ತಿಪ್ಪಜ್ಜಿ ಸರ್ಕಲ್

ತಿಪ್ಪಜ್ಜಿ ಸರ್ಕಲ್

[ಖ್ಯಾತ ನಟಿ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಅಭಿನಯದಲ್ಲಿ ಚಲನಚಿತ್ರವಾಗುತ್ತಿರುವ ಕಥೆ]

ಆಸ್ಪತ್ರೆ ಸ್ಟಾಪ್‌ ಬಳಿ ಬಸ್ಸಿನಿಂದ ಇಳಿದೊಡನೆ ಆಟೋಗಳು ಮುತ್ತಿಕೊಂಡವು. ಪ್ರಯಾಣದಿಂದ ಆಯಾಸಗೊಂಡಿದ್ದ ಕುಮಾರ ಯಾವದೋ ಆಟೋದಲ್ಲಿ ಬ್ಯಾಗ್ ಬಿಸಾಕಿ ಹತ್ತಿಕೊಂಡ. “ಎಲ್ಲಿಗೆಸಾ?” ಆಟೋದವ ಕೇಳಿದ ‘ಬಸವೇಶ್ವರ ಸರ್ಕಲ್‌ ಹತ್ತಿರ ಮನೆಯಿದೆ… ನಡಿಯಪ್ಪ’ ಅಂದ. ‘ಅದಾ! ಅದಲ್ಲೈತೆ ಸಾ?’ ಆಟೋದವ ತಲೆತುರಿಸಿಕೊಂಡ. ‘ಸೇಂಟ್‌’ ಜೋಸಫ್‌ ಕಾನ್ಷೆಂಟ್‌ ಹಕ್ತಿರನಯ್ಯ’ ಕುಮಾರ ಗೊಣಗಿದ. ‘ಅಯ್! ತಿಪ್ಪಜ್ಜಿ ಸರ್ಕಲ್‌ ಅಂತ ಹೇಳಬಾರ್‍ದಸಾ’ ಎಂದವ ಆಟೋ ಸ್ಟಾರ್ಟ್‌ಮಾಡಿದ. ಇಷ್ಟು, ವರ್ಷಗಳೇ ಸಂದರೂ ದುರ್ಗದ ಜನ ತಿಪಜ್ಜಿಯನು ಮರೆತಿಲ್ಲವೆ! ಆಲೋಚನೆಗೆ ಸಿಲುಕಿದ ಕುಮಾರ ತಿಪ್ಪಜ್ಜಿ ಸರ್ಕಲ್ ಬಂದಾಗ ಅಲ್ಲಿ ದೂಡ್ಡದಾಗಿ ‘ಬಸವೇಶ್ವರ ಸರ್‍ಕಲ್’ ಎಂಬ ಸಿಮೆಂಟಿನ ನಾಮಫಲಕನೆಟ್ಟು ಬಸವೇಶ್ವರನ ಚಿತ್ರ ಬರೆಸಿರುವುದೂ ಕಂಡಿತು. ‘ಅಲ್ಲಿಯ್ಯಾ ಬಸವೇಶ್ವರ ಸರ್ಕಲ್‌ ಅಂತ ನಾಮಫಲಕ ಹಾಕಿದ್ದರೂ ತಿಪ್ಪಜ್ಜಿ ಸರ್ಕಲ್‌ ಅಂತೀರಲ್ಲಯ್ಯ’ ಕುಮಾರ ಆಕ್ಷೇಪಿಸಿದ. ‘ಏನ್‌ಮಾಡಾನಾ ಸಾ. ಜನ ಈವತ್ತಿಗೂ ತಿಪ್ಪಜ್ಜಿ ಸರ್ಕಲ್‌ತಾವ ಅಂತ್ಹೇಳಿಯೇ ಹತ್ಕೋತಾರೆ’ ಆಟೋದವ ನಕ್ಕ. ‘ಹೌದು ಈ ತಿಪ್ಪಜ್ಜಿ ಯಾರಯ್ಯ?’ ಬೇಕಂದೇ ಕುಮಾರ ಕೇಳಿದ. ‘ಯಾನನ್ಮಗನಿಗೆ ಗೊತ್ಸಾ ಏಲ್ರೂ ಹಂಗ್‌ ಕರಿತಾರೆ. ನಾವು ಕರಿತೀವಿ. ನಮಗೆ ಗುರುತಿಗೆ ಒಂದು ಹಸರ್‍ಬೇಕು’ ನಿರ್‍ಲಿಪ್ತನಾಗಂದ. ‘ಈ ಸರ್ಕಲ್‌ನಲ್ಲಿ ಆಕಿ ಐವತ್ತುವರ್ಷಗಳ ಹಿಂದ… ಬೀಡ ಬೀಡಿ ಬೆಂಕಿಪೊಟ್ಟಣದ ಗೂಡ ಅಂಗಡಿ ಇಟುಕೊಂಡಿದ್ದಳಯ್ಯಾ-ಗೊತ್ತಾ?’ ಕುಮಾರ ವಿಚಾರಿಸಿದ. ಅದೇನೋ ಗೊತ್ತಿಲ್ಲಾಸ. ನಾನಾವಾಗ ಅಷ್ಟಕ್ಕೂ ಹುಟ್ಟೇ ಇರಲಿಲ್ಲಬಿಡಿ’ ಎಂದು ಆಟೋದವ.

ಕುಮಾರನ ಅಮ್ಮ ಮಗನನ್ನು ಸಡಗರದಿಂದ ಬರಮಾಡಿಕೂಂಡಳು ತಂಗಿ, ತಂಗಿಗಂಡ ಮಕ್ಕಳೂ ಎದುರುಗೊಂಡರು. “ಹಂಡ್ತಿ ಮಕ್ಕಳನ್ನು ಈ ಸಲವೂ ಕರ್‍ಕೊಂಡು ಬಂದಿಲ್ಲವಲ್ಲೋ?’ ಅಮ್ಮ ಎಂದಿನಂತೆ ಅಲವತ್ತುಕೊಂಡಳು. ‘ಹುಡುಗರಿಗೆ ಪರೀಕ್ಷೆ ಹತ್ತಿರ ಬರ್‍ತಾ‌ಇದೆ. ಟ್ಯೂಷನ್ಸೆ ತಪ್ಪಿಸಿಕೊಳ್ಳೋಹಾಗಿಲ್ಲ… ಹೀಗಾಗಿ’ ಪ್ರತಿಸಲದ ಸಮಜಾಯಿಷಿಯನ್ನೇ ಕುಮಾರ ನೀಡಿದ. “ನಮ್ಮನ್ನು ನೋಡೋಕೆ ಬರೋದು ಬೇಡ ಅವ್ಳು. ಕನಿಷ್ಠ ಹಿರಿಯರ ಪೂಜೆಗೆ ಬರಬಾರ್‍ದೆ…ಛೆ ಛೆ… ಹಿರಿಯರಿಗೆ ಮಕ್ಕಳು ಲೋಬಾನ ಹಾಕೋದು ಬ್ಯಾಡ್ವಾ. ಆ ಮಕ್ಕಳಿಗೆ ಒಳ್ಳೇದು ಆಗೋದು ಬ್ಯಾಡವೇನೋ? ಹಂಡ್ತಿ ಮಾತು ಅಂದ್ರೆ ವೇದವಾಕ್ಯ ನಿನಗೆ. ಅವಳೋ ಅವಳ ಕಡಯೋರನ್ನ ಬಿಟ್ಟರೆ ನಮ್ಮನ್ನು ಎಂದೂ ಸೇರಿದೊಳಲ್ಲೇಳು. ಮೊಮ್ಮಕ್ಕಳನ್ನು ನಾನು ನೋಡ್ದೆ ಎಷ್ಟು ವರ್ಷಾತಲ್ಲೋ. ನನ್ನ ಮೊಮ್ಮಕ್ಕಳನ್ನು ನನ್ನಿಂದ ದೂರಮಾಡಿಬಿಟ್ಳು. ನನ್ನ ಶಾಪತಟ್ಟದೆ ಇದ್ದಿತಾ ಆ ಕತ್ತೆಲೌಡಿಗೆ’ ಶಪಿಸುತ್ತಾ ಬುಳು ಬುಳು ಅಳಲಾರಂಭಿಸಿದಳು. ಕುಮಾರನ ಮುಖವೂ ಬಾಡಿತು. “ಹತ್ತಿರದ ಸಂಬಂಧೀಕರ ಹುಡುಗಿ. ರೂಪವಂತೆ ಅಂತೇಳಿ ಆ ಗಯ್ಯಾಳಿಯನ್ನು ತಂದು ಕಟ್ಟಿದೋಳು ನೀನೇ…’ ಅಂತೆಲ್ಲಾ ಜಗಳ ಕಾಯಬೇಕೆನಿಸಿತು. ಅಮ್ಮನನ್ನು ಮತ್ತಷ್ಟು ನೋಯಿಸುವುದರಲ್ಲಿ ಅರ್ಥವಿಲ್ಲವಂದುಕೂಂಡ ಕುಮಾರ ಮೌನವಾಗಿ ಬೈಗುಳಗಳನ್ನು ಸ್ವೀಕರಿಸಿದ. ಇದರಿಂದಲಾದರೂ ಆಕೆಗೆ ಸಮಾಧಾನವಾಗುವುದಾದರೆ ಆಗಲಿ ಎಂಬ ಮಮಕಾರ ಅವನದು. ತಂಗಿಯಾಗಲಿ ತಂಗಿಗಂಡನಾಗಲಿ ಮಧ್ಯೆ ಮೂಗು ತೂರಿಸಲಿಲ್ಲ. ಅವರುಗಳೇ ಅಮ್ಮನ ಯೋಗಕ್ಷೇಮ ನೋಡಿಕೂಳ್ಳುತ್ತಿದ್ದುದರಿಂದಾಗಿ ಅವರ ಬಗ್ಗೆ ಅವನಲ್ಲಿ ಅಪಾರ ಕೃತಜ್ಞತೆ. ಅಮ್ಮ ಕುಮಾರನೊಂದಿಗಿದ್ದರೆ ಅತ್ತೆ ಸೊಸೆ ಕಾಳಗದಲ್ಲಿ ಅವನೆಂದೋ ಹುಚ್ಚಾಸತ್ರೆ ಸೇರಬೇಕಿತ್ತು. ಅದನ್ನು ತಪ್ಪಿಸಿ ಅವನ ಮಾನವನ್ನು ಕಾಪಾಡಿದ್ದು ತಂಗಿ. ಹಿರಿಯರಪೂಜೆ ರಾತ್ರಿಯಲ್ಲಿ ನಡೆಸುವುದು ಶೂದ್ರ ಸಂಪ್ರದಾಯ. ಚಿಕನ್‌ ಮಸಾಲ ವಾಸನೆ ಮನೆ ತುಂಬಾ ವ್ಯಾಪಿಸಿತ್ತು. ಹಿರಿಯರಿಗೆ ಬೀಕಾದ ತಿಂಡಿ ತಿನಿಸುಗಳನ್ನೆಲ್ಲಾ ಭಾವನೇ ಮುತುವರ್ಜಿವಹಿಸಿ ತಂದಿದ್ದ. ವಿಸ್ಕಿಬಾಟಲು ಮೊಟ್ಟೆಗಳು ಫಿಶ್‌ಪ್ರೈ ಸಿಗರೇಟು ಬೀಡಿಕಟ್ಟು ಹೂಗೆಸೂಪ್ಪು ನೇವೇದ್ಯದ ಸಾಲಿನಲ್ಲಿ ಕೂತಿದ್ದವು. ಗೋವಿಂದಜ್ಜ ಗರುಡಗಂಬದೊಂದಿಗೆ ಬಂದು ಜಾಗಟೆ ಬಾರಿಸಿ ಶಂಖ ಊದಿ ಪೂಜೆಗೆ ಕಳೆಗಟ್ಟಿಸಿದ. ‘ಹೆಂಡ್ತಿ ಮಕ್ಕಳ ಪರವಾಗಿ ನೀನೇ ಲೋಬಾನ ಮೂರು ಸಾರಿ ಹಾಕಿಬಿಡೋ ಮಾರಾಯ’ ಅಮ್ಮ ಕಣ್ಣೀರು ಹಾಕಿದಳು. ‘ಅಮ್ಮನಿಗೆ ಮೊಮ್ಮಕ್ಕಳನ್ನ ನೋಡೋ ಆಸೆಕಣೋ. ರಜದಲ್ಲಾದರೂ ಕರ್‍ಕೊಂಡು ಬಾರೋ’ ತಂಗಿ ಮಾತಿನಲ್ಲಿ ಬೇಡಿಕೆಯಿತ್ತು. ಕುಮಾರ ತಲೆಯಾಡಿಸಿ ಲೋಬಾನ ಹಾಕಿದ. ನಂತರ ದಾಸಯ್ಯನ ಪಾದಕ್ಕೆ ಎಲ್ಲರೂ ನಮಸ್ಕರಿಸಿ ಊಟಕ್ಕೆ ಕೂತರು. ದಾಸಯ್ಯ ‘ಗೋವಿಂದಾ ಗೋವಿಂದ’ ಎಂದು ಉದ್ಗಾರ ತೆಗೆದ ನಂತರ ಕೈ ಬಾಯಿಗೆ ಸಮರ ಶುರುವಾಯಿತು. ಚಿಕನ್ ಸಾರಿನ ಖಾರಕ್ಕೆ ಕುಮಾರನ ಮೂಗಿನಲ್ಲಿ ಸಿಂಬಳ ಇಣುಕಿತ್ತು. ಯಾರಿಗೂ ಕುಡಿವ ಅಭ್ಯಾಸವಿಲ್ಲದ್ದರಿಂದ ದಾಸಯ್ಯನೇ ವಿಸ್ಕಿಗೆ ನೀರು ಬೆರಸಿ ಹೀರಿ ಸುಖಿಸುತ್ತಿದ್ದ. ಕುಮಾರನಿಗೆ ತಟ್ಟನೆ ತಿಪ್ಪಜ್ಜಿ ನನಪಿಗೆ ಬಂದಳು. ‘ಗೋವಿಂದಜ್ಜ, ಬಸವೇಶ್ವರ ಸರ್ಕಲ್‌ನಾ ಈಗ್ಲೂ ಇಲ್ಲಿನವರು ತಿಪ್ಪಜ್ಜಿ ಸರ್ಕಲ್‌ ಅಂತ್ರ ಕರೀತಾರಲ್ಲ?!’ ಅಚ್ಚರಿ ವ್ಯಕಪಡಿಸಿದ. ಉತ್ತರಿಸಿದ್ದು ಮಾತ್ರ ಕುಮಾರನ ಅಮ್ಮ ‘ಮರುಳಜನಕಣೋ. ಕಾನ್ವೆಂಟ್‌ತಾವ ಅವಳು ಅಂಗ್ಡಿಯಿಟ್ಟಾಗ ನೀವಿನ್ನ ಹೈಸ್ಕೂಲ್ನಾಗಿದ್ರೇನೋ. ಬಸವೇಶ್ವರ ಸರ್ಕಲ್‌ ಅಂತ ಆಪಾಟೆ ದೊಡ್ಡ ಬೋರ್‍ಡುಹಾಕಿದರೂ ಸೂಳೇರ ತಿಪ್ಪವ್ವನ ಹೆಸರೇ ಖಾಯಂ ಆಗೇತ್‌ನೋಡ್ಲಾ! ಇದೆಂಥ ಇಚಿತ್ರ.. ಎಲ್ಲಾ ಕಾಲಮಹಿಮನಯ್ಯಾ’ ಅಂದಳು. ಈಗ ದಾಸಯ್ಯ ಮೂಗೇರಿಸಿ ಮುಖ ಕಿವುಚಿದ. ‘ಹಂಗ್‌ ಅನ್ಬೇಡ ನೋಡ್‌ ಪಾಪಕ್ಕ. ತಿಪ್ಪವ್ವ ದೇವದಾಸಿ. ಅಂಥೋರ್‍ನ ಸೂಳೇರು ಅನ್ನಬಾರದುಕಣವ್ವ’ ಅಂದ. ‘ಅಲೆ ಗೋವಿಂದಜ್ಜ, ಮುದಕಾದ್ರೂ ಅವಳ ಮ್ಯಾಗಿನ ಯಾಮೋಹ ಹೋಗಲಿಲ್ಲ ಅಲ್ಲಲೆ ನಿನ್ಗೆ. ಪರವಹಿಸ್ಕೂಂಡು ಮಾತಾಡ್ತಿಯಾ ನದರಿಲ್ಲದೋನೆ’ ಅಮ್ಮ ಕೊಂಚ ಹೆಚ್ಚೇ ರೇಗಿದಳು. ‘ಅರೆ, ಮುಂದೋನಾತು ಹೇಳಜ್ಜ’ ಕುಮಾರ ಉತ್ಸಾಹ ತೋರಿದ. ವಿಸ್ಕಿ ಕೆಲಸಮಾಡಿತ್ತು. ಅಜ್ಜ ಹುರುಪಿನಿಂದ ಹೇಳತೊಡಗಿದ.

ಸೂಳೇರ ತಿಪ್ಪವ್ವ ಅಂತ್ಲೆ ಆಕೀನ ಆಜಮಾನ್ದಾಗೆ ಕರೆಯೋರು. ಆಗೆಲ್ಲಾ ಊರಿನಾಗೆ ಮೂರುನಾಕು ಜನ ದೇವದಾಸಿಯೋರು ಇರೋರೇಳು. ಅದ್ರಾಗ ಈಕಿ ಕರುವಿನಕಟ್ಟೆನಾಗೆ ಅಗದಿ ಪೇಮಸ್ಸು. ಪರಮಾಶಿ ಹೆಣ್ಣು ಕಪ್ಪಗೆ ಇದ್ದರೂ ಒಳ್ಳೆ ಎತ್ತರ ಹದವಾದ ಮೈಕಟ್ಟು. ತಿದ್ದಿತೀಡಿದ ಲಕ್ಷಣವಾದ ಮೂಗುಮಕ. ಇಷ್ಟು ಇಷ್ಟಗಲ ಕಣ್ಣು. ಹಣೆನಾಗೆ ದೊಡ್ಡ ಕುಂಕುಮ. ಅಂಡಿಗೆ ತಾಗೋವಂತ ಜಡೆ ಬಿಟ್ಕೊಂಡು ಸೆರಗು ಬೀಸ್ಕೂಂಡು ಬೀದಿನಾಗೆ ಹೊಂಟ್ರೆ ಮದುವೆಯಾದೋನ, ಆಗ್ದೋನ ಇಬ್ಬರೂ ಕಚ್ಚೆನೂ ಅದರು ಅಲ್ಲಾಡಿಬಿಡೋದು. ಈಗಿನ ಸಿನೆಮಾ ಆಗಟ್ರಸ್‌ಗುಳ್ಳ ಹೋಲಿಸೋನಾ ಅಂದ್ರೆ ಎಲ್ಲಾ ಎಲತೊಗಲು ಬಿಟ್ಕಂಡವೆ. ಒಂದೀಟು ಹಿಂದಕ್ಕೆ ಹೋದ್ರೆ ‘ಸಿಲ್ಲುಸ್ಮಿತಾ’ ಟೈಪ್‌ ಅನ್ನಬೋದು. ನಿಮ್ಮಪ್ಪನೂ ಆಕಿ ಸಂಗಮಾಡಿ ನಿಮ್ಮವ್ವಂತಾವ ಸಿಗೆಹಾಕ್ಕಂಡು ಕ್ಯಾಕರಿಸಿ ಉಗಿಸಿ ಕೊಂಡೋನೆಯಾ’ ಪುಸ್ಕನೆ ನಕ್ಕ ಗೋವಿಂದಜ್ಜ. ಅಮ್ಮ ನಗಲಿಲ್ಲ ಬಡಿಸುವ ಸಡಗರದಲ್ಲಿದ್ದಳು. ಕುಮಾರನಿಗೋ ಬಸವೇಶ್ವರನ ಹಸರನ್ನೇ ಓವರ್‌ ಟೇಕ್‌ ಮಾಡಿದ ಮುದುಕಿಯ ಇತಿಹಾಸ ತಿಳಿಯೋ ಕುತೂಹಲ. ‘ನಿನಗೇನಾರ ತಿಪ್ಪಜ್ಜಿ ಬಗ್ಗೆ ಗೊತ್ತಾ?’ ಕೇಳಿದ. ‘ಅಯ್‌ ಆಕಿ ಹಿಸ್ಟರಿ ಅಂಡ್‌ ಜಾಗರಫಿನೇ ನಂತಾವೈತ ಕಣಪ್ಪ’ ದಾಸಯ್ಯ ಗ್ಲಾಸ್‌ ಏರಿಸಿದ. ‘ಅಲೆ ಕುಮಾರ ಇಲ್ಲಿಕೇಳೋ, ಈವಯ್ಯನೂ ಅವಳ ಹಿಂದ ಬಿದ್ದೋನೆಯಾ. ಇಂಥ ದಾಸಯ್ಯ ಜಂಗಮಯ್ಯಗಳ್ನೆಲ್ಲಾ ಮೂಸಿ ನೋಡ್ಯಾಳಾ ಆಭಿತ್ರಿ’ ಅಮ್ಮನದು ಈರ್ಷೆಯೋ ಆಕ್ರೋಶವೋ ಕುಮಾರನಿಗೆ ಅರ್ಥವಾಗಲಿಲ್ಲ. ಗೋವಿಂದಜ್ಜನು ಸಂಗೀತಗಾರನಂತೆ ಕೆಮ್ಮಿ ಕ್ಯಾಕರಿಸಿ ಗಂಟಲು ಸರಿಮಾಡಿಕೊಂಡು ತಿಪ್ಪಜ್ಜಿ ಹಿಸ್ಟರಿ ಬಿಚ್ಚಿಕೊಡವಿದ. ದುರ್ಗದಾಗೆ ಸೊಳೆರ ತಿಪ್ಪವ್ವಳೆಂದೇ ಹೆಸರುವಾಸಿಯಾದ ಆಕಿ ಮನೆ ಅಂಬೋದು ಕರುವಿನಕಟ್ಟೆಯಾಗಿತ್ತು. ಸಂಜೆಯಾಗುತ್ಲು ತರಾವರಿ ಸಾಹುಕಾರರು ಮನೆಗೆ ಬಂದು ಹೋಗೋರು. ಸಂಜೆ ಜಡೆ ಹಾಕ್ಕಂಡು ದಂಡಿ ಹೂವಾ ಮುಡ್ಕೊಂಡು ಈಟಗಲ ಕುಂಕುಮ ಇಕ್ಕಂಡು ಈರುಳ್ಳಿ ಪೊರೆಯಂತ ರವಿಕೆ ತೊಟ್ಕೊಂಡು ಅದ್ಕೂ ತೆಳ್ಳಗಿನ ಸೀರೆ ಸುತ್ಕಂಡು ಬಾಗಿಲ್ದಾಗೆ ನಿತ್ಕಂಡ್ಲು ಅಂದ್ರೆ ಗರತಿ ಹೆಣ್ಣು ಮಕ್ಳೆಲ್ಲಾ ಗಪ್ಪಂತ ಬಾಗ್ಲು ಹಾಕ್ಕಂಡು ಒಳಹೂಕ್ಕಣಾರು. ಆ ಮೇಲೆ ಕಿಟಕಿಯಾಗ್ಳಿಂದ ಮನಿಗೆ ಯಾವನು ಬಂದ ಯಾವನು ಹೋದ ಅಂತ ಲೆಕ್ಕಮಾಡೋದ್ರಾಗೇ ಹೂತ್ತು ಕಳೆಯೋರು. ಯಾಕಂದ್ರೆ ಆವಾಗ ಟಿ.ವಿ.ಪಾವಿ ಇರ್‍ನಿಲ್ಲ. ಯಾರ ಮನಿಗೆ ಯಾರು ಬಂದರು ಯಾರು ಹೋದರು. ಯಾವನ್ನ ಯಾವೋಳು ಮಡಿಕ್ಕಂಡವ್ಳೆ ದಿಮ್ಮನೆ ಗಂಡಿದ್ದರೂವೆ ಮಾಡಿ ಮ್ಯಾಗಿನ ಬಾಡಿಗೆ ರೂಮನಾಗಿರೋ ಓದೋ ಹುಡುಗ್ರನ್ನ ಗಿರಿಜಕ್ಕ ಅಂಬೋಳು ಹಂಗೆ ಬಲೆಗೆ ಕೆಡವಿಕೊಂಡ್ಳು ಅಂಬೋ ನಾನಾ ನಮೂನೆಯ ಲವ್‌ ಸ್ಪೋರಿಯಾ ಕೇರಿ ತುಂಬಾ ಸಾರ್‍ಕೂಂಡು ಬರೋ ಹಂಗಸರ್‍ದೇ ಒಂದು ಗುಂಪಿರೋದು. ಆವಾಗೆಲ್ಲಾ ಇಂಥವೇ ಈವತ್ತಿನ ಸೀರಿಯಲ್ಲಿಗಿಂತ ಬಲು ಮಜಾಕೋಡವು. ಈ ತಿಪ್ಪವ್ವ ಇದ್ದಳಲ್ಲ. ವಯಸ್ಸಿನಾಗೆ ಕಡ್ಕೂಂಡು ತಿನ್ನಂಗಿದ್ಳು. ದಾವಣಗೇರಿ ಮಂಡಿ ಸಾಹುಕಾರ್ರೆಲ್ಲಾ ಬರೋರು. ಆ ಕಾಲ್ದಾಗೇ ಭೇಷ್‌ ಮನೆ ಕಟ್ಟಿಕ್ಕಂಡಿದ್ದಳು. ರೂಕ್ಕನೂ ಕೈನಾಗೆ ಆಡೋದು. ಅಕಿಗೆ ಒಬ್ಬಾಕಿ ಮಗಳು ಹುಟ್ಟಿದರೂ ಡಿಮ್ಯಾಂಡೇನು ಇಳೀನಿಲ್ಲ. ಮಗಳು ಹುಟ್ಟಿದಳು ಅಂತು ಖುಸಿನಾಗೆ ಕೇರಿಗೆಲ್ಲಾ ಹುಗ್ಗಿ ಹಾಕಿಸಿದ್ದಳು. ಕೇರಿನಾಗಿನ ಒಬ್ಬ ಗಂಡಸೂ ತಪ್ಪಸ್ಥಂಗೆ ಬಂದು ಹುಗ್ಗಿ ಹೊಡ್ದೋನೆಯಾ. ಹೆಣ್ಣು ಹುಟ್ತು ಅಂದ್ರ ಹುಣ್ಣು ಹುಟ್ತು ಅಂತ ಬ್ಯಾಸರ ಮಾಡ್ಕೂಂಬೋ ಕಾಲ. ಆದರೆ ದೇವದಾಸಿಯರಿಗೆ ಹಂಗಲ್ಲ. ಗಂಡು ಹುಟ್ಟಿದರೆ ಲಾಸು. ಹೆಣ್ಣು ಹುಟ್ಟಿದರೆ ಕೈತುಂಬಾ ಕಾಸು ಅಂಬೋ ಮಾತು ಚಾಲ್ತಿನಾಗಿತ್ತು. ತಿಪ್ಪವ್ಪನ ಮನೆಯಾಗೆ ಕೋಳಿ ಕುಯ್ದರೆ ಕರುವಿನಕಟ್ಟೆಲ್ಲಾ ಗಮಗಮ.

ಮಗಳು ದೊಡ್ಡಾಕಿ ಆದಂಗೆಲ್ಲಾ ಹೋಗಿಬರೋ ಮಂದಿ ಕಣ್ಣೆಲ್ಲಾ ತಾಯಿನಬಿಟ್ಟು ಮಗಳ ಮ್ಯಾಲೆ ಅಮರಿಕೊಂಡ್ತು. ಮಗಳು ಗಂಗ ದುಂಡು ದುಂಡಗೆ ಮುತ್ತಿನ ಚೆಂಡಿನಂಗಿದ್ಳು. ಹೈಸ್ಕೂಲುಮಟ ಓದಿದ್ಳು. ಆಮೇಲೆ ರಾಗ ತೆಗೆದ್ಲು. ‘ಅವ್ವಾ, ನನ್ನ ಹುಡ್ರು ಸೂಳೇರ ತಿಪ್ಪವ್ವನ ಮಗಳು ಅಂತ ಕಿಚಾಯಿಸ್ತಾವೆ. ನಾನು ಶಾಲೆಗೆ ಹೋಗಾಕಿಲ್ಲ.’ ಒಂದಿಣ ಕಣ್ಣೀರು ಹಾಕಿದ್ಳು ಮಾರನೆದಿಣ ಹಠಕ್ಕೆ ಬಿದ್ಳು. ‘ಅನ್ನೋರ ಬಾಯ್ನಾಗೆ ಮಣ್ಣುಹಾಕಾ. ಬದುಕಿದ್ರೆ ಬಾಯಿ ಬಾಡ್ಕೊಂತಾರೆ. ಕೆಟ್ಟರೆ ತಿಕ ಬಡ್ಕೊಂತಾರೆ. ಇವಕ್ಕೆಲ್ಲಾ ಕೇರ್‌ ಮಾಡಬಾರ್‍ದಲೆ ಕತ್ತೆಸೂಳೆ’ ತಿಪ್ಪವ್ವ ಏಟು ಬೃದು ಬುದ್ದಿ ಹೇಳಿದರೂ ಮಗಳು ಬೀದಿನಾಗೆ ತಲಿ‌ಎತ್ತಿ ನಡಯೋಕೇ ನಾಚ್ಕೆ ಪಡೋವಷ್ಟು ಸೂಕ್ಷ್ಮ ಆಗೋದಳು. ಇಂಥ ಸುಂದ್ರಿಮಗಳ್ನ ಇಟ್ಕಂಡು ಇನ್ನೂ ಎರ್‍ಡು ಮನೆ ಕಟ್ಟಿಸ್ತವ್ಳೆ ಅಂತ ಮಂದಿ ಕಿಸಕಾಡಿತು. ಮನೆಗೆ ಗಂಡಸರು ಬಂದು ಹೋಗೋದು ತನ್ನನ್ನೇ ನುಂಗೋವಂಗೆ ನೋಡೋದನ್ನ ಗಂಗ ಕೊರಗಿ ಕಾಷ್ಠವದ್ಳು. ದುಂಡುಗಾಗೋ ಹೂತ್ನಾಗೆ ಮಗಳು ಕಂಚಿಕಡ್ಡಿ ಸೈಜಿಗೆ ಇಳಿವಾಗ ತಿಪ್ಪವ್ವನೆಂಬೋ ತಿಪ್ಪವ್ವನೇ ಹೌಹಾರಿದಳು. ಮಗಳಿಗೆ ಯಾವ್ದೋಗಾಳಿ ಬಡ್ಕೂಂಡೇತೆ ಅಂತ ಮಂತ್ರವಾದಿ ಕರೆಸಿದಳು. ನನಗಾಗದ ನನ್ನ ಸವತೇರು ಮಾಟ‌ಏನಾರ ಮಾಡಿಸಿದ್ದಾರೆ. ನನ್ನ ಕಸಬುಬೀಗೇಕಲ್ಲು ಹಾಕೋ ಪಿಲಾನ್‌ ಮಾಡವರೆ ಅಂತ ಕೇರಿನಾಗೆ ಇರೋರ್‍ಗೆಲ್ಲಾ ಹಿಡಿಶಾಪ ಹಾಕ್ತಾ ಮಾಟ ತಗಿಸಿದಳು. ಯಾವಳೋ ಗಯ್ಯಾಳಿ ನನ್ನ ಕಂದನಿಗೆ ತಿನ್ನೋಕ ಕೊಟ್ಟು ಮದ್ದು ಇಟ್ಟವಳೆ ಅಂತ ಮದ್ದು ತಗೆಸಿದಳು. ಕಡೀಗೆ ಸರ್ಕಾರಿ ಆಸ್ಪತ್ರನಾಗೆ ಮಾತ್ರೆ ಕೊಡಿಸಿದ್ಳು. ಆವಾಗ ನರ್ಸಿಂಗ್‌ ಹೋಮುಗಳಿನ್ನೂ ಹುಟ್ಟಿಕ್ಕಂಡಿರ್‍ಲಿಲ್ಲ. ತಿಪ್ಪವ್ವ ಅಂಬಾಕಿ ಏನೇ ತಿಪ್ಪರಲಾಗ ಹಾಕಿದರೂ ಗಂಗ ಚಿಗಿತುಕೂಳ್ಳಿಲ್ಲ. ‘ಏನಾತ ನನ್‌ಮಗ್ಳೆ ಏನ್‌ ಬೇಕವ್ವ ನಿನ್ಗೆ? ಕಾಸಿನಸರ ಮಾಡಿಸ್ಲಾ ಬುಗುಡಿಮಾಡಿಸ್ಲಾ ನೆಕ್‌ಲೇಸ್‌ ಮಾಡ್ಸಿ ಕೊಳ್ಳಿಗೆ ಹಾಕ್ಲಾ?’ ಅಂತ ಒಂದೇ ಸಮಕ ಕಣ್ಣೀರು ಕೋಡಿಹರಿಸುತ್ತಾ ಮಗಳನ್ನೇ ಕೇಳಿದಳು. ಆಕಿ ಹೇಳಿದ್ದು ಕೇಳಿ ಅಂತಿಂಥೋರ ರುದಯವಾಗಿದ್ದರೆ ‘ಡಬ್’ ಅಂತ ಹೊಡ್ಕಂಡು ಹೋಗೋದು. ತಿಪ್ಪವ್ವ ಗಟ್ಟಿಗಿತ್ತಿ. ತಕ್ಷಣ ಗೋಡಗೊರಗಿ ಸುಧಾರಿಸಿಕ್ಕಂಡ್ಳು. ‘ಈ ಹಲ್ಕಟ್‌ ಕಸಬು ಬಿಟ್ಟು ಬಿಡವ್ವ, ನಮ್ಮ ಮನಿಗೆ ಇನ್ನು ಯಾವತ್ತೂ ಯಾರು ಯಾವ ಗಂಡಸೂ ಬರಕೂಡ್ದು ಅಂತ ಮಗಳು ಕರಾರು ಹಾಕಿದಳು. ‘ಅಲ್ಲೆ ಸುಪನಾತಿ, ನಾನೇ ಇನ್ನೂ ಧಿಮ್ಮಗವ್ನಿ. ಕಸಬುಬಿಡು ಅಂತಿಯಲ್ಲೇ! ಬಿಟ್ಟೇನು ಬಾಯ್ನಾಗೆ ಮಣ್ಣು ಇಸ್ಸಿ ಹಾಕಳ್ಳಾ. ನೀನು ನನ್ನ ಜೊತೆನಾಗೆ ಸೇರಿದ್ರೆ ಸಂಪಾದ್ನೆ ಸುಖ ಎಲ್ಹಕ್ಕೂ ಕೊರತೆ ಅಂಬೋದೇ ಇರಲ್ಲ ನೋಡವ್ವ’ ತಿಪ್ಪವ್ವ ಪುರಾಣ ಊದಿದ್ಳು. ‘ನೀನು ತಿಳ್ಳೊಂಡಿರೋ ಸುಖ ನನ್ನ ಪಾಲಿಗೆ ನರಕ ಕಣವ್ವ. ಇದೆಲ್ಲಾ ನನ್ಗೆ ಬೇಡ. ಎಲ್ಲರಂಗೆ ಸಂಸಾರ ಮಾಡ್ತೀನಿ ಲಗ್ನಮಾಡು’ ಅನ್ನೋದೇ ಗಂಗ! ತಿಪ್ಪವ್ಪನ ಜೀವವೇ ಬಾಯಿಗೆಬಂತು. ‘ಉಂಟೇನೇ ನಮ್ಮವ. ನಾವು ಹುಟ್ಟಿದ್ದೇ ದೇವದಾಸೇರ ಕುಲ್ದಾಗೆ. ದೇವರೇನಾರ ಮುನಿಸ್ಕಂತೋ ಆಗೋದು ಲಗ್ನ ಅಲ್ಲ ನಿನ್ನ ತಿಥಿ… ನಿನ್ನ ಓದೋಕಾಕಿದ್ದೆ ತೆಪ್ಪಾತುಕಣಲೆ’ ತಿಪ್ಪವ್ವ ಬಾಯಿಬಾಯಿ ಬಡ್ಕೊಂಡು ಅಂಗೈನಾಗೆ ನಲಸವರಾಡಿ ಅತುಕರಿದು ಬೀದಿರಂಪ ಮಾಡಿದಳು. ಗಂಗ ಬಗಲಿಲ್ಲ. ‘ನಿನ್ನ ಮಗಳು ಹೇಳೋದ್ರಾಗೂ ಅರ್‍ಥ ಇದೆ. ಕಾಲಕ್ತೆತಕ್ಕಂತ ಬದಲಾಬೇಕು ಕಣ್‌ ತಿಪ್ಪವ್ವ. ಮಗಳಿಗೆ ಲಗ್ನ ಮಾಡು’ ಅಂತ ಹೊಸಮಾತೊಂದು ಹೇಳಿದೋನು ಹಳ ಎಂಕಟರಮಣಸಾಮಿ ದೇವಸ್ಥಾನದ ಪೂಜಾರಪ್ಪ. ದೇವಸ್ಥಾನದ ಜಗಲಿಮ್ಯಾಲೆ ಕುಂತು ಪರಪರ ತಲಕೆರಕಂಡ್ಳು ತಿಪ್ಪವ್ವ, “ನೀನೋ ಲಗ್ನ ಮಾಡಂತಿ ಪೂಜಾರಿ. ಮಾಡಾನೇಳು… ಆದ್ರೆ ನಮಂತಹ ದೇವದಾಸೇರ ಮಕ್ಕಳನ್ನ ಯಾರಪ್ಪ ಲಗ್ನ ಆಗ್ತಾರೆ?’ ಕೊಚ್ಚನ್‌ ಮಾಡಿದಳು. ಪೂಜಾರಪ್ಪ ಪರಪರ ತಲೆ ಕೆರಕಂಡ. ಈಕಿ ಅವನಿಗೊಂದು ಬೀಡಿಕೊಟ್ಟು ತಾನೊಂದು ಹಚ್ಕಂಡ್ಳು.

ಇಂತಿಪ್ಪ ತಿಪವ್ವ ಒಪ್ಪಂಗಿಲ್ಲ ಮಗಳು ಬಿಡಂಗಿಲ್ಲ. ಯಾವನಾರಗಂಡ್ಸು ಮನೆಗೆ ಬಂದ್ನೋ ಗಂಗ ಹುಚ್ಚು ಬಂದೋಳಂಗೆ ತಲೆಕೂದ್ಲ ಕಿತ್ಕೊಂಡು ಅರಚಾಡೋ ಪರಿಸ್ಥಿತಿ ನಿರ್ವಾಣಾತು. ‘ಲಗ್ನ ಮಾಡಲಿಲ್ಲಾ ಬಾವಿ ಹಾರಿಕ್ಯಂತೀನಿ. ಮಾನಗೆಟ್ಟ ನಿನ್ನಂಥ ಹೆಂಗ್ಸಿನ ಸವಾಸಬ್ಯಾಡ ಕಣೆ. ನೀನು ತಾಯಲ್ಲ ನಾಯಿ’ ಅಂಬೋಳು. ತಾಯಿ ಮಗಳ ಕಿತ್ತಾಟ ಕರುವಿನಕಟ್ಟೆ ದಾಟಿ ದೂಡ್ಡಪ್ಯಾಟೆ ಮುಟ್ತು. ಪೂಜಾರಿ ಹೇಳಿದ ಮಾತೂ ತಿಪ್ಪವ್ಪನ ಮನಸ್ಸಿಗೆ ನಾಟಿತ್ತು. ಇದೇ ದಿನದಾಗೆ ದಾವಣಗೇರಿನಾಗಿದ್ದ ತಿಪ್ಪವ್ಪನ ದೋಸ್ತಿ ಮಾಳಿಗೆ ರಂಗವ್ಹನಂಬೋ ದೇವದಾಸಿ, ಒಳ್ಳೆ ಸಂಪಾದ್ಮೆ ಇದ್ದರೂ ಕಸಬು ಬಿಟ್ಟು ಮಗಳು ಲಗ್ನ ಮಾಡ್ತಾಳೆಂಬೋ ಸುದ್ದಿ ಕೇಳಿದ ತಿಪ್ಪವ್ಪನ ತಿಕ ಉರೀತು. ಆದರೂ ಲಗ್ನಕ್ಕೆ ಹೋದ್ಳು. ‘ಬುದ್ದಿಗೆಟ್ಟಮುಂಡ ಕಣೆ ನೀನು. ಚೆಂದವಾಳದಗೊಂಬಿ ಅಂಥ ಮಗೀನ ಯಾವನೋ ಗುಮಾಸ್ತನಿಗೆ ಧಾರೆ ಎರೆದು ಬಿಟ್ಟಲ್ಲೆ. ಮಸ್ತು ರೊಕ್ಕ ಮಾಡ್ಬೋದಿತ್ತು’ ಕುಕ್ಕುಲಾತಿ ತೋರಿದ್ದಳು. ‘ಸತ್ತಾಗೇನು ಹೊತ್ಕೊಂಡು ಹೋಯ್ತಿವಾ ತಿಪ್ಪಿ? ನಮ್ಮ ಹಿರೇರಂತೂ ಬುದ್ದಿ ನೆಟ್ಟಗಿರ್‍ಲಿಲ್ಲ-ಮೇಲ್ಜಾತಿಯೋರ ಮಾತು ಕೇಳಿ ದೇವದಾಸೇರ ಹೆಸರ್‍ನಾಗೆ ಸೂಳೆಬಿಟ್ಟರು. ಸಾಕುಕಣೆ ನಮ್ಮ ಕಾಲಕ್ಕೇ ಈ ಕಸಬು… ಮುಂದಿನೋರಾರ ಸಂಸಾರಸ್ಥರಾಗಿ ನೆರೆಹೊರೇರ ಎದುರ್‍ನಾಗೆ ತಲೆ ಎತ್ಕಂಡು ಬುದಕ್ಲಿ’ ಮಾಳಿಗೆ ರಂಗವ್ವ ನಿಟ್ಟುಸಿರಾದಳು. ‘ಅಲ್ಲ ರಂಗಿ, ನಿನ್ಗೂ ವಯಸ್ಸಾತು ಮುಂದೆ ಹೊಟ್ಟಿಹೆಂಗ್‌ ಹೂರೀತಿ? ಕಾಳಜಿ ಬಾಯಿ ತೆರೆದಿತ್ತು. ‘ಹೂ ಮಾರ್‍ಕೊಂಡು ಜೀವನ ಮಾಡಿದ್ರಾತೇಳೆ. ಒಬ್ಬಾಕಿ ಹೊಟ್ಟೆ ಹೊರೆಯೋದೇನು ದೊಡ್ದಾ?’ ಅಂದಿದ್ದಳು ಮಾಳಿಗೆ ರಂಗವ್ವ. ಇದೆಲ್ಲಾ ನೆಪ್ಪಿಗೆ ತಂದ್ಕೂಂಡ ತಿಪ್ಪವ್ವ ಕ್ಷಯರೋಗಿ ತರವಾಗಿದ್ದ ಮಗಳ ಮಾರಿ ನೋಡಿದ್ಳು. ಸತ್ತುಗಿತ್ತು ಹೋದಾಳಂಬೋ ಹದರಿಕೆನಾಗೆ ಲಗ್ನ ಮಾಡೋ ತೀರ್ಮಾನಕ್ಕೆ ಬಂದ್ಲು. ಆಗೋರುಬೇಕಲ್ಲ? ತಿಪ್ಪವ್ವ ಆಲೋಚನೆ ಬಂದಿದ್ದೇ ತಡ ಮೊಟ್ಟ ಮೊದಲು ತಕ್ಕೊಂಡ ಕ್ರಮ ಮಗಳಿಗಾಗಿ ಕಸಬು ಬಿಟ್ಟಿದ್ದು. ಕಾನ್ವೆಂಟ್ತಾವ ಒಂದು ಬೀಡ ಬೆಂಕಿಪೂಟ್ಟಣದ ಗೂಡಾಂಗಡಿ ಹಾಕಿದ್ಳು. ಯಾಪಾರಕ್ಕೆ ಕುಂತ್ಳು ತಿಪ್ಪವ್ವ ದುರ್ಗದಾಗೆ ಯಾರಿಗೊತ್ತಿಲ್ಲಳು? ಆಗ ದುರ್ಗ ಇದ್ದದ್ದೇ ರಂಗಯ್ಯನಬಾಗ್ಲು ಸಂತೆಬಾಗ್ಲು ಒಳಗೆ. ಅದುಬಿಟ್ಟೆ ಈ ಕಡೆ ಕಳಕೋಟೆ ಆಕಡೆ ಬುರುಜನಹಟ್ಟಿ. ಬೀಡ ಬೀಡಿ ಸಿಗರೇಟು ಬಾಳೆಹಣ್ಣು ಅಂತ ಹಳೆ ಮುದಕರು ಎಳೆ ಮುದಕರು ಪಡ್ಡೆಗಳು ಮುತ್ತಿಕೂಂಡವು. ಬಾಗಲಕೋಟೆ ಬಳ್ಳಾರಿ ಚಳ್ಳಕೆರೆ ನಾಯಕನಹಟ್ಟಿ ಕಡೆ ಹೋಗಿಬರೋ ಬಸ್ಸಗಳು ಅಲ್ಲೊಂದು ಸ್ಟಾಪ್‌ ಮಾಡಿಕೊಂಡವು. ಬಸ್‌ ಘುಲ್‌ ಆಗೋವರ್‍ಗೂ ತಿಪ್ಪವ್ವನ ತಾವ ಹಲ್ಟೆ ಜೊತಗೆ ಬೀಡ ಬಾಳೆಹಣ್ಣು ಜಗಿದು ಬೀಡಿ ಸೇತ್ತಾ ಮಜಾ ತಗಂಬೋರು. ಹೊಸದಾಗಿ ಕಾನ್ವೆಂಟ್‌ ಬೇರೆ ಇದಿದ್ದರಿಂದ ಮಕ್ಕಳಿಗೆ ಬೇಕಾದ ಬಿಸ್ಕತ್ತು ಸೀಬೇಕಾಯಿ ಬೋರೆಹಣ್ಣು ಕಂಚಿಕಾಯಿ ತಂದು ಮಡಗಿದಳು. ಕಂಬರಗಟ್ಟನೂ ಮಾಡಿಟ್ಟಳು. ಮೂದಲ ಸಲ ಗುಲ್ಕನ್‌ ಕಾಯಿತುರಿ ಬೆರೆಸಿ ಬೀಡಾ ಕಟ್ಟಿ ಕೊಟ್ಟಳು. ಮಂದಿ ಮುಗಿಬಿತ್ತು. ಆವಾಗಾವಾಗ ತಿಪವ್ವನ ಮಗ್ಗಲಿಗೆ ಬರ್‍ತಿದ್ದ ಕರೀಂಸಾಬಿ ಮಾತ್ರ ಆಕಿ ಕಸಬು ಬಿಟ್ಟರೂ ಸುಮ್ನೆ ನೋಡೋಸಲುವಾಗಿ ಅಂಗ್ಡಿಗೆ ಬರೋನು. ಅವನಿಗೂ ಬೀಬಿ ಸತ್ತು ಹೋಗಿದ್ಳು. ಗ್ಯಾರೇಜ್‌ ಮಡಗಿದ್ದ. ‘ನಿಂತುವ ಮಾತಾಡಿದ್ರೆ ನನ್ಗೇಟೋ ದಿಲ್‌ಖುಷ್‌… ಇಡಿದಿನಾ ಖುಸಿಯಾಗಿ ಕೆಲ್ಸ ಮಾಡ್ತೀನಿ ತಿಪ್ಪು. ಅದಕ್ಕೆ ಬತ್ತಿವ್ನಿ’ ಅಂತಂದು ಕಣ್ಣಾಗೆ ನೀರು ಹಾಕ್ದ. ಉಳಿದೋರೆಲ್ಲಾ ಬೇರೆ ದೊಕರು ನೋಡಿಕೊಂಡ್ರೋವೆ ಮಾತಾಡ್ಸಾಕಂತ್ಲೆ ಬರ್‍ತಿದ್ದ. ಆಗೀಗ ಬಿರಿಯಾನಿ ಪೊಟ್ಟಣ ಬ್ರಾಂದಿ ಬಾಟ್ಲು ತರ್‍ತಿದ್ದ. ಅವನ್ನ ಕಂಡರೆ ಈಕಿಗೂ ಕಳ್ಳು ಚುರ್‌ ಅಂಬೋದು. ಡ್ರ್‍ಐವರ್‍ಗಳ ದೋಸ್ತಿನೂ ಅವನಿಗಿತ್ತು ‘ಅಜ್ಜ ಅಜ್ಜಿ ಜೋಡಿ ಮಸ್ತು‌ಐತೆ’ ಅನ್ನೋರು. ಬಸ್ಸು ಸರ್ಕಲ್‌ ತಾವಬರುತ್ತು ಕುಶಾಲಿಗೆ, ‘ಯಾರು ಇಳೀರಿ ತಿಪ್ಪಜ್ಜಿ ಸರ್ಕಲ್‌’ ಅಂತ ಕೂಗೋಕೆ ಶುರು ಹಚ್ಕೊಂಡಿದ್ದೇ ಕಂಡಕ್ಟರುಗುಳು. ಮೈಲಿದೂರದಾಗಿರೋ ಎಂಕಟರಮಣಸಾಮಿ ಗುಡಿಗೋಗರ್‍ಗೆ ಕಾಯಿ ಬಾಳಹಣ್ಣು’ ಬೇಕಂದ್ರೆ ಕಾನ್ವೆಂಟ್‌ ಹುಡ್ಗೀರ್‍ಗೆ ರಬ್ಬರ್‌ ಚಾಕಲೇಟು ನೋಟುಬುಕ್ಕು ಪೆನ್ಸಿಲ್ಲು ಬೇಕಂದ್ರೆ ಗಂಡಸರಿಗೆ ಬಾಳೆಹಣ್ಣು ಸಿಗರೇಟು ಬೇಕು ಅಂದ್ರೆ ಆಗಿದ್ದುದ್ದೇ ತಿಪ್ಪವ್ವನ ಅಂಗ್ಡಿ. ತಿಪ್ಪವ್ವ ಅಂಗಡಿಗೆ ಹೋಗಿ ಬರೋರತಾವೆಲ್ಲಾ ಮಗಳ ಲಗ್ನದ ವಿಸಯ ಮಾತಾಡೋಳು. ಡೇವರ್‌ ಕಂಡಕ್ಟರುಗಳ ತಲಿಗೂ ಹಾಕಿದ್ಲು. ಎಲ್ಲರೂ ಗೌರವದಿಂದ ಅಣ್ಣಾ ಅಂತ್ಲೆಮಾತಾಡಿಸ್ತಾ ನಗೆ ಚಾಟ್ಕೆ ಮಾಡ್ತಾ ಕೈಬಿಗಿಮಾಡ್ದೆ ಸಾಮಾನು ಸರಂಜಾಮು ನೀಡೋ ತಿಪವ್ಪನ ಬಗ್ಗೆ ಈಗೀಗ ಚೇಷ್ಟೆ ಜಾಗದಲ್ಲಿ ಗಿರಾಕಿಗಳ ಮನದಾಗೆ ಕನಿಕರ.

ಒಮ್ಮೆ ಎಂಕಟರಮಣನ ತೇರಿನಾಗೆ ತಿಪ್ಪವ್ವನ ಮಗಳು ಗಂಗನ್ನ ನೋಡಿದ ಖಾಸಗಿ ಬಸ್‌ ಡ್ರೈವರ್‌ ರಂಗನಾಥ ಮೆಚ್ಚಿಕೊಂಡ. ಗೆಣಕಾರರೂ ಕುಮ್ಮಕ್ಕು ಕೂಟ್ಟರು. ಡ್ರೈವರ್‌ನ ತಾಯಿ ವರದಕ್ಷಿಣೆ ಕೇಳಿದಳು. ತಿಪ್ಪವ್ವ ಎರಡು ಮನೆನಾಗೆ ಒಂದನ್ನ ಅಳಿಯನ ಹೆಸರಿಗೆ ಮಾಡಿ, ಇದ್ದಬದ್ದ ಬಂಗಾರವನ್ನೆಲ್ಲಾ ಮಗಳ ಮ್ಯಾಲೆ ಹೇರಿ ಲಗ್ನ ಮಾಡಿಕೊಟ್ಟಬಿಟ್ಟು ಒಂದೆರಡು ತಿಂಗಳು ಬಾಳ್ವೆ ಮಾಡಿದ ರಂಗ ಬ್ಯಾರೆಮನೆ ಮಾಡ್ತೀನಿ ಅಂದ. ಮಗಳ ಬಿಟ್ಟು ಇರಲಾರ್‍ದ ತಿಪ್ಪವ್ವ ಸುತ್ರಾಂ ಒಪ್ಪಲಿಲ್ಲ. ಅದೇ ಟೇಮಿಗೆ ಸರ್‍ಕಾರಿ ಡ್ರೈವರ್‌ ಕೆಲಸ ಸಿಕ್ಕು, ಹೆಂಡ್ತಿ ಕರ್‍ಕೊಂಡು ಊರೇಬಿಟ್ಟ. ಆಗೀಗ ತಿಪ್ಪವ್ವ ಮಗಳನ್ನ ನೋಡೋಕೆ ಹಾವೇರಿಗೆ ಹೋಗೋಳು. ಮಗಳು ಅಳಿಯ ಮುಖಕೂಟ್ಟು ಮಾತಾಡವಲ್ಲರು. ‘ನೀನು ಇಷ್ಟಗಲ ಕುಂಕುಮ ಇಟ್ಕಂಡು ಬರ್‍ತಿ. ಇಲ್ಲಿನ ಮಂದಿ ಕೇಳ್ತದೆ. ಬರೀ ನಿಮ್ಮವ್ವನೇ ಬರ್‍ತಾಳ ನಿಮ್ಮಪ್ಪ ಎಲ್ಲೆ? ಒಂದಪನಾರ ಬರ್‍ನಿಲ್ಲ ಅಂತ, ನಾನೇನ್‌ ಹೇಳ್ಳಿ? ನಮ್ಮ ಮನೀಗೆ ಬರೋದಾದ್ರೆ ಕುಂಕುಮ ತಗ್ದುಬಾ’ ಮಗಳು ಆಲ್ಡರ್‌ ಪಾಸ್‌ ಮಾಡಿದಳು. ‘ನೋಡು ಕಂದಾ. ನಮಗೆ ದೇವ್ರೇ ಗಂಡಿದ್ದಂಗೆ. ಅವನು ಸಾಯಂಗಿಲ್ಲ ನಾವು ಕುಂಕುಮ ತಗಿಯಂಗಿಲ್ಲ’ ಅಂದಳು ತಿಪ್ಪವ್ವ. ಮನಸ್ಸು ಕಲ್ಲು ಮಾಡಿಕ್ಕಂಡು ಮಗಳು ಮನಿಗೆ ಹೋಗೋದ್ದನ್ನೆ ಬಿಟ್ಳು. ಅಲ್ಲಿಂದ ಕರೆಯೂ ಬರಲಿಲ್ಲ. ನಿನ್ನ ಮಗಳಿಗೆ ಗಂಡು ಮಗಾ ಹುಟ್ಟೇತೆ ಅಂತ ಹಾವೇರಿ ಬಸ್‌ ಡ್ರ್‍ಐವರ್‌ ಹೇಳ್ದಾಗ ಹರಿಹಿರಿ ಹಿಗ್ಗಿ ಹೋದಳು. ಬೆಟ್ಟ ಹತ್ತಿ ಹೋಗಿ ಏಕನಾತೇಸ್ವರಿಗೆ ಈಡುಗಾಯಿ ಹೂಡೆದ್ಳು. ‘ಅಲ್‌ಕಣ್‌ ತಿಪ್ಪ ನಿಂದು ಬೇಟಿ ಬಸರಿಯಾದಾಗ ತಿಳಿಸೋದು ಬ್ಯಾಡ್ವಾ? ಬಾಣಂತನಕ್ಕಾರ ತವರಿಗೆ ಬರೋದು ಬ್ಯಾಡ್ಜಾ?’ ಕರೀಂಸಾಬಿ ಅಂದಾಗ ದುಃಖ ತಡಿಲಾರ್‍ದ ಗೊಳೋ ಅಂತ ತಬ್ಕೊಂಡು ಅತ್ತು ಬಿಟ್ಟಿದ್ದಳು. ಕೊನಿಗೆ ಈಕಿನೇ ಕೂಸಿನ್ನ ನೋಡೋಕೆ ಕಾಲು ಚೈನು ಕಾಲಿಂದಿಗೆ ಕೂಳ್ಳಚೈನು ತಗೊಂಡು ಹೋದಳು. ‘ನೀನು ಸೂಳೆ ಅಂತೇನಾರ ಗೊತ್ತಾದ್ರೆ ನಮ್ಮ ಮಾನ ಮುಕ್ಕಾಗ್ತದೆ. ಬರಬೇಡವ್ವ ನಮ್ಮನ್ನ ಬದುಕಾಕ ಬಿಡು’ ಮಗಳು ರಂಪ ಮಾಡಿದಳು. ಅಳಿಯ ಅರಿಯದ ಮಳ್ಳನಂಗೆ ಸುಮ್ನಿದ್ದಾಗ ಈಕಿ ಮನಸೂ ಒಡದೋತು. ಮಗಳನ್ನ ಮರೆಯೋಕೆ ಬೋಪ್ರಯತ್ನ ಮಾಡಿದಳು. ಕರುವಿನಕಟ್ಟೆತಾವಿದ್ದ ದೂಡ್ಡಮನೇನಾ ಬಾಡಿಗೆಗೆ ಕೂಟ್ಟು ಅಂಗಡಿ ಹತ್ತಿರದಾಗ ಪುಟ್ಟಮನೆ ಬಾಡಿಗೆ ಹಿಡಿದ್ಳು. ಕರೀಂಸಾಬಿ ಅಂಗಡಿ ತಾವ ಬಂದು ಹೋಗೋದು ಬಿಟ್ಟರೆ ತಿಪ್ಪವ್ಪನ ಬದುಕಿನಾಗೆ ಹೇಳ್ಕಂಬೋ ಅಂತ ಬದಲಾವಣೆ ಆಗದಿದ್ದರೂ ತಲೆ ಕೂದ್ಲು ಬೆಳ್ಳಗಾಗಿ ಮುಖಮಾರಿ ಸುಕ್ಕಾತು. ಇಂಥ ದಿನದಾಗೆ ಬಸ್ಸಿನಾಗ ತಪ್ಪಿಸಿಕೊಂಡ ಹುಡುಗೀನ ಕಂಡಕ್ಟರ್‌ ಒಬ್ಬ ತಂದು, ನಿನ್ನ ಅಂಗ್ಡಿನಾಗೆ ಯಾವನಾನ ಹುಡುಕ್ಕೊಂಡು ಬರ್‍ತಾನೇನೋ ಅಂತ ಬಿಟ್ಟುಹೋದ. ಆರೇಳು ವರ್ಷದ ಹಣ್ಣುಮಗಾ ಅತ್ತು ಅತ್ತು ಕಂಗಾಲಾಗಿ ತಿಪ್ಪವ್ವನಿಗೇ ಹೊಂದ್ಕೊಂತು. ಅಂಗ್ಡಿನಾಗೆ ಸಾಮಾನ ಕೂಡೋದು ಬೀಡಕಟ್ಟೋದು ಮನೆಯಾಗಿ ಅಡಗೆ ಬೇಯಿಸಿ ಅಂಗಡಿಗೆ ಬುತ್ತಿ ತರ್ತಾತರ್ತಾ ಚಂದ್ರ ಅಂಬೋ ಹುಡುಗಿ ಹರೇವಕ್ಕೆ ಬಂದ್ರೆ, ತಿಪ್ಪ ಮುಪ್ಪಾಗಿ ಖಾಯಂ ತಿಪ್ಪಜ್ಜಿ ಆಗಿ ಹೋದ್ಳು. ‘ಯಾರು ಇಳೀರಿ ತಿಪ್ಪಜ್ಜಿ ಸರ್ಕಲ್’ ಅನ್ನೋ ಕೂಗು ಮಾತ್ರ ಬೆಳಗಿನಿಂದ ಸಂಜೆ ಮಟ ಸುತ್ತಮುತ್ತಲಿನೋರ್‍ಗೆ ಕೇಳೋದು. ಅದೇ ಆಕಿಗೆ ಈಗ ಉಳಿದ ಸುಖ, ಈ ನಡುವೆ ತಿಪ್ಪವ್ಪನಿಗೆ ಕಾಯಿಲೆ ಕಸಾಲೆ ಅಂಟಿಕೊಂಡವು. ಅಂಗಡಿನಾಗೆ ಚಂದ್ರಿ ಬಂದು ಕುಂತ್ರೂ ಯಾಪಾರ ಡೌನ್‌ ಆತು! ಹೂಟ್ಟೆಪಾಡೆಂಗೆ ಅಂತ ಕರೀಂಸಾಬಿನೂ ಕೇಳಂಗಾತು. ‘ಚಂದ್ರಿ ಚೆಂದಾಗವ್ಳೆ. ಮತ್ತೆ ಕಸುಬಿಗೆ ಇಳಿ ತಿಪ್ಪಜ್ಜಿ. ರೂಕ್ಕದ ಮಳಿನೇ ಸುರಿತೇತೆ’ ಅಂತ ಅವರಿವರು ಬೋದ್ನೆ ಮಾಡಿದರು. ಆಕಿ ತಲಿ ಕೂಡವಿಬಿಟ್ಟು ಅಂಗಡಿತಾವ ಹೈಸ್ಕೂಲು ಹೈಕಳು ಠಳಾಯಿಸೋದು ಜಾಸ್ತಿ ಆತು. ‘ನಿಂದೇ ನಿನಗೆ ಸಾಕಾಗಿರಲಿಲ್ವೆ. ಈ ಪಿಳ್ಳೆನಾ ಯಾಕೆ ಹಚ್ಚಂಡೆ. ನಿನಗೆ ಏನಾರಗತಿ ಯಾದ್ರೆ ಅವಳ್ನೇನು ಮಾಡ್ತಿ?’ ಕರೀಂಸಾಬಿ ತಿಪ್ಪಜ್ಜಿ ತಲೆಗೆ ಹುಳಬಿಟ್ಟ. ‘ಅಲ್ಲಲೆ ಸಾಬಣ್ಣ, ಹೊಟ್ಟಿಯಾಗೆ ಹುಟ್ಟಿದ ಮಗಳಂಗೇ ನೋಡ್ಕೋತಾ ಅವ್ಳೆ. ಅವಳನ್ನ ಕೈ ಬಿಟ್ಟೇನೇ’ ನಕ್ಕಳು. ‘ಏನುಮಾಡ್ತಿ’ ಸಾಬಿ ಕೇಳಿದ. ‘ಮಾಡೋದೇನುಬಂತು ಲಗ್ನಮಾಡೋದು’ ಅಂದುಬಿಟ್ಳು. ಅಂಗಡಿಗೆ ಮುಲಿಕ್ತಾ ಬಂದು ಕೂರೋಳು. ಅಂಗಡಿಗೆ ಬರೋ ಅವರಿವರ್‍ತಾವ ಲಗ್ನದ ಪ್ರಸ್ತಾಪ ಮಾಡೋಳು. ‘ಅಲ್ಲಜ್ಜಿ, ಇವಳ್ಡು ಲಗ್ನ ಮಾಡ್ದೆ ಅಂತಿಟ್ಕೋ. ನಿನ್ನ ಮಗಳಂಗೆ ಈಕಿನೂ ಕೈಬಿಟ್ಟರೇನ್‌ ಮಾಡ್ತಿಯಾ? ಇರೋತನ್ಕ ಸೇವೆಯಾ ಮಾಡಿಸ್ಕೋ’ ಮಂದಿ ಬುದ್ದಿಮಾತು ಹೇಳ್ತು- ‘ಯಾರು ಕೈಬಿಟ್ಟರು ಹುಟ್ಟಿಸಿದ ದೇವ್ರು ಹುಲ್ಲು ಮೆಯಿಸ್ಸಾನೆ. ಕರ್ತವ್ಯ ಅನ್ಕಂಡು ಮಾಡೋದಪ್ಪಾ. ಧರ್ಮ ಕರ್ಮ ಅವಳಿಗೆ ಸೇರಿದ್ದು’ ಅಂದಳು ತಿಪ್ಪಜ್ಜಿ. ಚಂದ್ರಿ ಕೂಡ ಚೆಲ್ಲು ಸ್ವಭಾವದವಳಲ್ಲ. ತಳ್ಳಗೆ ಬೆಳ್ಳಗೆ ಬಾಳೆಗಿಡದಂಗಿದ್ಳು. ಸಾಬೀನೇ ಲಗ್ನ ಕುದುರಿಸಿದ. ಹುಡ್ಡೀ ಯಾವ ಜಾತಿದೋ! ವರದಕ್ಷಿಣೆ ಏಟು ಸಿಕ್ಕೀತೋ ಅಂಬೋಮಾತೂ ಬಂತು. ಹುಡುಗ ಹೆಂಗೂ ಟೈಲರ್‌ ದುಡ್ಕೊಂಡು ತಿಂತಾನೆ ಅನ್ನೋ ಭರವಸಮ್ಯಾಗೆ ಇದ್ದ ಒಂದು ಮಾನೆಮಾರಿ ಉಳಿದ ದುಡ್ಡನೂ ಕೂಟ್ಟೇನು ಅಂದಾಗ ಜಾತಿಮಾತು ಮೂಲೆ ಸೇರಿತು. ಹುಡುಗಿ ಲಗ್ನಾಗಿ ನಾಯಕನಹಟ್ಟಿ ಸೇರ್‍ಕಂತು. ಆವಾಗೀವಾಗ ಚಂದ್ರಿ ದುರ್ಗಕ್ಕೆ ಬಂದ್ರೂ ಸಂಜೆಯಾಗೋದರೊಳಗೆ ವಾಪಾಸ್‌ ಬರಬೇಕಂಬೋ ಷರತ್ತಿನ ಮ್ಯಾಗೆ ಗಂಡನ ಮನೆಯೋರು ಕಳಿಸೋರು. ‘ನಿನ್ನನ್ನೂದಾರಿ ಹಿಡಿಸಿಬಿಟ್ಟಾಳು ಹುಷಾರು ಕಣೆ’ ಅಂತ ಜಗಳಕ್ಕೆ ಬೀಳ್ತಾನೆ ಗಂಡ ಅಂತ ಗಳಗಳ ಅತ್ತಾಗ ತಿಪ್ಪಜ್ಜಿನೇ ಇನ್ನುಮ್ಯಾಗ ಬರಬೇಡವ್ವ ಅವರ ವಸ್ತು ಅವರು ಜೋಪನವಾಗಿ ಇಟ್ಟೋಂಬಾದ್ರಾಗೆ ತಪ್ಪು ಏನೈತೆ’ ಅಂದಳು ತಿಪ್ಪಜ್ಜಿ. ಅವಳ ಕಣ್ಣೊರಸಿ ಕೂಳ್ಳಾಗಿದ್ದ ಒಂದು ಕಾಸಿನಸರ ಹಾಕಿ ಕಳಿಸಿದ್ದಳು. ವರ್ಷತುಂಬೋದ್ರಾಗೆ ಚಂದ್ರಿ ಬರೋದೇಬಿಟ್ಳು. ಕರೀಂಸಾಬಿ ಮಾತ್ರ ವಾಕಿಂಗ್‌ ಸ್ಟಿಕ್‌ ಊರೊಂಡು ಬಿರಿಯಾನಿ ಪೊಟ್ಟಣ ಬ್ರಾಂದಿಬಾಟ್ಲು ಹಿಡ್ಕೊಂಡು ಸಂಜೆ ಟೇಮಿನಾಗೆ ಬರೋನು. ‘ತಿಪ್ಪಜ್ಜಿ ಸರ್ಕಲ್‌ ಅಂತ’ ಕಂಡಕ್ಟರು ಒದರೋದು ಈಗಲೂ ಕೇಳೋದು. ಅಂಗಡಿನಾಗೆ ಹೊಸ ಸಾಮಾನು ಖರೀದಿ ಮಾಡಿ ತರೋ ಸಗ್ತಿಯಿಲ್ಲ. ಹಿಂಗಾಗಿ ಯಾಪಾರ ವೀಕಾತು. ಅಂತ ಹೊತ್ತಾಗ ಎದುರು ಬೀದಿನಾಗ ಒಬ್ಬ ಕಿರಾಣಿ ಅಂಗಡಿ ಇಕ್ಕಿದ. ಮನೆ ಬಾಡಿಗೆ ಕೊಡೋದು ಹೆಚ್ಚುಕಮ್ಮಿ ಆದಾಗ ತಿಪ್ಪಜ್ಜಿ ಮನೆ ಬಿಡಬೇಕಾತು. ಅಂಗಡಿನೇ ಈಗ ಮನೆಯಾತು. ಬೆಳಗಾಗೋದಾಗೆ ಹೊಲದ ಕಡೆ ಚೊಂಬು ತಗೊಂಡು ಕುಂಟ್ತಾ ಕತ್ತಲಾಗೆ ಹೋಗಿ ಬರೋಳು. ಅಂಗಡಿ ಪಕ್ಕದಾಗೇನೆ ನೆರಿಕೆ ಕಟ್ಟಿಕೊಂಡು ನಸುಕಿನಾಗೇ ಎದ್ದು ಮೈತೊಳ್ಳೂಂಬೋಳು. ಏನಾರ ಹೋಟಲ್ದಾಗ ತರಿಸ್ಕೊಂಡು ತಿಂದ್ರೆ ಆಕಿ ಊಟ ಮುಗೀತು. ಜೀವನ ಹೆಂಗೋ ನೂಕೋಣವಂದ್ರೆ ಕಾಯಿಲೆ ಕಸಾಲೆ ಬಿಟ್ಟಾವ. ನಸುಕಿಗೇ ಎದ್ದು ಹೋಗಕೂ ತ್ರಾಣ ವಿಲ್ಲದಂಗಾತು. ಮಲಗಿದ ಜಾಗದಾಗೆ ಎಲ್ಲಾ ಆಗೋದ್ರೆ ನೋಡ್ಕೂಂಬೋರಾರಯಾರು. ಭಯದಾಗೇ ನರಳಾಕ ಹತ್ತಿದ್ಳು. ನೋಡನೋಡ್ತಿದ್ದಂಗೆ ಕಡ್ಡಿಪೂರಕೆ ಆಗೋದ್ಳು. ಕರೀಂಸಾಬಿ ಬಂದು ದವಖಾನೆಗಾರ ಸೇರಿಸ್ತೀನಿ ಬಾ ಅಂತ ಜುಲುಮ ಮಾಡ್ದ. ಈಕಿ ಮ್ಯಾಕೇಳ್ಳಿಲ್ಲ. ನಸೀಬು ಇದ್ದಂಗಾಗ್ಲಿ ಅಂತು ಸುಮ್ಗಾದ. ‘ನನ್ನ ಹೇಲು ಉಚ್ಚನಾಗೆ ನಾನೇ ಹೂಳ್ಳಾಡ್ದಂಗೆ ನಿನ್ನ ಪಾದ ಸೇರಿಸ್ಕಳೆ ಏಕನಾತೇಸ್ವರಿ’ ಅಂತ ಹಗಲುರಾತ್ರಿ ಜಪ ಮಾಡೋಳು. ಅಂಥ ಸಾವು ಬರೋಕೆ ನಾನು ಯಾವ ಮಾಶಿವಶರಣೆ ಅಂತ ತನಗೆ ತಾನೇ ಕೊಚ್ಚನ್‌ ಹಾಕ್ಕೋಂತಾ ಬಿರುವಳೆಗೆ ಸಿಕ್ಕ ಗುಬ್ಬಚ್ಚಿಯಂಗಾದ್ಳು. ಬ್ಯಾಸರ ತಡಿಲಾರ್‍ದೆ ಬೀಡಿ ಹಚ್ಚಿ ಧಂ ಎಳೆದಳು.

ಒಂದು ದಿನ ಹತ್ತುಗಂಟಿಯಾದರೂ ಅಂಗಡಿ ಬಾಗಿಲು ತೆಗಿಲಿಲ್ಲ. ಮಧ್ಯಾನವಾತು. ಕರೀಂಸಾಬಿ ಬಿರಿಯಾನಿ ಪೂಟ್ಟಣ ಹಿಡ್ಕೂಂಡು ಕೋಲು ಊರ್‍ಕೊಂಡು ಬಂದ. ಬಾಗಿಲು ದಬದಬ ಬಡಿದಾಗ್ಲೆ ಮಂದಿಗೆ ಅತ್ತಾಕಡೆ ನೋಡೋಕ ಪುರಸೂತ್ತು ಆತು. ಊಹಿಸಿದಂಗೇ ಆಗಿತ್ತು ಸಾಬಿ ಹೆಣ ಎತ್ತೋಕೆ ಮುತುವರ್ಜಿ ತೋರಿದಾಗ ಡ್ರೇವರ್‍ಗುಳು ಸೇರ್‍ಕೊಂಡು ಒಪ್ಪಮಾಡಿದರು. ‘ವಯಸ್ಸಿನಾಗೆ ಕರಿನಾಗರಾವು ಇದ್ದಂಗಿದ್ಳು ಭಲೆ ಎದೆಗಾತಿ ಧಾರಾಳತನವೂ ಇತ್ತೇಳು’ ತಿಪ್ಪಜ್ಜಿ ಕಥೆ ಹೇಳ್ತಾ ಬಾಟಲಿ ಖಾಲಿ ಮಾಡಿದ್ದ ದಾಸಯ್ಯ. ‘ಸಾಕುಮಾಡು ದಾಸಪ್ಪ ಘನಗರತಿ ಪುರಾಣವಾ… ಸೂಳೆ ಮುಪ್ಪಾಗಿ ಗರತಿಯಾದ್ಳಂತೆ. ಏಟು ಮನೆ ಮುರಿದಳೋ ಏಟು ಸಂಸಾರ ಬೀದಿಪಾಲು ಮಾಡಿದ್ಳೋ ಧಾರಾಳಂತೆ ಧಾರಾಳಿ. ಅಮ್ಮ ಗದರಿಕೊಂಡಾಗ ಏರಿದ್ದ ನಶಾ ಇಳಿದಂಗಾಡಿದ ದಾಸಯ್ಯ ಕೈತೊಳೆದು ಹಲ್ಲಿನ ಸಂದಿನಾಗೆ ಸಿಕ್ಕಿ ಹಾಕ್ಕೂಂಡಿದ್ದ ಮಾಂಸದ ಚೂರ ಕಡ್ಡಿ ಹಾಕಿ ತೆಗಿತಾ ಹೊರಹೋದ. ಕುಮಾರನಿಗೇಕೋ ಅಮ್ಮನ ಮೇಲೆಯೇ ರೇಗ ಬೇಕೆನಿಸಿತು.

ಎರಡು ದಿನವಿದ್ದು ಕೋಟೆ ನೋಡಿ ಹೊಂಡದಲ್ಲಿ ಈಜಾಡಿ ಕಾಲ ಕಳೆದ. ಅಮ್ಮ ಸಿಹಿ ಊಟನೂ ಮಾಡಿ ಹಾಕಿದಳು. ಆಟೋದಲ್ಲಿ ಮತ್ತೆ ಹೊರಟಾಗ ಮತ್ತದೇ ಸರ್ಕಲ್ ಬಂತು. ತಿಪ್ಪಜ್ಜಿ ಅಂಗಡಿಯಿಟ್ಟಿದ್ದ ಜಾಗದಲ್ಲೀಗ ಬಸ್‌ಸ್ಟಾಪ್‌ ಶೆಲ್ಟರ್‌ ಕಂಡಿತು. ಬರ್ರನೆ ಬಸ್ಸೊಂದು ಬಂತು. ದಬದಬನೆ ಬಸ್ಸನ್ನು ಬಡಿಯುತ್ತಾ. ‘ಯಾರು ಇಳ್ಳಳ್ರಿ ತಿಪ್ಪಜ್ಜಿ ಸರ್‍ಕಲ್‌’ ಕಂಡಕ್ಟರ್‌ ಕೂಗುತ್ತಿದ್ದ. ಕುಮಾರನಿಗೆಕೋ ಹಿತವೆನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುದ್ಧಾತ್ಮ
Next post ಹುಚ್ಚು

ಸಣ್ಣ ಕತೆ

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys