ರೋಜಾ

ಚಿತ್ರ: ಅಲೆಕ್ಸಾ / ಪಿಕ್ಸಾಬೇ
ಚಿತ್ರ: ಅಲೆಕ್ಸಾ / ಪಿಕ್ಸಾಬೇ

ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು.  ಗಲ್ಲಿಯಲ್ಲಿ ಸಂಭ್ರಮ.  ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು.  “ನಾಳೆ ರೋಜಾ ಚಾಲು”  ಎಂದಳು.  ಅವಳ ಮೂರು ಗಂಡು ಮಕ್ಕಳು “ನಾವೂ ನಾಳೆಗೆ ರೋಜಾ ಇರ್ತೀವಿ” ಎಂದರು.

ಮಾತಿನಲ್ಲಿ ಚುರುಕಾಗಿದ್ದ ಎಂಟು ವರ್ಷದ ನಫೀಸಾ “ನಾನೂ ರೋಜಾ ಮಾಡ್ತೀನಿ ಅಮ್ಮಾ” ಎಂದಳು.

“ನಿನಗೆ ಆಗುದಿಲ್ಲ ಬಿಡು” ಎಂದ ಅವಳ ಅಣ್ಣ.

“ನಾನು ರೋಜಾ ಮಾಡ್ತೀನಿ” ನಫೀಸಾ ಹಟದ ಧೋರಣೆಯಲ್ಲಿ ಹೇಳಿದಳು.

“ಬೇಟಿ ರೋಜಾ ಅಂದ್ರ ಬಾಯಲ್ಲಿ ಹನಿ ನೀರೂ ಹಾಕಬಾರ್‍ದು.  ಹಾಗಾದರೆ ರೋಜಾ ಕಬುಲು ಆಗುವುದು.  ನೀನಿನ್ನೂ ಚಿಕ್ಕವಳು, ನಿನಗೆ ತ್ರಾಸಾಗುವುದು” ಸಾರಾಬೂ ಮಗಳನ್ನು ರಮಿಸಿದಳು.

“ನನ್ಗೇನೂ ಆಗುದಿಲ್ಲ ನಾನು ರೋಜಾ ಮಾಡ್ತೀನಿ” ಉತ್ಸಾಹ ತೋರಿದಳು ನಫೀಸಾ.

“ಒಂದು ಕಡ್ಡಿ ಕೂಡಾ ಬಾಯಲ್ಲಿ ಹಾಕಬಾರ್‍ದು.  ಅದೆಲ್ಲ ನಿನ್ನಿಂದ ಆಗುದಿಲ್ಲ.  ಇನ್ನಷ್ಟು ದೊಡ್ಡವಳಾದ ಮೇಲೆ ರೋಜಾ ಹಿಡಿಯುವಂತೆ ಬೇಟಿ” ತಂದೆ ಹುಸೇನಲಿ ಹೇಳಿದ.

“ನಾನು ರೋಜಾಮಾಡ್ತೀನಿ” ನಫೀಸಾ ಹಟ ಬಿಡಲಿಲ್ಲ.

“ಇನ್ ಷಾ ಅಲ್ಲಾ!” ಎಂದು ಸುಮ್ಮನಾದರು ಸಾರಾಬೂ-ಹುಸೇನಲಿ.

ಮಸೀದಿಯ ಮೀನಾರಿನಿಂದ ಸೈರಿಗೆ ಕರೆ ಕೇಳಿಸಿತು.  ಮಕ್ಕಳು ಉತ್ಸಾಹದಿಂದಲೇ ಎದ್ದರು.  ಮನೆಯಲ್ಲಿ ಇದ್ದದ್ದು ಮೂರು ರೊಟ್ಟಿ ಮಾತ್ರ.  ಮಕ್ಕಳು ಹಂಚಿಕೊಂಡು ತಿಂದು ನಿಯತ್ತು ಹೇಳಿ ರೋಜಾ ಹಿಡಿದರು.  ಸಾರಾಬೂ ಕರಿ ಚಹ ಕುಡಿದಳು.  ಹುಸೇನಲಿ ಹಮಾಲಿ ಮಾಡಬೇಕು ಅವನು ರೋಜಾ ಹಿಡಿಯಲಿಲ್ಲ.

ಹೊತ್ತೇರ ತೊಡಗಿದ್ದಂತೆ ಸಾರಾಬೂ ಚಿಂತೆಗೊಳಗಾದಳು.  ಮಗಳ ರೋಜಾ ಪೂರ್ತಿಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತು.  “ಹೇ ಅಲ್ಲಾಹುವೆ!  ಮಗು ಉಪವಾಸ ಅರ್ಧಕ್ಕೆ ನಿಲ್ಲಿಸಿದರೆ ತಪ್ಪು ಮನ್ನಿಸು” ಎಂದು ಹತ್ತಾರು ಸಲ ಪ್ರಾರ್ಥಿಸಿದಳು.

ನಫೀಸಾ ಮಾತ್ರ ಲವಲವಿಕೆಯಿಂದಲೇ ಇದ್ದಳು.  ಶಾಲೆಗೂ ಹೋಗಿ ಬಂದಳು.  ಒಂದು ಹನಿ ನೀರೂ ಎನ್ನಲಿಲ್ಲ.  ಮಧ್ಯಾಹ್ನದ ಇಳಿ ಹೊತ್ತಿಗೆ ಆಟದಲ್ಲಿ ಮಗ್ನಳಾದಳು.

ಸೂರ್ಯ ಮುಳುಗಿದ.  ಅಂದಿನ ರೋಜಾದ ವ್ರತ ಮುಗಿಯಿತು.

“ಬೇಟಿ ನಿನಗೆ ಹಸಿವು ಅನಿಸಲಿಲ್ಲವೆ?” ಸಾರಾಬೂ ಕೇಳಿದಳು.

“ಇಲ್ಲಾ ಅಮ್ಮಾ”

“ಸ್ವಲ್ಪೂ ತ್ರಾಸು ಅನಿಸಿಲ್ಲ” ಕೆದಕಿ ಕೇಳಿದ ಹಿರಿಯಣ್ಣ.

“ರೋಜಾ ಅಂದ್ರ ಉಪವಾಸ.  ಅದು ನಮ್ಗ ರೂಢಿ ಐತಲ್ಲ ಭಯ್ಯಾ” ಎಂದು ಗಳಿಬಿಳಿ ಮಾತಾಡಿ ಒಣಚುರುಮುರಿಯನ್ನು ಬಾಯಿ ತುಂಬಿಕೊಂಡಳು ನಫೀಸಾ.  ಸಾರಬೂ ಕಣ್ಣಲ್ಲಿ ಹನಿಯೊಡೆದಿತ್ತು.

*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...