ಎಂಭತ್ತರ ಹರೆಯದ ದುರಗವ್ವ
ಮೊಮ್ಮಗನ ಬಲವಂತಕ್ಕೆ
ಮೊದಲ ಬಾರಿಗೆ ಬಾಳಲ್ಲಿ
ಸಿನಿಮಾ ನೋಡಲು ಹೊರಟಳು
ರುಕ್ಕುಂಪೇಟೆಯ ಕಣಿವೆ
ಕುಂಬಾರಪೇಟೆಯ ಅಗಸೆ,
ಎಲ್ಲ ಹತ್ತಿಳಿದು ಹೈರಾಣಾದ ಮುದುಕಿ
ಸುರಪುರ ಪೇಟೆ ತಲುಪಿದಾಗ
ಸಮಯ ಸಂಜೆ ಸವಾ ಏಳು.
ಮೊಮ್ಮಗ ಸಿದ್ದಣ್ಣ ತಿಕೀಟು ತೆಗೆದು
ಅಜ್ಜಿಯ ಕಳಿಸಿದ ಹೆಣ್ಮಕ್ಕಳ ಸಾಲಿಗೆ
ಕತ್ತಲಲ್ಲಿ ತಡವರಿಸಿ ಕುಳಿತಳು ಅಜ್ಜಿ.
ಬಣ್ಣ ಬಣ್ಣದ ಪೆಡಂಭೂತಗಳ ನೋಡಿ
ಕಿವಿಗಡಚಿಕ್ಕುವ ಶಬ್ದಗಳ ಕೇಳಿ
ಹೌಹಾರಿದಳು ಮುದುಕಿ.
ಬೀಡಿ, ಸಿಗರೇಟು ಹೊಗೆ,
ತರಹಾವಾರಿ ವಾಸನೆಗಳು
ತಲೆ – ಕೆಡಿಸಿದವು.
ಕೊನೆಗೂ ಮುಗಿಯಿತು ಚಿತ್ರ
ಮುದುಕಿ ದುರಗವ್ವನಿಗೆ ಎಲ್ಲ ವಿಚಿತ್ರ.
ಇದೇನಾ ಜನ ಇಷ್ಟೊಂದು ಹೊಗಳುವ ಸಿನೆಮಾ?
ಮೊಮ್ಮಗನಿಗೆ ಅಪಾರ ಆನಂದ
ಅಜ್ಜಿಗೆ ಸಿನಿಮಾ ತೋರಿಸಿದ ಸಮಾಧಾನ.
ಹೇಗಿತ್ತು ಅಜ್ಜಿ ಸಿನಿಮಾ? ಹೆಮ್ಮೆಯಿಂದ ಕೇಳಿದ.
“ಸರಿಯಾಗಿ ಕಾಣಂಗಿಲ್ಲೋ ಯಪ್ಪಾ”
“ದೀಪಾನೂ ಆಕ್ಲಿಲ್ಲ ಅವ ಖೋಡಿ”
ಅಜ್ಜಿಯ ವಾದ ಕೇಳಿ ನಕ್ಕ ಪ್ರೀತಿಯ ಮೊಮ್ಮಗ.
*****
೨೮-೦೩-೯೨