ದೇವರು

ದೇವರು

ನನ್ನ ದೇವರಿಗೆ,

ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. “ಪತಿಯೇ ದೇವರು” ಎನ್ನುವ ಸಾಂಪ್ರದಾಯಿಕ ಗೊಡ್ಡು ಸಂಸಾರದಿಂದ ಬಂದಿದ್ದ ನಾನು ಓದಿದ್ದರೂ ಆಲದ ಮರಕ್ಕೆ ಜೋತು ಬಿದ್ದಿದ್ದೆ. ಅದಕ್ಕಾಗಿಯೇ “ದೇವರೆ” ಎಂದು ನಿಮ್ಮನ್ನು ಸಂಬೋಧಿಸಿ ಬರೆಯುತ್ತಿದ್ದೇನೆ.

ಎಲ್ಲರಂತೆ ಸಾಧಾರಣ ಯುವತಿಯಾಗಿರದೆ ಚೆಲುವೆಯಾಗಿದ್ದ ನನ್ನನ್ನು ನೋಡಿದಿರಿ. ನೋಡಿದ ಕೂಡಲೇ ಮೆಚ್ಚಿದಿರಿ. ಮದುವೆಗೆ ಒಪ್ಪಿಗೆ ಕೊಟ್ಟಿರಿ. ನಾನೂ ಎಲ್ಲರಂತೆ ನಿಮ್ಮ ಕೈ ಹಿಡಿಯುವ ಮುನ್ನ ಕನಸು ಕಂಡಿದ್ದೆ. ನನ್ನ ಕನಸಿನಲ್ಲಿ ಕಂಡ ಮೂರ್‍ತಿಯೇ ನೀವಾಗಿದ್ದಿರಿ. ಒಂದೇ ಕ್ಷಣದಲ್ಲಿ ನಿಮಗೆ ನನ್ನ ಹೃದಯ ಅರ್‍ಪಿಸಿಬಿಟ್ಟೆ. ನಿಮ್ಮ ಗಾಂಭೀರ್‍ಯ, ಧೈರ್‍ಯ ಸೂಸುವ ಕಣ್ಣುಗಳಿಗೆ ಮರುಳಾಗಿದ್ದೆ ನಾನು. ಮದುವೆಯಾದ ಮೇಲೆ ನಿಮ್ಮೊಂದಿಗಿರುವಾಗಿನ ರಸ ನಿಮಿಷಗಳನ್ನು ನಿಮ್ಮ ಬದಿ ಕುಳಿತು ನೋಡುವ ಚಲನಚಿತ್ರಗಳನ್ನು, ಕೈ ಹಿಡಿದು ವಾಕಿಂಗ್ ಹೋಗುವ ದೃಶ್ಯಗಳನ್ನು ಕಲ್ಪಿಸಿಕೊಳ್ಳುತ್ತಾ ಮೈಮರೆಯುತ್ತಿದ್ದೆ. ಬಾಹ್ಯ ಪ್ರಪಂಚದ ಅರಿವೆ ನನಗಾಗುತ್ತಿರಲಿಲ್ಲ. ನಿಮ್ಮ ನೆನವೇ ನನ್ನ ಮೈ ಮನಕ್ಕೆ ಕಚಗುಳಿ ಇಟ್ಟಂತಾಗುತ್ತಿತ್ತು. ನಿಮ್ಮ ಹೆಸರಿನವನೇ ಆದ ನನ್ನ ಪುಟ್ಟ ತಮ್ಮನನ್ನು ಯಾರೂ ಇಲ್ಲದಾಗ ಪದೇ ಪದೇ ಕರೆದು, ಪುಲಕಗೊಳ್ಳುತ್ತಿದ್ದೆ. ನಾಚುತ್ತಿದ್ದೆ.

ಹಿರಿಯರ ಆಶೀರ್ವಾದ ನಿಮ್ಮ ಬಯಕೆಯಂತೆ ನಿಮ್ಮ ಪತ್ನಿಯಾಗಿ ನಿಮ್ಮ ಮನೆಗೆ ಬಂದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಭಯ ನನಗೆ ಬಹಳವಿತ್ತು. ನನಗಿದ್ದ ಧೈರ್ಯವೆಂದರೆ ನಿಮ್ಮ ಇರುವಿಕೆಯೊಂದೇ ನೀವೊಬ್ಬರು ನನ್ನ ಜೊತೆಗಿದ್ದರೆ ಪ್ರಪಂಚದ ಯಾವ ತುದಿಗಾದರೂ ಹೋಗಿ ಬರಬಲ್ಲೆ ಎನ್ನುವ ಆತ್ಮವಿಶ್ವಾಸವಿತ್ತು. ಅತ್ತೆ ಮಾವ ನಾದಿನಿಯರೊಂದಿಗೆ ಹೊಂದಿಕೊಳ್ಳಲು ಅಷ್ಟೇನೂ ಕಷ್ಟವಾಗಲಿಲ್ಲ ನನಗೆ. ಆದರೆ ನೀವೇ ಬೆಂಗಳೂರಿಗೆ ವರ್‍ಗ ಮಾಡಿಸಿಕೊಂಡಿರಿ. ದೊಡ್ಡ ಮನೆಗೆ ಇಬ್ಬರೇ ಆಗುವಂತೆ ಮಾಡಿದಿರಿ. ಆಗ ಅದೂ ನನಗೆ ಅಪ್ಯಾಯಮಾನವಾಗಿತ್ತು. ಪ್ರಪಂಚದಲ್ಲಿ ನೀವೊಬ್ಬರು ನನಗೆ ಆತ್ಮೀಯರಾಗಿದ್ದಿರಿ. ನಿಮ್ಮ ಅಭಿರುಚಿಗಳನ್ನು ನನ್ನದಕ್ಕೆ ಹೊಂದಿಸಿಕೊಳ್ಳುತ್ತಿದ್ದೆ. ನಿಮಗೂ ಸಂಗೀತ ಇಷ್ಟವೆಂದಾಗ ನನಗೆ ಆನಂದದಿಂದ ಎದೆ ಬಿರಿದಂತಾಯಿತು. ಯಾವಾಗಲೂ ನೀವು ನನ್ನ ಬಳಿ ಇರಬಾರದೆ, ಪ್ರೀತಿಯಿಂದ ನನ್ನನ್ನು ಬಂಧಿಸಬಾರದೆ, ಎಂದುಕೊಳ್ಳುತ್ತಿದ್ದೆ. ನಿಮ್ಮ ಆಫೀಸಿನ ಕೆಲಸಕ್ಕೆ ಎಷ್ಟೋ ಬಾರಿ ಶಾಪ ಹಾಕುತ್ತಿದ್ದೆ. ನೀವು ಎದುರಿಗೆ ಇಲ್ಲದಿರುವಾಗಲೂ ನಿಮ್ಮದೇ ರೂಪ, ನಿಮ್ಮದೇ ಧ್ಯಾನ. ತನ್ಮಯತೆಯಿಂದ ಎಷ್ಟೋ ಬಾರಿ ಅಡಿಗೆ ಕೆಟ್ಟಿದ್ದು ಉಂಟು. ನಿಮ್ಮನ್ನು ಮೆಚ್ಚಿಸಲು ನಾನು ನಾನಾ ವಿಧವಾಗಿ ಯತ್ನಿಸುತ್ತಿದ್ದೆ. ಇತರರಂತೆ ಆಭರಣ ಸೀರೆ, ಸಿನಿಮಾ, ಹೋಟೆಲುಗಳು ಎಂದು ನಿಮ್ಮನ್ನು ಎಂದೂ ಕಾಡಲಿಲ್ಲ. ನಿಮಗಿಂತ ಬೇರೆ ನನಗೆ ಯಾವ ಆಭರಣಗಳೂ ಸುಂದರವಾಗಿ ಕಾಣುತ್ತಿರಲಿಲ್ಲ.

ನೀವು ನನ್ನೊಡನಿರುವ ಪ್ರತಿ ರಾತ್ರಿಯನ್ನೂ ಪ್ರಥಮ ರಾತ್ರಿಯೇ ಎನ್ನುವಂತೆ, ಅದೇ ತೀವ್ರತೆ, ಬಯಕೆ, ಆನಂದದಿಂದ ಕಾಯುತ್ತಿದ್ದೆ. ಬೆಳಿಗ್ಗೆ ಎದ್ದೊಡನೆ ನೀವು ಕಣ್ಣಿಗೆ ಬೀಳುತ್ತಿದ್ದೀರಿ. ನನ್ನ ಬದುಕಿನಲ್ಲಿ ಅದ್ಭುತ ಬದಲಾವಣೆಗಳನ್ನು ಮಾಡಿದ ನಿಮ್ಮನ್ನು ರಪ್ಪೆ ಅಲುಗಿಸದೆ ಬಹಳ ಹೊತ್ತು ನೋಡುತ್ತಿದ್ದೆ. ನಿಮಗೆಲ್ಲಿ ಎಚ್ಚರವಾಗುವುದೋ ಎಂದು ಹೆದರಿ ನನ್ನ ಕಣ್ಣುಗಳಿಂದಲೇ ನಿಮ್ಮನ್ನು ಮುತ್ತಿಟ್ಟು ಎದ್ದು ಬರುತ್ತಿದ್ದೆ. ನನ್ನ ಮನೆಯವರ ಸಲಹೆಯಂತೆ ಅದೆಷ್ಟು ಭಕ್ತಿಯಿಂದ ದೇವರನ್ನು ಪೂಜಿಸುತ್ತಿದ್ದೆನೋ ಅಷ್ಟೇ ಪ್ರೀತಿ ಭಕ್ತಿಯಿಂದ ನನ್ನ ದೇವರಾದ ನಿಮ್ಮನ್ನು ಪೂಜಿಸುತ್ತಿದ್ದೆ. ಕೆಲಸದವರಿದ್ದರೂ ನನ್ನ ದೇವರ ಕೆಲಸಗಳನ್ನು ನಾನೇ ಪ್ರೀತಿಯಿಂದ, ಭಕ್ತಿಯಿಂದ ಮಾಡುತ್ತಿದ್ದೆ. ಮುಖಕ್ಷೌರಕ್ಕೆ ಬಿಸಿ ನೀರು ತರುತ್ತಿದ್ದೆ. ಸ್ನಾನಕ್ಕೆ ಅಣಿಮಾಡುತ್ತಿದ್ದೆ. ನಿಮ್ಮ ಬಟ್ಟೆಗಳನ್ನು ತೆಗೆದಿಡುತ್ತಿದ್ದೆ. ನೀವು ಇರುವ ಒಂದು ಗಳಿಗೆಯಲ್ಲೂ ನಾನು ಸೋಮಾರಿಯಾಗಿರುತ್ತಿರಲಿಲ್ಲ. ಗಾಳಿಯಲ್ಲಿ ತೇಲುವಂತೆ ಓಡಾಡುತ್ತಾ ನಿಮ್ಮ ಹಿಂದೆ ಮುಂದೆ ಸುಳಿದಾಡುತ್ತಿದ್ದೆ. ನೀವು ಹೋದ ಕೂಡಲೇ ಚೈತನ್ಯ ರಹಿತಳಂತೆ ಕುಳಿತು ಬಿಡುತ್ತಿದ್ದೆ. ನೀವು ಪುನಃ ಬರುವವರೆಗೂ ನನಗೆ ಜೀವನದಲ್ಲಿ ಜೀವವಿರುತ್ತಿರಲಿಲ್ಲ. ವಿನಾ ಕಾರಣ ಏನೇನೋ ಕೆಟ್ಟದ್ದನ್ನು ಕಲ್ಪಿಸಿಕೊಂಡು ಹೆದರುತ್ತಿದ್ದೆ. ಸ್ಕೂಟರು, ಕಾರು, ಲಾರಿ ಅಪಘಾತಗಳು ಎಂದ ಕೂಡಲೇ ಎದೆಯಲ್ಲಿ ನಡುಕ ಬರುತ್ತಿತ್ತು. ನಿಮ್ಮ ಬಳಿ ಎಷ್ಟೋ ಬಾರಿ ಹೇಳುತ್ತಿದ್ದೆ.

“ಸ್ಕೂಟರ್ ನಲ್ಲಿ ಹೋಗ್ತಿರಿ. ನಿಧಾನವಾಗಿ ಹೋಗಿ, ಏನೇನೋ ಯೋಚಿಸುತ್ತಾ ಹೋಗ್ಬೇಡಿ.”

ನೀವು ಸುಮ್ಮನೆ ನಕ್ಕು ಹೋಗಿಬಿಡುತ್ತಿದ್ದೀರಿ. ಸಂಜೆ ನೀವು ಬಂದಾಗಲೇ ನನಗೆ ನಂಬಿಕೆ. ಕಂಡಾಕ್ಷಣ ಓಡಿ ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತಿದ್ದೆ. ನನಗರಿಯದೆ ಕಣ್ಣುಗಳಲ್ಲಿ ನೀರು ಬರುತ್ತಿದ್ದವು.

“ಛೇ! ಏನಿದು? ಇಷ್ಟು ಭಾವುಕತೆ ಆಂ…” ಎಂದು ನೀವು ಟೀಕಿಸುತ್ತಿದ್ದೀರಿ.

“ಹೌದು, ನಿಮ್ಮ ಮುಂದೆ ಎಲ್ಲವನ್ನೂ ಮರೆಯುತ್ತೇನೆ. ಅತೀ ಭಾವುಕಳಾಗುತ್ತೇನೆ” ಎನ್ನುತ್ತಿದ್ದೆ. ನೀವು ಮುಂದೆ ಏನನ್ನೂ ಹೇಳುತ್ತಿರಲಿಲ್ಲ. ನೀವು ನನ್ನಂತೆ ಭಾವುಕರಾಗಿರಲಿಲ್ಲ. ನನ್ನವರು ಗಂಭೀರ. ನನ್ನನ್ನು ಮೌನವಾಗಿಯೇ ಮೆಚ್ಚುವರು ಎಂದೇ ನನಗೆ ಹೆಮ್ಮೆ. ಮಾನಸಿಕವಾಗಿ, ದೈಹಿಕವಾಗಿ ನಿಮ್ಮ ಮೆಚ್ಚಿನ ಯೋಗ್ಯಳಾದ ಮಡದಿಯಾಗಿರಲು ಯತ್ನಿಸುತ್ತಿದ್ದೆ. ಆದರೆ?

ನನ್ನ ದೇವರೇ ಹೀಗೇಕಾಯಿತು? ನನ್ನ ಪ್ರೀತಿಯ ಮರವೇಕೆ ಕುಸಿದುಬಿತ್ತು? ಮದುವೆಗೆ ಮುನ್ನ ನಾನು ಕಂಡ ಕನಸುಗಳೊಂದೂ ನನಸಾಗಲಿಲ್ಲ. ಏನೂ ಅರಿಯದ ಮುಗ್ಧೆಯಾಗಿದ್ದ ನಾನು ನಿರಾಶೆಗಳಲ್ಲಿ ಮಿಂದು ಭಾವನೆಗಳ ತುಡಿತಕ್ಕೆ ಬಂದು ಪ್ರೌಢಿಯಾಗಿದ್ದೆ. ಮಧುರ ಭಾವನೆಯ ಮೊಗ್ಗುಗಳು ಅರಳುವ ಮೊದಲೇ ಮುರುಟಿಬಿದ್ದವು. ನನ್ನ ಅಭಿರುಚಿಗಳಿಗೆ ಹೊಂದಿಕೊಳ್ಳುವ ನಿಮ್ಮ ಅಭಿರುಚಿಗಳಿಗೆ ಅದೆಷ್ಟು ತಾಳ್ಮೆಯಿಂದ ಹೊಂದಿಕೊಳ್ಳುತ್ತಿದ್ದೆ. ಸಂಗೀತ ಇಷ್ಟವೆನ್ನುತ್ತಿದ್ದಿರಿ. ಆದರೆ ಒಂದು ಬಾರಿಯಾದರೂ ನನಗೆ “ಒಂದು ಹಾಡು ಹೇಳು” ಎಂದೂ ಹೇಳಲಿಲ್ಲ. ನಾನೇ ತಡೆಯದೇ ಗುಣಿಗುಣಿಸಿದರೆ, ‘ಸುಮ್ಮನೆ ಮಲಗಬಾರದೆ?’ ಎಂದು ಸಿಡುಕುತ್ತಿದ್ದಿರಿ. ಬೆಳದಿಂಗಳು ಸುಂದರ ರಾತ್ರಿ ನನ್ನ ಹಾಡು ಎಲ್ಲವನ್ನೂ ನಿಮ್ಮ ಸಿಡುಕು ನುಂಗಿ ಬಿಡುತ್ತಿತ್ತು. ನಿರಾಶೆಯಿಂದ ಮಿಂಚಿದ ಕಣ್ಣು ಹನಿಯನ್ನು ನಿಮಗೆ ತಿಳಿಯದಂತೆ ಒರೆಸಿಕೊಳ್ಳುತ್ತಿದ್ದೆ. ನನಗಿದ್ದ ಆತ್ಮೀಯರೆಂದರೆ ನೀವೊಬ್ಬರೇ. ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು, ಪ್ರೀತಿ ತುಂಬಿದ ನಿಮ್ಮ ನೋಟದಲ್ಲಿ ನಾನು ಕರಗಬೇಕು ಎಂದು ನಿಮ್ಮ ಬಳಿ ಬಂದರೆ ನೀವು ಕಣ್ಣು ತಪ್ಪಿಸುತ್ತಿದ್ದಿರಿ. ಸಂಜೆ ನೀವು ಬರುತ್ತಿದ್ದ ಹಾಗೆಯೇ ನಿಮ್ಮೆದೆಗೇ ನನ್ನನ್ನೊರಗಿಸಿಕೊಂಡು ಸಂತೈಸುವಿರೆಂದು ಹಾತೊರೆಯುತ್ತಾ ನಾನೋಡಿ ಬಂದರೆ ನೀವು ದೂರದಲ್ಲೇ ನಿಂತು ನೋಡುತ್ತಿದ್ದಿರಿ; ಭಾವುಕಳೆಂದು ಟೀಕಿಸುತ್ತಿದ್ದೀರಿ. ಹೌದು! ನಾನು ತುಂಬಾ ಭಾವುಕಳು, ಮೃದು. ದೇಹಕ್ಕೇನಾದರೂ ಸಹಿಸುತ್ತಿದ್ದೆ. ಆದರೆ ನನ್ನ ಹೃದಯಕ್ಕೆ ಘಾಸಿಯಾದರೆ? ಓಹ್! ನಾನು ಸತ್ತಂತಾಗುತ್ತಿದ್ದೆ.

ನನ್ನ ಓದಿನ ದಿನಗಳಲ್ಲಿ ಉಳಿದ ನನ್ನ ಗೆಳತಿಯರು ಪ್ರೇಮ, ಪ್ರಣಯ ಎಂದು ಹುಡಗರೊಂದಿಗೆ ತಿರುಗಿದರೆ ನಾನು ಅದರಿಂದ ದೂರವಿರುತ್ತಿದ್ದೆ. ಯೋಚಿಸಿದರೂ ಪಾಪವೆಂದುಕೊಳ್ಳುತ್ತಿದ್ದೆ. ನಾನು ಬೆಳೆದ ವಾತಾವರಣ ಹಾಗಿತ್ತು. ನನ್ನ ಸ್ನೇಹಿತೆಯರು ಹಾಸ್ಯ ಮಾಡಿದರೆ.

“ಈ ಪ್ರೇಮ ಗೀಮ ಅವೆಲ್ಲಾ ಮದ್ವೆ ಆದಮೇಲೆ, ನಾನು ಪ್ರೀತಿಸುವುದಾದರೆ ಅದೂ ನನ್ನ ಪತಿಯನ್ನೆ…” ಎಂದು ಹೇಳುತ್ತಿದ್ದೆ.

“ಒಂದು ವೇಳೆ ನಿನಗೆ ಒಳ್ಳೆಯ ಗಂಡ ಸಿಗದಿದ್ದರೆ?…” ಅವರ ಸವಾಲಿಗೆ ಅಳುಕದೆ ಉತ್ತರಿಸುತ್ತಿದ್ದೆ.

“ನನ್ನ ಗಂಡ ಎಷ್ಟೇ ಕೆಟ್ಟವರಾಗಿರಲಿ, ನಾನು ಉದಾರವಾಗಿ ಮನ್ನಿಸುತ್ತೇನೆ. ಮೋಸಗಾರ ಸುಳ್ಳು ಆದರೆ ಮಾತ್ರ ನಾನು ಎಂದಿಗೂ ಕ್ಷಮಿಸುವುದಿಲ್ಲ.”

“ನೀನು ತಳ್ಳಿದರೂ ನಿನ್ನ ಗಂಡ ಹೊರಗೆ ಹೋಗಲ್ಲ. ನೋಡ್ತಿರು. ನಿನ್ನ ರೂಪವೇ ಸಾಕು. ಅವನನ್ನು ಕಟ್ಟಿಹಾಕಲು” – ಏನೇನೋ ಅವರ ಮಾತುಗಳಲ್ಲಿ ನೆನಪಿರುವುವು ಈ ಕೆಲವು ಮಾತುಗಳು.

ಆದರೆ ನನ್ನ ಸೌಂದರ್‍ಯ ಮೇಲಾಗಿ ನನ್ನ ಪ್ರೀತಿಯೂ ನಿಮ್ಮನ್ನು ಬಂಧಿಸಿಕೊಳ್ಳಲಾಗಲಿಲ್ಲ. ಇದೇ ನನಗಾದ ದೊಡ್ಡ ಪೆಟ್ಟು.

ನೀವು ದಿನಾ ಕುಡಿದು ಬಂದು ಒರಟಾಗಿ ವರ್‍ತಿಸುತ್ತಿದ್ದಿರಿ. ಕ್ಲಬ್ಬಿನಲ್ಲಿ ಕುಳಿತು ಎಲೆಗಳ ಮಧ್ಯೆ ಮನೆಯನ್ನೆ ಮರೆಯುತ್ತಿದ್ದ ನಿಮ್ಮನ್ನು ಕಾದು ಕುಳಿತ ರಾತ್ರಿಗಳೆಷ್ಟೋ! ನನ್ನನ್ನು ಭಾವನೆಗಳಲ್ಲಿನ ಗೋಡೆ ಎಂದು ಕೊಂಡಿದ್ದಿರೇನು? ನಿಮ್ಮೆಲ್ಲಾ ದುರಭ್ಯಾಸಗಳು ನಿಧಾನವಾಗಿ ತಿಳಿದರೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಯಾಕೆ ಗೊತ್ತೇನು? ನನ್ನ ಪ್ರೀತಿ ನಿಮ್ಮೆಲ್ಲ ದುರಭ್ಯಾಸಗಳಿಗೆ ಮುಸುಕು ಹಾಕಿತ್ತು. ನಾನು ಕಾದಿರಿಸಿದ್ದ ಪ್ರೇಮದ ಹೊನಲನ್ನು ಹರಿಸುವ ಭರದಲ್ಲಿ ಬೇರೆ ಏನೊಂದನ್ನು ಯೋಚಿಸುವ ಕೆಲಸ ಮಾಡಲಿಲ್ಲ. ನಾನು ಕುರುಡಾಗಿದ್ದೆ. ನಿಮ್ಮನ್ನು ಒಂದು ಕ್ಷಣವೂ ಬಿಟ್ಟಿರಲಾಗುತ್ತಿರಲಿಲ್ಲ ನನಗೆ. ನನ್ನ ಕಣ್ಣಿಗೆ ಮಣ್ಣೆರಚುವ ಕೆಲಸ ಏಕೆ ಮಾಡುತ್ತಿದ್ದಿರಿ? ನನಗೇಕೆ ಮೋಸ ಮಾಡಿದಿರಿ? ನನ್ನ ಬಳಿ ಹೇಳಿದ್ದರೆ ನಾನು ಅಸಮಾಧಾನಗೊಳ್ಳುತ್ತಿದ್ದೆನೆಂದೇನು? ಇಲ್ಲ, ಎಂದಿಗೂ ಇಲ್ಲ. ಮದುವೆಯಾದ ಮೂರು ವರ್‍ಷಗಳಲ್ಲಿ ನೀವು ಒಂದು ಬಾರಿಯೂ ನನ್ನನ್ನು ಪ್ರೀತಿಸಲು ಯತ್ನಿಸಲಿಲ್ಲ. ನನ್ನನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಯಾಕೆ? ಆಗೆಲ್ಲಾ ನನ್ನ ಹೃದಯ ಚೀರುತ್ತಿತ್ತು, ಅಸಹನೆ ಕೋಪದಿಂದ ಏಕೆ ನೀವು ನನ್ನನ್ನು ಅಲಕ್ಷಿಸುತ್ತೀರೆಂದು ತಿಳಿಯದೆ ಅಸಹಾಯಕಳಂತೆ ತೊಳಲಾಡುತ್ತಿದ್ದ.

ಆದರೆ ಒಂದು ದಿನ ನಿಮ್ಮ ಯಾವುದೋ ಹಳೆಯ ಪುಸ್ತಕವೊಂದರಲ್ಲಿದ್ದ ನಿಮ್ಮ ಮತ್ತು “ಅವಳ” ಫೋಟೋ ನನ್ನ ತೊಳಲಾಟಕ್ಕೆ ಉತ್ತರ ಕೊಟ್ಟಿತ್ತು. ನನಗೆ ಅಸೂಯೆ ಹುಟ್ಟಲಿಲ್ಲ. ಕೋಪ ಬರಲಿಲ್ಲ. ನನ್ನಲ್ಲಿಲ್ಲದ ಏನು ಅವಳಲ್ಲಿದೆ ಎಂದು ಬಹಳ ಹೊತ್ತಿನ ತನಕ ನೋಡುತ್ತಾ ಇದ್ದೆ. ವಿವಿಧ ಭಂಗಿಗಳ ಫೋಟೋಗಳು ಇದ್ದವು. ನೀವು ಅವಳೊಂದಿಗೆ ನಗುತ್ತಿದ್ದಿರಿ. ನೀವು ನನ್ನ ಬಳಿ ಹಾಗೆ ನಕ್ಕಿರಲಿಲ್ಲ. ನಕ್ಕರೂ ಬರೀ ಯಾಂತ್ರಿಕವಾಗಿತ್ತೇನೋ! ನೀವು ಅವಳಲ್ಲಿದ್ದ ಪ್ರೀತಿಯಲ್ಲಿ ಒಂದು ಕಾಲುಭಾಗವಾದರೂ ನನ್ನಲಿಟ್ಟಿದ್ದರೆ… ಇಟ್ಟಿದ್ದರೆ ನನ್ನ ಭವಿಷ್ಯವೇ ಬದಲಾಗುತ್ತಿತ್ತಲ್ಲ.

ನೀವು ಹುಡುಕಿ ಬಂದು ನನ್ನನ್ನೇಕೆ ಮದುವೆಯಾದಿರಿ? ನನ್ನನ್ನೇಕೆ ಕೊಂದಿರಿ? ಪ್ರೀತಿಸಿದವಳನ್ನು ಮದುವೆಯಾಗಲಾರದೆ, ಮದುವೆಯಾದವಳನ್ನು ಪ್ರೀತಿಸಲಾಗದೆ ಇರುವ ನಿಮ್ಮ ದುರ್‍ಬಲತೆ ನನ್ನನ್ನು ಕೊಂದಿತು.

ನೀವು ಮೋಸ ಮಾಡಿದಿರಿ, ನನಗೂ ಮತ್ತು ನಿಮ್ಮ ಅವಳಿಗೂ. ಅದು ನಿಮ್ಮ ದುರ್‍ಬಲತೆ ನಾನು ಯಾರನ್ನೂ ಸಹಿಸಬಲ್ಲೆ; ಆದರೆ ದುರ್‍ಬಲರನ್ನು ಮಾತ್ರ ಸಹಿಸಲಾರೆ. ಇತ್ತೀಚೆಗೆ ನನಗೆ ದೇವರ ಮೇಲಿನ ಭಕ್ತಿ ಕಡಿಮೆಯಾಗಿದೇಂತ ಅಮ್ಮನ ಕೊರಗು. ನಾನೀಗ ಗುಡಿಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ಮೊನ್ನೆ ದೇವಸ್ಥಾನವೊಂದಕ್ಕೆ ಹೋದಾಗ ನನಗರಿವಿಲ್ಲದೆಯೇ ಗರ್ಭಗುಡಿಗೆ ನುಗ್ಗಿ ದೇವರ ಮೂರ್ತಿಯನ್ನು ಕಿತ್ತೆಸೆಯಲು ಯತ್ನಿಸಿದನಂತೆ. ಅಂದಿನಿಂದ ಅಮ್ಮನೇ ನನ್ನನ್ನು ಎಲ್ಲಿಗೂ ಕರೆದೊಯ್ಯುತ್ತಿರಲಿಲ್ಲ. ವಿಶ್ವಾಸ ಪ್ರೀತಿಯನ್ನು ಕಳೆದುಕೊಂಡ ದೇವರನ್ನು ಹೇಗೆ ನಂಬಲಿ? ಊಹುಂ ಇನ್ನು ನಂಬಿಕೆಯ ಪ್ರಶ್ನೆ ಎಲ್ಲಿ ಬಂತು. ಇನ್ನೆಂದೂ ನಾನು ದೇವರನ್ನು ಕಣ್ಣೆತ್ತಿ ನೋಡಲಾರೆ. ಈ ಕೈಗಳಿಂದ ಪೂಜಿಸಲಾರೆ.

ದೇವರನ್ನು ಕಂಡ ಕೂಡಲೆ ಕಲ್ಲು ಬೀರುವ ಮನಸ್ಸಾಗುತ್ತದೆ. ದೇವರುಗಳನ್ನೆಲ್ಲಾ ಹೊರಗೆಳೆದು ಕಚಪಚನೆ ತುಳಿದುಬಿಡುವ ಹುಚ್ಚು ಆವೇಶ ಬರುತ್ತದೆ. ನನ್ನನ್ನು ತಡೆಯಲು ಈ ನನ್ನನ್ನು ಅಪ್ಪ ಅಮ್ಮ ಕೋಣೆಯೊಳಗೆ ಬಂಧಿಸಿಡುತ್ತಿದ್ದಾರೆ. ನನ್ನ ದೇವರನ್ನು ಹೃದಯದಲ್ಲಿ ಬಂಧಿಸಿಡಲು ಯತ್ನಿಸಿ ನಾನು ಸೋತೆ; ದೇವರು ನನ್ನಿಂದ ಜಾರಿಬಿಟ್ಟ ಈಗ ನಾನೇ ಬಂಧನದಲ್ಲಿ, ನಾಲ್ಕು ಗೋಡೆಗಳ ಕೋಣೆಗೆ ನಾನೇ ದೇವತೆ, ದೇವರೂ ನಾನೇ ನಾನಾಗಿದ್ದೇನೆ. ಎಲ್ಲವನ್ನೂ ಮರೆತಿದ್ದೇನೆ. ಆದರೆ ಒಂದನ್ನು ಮಾತ್ರ ಮರೆತಿಲ್ಲ.

“ನನ್ನ ದೇವರು ಮೋಸಗಾರ” ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಋ….ಣ
Next post ಘಮ ಘಮ ಹಣ್ಣು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…