ಅವಳ ಭಾಗ್ಯ

ಅವಳ ಭಾಗ್ಯ

ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿಣ್ಣ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಿಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾಂ, ಹುಂ ಎನ್ನುವುದರೊಳಗೆ ಮದುವೆಯೂ ಆಗಿಹೋಯ್ತು. ನಾನೀಗ ಹೇಳಬೇಕೆಂದಿರುವುದು ಆ ಮದುವೆಯ ಸಮಯದ ಸಮಾಚಾರ.

ಕಿಟ್ಟಣ್ಣನೂ ಅವನ ಹೆಂಡತಿಯ ಆರತಿ ಅಕ್ಷತೆಗೆ ಹಸೆಯ ಮೇಲೆ ಕೂತಿದ್ದರು, ಹಿಂದಿನ ದಿನದ ಮದುವೆಯ ಗಲಾಟೆಯಲ್ಲಿ ವಧೂವರರನ್ನು ಸರಿಯಾಗಿ ನೋಡಿ ಹಾಸ್ಯಮಾಡಲು ಯಾರಿಗೂ ಸಮಯವಾಗಲಿ ಸಹಸವಾಗಲೀ ಇರಲಿಲ್ಲ. ಆದರೆ ಮರುದಿನ ಅರಸಿನ-ಎಣ್ಣೆಗೆ ಕೂರಿಸಿದಾಗ ಹೆಂಗಸರಿಗೇ ತಾನೆ ಸ್ವಾತಂತ್ರ್ಯ! ಅಂದು ಊರಿನ ಮುತ್ತೈದೆಯರೆಲ್ಲಾ ಹಾಜರಾಗಿದ್ದರು. ಎಂದೂ ಅಷ್ಟೊಂದು ಜನ ಹೆಂಗಸರ ನೋಟಕ್ಕೆ ಅವರ ಹುಚ್ಚು ಹಾಸ್ಯಕ್ಕೆ ಗುರಿಯಾಗದಿದ್ದ ಕಿಟ್ಟಣ್ಣನಿಗೆ ಆಗ ‘ಸಾಕಪ್ಪ, ಮದುವೆಯ ಸುಖಸಾಕು’ ಎನಿಸಿರಬೇಕು ನನ್ನನ್ನು ಕೂಗಿ ‘ಹೇಗಾದರೂ ಈ Ordeal ಒಂದ್ಸಾರಿ ಮುಗಿಸೋದಕ್ಕೆ ಹೇಳು’ ಎಂದ. ಆದರೆ ಆ ಸ್ತ್ರೀರಾಜ್ಯದಲ್ಲಿ ಅವನ ಮಾತಿಗೆಲ್ಲಿ ಬೆಲೆ ದೊರೆಯಬೇಕು?

‘ಜಯ, ನೀ ಒಂದು ಹಾಡು ಹೇಳೆ’ ಎಂದು ‘ನನಗೆ ಬರೋಲ್ಲ’ ಎಂದು ಬಿಂಕಮಾಡುತ್ತಿದ್ದ ಜಯನನ್ನು ಬಲಾತ್ಕರಿಸಿ ಹಾಡಿಸಿದ್ದಾಯಿತು. ಕೂತು ಬೇಸತ್ತಿದ್ದ ಕಿಟ್ಟಣ್ಣ ಅವಳ ಕರ್ಕಶಕಂಠದಿಂದ ಹೊರಟ ಕರ್ಣಕಠೋರ ಸ್ವರವನ್ನು ಹೇಗೆ ಸಹಿಸಿಕೊಂಡನೋ ತಿಳಿಯದು, ಹೇಗೋ ಅವಳ ಹಾಡು ಮುಗಿಯಿತು, ಇನ್ನೇನು ಬದುಕಿದೆ ಎಂದುಕೊಂಡ. ಆದರೆ ಒಂದೇ ಒಂದು ಹಾಡು ಹೇಳಿ ಅರಸಿನಲ್ಲಿ ಮುಗಿಸುವುದೇ ಛೇ, ಎಂದಿಗೂ ಇಲ್ಲ- ಕಮ್ಮಿ ಪಕ್ಷ ಹತ್ತಿಪ್ಪತ್ತಾದರೂ ಹೇಳಬೇಡವೇ?

ಆಗಲಿ ಎಷ್ಟಾದರೂ ಹಾಡಿಕೊಳ್ಳಲಿ, ಆದರೆ ಬೇಗ ಬೇಗ ಹೇಳಿ ಮುಗಿಸಿ ಬಿಡಬಾರದೇ? ‘ಹೇಳೀಂದ್ರೆ- ನೀವೇ ಹೇಳಿಂದ್ರೆ-ನೀವ್ಹೇಳೀಂದ್ರೆ’ ಎಂದು ಹತ್ತಾರು ಸಾರಿ ಹೇಳಿಸಿಕೊಂಡು ನನಗೆ ಗಂಟಲು ಸರಿಯಾಗಿಲ್ಲ ಎಂದು ಬೇರೆ ವೈಯಾರಮಾಡಿ, ಆ ಮೇಲೆ ಹಾಡಲು (ಅರಚಲು) ಪ್ರಾರಂಭಿಸಿದರೆ ಗಂಟೆ ಒಂದಾದರೂ ಅದಕ್ಕೆ ಅಂತ್ಯವೇ ಇಲ್ಲ. ಕಿಟ್ಟಣ್ಣ ‘ಗಂಟಲು ಸರಿಯಿಲ್ಲದೇನೇ ಇಷ್ಟೊಂದು ಹೊತ್ತು ಅರಚುವಾಗ ಸರಿಯಿದ್ದರೆ ದೇವರೇ ಗತಿ’ ಎಂದಂದುಕೊಂಡ ಅಂತೂ ಕೊನೆಗೆ ಹೇಗಾದರೂ ಎಲ್ಲರ ಹಾಡುಗಾರಿಕೆಯೂ ಮುಗಿಯಿತು. ಇನ್ನು ಆರತಿ ಮಾಡಿ ಬಿಡುಗಡೆ ಮಾಡಬಹುದು ಎಂದು ಕಿಟ್ಟಣ್ಣ ನೆಟ್ಟಗೆ ಕೂತ. ಆದರೆ ಅದು ಕೇವಲ ಒಂದೆರಡು ನಿಮಿಷದ ಆಸೆ ಅಷ್ಟೆ. ಮುತ್ತೈದೆಯರಿಬ್ಬರು ಆರತಿಯನ್ನು ಹಿಡಿದುಕೊಂಡು ಇದಿರು ಬಂದು ನಿಂತು ಪುನಃ ಪ್ರಾರಂಭಿಸಿದರು- ‘ಆರತಿ ಎತ್ತಿದ ಹಾಡು ನೀವೇ ಹೇಳಿ, ನೀವೇ ಹೇಳಿ’ ಎಂದು ತಮ್ಮ ತಮ್ಮೊಳಗೇ ವಾದಕ್ಕೆ ಅವರಿಬ್ಬರ ವಾದ ಕಮ್ಮಿ ಪಕ್ಷ ಒಂದು ಗಂಟೆಯತನಕವಾದರೂ ನಡೆಯುತ್ತಿತ್ತೇನೋ! ಆದರೆ ನೋಡಿ ಬೇಸತ್ತ ಕಿಟ್ಟಣ್ಣ, ನನ್ನ ಹತ್ತಿರ ಕೂತಿದ್ದ ಹುಡುಗಿಯೊಬ್ಬಳನ್ನು ನೋಡಿ ‘ಹೋಗಲಿ – ಅವರಿಗೆ ಬರದಿದ್ದರೆ ಪರವಾ ಇಲ್ಲ – ನೀನಾದರೂ ಒಂದು ಹೇಳಮ್ಮ’ ಎಂದ. ಕಿಟ್ಟಣ್ಣ ಆ ಮಾತುಗಳನ್ನಾಡಿದ್ದು, ಬೆಪ್ಪೆ ಮೂರ್ತಿಮಂತವಾಗಿದ್ದಂತೆ ಕುಳಿತಿದ್ದ ಆ ಹುಡುಗಿಯಾದರೂ ಕಿರುಚಿ ಇವರ ವಾದವನ್ನು ಕೊನೆಗೊಳಿಸಲಿ ಎಂದು ನನಗೂ ಕಿಟ್ಟಣ್ಣನ ಮಾತು ಕೇಳಿ ನಗು ಬಂತು. ಆ ಹುಡುಗಿ ಹಾಡುವುದೇ! ಇಷ್ಟು ಹೊತ್ತು ಹಾಡಿದವರ ಪಾಡೇ ಹೀಗೆ ಇವಳು….

ಹುಡುಗಿ ಹದಿನೈದು ವರ್ಷ ಪ್ರಾಯದವಳು. ಆದರೆ ಬೆಳವಣಿಗೆಯನ್ನು ನೋಡಿದರೆ ಪ್ರಾಯ ಇನ್ನೂ ಹೆಚ್ಚಾಗಿದೆ ಎನ್ನುವಂತಿದ್ದಳು. ಇದ್ದಲಿನಂತೆ ಮೈಬಣ್ಣ. ಒಂದೆರಡು ತಿಂಗಳ ಹಿಂದೆ ಕಾಯಿಲೆ ಬಿದ್ದಿದ್ದಳಂತೆ ತಲೆ ಕೂದಲೆಲ್ಲಾ ಉದುರಿ ಆಗ ತಾನೇ ಪುನಃ ಬರಲು ಪ್ರಾರಂಭವಾಗಿತ್ತಷ್ಟೇ. ಚಪ್ಪಟೆ ಮೂಗು. ಇನ್ನು ಕಣ್ಣು? ಯಾವಾಗಲೂ ರೆಪ್ಪೆಗಳ ಅಡಿಯಲ್ಲೇ ಅಡಗಿಕೊಂಡಿರುತ್ತಿದ್ದ ಅವಳ ಕಣ್ಣುಗಳನ್ನು ನಾನೂ ನೋಡಿರಲಿಲ್ಲ. ಆದರೂ ಅವುಗಳನ್ನು ಮುಚ್ಚಿಕೊಂಡಿದ್ದ ಉದ್ದವಾದ ರೆಪ್ಪೆಗಳನ್ನು ನೋಡಿ ಈ ಅವಲಕ್ಷಣದ ಮುಖಕ್ಕೆ ಇಷ್ಟೊಂದು ಸೊಗಸಾದ ರೆಪ್ಪೆಗಳು ಏಕೆ? ಎಂದೆನಿಸಿತ್ತು ನನಗೆ. ಕಿಟ್ಟಣ್ಣನ ಮಾವನ ಗುಮಾಸ್ತರ ಮಗಳವಳು. ಬಡತನವೂ ಆ ಕುರೂಪವೂ ಜೊತೆಯಾಗಿ ಅವಳಿಗೆ ವರ ಸಿಕ್ಕದಂತೆ ಮಾಡಿದ್ದವು. ಎಲ್ಲರಿಗೂ ಅವಳೆಂದರೆ ಅಷ್ಟಷ್ಟೆ. ‘ಪಾರು ಅದು ಮಾಡೆ. ಇದು ಮಾಡೆ’ ಎಂದು ಕೆಲಸ ಮಾಡಿಸುವವರೇ ಎಲ್ಲರೂ. ಅವಳಿಗೂ ಕೆಲಸವೆಂದರೆ ಬೇಸರವಿದ್ದಂತೆ ತೋರಲಿಲ್ಲ. ನಾವು ಅಲ್ಲಿಗೆ ಹೋದಂದಿನಿಂದ ನನ್ನ ಹಿಂದೆ ಮುಂದೆ ತಿರುಗಹತ್ತಿದ್ದಳು. ರಸ್ತೆಯಲ್ಲಿ ಹೋಗುವ ನಾಯಿಯ ತಲೆಸವರಿದರೆ ಬೆನ್ನು ಹತ್ತುತ್ತದಲ್ಲ – ಹಾಗೆ. ಅದಕ್ಕೆ ಕಾರಣವಿಷ್ಟೆ ನಾವು ಹೋದ ದಿನ ಯಾರ ಪರಿಚಯವೂ ಇಲ್ಲದಿದ್ದ ನಾನೂ ಅವಳೊಡನೆ ಒಂದೆರಡು ಮಾತಾಡಿದ್ದೆ. ಸರಿ, ಒಳ್ಳೆಯ ಮಾತುಗಳನ್ನು ಕೇಳುವುದೇ ಅಪರೂಪವಾಗಿದ್ದ ಅವಳನ್ನೊಲಿಸಿಕೊಳ್ಳಲು ಅಷ್ಟೇ ಸಾಕಾಗಿತ್ತು. ನನಗೆ ಬೇಕಾದುದನ್ನು ಒಳಗಿನಿಂದ ತರುವುದು ಹಿಂದೆ ಮುಂದೆ ತಿರುಗುವುದು; ನಾನು ಕೂತಲ್ಲಿ ಕೂಡುವುದು – ಹೀಗೆ ಒಂದಲ್ಲ, ನೂರು ವಿಧಗಳಲ್ಲಿ ಅವಳು ತನ್ನೊಲುಮೆಯನ್ನು ಪ್ರದರ್ಶಿಸುತ್ತಿದ್ದಳು. ಅವಳ ತಂದೆ – ಪಾಪ ಮುದುಕರು ಅವಳನ್ನು ನೋಡಿ ‘ಏನಮ್ಮಾ, ಪಾರೂ, ಅವರ ಜೊತೇಲೇ ಅವರೂರಿಗೆ ಹೊರಟುಹೋಗ್ತಿಯಾ? ಎಂದು ತಮಾಷೆ ಮಾಡುವರು. ಆಗಮ್ಮೆ ಅವಳು ಹಲ್ಲುಕಿರಿದರೆ ಆ ಕರೀ ಮುಖದಲ್ಲಿ ಬಿಳೀ ಹಲ್ಲುಗಳ ಸಾಲು ಒಡೆದು ಕಾಣುವುದು…..

ಕಿಟ್ಟಣ್ಣ ಅವಳೊಡನೆ ಹಾಡು ಹೇಳಿದ. ನಾನೂ ಅವನ ಮನೋಭಾವವರಿತು ‘ಹೇಳಮ್ಮಾ ಪಾರೂ’ ಎಂದೆ. ನನ್ನ ಮಾತು ಮೀರುವಂತಿಲ್ಲ. ‘ನನಗೆ ಆರತಿ ಎತ್ತೋ ಹಾಡು ಬರೋದಿಲ್ಲ – ಬೇರೆ ಹೇಳಲೇ?’ ಎಂದಳು. ನಾನೆಲ್ಲಿ ಬೇಡವೆನ್ನುವನೋ ಎಂದು ಕಿಟ್ಟಣ್ಣ ‘ಪರವಾ ಇಲ್ಲ ಏನಾದರೊಂದು ಹೇಳಿಬಿಡು’ ಎಂದ. ನಾನೂ ‘ಹೂಂ-ಹೇಳು’ ಎಂದೆ.

ಅವಳು ಹೇಳತೊಡಗಿದಳು :-
‘ಪರಮಾತ್ಮಾ ಹರೇ ಪಾವನನಾಮಾ……’

ನಾವು ಆ ಕೀರ್ತನೆಯನ್ನು ಎಷ್ಟು ಸಾರಿ ಕೇಳಲಿಲ್ಲ! ಅದೂ ಹೆಸರಾದ ಸಂಗೀತಗಾರರ ಕೊರಳಿನಿಂದ !! ಅವರ ವಿದ್ವತ್ತೂ ಶಬ್ದ ಚಮತ್ಕಾರವೂ ಪಾರುವಿನ ಕೊರಳಿಗಿರಲಿಲ್ಲ; ಹೌದು, ಆದರೆ ಆ ಸ್ವರ, ಆ ಮಾಧುರ್ಯ, ಹೃದಯವನ್ನು ಕದಡಿಬಿಡುವ ಆ ಶಕ್ತಿ ಅದೆಲ್ಲಾ ನಾವು ನೂರಾರು ಸಾರಿ ಕೇಳಿ ಹಳೆಯದು ಎಂದು ಬಿಟ್ಟಿದ್ದ ಆ ಕೀರ್ತನೆಯಲ್ಲಿ ತುಂಬಿ ಹರಿಸಿದ್ದಳು ಪಾರು, ‘ಪರಮಾತ್ಮಾಹರೇ – ಪಾವನ ನಾಮಾ….’

ನಮ್ಮ ಮೆಚ್ಚಿಗೆಯ ಅರಿವಿಲ್ಲದೆಯೇ ಅವಳು ಹಾಡುತ್ತಿದಳು. ಯಾವಾಗಲೂ ನೆಲವನ್ನು ನೋಡುವ ಅವಳ ನೋಟವು ಅವಳ ಪರಿವೆಯಿಲ್ಲದೆಯೇ ಪರಮಾತ್ಮನನ್ನು ನೋಡುತ್ತಿದೆಯೋ ಏನೋ ಎಂಬಂತೆ ಆಕಾಶದ ಕಡೆ ನೋಡುತ್ತಿತ್ತು. ಅವಳನ್ನು ಕುರೂಪಿ ಎಂದು ಹೇಳಿದೆನಲ್ಲ! ಎಂತಹ ಹುಚ್ಚು ನನಗೆ! ಅವಳ ಆ ಸೌಂದರ್ಯದಿಂದ ತುಂಬಿದ ಹೃದಯದ ಕನ್ನಡಿಗಳಂತಿದ್ದ ಆ ಎರಡು ಕಣ್ಣುಗಳೇ ಸಾಲವೆ? ಆ ಕಣ್ಣುಗಳನ್ನು ನೋಡದೆ ಅವಳು ಕುರೂಪಿ ಎಂದಂದುಕೊಂಡಿದ್ದೆನಲ್ಲಿ ಎಂತಹ ಆಕ್ಷಮ್ಯ ಮೂಢತನ! ಬಿಳಿ ಚರ್ಮ, ಉದ್ದವಾದ ಕೇಶರಾಶಿ, ಎಳಸು ಮೂಗು, ಚಂದುಟಿಗಳು ಇವೆಲ್ಲಾ ಇದ್ದರೇನೇ ಸೌಂದರ್ಯವೆಂದಿದ್ದ ನನ್ನ ಭಾವನೆ ಕ್ಷಣಮಾತ್ರದಲ್ಲಿ ಬದಲಾಯ್ತು. ಸುಂದರವಲ್ಲದ ರೂಪದ ಒಳಗೂ ಅತ್ಯಂತ ಸುಂದರವಾದ ಹೃದಗಳಿರುವುವು ಎಂಬುದನ್ನು ಪಾರುವಿನ ಕಣ್ಣುಗಳು ನನಗೆ ತೋರಿಸಿಕೊಟ್ಟವು. ಮತ್ತೆ ಆ ಸುಂದರವಾದ ಹೃದಯ, ರೂಪಸೌಂದರ್ಯದಂತೆ ಬಹು ಬೇಗನೆ ಮಾಸದೆ ಸುಂದರವಾಗಿಯೇ ಇರುವುದು ಎಂಬುದರ ಅರಿವನ್ನೂ ನನಗೆ ಮಾಡಿಕೊಟ್ಟವು ಪಾರುವಿನ ಆ ಕಣ್ಣುಗಳೇ.

ಕೂತು ಬೇಸತ್ತಿದ್ದ ಕಿಟ್ಟಣ್ಣನ ಬೇಸರವೆಲ್ಲಿ ಹೋಯ್ತೋ? ಆ ಹಾಡು ಮುಗಿಯುವುದೇ ತಡ ‘ಇನ್ನೊಂದು ಹೇಳಮ್ಮಾ’ ಎಂದ. ನಾನು ತಿಳಿದು ಕೊಂಡಿದ್ದೆ ‘ನಂಗೆ ಬರೋದಿಲ್ಲ ಇನ್ನು- ಗಂಟಲು ಸರಿಯಾಗಿಲ್ಲಪ್ಪ ಈಗ ಸಾಕು’ ಎಂದೇನಾದರೂ ಹೇಳುವಳೋ ಎಂದು. ಒಂದೂ ಇಲ್ಲ. ಕಿಟ್ಟಾಣ್ಣ ಹೇಳೆಂದುದೇ ತಡ, ನನ್ನ ಮುಖ ನೋಡಿದಳು ‘ಹೇಳಲೇ?’ ಎಂದು ಕೇಳುವಂತೆ, ನಾನು ಮಾತನಾಡಲಾರದೆ ‘ಹೂಂ’ ಎಂದು ತಲೆ ಅಲ್ಲಾಡಿಸಿದೆ. ಅವಳು ಪುನಃ ಹೇಳಿದಳು.

‘ನಾನ್ಯಾಕೆ ಬಡವಾನೈಯ್ಯಾ…..’

ಇದು ನಾವು ನೂರಾರು ಸಾರಿ ಕೇಳಿ ಕೇಳಿ ಬೇಸತ್ತ ಕೀರ್ತನೆಯೇ. ಆದರೂ ಪಾರುವಿನ ಕೊರಳಿನಿಂದ ಹೊರಡುವಾಗ….!

ಅದು ಮುಗಿದ ಮೇಲೆ ಇನ್ನೂ ಹೇಳಿಸಬೇಕೆಂದು ಕಿಟ್ಟಣ್ಣನಿಗೆ ಆಸೆ. ನನಗೂ ಇರಲಿಲ್ಲವೆಂತಲ್ಲ. ಆದರೆ ನೋಡಿ, ಅವಳು ದರಿದ್ರ ಗುಮಾಸ್ತರ ಕುರೂಪಿ ಮಗಳು. ಕಿಟ್ಟಣ್ಣನ ಮಡದಿ – ಜಮೀನ್ದಾರರ ಏಕಮಾತ್ರ ಪುತ್ರಿ ಹಾರ್ಮೋನಿಯಂನೊಡನೆ ಹಾಡಿ ಕಿಟ್ಟಾಣ್ಣನಿಗೆ ತಾಂಬೂಲಾದಿಗಳನ್ನು ಕೊಡಬೇಕಾಗಿರುವಾಗ, ಅವಳಿಗೆ ಪ್ರಾಶಸ್ತ್ರವನ್ನು ಕೊಟ್ಟು ಹಾಡಿಸುತ್ತಿರುವುದೇ?

ಅರಸಿನ ಕುಂಕುಮ ತಾಂಬೂಲಗಳನ್ನು ಹಂಚುವ ಸಂಭ್ರಮಗಳು ಇರುವಾಗ ಪಾರು ಹೊರಟುಹೋಗಿದ್ದಳು. ಮರುದಿನ ಬಂದಿದ್ದರೂ ನಮಗೆ ಜಮೀನುದಾರರ ಬಂಧು ಮಿತ್ರಾದಿಗಳ ಮನೆಗೆ ಔತಣಾದಿಗಳಿಗೆ ಹೋಗುವ ಸಂಭ್ರಮದಲ್ಲಿ ಹಾಡಿಸಲು ಸಮಯವಿಲ್ಲ; ಕೆಲಸದ ಗಲಾಟೆಯಲ್ಲಿ ಅವಳಿಗೂ ಪುರುಸೊತ್ತಿಲ್ಲ. ಕಿಟ್ಟಣ್ಣನಂತೂ ‘ಪಾರು ಹತ್ತಿರ ಹಾಡಿಸಬೇಕು. ಅವಳು ಬಂದರೆ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಅನೇಕ ಸಾರಿ ಹೇಳಿದ. ಆದರೆ ಹೇಳಿದೆನಲ್ಲ, ಗಡಿಬಿಡಿಯಲ್ಲಿ ಆಗಲೇ ಇಲ್ಲ. ಅಂತೂ ನಾವು ಹೊರಡುವ ತನಕವೂ ಪುನಃ ಅವಳಿಂದ ಹಾಡಿಸಲು ಏನೇನೋ ಕಾರಣಗಳಿಂದ ಆಗಲೇ ಇಲ್ಲ. ಹಾಗೆಯೇ ಹೊರಟುಬಿಟ್ಟೆವು.

ನಮ್ಮನ್ನು ಕಳಿಹಿಸಲು ಬಂದಿದ್ದವರೊಡನೆ ಅವಳೂ ಬಸ್ಸಿನತನಕ ಬಂದಿದ್ದಳು. ಬಸ್ಸು ಹತ್ತುವಾಗ ‘ಹೋಗಿ ಬರ್‍ತೇನೆ ಪಾರು; ನಿನ್ನ ಮದ್ವೆಗೆ ನಂಗೆ ಕಾಗ್ದಾ ಹಾಕ್ಸು’ ಎಂದೆ. ಅಲ್ಲೇ ನಿಂತಿದ್ದ ಅವಳ ತಂದೆ ‘ಹಾಕ್ದೆ ಇರ್‍ತೆವ್ಯೇ- ಆದರೆ ನೋಡ್ತಾಯಿ – ಲಗ್ನಕ್ಕೂ ದಿನ ಬರ್‍ಬೇಕಲ್ಲಾ’ ಎಂದು ನಿಟ್ಟಿಸಿರು ಬಿಟ್ಟರು.
* * *

ಎರಡು ವರ್ಷಗಳ ತರುವಾಯ ಕಿಟ್ಟಣ್ಣನ ಹೆಂಡತಿ ಅತ್ತಿಗೆ ತೌರೂರಿಗೆ ಹೋಗಿದ್ದಾಗ ಪಾರುವಿನ ಮದುವೆಯಾಯಿತಂತೆ. ನನಗೂ ಕಾಗದ ಬಂದಿತ್ತು. ಏನೇನೋ ಸಂದರ್ಭಗಳಿಂದ ಹೋಗಲಾಗಲಿಲ್ಲ. ಅತ್ತಿಗೆ ಹಿಂತಿರುಗಿ ಬಂದ ಮೇಲೆ ಅವಳಿಂದ ಪಾರುವಿನ ಸುದ್ದಿ ಎಲ್ಲಾ ಕೇಳಿ ತಿಳಿದುಕೊಂಡೆ. ಅತ್ತಿಗೆಯ ಹೇಳಿಕೆ; ದರಿದ್ರ ಗುಮಾಸ್ತರ ಕುರೂಪಿ ಮಗಳಿಗೆ ಅವಳ ಯೋಗ್ಯತೆಯನ್ನು ಮೀರಿದ ವರನೇ ದೊರೆತನೆಂದು. ಆದರೆ ಅಷ್ಟರಿಂದ ನನಗೆ ತೃಪ್ತಿಯಿಲ್ಲ. ಬಿಡಿಸಿ ಕೇಳಿದೆ. ಅವಳು ಹೇಳಿದ ಮಾತುಗಳಿವು. ‘ಹೌದು, ಅವಳಿಗೆ ಮದುವೆಯಾಯಿತು. ಆ ಕುರೂಪಿಗೆ ಯೋಗ್ಯನಾದ ವರನೆಲ್ಲಿ ದೊರೆಯಬೇಕು ಹೇಳು- ಅದೂ ವರದಕ್ಷಿಣೆ ಒಂದು ಕಾಸೂ ಇಲ್ಲದೆ. ಅದೇನೋ ಅವಳ ಪೂರ್ವ ಜನ್ಮದ ಸುಕೃತ. ಅದೇ ಸ್ವಲ್ಪ ಕ್ಷಯದವನಾದರೂ ಊಟ ಬಟ್ಟೆಗಳಿಗೆ ಕೊರತೆ ಇಲ್ಲದಷ್ಟು ಇರುವಾತ, ಎರಡು ಖರ್ಚನ್ನೂ ವಹಿಸಿಕೊಂಡು ಅವಳನ್ನು ಮದುವೆಯಾದ. ಗಂಡನ ಮನೆಯಲ್ಲಿ ಅತ್ತೆ ಮಾವ ಯಾರೂ ಇಲ್ಲ. ಗಂಡನನ್ನು ಸ್ವಲ್ಪ ಆರೈಕೆ ಮಾಡಿಕೊಂಡಿದ್ದರೆ ಸರಿ-ಉಂಡುಟ್ಟು ಸುಖವಾಗಿರಲು ಯಾವ ತೊಂದರೆಯೂ ಇಲ್ಲ. ನಿಜವಾಗಿಯೂ ಪಾರು ಭಾಗ್ಯ ಶಾಲಿನಿ’

ಜಮೀನದಾರರ ಏಕಮಾತ್ರ ಪುತ್ರಿ ಒಳ ಸಂಪಾದನೆ ಇರುವ ಡಾಕ್ಟರ್ ಕೃಷ್ಣಸ್ವಾಮಿಯ ಹೆಂಡತಿ. ತನ್ನಪ್ಪನ ದರಿದ್ರ ಗುಮಾಸ್ತರ ಮಗಳು ಪಾರುವನ್ನು ವರದಕ್ಷಿಣೆ ಖರ್ಚು – ವೆಚ್ಚ ಒಂದೂ ಇಲ್ಲದೆ ಕ್ಷಯರೋಗಿಯಾದರೇನು? ಉಂಡು ಬೇಕಾದಷ್ಟಿರುವಾತ ಮದುವೆಯಾದುದನ್ನು ನೋಡಿ ಅದು ಅವಳ ಭಾಗ್ಯ ಎಂದು ತಿಳಿದುಕೊಂಡರೆ ತಪ್ಪೇನು ಹೇಳಿ?

ಹೌದು, ಅದು ಅವಳ ಭಾಗ್ಯ!
*****
ಫೆಬ್ರವರಿ ೧೯೨೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿರುನದಿ
Next post ವಿಯೋಗ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys