ನೆನಪಿನಂಗಳದಲ್ಲಿ

ನೆನಪಿನಂಗಳದಲ್ಲಿ

ಸೂರ್ಯನು ಮೂಡಣದಲ್ಲಿ ಆಗ ತಾನೆ ಮೇಲೇರತೊಡಗಿದ್ದ. ಮನೆಯ ಹಿಂದಿನ ಮರ ಬೆಳಗಿನ ಸುಳಿಗಾಳಿಯೊಂದಿಗೆ ತೊನೆಯುತ್ತಿತ್ತು. ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನದಿಂದ ಸುರೇಖಳು ಎಚ್ಚೆತ್ತಳು. ತನ್ನ ಮನೆಯ ದೇವರಾದ ಹುಕ್ಕೇರಿ ಮಠದ ಸ್ವಾಮಿಯನ್ನು ಮನದಲ್ಲಿ ನೆನದು, ಮುಖ ತೊಳೆಯಲು ಬಚ್ಚಲು ಮನೆಗೆ ಓಡಿಹೋದಳು. ಬೆಳಗಿನ ಚಹಾವನ್ನು ಮುಗಿಸಿ ಹೊರ ಬರುತ್ತಿದ್ದ ಹಾಗೆಯೇ ಆಕೆಯ ಅಣ್ಣ ಬಿ.ಇಡಿ., ಪರೀಕ್ಷೆಯ ಪ್ರಥಮ ದರ್ಜೆಯಲ್ಲಿ ಪಾಸಾದ ಸುದ್ದಿಯೊಡನೆ ಬಂದ ಸುರೇಖಾ, ಏ….. ಸುರೇಖಾ, ನೀನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೀಯಾ ಕಣೇ ಎನ್ನುತ್ತಿದ್ದಂತೆಯೇ ಎಲ್ಲಿ ಕೊಡೋ ಇಲ್ಲಿ ಪೇಪರ್‍ನ, ನಾನು ನೋಡ್ತೀನಿ ಎಂದು ಅಣ್ಣನಿಂದ ಪೇಪರ್ ಕಸಿದುಕೊಂಡಳು. ಅಲ್ಲಿಗೆ ತಾಯಿ, ತಂದೆ ಹಾಗೂ ಇನ್ನೊಬ್ಬ ಅಣ್ಣ ಎಲ್ಲರೂ ಬಂದು ಸೇರಿದರು. ಸಿಹಿ ಸುದ್ದಿಯನ್ನು ಕೇಳಿ ಎಲ್ಲರೂ ಸಂಭ್ರಮ ಪಟ್ಟರು.

ತಾಯಿಯು ಸಂತೋಷದ ಸಡಗರದಲ್ಲಿ ಗಂಡನ ಬಳಿ ಬಂದು ಏ, ಮಗಳು ದೊಡ್ಡವಳಾಗಿದ್ದಾಳೆ. ಅವಳ ಮದುವೆ ವಿಚಾರವಾಗಿ ಮಾತಾಡುವುದೆಂದು? ಈಗೇನಷ್ಟು ಅವಸರ. ಅವಳಿನ್ನು ಮುಗ್ಧ ಮನಸ್ಸಿನ ಚಿಕ್ಕ ಹುಡುಗಿ. ಅದರ ಬಗ್ಗೆ ನೀನೇನೂ ಯೋಚಿಸಬೇಡ.

ಈ ಗಂಡಸಿಗೆ ಸ್ವಲ್ಪವೂ ಗೊತ್ತಾಗುವುದಿಲ್ಲ. ಬೆಳೆದ ಮಗಳು ಬಹಳ ದಿವ್ಸ ಮನೆಯಲ್ಲಿ ಇಟ್ಕಂಡ್ರೆ ಜನ ಏನಂತಾರೆ? ನಮ್ಮ ಸುರೇಖ ಯಾವುದ್ರಲ್ಲಿ ಕಡಿಮೆ ಇದ್ದಾಳೆ. ಗುಣದಲ್ಲಿ, ರೂಪದಲ್ಲೇನೂ ಕಡಿಮೆ. ವಿದ್ಯಾವಂತೆ, ಈಗ ಬಿ.ಇಡಿ. ಪರೀಕ್ಷೆನೂ ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದಾಳೆ. ಎಲ್ಲಾದ್ರು ಒಂದು ವರ ಇದ್ರೆ ನೋಡ್ರಿ.

ತುಂಬಾ ಗಡಿಬಿಡಿ ಮಾಡ್ತೀಯ ಕಣೇ ನೀನು, ಈಗ್ತಾನೆ ಪಾಸಾಗಿದ್ದಾಳೆ. ಎರಡು ಮೂರು ವರ್ಷ ಕಳೀಲಿ, ನಿಧಾನವಾಗಿ ಒಳ್ಳೆ ವರ ನೋಡೋಣ. ನಿಧಾನ ಅಂದ್ರೆ ಅವಳನ್ನು ಕಾಯ್ಕೊಂಡು ಕುಂತೋನು ಬೇರೆ ಹುಡುಗಿನ ಮದುವೆ ಮಾಡ್ಕೊಳ್ತಾನೆ ಅಷ್ಟೆ.

ಆಶ್ಚರ್ಯ ಪಡುತ್ತಾ “ಯಾರೇ ಅವನು, ಅವಳ ಕಾಯ್ಕೊಂಡಿರೋನು?” “ಅದೇ ಕಂಡ್ರೀ, ಅವನು ಅಂದ್ರೆ ಅವನು” ಗಂಡನ ಸಮೀಪ ಬಂದು ನಿಧಾನವಾಗಿ “ಅದೇ ಪಿ.ಎಲ್.ಡಿ. ಬ್ಯಾಂಕಿನಲ್ಲಿದ್ದಾನ ನನ್ನ ತಮ್ಮ” “ಓಹೋ, ಹೋ, ಅವನಾ! ಗುಮಾಸ್ತ ಶೇಖ್ರಯ್ಯನೋ, ಸರಿ ಬಿಡು, ಗೊತ್ತಾಯ್ತು, ಜೋಬದ್ರಿ, ಅವನಿಗೆ ನನ್ನ ಮಗಳನ್ನು ಕೊಡೋದು ಎಲ್ಲಾದ್ರುಂಟೆ?” “ಏನ್ರೀ ಹಾಗಂತೀರಾ ನನ್ನ ತಮ್ಮನಿಗೆ, ಏನಾಗಿದ್ದಾನೆ ಅವನು? ಕೈಕಾಲು ಸರಿ ಇಲ್ವೇ, ಕೈತುಂಬಾ ಸಂಬಳ ತರಲ್ವೇ.”

“ಸಂಬಳ ತಗಂಡು ಏನ್ಮಾಡ್ತೀಯಾ, ಅವನಿಗೆ ಕಣ್ಣೆ ಸರಿಕಾಣೋಲಲ್ವ, ಏನಾದ್ರೂ ಹುಡುಕಬೇಕಾದ್ರೆ ತಡಕಾಡ್ತಾನೆ, ಅಲ್ವೇ.”

“ಹೇಳಿ, ಹೇಳಿ, ಏನ್‌ಬೇಕಾದ್ರೂ ಹೇಳಿ, ಎಷ್ಟಾದ್ರೂ ನನ್ನ ತಮ್ಮ ನೋಡ್ರಿ ಅದಕ್ಕೆ…”

“ನೋಡು, ನಾನು ಏನು ಹೇಳಿದ್ರು ನಿಂಗೆ ಬೇಜಾರು, ಅದ್ರೆ ನೀನೆ ಒಂದ್ಸಾರಿ ಸುರೇಖಳನ್ನು ಕೇಳಿ ನೋಡು, ಅವಳು ಒಪ್ಪಿದ್ರೆ ನನ್ನದೇನೂ ಅಭ್ಯಂತರವಿಲ್ಲ.”

ಸುರೇಖಳು ಮಾತ್ರ ಇವರ ಮಾತನ್ನು ಪೇಪರ್‌ ಓದುತ್ತಾ ಕೇಳಿಸಿಕೊಳ್ಳುತ್ತಿದ್ದರು. ಅವ್ವ ತನ್ನ ತಮ್ಮನ ಕೊರಳಿಗೆ ನನ್ನ ಗಂಟ್ ಹಾಕ್ತಾಳೆ ಎಂದು ಆಕೆಯ ಹಿಗ್ಗಿದ ಮುಖವು ಬಿಳುಚಿ ಕೊಂಡಿತು. ಕಣ್ಣುಗಳು ನಿಸ್ತೇಜವಾದವು. ಅವಳಿಗೆ ಮುಂದೆ ಎಂ.ಇಡಿ. ಓದುವ ಆಸೆ ಇತ್ತು. ಹೆಚ್ಚಿನ ವ್ಯಾಸಂಗ ಮಾಡಿ ಯಾವುದಾದ್ರೂ ಹಳ್ಳಿಯ ಶಾಲೆ ಸೇರಿ ಅಲ್ಲಿನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಆಸೆ ಇತ್ತು. ಸೇವೆ ಮಾಡುವ ತನ್ನ ಆಸೆಗೆ ಈ ಮದುವೆ ಅಡ್ಡಗೋಡೆಯಾಗಿತ್ತು.

ಅನೇಕ ತೊಂದರೆಗಳನ್ನು ಅನುಭವಿಸಿದ್ದಳು. ಕಷ್ಟ ಪಟ್ಟವರಿಗೆ ಉತ್ತಮ ಪ್ರತಿಫಲವನ್ನು ದೇವರು ನೀಡುವನು ಎಂಬುದಕ್ಕೆ ಸುರೇಖಳ ಫಲಿತಾಂಶವು ಸಾಬೀತುಗೊಳಿಸಿತ್ತು. ಸಂಸಾರವು ಕಡು ಬಡತನದ ಕಷ್ಟವನ್ನು ಈ ಫಲಿತಾಂಶವು ಮರೆಸಿ ಸಂತೋಷದ ಕಡಲಲ್ಲಿ ಮುಳುಗಿಸಿತ್ತು.

ಶ್ರೀ ಕಲ್ಮೇಶ್ವರನ ಆಶ್ರಯದಲ್ಲಿರುವ ಕಲ್ಲೇದೇವರ ಗ್ರಾಮದ ರೈತ, ಬಡತನ ಭೂತವನ್ನು ಹೊತ್ತ ಬಸಯ್ಯ, ಇವನ ಪತ್ನಿ ಕಮಲಾಬಾಯಿ, ಮಕ್ಕಳಾದ ವೀರಯ್ಯ ಯಾವುದೇ ಕೆಲಸವಿಲ್ಲದೆ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಾ ಸಂಸಾರಕ್ಕೆ ಆಸರೆಯಾಗಿರುವ ಮೊದಲನೆಯ ಮಗ.

ಶಿವಯ್ಯನು ಬಡತನ ತಾಳಲಾರದೆ ಮನೆಬಿಟ್ಟು ಹೋದ ಎರಡನೇ ಮಗ. ಮೂರನೆ ಮಗ ರೇವಣಯ್ಯ ಊರಿನ ಶ್ರೀಮಂತರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿರುವನು. ನಾಲ್ಕನೇಯವಳೇ ಮುದ್ದು ಮುಖದ ಮಗಳು ಸುರೇಖ ಇವರನ್ನು ಹೊಂದಿದ ಈ ಬಡ ಕುಟುಂಬಕ್ಕೆ ಎರಡು ಎಕರೆ ಜಮೀನು ಮಾತ್ರ ಆಸರೆಯಾಗಿತ್ತು. ಆದರೇನು ಮಾಡುವುದು? ಎರಡು, ಮೂರು ವರ್ಷಗಳಿಂದ ಮಳೆಯು ಬಾರದೆ ಇದ್ದ ಎರಡು ಎಕರೆ ಬಿತ್ತಿದ ಬೀಜವೆಲ್ಲಾ ಒಣಗಿ ಬೆಳೆ ಇಲ್ಲದೇ ಬರಡಾಗಿತ್ತು. ಇದರಿಂದ ಅವರ ಸಂಸಾರವು ಬಡತನದಲ್ಲಿ ಮುಳುಗಿ ಕಷ್ಟವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಸುರೇಖಳ ಫಲಿತಾಂಶವು ಸಂಸಾರದ ಕಷ್ಟಗಳನ್ನು ಕೆಲವು ದಿನ ಮರೆಸಿತ್ತು.

ಫಲಿತಾಂಶವು ಬಂದ ನಂತರ ಸುರೇಖಳು ತನ್ನ ಪಾಸಾದ ಸರ್ಟಿಫೀಕೇಟು ಅಂಕಪಟ್ಟಿಗಳನ್ನು ತರಲು ಕಾಲೇಜಿಗೆ ಹೋಗಿದ್ದಳು. ಪ್ರಿನ್ಸಿಫಾಲರನ್ನು ಭೇಟಿಯಾದಾಗ “ಏನಮ್ಮಾ ಸುರೇಖ, ಪ್ರಥಮ ದರ್‍ಜೆಯಲ್ಲಿ ಪಾಸಾಗಿದ್ದೀಯ, ಮುಂದೆ ಏನಮ್ಮ ಮಾಡುವೆ?” ಎಂದು ಕೇಳಿದಾಗ, “ಸರ್, ನಾನು ಮುಂದೆ ಎಂ.ಇಡಿ. ಮಾಡುತ್ತೇನೆ. ಯಾವುದಾದರೂ ನಮ್ಮೂರ ಶಾಲೆಗೆ ಸೇರಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಾ ಜೀವನ ನಡೆಸುತ್ತಾ ಹೀಗೆ ದೇಶದ ಸೇವೆಯನ್ನು ಮಾಡುವೆ” ಎಂದು ತಟ್ಟನೆ ಉತ್ತರಿಸಿದಳು.

“ಏನಮ್ಮಾ, ಇಂತಹ ನವ್ಯ ಕಾಲದಲ್ಲಿ ನಿನ್ನಂತಹ ಆದರ್ಶ ಜೀವನದ ಮಹತ್ವಾಕಾಂಕ್ಷೆಯನ್ನು ಹೊಂದಿದ ಮಹಿಳೆಯರು ಇರುವುದು ಬಹಳ ವಿರಳ. ಏನೇ ಆಗಲಿ ಮುಂದೆ ನೀನು ಉತ್ತಮ ಶಿಕ್ಷಕಿಯಾಗು” ಎಂದು ಹಾರೈಸಿದರು.

ಸುರೇಖ ಹುಟ್ಟು ಬಡವಿ, ಯಾವುದೇ ಅಲಂಕಾರವಿಲ್ಲದಿದ್ದರೂ ಆಕೆಯ ರೂಪವು, ಲಾವಣ್ಯ, ಅಪ್ಸರೆಯನ್ನು ಅಣಕಿಸುತ್ತಿತ್ತು. ಈ ರೂಪವಿದ್ದರೂ ಗರ್ವವಿಲ್ಲದೆ, ಗೌರವದ ಮಿತವಾದ ಮಾತುಗಳು, ಗಂಭೀರತನ, ಇವುಗಳೆಲ್ಲವೂ ಆಕೆಯನ್ನು ಸ್ನೇಹಿತೆಯರು ಮೆಚ್ಚುವಂತೆ ಮಾಡಿದ್ದವು.

ತನ್ನ ಪಾಸಾದ ಸರ್ಟಿಫಿಕೇಟನ್ನು ತಂದು, “ಅಪ್ಪಾ ನಾನು ಮುಂದೆ ಎಂ.ಇಡಿ., ಓದುವೆ”ನೆಂದು ಹೇಳಿ ತನ್ನ ಮನದ ಇಂಗಿತವನ್ನು ತೋಡಿಕೊಂಡಳು. ಇದನ್ನು ಕೇಳಿದ ಕೂಡಲೇ ಆಕೆಯ ತಂದೆ ಒಂದು ಕ್ಷಣ ಮೌನವಾಗಿ ಕುಳಿತರು. ಇದನ್ನು ಕಂಡ ಮಗಳು ಗಾಬರಿಯಾಗಿ “ಯಾಕಪ್ಪಾ ನನ್ನ ಮಾತಿನಿಂದ ನಿಮ್ಮ ಮನಸ್ಸಿಗೆ ಬೇಸರವಾಯಿತೇ?” ಎಂದು ಕೇಳಿದಾಗ, ತಂದೆ ಸಾವರಿಸಿಕೊಂಡು “ಇಲ್ಲಮ್ಮ, ನಮ್ಮ ಮನೆಯ ಪರಿಸ್ಥಿತಿ ನಿನಗೆ ಚೆನ್ನಾಗಿ ಗೊತ್ತಿದೆ, ಆದರೂ…” ಎಂದು ಮಾತು ನಿಲ್ಲಿಸಿದ.

ತಂದೆಯ ಮಾತಿನಿಂದ ತನ್ನ ಮುಂದಿನ ವ್ಯಾಸಂಗಕ್ಕೆ ಪೂರ್ಣವಿರಾಮ ಬೀಳುವುದೆಂದು ಯೋಚಿಸುತ್ತಾ ಮನೆಯ ಹಿತ್ತಲಿನಲ್ಲಿರುವ ಕಲ್ಲಿನ ಮೇಲೆ ಕುಳಿತಳು. ಪ್ರಥಮ ದರ್‍ಜೆಯಲ್ಲಿ ಉತ್ತೀರ್ಣರಾದವರಿಗೆ ಸರಕಾರದವರು ವಿದ್ಯಾರ್ಥಿ ವೇತನ ಮತ್ತು ಪುಸ್ತಕದ ಸಹಾಯವನ್ನು ಹೇಗೋ ಮಾಡುವರು. ಇನ್ನು ಡೊನೇಷನ್‌ಗೆ ಎರಡು ಸಾವಿರ ಜೋಡಿಸಿದರಾಯಿತು. ಕೊನೆಗೆ ಉಳಿದ ಖರ್ಚನ್ನು ನಾನು ಮಕ್ಕಳಿಗೆ ಮನೆಯ ಪಾಠ ಹೇಳಿ ನನ್ನ ಖರ್ಚನ್ನು ನಿಭಾಯಿಸಿಕೊಳ್ಳುತ್ತೇನೆಂದು ಯೋಚಿಸಿ ಸಂಜೆ ತಾಯಿ ಇಲ್ಲದ ಸಮಯದಲ್ಲಿ ತನ್ನ ಮನಸ್ಸಿನಲ್ಲಿ ಯೋಚಿಸಿದೆಲ್ಲವನ್ನೂ ತಂದೆಯವರಲ್ಲಿ ತಿಳಿಸಿ ಅವರ ಮನಸ್ಸನ್ನು ಒಲಿಸಿ ಒಪ್ಪಿಗೆಯನ್ನು ಪಡೆದಿದ್ದಳು. ಮಗಳ ಆಸೆ ಆಕ್ಷಾಂಕ್ಷೆಗಳಿಗೆ ತಂದೆಯು ಸಂತೋಷಪಟ್ಟಿದ್ದರು. ಆದರೂ ಬಡತನದ ಭೂತಕ್ಕೆ ಬಲಿಯಾಗಿ ಒಪ್ಪತ್ತು ಊಟಕ್ಕೆ ಗತಿಯಿಲ್ಲದಿದ್ದರೂ, ಮಗಳ ಪ್ರತಿಭೆ ಕಮರಬಾರದೆಂದು ಒಪ್ಪಿಗೆ ನೀಡಿದ್ದರು. ಈ ವಿಷಯದಿಂದ ಸುರೇಖ ಸಂತೋಷದ ಕಡಲಲ್ಲಿ ಮುಳುಗಿದ್ದಳು.

ಮಾರನೇ ದಿನ ಬೆಳಿಗ್ಗೆ ಸಂತೋಷದಿಂದ ಸ್ನಾನ ಮುಗಿಸಿ ತನ್ನ ರೂಮಿನಲ್ಲಿ ಯಾವುದೋ ಭಾವಗೀತೆಯನ್ನು ಗುನುಗುತ್ತಾ ಒದ್ದೆಯಾದ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದಳು. ಅದೇ ಹೊತ್ತಿಗೆ ಪಿ.ಎಲ್.ಡಿ. ಬ್ಯಾಂಕಿನ ಗುಮಾಸ್ತ ಆಕೆಯ ತಾಯಿಯ ತಮ್ಮ ಶೇಖರಯ್ಯ ಬಂದ, “ಸುರೇಖಾ, ಏನು? ಬಹಳ ಖಷಿಯಾಗಿದ್ದೀಯಾ? ಏನು ಸಮಾಚಾರ.”

“ಏನೂ ಇಲ್ಲ. ಹಾಗೆ ಸುಮ್ಮನೆ ಗುನುಗುನು ಅಂತಿದ್ದೆ ಅಷ್ಟೆ”

“ನಿನ್ನ ಬಿ.ಇಡಿ. ರಿಜಲ್ಟ್ ಏನಾಯ್ತು.”

“ಫಸ್ಟ್‌ಕ್ಲಾಸ್”

ಅದಕ್ಕೆ ಅವನು “ಅದ್ಸರಿ, ನಿನ್ನ ಓದು ಮುಗಿದಿದೆ. ನಾನೂ ಇನ್ನೂ ಮದುವೆಯಾಗಿಲ್ಲ. ನಿನಗೋಸ್ಕರ ಕಾದಿದ್ದೆ. ನೀನು ನನ್ನ ಪತ್ನಿಯಾಗಿ ನನ್ನ ಮನೆ, ಮನವನ್ನು ತುಂಬು” ಎಂದು ಕೇಳಿದ. ಆಕೆಯು ಇವನ ಮಾತಿನಿಂದ ಸ್ವಲ್ಪವೂ ವಿಚಲಿತಳಾಗಲಿಲ್ಲ. ಹೇಗಾದರೂ ತನ್ನ ಪರವಾಗಿ ಅಪ್ಪಾ ಇದ್ದಾರೆ. ಆ ಧೈರ್ಯದ ಮೇಲೆ “ಇಲ್ಲ ಶೇಖರ್, ನಾನು ಮುಂದೆ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಬೇಕು. ನಾನು ನಿನಗೆ ಸರಿಜೋಡಿಯಾಗಲಾರೆ, ನಿನಗೆ ಸರಿಹೊಂದುವ ಬೇರೆ ಹುಡುಗಿಯನ್ನು ಮದುವೆ ಮಾಡ್ಕೋ” ಎಂದು ಕಡ್ಡಿ ಮುರಿದಂತೆ ಹೇಳಿದಳು. ಈ ಮಾತಿನಿಂದ ನಾನಾ ಆಸೆ ಹೊತ್ತ ಶೇಖರಯ್ಯನು ಗಾಳಿ ಹೋದ ಬಲೂನಿನಂತಾದ. ಮನಸ್ಸಿಲ್ಲದೇ ಮದ್ಯಾಹ್ನದ ಊಟವನ್ನು ಗಂಟಲಲ್ಲಿ ಇಳಿಸಲಾರದೇ ಭಾರವಾದ ಮನಸ್ಸಿನಿಂದ ತನ್ನೂರಿಗೆ ಹಿಂತಿರುಗಿದನು.

ಇದೆಲ್ಲವನ್ನೂ ತಿಳಿದ ಕಮಲಾಬಾಯಿ ತನ್ನ ಗಂಡನೊಂದಿಗೆ ಸಿಡಿಮಿಡಿಗೊಂಡಿದ್ದಳು. ಎಲ್ಲಾ ವಿಷಯಗಳನ್ನು ಹೆಂಡತಿಗೆ ವಿವರವಾಗಿ ಬಸಯ್ಯನು ತಿಳಿಸಿ ಮಗಳ ಮುಂದಿನ ವ್ಯಾಸಂಗಕ್ಕೆ ಒಪ್ಪಿಸಿದ್ದನು.

ತಂದೆಯು ಅಲ್ಪಸ್ವಲ್ಪ ಉಳಿಸಿದ್ದ ಹಣವನ್ನು ತೆಗೆದುಕೊಂಡು ಸುರೇಖಳು ಸಂತೋಷದಿಂದ ಧಾರವಾಡದ ಎಂ.ಇಡಿ., ಕಾಲೇಜಿಗೆ ಸೇರಿದ್ದಳು. ಆಕೆಯ ಚಟುವಟಿಕೆಯಿಂದ ತಂದೆಯು ತಮ್ಮ ಬಡತನವನ್ನು ಮರೆತು ಮಗಳ ಓದಿಗೆ ತೊಂದರೆಯಾಗದಂತೆ ಹಣದ ಸಹಾಯವನ್ನು ಮಾಡುತ್ತಿದ್ದನು. ಅಂತೂ ಕೊನೆಗೆ ಆ ಕಾಲೇಜಿಗೆ ಪ್ರಥಮಳಾಗಿ ಉತ್ತೀರ್ಣ ಹೊಂದಿದ ಕೀರ್ತಿಯನ್ನು ಹೊತ್ತು ಮನೆಗೆ ಬಂದಾಗ ತಂದೆ, ತಾಯಿಗಳು ಎಲ್ಲಿಲ್ಲದ ಸಡಗರವನ್ನು ಹೊಂದಿದ್ದರು. ಅಂದು ಮದ್ಯಾಹ್ನ ಕಾಲೇಜಿನಿಂದ ಬರುತ್ತಿದ್ದ ಸುರೇಖಳನ್ನು ಕಂಡು ಸೋಮಣ್ಣ

“ಹಲ್ಲೋ ಸುರೇಖ ಹೇಗಿದ್ದೀರಿ?”

“ಚೆನ್ನಾಗಿದ್ದೇನೆ. ನೀವು ಹೇಗಿದ್ದೀರ?” ಎಂದಳು ಸುರೇಖ.

“ನೀವು ಪ್ರಾಕ್ಟಿಕಲ್ಸ್ ಹೇಗೆ ಮಾಡಿದ್ದೀರ?” ಎಂದ.

“ಚೆನ್ನಾಗಿ ಮಾಡಿದ್ದೇನೆ. ಸುಮಾರು ೮೦-೮೫ ಪರಸೆಂಟ್ ಬರಬಹುದು.”

“ಥಿಯರಿ?”

“ಅದು ಕೂಡ ಅಷ್ಟೇ ಬರಬಹುದು”

“ನೀವು ಹೇಗೆ ಮಾಡಿದ್ದೀರ?” ಎಂದಳು ಸುರೇಖ.

“ನನ್ನದು ಎರಡೂ ಎಂಭತ್ತೈದು ತೊಂಭತ್ತರ ಹತ್ತಿರ ಬರಬಹುದು.” ಸ್ವಲ್ಪ ದೂರ ಮೌನವಾಗಿ ನಡೆದರು. ನಂತರ ಸುರೇಖಳೇ ಮಾತಿಗಾರಂಭಿಸಿದಳು.

“ಮುಂದೇನ್ಮಾಡ್ತೀರಿ?”

“ನಾನಾ!”

“ಹೌದು ನೀವೇ”

“ಎಲ್ಲಾದ್ರು ಮೇಷ್ಟ್ರು ಕೆಲ್ಸ ಸಿಕ್ಕರೆ ಮಾಡೋದು”

“ನೀವೇನ್ಮಾಡ್ತೀರಿ” ಎಂದ ಸೋಮಣ್ಣ.

“ಹೇಗೂ ೮೦-೮೫ ಪರಸೆಂಟ್ ಬರುತ್ತೆ, ನಮ್ಮೂರ ಶಾಲೆಯಲ್ಲಿ ಸಿಕ್ಕರೆ ಅಲ್ಲಿ ಟೀಚರ್ ಕೆಲಸ ಮಾಡ್ತೀನಿ.”

“ಏನ್ರಿ ಎಲ್ರೂ ಪಟ್ಟಣದ ಶಾಲೆ ಇಷ್ಟಪಟ್ಟರೆ ನೀವು ಮಾತ್ರ ಹಳ್ಳಿ ಶಾಲೆ ಲೈಕ್ ಮಾಡ್ತೀರಲ್ರಿ”

“ಹೌದು!, ನಾನು ಬೆಳೆದಿದ್ದು ಹಳ್ಳಿಲಿ, ಹಳ್ಳಿ ಮಕ್ಕಳು ಶಿಕ್ಷಣಕ್ಕೆ ಪೇಟೆಗೆ ಹೋಗ್ಬೇಕು. ನಾವು ಹಳ್ಳಿಲೇ ಇದ್ದು ಅವರನ್ನು ವಿದ್ಯಾವಂತರನ್ನಾಗಿ ಮಾಡುವುದೇ ನನ್ನ ಉದ್ದೇಶವಾಗಿದೆ. ಇದಕ್ಕೆ ನೀವೇನು ಹೇಳ್ತೀರಿ?”

“ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ನನ್ನ ಉದ್ದೇಶವೂ ಅದೇ ಆಗಿದೆ. ಆದರೆ…”

“ಆದರೆ ಅಂತಾ ನಿಲ್ಲಿಸಿಬಿಟ್ರಲ್ಲಾ, ಮುಂದೆ ಹೇಳಿ?”

“ನನಗೂ ನಿಮ್ಜೊತೆ ಅವಕಾಶ ಕೊಟ್ರೆ…” ಎಂದು ರಾಗ ಎಳೆದು ಮಾತು ನಿಲ್ಲಿಸಿದ.

“ಏನ್ರೀ ನೀವು ನನ್ನ ಜೊತೆ ಇರ್‍ತೀರಾ?”

“ಯಾಕಾಗಬಾರ್‍ದು? ನಾನು ಮನುಷ್ಯನಲ್ವೇ, ನನಗೂ ಹೃದಯವಿಲ್ವೇ, ಭಾವನೆ ಇಲ್ವೇ ಹೇಳಿ?”

“ಒಳ್ಳೆ ಕವಿ ತರ ಮಾತಾಡ್ತೀರಿ ಅಲ್ವೇ”

“ಕವೀನೂ ಅಲ್ಲ, ಕಪೀನೂ ಅಲ್ಲ, ಏನೋ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡ್ದೆ. ಯಾವುದೋ ಆಸೆ ತುಡಿತಾ ಇತ್ತು ಮನದೊಳಗೆ ಅಷ್ಟೆ”

ಈ ಮಾತಿನಿಂದ ಇವರು ನನ್ನನ್ನು ಪ್ರೀತಿಸುತ್ತಿದ್ದಾರೆಂದು ತಿಳಿದಳು. ಮನದಲ್ಲಿಯೇ ಸಂತೋಷಪಟ್ಟಳು. ಇಬ್ಬರ ಆಸೆ ಒಂದೇ ಆಗಿ ಅವರೀರ್‍ವರ ಹೃದಯಗಳು ಪ್ರೇಮಿಸತೊಡಗಿದ್ದವು. ಇವರನ್ನು ಮದುವೆಯಾದರೆ ಸುಖವಾಗಿರಬಹುದೆಂದು ಯೋಚಿಸಿ, ಸ್ವಲ್ಪ ದೂರ ಹೋದ ಮೇಲೆ ಸುರೇಖಳೇ ಧೈರ್‍ಯ ಮಾಡಿ “ಹೇಗೂ ನನ್ನ ಜೊತೆ ಇರ್‍ತೀನಿ ಅಂತಾ ಹೇಳಿದ್ರಲ್ಲ ಅದಕ್ಕೆ ನಿಮ್ಮ ಹತ್ತಿರ ಒಂದು ಮಾತು ಕೇಳ್ತೀನಿ” ಎಂದಳು.

“ಕೇಳಿ, ಒಂದು ಮಾತು ಏಕೆ? ಹತ್ತು ಮಾತು ಕೇಳಿ”

“ಹಾಗಾದರೆ ನೀವು…. ನೀವು…….. ನನ್ನನ್ನು ಪ್ರೀತಿಸ್ತೀರಿ ಅಂದಂಗಾಯ್ತು ಅಲ್ವೇ”

“ಏನೋ ನನ್ನ ಹೃದಯ ಹಾಗೆ ಹೇಳ್ತಾ ಇದೆ.”

“ಅಂದ ಹಾಗೆ ನೀವು ನನ್ನನ್ನ ಮದುವೆ ಮಾಡ್ಕೊಬಹುದಲ್ವೇ.” ಈ ಮಾತಿಗೆ ಸೋಮಣ್ಣನ ಎದೆ ಬಡಿತ ಹೆಚ್ಚಾಯಿತು. ತೋರಿಸಿಕೊಳ್ಳದೆ ಒಂದು ಕ್ಷಣ ಸುಮ್ಮನಾದ. “ಏಕೆ ಸುಮ್ಮನಾಗಿ ಬಿಟ್ಟಿರಿ. ನನ್ನ ಮಾತಿನಿಂದ ನಿಮಗೆ ಬೇಸರವಾಯಿತೇನೋ”

“ಇಲ್ಲಾ ಸುರೇಖ! ಏನು ಬೇಜಾರು ಇಲ್ಲ! ಮನೆಯಲ್ಲಿ ಅಪ್ಪ, ಅಮ್ಮನನ್ನು ವಿಚಾರಿಸಿ ತಿಳಿಸುತ್ತೇನೆ” ಎಂದ. ಅಷ್ಟರಲ್ಲಿಯೇ ಸುರೇಖಾಳ ತಂದೆಯು ದೂರದಲ್ಲಿ ಅನಿರೀಕ್ಷಿತವಾಗಿ ಬರುವುದು ಕಂಡಿತು. ಅವರಿಬ್ಬರು ಬೇರೆ ಬೇರೆಯಾಗಿ ಅವರವರ ರೂಮಿಗೆ ಹೋದರು.

ಮಗಳು ವಯಸ್ಸಿಗೆ ಬಂದಿದ್ದಾಳೆ. ಆಕೆಯ ಮದುವೆ ಮಾಡಬೇಕೆಂದು ಹೆಂಡತಿಯು ಹಿಂದೆ ಹೇಳಿದ ಮಾತು ನೆನಪಾಗಿ ಮಗಳ ಜೊತೆಯಿದ್ದ ಸ್ಪುರದ್ರೂಪಿಯಾದ ಯುವಕನನ್ನು ದೂರದಿಂದಲೇ ಗಮನಿಸಿ ಈ ಜೋಡಿ ಮುಂದೆ ಇದೇ ರೀತಿ ನಿಜ ಜೀವನದಲ್ಲಿ ಮುಂದುವರೆದರೆ ಒಳ್ಳೆಯದು ಎಂದು ಸಂತೋಷಗೊಂಡಿದ್ದ. ಇದನ್ನು ತೋಡಿಸದೆ “ಏನಮ್ಮಾ ಮಗು, ನಿನ್ನ ಜೊತೆ ಬಂದರಲ್ಲ ಅವರು ಯಾರಮ್ಮಾ?” ಎಂದು ಕೇಳಿದರು. ಅವಳು ಸ್ವಲ್ಪ ತಬ್ಬಿಬ್ಬಾಗಿ ಒಂದು ಕ್ಷಣ ಸುಮ್ಮನಿದ್ದು, “ಅವರು ನನ್ನ ಕ್ಲಾಸ್‌ಮೇಟ್ ಕಣಪ್ಪಾ.” ಸ್ವಲ್ಪ ಹೊತ್ತು ಬಿಟ್ಟು ನಿಧಾನವಾಗಿ “ಅಪ್ಪಾ… ಅವರು ನನ್ನ ಉತ್ತಮ ಸ್ನೇಹಿತರು” ಎಂದು ತಿಳಿಸಿ ತನ್ನ ಮನದಾಸೆಯನ್ನು ವ್ಯಕ್ತಪಡಿಸಿದಳು.

ಆಕೆಯ ಮನದ ಇಂಗಿತವನ್ನು ಅರಿತು ಬಸಯ್ಯನು ತನ್ನ ಮಗಳು ಜೀವನದ ಸಂಗಾತಿಯನ್ನು ಆರಿಸುವುದರಲ್ಲಿ ಗೆದ್ದಿದ್ದಾಳೆ. ಅವಳಿಗೆ ಒಪ್ಪಿಗೆ ನೀಡುವುದರೊಂದಿಗೆ ಅವಳನ್ನು ರೂಂ ಖಾಲಿ ಮಾಡಿಸಿ ಊರಿಗೆ ಕರೆದುಕೊಂಡು ಹೋದರು. ಎಲ್ಲರನ್ನು ಒಪ್ಪಿಸಿ ಅವಳ ಮನದಿನಿಯನೊಂದಿಗೆ ಫಲಿತಾಂಶ ಬಂದ ಹದಿನೈದು ದಿವಸಗಳಲ್ಲಿಯೇ ಮದುವೆಯನ್ನು ಸರಳ ಸಮಾರಂಭದಲ್ಲಿ ನಡೆಸಿಯೇ ಬಿಟ್ಟರು. ಸೋಮಣ್ಣನ ತಂದೆ, ತಾಯಿ ಸಂತೋಷದಿಂದ ಮಗ ಮತ್ತು ಸೊಸೆಯನ್ನು ಮನತುಂಬಿ ಹರಸಿದರು. ಸ್ನೇಹಿತರು ಅವರನ್ನು ಅಭಿನಂದಿಸಿದರು. ಮದುವೆಗೆ ಬಂದಿದ್ದ ಪ್ರಿನ್ಸಿಪಾಲರಿಗೆ ಇಬ್ಬರೂ ಕಾಲಿಗೆ ಬಿದ್ದು ನಮಸ್ಕರಿಸಿದರು. “ನಿಮ್ಮಂತಹ ಶಿಷ್ಯರು ನನಗೆ ಮುಂದೆಂದೂ ಸಿಗುವುದಿಲ್ಲ ಕಣಪ್ಪ, ದೇವ್ರು ನಿಮ್ಮನ್ನ ಚೆನ್ನಾಗಿಟ್ಟಿರಲಿ” ಎಂದು ಸಂತೋಷದಿಂದ ಆಶೀರ್ವದಿಸಿದರು.

ಅವರೀರ್‍ವರು ತಮ್ಮ ಹುಟ್ಟೂರಾದ ಕಲ್ಲೇದೇವರು ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅಲ್ಲಿನ ಮಣ್ಣಿನ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಜೀವನವನ್ನು ನಡೆಸುತ್ತಾ ಊರಿನ ಜನರ ಬಾಳಿಗೆ ಬೆಳಕಾಗಿ ಅವರಿಗೆ ಮಾರ್‍ಗದರ್‍ಶನ ನೀಡುತ್ತಾ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಈಗ ತನ್ನ ಎರಡು ಮುದ್ದು ಮಕ್ಕಳೊಂದಿಗೆ ಆಡುತ್ತಾ ತಮ್ಮ ಕಷ್ಟದ ದಿನಗಳ ನೆನಪನ್ನು ಮೆಲಕು ಹಾಕುತ್ತಿದ್ದಾಳೆ ಸುರೇಖಾ………
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪ್ಪಿನಕಾಯಿ
Next post ಕುಡಿಯಬೇಕು ನೀರು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…