ಎದಗೆ ಬಿದ್ದ ಕತೆ

ಎದಗೆ ಬಿದ್ದ ಕತೆ

೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ ಬೇರೆಲ್ಲಿ ಇಲ್ಲ! ಎಲ್ಲ ಇಲ್ಲಿ ಎಂಬ ಅನುಭವಕ್ಕೆ ಬಂತು.

ಇಡೀ ಹುಬ್ಬಳ್ಳಿಯಲ್ಲೇ ಇದು ಅತಿ ದೊಡ್ಡ ಹೊಲಸು ಬಸ್ ನಿಲ್ದಾಣ. ಈ ನಿಲ್ದಾಣದೊಳಗೆ ಸ್ವಚ್ಛತೆ ಕಾಯ್ದುಕೊಳ್ಳುವುದೇ ನನ್ನ ಮುಖ್ಯ ಕೆಲಸಗಳಲ್ಲಿ ಒಂದಾಗಿತ್ತು. ಕಾಗೇನ ಬಿಳಿ ಮಾಡಿದಂಗೆ, ನರಿನ ಹುಲಿ ಮಾಡಿದಂಗೇ… ನಿಲ್ದಾಣದ ಸ್ವಚ್ಛತೆ ದುಸ್ಸಾಧ್ಯವಾದ ಕೆಲಸಗಳಲ್ಲಿ ಒಂದೂ… ತಾಸಿಗೆ ಸಾವಿರಾರು ಜನ ಇಲ್ಲಿಗೆ ಬಂದು ಹೋಗುವುದು! ಎಲ್ಲರೂ ಖಡ್ಡಾಯವಾಗಿ ಗಲೀಜು ಮಾಡೇ ಹೋಗುವವರಾಗಿದ್ದರು. ಬಸ್ ನಿಲ್ದಾಣವೆಂದರೆ, ಸರ್ಕಸ್! ಯಿಲ್ಲಿ ಸಣ್ಣಪುಟ್ಟ ವಸ್ತು ವಡವೆ, ತಿಂಡಿ ತಿನಿಸು ಮಾರುವವರನ್ನು ಹಾಕರ್ ಎಂದು ಕರೆಯುವುದು ಇವರ ಹತ್ತಿಕ್ಕುವುದು ಏಳು ಕೆರೆ ನೀರು ಕುಡಿದಷ್ಟು ದುಸ್ಸಾಹಸ. ಇನ್ನು ಬೆಗ್ಗರ್ ನಿಯಂತ್ರಿಸುವುದೂ ಏಳು ಹನ್ನೊಂದಾಗಿತ್ತು… ಇನ್ನು… ಕಸವನ್ನು ಒಂದು ಕಡೆಯಿಂದಾ ಗುಡಿಸಿನ್ಯಾಂತ ಹೊಂಟಿದ್ದರೆ, ಮತ್ತೊಂದು ಕಡೆಯಿಂದ ಗಲೀಜು ಮಾಡುತ್ತಾ ಬರುವ ಜನರ ಗುಂಪು! ಸಮುದ್ರದ ಅಲೆಗಳಂತೆ ಜನರು…. ಬರುತ್ತಲೇ ಇರುವವರು…! ನಾ ಹೋದ ಹೊಸದರಲ್ಲಿ… ಆಗ ಬಸ್ ನಿಲ್ದಾಣದಲ್ಲಿ ಮೂಗು ಮುಚ್ಚಿ ನಿಲ್ಲುವ ಸಂದಿಗ್ಧ ಪರಿಸ್ಥಿತಿ ಅಲ್ಲಿತ್ತು! ಗಬ್ಬುನಾಥ ಗಾಳಿ ಬೀಸಿದರೆ ಸಾಕು ಮಡಸು ನೀಸು, ಕೆಟ್ಟ ವಾಸನೆ ಮೂಗಿಗೆ ಗಫ್ ಅಂತಾ ಅಡ್ರುತ್ತಿತ್ತು. ಮೂಲೆ ಮೂಲೆಯಲ್ಲಿ ಕಸದ ರಾಶಿರಾಶಿ… ಎಲೆ ಅಡಿಕೆ ಉಗುಳು… ಪಾನ್ ಪರಾಗ್… ಜರತಾ…. ಪಿಚಕಾರಿ ಹೊಡೆದಂಗೆ ಎದ್ದೆದ್ದು ಕಾಣುವ ವಿಕಾರ ಚಿತ್ರ ವಿಚಿತ್ರ ಕಂಡು ಗಡಗಡ ನಡುಗಿದೆ.

ಬಸ್ ನಿಲ್ದಾಣಕ್ಕೆ ಬರುವ ಕೆಲವು ಜನ್ರು ಸಿಕ್ಕ ಸಿಕ್ಕಲ್ಲಿ ಕಕ್ಕಿ ಕೆಮ್ಮಿ ಉಗುಳಿ ಸೀದಿ ಗಲೀಜು ಮಾಡೋತನಕ ಬಿಡುತ್ತಿರಲಿಲ್ಲ. ಹಾಗೆ ಮಾಡಿದ್ರೇನೇ ತೃಪ್ತಿ ಸಮಾಧಾನ… ಕಂಡ ಕಂಡಲ್ಲಿ ಮಲ ಮೂತ್ರ ವಿಸರ್ಜನೆಗೈದು ನಿಟ್ಟುಸಿರು ಬಿಡುತ್ತಿದ್ದರು. ನಾನು ನನ್ನ ಸಿಬ್ಬಂದಿ ನಿತ್ಯ ಮೂರು ಹೊತ್ತು… ಸ್ವಚ್ಛತೆಗೆ ಆಧ್ಯತೆ ಕೊಟ್ಟು ಕೊಟ್ಟು… ತಲೆ ಕೆಟ್ಟು ಹೋಗಿತ್ತು!! ಯಾವ ಜನ್ಮದಲಿ ಏನು ಪಾಪ ಮಾಡಿದ್ದೆನೋ ಯೀ ಜನ್ಮದಲಿ ಬಸ್ ನಿಲ್ದಾಣದ ನಿತ್ಯ ನರಕವನ್ನು ಕಳೆಯುತ್ತಾ ನಿತ್ಯ ನರಕದಲ್ಲಿ ಬಿದ್ದು ಹೊರಳಾಡುತ್ತಿಹೆನೆಂದು ಹಳಿದುಕೊಂಡ. ಯಾರನು ಬೈದು ಹಳಿದು ಶಪಿಸಿದರೇನು…?! ನನ್ನೀ ಪಾಪ ಘನ ಘೋರವಾಗಿರುವಾಗ ಯಾರು ತಾನೆ ಏನು ಮಾಡಲು ಸಾಧ್ಯ? ಎಂದು ಮರುಗಿದೆ.

ಇದೇ ಟೈಮಿನಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನನ್ನಂಗೆ ಕರ್ತವ್ಯ ನಿರ್ವಹಿಸುತ್ತಿದ್ದ ಒಂದು ಕಾಲದಲ್ಲಿ ನನ್ನ ಕೈ ಕೆಳಗೆ ಡಿಪೋ ಮ್ಯಾನೇಜರ್ ಆಗಿದ್ದ ಅಧಿಕಾರಿ ಈಗ ಅಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಅಧಿಕಾರಿಯನ್ನು… ‘… ನೀನು ನಿಲ್ದಾಣವನ್ನು ಸ್ವಚ್ಛವಾಗಿ ಇಡುವಲ್ಲಿ ವಿಫಲನಾಗಿರುವೆ…! ನಿನ್ನನ್ನು ಅಮಾನತ್ತುಗೊಳಿಸಲಾಗಿದೆಯೆಂದು…’ ಆದೇಶ ನೀಡಿದರು! ಇದು ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ… ಮುಖ್ಯ ವರದಿಯಾಗಿ ಪ್ರಸಾರವಾಗಿತ್ತು. ಮಾನ್ಯ ಸಾರಿಗೆ ಸಚಿವರಾದ ಪಿ.ಜಿ.ಆರ್. ಸಿಂಧ್ಯೆಯವರು ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ದೊಡ್ಡ ಬಹು ದೊಡ್ಡ ಶಾಕ್ ನೀಡಿದ್ದರು! ಇದರಿಂದಾಗಿ ನಾನಂತು ನಿಕ್ಕರಿನಲ್ಲಿ ಬೇಧಿ ಮಾಡಿಕೊಂಡೆ..!! ಬಡವನ ಮೇಲೆ ನನ್ನಂತವನ ಮೇಲೆ ಹಾಳುಗೋಡೆ ಬೀಳುವುದೆಂದರೆ… ಇದೇ ನೋಡಿ! ಅಬ್ಬಾ… ಅಂತಾ ತಲೆ ತಲೆ ಕೊಡವಿಕೊಂಡು, ನಡುಗಿದೆ.

ತಿನ್ನದಲೇ ಉಣ್ಣುದಲೇ ಸುಲಭವಾಗಿ ನೌಕರಿ ಕಳಕೊಂಡು ಹೋಗಲು ಇಲ್ಲಿಗೆ ಬಂದಿರುವೆನೆಂದೂ ಪರಿಪರಿಯಾಗಿ ಚಿಂತಿಸಿದೆ. ಆವತ್ತು ಬರಸಿಡಿಲು ಹೊಡೆಯಿತು. ಅಷ್ಟರಲ್ಲಿ ಹುಬ್ಬಳ್ಳಿಯ ಬಸ್ ನಿಲ್ದಾಣಕ್ಕೆ ಅಧಿಕಾರಿಗಳ ದಂಡೇ ಭೇಟಿ ಕೊಟ್ಟಿತು. ಮೋಸರಲ್ಲಿ ಕಲ್ಲು ಹುಡುಕಲು ಕೈಯಲ್ಲಿ ದುರ್‍ಬೀನ್ ಹಿಡಿಯಿತು…

‘ಮಿಸ್ಟರ್‌ ಯಲ್ಲಪ್ಪ ನೆಕ್ಸಟ್ ಸಸ್ಪೆಂಡ್ ಆಗುವ ಸರದಿ ನಿನ್ನದು! ನೀನು ಬ್ಯಾಡ್ ಲಕ್ಕು ಆಫೀಸರ್!’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ವಿ.ಕಟ್ಟಿ ಮುಖದ ಮೇಲೆ ಹೊಡೆದಂಗೆ ನನ್ನೆದುರಿಗೆ ಅಂದರು. ಅವರ ಮಾತನ್ನು ಉಳಿದ ಅಧಿಕಾರಿಗಳು ಅನುಮೋದಿಸಿದರು. ಆಗ ಇತರೆ ಅಧಿಕಾರಿಗಳಿಗೆ ಒಳ ಒಳಗೆ ಖುಷಿಯೋ ಖುಷಿ.

‘ಆಹಾ… ಮೊದ್ಲು ಹಾಗೆ ಆಗ್ಲಿ ಸಾರ್! ನೆಕ್ಸಟ್ ಯಿವ್ರೇ… ಡಿ.ಸಿ. ಆಗುವ ಸರದಿ ಇದೇ ಸಾರ್! ಕೈ ತುಂಬ ಸಂಬ್ಳ… ಬಡ್ತಿ… ಹಗಲು ರಾತ್ರಿ ಕೆಲ್ಸ ಮಾಡಿ ತೋರಿಸಬೇಕಲ್ಲಾ. ಹಾಗೆ ಇವರಲ್ಲಿ ಪೆಯಿನ್ ಕಾಣುತ್ತಿಲ್ಲ ಹಿಂದೆ ಮಾಡಿದ್ದು ಈಗ ಲೆಕ್ಕಕ್ಕಿಲ್ಲ ಬರೀ ಪ್ರಾಮಾಣಿಕನಾಗಿದ್ದರೆ, ಬರಹಗಾರನಾಗಿದ್ದರೆ ಏನೇನು ಸಾಲದೆಂದು’ ಇನ್ನೊಬ್ಬ ಅಧಿಕಾರಿ ಚುಚ್ಚಿದ.

ಮೀರ್ ಸಾಧಿಕ್ಕು, ಕೊಂಡಿಮಂಚಣ್ಣರು, ಶಕುನಿಗಳು, ಕೈಕೆಯರು, ಕೌರವ ಸಂತಾನ ನಮ್ಮಲ್ಲಿದೆಯೆಂದು ನನಗೆ ಆ ಕ್ಷಣ ಅನಿಸಿತು. ಹಿಂಗೆ ಮಕದ ಮೇಲೆ ಹೊಡೆದಂಗೆ ಹೇಳಿದವು ನನ್ನ ಜೀವನದಲ್ಲಿ ಬಹಳಷ್ಟು ಜನ್ರು ಸಿಕ್ಕಿದ್ರು…. ಅವರಲ್ಲಿ ಇವರೂ ಹತ್ತನೆಯವರೋ ಹನ್ನೊಂದನೆಯವರೋ… ಆದ್ರು…

ನನ್ನ ಮಕ ತಿಪಟೂರು ತೆಂಗಿನಕಾಯಿಯ ಮೂರು ಕಣ್ಣಿನ ಚಿಪ್ಪಾಗಿತು! ಇವರೆಲ್ಲರ ಮಾತುಗಳನ್ನು ಕೇಳಿ ಭೂಮ್ಯಾಕ್ಕಿಳಿದೆ! ನಮ್ಮಲ್ಲಿನ ಅಧಿಕಾರಿಗಳೇ ಹೀಗೇ… ಕೆಲವರಂತೂ ಮುಂಜಾಲಿಂದ ಸಂಜೆತನಕ ಅವರಿವರ ಕಿವಿ ಕಚ್ಚುವ, ಕಾಲಿಡಿದೆಳೆಯುವ, ಅವರಿವರನ್ನು ಗೋಳು ಹೊಯ್ದುಕೊಳ್ಳುವ ವೃತ್ತಿ ಪ್ರವೃತ್ತಿಯುಳ್ಳವರಾಗಿರುತ್ತಾರೆಂದು ಬಲು ನೊಂದುಕೊಂಡೆ. ನನ್ನನ್ನು ನಾನು ಕೊಂದು ಕೊಂಡೆ. ಬಂದಿದ್ದೆಲ್ಲ ಬರಲಿ. ಗೋವಿಂದನ ದಯವಿರಲಿ ಎಂದವನೇ ವಿನಹ ದೈವವನ್ನು ಹಳಿದವನಲ್ಲ. ನಗುನಗುತಾ ಕಷ್ಟಗಳ ಎದುರಿಸಿದವನು ಆ ದೇವರೇ ಸೋತು ನನ್ನ ನಗುವಿಗೆ ತಲೆಬಾಗಿ ನನ್ನ ಶಿರದಲಿ ಹೊತ್ತು ನಡೆದವನು ಯೀಗ ನನ್ನ ಕೈ ಬಿಡುವನೇ…?! ಅಷ್ಟೇ… ಎಂದೂ… ಯೀಗಲೂ ಗಟ್ಟಿ ಹೃದಯ ಮಾಡಿಕೊಂಡೆ.

ಆವತ್ತು ಮನೆಯಲ್ಲಿ ನನ್ನ ಮಕ್ಳು ಮನೆಯವ್ರು ಬಹಳ ನೊಂದು ಕೊಂಡು….

‘ಅಲ್ಲಾರೀ ಎಲ್ಲೋ ಮಳೆಯಾದ್ರೆ, ಗುಡುಗಿದ್ರೆ, ಮಿಂಚಿದ್ರೆ, ಸಿಡ್ಲು ಹೊಡೆದ್ರೆ, ನೀವ್ಯಾಕೆ ಊಟ ತಿಂಡಿ ಬಿಟ್ಟು ತುಂಬಾ ಹೊದ್ದುಕೊಂಡು ಮಲಗಬೇಕೇಳ್ರೀ? ಧೈರ್‍ಯವಾಗಿ ನೀವೂ ಫೇಸ್ ಮಾಡ್ರ್‍ಈ.. ಒಂದ್ ದಿನ, ಒಂದ್ ಮಾತು, ಒಂದ್ ಕತೆಯಾದ್ರೆ ಕೇಳಹುದು, ಹೇಳ್ಬಹುದು… ದಿನಾ ಸಾಯೋರಿಗೆ ಅಳಾರ್‍ಯಾರು? ಹೆದ್ರಾರ್‍ನ ಹೆದ್ರುಸ್ತಾರೆ! ನಿಮ್ ಸಾವು, ನೋವು, ಉಪವಾಸ, ವನವಾಸ ಯಾರಿಗೆ ಬೇಡ ಬಿಡ್ರಿ’ ಎಂದು ನನ್ನ ಬಗ್ಗೆ ಮಮ್ಮಲ ಮರುಗಿ ಭೇಷ್ ರುಬ್ಬ ತೊಡಗಿದರು.

ಯಿಗ್ಗೆ ಮೂವತ್ತು ವರ್ಷಗಳ ಕೆಳಗೆ, ನಾನು ಹೊಸದಾಗಿ ನೌಕರಿ ಸೇರಿದ ದಿನ ಮಾನಗಳಲ್ಲಿ ಎಷ್ಟೊಂದು ಹರ್ಷವಿತ್ತು? ಸಡಗರ ಸಂಭ್ರಮವಿತ್ತು…?? ಪ್ರಾಮಾಣಿಕತೆಯಿತ್ತು…?! ಘನತೆ ಗೌರವವಿತ್ತು? ಹತ್ತಾರು ಹಳ್ಳಿಗಳಿಂದ ಜನ ಬಂದು ನನ್ನ ನೋಡಿ ನೋಡಿ… ಆಗ ಅಭಿನಂದಿಸುತ್ತಿದ್ದ ರೀತಿಗೆ, ಪರಿಗೆ, ಬೆಕ್ಕಸ ಬೆರಗಾಗಿ, ಹೋಗಿದ್ದೆ, ಪ್ರತಿ ಮಾಸಿಕ ಸಭೆಯಲ್ಲಿ ಎ.ಸಿ, ದಂಡಾಧಿಕಾರಿ, ಆರ್.ಟಿ.ಓ. ಪೊಲೀಸ್ ಅಧಿಕಾರಿಗಳು, ಜನ ಪ್ರತಿನಿಧಿಗಳು ಇಡೀ ತಾಲ್ಲೂಕಿನ ಅಧಿಕಾರಿಗಳು ನಮ್ಮ ಡಿಪೋದ ಕಾರ್ಯ ವೈಖರಿಯನ್ನು ಮೆಚ್ಚಿ ತಲೆದೂಗಿದಾಗ ನಮ್ಮ ಸೇವೆ, ಜನ್ಮ ಸಾರ್ಥಕವಾಗಿತ್ತೆಂದು ಅಂದುಕೊಂಡಿದ್ದುಂಟು. ಹಳಿಯಾಳದಲ್ಲಿ ಎರಡು ವರ್ಷ ನೌಕರಿ ಮಾಡಲು ಸಾಧ್ಯವೇ?! ಕೈ, ಬಾಯಿ, ಕಚ್ಚೆ ಎಲ್ಲಾ ಪರಿಶುದ್ಧವಾಗಿ ಇಟ್ಟುಕೊಂಡು ಮಾನ್ಯ ಸಾರಿಗೆ ಸಚಿವರಾದ ಪಿ.ಜಿ.ಆರ್, ಸಿಂಧ್ಯಯವರಿಂದ ಬೆಸ್ಟ್ ಡಿಪೋ ಮ್ಯಾನೇಜರ್ ಅವಾರ್ಡ್ ಸ್ವೀಕರಿಸಲು ಸಾಧ್ಯವೇ? ಅದೇ ರೀತಿ ಬಾಗಲಕೋಟೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಉತ್ತಮ ಹೆಸರು ಗಳಿಸಲು… ಹಗಲಿರುಳು ಶ್ರಮಿಸಿದ್ದು ಯೀಗ ಕಣ್ಣ ಮುಂದೆ ಅಂಬಾರಿ ಹೊರಟಿತು…

ರಾಜ್ಯ ಮಟ್ಟದ ಇಂಧನ ಉಳಿತಾಯದಲ್ಲಿ ಮೊದಲ ಸ್ಥಾನ ಗಳಿಸಿ ಬಹುಮಾನ ಪಡೆದೆ. ಪ್ರಾದೇಶಿಕ ವಲಯದಲ್ಲಿ ಇಂಧನ ಉಳಿತಾಯದಲ್ಲಿ ಮೊದಲ ಬಹುಮಾನ! ವಿಭಾಗ ಮಟ್ಟದಲ್ಲಿ ಗೆದ್ದೆ, ಜನರ, ಸಿಬ್ಬಂದಿಯ ಮನಸ್ಸನ್ನು ಗೆದ್ದೆ. ಆಗ ತುಸು ಬೇಸರ, ಅವಮಾನವೆನಿಸಿದ್ದರೆ ಬಾಳ ಉತ್ತಮ ನೌಕರಿಗೆ ಸೇರಲು ಅವಕಾಶವಿತ್ತು. ಆದರೆ ಜನರ ಸೇವೆಯೇ ಜನಾರ್ಧನನ ಸೇವೆ. ಅತಿಯಾಸೆ ಬೇಡ! ಎಲ್ಲಿಗೆ ಕೊನೆ? ಮೊದಲು ಇಷ್ಟೇ ಋಣವಿರುವುದೆಂದು ನಾನು ಲೆಕ್ಕಾಚಾರ ಮಾಡಿಕೊಂಡು ಹಾಸಿಗೆ ಇರುವಷ್ಟು ಮಾತ್ರ ಕಾಲು ಚೆಲ್ಲಿ ಶಾಂತಿ, ನೆಮ್ಮದಿಯ ಜೀವನ ರೂಪಿಸಿಕೊಂಡೆ. ಮನೆಯವರು ಹೆರಿಗೆಗೆಂದು ಹೊದೆಷ್ಟು ತಿಂಗಳುಗಳು ಬ್ರೆಡ್, ಹಣ್ಣು, ಹಾಲು, ಒಣರಟ್ಟಿ, ರಾಗಿಗಂಜಿ… ಬಾನ ಉಂಡು, ಉಪವಾಸ ಕಳೆದ ದಿನಗಳು ಕಣ್ಣ ಮುಂದೆ ಥಕ ಥಕ… ಕುಣಿಯತೊಡಗಿದವು.

ಆದರೀಗ ನಾಲ್ಕು ವರ್ಷದಲ್ಲಿ ನಾಲ್ಕು ಅಂಗ, ಮೂರು ಭಂಗ ಕಾಣುವಂತಾಗಿತ್ತು. ಜೀವನವೆಂದರೆ ಹೇಗೆಂದು ಹೇಳಲಾಗುವುದಿಲ್ಲ! ತುಂಬಾ ಅವಮಾನಿತನಾದೆ! ಇರಾಕೆ ರೂಮಿಲ್ಲ, ಆಫಿಸಿಲ್ಲ, ಜೀಪಿಲ್ಲ, ಅಧಿಕಾರವಿಲ್ಲ, ಸ್ಥಾನವಿಲ್ಲ, ಮಾನವಿಲ್ಲ, ಸಾರಿಗೆ ನಿಯಂತ್ರಕರಿಗಿಂತಾ ಕಡಿಮೆ ದರ್ಜೆಗೆ ನೂಕಲ್ಪಟ್ಟೆ! ನಿತ್ಯ ಸಿಟಿ ಬಸ್ಸಿನಲ್ಲಿ ಪ್ರಯಾಣ! ಬಾಡಿಗೆ ಮನೆಯ ರೆಂಟು, ಅಡ್ವಾನ್ಸ್ ಕೊಡಲು ಶಕ್ಯವಿಲ್ಲದ ತಾಣವಾಗಿತ್ತು! ಮೂರು ಜನ ಮಕ್ಕಳ ವಿದ್ಯಾಭ್ಯಾಸ, ಬಂದು ಹೋಗುವ ಬಂಧು ಬಳಗ, ಅಣ್ಣ ತಮ್ಮಂದಿರು… ವರ್ಷದಲ್ಲಿ ಸುಸ್ತಾಗಿ ಹೋಗಿ ಬಿಟ್ಟೆ! ಉಳಿತಾಯವಿಲ್ಲದ ಜೀವನ ಬಲು ಬೇಸರ ತಂತು, ಬರುವ ಸಂಬಳ ಸಾಲದಾಗಿತು. ಸಿಟಿ ಜೀವನ ಬಲು ಕಿಟಿ ಕಿಟಿ ಕಟಿ ಪಿಟಿಯೆನಿಸಿತು. ನಾನಂತು ಇಂಥಾ ಕೆಟ್ಟ ಕಾಲ ನನಗೆ ಬರುತ್ತದೆಂದು ಅಂದುಕೊಂಡಿರಲಿಲ್ಲ. ಪಾತಾಳಕ್ಕೆ ಬಿದ್ದೆ. ಮೇಲೇಳಲು ಒದ್ದಾಡಿದೆ!

ನನ್ನಂಗೆ ನನಗಿಂತ ಕಡಿಮೆ ಅಧಿಕಾರ, ಓದಿರುವ ಸಿಬ್ಬಂದಿ ಸುಖ, ಸಂತೋಷ ಅಧಿಕಾರ, ಹಣದಲಿ, ಜೀಪು, ಕಾರಿನಲಿ, ಧರ್ಪದಲಿ ಮೆರೆವುದ, ತೇಲಾಡುವುದ ಕಂಡೆ! ನಾ ಪಡೆದಿದ್ದು ನನಗೆ ಅವರು ಪಡೆದಿದ್ದು ಅವರಿಗೆಂದು ನನ್ನನ್ನು ನಾನು ನಿತ್ಯ ಸಂತೈಸಿಕೊಳ್ಳುತ್ತಿದ್ದೆ… ನನ್ನ ಮನಸನ್ನು ಬಲವಂತವಾಗಿ ಸಾಹಿತ್ಯದೆಡೆ ತಿರುಗಿಸಿಕೊಂಡೆ.

ಇದೇ ಟೈಮಿನಲ್ಲಿ ನನಗೆ ಜ್ಞಾನೋದಯವಾಗಿತ್ತು! ಹಣ, ಅಧಿಕಾರ, ಜಾತಿ, ಮತ, ಧರ್‍ಮ, ಅಂತಸ್ತು ಶಾಶ್ವತವಲ್ಲ. ನಾನು ಮನುಶ್ಯನಾಗಿ ಉಳಿಬೇಕೆಂದರೆ… ಯೀ ಒತ್ತಡ, ಹಿಂಸೆ, ಮಾನಸಿಕ ಕ್ಲೇಶದಿಂದ ಮುಕ್ತನಾಗಬೇಕಾದರೆ, ಸಾಹಿತ್ಯದ ಮೊರೆ ಹೋಗಲೇ ಬೇಕೆಂದು ತೀರ್ಮಾನಿಸಿ, ಡಾಕ್ಟರೇಟ್ ಪದವಿಗೆ ಸಿದ್ಧತೆಯನ್ನು ಬಲು ಬಿರಿಸಿನಿಂದ ಕೈಗೊಂಡೆ. ಅಂದು ಆಗದೆಂದು ಕೈಬಿಟ್ಟ ಕೆಲಸ ಕೈಗೆತ್ತಿಕೊಂಡೆ. ಸಾಧ್ಯವೆಂದು ಯೀಗ ನನಗೆ ಅನಿಸಿತು. ದಾಸರಂತೆ ನಾನೂ ಪರಿವರ್ತನೆಗೊಂಡೆ ಒಳಗಣ್ಣು ತೆರೆಯಿತು. ಹಗಲು ರಾತ್ರಿ ಸಂಶೋಧನೆಗಾಗಿ ಹಂಬಲಿಸಿ ಬಿಟ್ಟೆ. ಪ್ರತಿ ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ಸಂಪೂರ್ಣವಾಗಿ ಅಂದರೆ… ದಿನಕ್ಕೆ ೧೪ ತಾಸು, ೧೬ ತಾಸು ಧ್ಯಾನಿಸಿ ಬರೆಯ ತೊಡಗಿದೆ. ನಾನು ಯಾರು ಏನು ಎಂದು ನಿರೂಪಿಸಲು, ಸೆಡ್ಡು ಹೊಡೆಯಲು ಇದೊಂದು ಸುವರ್ಣಾವಕಾಶವೆಂದು ಪಣತೊಟ್ಟು ಅರ್ಹನಿಸಿ ದುಡಿಯತೊಡಗಿದೆ. ನನ್ನ ಮುಂದೆ ಆಯ್ಕೆ ಇದ್ದುದು ಇದೊಂದೇ… ನನ್ನನ್ನು ಜನ ಕಟೆ ಕಟೆದು ನಿಲ್ಲಿಸಿದರು. ಏನೋ ಮಾಡಲು ಹೋದರು. ನಾನೋ ಅದ್ಭುತ ಮೂರ್ತಿ ತ್ರಿಮೂರ್ತಿಯಾದೆ!

ನನ್ನ ಮಾರ್ಗದರ್ಶಕರೆಂದರೆ… ಪ್ರಾತಃ ಕಾಲದ ಸ್ಮರಣೆಯರು! ಕೋಟಿಗೊಬ್ಬರು ಪುಣ್ಯಕೋಟಿ ಅವರ ಸ್ಮರಣೆ ದೈವ ಸ್ಮರಣೆಗೆ ಸಮಾನ. ತಾಯಿ ಕರುಳುಳ್ಳವರು. ಇವರಿಂದಲೇ ಮಳೆ ಬೆಳೆ ನ್ಯಾಯ ನೀತಿ ಧರ್‍ಮ… ಗುರುವಿಗೆ ಗುರು ಅವರು ಗಾಯದ ಮೇಲೆ ಬರೆ ಎಳೆಯಲಿಲ್ಲ. ಉಪ್ಪು ಸವರಲಿಲ್ಲ. ನೊಂದ ಜೀವಕ್ಕೆ ಮಿಡಿದ ಕಂಬನಿಯಾದರು ಸಾಂತ್ವಾನ ಹೇಳಿದರು. ಅವರ ಅಪ್ಪಟ ಪ್ರಾಮಾಣಿಕತೆ ಸರಳತೆ, ಸಜ್ಜನಿಕೆ ನನ್ನನ್ನು ಉರುಗೋಲಾಗಿ ನಡೆಸಿತು. ಯೀ ಬದುಕು, ಬರಹ, ಸಾರ್ಥಕವನ್ನಾಗಿಸಿತು.

ಯೀ ವೇಳೆಯಲ್ಲಿ ನನ್ನನ್ನು ಸಂತೈಸಿ, ಆದರಿಸಿ, ಸರಳ ಉಪಾಯವಾಗಿ ಅಧ್ಯಾಯಗಳಿನ್ನು ಬರೆಸಿದಿರು. ಚೆನ್ನಾಗಿ, ಇನ್ನೂ ಚೆನ್ನಾಗಿ… ಹೀಗೆ ನಾಲ್ಕು ಸಾರಿ ಬರೆಸುವಲ್ಲಿ ಅವರು ಯಶಸ್ವಿಯಾದರು. ಅವರ ವ್ಯಕ್ತಿತ್ವ ಅಂಥಾದ್ದು.

ತಂದ ಸಾಮಾಗ್ರಿ, ವಸ್ತು, ವಿಶೇಷಗಳನ್ನು ಹೇಗೆ ಜೋಡಿಸಬೇಕು? ಹಂತ ಹಂತವಾಗಿ ಜೋಡಿಸುವ ವಿಧಿ ವಿಧಾನವನ್ನು ಕೈ ಹಿಡಿದು ಹೇಳಿಕೊಟ್ಟರು. ನನಗೆ ಸಂಶೋಧನೆಯೆಂದರೆ ಇಷ್ಟು ಹಗುರವೆಂದು ತಿಳಿದಿರಲಿಲ್ಲ. ಅದರ ರಹಸ್ಯವನ್ನು ಬಲು ಸರಳವಾಗಿ ಸುಂದರವಾಗಿ ಸುಲಲಿತವಾಗಿ ಹೇಳಿಕೊಟ್ಟರು. ನನ್ನ ನೋಡಿ ನಕ್ಕವರಿಗೆ ತಕ್ಕ ಉತ್ತರದಂತಿತ್ತು. ಸುಮಾರು ಎರಡು ವರ್ಷ ಹಗಲಿರುಳು ಅನ್ನ, ನೀರು, ನಿದ್ರೆ ಬದಿಗೊತ್ತಿ, ಸುಖ ಸಂತೋಷ, ವೈಯಕ್ತಿಕ ಕೆಲಸ ಕಾರ್‍ಯಗಳನ್ನು ಲಕ್ಷಿಸದೆ, ತಪಸ್ಸು ಮಾಡಿದೆ. ಮಹಾವ್ರತ ಕೈಗೊಂಡೆ ಸುಮಾರು ಮುನ್ನೂರು ಪುಟಗಳಷ್ಟು ಸಂಶೋಧನಾ ಪ್ರಬಂಧ ಸಿದ್ಧಪಡಿಸಿದೆ. ಅದನ್ನು ಧಾರವಾಡದಲ್ಲಿ ಐದು ಪ್ರತಿಗಳಾಗಿನ್ನಾಗಿ ಟೈಪ್ ಮಾಡಿಸಿ, ಪ್ರತಿ ಅಕ್ಷರವನ್ನು ಕಣ್ಣಲ್ಲಿ ಕಣ್ಣಿಟ್ಟು ತಿದ್ದುಪಡಿ ಮಾಡಿ, ಮಾರ್ಗದರ್ಶಕ ಗುರುಗಳಾದ ಡಾ.ಬಿ.ಕೆ. ಹಿರೇಮಠ ಅವರಿಗೆ ತೋರಿಸಿದೆ. ಅವರು ಬಲು ಸಂಭ್ರಮಿಸಿ, ಅಷ್ಟಕ್ಕೆ ಸುಮ್ಮನಾಗಲಿಲ್ಲ ಅವರು ಡಾ. ಎಂ.ಎಂ. ಕಲ್ಬುರ್ಗಿ ಸಾರ್ ಬಳಿ ನನ್ನ ಕಳುಹಿಸಿದರು.

ಅವರು ಪ್ರಬಂಧವನ್ನು ಪರಿಶೀಲಿಸಿ, ನನಗೆ ಅಗ್ನಿ ಪರೀಕ್ಷೆಗೆ ಗುರಿಪಡಿಸಿದರು! ನಾನು ಅವರಿಂದಲೂ ಪಾಸಾದೆ. ಅವರು ಧಾರವಾಡದಿಂದ ಫೋನ್ ಮಾಡಿ ಡಾ. ಬಿ.ಕೆ. ಹಿರೇಮಠ ಸಾರ್ ಅವರೊಂದಿಗೆ ಸಂತಸ ಹಂಚಿಕೊಂಡು ಬಲು ಖುಷಿ ಪಟ್ಟರು. ಇದು ದೊಡ್ಡವರ ದೊಡ್ಡ ಗುಣವಲ್ಲವಲ್ಲವೇ? ಆರಂಭದಲ್ಲಿ ನನ್ನ ಬಗ್ಗೆ ಅಪನಂಬಿಕೆಯಿಂದ ಇದ್ದವರು. ಮುಖದ ಮೇಲೆ ಹೇಳಿದವರು ಯೀಗ ನನ್ನ ಮೇಲೆ ನಂಬಿಕೆ ವಿಶ್ವಾಸ ಬಂತು.

ಇಂಥಾ ಭಾಗ್ಯ ನನ್ನೊಬ್ಬನಿಗೆ ಮಾತ್ರವೆಂದು ಅನ್ನಿಸಿತು. ಹೂವಿನಿಂದ ನಾರು ಸ್ವರ್ಗಕ್ಕೆ ಹೋಗುವುದೆಂದರೆ ಇದೇ ಅನಿಸಿತು. ನಮ್ಮ ಸಾರಿಗೆ ನಿಗಮದಲ್ಲಿ ಸಾಹಿತ್ಯದ ಗಂಧಗಾಳಿ ಸುಳಿಯಲು ಸಾಧ್ಯವಿಲ್ಲ! ಅಂಥಾ ಪರಿಸರದಲ್ಲಿ ನಾನು ಕೆಸರಿನ ಕಮಲವಾಗಿ ಅರಳಿದೆನಲ್ಲಾ ಎಂದು ಹಿರಿ ಹಿರಿ ಹಿಗ್ಗಿದೆ! ಹೌದು… ಅಧಿಕಾರವಿಲ್ಲ, ಅಂತಸ್ತಿಲ್ಲ ಸೌಲಭ್ಯ, ಸವಲತ್ತು ಇಲ್ಲ. ಬರೀ ನೌಕರಿಗಾಗಿ ನೌಕರಿಯಾಗಿತ್ತು. ನನಗೆ ಭರಿಸಲಾರದ ನಷ್ಟ ಕಷ್ಟ, ಅನಿಷ್ಟವೆನಿಸಿತು! ನನ್ನನ್ನು ನಾನು ಜತನವಾಗಿಟ್ಟುಕೊಳ್ಳಲು ಈಗ ಇದುವೇ ಅನಿವಾರ್‍ಯ, ಅವಶ್ಯಕತೆ ಅನಿಸಿತು. ಯೀ ಹವ್ಯಾಸವೊಂದು ನನಗೆ ಇರಲಿಲ್ಲವೆಂದರೆ… ಹುಚ್ಚ, ಅರೆ ಹುಚ್ಚನಾಗಬೇಕಾಗಿತ್ತು!

ನನ್ನ ಪ್ರಬಂಧವನ್ನು ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ೧೯೯೬ ರಲ್ಲಿ ಸಲ್ಲಿಸಿದೆ! ಐದು ತಿಂಗಳು ಕಳೆದವು. ನನ್ನನ್ನು ಮೌಖಿಕ ಪರೀಕ್ಷೆಗೆ ಕರೆಸಿದರು. ಅಗ್ನಿ ಪರೀಕ್ಷೆಗೆ ಒಡ್ಡಿದರು. ಪಾಸಾದೆ! ಎರಡು ಜನ ದಿಗ್ಗಜರು ನನ್ನ ಮಹಾ ಪ್ರಬಂಧವನ್ನು ಮೌಲ್ಯಮಾಪನ ಮಾಡಿ, ಪ್ರಮಾಣ ಪತ್ರ, ಪ್ರಶಂಸನಿಯ ಪತ್ರ ನೀಡಿದರು. ಜೀವನದಲ್ಲಿ ಇದಕ್ಕಿನ್ನ ಇನ್ನೇನು ಬೇಕು? ಜೀವನದಲ್ಲಿ ಏನೋ ಮಹಾ ಸಾಧಿಸಿದ ಆನಂದ ತೃಪ್ತಿ ಸಂತಸವಿತ್ತು. ಆಹಾ… ನನಗೆ ಚೆಳ್ಳೆಣ್ಣು ತಿನಿಸಿ, ಕೋತಿ ಮಾಡಿ ಕುಣಿಸಿ, ನಿಲ್ದಾಣದ ಶುಚಿತ್ವಕ್ಕೆ ಸೀಮಿತಗೊಳಿಸಲು ವ್ಯವಸ್ಥಿತವಾಗಿ ಸಂಚು ಮಾಡಿರುವುದು ನನಗೆ ತಿಳಿಯಿತು. ಅದರಿಂದ ಎಚ್ಚೆತ್ತದ್ದರ ಫಲವೆಂದು ತರ್ಕಿಸಿದೆ.

ಡಿಸೆಂಬರ್ ಮೂರನೆಯ ವಾರದಲ್ಲಿ ಪದವಿ ಪ್ರಧಾನ ಮಾಡಿದರು. ಅಂದು ಎಲ್ಲಾ ಪತ್ರಿಕೆಗಳಲ್ಲಿ ನನ್ನ ಪದವಿಯ ಬಗ್ಗೆ ಕೆತ್ತಿ ಬರೆದಿದ್ದರು. ಎಲ್ಲರಿಗೂ ದಿಗ್ಭ್ರಮೆ! ಅನುಮಾನ. ನನ್ನಲ್ಲಿ ಅಂಥಾ ಶಕ್ತಿ, ವಿದ್ವತ್ತು, ಪ್ರತಿಭೆ, ಪರಿಶ್ರಮವಿದೆಯೇ…?! ಎಂದು ಎಲ್ಲರೂ ಸೋಜಿಗ ವ್ಯಕ್ತಪಡಿಸಿದರು. ನನ್ನನ್ನು ಬಸ್ ನಿಲ್ದಾಣದ ಕೂಲಿಗಿಂತ ಕಡೆಯಾಗಿ ಕಂಡವರು ಫೋನ್ ಮೇಲೆ ಫೋನ್ ಮಾಡಿ ವಿಚಾರಿಸುವುದು ನನಗೆ ಬಲು ಹಿಗ್ಗು ತಂತು…

ಹುಬ್ಬಳ್ಳಿ ಧಾರವಾಡದ ಪೊಲೀಸ್ ಕಮೀಷನರ್ ಡಾ. ಡಿ. ವಿ. ಗುರುಪ್ರಸಾದ್ ಅವರಿಂದ ಫೋನ್ ಕರೆ ಬಂತು. ಅವರು ಅಭಿನಂದಿಸಿದಾ ಕ್ಷಣಮರೆಯಲಾರದ ಮಧುರ ಕ್ಷಣ! ನನ್ನ ಆತ್ಮ ವಿಶ್ವಾಸ ಹೆಚ್ಚಿಸಿತು. ಹಣ, ಅಧಿಕಾರ, ಜಾತಿ, ಮತ, ಧರ್ಮ ದೊಡ್ಡವಲ್ಲ! ಜ್ಞಾನ ದೊಡ್ಡದು. ಜ್ಞಾನದ ಹಿರಿಮೆ ಅಪಾರವೆನಿಸಿತು.

ಅವರು ನಮ್ಮ ನಿಗಮದಲ್ಲಿ ನಿರ್ದೇಶಕರು ಎಂಬ ಉನ್ನತ ಹುದ್ದೆಯಲ್ಲಿದ್ದು ಹೋದವರು. ನನ್ನ ಬಗ್ಗೆ ಸದಾಭಿಪ್ರಾಯ ಹೊಂದಿರಲಿಲ್ಲವೆಂಬುದು ನನಗೆ ಗೊತ್ತಿತ್ತು. ಆದರೆ ಅವರು ಹೃದಯ ವೈಶಾಲ್ಯತೆ ಮೆರೆದು ನನ್ನನ್ನು ತಮ್ಮ ಕಛೇರಿಗೆ ಆಹ್ವಾನಿಸಿ, ಕೈ ಕುಲುಕಿ, ಪ್ರಬಂಧವನ್ನು ತಿರುವಿ ಹಾಕಿ, ಮೆಚ್ಚುಗೆ ವ್ಯಕ್ತ ಪಡಿಸಿದರು. ಇದಕ್ಕಿಂತ ಇನ್ನೇನು ಬೇಕು? ಇದಕ್ಕಿಂತಾ ಇನ್ನೂ ಸಾಧಿಸಲು ಸಾಧ್ಯವಿದೆ! ಸಾಧಿಸಬೇಕೆಂದು ಅಂದೇ… ಮನಸ್ಸು ಮಾಡಿದೆ!

ಇದು ನನಗೆ ಕೋಡು ಮೂಡಿಸಿತು. ನನ್ನಲ್ಲಿ ಆತ್ಮ ವಿಶ್ವಾಸಿ ತುಂಬಿಸಿದ ಕ್ಷಣ! ನನ್ನ ಕೈಲಿ ಡಾಕ್ಟರೇಟ್ ಪದವಿ ಗಳಿಸುವುದಕ್ಕೆ ಸಾಧ್ಯವಿಲ್ಲವೆಂಬ ಅಪನಂಬಿಕೆ ನನ್ನಷ್ಟಕ್ಕೆ ನನಗೆ ಬಂದು ಬಿಟ್ಟಿತ್ತು. ಅದರಿಂದ ನನಗೇನು ಪ್ರಯೋಜನವಾಗದೆಂಬ ನಿರ್ಣಯಕ್ಕೆ ಬಂದು ಬಿಟ್ಟಿದ್ದೆ! ಇದೊಂದು ಗಗನಕುಸುಮವೆಂದು ಬಗೆದಿದ್ದೆ. ನನ್ನನ್ನು ಅಪಮಾನ ಮಾಡಲೆಂದೇ ಹಿಂಬಡ್ತಿಗೊಳಿಸಿ ಕೆಲಸಕ್ಕೆ ಬರದವನೆಂದು ನಿರೂಪಿಸಲು ಐದಾರು ಜನ ಅಧಿಕಾರಿಗಳು ಸೇರಿ ಪಿ.ಡಿ. ಶೆಣೈ ವ್ಯವಸ್ಥಾಪಕ ನಿರ್ದೇಶಕರಿಗೆ ಮನದಟ್ಟು ಮಾಡಿ, ನನ್ನನ್ನು ಬೇಕಂತಲೇ ಹುಬ್ಬಳ್ಳಿ ಬಸ್ ನಿಲ್ದಾಣದ ಅಧಿಕಾರಿಯೆಂದು ವರ್ಗಾಯಿಸಿ ಮುಸಿ ಮುಸಿ ನಕ್ಕಿದ್ದರು! ಹೌದು! ಆಗ ಅದು ವೇಶ್ಯಾವಾಟಿಕೆಯ ಅಡ್ಡೆಯೆನಿಸಿತ್ತು. ನನ್ನೆಲ್ಲ ನೋವು, ದುಃಖ, ಅಪಮಾನದ ಸೇಡನ್ನು ನಾನು ಮಹಾ ಪ್ರಬಂಧ ಬರೆಯುವುದರಲ್ಲಿ, ಡಾಕ್ಟರೇಟ್‌ಗಳಿಸುವುದರಲ್ಲಿ ಸಫಲನಾಗಿದ್ದೆ. ನನ್ನೆಲ್ಲ ಕಟ್ಟಾ ಜಾತಿ, ಮತ, ಧರ್ಮಿಯ ವಿರೋಧಿಗಳ ಕುಂಡಿಯಲ್ಲಿ ಒಣ ಮೆಣಸಿನಕಾಯಿ ಮುರುದು ಇಕ್ಕಿದ್ದಂಗಾಗಿತು! ಹೊಟ್ಟೆಯೊಳಕ್ಕೆ ಕೆಂಪು ಮೆಣಸಿನ ಖಾರ ಕಲಿಸಿ ಗೊಟ್ಟದಿಂದ ಹೊಯ್ದಂಗಾಗಿತು! ಇದು ಸಹಿಸಲಾರದ ಸವಾರ್ತೆಯಾಗಿತ್ತು! ಕೆಟ್ಟು ಕೆರಾ ಹಿಡಿದು ಹೋಗುತ್ತಾನೆ. ಕಣ್ಣಾರೆ ನೋಡಿ ಖುಷಿ ಪಡಬೇಕೆಂದಿದ್ದವರಿಗೆ ಬೂಟಿಲಿ ಹೊಡೆದಂತಾಗಿತ್ತು!

ಇಂಥಾ ಹತ್ತಾರು ಘನಂಧಾರಿ ಘನ ಕೆಲಸ ಕಾರ್‍ಯಗಳಲ್ಲಿ ನಾನಿದ್ದೇನೆಂದು ಯೀ ಹಿಂದೆ ಕೂಡಾ ಸಾಕಷ್ಟು ನಿರೂಪಿಸಿ, ಮೀಸೆ ಹುರಿ ಮಾಡಿ, ತೊಡೆತಟ್ಟಿ ಗುಡುಗಿದ್ದುಂಟು! ಇಂದು ಇಲ್ಲಿ ಕೂಡಾ ಎದೆಯುಬ್ಬಿಸಿ ಮಾತನಾಡಿದ್ದೆ. ಇಲ್ಲಿ ಬಡವರೆಂದರೆ ಹಿಂದುಳಿದವರೆಂದರೆ ಅನುಮಾನದಿಂದ ನೋಡುವವರೇ ಹೆಚ್ಚು ಮಂದಿ. ನನ್ನ ಕೂಡಾ ಇನ್ನೂ ಅನುಮಾನದಿಂದ ನೋಡುತ್ತಾ ದೂರದಿ ನಿಂತಿದ್ದರು…

ಮೊತ್ತ ಮೊದಲು ನನ್ನ ಸನ್ಮಾನಿಸಿದ್ದು ಹುಬ್ಬಳ್ಳಿಯ ವಿಭಾಗೀಯ ಕಛೇರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾದ ಎ.ಬಿ. ಪಾಟೀಲ್ ಅವರ ತಂಡ ವಿಭಾಗೀಯ ಕಛೇರಿಯಲ್ಲಿ…

ಜೀವನವೆಂದರೆ… ಹೀಗೂ ಇರುತ್ತದೆಂದು ನನಗೆ ಮೊದಲು ಅನಿಸಿದ್ದು. ಅವಮಾನಿತನೊಬ್ಬ ಶೋಷಿತನೊಬ್ಬ ಕಟ್ಟ ಕಡೆಯನೊಬ್ಬ ಸನ್ಮಾನಿತನಾಗಿದ್ದು ಸಾರಿಗೆ ನಿಗಮದಲ್ಲಿ ಇದೇ ಮೊದಲು ಅನಿಸಿತ್ತು. ಎರಡನೆಯ ಸನ್ಮಾನ ಆಗಿದ್ದು ನನ್ನ ಹಳೆಯ ಡಿಪೋವಾದ ಹಳಿಯಾಳದಲ್ಲಿ. ನಾನು ಹಳಿಯಾಳದಲ್ಲಿ ಎರಡು ವರ್ಷಗಳ ಕಾಲ ಬಲು ಪ್ರಾಮಾಣಿಕತೆಯಿಂದ ಯಾರ ಬಳಿ ಬಿಡಿಗಾಸಲ್ಲ ಒಂದು ಗ್ಲಾಸು ನೀರು ಸಹ ಪುಕ್ಕಟೆಯಾಗಿ ಅಪೇಕ್ಷಿಸದೆ, ಹೆಸರು ಗಳಿಸಿದ್ದು ತೃಪ್ತಿ, ಸಮಾಧಾನ ತಂದಿತ್ತು. ಅಲ್ಲಿ ಡಿಪೋ ಮ್ಯಾನೇಜರ್ ಚಂದ್ರಪ್ಪನವರು ನನ್ನ ಕರೆಸಿ ಅದ್ದೂರಿಯಲ್ಲಿ ಸನ್ಮಾನಿಸಿ ಎರಡು ಸಾವಿರ ರೂಪಾಯಿ ಕಾಣಿಕೆಯಾಗಿ ನೀಡಿ, ಹೊಟ್ಟೆ ತುಂಬಾ ತರಕಾರಿ, ಚಪಾತಿ, ಅನ್ನ, ಬೇಳೆಸಾರು, ಮೊಸರು, ಮಜ್ಜಿಗೆಯ ಊಟ ಹಾಕಿ ಕಳಿಸಿದ್ದು ತುಂಬಾ ವಿಶೇಷವಾಗಿತ್ತು!

ನನ್ನ ಹುಟ್ಟು, ಶ್ರಮ ಸಾರ್ಥಕವೆನಿಸಿತ್ತು. ಮನುಷ್ಯ ಮನಸು ಮಾಡಿದರೆ, ಏನೆಲ್ಲ ಸಾಧಿಸಲು ಸಾಧ್ಯ! ಆದರೆ ಮನುಷ್ಯ ಮನಸು ಮಾಡುತ್ತಿಲ್ಲ.

ಎರಡು ಮೂರು ವರ್ಷಗಳಾಗಿತ್ತು… ಹೀಗೆ ಹೊಟ್ಟೆ ತುಂಬಾ ಊಟ ಮಾಡದೆ, ನಾನು ಹಳಿಯಾಳದ ಸಖಲ ಸಿಬ್ಬಂದಿಯನ್ನು ನೆನೆದು, ಹರಸಿ ಬಸ್ಸು ಹತ್ತಿ ಬಂದಿದ್ದೆ. ಜೀವನ ಹೇಗೆಂದು ಯಾರಿಗೆ ಗೊತ್ತಿರುವುದಿಲ್ಲ. ನಾನಿದ್ದ ಡಿಪೋದಲ್ಲಿ ನನಗೆ ಸನ್ಮಾನವೆಂದರೆ ಸಾಮಾನ್ಯವೇ? ಇದು ಎಲ್ಲರಿಗೆ ಲಭ್ಯವಿಲ್ಲವೆನಿಸಿತು…

ನಂತರ – ಹುಬ್ಬಳ್ಳಿಯ ಗಿರಣಿ ಚಾಳಿಯ ಮಂದಿಯೆಲ್ಲ ಸೇರಿ, ಬ್ಯಾಂಕ್ ಸಿಬ್ಬಂದಿಯೆಲ್ಲ ಸೇರಿ… ಧಾರವಾಡ ಡಿಪೋದ ಸಿಬ್ಬಂದಿ, ದಾವಣಗೆರೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬಳ್ಳಾರಿ ಕಛೇರಿಯಲ್ಲಿ ಹೀಗೆ ಸನ್ಮಾನಗಳೇ ಸನ್ಮಾನಗಳು ಜರುಗಿದವು.

ಇಷ್ಟಕ್ಕೆ ಕೆಲವು ಅಧಿಕಾರಿಗಳು ನನ್ನ ಕೈ ಕೆಳಗಿನ ಸಿಬ್ಬಂದಿ ಹೊಟ್ಟೆ ಕಿಚ್ಚು ಪಡುವುದಕ್ಕೆ ಶುರು ಮಾಡಿದರು. ಉರಿಯುವ ಬೆಂಕಿಗೆ ತುಪ್ಪ ಸುರಿವಿದಂಗಾಗಿತ್ತು! ನನ್ನನ್ನು ಕಂಡರೆ ಮೊದ್ಲೆ ಆಪಾಟಿ! ಈಗ ಡಾಕ್ಟರೇಟ್ ಸಾಧಕ ಬೇರೇ… ಇನ್ಯಾವಪಾಟಿನೋ.. ಎಲ್ಲ ಪತ್ರಿಕೆಗಳಲ್ಲಿ ನನ್ನ ಪ್ರಶಂಸಿಸಿ ಬರೆದಿದ್ದವು! ಪ್ರಜಾವಾಣಿಯಲ್ಲಿ ಅರುಣಕುಮಾರ ಹಬ್ಬು, ಡಾ| ಸಿದ್ದಲಿಂಗ ಪಟ್ಟಣಶೆಟ್ಟಿಯವರು, ಕನ್ನಡ ಪ್ರಭದಲ್ಲಿ ಸಿದ್ದಣ್ಣ ಮಲ್ಲಿಕಾರ್ಜುನರವರು ತುಂಬಾ ಅದ್ಭುತವಾಗಿ ನನ್ನ ಬಗ್ಗೆ ಬರೆದಿದ್ದರು. ಅದೆಲ್ಲ ನನಗೆ ಬಲು ಸ್ಫೂರ್ತಿಯೆನಿಸಿತು. ಇವರೆಲ್ಲ ಪ್ರಾತಃ ಕಾಲದ ಸ್ಮರಣಿಯರು ಸರಳರೂ… ಸಜ್ಜನರು ನನ್ನ ಪಾಲಿಗೆ ಕಾಮಧೇನು, ಕಲ್ಪವೃಕ್ಷವೆನಿಸಿದರು.

ಅವರಿವರ ಉಳ್ಳವರ ಸಹಾಯ ಸಹಕಾರ ಕೋರಿ ನನ್ನ ಡಾಕ್ಟರೇಟ್ ಪ್ರಬಂಧವನ್ನು ಏನನ್ನಾ ಮಾಡಿ ಪ್ರಕಟಿಸಿ ಬಿಡಬೇಕೆಂದು ಬಲು ಶ್ರಮಪಟ್ಟೆ! ಬಲು ಅಲೆದಾಡಿದೆ! ಅವರಿವರನ ಬೇಡಿದೆ ಪ್ರಯೋಜನವಾಗಲಿಲ್ಲ! ತುಂಬಾ ನೀರಾಸೆಗೊಂಡೆ! ಬಸವಳಿದೆ. ಉಳ್ಳವರು ಸಹಾಯ ಮಾಡದಾದರು. ಸ್ವಾರ್ಥಿಗಳು ದೀನನಾಗಿ ಬೇಡಿದರೆ ಯಾರು ಪ್ರಕಟಣೆಗೆ ಮುಂದೆ ಬರಲಿಲ್ಲ. ಅದೇ ನಾನು ಅಧಿಕಾರದಲ್ಲಿ, ಪದವಿ, ಪ್ರತಿಷ್ಟೆಯಲ್ಲಿದ್ದಿದ್ದರೆ…?!

ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಈ ಎರಡು ಮೂರು ವರ್ಷದಿಂದ ತುಂಬಾ ಬಿಗಡಾಯಿಸಿತು, ಕೇಜಿ, ಅರ್ಧ ಕೇಜಿ… ಅಕ್ಕಿ ಬೇಳೆ, ಬೆಲ್ಲ, ಎಣ್ಣೆ, ರವೆ, ಅವಲಕ್ಕಿ, ಉಪ್ಪು, ಸೊಪ್ಪು, ತರಕಾರಿ, ಹಾಲು, ಹಣ್ಣು ಹಂಪಲು, ತರಲು ಕಡು ಕಷ್ಟವಾಗತೊಡಗಿತು. ಅಕ್ಕ ಪಕ್ಕದ ಮನೆಯವರಿಂದ ಪ್ರತಿ ತಿಂಗಳು ಐದು ನೂರು, ಸಾವಿರ ಸಾಲವಾಗ ತೊಡಗಿತು. ಅವಿನಾಶ್ ಅಂಗಡಿಯಲ್ಲಿ ಕಿರಾಣಿ ಸಾಮಾನು ಉದ್ರಿ ತರುವ ಸ್ಥಿತಿ ನಿರ್ಮಾಣವಾಗಿತ್ತು. ಅವರಿವರು ಎಷ್ಟು ಸುಖವಾಗಿ, ಆನಂದವಾಗಿ ಬದುಕುತ್ತಿರುವಾಗ ನಾನೇಕೆ ಹೀಗೆಂದು ಚಿಂತಿಸತೊಡಗಿದೆ. ಅಬ್ಬಾ! ಈ ಹಿಂದೆ ನನಗೆ ಇಂಥಾ ಕಷ್ಟ ನಷ್ಟ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತದೆಂದು ನಾನು ಎಣಿಸಿರಲಿಲ್ಲ. ಆದರೆ ಈಗ ಕಣ್ಣಾಗ ನೀರು ಜಿನಗತೊಡಗಿತು. ಸಾಹಿತಿ ನೀ ಹೊಟ್ಟೆಗೆ ಇಲ್ಲದೆ ಸಾಯಿತಿಗಿ ಎನಿಸಿತು!

ಇದೇ ವೇಳೆಯಲ್ಲಿ ಹನ್ನೆರಡು ವರ್ಷಗಳಿಂದ ಕಟ್ಟಿದ್ದ ಎಲ್.ಐ.ಸಿ.ಯಿಂದ ನಲವತ್ತು ಸಾವಿರ ಹಣ ತೆಗೆದು ನನ್ನ ಪ್ರಬಂಧವನ್ನು ಸಾವಿರ ಪ್ರತಿಗಳನ್ನು ಮಾಡಿಸಲು ನಾನು ಒಪ್ಪಿಕೊಂಡೆ! ಇದು ಮನೆಯಲ್ಲಿ ಹೆಂಡತಿ ಮೂರು ಜನ ಮಕ್ಕಳಿಗೆ ಗೊತ್ತಾಗಿ… ತುಂಬಾ ಆಸಮಾಧಾನ, ಅಸಂತೃಪ್ತಿಗೆ ಕಾರಣವಾಗಿತ್ತು. ನನ್ನ ತಲೆಯಲ್ಲಿ ಸದಾ ಓದಬೇಕು ಬರೆಯಬೇಕು ಪುಸ್ತಕ ಅಚ್ಚಾಕಿಸಬೇಕು ಏನಾದರೊಂದಿಷ್ಟು ಸಾಹಿತ್ಯ ಕೃಷಿ ಮಾಡಬೇಕೆಂಬಾ ತುಡಿತ, ಮಿಡಿತ ನನ್ನಲ್ಲಿ ಮನೆ ಮಾಡಿತ್ತು. ಆದರೆ ನನ್ನ ಮನೆಯಲ್ಲಿ… ಅದೇ ರೀತಿ ಸಾರಿಗೆ ನಿಗಮದಲ್ಲಿ… ಪ್ರೋತ್ಸಾಹ ಸಿಗದಂತಾಗಿತ್ತು. ನಾನು ಮಾತ್ರ ಬರೆಯುವುದು, ಓದುವುದು ನಿಲ್ಲಿಸಲಿಲ್ಲ. ಇದರಿಂದಾಗಿ ನಾನು ಮನುಷ್ಯನೆಂದು ನಿರೂಪಿಸಲು ಸಾಧ್ಯವಾಗಿತ್ತು. ಅಧಿಕಾರ, ಹಣ, ಜೀವನ ಶಾಶ್ವತವಲ್ಲ. ಶಾಶ್ವತವಾದುದ್ದನ್ನು ಮಾಡಿ ತೋರಿಸಬೇಕೆಂಬ ಹಂಬಲ ಹುತ್ತವಾಗಿತ್ತು. ಸಂಪೂರ್ಣವಾಗಿ ಅತ್ತ ವಾಲಿದೆ.

ನೌಕರಿ ಸಿಕ್ಕ ಆರಂಭದ ವರ್ಷಗಳಲ್ಲಿ ನನ್ನನ್ನು ನೌಕರಿ ಬಿಡುವ ಗುಂಪಿಗೆ ಎಲ್ಲರೂ ಸೇರಿಸಿದ್ದರು. ಅಂದರೆ ಇದು ರೆಡ್ ಝೋನ್! ಯಿತ್ತ ನನ್ನ ಸಿಬ್ಬಂದಿ ನಂಬಂಗಿಲ್ಲ! ಅತ್ತ ನನ್ನ ಮೇಲಿನ ಅಧಿಕಾರಿ ವರ್ಗಾನು ನಂಬಂಗಿಲ್ಲ! ಯಿದು ಒಳ ಒಳಗೆ ವ್ಯವಸ್ಥಿತವಾಗಿ ನನ್ನನ್ನು ನಿಗಮದಿಂದ ಹೊರಗೆ ಕಳಿಸುವ ಎಲ್ಲ ಹುನ್ನಾರು ಇದರಲ್ಲಿತ್ತು. ಇದು ಐದಾರು ಭಾರೀ ಐದಾರು ಕಡೆ ನನ್ನೆದುರು ಪ್ರಸ್ತಾಪಿಸಿ, ನನ್ನಿಂದ ಇಲ್ಲ ಎಂಬ ಉತ್ತರ ಪಡೆದಿದ್ದರೂ ಕೂಡಾ ನನ್ನನ್ನು ಗೌಪ್ಯ ಕೆಲಸ ಕಾವ್ಯಗಳಲ್ಲಿ, ಕೊಡು ತಗೊಳ್ಳೋ ವಿಷಯಗಳಲ್ಲಿ ಸಹ ನನ್ನನ್ನು ಕಡೆಗಣಿಸಿದ್ದರು. ಇದಕ್ಕೆ ಕಾರಣ – ನಾನು ಕಾಫಿ, ಟೀ, ಡ್ರಿಂಕ್ಸ್ ತೆಗೆದುಕೊಳ್ಳುತ್ತಿಲ್ಲವೆಂದು ಜನ ಬೇಸರ ಮಾಡಿಕೊಂಡಿದ್ದರು. ಮೀನು, ಮಾಂಸ, ಮೊಟ್ಟೆ ತೆಗೆದುಕೊಳ್ಳುತ್ತಿರಲಿಲ್ಲವೆಂದು ಮೂಗು ಮುರಿಯುತ್ತಿದ್ದರು. ಇಸ್ಪೀಟ್, ಜೂಜು, ಸಿನಿಮಾ ನಾಟಕ ನೋಡದವನೆಂದು ದೂರ ಇಟ್ಟಿದ್ದರು. ಇವನು ನಮ್ಮ ಜಾತಿ, ಮತ, ಧರ್ಮಿಯನೆಲ್ಲನೆಂಬ ತಾರತಮ್ಯ ಭಾವನೆ ಇವರಲ್ಲಿತ್ತು. ಜನರ ಇಂಥವುಗಳಿಗೆಲ್ಲ ಮದ್ದಿರಲಿಲ್ಲ. ಜನರೇ ಒಂದು ರೀತಿ ಹೇಗೆಂದು ಅರಿಯದಾ ರೀತಿ! ಹೀಗಾಗಿ ಬಲು ಬೇಸರಪಟ್ಟುಕೊಂಡಿದ್ದುಂಟು.

ಯಿಲ್ಲೇ ಒಂದು ಘಟನೆಯೊಂದನ್ನು ಹೇಳಿ ಬಿಡಬೇಕೆಂಬ ತುಡಿತ ನನ್ನಲ್ಲಿದೆ. ಒಂದು ದಿನ ರಾತ್ರಿ ಹತ್ತು ಗಂಟೆಯ ಸಮಯ! ಬಸ್ ನಿಲ್ದಾಣದಲ್ಲಿ ವಸ್ತಿಗೆ ಹೋಗಲು ಬಸ್ಸುಗಳು ಹಿಂದೆ ಮುಂದೆ ಸಾಲಿಗೆ ನಿಂತಿದ್ದವು. ನಿಂತಿರುವ ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸೀಟಿಲ್ಲದೆ, ಡ್ರೈವರ್ ಸೀಟಿನಲ್ಲಿ ಕುಂತು… ಕಾಲಿನಿಂದ ಜೋರಾಗಿ ಕ್ಲಚ್ಚೋ ಪೆಡ್ಲೋ ಏನೋ ಒಂದು ಒತ್ತಿದ್ದಾನೆ! ಕುಡಿದು ನಿಷೆಯಲ್ಲಿದ್ದ… ಕೇಳಬೇಕೇ?! ಬಸ್ಸು ಚಲಿಸಿ ಬಸ್ಸಿಗೆ ಬಸ್ಸು ಡಿಕ್ಕಿ ಹೊಡೆದು ನಿಂತಿದ್ದ ಕುಳಿತಿದ್ದ ನಾಲ್ವರು ಜನರು ಸ್ಥಳದಲ್ಲೇ ಅಸು ನೀಗಿದರು. ಡಿಸಿಯವರಾದ ಎ.ಬಿ. ಪಾಟೀಲ್ ಅವರಿಗೆ ಫೋನ್ ಮಾಡಿದೆ. ಸ್ಥಳಕ್ಕೆ ಎಲ್ಲರೂ ಬಂದರು. ಅದಕ್ಕೆಲ್ಲ ನಮಗೆಲ್ಲ ಕ್ಲಾಸ್! ಮಾಸಾಗಿ ನಮ್ಮನ್ನೆಲ್ಲ ಬೈದರು. ರಾತ್ರಿ ಹನ್ನೆರೆಡಾಗಿತು. ಹೀಗೆ ನೆಮ್ಮದಿಯಿಲ್ಲದೆ. ಬೆಳಿಗ್ಗೆ ಹತ್ತರಿಂದ – ಸಂಜೆ ಎಂಟು, ಒಂಭತ್ತು ಗಂಟೆಯವರೆಗೆ ಡ್ಯೂಟಿ! ಖಾಸಗಿ ವಾಹನಗಳು ನಿಲ್ದಾಣದ ಸುತ್ತ ಮುತ್ತ ನಿಲ್ಲಿಸಿ ನಮ್ಮ ಪ್ರಯಾಣಿಕರನ್ನು ಸೆಳೆಯುತ್ತಿದ್ದರು ಇದನ್ನು ತಪ್ಪಿಸಲು ನಮ್ಮ ಡಿಪೋಗಳಿಂದ ತುಂಬಾ ಹಳೆಯದಾದ ವಾಹನಗಳನ್ನು ಬೇಕಂತಲೇ ಖಾಸಗಿಯವರು ನಿಲ್ಲಿಸುವ ಸ್ಥಳಗಳಲ್ಲಿ ಮೊದಲೇ ಅವರಿಗೆ ಜಾಗವಿಲ್ಲದಂತೆ ನಿಲ್ಲಿಸಿ ನಾವೆಲ್ಲ ಅವುಗಳನ್ನು ನಿಲ್ಲಿಸದಂತೆ ಓಡಿಸುವಲ್ಲಿ ಹರ ಸಾಹಸಪಡುತ್ತಿದ್ದೆವು!

ದಿನ ದಿನವು ನಮಗೆ ಅವರಿಗೆ ಜಗಳ ಜೋರು ಜೋರಾಗಿ ಆಗುತ್ತಿತ್ತು. ಇದೆಲ್ಲ ಮುಗಿಸಿಕೊಂಡು ಸಿಟಿ ಬಸ್ಸಿನಲ್ಲಿ ಕಾಲು ತುಳಿಸಿಕೊಂಡು, ಮೈ ಕೈ ಉಜ್ಜಿಸಿಗೊಂಡು ಹತ್ತೂವರೆಗೆಲ್ಲ ಬಾಡಿಗೆ ಮನೆ ಮುಟ್ಟುತ್ತಿದ್ದೆ… ಇದೆಲ್ಲ ಬೇಕಿತ್ತೇ ನನಗೆ? ಬಹಳಷ್ಟು ಸಲ ಬೇಸರವಾಗಿ ಹೋಗಿತ್ತು. ಆದರೆ ಹೊಟ್ಟೆ ಬಟ್ಟೆ ನಡೆಯಬೇಕಲ್ಲಾ… ಯೀ ನೌಕರಿ ಬಿಟ್ರೆ ಗಂಜಿಗೂ ಗತಿಯಿರಲಿಲ್ಲ. ಊರಲ್ಲಿ ಮನೆಯಿರಲಿಲ್ಲ. ಅಡವಿಯಲ್ಲಿ ಹೊಲವಿರಲಿಲ್ಲ… ಎಲ್ಲಾ ಒಣ ಗಣೇಶ… ಬೀಡಿಗಳು!

ಪ್ರತಿ ರಾತ್ರಿ ಒಂಭತ್ತು ಗಂಟೆಗೆ ಸಿಟಿ ಡಿಪೋದ ವಾಹನವೊಂದು ಛಬ್ಬಿ ಊರಿಗೆ ಹೋಗಿ, ನಮ್ಮ ಬಸ್ ನಿಲ್ದಾಣಕ್ಕೆ ಬಂದು, ಮತ್ತೊಂದು ಊರಿಗೆ ವಸ್ತಿ ಹೋಗಬೇಕಾಗಿತ್ತು! ಈ ಗಾಡಿ ಅಂದು ಟೈರ್ ಪಂಚೇರ್ ಆಗಿ, ಅರ್ಧ ಅವರ್ ತಡವಾಗಿದೆ! ಜನ ಕೇಳಬೇಕಲ್ಲಾ? ಬಸ್ ನಿಲ್ದಾಣದಲ್ಲಿ ದಾಂಧಲೆ ಶುರು ಮಾಡಿದ್ದಾರೆ. ಸಾರಿಗೆ ನಿಯಂತ್ರಕನೊಬ್ಬ ಬದುಕಿದೆಯಾ ಬಡ ಜೀವವೆಂದು ಓಡಿ ಹೋಗಿದ್ದಾನೆ. ಜನರು ಬಸ್ ನಿಲ್ದಾಣದ ಗಡಿಯಾರ, ಗಾಜು, ಮೇಜು, ಕುರ್ಚಿ… ಧ್ವಂಸ ಮಾಡಿ ಪಾರಾರಿಯಾಗಿದ್ದಾರೆ.

ಬೆಳಿಗ್ಗೆ ಡಿಸಿ ಎಸ್.ವಿ. ಕಟ್ಟಿಯವರಿಗೆ ಮೇಸೇಜ್ ಹೋಗಿದೆ! ಅವರು ನನಗೆ ನೀವು ರಾತ್ರಿ ಹತ್ತೂವರೆಗೆ ಇದ್ದು ರಾತ್ರಿ ವಾಹನದ ವ್ಯವಸ್ಥೆ ಮಾಡಿ ಹೋಗದ ಕಾರಣ ಸಂಸ್ಥೆಯ ಘನತೆ ಗೌರವಕ್ಕೆ ಕುಂದಾಗಿದೆ. ಸಾವಿರಾರು ರೂಪಾಯಿಯ ಅಮೂಲ್ಯ ವಸ್ತುಗಳು ಹಾಳಾಗಿವೆ. ಇದಕ್ಕೆಲ್ಲ ನೀವೇ ಜವಾಬ್ದಾರರು! ನೀವು ಉನ್ನತ ಹುದ್ದೆಯಲ್ಲಿದ್ದು ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿರುತ್ತೀರಿ. ನಿಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಜರುಗಿಸಬಾರದೆಂಬುದಕ್ಕೆ ಮೂರು ದಿನದೊಳಗಾಗಿ ಸಮಜಾಯಿಷಿ ನೀಡತಕ್ಕದ್ದು’ ಎಂದು ಕಾರಣ ಕೇಳುವ ನೋಟೀಸ್ ನೀಡಿದರು. ಕತ್ತೆಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದರು. ಡಿಪೋ ಮ್ಯಾನೇಜರ್ ತನ್ನ ಬಸ್ಸಿನ ಬಗ್ಗೆ ಕಾಳಜಿ ಮಾಡಬೇಕಾಗಿತ್ತು!

ತುಂಬಾ ನೋವಿನಿಂದ, ಬಲು ಬೇಸರದಿಂದ, ನೋಟೀಸ್ ಸ್ವೀಕರಿಸಿ, ಎರಡು ದಿನದಲ್ಲಿ ಬಹಳ ವಿನಯದಿಂದ ಉತ್ತರಿಸಿದೆ.

‘ಉತ್ತರ ಸೂಕ್ತವಿಲ್ಲ! ಹೆಚ್ಚಿನ ಶಿಸ್ತು ಕ್ರಮ ಕೈಗೊಳ್ಳಲು ಬೆಂಗಳೂರಿನ ನಿರ್ದೇಶಕರಿಗೆ ಶಿಫಾರಸ್ಸು ಮಾಡಿರುತ್ತೇನೆಂದು’ ವಿಭಾಗೀಯ ನಿಯಂತ್ರಣಾಧಿಕಾರಿಯವರಿಂದ ನನಗೊಂದು ಪತ್ರ ಬಂತು! ತಲೆ ಮೇಲೆ ಆಕಾಶ ಕಳಚಿ ಬಿದ್ದಷ್ಟು ಭಾರವಾಗಿತ್ತು. ನನಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂದು ಮುಂಬಡ್ತಿ ದೊರೆಯುವುದೆಂದು ಫಿನೆಕ್ಸ್ ಪಕ್ಷಿಯಂಗೆ ಕಾದಿದ್ದವನಿಗೆ ಮರಣದಂಡನೆ ಪತ್ರ ಕೈಗೆ ಸಿಕ್ಕಷ್ಟು ಯಾತನೆ ಅನುಭವಿಸಿದೆ. ಬಡವನ ಮೇಲೆ ಹಾಳುಗೋಡೆ ಬಿದ್ದಂಗಾಗಿತು! ಅನ್ನಂಗಿಲ್ಲ. ಅನುಭವಿಸಂಗಿಲ್ಲ. ಮೂಕರೋದನೆ ಅನುಭವಿಸಿದೆ. ನಾನೇನೋ ಮಾಡಬಾರದಾ ತಪ್ಪು ಮಾಡಿರುವೆನೆಂಬಂಗೆ ಜನ್ರು ನನ್ನ ನಡೆಸಿಕೊಂಡ್ರು…

ಒಂದು ವಾರದ ತನಕ ಮುಖ ಮುಸಿಣೆ ಊದಿಸಿಕೊಂಡು ಒಳ ಒಳಗೆ ಸುಣ್ಣ ಕುದ್ದಂಗೆ ಕೊತ ಕೊತನೆ ಕುದಿಯುತಿದ್ದೆ! ಒಂದಕ್ಕೊಂದು ಸಂಬಂಧ ಸೂತ್ರವಿರಲಿಲ್ಲ. ಇದೇ ಡಿ.ಸಿ. ಕಟ್ಟಿಯವರು ಕಾರ್‍ಯಗಾರದ ವ್ಯವಸ್ಥಾಪಕರು ಹುಬ್ಬಳ್ಳಿ ಕಾರ್‍ಯಗಾರದಲ್ಲಿದ್ದಾಗ ಅಧಿಕಾರವಿಲ್ಲದಾಗ… ನನಗೆ ಸಿಂಪತಿ ತೋರಿ ನೀನು ಹಿರಿಯ ಅಧಿಕಾರಿ, ಡಾಕ್ಟರೇಟ್ ಪದವಿಧರ! ನಿನಗೆ ಜೀಪೊಂದು ಬೇಕೆಂದು ಅಂದಿದ್ದರು. ಯೀಗ ಅಧಿಕಾರವಿದೆಯೆಂದು…. ಅವರೇ ಆಪಾದನಾ ಪತ್ರ ನೀಡುವರೆಂದರೆ… ಖುರ್ಚಿಯ ಮಹಿಮೆ ಎಂಥಾದ್ದೊಂದು ಅರಿವಾಗಿತ್ತು!

ಆಹಾ! ಸಿಕ್ಕ ಸಿಕ್ಕವರನ್ನು ಕೊಚ್ಚಿ ಬಿಡಬೇಕೆಂಬಷ್ಟು ಕಡು ಕೋಪವೇನು…?! ಎಕೆ ೪೭ ಗನ್ನು ಕೈಗೆ ಸಿಕ್ಕರೆ ಭ್ರಷ್ಟ ದುರುಳ ಮತೀಯ ಪಾಪಿಷ್ಟರ ಹತ್ಯೆ ಮಾಡಿಬಿಡಬೇಕೆಂಬಷ್ಟು ಕುದಿತ ನನ್ನಲ್ಲಿತ್ತು! ಯೀ ಜನರೇ ಹಾಗೇ ಒಬ್ಬರ ಕಣ್ಣಲ್ಲಿ ಸುಣ್ಣ – ಇನ್ನೊಬ್ಬರ ಕಣ್ಣಲ್ಲಿ ಬೆಣ್ಣೆ ಇಡುತ್ತಾರೆ. ಮನಸ್ಸಿಗೆ ಬಂದಂಗೆ ಅಧಿಕಾರ ನಡೆಸುತ್ತಾರೆ.

ಒಂದು ದಿನ-ಮಟ ಮಟ ಮಧ್ಯಾಹ್ನ… ಒಂದು ಗಂಟೆಯ ಸಮಯ ವಿಭಾಗೀಯ ಕಛೇರಿಗೆ ಹೋದೆ. ಅಲ್ಲಿ ಅಪರಾಧ ಪ್ರಕರಣಗಳಿಗೆ ದಿನಾಂಕ ನೀಡಿ, ಅವರಿವರ ಅಧಿಕಾರಿಗಳ ಕಂಡು ಊಟಕ್ಕೆಂದು ನಾನು ನನ್ನ ಮನೆ ಮಂಜುನಾಥ ನಗರಕ್ಕೆ ಎಂದಿನಂತೆ ಸಿಟಿ ಬಸ್ಸಿನಲ್ಲಿ ಪ್ರಯಾಣಿಸಿದೆ. ಬೆಳಿಗ್ಗೆ ಎಂಟು ಗಂಟೆಗೆಲ್ಲ ನಿಲ್ದಾಣಕ್ಕೆ ಬಂದು ಸ್ವಚ್ಛತೆ, ವಾಹನಗಳ ಸಂಚಾರ ಗಮನಿಸಿರುತ್ತಿದ್ದೆ…

ಇತ್ತ – ಬಸ್ ನಿಲ್ದಾಣದಲ್ಲಿ ಧಾರವಾಡ ಸಿಟಿಯಿಂದ ಬಂದ ಹುಬ್ಬಳ್ಳಿಯ ಸಿಟಿ ಬಸ್ಸು ಡ್ರೈವರ್ ಪೆಟ್ರೋಲ್ ಪಂಪು ಬಳಿ ಹೋಗಿ ಲಾಗ್ ಶೀಟ್ ಕೊಟ್ಟು ಇಂಧನ ತುಂಬಿಸಲು ಮನವಿ ಮಾಡಿದ್ದಾನೆ. ಅಷ್ಟರಲ್ಲಿ – ಬಾಂಬ್ ಬಸ್ಸಿನಿಂದ ಸ್ಫೋಟಗೊಂಡಿದೆ. ಟಾಫ್ ಎಲ್ಲ ಕಿತ್ತು ಹೋಗಿ ಸಣ್ಣ ಪುಟ್ಟ ಚೂರು ಪಾರೆಲ್ಲ ಸಿಡಿದಿದೆ. ಜೋರಾಗಿ ಶಬ್ದ ಬಂದಿದೆ. ಜನರೆಲ್ಲ ಗಾಬರಿ ಬಿದ್ದು… ವಿಭಾಗೀಯ ನಿಯಂತ್ರಣಾಧಿಕಾರಿ, ಪೊಲೀಸ್ ಕಮೀಷನರ್ ಇತರೆ ಅಧಿಕಾರಿಗಳಿಗೆಲ್ಲ ಸುದ್ದಿ ಮುಟ್ಟಿದೆ. ಎಲ್ಲಾ ಭೇಟಿ ನೀಡಿದ್ದಾರೆ. ಆ ವೇಳೆಯಲ್ಲಿ ನಾನಿಲ್ಲ. ಎಲ್ಲರೂ ನನ್ನ ಕೇಳಿ ಕೇಳಿ… ರಟ್ಟೆ ಗಡುತ್ರ ಸಿಟ್ಟಾಗಿ ಹೋಗಿದ್ದಾರೆ!

ನಾನು ನನ್ನ ಲೋಕದಿಂದ ಹಾಯಾಗಿ ಮಜವಾಗಿ ನಿಶ್ಚಿಂತೆಯಲಿ ಊಟ ಮಾಡಿ, ತುಸು ದೂರ ನಡೆದು ಬಂದು… ಬಸಿಡಿದು ಬಸ್ ನಿಲ್ದಾಣಕ್ಕೆ ಬಂದೆ. ಬಸ್ ನಿಲ್ದಾಣದಲ್ಲಿ ಜನವೋ ಜನ! ಗಾಬರಿಯಾದೆ. ಹೋಗಿ ನೋಡಿದೆ. ಬಾಂಬ್ ಬಿದ್ದಿದೆ. ಡ್ರೈವರ್‌ನ ಲವ್ವು ಕೇಸು! ಅವನ ಮುಗಿಸಲು ಹುಡುಗಿ ಕಡೆಯವರು ಉಪಾಯವಾಗಿ ಡ್ರೈವರ್‌ನ ಕುಂಡಿ ಕೆಳಗೆ ಬಾಂಬ್ ಫಿಕ್ಸ್ ಮಾಡಿ ಕಳಿಸಿದ್ದಾರೆ. ಐದೇ ಐದು ನಿಮಿಷದಲ್ಲಿ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದೇವರು ದೊಡ್ಡವನಲ್ಲವೇ? ಇದಕ್ಕೆ ಅನ್ನುವುದು ದೇವರಿದ್ದಾನೆಂದು..! ಆ ಡ್ರೈವರ್ ತಪ್ಸಿಗಂಡ! ಅದಷ್ಟವಂತ, ಯಿಬ್ರ ಹೆಂಡಿರ ಮುದ್ದಿನ ಡ್ರೈವರ್… ಆ ಬಾಂಬ್ ನನ್ನ ಮೇಲೆ ಬಿತ್ತು! ಓದಿ… ಬಲು ಸ್ವಾರಸ್ಯವಾಗಿದೆ.

‘ನೀವು ಬಾಂಬ್ ಬಿದ್ದ ವೇಳೆಯಲ್ಲಿ ಬಸ್ ನಿಲ್ದಾಣದಲ್ಲಿರಲಿಲ್ಲ! ನೀವು ನಿಮ್ಮ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸುವಲ್ಲಿ ವಿಫಲರಾಗಿರುವಿರಿ. ನೀವು ನಿಮ್ಮ ಕರ್ತವ್ಯ ನಿರ್ವಹಿಸುವಲ್ಲಿ ನಿಷ್ಕಾಳಜಿತನ ತೋರಿರುವಿರಿ. ನಿಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಜರುಗಿಸಬಾರದೆಂಬುದಕ್ಕೆ ಮೂರು ದಿನದಲ್ಲಿ ಸಮಜಾಯಿಷಿ ನೀಡತಕ್ಕದ್ದು, ಇಲ್ಲವಾದಲ್ಲಿ ಏಕ ಪಕ್ಷಿಯವಾಗಿ ನಿರ್ಣಯ ಕೈಗೊಳ್ಳಬೇಕಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಾರಣ ಕೇಳುವ ಸೂಚನಾ ಪತ್ರ ಜಾರಿಗೊಳಿಸಿದರು. ಹೇಗಿದೆ ನೌಕರಿ?! ಕುಂತ್ರು ನಿಂತ್ರು ಜೀವಕ್ಕಿಲ್ಲ ಸಮಾಧಾನವೆಂದಾಯಿತು!

ನನಗೆ ಬರಸಿಡಿಲು ಹೊಡೆದಂಗಾಗಿತು! ಉರಿಯುವ ಬೆಂಕಿಗೆ ತುಪ್ಪ ಸುರಿದಂಗಾಗಿತ್ತು! ಆದರೂ ಬಹಳ ನಯ – ವಿನಯದಿ ಸೂಚನಾ ಪತ್ರ ಸ್ವೀಕರಿಸಿ, ಮೂರು ದಿನಗಳಲ್ಲಿ ನನ್ನ ಸಮಜಾಯಿಷಿ ನೀಡಿದೆ.

‘ನಿಮ್ಮ ಉತ್ತರ ಸೂಕ್ತವಿಲ್ಲ! ನಿಮ್ಮ ಮೇಲೆ ಶಿಸ್ತಿನ ಕ್ರಮ ಜರುಗಿಸಲು ನಿಮ್ಮ ಮೇಲಾಧಿಕಾರಿಗಳಾದ ನಿರ್ದೇಶಕರಿಗೆ ಶಿಫಾರಸ್ಸು ಮಾಡಿ ಕಳಿಸಿಕೊಟ್ಟಿದ್ದೇನೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಮರು ಪತ್ರವೊಂದು ಬಂದಿತು. ನಾನಂತೂ ಪಾತಾಳಕ್ಕಿಳಿದೆ! ದೈನೇಸಿ ಸ್ಥಿತಿಗೆ ತಲುಪಿದೆ.

ಹಣ ತೆತ್ತು ಅರ್ಜಿ ತಂದ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಜನಪದ ವಿದ್ವಾಂಸನಾಗಿ ಹೋಗಲು ತುಂಬಿ ಕಳಿಸದೆ… ವಾರ ಎರಡು ವಾರ ಆಲೋಚಿಸಿ ಆಲೋಚಿಸಿ. ಗೊಂದಲಕ್ಕೆ ಬಿದ್ದೆ. ನೋ ಆಸ್ಕರ್ ನೋ ಟೆಲ್ಲರ್ ಮುಂದೆ ಗುರಿಯಿಲ್ಲ. ಹಿಂದೆ ಗುರುವಿಲ್ಲ. ನಿರ್ಣಯ ಕೈಗೊಳ್ಳುವುದು ನನ್ನ ಕೈಲಿ ಆಗಲಿಲ್ಲ. ಹದಿನಾಲ್ಕು ವರ್ಷ ಪ್ರಾಮಾಣಿಕನಾಗಿ ರಾಯಚೂರು, ಹಳಿಯಾಳ, ಬಾಗಲಕೋಟೆ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹುಮನಾಬಾದ್, ಬೀದರ್, ಈಗ ಹುಬ್ಬಳ್ಳಿಯಲ್ಲಿ ವನವಾಸ ಅನುಭವಿಸಿದ್ದು ಸಾರಿಗೆ ನಿಗಮವನ್ನು ಬಿಡಲೆಂದೇ? ಛೇ… ಛೇ.. ಬಿಡಬಾರದು! ಈಗಿನ್ನೇನು ವಿಭಾಗೀಯ ನಿಯಂತ್ರಣಾಧಿಕಾರಿಯೆಂದು ಮುಂಬಡ್ತಿ ಹೊಂದುವ ಕ್ಷಣಗಣನೆಯಲ್ಲಿ ಈ ರೀತಿ ತಪ್ಪು ನಿರ್ಧಾರ ಕೂಡದೆಂದೂ… ಈಸಬೇಕು ಇದ್ದು ಜೈಸಬೇಕೆಂದೂ… ಮನಸ್ಸು ಗಟ್ಟಿಮಾಡಿಕೊಂಡಿದ್ದು ಯಾಕೋ ಸೂಕ್ತವಾಗಿ ಈಗೀಗ ಕಾಣಿಸುತ್ತಿಲ್ಲವೆಂದೂ… ಬೇಸರವಾಗ ತೊಡಗಿತು.

ನನ್ನನ್ನು ನಾನು ಸಂತೈಸಿಗೊಂಡೆ, ಉಗುಳು ನುಂಗಿ ಹೊಟ್ಟೆ ತುಂಬಿಸಿಗೊಂಡೆ. ಋಣವಿದ್ದಲ್ಲಿ ಅನ್ನ ನೀರು ಬಟ್ಟೆ ಬರೆ ಎಂದು ತರ್ಕಿಸಿದೆ. ಯಾಕೋ ಸಾರಿಗೆ ನಿಗಮ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ. ಕಷ್ಟ ಕಾಲದಲ್ಲಿ ಗಂಜಿ ನೀರು, ಬಟ್ಟೆ ಬರೆ ನೀಡಿ, ಪ್ರಾಮಾಣಿಕತೆಯನ್ನು ಕಲಿಸಿದ ಎರಡನೆಯ ತಾಯಿ, ಬಂಧು ಬಳಗವೆನಿಸಿದ್ದನ್ನು ನೆನೆದೆ… ಕಣ್ಣೀರು ಕಪಾಳ ಸೇರಿದವು. ನಾನು ಬೇಡಿ ಬಂದಿದ್ದು ಇದನ್ನೇ ಅಲ್ವೇ? ನಾನು ಬಡತನದಲ್ಲಿ ಬಂದವನು! ಬಡವನಾಗಿ ನಿವೃತ್ತಿ ಹೊಂದಬೇಕೆಂದೂ…

ಅಷ್ಟರಲ್ಲಿ – ಒಂದು ಘಟನೆ ನಡೆಯಿತು! ಒಮ್ಮೆ – ಹುಬ್ಬಳ್ಳಿಯಲ್ಲಿ ಮಂಡಳಿ ಸಭೆ ಜರುಗಿತು. ಸಂಜೆ ವ್ಯವಸ್ಥಾಪಕ ನಿರ್ದೇಶಕರನ್ನು, ನಿರ್ದೇಶಕರುಗಳನ್ನು ಉನ್ನತ ಅಧಿಕಾರಿಗಳನ್ನು ಸಹಜವಾಗಿ ಹುಬ್ಬಳ್ಳಿಯ ಕಾರ್ಮಿಕ ಸಂಘದ ಘಟಾನು ಘಟಿಗಳು ಅವರನ್ನೆಲ್ಲ ಭೇಟಿ ಮಾಡಿ ‘ಸಾರ್ ಎಲ್ಲ ಓಕೆ. ನಮ್ಮ ಡಾ. ಯಲ್ಲಪ್ಪಕೆಕೆಪುರ ಅವರನ್ನು ಬಸ್ ನಿಲ್ದಾಣದಲ್ಲಿ ಕಸ ಗುಡಿಸಲು, ಸಂಡಾಸು ತೊಳೆಯುವ ಜಾಗದಲ್ಲಿ ಈಗ್ಗೆ ಮೂರು ವರ್ಷಗಳಿಂದ ಇಲ್ಲೇ ಇಟ್ಟಿರುವಿರಿ ಇದು ನ್ಯಾಯ ಸಮ್ಮತವೇ? ಇಡೀ ನಿಗಮದಲ್ಲೇ ಡಾಕ್ಟರೇಟ್ ಪಡೆದಿರುವ, ಹತ್ತು ಹಲವು ಪುಸ್ತಕ ಬರೆದು ಪ್ರಕಟಿಸಿರುವ, ಸಂಶೋಧನಾ ಪ್ರಬಂಧ ಬರೆದು ಬಹುಮಾನ ಪಡೆದಿರುವ ವ್ಯಕ್ತಿ ಶಕ್ತಿಯನ್ನು ಏಕೆ ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತಿರುವಿರಲ್ಲಾ ಕಾರಣವೇನು?’ ಎಂದು ಹತ್ತಾರು ಜನರು ಪ್ರಶ್ನಿಸಿರುವರು.

ಬೆಂಗಳೂರಿನಿಂದ ಬಂದಿದ್ದ ಉನ್ನತ ಅಧಿಕಾರಿಗಳೆಲ್ಲ ತಡಬಡಿಸಿ ಹೋಗಿದ್ದಾರೆ! ಪರೋಕ್ಷವಾಗಿ ಪ್ರತ್ಯಕ್ಷವಾಗಿ ಇವರೆಲ್ಲ ನನ್ನ ಮೇಲೆ ಒಳಗಿಂದ ಒಳಗೆ ಕೆಂಡಕಾರಿದ್ದಾರೆ. ಹೀಗೆ ಕೇಳಿ ನೀವು ಬಿಡಬೇಡಿ ಎಂದು ನಾನಂತೂ ಯಾರೊಬ್ಬರಿಗೆ ಹೇಳಿದವನಲ್ಲ! ಹೋಗಲಿ ಜನರನ್ನು ಹುರಿದುಂಬಿಸಿ ಕಳಿಸಿಕೊಟ್ಟವನಲ್ಲ! ಭಾರೀ ಪಾಪದವನು! ವೃಥಾ ಇಲ್ಲಸಲ್ಲದ ಆರೋಪ ನನ್ನ ಮೇಲೆ ಯಿ ಹಿಂದೆ ಬಂದಂತೆ ಯಿಗಲೂ… ಬಂತು! ಅಂದರೆ… ಸಣ್ಣ ಮಾತಾಗುವುದು!!…

ಬೆಂಗಳೂರಿನಿಂದ ಬಂದ ಉನ್ನತ ಅಧಿಕಾರಿಗಳೆಲ್ಲ ಸೇರಿ, ಸಾರಿಗೆ ಸಚಿವರಾದ ಪಿ.ಜಿ.ಆರ್. ಸಿಂಧ್ಯಯವರಿಗೆ ‘ಸಾರ್…. ನಾವೆಲ್ಲ ಮುಂಜಾಲಿಂದ ಸಂಜೆ ತನಕ ನಮ್ಮ ನಮ್ಮ ಪಾಲಿನ ಡ್ಯೂಟಿ ಮಾಡುವುದೇ ಏಳು ಹನ್ನೊಂದಾಗಿ ಹೋಗಿರುವಾಗ, ಹುಬ್ಬಳ್ಳಿಯಲ್ಲಿ ಅದೂ ಅಂಥಾ…. ಬಸ್ ನಿಲ್ದಾಣದಲ್ಲಿ ಅಂಥಾ ಗದ್ದಲ, ಗಲಾಟೆಯಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಪಿ.ಎಚ್.ಡಿ. ಪ್ರಬಂಧ ಬರೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಜೊತೆಗೆ ಜಾನಪದ ಚಿನ್ನದ ಪದಕ… ಪಡೆದು ಬಲು ಬೀಗುತ್ತಿರುವನಲ್ಲದೆ, ಅದನ್ನು ಅಚ್ಚಾಕಿಸಿ ಮಾರಾಟ ಮಾಡಿ ಅನ್ಯ ಮಾರ್‍ಗವಾಗಿ ರೊಕ್ಕ ಮಾಡುತಿರುವನು! ಅವನನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು!’ ಎಂದು ಖಾರವಾಗಿ ಚರ್ಚಿಸಿದ್ದಾರೆ.

‘ನನಗೆ ಆ ಅಧಿಕಾರಿ ೧೯೮೪ ರಿಂದ ಚೆನ್ನಾಗಿ ಗೊತ್ತು. ಹಳಿಯಾಳ ಡಿಪೋದಲ್ಲಿ ಬಲು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಲಾಭ ಮಾಡಿ, ಕಾರ್ಮಿಕರಿಗೆ ಲಾಭಾಂಶ ನೀಡಲು ಶ್ರಮಿಸಿ ಬಹುಮಾನ ಪಡೆದಿರುವುದೂ ಗೊತ್ತು! ಪುಸ್ತಕ ಬರೆದಿರಬಹುದು ಪುಸ್ತಕದ ಹಣ ಪಡೆದಿರಬಹುದು. ಆದರೆ ಮಾಮಮಾರ್ಗದಲ್ಲಿ ಆತ ಹಣ ಗಳಿಸಲು ಸಾಧ್ಯವೇ ಇಲ್ಲ’ ಎಂದು ನನ್ನ ಪರವಾಗಿ ಪ್ರಶಂಸಿದ್ದು ನನಗೆ ಒಂದಿಬ್ಬರು ಅಧಿಕಾರಿಗಳು ತಿಳಿಸಿದರು.

ನನಗೆ ಸ್ವರ್ಗ ಮೂರೇ ಗೇಣು ಅನಿಸ್ತು. ಸತ್ಯಹರಿಶ್ಚಂದ್ರ, ಧರ್ಮರಾಯ, ಶ್ರೀರಾಮಚಂದ್ರ ಪ್ರಭು, ಸೀತಾ ಮಾತೆ, ಭರತನನ್ನು ಇಂದು ಜನ ಜನ ಕೆಲಸ ಕಾರ್‍ಯವಿಲ್ಲದೆ ನೆನೆವರೇ? ನನ್ನ ಕೆಲಸ ಕಾರ್‍ಯಗಳಿಗಿಂತಾ ವ್ರತ, ಪ್ರಾಮಾಣಿಕತೆ ಅಂಥಾದ್ದು! ಯೆಲ್ಲ ಇದ್ದು ಪೋಜು ಕೊಡುವುದು ದೊಡ್ಡದಲ್ಲ! ನನ್ನಂಥವನು ಕೇರಿಯಿಂದ ಬಂದವನು ಕಟ್ಟಕಡೆಯವನು ಕಷ್ಟಪಟ್ಟು ಮೇಲೆ ಬಂದವನು…. ಬಲು ಪ್ರಾಮಾಣಿಕತೆ ಮೆರೆಯುವುದಿದೆಯಲ್ಲಾ… ಅದು ಎಂಟನೆಯ ಅದ್ಭುತವೆಂದು ನನ್ನ ಬೆನ್ನು ನಾನೇ ತಟ್ಟೆಗೊಂಡು ಬೀಗಿದೆ! ಹೌದು ನಾನು ಚೆನ್ನಾಗಿಲ್ಲವೆಂದು ಗೊತ್ತು! ಆದರೆ ಜೀವನವನ್ನು ಬಲು ಸುಂದರವಾಗಿ ರೂಪಿಸಿಕೊಂಡು ನನ್ನಮ್ಮ ನನ್ನ ಬಂಧುಬಳಗಕ್ಕೆ ಅಚ್ಚರಿತರಬೇಕೆಂದು ಶ್ರಮಿಸಿದ್ದುಂಟು.

ಇದು ಇಲ್ಲಿಗೇ ಮುಗಿಯಲಿಲ್ಲ! ಎರಡು ವಾರ ಕಳೆದಿರಬಹುದು. ಒಂದು ದಿನ ಇದ್ದಕ್ಕಿದ್ದಂತೆ ಸಾರಿಗೆ ಸಚಿವರು ಪಿ.ಜಿ.ಆರ್. ಸಿಂಧ್ಯರವರು, ವ್ಯವಸ್ಥಾಪಕ ನಿರ್ದೇಶಕರು, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ವಿ. ಕಟ್ಟಿಯವರು ನಾನಿರುವ ಬಸ್ ನಿಲ್ದಾಣಕ್ಕೆ ಸರ್‌ಪ್ರೈಜಾಗಿ ಮಟ ಮಟ ಮಧ್ಯಾಹ್ನದ ಹೊತ್ತು ಭೇಟಿ ಕೊಟ್ಟೆಬಿಟ್ಟರು. ಸಾವಿರಾರು ಜನರಲ್ಲಿ ಅವರುಗಳೆಲ್ಲ ಒಬ್ಬರಾಗಿ ಪ್ರತಿಯೊಂದನ್ನು ವೈಯಕ್ತಿಕವಾಗಿ ತಪ್ಪುಗಳನ್ನು ಹುಡುಕುತ್ತಿದ್ದಾರೆ!

‘ನಮಸ್ಕಾರ ಸಾರ್ ನಾ ಯಲ್ಲಪ್ಪ ಕೆ ಕೆ ಪುರ! ನಾನಿಲ್ಲೇ… ಬಸ್ ನಿಲ್ದಾಣದಲ್ಲೇ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆಂದು’ ಸಹಜವಾಗಿ ಮುಗ್ಧವಾಗಿ ಕರ್ತವ್ಯವೆಂದು ಭಾವಿಸಿ… ಅಂದೆ.

‘ಯೇ ಯಲ್ಲಪ್ಪ ಇವತ್ತು ಏನಾದರೂ ತಪ್ಪು ಕಂಡು ಹಿಡಿದು ನಿನ್ನನ್ನು ಅಮಾನತ್ತುಗೊಳಿಸಿ ಹೋಗಬೇಕೆಂದು ಬಂದಿದ್ದೇನೆ ಅಂಡರ್ ಸ್ಟ್ಯಾಂಡ್…’ ಎಂದರು…. ಪಿ.ಜಿ.ಆರ್. ಸಿಂಧ್ಯರವರು! ನನಗೆ ಶಾಕ್ ಆಗಿತು! ಹೃದಯ ಬಡಿತ ಜಾಸ್ತಿಯಾಗಿತು. ಆ ಕ್ಷಣ ಬಾಯಿ ಒಣಗಿ ಬಂತು! ಆಕಾಶ ಕಳಚಿ ಬಿದ್ದಷ್ಟು ಆಘಾತವಾಗಿತ್ತು! ಅವರಿಂದಿಂದೆ ನಾಯಿಯಂಗೆ ಹಿಂಬಾಲಿಸಿದೆ!

‘ಯೇ ಪ್ರತಿ ದಿನ ಮೂರೊತ್ತು ನಿಲ್ದಾಣ ಹಿಂಗನೇ ಸ್ವಚ್ಛವಾಗಿರ್‍ತೇನ್ರಿ?! ನಾನು ಬತ್ತೀನೆಂಬ ಗುಮಾನಿಲಿ ಹಿಂಗೆ ಕ್ಲೀನಾಗಿಟ್ಟಿರೇನ್ರಿ?!’ ಸಾರಿಗೆ ಸಚಿವರು ನನ್ನ ಜೋರು ಮಾಡಿದ್ರು…

ನನ್ನ ಸಹಾಯಕ್ಕೆ ಯಾವೊಬ್ಬ ಅಧಿಕಾರಿ ಎಂದಿನಂತೆ ಬರಲಿಲ್ಲ. ಏಕೆಂದರೆ ಏನಾದರು ತೊಂದರೆ ಮಾಡಿಸಲು ಅವರೆಲ್ಲ ಸೇರಿ ಕರೆದು ತಂದಿರುವಾಗ ಅವರೇಗೆ ನನ್ನ ಬೆನ್ನು ಕಟ್ಟುವರು? ನನಗೆ ಧೈರ್ಯ ಎಲ್ಲಿತ್ತೋ?!… ಸಾರ್ ತಾವು ಬರುವ ಪ್ರೋಗ್ರಾಂ ಯಾರಿಗೂ ಗೊತ್ತೇ ಇಲ್ಲ ಸಾರ್! ನಮಗೆ ಯೀ ಕೆಲಸಕ್ಕಿಂತಾ ಬೇರೆ ಕೆಲ್ಸ ಏನೈತಿ ಸಾರ್?! ನಿತ್ಯ ಹಿಂಗೇ ಕ್ಲೀನಾಗಿ ಇಡಲು ಶ್ರಮಿಸುತ್ತಿದ್ದೇವೆ… ಎಂದೆ! ಅಷ್ಟಕ್ಕೆ ಅವರು ತೃಪ್ತರಾಗಲಿಲ್ಲ. ಮಾರಿಕಣ್ಣು ಹೋರಿ ಮೇಲೆ ಅಂದಂಗೇ… ಅವ್ರ ಕಣ್ಣು ನನ್ನ ಮೇಲೇ ಇತ್ತು!!

ಸೀದಾ ನಿಲ್ದಾಣದ ಮಹಡಿಗೆ ಹೋದರು. ಅಲ್ಲಿ ಏನೇನೋ… ಹುಡುಕಿದರು, ಕೆದಕಿದರು, ಪ್ರಶ್ನಿಸಿದರು. ನನ್ನ ಪಾತ್ರ, ಅಪಾತ್ರ, ಗೋಲ್‌ಮಾಲು ಏನನ್ನಾ ಇದೆಯೇ?! ಎಂದು ಅವರಿವರ ಪ್ರಶ್ನಿಸಿದರು. ಬಹಳ ಸಿಟ್ಟಿನಲ್ಲಿದ್ದಂತೆ ಕಂಡು ಬಂದರು.

ಮಹಡಿಯಿಂದ ಕೆಳಗಿಳಿದು ಬಂದು ಸೀದಾ ಟಿಕೇಟು ಕಾದಿರಿಸುವ ಕೊಠಡಿಗೆ ಬಂದು ಅಲ್ಲಿ ಏನನ್ನಾ ತಪ್ಪುಗಳು ಸಿಗಬಹುದೆಂದು ಹುಡುಕಿದರು! ಅಲ್ಲಿ ಸರತಿ ಸಾಲಾಗಿ ನಿಂತಿದ್ದ ಪ್ರಯಾಣಿಕರನ್ನು ಸ್ವತಃ ಸಾರಿಗೆ ಸಚಿವರೇ ಪ್ರಶ್ನಿಸಿದರು ‘ಮುಂಗಡ ಕಾದಿರಿಸುವ ನಮೂನೆಯ ಫಾರಂ ಫ್ರೀ ಅಲ್ವೇ? ನೀವು ನಾಲ್ಕು ಆಣೆ ಯಾಕೆ ಪಡೆದಿರುವಿರಿ? ಬೆಳಿಗ್ಗೆಯಿಂದ ವಿತರಿಸಿದ ಫಾರಂಗಳ ಸಂಖ್ಯೆ ಎಷ್ಟು ?! ನಾಲ್ಕಾಣೆಗಳ ಮೊತ್ತವೆಲ್ಲಿದೆ?’ ವಿವರವಾಗಿ ತನಿಖೆ ಮಾಡಿಸಿದರು. ಎಲ್ಲ ಸರಿಯಿದೆ! ಎಲ್ಲರೂ ತುಂಬಾ ನಿರಾಸೆಯಾದರು!.

‘ಸಾರೀ ಯಲ್ಲಪ್ಪ! ಈವತ್ತು ಏನನ್ನಾ ತಪ್ಪು ಕಂಡು ಹಿಡಿದು ನಿನ್ನನ್ನು ಸಸ್ಪೆಂಡು ಮಾಡಿ ಹೋಗಬೇಕೆಂದು ಬಂದಿದ್ದೇ! ನೀ ಬಚಾವ್ ಆಗ್ಬಿಟ್ಟೆ’ ಎಂದು ಮಾನ್ಯ ಸಾರಿಗೆ ಸಚಿವರು ಬಸ್ ನಿಲ್ದಾಣದಲ್ಲಿ ನನಗೆ ಎಲ್ಲರ ಎದುರಿಗೆ ಶೇಕ್ ಹ್ಯಾಂಡ್ ನೀಡಿ, ಧಾರವಾಡಕ್ಕೆ ಹೋಗುವ ಸಿಟಿ ಬಸ್‌ಗೆ ಹತ್ತಿ ಹೊರಟು ಹೋದರು. ನಾನು ನಿಟ್ಟೂಸಿರು ಬಿಟ್ಟೆ! ತಾಯಿ ಹೊಟ್ಟೆಯಿಂದ ಮತ್ತೊಮ್ಮೆ ಹುಟ್ಟಿಬಂದಂಗಾಗಿತು! ಕೊಲ್ಲುವವರಿಗಿಂತ ಕಾಯುವವನೊಬ್ಬ ಮೇಲೆ ಕುಂತವನೇ… ಎಲ್ಲರ ಕಾಯುತ್ತಾ ನೋಡುತ್ತಾ… ಸೂತ್ರಧಾರಿ! ಅವನಿಗಿಂತ ಮಿಗಿಲಿಹರೇ?

ಇದುಕೆ ಯಾರನ್ನಾ ನೌಕರಿ ಅಂತಾರೇನು? ನನ್ನನ್ನು ನಾ ಪ್ರಶ್ನಿಸಿಕೊಂಡೆ! ನಾನಂತೂ ಅಡಲ್ಲಾಗಿ ಹೋದೆ. ಸಚಿವರೊಂದಿಗೆ ಬಂದಿದ್ದು ಉಳಿದ ಅಧಿಕಾರಿಗಳು ನನ್ನ ಖೈದಿಯಂತೇ ಏನೋ… ಖೂನಿ ಮಾಡಿದವನಂತೇ ಕಾಣತೊಡಗಿದರು! ಪ್ರಾಮಾಣಿಕತೆ ನನ್ನ ಕಾಯಿತು. ಪ್ರಾಮಾಣಿಕತೆ ಎಲ್ಲ ರೋಗಗಳಿಗೆ ದಿವ್ಯೌಷಧಿ.

ಅಂದು ನಡೆದಿದ್ದು ಇಷ್ಟು ಜನ ಪ್ರಚಾರ – ಅಪ ಪ್ರಚಾರ ಮಾಡಿದ್ದು ಎಷ್ಟೋ…?? ನನಗಂತೂ ತಲೆಕೆಟ್ಟು ಕೊಟ್ಟಿಗೆ ಗೊಬ್ಬರವಾಗಿ ಹೋಗಿತ್ತು. ನಾ ಹಗಲಿರುಳು ಅಪ್ಪಟ ಪ್ರಾಮಾಣಿಕನಾಗಿ ಇಷ್ಟೊಂದು ಕಡೆ ಕೆಲಸ ಮಾಡಿದ್ದು ತಲೆ ದಂಡವಾಗಿ ಬಿತ್ತೆಂದು ತಲೆ ತಲೆ ಚಚ್ಚಿಕೊಂಡೆ.

ಈ ಘಟನೆ ಕಳೆದು ತಿಂಗಳಾಗಲಿಲ್ಲ! ಇನ್ನೊಂದು ಘಟನೆ ಬಸ್ ನಿಲ್ದಾಣದಲ್ಲಿ ನಡೆಯಿತು!

ಬಸ್ ನಿಲ್ದಾಣದಲ್ಲಿ ನಿತ್ಯ ನೂರಾರು ಬಸ್ಸುಗಳಿಗೆ ಡೀಸೆಲ್ ಹಾಕಿ ಹಾಕಿ ಕಳಿಸುವುದು ಬಾಳ ವರ್ಷಗಳಿಂದ ಬೆಳೆದ ಬಂದ ಪದ್ಧತಿ. ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ನಾನಾ ವಾಹನಗಳಿಗೆ ಇಂಧನ ತುಂಬಿಸುವ ತಾಣ ನಮ್ಮದಾಗಿತ್ತು! ಇಲ್ಲಿ ಹಲವು ವರ್ಷಗಳಿಂದ ಸಣ್ಣದಾಗಿ ಯಾರಿಗೂ ತಿಳಿಯದಂತೆ ಉಪಾಯವಾಗಿ ನೂರಾರು ಲೀಟರ್ ಡಿಸೇಲ್‌ನ್ನು ನಯನಾಜೂಕಾಗಿ ಕದಿಯುವುದು ಎಂದರೆ… ಈ ಡಿಪೋದ ವಾಹನದಲ್ಲಿ ಹತ್ತು ಲೀಟರ್‌ನ್ನು ಇನ್ನೊಂದು ಡಿಪೋದ ವಾಹನಕ್ಕೆ ಹಾಕಿ, ಲೆಕ್ಕ ತಪ್ಪಿಸಿ ಬರೆಯುವುದು. ಅವರಿವರು ಡ್ರೈವರ್ ಕಡೆಯಿಂದ ರೂ. ೫೦, ೧೦೦ ರೂಪಾಯಿ ಇಂಧನ ಹಾಕುವ ಮೆಕ್ಯಾನಿಕ್ ಕಬಳಿಸುತ್ತಿದ್ದ. ಇಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ, ಕಣ್ಣಾಮುಚ್ಚಾಲೆ ಆಟ ನಡೆಯುತಿತ್ತು. ಇದನ್ನು ಪಕ್ಕಾ ಪತ್ತೆ ಹಚ್ಚಿ ದಾಖಲೆಗಳ ಸಹಿತ ನಾನೇ ಆಸಕ್ತಿ ವಹಿಸಿ ಮೂರು ದಿನ ಊಟ, ತಿಂಡಿ ಬಿಟ್ಟು ನನ್ನ ಮೇಲೆ ಈ ಪ್ರಕರಣ ಬರಬಾರದೆಂದು ಖುದ್ದಾಗಿ ಶ್ರಮಿಸಿ ವಿವರವಾಗಿ ವರದಿ ಮಂಡಿಸಿ ನನ್ನ ಹತ್ತಿರ ನಕಲು ಪ್ರತಿಯೊಂದು ಇಟ್ಟುಕೊಂಡು ಬೀಗಿದೆ.

ಮೂರು ದಿನ ಕಳೆಯಲಿಲ್ಲ! ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ವಿ. ಕಟ್ಟಿ ನನ್ನ ಕರೆಸಿ ಸಿಕ್ಕಾಪಟ್ಟೆ ಫೈರಿಂಗ್ ಮಾಡಿದ್ರು, ನಮ್ಮ ಜನರ ಮೇಲೆ… ಮೆಕ್ಯಾನಿಕ್‌ಗಳ ಮೇಲೆ ನನ್ನ ಶಿಷ್ಯರ ಮೇಲೆ ವರದಿ ಕೊಟ್ಟಿದ್ದೆ. ಏಕೆಂದರೆ ಹೀಗೆ ಮಾಡಿ ಇಂಧನ ಉಳಿತಾಯಕ್ಕೆ ಲಕ್ಷ ಲಕ್ಷ ಬಹುಮಾನ ಪಡೆದಿದ್ದರು. ಯೀಗ ಹೂರಣ ಹೊರಗೆ ಬಿತ್ತು! ನೀನು ಸಣ್ಣ ನೌಕರನ ಮೇಲೆ ವರದಿ ನೀಡಲು ನಿನ್ನ ಇಟ್ಟಿಲ್ಲ. ಹಗಲಿರುಳು ಅಲ್ಲಿದ್ದು ಅದನ್ನು ತಪ್ಪಿಸಬೇಕಾಗಿತ್ತು. ಇದರಲ್ಲಿ ನಿನ್ನ ಕರ್ತವ್ಯ ಲೋಪ, ಬೇಜವಾಬ್ದಾರಿ ಇದೆ. ನೀನೇ ಮುಂದೆ ನಿಂತು ಇದನ್ನೆಲ್ಲ ಮಾಡಿಸಿರುವ ಅಂದಾಜಿದೆ. ಇಂಥಾ ಹಣದಲ್ಲೇ ಸುಮ್ಮನೆ ನೀ ಅವರಿವರು ಕೊಡುಗೈ ದಾನಿಗಳೆಂದು ಹೆಸರಾಕಿಸಿರುವೆ ನಿನ್ನ ಮೇಲೆ ಇದೇ ರೀತಿ ವರದಿ ಕಳಿಸುವೆನೆಂದು ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರ ಬಳಿ ನನ್ನ ಕರೆದೊಯ್ಯುದು ಒಂಟಿ ಕಾಲಿಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಕೆತ್ತು ಬೈಯಿಸಿದ! ಖುಷಿಪಟ್ಟ. ನಾನು ಏನು ವಾದ ಮಾಡಿದರೂ ನನ್ನ ಪರ ಒಬ್ಬರಿರಲಿಲ್ಲ. ನನಗೆ ತುಂಬಾ ಅವಮಾನ, ಸಂಕಟಿವಾಯಿತು. ಏಕೆಂದರೇ – ಹಾಗಲಕಾಯಿಗೇ ಬೇವಿನಕಾಯಿಯಂಗೆ ಇವರಿಬ್ಬರಿದ್ದರು.

‘ನನಗೆ ವರದಿ ಕೊಡಿ! ಇವನನ್ನು ಸಸ್ಪೆಂಡು ಮಾಡಿ ಬಿಡುತ್ತೇನೆ. ಇದೊಂದು ದಾಖಲೆಯಾಗುವುದು. ಪಿ.ಎಚ್.ಡಿ. ಮಾಡಿದವರು ಬುದ್ಧಿ ಜೀವಿಗಳೂ… ನಮ್ಮ ನಿಗಮಕ್ಕೆ ಉಪಯೋಗವಿಲ್ಲ!’ ಎಂದು ಎಲ್ಲರ ಸಮ್ಮುಖದಲ್ಲಿ ಕೂಗಾಡಿ, ಒದರಾಡಿ, ನನ್ನ ಮುಖದ ಮೇಲೆ ನೀರಿಳಿಸಿ ಕಳಿಸಿದರು.

ನನಗೆ ಸತ್ತಷ್ಟು ನಾಚಿಕೆ, ಹೇಸಿಗೆಯಾಯಿತು. ಮೂರು ದಿನ ಚಳಿ, ಜ್ವರ, ಕೆಮ್ಮು, ನೆಗಡಿ, ದಮ್ಮು ಕಾಣಿಸಿಕೊಂಡಿತು. ಈ ಪ್ರಕರಣದಲ್ಲಿ ನನ್ನ ಕಥೆ ಮುಗಿಯಿತೆಂದೂ… ಗೋಡೆಗಳದ್ದು ತಗೊಂಡು ಮುಗುಳಾಕೆ ಬಡಕೊಂಡೆನಲ್ಲಾ… ಎಂದು ಪರಿತಪಿಸಿದೆ…

‘ಅಲ್ಲಾರಿ ನೀವ್ಯಾಕೆ ಹೆದ್ರುತ್ತೀರಿ? ನೀವೇನು ತಪ್ಪು ಮಾಡಿಲ್ಲ! ಏನು ಆಗಲ್ಲ ಬಿಡಿ! ದಿನಾ ತಿನ್ನಾರು ಉಣ್ಣಾರು ಕುಡಿಯಾರೇ ಹೆದ್ರುತಿಲ್ಲ ನಿಮುದೊಳ್ಳೆ ಕತೆಯಾಯಿತಲ್ಲಾ…?? ಧೈರವಾಗಿ ಇರೀ…’ ಎಂದು ನನ್ನ ಹೆಂಡತಿ ಮನೆಯಲ್ಲಿ ನಿತ್ಯ ಎಂದಿನಂತೆ ಮಾಮೂಲಿಯಾಗಿ… ಜಪಿಸತೊಡಗಿದಳು.

ಕಷ್ಟಗಳು ನಮ್ಮ ಸಿಟಿ ಬಸ್ಸುಗಳ ರೀತಿ! ಬಂದ್ರೆ ಒಮ್ಮೆಲೇ ಮೇಲಿಂದ ಮೇಲೆ ಬಂದೇ ಬಿಡುತ್ತಿವೆ. ಹೊತ್ತು ಗೊತ್ತಿಲ್ಲದೆ ಬೇಕಿರಲಿ ಬೇಕಿಲ್ಲದೆ ಇರಲಿ ಬಂದೇ ಬಿಡುವಂತೆ ನನ್ನ ಸ್ಥಿತಿಗತಿ ಈಗ ಆಗಿತು.

ನನಗಂತು ಮೂರು ದಿನ ಹಗಲು ರಾತ್ರಿ ನಿದ್ರೆ ಊಟ ತಿಂಡಿ ನೀರಡಿಕೆ ಇಲ್ಲವಾಗಿತು. ಕಣ್ಣುರಿ, ಕಾಲುರಿ, ಬಂದುವು. ಬಸ್ ನಿಲ್ದಾಣದಲ್ಲಿ ನನ್ನ ಕೈ ಕೆಳಗೆ ಐವತ್ತು ಜನ ಕೆಲಸಗಾರರು!! ಒಬ್ಬರೂ ನನ್ನೊಂದಿಗೆ ಮಾತನಾಡದಾದರು. ನಾನೇ ಏನೋ ತಪ್ಪು ಮಾಡಿ ಸಿಕ್ಕಿ ಹಾಕಿ ಕೊಂಡಿರುವ ತರಹ… ಶಿಕ್ಷೆಗೆ ಗುರಿಯಾಗುವ ತರಹ…

ಈ ಜನರೇ ಹಾಗೇ ಗೆದ್ದತ್ತಿನ ಬಾಲದಾ ಹಾಗೇ… ಅಧಿಕಾರ, ಹಣ, ಅಂತಸ್ತು ಯಾವ ಕಡೆಗೋ ಇವರೆಲ್ಲ ಅವರ ಕಡೆಗೆ! ಬಸ್ ನಿಲ್ದಾಣಕ್ಕೆ ಪರಿವೀಕ್ಷಣೆಗೆಂದು

ಭಾರತೀಯ ತೈಲ ನಿಗಮದ ಅಧಿಕಾರಿಗಳ ತಂಡ, ಉಗ್ರಾಣಾಧಿಕಾರಿ, ಲೆಕ್ಕಾಧಿಕಾರಿ, ಭದ್ರತಾಧಿಕಾರಿಗಳ ತಂಡ… ಎರಡು ದಿನ ಬಂತು. ನಾನೇ ಏನೋ ತಪ್ಪು ಮಾಡಿರುವೆನೆಂಬಂತೆ ನನ್ನ ಗುರಿಯಾಗಿಟ್ಟುಕೊಂಡು ನನ್ನ ಸೇರಿಸಿ, ವರದಿ ನೀಡಿ ಕೈತೊಳೆದುಕೊಂಡರು.

ಎರಡು ವಾರದಲ್ಲಿ ಬೆಂಗಳೂರಿನಿಂದ ನನಗೊಂದು ಆಪಾದನಾ ಪತ್ರ ಬಂದಿತು. ಸುಮಾರು ಹತ್ತು ಸಾವಿರ ರೂಪಾಯಿಗಳಷ್ಟು ಡಿಸೇಲ್ ಅಪರತಪರವಾಗಿದೆ! ನೀವು ಮೂರು ವರ್ಷಗಳಿಂದಲೂ… ನಿರ್ಲಕ್ಷ್ಯತನ, ಬೇಜವಾಬ್ದಾರಿತನ ತೋರಿದ್ದರಿಂದ ಸೋರಿಕೆ ಆಗಿದೆ. ಇದಕ್ಕೆ ನೀವು ನೇರ ಹೊಣೆಗಾರರಾಗಿರುವಿರಿ. ನೀವು ಸಣ್ಣ ನೌಕರನ ಮೇಲೆ ವರದಿ ನೀಡಿ ನುಣಿಚಿಕೊಳ್ಳಲು ಸಾಧುವಲ್ಲ! ಈ ಲೋಪಕ್ಕೆ ನೀವೇ ಹೊಣೆಗಾರರು. ಈ ನಷ್ಟವನ್ನು ನೀವೇ ಸಂಬಳದಿಂದ ತುಂಬಿಕೊಡಬೇಕು’ ಎಂದು ಅದರಲ್ಲಿ ವಿವರಿಸಲಾಗಿತ್ತು ಅಧಿಕಾರಿಗಳು ಸಾಕ್ಷಿದಾರರಾಗಿದ್ದರು.

ಕೈಯಲ್ಲಿ ಪೇಪರ್, ಪೆನ್ನು, ಅಧಿಕಾರ, ಹಣ, ಅಂತಸ್ತು ಇರುವರೆಲ್ಲ ಸತ್ಯಹರಿಶ್ಚಂದ್ರರಲ್ಲವೇ? ನಾನು ಅಪರಾಧಿ ಸ್ಥಾನದಲ್ಲಿ ನಿಂತೆ…! ಹಟ್ಟವರನ್ನು ಬಿಟ್ಟು ಹಣಕಿ ಹಾಕಿದವನನ್ನು ಒರಳಲ್ಲಿ ಹಾಕಿ ಕುಟ್ಟಿದರು.

ನನ್ನಿಂದ ಐದಾರು ಪುಟಗಳ ಸಮಜಾಯಿಷಿ ಉತ್ತರ ತೃಪ್ತಿಯಾಗುವಂತೆ… ದಾಖಲೆ ಸಹಿತ ಬೆಂಗಳೂರಿಗೆ ಕಳಿಸಿಕೊಟ್ಟೆ! ನರಿಯ ಕೂಗು ಗಿರಿಗೆ ಮುಟ್ಟಲೇ ಇಲ್ಲ! ಸುಳ್ಳು ಸುಳ್ಳು ವರದಿಗೆ ಸಖತ್ ಮಸಾಲೆ, ಉಪ್ಪು, ಖಾರ, ಎಣ್ಣೆ, ಬೆಣ್ಣೆ ಹಾಕಿ ಒಗ್ಗರಣೆ ಕೊಟ್ಟು ಕಳಿಸಿದ್ದನ್ನು ಎಲ್ಲರೂ ನಂಬಿ ನಚ್ಚಿ ನನಗೆ ಶಿಕ್ಷೆ ವಿಧಿಸಲು ತುದಿಗಾಲಲ್ಲಿ ಎಲ್ಲರೂ ನಿಂತೇ ಇದ್ದರು. ನಿವೃತ್ತ ನ್ಯಾಯಾಧೀಶರೊಬ್ಬರಿಂದ ವಿವರವಾಗಿ ನನ್ನ ಮೇಲೆ ವಿಚಾರಣೆ ನಡೆಸಲು ನೇಮಿಸಿದರು. ಕಲಿಯುಗ ಸ್ವಾಮಿ… ಇದೆಲ್ಲ ಏನು… ಇನ್ನು ಏನೇನೋ… ನನ್ನ ಮೇಲೆ ಹೊರಿಸಬೇಕಾಗಿತ್ತು! ಪಾಪ! ಇಷ್ಟೇ ಪಾಪದ ಕೊಡ ಹೊರಿಸಿ ಮೆರವಣಿಗೆ ಹೊರಡಿಸಿದರು. ಕಾಣದ ಜನ ನನ್ನ ಜಗ್ಗ ಜಗ್ಗಾಡಿದರು!

ನನ್ನನ್ನು ೧೯೯೮ ಜೂನ್ ತಿಂಗಳಲ್ಲಿ ಬೇಕಂತಲೇ… ಉದ್ದೇಶಪೂರ್ವಕವಾಗಿ, ತನಿಖೆಗೆ, ವಿಚಾರಣೆಗೆ ಅನುಕೂಲವಾಗಲೆಂದು ಮಂಗಳೂರಿಗೆ ವರ್ಗಾಯಿಸಿದರು. ಗುಬ್ಬಿ ಮೇಲೆ ಬ್ರಹ್ಮಾಸ್ತಬಿಟ್ಟರು. ಗಾಯದ ಮೇಲೆ ಬರೆ ಎಳೆದರು. ಬೆಂಕಿಯಿಂದ ಬಾಣಲಿಗೆ ಎಸೆದರು. ಹುಲಿ ಬಾಯಿಂದ ಸಿಂಹದ ಬಾಯಿಗೆ ನನ್ನ ತಳ್ಳಿದರು! ಯಾರು ಹಾಳಾದರೇನು? ಅವರು ಅವರ ಹೆಂಡ್ರು ಮಕ್ಕಳು ಸುಖ, ಸಂತೋಷವಾಗಿದ್ದರೆ ಸಾಲದಲ್ಲವೇ?!

ಕಾಣದ ಊರಿಗೆ – ನನ್ನ ಮೂರು ಜನ ಮಕ್ಕಳ ವರ್ಗಾವಣೆ ಪತ್ರ, ಮನೆಯ ಸಣ್ಣ ಪುಟ್ಟ ಸಾಮಾಗ್ರಿಗಳ ಹೊತ್ತು, ಹೆಂಡತಿ ಮಕ್ಕಳೊಟ್ಟಿಗೆ, ಮಂಗಳೂರೆಂಬ ಕಾಣದ ಗೂಡು ಸೇರಿಕೊಂಡೆ.

ಬೆಂಗಳೂರಿಗೆ-ನಿವೃತ್ತ ನ್ಯಾಯಾಧೀಶರ ಬಳಿಗೆ, ಎರಡು ವರ್ಷ, ನ್ಯಾಯಾಕ್ಕಾಗಿ ಅಲೆದೆ. ಎರಡು ಜೊತೆ ಬೂಟು ಸವೆದವು. ಇದ್ದ ಬದ್ದ ಅಂಗಿ ಪ್ಯಾಂಟುಗಳೂ ಹರಿದು… ಹೋದವು! ಚಡ್ಡಿ ಬನಿಯನ್ ಹೋಗಿ ನನ್ನ ಪುಡುಗೋಸಿಲಿ ನಿಲ್ಲಿಸಿ ಎಲ್ಲರೂ ಬಲು ಖುಷಿಪಟ್ಟರು!

ನನ್ನೊಂದಿಗೆ ಇದ್ದ ನನ್ನ ಮೇಲಿನ ಅಧಿಕಾರಿಗಳೆಲ್ಲ ಅನುಮಾನಿಸಿದರು, ಅವಮಾನಿಸಿದರು. ಆದರೆ ಆ ದೇವರು ನನ್ನ ಕೈ ಬಿಡಲಿಲ್ಲ! ಆ ದೇವರೇ ಸೋತ. ನನ್ನ ನಗು ನಗುವಿಗೊಂದು ಶಕ್ತಿ ಕೊಟ್ಟ, ಸಹನೆ ಕಲಿಸಿದ. ನೀತಿ ತಿಳಿಸಿದ. ಮುಕ್ತಿ ದೊರಕಿಸಿದ. ಆಡಿಸಿ, ಅಳಿಸಿ, ಬೀಳಿಸಿ ನೋಡಿದ! ನನ್ನ ಗಟ್ಟಿತನಕೆ ಹೆದರಿದ. ದೇವರ ರೂಪಲಿ ಬಂದ… ನಿವೃತ್ತ ನ್ಯಾಯಮೂರ್ತಿಗಳು ನನ್ನನ್ನು ನಿರ್ದೋಷಿ ಎಂದು ತೀರ್‍ಪಿತ್ತರು. ಸತ್ಯ ಬರೆಯಲು ಎದೆ ಗುಂಡಿಗೆ ಬೇಕು. ಸುಳ್ಳು ಹೇಳಲು ನಾಲಿಗೆ ಸಾಕು. ಹೊರಗಿನವರು ನನ್ನ ನಂಬಿದರು. ನಮ್ಮವರಾಗಿದ್ದರೆ ನನಗೆ ಮತ್ತೆ ಮೋಸವಾಗುತಿತ್ತು… ಸತ್ಯಕ್ಕೆ ನ್ಯಾಯಕ್ಕೆ ಧರ್‍ಮಕ್ಕೆ ಜಯ ಲಭಿಸಿತು. ನನ್ನ ವಿನಾಕಾರಣವಾಗಿ ನಿಂದನೆಗೆ ಗುರಿ ಮಾಡಿದವರಿಗೆ ಶಿಕ್ಷೆಯಾಯಿತು. ಸೀತೆ, ಸಾವಿತ್ರಿ, ಕುಂತಿ, ಚಂದ್ರಮತಿ, ದ್ರೌಪದಿ, ರಾಮ, ಲಕ್ಷ್ಮಣ, ಶ್ರೀಕೃಷ್ಣ, ನಳ, ದಮಯಂತಿ, ಸತ್ಯ ಹರಿಶ್ಚಂದ್ರ. ಪಂಚ ಪಾಂಡವರು… ಮುಂತಾದವರೆಲ್ಲ ನನ್ನ ಕಣ್ಣ ಮುಂದೆ ಸಾಲು ಸಾಲಾಗಿ ಮೆರವಣಿಗೆ ಹೊರಟರು! ಯಿಲ್ಲಿ ಸತ್ಯಕ್ಕೆ ಜಯ. ಸುಳ್ಳು ತಾತ್ಕಾಲಿಕ! ನನ್ನ ಸಹನೆ, ತಾಳ್ಮೆ, ಪ್ರಾಮಾಣಿಕತೆ, ಬರವಣಿಗೆ, ಆಲೋಚನೆಗಳು ಇನ್ನು ಇನ್ನು ಗಟ್ಟಿಯಾದವು! ನನ್ನನ್ನು ಬದುಕಲು ಕಲಿಸಿತು. ಬದುಕಿನ ಪಾಠ ಕಲಿಸಿತು.

ನನ್ನ ನಕ್ಷತ್ರಿಕನಂತೆ ಕಾಡಿದ ಅಧಿಕಾರಿ ಹಗಲು ಹೊತ್ತಿನಲಿ ನೇಣಿಗೆ ಶರಣಾದ! ತಾನೂ ಸುಖಪಡಲಿಲ್ಲ ನಮ್ಮಂಥವರನು ಬಾಳಲು ಬಿಡಲಿಲ್ಲ. ಬದುಕು ದುರಂತವಾಗಿತ್ತು! ನನ್ನ ಶಾಪ ತಟ್ಟಿತು! ಹೌದು!. ವಿನಾ ಕಾರಣ ಕಾಗದದ ಕುದುರೆ ಓಡಿಸಿ, ನನ್ನ ತೇಜೋವಧೆ ಮಾಡಲು ಯತ್ನಿಸಿ… ಒಣ ಒಣ…. ಹಸಿ… ಹಸಿ… ಸಾಕ್ಷಿ, ಪರಾವೆ, ದಾಖಲೆ ಒದಗಿಸಿ ಅಪರಾಧಿ ಸ್ಥಾನದಲ್ಲಿ ನನ್ನ ನಿಲ್ಲಿಸಿ, ಮಾನಸಿಕ ಚಿತ್ರ ಹಿಂಸೆ ನೀಡಿದ ಪಾಪಿ ಹತನಾದ! ಕಲಿಯುಗದಲ್ಲಿ ಎಲ್ಲ ಇಲ್ಲೇ ಕಾಣಬೇಕಲ್ಲವೇ? ನನ್ನ ಮಾನಸಿಕ ಧೈರ್‍ಯ, ಸಾಹಸವನ್ನು ಪರೀಕ್ಷಿಸಿದರು. ನಾನು ಗೆದ್ದೆ! ನಾ ಗೆಲ್ಲುವ ಕುದುರೆಯೆಂದು ಮೊತ್ತ ಮೊದಲು ನಿರೂಪಿಸಿದ್ದೆ. ಕಷ್ಟಮಯ ಜೀವನ ಬಲು ಇಷ್ಟವೆಂಬುದು ಇನ್ನಾದರೂ ಅರಿಯಿರಿ! ನಾ ಮನುಶ್ಯನಾಗಿ ಹೊರಬಿದ್ದೆ. ಪುಟಕ್ಕಿಟ್ಟ ಬಂಗಾರವಾದೆ! ಜೀವನದಲ್ಲಿ ಇದಕ್ಕಿಂತಾ ಇನ್ನೇನು ಬೇಕೇಳ್ರೀ…??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉರಿ
Next post ಹೇಳೊಲ್ಲ….

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…