Home / ಕಥೆ / ಸಣ್ಣ ಕಥೆ / ಅಜ್ಜಿಯ ಕರುಳು

ಅಜ್ಜಿಯ ಕರುಳು

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇಳಬೇಕೆಂಬ ತವಕವೂ ತುಂಬಾ ಆಗಿತ್ತು.

ನಾನು ಅವನ ಮನೆಗೆ ಹೋದಾಗ ಸುಬ್ಬಣ್ಣ ದಂಪತಿಗಳಿದ್ದಿಲ್ಲ. ಅವನ ತಾಯಿ ಗೋಪಜ್ಜಿ ಮನೆಯನ್ನು ಕಾಯುತ್ತಿದ್ದಳು. ನನ್ನನ್ನು ಕಂಡು “ಯಾವಾಗ ಬಂದೆ ತಮ್ಮಾ? ಆರೋಗ್ಯವೇ?” ಎಂದು ಕೇಳುತ್ತ ಹಕ್ಕೆ ಹೊಳ್ಳಿಯಮೇಲೆ ಕಂಬಳಿ ಹಾಸಿದಳು.

“ಸುಬ್ಬಣ್ಣ ಮನೆಯಲ್ಲಿಲ್ಲವೆಂತ ತೋರುತ್ತದೆ.” ಅತ್ತಿತ್ತ ನೋಡುತ್ತ ಹೇಳಿದೆ.

“ಅವರಿಬ್ಬರೂ ತೋಟಕ್ಕೆ ಹೋಗಿದ್ದಾರೆ. ಕೂತುಕೊ” ಅಂದವಳೇ ಒಳಗೆ ಹೋದಳು.

ನಾನು ಹೊಳ್ಳಿಯಮೇಲೆ ತಿರುಗಾಡುತ್ಯ, ಗೋಡೆಯ ಮೇಲಿನ ಈಶ್ವರ ಗಣಪತಿಗಳ ಚಿತ್ರವನ್ನು ನೋಡುತ್ತಿರುವಾಗ ಗೋಪಜ್ಜಿ ಹೊರಗೆ ಬಂದು “ಮತ್ತೇನು ಸುದ್ದಿ? ಈ ಸಲವಾದರೂ ಮದುವೆ ಮಾಡಿಕೊಳ್ಳುತ್ತಿಯೋ ಇಲ್ಲವೊ? ದುಗ್ಗೂರಿನ ಗಣಪಯ್ಯ ಭಟ್ಟರಿಗೊಂದು ಮಗಳಿದ್ದಾಳೆ. ಓದು ಬರೆಯಲು ಬರುತ್ತದೆ. ಬಿಳೇ ಚರ್ಮದ ಹುಡುಗಿ, ನಿನಗೆ ಚೆನ್ನಾಗಿ ಒಪ್ಪುತ್ತಾಳೆ. ನೋಡು, ಗೋಪಜ್ಜಿಯ ಮಾತು ಅಂತ ಕಡೆಗಣಿಸಬೇಡ, ನೀನು ನೋಡಬೇಕೆಂದಿದ್ದರೆ ನಿನ್ನ ಕಣ್ಣಿಗೆ ಅವಳನ್ನು ಹಾಯಿಸಿಕೊಡುತ್ತೇನೆ. ಹೇಗೆ?” ಎಂದು ನಾನು ಯಾವಾಗ ಬಂದರೂ ಎತ್ತುವ ವಿಷಯವನ್ನೇ ಸುರುಮಾಡಿದಳು.

“ನೋಡುವ ಗೋಪಜ್ಜಿ, ನನಗೆ ಇನ್ನೂ ಎರಡು ವರ್ಷ ಕಲಿಯಬೇಕು. ”

“ಹೀಗೇ ಕಲಿಯುತ್ತ ಹೋಗುವದಾದರೂ ಎಷ್ಟು ವರ್ಷ? ನಿನ್ನ ವಯಸ್ಸಿಗೆ ನಮ್ಮ ಮನೆಯವರಿಗೆ ಸುಬ್ಬ ಹುಟ್ಟಿದ್ದ. ಕಲಿಯುವದರಲ್ಲೇ ಅರ್ಧ ಆಯುಷ್ಯ ಹೋದರೆ ಸಂಪಾದನೆ ಮಾಡುವದು ಯಾವಾಗ? ಇನ್ನು ಕಲಿಯಬೇಕೆಂದೇ ಇದ್ದರೆ ಮದುವೆ ಮಾಡಿಕೊಂಡು ಹೋದರಾಯಿತು. ಮನೆಯಲ್ಲಿ ಅಬ್ಬೆಗೂ ಸಹಾಯಕ್ಕೆ ಸೊಸೆಯಾಯಿತು. ಮೇಲಾಗಿ ಇಂಥ ಹುಡುಗಿಯರು ಸಿಗುವದು ಅಪರೂಪ….” ನಾನು ಗಣಪತಿಯು ಇಲಿಯ ಮೇಲೆ ಸವಾರಿಮಾಡುವ ಚಿತ್ರವನ್ನೇ ನೋಡುತ್ತ ಅವಳ ಮಾತಿಗೆಲ್ಲ ‘ಹುಂ’ ಅಂದೆ.

ಮತ್ತೆ ಒಳಗೆ ಹೋಗಿ ಗೋಪಜ್ಜಿ ಅವಲಕ್ಕಿ ಚಹ ತಂದಳು.

ಅವಲಕ್ಕಿಯನ್ನು ಜಗೆಯುತ್ತ ಗೋಪಜ್ಜಿಯು ಮತ್ತೆ ಎತ್ತಿದ ವಿಷಯವನ್ನು ಜಾರಿಸಲೆಂದು ಸುಬ್ಬನ ಮಾಣಿ ಎಲ್ಲಿ? ಅಪ್ಪ ಅಬ್ಬೆಯ ಜೊತೆಗೆ ತೋಟಕ್ಕೆ ಹೋಗಿದ್ದಾನೆಯೇ?” ಎಂದು ಕೇಳಿದೆ.

ನಾನು ಜಗೆಯುತ್ತಿದ್ದ ಅವಲಕ್ಕಿ ಇನ್ನೂ ಗಂಟಲಲ್ಲಿ ಇಳಿದಿಲ್ಲ. ಆಶ್ಚರ್ಯವಾಯಿತು. ಗೋಪಜ್ಜಿಯ ಕಣ್ಣಲ್ಲಿನೀರು ಒಡೆದು “ತಮ್ಮಾ ಇಶ್ವೇಶ್ವರ ಸತ್ತು ಹೋಗಿ ವರುಷವಾಗುತ್ತ ಬಂತು” ಎಂದು ಅವಳು ಅಳ ಹತ್ತಿದಳು.

ನನಗೆ ಸುಬ್ಬಣ್ಣನ ಮಗ ತೀರಿಕೊಂಡ ವಿಷಯ ಗೊತ್ತಿದ್ದಿಲ್ಲ. ಎಷ್ಟೋ ವರ್ಷ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಸುಬ್ಬಣ್ಣ ದಂಪತಿಗೆ ಒಂದು ಗಂಡು ಹುಟ್ಟಿತೆಂಬ ಸುದ್ದಿ ಮಾತ್ರ ನನಗೆ ಮುಟ್ಟಿತ್ತು. ಮನೆಗೆ ಬಂದ ನನಗೆ ಸುಬ್ಬಣ್ಣನ ಮಾಣಿ ಸತ್ತ ಸುದ್ದಿಯನ್ನು ಯಾರೂ ತಿಳಿಸಲೇ ಇಲ್ಲ. ಒಂದುವೇಳೆ “ನಾನು ಸುಬ್ಬಣ್ಣನ ಮನೆಗೆ ಹೋಗಿಬರುತ್ತೇನೆ” ಎಂದು ಮನೆಯಲ್ಲಿ ಹೇಳಿ ಹೊರಟಿದ್ದರೆ ಈ ಸಂಗತಿ ನನಗೆ ಮೊದಲೇ ಗೊತ್ತಾಗುತ್ತಿತ್ತೇನೋ.

“ಏನಾಗಿತ್ತು ವಿಶ್ವೇಶ್ವರನಿಗೆ?”

“ಅದನ್ನು ಹೇಳಿ ಏನು ಪ್ರಯೋಜನ?….ನನ್ನ ಕೈಯಿಂದೇ ಅವನ ಮರಣ ಸಂಭವಿಸಿತೆಂಬಂತೆ ನಮ್ಮ ಮನೆಯ ಮಾಣಿ, ಸೊಸೆ ಎಲ್ಲ ಹೇಳುತ್ತಾರೆ…. ಪೂರ್ವಜನ್ಮದಲ್ಲಿ ಯಾವ ಪಾಪ ಮಾಡಿದ್ದೆನೋ ದೇವರೇ ಬಲ್ಲ…. ಕೆಟ್ಟ ಜೀವ ಹೋಗುವದೂ ಇಲ್ಲ”

“ಆದದ್ದಾದರೂ ಏನೂ ಗೋಪಮ್ಮ? ಹೀಗೆಲ್ಲ ಮನಸ್ಸಿಗೆ ಹಚ್ಚಿ ಕೊಂಡರೆ ಹೇಗೆ? ಕೊಡುವವನೂ ಕೊಳ್ಳುವವನೂ ದೇವರಲ್ಲವೇ?”

“ನನಗೆ ಜೀವವನ್ನು ಕೊಟ್ಟು ಇನ್ನೂ ಕೊಂಡು ಹೋಗದ ದೇವರಿಗೆ ನಾನು ಹೇಳುವದು…. ”

“ಅದಿರಲಿ, ವಿಶ್ವೇಶ್ವರನಿಗೆ ಏನಾಗಿತ್ತು?”

“ತಮ್ಮಾ, ನಾನು ಸತ್ಯವನ್ನೇ ಹೇಳಿದರೂ ಯಾರು ನಂಬುತ್ತಾರೆ?…. ಅವನಿಗೆ ಜೋರು ಜ್ವರ ಬಂದಿತ್ತು. ದಾಕ್ತಾರರನ್ನು ಕರೆದು ಮದ್ದು ಮಾಡಿಸುತ್ತಿದ್ದ ಸುಬ್ಬ, ದಾಕ್ತಾರ, ಜ್ವರಕ್ಕೆ ಏನೇನೋ ಹೆಸರಿಟ್ಟು ಅನ್ನ ಆಹಾರ ಏನೂ ಕೊಡಕೂಡದು. ಕೇವಲ ಬಿಸಿನೀರು ಕೊಡಬೇಕು. ಮೇಲೆ ಮದ್ದು. ಹೇಳಿಹೋದ. ತುಸು ಗುಣವಾದರೂ ವಿಶ್ವೇಶ್ವರ ಹಾಸಿಗೆಯ ಮೇಲೆಯೇ ಇದ್ದ. ಒಂದುದಿನ ಮಾಣಿ (ಸುಬ್ಬಣ್ಣ) ಸೊಸೆ ಯಾರೂ ಇದ್ದಿಲ್ಲ. ಅಂಬೋಡೆ ಮಾಡಿದ್ದೆ. ಹೇಗೋ ವಿಶ್ವೇಶ್ವರನಿಗೆ ಅದರ ಸೂಟು ಹತ್ತಿತು. ಯಾರೂ ಇಲ್ಲದಾಗ ನನ್ನನ್ನು ಕರೆದು…. ಅಮ್ಮಾ ಅಂಬೋಡೆ ಮಾಡಿದ್ದಾರೆ. ಅಲ್ಲವೇ? ನನಗೆ ಒಂದು ಚೂರೂ ಕೊಡದೆ ಎಲ್ಲವನ್ನೂ ತಿಂದೆಯಾ? ಎಂದು ಬಾಯ್ದಿಟ್ಟ. ಎಷ್ಟೆಂದರೂ ಸಣ್ಣ ಮಾಣಿಯಲ್ಲವೇ? ಅವನು ಅಮ್ಮಾ ಎಂದು ಕೇಳಿದಾಗ ನನ್ನ ಕರಳು ಕರಗಿ ನೀರಾಯಿತು. ಅವನದೂ ಜೀವಾತ್ಮ ನೋಡು. ಒಂದು ಚೂರು ಕೊಟ್ಟರೆ. ಏನೂ ಆಗಲಿಕ್ಕಿಲ್ಲವೆಂದು ಕೊಟ್ಟೆ. ಅವನಿಗೆ ಸ್ವಲ್ಪ ಗುಣವೂ ಆಗಿತ್ತು ಮೇಲಾಗಿ.

ಜ್ವರ ಮರುಕಳಚಿತು. ಅವನನ್ನು ಬದುಕಿಸಿಕೊಳ್ಳಲಾಗಲಿಲ್ಲ. ಅವನು ಸತ್ತ ಮೇಲೆ ನಾನು ಅವನಿಗೆ ಒಂದು ಚೂರು ಅಂಬೋಡೆ ಕೊಟ್ಟಿದ್ದೇ ತಪ್ಪಾಯಿತೋ ಅಂತ ನನಗೆ ತೋರಹತ್ತಿತು. ಸುಬ್ಬನಿಗೂ ನಾನು ಕೊಟ್ಟ ಸಂಗತಿ ಹೇಳಿದೆ. ಕೂಡಲೆ ನಾನೇ ಕೈಯಾರೆ ಕೊಂದೆನೆಂದು ಗಂಡಹೆಂಡರಿಬ್ಬರೂ ಹೇಳಹತ್ತಿದರು. ನಾನು ಅಂಬೋಡೆ ಕೊಟ್ಟ ಸಂಗತಿಯನ್ನು ಹೇಳಿದ್ದೇ ತಪ್ಪಾಯಿತೆಂದು ತೋರುತ್ತದೆ.

ನೀನೇ ಹೇಳು ತಮ್ಮ, ಸಣ್ಣ ಬಾಲೆ `ಅಮ್ಮಾ ನನಗೆ ಕೊಡದೆ ಎಲ್ಲ ಅಂಬೋಡೆಯನ್ನೂ ನೀನೇ ತಿಂದೆಯಾ?’ ಅಂತ ಕೇಳಿದರೆ ಯಾರ ಎದೆ ಕರಗುವದಿಲ್ಲ ? ನೀನಾದರೆ ಕೊಡದಿರುವೆಯಾ ? ಅಂಬೋಡೆಯ ಚೂರು ತಿಂದರೆ ಸಾಯುತ್ತಾರೆಯೇ ? ಇಶ್ವೇಶ್ವರ ಹಾಗೆ ಕೇಳಿದಾಗ ನನ್ನ ಎದೆಯನ್ನು ಹಿಡಿದು ಹಿಂಡಿದ ಹಾಗಾಯಿತು. ಅಂಬೋಡೆಯ ಚೂರು ತಿಂದರೆ ಅವನು ಹೀಗೆ ಆಗುತ್ತಾನೆಂದು ನನಗೆ ಸ್ವಲ್ಪವಾದರೂ ತಿಳಿದಿದ್ದರೆ ನಾನು ಅವನಿಗೆ ಕೊಡುತ್ತಿದ್ದೆನೇ ? ನನಗೆ ಅವನ ಮೇಲೆ ಹಗೆಯೆ ? ನಾನೂ ಮಕ್ಕಳನ್ನು ಹೆತ್ತು ಸಾಕಿದವಳಲ್ಲವೇ ? ಸ್ವತಃ ಮೊಮ್ಮಗನು ಸಾಯಲಿ ಅಂತ ಕನಸು ಮನಸ್ಸಿನಲ್ಲಾದರೂ ನನಗೆ ಅನಿಸುವದು ಸಾಧ್ಯವೇ ? ಹೇಳುವವರು ಹೇಳಿ ಕೊಳ್ಳಲಿ. ನಾನು ಕೆಟ್ಟದ್ದಾಗಲಿ ಅಂತ ಕೊಟ್ಟೆನೋ, ಎದೆ ಕರಗಿ ಕೊಟ್ಟೆನೋ
ಪರಮಾತ್ಮನಿಗೆ ಗೊತ್ತಿದೆ. ಅವನು ಮಾತ್ರ ನನ್ನನ್ನು ಸರಿಯಾಗಿ ತಿಳಿದುಕೊಳ್ಳದೆ ಹೋಗುವದಿಲ್ಲ.

“ಸುಮ್ಮನಿರು ಗೋಪಮ್ಮ, ಮಗಸತ್ತ ದುಃಖದಿಂದ ಹಾಗೆ ಹೇಳಿರ ಬಹುದು ಸುಬ್ಬಣ್ಣ. ತನ್ನ ತಾಯಿಯ ಕರುಳಿನ ಜ್ಞಾನ ಅವನಿಗಿಲ್ಲವೇ? ದೇವರು ನಡೆಯಿಸಿ ಅವನಿಗೆ ಇನ್ನೊಬ್ಬ ಮಗ ಹುಟ್ಟಿದನೆಂದರೆ ಎಲ್ಲ ಸರಿ ಯಾಗುತ್ತದೆ” ಎಂದು ನಾನು ದೊಡ್ಡ ವೇದಾಂತಿಯಂತೆ ನುಡಿದೆ.

“ಎಲ್ಲಾದರೂ ಹಾಳುಬಾವಿಗೆ ಬಿದ್ದು ಈ ಕೆಟ್ಟ ಜೀವವನ್ನು ಬಿಡುವ ಅಂದರೆ ಮನಸ್ಸು ಕೇಳುವದಿಲ್ಲ. ಗೌರಿ (ಸೊಸೆ) ಮತ್ತೆ ಬಸುರಿ. ಮೊಮ್ಮಕ್ಕಳನ್ನು ತೋರಿಸಬೇಕೆಂದು ದೇವರಿಗೆ ಅನಿಸಿದರೆ ಅವರನ್ನು ಕಾಣುವವರೆಗೆ ನನ್ನನ್ನು ಇಟ್ಟೆ ಇಡುತ್ತಾನೆ. ಆದರೆ ಈಸಲ ನಾನು ಯಾವ ಗೋಜಿಗೂ ಹೋಗುವದಿಲ್ಲ. ಹರಿಹರಿ ಅನ್ನುತ್ತ ಮೂಲೆ ಹಿಡಿಯುತ್ತೇನೆ.”

“ಅದು ಒಳ್ಳೆಯದು.”

ಮೂರು ಸಂಜೆಯಾದರೂ ಸುಬ್ಬಣ್ಣ ಬರಲಿಲ್ಲವೆಂದು ಹೊರಟೆ. ಸಾಯಲು ಬಿದ್ದ ಮೊಮ್ಮಗನಿಗೆ ಅಂಬೋಡೆಯ ಚೂರನ್ನು ಕೊಟ್ಟ ಅಜ್ಜಿಯ ಕರುಳಿನ ಘನತೆಯನ್ನು ನೆನೆದು ನಕ್ಕೆ.
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...