ಸ್ತ್ರೀ ಶೋಷಣೆ- ವಿಕೃತಿಯ ನಾನಾ ಮುಖಗಳು

ಸ್ತ್ರೀ ಶೋಷಣೆ- ವಿಕೃತಿಯ ನಾನಾ ಮುಖಗಳು

ಎರಡು ವರ್‍ಷಗಳ ಹಿಂದೆ ಸಿಂಧು ಸೂರ್‍ಯಕುಮಾರ ಎಂಬ ಕೇರಳದ ಸುದ್ದಿ ವಾಹಿನಿಯೊಂದರ ಕಾರ್‍ಯಕ್ರಮ ನಿರೂಪಕಿಯ ಮೇಲೆ ಕಾರ್‍ಯಕ್ರಮದ ವೇಳೆ ದುರ್‍ಗಾದೇವಿಗೆ ಅಪಮಾನ ಮಾಡಿದಳು ಎಂಬ ವದಂತಿಯ ಮೇಲೆ ಆಕೆಯ ವಿರುದ್ಧ ಒಂದು ಧಾರ್‍ಮಿಕ ಗುಂಪಿನ ಬೆಂಬಲಿಗರಿಂದ ಪ್ರತಿಭಟನೆ ಪ್ರಾರಂಭವಾಯಿತು. ಸಮಾಜ ರಾಜಕೀಯ ಹೀಗೆ ಈ ವಿಚಾರಗಳ ಕುರಿತ ಚರ್‍ಚೆಯಲ್ಲಿ ಆಕೆ ದುರ್‍ಗಾದೇವಿಯನ್ನು ಅವಮಾನಿಸಿದ್ದಾಳೆ ಎಂಬ ಸತ್ಯಕ್ಕೆ ದೂರವಾದ ಆರೋಪದ ಮೇಲೆ ಶುರುವಾದ ಕಿರುಕುಳ ಆಕೆಯ ಮನೆಯವರೆಗೂ ವ್ಯಾಪಿಸಿತು. ವಯಸ್ಸಾದ ತಂದೆ ತಾಯಿ ಇದರಿಂದ ಮಾನಸಿಕ ಹಿಂಸೆಗೆ ಒಳಗಾದರು. ನೈಪುಣ್ಯದ ನಿರೂಪಕಿಯಾದ ಆಕೆಯ ಜ್ಞಾನ ಕೌಶಲ್ಯಗಳು ಮರೆಯಾಗಿ ಈಗ ಆಕೆಯ ದೇಹ ಹಾಗೂ ಸೌಂದರ್‍ಯಗಳು ಕೆಂಗಣ್ಣಿಗೆ ಗುರಿಯಾಗತೊಡಗಿದವು. ಆಕೆಗೆ ಅಶ್ಲೀಲ, ಅಸಭ್ಯ, ಅವ್ಯಾಚ್ಯ ಬೈಗುಳಗಳ ಸುರಿಮಳೆಯಾಗತೊಡಗಿದವು. ಅದೂ ಆಕೆಗೆ ಈ ಹಿಂದೆ ಯಾವ ರೀತಿಯಿಂದಲೂ ಪರಿಚಯವಿಲ್ಲದ ಜನರಿಂದ ಪ್ರಾರಂಭವಾದಾಗ ಆಕೆ ತನ್ನ ಪೋನ ನಂಬರನ್ನು ಬದಲಾಯಿಸಬೇಕಾಯಿತು. ಅಪರಿಚಿತ ಪೋನ ಕರೆಗಳು ಬಂದಾಗ ಬೆಚ್ಚಿ ಬೀಳುವಂತಾಗುತ್ತಿತ್ತು. ಆಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೀಳು ಭಾಷೆಯಲ್ಲಿ ಅಶ್ಲೀಲವಾಗಿ ಪದಗಳು ಮೂಡಿಬಂದವು ಇದಕ್ಕೆಲ್ಲಾ ಕಾರಣ ಆಕೆ ಸ್ತ್ರೀಯಾಗಿದ್ದು ವಾಹಿನಿ ಕಾರ್‍ಯಕ್ರಮಗಳಲ್ಲಿ ದಿಟ್ಟವಾಗಿ ಇದ್ದ ಸಂಗತಿಗಳನ್ನು ಮುಲಾಜಿಲ್ಲದೇ ವ್ಯಾಖ್ಯಾನಿಸುತ್ತಿದ್ದ ರೀತಿ ಹಾಗೂ ಆಕೆಯ ಜನಪ್ರಿಯತೆ ಉಂಟುಮಾಡಿದ ಹೊಟ್ಟೆ ನೋವೆಂದು ತದನಂತರ ತಿಳಿಯಿತೆಂದು ಆಕೆ ಉಲ್ಲೇಖಿಸುತ್ತಾಳೆ. ಸ್ತ್ರೀ ಎಂಬ ಕಾರಣಕ್ಕೆ ಬೈಗುಳಗಳು ಆಕೆಯ ದೇಹ ಅಂಗಾಂಗಗಳ ಮೇಲೆ ಮೂಲವಾಗಿಟ್ಟುಕೊಂಡೇ ಬಳಸಲ್ಪಡುವುದು ಎಂತಹ ವಿಪರ್‍ಯಾಸ. ಹಾಗಾದರೆ ಸ್ತ್ರೀಯನ್ನು ದೇವಿಯ ಸ್ಥಾನದಲ್ಲಿಟ್ಟು ಪೂಜಿಸುವ ನಾವು ಅದೇ ಜೀವಂತ ಹೆಣ್ಣಿಗೆ ಇಷ್ಟೆಲ್ಲಾ ಮಾನಸಿಕ ನೋವು ನೀಡಿ ಸೇವಿಸುವ ಪ್ರಸಾದ ಯಾವುದು ಎಂದರೆ ವಿಕೃತ ತೃಪ್ತಿ.

ಮಹಿಳಾ ದೌರ್‍ಜನ್ಯದ ರೂಪುರೇಷೆಗಳ ವ್ಯಾಖ್ಯಾನಿಸಹೋದಷ್ಟು ಹತ್ತು ಹಲವು ಆಯಾಮಗಳು ಸ್ಪುಟಗೊಳ್ಳುತ್ತವೆ. ಬರಿಯ ಮಹಿಳೆ ಎಂಬ ವಿಷಯದ ಮೇಲೆ ಎಷ್ಟೆಲ್ಲಾ ಮಾತನಾಡಬಹುದು, ಬರೆಯಬಹುದೆಂಬುದು ಕೂಡಾ ಅಷ್ಟೇ ವ್ಯಾಪಕ. ಜಾಗತಿಕ ಮಟ್ಟದಲ್ಲಿ ಮೂರನೇ ಜಗತ್ತು ಮಹಿಳೆಯ ಪ್ರಾತಿನಿಧ್ಯಕ್ಕೆ ಒಲವು ತೋರುತ್ತಿರುವುದು ಆಶಾವಾದದ ಬೆಳವಣಿಗೆ. ಆದಾಗ್ಯೂ ಸಂಸ್ಕೃತಿ ಸಂಪ್ರದಾಯ ಎಂಬ ಹೆಸರಿನಲ್ಲಿ ವಿಶಿಷ್ಟ ಪುರುಷ ಪಾರಮ್ಯವನ್ನು, ಹಿರಿಮೆಯನ್ನು ಪ್ರತಿಪಾದಿಸುವ ಭಾರತದಂತಹ ದೇಶದಲ್ಲಿ ಸ್ತ್ರೀಗೂ ಕೂಡಾ ಗೌರವದ ಸ್ಥಾನಗಳಿವೆ ಎಂಬುದು ಹೌದಾದರೂ ಅದು ಶಾಸ್ತ್ರ ಪುರಾಣಗಳ ತತ್ವ ಸಿದ್ಧಾಂತಗಳ ಬದನೆಕಾಯಿ.

ನಮ್ಮ ಪುರಾಣ ಮಹಾಕಾವ್ಯಗಳು ಸ್ತ್ರೀ ದೇವತೆಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತ ದುರ್‍ಗೆ ದೇವಿಯರನ್ನು ಪ್ರತಿಮೆಗಳನ್ನಾಗಿ ವೈಭವೀಕರಿಸಲಾಗುತ್ತದೆ. ಆದರೆ ವಾಸ್ತವಾಂಶ ಅದಕ್ಕೆ ತದ್ವಿರುದ್ಧ. ಇಂದಿಗೂ ಸ್ತ್ರೀಗೆ ನೀಡುವ ದೌರ್‍ಜನ್ಯ, ಮಾನಸಿಕ ಹಿಂಸೆ, ಮಾನಹಾನಿ ಅಪಮಾನ ಇತ್ಯಾದಿ ಇತ್ಯಾದಿ ವಿಚಾರಗಳಲ್ಲಿ ಅದು ತನ್ನ ವಿಕೃತಿಯನ್ನು ಯುಗಯುಗಗಳಿಂದಲೂ ಮೆರೆಸುತ್ತ ಬಂದಿರುವುದು ವಿಪರ್ಯಾಸ.

ದೌರ್‍ಜನ್ಯ ಮುಖಗಳ ಹೆಸರಿಸುತ್ತಾ ಹೋದರೆ ದಿಗ್ಭ್ರಮೆಗೊಳ್ಳುವಂತಾಗುತ್ತದೆ. ಉಂಡ ಅನ್ನ ಕಕ್ಕುವಂತಾಗುತ್ತದೆ. ಸಂಬಂಧಗಳ ಬಿಡಿಸಲಾಗದ ಅನುಬಂಧಗಳ ಬಗ್ಗೆಯೇ ಅಸಹ್ಯ ಹುಟ್ಟುತ್ತದೆ. ಚರ್‍ಮದ ತೆವಲಿಗೆ ಬಾಂದವ್ಯದ ಬೆಲೆ ಅರಿಯದ ಪುರುಷ ಪ್ರಾಣಿಯ ಬಗ್ಗೆ ನಿಜಕ್ಕೂ ದ್ವೇಷಗೊಳ್ಳಬೇಕೋ ಇಲ್ಲ ಕನಿಕರ ಪಡಬೇಕೋ ತಿಳಿಯದಂತಾಗುತ್ತದೆ. ಇಂತಲ್ಲಿ ಅಸಹ್ಯ ಭಾವ ಬಿಟ್ಟರೆ ಬೇರೆ ಭಾವ ಬರಲು ಹೇಗೆ ಸಾಧ್ಯ?

ಹೆತ್ತ ಮಗಳನ್ನೆ ಭೋಗಿಸುವ ತಂದೆ, ಒಡಹುಟ್ಟಿದ ಸಹೋದರಿಯನ್ನೆ ಲೈಂಗಿಕವಾಗಿ ಹಿಂಸಿಸುವ ಸಹೋದರ, ಮಾವ ಭಾವ ಮುಂತಾದ ಸಂಬಂಧಿಗಳ ಧೂರ್‍ತ ನಡಾವಳಿ ಇವೆಲ್ಲವೂ ನಿತ್ಯ ಜೀವನದಲ್ಲಿ ಹೆಣ್ಣು ತನ್ನ ಸುತ್ತಲಿನ ಆಪ್ತರೊಡನೆ ಅನುಭವಿಸುವ ಕರುಳು ಕಿವುಚುವ ಸಂಗತಿಗಳು. ಇಂತಹ ಉದಾಹರಣೆಗಳಿಗೆ ಲೆಕ್ಕವಿಲ್ಲ. ಪತ್ರಿಕೆಗಳಲ್ಲಿ ಒಂದೆರಡು ವರದಿಯಾದರೆ ಅದಕ್ಕೆ ಹತ್ತರಷ್ಟು ಘಟನೆಗಳು ಮನೆಯಲ್ಲಿಯೇ ಮುಚ್ಚಿಹೋಗುತ್ತವೆ. ಮನೆಯ ಮರ್‍ಯಾದೆಯ ಕಾರಣವೋ, ಇಲ್ಲ ಸಂಬಂಧಿಗಳೆಂಬ ಮಮಕಾರವೋ ಒಟ್ಟಾರೆ ಶೋಷಣೆಗೆ ಒಳಗಾದ ಹೆಣ್ಣು ಮಾತ್ರ ನಿತ್ಯ ನವೆಯುವಂತಾಗುತ್ತದೆ. ದುಷ್ಟ ಪುರುಷರ ಕಪಿಮುಷ್ಟಿಯಲ್ಲಿ ಬಳಲುವ ಅದೆಷ್ಟೋ ಮುಗ್ಧ ಮನಸ್ಸುಗಳು, ವೈಶ್ಯಾವಾಟಿಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೇ ಒದ್ದಾಡುವ ಎಳೆಯ ಜೀವಗಳು ಹೆಚ್ಚು ಹೆಚ್ಚಾಗಿ ನೂರಕ್ಕೆ ತೊಂಬತೈದರಷ್ಟು ಹೆಣ್ಣು ಮಕ್ಕಳೇ. ಸಮಾಜದ ದೃಷ್ಟಿಗೆ ಈ ಅನ್ಯಾಯಗಳೆಲ್ಲಾ ದೊಡ್ಡ ಸಂಗತಿಗಳಾಗುವುದೇ ಇಲ್ಲ.

ಇಂತಹ ದುಷ್ಟತನವನ್ನು ಅಲ್ಲೊಂದು ಇಲ್ಲೊಂದು ಎಲ್ಲೋ ಅಪರೂಪದಲ್ಲಿ ಸ್ತ್ರೀ ಸಮೂಹ ಮಾಡಿತೆಂದಾದರೆ ಜಗತ್ತು ಅಲ್ಲೋಲ ಕಲ್ಲೋಲವಾದಂತೆ ಸುದ್ದಿಯಾಗುವುದು. ಆ ಸ್ತ್ರೀಯನ್ನು ಸಮಾಜ ತಿರಸ್ಕಾರದಿಂದ ನೋಡುವುದು ತೀರಾ ಸಾಮಾನ್ಯ. ಸ್ತ್ರೀ ದೇವತೆಯಂತೆ ಇರಬೇಕೆಂಬ ಪರಿಕಲ್ಪನೆಯಲ್ಲಿಯೇ ನಮ್ಮ ಸಮಾಜ ಇರುವುದು. ಇಂದಿಗೂ ಆ ದೃಷ್ಟಿಯಲ್ಲಿ ಮಾನಸಿಕ ರೂಪಾಂತರ ಸಾಧ್ಯವಾಗಿಲ್ಲ.

ಹೊರದುಡಿಮೆಯಲ್ಲಿ ನರಳುವ ಹೆಣ್ಣುಗಳು, ಆಡಳಿತದಲ್ಲಿ ಮೇಲಾಧಿಕಾರಿಯ ಲೈಂಗಿಕ ಕಿರುಕುಳಕ್ಕೆ ದರ್‍ಪಕ್ಕೆ ಅವರ ದೇಹಲಾಲಸೆಗೆ ಬಲಿಯಾಗುವ ಅದೆಷ್ಟೋ ಜೀವಗಳು ನೋವ ನುಂಗಿ ನಗೆಯ ಮುಖವಾಡ ಹಾಕಿಕೊಂಡಿರುತ್ತವೆ. ಇಲ್ಲೂ ಹಲವು ಘಟನೆಗಳು ಹೊರಜಗತ್ತಿಗೆ ವ್ಯಾಪಕ ಚರ್‍ಚೆಗೆ ಗುರಿಯಾಗುವುದು ಅಪರೂಪ. ಇದರಿಂದ ಕೆಲವೊಮ್ಮೆ ಪತಿಪತ್ನಿ ಸಂಬಂಧಗಳಲ್ಲಿ ಬಿರುಕು ಉಂಟಾಗಿ ಅದೆಷ್ಟೋ ಕುಟುಂಬಗಳು ಒಡೆದುಹೋಗುವುದು. ಇಲ್ಲ ವಿಚ್ಛೇದನಗಳಾಗುವುದು ನಡೆಯುತ್ತಲೇ ಇರುತ್ತವೆ. ಅವೆಲ್ಲವೂ ಸಾಮಾನ್ಯ ಎನ್ನುವ ಧೋರಣೆ. ಇನ್ನು ತೀರಾ ಎಳೆಯ ಪ್ರಾಯದ ಹುಡುಗಿಯರನ್ನು ತಮ್ಮ ಜಾಲದಲ್ಲಿ ಬೀಳಿಸಿ ಮೋಸಗೈಯುವ ಇನ್ನೊಂದು ವರ್‍ಗವೂ ಇದೆ. ಅವರಲ್ಲಿ ವಿವಾಹಿತ ಪುರುಷರೇ ಹೆಚ್ಚಿರುವುದು ಕಂಡುಬರುತ್ತಿದೆ. ಮಕ್ಕಳನ್ನು ಪಡೆದ ತಂದೆ ಕೂಡಾ ಎಳೆಯ ಹೆಣ್ಣುಗಳ ಮನವೊಲಿಸಿ ಲೈಂಗಿಕ ದೌರ್‍ಜನ್ಯವೆಸಗುವ ಹತ್ತು ಹಲವು ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಈ ಘಟನೆಗಳು ಪುನರಾವರ್‍ತನೆಯಾಗುತ್ತಿರುತ್ತವೆ. ಮುಂದಾಲೋಚನೆ ಇಲ್ಲದ ತೀರಾ ಚಂಚಲ ಮನಸ್ಥಿತಿಯ ಎಳೆಯ ಹುರುಪಿನ ಕಿಶೋರಿಯರು ಇವರ ಬಲಿ. ಹೇಳಿದ್ದನ್ನೆಲ್ಲಾ ಸಲೀಸಾಗಿ ನಂಬಿಬಿಡುವ ಆ ವಯಸ್ಸು ಪ್ರೀತಿ ಪ್ರೇಮದ ಜೊತೆಗೆ ಇನ್ನೊಂದು ಜೀವದ ಆಸರೆಯನ್ನು ಬೇಡುತ್ತಿರುವ ಆ ಸಮಯದಲ್ಲಿ ಮುಗ್ಧ ಹೆಣ್ಣುಗಳು ಸುಲಭವಾಗಿ ವಶವಾಗಿಬಿಡುತ್ತವೆ. ಹೀಗೆ ವಶಪಡಿಸಿಕೊಳ್ಳುವುದು ಪುರುಷನ ಇನ್ನೊಂದು ಖಯಾಲಿ. ಇದರಲ್ಲಿ ಹೆಣ್ಣು ಮಕ್ಕಳ ಬುದ್ಧಿಹೀನ ವರ್‍ತನೆಯೂ ಕಾರಣವೆನ್ನಿ. ಆಕೆಯ ಅತಿಯಾದ ಭಾವನಾತ್ಮಕ ಬೆಂಬಲದ ಆಕಾಂಕ್ಷೆಯೂ ಕಾರಣವಾಗಿರಬಹುದು.

ಪುರುಷರನ್ನು ಉದ್ರೇಕಿಸುವಂತಹ ಹೆಣ್ಣು ಮಕ್ಕಳ ತೊಡುಗೆಗಳು ಅತ್ಯಾಚಾರಕ್ಕೆ ಕಾರಣ ಎಂಬುದು ಕೆಲವರ ಅಂಬೋಣ! ಸ್ತ್ರೀ ಸಭ್ಯ ಉಡುಗೆಗಳ ತೊಡುವುದು ಉತ್ತಮವೆಂಬುದು ಸತ್ಯವಾದರೂ, ಈಗೀಗ ಬುರ್‍ಖಾದೊಳಗಿನ ದೇಹಗಳು ಕೂಡಾ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದು, ಬರಿ ಉಡುಗೆ ತೊಡುಗೆ ಬಟ್ಟೆ ಬರೆಗಳು ಈ ವಿಕೃತ ಮನಸ್ಥಿತಿಯ, ವಿಧ್ವಂಸಕ ಕೃತ್ಯಕ್ಕೆ ಕಾರಣವಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಇನ್ನು ಬೈಗುಳಗಳ ವಿಷಯಕ್ಕೆ ಬಂದರೆ ಹೆಣ್ಣಿಗೆ ಮಾತ್ರ ಈ ಅಶ್ಲೀಲ ಬೈಗುಳ, ಅದೂ ಕೂಡಾ ನಿಂದಿಸಬೇಕಾದುದು ಪುರುಷನಿಗಾದರೂ ಬೈಗುಳದ ಮೊದಲ ನುಡಿ ಆತನ ತಾಯಿಯ ಮೇಲಾಗುತ್ತಿರುತ್ತದೆ. ಅಂದರೆ ಆತನ ಹೆತ್ತ ತಪ್ಪಿಗೆ ಆತನ ಅಪರಾಧಕ್ಕೆ ಹೆಣ್ಣಾದ ಆಕೆ ಅನ್ನಿಸಿಕೊಳ್ಳಬೇಕು. ಅದೇ ಆತನ ತಂದೆಯನ್ನು ಬಳಸಿಕೊಂಡು ಆಡುವ ಬೈಗುಳಗಳಿಲ್ಲ. ಯಾಕೆಂದರೆ ಆತ ಪುರುಷ. ನಮ್ಮ ಸಮಾಜ ಪುರುಷ ಪ್ರಧಾನ ಸಮಾಜ. ಹಾಗಾಗಿ ಹುಟ್ಟುತ್ತಲೇ ಪುರುಷ ಸಮಾಜದ ನೀತಿ ನಿಯಮಗಳಿಗೆ ತಲೆಬಾಗಿಯೇ ಬರುವ ಹೆಣ್ಣು ಆತನ ದೌರ್‍ಜನ್ಯಕ್ಕೆ ಬಲಿಪಶು. ಆತನಿಂದ ಅನ್ನಿಸಿಕೊಂಡು ಬಡಿಸಿಕೊಂಡು ಉಗಿಸಿಕೊಂಡು ಬದುಕಬೇಕೆಂಬ ಅಲಿಖಿತ ನಿಯಮಗಳು ಇವು. ಇಂತಹ ಅನ್ಯಾಯದ ಪರಾಕಾಷ್ಠೆಗೆ ಶಿಕ್ಷಿತ ಬುದ್ದಿವಂತ ಜಗತ್ತು ತಲೆತಗ್ಗಿಸಬೇಕಲ್ಲವೇ? ಸ್ತ್ರೀ ಸಮಾನತೆಯ ಎತ್ತಿ ಹಿಡಿಯಬೇಕಲ್ಲವೇ? ಯೋಚಿಸಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನಿಯನ್ ಮೊಕ್ಕ್ ಮುಸ್ಟಿ
Next post ಬನತುಂಬ ಮಳೆಬಿಲ್ಲು ಅತ್ತಿ ಬಾರ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…