ಧರ್ಮಸಂಸ್ಥಾಪನಾರ್ಥಾಯ

ಧರ್ಮಸಂಸ್ಥಾಪನಾರ್ಥಾಯ

ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ, ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟಸುಬ್ಬಯ್ಯನವರು ದೇವಳದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರಲ್ಲಿ ಎತ್ತರದ ಸ್ವರದಲ್ಲಿ, ಒಂದೇ ಉಸಿರಲ್ಲಿ, ಮೂತಿಗೆ ಇಕ್ಕಿದಂತೆ ಹೇಳಿದಾಗ ಅವರು ಏನು ಮಾಡಲಿಕ್ಕೂ ತೋಚದೆ ತೇನವಿನ ತೃಣಮಪಿ ನಾಚಲತಿ ಎಂಬಂತೆ ಕಪಿಲೇಶ್ವರನ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರ ಮುಖವನ್ನು ನೋಡಿದರು.

ಇಟ್ಟಿಗೆ, ಪಾದುಕೆ ಮತ್ತು ಸೇತುವೆ ರಥ ಯಾತ್ರಾ ಕಾರ್ಯಕ್ರಮಗಳಿಂದಾಗಿ ತಮ್ಮಮಿಬ್ಬರಿಗಿಂತ ಬಲಿಷ್ಠವಾಗಿ ಕಪಿಲಳ್ಳಿಯಲ್ಲಿ ಬೆಳೆದು ನಿಂತಿದ್ದ ಧರ್ಮ ಸಂರಕ್ಷಣಾ ಪರಿಷತ್ತಿನ ಮಾತನ್ನು ತಳ್ಳಿ ಹಾಕಿದರೆ ನಾಳೆ ಜಾತ್ರಾ ಮಹೋತ್ಸವವೇ ನಿಂತು ಬಿಡಬಹುದೆಂಬ ಭೀತಿಯಿಂದ ತಲ್ಲಣ ಗೊಂಡಿದ್ದ ಕಪಿಲೇಶ್ವರನ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರು ಕಣ್ಣಲ್ಲೇ ಒಪ್ಪಿಗೆ ಸೂಚಿಸಿದ ಮೇಲೆ ದೂಸುರಾ ಮಾತಿಲ್ಲದೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಧರ್ಮ ಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆಮಜಲು ವೆಂಕಟ ಸುಬ್ಬಯ್ಯನವರ ಕಂಡೀಶನನ್ನು ಅವಿರೋಧವಾಗಿ ಒಪ್ಪಿಕೊಂಡುಬಿಟ್ಟರು. ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ದೊಡ್ಡ ೧೦೮ ಶ್ರೀಗಳಾದ ಜಗದ್ಗುರುಗಳೊಬ್ಬರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸ ಲಾಗುತ್ತದಂತೆ ಎಂಬ ಕರ್ಣಾನಂದಕರ ಶುಭವಾರ್ತೆಯು ಕಪಿಲಳ್ಳಿಯ ಬೆಟ್ಟ, ಗುಡ್ಡ, ಬಯಲು, ಕಾಡುಮೇಡುಗಳಲ್ಲಿರುವ ಮನೆಮನೆಗಳಲ್ಲಿ ಪ್ರತಿಧ್ವನಿಸಿ ಆಸ್ತಿಕ ಭಕ್ತಾಭಿಮಾನಿಗಳು ರೋಮಾಂಚನ ಬ್ರಹ್ಮಾನಂದ ಪುಳಕಿತರಾಗಿ ಆ ದಿನ ಬೇಗನೆ ಬರಲಿ ದೇವರೇ ಎಂದು ಕಪಿಲೇಶ್ವರನನ್ನು ಅನುದಿನ ಪ್ರಾರ್ಥಿಸತೊಡಗಿದರು.

ಕಪಿಲಳ್ಳಿಯ ಶೂದ್ರರು, ಅತಿಶೂದ್ರರು, ವಿಪ್ರರು ಮತ್ತು ಅತಿವಿಪ್ರರು ತಮ್ಮ ತಮ್ಮ ಜಾತಿ, ಉಪಜಾತಿ, ಉಪೋಪಜಾತಿ ಸಂಘಟನೆಗಳನ್ನು ಸ್ಥಾಪಿಸಿ ಕುಲಬಾಂಧವರಿಂದ ಪದೇ ಪದೇ ಚಂದಾ ಎತ್ತಿ ವರ್ಷಕ್ಕೊಮ್ಮೆ ಜಾತಿ ಸಮ್ಮೇಳನ ನಡೆಸಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಳಿಕ ಭರ್ಜರಿ ಭೋಜನ ಕೂಟ ಏರ್ಪಡಿಸಿ ತಮ್ಮ ಜಾತಿ ಉದ್ಧಾರವಾಯಿತೆಂದು ಸಂಭ್ರಮ ಪಟ್ಟು ಕೊಳ್ಳುತ್ತಿದ್ದರು. ತಮ್ಮ ತಮ್ಮ ಜಾತಿ, ಉಪಜಾತಿ, ಉಪೋಪಜಾತಿಗಳ ಜಗದ್ಗುರುಗಳು ಒಂದೇ ಒಂದು ಸಲ ಕಪಿಲಳ್ಳಿಗೆ ಪಾದ ಬೆಳೆಸಿದರೆ ಸಾಕು, ಪಾದ ಪೂಜೆ ಮಾಡಿ, ಪಾದೋದಕ ಕುಡಿದು ಸಾಯುಜ್ಯಕ್ಕೆ ಸಂಪೂರ್ಣ ಅರ್ಹತೆ ಪಡೆಕೊಳ್ಳಬೇಕೆಂದು ಅವರು ಪ್ರಯತ್ನಿಸುತ್ತಿದ್ದುದು ಇಂದು ನಿನ್ನೆಯ ಕತೆಯಲ್ಲ. ರಾಜ್ಯದ ಭೂಪಟದಲ್ಲಿ ಕಾಣಸಿಗದ ಕಪಿಲಳ್ಳಿಯ ಬಗ್ಗೆ ಕೇಳಿಯೂ ಇರದಿದ್ದ ಜಾತಿ, ಉಪಜಾತಿ, ಉಪೋಪಜಾತಿ ಸಂಘಟನೆಗಳ ಜಗದ್ಗುರುಗಳು ಸಣ್ಣ ಪುಟ್ಟ ಹಳ್ಳಿಗಳಿಗೆ ಹೋದರೆ, ಪಾದ ಪೂಜೆಯ ಮಾತು ಹಾಗಿರಲಿ, ತಮ್ಮ ಹಡಗುಗಳಂತಹಾ ಕಾರುಗಳಿಗೆ ಪೆಟ್ರೋಲು ಹಾಕಿಸುವ ಗತಿಯೂ ಇರುವುದಿಲ್ಲವೆಂಬ ಹಳೆಯ ಅನುಭವಾಮೃತದ ಭೀತಿಯಿಂದ ಒಬ್ಬರೂ ಈವರೆಗೆ ಕಪಿಲಳ್ಳಿಯನ್ನು ತಮ್ಮ ಪಾದಧೂಳಿಯಿಂದ ಪವಿತ್ರವನ್ನಾಗಿಸಿರಲಿಲ್ಲ.

ಕಪಿಲಳ್ಳಿಯಲ್ಲಿ ಒಟ್ಟು ಹದಿನೆಂಟು ಜಾತಿ, ಉಪಜಾತಿ, ಉಪೋಪಜಾತಿ ಸಂಘಟನೆಗಳಿದ್ದರೂ ಹಣಬಲ, ಸಂಖ್ಯಾ ಬಲದಿಂದಾಗಿ ಬಹುಮತೀಯ ವಿಪ್ರಜಾತಿ ಸಂಘ ಮತ್ತು ಬಹುಮತೀಯ ಶೂದ್ರ ಜಾತಿ ಸಂಘ ನಡೆಸುವ ವರ್ಷಾವಧಿ ಸಮ್ಮೇಳನಗಳ ಖದರು ಇತರ ಜಾತಿ ಸಂಘಗಳ ಸಮ್ಮೇಳನಗಳಿಗೆ ಬಂದುದಿಲ್ಲ. ಬಹುಮತೀಯ ವಿಪ್ರಜಾತಿ ಸಂಘವು ಒಮ್ಮೆ ತಮ್ಮದೇ ಕುಲ ಬಾಂಧವರ ಯಕ್ಷಗಾನ ಸಮ್ಮೇಳನ ಮತ್ತು ಬಯಲಾಟ ನಡೆಸಿ ತನ್ನ ಜಾತಿಯ ಸಾಂಸ್ಕೃತಿಕ ಸಂಪತ್ತು ಉಳಿದೆಲ್ಲಾ ಜಾತಿಗಳದಕ್ಕಿಂತ ಉನ್ನತ ಮಟ್ಟದ್ದು ಎಂದು ರಾಜಾರೋಷವಾಗಿ ಹೇಳಿಕೊಂಡು ಬಂದಾಗ, ತಾನೇನು ಕಡಿಮೆಯೆಂದು ಬಹುಮತೀಯ ಶೂದ್ರಜಾತಿ ಸಂಘವು ಅಂತಹದ್ದೇ ಒಂದು ಸಮ್ಮೇಳನ ನಡೆಸಹೋಗಿ, ಭರ್ಜರಿ ಪ್ರಚಾರ ನೀಡಿ, ಕೊನೆಗೆ ಸ್ವಜಾತಿ ಕಲಾವಿದರು ಸಾಕಷ್ಟು ಸಿಗದೆ, ಪರಜಾತಿ ಕಲಾವಿದರಿಗೆ ತಮ್ಮ ಜಾತಿ ವೇದಿಕೆಯಲ್ಲಿ ಮಣೆ ಹಾಕಲು ಮನಸ್ಸು ಬಾರದೆ, ಸಮ್ಮೇಳನವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದು ಮುಜುಗರಕ್ಕೀಡಾಗಿತ್ತು. ಪರ್ಯಾಯವಾಗಿ ಕುಲಬಾಂಧವರ ಸಾಹಿತ್ಯ ಸಮ್ಮೇಳನ ನಡೆಸಲು ನಿಶ್ಚಯಿಸಿ ರಾಹುಕಾಲ, ಗುಳಿಕಾಲ, ಭರಣಿ ಕೃತ್ತಿಕೆ ಬಿಟ್ಟು ದಿನ ನಿಗದಿ ಗೊಳಿಸಿ, ಅಂದು ಓದು ಬರಹ ಬಲ್ಲ ಕುಲ ಬಾಂಧವರೆಲ್ಲಾ ಒಂದೊಂದು ಕವಿತೆ ಪೋಣಿಸಿ ತರಲೇಬೇಕೆಂದು ತಾಕೀತು ಮಾಡಿತ್ತು. ಬಹುಮತೀಯ ಶೂದ್ರ ಜಾತಿ ಸಾಹಿತ್ಯ ಸಮ್ಮೇಳನದಂದು ಕವಿತೆ ಬರಕೊಂಡು ಬಂದವರನ್ನೆಲ್ಲಾ ವೇದಿಕೆಯಲ್ಲಿ ಕೂರಿಸಲು ಸ್ಥಳಾವಕಾಶವಿಲ್ಲದೆ, ಕವಿತೆ ಬರೆದು ತಂದವರೆಲ್ಲರೂ ತಮ್ಮನ್ನು ವೇದಿಕೆಯಲ್ಲಿ ಕೂರಿಸದಿದ್ದರೆ ಕವಿತಾ ವಾಚನ ಮಾಡುವುದಿಲ್ಲವೆಂದು ಅವಿರೋಧವಾಗಿ ಹೇಳಿದ್ದು ಮಾತ್ರವಲ್ಲದೆ ಜಾತಿ ಸಂಘವು ಸಾಹಿತ್ಯ ಸಮ್ಮೇಳನಕ್ಕೆಂದು ತಮ್ಮಿಂದ ಸಂಗ್ರಹಿಸಿದ ಹಣವನ್ನು ಹಿಂದಕ್ಕೆ ಕೊಡಬೇಕೆಂದು ರಂಪ ಮಾಡಿ, ಸಮ್ಮೇಳನವು ಗದ್ದಲದೊಡನೆ ಮುಕ್ತಾಯವಾಗಿ ಸಾಹಿತ್ಯಲೋಕಕ್ಕೆ ತುಂಬಲಾಗದ ನಷ್ಟವುಂಟಾಗಿತ್ತು.

ಇದಕ್ಕೆ ಪ್ರತಿಯಾಗಿ ಬಹುಮತೀಯ ವಿಪ್ರ ಜಾತಿ ಸಂಘವು ತನ್ನ ಕುಲ ಬಾಂಧವ ಸಾಹಿತಿಗಳಿಗೆ ಪೂರ್ವ ಸೂಚನೆ ನೀಡಿ, ಬೆಳಿಗ್ಗೆ ಕವಿಸಮ್ಮೇಳನ, ಅದಾಗಿ ಸಾಮೂಹಿಕ ಶತೋತ್ತರ ಅಷ್ಟ ನಾಮಾವಳಿ ಸಂಕೀರ್ತನೆ ಮತ್ತು ಭೂರಿಭೋಜನವೆಂದು ಕರಪತ್ರ ಹೊರಡಿಸಿ, ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ, ಸಂಕೀರ್ತನೆ ಮತ್ತು ಭೋಜನ ಕಾಲಕ್ಕೆ ಸರಿಯಾಗಿ ಆಗಮಿಸಿದ ತನ್ನ ಜಾತಿ ಬಾಂಧವರಿಗೆ ಪರಮ ಷಡುರಸ ಭೋಜನ ನೀಡಿ “ಆಹಾ, ಸಾಹಿತ್ಯ ಸಮ್ಮೇಳನವೆಂದರೆ ಹೀಗಿರಬೇಕು” ಎಂದು ಬೆರಳು ನೆಕ್ಕಿ ಬಾಯಿ ಚಪ್ಪರಿಸುವಂತೆ ಮಾಡಿತ್ತು. ಸಂಸ್ಕೃತಿ, ಸಾಹಿತ್ಯ ಎರಡರಲ್ಲೂ ಬಹುಮತೀಯ ವಿಪ್ರಜಾತಿ ಸಂಘದೆದುರು ತಲೆ ತಗ್ಗಿಸಬೇಕಾಗಿ ಬಂದಿದ್ದ ಬಹುಮತೀಯ ಶೂದ್ರಜಾತಿ ಸಂಘವು ಬಹುಮತೀಯ ಶೂದ್ರ ಜಾತಿ ವಿದ್ಯಾರ್ಥಿ ಪರಿಷತ್ತು, ಬಹುಮತೀಯ ಶೂದ್ರಜಾತಿ ಯುವಕಯುವತಿ ಪರಿಷತ್ತು, ಬಹುಮತೀಯ ಶೂದ್ರ ಜಾತಿ ಮಹಿಳಾ ಪರಿಷತ್ತು, ಬಹುಮತೀಯ ಶೂದ್ರ ಜಾತಿ ರೈತ ಪರಿಷತ್ತು, ಬಹುಮತೀಯ ಶೂದ್ರಜಾತಿ ಕೂಲಿಕಾರರ ಪರಿಷತ್ತುಗಳನ್ನು ರಚಿಸಿ ಕುಲಬಾಂಧವರೇ ಪಂಚಾಯತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುವಂತೆ ಮಾಡಿ, ಗೆದ್ದವರಿಗೆ ಪ್ರತಿಭಾ ಪುರಸ್ಕಾರ ಅಭಿನಂದನಾ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ ಹಾರ ಹಾಕಿ ಶಾಲು ಹೊದಿಸಿ, ಫಲತಾಂಬೂಲ ನೀಡಿ ಸಂತೃಪ್ತಿಪಟ್ಟುಕೊಂಡಿತು.

ಇದಕ್ಕೆ ಪ್ರತೀಕಾರವೆಂಬಂತೆ ಬಹುಮತೀಯ ವಿಪ್ರಜಾತಿ ಸಂಘವು ಸ್ವಜಾತೀಯ ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ, ಅದರಲ್ಲಿ ಕಪಿಲಳ್ಳಿಯ ಒಂದಿಬ್ಬರು ಶೂದ್ರ ಸಾಹಿತಿಗಳಿಗೂ ಗೌರವಾರ್ಪಣೆ ಮಾಡಿ ತಮ್ಮದು ಅಪ್ಪಟ ಜಾತ್ಯತೀತ ಸಾಂಸ್ಕೃತಿಕ ಸಂಘಟನೆಯೆಂದೂ, ಕೇವಲ ಪ್ರತಿಭೆಗೆ ಮಾತ್ರ ಗೌರವ ನೀಡುತ್ತದೆಂದೂ ಹೇಳಿಕೊಂಡು ಬಂದಿತ್ತು. ಕಲೆಸಾಹಿತ್ಯದ ವಿಚಾರಕ್ಕೆ ಹೊರಟು ತಾನು ಅನುಭವಿಸಿದ ಮುಖಭಂಗವನ್ನು ನೆನೆದುಕೊಂಡು ಬಹುಮತೀಯ ಶೂದ್ರ ಜಾತಿ ಸಂಘವು ಅವುಗಳ ಉಸಾಬರಿಯೇ ಬೇಡವೆಂದು, ಸ್ವಜಾತೀಯ ಏಳೆಂಟು ಮಂದಿ ಹಳಬರನ್ನು ಹುಡುಕಿ ತೆಗೆದು ಅವರು ಜಾನಪದ ಕ್ರೀಡೆಗಳಿಗೆ ಮತ್ತು ಜಾನಪದ ವಿಜ್ಞಾನಕ್ಕೆ ಸಲ್ಲಿಸಿದ್ದ ಅಮೋಘ ಕೊಡುಗೆಗಳಿಗಾಗಿ ಅದ್ದೂರಿಯ ಸನ್ಮಾನ ಮಾಡಿ ತಾನೇನು ಕಡಿಮೆಯೆಂದು ಬೀಗಿತ್ತು.

ಕಪಿಲೇಶ್ವರನ ಜಾತ್ರಾ ಮಹೋತ್ಸವಕ್ಕೆ ಮುನ್ನಾದಿನ ಒಬ್ಬರು ೧೦೮ ಶ್ರೀಗಳಾದ ಜಗದ್ಗುರುಗಳಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗುತ್ತದಂತೆ ಎಂಬ ರೋಮಾಂಚಕಾರೀ ವಾರ್ತೆ ಕಿವಿಗೆ ಬೀಳುತ್ತಲೇ ಕಪಿಲಳ್ಳಿಯ ಹದಿನೆಂಟು ಜಾತಿ, ಉಪಜಾತಿ, ಉಪೋಪಜಾತಿ ಸಂಘಗಳಿಗೆ ಹೊಸಜೀವ ಮೂಡಿ ಅವು ಧಿಗ್ಗನೆ ನಿದ್ದೆಯಿಂದೆದ್ದಂತೆ ಎದ್ದು ಕೂತವು. ಕರೆಸುವುದಾದರೆ ತಮ್ಮ ಜಾತಿ ಸಂಘದ ೧೦೮ ಶ್ರೀಗಳಾದ ಜಗದ್ಗುರುಗಳನ್ನೇ ಕರೆಸಬೇಕೆಂದು ಒಂದಾದ ಮೇಲೊಂದರಂತೆ, ಹೊತ್ತು ಗೊತ್ತಿಲ್ಲದೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರಿಗೆ, ಕಪಿಲೇಶ್ವರನ ದೇವಾಲಯದ ಕಚೇರಿ ಗುಮಾಸ್ತ ಬೋಳಂತಾಯ ಭಟ್ಟರಿಗೆ ಮತ್ತು ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರಿಗೆ ಪೋನು ಕರೆಗಳು ಬರತೊಡಗಿ ಅವರು ನಿದ್ದೆಗೆಡಬೇಕಾಗಿ ಬಂತು. ಅದು ಎಷ್ಟು ವಿಕೋಪಕ್ಕೆ ಹೋಯಿತೆಂದರೆ ತಮ್ಮ ಜಾತಿಸಂಘದ ೧೦೮ ಶ್ರೀಗಳಾದ ಜಗದ್ಗುರುಗಳನ್ನು ಕರೆಸದಿದ್ದರೆ ಗತಿ ನೆಟ್ಟಗಾಗಲಿಕ್ಕಿಲ್ಲವೆಂದೂ, ಜಾತ್ರೆಗೆ ಜಾತ್ರೆಯನ್ನೇ ನಿಲ್ಲಿಸಿ ಬಿಡುತ್ತೇವೆಂದೂ ಕರೆಗಳು ಬರತೊಡಗಿದಾಗ, ಕಪಿಲಳ್ಳಿಯ ಇತಿಹಾಸದುದ್ದಕ್ಕೂ ಈವರೆಗೆ ಒಮ್ಮೆಯೂ ಒಗ್ಗಟ್ಟಾಗದ ಆನುವಂಶಿಕ ಮೊತ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರೊಡನೆ ಗುಪ್ತ ಸಮಾಲೋಚನೆ ನಡೆಸಿ, ತಮಗೆ ಜೀವ ಬೆದರಿಕೆಯಿದೆಯೆಂದೂ, ದೇವಾಲಯಕ್ಕೆ ಅಪಾಯ ವಿದೆಯೆಂದೂ, ತಮಗೂ ಕಪಿಲೇಶ್ವರನಿಗೂ ರಕ್ಷಣೆ ನೀಡಬೇಕೆಂದೂ ಪೋಲೀಸು ಸ್ಟೇಶನ್ನಿಗೆ ಹೋಗಿ ಮುದ್ದಾಂ ಅರ್ಜಿ ಸಲ್ಲಿಸಿ ಕೈಮುಗಿದು ನಿಂತುಕೊಂಡರು.

ಅರ್ಜಿಯನ್ನು ತಾನೇ ಖುದ್ದಾಗಿ ಕೈಗೆತ್ತಿಕೊಂಡು ಪರಾಂಬರಿಸಿ ಪೋಲೀಸು ಎಸ್ಸಯಿಯು ದೂರವಾಣಿ ಅಭಿಯಂತರೊಡನೆ ಕಪಿಲಳ್ಳಿಗೆ ಆಗಮಿಸಿ, ತಪಸ್ವಿನಿಯನ್ನು ಬಿದಿರಪಿಂಡಿಯಲ್ಲಿ ದಾಟಿ ದೇವಾಲಯ, ಮೊಕ್ತೇಸರ ಮತ್ತು ಅರ್ಚಕರ ಮನೆಗಳ ಆಮೂಲಾಗ್ರ ಸ್ಥಳ ಪರೀಕ್ಷೆ ನಡೆಸಿ, ಮೂರೂ ದೂರವಾಣಿಗಳಿಗೆ ಕಾಲರೈಡಿ ಅಳವಡಿಸುವಂತೆ ದೂರವಾಣಿ ಅಭಿಯಂತರಿಗೆ ಸ್ಥಳದಲ್ಲೇ ಸೂಚನೆ ನೀಡಿ, ಇನ್ನು ಯಾರದೇ ಕರೆ ಬಂದರೂ ಕಾಲರೈಡಿಯಲ್ಲಿ ದಾಖಲಾಗುತ್ತದೆಂದೂ, ಹಾಗೆ ದಾಖಲಾದ ನಂಬರನ್ನು ತನಗೆ ತಿಳಿಸಬೇಕೆಂದೂ, ಯಾವ ಕಾರಣಕ್ಕೂ ಭೀತಿ ಪಡಬೇಕಾದ ಯಾವುದೇ ಪ್ರಮೇಯವಿಲ್ಲವೆಂದೂ ಸಂತೈಸಿ, ಕಪಿಲೇಶ್ವರನ ತೀರ್ಥ ಪ್ರಸಾದದೊಡನೆ, ಅನ್ನ ನೈವೇದ್ಯ ಸೇವಿಸಿ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಅಭಿಮಾನದಿಂದ ನೀಡಿದ ನಾಲ್ಕು ಬಾಳೆಗೊನೆ, ಐವತ್ತು ತೆಂಗಿನಕಾಯಿಗಳನ್ನು ಪಿಂಡಿಯಲ್ಲಿ ಹೇರಿ, ನದಿ ದಾಟಿ ಜೀಪಿಗೆ ತುಂಬಿ, ಜೀಪು ಹತ್ತುವ ಮೊದಲು ಎಲ್ಲರಿಗೂ ಅಭಯ ಹಸ್ತ ತೋರಿ ನಿರ್ಗಮಿಸಿದ್ದರು. ಕಾಲರೈಡಿಯ ಮಹಿಮಾ ವಿಶೇಷ ಗೊತ್ತಾದ ಮೇಲೆ ಬೋಳಂತಾಯ ಭಟ್ಟರಿಗೆ, ಗಣಪತಿ ಸುಬ್ರಾಯ ಜೋಯಿಸರಿಗೆ ಮತ್ತು ಅನಂತ ಪದ್ಮನಾಭಯ್ಯನವರಿಗೆ ಬರುತ್ತಿದ್ದ ಬೆದರಿಕೆಯ ಕರೆಗಳು ನಿಂತುಹೋದರೂ ಯಾವ ಜಾತಿ ಸಂಘದ ಜಗದ್ಗುರುಗಳನ್ನು ರಥೋತ್ಸವದ ಮುನ್ನಾದಿನದ ಧಾರ್ಮಿಕ ಪ್ರವಚನಕ್ಕೆ ಕರೆಸುವುದೆಂಬುದು ಇತ್ಯರ್ಥವಾಗದೆ ಕಪಿಲಳ್ಳಿಯು ಆಂತರಿಕ ತುರ್ತು ಪರಿಸ್ಥಿತಿಯಲ್ಲಿ ಬೇಯತೊಡಗಿತು.

ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಧಾರ್ಮಿಕ ಪ್ರವಚನಕ್ಕೆ ಯಾವಜಾತಿ ಜಗದ್ಗುರುಗಳನ್ನು ಕರೆಸುವುದೆಂಬ ತಲೆನೋವಿನಿಂದ ಒದ್ದಾಟದಲ್ಲಿರುವಾಗ ಒಂದು ದಿನ ಮನೆಯ ದೂರವಾಣಿ ಗಂಭೀರ ಸ್ವರದಲ್ಲಿ ಮೊಳಗಿ, ಇದ್ಯಾರಪ್ಪಾ ಈಗ ಎಂದು ಭೀತಿಯಿಂದ, ಬಂದ ಕರೆಯ ನಂಬರನ್ನು ಕಾಲರೈಡಿಯಲ್ಲಿ ನೋಡಿ ಇದು ಕಪಿಲಳ್ಳಿಯದ್ದಲ್ಲವೆಂಬುದನ್ನು ಖಚಿತಪಡಿಸಿ, ನಿಟ್ಟುಸಿರು ಬಿಟ್ಟು ಧೈರ್ಯದಿಂದ ರಿಸೀವರನ್ನು ಎತ್ತಿ “ಅಲ್ಲೋಽಽ” ಎಂದರು. ಆಚೆ ತುದಿಯ ಅಪರಿಚಿತ ಅಜ್ಞಾತ ವ್ಯಕ್ತಿಯು ದಪ್ಪನೆಯ ಸ್ವರದಲ್ಲಿ ತಾನು ಘನರಾಜ್ಯ ಸರ್ಕಾರದ ಸೀಯೆಮ್ಮಿನ ಪರ್ಸನಲ್ಲು ಸೆಕ್ರಟರಿಯೆಂದೂ, ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳನ್ನು ಕಪಿಲೇಶ್ವರನ ಜಾತ್ರೋತ್ಸವದ ಧಾರ್ಮಿಕ ಪ್ರವಚನಕ್ಕೆ ಕರೆಸಲು ಸಾಕ್ಷಾತ್‌ ಸೀಯೆಮ್ಮೇ ಆದೇಶಿಸಿದ್ದಾರೆಂದೂ, ಈ ಆಜ್ಞೆಯನ್ನು ಉಲ್ಲಂಘಿಸಿದರೆ ದೇವಳದ ಈಗಿನ ಆಡಳಿತ ಮಂಡಳಿಯನ್ನು ಸೂಪರು ಸೀಡು ಮಾಡಿ ಸರಕಾರವು ಆಡಳಿತಾಧಿಕಾರಿಯೊಬ್ಬರನ್ನು ನೇಮಕ ಮಾಡಬೇಕಾಗುತ್ತದೆಂದೂ ಎಚ್ಚರಿಸಿ, ದಿಗ್ಭ್ರಾಂತ ಮೊಕ್ತೇಸರರು ಮಾತು ಕಳಕೊಂಡ ಸ್ಥಿತಿಯನ್ನು ಮೌನಂ ಸಮ್ಮತಿ ಲಕ್ಷಣಂ ಎಂದು ಪರಿಗಣಿಸಿ ರಿಸೀವರನ್ನು ಇಟ್ಟುಬಿಟ್ಟಿತು.

ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಮತ್ತು ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರು ತಮ್ಮ ತಮ್ಮ ವಿಪ್ರ ಜಾತಿ ಸಂಘಗಳ ಆಜೀವ ಸ್ಥಾಪಕ ಸದಸ್ಯರಾಗಿದ್ದರೂ, ಇಬ್ಬರೂ ಬಹುಮತೀಯ ವಿಪ್ರಜಾತಿ ಸಂಘಕ್ಕೆ ಸೇರಿದವರಲ್ಲದುದರಿಂದ, ಧಾರ್ಮಿಕ ಪ್ರವಚನಕ್ಕೆ ಯಾವ ಜಾತಿ ಸಂಘದ ಜಗದ್ಗುರುಗಳನ್ನು ಕರೆಸುವುದೆಂದು ನಿಶ್ಚಯಿಸುವಲ್ಲಿ ವಿಫಲರಾಗಿದ್ದರು. ಇದೀಗ ಘನರಾಜ್ಯ ಸರ್ಕಾರದ ಸಾಕ್ಷಾತ್ತು ಸೀಯೆಮ್ಮಿನ ಪರ್ಸನಲ್ಲು ಸೆಕ್ರಟರಿ ಅಷ್ಟು ದೂರದಿಂದ ದೂರವಾಣಿ ಕರೆ ಮಾಡಿರುವುದು ಅವರ ಗೊಂದಲವನ್ನು ಹೆಚ್ಚಿಸುವುದರೊಂದಿಗೆ, ಅಸಲಿಗೆ ಅದು ಸೀಯೆಮ್ಮಿನ ಪರ್ಸನಲ್ಲು ಸೆಕ್ರಟರಿಯಿಂದಲೇ ಬಂದದ್ದೋ, ಅಲ್ಲವೋ ಎನ್ನುವುದನ್ನು ಖಚಿತಪಡಿಸುವುದು ಹೇಗೆ ಎಂಬ ಸಂದಿಗ್ಧದಲ್ಲಿ ತೊಳಲಿ ಕಪಿಲೇಶ್ವರನ ದೇವಳಕ್ಕೆ ಬಂದು ಬಿಟ್ಟರು.

ಧರ್ಮದರ್ಶಿಗಳ ಚಿಂತೆಯ ಕಾರಣವನ್ನು ಕೇಳಿ ತಿಳಿದುಕೊಂಡ ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರು ಕಾಲರೈಡಿ ನೋಡಿ ನಂಬರು ನೆನಪಿಟ್ಟು ಎಸ್ಸಯಿಗೆ ತಿಳಿಸಿದರೆ ಪೋನು ಮಾಡಿದವರನ್ನು ಅವರು ಕಂಡು ಹಿಡಿದು ಲಾಕಪ್ಪಿನಲ್ಲಿ ಚೆನ್ನಾಗಿ ವಿಚಾರಿಸಿ ಕೊಳ್ಳುತ್ತಾರೆ ಎಂದು ಪರಿಹಾರ ಸೂಚಿಸಿದಾಗ, ದೇವರೇ, ಇಷ್ಟೊಂದು ಸಣ್ಣ ವಿಷಯವೂ ತನಗೆ ಹೊಳೆಯದೇ ಹೋಯಿತಲ್ಲಾ ಎಂದು ಕೈ ಕೈ ಹಿಸುಕಿಕೊಂಡು, ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಮನೆಗೆ ಧಾವಿಸಿ, ಕಾಲರೈಡಿಯಲ್ಲಿ ದಾಖಲಾದ ನಂಬರನ್ನು ಬರೆದಿಟ್ಟುಕೊಂಡು ಎಸ್ಸಯಿಗೆ ಪೋನು ಮಾಡಿ ವಿಷಯ ತಿಳಿಸಿ, ಅದು ಸಾಕ್ಷಾತ್ತು ಸೀಯೆಮ್ಮಿನ ಕಛೇರಿಯಿಂದಲೇ ಬಂದದ್ದು ಹೌದು ಎನ್ನುವುದನ್ನು ಖಚಿತಪಡಿಸಿಕೊಂಡು ಇನ್ನಿದನ್ನು ಹೇಗಪ್ಪಾ ನಿಭಾಯಿಸುವುದು ಎಂದು ದಾರಿ ಕಾಣದಾಗಿ ಮತ್ತಷ್ಟು ಸಂದಿಗ್ಧದಲ್ಲಿ ತೊಳಲಿ ನಿದ್ದೆಗೆಡತೊಡಗಿದರು.

ಘನರಾಜ್ಯ ಸರ್ಕಾರದ ಸಾಕ್ಷಾತ್ತು ಪರ್ಸನಲ್ಲು ಸೆಕ್ರಟರಿಯಿಂದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರಿಗೆ ಬಂದ ಪೋನಿನ ಪೂರ್ಣ ಪಠ್ಯ ಕಪಿಲಳ್ಳಿಗೆಲ್ಲಾ ಗೊತ್ತಾಗಿ ಅಲ್ಪಮತೀಯ ಜಾತಿ ಸಂಘಗಳು ಮತ್ತು ಬಹುಮತೀಯ ವಿಪ್ರಜಾತಿಸಂಘ ಕೆರಳಿ ಕೆಂಡಾ ಮಂಡಲವಾಗಿ ಮೆರವಣಿಗೆ ನಡೆಸಿ, ಸೀಯೆಮ್ಮಿನ ವಿರುದ್ಧ ಬಾಯಿಗೆ ಬಂದಂತೆ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿ, ರಸ್ತೆಯಲ್ಲಿ ಟಯರು ಉರಿಸಿ, ಅಲ್ಲಲ್ಲಿ ಮರಗಳನ್ನು ಕಡಿದು ರಸ್ತೆಗೆ ಅಡ್ಡ ಹಾಕಿ ಉಗ್ರಪ್ರತಿಭಟನೆ ಮಾಡಿ ರಾಜಕಾರಣಿಗಳು ಧಾರ್ಮಿಕ ಕೇತ್ರದಲ್ಲಿ ಹಸ್ತಕೇಪ ಮಾಡಬಾರದೆಂದೂ, ಧಾರ್ಮಿಕ ಕೇತ್ರದ ಆದೇಶಾನುಸಾರ ನಡೆದುಕೊಳ್ಳಬೇಕೆಂದೂ, ಸೀಯೆಮ್ಮು ಹುದ್ದೆಗಿಂತ ಧರ್ಮದೊಡ್ಡದೆಂದೂ ಏಕಕಂಠದಲ್ಲಿ ಉದ್ಘೋಷಿಸಿದವು.

ಪರಿಸ್ಥಿತಿ ಪೀಕಲಾಟಕ್ಕಿಟ್ಟುಕೊಂಡಿತಲ್ಲಾ ದೇವರೇ. ಸೀಯೆಮ್ಮ ಸೆಟಗೊಂಡು ದೇವಳದ ಆಡಳಿತ ಮಂಡಳಿಯನ್ನು ಸೂಪರು ಸೀಡು ಮಾಡಿ, ರಾಜಧಾನಿಯಿಂದ ಆಡಳಿತಾಧಿಕಾರಿಯೊಬ್ಬನನ್ನು ಕಳಿಸಿ, ಅವನು ತನ್ನ ತಲೆ ಮೇಲೆ ಕೂರುವಂತಾದರೆ ಏನಪ್ಪಾ ಮಾಡೋದು ಎಂದು ಭಯಭೀತರಾದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಮತ್ತು ರಥೋತ್ಸವದ ಮುನ್ನಾದಿನ ಜಾತಿ ಜಗದ್ಗುರುಗಳಿಂದ ಧಾರ್ಮಿಕ ಪ್ರವಚನ ನೆರವೇರಿಸಲೇಬೇಕೆಂಬ ಬೆದರಿಕೆಯೊಡ್ಡಿ ಈಗಿನ ಎಲ್ಲಾ ತಲೆನೋವುಗಳಿಗೆ ಮೂಲ ಕಾರಣಕರ್ತರಾದ ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟ ಸುಬ್ಬಯ್ಯರನ್ನು ದೇವಳಕ್ಕೆ ಕರೆಸಿ ಮುಂದೇನು ಮಾಡುವುದೆಂದು ಪ್ರಶ್ನಿಸಿದರು. ಬಹುಮತೀಯ ವಿಪ್ರ ಜಾತಿ ಸಂಘಕ್ಕೆ ಸೇರಿದ ಮೂವರು ಆಡಳಿತ ಮಂಡಳಿ ಸದಸ್ಯರು, ತಲೆಯಿಲ್ಲದ ಆ ಬಹುಮತೀಯ ಶೂದ್ರ ಮುಂಡೇವು ಈ ಮಟ್ಟಕ್ಕೆ ಬೆಳೆದಿದ್ದಾರೆಂದರೆ ನಮ್ಮ ತಾಕತ್ತು ಏನೆಂಬುದನ್ನು ಅವರಿಗೆ ತೋರಿಸಲು ಎರಡೇ ಎರಡು ದಿನ ಟೇಮು ಕೊಡಿ ಎಂದು ಹೇಳಿ ಆ ಅನೌಪಚಾರಿಕ ಮುಚ್ಚಿದ ಬಾಗಿಲ ಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದಕ್ಕೆ ದೂಡಿ ದುಡು ದುಡು ನಡೆದುಹೋದರು.

ಸರಿಯಾಗಿ ಎರಡು ದಿನಗಳ ಬಳಿಕ ಒಂದು ರಾತ್ರಿ ಇದ್ದಕ್ಕಿದ್ದಂತೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರ ಮನೆಯ ಪೋನು ಹೊಡಕೊಳ್ಳತೊಡಗಿದಾಗ, ಮಂದ ಬೆಳಕಿನಲ್ಲಿ ಕಾಲರೈಡಿಯಲ್ಲಿ ದಾಖಲಾದ ನಂಬರನ್ನು ಓದಲಾಗದೆ ಗಡಿ ಬಿಡಿಯಿಂದ ರಿಸೀವರು ಎತ್ತಿಕೊಂಡು “ಅಲ್ಲೋಽಽ” ಎಂದಾಗ ಅತ್ತ ಕಡೆಯಿಂದ ಏಕು ಮಿನಿಟು ರುಖಿಯೇ ಎಂಬ ಸ್ವರ ಕೇಳಿ ಬಂದು ಸ್ವಲ್ಪ ಹೊತ್ತಿನ ಮೌನದ ಮೇಲೆ ಇದು ದೇಶದ ಪ್ರಧಾನಮಂತ್ರಿಗಳ ಸಚಿವಾಲಯದಿಂದ ಮಾತಾಡುತ್ತಿರುವುದು ; ನಿಮ್ಮ ಕಪಿಲೇಶ್ವರನ ಜಾತ್ರೋತ್ಸವದ ಧಾರ್ಮಿಕ ಪ್ರವಚನಕ್ಕೆ ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳನ್ನು ಕರೆಸಬೇಕೆಂದು ಪ್ರಧಾನಿಗಳು ಆದೇಶಿಸಿದ್ದಾರೆ ಎಂದು ಗೊಗ್ಗರು ದನಿಯೊಂದು ತೇಲಿ ಬಂದು, ಇವರ ಉತ್ತರಕ್ಕೂ ಕಾಯದೆ, ಟಕ್ಕೆಂದು ರಿಸೀವರು ಕುಕ್ಕಿದ ಸದ್ದು ಕೇಳಿ, ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಕಿಂಕರ್ತ್ಯವತಾ ವಿಮೂಢರಾಗಿ ಮರಗಟ್ಟಿ ನಿಂತುಬಿಟ್ಟರು.

ಮೊನ್ನೆ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ, ಇಂದು ದೇಶದ ಪ್ರಧಾನಮಂತ್ರಿಗಳ ಸಚಿವಾಲಯದಿಂದ ಕಪಿಲಳ್ಳಿಗೆ ಫೋನು ಬರುವಷ್ಟರ ಮಟ್ಟಿಗಾಯಿತಲ್ಲಾ ಈ ವಿಷಯ ಎಂದು ತಲೆಗೆ ಕೈ ಹೊತ್ತು ಕೂತ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಜಾತ್ರೋತ್ಸವ ಸಮೀಪಿಸುತ್ತಿರುವುದರಿಂದ ಆದಷ್ಟು ಶೀಘ್ರ ವಿಷಯವನ್ನು ಇತ್ಯರ್ಥ ಮಾಡಿ ರಥೋತ್ಸವವು ನಿರ್ವಿಘ್ನವಾಗಿ ಸಾಗುವಂತಾಗ ಬೇಕೆಂದು ಕೊಂಡು ತಲೆಯೋಡಿಸಿ ನಾಳೆಯೇ ಇದರ ಬಗ್ಗೆ ಒಂದು ಮೀಟಿಂಗು ನಡೆಸಿ ಬಹುಮತದಂತೆ ತೀರ್ಮಾನ ಕೈಗೊಳ್ಳುವುದು ಎಂದು ನಿಶ್ಚಯಿಸಿ ಒಂದೊಂದೇ ನಂಬರು ಒತ್ತತೊಡಗಿದರು. ಅನಿರೀಕಿತವಾದ ತುರ್ತು ಮೀಟಿಂಗೊಂದನ್ನು ಯಾಕೆ ಮಾಡಬೇಕಾಗಿದೆಯೆಂಬುದು ಕಣಾರ್ಧದಲ್ಲಿ ಎಲ್ಲರಿಗೂ ಗೊತ್ತಾಗಿ ಕಪಿಲಳ್ಳಿಗೆ ಕಪಿಲಳ್ಳಿಯೇ ಕಪಿಲೇಶ್ವರನ ಗೋಪುರದಲ್ಲಿ ಜಮಾಯಿಸಿತು. ತುಂಬಿ ತುಳುಕುತ್ತಿದ್ದ ಸಮಸ್ತ ಆಸ್ತಿಕ ಭಕ್ತಾಭಿಮಾನಿಗಳೆದುರು ಎರಡೂ ಕೈ ಜೋಡಿಸಿ ನಿಂತ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ರಥೋತ್ಸವದ ಮುನ್ನಾದಿನದ ಧಾರ್ಮಿಕ ಪ್ರವಚನಕ್ಕೆ ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳನ್ನೇ ಕರೆಸಬೇಕೆಂದು ಘನರಾಜ್ಯ ಸರ್ಕಾರದ ಸೀಯೆಮ್ಮುಗಳ ಕಾರ್ಯಾಲಯದಿಂದ ಮತ್ತು ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳನ್ನೇ ಕರೆಸಬೇಕೆಂದು ದೇಶದ ಪೀಯೆಮ್ಮುಗಳ ಸಚಿವಾಲಯದಿಂದ ದೂರವಾಣಿ ಆದೇಶಗಳು ತನಗೆ ಬಂದಿರುವುದಾಗಿಯೂ, ಮುಂದೇನು ಮಾಡಬೇಕೆಂಬುದನ್ನು ಘನತೆವೆತ್ತ ಮಹಾಸಭೆಯು ತಿಳಿಸಿ ಮುಂದಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕೆಂದೂ ಅರಿಕೆ ಮಾಡಿಕೊಂಡರು.

ಸ್ವಲ್ಪ ಹೊತ್ತಿನ ಗುಜು ಗುಜು ಬಳಿಕ ಧರ್ಮ ಸಂರಕಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟ ಸುಬ್ಬಯ್ಯನವರು ಎದ್ದು ನಿಂತರು. ಇದು ಕಪಿಲಳ್ಳಿಯ ಧರ್ಮ ಸಂರಕ್ಷಣಾ ಪರಿಷತ್ತು ಸೂಚಿಸಿದ ಸಲಹೆಯಾದುದರಿಂದ ಪರಿಹಾರವನ್ನು ಸೂಚಿಸಬೇಕಾದುದು ಪರಿಷತ್ತಿನ ಧರ್ಮವಾಗಿರುತ್ತದೆ. ಕಪಿಲೇಶ್ವರ ದೇವಾಲಯವು ಘನ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವುದರಿಂದ ಸೀಯೆಮ್ಮಿನ ಆದೇಶವನ್ನು ಉಲ್ಲಂಘಿಸಿದರೆ ಆಡಳಿತ ಮಂಡಳಿಯನ್ನು ಸೂಪರುಸೀಡು ಮಾಡಿ ಸರಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅಪಾಯದ ತೂಗುಕತ್ತಿ ನಮ್ಮೆಲ್ಲರ ತಲೆಯಮೇಲೆ ನೇತಾಡುತ್ತದೆ. ಆಗ ಕಪಿಲೇಶ್ವರನು ನೂರಕ್ಕೆ ನೂರರಷ್ಟು ಸರಕಾರೀ ಸ್ವಾಮ್ಯಕ್ಕೊಳಪಟ್ಟ ದೇವರಾಗಿ ನಾವು ಎಲ್ಲಾ ಅಧಿಕಾರಗಳನ್ನು ಕಳಕೊಂಡು ಬಿಡುತ್ತೇವೆ. ಹಾಗಾಗಿ ನಾವು ನಿರ್ವಾಹವಿಲ್ಲದೆ ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳನ್ನು ಧಾರ್ಮಿಕ ಪ್ರವಚನಕ್ಕೆ ಕರೆಸಲೇಬೇಕಾಗುತ್ತದೆ. ಪೀಯೆಮ್ಮು ನಮ್ಮ ಸೀಯೆಮ್ಮಮಿಗಿಂತಲೂ ಮೇಲಿನವರು. ಆದುದರಿಂದ ಪೀಯೆಮ್ಮು ಸಚಿವಾಲಯದಿಂದ ಬಂದಿರುವ ದೂರವಾಣಿ ಆದೇಶವನ್ನು ಇನ್ನಷ್ಟು ಗೌರವಿಸಿ ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳನ್ನೂ ಕರೆಸಲೇಬೇಕಾಗುತ್ತದೆ. ಹೇಗೂ ಧಾರ್ಮಿಕ ಪ್ರವಚನ ಇರಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ ಮೇಲೆ ಇಬ್ಬರನ್ನೂ ಕರೆಯಿಸಿ ಸಮಸ್ಯೆ ಬಗೆಹರಿಸೋಣ” ಎಂದಾಗ ಸಭೆ ಚಪ್ಪಾಳೆ ತಟ್ಟಿ ಅನುಮೋದಿಸಿತು.

ಆಗ ಇತರ ಹದಿನಾರು ಜಾತಿ ಸಂಘಗಳ ಅಧ್ಯಕ್ಷರುಗಳು ಏಕಕಾಲದಲ್ಲಿ ಎದ್ದು ನಿಂತು “ನೀವು ಮಾಡುತ್ತಿರುವುದು ದಬ್ಬಾಳಿಕೆ ಮತ್ತು ಶೋಷಣೆ. ಬಹುಮತೀಯ ಜಾತಿ ಸಂಘಗಳಿಗೆ ಮಾತ್ರವೇ ಜಗದ್ಗುರುಗಳಿರುವುದಲ್ಲ ; ಅಲ್ಪಮತೀಯ ಜಾತಿ ಸಂಘಗಳಿಗೂ ಇದ್ದಾರೆ ಎನ್ನುವುದನ್ನು ನೀವು ಪರಿಗಣನೆಗೇ ತೆಗೆದುಕೊಂಡಿಲ್ಲ. ಧಾರ್ಮಿಕ ಪ್ರವಚನ ಮಾಡಲು ನಿಮ್ಮ ಜಾತಿಗಳ ಜಗದ್ಗುರುಗಳಿಗಿರುವಷ್ಟೇ ಅರ್ಹತೆ, ಯೋಗ್ಯತೆ ಮತ್ತು ಜ್ಞಾನ ನಮ್ಮ ಜಾತಿಗಳ ಜಗದ್ಗುರುಗಳಿಗೂ ಇದೆ. ನಮ್ಮ ಜಾತಿಯ ಜಗದ್ಗುರುಗಳನ್ನೂ ಧಾರ್ಮಿಕ ಪ್ರವಚನಕ್ಕೆ ಕರೆಸದಿದ್ದರೆ ಸೀಯೆಮ್ಮು ಅಲ್ಲಾ ಪೀಯೆಮ್ಮು ಹೇಳಿದರೂ ನಾವು ಜಾತ್ರೆ ನಡೆಯಲು ಬಿಡುವುದಿಲ್ಲ” ಎಂದು ಒಕ್ಕೊರಲಿನಿಂದ ಹೇಳಿದ್ದನ್ನು ಕೇಳಿ ಕಂಗಾಲದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಮತ್ತೆ ಧರ್ಮ ಸಂರಕಣಾ ಪರಿಷತ್ತಿನ ಅಧ್ಯಕ ಮೂಲೆ ಮಜಲು ವೆಂಕಟಸುಬ್ಬಯ್ಯರನ್ನು ತೇನವಿನ ತೃಣ ಮಪಿ ನಾಚಲತಿ ಎಂಬಂತೆ ನೋಡಿದರು.

ಧರ್ಮ ಸಂರಕಣಾ ಪರಿಷತ್ತಿನ ಅಧ್ಯಕ್ಷ ಮೂಲೆಮಜಲು ವೆಂಕಟಸುಬ್ಬಯ್ಯ ನವರು ಮತ್ತೆ ಎದ್ದು ನಿಂತು ಕೈಮುಗಿದರು. ಇಲ್ಲೀಗ ಎದ್ದಿರುವುದು ಯಾವ ಜಾತಿ ಸಂಘದ ಜಗದ್ಗುರುಗಳು ಶ್ರೇಷ್ಠರು ಎಂಬ ಪ್ರಶ್ನೆಯಲ್ಲ. ರಾಜ್ಯದ ಸೀಯೆಮ್ಮು ಮತ್ತು ದೇಶದ ಪೀಯೆಮ್ಮುಗಳ ಮಾತನ್ನು ಯಾವ ಕಾರಣಕ್ಕೂ ಮೀರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ. ಹೇಳಿ ಕೇಳಿ ನಮ್ಮದು ಧರ್ಮ ಸಂರಕಣಾ ಪರಿಷತ್ತೇ ಹೊರತು ಜಾತಿ ಸಂರಕ್ಷಣಾ ಪರಿಷತ್ತಲ್ಲ. ಆದರೇನು ಮಾಡುವುದು? ನಮ್ಮ ನಮ್ಮ ಯೋಗ್ಯತೆಗೆ ತಕ್ಕಂತೆ ನಾವು ಪೂರ್ವಾರ್ಜಿತ ಕರ್ಮ ಫಲಗಳಿಗನುಗುಣವಾಗಿ ಮೇಲು ಜಾತಿ ಅಥವಾ ಕೀಳುಜಾತಿಗಳಲ್ಲಿ ಹುಟ್ಟಿದ ಕಾರಣ, ಜಾತಿ ಧರ್ಮಕ್ಕನುಗುಣವಾಗಿ ನಡೆದು, ನಮ್ಮ ನಮ್ಮ ಸಂಚಿತ ಕರ್ಮ ಫಲಗಳನ್ನು ಸವೆಸಿ ಆತ್ಮನನ್ನು ಪರಮಾತ್ಮನಲ್ಲಿ ಲೀನಗೊಳಿಸ ಬೇಕಾಗುತ್ತದೆ. ಈ ಪಾರಮಾರ್ಥವು ನಮ್ಮಂತಹ ಸಂಸಾರವಂದಿಗರಿಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ನಾವು ಕರ್ಮಫಲಾನುಸಾರ ಹುಟ್ಟಿ ಬಂದ ಜಾತಿಗಳನ್ನು ಸಂಘಟಿಸಿ, ಪರಮ ಪೂಜ್ಯರುಗಳನ್ನು ಜಗದ್ಗುರುಗಳಾಗಿ ಅಂಗೀಕರಿಸಿ, ಅವರ ದಿವ್ಯ ಮಾರ್ಗದರ್ಶನ ದಂತೆ ನಡೆದು ಭವಲೋಕದ ಬಂಧನದಿಂದ ಮುಕ್ತಿ ಪಡೆಯಬೇಕಾಗುತ್ತದೆ. ಹಾಗೆ ನೋಡಿದರೆ ನಮ್ಮೂರಿನ ಎಲ್ಲಾ ಹದಿನೆಂಟು ಜಾತಿಸಂಘಗಳ 108 ಶ್ರೀಗಳಾದ ಜಗದ್ಗುರುಗಳನ್ನು ಕರೆಯಿಸಿ ಧಾರ್ಮಿಕ ಪ್ರವಚನವನ್ನು ಏರ್ಪಡಿಸಬೇಕಿತ್ತು. ಆದರೆ ರಥೋತ್ಸವದ ಮುನ್ನಾದಿನ ಅನೇಕ ಧಾರ್ಮಿಕ ವಿಧಿಗಳಿರುವುದರಿಂದ ಹದಿನೆಂಟು ಜಗದ್ಗುರುಗಳಿಗೆ ಸಮಯಾವಾಕಾಶ ಕಲ್ಪಿಸಿ ಕೊಡುವುದಾದರೂ ಹೇಗೆ? ನೀವು ಇಷ್ಟೇ ನಿಮಿಷಗಳಲ್ಲಿ ಧಾರ್ಮಿಕ ಪ್ರವಚನ ನಿಲ್ಲಿಸಬೇಕೆಂದು 108 ಶ್ರೀಗಳಾದ ಜಗದ್ಗುರುಗಳಿಗೆ ಅಪ್ಪಣೆ ಮಾಡಲಾಗುತ್ತದೆಯೇ ? ನಮ್ಮೂರ ಸೋದರ ಸೋದರಿಯರು ಮತ್ತು ಕಪಿಲೇಶ್ವರನ ಆಸ್ತಿಕ ಭಕ್ತಾಭಿಮಾನಿಗಳು ಇದನ್ನು ದಯವಿಟ್ಟು ಅರ್ಥಮಾಡಿಕೊಳ್ಳಬೇಕು. ಇನ್ನು ಮುಂದೆ ವರ್ಷಕ್ಕಿಬ್ಬರಂತೆ, ಎಂಟು ವರ್ಷಗಳಲ್ಲಿ ಸಮಸ್ತ ಜಾತಿ ಸಂಘಗಳ ಜಗದ್ಗುರುಗಳನ್ನು ಕಪಿಲಳ್ಳಿಗೆ ಕರೆಯಿಸಿ ಧಾರ್ಮಿಕ ಪ್ರವಚನ ಏರ್ಪಡಿಸಿ ನಮ್ಮ ಪೂರ್ವಾಜಿತ ಪಾಪ ವಿಶೇಷಗಳನ್ನು ಪರಿಹರಿಸಿ ಕಪಿಲೇಶ್ವರನ ಪ್ರೀತಿಗೆ ಪಾತ್ರರಾಗೋಣ” ಎಂದು ಮಾತು ನಿಲ್ಲಿಸಿದಾಗ ಸಭೆಯು ಜೋರಾಗಿ ಕೈ ಚಪ್ಪಾಳೆ ತಟ್ಟಿ ಧರ್ಮಸಂರಕಣಾ ಪರಿಷತ್ತಿನ ಅಧ್ಯಕ ಮೂಲೆ ಮಜಲು ವೆಂಕಟ ಸುಬ್ಬಯ್ಯನವರ ಸಲಹೆಗೆ ಸರ್ವಾನುಮತಿಯ ಅಂಗೀಕಾರವನ್ನು ನೀಡಿತು.

ಜಾತ್ರೋತ್ಸವ ಮೈದಾನದಲ್ಲಿ ಎತ್ತರದ ಭವ್ಯ ವೇದಿಕೆ ನಿರ್ಮಿಸಿ, ಮಧ್ಯದಲ್ಲಿ ಒಂದಷ್ಟು ಕುಷನ್ನು ಚಯರು, ಹಿಂಭಾಗದಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ಕು ಚಯರು ಇರಿಸಿ ಬಲತುದಿಯಲ್ಲಿ ಬಹುಮತೀಯ ವಿಪ್ರಜಾತಿ ಸಂಘದ ಮತ್ತು ಎಡಬದಿಯಲ್ಲಿ ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳಿಗೆಂದು ಇತರ ಆಸನಗಳಿಗಿಂತ ಎರಡಡಿ ಹೆಚ್ಚು ಎತ್ತರದ ಭವ್ಯ ಸಿಂಹಾಸನಗಳನ್ನು ಇರಿಸಿ, ಇಡೀ ವೇದಿಕೆಯ ಸುತ್ತ ಮುತ್ತ ಹಳದಿ ಪತಾಕೆಗಳನ್ನು ಕಟ್ಟಿ, ಎರಡೂ ಬದಿಗಳಲ್ಲಿ ಎರಡು ಜಾತಿ ಸಂಘಗಳ ಜಗದ್ಗುರುಗಳ ಬೃಹತ್‌ ಕಟವುಟುಗಳನ್ನು ನಿಲ್ಲಿಸಿ, ಉದ್ದಕ್ಕೂ ಹಳದಿ ಬಂಟಿಂಗು ಕಟ್ಟಿ ಅಲಂಕರಿಸಲು ಕಪಿಲಳ್ಳಿಯ ವಿಪ್ರರ ನಿರ್ದೇಶನದಂತೆ ಸಮಸ್ತ ಶೂದ್ರರು ಮೂರು ಹಗಲು ಇರುಳು ಸೇವೆ ಸಲ್ಲಿಸಿದ್ದರು. ವೇದಿಕೆಯ ವ್ಯವಸ್ಥೆ ಹೇಗಾಗಿದೆಯೆಂದು ನೋಡ ಬಂದ ಬಹುಮತೀಯ ವಿಪ್ರಜಾತಿ ಸಂಘದ ಅಧ್ಯಕ್ಷರು ಎಲ್ಲವನ್ನೂ ನೋಡಿದ ಬಳಕ, ತಮ್ಮ ಜಾತಿಯ ಜಗದ್ಗುರುಗಳು ಎಲ್ಲಾ ಸಭೆಗಳಲ್ಲಿ ಇತರ ಗಣ್ಯಾತಿಗಣ್ಯರಿಂದ ಮೂರಡಿ ಹೆಚ್ಚು ಎತ್ತರದ ಸಿಂಹಾಸನದಲ್ಲಿ ಪೀಠಸ್ಥರಾಗುವ ಘನವಂತಿಕೆಯ ಸಂಪ್ರದಾಯಸ್ಥರೆಂದೂ, ಬಲಭಾಗದ ಸಿಂಹಾಸನದ ಕೆಳಗೆ ಮೂರಡಿ ಎತ್ತರದ ಪ್ಲಾಟುಫಾರಂ ನಿರ್ಮಿಸಿ ಸಿಂಹಾಸನವನ್ನು ಎತ್ತರಿಸಬೇಕೆಂದೂ ಹೇಳಿದಾಗ ಮತ್ತೆ ಪೇಚಾಟಕ್ಕಿಟ್ಟುಕೊಂಡಿತು.

ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳಿಗೆ ಇತರರ ಆಸನಗಳಿಗಿಂತ ಮೂರಡಿ ಹೆಚ್ಚು ಎತ್ತರದ ಸಿಂಹಾಸನ ಇರಿಸುವುದನ್ನು ಪತ್ರಿಕೆಗಳಲ್ಲಿ ಓದಿ, ನೋಡಿ ತಿಳಿದಿದ್ದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಸುಬ್ಬಯ್ಯನವರು ಅರ್ಷೇಯ ಸಂಪ್ರದಾಯವನ್ನು ಮುರಿಯುವಂತಿಲ್ಲವೆಂಬುದನ್ನು ಅರ್ಥಮಾಡಿಕೊಂಡು ವೇದಿಕೆಯ ಸ್ವಯಂಸೇವಕರಿಗೆ ವಿಷಯವನ್ನು ಮನವರಿಕೆ ಮಾಡಿ, ಬಲಭಾಗದ ಸಿಂಹಾಸನದ ಕೆಳಗೆ ಮೂರಡಿಯ ಪ್ರತ್ಯೇಕ ಪ್ಲಾಟು ಫಾರಂ ನಿರ್ಮಿಸಿ ಸಿಂಹಾಸನವನ್ನು ಎತ್ತರಿಸಿಬಿಟ್ಟರು. ಪ್ರಸನ್ನವದನರಾದ ಬಹುಮತೀಯ ವಿಪ್ರಜಾತಿ ಸಂಘದ ಅಧ್ಯಕ್ಷರು ಆನುವಂಶಿಕ ಮೊಕ್ತೇಸರ ಅನಂತ ಪದ್ಮನಾಭಯ್ಯನವರ ಕಿವಿಯಲ್ಲಿ ಗುಟ್ಟಾಗಿ – ನಮ್ಮ ಜಾತಿ ಜಗದ್ಗುರುಗಳು ಬಹಳ ಮಡಿವಂತರಾದುದರಿಂದ ಅವರ ಹತ್ತಿರದ ಎರಡು ಚಯರುಗಳಲ್ಲಿ ಶೂದ್ರರು ಕೂರದಂತೆ ನೋಡಿಕೊಳ್ಳುವ ಭಾರ ನಿಮ್ಮದು. ಮೈಕದ ಶೂದ್ರರು ಯಾವ ಕಾರಣಕ್ಕೂ ಜಗದ್ಗುರುಗಳ ಕಡೆಯಿಂದ ವೇದಿಕೆ ಹತ್ತಕೂಡದು. ಗಿಂಡಿ ಮಾಣಿಗಳು ಗೋಮಯದಿಂದ ಶುದ್ಧೀಕರಿಸಿದ ಪರಮ ಪವಿತ್ರ ಮೈಕದಲ್ಲೇ ಜಗದ್ಗುರುಗಳು ಮಾತಾಡುವುದು. ಅದನ್ನು ಶ್ರೀಮಠದಿಂದಲೇ ತರಲಾಗುತ್ತದೆ. ಇಲ್ಲಿ ಅದಕ್ಕೆ ಕೆಳಗಿನಿಂದ ಕನೆಕ್ಷನ್ನು ನೀಡಿದರೆ ಸಾಕು – ಎಂದದ್ದಕ್ಕೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ತಲೆಯಾಡಿಸಲೇಬೇಕಾಯಿತು.

ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳ ಸಿಂಹಾಸನವನ್ನು ತಮ್ಮ ಜಗದ್ಗುರುಗಳ ಸಿಂಹಾಸನಕ್ಕಿಂತ ಮೂರಡಿ ಎತ್ತರಕ್ಕೇರಿಸಿದ್ದನ್ನು ತಿಳಿದ ಬಹುಮತೀಯ ಶೂದ್ರ ಜಾತಿ ಸಂಘದ ಅಧ್ಯಕ್ಷರು ಕೆಂಡಾ ಮಂಡಲವಾಗಿ ತಮ್ಮ ಕುಲ ಬಾಂಧವರಿಗೆಲ್ಲಾ ಪೋನಲ್ಲಿ ವಿಷಯ ತಿಳಿಸಿ, ಅಲ್ಲಲ್ಲಿ ಮರಕಡಿದು ರಸ್ತೆಗೆ ಅಡ್ಡ ಹಾಕಿ, ಹಳೆ ಟಯರುಗಳನ್ನು ರಸ್ತೆಯಲ್ಲಿ ಪೇರಿಸಿ ಬೆಂಕಿ ಕೊಟ್ಟು, ದೊಡ್ಡ ಮೆರವಣಿಗೆ ನಡೆಸಿ, ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರ ಪ್ರತಿಕೃತಿಯನ್ನು ದಹಿಸಿ – ತಮ್ಮ ಜಾತಿ ಸಂಘದ ಜಗದ್ಗುರುಗಳಿಗೆ ಅಪಮಾನವಾಗಿದೆಯೆಂದೂ, ಇದು ಜಾತಿ ನಿಂದನೆಯ ಪ್ರಕರಣ ವಾಗುತ್ತದೆಂದೂ, ಇದಕ್ಕಾಗಿ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯರ ಮೇಲೆ ಕೇಸು ಜಡಿದು ಒಳಗೆ ಹಾಕಿಸಿ ಬಿಡುತ್ತೇನೆಂದೂ ಮೈಕದಲ್ಲಿ ದೊಡ್ಡ ಸ್ವರದಲ್ಲಿ ಮಾಡಿದ ಭಾಷಣ ಕೇಳಿ ಗಡ ಗಡ ನಡುಗಿದ ಧರ್ಮದರ್ಶಿಗಳು ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟ ಸುಬ್ಬಯ್ಯರೊಡನೆ ಸಭೆ ನಡೆಯುವಲ್ಲಿಗೆ ಧಾವಿಸಿದರು.

ಬಹುಮತೀಯ ಶೂದ್ರ ಜಾತಿ ಸಂಘದ ಅಧ್ಯಕ್ಷರೊಡನೆ ಎರಡು ನಿಮಿಷ ಮಾತಾಡಿದ ಧರ್ಮ ಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟಸುಬ್ಬಯ್ಯ ನವರು ಮೈಕ ಕೈಗೆತ್ತಿಕೊಂಡು – ಜಾತಿ ಜಗದ್ಗುರುಗಳಲ್ಲಿ ಯಾರೂ ಮೇಲಲ್ಲ; ಯಾರೂ ಕೀಳಲ್ಲ. ಯತಿಮೂಲವನ್ನು ನೋಡಬಾರದು ಎಂಬಂತೆ ಜಗದ್ಗುರುಗಳಿಗೆ ಜಾತಿಯಿರುವುದಿಲ್ಲ.

ನಮ್ಮಂತಹ ಹುಲು ಮಾನವರು ಮಾತ್ರ ಹುಟ್ಟಿನಿಂದ ಬಂದ ಜಾತಿಯನ್ನು ಪ್ರಧಾನವೆಂದು ಭಾವಿಸುತ್ತಾರೆ. ನಾವು ಕುಡಿಯುವ ನೀರು, ಸೇವಿಸುವ ಗಾಳಿ, ಬದುಕುವ ನೆಲವೊಂದೇ. ನಮ್ಮೆಲ್ಲರ ರಕ್ತದ ಬಣ್ಣವೂ ಒಂದೇ. ಜಗದ್ಗುರುಗಳು ಪ್ರಾಪಂಚಿಕ ವಿಧಿ ನಿಯಮಗಳನ್ನು ಮೀರಿದವರು. ಯಾವ ಜಗದ್ಗುರುವೂ ತನಗೆ ಇತರರಿಗಿಂತ ಎತ್ತರದ ಸಿಂಹಾಸನ ಬೇಕೆಂದು ಹೇಳುವುದಿಲ್ಲ. ಆದರೆ ಲೌಕಿಕರಾದ ನಾವು ಆರ್ಷೇಯವಾಗಿ ಜಾತಿಧರ್ಮವನ್ನು ಅನುಸರಿಸಿ ಕೊಂಡು ಬಂದು ಬಿಟ್ಟಿದ್ದೇವೆ. ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳಿಗೆ ಎಲ್ಲಾ ಊರುಗಳಲ್ಲಿ ಇತರರ ಆಸನಗಳಿಗಿಂತ ಮೂರಡಿ ಎತ್ತರದ ಸಿಂಹಾಸನ ನಿರ್ಮಿಸುವುದನ್ನು ನೀವು ಪೇಪರುಗಳಲ್ಲಿ ಓದಿದ್ದೀರಿ; ಚಿತ್ರ ನೋಡಿದ್ದೀರಿ. ಇಡೀ ಲೋಕವೇ ಪಾಲಿಸಿಕೊಂಡು ಬರುವ ಸತ್ಸಂಪ್ರದಾಯವನ್ನು ನಾವು ಕಪಿಲಳ್ಳಿಯ ಜನರು ಮುರಿದರೆ ಅದು ಧರ್ಮನಿಂದನೆಯ ದುಷ್ಕೃತ್ಯವಾಗುತ್ತದೆ. ನೀವೆಲ್ಲರೂ ಕುಲಾಚಾರ ಪದ್ಧತಿಯ ಸಂಪ್ರದಾಯದಂತೆ ನಡಕೊಂಡು ಕಪಿಲಳ್ಳಿಯ ಮರ್ಯಾದೆ ಉಳಿಸಿ ಕಪಿಲೇಶ್ವರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತಿದ್ದೇನೆ – ಎಂದು ಕೇಳಿಕೊಂಡ ಮೇಲೆ ಬಹುಮತೀಯ ಶೂದ್ರ ಜಾತಿ ಸಂಘದ ಕುಲಬಾಂಧವರು ಸರಿ ಎಂದು ತಲೆದೂಗಿ ಮನೆಗಳಿಗೆ ತೆರಳಿ, ಇಮ್ಮಡಿ ಉತ್ಸಾಹದಿಂದ ಆಹಾರ, ನಿದ್ರಾ, ಮೈಥುನಾದಿ ಕ್ರಿಯೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಕಪಿಲಳ್ಳಿಗೆ ಕಪಿಲಳ್ಳಿಯೇ ಕಾತರದಿಂದ ಕಾಯುತ್ತಿದ್ದ ಧಾರ್ಮಿಕ ಪ್ರವಚನದ ದಿನ ಬಂದೇ ಬಿಟ್ಟಿತು. ಸಭಾ ಸ್ಥಳಕ್ಕೆ ಮೊದಲು ಆಗಮಿಸಿದ ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳ ಪಾದಕ್ಕೆ ಪೊಡಮಟ್ಟ ಸಂಘದ ಅಧ್ಯಕ್ಷರು ವೇದಿಕೆಯ ಆಸನದ ಎತ್ತರ ವ್ಯತ್ಯಾಸವನ್ನು ಜಗದ್ಗುರುಗಳ ಗಮನಕ್ಕೆ ತಂದು, ಕಪಿಲಳ್ಳಿಯಲ್ಲಿ ಬಹುಮತೀಯ ವಿಪ್ರಜಾತಿ ಸಂಘದವರು ಜಾತಿಭೇದಕ್ಕೆ ಕಾರಣರಾಗಿದ್ದಾರೆಂದೂ, ಜಗದ್ಗುರುಗಳು ಅದನ್ನು ವೇದಿಕೆಯಿಂದ ಖಂಡಿಸಬೇಕೆಂದೂ ಬಿನ್ನವತ್ತಳೆ ಸಮರ್ಪಿಸಿದರು. ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳನ್ನು ಎಡಭಾಗದ ಸಿಂಹಾಸನದಲ್ಲಿ ಕೂರಿಸಿ, ಧರ್ಮ ಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟಸುಬ್ಬಯ್ಯನವರು, ಅರ್ಚಕ ಪುರೋಹಿತ ವೇದಮೂರ್ತಿ ಗಣಪತಿ ಸುಬ್ರಾಯ ಜೋಯಿಸರು ಮತ್ತು ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ಬಲಭಾಗದ ಸಿಂಹಾಸನದ ಬಳಿಯ ಚೆಯರುಗಳಲ್ಲಿ ಕೂತರು. ಬಹುಮತೀಯ ಶೂದ್ರ ಜಾತಿ ಸಂಘದ ಅಧ್ಯಕ್ಷರು, ಪಂಚಾಯತು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಎಡಭಾಗದ ಸಿಂಹಾಸನದ ಹತ್ತಿರ ವಿರಾಜಮಾನರಾದರು. ಅತಿ ವಿಪ್ರರ ವೇದಘೋಷ, ಶಂಖಜಾಗಟೆ, ಹದಿನೆಂಟು ಚೆಂಡೆ, ಸುಮಂಗಲಿಯರ ಕಳಶ ಕನ್ನಡಿಗಳ ಸ್ವಜಾತಿ ಬಾಂಧವರ ಭವ್ಯ ಮೆರವಣಿಗೆಯಲ್ಲಿ ಸಭೆಗೆ ಆಗಮಿಸಿದ ಬಹುಮತೀಯ ವಿಪ್ರಜಾತಿ ಸಂಘದ ೧೦೮ ಶ್ರೀಗಳಾದ ಜಗದ್ಗುರುಗಳು, ಗಿಂಡಿಮಾಣಿಗಳು ವೇದಿಕೆಯನ್ನು ಗೋಮಯದಿಂದ ಶುದ್ಧೀಕರಿಸಿದ ಮೇಲೆ, ಬಲಭಾಗದ ಮೂರಡಿ ಪ್ಲಾಟುಫಾರಂಮ್ಮಿನ ಮೇಲಿದ್ದ ಎರಡಡಿ ಎತ್ತರದ ಸಿಂಹಾಸನದಲ್ಲಿ, ಪದ್ಮಾಸನ ಹಾಕಿ ಧ್ಯಾನಸ್ಥ ಭಂಗಿಯಲ್ಲಿ ಕೂತು ತಮ್ಮ ಅಪೌರುಷೇಯ ಮಿಂಚಿನ ನೋಟದಿಂದ ಕಪಿಲಳ್ಳಿಗೆ ಕಪಿಲಳ್ಳಿಯನ್ನೇ ಬ್ರಹ್ಮಾನಂದದ ಆಮೋದ ಪ್ರಮೋದದಲ್ಲಿ ತೇಲುವಂತೆ ಮಾಡಿಬಿಟ್ಟರು.

ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳು ಧಾರ್ಮಿಕ ಪ್ರವಚನ ಆರಂಭಿಸುವಾಗ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಈಗ ತಮ್ಮ ಜಗದ್ಗುರುಗಳು ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳ ಬುಡಕ್ಕೇ ನಾಟುವಂತಹ ಮಾತುಗಳನ್ನಾಡುತ್ತಾರೆಂದು ಕಿವಿಯರಳಿಸಿ ಪ್ರವಚನ ಕೇಳತೊಡಗಿದರು. ಬಹುಮತೀಯ ಶೂದ್ರ ಜಾತಿ ಸಂಘದ ಜಗದ್ಗುರುಗಳು – ಅಖಿಲ ಬ್ರಹ್ಮಾಂಡಕ್ಕೆ ವೇದಗಳೇ ಆದಿಗ್ರಂಥಗಳು. ನಾಲ್ಕು ವೇದಗಳು ನಾಲ್ಕು ವರ್ಣಗಳಂತೆ. ವೇದಗಳಿಗೆ ಹೇಗೆ ವಿಭಿನ್ನ ಹೆಸರುಗಳೋ ಹಾಗೆ ವರ್ಣಗಳಿಗೂ ವಿಭಿನ್ನ ಹೆಸರುಗಳು. ನಾವೆಲ್ಲರೂ ಆರ್ಷೇಯವಾಗಿ ಜಾತಿ ಧರ್ಮವನ್ನು ಪಾಲಿಸಿಕೊಂಡು ಬಂದವರು. ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದರಲ್ಲಿ ನಮ್ಮೆಲ್ಲರ ಶ್ರೇಯಸ್ಸು ಅಡಗಿದೆ. ಬ್ರಹ್ಮೋಚ್ಛಿಷ್ಟ ಜಗತ್ಸರ್ವಂ ಎಂದು ನನ್ನ ಆಧ್ಯಾತ್ಮ ಗುರುಗಳು ನನಗೆ ಉಪದೇಶಿಸುತ್ತಿದ್ದರು. ನಾನು ಶೂದ್ರ ಜಾತಿಯ ಜಗದ್ಗುರುವಾದರೆ ಅವರು ವಿಪ್ರಜಾತಿಯ ಜಗದ್ಗುರುಗಳು. ಅವರು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಾದರೆ ನಾನು ಅವರ ಮೆಚ್ಚಿನ ಭಂಟ ಹನೂಮಂತನು – ಎಂದವರೇ ಸಿಂಹಾಸನದಿಂದ ಕೆಳಗಿಳಿದು, ಬಲಭಾಗಕ್ಕೆ ಹೋಗಿ, ಬಹುಮತೀಯ ವಿಪ್ರಜಾತಿ ಸಂಘದ ಜಗದ್ಗುರುಗಳ ಸಿಂಹಾಸನದೆದುರು ಸಾಷ್ಟಾಂಗ ನಮಸ್ಕಾರ ಮಾಡಿದರು.

ಕಪಿಲಳ್ಳಿಗೆ ಕಪಿಲಳ್ಳಿಯೇ ಬೆರಗಾಗಿ, ಅಪೂರ್ವ ಐತಿಹಾಸಿಕ ಘಟನೆಯೊಂದಕ್ಕೆ ಮೂಕವಿಸ್ಮಿತ ಸಾಕ್ಷಿಯಾಗಿ ನಿಂತುಬಿಟ್ಟಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವ ಹಾಡನು ನಾ ಹಾಡಲಿ
Next post ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…