ರಾಜಕಾರಣ ಮತ್ತು ಇನ್ನೊಂದು ಕಾರಣ

ರಾಜಕಾರಣ ಮತ್ತು ಇನ್ನೊಂದು ಕಾರಣ

ಮೌರಿಸ್ ಮರ್‍ಲೋ-ಪೋಂಟಿ (೧೯ಂ೮-೬೧) ಮತ್ತು ಜಾನ್-ಪಾಲ್ ಸಾರ್‍ತೃ (೧೯ಂ೫-೮ಂ) ಇಬ್ಬರೂ ಫ್ರಾನ್ಸ್ ಕಂಡ ಇಪ್ಪತ್ತನೆಯ ಶತಮಾನದ ಮಹಾ ಮೇಧಾವಿಗಳು. ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಒಲವಿದ್ದ ಇವರು ಎಂದೂ ಆ ಪಕ್ಷದ ಸದ್ಯಸ್ಯರಾಗಿರಲಿಲ್ಲ-ಕಮ್ಯೂನಿಸ್ಟ್ ಪರಿಭಾಷೆಯಲ್ಲಿ ಹೇಳುವುದಾದರೆ, ಪಾರ್ಟಿ ಕಾರ್ಡ್ ಹೋಲ್ಡರುಗಳಾಗಿರಲಿಲ್ಲ, ಅರ್ಥಾತ್ ಅವರು ‘ಸಕ್ರಿಯ’ ಕಮ್ಯೂನಿಸ್ಟ್ ರಾಜಕೀಯದಲ್ಲಿ ಭಾಗಿಗಳಾಗಿರಲಿಲ್ಲ. ಇದಕ್ಕೆ ಮರ್‍ಲೋ-ಪೋಂಟಿ ನಿಧಿನವಾದ ಮರುದಿನವೇ ಸಾರ್ತೃ ನೀಡಿದ ಕಾರಣ: ‘ಕಮ್ಯೂನಿಸ್ಟ್ ಪಾರ್ಟಿಗೆ ಹತ್ತಿರವಾಗಿ ಜೀವಿಸುವುದು ಸಾಧ್ಯವಾಗುವುದಕ್ಕೆ, ಕೆಲವೊಂದು ಟೀಕೆಗಳನ್ನದು ಒಪ್ಪಿಕೊಳ್ಳುವಂತೆ ಮಾಡುವುದಕ್ಕೆ, ರಾಜಕೀಯವಾಗಿ ಅಸಮರ್ಥರಾಗಿರುವುದು ನಮಗೆ ಅಗತ್ಯವಾಗಿತ್ತು, ಯಾಕೆಂದರೆ ಆಗ ಜನ ನಮ್ಮಲ್ಲಿ ಇನ್ನೊಂದು ಸಮರ್ಥತೆಯನ್ನು ಗುರುತಿಸುವುದಕ್ಕೆ ಸಾಧ್ಯವಿತ್ತು.’ ಇದು ಬಹಳ ಅರ್ಥಗರ್ಭಿತವಾದ ಮಾತು; ಹಾಗೂ ವಿಚಾರಸ್ಥಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನೊಬೆಲ್ ಬಹುಮಾನವನ್ನು ಕೂಡಾ ತಿರಸ್ಕರಿಸಿದ ಸಾರ್ತೃವಿನ ಬಾಯಲ್ಲಿ ಇದು ಆಶ್ಚರ್ಯವೂ ಎನಿಸುವುದಿಲ್ಲ. ನಿಜ, ಸಾರ್ತೃಗೆ ನೊಬೆಲ್ ಬಹುಮಾನ ಬಂದುದು ಮತ್ತು ಅವನದನ್ನು ಸ್ವೀಕರಿಸದೆ ಇದ್ದದ್ದು ಇನ್ನೂ ಮೂರು ವರ್ಷಗಳ ನಂತರ, ೧೯೬೪ರಲ್ಲಿ. ಆದರೂ ವಿಚಾರ ಸ್ವಾತಂತ್ರ್ಯದ ಕುರಿತಾಗಿ ಅವನಿಗಿದ್ದ ಗಾಢವಾದ ಒಲವನ್ನು ನಾವೀ ಮಾತುಗಳಲ್ಲಿ ಕಂಡುಕೊಳ್ಳಬಹುದು. ಇದೇ ಒಲವನ್ನು ಸಾರ್ತೃ ತನ್ನ ಒಡನಾಡಿ ಮರ್‍ಲೋ-ಪೋಂಟಿಯಲ್ಲೂ ಕಾಣುತ್ತಾನೆ.

ಸಾರ್ತೃವಿನ ಮಾತು ಮನನೀಯವಾದ್ದು. ನಮಗೆ ಪ್ರಿಯವಾಗಿರುವ ಪಕ್ಷದ ಜತೆ ಜೀವಿಸುತ್ತಲೇ ಅದರಿಂದ ವಿಮರ್ಶಾತ್ಮಕವಾದ ದೂರವನ್ನೂ ಕಾಯ್ದುಕೊಳ್ಳಬೇಕು ಎನ್ನುವುದು ಅವನ ಅಭಿಪ್ರಾಯ. ಇಂಥ ದೂರವನ್ನು ಕಾಯ್ದುಕೊಳ್ಳದಿದ್ದರೆ ಆ ಪಕ್ಷ ಕೆಲವು ತಪ್ಪುಗಳನ್ನು ಮಾಡಿದಾಗ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅಸಾಧ್ಯವಾಗುತ್ತದೆ. ಪಕ್ಷ ಹೀಗೆ ಒಪ್ಪಿಕೊಳ್ಳದಿದ್ದಾಗ ತಪ್ಪುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಮಾತ್ರವಲ್ಲ, ಅದರ ಉದ್ಧಟತನವೂ ಹೆಚ್ಚಿ ಅದೊಂದು ಸರ್ವಾಧಿಕಾರಿಯಂತೆ ವರ್ತಿಸುವ ಸಾಧ್ಯತೆಯೂ ಇದೆ. ವಿಮರ್ಶಕರಿಲ್ಲದೆ ಪಕ್ಷ ಬೆಳೆಯಲಾರದು, ತಾನು ಸಾಗುತ್ತಿರುವ ದಾರಿ ಸರಿಯೋ ತಪ್ಪೋ ಎನ್ನುವುದು ಅದಕ್ಕೆ ಗೊತ್ತೂ ಆಗಲಾರದು. ಆದರೆ ರಾಜಕೀಯ ಪಕ್ಷಗಳು ಯಾವತ್ತೂ ತಮ್ಮ ವಿರೋಧಿ ಪಕ್ಷಗಳ ಟೀಕೆಗಳನ್ನು ಸಹಿಸುವುದಿಲ್ಲ; ಆದ್ದರಿಂದ ವಿರೋಧ ಪಕ್ಷಗಳಿಂದ ಬರುವ ಟೀಕೆಗಳಿಂದ ಅದರ ಉದ್ಧಾರವೂ ಆಗಲಾರದು. ತನ್ನ ಕುರಿತಾಗಿ ಅನುಕಂಪವಿರುವವರಿಂದಲೇ ಪಕ್ಷ ಟೀಕೆಗಳಿಗೆ ಕಿವಿಗೊಡಬಹುದಷ್ಟೆ.

ಹೀಗೆ ನೀವು ವಿಮರ್ಶೆಯಲ್ಲಿ ತೊಡಗಿರಬೇಕಾದರೆ ಪಕ್ಷದಿಂದ ವಿಮರ್ಶಾತ್ಮಕ ‘ಸುದೂರ’ವನ್ನು ಕಾಯ್ದುಕೊಳ್ಳುವುದು ಅಗತ್ಯವಾಗುತ್ತದೆ. ಇದು ಎರಡು ಕಾರಣಗಳಿಗಾಗಿ: ಒಂದನೆಯ ಕಾರಣವೆಂದರೆ, ಪಕ್ಷದೊಳಗೇ ಇದ್ದರೆ ಅದರ ತಪ್ಪುಗಳು ಕಾಣಿಸುವುದೇ ಇಲ್ಲ, ಯಾಕೆಂದರೆ ತಪ್ಪುಗಾರರು ನೀವೇ ಆಗಿರುತ್ತೀರಿ! ಯಾವುದೇ ವಿಮರ್ಶೆಗೆ ಇಂಥ ಸುದೂರದ ಅಗತ್ಯವಿದೆ. ಎರಡನೆಯ ಕಾರಣವೆಂದರೆ, ಪಕ್ಷದ ಕಾರ್ಡ್ ಹೋಲ್ಡರ್ ನೀವಾಗಿದ್ದಲ್ಲಿ ಅದರ ತೀರ್ಮಾನಗಳಿಗೆ ಬದ್ಧರಾಗಿರುತ್ತೀರಿ. ಅದರೊಳಗೇ ಇದ್ದುಕೊಂಡು ಪಕ್ಷದ ವಿರುದ್ಧ ಮಾತಾಡುವುದು ಕಷ್ಣವಾಗುತ್ತದೆ. ಆದ್ದರಿಂದ ರಾಜಕೀಯವಾಗಿ ಅಸಮರ್ಥರಾಗಿರುವುದು ಅಗತ್ಯವಾಗುತ್ತದೆ: ರಾಜಕೀಯವಾಗಿ ಅಸಮರ್ಥರಾಗಿರುವುದು ಎಂದರೆ ಪಕ್ಷರಾಜಕಾರಣದಿಂದಲೂ ಸಕ್ರಿಯ ರಾಜಕಾರಣದಿಂದಲೂ ದೂರ ಉಳಿಯುವುದು ಎಂದರ್ಥ-ಉದಾಹರಣೆಗೆ, ಪಕ್ಷದೊಳಗೇ ಅಧಿಕಾರ ಹಿಡಿಯುವುದು, ಅಲ್ಲಿಯೇ ಮೇಲು ಮೇಲಕ್ಕೆ ಏರುವುದು, ಸಾರ್ವಜನಿಕ ಚುನಾವಣೆಯಲ್ಲಿ ಸರ್ಧಿಸುವುದು ಇತ್ಯಾದಿ.

ಇದಕ್ಕಿಂತಲೂ ಹೆಚ್ಚು ನನಗೆ ಪ್ರಿಯವಾಗಿ ಕಾಣಿಸುವುದು ಸಾರ್ತೃ ‘ಇನ್ನೊಂದು ಸಮರ್ಥತೆ’ಯ ಕುರಿತಾಗಿ ಹೇಳುವ ಮಾತು. ಇದೇನು ಇನ್ನೊಂದು ಸಮರ್ಥತೆ ಎಂದರಾ? ಇನ್ನೊಂದು ಸಮರ್ಥತೆಯೆಂದರೆ, ವಿಮರ್ಶಾತ್ಮಕ ದೃಷ್ಪಿಯನ್ನು ಬೆಳಸಿಕೊಳ್ಳುವುದು ಮತ್ತು ಅದರ ಉಪಯೋಗವನ್ನು ರಾಜಕೀಯಕ್ಕೆ ಅರ್ಥಾತ್ ಸಮಾಜಕ್ಕೆ ನೀಡುವುದು. ಆದರೆ ಇಂಥ ಸಮರ್ಥತೆಯೊಂದನ್ನು ಬೆಳೆಸಿಕೊಳ್ಳುವುದು ಹೇಗೆ? ಅಥವಾ ಬೆಳೆಸಿಕೊಂಡ ಮಾತ್ರಕ್ಕೆ ಯಾರಾದರೂ ಅಂಥವರ ಮಾತಿಗೆ ಕಿವಿಗೊಡುತ್ತಾರೆಯೇ? ಹೀಗೆಂದು ಕೇಳಿದರೆ ಇಲ್ಲಿ ಸಾರ್ತೃ ವ್ಯಕ್ತಿವಾಗಿ ಹೇಳದ ಒಂದು ಸಂಗತಿಯೂ ಇದೆಯೆಂದು ನನಗನಿಸುತ್ತದೆ. ಅದೆಂದರೆ, ವಿಚಾರವಾದಿಯೊಬ್ಬನ ವೈಚಾರಿಕ ಸಮರ್ಥತೆ, ಲೇಖಕನೊಬ್ಬನ ಲೇಖನ ಸಮರ್ಥತೆ, ತತ್ವಜ್ಞಾನಿಯೊಬ್ಬನ ತಾತ್ವಿಕ ಸಮರ್ಥತೆ, ವಿಜ್ಞಾನಿಯೊಬ್ಬನ ವೈಜ್ಞಾನಿಕ ಸಮರ್ಥತೆ ಇತ್ಯಾದಿ. ನಮ್ಮದೇ ಕಾಲದ ಒಂದು ಉದಾಹರಣೆಯನ್ನು ಕೊಡುವುದಾದರೆ, ಅಮೇರಿಕದ ಪ್ರಸಿದ್ಧ ಭಾಷಾವಿಜ್ಞಾನಿ ನೋಮ್ ಚಾಮ್‌ಸ್ಕಿ ಸಾರ್ತೃವಿನಂತೆಯೇ ಎಡಪಂಥದಲ್ಲಿ ಒಲವಿರುವ ಒಬ್ಬ ವಿದ್ವಾಂಸ. ಆದರೆ ಈತನೂ ನನಗೆ ಗೊತ್ತಿದ್ದ ಹಾಗೆ ಯಾವುದೇ ಪಾರ್ಟಿಯ ಸದಸ್ಯನಲ್ಲ-ಅರ್ಥಾತ್ ಸಾರ್ತೃ ಹೇಳುವಂತೆ, ರಾಜಕೀಯವಾಗಿ ಚಾಮ್‌ಸ್ಕಿ ‘ಅಸಮರ್ಥ’. ಮಾತ್ರವಲ್ಲ, ಜನವಿರೋಧಿ, ಜೀವವಿರೋಧಿ ಕಾರ್ಯಗಳನ್ನು ಪಕ್ಷಭೇದವಿಲ್ಲದೆ ಚಾಮ್‌ಸ್ಕಿ ಎಲ್ಲಿದ್ದರೂ ವಿರೋಧಿಸುತ್ತಾನೆ. ಎಲ್ಲಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ, ಚಾಮ್‌ಸ್ಕಿ ತನ್ನ ಔದ್ಯೋಗಿಕ ಪರಿಣತಿಯಾದ ಭಾಷಾವಿಜ್ಞಾನ ಮತ್ತು ಮನೋವಿಜ್ಞಾನಗಳಲ್ಲಿನ ಪಾಂಡಿತ್ಯವನ್ನು ಎಂದೂ ರಾಜಕೀಯಕ್ಕೆ ಎರವಾಗಿಸಿಕೊಂಡದ್ದಿಲ್ಲ. ಚಾಮ್‌ಸ್ಕಿ ಒಬ್ಬ ರಾಜಕೀಯ ವಿಶ್ಲೇಷಕನೆಂದು ಹೆಸರು ಮಾಡುವುದಕ್ಕೆ ಬಹಳ ಹಿಂದೆಯೇ ಕ್ರಾಂತಿಕಾರಿ ಭಾಷಾವಿಜ್ಞಾನಿಯೆಂದು ಹೆಸರು ಮಾಡಿದ್ದ; ಹಾಗೂ ಆ ಸ್ಥಾನವನ್ನವನು ಅವನು ಇನ್ನೂ ಕಾಪಾಡಿಕೊಂಡಿದ್ದಾನೆ. ಇದೂ ಸಾರ್ತೃ ಹೇಳುವ ಆ ಇನ್ನೊಂದು ಸಮರ್ಥತೆಗೆ ಮುಖ್ಯವಾಗುತ್ತದೆ. ಅದಲ್ಲವೆಂದಾದರೆ ಪೂರ್ಣಪ್ರಮಾಣದ ರಾಜಕೀಯಪಟುವಿಗೂ ಇಂಥ ವಿಮರ್ಶಕರಿಗೂ ಏನು ವ್ಯತ್ಯಾಸ? ಒಂದು ವೇಳೆ ಚಾಮ್‌ಸ್ಕಿ ಭಾಷಾವಿಜ್ಞಾನಕ್ಕೆ ವಿದಾಯ ಹೇಳಿ ಪೂರ್ತಿಯಾಗಿಯೂ ಸಕ್ರಿಯವಾಗಿಯೂ ರಾಜಕೀಯದಲ್ಲಿ ತೊಡಗುತ್ತಿದ್ದರೆ, ಆ ‘ಇನ್ನೊಂದು ಸಮರ್ಥತೆ’ ಅಷ್ಟರಮಟ್ಟಿಗೆ ವ್ಯತ್ಯಯವಾಗುತ್ತಿತ್ತು. ಹಾಗೂ ಅಷ್ಟರ ಮಟ್ಟಿಗೆ ಅವನ ವಿಮರ್ಶಾಪಜ್ಞೆಯೂ ಸೊರಗುತ್ತಿತ್ತು.

ಹೀಗೆ ‘ರಾಜಕೀಯ ಅಸಮರ್ಥತೆ’ಗೂ ‘ವಿಮರ್ಶಾ ಸಮರ್ಥತೆ’ಗೂ ವಿಲೋಮ ಅನುಪಾತವಿರುವುದು ಮಹತ್ವದ ಸಂಗತಿ. ಎಲ್ಲಾ ಕಾಲಕ್ಕೂ ಅನ್ವಯಿಸುವ ಈ ಮಾತನ್ನು ನಮ್ಮ ಕಾಲಕ್ಕೆ ಅನ್ವಯಿಸಿಕೊಂಡರೆ ಈ ಅಮೂರ್ತ ವಿಚಾರಗಳೆಲ್ಲವೂ ಸ್ಪಷ್ಟವಾಗುತ್ತ ಹೋಗುತ್ತವೆ. ಹಾಗೂ ರಾಜಕೀಯ ಸಮರ್ಥತೆಗೋಸ್ಕರ ತಮ್ಮ ವಿಮರ್ಶಾ ಸಮರ್ಥತೆಯನ್ನು ಕಳೆದುಕೊಳ್ಳಲು ತಯಾರಿರುವ ಅಧ್ಯಾಪಕರು, ವಿಚಾರವಾದಿಗಳು, ಸಾಹಿತಿಗಳು ಹಾಗೂ ಇತರ ಪರಿಣತರು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ವೈಚಾರಿಕತೆಯಾಗಲಿ, ವಿಮರ್ಶೆಯಾಗಲಿ ರಾಜಕೀಯ ಶಕ್ತಿಯ ಮುಂದೆ ಏನೂ ಮಾಡಲಾರದು ಎಂಬ ಒಂದು ಅಭಿಪ್ರಾಯ ಕೆಲವರಲ್ಲಿ ಇರುವುದನ್ನೂ ಕಾಣಬಹುದು. ಇಡೀ ಜೀವಮಾನದಲ್ಲಿ ಮಾಡಲಾರದ್ದನ್ನು ಒಬ್ಬ ರಾಜಕೀಯ ಪ್ರವರ್ತಕನಾಗಿ ಒಂದು ಕ್ಷಣದಲ್ಲಿ ಮಾಡಬಲ್ಲೆ ಎನ್ನುವುವರೂ ಇದ್ದಾರೆ. ಈ ಭ್ರಮೆಯುಳ್ಳವರು ಸೋತು ಸುಣ್ಣಾಗಿರುವುದೂ ಕಂಡುಬರುತ್ತದೆ. ಆಮೇಲೆ ಅವರು ತಂತಮ್ಮ ಪರಿಣತಕ್ಷೇತ್ರಗಳಿಗೆ ಮರಳಲಾರರು. ಇದರಿಂದ ಪಕ್ಷಕ್ಕೆ ಒಬ್ಬ ವ್ಯಕ್ತಿ ಸಿಕ್ಕಿದ ಹಾಗಾಯಿತಲ್ಲದೆ ಮತ್ತೇನೂ ಲಾಭವಿಲ್ಲ.

ಸದ್ಯದ ರಾಜಕೀಯ ಪರಿಸರದಲ್ಲಿ ಇಂಥ ‘ಬುದ್ದಿಜೀವಿ’ಗಳಿಗೆ ರಾಜಕೀಯ ಸಮರ್ಥತೆ ಬೆಳೆಸಿಕೊಳ್ಳುವುದಕ್ಕೆ ಪಕ್ಷದ ಸಕ್ರಿಯ ಸದಸ್ಯನಾಗುವ ಅಗತ್ಯವೂ ಇಲ್ಲ. ವಿಮರ್ಶಾತ್ಮಕ ಸುದೂರವನ್ನು ಬಿಟ್ಟುಕೊಟ್ಟು ಪಕ್ಷದೊಂದಿಗೆ ತನ್ನನ್ನು ತಾನು ಜಾಣತನದಿಂದ ಗುರುತಿಸಿಕೊಂಡರೆ ಸಾಕು. ಹಾಗೂ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಇಂಥ ಗುರುತಿನವರಿಗೆ ಏನಾದರೂ ಪ್ರತಿಫಲ ಸಿಕ್ಕಿಯೂ ಸಿಕ್ಕುತ್ತದೆ. ಅದು ಪದಾರ್ಥರೂಪದಲ್ಲಿ ಇಲ್ಲದಿದ್ದರೂ ಚಿಂತಿಲ್ಲ, ಪರಭಾವರೂಪದಲ್ಲಿದ್ದರೂ ಸಾಕು. ರಾಜನಪ್ಟೇ ರಾಜನ ಸಲಹಾಕಾರ ಕೂಡಾ ಶಕ್ತಿವಂತನಾಗಿರುವ ವಿದ್ಯಮಾನವನ್ನೇ ನಾವಿಲ್ಲಿ ಕಾಣುವುದು. ವಾಸ್ತವದಲ್ಲಿ ಈ ಹೊಣೆರಹಿತ ಅಧಿಕಾರ ಹೊಣೆಗಾರಿಕೆಯ ಅಧಿಕಾರಕ್ಕಿಂತ ಹೆಚ್ಚು ಕೇಡಿನದು. ಹಾಗೂ ಒಮ್ಮೆ ಇದನ್ನು ಸವಿದ ವ್ಯಕ್ತಿ ರಕ್ತದ ರುಚಿ ಕಂಡ ಮೃಗದಂತೆ ಮತ್ತೆ ಮತ್ತೆ ಅದನ್ನು ಬಯಸುತ್ತಲೇ ಇರುತ್ತಾನೆ.

ಇದಕ್ಕೆ ಸಾಮ್ಯವಾಗಿ ‘ಬೀದಿಗಿಳಿದು ಹೋರಾಡುವ’ ಒಂದು ರಾಜಕೀಯವಿದೆ. ಇದು ಹೆಚ್ಚಾಗಿ ಬಾಧಿಸುವುದು ನಮ್ಮ ವಿದ್ಯಾಲಯಗಳ ಅಧ್ಯಾಪಕ ಮತ್ತು ವಿದ್ಯಾರ್ಥಿ ವರ್ಗಗಳನ್ನು. ಕಳದ ಶತಮಾನದ ಎಪ್ತತ್ತರ ದಶಕದಲ್ಲಿ ನಾನು ಕೇರಳದ ಹಲವೆಡೆ ಕಾಲೇಜು ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾಗ ನಾನಿದನ್ನು ಕಣ್ಣಾರೆ ಕಂಡವನು. ವರ್ಷವೊಂದಕ್ಕೆ ಸುಮಾರು ೧೮೬ ದಿನಗಳಷ್ಟು ಪಾಠಗಳಿರಬೇಕಾದಲ್ಲಿ ನೂರು ದಿನಗಳು ಪಾಠವಾದರೆ ಹೆಚ್ಚು ಎಂಬಂತಿತ್ತು. ಭಾರತದ ಶಿಕ್ಷಣ ಸರಿಸ್ಥೆಗಳಲ್ಲಿ ಆಗಲೇ ಸಕ್ರಿಯ ರಾಜಕಾರಣದ ಪ್ರವೇಶ ಆಗಿದ್ದಿತು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅದರದ್ದೇ ಆದ ವಿದ್ಯಾರ್ಥಿ ಸಂಘಗಳಿದ್ದುವು; ಹಾಗೂ ಅಧ್ಯಾಪಕರು ಕೂಡಾ ಆರಂಭದಲ್ಲಿ ಗುಪ್ತವಾಗಿ ಆಮೇಲೆ ಪ್ರಕಟವಾಗಿಯೂ ತಮಗೆ ಒಲವಿರುವ ಇಂಥ ಸಂಘಗಳ ಸಂಪರ್ಕದಲ್ಲಿರುತ್ತಿದ್ದರು. ಇದರಿಂದಾಗಿ ಕೇವಲ ವಿದ್ಯಾರ್ಥಿ ವರ್ಗ ಮಾತ್ರವೇ ಅಲ್ಲ, ಅಧ್ಯಾಪಕ ವರ್ಗ ಕೂಡಾ ರಾಜಕೀಯವಾಗಿ ಹಲವು ಪಕ್ಷಗಳಾಗಿ ಒಡೆದಿದ್ದುವು. ಹಾಗೂ ಪ್ರತಿಯೊಂದು ಸಂಘವೂ ಒಂದಲ್ಲ ಒಂದು ಕಾರಣಕ್ಕೆ ‘ಹೋರಾಡುವುದು’ ಅದರ ಅಸ್ತಿತ್ವ, ಬೆಳವಣಿಗೆ ಮತ್ತು ಪ್ರಾಬಲ್ಯದ ದೃಷ್ಟಿಯಿಂದ ಆಗತ್ಯವಾಗಿತ್ತು. ಈ ಎಲ್ಲ ಹೋರಾಟಗಳೂ ಕೆಲವು ಸಣ್ಣ ದೊಡ್ಡ ಸಾಮಾಜಿಕ ನ್ಯಾಯದ ಕಾರಣದಿಂದಲೋ ನೆಪದಿಂದಲೋ ನಡೆಯುತ್ತಿದ್ದ ಕಾರಣ ಇವನ್ನು ವಿರೋಧಿಸುವ ಹಾಗೂ ಇರಲಿಲ್ಲ. ಈಗ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ ನಿಜ; ಆದರೂ ‘ವಿದ್ಯಾರ್ಥಿ ಶಕ್ತಿ’ ಎಂಬ ಶಕ್ತಿಯೊಂದು ನಿಲವಿಗೆ ಬಂದಿದೆ. ಈ ಶಕ್ತಿ ಎಳ್ಳಷ್ಟೂ ವಿಧ್ಯಾಭ್ಯಾಸಕ್ಕೆ ಉಪಯೋಗವಾಗುತ್ತಿಲ್ಲ ಎನ್ನುವುದು ಬೇರೆ ಮಾತು. ತಮಗೆ ಸರಿಯಾಗಿ ಕ್ಲಾಸು ನಡೆಯುತ್ತಿಲ್ಲ ಎಂದೋ, ಲೈಬ್ರರಿಯಲ್ಲಿ ಪುಸ್ತಕಗಳು ದೊರಕುತ್ತಿಲ್ಲ ಎಂದೋ ಯಾವ ವಿದ್ಯಾರ್ಥಿ ಶಕ್ತಿಯೂ ಹೋರಾಟ ನಡೆಸಿದ್ದು ಕಂಡುಬರುವುದಿಲ್ಲ.

ಯಾಕೆಂದರೆ, ರಾಜಕೀಯ ಪ್ರಣೀತವಾದ ಈ ಶಕ್ತಿಗೆ ಇಂಥವು ಸರಿಯಾದ ರಾಜಕೀಯ ಕಾರಣಗಳಾಗುವುದಿಲ್ಲ. ಈ ಎಪ್ಪತ್ತರ ದಶಕದಲ್ಲಿ ಬಂದಂಥ ವಿದ್ಯಾರ್ಥಿಗಳ ಭವಿಷ್ಯವೇನಾಯಿತೆನ್ನುವುದರ ಅಧ್ಯಯನ-ಅಥವಾ ಈ ಬಗೆಯ ಯಾವುದೇ ವೃಜ್ಞಾನಿಕವಾದ ಅಧ್ಯಯನ-ನಡೆದಿಲ್ಲವೆನ್ನುವುದು ದುರದೃಷ್ಟಕರ.

ಬ್ರಿಟನಿನ ಸೈನಿಕರು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನ ರಗ್ಬಿ ಫೂಟ್ಬಾಲ್ ಮೈದಾನುಗಳಲ್ಲಿ ತಯಾರಾಗುತ್ತಾರೆ ಎನ್ನುವ ಒಂದು ಮಾತಿದೆ. ಅದೇ ರೀತಿ ಭಾರತದ ರಾಜಕಾರಿಣಿಗಳು ಕಾಲೇಜು ಯುನಿವರ್ಸಿಟಿಗಳಲ್ಲಿ ತಯಾರಾಗುತ್ತಾರೆ. ಕಾಲೇಜು ಯುನಿವರ್ಸಿಟಿಗಳ ವಿದ್ಯಾರ್ಥಿ ಸಂಘಗಳು ಮಿನಿ ರಾಷ್ಟ್ರೀಯ ಚುನಾವಣೆಗಳಾಗಿಬಿಟ್ಟಿವೆ. ಇವು ಮಾದರಿ ಚುನಾವಣೆಗಳಾಗಿರುತ್ತಿದ್ದರೆ ಆ ಮಾತು ಬೇರೆ. ಆದರೆ ಹಾಗಾಗದೆ, ಕೆಟ್ಟ ರಾಷ್ಟೀಯ ಚುನಾವಣೆಗಳ ಡ್ರೆಸ್ ರಿಹರ್ಸಲುಗಳಾಗಿವೆ. ಇಲ್ಲಿ ನಡೆಯುವ ಹಣ ಹೆಂಡಗಳ ವಿತರಣೆ, ಪ್ರಾಣಹಾನಿ ಎಲ್ಲವೂ ಎಷ್ಟು ಸಾಮಾನ್ಯವಿಗಿಬಿಟ್ಟದೆಯೆಂದರೆ ಬಹುಬೇಗನೆ ನಾವಿದಕ್ಕೆ ಪ್ರತಿಕ್ರಿಯಿಸದೆ ಇರಬಹುದು. ವಿದ್ಯಾರ್ಥಿಗಳು ಓದಿ ಬರೆದು ಮಾಡಬೇಕಾದ ಪ್ರಾಯದಲ್ಲಿ ಇಂಥ ಘೋರ ಕೃತ್ಯಗಳಲ್ಲಿ ಬದುಕು ಹಾಳುಮಾಡಿಕೊಂಡರೆ ಹೇಗೆ? ಇದಕ್ಕೆ ದೂರಬೇಕಾದ್ದು ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳ ಮಿದುಳು ತೊಳೆಯುವ ಕೆಲಸ ಮಾಡುವ ರಾಜಕೀಯ ಪಕ್ಷಗಳನ್ನು ಮಾತ್ರವೇ ಅಲ್ಲ, ವಿದ್ಯಾರ್ಥಿಗಳಿಗೆ ಕೆಟ್ಟ ಮಾದರಿಗಳಾಗುತ್ತಿರುವ ಅಧ್ಯಾಪಕ, ಸಾಹಿತಿ, ಮೇಧಾವಿ, ವಿಚಾರವಾದಿ ವರ್ಗಗಳನ್ನು ಕೂಡಾ. ಯಾಕೆಂದರೆ ಈ ವರ್ಗದ ಪ್ರಾತಿನಿಧಿಕರೆಂದು ಕರೆಸಿಕೊಳ್ಳುವವರು ಸಹಾ ಪಕ್ಷ ರಾಜಕಾರಣದಿಂದ ಸಾರ್ತೃ ಹೇಳಿದ ಸುದೂರವನ್ನು ಕಾಯ್ದುಕೊಳ್ಳುತ್ತಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೧
Next post ಪತ್ರ ವಾಹಿನಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys