ಮೌನ ಸೆಳೆತಗಳು

ಮೌನ ಸೆಳೆತಗಳು

ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್‌) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ – ಪೋರ – ಅವಳ ಮಗ, ಆಚೀಚೆ ದೂಡುತ್ತ ಮುರಿದಿದ್ದನಂತೆ ಅವನಿಗೆ ಸ್ವಲ್ಪ ಪೋಕರಿ ಹೆಚ್ಚು. ಒಬ್ಬನೇ ಮಗನೆಂದು ತಾಯಿ ತಂದೆಯ ಮುದ್ದಿಗೆ ಅಪಾರವಾಗಿ ಒಳಗಾಗಿದ್ದ. ನನಗೂ ಅವನು ತುಂಬಾ ಮುದ್ದು. ಆದರೆ ಕುರ್ಚಿಯನ್ನು ನೆನೆದರೆ ದುಃಖವಾಗುತ್ತದೆ. ೧೦-೧೫ ವರ್ಷಗಳಿಂದ ಆ ಕುರ್ಚಿಯಲ್ಲಿ ಕುಳಿತು ತೂಗುತ್ತ ಒಂದು ನಂಟನ್ನೆ ಬೆಳೆಸಿಕೊಂಡಿದ್ದೆ. ನಾನು ನಿವೃತ್ತನಾಗುವ ಒಂದೆರಡು ವರ್ಷ ಮೊದಲೇ ನನ್ನ ಮಗಳು-ಅಳಿಯ ತೆಗೆದುಕೊಟ್ಟ ಕುರ್ಚಿ ಅದು. ಅದರ ಮತ್ತು ನನ್ನ ನಡುವೆ ಒಂದು ಆಳವಾದ ಭಾವುಕ ಸಂಬಂಧ ಬೆಳೆದುಕೊಂಡಿತ್ತು. ನಿವೃತ್ತಿ ಸಮೀಪವಾದಾಗಲೆ ಮನಸ್ಸು ಚಿಂತೆಗೊಳಗಾಗಿದ್ದು, ಇನ್ನು ಮುಂದೆ ಮುಪ್ಪಿನ ಬದುಕೇ…. ಎಂದು ಗಾಬರಿಯಾಗಿತ್ತು. ಅವರಿಗೆ ನಾನು ಅಂಥಾ ಕುರ್ಚಿ ಬೇಡವೆಂದಿದ್ದೆ. ಈಗಲೇ ವೃದ್ದಾಪ್ಯದ ನೋವಿನ ಸೋಂಕು ತಾಗುವುದು ಬೇಡ ಎಂದುಕೊಂಡಿದ್ದೆ. “ಈ ಕುರ್ಚಿಯಲ್ಲಿ ಯಾರೂ ಕುಳಿತು ತೂಗಬಹುದು. ನೀವೇ ಏಕೆ ಅದಕ್ಕೆ ಅಂಟಿಕೊಳ್ಳಬೇಕು. ಡೋಂಟ್ ಬಿ ಸೈಕೋಲೋಜಿಕಲ್” ಎನ್ನುತ್ತ ಅವರು ನನ್ನನ್ನು ಒಪ್ಪಿಸಿದ್ದರು. ಅದು ಮನೆಗೆ ಬಂದ ಮೇಲೆ ನಾನು ಅದರಲ್ಲಿಯೇ ಕುಳಿತುಕೊಳ್ಳುವುದು ಒಂದು ಪರಿಪಾಠವಾಗಿ ಒಂದು ರೀತಿಯ ನಶೆಯೇ ಆಗಿ ಉಳಿಯಿತು. ಬೇರೆ ಯಾರೂ ಅದರಲ್ಲಿ ಕುಳಿತು ತೂಗುವ ಸಾಹಸವನ್ನೇ ಮಾಡುತ್ತಿರಲಿಲ್ಲ. ನಾನೇ ಒತ್ತಾಯ ಪೂರ್ವಕ ಬಂದ ಇಷ್ಟಮಿತ್ರರಿಗೆ, ಮನೆಯವರಿಗೆ, ಮಕ್ಕಳಿಗೆ ಕುಳಿತು ತೂಗಲು ಹೇಳುತ್ತಿದ್ದೆ. ನಿವೃತ್ತಿಗೆ ಹತ್ತಿರವಾದ ಯಾರಾದರೂ “ನನಗೂ ಮುಪ್ಪು ಬರುತ್ತಿದೆ ಇಂಥಾ ಒಂದು ಚೇರ್ ಬೇಕೆಂದು ತೋರುತ್ತಿದೆ” ಎಂದು ನಿಟ್ಟುಸಿರು ಬಿಡುತ್ತ ಕುಳಿತು ತೂಗುತ್ತಿದ್ದರೆ, ತುಸು ಕಣ್ಣು ಮುಚ್ಚಿ ತೂಗಿನ ಆನಂದ ಪಡೆಯುತ್ತಿದ್ದರು, ನನ್ನ ಹೆಂಡತಿ ಮಾತ್ರ ಬಿಂದಾಸಾಗಿ ಅದರಲ್ಲಿ ನಾನಿದ್ದಾಗಲೂ ಕುಳಿತು ತೂಗಿನ ಮಜಾ ಪಡೆಯುತ್ತಿದ್ದಳು. ‘ಕುರ್ಚಿಯನ್ನು ಹಂಚಿಕೊಳ್ಳುತ್ತಿದ್ದೇನೆ’ ಎಂದು ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು.

ಈಗಂತೂ ಅವಳಿಲ್ಲ. ನನಗೆ ನಿವೃತ್ತಿಯಾದ ೭-೮ ವರ್ಷಗಳಲ್ಲಿಯೇ ಸಂಸಾರದಿಂದ ಅವಳ ನಿವೃತ್ತಿಯಾಯಿತು. ಅದರಲ್ಲಿ ಕುಳಿತು ಎದುರಿಗೆ ಗೋಡೆಯ ಟಿವಿಯಲ್ಲಿ ಯಾವದೋ ಸೀರಿಯಲ್ ನೋಡುತ್ತ ರಾತ್ರಿಯ ಹತ್ತು ಗಂಟೆಯ ಹೊತ್ತಿಗೆ ನನ್ನ ಎದುರಿನಲ್ಲಿಯೇ ಹೃದಯಾಘಾತದಿಂದ ಕುಪ್ಪಳಿಸಿ ಎರಡು ತಾಸಿನ ಒಳಗೆ ದೈವಾಧೀನವಾದಳು. ಅಂದಿನಿಂದ ಈ ಕುರ್ಚಿ ಮತ್ತು ನಾನು ನಮ್ಮದೇ ಸಾಮ್ರಾಜ್ಯ, ಮೌನ ಸೆಳೆತಗಳು, ಮನಸ್ಸನ್ನು ಕೊರೆಯುವ ಒಂಟಿತನ.

“ಕಾಲು ಮುರಿದ ನಂತರ ಆ ಕುರ್ಚಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಅನಿಷ್ಟ, ನಿಮಗೊಂದು ಹೊಸ ಈಜಿಚೈರ್ ತರುವ” ಎಂದಿದ್ದಳು ಸೊಸೆ. ನಾನು ಆ ಕುರ್ಚಿಯನ್ನೇ ನಂಬಿಕೊಂಡು ಇದ್ದಂತೆ ಮೂಡು ಮಾಡಿಕೊಂಡು, “ಬೇಡ, ಅದನ್ನು ಬಂಗಾರಿನವನಿಗೆ ಕೊಡುವುದು ಬೇಡ. ಇಲ್ಲೆ ಮೂಲೆಯಲ್ಲಿ ಇರಲಿ” ಎಂದು ಹೇಳಿ ಮನಸ್ಸಿನಲ್ಲಿಯೆ ‘ರಿಪೇರಿ ಮಾಡಿದರಾಯಿತು, ಇಲ್ಲ ಹೊಸತೊಂದನ್ನು ತರಬಹುದು, ಸೊಸೆಯನ್ನು ಕಾಯಬೇಕಾಗಿಲ್ಲ. ಪೆನ್ಶನ್ ಹಣ ಬರುತ್ತದಲ್ಲ’ ಎಂದುಕೊಂಡೆ. “ನೋಡಿ ಅಂಕಲ್ (ಅವಳು ಮಾವ ಎನ್ನುವುದಿಲ್ಲ, ಪಪ್ಪ ಎಂದೂ ಕರೆಯುವುದಿಲ್ಲ) ಅಲ್ಲಿದ್ದರೆ ಮನೆಯೊಳಗೆ ದೊಡ್ಡ ಕಸ ಇದ್ದ ಹಾಗೆ. ಮಗು ಕೈ ಹಾಕಿ ಮೈಕೈ ಮೇಲೆ ಹಾಕಿಕೊಂಡು ನೋವಾಗಬಹುದು. ಬಂಗಾರದವನನ್ನು ಕರೆಯಿರಿ. ಕೊಟ್ಟು ಬಿಡುವ, ಬೇರೆ ಕುರ್ಚಿ ಇದೆಯಲ್ಲ ಕುಳಿತುಕೊಳ್ಳುವುದಕ್ಕೆ. ಸೋಫಾ ಇದೆ. ಕಂಪ್ಯೂಟರಿನ ಕುರ್ಚಿ ಇದೆ, ಹಾಂ…’ ಎಂದು ಮಾತು ಬೆಳೆಸಿದಳು. ಅವಳು ಹೇಳುವುದೂ ಸರಿ. ಆದರೆ ಮುರಿದ ಎಲ್ಲವನ್ನು ಮನೆಯಿಂದ ಹೊರಗೆ ಹಾಕುವುದೇ, ಈ ಕುರ್ಚಿ ಒಂದು ನೆನಪಲ್ಲವೆ. ಆಗ ಒಮ್ಮೆಲೆ ನನ್ನ ಎಡಕಾಲು ಗಂಟು ಮುರಿದಂತಾಗಿ ನೊಂದುಕೊಂಡಿತು. ನಾನು ಒಂದಿಷ್ಟು ಅಲ್ಲಿಯೆ ಕುಸಿದು ಕುಳಿತೆ’ ಏನಾಯ್ತು ಅಂಕಲ್, ‘ಗಂಟು ನೋವಾ’ ಎಂದಳು. ಇಲ್ಲಮ್ಮ ಉಳುಕಿದಂತೆ, ಮೊಣಕಾಲಿನಲ್ಲಿ ಒಮ್ಮೆಲೆ ನೋವು ಬಂತು. ಪ್ರೋಬ್ಲಮಿಲ್ಲ. ಒಮ್ಮೊಮ್ಮೆ ಹೀಗಾಗುತ್ತದೆ. ‘ನೋಡಿ ಅಂಕಲ್, ಮುಂದಿನ ತಿಂಗಳು ನಾನು ಅಮೇರಿಕಾಕ್ಕೆ ಹೋಗುತ್ತೇನೆ. ವೀಸಾ ಬಂದಿದೆ ನಿಮಗೆ ಗೊತ್ತಿದೆ. ನೀವು ಒಬ್ಬರೇ ಆಗುತ್ತೀರಿ. ಅಲ್ಲಿ ನನ್ನ ನೌಕರಿಯ ವ್ಯವಸ್ಥೆಯೂ ಆಗಿದೆಯಂತೆ. ಪ್ರಭಾಕರ ಹೇಳಿದ್ದಾರೆ. ಸ್ವಲ್ಪ ದಿನಗಳ ನಂತರ ನೀವೂ ಬರುತ್ತೀರಿ, ಅಲ್ಲಿ ತನಕ ನಿಮ್ಮನ್ನು ನೋಡಿಕೊಳ್ಳವರು ಯಾರು ಎಂದು ಚಿಂತೆಯಾಗಿದೆ’. ‘ನೀನು ಚಿಂತೆ ಮಾಡಬೇಡ. ನನ್ನದು ಏನಾದರೂ ಆಗುತ್ತದೆ. ನನಗೆ ಅಡಿಗೆ ಮಾಡಲು, ಚಾ-ತಿಂಡಿ ಮಾಡಲು ಸ್ವಲ್ಪ ಸ್ವಲ್ಪ ಬರುತ್ತದೆ. ನನ್ನ ಹೆಂಡತಿ ಕಿಚನ್‌ನಲ್ಲಿ ಅಡಿಗೆ ಮಾಡುತ್ತಿದ್ದಾಗ ‘ಏನಾದರೂ ಸುಮ್ಮನೆ’ ಮಾತಾಡುತ್ತ ಅಡಿಗೆ ಕಲಿತುಕೊಳ್ಳುತ್ತಿದ್ದೆ’.

‘ಪರವಾಗಿಲ್ಲ ಅಂಕಲ್, ಇನ್ನೊಂದು ನಾಲ್ಕು ದಿನ ನನಗೆ ಹೆಲ್ಪ್ ಮಾಡಿರಿ, ಮೀನು ಗಸಿ ಮಾಡಲಿಕ್ಕೆ ಬರುತ್ತದಾ. ‘ನೊ, ಅದಿಲ್ಲ, ತಿನ್ನುವುದೇ ಕಡಿಮೆಯಲ್ಲ? ಕಲಿಯಬೇಕೆಂದು ಅನಿಸಲಿಲ್ಲ. ಅದರ ಮಸಾಲ ಮಾಡುವುದು ತೊಳೆದು ಸ್ವಚ್ಛಮಾಡುವುದು ಜಂಜಟ್ ಕೆಲಸ’ ಒಮ್ಮೊಮ್ಮೆ ಸೊಸೆ ತುಂಬಾ ಆಪ್ತವಾಗಿ ಮಾತಾಡುತ್ತ ಬೇಸರ ಕಳೆಯುತ್ತಾಳೆ.

‘ಅಂಕಲ್, ನಾನು ನಿಮ್ಮನ್ನು ಅಂಕಲ್’ ಎಂದೇ ಕರೆಯುತ್ತೇನೆಂದು ಮೊದಮೊದಲು ನಿಮಗೆ ಬೇಸರವಾಗುತ್ತಿತ್ತೆಂದು ನನಗೆ ಗೊತ್ತಿದೆ. ಆದರೆ ಅಂಕಲ್, ನಿಮ್ಮನ್ನು ಪಪ್ಪ ಡ್ಯಾಡಿ ಎಂದು ತಂದೆಯ ಹೆಸರಿಟ್ಟು ಕರೆಯಲು ಮೊದಲು ನನಗೆ ಆಗಲೇ ಇಲ್ಲ. ಅದು ಕೃತ್ರಿಮ, ಆರ್ಟಿಫಿಶಿಯಲ್ ಎಂದೇ ಅನಿಸುತ್ತಿತ್ತು. ನನ್ನ ಮದುವೆಯ ಮೊದಲೂ ನಿಮ್ಮನ್ನು ನಾನು ಅಂಕಲ್ ಎಂದೇ ಕರೆಯುತ್ತಿದ್ದೆನಲ್ಲ. ಇದು ತುಂಬ ನೇಚುರಲ್ ಮತ್ತು ಸಹಜ ಎಂದು ನನಗನಿಸಿತು. ‘ಮಾಮ ಅಥವಾ ಮಾಮಾಜಿ ಎಂದು ಕರೆಯಬಹುದಿತ್ತಲ್ಲ’ ‘ಛೇ ಅದು ಸರಿಯಲ್ಲ, ಮಾಮ ನನ್ನ ತಾಯಿಯ ತಮ್ಮ, ಮಾಮಾಜಿ ತಾಯಿಯ ಅಣ್ಣ. ಇಲ್ಲಿ ನನ್ನ – ಪತಿಯ ತಂದೆಯ ಅಸ್ತಿತ್ವ ನನಗೆ ಕಾಣಲಿಲ್ಲ. ಅದರಿಂದಾಗಿ ಅಂಕಲ್ ತುಂಬಾ ಸೇಫ್, ಈ ಶಬ್ದ ಇಂಗ್ಲಿಷದ್ದದರೂ ಅರ್ಥಪೂರ್ಣವಾಗಿದೆ…’

‘ಆದರೆ ನಿನಗೆ ಗೊತ್ತ… ಅಂಕಲ್ ಎಂದರೆ ಯಾರೂ ಆಗಬಹುದು… ಇದು ಗೋವಾದ ತುಂಬಾ ಫಾರ್ಮಲ್ ಮತ್ತು ಚೀಪ್ ಶಬ್ದ, ಈ ಶಬ್ದದಲ್ಲಿ ನಿರ್ದಿಷ್ಟವಾದುದೊಂದು ಅರ್ಥ ಸಂಬಂಧವೇ ಇಲ್ಲ….’

ಅವಳು ವಾದ ಮಾಡುತ್ತಾಳೆ. ಆದರೆ ವ್ಯವಹಾರ ಜ್ಞಾನದ ಕೊರತೆ ಇದೆ. ಮಾತು ಮುಂದುವರಿಸಲಿಲ್ಲ. ಬಹುಶಃ ನಾನೇ ಸರಿಯೆಂದು ಅವಳಿಗೆ ಹೊಳೆದಿರಬಹುದು. ಅವಳು ನನ್ನ ಸೊಸೆ, ಮನಸ್ಸಿನಿಂದ ಒಳ್ಳೆಯವಳು ಮೃದು ಸ್ವಭಾವದವಳು. ಗಂಡನನ್ನು – ಪ್ರೀತಿಸುತ್ತಾಳೆ ಈಗ ಎರಡು ವರ್ಷಗಳಿಂದ ಅವನು ದೂರವಾಗಿದ್ದರೂ ಅವಳ ಉತ್ಸಾಹ, ಜೀವಿಸುವ ಶೈಲಿಗಳಲ್ಲಿ ಅಷ್ಟೇನೂ ಬದಲಾವಣೆ ಕಂಡು ಬರಲಿಲ್ಲ. ನನ್ನನ್ನು ಗೌರವಿಸುತ್ತಾಳೆ. ಹಿತನುಡಿಗಳನ್ನು ಹೇಳುತ್ತಾಳೆ. ತನ್ನ ಕಳೆದ ದಿನಗಳ ಸವಿನೆನಪುಗಳನ್ನು ಹೇಳುತ್ತಾಳೆ. ಈಗ ಗಂಡನಿಂದ ದೂರವಿರುವಾಗ ತಾನು ಅನುಭವಿಸುವ ಏಕಾಂತದ ಬೇಸರವನ್ನು ನನಗೆ ಆಪ್ತವಾಗಿ ಹೇಳುತ್ತಾಳೆ.

‘ಅಂಕಲ್, ಮೊದಲು ನಾನು ಮದುವೆಗೆ ವಿರುದ್ಧಳಾಗಿದ್ದೆ. ಅಸ್ತಿತ್ವವನ್ನು ಕಳಕೊಂಡು ಇನ್ನೊಬ್ಬ ವ್ಯಕ್ತಿಯ ಬೆನ್ನಲ್ಲಿ ಸದಾ ಅವನೆಂದಂತೆ ಜೀವಿಸಬೇಕು. ಸಮಾಜದ ಈ ನಿಯಮ ಅದರಲ್ಲೂ ಹೆಣ್ಣಿನ ಕುರಿತು ಕಟ್ಟಿದ ಈ ರಿವಾಜು ಪಕ್ಷಪಾತದ್ದಾಗಿದೆ. ಗಂಡನಾಗಿ ಬಂದ ಯಾವನೂ ನಿಮಗೆ ಒಂದಿಷ್ಟೂ ಸ್ವಾತಂತ್ರ್ಯ ಕೊಡುತ್ತಾನೆಂಬ ಭರವಸೆಯಿಲ್ಲ. ಮತ್ತೆ ಅವರ ಮನೆಯ ಮುದುಕರು, ಅತ್ತೆ-ಮಾವ, ಅಜ್ಜಿ ಇತ್ಯಾದಿ….’ ‘ಇಲ್ಲಿ ನಿನಗೆ ಹೇಗನಿಸಿದೆ….’, ಅವಳ ಮಾತನ್ನು ಮುರಿದು ನಾನು ಕೇಳಿದೆ.

‘ಇಲ್ಲಿ ತೊಂದರೆಯಿಲ್ಲ. ನೀವು ರಿಟಾಯರ್ ಆದ ಮೇಲೆ ಮನೆಯಲ್ಲಿಯೇ ಸೋಮಾರಿಯಂತೆ, ಯೇಜ್ ನಿಮ್ಮ ಮೇಲೆ ಹಾವಿಯಾದ ಹಾಗೆ ಅದನ್ನು ಎಣಿಸುತ್ತ ಸೋತು ಹೆಚ್ಚು ಮುದುಕರಾದ ಹಾಗೆ ಇರುವಾಗ ನನಗೆ ಸಿಟ್ಟೂ ಬರುತ್ತಿತ್ತು. ಅದಕ್ಕೆ ಆ ಕುರ್ಚಿ ಮುರಿದಾಗ ನಾನು ಸುಮ್ಮನಿದ್ದೆ ಹೊರಗೆ ಹೋಗಲು ಹೇಳುತ್ತಿದ್ದೆ. ಆಕ್ಟಿವ್ ಆಗಿರಲು ಹೇಳುತ್ತಿದ್ದೆ. ವೃದ್ದನಾಗುವ ಚಿಂತೆ ಏಕೆ? ಭಯವೇಕೆ? ಅದು ಬದುಕಿನ ಒಂದು ನಿಯಮ.

‘ನಿನಗೆ ತಿಳಿಯದು. ಅದು ಮನೋಭಯ, ಶರೀರದ ಭಯ ಕೂಡ. ಶರೀರದ ಒಂದೊಂದೆ ಅಂಗಗಳು ದುರ್ಬಲವಾಗತೊಡಗಿದಾಗ, ಇತರರ ಸಹಾಯದ, ಅನುಕಂಪದ ಅಗತ್ಯದ ಅರಿವಾಗತೊಡಗುತ್ತದೆ. ತುಂಬಾ ಸ್ವತಂತ್ರವಾಗಿ, ಸ್ವಂತದ ಮರ್ಜಿಯಂತೆ ಬದುಕುತ್ತಿದ್ದವನಿಗೆ ಬದುಕಿನ ಈ ಸ್ಥಿತಿ ಗಾಬರಿಯನ್ನು ಹುಟ್ಟಿಸುತ್ತದೆ ಅಷ್ಟೆ. ನೋಡಿದಿಯಲ್ಲ ಮೊನ್ನೆ, ಓಬೆರಾಯ್‌ ಮಾಲ್‌ನಲ್ಲಿ ಎಸ್ಕಲೇಟರ್ ಏರಲು ನಿನ್ನ ಕೈ ಹಿಡಿಯಬೇಕಾದ ಪ್ರಸಂಗ, ನಾನು ತುಂಬಾ ಹಿರಿಯರನ್ನು ನೋಡಿದ್ದೇನೆ. ಅದರ ಹತ್ತಿರ ಬಂದು ನಿಂತುಕೊಂಡು ಕೈಹಿಡಿಯಲು ಕಾಯುವುದನ್ನು.’

ಅರೆ, ಅಂಕಲ್ ಇದೆಲ್ಲ ನೇಚುರಲ್, ತುಂಬಾ ಸಾಮಾನ್ಯ. ಇಂಥಾ ಸಣ್ಣಪುಟ್ಟ ವಿಷಯಗಳ ಕುರಿತು ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾವುದನ್ನು ಸರಾಗವಾಗಿ ಮಾಡಲು ಸಾಧ್ಯವೋ ಅದನ್ನು ಮಾಡುವುದು ಸಹಾಯಬೇಕಾದಲ್ಲಿ ಬಾಯಿಬಿಡುವುದು.

ಈಗ ನೀನು ಹೋಗುತ್ತಿ, ಎರಡು ವರ್ಷದಿಂದ ಮಗ ದೂರ, ಇನ್ನು ನಾನೊಬ್ಬನೆ ಆಗುತ್ತೇನೆ. ನಾನು ರಿಟಾಯರ್ ಆಗಿಯೂ ಹತ್ತು ವರ್ಷವಾಯಿತು. ಮೈಯ ಬ್ಯಾಲನ್ಸ್ ಕಡಿಮೆಯಾಗಿದೆ…’

ಅಂಕಲ್, ಯೋಚಿಸಬೇಡಿ, ನಾನು ಹೋದವಳೆ ಆದಷ್ಟು ಬೇಗ ನಿಮಗೆ ವೀಸ ಕಳಿಸುತ್ತೇನೆ….. ಸೊಸೆಯ ಮಾತು ಭರವಸೆಯದ್ದು. ಕಾಳಜಿ ತೋರಿಸುವಂಥಾದ್ದು. ಅವಳು ಕೆಲವು ಸಾರಿ ಸರಿಯಾದುದನ್ನು ಹೇಳುತ್ತಾಳೆ. ಮನಸ್ಸನ್ನು ಚುಚ್ಚುವಂತೆಯೂ ಗಂಡ ಇರುವಾಗ ಮಾತಾಡುತ್ತಿದ್ದಳು. ಅವಳ ಒಂದೊಂದೆ ಮಾತುಗಳು ನೆನಪಾಗುತ್ತವೆ. ಮಾತುಗಳು ಕಟುವಾಗಿರುತ್ತವೆ. ಆದರೂ ಅದರಲ್ಲಿ ಒಬ್ಬ ವೃದ್ದನ ಬಗೆಗಿನ ಚಿಂತೆಯಿದೆ ಎಂದನಿಸುತ್ತದೆ. ನನ್ನ ಮಗ ಹಿಂದಿನಿಂದಲೂ ಹೆಚ್ಚು ಮಾತಾಡುವವನಲ್ಲ. ಅಷ್ಟಕಷ್ಟೆ. ಈಗ ಹೆಂಡತಿ ಬಂದ ಮೇಲಂತೂ ಎಲ್ಲವನ್ನು ಅವಳೆ ಹೇಳುತ್ತಾಳೆ. ಅವನು ಹೇಳುವುದನ್ನೆಲ್ಲ ವರ್ಗಾಯಿಸಿದ್ದಾನೆ. ಮೊನ್ನೆ ನಾಲ್ಕು ದಿನ ಆಸ್ಪತ್ರೆಯಲ್ಲಿದ್ದಾಗ ಅವನಿಗೆ ಫೋನ್ ಮಾಡಿ ಮಾತಾಡಿದ್ದೆ. ‘ಏನಾಗಿತ್ತು, ನಮಗೆ ಹೇಳಬೇಕಾಗಿತ್ತಲ್ಲ… ಎಂದಷ್ಟೇ ಹೇಳಿ ಸೊಸೆಗೆ ಕೊಟ್ಟಿದ್ದ. ಅವಳಿಂದ ಮಾತು ಒಮ್ಮೆಲೆ ಸಿಡಿಯಿತು. ಏನು ಅಂಕಲ್ ಇದು, ಎಲ್ಲ ಆದ ಮೇಲೆ ನಮಗೆ ಹೇಳುವುದಾ, ಏನಾಗಿತ್ತು. ಗಾಬರಿಯದ್ದು ಏನಾದರೂ, ಖರ್ಚು ತುಂಬಾ ಆಯಿತಾ….?

ಇಲ್ಲ, ಏನಿಲ್ಲ, ಚಿಕ್ಕದೊಂದು ಪ್ರೊಸ್ಟೇಟ್ ಶಸ್ತ್ರಕ್ರಿಯೆ ಖರ್ಚಿಗೆ ನನ್ನತ್ರ ಹಣ ಇದೆಯಲ್ಲ. ಪೆನ್‌ಶನ್ ಸಾಕಷ್ಟು ಬರುತ್ತಿದೆ. ಮಗಳು ಅಳಿಯ ಮಾಡಿಸಿದರು. ಮೂತ್ರ ಸೋರುವುದೊಂದು ಶುರುವಾಗಿದೆ. ಸದ್ಯ ಅಷ್ಟೆ ಈಗ ಓಡಾಡುತ್ತೇನೆ…..

ನೀವು ಮನೆಯಲ್ಲೇ ಒಬ್ಬನೇ ತೂಗು ಕುರ್ಚಿಯಲ್ಲಿ ತೂಗುತ್ತಾ ಏನೇನೋ ಯೋಚಿಸುವುದು ಬೇಡ. ಹೋಗಿ ಮಗಳ ಮನೆಯಲ್ಲಿ ಯಾಕೆ ಇರುವುದಿಲ್ಲ….

ಈ ಮಾತನ್ನು ಅವಳು ಕೆಲವು ಸಲ ಇಲ್ಲಿದ್ದಾಗಲೂ ಹೇಳಿದ್ದಳು. ನೀವು ನಮ್ಮೊಟ್ಟಿಗೇ ಯಾಕಿರಬೇಕು ಮಗಳಿರುವಾಗ…?

ಇಡೀ ದಿನ ಪೇಪರ್ ಓದುತ್ತಾ, ಅದರಲ್ಲಿರುವ ಭ್ರಷ್ಟ, ಹೊಲಸು ಸಮಾಚಾರಗಳನ್ನು ಓದಿ ತಲೆಕೆಡಿಸುತ್ತಾ ಇರುವುದಕ್ಕಿಂತ, ಹೊರಗೆ ಹೋಗಿ, ಸೀನಿಯರ್ ಮಂದಿಯೊಂದಿಗೆ ಮಾತಾಡಿರಿ, ಒಳ್ಳೆಯ ಪುಸ್ತಕಗಳನ್ನು ಓದಿರಿ. ಭೈರಪ್ಪ, ಚಿತ್ತಾಲ ಎಂದು ಎಂಥಾ ಲೇಖಕರಿದ್ದಾರೆ. ಅರೆ, ನೀವು ಪೇಪರ್ ಬಿಟ್ಟರೆ ಬೇರೆ ಏನನ್ನೂ ಓದಲು ಕಲಿಯಲಿಲ್ಲವಲ್ಲ. ಸೋರಿ, ಮಗಳ ಮನೆಗೆ ಹೋಗಿ ಒಂದು ತಿಂಗಳು ಇದ್ದು ಬನ್ನಿ, ಸಿನೇಮಾ ನೋಡಿ. ಇವಳಿಗೇನೂ ಗೊತ್ತಿಲ್ಲ. ನನ್ನ ಮನಸ್ಸಿನ ವ್ಯಸನ ಏನೆಂದು, ಈ ಮನೆಯನ್ನು ತಂಬಾ ಒಲವಿನಿಂದ, ಕಷ್ಟದಿಂದ ಕುಟುಂಬಕ್ಕಾಗಿ ಮಾಡಿದ್ದೆ. ಇದನ್ನು ಬಿಟ್ಟು ಒಂದು ದಿನವೂ ಬೇರೆಡೆಯಲ್ಲಿ ರಾತ್ರಿ ಕಳೆಯಲಿಲ್ಲ. ಈ ಮನೆಯ ರಾತ್ರಿಯಲ್ಲಿ ಒಂದು ವಿಚಿತ್ರ ನಶೆ ಇದೆ. ನಾನು ಮಲಗುವ ಎಷ್ಟೋ ವರ್ಷಗಳ ಮಂಚದ ಅರ್ಧ ಭಾಗದ ಮೋಹ ಹೆಂಡತಿ ಹೋದ ಮೇಲೂ ಹೋಗಲಿಲ್ಲ. ಇದು ಮನುಷ್ಯ ಸಾಮಾನ್ಯ ಸ್ವಭಾವದ ವಿಪರೀತವಾಗಿರಬಹುದು. ಆದರೆ ನಾನೇನು ಮಾಡಲಿ?

ಈಗಂತೂ ಟ್ರೈನ್, ಬಸ್, ರಿಕ್ಷಾಗಳಲ್ಲಿ ಪ್ರಯಾಣ ಮಾಡಲು ಶರೀರ ಒಪ್ಪುವುದಿಲ್ಲ. ಬಾಂದ್ರಾದ ವಿಮಾ (ಎಲ್‌ ಆಯ್ ಸಿ) ಆಫೀಸಿಗೆ ಟ್ಯಾಕ್ಸಿಯಲ್ಲಿ ಹೋಗಿ ಬರುತ್ತೇನೆ, ಬೇನಾಮಿ ಏಜನ್ಸಿಯ ಪಾಲಿಸಿ ವಿಷಯಗಳು ಇರುತ್ತವೆ. ೪೦ ವರ್ಷ ಎಲ್.ಐ.ಸಿಯಲ್ಲಿದುಡಿದು ಸ್ವಂತಕ್ಕೆ ಏನನ್ನು ಗಳಿಸಲಿಲ್ಲ. ಜೀವ ವಿಮಾದ ಫಾರ್ಮಗಳನ್ನು ತುಂಬುವುದುದನ್ನು ಬಿಟ್ಟರೆ ಪುಸ್ತಕಗಳನ್ನು ಓದುವ, ಯಾವದಾದರೂ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಿ ಸಮಯ ಕಳೆಯುವ ಅಭ್ಯಾಸವನ್ನೇ ಮಾಡಿಕೊಂಡಿಲ್ಲ. ಆಫೀಸು, ಮನೆ ಬೇರೊಂದು ಜಗತ್ತಿನ ಪರಿಚಯವನ್ನೇ ಮಾಡಿಕೊಳ್ಳಲಿಲ್ಲ. ಅದರ ಕೊರತೆಯ ಅರಿವು ಈಗಾಗುತ್ತಿದೆ. ಸೊಸೆ ಇಷ್ಟು ಓದುತ್ತಾಳೆ. ಅಮೇರಿಕಾಕ್ಕೆ ಹೋಗುವ ಮೊದಲು ‘ಪರ್ವ’ ಎಂಬ ಒಂದು ದಪ್ಪ ಪುಸ್ತಕವನ್ನು ಓದುತ್ತಿದ್ದಳು. ಕೇಳಿದಾಗ ಅದು ಎರಡನೆಯ ಸಾರಿ ಓದುವುದಂತೆ. ಊರಿನಲ್ಲಿ ಬಿ.ಎಸ್.ಸಿ ಮಾಡಿದವಳಾದರೂ ಕನ್ನಡ ಪುಸ್ತಕಗಳ ಅಷ್ಟೊಂದು ಅಭಿರುಚಿ. ಹೆರಿಗೆಯಲ್ಲಿ ಕೆಲಸ ಬಿಟ್ಟಳು. ನಂತರ ಗಂಡ ಅಮೇರಿಕಾಕ್ಕೆ ಹೋದ. ಎರಡು ವರ್ಷಗಳ ನಂತರ ಅವಳೂ ಹೋಗುವ ಮೊದಲು, ‘ಅಂಕಲ್, ನೀವು ಜಾಗ್ರತೆಯಾಗಿರಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಪೇಪರ್‌ ಹೆಚ್ಚು ಓದಬೇಡಿ. ಟಿವಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ನೋಡಿ, ಮಗಳ ಮನೆಗೆ ಹೋಗುತ್ತಿರಿ. ನಿಮ್ಮ ಸ್ವಭಾವದಂತೆ ಒಂಟಿಯಾಗುತ್ತೀರಿ. ನಿಮ್ಮನ್ನು ಬೇಗ ಕರೆದುಕೊಳ್ಳುತ್ತೇವೆ….’

….ತೂಗು ಕುರ್ಚಿಯನ್ನು ರಿಪೇರಿ ಮಾಡಿಸಿದ್ದೆ. ಅಂದಿನ ನಂತರ ಆ ಕುರ್ಚಿಗೇನೋ ಶಬ್ದಾತೀತ ಖುಷಿ. ನಾನು ಕುಳಿತು ತೂಗಿದರೆ ಸಾಕು ಆಪ್ತ ಗೆಳೆಯನಂತೆ ಮಾತಾಡತೊಡಗುತ್ತದೆ. ಎಲ್ಲಾ ನೆನಪುಗಳು, ಸೊಸೆಯ ಹಿತ-ಹಿತಕರವಾದ ಮಾತುಗಳು, ತೀರಿಹೋದ ಹೆಂಡತಿಯ, ಕೆಲವೊಮ್ಮೆ ಎಲ್.ಐ.ಸಿಯಲ್ಲಿದ್ದ ನನ್ನೊಬ್ಬ ಮರಾಠಿ ಗೆಳತಿಯ ನವಿರೇಳುವ ನೆನಪುಗಳು ಬಂದು ಮೈಮಸ್ಸುಗಳನ್ನು ಸ್ಪರ್ಶಿಸುತ್ತವೆ. ಒಂದು ದೀರ್ಘ ಉಸಿರನ್ನು ಬಿಡುತ್ತ ಜೀವನದಲ್ಲಿ ಮುಂದೇನು’ ಎಂದು ಯೋಚಿಸುವಂತೆ ಮಾಡುತ್ತದೆ.

ಅಮೇರಿಕಾಕ್ಕೆ ಹೋಗುವ ಯೋಚನೆ… ಇದು ಸತ್ಯವಾಗಿ ಪರಿಣಮಿಸುವ ಸಂಗತಿ… ಮುದವನ್ನು ಹುಟ್ಟಿಸಿದರೆ, ಈ ಇಳಿ ವಯಸ್ಸಿನಲ್ಲಿ ಅಲ್ಲಿ ಹೋಗಿ ಮಾಡುವುದಾದರೂ ಏನು? ಎಲ್ಲವೂ ಅಪರಿಚಿತ, ಎಲ್ಲವೂ ಹೊಸತು. ಅದ್ಭುತ ದೇಶ ನಮ್ಮ ದೇಶದ ಹುಡುಗರೆಲ್ಲಾ ಇದ್ದಾರೆ. ನೌಕರಿ ಮಾಡಿಕೊಂಡು, ದಿನವಿಡೀ ಅವರು ತಮ್ಮ ವೃತ್ತಿಯಲ್ಲಿ ಬಿಜಿಯಾಗಿರುತ್ತಾರೆ. ಇಲ್ಲಿಯ ರಾತ್ರಿ ಅಲ್ಲಿ ಹಗಲು, ಇಡೇ ದಿವಸಕ್ಕೆ ನನ್ನನ್ನು ಮನೆಯಲ್ಲಿ ಬಿಟ್ಟು ಹೋಗಬಹುದು. ಅಲ್ಲಿಯದು ಮನೆಯಲ್ಲ, ಅಪಾರ್ಟ್‌ಮೆಂಟ್, ಎಲ್ಲಿ ಯಾರಿದ್ದಾರೆ ಗೊತ್ತಿಲ್ಲ. ಎಲ್ಲಿ ಯಾವಾಗ ಹೋಗಬೇಕು ಗೊತ್ತಿಲ್ಲ. ನನ್ನ ಭಾವ ಮೂರು ತಿಂಗಳು ಅಲ್ಲಿ ಮಗಳ ಮನೆಗೆ ಹೋಗಿ ಇದ್ದು ಬಂದವರು. ‘ಅಮೇರಿಕಾ’ ಮುದುಕರಾದ ನಮಗಲ್ಲ. ಅಲ್ಲಿ ದಿನ ಕಳೆಯಲಿಕ್ಕಾಗುವುದಿಲ್ಲ. ಎಲ್ಲ ವಿಚಿತ್ರ ಜನರು. ಒಬ್ಬರನ್ನು ಒಬ್ಬರು ನೋಡುವುದಿಲ್ಲ. ಮಾತಾಡುವುದಿಲ್ಲ. ನಾನು ಇನ್ನೆಂದೂ ಹೋಗಲಾರೆ ಎಂದಾಗ ಮನಸ್ಸು ಹಿಂದೇಟು ಹಾಕಿತ್ತು. ಮೊನ್ನೆ ಫೋನಿನಲ್ಲಿ ಸೊಸೆ ವೀಸಾ ಕಳಿಸಿದ್ದೇವೆ. ನೀವು ಹೊರಡುವ ತಯಾರಿಯನ್ನು ಮಾಡಿ. ಆರೋಗ್ಯ ಸರಿಯಾಗಿರಲಿ ರಿಜಕ್ಟ್ ಆಗಬೇಡಿ…’ ಎಂದು ಹೇಳಿ ಎಚ್ಚರಿಸಿದಾಗ ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನನ್ನ ಹದಗೆಡುತ್ತಿರುವ ಆರೋಗ್ಯ, ನಿಧಾನವಾಗಿ ಕೆಡುತ್ತಿರುವ ದೃಷ್ಟಿ, ಸೊಂಟದಲ್ಲಿ ಆಯತಪ್ಪುವುದು, ಗಂಟು ನೋವು ಸರಿಯಾಗಿ ನಡೆಯಲೂ ಆಗದ ರೀತಿಯ ಪರಿಸ್ಥಿತಿಯಲ್ಲಿ ಅಮೇರಿಕಾಕ್ಕೆ ಹೋಗಿ ಅವರ ಸುಖ ಜೀವನಕ್ಕೆ ಅಡ್ಡಿಯಾಗುವುದೇಕೆ’ ‘ಬೇಡ ಇರಲಿ, ನಾನಿಲ್ಲೇ ಇರುತ್ತೇನೆ ನೀವು ಒಮ್ಮೆ ಬಂದು ಹೋಗಿ’ ಎಂದು ಸೊಸೆಗೆ ಹೇಳಬೇಕೆಂದು ಬಾಯಿ ತೆರೆದೆ, ಹೇಳಲಿಲ್ಲ. ಅವರ ಉತ್ಸಾಹ ಭಂಗ ಏಕೆ ಮಾಡಲಿ, ಅಲ್ಲಿಯೇ ಒಮ್ಮೆ ಚೆಕ್ ಅಪ್ ಮಾಡಿಸಿದರಾಯಿತು. ಮತ್ತೆ… ಈ ಮನೆಯನ್ನು ಮುಚ್ಚಬೇಕು. ಎಂದೂ ದೀರ್ಘಕಾಲ ಮುಚ್ಚದ ಮನೆಯದು ಒಂದು ಅಪೂರ್ವ ಲಕ್ಷಣದ್ದು. ನಾನು ಅದಕ್ಕಾಗಿಯೆ ಮನೆಯಿಂದ ಹೊರಡುವುದು ಕಡಿಮೆ. ಸೊಸೆಹೋಗಿ ಸುಮಾರು ಒಂದು ವರ್ಷ ಆಗುತ್ತಿದೆಯಾದರೂ ವೀಸಾ ಬರಲಿಲ್ಲ ಎನ್ನುವುದು ತುಸು ಸಮಾಧಾನಕ್ಕೆ ಕಾರಣವಾಗಿದೆ. ಅಲ್ಲಿ ನಮ್ಮ ಆತ್ಮಗಳಿಲ್ಲ. ಅಲ್ಲಿಯ ಆತ್ಮಗಳು ಬೇರೆಯೇ ಆಗಿವೆ. ತಾತ್ವಿಕವಾಗಿಯೂ ಈ ಆತ್ಮಗಳಲ್ಲಿ ಪರಿಭೇದವಿದೆ. ಅಲ್ಲದೆ ನಮ್ಮಂಥ ಪ್ರಾಯಸ್ಥರು ಅಲ್ಲಿ ಹೋದರೆ ಆತ್ಮಹೀನರಾಗುತ್ತೇವೆ. ದುರ್ಬಲರಾಗುತ್ತೇವೆ. ನಿಷ್ಟಯೋಜಕರಾಗುತ್ತೇವೆ. ನನ್ನ ಮನಸ್ಸಿನಲ್ಲಿ ಇಂಥ ನೆಗೆಟಿವ್ ವಿಚಾರಗಳು ಏಕೆ ಹುಟ್ಟಿಕೊಳ್ಳುತ್ತವೆ. ಮನಸ್ಸನ್ನು ಗೊಂದಲಮಯ ಗೊಳಿಸುತ್ತವೆ ಗೊತ್ತಾಗುವುದಿಲ್ಲ. ಮಾನಸಿಕವಾಗಿಯೆ ಮನಸ್ಸಿನೊಳಗೆ ಮೂಡುವ ಈ ವಿಚಾರಗಳು ಆತಂಕವನ್ನು ಹುಟ್ಟಿಸುತ್ತವೆ.

ಮಗಳು-ಅಳಿಯ ಹೋಗಲು ಪ್ರೋತ್ಸಾಹಿಸಿದರು. ನಿಮಗೆ ಇಲ್ಲಿಯ ಮೋಹ ಏಕೆ, ಹೋಗಿ ತಿರುಗಾಡಿಕೊಂಡು ಬನ್ನಿ. ಹೊಸ ಸಮೃದ್ಧ ದೇಶ. ಅದೊಂದು ಅನುಭವವೇ ಅಪೂರ್ವವಾದುದು. ಇಲ್ಲಿ ಏನಿದೆಯೆಂದು, ಎಲ್ಲವೂ ಅಸಹ್ಯವಾಗಿದೆ. ನಿಮ್ಮ ಮನೆ ಏಲ್ಲಿಯೂ ಹೋಗುವುದಿಲ್ಲ. ಅಮೇರಿಕನ್ನರ ದೋಸ್ತಿಮಾಡಿ, ಅಲ್ಲಿಯ ಅಚ್ಚರಿಗಳನ್ನು ನೋಡಿರಿ. ಎಂಜೊಯ್ ಮಾಡಿರಿ. ಇಲ್ಲಿ ನಿಮ್ಮ ಆ ವಿಚಿತ್ರ ಕುರ್ಚಿಯಲ್ಲಿ ತೂಗುತ್ತಾ ಲೋಕವನ್ನು ಮರೆಯುವುದು ಬೇಡ. ನಾವೆಲ್ಲ ನಿಮ್ಮ ಹೋಗುವ ಸಿದ್ಧತೆ ಮಾಡುತ್ತೇವೆ ವೀಸಾ ಬರಲಿ…’
ಎರಡು ದಿನಗಳ ನಂತರ ವೀಸಾ ಬಂತು ತೆರೆದು ನೋಡಿ ಆನಂದವಾಯಿತು.

‘ಸೊಸೆ ಪರವಾಗಿಲ್ಲ’ ಎಂದುಕೊಂಡೆ. ಆನಂದ ಲಹರಿಯನ್ನು ಸರಿಸಿ ಮನಸ್ಸು ತಲ್ಲಣಕ್ಕೊಳಪಟ್ಟಿತು. ದೂರದ ಪ್ರಯಾಣ ಮಾಡಿದವನಲ್ಲ. ವಿಮಾನದಲ್ಲಿಯ ಪರದೇಶ ಪ್ರಯಾಣ ಎಂತಿರುತ್ತದೆ ಗೊತ್ತಿರದ ನನಗೆ ಒಮ್ಮೆಲೆ ಮೈಮೇಲೆ ರೋಮಾಂಚನದ ಅಲೆ ಹರಿಯಿತು. ಮಗಳಿಗೆ ಫೋನ್ ಮಾಡಿ ಹೇಳಿದೆ. ಅಂದು ರಾತ್ರಿ ಸ್ವಲ್ಪ ಹಗುರ ಊಟ ಮಾಡಿ ನಿಶ್ಚಿಂತೆಯಿಂದ ಮಲಗಿದೆ. ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ನನ್ನ ಹೆಂಡತಿಯ ಭಾವಚಿತ್ರದ ಪಕ್ಕದಲ್ಲಿರಿಸಿದೆ. ರಾತ್ರಿಯ ಮೂರು ಹೊತ್ತಿನಲ್ಲಿ ಒಂದು ಸೊಗಸಾದ ಕನಸು. ಇವಳು… ನನ್ನ ಹೆಂಡತಿ ಬಂದು ಮಂಚದ ಎದುರಿನ ಕುರ್ಚಿಯಲ್ಲಿ ಕುಳಿತ್ತಿದ್ದಳು. ಒಳ್ಳೆ ಲಕ್ಷಣವಾಗಿ ಕಂಡಳು. ಮುಖದಲ್ಲಿ ಮುಸಿನಗೆ, ಹುಬ್ಬೇರಿಸಿದ ಕಂಗಳು. ತುಟಿಗಳು ಏನೋ ಮಹತ್ವದ್ದನ್ನು ಹೇಳಲು ತವಕ ಪಡುತ್ತಿದ್ದವು. ನಾನು ಎವೆಯಿಕ್ಕದೆ ಕೆಲವು ಕ್ಷಣ ನೋಡಿದೆ. ನನ್ನ ಅಷ್ಟು ಕಾಲದ ಜೊತೆ ಬಾಳಿನಲ್ಲಿ ಅವಳು ಇಷ್ಟು ಮೋಹಕವಾಗಿ ಕಂಡಿರಲಿಲ್ಲ. ಕೆಲವ ರೂಮಾನಿ ಮಾತುಗಳು ಆದ ಮೇಲೆ ಅವಳು.

‘ನೀವು ಅಮೇರಿಕಾಕ್ಕೆ ಹೊರಟಿರಾ? ಯಾಕೆ ಅಲ್ಲಿ ಏನಿದೆಯೆಂದು ಈ ಇಳಿವಯಸ್ಸಿನಲ್ಲಿ ನಿಮ್ಮ ಯೋಗಕ್ಷೇಮ ನೋಡಲು ಸೊಸೆಗೆಲ್ಲಿದೆ ಸಮಯ…. ನೀವು ನಾನಿರುವಲ್ಲಿಗೆ ಬನ್ನಿ, ಬೇಕಾದರೆ ನನ್ನ ಜೊತೆಗೇ ಬಂದು ಬಿಡಿ. ಅಲ್ಲಿ ಎಲ್ಲವೂ ಸುಖಮಯ, ಆನಂದಮಯ. ನಿಮ್ಮ ಆ ಮರಾಠಿ ಗೆಳತಿಯೂ ಇದ್ದಾಳೆ. ಒಂದು ದಿನ ನನಗೆ ಸಿಕ್ಕಿದಳು. ನೀವು ಬೇಗ ಬರಬಹುದು ಎಂದು ಹೇಳಿದ್ದೆ. ಎಲ್ಲರೂ ಸುಖಿಗಳು, ಬೇನೆಯಿಲ್ಲ, ಬೇಸರವಿಲ್ಲ. ಇಲ್ಲಿ ಎಷ್ಟೊಂದು ಜಂಜಡ, ಆತಂಕ, ಗೊಂದಲ ನಿಮ್ಮಿಂದ ಇನ್ನು ಸಹಿಸಲು ಸಾಧ್ಯವಿಲ್ಲ… ಬಂದು ಬಿಡಿ…’ ನಾನು ಚಕಿತನಾಗಿ ಎದ್ದು ಆಚೀಚೆ ನೋಡಿದೆ. ಮತ್ತೊಮ್ಮೆ ಕಣ್ಣುಜ್ಜಿ ಲ್ಯಾಂಪು ಹಚ್ಚಿದೆ. ಎದುರಿನ ಭಾವಚಿತ್ರ ನನ್ನನ್ನ ನೋಡಿ ನಗುತ್ತಿತ್ತು. ಪಕ್ಕದ ಮೊಬೈಲ್ ತೆಗೆದು ಸಮಯ ನೋಡಿದರೆ ಬೆಳಗಿನ ೫ ಗಂಟೆಯಾಗುತ್ತಿತ್ತು. ಹೊರಗೆ ಬೆಳಕಿನ್ನೂ ಹರಿದಿರಲಿಲ್ಲ. – ನಾನು ಹಾಲಿಗೆ ಹೋಗಿ ನನ್ನ ಪ್ರಿಯವಾದ, ಜೀವದ ಸಂಗಾತಿಯಾದ ಚೇರ್‌ನಲ್ಲಿ ಕುಳಿತು ತೂಗಹತ್ತಿದೆ. ವೀಸಾ ಬಂದಿದೆ. ಇನ್ನು ಹೊರಡುವುದು…ಎಂದುಕೊಳ್ಳುತ್ತ… ರಭಸವಾಗಿ, ವೇಗವಾಗಿ, ಏನೂ ತೋಚಲಿಲ್ಲ. ತಲೆ ಚಿಟ್ಟುಗಟ್ಟಿದಂತೆ, ‘ಅಮೇರಿಕಾಕ್ಕೆ ಹೋಗಬೇಕೆ…ಬೇಡವೆ? ತೂಗಲು ಈ ಪರಿಯ ಕುರ್ಚಿ ಅಲ್ಲಿದೆಯೆ? ಕನಸಿನ ಸಂಕೇತವೇನು? ಎಂದು ವಿಚಾರ ಮಾಡುತ್ತಿದ್ದಂತೆ ಅಲ್ಲಿಯೆ ಘನ ನಿದ್ರೆ ಆವರಿಸಿತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣು
Next post ಬಾಳಿಕೆ

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…