ಶ್ರೇಷ್ಠತೆಯ ವ್ಯಸನ: ಶಿಕ್ಷಣದ ಶ್ರೇಣೀಕರಣ

ಶ್ರೇಷ್ಠತೆಯ ವ್ಯಸನ: ಶಿಕ್ಷಣದ ಶ್ರೇಣೀಕರಣ

ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಅತಿಶಯೋಕ್ತಿಗಳಿಂದ ಕೊಂಡಾಡುವ ಜನ ಅದೇ ರೀತಿ ಸೋಲನ್ನು ವೈಯಕ್ತಿಕ ಅವಮಾನವಾಗಿ ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಜ್ಞಾನ, ವಿಜ್ಞಾನ, ಕಲೆ, ಉದ್ಯಮ, ಕ್ರೀಡೆ ಮುಂತಾದ ಪ್ರತಿಯೊಂದು ಕ್ಷೇತದಲ್ಲೂ ಇದಕ್ಕೆ ಉದಾಹರಣೆಗಳಿವೆ. ಇನ್ಫೋಸಿಸ್‌ನ ನಾರಾಯಣಮೂರ್ತಿಯವರ ಸಾಧನೆ ಎಷ್ಟು ದೊಡ್ಡದಾಗಿ ಕಾಣಿಸುತ್ತಿದೆಯೆಂದರೆ, ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಶಿಫಾರಸು ಮಾಡುವುದಕ್ಕೂ ನಾವು ಹಿಂದೆ ಮುಂದೆ ನೋಡುವುದಿಲ್ಲ. ನಾರಾಯಣ ಮೂರ್ತಿಯವರ ಕೈಯಲ್ಲಿ ಯಾವುದೋ ಯಕ್ಷಿಣಿಯಿದೆಯೆಂದು ಜನ ತಿಳಿದುಕೊಳ್ಳುತ್ತಾರೆ. ಇವರ ಮುಂದೆ, ಯಾವನೋ ಗ್ರಾಮಾಂತರದ ಕೃಷಿಕನೊಬ್ಬ ಸಾಲ ಮಾಡಿ ತನ್ನ ಕಾರ್ಷಿಕ ಉದ್ಯಮದಲ್ಲಿ ಸೋತು ಸುಣ್ಣಾದರೆ ಆತನ ಪ್ರಯತ್ನ ದುಸ್ಲಾಹಸವೆನಿಸುತ್ತದೆ. ಆತ ಬದುಕು ಸಾಗಿಸಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೂ ಆತನೇ ಕಾರಣನಾಗುತ್ತಾನೆ. ಕ್ರಿಕೆಟ್‌ನಲ್ಲಿ ಅದೆಷ್ಟೋ ಶತಕಗಳನ್ನು ಬಾರಿಸಿದ ಹೇಮಾಹೇಮಿಗಳೂ ಈಚೆಗೆ ವರ್‍ಲ್ಡ್ ಕಪ್ನಲ್ಲಿ ಸರಿಯಾದ ಸಾಧನೆಯನ್ನು ತೋರಿಸದಾಗ ಜನರ ಆಕ್ರೋಶಕ್ಕೆ ತುತ್ತಾದರು. ತತ್ವಃ ಜೋ ಜೀತಾ ವಹೀ ಸಿಕಂದರ್!

ಪ್ರತಿ ವರ್ಷವೂ ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಅದರ ಬೆನ್ನಲ್ಲೆ ಫಲಿತಾಂಶಕ್ಕೆ ಕಾಯುತ್ತಾರೆ. ಪರೀಕ್ಷೆಯಂತೆಯೇ ಫಲಿತಾಂಶಕ್ಕೆ ಕಾಯುವ ದಿನಗಳೂ ಆತಂಕಕಾರಿ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲ, ಅವರ ಹೆತ್ತವರಿಗೆ, ಪೋಷಕರಿಗೆ ಹಾಗೂ ಅಧ್ಯಾಪಕರಿಗೆ. ಯಾವುದೇ ಸಾರ್ವಜನಿಕ ಪರೀಕ್ಷೆಯಲ್ಲೂ ಫಲಿತಾಂಶ ಶೇಕಡಾ ನೂರು ಬರುವುದಿಲ್ಲ. ಐವತ್ತು ಬಂದರೆ ಭಾಗ್ಯ. ಈಗ ಈ ತನಕ ಒಟ್ಟಿಗೆ ಒಂದೇ ಕ್ಲಾಸಿನಲ್ಲಿದ್ದ ವಿದ್ಯಾರ್ಥಿಗಳಲ್ಲಿ ಪಾಸಾದವರು ಫೇಲಾದವರು ಎಂಬ ಎರಡು ವರ್ಗಗಳು ಸೃಷ್ಟಿಯಾಗುತ್ತವೆ. ಪಾಸಾದವರನ್ನು ಕೊಂಡಾಡುತ್ತೇವೆ, ಫೇಲಾದವರನ್ನು ತೆಗಳುತ್ತೇವೆ. ಪಾಸಾದವರು ಪ್ರತಿಭಾವಂತರು, ಫೇಲಾದವರು ದಡ್ಡರು ಎಂದುಕೊಳ್ಳುತ್ತೇವೆ. ಈ ಭಾವನೆ ನಿಜಕ್ಕೂ ನಮ್ಮದಲ್ಲ, ನಾವು ನಮ್ಮ ಸಂಸ್ಕೃತಿಯಿಂದ ಪಡೆದುಕೊಂಡದ್ದು. ಹಾಗೂ ಇದು ನಮಗೆ ಗೊತ್ತಿಲ್ಲದೆಯೇ ಎಷ್ಟು ಆಳವಾಗಿ ಸಾಮಾಜಿಕ ಮನದಲ್ಲಿ ಬೇರೂರಿಬಿಟ್ಟಿದೆಯೆಂದರೆ, ವಿದ್ಯಾರ್ಥಿಗಳೂ ತಮ್ಮ ಆತ್ಮಬಿಂಬವನ್ನು ಇದೇ ಪಾತಳಿಯಲ್ಲಿ ರೂಪಿಸಿಕೊಳ್ಳುತ್ತಾರೆ. ಅರ್ಥಾತ್, ಪಾಸಾದವರು, ಅದರಲ್ಲೂ ಹೆಚ್ಚು ಅಂಕಗಳನ್ನು ಗಳಿಸಿದವರು, ತಾವು ಮಹಾ ಬುದ್ಧಿವಂತರೆಂದೂ, ಫೇಲಾದವರು ತಾವು ಏತಕ್ಕೂ ಬೇಡದವರೆಂದೂ ತಮಗೆ ತಾವೇ ಹೇಳಿಕೊಳ್ಳುತ್ತಾರೆ. ಮನೋವಿಜ್ಞಾನದಲ್ಲಿ ಇದಕ್ಕೆ ಆಟೋಸಜೆಶ್ಚನ್ (ಸ್ವಪ್ರೇರಣೆ) ಎನ್ನುತ್ತಾರೆ. ಪಾಸಾದವರಮಟ್ಟಗೆ ಇದರಿಂದ ಹಾನಿಯೇನೂ ಆಗುವುದಿಲ್ಲ, ಯಾಕೆಂದರೆ ಅವರಿಗಿದು ಧನಾತ್ಮಕವಾದ ಪ್ರೇರಣೆಯಾಗುತ್ತದೆ; ಆದರೆ ಫೇಲಾದವರಿಗೆ ಮಾತ್ರ ಇದು ಮಾರಕವೆನಿಸಬಹುದು, ಯಾಕೆಂದರೆ ತನ್ನನ್ನು ತಾನು ಏಕೂ ಬೇಡದವನೆಂದು ತಿಳಿದುಕೊಳ್ಳುವುದರಿಂದ ವ್ಯಕ್ತಿ ಹಾಗೇ ಆಗಿಬಿಡುವ ಸಂಭವವೇ ಜಾಸ್ತಿ.

ಈ ಹಿನ್ನೆಲೆಯಲ್ಲಿ ನಮ್ಮ ಪ್ರತಿ ವರ್ಷವೂ ಶೇಕಡಾ ಐವತ್ತರಷ್ಟು ಬುದ್ಧಿವಂತರನ್ನು ಸೃಷ್ಟಿಸಿದರೆ, ಅದೇ ಪ್ರಮಾಣದಲ್ಲಿ ಏತಕ್ಕೂ ಬೇಡದವರನ್ನೂ ಸೃಷ್ಟಿಸುವುದಿಲ್ಲವೇ ಎಂಬ ಪ್ರಶ್ನೆಯೇಳುತ್ತದೆ. ವಾಸ್ತವದಲ್ಲಿ ಯಾರೂ ಹುಟ್ಟಾ ಪ್ರತಿಭಾವಂತನೋ ದಡ್ಡನೋ ಆಗಿರುವುದಿಲ್ಲ. ಪ್ರತಿಭೆ ಮತ್ತು ದಡ್ಡತನ ಎನ್ನುವ ಗುಣಗಳು ವರ್ಗೀಕೃತ ಸಮಾಜದ ಕೊಡುಗೆಗಳು. ವಿದ್ಯಾರ್‍ಥಿಯೊಬ್ಬನು ಅಸಾಧಾರಣ ಅಂಕಗಳನ್ನು ಗಳಿಸಿ ತೇರ್ಗಡೆಯಾಗುವುದಕ್ಕೆ ಹೇಗೆ ಆತನ ಹಿನ್ನೆಲೆ ಕಾರಣವೋ ಅದೇ ರೀತಿ ತೀರಾ ಕಡಿಮೆ ಅಂಕಗಳನ್ನು ಪಡೆದು ಅನುತ್ತೀರ್ಣನಾಗುವುದಕ್ಕೂ ವಿದ್ಯಾರ್ಥಿಯ ಕೈಮೀರಿದ ಹಿನ್ನೆಲೆಯೇ ಕಾರಣ; ಕೌಟುಂಬಿಕ, ಜಾತೀಯ, ಪ್ರಾದೇಶಿಕ, ಮತ್ತು ಶೈಕ್ಷಣಿಕ (ವಿದ್ಯಾಸಂಸ್ಥೆ, ಅಲ್ಲಿನ ಅಧ್ಯಾಪಕ ವರ್ಗ ಮುಂತಾದುವು) ಕಾರಣಗಳು ಈ ಹಿನ್ನೆಲೆಯನ್ನು ರೂಪಿಸಿರುತ್ತವೆ. ವಿದ್ಯಾರ್ಥಿಯ ವೈಯಕ್ತಿಕ ಕೊಡುಗೆಯೆಷ್ಟು ಎಂದು ಕೇಳಿದರೆ, ನಿಜಕ್ಕೂ ತೀರಾ ಅತ್ಯಲ್ಪವೆಂದೇ ಹೇಳಬೇಕಾಗುತ್ತದೆ. ಯಾಕೆಂದರೆ ತಾನು ಆದಷ್ಟೂ ಓದಿ ಮುಂದೆ ಬರಬೇಕು, ಒಳ್ಳೆಯ ಉದ್ಯೋಗ ದೊರಕಿಸಬೇಕು ಎಂಬ ಇರಾದೆಯಿಲ್ಲದ ವಿದ್ಯಾರ್ಥಿಗಳೇ ಇಲ್ಲ. ಒಂದು ವೇಳೆ ಇಂಥ ಇರಾದೆಯಿಲ್ಲದವರು ಯಾರಾದರೂ ಇದ್ದರೆ, ಅದಕ್ಕೂ ಸಮಾಜವೇ ಕಾರಣವಾಗಿರುತ್ತದೆ. ಉದಾಹರಣೆಗೆ, ತಾನೊಬ್ಬ ಒಳ್ಳೆಯ ಅಧ್ಯಾಪಕನಾಗಬೇಕೆನ್ನುವುದು ಎಂಬ ಆದರ್ಶ ಇವತ್ತು ಯಾರಿಗೂ ಇಲ್ಲವೇ ಇಲ್ಲ. ಅದಕ್ಕಿಂತ, ಯಾವುದಾದರೊಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ನೌಕರನಾಗುವುದು ನಮ್ಮ ಯುವಜನಾಂಗದ ಆದರ್ಶವಾಗಿರುತ್ತದೆ. ಇದರ ಕಾರಣಗಳು ಈ ಜನಾಂಗದ ಒಳಗಿನವಲ್ಲ, ಹೊರಗಿನವು.

ಪಾಸು ಮತ್ತು ಫೇಲ್ ಎಂಬ ಕಲ್ಪನೆಗಳೇ ಒಂದು ರೀತಿಯಲ್ಲಿ ಹಳೆಕಾಲದ ಉಳಿಕೆಗಳು ಹಾಗೂ ಇವನ್ನು ನಾವು ಎಷ್ಟು ಬೇಗನೆ ತೊಡೆದುಹಾಕುತ್ತೇವೆಯೋ ಅಷ್ಟೂ ಒಳ್ಳೆಯದೇ. ಸಣ್ಣ ಸಣ್ಣ ತರಗತಿಗಳಲ್ಲಿ ಈ ಪಾಸ್ ಮತ್ತು ಫೇಲ್ ಮಾಡುವ ಪರೀಕ್ಷೆಗಳೇ ಅನಗತ್ಯ. ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ವಿಷಯಗಳನ್ನು ಗ್ರಹಿಸಿದ್ದಾರೆ ಎಂದು ತಿಳಿಯುವಂಥ ಪಾಠಕ್ಕೆ ಅನುಕೂಲಕರವಾದ ಮಾಹಿತಿ ನೀಡುವ ಪರೀಕ್ಷೆಗಳು ಮಾತ್ರ ಸಾಕು. ಇಂಥ ಪರೀಕ್ಷೆಗಳೇ ಎಲ್ಲ ತರಗತಿಗಳಲ್ಲೂ ಸಾಕು ಎಂದೇನೂ ಇದರ ಅರ್ಥವಲ್ಲ. ಆದರೆ, ಪಾಸ್ ಮತ್ತು ಫೇಲ್ ಎನ್ನುವುದಕ್ಕಿಂತ, ಪೂರ್ಣ, ಅಪೂರ್ಣ ಎಂಬ ಕಡಿಮೆ ರೂಕ್ಷವಾದ ಪದಪ್ರಯೋಗದ ಕುರಿತು ಸಮಾಜ ಚಿಂತಿಸಬೇಕಾಗಿದೆ. ಹಾಗೂ ವಿದ್ಯಾರ್ಥಿಗಳ ನಿರಂತರವಾದ ಬೆಳವಣಿಗೆಗೆ, ಶಿಕ್ಷಣಸಂಸ್ಥೆ, ಅಧ್ಯಾಪಕವರ್ಗ, ಹೆತ್ತವರು, ಪೋಷಕರು, ರಾಜಕೀಯ ಧುರೀಣರು ಮತ್ತು ತಿಕ್ಷಣತಜ್ಞರು ಹೊಣೆ ತೆಗೆದುಕೊಳ್ಳಬೇಕಾಗಿದೆ. ‘ಗೆದ್ದ’ ಎತ್ತಿನ ಬಾಲ ಹಿಡಿಯುವುದಕ್ಕೆ ಎಲ್ಲರೂ ತಯಾರಿರುತ್ತಾರೆ; ಆದರೆ ‘ಸೋತ’ವರ ಜತೆ ಯಾರಿರುತ್ತಾರೆ ಎನ್ನುವುದು ಮುಖ್ಯ ಪ್ರಶ್ನೆ. ಫಲಿತಾಂಶದ ಬೆನ್ನಹಿಂದೆಯೇ ವರ್ಷ ವರ್ಷವೂ ಸಂಭವಿಸುವ ಆತ್ಮಹತ್ಯಾಪ್ರಕರಣಗಳನ್ನು ಗಮನಿಸಿ: ಪರೀಕ್ಷೆಯಲ್ಲಿ ಫೇಲಾದ್ದರಿಂದ ಉಂಟಾಗುವ ಮಾನಸಿಕ ಖಿನ್ನತೆ ಅಗಾಧವಾದುದು. ತಾನು ಯಾರಿಗೂ ಮುಖ ತೋರಿಸುವುದಕ್ಕೂ ನಾಲಾಯಕ್ಕು ಎಂಬ ಒಂಟಿತನದಲ್ಲಿ ಇಂಥ ವಿದ್ಯಾರ್ಥಿಗಳು ಇರುತ್ತಾರೆ. ಮುಂದೆ ಹೋಗುವಂತಿಲ್ಲ, ಇದ್ದಲ್ಲೇ ಇರುವಂತೆಯೂ ಇಲ್ಲ! ಈ ಸ್ಥಿತಿ ಹುಡುಗರಿಗಿಂತಲೂ ಹುಡುಗಿಯರನ್ನೇ ಹೆಚ್ಚು ಬಲಿತೆಗೆದುಕೊಳ್ಳುವಂಥದು ಎನ್ನುವುದೂ ಗಮನಾರ್ಹ. ಯಾಕೆಂದರೆ, ಅವರಿಗೆ ‘ಮದುವೆ’ ಎಂಬ ಬಹುದೊಡ್ಡ ಸಾಮಾಜಿಕ ಸಮಸ್ಯೆಯೂ ಇದರ ಜತೆ ಸೇರಿಬಿಟ್ಟರುತ್ತದೆ. ಇದು ಯಾವುದಕ್ಕೂ, ಪೋಷಕರಾಗಲಿ, ಶಾಲೆಗಳಾಗಲಿ ಯಾವ ರೀತಿಯ ಹೊಣೆಯನ್ನೂ ಹೊರುವುದಕ್ಕೆ ತಯಾರಿಲ್ಲ. ಸೋತ ವಿದ್ಯಾರ್ಥಿಗಳ ಜತೆ ನಿಂತು, ಇದೇ ಜೀವನದ ಕೊನೆಯಲ್ಲ, ಮುಂದಿನ ಪರೀಕ್ಷೆಯಲ್ಲಿ ಪಾಸಾಗುವುದು ಸಾಧ್ಯ, ಹಾಗೂ ಇದರಿಂದ ಯಾವ ಅವಮಾನವೂ ಇಲ್ಲ ಎಂಬ ಮನೋಧರ್ಮವನ್ನು ಯುವಜನತೆಯಲ್ಲಿ ತರುವುದು ಎಲ್ಲರ ಕರ್ತವ್ಯವಾಗಿದೆ. ಇದಕ್ಕೆ ಸಹಾಯಕವಾಗಿ, ಯಾವುದೇ ಕಾರಣಕ್ಕೆ ಪರೀಕ್ಷೆ ಪೂರ್ತಿಗೊಳಿಸದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಂಥ ಏರ್ಪಾಟನ್ನು ಪತಿ ಶಿಕ್ಷಣ ಸಂಸ್ಥೆಯಲ್ಲೂ ಕಡ್ಡಾಯಗೊಳಿಸಬೇಕಾಗಿದೆ. ಸದ್ಯವಂತೂ, ಪರೀಕ್ಷೆ ಮುಗಿದ ಮೇಲೆ ವಿದ್ಯಾರ್ಥಿಗಳಿಗೂ ತಮಗೂ ಯಾವ ಸಂಬಂಧವೂ ಇಲ್ಲ ಎಂಬ ರೀತಿಯಲ್ಲಿ ಈ ಸಂಸ್ಥೆಗಳು ವರ್ತಿಸುತ್ತಿವೆ. ಇದು ಅಮಾನುಷವಾದುದು. ಒಬ್ಬಳು ತಾಯಿ ತನ್ನ ದುರ್ಬಲ ಮಗುವಿನ ಕುರಿತು ಹೆಚ್ಚು ಲಕ್ಷ್ಯ ಹರಿಸುವಂತೆ, ಶಿಕ್ಷಣ ಸಂಸ್ಥೆಗಳೂ ಈ ‘ಹೆಚ್ಚು ಲಕ್ಷ್ಯ’ ಬೇಕಾಗಿರುವ ವಿದ್ಯಾರ್ಥಿಗಳ ಕುರಿತು ಕಾಳಜಿವಹಿಸುವುದು ಅಗತ್ಯವಾಗಿದೆ.

ವಿದ್ಯಾರ್ಥಿಗೆ ತಾನು ಸಿದ್ಧನಾದಾಗ, ಹಾಗೂ ಎಷ್ಟು ಸಲ ಅಗತ್ಯವೋ ಅಷ್ಟು ಸಲ, ಪರೀಕ್ಷೆ ಬರೆಯುವ ಹಕ್ಕು ದೊರೆಯಬೇಕು. ಇಂದಿನ ಹಾಗೂ ಮುಂದೆ ವ್ಯಾಪಕವಾಗಿ ಬೆಳೆಯಲಿರುವ ವಿದ್ಯುನ್ಮಾನ ಯುಗದಲ್ಲಿ ಇದು ಅಸಾಧ್ಯವೇನೂ ಅಲ್ಲ. ಒಂದು ಕಾಲವಿತ್ತು; ಆಗ ‘ಪೂರಕ’ ಪರೀಕ್ಷೆಗಳು ಶೈಕ್ಷಣಿಕ ವರ್ಷದ ಮಧ್ಯೆ ನಡೆಯುತ್ತಿದ್ದ ಸಂಗತಿಗಳು. ಈಗ ಅದು ಬದಲಾಗಿ, ಮುಖ್ಯ ಪರೀಕ್ಷೆಯ ಪರಿಣಾಮ ಪ್ರಕಟವಾದ ತಿಂಗಳೊಪತ್ತಿನಲ್ಲೇ ಪೂರಕ ಪರೀಕ್ಷೆಯನ್ನೂ ನಡೆಸುವ ಪೋರೋಗಾಮಿ ಪಕ್ರಿಯೆ ಚಾಲ್ತಿಗೆ ಬಂದಿದೆ. ಇದು ಸಾಧ್ಯ ಎಂದಾದರೆ, ಮುಂದೆ ಯಾವಾಗ ಬೇಕೋ ಆವಾಗ ಪರೀಕ್ಷೆ ನಡೆಸುವುದೂ ಸಾಧ್ಯ. ಜತೆ ಜತೆಯಲ್ಲೇ, ಮೊದಲ ಪರೀಕ್ಷೆ, ಎರಡನೆಯ ಸಲದ ಪರೀಕ್ಷೆ ಎಂದು ಕಾಗದದ ಮೇಲೆ ಮುದ್ರೆಹಚ್ಚುವುದೂ ಕೂಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ. ಒಮ್ಮೆ ಪೂರ್ಣಗೊಂಡರೆ ಆಯಿತು. ಅದು ಎಷ್ಟನೆಯ ಪ್ರಯತ್ನದಲ್ಲಿ ಎನ್ನುವ ಪ್ರಶ್ನೆ ಅನಗತ್ಯ. ಮಾತ್ರವಲ್ಲ; ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಹಂತಗಳ ಕೆಲವೊಂದು ವಿಷಯಗಳ ಪರೀಕ್ಷೆಗಳು ಎಲ್ಲರಿಗೂ ಯಾವ ಕಾಲಕ್ಕೂ ಮುಖ್ಯವಾಗಿರಬೇಕು. ಹಾಗೂ ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ ಶೇಖರಿಸುವ ಅಂಕಗಳಿಗೆ ಅನುಗುಣವಾಗಿ ಅವರಿಗೆ ಪ್ರಮಾಣಪತ್ರಗಳು ದೊರೆಯುವಂತಾಗಬೇಕು. ಈ ಪ್ರಮಾಣಪತ್ರಗಳ ಆಧಾರದ ಮೇಲಿಂದ ಅವರಿಗೆ ಮೇಲಿನ ತರಗತಿಗಳಿಗೆ ಪ್ರವೇಶ ಸಿಗಬೇಕು.

ಹೆತ್ತವರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಹಾಕಿದರಾಯಿತು, ಎಲ್ಲವನ್ನೂ ಶಾಲೆ ನೋಡಿಕೊಳ್ಳುತ್ತದೆ ಎಂಬ ಧೋರಣೆ ಹೊಂದಿರುತ್ತಾರೆ. ಕ್ಷಿಪ್ರವಾಗಿ ನಗರೀಕರಣಗೊಳ್ಳುತ್ತಿರುವ ಜೀವನದಲ್ಲಿ ಅವರಿಗೆ ಮಕ್ಕಳ ಜತೆ ಕೂತುಕೊಳ್ಳುವುದಕ್ಕಾಗಲಿ, ಶಾಲೆ ಕಾಲೇಜುಗಳಿಗೆ ಹೋಗಿ ವಿಚಾರಿಸುವುದಕ್ಕಾಗಲಿ ಸಮಯವೂ ಇರುವುದಿಲ್ಲ. ಹಲವು ವರ್ಷಗಳಿಂದಲೂ ಒಂದು ‘ಕನ್ವೇಯರ್ ಬೆಲ್ಟ್’ ವಿದ್ಯಮಾನ ಶಿಕ್ಷಣಕ್ಷೇತ್ರದಲ್ಲಿ ಪ್ರಚಲಿತವಾಗಿರುವುದನ್ನು ಗಮನಿಸಬೇಕು. ಕನ್ವೇಯರ್ ಬೆಲ್ಟ್ ಎಂದರೆ, ಒಂದು ವಸ್ತುವನ್ನು ಸಿದ್ಧಪಡಿಸಲು ಬೇಕು ಬೇಕಾದ ಬಿಡಿಭಾಗಗಳನ್ನು ಕ್ರಮಪ್ರಕಾರ ನೀಡುತ್ತ ಹೋಗುವುದು, ಹಾಗೂ ಕೊನೆಯಲ್ಲಿ ವಸ್ತು ಸಿದ್ಧವಾಗುವುದು. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಾಚು, ಕಾರು, ವಿಮಾನ ಮುಂತಾದ ವಸ್ತುಗಳು ಈ ರೀತಿ ತಯಾರಾಗುತ್ತವೆ. ಹೀಗೆ, ಮಗು ಹುಟ್ಟಲಿದೆ ಎನ್ನುವಾಗಲೇ ‘ಒಳ್ಳೆಯ ಶಾಲೆ’ಯ ಹುಡುಕಾಟ ಸುರುವಾಗುತ್ತದೆ. ಹುಟ್ಟಿದ ಮೇಲೆ, ಅಲ್ಲಿ ಸೀಟು ದೊರಕಿಸಿಕೊಳ್ಳುವ ಹರಸಾಹಸ ನಡೆಯುತ್ತದೆ. ಸೀಟು ಸಿಕ್ಕಿದ ಮೇಲೆ, ಮಗುವನ್ನು ಕನ್ವೇಯರ್ ಬೆಲ್ಟ್‌ಗೆ ಹಾಕಿದಂತೆಯೇ ಸರಿ! ಈ ಬೆಲ್ಟಿನ ಕೊನೆಯಲ್ಲಿ ಒಬ್ಬ ಎಂಜಿನೀಯರನೋ ಡಾಕ್ಬರನೋ ಸಿದ್ಧವಾಗಿ ಬರಬೇಕು! ಇದಕ್ಕಾಗಿ ಹೆತ್ತವರು ಯಾವ ಬೆಲೆಯನ್ನೂ ಕೊಡಲು ತಯಾರಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಹೆತ್ತವರ ಹೊಣೆಗಾರಿಕೆ ದುಡ್ಡು ಕೊಡುವಲ್ಲಿಗೆ ಮುಗಿಯುತ್ತದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳೂ ಕಾರ್ಖಾನೆಯ ತರವೇ ವರ್ತಿಸುವುದಾಗಿ ಭರವಸೆ ನೀಡುತ್ತವೆ. ಇದೊಂದು ವಿಷವರ್ತುಲ. ಇದರಿಂದ ವಿದ್ಯಾರ್ಥಿಗಳು ಮನುಷ್ಯರಾಗಿ ಹೊರಬರುವುದು ಹೇಗೆ ಸಾಧ್ಯ?

ಶಿಕ್ಷಣ ಸಾಮಾಜಿಕ ಅಂತರವನ್ನು ತೊಡೆದುಹಾಕಲು ಸಹಕಾರಿಯಾಗಬೇಕಲ್ಲದೆ ಹೆಚ್ಚಿಸುವುದಕ್ಕಲ್ಲ. ಆದರೆ ದುರದೃಷ್ಟವಶಾತ್ ಈಗಿನ ‘ಮೂಷಿಕ ಸ್ಪರ್ಧೆ’ ಮಾಡುತ್ತಿರುವುದು ಅಂತರ ಹೆಚ್ಚಳವನ್ನೇ. ಇದಕ್ಕೆ ಕಾರಣಗಳು ಹಲವಾರು. ಒಂದು ಪ್ರಧಾನ ಕಾರಣವೆಂದರೆ, ಐ‌ಐಟಿ, ಐ‌ಐ‌ಎಮ್, ಪಿಲಾನಿ, ಜೆ‌ಎನ್‌ಯು, ಹಾಗೂ ಅನೇಕಾನೇಕ ಮೆಡಿಕಲ್ ಮತ್ತು ಇಂಜಿನೀಯರಿಂಗ್ ಕಾಲೇಜುಗಳು ಪ್ರತ್ಯೇಕತೆಯನ್ನು ಸ್ಥಿರಗೊಳಿಸುವ ಸರಕಾರಿ ಹಾಗೂ ಖಾಸಗಿ ಪ್ರಣೀತ ಭದ್ರ ಕೋಟೆಗಳೇ ಆಗಿವೆ. ಇವುಗಳನ್ನು ಪ್ರವೇಶಿಸುವುದೇ ಒಂದು ಸಾಹಸ, ಎಲ್ಲರಿಂದಲೂ ಸಾಧ್ಯವಾಗುವ ಸಂಗತಿಯಲ್ಲ. ಆದರೆ ಒಮ್ಮೆ ಪ್ರವೇಶ ಗಿಟ್ಟಿಸಿಕೊಂಡರೆ ಆಮೇಲೆ ಅದರ ಮಹಿಮೆಯನ್ನು ಯಾರೂ ಅಳಿಸಿಹಾಕುವಂತಿಲ್ಲ. ಸರಕಾರವೂ ಸಹಾ ಇಂಥ ಸಂಸ್ಥೆಗಳಿಗೆ ಸುರಿಯುವ ದುಡ್ಡಿಗೆ ಮಿತಿಯಿಲ್ಲ. ಸಮಾಜದ ಯಾರೂ ಈ ಪ್ರತ್ಯೇಕತೆಯ ವಿರುದ್ಧ ಸಣ್ಣ ಸ್ವರ ಕೂಡಾ ಎತ್ತುವುದಿಲ್ಲವೆಂದ ಮೇಲೆ ಇದು ಹೀಗೇ ಇರಬೇಕಾದ್ದು ಎಂಬ ಕಲ್ಪನೆ ನಮ್ಮ ಮನಸ್ಸನ್ನು ಎಷ್ಟೊಂದು ಆಕ್ರಮಿಸಿಬಿಟ್ಟದೆ ಎನ್ನುವುದು ಗೊತ್ತಾಗುತ್ತದೆ. ಸದ್ಯ ನಡೆದಿರುವ ಶೇಕಡಾ ೩೭ ಓಬಿಸಿ ಮೀಸಲಾತಿ ಕ್ರಮದಿಂದ ಈ ಸಂಸ್ಥೆಗಳ ದ್ವಾರ ಸಾಕಷ್ಟು ಮಟ್ಟಿಗೆ ತೆರೆಯುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಇದು ಸ್ವಾಗತಾರ್ಹ ವಿಚಾರ. ಆದರೆ ಇದರಲ್ಲೂ ರಾಜಕೀಯ ತಲೆಹಾಕಿರುವುದು ದುರದೃಷ್ಟದ ಸಂಗತಿ. ಸುಪ್ರೀಮ್ ಕೋರ್ಟ್ ಸೂಚಿಸಿದ ಕೆನೆಪದರವನ್ನು ಓಬಿಸಿ ಹೊರತುಪಡಿಸುವುದು ಸರಿಯಾದ ಕ್ರಮ. ಅದಲ್ಲವೆಂದಾದರೆ ಈ ಮೀಸಲಾತಿ ಉಳ್ಳವರಿಗೇ ಮತ್ತೆ ಮತ್ತೆ ಮೀಸಲಾಗುತ್ತ ಇದ್ದು, ಸ್ತರ್ಧೆಯ ನೆಲ ಎಂದಿಗೂ ಸಮತಟ್ಟಾಗುವುದಿಲ್ಲ. ಮಾತ್ರವಲ್ಲ, ಮೀಸಲಾತಿ ಕೂಡಾ ಎಂದಿಗೂ ತತ್ವಶಃ ಆಗಿ ಕೂಡಾ ಅಂತ್ಯಗೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, ಕೆನೆಪದರವನ್ನು ಹೊರಪಡಿಸಿದರೆ, ಸ್ಪರ್ಧೆಯ ನೆಲ ಸಮತಟ್ಟಾಗುವುದು ಮಾತ್ರವೇ ಅಲ್ಲ, ಒಂದಲ್ಲ ಒಂದು ದಿನ ಮೀಸಲಾತಿ ಅನಗತ್ಯ ಎನಿಸುವ ದಿನವನ್ನು ನಾವು ಊಹಿಸಬಹುದು. ಕೇವಲ ಜಾತಿಯ ಆಧಾರದ ಮೀಸಲಾತಿ ಆರ್ಥಿಕವಾಗಿ ಹಿಂದುಳಿದವರಿಗೆ, ಮುಖ್ಯವಾಗಿ ಗ್ರಾಮಾಂತರ ಪದೇಶದ ವಿದ್ಯಾರ್ಥಿಗಳಿಗೆ, ನ್ಯಾಯ ದೊರಕಿಸುವುದಿಲ್ಲ; ಮಾತ್ರವಲ್ಲ, ‘ತಿಮಿಂಗಿಲಗಳು’ ಓಬಿಸಿಯಲ್ಲೂ ಇವೆ.

ಅಚ್ಚರಿ ಹುಟ್ಟಿಸುವ ಇನ್ನೊಂದು ಸಂಗತಿಯೆಂದರೆ, ಪರಿಶಿಷ್ಪ ಮತ್ತು ಓಬಿಸಿ ವರ್ಗಗಳ ಕುರಿತಾದ ಮೀಸಲಾತಿ ವಿಷಯ ಹಲವು ಕಾಲದಿಂದ ಚರ್ಚೆಗೆ ಒಳಗಾಗಿದ್ದರೂ ಈ ವರ್ಗಗಳ ಸಮೇತ ಎಲ್ಲ ವರ್ಗಗಳಲ್ಲಿಯೂ ವ್ಯಾಪಕವಾಗಿ ಇರುವ ಸ್ತ್ರೀಸಮುದಾಯದ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಯಾರೂ ಮಾತಾಡದೇ ಇರುವುದು. ಜನಸಂಖ್ಯೆಯ ಮತ್ತು ಸಾಮಾಜಿಕ ಸಮತೋಲದ ಆಧಾರದ ಮೇಲೆ ಮೀಸಲಾತಿಯಾದರೆ, ಪ್ರತಿ ವರ್ಗದಲ್ಲೂ (ಸಾಮಾನ್ಯ ವರ್ಗವನ್ನೂ ಒಳಪಡಿಸಿ) ಶೇಕಡಾ ೫೦ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡುವುದು ನ್ಯಾಯಸಮ್ಮತವಾಗುತ್ತದೆ. ಆಯಾ ವರ್ಗದಲ್ಲಿ ಸೀಟುಗಳು ಇನ್ನೂ ಉಳಿದಿದ್ದರೆ ಅವನ್ನು ಆ ವರ್ಗದ ಗಂಡುವಿದ್ಯಾರ್ಥಿಗಳಿಗೆ ನೀಡಿದರಾಯಿತು. ಐ‌ಐಟಿ, ಐ‌ಐ‌ಎಮ್ ಮುಂತಾದ ಸಂಸ್ಥೆಗಳು ಪುರುಷರಿಂದ ತುಂಬಿರುವುದು ಏನನ್ನು ಹೇಳುತ್ತದೆ? ಸ್ತ್ರೀಪುರುಷರ ನಡುವಣ ಈ ಶೈಕ್ಷಣಿಕ ಅಸಮಾನತೆಯನ್ನು ತೊಡೆದುಹಾಕುವುದಕ್ಕೆ ಯಾರು ಏನು ಕ್ರಮ ಕೈಗೊಂಡಿದ್ದಾರೆ? ಇಲ್ಲಿ ಮೀಸಲಾತಿ ಯಾಕೆ ದಿವ್ಯ ಮೌನವನ್ನು ತಳೆದಿದೆ? ಯಾವುದೇ ವರ್ಗ ಸಾಮಾಜಿಕವಾಗಿ ಮುಂದರಿಯಬೇಕಾದರೆ ಆಯಾ ವರ್ಗದ ಒಳಗೆಯೇ ಆರ್ಥಿಕ ಮತ್ತು ಲೈಂಗಿಕ ಸಮಾನತೆ ಬೇಕಾಗುತ್ತದೆ ಎನ್ನುವುದರಲ್ಲಿ ಬೇರೆ ಮಾತಿಲ್ಲ.

ಇದೆಲ್ಲ ಸಾಧಿಸಿದರೂ, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿಯತನಕ ಇಂಥ ಪ್ರತ್ಯೇಕತಾ ಕಾಲನಿಗಳು ಇರುತ್ತವೆಯೋ ಅಲ್ಲಿಯತನಕ ಅಸಮಾನತೆಯೂ ಇದ್ದೇ ಇರುತ್ತದೆ. ಈ ಪ್ರತ್ಯೇಕತೆಯನ್ನು ಇಲ್ಲದೆ ಮಾಡುವುದು ಹೇಗೆ? ಕೆಲವು ವರ್ಷಗಳ ಹಿಂದೆ ಸಾಹಿತ್ಯದಲ್ಲಿ ಶ್ರೇಷ್ಠತೆ ಎಂಬ ವಿಷಯದ ಬಗ್ಗೆ ಬೆಂಗಳೂರಲ್ಲಿ ನಡೆದ ಸಮ್ಮೇಳನ, ಅದರ ಬೆನ್ನ ಹಿಂದೆಯೇ ಬಂದ ಶ್ರೇಷ್ಠತೆಯ ವ್ಯಸನದ ಕುರಿತಾದ ಟೀಕೆ ಜನರ ನೆನಪಿನಲ್ಲಿ ಇರಬಹುದು. ಈಗ ಬಹುಶಃ ಯಾರೂ ಸಾಹಿತ್ಯದಲ್ಲಿ ‘ಶ್ರೇಷ್ಠತೆ’ಯ ಬಗ್ಗೆ ಮಾತಾಡುವುದಿಲ್ಲ, ಯಾಕೆಂದರೆ ಯಾರಿಗೂ ‘ಶ್ರೇಷ್ಠತೆಯ ವ್ಯಸನಿ’ ಎಂದು ಗುರುತಿಸಿಕೊಳ್ಳುವುದು ಬೇಕಾಗಿಲ್ಲ. ಸಾಹಿತ್ಯದ ಶ್ರೇಷ್ಠತೆಯನ್ನು ಅಳೆಯುವುದೇ ಅಸಾಧ್ಯವಾದ ಸಂಗತಿಯಾದ್ದರಿಂದ ಈ ಟೀಕೆಗೂ ಒಂದು ಹರಿತ ಬಂತು. ಆದರೆ ಶಿಕ್ಷಣ ಕ್ಷೇತ್ರದ ‘ಶ್ರೇಷ್ಠತೆಯ ವ್ಯಸನ’ವನ್ನು ಏನು ಮಾಡೋಣ? ಯಾಕೆಂದರೆ, ಇಲ್ಲಿ ಶ್ರೇಷ್ಠತೆಯನ್ನು ಅಳೆಯುವುದಕ್ಕೆ ಅಂಕಗಳ ಸ್ಪಷ್ಟ ಮಾನದಂಡವಿದೆ.

ಆದರೆ ಈ ಸ್ಪಷ್ಟವೆಂದು ತೋರುವ ಅಂಕಗಳು ಆಕಾಶದಿಂದ ಉದುರಿಬೀಳುವುದಿಲ್ಲ; ಅವು ಪ್ರತಿಭೆಯಿಂದಲೂ ಬರುವುದಿಲ್ಲ. ವಾಸ್ತವದಲ್ಲಿ ಈ ಪ್ರತಿಭೆಯೆಂದರೆ ಏನು ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರವೇ ಇಲ್ಲ. ಹೀಗಿರುತ್ತ, ಉತ್ತಮ ಅಂಕಗಳನ್ನು ಗಳಿಸುವುದಕ್ಕೆ ಅಗತ್ಯವಾದ ತಯಾರಿಯೇ ಮುಖ್ಯವಾಗುತ್ತದೆ; ಆಗ ನಮಗೆ ಗೊತ್ತಾಗುವುದು ಇಂಥ ತಯಾರಿಗೆ ಬೇಕಾಗುವ ಅನುಕೂಲತೆ, ವಾತಾವರಣ ಎಲ್ಲರಿಗೂ ಸಮಾನವಾಗಿಲ್ಲ ಎನ್ನುವ ಸತ್ಯ. ಆದ್ದರಿಂದ ನಮ್ಮ ಹಲವು ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಅನನುಕೂಲತೆಗಳ ಮೂಲಕವಾದ ಅನ್ಯಾಯ ಆಗಿರುತ್ತದೆ; ಪತಿಷ್ಠಿತ ಪ್ರತ್ಯೇಕತಾಸಂಸ್ಥೆಗಳು ಪ್ರವೇಶಪರೀಕ್ಷೆಯ ಘೋರವಾದ ಇನ್ನೊಂದು ತಡೆಯನ್ನು ನಿರ್ಮಿಸಿ ಈ ಅನ್ಯಾಯವನ್ನು ಸ್ಥಿರಗೊಳಿಸುತ್ತ ಹೋಗುತ್ತವೆ. ಇದೆಲ್ಲವೂ ಮುಕ್ತವಾಗಿ ನಡೆಯುವುದರಿಂದ ಇಲ್ಲಿ ಅನ್ಯಾಯದ ಪ್ರಶ್ನೆಯೆಲ್ಲಿದೆ ಎಂದು ಕೇಳುವಂಥ ಸೈದ್ಧಾಂತಿಕ ಅಂಧತೆಯಲ್ಲಿ ನಾವೆಲ್ಲ ಇನ್ನೂ ಇದ್ದೇವೆ.

ಭಾರತದ ಐ‌ಐಟಿ, ಐ‌ಐ‌ಎಮ್ ಮುಂತಾದ ಸಂಸ್ಥೆಗಳು ಇಂದು ವಿಶ್ವಮಾನ್ಯತೆಯನ್ನು ಪಡೆದಿವೆ ಎನ್ನುವುದರಲ್ಲಿ ಸಂದೇಹವಿಲ್ಲ. ಭಾರತೀಯರಾಗಿ ನಾವು ಈ ಬಗ್ಗೆ ಹೆಮ್ಮೆಯನ್ನೂ ಪಟ್ಟುಕೊಳ್ಳಬಹುದು. ಆದರೆ ಕೋಟಿಗಟ್ಟಲೆ ಜನರಿರುವ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಹೀಗೆ ತಯಾರಿಸಿ ಪರದೇಶಗಳಿಗೆ ರವಾನಿಸುವುದು ಹೆಮ್ಮೆಯ ವಿಷಯವೇ ಎನ್ನುವುದು ಅನುಮಾನಾಸ್ಪದ ಸಂಗತಿ. ಯಾಕೆಂದರೆ, ಇವರ ಮೇಲೆ ಸುರಿದ ಬಂಡವಾಳ ಇತರ ವಿದ್ಯಾರ್ಥಿಗಳನ್ನು ಹಸಿವಿನಲ್ಲಿರಿಸಿ ತೆಗೆದುದು. ಅದಲ್ಲವೆಂದಾದರೆ, ಕೇವಲ ಕೆಲವೇ ಸಂಸ್ಥೆಗಳಲ್ಲಿ ಮಾತ್ರವೇ ಯಾಕೆ ಎಲ್ಲ ವಿದ್ಯಾರ್ಥಿಗಳಿಗೂ ದೊರಕಬೇಕಾದ ಅನುಕೂಲತೆಗಳು ಲಭ್ಯವಾಗುವುದು, ಇನ್ನುಳಿದವಕ್ಕೆ ಅವು ಯಾಕೆ ಅಲಭ್ಯ? ಇದರಿಂದ ಮೊದಲೇ ಅವಕಾಶವಂಚಿತರಾದ ಜನವರ್ಗ ಇನ್ನಷ್ಟು ವಂಚನೆಗೆ ಒಳಗಾಗುವುದಿಲ್ಲವೇ? ದೇಶದ ಸಂಪನ್ಮೂಲಗಳು ಎಲ್ಲರಿಗೂ ಸಮಾನ ಎಂಬ ಮೂಲ ತತ್ವ ಶೈಕ್ಷಣಿಕ ಕ್ಷೇತ್ರಕ್ಕೆ ಅನ್ವಯವಾಗದೆ ಇರುವುದು ದುರದೃಷ್ಟಕರ. ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಕೂತುಕೊಳ್ಳುವುದಕ್ಕೆ ಬೆಂಚುಗಳೇ ಇಲ್ಲ, ಕಲಿಸುವುದಕ್ಕೆ ಅಧ್ಯಾಪಕರೂ ಇಲ್ಲ. ಆದರೆ ನಮ್ಮ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಲ್ಲವೂ ಇವೆ. ಈ ಅಸಮಾನತೆಯನ್ನು ಪ್ರಶ್ನಿಸುವುದಾದರೂ ಎಲ್ಲಿ, ಹೇಗೆ? ಇದೊಂದು ಕೇಳಲು ಯೋಗ್ಯವಾದ ಪ್ರಶ್ನೆಯೆನಿಸುವುದೇ?

ಇಂಥ ಉತ್ತಮಗುಣಮಟ್ಟದ ಸಂಸ್ಥೆಗಳು ಇರಲೇಬಾರದು ಎಂಬುದು ಯಾರ ಅಭಿಪ್ರಾಯವೂ ಅಲ್ಲ. ಚೈನಾದಲ್ಲಿ ನಡೆದ ‘ಸಾಂಸ್ಕೃತಿಕ ಚಳುವಳಿ’ಯ ಸಂದರ್ಭದಲ್ಲಿ ಇಂಥ ಮೂಲಭೂತವಾದಿ ನಿಲುವುಗಳು ಉಂಟುಮಾಡಿದ ವಿನಾಶಕಾರಿ ಪರಿಣಾಮಗಳ ಉದಾಹರಣೆಗಳು ನಮ್ಮ ನೆನಪಿನಲ್ಲಿರುತ್ತ, ಈ ರೀತಿಯ ಧೋರಣೆಯನ್ನು ಯಾರೂ ಪ್ರೋತ್ಸಾಹಿಸುವಂತಿಲ್ಲ. ಉತ್ತಮ ಗುಣಮಟ್ಟ ನಿಜಕ್ಕೂ ಒಳ್ಳೆಯದೇ. ಮಾತ್ರವಲ್ಲ, ಸ್ವಾಯತ್ತತೆಯಿಲ್ಲದಿದ್ದರೆ ವಿಜ್ಞಾನವಾಗಲಿ ಕಲೆಯಾಗಲಿ ಬೆಳೆಯಲಾರದು. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದ ಹಸ್ತಕ್ಷೇಪವೂ ಸರಿಯಾದ ಸಂಗತಿಯಲ್ಲ.

ಆದರೆ ಜ್ಞಾನ ಕೂಡಾ ಕೆಲವೇ ಅವಕಾಶವಾದಿಗಳ ಸೊತ್ತಾಗಕೂಡದು ಎನ್ನುವುದೂ ಅಷ್ಟೇ ಮುಖ್ಯವಾದ ವಿಚಾರ. ಈ ಉನ್ನತ ಸಂಸ್ಥೆಗಳು ಈಗ ನಿಜಕ್ಕೂ ಸಾಮಾನ್ಯರಿಂದ ದೂರ ಸರಿದು, ಭಯಭೀತಿ ಹುಟ್ಟಿಸುವಷ್ಟು ಮೇಲಕ್ಕೆ ಹೋಗಿವೆ. ಇದಕ್ಕೆ ಬದಲು ಇವುಗಳ ಸುತ್ತ ಇರುವ ಔರಾ ಅರ್ಥಾತ್ ಪ್ರಭಾವಳಿಯನ್ನು ತೊಡೆದುಹಾಕಿ ಇವೆಲ್ಲ ಜನಸಾವರಾನ್ಯರಿಗೋಸ್ಕರವೇ ಇವೆ ಎಂಬ ಭಾವನೆ ಮೂಡಬೇಕಾಗಿದೆ. ಹೀಗಾಗಬೇಕಾದರೆ ಇವು ಜನಸಂಪರ್ಕದಲ್ಲಿ ಇರಬೇಕಾಗುತ್ತದೆ. ಪ್ರಧಾನವಾಗಿ, ಈ ಸಂಸ್ಥೆಗಳಿಂದ ಇವುಗಳಿಂದ ಹೊರಬರುವ ಸ್ನಾತಕರಿಂದ ದೇಶಕ್ಕೆ ಕಾಣತಕ್ಕ ಏನಾದರೂ ಉಪಯೋಗವಾಗಬೇಕು. ಉದಾಹರಣೆಗೆ, ಇವರೆಲ್ಲರೂ ಗ್ರಾಮಾಂತರ ಶಾಲೆ ಕಾಲೇಜುಗಳಲ್ಲಿ ಕನಿಷ್ಠ ಒಂದು ವರ್ಷವಾದರೂ ಅಧ್ಯಾಪನ ಸೇವೆ ಸಲ್ಲಿಸಿದ ಮೇಲೆಯೇ ಅರ್ಹತಾಪತ್ರ ಸ್ವೀಕರಿಸಬಹುದು ಎಂಬ ನಿಯಮವಿದ್ದರೆ ಸರಿಯಲ್ಲವೇ? ಈ ವಿಶಿಷ್ಟ ಸಂಸ್ಥೆಗಳು ತಮ್ಮ ಪ್ರತ್ಯೇಕತಾ ಮನೋಭಾವವನ್ನು ಬಿಟ್ಟುಕೊಟ್ಟು ದೇಶದ ಇನ್ನಿತರ ಸೋದರ ಸಂಸ್ಥೆಗಳ ಜತೆ ಸಹಕಾರದಲ್ಲಿ, ಸೇವಾವಿನಿಮಯದಲ್ಲಿ ಕೆಲಸ ನಿರ್ವಹಿಸಬಹುದಲ್ಲವೇ? ಒಟ್ಟಾರೆ ಅರ್ಥವೆಂದರೆ, ಸೌಲಭ್ಯಗಳನ್ನು ಒಂದೆಡೆ ಸೇರಿಸಿ ಪ್ರತ್ಯೇಕ ಶಿಕ್ಷಣವನ್ನು ಕೆಲವೇ ಕೆಲವರಿಗೆ ನೀಡುವುದಾದರೆ, ಅದಕ್ಕೊಂದು ‘ಸೋರುವಿಕೆಯ ಪರಿಣಾಮ’ವಾದರೂ ಇರಬೇಕಾಗುತ್ತದೆ. ಅದಲ್ಲದಿದ್ದರೆ ಇಂಥ ಸಂಸ್ಥೆಗಳು ಶ್ರೇಷ್ಠತೆಯ ವ್ಯಸನದಲ್ಲಿ ಶೈಕ್ಷಣಿಕ ಶ್ರೇಣೀಕರಣಕ್ಕೆ ಕಾರಣವಾಗಿ, ಸಮಾಜದಲ್ಲಿ ಈಗಾಗಲೇ ಇರುವ ವರ್ಗೀಕರಣಕರಣದ ಜಾಗದಲ್ಲಿ ಇಂಥದೇ ಇನ್ನೊಂದನ್ನು ಎಲ್ಲರ ಕಣ್ಣೆದುರೇ, ‘ಎಲ್ಲರೂ ಒಪ್ಪುವ ರೀತಿಯಲ್ಲಿ’ ತಂದಿರಿಸಿದ ಹಾಗಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೫
Next post ಕಾಲ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys