಧ್ಯಾಳನ್ನು ಕಾಣುವುದಕ್ಕಾಗಿ ಕಾತರಿಸಲಾರಂಭಿಸಿತ್ತು.

“ನನ್ನ ಮಗ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದ ವಿಷಯ ನಿಮಗೆ ಗೊತ್ತೇ ಇದೆಯಲ್ಲ” ವೆಂಕಟಕೃಷ್ಣ ಭಟ್ಟರು ಮಾತನ್ನು ಆರಂಭಿಸಿದರು. ವೇದವ್ಯಾಸ ಭಟ್ಟರ ಮುಖ ಸಪ್ಪಗಾಗಿತ್ತು.

“ನಿಮ್ಮ ಮಗಳ ಗಂಡ ತೀರಿಹೋದ ವಿಷಯ ಅವನಿಗೆ ನಿನ್ನೆಯಷ್ಟೇ ತಿಳಿಯಿತು. ನಿಮ್ಮ ಮಗಳನ್ನು ಮದುವೆಯಾಗಿ ಅವಳಿಗೆ ಬಾಳು ನೀಡಬೇಕೆಂಬ ನಿರ್ದಾರ ಮಾಡಿದ್ದಾನೆ. ಇದಕ್ಕೆ ನೀವು ಒಪ್ಪಿಗೆ ನೀಡಿದರೆ.. ಮಾತನ್ನು ಅರ್ಧಕ್ಕೇ ನಿಲ್ಲಿಸಿದ ವೆಂಕಟಕೃಷ್ಣ ಭಟ್ಟರು ವೇದವ್ಯಾಸ ಭಟ್ಟರ ಒಪ್ಪಿಗೆಗಾಗಿ ಕಾದುಕುಳಿತರು.

ಪ್ರದೀಪನನ್ನೊಮ್ಮೆ ನೋಡಿದ ವೇದವ್ಯಾಸರು ತುಸು ಮೆಲುದನಿಯಲ್ಲಿ ನುಡಿದರು “ಅವರ ಮದುವೆಗೆ ನಾನು ಅಂದೇ ಒಪ್ಪಿಗೆ ನೀಡಿದ್ದೆ. ಆದರೆ ಜಾತಕ ಕೂಡಿಬರದೆ ಆ ಮದುವೆ ನಿಂತುಹೋಯಿತು. ಜಾತಕ ಕೂಡಿಬಂದ ಹುಡುಗ ಮದುವೆಯಾಗಿ ಒಂದು ತಿಂಗಳಲ್ಲೇ ತೀರಿಹೋಗಿದ್ದರಿಂದ ಜಾತಕದ ಮೇಲೆ ನನಗೀಗ ನಂಬಿಕೆಯಿಲ್ಲ. ಆದರೆ ನನ್ನ ಮಗಳು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ” ಎಂದು ಹೇಳಿದ ವೇದವ್ಯಾಸರು ತಮ್ಮ ಮಗಳನ್ನು ಕರೆದರು. ಚಾವಡಿಗೆ ಬಂದು ನಿಂತ ಸಂಧ್ಯಾಳ ಬೋಳುಮುಖವನ್ನು ನೋಡುವುದು ಪ್ರದೀಪನಿಗೆ ಕಷ್ಟವಾಯಿತು.

“ಸಂಧ್ಯಾ. ನೀನು ನನ್ನನ್ನು ಮದುವೆಯಾಗುವುದಾದರೆ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಪ್ರದೀಪನ ಮಾತನ್ನು ಕೇಳಿದ ಸಂಧ್ಯಾ ನಿಧಾನಕ್ಕೆ ತಲೆಯನ್ನು ಮೇಲಕ್ಕೆತ್ತಿದ್ದಳು. ಪ್ರದೀಪ ಹಾಗೂ ಸಂಧ್ಯಾಳ ಕಣ್ಣುಗಳು ಮೌನ ಸಂವಾದವನ್ನು ನಡೆಸಿದ್ದವು. “ನನಗೆ ಒಪ್ಪಿಗೆ ಇದೆ” ಬಹಳ ವರ್ಷಗಳಿಂದ ಮಾತೇ ಮರೆತಿದ್ದ ಸಂಧ್ಯಾಳ ಮಾತುಗಳು ಹೊರಬಂದವು. ಅಲ್ಲಿದ್ದ ಎಲ್ಲರ ಮುಖದಲ್ಲೂ ನಸುನಗು ಮೂಡಿತು. ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನ ಕೆಂಬೆಳಕು ಕಿಟಕಿಯ ಮೂಲಕವಾಗಿ ಒಳಬಂದು ಸಂಧ್ಯಾಳ ಮುಖದಲ್ಲಿ ಬೆಳಗುತ್ತಿತ್ತು. ಅದು ಆಕೆಗೆದುರಾಗಿ ಕೂತಿದ್ದ ಪ್ರದೀಪನ ಮುಖದಲ್ಲೂ ಪ್ರತಿಫಲಿಸಿತು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...