ಚಿತ್ರ: ಖುಸೆನ್ ರುಸ್ತಮೌ
ಚಿತ್ರ: ಖುಸೆನ್ ರುಸ್ತಮೌ

ಸಿನಿಮಾ ಮುಗಿದು ನಾಯಕ ತನ್ನ ಹೋಟೇಲಿಗೆ ಮರಳಿದಾಗ ಸಾಧಾರಣ ಒಂದೂವರೆ ಗಂಟೆಯಾಗಿರಬಹುದು. ಅವನ ವಾಚು ಕೆಟ್ಟುಹೋಗಿತ್ತು. ಹೋಟೇಲು ಕಾಂಪೌಂಡಿನ ಉಕ್ಕಿನ ಗೇಟು ತುಸುವೆ ತೆರೆದಿತ್ತು. ಬದಿಗೆ ಗೂಡಿನಲ್ಲಿ  ಕುಳಿತಿದ್ದ ಕಾವಲಿನವ ತೂಕಡಿಸುತ್ತಿದ್ದ. ತೂಕಡಿಸುತ್ತಿದ್ದ ಕಾವಲಿನವನನ್ನು ಎಬ್ಬಿಸಲು ನಾಯಕ ಬರಿಗೈ ಯಿಂದ ಗೇಟಿಗೆ ಬಡಿದು ಶಬ್ದ ಮಾಡಿದ. ಶಬ್ದದಿಂದ ಎಚ್ಚರವಾಗಿ ಕಾವಲುಗಾರ ಮೆಶೀನಿನಂತೆ ಎದ್ದು ಬಂದ. ಗೇಟಿನ ಒಂದರ್ಧವನ್ನು ಎರಡೂ ಕೈಗಳಿಂದ ಬದಿಗೆ ಸರಿಸಿ ನಾಯಕನನ್ನು ಒಳಕ್ಕೆ ಬಿಟ್ಟಿ ಮೇಲೆ ಗೇಟು ಮುಚ್ಚಿದ, ಮುಚ್ಚಿಬಿಟ್ಟು ಬೀಗದ ಕೀಲಿಗೈ ತಿರುಗಿಸಿದ ಶಬ್ದ ಕೇಳಿಸಿತು. ತನಗಾಗಿ ಆತ ಕಾದು ಕುಳಿತಿದ್ದಂತೆ ನಾಯಕನಿಗೆ ತೋರಿ, ಅವನಿಗೆ ಥ್ಯಾಂಕ್ಸ್ ಹೇಳಬೇಕೆಂದುಕೊಂಡ. ಆದರೆ ಅಷ್ಟರಲ್ಲಿ ಕಾವಲುಗಾರ ಕತ್ತಲೆ ಯಲ್ಲಿ ಮಾಯವಾಗಿದ್ದ.

ನಾಯಕನ ಕೈ ಯಾಂತ್ರಿಕವಾಗಿ ಜೇಬಿಗಿಳಿದು ತನ್ನ ರೂಮಿನ ಕೀಯನ್ನು ಹುಡುಕಿದರೆ ಕೀ ಸಿಗಲಿಲ್ಲ. ಶರ್ಟಿನ ಜೇಬುಗಳನ್ನು ಶೋಧಿಸಿದ ಮೇಲೆ ಪ್ಯಾಂಟಿನ ಜೇಬುಗಳನ್ನೂ ಒಂದೊಂದಾಗಿ ಬುಡಮೇಲಾಗುವಂತೆ ಶೋಧಿಸಿ ಹತಾಶನಾದ. ಕೈಗಳು ಪುನಃ ಪುನಃ ಒಂದು ಜೇಬಿನಿಂದ ಇನ್ನೊಂದಕ್ಕಿಳಿದು ಒಳಗಿನ ಕತ್ತಲೆಯಲ್ಲಿ ಬೆರಳುಗಳು ತಡಕಾಡಿದವು. ತಡಕಾಡಿದಾಗ ಏನೋ ಬಿಲ್ಲುಗಳು. ಕಾಗದದ ಚೂರುಗಳು, ಚಿಲ್ಲರೆ ಕಾಸುಗಳಲ್ಲದೆ ಕೀ ದೊರೆಯಲಿಲ್ಲ. ಆಮೇಲೆ ಪರ್ಸಿನೊಳಗೆ ಚಿಲ್ಲರೆಯೊಂದಿಗೆ ಒಂದು ಕೀ ಸಿಕ್ಕಿತು, ಅದು ಸಾಧಾರಣ ಅಳತೆಯ ಗಾದ್ರೆಜ್ ಕೀ ಎಂಬುದನ್ನು ಮಬ್ಬುಗತ್ತಲೆ ಯಲ್ಲಿ ನಾಯಕ ಕಂಡುಕೊಂಡ, ಇದೇ ರೂಮಿನ ಕೀ ಆದರೆ ತನ್ನ ಮನೆಯ ಕೀ ಯಾವುದು? ಮನೆಯದು ಯಾವ ಬ್ರಾಂಡಿನ ಕೀ ಎಂಬುದು ನೆನಪಿರಲ್ಲ. ಇಷ್ಟು ವರ್ಷಗಳಿಂದ ತಾನದನ್ನು ಉಪಯೋಗಿಸುತ್ತಿದ್ದರೂ ಕೂಡ ನೆನಪಿಲ್ಲ. ಪರಿಚಯವಿಲ್ಲ, ಒಂದೂ ಇಲ್ಲ. ಛೀ, ಹೀಗೆಂದು ಒಪ್ಪಿಕೊಳ್ಳಬೇಕಾದರೆ ಎಷ್ಟೊಂದು ಧೈರ್ಯ ಬೇಕಾಗುತ್ತದೆ! ತನಗದು ಉಂಟೋ ಎಂಬ ಬಗ್ಗೆ ಅವನಿಗೆ ಸಂದೇಹ ಬಂತು. ಸುಳ್ಳು ಹೇಳುವುದಕ್ಕೆ ಧೈರ್ಯ ಬೇಕು. ಸತ್ಯ ಹೇಳುವುದಕ್ಕೂ ಬೇಕು, ಆದರೆ ತನಗೆ ತಾನೇ ಸತ್ಯ ಒಪ್ಪಿಕೊಳ್ಳುವುದಕ್ಕೆ ಎಲ್ಲಿಲ್ಲದ ಧೈರ್ಯ ಬೇಕಾಗುತ್ತದೆಂಬುದು ಇಂಥ ಸಂದರ್ಭ ಗಳಲ್ಲಿ ಸ್ಪಷ್ಟವಾಗಲು ಪ್ರಯತ್ನಿಸುತ್ತದೆ ಎಂದು ಅವನಿಗೆ ತೋರಿತು.

ಅಂದರೆ, ಒಂದೋ ಮನೆಯ ಕೀ ಇಲ್ಲದಿದ್ದರೆ ರೂಮಿನದ್ದು ಕಳೆದು ಹೋಗಿರ ಬೇಕು. ಯಾವುದು ಕಳೆದು ಹೋದರೂ ಕಷ್ಟ ಕಷ್ಟವೇ. ಆದರೆ ರೂಮಿನ ಕೀ ಕಳೆದು ಹೋದದ್ದಾದರೆ. ತಾನು ಇನ್ನೊಬ್ಬರಿಗೆ ಉತ್ತರ ಹೇಳಬೇಕಾಗುತ್ತದೆಂಬುದು ಹೆಚ್ಚು. ಇಲ್ಲಿ ಜವಾಬ್ದಾರಿಯ ನೈತಿಕ ಪ್ರಶ್ನೆಯಿದೆ. ವಿಶ್ವಾಸದ ಪ್ರಶ್ನೆಯಿದೆ. ತನಗೆ ತಾನು ಜವಾಬ್ದಾರನಾಗಿರುವುದೇ ಕಷ್ಟ. ಅದಕ್ಕಿಂತಲೂ ಕಷ್ಟ ಇನ್ನೊಬ್ಬನಿಗೆ ಜವಾಬ್ದಾರ ನಾಗಿರುವುದು, ಪ್ರಾಮಾಣಿಕ ರೀತಿಯಿಂದ ವರ್ತಿಸುವವರಿಗೆ ಮಾತ್ರ. ಆದರೆ ಈ ಹೊಟೇಲು ಮ್ಯಾನೇಜರ ತನ್ನಂಥ ಅಪರಿಚಿತ ಜನರ ಮೇಲೆ ರೂಮುಗಳ, ಬೀಗದ, ಇನ್ನಿತರ ರಕ್ಷಣೆಯ ಹೊಣೆಯನ್ನು ಅವರು ಹೇಳಿದ ವಿಳಾಸಗಳ, ಹಾಕಿದ ರುಜುಗಳ ಆಧಾರದ ಮೇಲೆ ಮಾತ್ರ ಹೊರಿಸಲು ಸಿದ್ಧನಾಗಿದ್ದಾನಲ್ಲ! ಅಥವ ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ವಂತಕ್ಕೆ ತಾನು ಜವಾಬ್ದಾರನಾಗಿರುವುದರಿಂದಲೆ ತಾನೀ ರೀತಿ ಚಡಪಡಿಸುತ್ತಿದ್ದೇನೆಯೇ? ಇದೆಂಥ ವಿಚಿತ್ರ ಬಂಧ! ಇದನ್ನು ಕಡಿದುಹಾಕದಿದ್ದರೆ ತನಗೆ ಉಸಿರಾಟವಿಲ್ಲವೆಂಬಷ್ಟು ಕಿರುಕುಳ ಅವನಿಗೆ ಅನುಭವವಾಯಿತು.

ಆದರೂ ಈ ಕೀ ಎಲ್ಲಿ ಕಳೆದುಹೋಯಿತು? ಥಿಯೇಟರಿನಲ್ಲಿ ತಾನು ಆರಾಮವಾಗಿ ಕೂತು ಮುಂದಿನ ಸೀಟಿನ ಮೇಲೆ ಕಾಲು ಚಾಚಿ ಜೊಂಪು ಹತ್ತಿದ್ದಾಗ ಇದು ಬಿದ್ದು  ಹೋಯಿತೆ? ಬಿದ್ದ ಶಬ್ದ ಕೂಡ ಹತ್ತಿರದ ಹೆಣ್ಣಿನ ಬಳೆಗಳ ಶಬ್ದದಲ್ಲಿ ತನಗೆ ಸ್ಪಷ್ಟವಾಗುವಂತಿರಲಿಲ್ಲ. ಅವಳ ಮುಖವನ್ನೂ ನೋಡಿರಲಿಲ್ಲ. ಆದರೆ ಹತ್ತಿರ ಕೂತ ಗಂಡಸಿನೊಂದಿಗೆ ಗುಸುಗುಸು ಮಾತಾಡುತ್ತ ಕೈಯಾಡಿಸುತ್ತಿದ್ದರೆ ಈಚೆಯವನಿಗೆ ತೊಂದರೆಯೆಂಬುದನ್ನು  ಯಾರು ತಿಳಿಯುತ್ತಾರೆ? ಬೇರೆಯವರ ಸುಖದುಃಖ ಯಾರು ಕೇಳುತ್ತಾರೆ?

ಈ ವಿಚಾರಗಳಿಂದ ನಾಯಕ ಪ್ರಸ್ತುತಕ್ಕೆ ಬಂದ. ರೂಮಿಗೆ  ಹೋಗಿ ತನ್ನಲ್ಲಿರುವ ಕೀಯಿಂದ ಬಾಗಿಲು ತೆರೆಯಲು ಶ್ರಮಿಸುವುದು. ಒಂದು ವೇಳೆ ಬಾಗಿಲು ತೆರೆಯದೇ ಇದ್ದರೆ ಆಗ ಕಳೆದುಹೋದ ಕೀ ಹೊಟೇಲಿನದ್ದು, ಇರುವುದು ಮನೆ ಯದ್ದು ಎಂದಾಗುತ್ತದೆ. ತೆರೆದರೆ ಅದು ಹೊಟೇಲಿನದ್ದೇ ಎಂದು ಖಚಿತವಾಗುತ್ತದೆ. ಆದರೆ ಕೆಲವೊಮ್ಮೆ ಒಂದೇ ಕೀ ಯಿಂದ ಒಂದಕ್ಕಿಂತ ಹೆಚ್ಚು ಬೀಗಗಳನ್ನು ತೆರೆಯುವುದು ಸಾಧ್ಯವಾಗುವುದುಂಟು. ಅಂಥ ಪರಿಸ್ಥಿತಿ ಕಷ್ಟ. ಯಾಕೆಂದರೆ ಆಗ ತನ್ನಲ್ಲಿರುವ ಕೀ ಸ್ವಂತದ್ದೋ ಹೊಟೇಲಿಗೆ ಸಂಬಂಧಿಸಿದ್ದೋ ಎಂಬುದರ ನಿರ್ಧಾರವನ್ನು ಹೊಟೇಲಿ ನವರಿಗೇ ಬಿಟ್ಟುಕೊಡಬೇಕಾದಿತು.

ನಾಯಕ ಹೊಟೇಲಿನ ಪೋರ್ಟಿಕೋಗೆ ಬಂದ. ಅಲ್ಲಿ ಸಣ್ಣ ಜೀರೋವಾಟ್ಟಿನ ಬುರುಡೆ ಉರಿಯುತ್ತಿತ್ತು. ಅದರ ಬದಿಗೇ ಲಿಫ್ಟು. ಲಿಫ್ಟಿನೊಳಗೆ ನಿಂತು ಸ್ವಿಚ್ಚು ಹಾಕಿ ಲಿಫ್ಟು ಮೇಲೇರುವುದಕ್ಕೆ ಕಾದರೂ ಅದು ಜಗ್ಗದಿರುವಾಗ ಅದಕ್ಕೆ ತೂಗಿ ಹಾಕಿದ ರಟ್ಟಿನ ಬೋರ್ಡು ಗಮನಕ್ಕೆ ಬಂತು. “ಕೆಲಸ ಮಾಡುವುದಿಲ್ಲ” ಎಂದು ಬರೆದ ಕೆಂಪಕ್ಷರಗಳು ಕತ್ತಲೆಯಲ್ಲಿ ಕಣ್ಣು ಮಿಟುಕಿಸುವಂತಿದ್ದವು. ತಾನು ಸಿನಿಮಾಕ್ಕೆ ಹೋದಾಗ ಅದು ಕೆಲಸ ಮಾಡುತ್ತಿತ್ತೆಂದು ನಾಯಕನಿಗೆ ನೆನಪು. ಈಗ ಸಂಪು ಹೂಡಿದಂತೆ ಸುಮ್ಮನೆ ಕುಳಿತಿದೆ ಎಂದರೆ ಇದಕ್ಕೆ ಕಾರಣವೇನೆಂದು ಹೊಟೇಲಿನ ಅಧಿಕಾರಿಗಳು ವಿಚಾರಿಸಬೇಕಿತ್ತು. ವಿಚಾರಿಸಿ ಈ ಯಂತ್ರವನ್ನು ರಿಪೇರಿ ಮಾಡಿಸಬೇಕಿತ್ತು. ಅಥವಾ ಅದನ್ನಲ್ಲಿಂದ ಕಿತ್ತುಹಾಕಬಹುದಿತ್ತು.

ಹೇಗಿದ್ದರೂ ಈಚೆ ಮೆಟ್ಟೆಲುಗಳಿರುವುದರಿಂದ ತೊಂದರೆಯಿರಲಿಲ್ಲ. ಮೆಟ್ಟಲೇರುತ್ತಿರುವಂತೆ ತಾನಿಳಿದುಕೊಂಡಿದ್ದ ರೂಮು ಯಾವ ಫ಼್ಲೋರಿನಲ್ಲಿದೆ ಎಂದು ನೆನಪು ಮಾಡುವುದಕ್ಕೆ ನಾಯಕ ಪ್ರಯತ್ನಿಸತೊಡಗಿದ. ಆಶ್ಚರ್ಯವೆಂದರೆ ನಿಜಕ್ಕೂ ಇದು ಪೂರ್ಣ ಮರೆತುಹೋಗಿತ್ತು. ಆದ್ದರಿಂದ ಒಂದುವೇಳೆ ಲಿಫ಼್ಟು ಕೆಲಸ ಮಾಡುತ್ತಿದ್ದರೂ ಇದರಿಂದ ಪ್ರಯೋಜನವಾಗುತ್ತಿರಲಿಲ್ಲವೆಂಬುದು ಈಗ ಮನವರಿಕೆ ಯಾಯಿತು. ಬೇಕಾಗಿದ್ದ ಫ಼್ಲೋರು ಮರೆತುಹೋಗಿರುವ ಕಾರಣ ಲಿಫ಼್ಟಿಗೂ ತನಗೂ ಈಗ ಯಾವ ಸಂಬಂಧವೂ ಇಲ್ಲವೆಂದು ಅವನಿಗೆ ತೋರಿತು. ಲಿಫ಼್ಟಿನೊಳಗೆ ಹೊಕ್ಕದ್ದೂ, ಸ್ವಿಚ್ಚು ಹಾಕಿದ್ದೂ, ಅದು ಹಾಳಾಗಿದೆಯೆಂದು ತಿಳಿದದ್ದೂ, ಹಾಳಾದ್ದರಿಂದ ಅದರ ಇರುವಿಕೆಗೆ ಅರ್ಥವಿಲ್ಲವೆಂಬ ದಿಕ್ಕಿನಲ್ಲಿ ಚಿಂತಿಸಿದ್ದೂ ಅವನ ಮಟ್ಟಿಗೆ ನಿಷ್ಫಲವಾದ ಕಾರ್ಯಗಳಾಗಿದ್ದವು. ಫ಼್ಲೋರು ಮರೆತುಹೋಗಿರುವುದಕ್ಕೆ ಕಾರಣ ಲಿಫ಼್ಟಿನ ಕುರಿತಾದ ನಿರರ್ಥಕ ಚಿಂತೆಗಳೇ ಆಗಿರಬೇಕೆಂದೆನಿಸಿ ಬೇರಾವುದೇ ನೆನಪುಗಳು ಬರಬೇಕಾದರೆ ಇವನ್ನು ತಲೆಯಿಂದ ಹೊರಗೋಡಿಸಬೇಕೆಂದುಕೊಂಡ. ಅದಕ್ಕಾಗಿ ಸಿನಿಮಾದ ಕುರಿತು ಚಿಂತಿಸಲು ಶ್ರಮಿಸಿದ. ಥಿಯೇಟರು ತಲುಪುವಾಗಲೆ ತಡವಾಗಿ ಹೋದ್ದರಿಂದ ಸಿನಿಮಾದ ಹೆಸರೆನೆಂದು ಕೊನೆಯತನಕವೂ ತಿಳಿಯಲಿಲ್ಲ. ಹತ್ತಿರದಲ್ಲಿ ಕುಳಿತ ಆ ಗಂಡಸನ್ನಾಗಲಿ, ಹೆಂಗಸನ್ನಾಗಲಿ ಕೇಳುವುದು ಅಷ್ಟು ಸರಿಯೆನಿಸಿರಲಿಲ್ಲ. ಆದರೆ ಈಗ ಸಿನಿಮಾದ ಕುರಿತು ಚಿಂತಿಸುವುದಕ್ಕೆ ಸಮಯವಿರಲಿಲ್ಲ. ಆ  ದಷ್ಟು ಬೇಗ ರೂಮಿಗೆ ಹೋಗಿ ಹಾಸಿಗೆಯಲ್ಲಿ ಮೈ ಚಾಚಬೇಕಾಗಿತ್ತು.

ಆದರೆ ರೂಮಿನ ನಂಬರೆಷ್ಟು? ಎಷ್ಟೆಂದು ನೋಡಿಕೊಳ್ಳುವುದಕ್ಕೆ ಮರೆತು ಹೋಗಿತ್ತು. ನೋಡುವ ಪ್ರಮೇಯವೆ ಬಂದಿರಲಿಲ್ಲ. ನೋಡಿದ್ದರೂ ಅದರ ನೆನಪಿಲ್ಲ. ರೂಮು ತೆಗೆದುಕೊಂಡೊಡನೆ ಅದರ ನಂಬರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಪ್ರಥಮ ಕರ್ತವ್ಯವಾಗಿತ್ತು. ನೆನಪಿನಲ್ಲಿ ಉಳಿಯದಿದ್ದರೆ ಬರೆದಿಟ್ಟುಕೊಳ್ಳಬಹುದಾಗಿತ್ತು, ಆದರೆ ಇದೆಲ್ಲ ಈಗ ಕಳೆದುಹೋದ ವಿಚಾರಗಳು. ಹೇಳಿ ಫಲವಿಲ್ಲ. ಮಾತ್ರವಲ್ಲ ಇಂತಹ ಪಶ್ಚಾತ್ ಚಿಂತನೆಯಿಂದ ತನ್ನ ರೂಮನ್ನು ಕಂಡುಹಿಡಿಯುವ ಜರೂರು ಸಮಸ್ಯೆಗೆ ಪರಿಹಾರ ದೊರೆಯುವಂತೆ ನಾಯಕನಿಗೆ ಕಾಣಿಸಲಿಲ್ಲ. ಆದ್ದರಿಂದ ಇದಕ್ಕೆ ಸೂತ್ರಗಳು ಯಾವ ಯಾವುವು ಎಂದು ನಾಯಕ ಎಣಿಕೆ ಹಾಕಿದ. ರಿಸೆಪ್ಷನಿನ ಎದುರುಗೋಡೆಯಲ್ಲಿ ತೂಗು ಹಾಕಿದ ವಿಳಾಸಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಗುರುತಿಸುವುದು ಸುಲಭವಾದ ಉಪಾಯವಾಗಿ ತೋರಿತು. ಅಲ್ಲಿ ಇಂತಹ ಎರಡು ಪಟ್ಟಿಗಳು ಕಂಡುಬಂದವು. ಇವುಗಳ ಅನೇಕ ಚೌಕಗಳ ಮೇಲೆ ನೆಂಬರುಗಳು, ಕೆಲವು ಚೌಕಗಳಲ್ಲಿ ಹೆಸರು ವಿಳಾಸಗಳ ವಿಸಿಟಿಂಗ್ ಕಾರ್ಡುಗಳ ತರಹ ವಿವಿಧ ಕಾರ್ಡುಗಳು ಇದ್ದವು. ಮತ್ತೆ ಮತ್ತೆ ಈ ಹೆಸರುಗಳನ್ನು ಓದಿದರೂ ನಾಯಕನಿಗೆ ತನ್ನ ಹೆಸರು ಕಾಣಿಸಲಿಲ್ಲ. ಒಂದು ಕ್ಷಣ ಇದು ತಾನಿಳಿದುಕೊಂಡ ಹೊಟೇಲ್ ಅಲ್ಲವೇನೋ ಎಂದು ದಿಗ್ಭ್ರಮೆ ಯುಂಟಾಯಿತು. ಅದಕ್ಕಾಗಿ ಸ್ವಂತ ಮನಸ್ಸಿನ ಮೇಲೆ ಜಿಗುಪ್ಸೆ ಯುಂಟಾಯಿತು. ಆದರೆ “ಇಂಪೀರಿಯಲ್ ಹೊಟೇಲ್” ಎಂದು ನಿಯೋನ್ ಬೆಳಕಿನಲ್ಲಿ ಮುಂಬದಿ ಯಲ್ಲೇ ಮೇಲೆ ಹೆಸರು ಹೊಳೆಯುತ್ತಿತ್ತು. ಅಲ್ಲದೆ ಈ ರಿಸೆಪ್ಷನ್ ರೂಮು, ಪೋರ್ಟಿಕೋ, ಪಠಾರದ ಪರಿಚಯವಿದ್ದಂತೆ ತೋರದಿರಲಿಲ್ಲ. ತನ್ನ ಹೆಸರನ್ನು ಇಲ್ಲಿ ತಗಲಿಸುವುದಕ್ಕೆ ರಿಸೆಪ್ಷನಿಸ್ಟ್ ಮರೆತಿರಬಹುದು. ಹಾಗಲ್ಲದಿದ್ದರೆ ತನ್ನ ಹೆಸರಿನಲ್ಲಿ ಯಾವ ಪ್ರಾಧಾನ್ಯವನ್ನೂ ಕಾಣದೆ ಬಿಟ್ಟದ್ದೂ ಆಗಿರಬಹುದು. ಹೆಸರುಗಳಲ್ಲಿ, ಇಂತಹ ತಾರತಮ್ಯ ಅವರು ತೋರಿಸುವುದಿದ್ದರೆ ಅದು ಖಂಡನಾರ್ಹ ಎನಿಸಿತು. ಅಂತೂ ಈ ಪಟ್ಟಿಗಳಲ್ಲೀಗ ಅವನ ಹೆಸರು ಇಲ್ಲದ್ದರಿಂದ ಹಟ್ಟಿಗಳ ಈ ಅಪೂರ್ಣಾವಸ್ಥೆಯಲ್ಲಿ ಯಾವ ಅರ್ಥವೂ ಕಾಣದೆ ಅದು ಮೋಜೆನಿಸಿತು.

ಆತ ಇನ್ನೊಂದು ರೀತಿಯಿಂದ ಈ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಪ್ರಯತ್ನಿಸತೊಡಗಿದ. ತನ್ನ ರೂಮಿನ ಬದಿಯ ರೂಮಿನಲ್ಲಿ ಒಬ್ಬ ಸಿಖ್ಖ ಉಳಕೊಂಡಿದ್ದಂತೆ ನೆನಪು ಬಂತು. ಆತ ಸಿಖ್ಖನೇ ಆಗಿರಬೇಕೆಂದೇನೂ ಇರಲಿಲ್ಲ. ತಲೆಗೂದಲು ದಾಡಿ ಬೆಳೆಸಿದ ಮಾತ್ರಕ್ಕೆ ಒಬ್ಬ ಸಿಖ್ಖನಾಗುವುದಿಲ್ಲ. ಹಿಂದೂ ಆಗಿರಬಹುದು. ಸಿಖ್ಖನೂ ಹಿಂದುವೂ ಅಲ್ಲದೆ ಬೇರೊಬ್ಬ ಮನುಷ್ಯನಾಗಿರಬಹುದು. ಅಂತೂ ಆತ ದಾಡಿವಾಲನೆಂಬುದು ನಿಶ್ಚಯ. ಆದರೆ ಆತ ತನ್ನ ರೂಮಿನ ಬಲಬದಿಗಿದ್ದನೋ ಎಡ ಬದಿಗಿದ್ದನೋ ಖಚಿತವಾಗಿ ನಾಯನಿಕಗೆ ನೆನಪಿಗೆ ಬರಲಿಲ್ಲ. ಈ ದಾಡಿವಾಲನ ರೂಮನ್ನು ಕಂಡು ಹುಡುಕುವುದು ಸಾಧ್ಯವಾದರೆ ನಾಯಕನಿಗೆ ಸ್ವಂತ ರೂಮನ್ನು ಪತ್ತೆ ಹಚ್ಚಬಹುದಾಗಿತ್ತು. ಅಂದರೆ ಅವನ ರೂಮು ದಾಡಿವಾಲನ ಎಡಕ್ಕೋ ಬಲಕ್ಕೋ ಇರುತ್ತದೆ. ಆದರೆ ಇದೆಲ್ಲ ಅಸಂಗತ ವಿಚಾರಗಳೆಂದು ನಾಯಕ ಅವನ್ನು ಕೈಬಿಟ್ಟ.

ಕೈ ಬಿಟ್ಟು ಇಂಪೀರಿಯಲ್ ಹೊಟೇಲಿನ ಮೇಲೆ ನೋಡಿದಾಗ ಅಲ್ಲಲ್ಲಿ ವೆರಾಂಡಾ ಗಳ ಮಿಣುಕು ದೀಪಗಳು ಮಾತ್ರ ಕಂಡುಬಂದವು. ಆ ದೀಪಗಳ ಆಧಾರದಿಂದ ಒಟ್ಟು ಫ಼್ಲೋರುಗಳ ಲೆಕ್ಕ ಹಾಕಿದ. ಈ ಲೆಕ್ಕ ಪ್ರಕಾರ ಇಂಪೀರಿಯಲ್ ಹೊಟೇಲಿಗೆ ಐದು ಫ಼್ಲೋರುಗಳಿರಬಹುದು. ಯಾವ ರೂಮುಗಳೂ ತೆರೆದಿದ್ದಂತೆ ತೋರಲಿಲ್ಲ. ಒಂದನ್ನು ಬಿಟ್ಟು ಬೇರಾವ ರೂಮುಗಳಲ್ಲೂ ಬೆಳಕಿರಲಿಲ್ಲ. ಆ ಒಂದೇ ಒಂದು ರೂಮಿನ ವೆಂಟಿಲೇಟರ್ ಮೂಲಕ ಬೆಳಕು ಕಂಡುಬರುತ್ತಿತ್ತು. ಅಂದರೆ ಆ ರೂಮಿನ ವ್ಯಕ್ತಿ ಇನ್ನೂ ನಿದ್ದೆ ಮಾಡಿಲ್ಲ. ಉಳಿದ ಎಲ್ಲರೂ ನಿದ್ದೆ ಹೋಗಿದ್ದಾರೆ. ಹೊಟೇಲಿನ ಇಡಿಯ ಪಠಾರವೇ ಸತ್ತುಹೋದಂತೆ ಕಾಣುತ್ತಿರುವಾಗ ಒಂದೇ ಒಂದು ಕೋಣೆಯಲ್ಲಾದರೂ ಬೆಳಕು ಉರಿಯುತ್ತಿರುವುದು ಬದುಕಿನ ನಿರಂತರ ಚಟುವಟಿಕೆಗೆ ಸಾಕ್ಷಿಯೆ? ಹೇಗಿದ್ದರೂ ಈ ವ್ಯಕ್ತಿಯೇ ಶರಣು ಎಂದುಕೊಂಡು ನಾಯಕ ಬೆಳಕಿರುವ ಆ ರೂಮು ಯಾವ ಫ಼್ಲೋರಿನಲ್ಲಿರಬಹುದೆಂದು ಅಂದಾಜು ಹಾಕಿದ. ಬಹುಶಃ ಅದು ನಾಲ್ಕನೆ ಫ಼್ಲೋರಿನಲ್ಲಿರಬಹುದು ಎಂದು ತೋರಿತು. ಮತ್ತೆ ಲಿಫ಼್ಟು, ಅದರ ನಿರರ್ಥಕತೆ ಮನಸ್ಸಿನಲ್ಲಿ ಹಾಯ್ದು ಥತ್ ಎಂದುಕೊಂಡು ಮೆಟ್ಟಲುಗಳನ್ನು ಹತ್ತತೊಡಗಿದ, ವೆರಾಂಡಗಳನ್ನೆಣಿಸುತ್ತ ಅಂದಾಜಿನ ಪ್ರಕಾರ ನಾಲ್ಕನೆ ಫ಼್ಲೋರಿಗೆ ಬಂದು ತಲುಪಿದ, ಅಂದಾಜು ಸರಿಯಾಗಬೇಕಿದ್ದರೆ ಅಲ್ಲೆಲ್ಲಾದರೂ ಬೆಳಕಿರುವ ಒಂಟಿ ರೂಮು ಕಾಣಿಸಬೇಕಿತ್ತು. ಪರೀಕ್ಷಿಸಿ ನೋಡಿದಾಗ ಅಂತಹ ರೂಮು ಅಲ್ಲೆಲ್ಲೂ ಕಾಣಿಸಲಿಲ್ಲ. ಎಲ್ಲ ರೂಮುಗಳೊಳಗೂ ಕತ್ತಲೆ ತುಂಬಿತ್ತು. ಹಾಗಾದರೆ ಆ ರೂಮು ಏನಾಯಿತು? ಎರಡು ಸಾಧ್ಯತೆಗಳಿದ್ದವು: ಒಂದೋ ಫ಼್ಲೋರಿನ ಅಂದಾಜು ತಪ್ಪಿಹೋಗಿದೆ; ಇಲ್ಲ ಈತ ಮೆಟ್ಟಲೇರುತ್ತಿದ್ದಂತೆ ಆ ವ್ಯಕ್ತಿ ಲೈಟು ಆರಿಸಿದ್ದಾನೆ. ಒಂದೋ ಇನ್ನೂ ಮೇಲೇರಿ ನೋಡಬೇಕು. ಇಲ್ಲವಾದರೆ ಕೆಳಿಗಿಳಿಯಬೇಕು. ಎರಡರಲ್ಲಿ ಯಾವುದು ಸರಿಯೋ ಅವನ ಊಹೆಗೂ ನಿಲುಕಲಿಲ್ಲ. ಆದ್ದರಿಂದ ಯಾವುದಾದರೂ ಒಂದೇ ಎಂದುಕೊಂಡು ಇನ್ನೊಂದು ಫ಼್ಲೋರು ಹತ್ತಿದ. ಅವನ ಅದೃಷ್ಟವೋ ಏನೋ ಬೆಳಕಿನ ರೂಮು ಇಲ್ಲೇ ಇತ್ತು. ಅದನ್ನು ಕಂಡಾಗ ನಾಯಕನಿಗೆ ತನ್ನ ರೂಮನ್ನೆ ಕಂಡಷ್ಟು ಸಂತೋಷವಾಯಿತು. ಆದರೆ ಕೆಲವು ಸಂದೇಹಗಳಿದ್ದವು. ಈ ಕೋಣೆಯಲ್ಲಿ ಬೆಳಕು ಇದ್ದ ಮಾತ್ರಕ್ಕೆ ಆದರೊಳಗೆ ವ್ಯಕ್ತಿ ಯೊಬ್ಬ ಇದ್ದಾನೆಂದೂ, ಇದ್ದರೆ ಆತ ಇನ್ನೂ ನಿದ್ದೆ ಮಾಡಿಲ್ಲವೆಂದೂ ಅರ್ಥ ಮಾಡುವುದು ದುಸ್ತರವಾಗಿತ್ತು. ಬೆಳಕಿಲ್ಲದ ಮಾತ್ರಕ್ಕೆ ಉಳಿದೆಲ್ಲ ಕೋಣೆಯ ಜನರು ನಿದ್ದೆ ಹೋಗಿದ್ದಾರೆಂದೂ ಅರ್ಥವೆಲ್ಲ. ಮಾತ್ರವಲ್ಲ ಈ ಕೋಣೆಯೊಳಗೆ ಯಾರೂ ಇಲ್ಲವೆಂದಾದರೆ ಆದರ ಬಾಗಿಲನ್ನು ತಟ್ಟುವುದು ವ್ಯರ್ಥವಾಗುವುದು. ಅಥವಾ ಒಳಗೆ ವ್ಯಕ್ತಿಯಿದ್ದು ಆತನಿದ್ದೆ ಹೋಗಿದ್ದರೆ ಅವನ್ನನ್ನೆಬ್ಬಿಸುವುದು ಶಿಷ್ಟಾಚಾರವಾಗುವುದಿಲ್ಲ. ಆದರೆ ಹೀಗೆಲ್ಲ ಲೆಕ್ಕಾಚಾರ ಮಾಡಿ ಒಂದು ನಿರ್ಧಾರಕ್ಕೆ ಬರುವ ಮೊದಲೆ ನಾಯಕರ ಕೈ ಮುಂದೆ ಹೋಗಿ ಬಾಗಿಲು ತಟ್ಟಿ ಆಗಿತ್ತು. ನಾಲ್ಕೈದು ಬಾರಿ ತಟ್ಟಿದ ಮೇಲೆ ಕೋಣೆಯೊಳಗಿಂದ ಏನೋ ಶಬ್ದ ಕೇಳಿಸಿತು. ಆತ ನಿದ್ದೆ ಮಾಡಿದರೆ ಈಗ ಎಚ್ಚರಾಗಿರಬಹುದು. ಎಂದರೆ ಅವನ ನಿದ್ದೆ ಹಾಳುಮಾಡಿದ ಹಾಗಾಯಿತು. ಅವನು ಎದ್ದು ಬರುತ್ತಿರುವ ಸದ್ದು, ಬಂದು ಇದೀಗ ಬಾಗಿಲು ರೆದರೆ ಅವನ ಪ್ರಶ್ನಾರ್ಥಕ ನೋಟವನ್ನು ಹೇಗೆ ಎದುರಿಸಬೇಕು? ನಾಯಕ ಬಹಳ ತೀವ್ರವಾಗಿ ಯೋಚಿಸಲು ಪ್ರಯತ್ನಿಸಿದ. ವ್ಯಕ್ತಿ ಬಾಗಿಲು ತೆರೆಯಬಹುದಾದ ಕ್ಷಣ ಸಮೀಪಿಸ್ತುತ್ತಿತ್ತು. ಆದರೆ ತೀವ್ರ ಯೋಚನೆಗೆ ನಾಯಕನ ಮಿದುಳು ಸಿದ್ಧವಾಗಿರಲಿಲ್ಲ. ಇಡಿಯ ಅವಸ್ಥೆ ಅಸಂಬದ್ಧವಾಗಿತ್ತು. ಯಾಕೆಂದರೆ ಈ ವ್ಯಕ್ತಿ ಯಿಂದ ನಾಯಕನಿಗೆ ಯಾವ ಪ್ರಯೋಜನವೂ ಆಗುವಂತಿರಲಿಲ್ಲ. ತನಗೇ ಅಪರಿಚಿತವಾಗಿರುವ ತನ್ನ ರೂಮನ್ನು ಈತ ಹೇಗೆ ಕಂಡು ಹುಡುಕಲು ಅಥವಾ ಕಂಡು ಹುಡುಕುವುದಕ್ಕೆ ಸಹಾಯ ಮಾಡಲು ಸಾಧ್ಯ ಎಂಬ ಪ್ರಶ್ನೆ ನಾಯಕನಿಗೆ ಹೊಳೆದು ಇದು ಈ ತನಕ ಹೊಳೆಯದಿದ್ದುದಕ್ಕೆ ವಿಷಾದಿಸಿದ. ಆದ್ದರಿಂದ ಇಲ್ಲಿ ಈತನೊಂದಿಗೆ ಯಾವ ಪ್ರಯೋಜನವೂ ಆಗಲಾರದು. ಇಂತಹ ಸಂದಿಗ್ಧಲ್ಲೂ ನಾಯಕನಿಗೆ ಹೊಸತೊಂದು ಆಸೆ ಮೂಡಿತು. ಬಾಗಿಲು ತೆರೆಯುವ ವ್ಯಕ್ತಿ ತನ್ನ ದಾಡಿವಾಲನಾದರೆ ಎಂಬುದೇ ಆಸೆ. ಅಷ್ಟರಲ್ಲಿ ಬಾಗಿಲು ತೆರೆಯಿತು. ಬಾಗಿಲು ತೆರೆದ ವ್ಯಕ್ತಿ ದಾಡಿವಾಲನಾಗಿರಲಿಲ್ಲ. ಆತ ನುಣ್ಣಗೆ ಗಡ್ಡ ಬೋಳಿಸಿಕೊಂಡಿದ್ದನಲ್ಲದೆ ತಲೆಯ ಮೇಲೂ ಕೂದಲಿರಲಿಲ್ಲ. ಆ ಬೊಕ್ಕ ತಲೆಯ ಮೇಲೆ ಒಳಕೋಣೆಯ ಬೆಳಕು ಪ್ರತಿಫಲಸಗೊಂಡಿತು. ಅವನ ಪ್ರಶ್ನಾರ್ಥಕ ನೋಟಕ್ಕೆ ಉತ್ತರಿಸುವುದರಿಂದ ಉಪಯೋಗವಿಲ್ಲವೆಂದುಕೊಂಡು ನಾಯಕ ಮೌನವಾಗಿ ನಿಂತ. ವ್ಯಕ್ತಿ ಉತ್ತರಕ್ಕಾಗಿ ಕಾದುನಿಂತ. ಉತ್ತರ ಸಿಗದಿದ್ದಾಗ ಆತ ಮತ್ತೆ ಬಾಗಿಲು ಹಾಕಿದ. ಈ ವ್ಯಕ್ತಿ ತನ್ನ ಕುರಿತಾಗಿ ಏನು ಗ್ರಹಿಸಿರಬಹುದೆಂದು ನಾಯಕ ಪ್ರಶ್ನಿಸಿಕೊಂಡ. ಕಳ್ಳನೋ ಕುಡುಕನೋ ಹುಚ್ಚನೋ ಆಗಿರಬಹುದೆಂದು ಗ್ರಹಿಸುತ್ತಾನೆ. ಅವನು ಏನು ಗ್ರಹಿಸಿದರೆ ತಾನೆ ಏನು ಎಂದುಕೊಂಡ.

ಹೇಗಿದ್ದರೂ ಬಾಗಿಲು ಮುಚ್ಚಿದ್ದಾಗಿತ್ತು. ಇನ್ನು ಆತನಿಗೂ ತನಗೂ ಬಂಧವಿಲ್ಲ. ಇಲ್ಲಿ ನಿಲ್ಲುವುದು ಸುಮ್ಮನೆ ಎಂದುಕೊಂಡು ನಾಯಕ ಅಲ್ಲಿಂದ ಹೊರಟ. ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿದ್ದವು. ಈಗೇನು ಮಾಡೋಣವೆಂದು ಹೊಳೆಯಲಿಲ್ಲ. ಈ ಕುರಿತು ಒಂದೆಡೆ ಕುಳಿತು ಒಂದು ಘಳಿಗೆ ಚಿಂತಿಸುವುದೊಳ್ಳೆಯದು ಎಂದುಕೊಂಡ. ಹೀಗೆ ಮತ್ತೆ ವಾಪಸು ಕೆಳಗಿಳುದು ಬಂದ. ಎಲ್ಲ ವೆರಾಂಡಗಳೂ ಖಾಲಿ, ಜನರೇ ಇಲ್ಲದಂತೆ. ಈ ಕೋಣೆಗಳೊಳಗೆ ಜನ ಮಲಗಿದ್ದರೂ ಈ ಹೊಟೇಲು ನಿರ್ಜನ ಪ್ರದೇಶ ದಂತೆ ಕಂಡಿತು. ಇಲ್ಲಿ ತಾನು ಏಕಾಕಿಯಂತೆ ಅವನಿಗನ್ನಿಸಿತು. ಫೋರ್ಟಿಕೋದಲ್ಲಿ ಹಾಕಿದ್ದ ಒಂದು ಸೋಫಾದಲ್ಲಿ ಕುಳಿತುಕೊಂಡ. ನೇರ ಎದುರಿನಲ್ಲಿ ಕತ್ತಲಿನಲ್ಲಿ ಬೃಹತ್ತಾದ ಇಂಪೀರಿಯಲ್ ಸುಮ್ಮನೆ ನಿಂತಿತ್ತು. ನಾಯಕ ಈ ಪರಿಸರ ಮತ್ತು ತನಗಿರುವ ಸಂಬಂಧಗಳ ಕುರಿತು ಗಾಢವಾಗಿ ಚಿಂತಿಸತೊಡಗಿದ.

-೨-

ಸುತ್ತಮುತ್ತಲಿನ ಸದ್ದುಗದ್ದಲದಿಂದ ನಾಯಕನಿಗೆ ಎಚ್ಚರವಾಯಿತು. ಎಚ್ಚರ ವಾದಾಗ ತಾನು ಪೋರ್ಟಿಕೋದಲ್ಲಿ ಸೋಫಾದ ಮೇಲೆ ಒರಗಿರುವುದು ಗೊತ್ತಾಯಿತು. ಒಟ್ಟಾರೆ ಅಸ್ತವ್ಯಸ್ತನಾಗಿ ಬಿದ್ದುಕೊಂಡಿದ್ದ. ಹೊಟೇಲು ಈಗ ಎಚ್ಚರ ವಾಗಿತ್ತು. ಜನ ಅತ್ತಿತ್ತ ಓಡಾಡುತ್ತಿದ್ದರು. ರಿಸೆಪ್ಷನ್ ನಲ್ಲಿ ಯಾವುದೋ ಹುಡುಗಿ ಕುಳಿತಿದ್ದಳು. ನಿನ್ನೆ ಅವಳನ್ನು ನೋಡಿದ ನೆನಪಿರಲಿಲ್ಲ.

ಜನ ಏನು ತಿಳಿದುಕೊಂಡಿರಬಹುದು? ರಾತ್ರಿ ಕುಡಿದು ಬಂದು ರೂಮು ಸೇರಲಾರದೆ ಇಲ್ಲೇ ಬಿದ್ದುಕೊಂಡಿದ್ದಾನೆ ಅಂದುಕೊಂಡಿರಬಹುದು. ಅವರ ಕಣ್ಣುಗಳಲ್ಲಿ ಶಿರಸ್ಕಾರವಿರಬಹುದು. ಏನು ಬೇಕಾದರೂ ಇರಲಿ, ಅವರು ಏನು ಬೇಕಾದರೂ ತಿಳಿದುಕೊಳ್ಳಲಿ ತನಗೇನು? ಅವರಿಗೂ ತನಗೂ ಏನು ಸಂಬಂಧ? ನಿನ್ನೆ ರೂಮು ಸಿಗದೆ ಕಷ್ಟಪಟ್ಟಾಗ ಇವರಾರೂ ಇರಲಿಲ್ಲವಲ್ಲ. ಮತ್ತೆ ಈಗ ಇವರು ಇದ್ದರೇನು, ಇಲ್ಲದಿದ್ದರೇನು?

ಹೀಗೆಂದುಕೊಂಡು ನಾಯಕ ಸೋಫಾದಿಂದೆದ್ದು ಆಕಳಿಸಿ ಮೈಮುರಿದ, ಮೈ ಕೈ ನೋಯುತ್ತಿದ್ದಂತೆ, ತಲೆನೋವು ಕೂಡ ಬಂದಂತೆ ಅನಿಸಿತು. ಥಂಡಿಯಲ್ಲಿ ಮಲಗಿದ್ದರಿಂದ ಇರಬಹುದು, ರಾತ್ರಿ ಸರಿಯಾಗಿ ನಿದ್ದೆ ಮಾಡದ್ದರಿಂದ ಇರಬಹುದು ಎಂದುಕೊಂಡ, ಅಸ್ತವ್ಯಸ್ತವಾಗಿದ್ದ ಬಟ್ಟೆಯನ್ನೂ ತಲೆಗೂದಲನ್ನೂ ನೇವರಿಸಿಕೊಂಡು ರಿಸೆಪ್ಷನ್ ಬಳಿಹೋದ. ಆ ಹುಡುಗಿಗೆ ಸ್ವಲ್ಪದರಲ್ಲೆ ತನ್ನ ಪರಿಸ್ಥಿತಿ ವಿವರಿಸಬೇಕಿತ್ತು, ಅವಳು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುವುದಕ್ಕೆ ಶುರುಮಾಡಿದರೆ? ಎಂಥ ಪ್ರಶ್ನೆಗಳನ್ನು ಕೇಳಬಹುದು? ಅವುಗಳಿಗೆ ಯಾವ ರೀತಿಯ ಉತ್ತರಗಳನ್ನು ಕೊಡಬೇಕು? ಛೀ, ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ತರಾತುರಿಯಾಗಿ ಇವಳ ಬಳಿಗೆ ಬರಬಾರ ದಾಗಿತ್ತು ಎಂದುಕೊಂಡ. ಹೇಗಿದ್ದರೂ ಈಗ ಬಂದುದಾಗಿತ್ತು. ಮತ್ತು ಅವಳು ಇವನ ಮುಖವನ್ನೆ ಸಂಶಯದಿಂದ ನೋಡುತ್ತಿದ್ದಳ್ಳು. ಅವಳ ಧೋರಣೆಯೇನೆಂಬುದು ಅವನಿಗೆ ಮೊದಲು ಸ್ಪಷ್ಟವಾಗಲಿಲ್ಲ.

ಸ್ವಲ್ಪದರಲ್ಲೆ ತನ್ನ ಅವಸ್ಥೆಯನ್ನು ಅವಳಿಗೆ ವಿವರಿಸಲು ನಾಯಕ ಪ್ರಯತ್ನಿಸಿದ, ಹಾಗೆ ಪ್ರಯತ್ನಿಸಿದಾಗ ತಾನು ಅಗತ್ಯಕ್ಕಿಂತ ಹೆಚ್ಚು ವಿನೀತನಾಗುತ್ತಿದ್ದೇನೆ – ಸಣ್ಣವನಾಗುತ್ತಿದ್ದೇನೆ. ಅಪರಾಧಿಯಾಗುತ್ತಿದ್ದೇನೆ ಎನಿಸಿತು. ಅದೇ ವೇಗದಲ್ಲಿ ಅವಳ ಮುಖಭಾವ, ಮರ್ಜಿಗಳು ದರ್ಪದ, ಅಧಿಕಾರದ ಧೋರಿಣೆ ವಹಿಸುತ್ತಿದ್ದವು.

ಅವಳು ಕಠಿಣವಾಗಿ ಹೇಳಿದಳು.

“ನಿನಗೆ ಇನ್ನೂ ಅಮಲು ಇಳಿದಿಲ್ಲ ಅಂತ ತೋರುತ್ತದೆ. ನಿನ್ನಂಥವನೊಬ್ಬ ನಿನ್ನೆ ರಾತ್ರಿ ಇಲ್ಲಿ ನೇಣುಹಾಕಿಕೊಂಡಿದ್ದಾನೆ. ನೀವೆಲ್ಲ ಸಾಯುವುದಕ್ಕೆ ಇಲ್ಲೇಕೆ ಬರುತ್ತೀರಿ? ಹೊಟೇಲುಗಳಿರುವುದು ಜೀವಿಸುವುದಕ್ಕೆ, ಸುಖಕ್ಕೆ ಗೊತ್ತಾಯಿತೆ?”

ನೇಣಿನ ವಾರ್ತೆಯಿಂದ ಇವನ ಮೇಲೆ ಉಂಟಾಗುವ ಪರಿಣಾಮವನ್ನು ಅವಳು ಗಮನಿಸಿರುವಂತಿತ್ತು. ಬಹುಶಃ ವಿಸ್ಮಯ, ಅನುಕಂಪಭಾವ ಇತ್ಯಾದಿಗಳನ್ನವಳು ನಿರೀಕ್ಷಿಸುತ್ತಿರಬಹುದು. ಆದರೆ ನಾಯಕನಿಗೆ ಬರಿಯ ಕುತೂಹಲ ಮಾತ್ರ ಉಂಟಾಯಿತಷ್ಟೆ. ಕುತೂಹಲದಿಂದ ಅವನು ಈಗ ಮೇಲಿನ ಅಂತಸ್ತಿನಲ್ಲಿ ಸೇರಿದ್ದ ಜನರನ್ನು ನೋಡಿದ. ಆತ್ಮಹತ್ಯೆ ಅಲ್ಲೇ ಸಂಭವಿಸಿರಬಹುದು. ಇಲ್ಲಿ ಇವಳೊಂದಿಗೆ ವ್ಯರ್ಥ ಮಾತನಾಡುವುದಕ್ಕಿಂತ ಅಲ್ಲಿ ಹೋಗಿ ಅದೇನೆಂದು ನೋಡುವಾ ಎಂದುಕೊಂಡು ನಾಯಕ ಮೆಟ್ಟಲುಗಳನ್ನು ಏರತೊಡಗಿದ. ಅದಕ್ಕೆ ಮೊದಲು ಅದು ಯಾವ ಫ಼್ಲೋರೆಂದು ಖಚಿತ ಪಡಿಸಿಕೊಳ್ಳಲು ಮೆಟ್ಟಲಿಳಿದು, ವೆರಾಂಡಕ್ಕೆ ಬಂದು, ಅದು ನಾಲ್ಕನೆ ಅಂತಸ್ತಿನಲ್ಲಿ ನಡೆದ ಘಟನೆಯೆಂದು ಖಚಿತ ಮಾಡಿಕೊಂಡು ಪುನಃ ಮೆಟ್ಟಲೇರಿ ಹೋದ.

ಒಂದು ದೊಡ್ಡ ಕೋಣೆಯ ಮುಂದೆ ಹತ್ತಾರು ಜನ ಸೇರಿದ್ದರು, ಹೊಟೇಲಿನ ಒಡೆಯನಂತೆ ಕಂಡು ಬರುವ ಠೀವಿಯ ಮನುಷ್ಯನೂ ಇದ್ದ. ಇತರ ಕೆಲವು ಮಂದಿ ಹಣಿಕಿ ಬಾಗಿಲಿನ ಮೂಲಕ, ಕಿಟಿಕಿಯ ಮೂಲಕ ಒಳಗೆ ನೋಡುತ್ತಿದ್ದರು. ಕೆಲವರು ತಮ್ಮ ತಮ್ಮಲ್ಲೆ ಸಣ್ಣ ಧ್ವನಿಯಲ್ಲಿ ಮಾತಾಡುತ್ತಿದ್ದರು. ನೇಣಿನ ಸ್ಥಳ ಇದೇ ಎಂಬುದು ನಾಯಕನಿಗೆ ಖಚಿತವಾಯಿತು. ಅವನು ತುದಿಗಾಲಿನ ಮೇಲೆ ನಿಂತು ಕೋಣೆಯೊಳಗೆ ಎತ್ತಿ ನೋಡಿದ.

ಒಳಗೆ ಕೆಲವು ಪೋಲೀಸರಿದ್ದರು. ಮಧ್ಯೆ ಸೀಲಿಂಗ್ ಫ಼್ಯಾನಿಗೆ ನೈಲಾನಿನ ನೂಲು ಬಿಗಿದು ವ್ಯಕ್ತಿ ನೇಣು ಹಾಕಿಕೊಂಡಿದ್ದ. ಇಡೀ ದೇಹ ಜೋತು ತೂಗಿತ್ತು. ತಲೆ ಒಂದು ಬದಿಗೆ ತೊನೆದುಕೊಂಡು ಬಾಯಿ ತುಸುವೆ ತೆರೆದಿತ್ತು. ವ್ಯಕ್ತಿಯನ್ನು ಕಂಡೊಡನೆ ನಾಯಕನಿಗೆ ತಾನವನನ್ನು ನಿನ್ನೆ ರಾತ್ರಿ ಕಂಡದ್ದು ನೆನಪು ಬಂತು. ಈ ಸತ್ತ ವ್ಯಕ್ತಿಯ ನುಣ್ಣನೆ ತೆಲೆ ನಿನ್ನೆ ರಾತ್ರಿ ಬಾಗಿಲಿನಿಂದ ಹೊರಚಾಚಿ ನೋಡಿದ್ದು, ದೀಪದ ಬೆಳಕಿನಲ್ಲಿ ಅದು ಹೊಳೆಯುತ್ತಿದ್ದುದು ನೆನಪಿಗೆ ಬಂತು. ಅದೇ ನುಣ್ಣನೆ ತಲೆ, ಈ ಆ ತಲೆಯೊಳಗಿನ ಮನಸ್ಸು ಈಗ ಖಾಲಿಯಾಗಿರಬಹುದು. ನಿನ್ನೆ ಬಹುಶಃ ಆತನಿಗೆ ನನ್ನಮೇಲೆ ಸಿಟ್ಟು ಬಂದಿತ್ತೆ? ಬಹಳ ರಾತ್ರಿಯತನಕ ಆಶ ಎಚ್ಚರವಾಗಿಯೇ ಇದ್ದನಲ್ಲ. ಏನು ಮಾಡುತ್ತಿದ್ದಿರಬಹುದು? ಸಾಯಬೇಕೆ ಬೇಡವೆ ಎಂದು ಚಿಂತಿಸುತ್ತಿದ್ದನೆ? ಸಾಯುವುದಕ್ಕೆ ತಕ್ಕುದಾದ ಕಾರಣಗಳನ್ನು ದೃಢೀಕರಿಸ್ತುತ್ತಿದ್ದನೆ? ಸಾಯುವುದು ಹೇಗೆಂದು ಯೋಚಿಸ್ತುತ್ತಿದ್ದನೆ? ಬೆಂಕಿ, ನೀರು, ವಿಷ, ಕೊನೆಗೆ ಹಗ್ಗ? ಹೀಗೆ ನೀರ್ಧಾರಕ್ಕೆ ಬಂದ ಮೇಲೆ ಆತನ ನುಣ್ಣನೆ ತಲೆಯೊಳಗೆ ಏನೆಲ್ಲ ವಿಚಾರಗಳು ಬಂದು ಹೋಗಿರಬಹುದು? ಸಾಯುವಾಗ ಹೇಗಾಗುತ್ತದೆ ಎಂದೆ? ಸತ್ತ ಮೇಲೆ ಏನಾಗುತ್ತದೆ ಎಂದೆ? ರೂಮಿನ ಕೀಯ ಕುರಿತು, ತನ್ನ ಜವಾಬ್ದಾರಿಯ ಕುರಿತು ಈತ ಚಿಂತಿಸಲಿಲ್ಲವೆ? ನಿನ್ನೆ ಬಾಗಿಲು ತಟ್ಟಿದಾಗ ಆತನಿಗೆ ಏನೆನಿಸಿದ್ದೀತು? ಆತನ ವಿಚಾರಗಳು ಅಸ್ತವ್ಯಸ್ತಗೊಂಡವೆ ಅಥವ ಒಂದು ರೂಪಕ್ಕೆ ಬಂದವೆ? ಆತನ ನಿರ್ಧಾರ ಬದಲಾಗಲಿಲ್ಲವೆ? ಅಥವ ತನ್ನಿಂದಾಗಿ ಅವನ ಅಸ್ಪಷ್ಟ ವಿಚಾರಗಳು ನಿರ್ಧಾರ ತಳೆದವೆ? ನಿನ್ನೆ ತಾನು ಅವನಿಗೆ ಏನೂ ಆಗಿರಲಿಲ್ಲ. ಇಂದೂ ಏನೂ ಅಲ್ಲ. ತನಗೂ ಅವನಿ ಗೂ ಯಾವ ಸಂಬಂಧವೂ ಇಲ್ಲ. ಅವನಿಗೆ ಇನ್ನು ಯಾರೊಂದಿಗೂ ಏನೂ ಸಂಬಂಧವಿಲ್ಲ. ಯಾವ ಹೊಣೆಗಾರಿಕೆಯೂ ಇಲ್ಲ. ಆದರೆ ಪೋಲೀಸಿನವರು ಮಾತ್ರ ಟೇಪಿನಿಂದ ಅಳತೆ ತೆಗೆಯುತ್ತಿದ್ದಾರೆ. ಒಬ್ಬಾತ ಬರೆದುಕೊಳ್ಳುತ್ತಿದ್ದಾನೆ. ರೂಮಿನ ಉದ್ದಗಲ, ಸಾಮಾನುಗಳ ವಿವರ, ವ್ಯಕ್ತಿಯ ಚಹರೆ ಇತ್ಯಾದಿಗಳಾಗಿರಬಹುದು. ಅವರ ದಾಖಲೆಗೆ ಇವುಗಳ ಅಗತ್ಯವಿದ್ದೀತು. ಅವರು ಸರಕಾರಿ ಡಾಕ್ಟರರಿಗಾಗಿ ಕಾಯುತ್ತಿದ್ದಾರೆಂದೂ, ವ್ಯಕ್ತಿಯ ಸಂಬಂಧಿಗಳನ್ನು ಕಂಡು ಹುಡುಕಲು ಪ್ರಯತ್ನಿಸುತ್ತಿದ್ದಾರೆಂದೂ ಯಾರೋ ಹೇಳಿದರು. ವ್ಯಕ್ತಿ ಸತ್ತದ್ದು ನಿಜವಾದರೂ ಡಾಕ್ಟರರು ಪರೀಕ್ಷಿಸ ಬೇಕಾಗುತ್ತದೆ. ಶವಸಂಸ್ಕಾರಕ್ಕೆ ಸಂಬಂಧಿಗಳೆ ಅಗತ್ಯವಿರುತ್ತದೆ.

ನಾಯಕ ಜನರಿಂದ ಬಿಡಿಸಿಕೊಂಡು ಈಚಿಗೆ ಬಂದ. ರೂಮು ಕಂಡು ಹುಡುಕುವ ಕಾರ್ಯ ಇನ್ನೂ ಉಳಿದಿತ್ತು. ಆದ್ದರಿಂದ ಪುನಃ ಕೆಳಗಿಳಿಯತೊಡಗಿದ. ಕೆಳಗಿಳಿಯುತ್ತಿದ್ದಂತೆ ನಾಯಕನ ಮನಸ್ಸಿನಲ್ಲಿ ಈ ಹಿಂದೆಯೇ ಇದ್ದ ಕೆಲವು ವಿಚಾರಗಳು ನಿಖರ ರೂಪದಲ್ಲಿ ಏಳತೊಡಗಿದವು: ನೇಣುಹಾಕಿಕೊಂಡ ಈ ವ್ಯಕ್ತಿಗೂ ಜಗತ್ತಿಗೂ ಯಾವ ಸಂಬಂಧವೂ ಇಲ್ಲ. ಎಲ್ಲ ಸಂಬಂಧಗಳೂ ಕಳಚಿದ್ದರಿಂದಲೆ ಬಹುಶಃ ಆತ ನೇಣು ಹಾಕಿಕೊಂಡಿರಬಹುದು. ಅಥವ ಆತ ನೇಣು ಹಾಕಿಕೊಂಡಿದ್ದರಿಂದ ಇವೆಲ್ಲ ಕಳಚಿಕೊಂಡಿರಬಹುದು. ಆದರೆ ತಾನು ಇನ್ನೂ ಬದುಕಿದ್ದೇನಲ್ಲ. ಇದು ಆಶ್ಚರ್ಯ ಎಂಬಿತ್ಯಾದಿಯಾಗಿ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)