ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾಮಾನ್ಯ ಶಿಕ್ಷಣ

ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾಮಾನ್ಯ ಶಿಕ್ಷಣ

ಸಮಕಾಲೀನ ಸಂದರ್ಭದ ಭಾರತದಲ್ಲಿ ಸಾಮಾನ್ಯ ಶಿಕ್ಷಣವು ಡೋಲಾಯಮಾನವಾಗುತ್ತಿದೆ. ಇಂತಹ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ಮೀರಿದ ಮತ್ತು ಇದರೊಂದಿಗೆ ಅಂತರ್ ಸಂಬಂಧವನ್ನು ಇರಿಸಿಕೊಂಡ ಒಟ್ಟು ನಮ್ಮ ವ್ಯವಸ್ಥೆಯೇ ಕಾರಣವಾಗುತ್ತಿದೆ. ಇದರಲ್ಲಿ ವರ್ತಮಾನವೂ ಇದೆ; ಸೂಕ್ಷ್ಮವಾಗಿ ನೋಡಿದಾಗ ನಮ್ಮ ಚರಿತ್ರೆಯೂ ಇದಕ್ಕೆ ಕಾಲದಿಂದ ಕಾಲಕ್ಕೆ ಪೂರಕ ಸನ್ನಿವೇಶವನ್ನು ನಿರ್ಮಾಣ ಮಾಡಿದ ಕಥನ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ.

ಕಳೆದ ದಶಕದಿಂದೀಚೆಗೆ ಕಂಪ್ಯೂಟರ್ ಮತ್ತು ಇಂಗ್ಲೀಷ್-ಇವುಗಳ ಅಬ್ಬರ ಹೆಚ್ಚಾಗುತ್ತಿದೆ. ಇದು ಕೇವಲ ಭಾರತದ ಚಿತ್ರವಲ್ಲ; ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಿರ್ಮಾಣವಾಗುತ್ತಿರುವ ಸನ್ನಿವೇಶದ ಚಿತ್ರ. ಇದಕ್ಕೆ ಸಾಮ್ರಾಜ್ಯಶಾಹಿಯ ಮತ್ತೊಂದು ರೂಪವಾದ ಜಾಗತಿಕ ಬಂಡವಾಳಶಾಹಿಯ ಪಾತ್ರವೂ ಇದೆ. ಇಲ್ಲಿ ಖಾಸಗೀಕರಣದ ಸಾಮ್ರಾಜ್ಯ ಮೇರೆ ಮೀರುತ್ತಿದೆ; ಅದರ ಅಧಿಪತಿಯಾಗಿ ಅಮೇರಿಕವು ಸಾರ್ವಭೌಮವಾಗುತ್ತಿದೆ. ಇಂತಹ ಜಾಗತಿಕ ಸನ್ನಿವೇಶದಲ್ಲಿ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದು ಬಿರುಗಾಳಿಯೂ ಆಗಿ ಮಾರ್ಪಡುತ್ತಿರುವುದರಿಂದ ಸಂವಿಧಾನ ಮತ್ತು ಅದರ ಆಶಯಗಳು ತರಗೆಲೆಯಾಗುತ್ತಿವೆ. ಆದ್ದರಿಂದ ಭಾರತದ ಶಿಕ್ಷಣ ರಂಗವನ್ನು ನಮ್ಮ ಪಾರ್ಲಿಮೆಂಟಲ್ಲದ ಅಮೇರಿಕದ ವೈಟ್‌ಹೌಸ್ ಮೂಲದ ಬಂಡವಾಳಶಾಹಿ ನೆಲೆಗಳು ನಿಯಂತ್ರಿಸುವಂತಾಗುತ್ತಿದೆ. ಆದರ ಜಾಗದಲ್ಲಿ ಹೇಗೋ ಇದ್ದ ಜನಪರವಾದ ಜ್ಞೆನದ ನೆಲೆಗಳು ಗೈರುಹಾಜರಿಯನ್ನು ಪಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಸಾಮಾನ್ಯ ಶಿಕ್ಷಣದ ನೆಲೆ ಮತ್ತು ಹಿನ್ನೆಲೆ ಹಾಗೂ ಮುನ್ನೆಲೆಗಳನ್ನು ಕುರಿತ ತಾತ್ವಿಕ ಚರ್ಚೆ ಇಲ್ಲಿಯ ಅಗತ್ಯವೆಂದು ಭಾವಿಸುತ್ತೇನೆ.

ಬ್ರಿಟಿಷ್ ವಸಾಹತುಶಾಹಿ ಪೂರ್ವ ಭಾರತದಲ್ಲಿ ಶಿಕ್ಷಣವೆಂಬುದು ಬಹುಸಂಖ್ಯಾತರಿಗೆ ‘ಅಸ್ಪೃಶ್ಯ’ವಾಗಿತ್ತು. ಹಾಗಾಗಿ ಭಾರತವು ಬೌದ್ಧಿಕವಾಗಿ ಬಡವಾಯಿತು. ಚರಿತ್ರೆಯಲ್ಲಿ ಲಭ್ಯ ಕೃತಿಗಳನ್ನು ಆಧರಿಸಿಯೇ ಈ ಮಾತನ್ನು ಹೇಳಲಾಗುತ್ತಿದೆ.

ಸಾವಿರಾರು ವರ್ಷಗಳ ಈ ಅವಧಿಯಲ್ಲಿ ಶೇಕಡ ಒಂದು ಕೈ ಬೆರಳಿನಷ್ಟರ ಜನರಿಂದ ಶಿಕ್ಷಣವು ವಿಕೇಂದ್ರೀಕರಣಕ್ಕೆ ಒಳಗಾಗಿದ್ದರೆ, ಅಲ್ಲಿ ಬೆಳಕಿನ ಪರ್ವತವೇ ಏಳಬಹುದಿತ್ತು. ಆದರೆ ಹಾಗಾಗಲಿಲ್ಲ. ಅಲ್ಲಿ ಕೆಲವು ದೀಪಗಳಷ್ಟೇ ಉರಿದವು. ಅದರಿಂದ ಕೆಲವೇ ಮಂದಿ ಬೆಳಕನ್ನು ಪಡೆದರು. ಆದ್ದರಿಂದ ಅಲ್ಲಿ ಕತ್ತಲ ಮೊತ್ತವೇ ಹೆಚ್ಚಾಯಿತು. ಅದು ಅಲ್ಪ ಬೆಳಕಿನ ಇತಿಹಾಸದಲ್ಲಿ ಕಾಣಲೂ ಸಾಧ್ಯವಾಗದಾಯಿತು. ಅದು ನಾವು ಈಗಾಗಲೇ ನಿರ್ವಚಿಸಿಕೊಂಡಿರುವ ‘ಭವ್ಯ’ ಭಾರತದ ಶಿಕ್ಷಣದ ಇತಿಹಾಸ.

ಹೀಗೆ ಸಾವಿರಾರು ವರ್ಷಗಳ ಭಾರತದಲ್ಲಿ ಶಿಕ್ಷಣಕ್ಕೆ ’ಅಸ್ಪಶ್ಯ’ವಾಗಿದ್ದ ಬಹುಸಂಖ್ಯಾತ ಜನತೆ ಬ್ರಿಟಿಷ್ ವಸಾಹತುಶಾಹಿಗಳ ಆಡಳಿತದ ಕಾಲದಲ್ಲಿ ಸ್ಪೃಶ್ಯವಾಯಿತು. ಆ ಸ್ಪೃಶ್ಯತೆಯಲ್ಲಿ ಕೆಲವೇ ಸಂಖ್ಯೆಯ ಬ್ರಿಟಿಷರು ಬಹು ಸಂಖ್ಯೆಯ ಭಾರತೀಯರನ್ನು ಸುಗಮವಾಗಿ ಮತ್ತು ಸಮರ್ಥವಾಗಿ ಆಳಬೇಕಾದ ಹುನ್ನಾರದಿಂದ ಅವರನ್ನು ಆಡಳಿತದಲ್ಲಿ ಬಳಸಬೇಕಾದ ಸನ್ನಿವೇಶವೊದಗಿ ಅವರಿಗೆ ಬೇಕಾದ ಶಿಕ್ಷಣವನ್ನಷ್ಟೇ ನೀಡಿದರು. ಅಲ್ಲಿ ಇಂಗ್ಲೀಷ್, ಪಾಶ್ಚಾತ್ಯ ಜಗತ್ತಿನ ನಾಗರೀಕತೆ-ಸಂಸ್ಕೃತಿ, ಇತಿಹಾಸ, ಸಾಹಿತ್ಯ, ವಿಜ್ಞೆನ ಇವುಗಳನ್ನು ಸೇರಿಸುವುದನ್ನು ಮರೆಯಲಿಲ್ಲ. ಹಾಗಾಗಿ ವಸಾಹತುಶಾಹಿ ರೂಪಿಸಿದ ಭಾರತೀಯ ಹೊಸ ಸಂಸ್ಕೃತಿಯಲ್ಲಿ ನವ ಬೌದ್ಧಿಕರು ಮೂಡಿದರು. ಇವರ ಒಳಗೆ ಭಾರತವೂ ಪಶ್ಚಿಮವೂ ಒಟ್ಟೊಟ್ಟಿಗೆ ಮೂಡಿದ್ದರಿಂದ ಮುಂದಿನ ಪರಿಣಾಮ ಬೇರೆಯೇ ಆಯಿತು. ಅದರ ಕತೆ ಇಲ್ಲಿಗೆ ಅಗತ್ಯವಿಲ್ಲವೆಂದು ಭಾವಿಸುತ್ತೇನೆ. ಅಂತೂ ಸಾವಿರಾರು ವರ್ಷಗಳಿಂದ ’ಸಂಸ್ಕೃತ’ದಲ್ಲಿ ಬಂಧಿಯಾಗಿದ್ದ ಶಿಕ್ಷಣವು ಇಲ್ಲಿ ’ಇಂಗ್ಲೀಷಿ’ಗೆ ಸ್ಥಳಾಂತರವಾಗಿ ಸ್ವಲ್ಪ ಅನಿರ್ಬಂಧಿತವೂ ಆಯಿತು. ಅಲ್ಲಿ ಸಂಸ್ಕೃತದ ಎದುರಿನಲ್ಲಿ ಎರಡನೆಯ ದರ್ಜೆಯವಾಗಿದ್ದ ಜನಭಾಷೆಗಳು ಮತ್ತು ಜನ ಇಲ್ಲಿ ಇಂಗ್ಲೀಷು ಮತ್ತು ಇಂಗ್ಲೀಷಿನ ಎದುರು ಎರಡನೆಯವರೇ ಆದರು. ಆದರೂ ಬ್ರಿಟಿಷ್ ಶಿಕ್ಷಣವು ಎಷ್ಟೇ ಸ್ವಾರ್ಥಮೂಲದ್ದಾಗಿದ್ದರೂ ಇಲ್ಲಿ ಭಾರತೀಯ ಬದುಕಿನಲ್ಲಿ ಆರೋಗ್ಯಕರ ಬೆಳವಣಿಗೆಗಳಿಗೆ ನಾಂದಿ ಹಾಡಿತೆಂದೇ ಹೇಳಬೇಕು.

ಹೀಗೆ ವಸಾಹತುಶಾಹಿ ಭಾರತದ ಸಂಸ್ಕೃತಿಯಲ್ಲಿ ಸಂಭವಿಸಿದ ’ಅಕ್ಷರಕ್ರಾಂತಿ’ ಇದುವರೆಗೂ ಸುಮಾರು ಶೇ. ೯೦ ರಷ್ಟರ ಸಾಕ್ಷರತೆಯ ಪ್ರಗತಿಯನ್ನು ಸಾಧಿಸಿದೆ. ಇದರಲ್ಲಿ ಸಾಮಾನ್ಯ ಶಿಕ್ಷಣವೇ ಪ್ರಧಾನವಾಗಿ, ಸಂಸ್ಕೃತಿ ಮತ್ತು ಅದರ ಅಗತ್ಯತೆಗಳನ್ನು ಪೂರೈಸುವಷ್ಟರ ಮಟ್ಟಿಗಿನ ವಿವೇಕವುಳ್ಳದಾಗಿ ವೃತ್ತಿಶಿಕ್ಷಣವು ತನ್ನ ಪಾತ್ರವನ್ನೂ ನಿರ್ವಹಿಸುತ್ತಾ ಬಂದಿದೆ. ಆದ್ದರಿಂದ ಇಲ್ಲಿ ಇದುವರೆಗೂ ಒಂದು ಬಗೆಯ ಸಮತೋಲನ ಸಾಧ್ಯವಾಗಿದೆ. ಇದರ ನಡುವೆ ಸಾಮಾನ್ಯ ಶಿಕ್ಷಣದಲ್ಲಿ ಪ್ರಧಾನವಾಗಿ ಕನ್ನಡದಂತಹ ದೇಶಭಾಷೆಗಳು ಹಾಗೂ ವೃತ್ತಿಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ: ಇವು ತಮ್ಮ ಅನನ್ಯತೆಗಳನ್ನು ಗುರುತಿಸಿಕೊಂಡು ಬಂದಿವೆ ಎಂಬುದನ್ನು ಒಪ್ಪಬೇಕು.

ವರ್ತಮಾನದ ಈ ಬಗೆಯ ಸಂಭವ ಚರಿತ್ರೆಯ ಮೂಲದಲ್ಲಿದೆ ಎಂಬುದನ್ನು ತಿಳಿದಾಗ ಭವಿಷ್ಯಮುಖಿ ಆಲೋಚನೆಗಳು ಬೇರು ತೊಟ್ಟ ಮರಗಳಾಗುತ್ತವೆ.

ನಾವು ೧೯೪೭ರಲ್ಲಿ ಬ್ರಿಟಿಷರಿಂದ ಸ್ವತಂತ್ರರಾದದ್ದು ನಿಜ. ಆದರೆ ಬುದ್ಧಿಯ ದೃಷ್ಟಿಯಿಂದ ನಾವೆಷ್ಟು ಸ್ವತಂತ್ರರು ಎಂಬ ಪ್ರಶ್ನೆಗೆ ಉತ್ತರ ಸಂಕೀರ್ಣವಾಗುತ್ತದೆ.

ಇಲ್ಲಿ ವಸಾಹತುಶಾಹಿಗಳು ಭಾರತದ ವಸಾಹತಿಗಳ ಮೇಲೆ ಹೇರಲ್ಪಟ್ಟ ಅನೇಕ ಭ್ರಮೆಗಳಲ್ಲಿ ’ಇಂಗ್ಲೀಷೇ ಶಿಕ್ಷಣ’ ’ಪಶ್ಚಿಮವೇ ಮಾದರಿ’ ಎಂಬುವು ಕೆಲವು. ಅನೇಕರಲ್ಲಿ ಇವು ಭ್ರಮೆಗಳಲ್ಲ; ಜ್ಞೆನದ ಮಾದರಿಗಳೇ! ಅಂಥವರ ಸಂತತಿಯ ಕುಡಿಗಳು ನಾವಾಗಿರುವುದರಿಂದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಧಾನವಾಗಿ ವೃತ್ತಿ ಶಿಕ್ಷಣದ ನೆಲೆಯಲ್ಲಿ ಇಂಗ್ಲೀಷನ್ನು ಆಚರಿಸುವುದು ಕಷ್ಟವಾಗಲಿಲ್ಲ. ಸಹ್ಯವೂ ಹಿತಕರವೂ ಆಯಿತು! ಇಂತಹ ಸನ್ನಿವೇಶದ ಮುಂದುವರೆದ ಈ ಘಟ್ಟದಲ್ಲಿ ಬ್ರಿಟಿಷರ ಜಾಗದಲ್ಲಿ ಜಾಗತಿಕ ಬಂಡವಾಳಶಾಹಿಗಳು ಅಥವ ಆರ್ಥಿಕ ಸಾಮ್ರಾಜ್ಯಶಾಹಿಗಳು ಹಾಗೂ ಅವರ ಒಂದು ಆಯಾಮವಾದ ಇಂಗ್ಲೀಷ್ ಸಾಮ್ರಾಜ್ಯಶಾಹಿ ಭಾರತವನ್ನು ಆಳುವುದು ಕಷ್ಟದ ಮಾತೇನಾಗಿಲ್ಲ. ಆದ್ದರಿಂದ ಕಳೆದ ದಶಕದಿಂದೀಚೆಗೆ ಉದಾರೀಕರಣದ ಹೆಸರಿನಲ್ಲಿ ಜಾಗತೀಕರಣ, ಖಾಸಗೀಕರಣ, ಶಿಕ್ಷಣದ ಉದ್ಯಮೀಕರಣ,ಅಲ್ಲಿ ಇಂಗ್ಲೀಷಿನ ಪ್ರಬಲೀಕರಣ: ಇವೆಲ್ಲವೂ ತಮಗೆ ಸಮಾನ ಶತ್ರುವೇ ಇಲ್ಲದ ಯುದ್ಧಭೂಮಿಯಲ್ಲಿ ವಿರಾವೇಶದಿಂದ ಬೆಳ್ಳಿಯ ಕತ್ತಿಯಿಂದ ಬೆಳಕನ್ನು ಚಿಮ್ಮಿಸುತ್ತಿವೆ. ಕಣ್‌ಕೋರೈಸುವ ಆ ಬೆಳಕಿನಲ್ಲಿ ನಮ್ಮ ದೃಷ್ಟಿಯೂ ಮಂದವಾಗುತ್ತಿದೆ. ಆದ್ದರಿಂದ ಸಾಮಾನ್ಯ ಶಿಕ್ಷಣದ ಜಾಗದಲ್ಲಿ ವೃತ್ತಿ ಶಿಕ್ಷಣವು ನೆಲೆಯೂರುತ್ತಿರುವುದಾಗಲೀ ಜ್ಞೆನದ ನೆಲೆಗಳು ನಿರ್ಧರಿಸುತ್ತಿದ್ದ ಶಿಕ್ಷಣವನ್ನು ಬಂಡವಾಳದ ನೆಲೆಗಳು ನಿರ್ಧರಿಸುತ್ತಿರುವುದಾಗಲೀ ವೃತ್ತಿಶಿಕ್ಷಣವನ್ನೇ ಆತ್ಮವನ್ನಾಗಿಸಿಕೊಂಡ ಇಂಗ್ಲಿಷ್ ಭೂತವು ಜನಭಾಷೆಗಳ ನೆಲೆಯಾದ ಸಾಮಾನ್ಯ ಶಿಕ್ಷಣದ ಜಾಗದಲ್ಲಿ ವೃತ್ತಿ ಶಿಕ್ಷಣವು ನೆಲೆಯೂರುತ್ತಿರುವುದಾಗಲೀ ಜ್ಞೆನದ ನೆಲೆಗಳು ನಿರ್ಧರಿಸುತ್ತಿದ್ದ ಶಿಕ್ಷಣವನ್ನು ಬಂಡವಾಳದ ನೆಲೆಗಳು ನಿರ್ಧರಿಸುತ್ತಿರುವುದಾಗಲೀ ವೃತ್ತಿಶಿಕ್ಷಣವನ್ನೇ ಆತ್ಮವನ್ನಾಗಿಸಿಕೊಂಡ ಇಂಗ್ಲೀಷ್ ಭೂತವು ಜನಭಾಷೆಗಳ ನೆಲೆಯಾದ ಸಾಮಾನ್ಯ ಶಿಕ್ಷಣದ ಮೇಲೆ ಎರಗುತ್ತಿರುವುದಾಗಲೀ ಒಂದೂ ನಮಗೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಇಂಥಲ್ಲಿ ಸಾಂಸ್ಕೃತಿಕ ವಿಸ್ಮೃತಿ, ನವ ವಸಾಹತೀಕರಣದಂತಹ ವಿಕಲ್ಪಗಳು ಕತ್ತಲನ್ನು ಬಿತ್ತುತ್ತಾ ಬಂದು, ಮುಂಜಾವಿನಲ್ಲಿ ನಮ್ಮದಲ್ಲದ ಭಾರತವನ್ನು ಪರಿಚಯಿಸುವ ಟೊಂಕವನ್ನು ಕಟ್ಟಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಅನನ್ಯತೆಯನ್ನು ಕುರಿತ ಚರ್ಚೆಗೆ ಯಾವ ಬಾಗಿಲಿನಿಂದಾದರೂ ಪ್ರವೇಶಿಸಲು ಸಾಧ್ಯವಿದೆ. ಅದರಲ್ಲೊಂದು ’ಸಾಮಾನ್ಯ ಶಿಕ್ಷಣ’ ಮತ್ತು ಅದನ್ನು ಕುರಿತ ಸಮಕಾಲೀನ ಕೇಂದ್ರಿತ ತಾತ್ವಿಕ ಚರ್ಚೆ.

ನಾನು ಈಗಾಗಲೇ ಹೇಳಿರುವಂತೆ ಭಾರತೀಯ ಶಿಕ್ಷಣವನ್ನು ಜ್ಞೆನದ ನೆಲೆಗಳು ನಿಯಂತ್ರಿಸುತ್ತಿವೆ ಎನ್ನುವುದಕ್ಕಿಂತ ಬಂಡವಾಳದ ನೆಲೆಗಳು ಹೆಚ್ಚು ನಿಯಂತ್ರಿಸುತ್ತಿವೆ. ಹಾಗಾಗಿ ಪ್ರತ್ಯಕ್ಷವಾಗಿ ಮಾರುಕಟ್ಟೆ ಮೌಲ್ಯವನ್ನು ಪಡೆದಿರುವ ವೃತ್ತಿಶಿಕ್ಷಣ, ಇಂಗ್ಲೀಷ್ ಭಾಷೆ ಇವು ಪ್ರಧಾನ ಸ್ತರಕ್ಕೆ ಏರುತ್ತಿವೆ. ಇವುಗಳ ಎದುರು ದಿಕ್ಕಿನಲ್ಲಿ ಸಾಮಾನ್ಯ ಶಿಕ್ಷಣ, ಜನಭಾಷೆಗಳು ನೆಲೆಗೊಳ್ಳುತ್ತಿವೆ. ಮೊದಲನೆಯದರಲ್ಲಿ ಬಂಡವಾಳಶಾಹಿ ಚಿಂತನೆಗಳು ಅರಳಿದರೆ ಎರಡನೆಯದರಲ್ಲಿ ಜನಪರ ಚಿಂತನೆಯ ನೆಲೆಗಳು ಉಸಿರುಗಟ್ಟಿ ಉಳಿಯುತ್ತವೆ. ಆಗ ’ನಗರ’ವು ಮೊದಲನೆಯದರ ಕಡೆಗೆ ಓಡಿದರೆ, ’ಹಳ್ಳಿ’ಅನಿವಾರ್ಯವಾಗಿ ಎರಡನೆಯದರ ಕಡೆಗೆ ಸಾಗಿ ನಿಲ್ಲುತ್ತದೆ.

ವಸಾಹತುಶಾಹಿ ಪೂರ್ವ ಭಾರತೀಯ ಸಂದರ್ಭದಲ್ಲಿ ಶಿಕ್ಷಣವು ಬಹುಸಂಖ್ಯಾತರಿಂದ ’ಅಸ್ಪೃಶ್ಯ’ವಾಗಿತ್ತು. ಇದಕ್ಕೆ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯಲ್ಲಿ ಜಾತಿ ಮೂಲದ ಕಾರಣವನ್ನು ತನ್ನೊಳಗೆ ಇಟ್ಟುಕೊಂಡಿತ್ತು. ಅಂತೂ ಈ ಶಿಕ್ಷಣ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸಾಮಾಜಿಕವಾಗಿ ಸಹ ವಿಕೇಂದ್ರೀಕರಣಗೊಂಡಿತು. ಅಂತಹ ಶಿಕ್ಷಣ ಇತ್ತೀಚಿನ ವರ್ಷಗಳಲ್ಲಿ ಪುನಃ ಕ್ರಮೇಣ ಕೇಂದ್ರೀಕರಣಕ್ಕೊಳಗಾಗುತ್ತಿರುವುದು ವಿಪರ್ಯಾಸವಾಗಿದೆ. ಆದರೆ ಈ ಕೇಂದ್ರೀಕರಣವು ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯನ್ನು ಮೂಲವಾಗಿಸಿಕೊಂಡಿಲ್ಲ. ಬದಲಿಗೆ ಆರ್ಥಿಕ ಶ್ರೇಣೀಕರಣದ ಹಿನ್ನೆಲೆಯನ್ನು ಮೂಲವಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಂದು ಸಾಮಾಜಿಕ ಮೇಲು ವರ್ಗಕ್ಕೆ ಸಲ್ಲುತ್ತಿದ್ದ ಶಿಕ್ಷಣ ಇಂದು ಆರ್ಥಿಕ ಮೇಲುವರ್ಗದ ಜನಕ್ಕೆ ಸಲ್ಲುತ್ತಿದೆ, ಅಷ್ಟೇ. ಈ ನೆಲೆಯಲ್ಲಿ ಸಾಮಾನ್ಯ ಶಿಕ್ಷಣ-ಜನಭಾಷೆ-ಗ್ರಾಮೀಣ ಪ್ರದೇಶ-ಬಡವರು- ಈ ಕಲ್ಪನೆಗಳು ಪರಸ್ಪರ ನಿಯತವಾದ ಅಂತರ್ ಸಂಬಂಧದಲ್ಲಿ ಕೂಡಿಕೊಳ್ಳುತ್ತವೆ. ಇವುಗಳ ಇದರ ಎದುರು ದಿಕ್ಕಿನಲ್ಲಿ ಶ್ರೀಮಂತರು-ವೃತ್ತಿಶಿಕ್ಷಣ-ಇಂಗ್ಲೀಷ್-ಭಾಷೆ-ನಗರ ಪ್ರದೇಶ ಇವು ಅಂತಹ ಒಳ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಶ್ರೇಣೀಕರಣದ ಸಾಮಾಜಿಕ ವ್ಯವಸ್ಥೆಯೊಂದು ಇತ್ತೀಚೆಗೆ ಮೂಡುತ್ತಿದೆ. ಇದು ಪ್ರಜಾಪ್ರಭುತ್ವ ಇದೆ ಎಂದು ಹೇಳಲಾಗುತ್ತಿರುವ ಭಾರತದಲ್ಲಿ ಸಂವಿಧಾನಕ್ಕೆ ಒದಗುತ್ತಿರುವ ಅಪಚಾರವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದಿನಾಂಕ ೨೬.೬.೨೦೦೧ ರಂದು ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ೨೧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ೧೨೦ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಕಲೆ, ವಾಣಿಜ್ಯ, ವಿಜ್ಞೆನದ ವಿಭಾಗಗಳನ್ನು ಮುಚ್ಚಲು ಹೊರಟ ಸರ್ಕಾರೀ ಆದೇಶವನ್ನು ನೆನಪಿಸಿಕೊಳ್ಳಬೇಕು. ಆದರೆ ಇದೇ ಆದೇಶ ಅದರ ಮರುದಿನವೇ ಅನೂರ್ಜಿತಗೊಂಡಿತು ಎಂಬುದು ಬೇರೆ. ಅಂತೂ ಸಾಮಾನ್ಯ ಕಾಲೇಜು ಶಿಕ್ಷಣದ ಮೇಲೆ ಕತ್ತಿ ತೂಗುತ್ತಲೇ ಇದೆ ಎಂಬುದು ನಿರ್ವಿವಾದ.

ಹೀಗೆ ಸಾಮಾನ್ಯ ಶಿಕ್ಷಣ ಇಂದು ಏದುಸಿರು ಬಿಡುತ್ತಿದೆ. ಇದಕ್ಕೆ ಕಾರಣವು ಕೇವಲ ತಾನು ಮತ್ತು ತನ್ನ ಮೂಲದ್ದೇ ಅಲ್ಲ. ಇದಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಇರಿಸಿಕೊಂಡ ಸಂಬಂಧ-ಸನ್ನಿವೇಶಗಳು ಸಹ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ನಾವು ಸಾಮಾನ್ಯ ಶಿಕ್ಷಣದ ಸ್ಥಿತಿಗತಿಗಳನ್ನು ಕುರಿತು ಆಡುವ ಮಾತುಗಳು ಅದರಾಚೆಗೂ ಹೋಗಿ ಮುಟ್ಟುತ್ತವೆ.
*****
ಒತ್ತಾಸೆ : ಬಂಡಾಯ ಸಾಹಿತ್ಯದ ಸಂಘಟನೆಯು ಬೆಂಗಳೂರಿನಲ್ಲಿ ೨೦೦೦ರಲ್ಲಿ ವ್ಯವಸ್ಥೆಗೊಳಿಸಿದ್ದ ಇದೇ ಹೆಸರಿನ ವಿಚಾರಗೋಷ್ಠೀಯ ಆಶಯ ಭಾಷಣ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಕ್ಕು
Next post ಸಾಮರಸ್ಯದ ಸಹಿ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…