ಮಾತು ಮತ್ತು ದೈಹಿಕತೆ

ಮಾತು ಮತ್ತು ದೈಹಿಕತೆ

ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂಡುವಾದದ ಅರ್ಥಾತ್ ಸುಳ್ಳಿನ ಸೇವೆಯಲ್ಲಿರುವಾಗ ಅದು ಕಟ್ಟಬಹುದು; ಮಾತಾಡುವವನಲ್ಲಿ ವೈಚಾರಿಕಶಕ್ತಿಯ ಕೊರತೆಯಿದ್ದಾಗ ಹೀಗಾಗಬಹುದು; ಅಥವಾ ಮಾತಾಡುವ ಕಲೆ ಗೊತ್ತಿಲ್ಲದಿರುವಾಗಲೂ ಹೀಗಾಗಬಹುದು. ಮಾತು ಯಾವುದೇ ಕಾರಣಕ್ಕೆ ಕಟ್ಟಿದರೂ, ಕೆಲವರು ಅದನ್ನು ದೈಹಿಕವಾಗಿ ಎದುರಿಸುವ ತಪ್ಪು ಮಾಡುತ್ತಾರೆ. ಎಂದರೆ, ಸ್ವರ ಏರಿಸುವುದು. ಎದುರಾಳಿಯನ್ನು ವೈಯಕ್ತಿಕವಾಗಿ ಬಯ್ಯುವುದು, ಸುತ್ತಮುತ್ತಲಿನ ಮೇಜು, ಕುರ್ಚಿ, ಮೈಕು, ಪುಸ್ತಕವೇ ಮುಂತಾದ ವಸ್ತುಗಳನ್ನು ಎತ್ತಿ ಎಸೆಯುವುದು ಅಥವಾ ಪುಡಿಮಾಡುವುದು, ಸವಾಲೆಸೆಯುವುದು, ಮುಖ ವಿಕಾರ ಮಾಡುವುದು ಇತ್ಯಾದಿ ವಿವಿಧ ರೀತಿಗಳಲ್ಲಿ ಈ ದೈಹಿಕತೆ ಪ್ರಕಟವಾಗಬಹುದು. ಎದುರಾಳಿಯನ್ನು ದೈಹಿಕವಾಗಿ ಆಕ್ರಮಿಸುವುದು ಇದರ ಅತಿ ಒರಟಾದ ರೂಪ. ನಮ್ಮ ಸಾಧಾರಣವಾದ ಸಭೆ ಸಮಾರಂಭಗಳಿಂದ ಮೊದಲಾಗಿ ವಿಧಾನಸಭೆ, ಲೋಕಸಭೆ ಮುಂತಾದ ಉನ್ನತ ವೇದಿಕೆಗಳಲ್ಲೂ ಹೀಗಾಗುತ್ತಿರುವುದು ನಮಗೆ ಗೊತ್ತಿದೆ. ದೃಶ್ಯ ಮಾಧ್ಯಮಗಳ ಮೂಲಕ ಇಂಥ ನೋಟಗಳನ್ನೂ ನಾವು ನೋಡಿದ್ದೇವೆ. ಸಂತೆಗಳಲ್ಲಿ, ನೆರೆಕರೆಗಳಲ್ಲಿ, ಬಸ್ಸು, ಟ್ರೇನು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಜನಸಾಮಾನ್ಯರ ನಡುವೆ ಹೀಗಾಗುವುದನ್ನು ಕಂಡು ಅಭ್ಯಾಸವಾದ ನಾವು ನಮ್ಮ ಪ್ರಾತಿನಿಧಿಕ ಸಂಸ್ಥೆಗಳಲ್ಲೂ ಈ ಘಟನೆಗಳು ಆವರ್ತಿಸುವುದಕ್ಕೆ ಬಹುಶಃ ಅಚ್ಚರಿಪಡುವುದಿಲ್ಲ-ಎಷ್ಪಾದರೂ ಇವರು ನಮ್ಮದೇ ಪ್ರತಿನಿಧಿಗಳು ಎಂಬ ಕಾರಣಕ್ಕೆ! ನಮ್ಮ ಜನಪ್ರತಿನಿಧಿಗಳು ಸಭೆಗಳಲ್ಲಿ ‘ಚರ್ಚಿಸುವ’ ರೀತಿ, ಹಾಗೂ ಈ ಕುರಿತಾಗಿ ಜನರ ನಿರ್ಲಕ್ಷ್ಯದ ಧೋರಣೆಗಳು ನಮ್ಮ ಸಂಸ್ಕೃತಿಯ ಒಂದು ಮಾಪನವೂ ಹೌದು.

ಇದನ್ನು ತಿದ್ದುವುದಕ್ಕೆ ನಾವು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ನಾನು ಕೆಲವು ಪಾಶ್ಚಾತ್ಯ ದೇಶಗಳನ್ನು ಸುತ್ತಿದ ಅನುಭವದಿಂದ ಕೆಲವು ಮಾತುಗಳನ್ನು ಇಲ್ಲಿ ಹೇಳಬಹುದು. ನಾವು ಪಾಶ್ಚಾತ್ಯರನ್ನು ಎಷ್ಟೇ ದೂರಿದರೂ, ಹಲವು ಸಂಗತಿಗಳಲ್ಲಿ ಅವರನ್ನು ಮೆಚ್ಚಿಕೊಳ್ಳುವುದು ಅಗತ್ಯವಿದೆ. ಉದಾಹರಣೆಗೆ, ಅವರು ಯಾವುದೇ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ರೀತಿ ಆದರ್ಶಪ್ರಾಯವಾದುದು. ಸಾಕ್ರೆಟೀಸನ ಪಶ್ನೋತ್ತರ ವಿಧಾನ ಇದಕ್ಕೆ ಮೂಲ. ಪ್ಲೇಟೋ ಬರೆದಿಟ್ಟಿರುವ ಸಂಭಾಷಣೆಗಳನ್ನು ಓದಿದವರಿಗೆ ಈ ವಿಧಾನ ಗೊತ್ತು: ಸಾಕ್ರೆಟೀಸ್ ಯಾವುದೇ ವಿಷಯವನ್ನೂ ಥಟ್ಟನೆ ಒಪ್ಪಿಕೊಳ್ಳದ, ಅದರ ಕುರಿತಾದ ಕೂಲಂಕಷವಾದ ಚರ್ಚೆಗೆ ಜನರನ್ನು ಎಳೆಯುತ್ತಾನೆ. ಕೆಲವು ಸಲ ತಾನೇ ಸೈತಾನನ ವಕೀಲನಂತೆ ಪ್ರಶ್ನೆ ಕೇಳುತ್ತಾನೆ; ಉತ್ತರಗಳ ಹಲವು ಸಾಧ್ಯತೆಗಳನ್ನೂ ಪರಿಶೋಧಿಸುತ್ತಾನೆ. ಸಾಕ್ರೆಟೀಸ್ ತಾನೇ ಎಂದೂ ಕೊನೆಯುತ್ತರ ನೀಡುವುದಕ್ಕೆ ಆಸಕ್ತಿ ತೋರುವುದಿಲ್ಲ. ನಮ್ಮ ರಾಜಕೀಯ ಪತಿನಿಧಿಗಳು ಹೀಗೆ ಹೆಸರಾಂತ ತತ್ವಜ್ಞಾನಿಗಳಾಗಬೇಕೆಂದು ಈ ಮಾತಿನ ಅರ್ಥವಲ್ಲ. ಆದರೆ ಅವರಿಗೆ ಸತ್ಯದಲ್ಲಿ, ಹಾಗೂ ಸತ್ಯಪ್ರಧಾನವಾದ ಕ್ರಿಯೆಯಲ್ಲಿ ಅರ್ಥಾತ್ ವಿಧಾಯಕದಲ್ಲಿ ಆಸಕ್ತಿಯಿದ್ದರೆ, ಅದರ ಕುರಿತಾದ ಚರ್ಚೆ ಹೇಗಿರಬೇಕು ಎಂಬುದನ್ನು ತಿಳಿದಿರಬೇಕಾಗುತ್ತದೆ.

ಸಾಕ್ರೆಟೀಸನ ಉಲ್ಲೇಖ ಮಾಡಿದುದರಿಂದ, ಆತನಿಗೆ ಸಂಬಂಧಿಸಿದ ಇನ್ನೊಂದು ಮಾತನ್ನೂ ಇಲ್ಲಿ ಹೇಳುವುದು ಅಗತ್ಯ. ಸಾಕ್ರೆಟೀಸ್‌ಗೆ ಪ್ರಜಾಪ್ರಭುತ್ವದಲ್ಲಿ ಆಸಕ್ತಿಯಿದ್ದಿದ್ದರೂ ಆತ ಎಲ್ಲರಿಗೂ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿದ್ದ. ಅವನ ಅಭಿಮಾನಿಗಳಾದ ನಮಗೆ-ನಮಗೆ ಮಾತ್ರವೇ ಅಲ್ಲ, ಅವನ ಕಾಲದ ಹಲವರಿಗೆ ಕೂಡಾ -ಇದೊಂದು ವೈರುಧ್ಯ ಎನಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಆದರೆ, ಸಾಕ್ರೆಟೀಸ್‌ನ ಅಭಿಪ್ರಾಯದಲ್ಲಿ, ರಾಜಕೀಯ ವಿಧಾಯಕ ಸಭೆಗಳಲ್ಲಿ ಭಾಗವಹಿಸುವುದಕ್ಕೆ ಸತ್ಯಾಸತ್ಯಗಳನ್ನು ಆಳವಾಗಿ ಪರಿಶೋಧಿಸುವ ಸಾಮರ್ಥ್ಯವಿರಬೇಕು. ಆದ್ದರಿಂದ ‘ಯೋಗ್ಯ’ರನ್ನು ಮಾತ್ರವೇ ಜನರು ವಿಧಾಯಕ ಸಭೆಗಳಿಗೆ ಕಳಿಸಬೇಕು. ಸತ್ಯವನ್ನು ಕೈಯೆತ್ತಿ ನಿರ್ಣಯಿಸಲಾಗದು ಎನ್ನುವುದು ಆತನ ಸುಪ್ರಸಿದ್ಧ ಮಾತು. ಎಂದರೆ, ಸತ್ಯವನ್ನು ಸರಿಯಾದ ಚರ್ಚೆಯ ಮೂಲಕವೇ ನಿರ್ಣಯಿಸತಕ್ಕದ್ದು. ಸಾಕ್ರೆಟೀಸನ ಕಾಲದಲ್ಲಿ ನಮ್ಮ ಕಾಲದಲ್ಲಿರುವಂತೆ ಪಕ್ಷ ರಾಜಕೀಯ ಇರಲಿಲ್ಲ ಎನ್ನುವುದನ್ನು ನೆನಪಿಟ್ಬುಕೊಂಡರೆ ಅವನ ಮಾತಿನ ಹಿಂದಿರುವ ಕಾಳಜಿ ಅರ್ಥವಾಗುತ್ತದೆ. ಪಕ್ಷ ರಾಜಕೀಯವನ್ನು ಒಪ್ಪಿಕೊಂಡಿರುವ ನಾವು ಆಯಾ ರಾಜಕೀಯ ಪಕ್ಷಗಳ ತತ್ವಗಳು ತಂತಮ್ಮ ಪ್ರತಿನಿಧಿಗಳ ಮೇಲೆ ನಿಯಂತ್ರಣ ಹೊಂದಿರುತ್ತವೆಯೆಂದೂ, ಈ ಹಿನ್ನೆಲೆಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವಾಗ ನಿಜಕ್ಕೂ ಚುನಾಯಿಸುವುದು, ಪೂರ್ವಭಾವಿಯಾದ ಪಕ್ಷಪ್ರಣಾಳಿಕೆಗಳ ಮೇಲಿನ ವಿಶ್ವಾಸದಿಂದ, ರಾಜಕೀಯ ಪಕ್ಷಗಳನ್ನಲ್ಲದೆ ಅವು ಚುನಾವಣೆಗೆ ನಿಲ್ಲಿಸಿದ ಬರಿಯ ವ್ಯಕ್ತಿಗಳನ್ನಲ್ಲ ಎಂದು ತಿಳಿದುಕೊಂಡಿದ್ದೇವೆ. ಆದ್ದರಿಂದ ಸಾಕ್ರೆಟೀಸ್‍ನ ವಾದದಿಂದ ಅದರ ಹಲ್ಲುಗಳನ್ನು ಕಿತ್ತಂತಾದರೂ, ವಾಸ್ತವದಲ್ಲಿ ಚುನಾಯಿತ ಪಕಿನಿಧಿಗಳು ತಮ್ಮ ‘ವ್ಯಕ್ತಿತ್ತ’ವನ್ನು ಮೀರಿರದ ಕಾರಣ-ಹಾಗೆ ಮೀರುವುದು ಅವರಿಗೆ ಅಸಾಧ್ಯವೂ ಆಗಿರುತ್ತ-ಸಾಕ್ರೆಟೀಸ್ ಎತ್ತಿ ತೋರಿಸಿದ ಸಮಸ್ಯೆ ಹಾಗೇ ಉಳಿಯುತ್ತದೆ. ಎಂದರೆ, ನಮ್ಮ ಮಟ್ಟಿಗೆ, ಅವರು ನಡೆಸುವ ಚರ್ಚೆ, ಅವರ ಮಾತು, ಹಾವಭಾವ, ವರ್ತನೆ, ಮತ್ತು ಋಜುವಾತಿಗೆ ಅವರ ಒಟ್ಟಾರೆ ಕೊಡುಗೆ ಒಂದೋ ಅವರು ಎಲ್ಲಿಂದ ಆರಂಭಿಸಿದರೋ ಅಲ್ಲೇ ಇರುತ್ತವೆ; ಇಲ್ಲವೇ, ಋಜುವಾತನ್ನು ಅವು ನಾಶಮಾಡುತ್ತವೆ. ಇವೆರಡು ಪರಿಣಾಮಗಳನ್ನೂ ಜನರು ಬಯಸುವುದಿಲ್ಲ.

ನಮ್ಮ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ವಿಧಾನಸಭೆಗಳಲ್ಲಿ ಚರ್ಚೆ ಯಶಸ್ವಿಯಾಗಲು ಕೆಲವೊಂದು ವಿಷಯಗಳನ್ನು ನಾವು ಅಭ್ಯಾಸಕ್ಕೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಳಗಿನ ಸಂಗತಿಗಳನ್ನು ಅವಲೋಕಿಸಬಹುದು:

೧. ಸರದಿ ಜಿಗಿದು ಮಾತಾಡಬೇಡಿ. ನೀವು ಸರದಿ ಜಿಗಿದರೆ ಇತರರು ಹಾಗೆ ಮಾಡುವುದನ್ನು ವಿರೋಧಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಸರದಿಗಾಗಿ ಕಾಯಿರಿ.

೨. ನಿಮ್ಮಲ್ಲಿ ಎಷ್ಟೇ ಒಳ್ಳೆಯ ಅಭಿಪ್ರಾಯಗಳಿದ್ದರೂ, ಇತರರು ಮಾತಾಡುವಾಗ ಮಧ್ಯೆ ಬಾಯಿ ಹಾಕದಿರಿ. (ವಿಧಿ ಬಿಂದು ಎತ್ತುವ ಅವಕಾಶ ನಿಮಗೆ ಯಾವಾಗಲೂ ಇದೆ.) ಮಧ್ಯೆ ಬಾಯಿ ಹಾಕುವುದು ಸುಸಂಸ್ಕೃತ ಲಕ್ಷಣವಲ್ಲ; ಮತ್ತು ಹಾಗೆ ಮಾಡುವುದರಿಂದ ಮಾತಾಡುವ ವ್ಯಕ್ತಿಯ ಏಕಾಗ್ರತೆಯನ್ನು ಹಾಳುಮಾಡಿದ ಹಾಗಾಗುತ್ತದೆ. ಅದು ನಿಮ್ಮ ಉದ್ದೇಶ ಆಗಿರಬಾರದು.

೩. ಸ್ವರ ಎತ್ತರಿಸಿ ಮಾತಾಡದಿರಿ. ಹಾಗೆ ಮಾಡುವುದರಿಂದ ಸತ್ಯ ನಾಶವಾಗುತ್ತದೆ. ಮತ್ತು ನಿಮ್ಮ ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ. ನಿಮ್ಮ ವಾದ ಸರಿಯಿದ್ದರೆ, ಅದನ್ನು ನೀವು ಮೆತ್ತಗೆ ಹೇಳಿದರೂ ಜನ ಒಪ್ಪುತ್ತಾರೆ.

೪. ಹೇಳಿದ್ದನ್ನೇ ಹೇಳುತ್ತ ಇರಬೇಡಿ. ಇದರಿಂದ ಸಮಯ ಹಾಳಾಗುತ್ತದಲ್ಲದೆ ನಿಮ್ಮ ಮಾತಿಗೆ ಒಂದಿಷ್ಟೂ ಪುಷ್ಟಿ ದೊರಕುವುದಿಲ್ಲ. ಹೇಳುವುದಕ್ಕೆ ನಿಮಗೆ ಹೊಸತೇನೂ ಇಲ್ಲವೆಂಬ ಅರ್ಥ ಉಂಟಾಗುತ್ತದೆ. ನೀವೇನು ಹೇಳುವಿರೋ ಅದು ತನ್ನ ಪರಿಣಾಮ ಕಳೆದುಕೊಳ್ಳುತ್ತದೆ ಕೂಡ.

೫. ನೇರವಾಗಿ ವಿಷಯಕ್ಕೆ ಬನ್ನಿ. ಹಿನ್ನೆಲೆ ಹೇಳಬೇಕಾದರೆ ಚಿಕ್ಕದರಲ್ಲಿ ಹೇಳಿ. ನಿಮ್ಮ ಭಾಷಣ ದೀರ್ಘವಾಗಿದ್ದರೆ, ಕೊನೆಯಲ್ಲಿ ಮುಖ್ಯ ವಿಷಯಗಳನ್ನು ಕ್ರೋಢೀಕರಿಸಿರಿ.

೬. ನಿಮ್ಮ ದೇಹಭಾಷೆ (ನಿಲುವು, ಕೈಭಂಗಿ ಮುಂತಾಗಿ) ನಿಮ್ಮ ಮಾತಿಗೆ ತಕ್ಕುದಾಗಿರಲಿ. ಎದ್ದು ಕಾಣುವ ದೇಹಭಾಷೆ ಇಲ್ಲದಿರುವುದೇ ಒಳ್ಳೆಯದು.

೭. ಅನಗತ್ಯವಾಗಿ ಇತರರ ಕಡೆ ಬೊಟ್ಟುಮಾಡುವುದು, ನೇರವಾಗಿ ಇತರರನ್ನು ಸಂಬೋಧಿಸುವುದು, ಹೆದರಿಸುವ ರೀತಿಯಲ್ಲಿ ಮುಖ ಮಾಡುವುದು, ನಿಜಕ್ಕೂ ಬೆದರಿಕೆ ಹಾಕುವುದು, ತೋಳೆತ್ತುವುದು, ಕೈಗೆ ಸಿಕ್ಕ ವಸ್ತುಗಳಿಂದ ಧಾಳಿ ಮಾಡುವುದು, ನಿಂತ ಅಥವ ಕೂತ ಜಾಗದಿಂದ ಆಚೇಚೆ ಚಲಿಸುವುದು, ನಗುವುದು, ಗೇಲಿ ಮಾಡುವುದು, ಹಂಗಿಸುವುದು, ಚಾರಿತ್ಯವಧೆ ಮಾಡುವುದು ಇತ್ಯಾದಿಗಳನ್ನು ನಡೆಸದಿರಿ. ಇದರಿಂದ ನಿಮ್ಮದೇ ಘನತೆ ನಾಶವಾಗುತ್ತದೆ. ಅದೇ ರೀತಿ, ಯಾವುದೇ ಮ್ಯಾನರಿಸಂ ಅರ್ಥಾತ್ ಕೆಟ್ಟ ಶೈಲಿಗಳನ್ನು ರೂಢಿಸಿಕೊಳ್ಳದಿರಿ.

೮. ಯಾವತ್ತೂ ವೈಯಕ್ತಿಕವಾಗದಿರಿ. ಎಂದರೆ, ಮಾತಿನಲ್ಲಿ ಎದುರುವಾದಿಗಳನ್ನು ವೈಯಕ್ತಿಕವಾಗಿ (ad hominem) ಆಕ್ರಮಿಸದಿರಿ.

೯. ಮಾತಿಗೆ ಮೊದಲು ವಂದಿಸಲು, ಕೊನೆಗೆ ಕೃತಜ್ಞತೆ ಹೇಳಲು ಮರೆಯದಿರಿ.

೧೦. ನ್ಯಾಯಸಮ್ಮತವಾದ ಆಧಾರವಿಲ್ಲದೆ ಯಾವ ಆರೋಪವನ್ನೂ ಮಾಡದಿರಿ.

೧೧. ಅಂಕೆ ಸಂಖ್ಯೆ ಹಾಗೂ ವಿವರಣೆಗಳ ಮೂಲಕ ನಿಮ್ಮ ಮಾತುಗಳನ್ನು ಪುಷ್ಟೀಕರಿಸಿ.

೧೨. ಗೊತ್ತಿರುವ ವಿಷಗಳ ಕುರಿತೇ ಮಾತಾಡಿ. ಗೊತ್ತಿಲ್ಲದ ವಿಷಯಗಳ ಕುರಿತು ಮಾತಾಡಲು ಹೊರಟರೆ ನಿಮ್ಮ ಅಜ್ಞಾನ ಬೇಗನೆ ಪ್ರಕಟವಾಗುತ್ತದೆ. ಅಲ್ಲದೆ ನಿಮ್ಮಿಂದ ಚರ್ಚೆಗೆ ಯಾವುದೇ ಸಹಾಯ ಆಗುವುದಿಲ್ಲ, ಬದಲಿಗೆ ತಡೆಯೇ ಉಂಟಾಗುತ್ತದೆ.

೧೩. ಮಾತಿಗೆ ಮೊದಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಾಧ್ಯವಿದ್ದರೆ ಟಿಪ್ಪಣಿಗಳನ್ನು ಜತೆಯಲ್ಲಿ ಇಟ್ಟುಕೊಳ್ಳಿ. ಮಾತಾಡುವಾಗ ಟಿಪ್ಪಣಿಗಳನ್ನು ನೋಡಿಕೊಳ್ಳುವುದರಿಂದ ನಿಮ್ಮ ಗೌರವಕ್ಕೇನೂ ಹಾನಿಯಾಗುವುದಿಲ್ಲ.

೧೪. ಅಂತೆ-ಕಂತೆಗಳ ಆಧಾರದಿಂದ ಮಾತಾಡದಿರಿ.

೧೫. ಮುಂದೆ ಕ್ಷಮೆಕೋರಬೇಕಾಗಿ, ಹಿಂದೆಗೆದುಕೊಳ್ಳಬೇಕಾಗಿ ಬರುವ ಪದಗಳನ್ನೋ ಮಾತುಗಳನ್ನೋ ಉಪಯೋಗಿಸಬೇಡಿ. ಒಂದು ವೇಳೆ ನಾಲಿಗೆ ತಪ್ಪಿ ಹಾಗೆ ಬಂದರೆ, ಮೊದಲ ಅವಕಾಶದಲ್ಲೇ ತಿದ್ದಿಕೊಳ್ಳಿ.

೧೬. ಎದುರುವಾದಿಯ ಮಾತುಗಳಲ್ಲಿ ಸಮರ್ಥನೀಯ ಅಂಶಗಳಿದ್ದರೆ ಅವುಗಳನ್ನು ಗುರುತಿಸುವ ಅಭ್ಯಾಸ ರೂಢಿಸಿಕೊಳ್ಳಿ.

೧೭. ನಿಮ್ಮ ತಪ್ಪುಗಳೇನಾದರೂ ಇದ್ದರೆ ಅವನ್ನು ಒಪ್ಪಿಕೊಳ್ಳಿ ಹಾಗೂ ಅವನ್ನು ತೋರಿಸಿದವರನ್ನು ವಂದಿಸಿ.

೧೮. ಉದ್ವೇಗರಹಿತರಾಗಿ ಮಾತಾಡಿರಿ. ಯಾಕೆಂದರೆ, ಉದ್ವೇಗದಲ್ಲಿ, ಭಾವೋದ್ರೇಕದಲ್ಲಿ ತಪ್ಪುಗಳು ಸಂಭವಿಸುವುದೇ ಹೆಚ್ಚು. ಹಾಗೂ, ಅಂಥ ಕಡೆ ಸತ್ಯ ತಲೆಮರೆಸುತ್ತದೆ.

೧೯. ಮುಂದಿನ ಮಾತುಕತೆಗೆ ಅವಕಾಶವಿರುವಂತೆ ಮಾತಾಡಿ.

೨೦. ಸಭಾಧ್ಯಕ್ಷರ ಮಾತನ್ನು ಯಾವಾಲೂ (ಅದು ಸರಿಯಲ್ಲವೆಂದು ನಿಮಗೆ ಅನಿಸಿದಾಗಲೂ) ಗೌರವಿಸಿ.

೨೧. ಸಭಾತ್ಯಾಗ, ಧರಣಿ ಇತ್ಯಾದಿಗಳನ್ನು ಕೈಗೊಳ್ಳಬೇಡಿ. ಇದೆಲ್ಲ ‘ದೈಹಿಕ’ವಾಗುವ ಲಕ್ಷಣಗಳು.

೨೨. ಇತರರು ಮಾತಾಡುವಾಗ ಗಮನವಿಟ್ಟು ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಅವರಿಂದ ನೀವು ಕಲಿತುಕೊಳ್ಳುವುದು ಬಹಳಷ್ಟು ಇರಬಹುದು.

೨೩. ಇತರ ಭಾಷಣಕಾರರ ತಪ್ಪುಗಳನ್ನು ನೀವು ಮಾಡದಿರಿ; ಅವರ ಒಳ್ಳೆಯ ಗುಣಗಳನ್ನು ಅನುಕರಿಸಿ.

೨೪. ಪರ-ವಿರೋಧಗಳು ವ್ಯಕ್ತಿಗಳ ಕುರಿತಾಗಿ ಇರದೆ, ತತ್ವಗಳ ಕುರಿತಾಗಿರಲಿ.

೨೫. ಕೇವಲ ಹಿಡಿಸುವುದಿಲ್ಲ ಎಂಬ ಕಾರಣಕ್ಕೆ, ಎಂದರೆ ಪೂರ್ವಾಗಹದಿಂದ, ಯಾರನ್ನೂ ವೈರಿಯೆಂದು ತಿಳಿದುಕೊಳ್ಳಬೇಡಿ.

೨೬. ಖಂಡತುಂಡವಾಗಿ ಮಾತಾಡಬೇಡಿ. ಹಾಗೆ ಮಾತಾಡುವುದು ಸರ್ವಾಧಿಕಾರಿಗಳ ಲಕ್ಷಣ.

೨೭. ನೀವು ಸದಸ್ಯರಾಗಿರುವ ಸಂಸ್ಥೆಯ ಎಲ್ಲಾ ಸಭೆಗಳಲ್ಲೂ ಭಾಗವಹಿಸಿ. ಒಂದು ವೇಳೆ ನೀವು ಉಪಸ್ಥಿತರಾಗಿರದಲ್ಲಿ, ನಿಮ್ಮ ಗೈರುಹಾಜರಿಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಪಶ್ನಿಸದಿರಿ. ಆದರೆ ಮರುಪರಿಶೀಲನೆಗೆ ಕೋರುವ ಹಕ್ಕು ನಿಮಗಿದೆ-ಒತ್ತಾಯಿಸುವ ಹಕ್ಕು ಮಾತ್ರ ಇಲ್ಲ.

೨೮. ನೀವು ಭಾಗವಹಿಸುವ ಸಭೆಯ ವಿಧಿ ವಿಧಾಯಕಗಳನ್ನು ಸರಿಯಾಗಿ ತಿಳಿದುಕೊಳ್ಳಿ.

೨೯. ಸದಾ ಅಧ್ಯಯನಶೀಲನೂ, ಕರ್ತವ್ಯನಿರತನೂ, ಮಾದರಿ ನಾಗರಿಕನೂ ಆಗಿರಿ.

೩೦. ನಿಮ್ಮ ಮಾತುಗಳನ್ನು ಯಾವಾಗಲೂ ಆಲಿಸುವವರಿರುತ್ತಾರೆ, ನಿಮ್ಮ ವರ್ತನೆಗಳನ್ನು ನೋಡುವವರಿರುತ್ತಾರೆ ಎನ್ನುವುದನ್ನು ಅರಿತುಕೊಳ್ಳಿ.

ಈ ಪಟ್ಟಿಗೆ ಇತರ ‘ಬೇಕು ಬೇಡ”ಗಳನ್ನು ಸೇರಿಸಿಕೊಳ್ಳಬಹುದು. ಮಾತ್ರವಲ್ಲ, ನಮ್ಮ ವಿಧಾಯಕ ಸಭೆಗಳ ಕಾರ್ಯಕಲಾಪಗಳ ಕುರಿತಾದ ವಿಶಿಷ್ಟವಾದ ವಿಧಿವಿಧಾನಗಳೂ ಇರುತ್ತವೆ. ಇವುಗಳ ಕುರಿತಾದರೆ, ಪಜಾಪ್ರತಿನಿಧಿಗಳು ಹೊಸದಾಗಿ ಆರಿಸಿಬಂದಾಗ ಅವರಿಗೆ ಪ್ರತ್ಯೇಕವಾದ ಮಾರ್ಗಸೂಚಿ ಕಾರ್ಯಾಗಾರಗಳಿವೆ. ಆದರೆ ನಾನಿಲ್ಲಿ ಸೂಚಿಸಿದ್ದು ಕೇವಲ ಪಜಾಪ್ರತಿನಿಧಿಗಳಿಗಷ್ಟೇ ಅಲ್ಲ; ಪಜಾಪ್ರತಿನಿಧಿಗಳೂ ಸೇರಿದಂತೆ, ಸಾಮಾನ್ಯವಾಗಿ ಎಲ್ಲರೂ ಅನುಸರಿಸಬಹುದಾದ ನಿಯಮಗಳು. ಇವುಗಳ ಕುರಿತಾಗಿ ಮಾತ್ರ ಯಾರಿಗೂ ಸರಿಯಾದ ತರಬೇತಿ ಸಿಗದಿರುವುದು ದುರದೃಷ್ಟಕರವೆಂದೇ ಹೇಳಬೇಕು.

ಅಮೇರಿಕದಂಥ ರಾಷ್ಟ್ರಗಳಲ್ಲಿ ಶಾಲಾದಿನಗಳಲ್ಲೇ ಇವನ್ನೆಲ್ಲ ಹೇಳಿಕೊಡಲಾಗುತ್ತದೆ; ಮಾತ್ರವಲ್ಲ, ಜನಜೀವನದಲ್ಲಿ ಬೆರೆತಿರುವ ಸಂಸ್ಕೃತಿಯಿಂದಲೂ ವಿದ್ಯಾರ್ಥಿಗಳು ಸಾಕಷ್ಟು ಕಲಿತುಕೊಳ್ಳುತ್ತಾರೆ. ಆದ್ದರಿಂದಲೇ ಶಾಲಾಬಾಲಕರು ಸಾಧಾರಣವಾಗಿ ಯಾವ ಸಂದರ್ಭದಲ್ಲೂ ಮಾತಾಡುವುದಕ್ಕೆ ಹಿಂಜರಿಯುವುದಿಲ್ಲ. ಪ್ರಶ್ನೆಗಳನ್ನು ಕೇಳುವುದು, ಅವಕ್ಕೆ ಉತ್ತರಿಸುವುದು ಅವರಿಗೆ ಗೊತ್ತಿರುತ್ತದೆ. ಏನನ್ನಾದರೂ ಗೊತ್ತಿಲ್ಲದಿದ್ದರೆ, ತನಗೆ ಗೊತ್ತಿಲ್ಲವೆಂದು ಹೇಳುವುದರಲ್ಲಿ ಅವರಿಗೆ ಯಾವ ಮುಜುಗರವೂ ಇರುವುದಿಲ್ಲ. ಮಾತಾಡಬೇಕೆಂದಿದ್ದರೆ ಅವರು ಕೈಯೆತ್ತುತ್ತಾರೆ. ಮಾತಾಡಬಹುದೇ ಎಂದು ಕೇಳುತ್ತಾರೆ. ಅವಕಾಶವಿಲ್ಲದಿದ್ದರೆ ಸುಮ್ಮನಿರುತ್ತಾರೆ. ಧ್ವನಿಯೆತ್ತರಿಸಿ ಮಾತಾಡುವುದೇ ಇಲ್ಲ. ಯಾರನ್ನೂ ಗೇಲಿಮಾಡುವುದಿಲ್ಲ. ಸರದಿಯನ್ನು ಜಿಗಿಯುವುದಿಲ್ಲ. ಇವೆಲ್ಲ ಚಿಕ್ಕಂದಿನಲ್ಲೇ ಬರಬೇಕಾದ ಹಾಗೂ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕಾದ ಗುಣಗಳು. ಇಂಥ ಕನಿಷ್ಠ ಅರಿವೂ ವಿಧಾಯಕರಲ್ಲಿ ಹಲವರಿಗೆ ಇಲ್ಲದಿರುವುದು ನಮ್ಮ ದೌರ್ಭಾಗ್ಯ. ಆದ್ದರಿಂದ, ಈ ಅರಿವು ಮೂಡಿಸುವ ತರಬೇತು ಶಿಬಿರಗಳ ಜರೂರಾದ ಅಗತ್ಯವಿದೆ. ಹಾಗೂ ಶಾಲೆಕಾಲೇಜುಗಳಲ್ಲಿ ಆಗಿಂದಾಗ್ಗೆ ‘ಮಾಕ್ ಪಾರ್ಲಿಮೆಂಟು’ಗಳನ್ನು ನಡೆಸುವುದು ಅಗತ್ಯ. ಇದು ಕೆಲವೆಡೆ ಊರ್ಜಿತವಿದ್ದರೂ, ಈ ‘ಮಾಕ್’ ಪಾರ್ಲಿಮೆಂಟುಗಳು ನಿಜಕ್ಕೂ ‘ಅಣಕ’ಗಳಾಗಿರುವುದೇ ಹೆಚ್ಚು! ಮಾಕ್ ಪಾರ್ಲಿಮೆಂಟುಗಳ ಉದ್ದೇಶ ಇದು ಅಲ್ಲವೇ ಅಲ್ಲ. ಇವು ವಿಧಾಯಕ ಸಭೆಗಳೆಂದರೆ ಹೇಗಿರಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಗೆ ಕಲಿಸುವ ಉದ್ದೇಶ ಹೊಂದಿರಬೇಕು.

ಈ ಹಿಂದೆಯೇ ಹೇಳಿದಂತೆ, ಮಾತು ಕಟ್ಟಿದಾಗ ಮನುಷ್ಯ ದೈಹಿಕವಾಗುತ್ತಾನೆ. ಲೋಕದ ಸಕಲ ಜೀವಿಗಳಲ್ಲಿ ಮನುಷ್ಯನಿಗೆ ಮಾತ್ರವೇ ಮಾತಿನ ಭಾಗ್ಯ ಒದಗಿರುವುದು ಎನ್ನುವುದನ್ನು ಗಮನಿಸಿದರೆ, ಈ ಮಾತು ಎಂಬುದನ್ನು ನಾವು ಎಷ್ಟೊಂದು ಸಂತೋಷವಾಗಿ ಬೆಳೆಸಿಕೊಳ್ಳಬೇಕು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಮಾತಿನ ಕಾರಣದಿಂದಾಗಿಯೇ ನಮಗೆ ಸತ್ಯ-ಅಸತ್ಯ, ಒಳಿತು-ಕೆಡುಕು, ನ್ಯಾಯ-ಅನ್ಯಾಯಗಳ ಪರಿಕಲ್ಪನೆ ಸಾಧ್ಯವಾಗಿರುವುದು. ಅದರ ಮೇಲೆಯೇ ನಾಗರಿಕತೆಗಳು, ಸಂಸ್ಕೃತಿಗಳು ನಿಂತಿರುವುದು. ಮನುಷ್ಯ ಯಾವಾಗ ಮಾತು ಮರೆತು ದೈಹಿಕವಾಗುತ್ತಾನೋ ಆಗ ಮೃಗೀಯವೂ ಆಗುತ್ತಾನೆ. ಹಾಗಾಗುವುದು ಯಾರಿಗೂ ಬೇಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೯
Next post ಅಂತರ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…