ಕೊಳಲು ಉಳಿದಿದೆ

ಕೊಳಲು ಉಳಿದಿದೆ

ಮಾತಿನ ತೆರೆ ಒಂದು

“ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ ಇದು ಇರದಿದ್ದರೆ ನನಗೆ ಸಮಾಧಾನವೇ ಇಲ್ಲ. ಪ್ರತಿಯೊಂದು ಕಾರ್ಯವನ್ನು ಆರಂಭಿಸುವಾಗ ಈ ಮೂರ್ತಿಯನ್ನು ನೋಡಿಯೆ ಪ್ರಾರಂಭಿಸುತ್ತೇನೆ. ಅದೇನೋ ನನಗೆ ಅದರಲ್ಲಿ ಅಚಲವಾದ ವಿಶ್ವಾಸವಿದೆ, ಶ್ರದ್ಧೆಯಿದೆ, ಭಕ್ತಿಯಿದೆ. ಇದನ್ನು ಅವರಿಗೆಲ್ಲ ಹೇಗೆ ಹೇಳಬೇಕು? ಇಷ್ಟು ಸುಶಿಕ್ಷಿತ ಮಹಿಳೆ! ಕಾಲೇಜದಲ್ಲಿ ಪ್ರಾಧ್ಯಾಪಕಿಯ ಕೆಲಸ ಮಾಡುವವಳು! ಇವಳಿಗೂ ಇಂಥ ಅಂಧ ಶ್ರದ್ಧೆಗಳು ಏಕೆ? ಎಂದು ಸಂಶಯ ವ್ಯಕ್ತಮಾಡುತ್ತಾರೆ…. ನೋಡಿ, ನೀವೇ ವಿಚಾರಿಸಿ “ಸಂಕಟ ಬಂದಾಗ ವೆಂಕಟರಮಣ” ಹೋಗಿ “ವೆಂಕಟರಮಣ ಬ೦ದಾಗಲೇ ಸಂಕಟವಾಗುವಂತೆ” ಈಗಿನ ಕಾಲ…! ಇಂಥ ನಾಸ್ತಿಕರಿಗೂ ದೇವರಲ್ಲಿ ವಿಶ್ವಾಸವಿಡುವ ಕಾಲ ಬರಬಹುದೆಂದು ನನಗೆ ಅನಿಸುತ್ತದೆ. ಇದೂ ಒಂದು ಸಮಸ್ಯೆ, ಯಾವ ದೇವರನ್ನು ಪೂಜಿಸಬೇಕು ಎಂಬುದು. ನಾನು ಕೃಷ್ಣನನ್ನು ಪೂಜಿಸುವೆನಲ್ಲ! ಅದಕ್ಕೇ ಜನರು ನನ್ನನ್ನು ನೋಡಿ ನಗುತ್ತಿರಬಹುದು.?

“ರೀಟಾ, ನನಗೂ ಅದೇ ಪ್ರಶ್ನೆ ಕೇಳಬೇಕಿತ್ತು.”

“ಹೂಂ! ನಾನು ರೀಟಾ ಅಲ್ಲ! ರಾಧಿಕಾ!! ನನ್ನ ತಂದೆ ಹಾಗೆಯೆ ನನಗೆ ಕರೆಯುತ್ತಿದ್ದರು”

“ನಾನೂ ರಾಧಿಕಾ ಎಂದೇ ಕರೆಯುವೆ. ಅದರೆ ನೀವು ಕ್ರಿಸ್ತರಾಗಿದ್ದು ಕೃಷ್ಣನನ್ನು ಹೇಗೆ ಪೂಜಿಸುವಿರಿ?”

“ನೋಡಿ, ಕ್ರಿಸ್ತ-ಕೃಷ್ಣ ಈ ಶಬ್ದಗಳಲ್ಲಿ ಭೇದವೇ ತೋರುವುದಿಲ್ಲ.”
“ಓಹೋ! ಒಳ್ಳೇ ಭಾಷಾಶಾಸ್ತ್ರ!”

“ಹೂಂ! ಇದು ನನ್ನಷ್ಟಕ್ಕೆ ನಾನು ವಿಚಾರಮಾಡಿ ನೋಡಿದ್ದೇನೆ. ನನ್ನ ವಂಶದ ದೇವರನ್ನು ನಾನು ಪೂಜಿಸುತ್ತ ಬಂದಿಲ್ಲ. ನಾನು ಹಾಗೆ ಮಾಡುವುದಾದರೆ ಯಾವ ದೇವರನ್ನು ಪೂಜಿಸಬೇಕು? ಪ್ರೇಮವಿವಾಹವಿದ್ದಲ್ಲಿ ಈ ಸಮಸ್ಯೆ ಬರುವುದೇ! ನೋಡಿರಿ ನನ್ನ ತಂದೆ ಕ್ರಿಶ್ಚನ್! ನನ್ನ ತಾಯಿ ಕೊಂಕಣಿ ಬ್ರಾಹ್ಮಣಳು, ಇಬ್ಬರ ದೇವರು ಬೇರೆ ಬೇರೆಯೇ!”

“ಹಾಗಾದರೆ……?”

“ಅದೇ! ನಾನು ಆಗಲೇ ನಿಮಗೆ ಹೇಳಿದೆನಲ್ಲ. ಅದೊಂದು ಅವ್ಯಕ್ತ ಭಾವನೆ ಮೂಡಿ ಬರುತ್ತದೆ. ಅದು ಹೇಗೋ ನಾನು ಹೇಳಲಾರೆ! ಭಾವನೆಯು ನಮಗೆ ದೇವರ ಸ್ವರೂಪವನ್ನು ಚಿತ್ರಿಸಿ ಕೊಡುತ್ತದೆ. ನೋಡಿ ನನ್ನ ಕತೆಯನ್ನೆ. ಈ ಊರಿಗೆ ನಾನು ಮೊದಲು ಬಂದಾಗ ನಾನು ಹೌಹಾರಿ ಹೋಗಿದ್ದೆ! ಆಗ ನನಗೆ ಇನ್ನೂ ಇಪ್ಪತ್ತು ವರ್ಷಗಳು ತುಂಬಿರಲಿಲ್ಲ! ನನ್ನ ಇಬ್ಬರು ಚಿಕ್ಕ ಚಿಕ್ಕ ತಂಗಿಯರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೆ! ಈ ಊರಿಗೆ ನಾನು ತೀರ ಅಪರಿಚಿತಳು. ಹೊಟ್ಟೆಗೆ ಗತಿಯಿರಲಿಲ್ಲ. ಯಾರ ನೆರವೂ ನಮಗೆ ಇರಲಿಲ್ಲ. ನನ್ನ ಕಾಲಮೇಲೆ ನಿಂತುಕೊಳ್ಳುವುದಲ್ಲದೆ, ನನ್ನ ಇಬ್ಬರು ತಂಗಿಯರನ್ನು ಜೋಪಾನ ಮಾಡಬೇಕಿತ್ತು! ಆಗ ಇದೇ ಸ್ಟೇಷನ್ ರಸ್ತೆಯಲ್ಲಿರುವ ಕ್ರಿಶ್ಚಿಯನ್ನರ ವಸತಿಗೃಹಕ್ಕೆ ಹೋದೆ. ಅವರೇನೋ ನನ್ನಲ್ಲಿ ವಿಶ್ವಾಸವಿಟ್ಟರು! ನನ್ನ ಮಾತುಗಳನ್ನು ನಂಬಿದರು! ಒಂದೇ ಜಾತಿಯವರೆಂದು ಮನ್ನಿಸಿ ನಮ್ಮನ್ನು ಬೆಳೆಯಿಸಿ ದೊಡ್ಡವರನ್ನಾಗಿ ಮಾಡಿದರು. ಶಿಕ್ಷಣ ಕೊಡಿಸಿದರು… ಆದರೆ ಈಗ ಅವರೇ ನಮ್ಮನ್ನು ಮಾತನಾಡಿಸುವುದಿಲ್ಲ.”

“ಅದೇಕೆ? ಅವರ ಮರದ ನೆರಳಲ್ಲಿ ನೀವು ಬೆಳೆದವರಲ್ಲವೆ?”

“ಅಹುದು ಎಂದೂ ಹೇಳಬೇಕು, ಅಲ್ಲವೆಂದೂ ಹೇಳಬೇಕು. ದೇವರ ದಯೆಯ ನೆರಳಲ್ಲಿ ಬೆಳೆದಿದ್ದೇವೆ. ನಾನು ಎಲ್ಲಿ ಇದ್ದರೂ ಕೃಷ್ಣನ ಸ್ಮರಣೆ ಬಿಟ್ಟಿಲ್ಲ. ಇದೇ ಈಗ ತೋರಿಸಿದ ಈ ಕೊಳಲು ಬಾರಿಸುವುದನ್ನು ಬಿಟ್ಟಿಲ್ಲ. ನಾನು ಬೇರೆ ದೇವರವನ್ನು ಭಜಿಸುತ್ತಿದ್ದುದರಿಂದ ನಾನು ಅವರಿಂದ ದೂರವಾಗಿಡಲ್ಪಟ್ಟಿದ್ದೇನೆ. ಜನರು ಹೀಗೇಕೆ ತಿಳಿದುಕೊಳ್ಳಬೇಕು? ನಮ್ಮ ಸ್ನೇಹವನ್ನು ಏಕೆ ಮರೆಯಬೇಕು? ಮನುಷ್ಯನಿಗೆ ಪ್ರಸಂಗ ಹೀಗೆಯೆ ಬರುತ್ತದೆಂದು ಹೇಳಲು ಬರುವುದಿಲ್ಲ. ನಾವೇನು ಮೊದಲಿನಿಂದ ಹೀಗೆಯೆ ಕಷ್ಟಬಟ್ಟಿಲ್ಲ. ನನ್ನ ತಾಯಿಯನ್ನು ನೀವು ನೋಡಿರುವಿರಲ್ಲವೆ? ಅವಳು ಎಷ್ಟು ಮುದುಕಿಯ ಹಾಗೆ ಕಾಣುತ್ತಾಳೆ!”

“ಅವರಿಗೆ ಎಷ್ಟು ವಯಸ್ಸು ಈಗ?”

“ಅಷ್ಟೆ, ೪೦-೪೫ ವರ್ಷಗಳಾಗಿರಬೇಕು. ಎಷ್ಟು ಬೇಗ ಅವಳ ಕೂದಲು ಬೆಳ್ಳಗಾಗಿವೆ! ಎಷ್ಟು ಬೇಗ ಮುದಿಕೆಯ ಹಾಗೆ ಕಾಣುತ್ತಾಳೆ! ಆದರೆ ಅವಳು ಮೊದಲು ಹೀಗೆ ಇರಲಿಲ್ಲ. ಕಾಲೇಜದಲ್ಲಿರುವಾಗ ‘ಬ್ಯೂಟಿ ಆಫ್ ದಿ ಕಾಲೇಜ’ ಎಂದು ಪ್ರಖ್ಯಾತಿ ಪಡೆದಿದ್ದಳು. ಇದೇ ಕಾಲೇಜದಲ್ಲಿ ಅವಳ ಶಿಕ್ಷಣವಾಗಿದೆ. ನಮ್ಮ ತಂದೆಯಂತೂ ಬಹಳ ಶ್ರೀಮಂತರು. ರಂಗೂನ ವಿಶ್ವವಿದ್ಯಾಲಯದ ಇಂಗ್ಲೀಷ ಪ್ರೊಫೆಸರ ಆಗಿದ್ದರು. ನಮ್ಮನ್ನ ಅತ್ಯಂತ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ನಮಗೆ ಎಳ್ಳಷ್ಟೂ ಕಷ್ಟವಾಗದಂತೆ ಅವರ ಲಕ್ಷ್ಯವಿರುತ್ತಿತ್ತು! ಆಗಿನ ನಮ್ಮ ಶ್ರೀಮಂತಿಕೆಯ ಥಾಟು ಎಷ್ಟು! ಮನೆಯಲ್ಲಿ ವೈಭವವೆಷ್ಟು! ದಿನಾಲು ಸಂಜೆ ನಮ್ಮ ತಂದೆ ಕೊಳಲು ಊದುತ್ತಿದ್ದರು. ಚಿಕ್ಕವರಾದ ನಾವು ಅಟ್ಟದ ಬಾಲ್ಕನಿಯಲ್ಲಿ ಕುಳಿತುಕೊಂಡು ರಂಗೂನದ ರಂಜಿತ ದೀಪಗಳನ್ನ ನೋಡುತ್ತಿದ್ದೆವು, ಏನೇನೋ ಕಲ್ಪನೆ ಮಾಡುತ್ತಿದ್ದೆವು. ನಮ್ಮ ತಂದೆ ನಮಗೆಲ್ಲ ಕೃಷ್ಣನ ಆಟದ ಲೀಲೆಗಳನ್ನು ಬಣ್ಣಿಸಿ ಹೇಳುತ್ತಿದ್ದರು. ಓ! ಆ ಕತೆಗಳು ಎಷ್ಟು ಹೃದಯಂಗಮವಾಗಿ ಇರುತ್ತಿದ್ದವು!! ಆ ದಿನಗಳನ್ನೆಲ್ಲ ನೆನೆದರೆ ಈಗ ಸಂಕಟವಾಗುತ್ತದೆ! ಮುಂಬರುವ ಕಷ್ಟಗಳ ಕಲ್ಪನೆ ನಮಗೆ ಆಗ ಇರಲಿಲ್ಲ.”

“ರಾಧಿಕಾ, ಜೀವನ ಹಗಲು ರಾತ್ರಿಗಳಂತೆ!”

“ನೀವೆನ್ನುವುದು ನಿಜ. ಆದರೆ, ಹಗಲು ಇರುವಾಗ ರಾತ್ರಿಯ ವಿಚಾರ ಎಲ್ಲಿರುವುದು? ನೋಡಿ, ನನ್ನ ತಾಯಿ ಪಟ್ಟ ದುಃಖಗಳಿಗೆ ಎಣೆಯಿಲ್ಲ. ಅವಳು ಸ್ವರ್ಗಲೋಕದಿಂದ ಇಲ್ಲಿಗೆ ಬಂದಂತೆ ಆಗಿದೆ! ಮನುಷ್ಯನಿಗೆ ಇಂಥ ಅನುಭವಗಳು ತೀರ ಕಡಮೆ.”

“ಹೂಂ! ಏನಂದಿರಿ? ಸ್ವರ್ಗಲೋಕದ ಪ್ರವಾಸ ಮಾಡಿ ಬಂದಿರುವೆ?”

“ಅಹುದು! ನಮ್ಮ ತಂದೆಗೆ ಜಡ್ಡು ಬಹಳಾಗಿತ್ತು! ಅವರು ದವಾಖಾನೆಯಲ್ಲಿದ್ದರು. ಆಗ……..??”
* * *
ಮಾತಿನ ತೆರೆ ಎರಡು

“ರಾಧಿಕಾ, ಇನ್ನು ನಾನು ಬಹಳ ದಿನ ಬದುಕಲಾರೆ! ನನ್ನ ಅಂತರಾತ್ಮ ಹಾಗೆ ಹೇಳುತ್ತಿದೆ! ಮಕ್ಕಳಲ್ಲಿ ನೀನೆ ಹಿರಿಯಳು, ನೀನೆ ಎಲ್ಲ ನೋಡಿಕೊಂಡು ಹೋಗಬೇಕು…. ರಾಧಿಕಾ ಏನು ಸಪ್ಪಳ ಅದು? ಏನು ಸಪ್ಪಳ?”

“ದಾದಾ, ಜಪಾನರ ದಾಳಿ ಆರಂಭವಾಗಿದೆ! ಉತ್ತರಕ್ಕೆ ಬಂದಿದ್ದಾರೆ! ಇಲ್ಲಿಯೂ ಬೇಗ ಬರಬಹುದು. ಅದಕ್ಕೆ ಏಯರ ರೇಡ್ ಪ್ರಯೋಗ ನಡೆಸಿದ್ದಾರೆ!”

“ರಾಧಿಕಾ, ಎಂಥ ಗಂಡಾಂತರ! ನಡುನೀರಿನಲ್ಲಿಯೆ ನಿಮ್ಮನ್ನು ಕೈಬಿಡುವೆನೇನೋ ಎನಿಸುತ್ತಿದೆ. ನೀವು ಹೇಗೆ ಸುಖವಾಗಿ ಬಾಳಬೇಕು? ಅಯ್ಯೋ!……. ರಮಾ ರಂಗೂನಿನಿಂದ ಬಂದಳೆ?”

“ಇನ್ನೂ ಇಲ್ಲ ದಾದಾ ಅವಳ ಪತ್ರ ಬಂದಿದೆ. ಬೇಗನೆ ಬರಬಹುದು!”

“ಓ! ಈ ಯುದ್ಧದಲ್ಲಿ ಬ್ಯಾಂಕಿನೊಳಗಿನ ಹಣವೆಲ್ಲ ದಿವಾಳಿಯಾಗಬಹುದು! ಬೇಗ ಎಲ್ಲ ತೆಗೆದುಕೊಂಡು ಬಂದರೆ……..?? ನೀವು ನಿರ್ಗತಿಕರಾಗಿ ಓಡಾಡುವುದು ನೋಡಲಾರೆ! ಹಣವು ಬೇಗ ಬಂದರೆ?”

“ದಾದಾ ಚಿಂತೆ ಮಾಡಬೇಡ. ಇಂದೆ ಆರು ಸಾವಿರ ರೂಪಾಯಿ ಕಳಿಸಿದ್ದಾಳೆ.”

“ಹೀಗೋ!……. ಇನ್ನೂ ಮೂವತ್ತು ಸಾವಿರ ರೂಪಾಯಿ ಇವೆ! ಅವೆಲ್ಲ ಕೈಗತವಾದರೆ?… ನಾನು ನೆಟ್ಟಗಿದ್ದರೆ ನಾನೇ ಹೋಗಿಬರುತ್ತಿದ್ದೆ!…

ಪಾಪ! ರಮಾಳಿಗೆ ಎಷ್ಟು ತ್ರಾಸಾಗಿದೆಯೋ ಏನೋ!…… ಅಯ್ಯೋ!… ರಮಾ ಬಂದಿದ್ದರೆ ಒಂದು ಮಾತು ಹೇಳಬೇಕೆಂದಿದ್ದೆ ರಾಧಿಕಾ. ನಾನು ಮರಳಿ ರಂಗೂನಕ್ಕೆ ಹೋಗುವೇನೋ ಇಲ್ಲವೋ!…. ರಮಾ ನನ್ನನ್ನು ಭೆಟ್ಟಿ ಯಾಗುವಳೋ ಇಲ್ಲವೋ!…. ನಿನ್ನೆದುರಿಗೆ ಎಲ್ಲ ಹೇಳಿಬಿಡುವೆ!”

“ಹೇಳು ದಾದಾ, ಅವಳೂ ಬೇಗ ಬರಬಹುದು! ಅವಳಿಗೂ ನಾನು ಹೇಳವೆ. ಆದರೆ, ನೀನು ಸಾಯುವ ಮಾತನಾಡಬೇಡ, ದಾದಾ. ನಾನು ಅದನ್ನು ಯಾವ ಕಿವಿಗಳಿಂದ ಕೇಳಲಿ?”

“ಛೀ, ಹುಚ್ಚಿ ಹೆದರಬೇಡ, ಅಳಬೇಡ…….. ಈ ಕೃಷ್ಣನ ಮೂರ್ತಿ ತೆಗೆದುಕೋ! ಈ ಕೊಳಲು ತೆಗೆದುಕೊ! ಇದನ್ನು ಬಾರಿಸಲು ಕಲಿತುಕೊ. ನಿನಗೆ ಅಪಾರ ಆನಂದವಾಗುವುದು! ಈ ಕೃಷ್ಣನನ್ನು ಸ್ಮರಿಸಿ ನೀನು ಕೆಲಸವನ್ನು ಮಾಡು. ನಿನಗೆ ಜಯದೊರೆಯುವುದು! ರಾಧಿಕಾ, ನನ್ನ ಮಾತುಗಳನ್ನು ನಂಬು. ನನ್ನ ತಂದೆಯೆ ನನಗೆ ಇದನ್ನು ಹೇಳಿದರು… ಅವರ ಮಾತಿನಂತೆ ನಡೆದುಕೊಂಡು ಬಂದೆ. ಅದರಿಂದಲೆ ನನಗೆ ಅಪರಿಮಿತ ಶಾಂತಿ!…. ರಾಧಿಕಾ, ನನ್ನದೊಂದು ಆಶೆ ಇದೆ. ಅದನ್ನು ರಮಾಳಿಗೆ ಹೇಳು. ಅದನ್ನು ಪೂರೈಸಬೇಕೆಂದು ತಿಳಿಸು. ಅದು ನನ್ನ ತಂದೆಯದೇ ಆಗಿತ್ತು ನನ್ನದೂ ಆಗಿದೆ….”

“ಯಾವುದು ದಾದಾ? ನಿನ್ನ ಆಶೆ ಪೂರೈಸದಿದ್ದರೆ ನಾವು ಬಾಳುವುದಾದರೂ ಏತಕ್ಕೆ?”

“ರಾಧಿಕಾ, ನೀನು ಬಹಳ ಒಳ್ಳೆಯ ಮಗಳು ಇರುವಿ!… ನೋಡು, ಬಂಗಾಲದ ಸಾಗರದ ಅಲೆಗಳನ್ನು ದಾಟಿ ಹೋಗಿರಿ. ಮದರಾಸು ಮೈಸೂರು ಸೀಮೆಗಳನ್ನು ದಾಟಿದ ಮೇಲೆ ಮಲೆನಾಡ ಸೆರಗು ಹತ್ತುವುದು. ಅಲ್ಲಿ ಸಪ್ತಾಪುರದ ಆಚೆ ನಿಸರ್ಗದೇವತೆಯ ಸುಂದರವಾದ ಬೀಡು ಇದೆ. ಭೂಮಿಯು ಗರ್ಭಿಣಿ ಮಹಿಳೆಯ ಹಾಗೆ ಹಸಿರು ಸೀರೆಯನ್ನು ಉಟ್ಟಂತೆ ಕಂಗೊಳಿಸುತ್ತದೆ. ತುಸು ಎತ್ತರವಾದ ಎರಡು ಬೆಟ್ಟಗಳು ಪ್ರೀತಿಯಿಂದ ಕೈಕುಲುಕ ಬೇಕೆಂದು ಹಾತೊರೆದು ಮುಂದೆ ಬರುತ್ತಿರುವವೇನೋ ಎಂಬಂತೆ ತೋರುತ್ತಿವೆ. ಇವೆರಡರ ಅಂಚುಗುಂಟ ಸುವಿಶಾಲವಾದ ಕೆರೆ. ಪ್ರಕೃತಿದೇವಿಯ ಕಾಲು ತೊಳೆದು ಪವಿತ್ರನಾಗಿರೆನೆಂಬ ಹೆಮ್ಮೆ ಆ ಕೆರೆಗೆ ಇದೆ. ಇಂಥ ನಿಸರ್ಗದ ಮಡಿಲಲ್ಲಿ, ಆ ಕೆರೆಯ ದಂಡೆಯ ಸಮೀಪದಲ್ಲಿ ಒಂದು ಮನೆ ಕಟ್ಟಸಬೇಕೆಂಬ ಕನಸು ನನ್ನ ತಂದೆಯದಿತ್ತು. ಇಲ್ಲಿಯ ಕೆಲಸದಿಂದ ಮುಕ್ತನಾದ ಮೇಲೆ ನಾನು ಅದನ್ನು ಮಾಡಬೇಕೆಂದಿದ್ದೆ. ಅದಕ್ಕಾಗಿಯೆ ನನ್ನ ದುಡಿತದ ಹಣ ಕೂಡಿಸಿ ಇಟ್ಟಿದ್ದೆ… ರಾಧಿಕಾ, ಸಂಶಯದಿಂದ ನನ್ನ ಕಡೆಗೆ ನೋಡುತ್ತಿರುವೆ! ಓ! ನನಗೂ ಗೊತ್ತಿದೆ! ನಾನು ಮದ್ರಾಸದವನು, ಅವಳು ಕಾರವಾರದವಳು! ಇಬ್ಬರಿಗೂ ಸಂಬಂಧವಿಲ್ಲದ್ದು, ಇದು ಏಕೆ ಅನ್ನುವಿಯಾ?… ಇದೆ, ರಾಧಿಕಾ ಇದೆ… ನನ್ನ ತಂದೆ ಧಾರವಾಡದಲ್ಲಿ ಫಾರೆಸ್ಟ ಆಫೀಸದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಕೆರೆಯಗುಂಟ ಮನಬಂದಂತೆ ಬೇಕಾದ ಕಡೆಗೆ ತಿರುಗುವುದು ಬಹಳ ರುಚಿಸುತ್ತಿತ್ತು. ಸೂಟಿಯ ದಿನಗಳನ್ನೆಲ್ಲ ಈ ನಿಸರ್ಗದ ಬೆಡಗನ್ನು ನೋಡುತ್ತಲೆ ಕಳೆಯುತ್ತಿದ್ದರು… ಒಂದು ದಿನ ಹೀಗೆಯೇ ತಿರುಗುತ್ತಿರುವಾಗ ಈ ಚಿಕ್ಕ ಕೃಷ್ಣನ ಮೂರ್ತಿ ಅವರ ಕಣ್ಣಿಗೆ ಬಿದ್ದಿತು. ಅದನ್ನು ಮನೆಗೆ ತೆಗೆದುಕೊಂಡು ಬಂದು ಪೂಜಿಸಿದರು. ಅದಕ್ಕೆ ಭಯಭಕ್ತಿಯಿಂದ ನಡೆದುಕೊಂಡರು. ಅಂದಿನಿಂದ ಅವರಿಗೆ ಜೀವನಲ್ಲಿ ಶಾಂತಿ ನೆಲೆಸಿತು. ಹೆಚ್ಚಿನ ಆಫೀಸರ ನೌಕರಿಯೂ ದೊರಕಿತು. ಅದಕ್ಕೇ ರಾಧಿಕಾ, ಅವರು ಆ ಸ್ಥಳವನ್ನು ಮೆಚ್ಚಿದ್ದರು. ಅಲ್ಲದೇನು ನೋಡು. ರಾಧಿಕಾ, ನಾನು ರಮಾಳನ್ನು ಕಂಡದ್ದು-ಮೊದಲ ಸಲ ಕಂಡದ್ದು – ಕಾರವಾರದಲ್ಲಿ ಅಲ್ಲ. ಅವಳನ್ನು ನೋಡಿ ಪ್ರೀತಿಸಿದ್ದು ಕಾರವಾರದಲ್ಲಿ, ಅಲ್ಲ – ಧಾರವಾಡದಲ್ಲಿ …… ಓ! ರಮಾಳಿಗೆ ಎಲ್ಲವೂ ಗೊತ್ತಿದೆ! ಆ….. ಅವಳು….. ಇದ್ದರೆ….. ಅವಳು….. ಬಂದಿದ್ದರೆ ……. ಓ!!… ”
* * *

ಮಾತಿನ ತೆರೆ ಮೂರು.

“ರಾಧಿಕಾ, ರಾಧಿಕಾ, ಏನು ನನ್ನದೇ ಕತೆ ಹೇಳುತ್ತಿರುವಿಯೇನು? ಅಯ್ಯೋ ಆ ಹಳೆಯ ನೆನಪು ತೆಗೆಯದಿರುವುದೇ ಒಳಿತು”

“ಅಲ್ಲ, ಇವರು ನಮ್ಮ ಕಾಲೇಜದಲ್ಲಿಯ ಪ್ರೊಫೆಸರರು! ಇಷ್ಟುದೂರ ಎರಡು ಮೈಲು ನಡೆದುಬಂದು ಕುಳಿತಿದ್ದಾರೆ. ಏನೋ ಮಾತಿಗೆ ಮಾತು ಬಂದಿತು, ಹೇಳುತ್ತಿದ್ದೆ ಅಷ್ಟೆ!”

“ಜನರು ನಮ್ಮ ದೇವರ ಭಕ್ತಿಯ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬಹುದು. ಅದಕ್ಕೆ ಸುಮ್ಮನಿರವುದೇ ಒಳಿತು.”

“ರಾಧಿಕಾ- ರಮಾದೇವಿಯವರೇ ನಾನು ಏನೂ ತಪ್ಪು ಭಾವಿಸುವುದಿಲ್ಲ.”

“ಅಹುದು! ಅಂತೆಯೇ ನಾನಿದೆಲ್ಲ ಹೇಳುತ್ತಿರುವೆ”

“ರಾಧಿಕಾ, ನಿಮ್ಮ ಆ ಕತೆಯನ್ನು ರಮಾದೇವಿಯವರೆ ಹೇಳಿದರೆ ಚನ್ನಾಗುವುದು.”

“ಓ! ಅದೇ…..!” ಎನ್ನುತ್ತ ರಮಾದೇವಿಯವರು ಪ್ರಾರಂಭಿಸಿದರು. “ನಮ್ಮ ರಾಧಿಕಾಳಿಗೆ ಎಲ್ಲವೂ ಗೊತ್ತಿದೆ. ಆದರೂ ಒಂದು ರೀತಿಯಿಂದ ಗೊತ್ತಿಲ್ಲವೆಂದೇ ಹೇಳಬೇಕು ಏಕಂದರೆ ಎಲ್ಲ ಅನುಭವಿಸಿದವಳು ನಾನು. ಎರಡು ಬ್ಯಾಂಕುಗಳಿಗೆ ಹೋಗಿ ಚಕ್ಕು ಮುರಿಸಿದೆ. ಠೇವು ಹಣ ತೆಗೆದುಕೊಂಡೆ! ಇನ್ನೂ ಹಲವು ಬ್ಯಾಂಕಿಗೆ ಹೋಗಬೇಕಿತ್ತು. ಊಟ ಮುಗಿಸಿ ಅದೇ ಹೊರಡುವಳಿದ್ದೆ. ಅಷ್ಟರಲ್ಲಯೇ ಏಯರ ರೈಡ್ ಗಂಟೆ ಬಾರಿಸಿತು! ಜಪಾನರ ದಾಳಿ ಆರಂಭವಾಯಿತು. ಜನರೆಲ್ಲ ಕಕ್ಕಾವಿಕ್ಕಿಯಾಗಿ ಓಡಹತ್ತಿದರು. ನಾನೂ ಏಯರ ರೇಡ್ ಶೆಲ್ಟರ ಕಡೆಗೆ ಓಡಿದೆ. ನನಗೆ ನಿಂತ ನಿಂತಲ್ಲಿಯೆ ನನ್ನ ಹಣದ ನೆನಪಾಯಿತು! ಮತ್ತೆ ಮನೆಯೊಳಗೆ ಹೋಗಿ ಅದನ್ನು ತೀವ್ರವಾಗಿ ತೆಗೆದುಕೊಂಡು ಬರಬೇಕೆಂದೆ. ಮನಸ್ಸು ಬಲವತ್ತರವಾಗಿ ಅತ್ತಕಡೆ ಓಡಿತು. ಜನರು ನನ್ನನ್ನು ಹೊರಗೆ ಬಿಡಲಿಲ್ಲ. ಆದರೂ ಎಲ್ಲರನ್ನೂ ಕೊಸರಿಕೊಂಡು ಓಡಿದೆ! ಓಹೋ! ನಾನು ಕಣ್ಣಾರೆ ಬಾಂಬು ಬೀಳುವುದನ್ನು ನೋಡಿದೆ. ಅಬ್ಬಾ! ಅದೆಂಥ ಸಪ್ಪಳ! ಅದೆಂಥ ಧ್ವನಿ! ನಾನು ಹಣದ ಚೀಲವನ್ನು ತೆಗೆದುಕೊಂಡು ಓಡಿಬರುವಾಗ, ಅಯ್ಯೋ, ನನ್ನ ಕಣ್ಣೆದುರಿಗೇ ಬಾಂಬಿನ ಹೊಡೆತದಿಂದ ಜನರು ಸಾಯವುದನ್ನು ನೋಡಿದೆ. ನನ್ನ ಹಿಂದೆಯೇ ಭಯಂಕರ ಸಪ್ಪಳವಾಯಿತು. ನಾನು ಹೊರಳಿ ನೋಡಿದೆ. ನಮ್ಮ ದೊಡ್ಡಮನೆ- ಒಮ್ಮೆಲೆ ಅಗ್ನಿಗೆ ಆಹುತಿಯಾಯಿತು! ಎಷ್ಟು ಜನ ಸಾಯುತ್ತಿತ್ತು! ಎಷ್ಟು ಕಟ್ಟಡಗಳು ಉರಿಯುತ್ತಿದ್ದವು! ನಾನೊಬ್ಬಳೇ ಹೇಗೆ ಪಾರಾದೆನೋ! ನನಗೆ ಆಶ್ಚರ್ಯವೆನಿಸುತ್ತದೆ. ಅದು ದೇವರ ಕೃಪೆಯೇ ಇರಬೇಕು! ಓಡಿಹೋಗಿ “ಶೆಲ್ಟರಿ” ನಲ್ಲಿ ಅಡಗಿಕೊಳ್ಳುವಷ್ಟು ಬುದ್ಧಿ ನನಗೆ ಹರಿಯಲಿಲ್ಲ. ನಾವು ವಾಸಮಾಡಿಕೊಂಡಿದ್ದ ಮನೆ ನನ್ನೆದುರಿಗೇ ಬೀಳುವದನ್ನು ನೋಡಿ ಕಲ್ಲಿನಂತೆ ನಿಂತು ಕೊಂಡೆ….. ಆಗ ಯಾವುದೋ ಅಪರಿಚಿತ ಧ್ವನಿ ಕೇಳಿಸಿತು. ನನ್ನನ್ನು ಗಟ್ಟಿಯಾಗಿ ಹಿಡಿದರು. ನನ್ನ ಮೈ ಮೇಲೆ ನನಗೆ ಎಚ್ಚರಿಕೆ ಇರಲಿಲ್ಲ…….”

“ನೋಡಿ, ಇವಳಿಗೆ ಹೀಗೆ ಆದ ಹೊತ್ತಿನಲ್ಲಿಯೇ ದವಾಖಾನೆಯಲ್ಲಿ ನಮ್ಮ ತಂದೆಗೆ ಎಚ್ಚರಿಕೆ ಇರಲಿಲ್ಲ. ಮುಂದೆ ಕೆಲವೇ ವೇಳೆಯಲ್ಲಿ……..! ಮೇಲೆ ವಿಮಾನದಾಳಿಯಿತ್ತು! ಆದರೆ ನಮಗೆ ಬೇರೆ ವಿಮಾನಗಳ ಕಲ್ಪನೆಗಳೇ ಬರುತ್ತಿದ್ದವು!”

“ಅಯ್ಯೋ ನನ್ನ ಸ್ಥಿತಿಯಂತೂ ಹೇಳತೀರದು. ಮಕ್ಕಳ ವಿಚಾರ ಮಾಡಲೆ? ಪತಿಯ ವಿಚಾರಮಾಡಲೇ? ಯಾವುದೂ ತಿಳಿಯವಂತಿರಲಿಲ್ಲ. ಒಂದು ಗುಡ್ಡದ ಓರೆಯಲ್ಲಿ, ಒಂದು ದೊಡ್ಡ ಜೇಲುಕಟ್ಟಿ ನಮ್ಮನ್ನು ಅಲ್ಲಿ ಬಿಟ್ಟು ಬಿಟ್ಟರು. ನಮ್ಮ ಸುತ್ತಮುತ್ತಲೂ ಯಾವಾಗಲೂ ಕಾವಲು. ನಮ್ಮ ಹೊಟ್ಟೆ ನಮಗೆ ತುಂಬಿಕೊಳ್ಳಲು ಹೇಳಿಬಿಟ್ಟರು. ದುರಾಶೆಯಿಂದ ಆ ದಿನ ಹಣವನ್ನು ತೆಗೆದುಕೊಳ್ಳಲು ಹೋದೆ. ಆದರೆ ಅದು ನನ್ನ ಪಾಲಿಗೆ ದೊರೆಯಲೇ ಇಲ್ಲ. ಈ ಜಗತ್ತಿನಲ್ಲಿ ಎಲ್ಲವೂ ಅನಿಶ್ಚಿತ!… ನನ್ನ ಹೊಟ್ಟೆಗಾಗಿ ಬೇಕಾದುದನ್ನು ಮಾಡಬೇಕಾಯಿತು… ಓ! ಹೆಚ್ಚಿಗೇನು ಹೇಳುವುದು ನಮ್ಮ ಮಾನಾಪಮಾನ ಏನೂ ಉಳಿಯಲಿಲ್ಲ!…., ನನ್ನ ಮಗುಗಳ ಮುಖವನ್ನು ನೋಡುವದಿಲ್ಲವೇನೋ ಎಂದಿದ್ದೆ!” ತಾಯಿ ನಿಟ್ಟುಸಿರುಗರೆದರು.

“ನೋಡಿ, ನಾವಂತೂ ಎಲ್ಲ ಆಶೆ ಪೂರ್ತಯಾಗಿ ಬಿಟ್ಟಿದ್ದೆವು. ತಂದೆ ತಾಯಿಗಳನ್ನು ಕಳೆದುಕೊಂಡ ಅನಾಥರಂತೆ ನಾವು ಇಲ್ಲಿ ತಿರುಗುತ್ತಿದ್ದೆವು. ಹೀಗೆ ಎಷ್ಟೋ ದಿನಗಳನ್ನು ಕಳೆದಿದ್ದೇವೆ. ಗಾಳಿಯ ಸಂಗಡ ಗುದ್ದಾಡಿದ್ದೇವೆ” ರಾಧಿಕಾ ನುಡಿದಳು.

“ರಾಧಿಕಾ, ನಿಮಗೂ ನಿಮ್ಮ ತಾಯಿಗೂ ಹೇಗೆ ಭೆಟ್ಟಿಯಾಯಿತು?”

“ದೇವರು ಕರುಣೆಬಟ್ಟು ಕಳಿಸಿಕೊಟ್ಟನೆಂದೇ ಹೇಳಬೇಕು. ಆ ದಿನ ಕೃಷ್ಣ ಜಯಂತಿ! ವಾಡಿಕೆಯಂತೆ ಭಕ್ತಿಯ ಹೃದಯದ ಹೂಗಳನ್ನು ದೇವರಿಗೆ ಸಮರ್ಪಿಸಿ ಇನ್ನು ಊಟ ಮಾಡಬೇಕೆಂದು ಕುಳಿತಿದ್ದೆವು. ಆಗ ಒಮ್ಮೆಲೆ….!”

“ರಾಧಿಕಾ! ರಾಧಿಕಾ! ನನ್ನ ಧ್ವನಿ ಹೇಗೆ ಅನಿಸಿತು ಆಗ?” ತಾಯಿ ಉತ್ಸುಕತೆಯಿಂದ ಕೇಳಿದಳು.

“ನೋಡಿ, ಅದನ್ನು ಈ ನಾಲಿಗೆಯಿಂದ ಹೇಳುವುದು ಸಾಧ್ಯವಿಲ್ಲ! ನನ್ನ ತಂಗಿಯರು ಕುಣಿದಾಡಿದರು. ಮಮ್ಮಿಯನ್ನು ಎಷ್ಟು ಮುದ್ದಾಡಿದರೂ ತೀರದು! ಹಲವು ಕ್ಷಣ ನನ್ನ ಕಣ್ಣುಗಳನ್ನು ನಾನು ನಂಬದಾದೆ! ದೇವರ ಅಗಾಧ ಲೀಲೆ!”

“ಅಹುದು! ನನ್ನ ಕಣ್ ಬೊಂಬೆಗಳು ಇಲ್ಲಿಯೆ ಇವೆಯೆಂದು ಹೇಳಿದವನೂ ಅವನೆ! ಅಂತೆಯೇ ಬಹುದೂರ ಬಹುದೂರ ಇಲ್ಲಿಗೆ ಬಂದೆ!”
* * *

ಮುಗಿಯದ ಮಾತಿನ ತೆರೆ ನಾಲ್ಕು

“ರಾಧಿಕಾ, ಈ ಚಿತ್ರ ನಿಮಗೆ ಅರ್ಪಿಸಲು ತಂದಿದ್ದೇನೆ.”
“ಎಲ್ಲಿ ನೋಡೋಣ…….”
“ಇಗೋ ಇಲ್ಲಿ ನೋಡಿ. ಯಮುನೆಯ ನದಿಯ ದಂಡೆಯ ಮೇಲೆ, ಒಂದು ಮರದ ಕೆಳಗೆ ಕೊಳಲು ಇದೆ. ಮೇಲೆ ಆಕಾಶದಲ್ಲಿ….”
“ವಿಮಾನಗಳು !! ಇದೇನು ಕೃಷ್ಣದೇವರ ಯುಗದಲ್ಲಿ ವಿಮಾನಗಳು ಇದ್ದವೆ?”

“ನಗಬೇಡಿ ರಾಧಿಕಾ! ವಿಮಾನಯುಗದಲ್ಲಿ ಅಂದರೆ ಯಂತ್ರಯುಗದಲ್ಲಿಯೂ ದೇವರಿದ್ದಾನೆ. ನೋಡಿ, ಯಾವ ಯುಗವೇ ಇರಲಿ, ದೇವರು ತನ್ನ ಅಸ್ತಿತ್ವದ ಬಗ್ಗೆ ಏನಾದರೂ ಲೀಲೆ ಮಾಡಿ ತೋರಿಸುತ್ತಿರುತ್ತಾನೆ. ಜನರಿಗೆ ಅವನ ಧ್ಯಾನವಿಲ್ಲದೆ ನಡೆಯುವುದಿಲ್ಲ ಎಂಬ ಭಾವನೆ ಬಲವಾಗಿ ಬಂದುಬಿಡುತ್ತದೆ. ಇದು ಚಿರಂತನ! ನೀವು ಆ ದಿನ ಸುಶ್ರಾವ್ಯವಾಗಿ ಕೊಳಲು ಬಾರಿಸಿದಿರಿ. ನಿಮ್ಮ ಜೀವನದ ಕತೆಯನ್ನೆಲ್ಲ ಆ ಕೊಳಲೆ ಹೇಳಿದಂತಾಯಿತು! ಆ ದಿನವೆ ನನ್ನ ಹೃದಯ ಬಿರಿಯಿತು! ದೇವರ ಅಗಾಧ ಲೀಲೆಯನ್ನು ನೆನೆಸಿತು! ಅಂದಿನಿಂದಲೇ ಈ ಚಿತ್ರದ ರೂಪ ರಚಿತವಾಗ ತೊಡಗಿತು!”

“ಓ! ಒಳ್ಳೇ ಕುಶಲ ಚಿತ್ರಗಾರರು ನೀವು! ಚಿತ್ರದಲ್ಲಿ ಅಮರ ವಾಣಿಯನ್ನು ಚಿತ್ರಿಸಿರುವಿರಿ……. ಆದರೆ, ಇದೇನು? ರಾಧೆ ಹಾಗೆ ನಿಂತಿರುವಳಲ್ಲ?”

“ಅಹುದು, ರಾಧಿಕಾ! ಅವಳು ಕೊಳಲನ್ನು ಮುಟ್ಟಿಲ್ಲ. ಆದರೂ ಅವಳಿಗೆ ಕೊಳಲ ಧ್ವನಿ ಕೇಳುತ್ತದೆ! ಕೃಷ್ಣ ಕಾಣದಿದ್ದರೂ ಕೊಳಲು ಉಳಿದಿದೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದಲು – ಬದಲು
Next post ವ್ಯತ್ಯಾಸ

ಸಣ್ಣ ಕತೆ

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys