ಪ್ರೇಮವೆನಲು ಹಾಸ್ಯವೇ?

ಪ್ರೇಮವೆನಲು ಹಾಸ್ಯವೇ?

ಕನ್ನಡದ ಆನನ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ದಾಂಪತ್ಯದ ಸವಿ-ಸಾರ್ಥಕತೆಯನ್ನು ಅಪರೂಪದ ರೂಪಕಗಳಲ್ಲಿ ಹಿಡಿದಿರಿಸಿದವರು; ಮಧ್ಯಮವರ್ಗದ ದಂಪತಿಗಳ ಕನಸಿಗೆ ಕಾಮನಬಿಲ್ಲು ಮುಡಿಸಿದವರು. ಈ ‘ಮಲ್ಲಿಗೆಯ ಕವಿ’ ಪ್ರೇಮದ ಅಪಾರ ಶಕ್ತಿಯನ್ನು ಕೆಲವೇ ಶಬ್ಬಗಳಲ್ಲಿ ಚಿತ್ರಿಸುವುದು ಹೀಗೆ:

ಒಂದು ಗಂಡಿಗೊಂದು ಹೆಣ್ಣು
ಹೇಗೊ ಏನೊ ಹೊಂದಿಕೊಂಡು
ದುಃಖ ಹಗುರ ಎನುತಿರೆ
ಪ್ರೇಮವೆನಲು ಹಾಸ್ಯವೇ?

ಹೆಣ್ಣುಗಂಡಿನ ನಂಟು ಹಾಗೂ ಪ್ರೇಮದ ಮಹತ್ತನ್ನು ಮನದಟ್ಟು ಮಾಡುವ ಇಷ್ಟು ಸರಳ ವ್ಯಾಖ್ಯೆ ತಿಳಿಗನ್ನಡದಲ್ಲಿ ಇನ್ನೊಂದಿರಲಾರದು. ಆ ಕಾರಣದಿಂದಲೇ ಪ್ರೇಮಿಗಳ ಪಾಲಿಗೆ ನರಸಿಂಹಸ್ವಾಮಿ ಗುರು ಇದ್ದಂತೆ. ಕವಿ ಪಕ್ಕಕ್ಕಿರಲಿ; ಕವಿತೆಯ ಸಾಲುಗಳ ಮೂಲಕ ಪ್ರೇಮವ ಬಗೆಯೋಣ ಬನ್ನಿ.

ನಿಜ. ಕವಿತೆ ಹೇಳುವಂತೆ ಪ್ರೇಮ ಹಾಸ್ಯದ ವಸ್ತುವಲ್ಲ ಅದು ಘನ ಗಂಭೀರವಾದುದೂ ಅಲ್ಲ. ಪ್ರೇಮ ಸುಸ್ವರದ ಭಾವಗೀತೆಯಂತೆ, ಸುಲಲಿತ ‘ಪ್ರಬಂಧದಂತೆ, ಸುವಾಸಿತ ಕೆನೆಹಾಲಿನಂತೆ, ಸುಲಿದ ಬಾಳೆಯ ಹಣ್ಣಿನಂತೆ. ಹಾಗೆಂದ ಮಾತ್ರಕ್ಕೆ ಪ್ರೇಮ ಸುಲಭವಾಗಿ ದಕ್ಕುವಂತಹದ್ದೂ ಅಲ್ಲ ಅದೊಂದು ಸಾಧನೆ, ತಪಸ್ಸು, ಸಿದ್ಧಿ.

ಕೆ‌ಎಸ್‌ನ ಕವಿತೆಯ ‘ಹೇಗೋ ಏನೊ ಹೊಂದಿಕೊಂಡು’ ಎನ್ನುವ ಸಾಲನ್ನು ಮತ್ತೆ ಓದಿಕೊಳ್ಳಿ. ಹೊಂದಿಕೊಂಡು ಎನ್ನುವ ಶಬ್ಬ ಅಪಸ್ವರದಂತೆ ಕೇಳಿಸುತ್ತದೆ ಅಲ್ಲವೇ? ಆದರೆ ಕವಿತೆಯಲ್ಲಿ ಕವಿ ಹೇಳಹೊರಟಿರುವುದು ಪ್ರೇಮವನ್ನು ಸಿದ್ದಿಸಿಕೊಳ್ಳುವ ಮಾರ್ಗವನ್ನು. ಹಾಗಾಗಿ ಹೊಂದಿಕೊಳ್ಳವುದು ಎಂದರೆ ರಾಜಿ ಅಥವಾ ಶರಣಾಗತಿ ಎಂದು ಭಾವಿಸಬೇಕಿಲ್ಲ. ಇದು ಸೋತು ಗೆಲ್ಲುವ ಪ್ರೀತಿಯ ರೀತಿ. ಸಂಗಾತಿಯ ವ್ಯಕ್ತಿತ್ವವನ್ನು ಗೌರವಿಸುತ್ತಲೇ, ನಮ್ಮ ವ್ಯಕ್ತಿತ್ವವನ್ನು ಘಾಸಿಗೊಳ್ಳದಂತೆ ಕಾದುಕೊಳ್ಳತ್ತಲೇ ಹೊಂದಿಕೊಳ್ಳುವ ಈ ಪ್ರಕ್ರಿಯೆ ಒಮ್ಮುಖವಾದುದೂ ಅಲ್ಲ. ಕೊಂಚ ಜಾಣ್ಮೆ ಹಾಗೂ ಸಹನೆ ಇಲ್ಲಿ ಕೆಲಸ ಮಾಡುತ್ತದೆ. ‘ನಾ ನಿನಗೆ ನೀ ಎನಗೆ ಜೇನಾಗುವಾ’ ಎನ್ನುವುದು ಇಲ್ಲಿಯ ನೀತಿ. ಈ ಹೊಂದಾಣಿಕೆಯ ನೀತಿ ದಾಂಪತ್ಯದ ನಿಷ್ಟೆಯನ್ನು ಕುರಿತು ಪರೋಕ್ಷವಾಗಿ ಹೇಳುತ್ತದೆ. ಈ ನಿಷ್ಠೆಯಿಂದ ಪರಸ್ಪರ ಅವಲಂಬನೆ ಸಾಧ್ಯವಾಗುತ್ತದೆ. ಈ ಅವಲಂಬನೆ ಜಡವಾದುದಲ್ಲ ಉಲ್ಲಾಸ ತುಂಬುವ ಜೀವಂತಿಕೆಯದು.

ಎಲ್ಲಿಯೋ ಬೆಳೆದ ಹುಡುಗಿ, ಎಲ್ಲಿಯೋ ಬೆಳೆದ ಹುಡುಗ- ಇಬ್ಬರೂ ಸೇರಿ ‘ಒಲವೆ ನಮ್ಮ ಬದುಕು’ ಎಂದು ಬದುಕುವುದು ಖಂಡಿತವಾಗಿಯೂ ಈ ಜಗದ ಸೋಜಿಗಳಲ್ಲೊಂದು. ಈ ಸೋಜಿಗವನ್ನು ಸಾಧ್ಯವಾಗಿಸುವುದು ಪ್ರೇಮ. ಜೀವಂತ ದೇಹಗಳ ಅಗತ್ಯದೊಂದಿಗೆ ಮಾನಸಿಕ ಮಿಲನದ ಅನಿವಾರ್ಯತೆಯತ್ತ ಪ್ರೇಮ ಬೆಟ್ಟು ಮಾಡುತ್ತದೆ.

ಮದುವೆಗೆ ಮುನ್ನ ಮೂಗುದಾರವಿಲ್ಲದ ಗೂಳಿಯಂತಿದ್ದ ಹುಡುಗ ಮೈಮೇಲೆ ಅರಿಷಣದ ನೀರು ಬೀಳುತ್ತಿದ್ದಂತೆಯೇ ಮೋಹನ ಮುರುಲಿಗೆ ಓಗೊಡುವ ಗೋವಿನಂತಾಗುತ್ತಾನೆ. ಅಪ್ಪ‍ಅಮ್ಮನ ಕಣ್ಣಳತೆಯ ಅಕ್ಕರಾಸ್ಥೆಯಲ್ಲಿ ಬೆಳೆದ ಕುಸುಮಬಾಲೆ, ಹುಡುಗನ ಬೆರಳಿನೊಂದಿಗೆ ಬೆರಳು ಬೆಸೆದುಕೊಂಡ ಮರುಕ್ಷಣ ಗೃಹಿಣಿಯಾಗುತ್ತಾಳೆ; ಪ್ರಬುದ್ದತೆಯ ಸೋಗು ಹೊದ್ದುಕೊಳ್ಳುತ್ತಾಳೆ. ನಂತರದ್ದು ಅವನು ಅವಳನ್ನು ಅವಳು ಅವನನ್ನು ವಹಿಸಿಕೊಳ್ಳುವುದು, ಸಹಿಸಿಕೊಳ್ಳುವುದು, ಸೋತುಗೆಲ್ಲುವುದು- ಈ ಹೊಂದಾಣಿಕೆಯ ಹಾದಿಯಲ್ಲಿ ಪ್ರೇಮ ಪಲ್ಲವಿಸುತ್ತದೆ; ಬದುಕಿಗೆ ಜೇನಿನ ಸಿಂಚನವಾಗುತ್ತದೆ. ಪ್ರೇಮದ ಬಳ್ಳಿಯಲ್ಲಿ ಹೂ ಕೊನರುತ್ತದೆ; ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ ಕಾಲ.

‘ನಾನು ಬಡವಿ ಆತ ಬಡವ/ ಒಲವೆ ನಮ್ಮ ಬದುಕು/ ಬಳಸಿಕೊಂಡೆವದನೆ ನಾವು/ ಅದಕು ಇದಕು ಎದಕು’ ಎನ್ನುವ ಸಾಲುಗಳನ್ನು ಕೇಳಿದ್ದೀರಾ? ಪ್ರೇಮದ ಗಾರುಡಿಗೆ ಬೆರಗುಗೊಂಡ ವರಕವಿ ದತ್ತಾತ್ರೇಯರಾಮಚಂದ್ರ ಬೇಂದ್ರೆಯವರ ಕವಿತೆಯ ಸಾಲುಗಳಿವು. ಈ ಸಾಲುಗಳು ಪರಿಪಕ್ವ ಪ್ರೇಮದ ಪಾವಿತ್ರ್ಯ ಹಾಗೂ ಮಹತ್ವವನ್ನು ಸೂಕ್ಷ್ಮವಾಗಿ, ಧ್ವನಿಪೂರ್ಣವಾಗಿ ಹೇಳುತ್ತವೆ.

ಕವಿತೆಯಲ್ಲಿನ ಬಡವ ಹಾಗೂ ಬಡವಿ ಎನ್ನುವ ಪದಗಳು ದಂಪತಿಯ ಆರ್ಥಿಕ ಬಡತನವನ್ನು ಕುರಿತಾದುವು. ಪ್ರೇಮದ ಶ್ರೀಮಂತಿಕೆಯ ಸಹಚರ್ಯದಲ್ಲಿ ಕಾಸಿನ ಬಡತನ ನಗಣ್ಯ ಎನ್ನಿಸಿಬಿಡುತ್ತದೆ. ಬದುಕಿಗೆ ಪ್ರೇಮ ದೊರಕಿಸಿಕೊಟ್ಟ ಶ್ರೀಮಂತಿಕೆ ಪದಗಳ ವ್ಯಾಖ್ಯೆಗೆ ನಿಲುಕುವಂತಹದ್ದಲ್ಲ ಅದು ವಾಚ್ಯವಲ್ಲ ಅನುಭವವೇದ್ಯವಾದುದು. ‘ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು’ ಎನ್ನುವ ನಾಯಕಿಯ ಮಾತು ಧ್ವನಿಸುವುದು ಪ್ರೇಮದ ಅನನ್ಯತೆಯನ್ನೇ.

ಬೇಂದ್ರೆ, ನರಸಿಂಹಸ್ವಾಮಿ ಅವರದು ನವೋದಯದ ನವ್ಯಕಾಲ. ನಮ್ಮದೋ ಜೆಟ್ ಜಮಾನ. ಕಾಲ ಯಾವುದಾದರೂ ಪ್ರೇಮದ ಭಾಷೆ-ಬನಿ ಬದಲಗಿಲ್ಲ. ಬದಲಾಗಿರುವುದು ನಾವು. ಪ್ರೇಮದ ಸೂತ್ರ ಸರಳವಾಗಿದ್ದರೂ ಪ್ರೀತಿಗಾಗಿ ಕಸರತ್ತನ್ನು ಮಾಡುವ ದಿನಗಳನ್ನು ಸೃಷ್ಟಿಸಿಕೊಂಡಿದ್ದೇವೆ. ‘ಐ ಲವ್ ಯೂ’ ಎಂದು ಪದೇಪದೇ ಹೇಳುವ ಮೂಲಕ ಪ್ರೇಮವನ್ನು ಜೀವಂತವಿಡಲು ಹೆಣಗುತ್ತೇವೆ. ಸಂಗಾತಿಯನ್ನು ಒಲಿಸಿಕೊಳ್ಳಲು ಉಡುಗೆರೆಗಳ ಮೊರೆ ಹೋಗುತ್ತೇವೆ. ಹೃದಯದ ಬಡಿತದ ಸಂವಹನಕ್ಕೆ ಮೊಬೈಲ್ ಗುಂಡಿಗಳ ಅವಲಂಬಿಸುತ್ತೇವೆ. ಮಲ್ತಿಪ್ಲೆಕ್ಸ್-ಮಾಲ್‍ಗಳ ಗದ್ದಲದಲ್ಲಿ ಏಕಾಂತವನ್ನು ಕಳೆದುಕೊಳ್ಳುತ್ತಿದ್ದೇವೆ. ಕಂಪ್ಯೂಟರ್‍ಗಳ ಕಿಟಕಿಗಳಲ್ಲಿ ಪ್ರೇಮದ ಬೆಳಕಿಗಾಗಿ ಹುಡುಕಾಟ ನಡೆಸುತ್ತೇವೆ. ಈ ಹುಡುಕಾಟ ಹೆಣಗಾಟಗಳಲ್ಲಿ ಮನದನ್ನೆಯ ಮುಡಿಗೆ ಮೊಳ ಮಲ್ಲಿಗೆ ತರುವ ಅಭ್ಯಾಸ ಮರೆತುಹೋಗಿದೆ. ಹಿರಿಯರು ತೋರಿದ ಪ್ರೇಮದ ದಾರಿಯಲ್ಲಿ ಜೊಂಡು ಬೆಳೆದಿದೆ. ಆ ಜೊಂಡು ಕೀಳುವ ಸಹನೆ ಟೀವಿ ಪೆಟ್ಟಿಗೆಯ ಬೆಳಕಿನಲ್ಲಿ ಕರಗಿಹೋಗಿದೆ.

ಹೈಟೆಕ್ ಯುಗವಿದು; ಪ್ರೇಮವೂ ಹೈಟೆಕ್ ಆಗಿದೆ ಎಂದು ಸಮಾಧಾನ ಪಟ್ಟುಕೊಳ್ಳೋಣವೇ? ಡೇಟಿಂಗ್ ಯುಗದಲ್ಲಿ ‘ಒಂದು ಗಂಡಿಗೊಂದು ಹೆಣ್ಣು’ ಎನ್ನುವ ಮಾತೇ ಹಾಸ್ಯಾಸ್ಪದ ಎನ್ನೋಣವೇ? ಇರಬಹುದೇನೋ? ಆದರೆ, ದುಃಖ ಹಗುರ ಆಗಬೇಕಾದರೆ ಕವಿ ಹೇಳುವ ಪ್ರೇಮದ ಆಸರೆ- ದಾಂಪತ್ಯದ ನಿಷ್ಠೆಯ ಕಡೆಗೇ ವಾಲಬೇಕು, ವಿಧಿಯಿಲ್ಲ ಪ್ರೇಮಿಗಳನ್ನು ಪರಸ್ಪರ ಸೆರೆ ಹಾಕುವ ಮೂಲಕವೇ ಬದುಕನ್ನು ಸಹ್ಯಗೊಳಿಸುವ ಪ್ರೇಮದ ಆಸರೆಗೆ ಪರ್ಯಾಯವಾದರೂ ಎಲ್ಲಿದೆ?

ಮನೆಯ ನೆತ್ತಿಯ ಮೇಲೆ ನಿಂತು, ಸಂಗಾತಿಯ ಭುಜಕ್ಕೆ ಭುಜ ಆನಿಸಿ, ಆಕಾಶದಲ್ಲಿನ ಚುಕ್ಕಿಚಂದ್ರಮನ ದಿಟ್ಟಿಸಿ ನೋಡಿ ಯಾವ ಕಾಲವಾಯಿತು? ಈ ಪ್ರಶ್ನೆಗೆ ನಿಮ್ಮಲ್ಲಿ ಸಮಾಧಾನಕರ ಉತ್ತರ ಇದ್ದಲ್ಲಿ ನೀವು ಆದೃಷ್ಟವಂತರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಸ್ತಿ ಬಾಡಿಗೆ
Next post ಕರುಣೆಯೆ ಬೆಳಕು

ಸಣ್ಣ ಕತೆ

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…