ರಂಗಣ್ಣನ ಕನಸಿನ ದಿನಗಳು – ೨೪

ರಂಗಣ್ಣನ ಕನಸಿನ ದಿನಗಳು – ೨೪

ಉಗ್ರಪ್ಪನ ಸಸ್ಪೆನ್ಷನ್

ಜನಾರ್ದನಪುರಕ್ಕೆ ಹಿಂದಿರುಗಿದಮೇಲೆ ರಂಗಣ್ಣ ಪೊಲೀಸ್ ಇನ್ಸ್ಪೆಕ್ಟರ ಮನೆಗೆ ಹೋಗಿ ಪಾಠಶಾಲೆಯಲ್ಲಿ ನಡೆದುದನ್ನೆಲ್ಲ ತಿಳಿಸಿದನು. ಆ ಉಗ್ರಪ್ಪನ ವಿಚಾರದಲ್ಲಿ ಸಸ್ಪೆಂಡ್ ಮಾಡುವ ತೀವ್ರವಾದ ಕಾರ್ಯಕ್ರಮವನ್ನು ತೆಗೆದುಕೊಳ್ಳಬೇಕಾಗಿರುವುದೆಂದೂ, ಅದಕ್ಕೆ ಪ್ರತಿ ಕ್ರಿಯೆಯಾಗಿ ಅವನು ಪುಂಡಾಟ ನಡೆಸದಂತೆ ಕ್ರಮ ಕೈಗೊಳ್ಳಬೇಕೆಂದೂ ತಿಳಿಸಿದನು. ಪೊಲೀಸ್ ಇನ್ಸ್ಪೆಕ್ಟರು, ‘ನೋಡಿ ರಂಗಣ್ಣನವರೇ! ಆ ಮನುಷ್ಯನ ಮೇಲೆ ಬಹಳ ಪುಕಾರುಗಳಿವೆ. ನಾವು ಕೆಟ್ಟ ದಾರಿಗೆ ಹೋಗಬಾರದು, ನಿಮ್ಮ ಇಲಾಖೆಯವರಿಗೆ ತಿಳಿಸಿ ಬಂದೋಬಸ್ತು ಮಾಡೋಣ ಎಂದು ಎರಡು ಮೂರು ಸಲ ಪ್ರಯತ್ನ ಪಟ್ಟೆವು. ಪ್ರಯೋಜನವಾಗಲಿಲ್ಲ. ನಿಮ್ಮ ಇಲಾಖೆಯವರೇ ಅವನನ್ನು ವಹಿಸಿಕೊಂಡು ಬಂದರು; ಜನಾರ್ದನಪುರದಲ್ಲಿಯೇ ಇಟ್ಟರು. ಈಗ ನೀವೇನೋ ಸಸ್ಪೆಂಡ್ ಮಾಡುತ್ತೇನೆ, ಮುಂದೆ ಈ ರೇಂಜ್ ಮಾತ್ರವಲ್ಲ, ಈ ಡಿಸ್ಟ್ರಿಕ್ಟೇ ತಪ್ಪಿಸಿ ವರ್ಗಮಾಡಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಆಗಲಿ ನೋಡೋಣ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಆದರೆ ನೀವು ನನಗೆ ಒಂದು ರಹಸ್ಯದ ಕಾಗದ ಬರೆದು ಸಹಾಯಬೇಕೆಂದು ಕೇಳಬೇಕು. ಯಾವುದೊಂದು ದಾಖಲೆಯೂ ಇಲ್ಲದೆ ನಾನು ಜವಾಬ್ದಾರಿ ತೆಗೆದುಕೊಳ್ಳಲಾರೆ’ ಎಂದು ತಿಳಿಸಿದರು. `ಆಗಲಿ, ಬರೆದು ಕಳಿಸುತ್ತೇನೆ’ ಎಂದು ಹೇಳಿ ರಂಗಣ್ಣ ಹೊರಟುಬಂದನು.

ಒಂದು ವಾರವಾಯಿತು. ಉಗ್ರಪ್ಪನಿಂದ ಇನ್ಸ್ಪೆಕ್ಟರಿಗೆ ನೇರವಾಗಿ ಒಂದು ಕಾಗದ ಬಂತು. ಅದರಲ್ಲಿ,` ನೀವು ಹೆಡ್‌ಮೇಷ್ಟರ ಚಾಡಿ ಮಾತುಗಳನ್ನು ಕೇಳಿಕೊಂಡು ನನ್ನ ಮೇಲೆ ಇಲ್ಲದ ಆರೋಪಣೆಗಳನ್ನು ಹೊರಿಸಿ ಸಮಜಾಯಿಷಿ ಕೇಳಿದ್ದೀರಿ. ನಾನು ನಿರಪರಾಧಿ’ ಎಂದು ಬರೆದಿತ್ತು.

ರಂಗಣ್ಣ ಅದನ್ನು ಕಡತಕ್ಕೆ ಸೇರಿಸಿ ಕಚೇರಿಯನ್ನು ಬಿಟ್ಟು ಪ್ರೈಮರಿ ಸ್ಕೂಲಿಗೆ ಹೊರಟನು. ಹೆಡ್ಮಾಸ್ಟರ ಕೊಟಡಿಯಲ್ಲಿ ಕುಳಿತುಕೊಂಡು ಉಪಾಧ್ಯಾಯರ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನು ನೋಡತ್ತಿದ್ದಾಗ ಉಗ್ರಪ್ಪ ಅಲ್ಲಿಗೆ ಬಂದು ನಿಂತುಕೊಂಡನು. ಇನ್ ಸ್ಪೆಕ್ಟರಿಗೆ ನಮಸ್ಕಾರವನ್ನೇನೂ ಮಾಡಲಿಲ್ಲ. ಕಣ್ಣುಗಳನ್ನು ಅಗಲವಾಗಿ ಅರಳಿಸಿ ಕೊಂಡು ಇನ್ಸ್ಪೆಕ್ಟರನ್ನು ನೋಡಿದನು.

`ಏನು ಉಗ್ರಪ್ಪನವರೇ! ಹಾಗೇಕೆ ಕಣ್ಣರಳಿಸಿ ನನ್ನನ್ನು ನುಂಗುವ ಹಾಗೆ ನೋಡುತ್ತೀರಿ?’

`ನನ್ನನ್ನು ಅವಿಧೇಯನೆಂದು ಹೇಳೋಣಾಯಿತು. ನನ್ನ ಸಮಜಾಯಿಷಿ ಕೇಳೋಣಾಯಿತು! ಅ೦ಧ ಮಹಾಪುರುಷರನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು! ಇರುವ ಕಣ್ಣುಗಳನ್ನೇ ದೊಡ್ಡದು ಮಾಡಿಕೊಂಡು ನೋಡುತ್ತಿದೇನೆ!’

`ಹಾಗೆಲ್ಲ ಒರಟೊರಟಾಗಿ ಮಾತನಾಡಬಾರದು.’

`ಮಾತನಾಡುವ ರೀತಿಯನ್ನು ತಮ್ಮಿಂದ ಕಲಿಯಬೇಕಾಗಿಲ್ಲ.’

`ಇದು ಅವಿಧೇಯ ವರ್ತನೆ! ಸಭ್ಯತೆಯಿಂದ ನಡೆದುಕೊಳ್ಳಿ!’

`ರೂಲ್ಸು ರೆಗ್ಯುಲೇಷನು ತಿಳಿಯದೆ ಕಾರುಬಾರು ಮತ್ತು ದಬ್ಬಾಳಿಕೆ ನಡೆಸುವ ದರ್ಪದವರಿಗೆಲ್ಲ ನಾನು ಅವಿಧೇಯನೇ! ನೀವು ಬೇಕಾದ್ದು ಮಾಡಿಕೊಳ್ಳಿ. ನಾನೂ ನಿಮಗೆ ತಕ್ಕದ್ದನ್ನು ಮಾಡುವ ಶಕ್ತಿ ಪಡೆದಿದ್ದೇನೆ. ಶೀಘ್ರದಲ್ಲಿಯೇ ಅದು ನಿಮ್ಮ ಅನುಭವಕ್ಕೆ ಬರುತ್ತದೆ.’

ರಂಗಣ್ಣ ಮುಂದೆ ಮಾತಾಡದೆ ಕಚೇರಿಗೆ ಹೊರಟುಬಂದನು. ಸಸ್ಪೆಂಡ್ ಮಾಡಿರುವ ಆರ್ಡರನ್ನು ಹೊರಡಿಸಿ, ಪೊಲೀಸ್ ಇನ್ಸ್ಪೆಕ್ಟರಿಗೂ ಕಾಗದವನ್ನು ಬರೆದು ಆಳುಗಳ ಮೂಲಕ ಮುದ್ದಾಂ ಕಳಿಸಿಕೊಟ್ಟನು. ಸುಮಾರು ಒಂದು ಗಂಟೆಯೊಳಗಾಗಿ ಜನಾರ್ದನಪುರದಲ್ಲೆಲ್ಲ ದೊಡ್ಡ ಕೋಲಾಹಲವುಂಟಾಯಿತು! ಬೆಳಗ್ಗೆ ಹತ್ತೂವರೆ ಗಂಟೆಯಾಗಿದ್ದುದರಿಂದ ಪಾಠಶಾಲೆಯನ್ನು ಬಿಟ್ಟು ಬಿಟ್ಟಿದ್ದರು. ಆದರೆ, ಅದರ ಹತ್ತಿರ ಜನ ಗುಂಪು ಕಟ್ಟಿತ್ತು. ಪೊಲೀಸ್ ಕಾನ್ ಸ್ಟೇಬಲ್ಲುಗಳು ಜನರನ್ನು ಬೆದರಿಸುತ್ತ ಇದ್ದರು. ಉಗ್ರಪ್ಪನು ತನಗೆ ಇನ್‌ಸ್ಪೆಕ್ಟರು ಹಿಂದಿನವರಂತೆ ಹೆದರಿಕೊಳ್ಳುವರೆಂದೂ ದಂಡನೆ ಇತ್ಯಾದಿಗಳ ಗೋಜಿಗೆ ಹೋಗದೆ ವರ್ಗಕ್ಕೆ ಮಾತ್ರ ಶಿಫಾರಸು ಮಾಡಬಹುದೆಂದೂ ತಿಳಿದುಕೊಂಡು ಧೈರ್ಯವಾಗಿದ್ದನು. ಆದರೆ ಹಠಾತ್ತಾಗಿ ಸಸ್ಪೆಂಡ್ ಮಾಡಿದ ಆರ್ಡರು ಬಂದು ಹೆಡ್ ಮಾಸ್ತರು ಅದನ್ನು ಓದಿ ಹೇಳಿ ಅದರ ನಕಲನ್ನು ಕೈಗೆ ಕೊಟ್ಟಾಗ ಕ್ಷಣ ಕಾಲ ಸ್ತಬ್ದನಾಗಿ ನಿಂತುಬಿಟ್ಟನು! ಬಳಿಕ ಮಹಾ ಕೋಪದಿಂದ ಹೆಡ್‌ಮೇಷ್ಟರ ಮೇಲೆ ಬಿದ್ದು ಹೊಡೆಯುವುದಕ್ಕೆ ಹೋದನು. ಆ ಹೆಡ್ ಮೇಷ್ಟ್ರು ಬೀದಿಗೆ ಓಡಿ ಬಂದು ಕಿರಿಚಿಕೊಂಡನು! ಜನ ಸೇರಿಬಿಟ್ಟರು. ಅಷ್ಟರಲ್ಲಿ ದಫೇದಾರನೊಬ್ಬನು ನಾಲ್ಕು ಜನ ಕಾನ್ ಸ್ಟೇಬಲ್ಲುಗಳೊಡನೆ ಅಲ್ಲಿಗೆ ಬಂದನು. ಉಗ್ರಪ್ಪನಿಗೆ ಸಸ್ಪೆಂಡ್ ಆಗಿರುವ ವಿಚಾರ, ಅವನು ಹೆಡ್‌ಮೇಷ್ಟರನ್ನು ಹೊಡೆಯ ಹೋದುದು, ಪೊಲೀಸಿನವರು ಬಂದುದು – ಎಲ್ಲವೂ ಊರಿನಲ್ಲಿ ಹರಡಿ ಹೋಯಿತು! ದಫೇದಾರನು ಉಗ್ರಪ್ಪನನ್ನು ಸಮಾಧಾನಗೊಳಿಸಿ, ಪಾಠ ಶಾಲೆಯ ಹತ್ತಿರ ಗಲಾಟೆ ಮಾಡದೆ ಹೊರಟುಹೋಗಬೇಕೆಂದು ತಿಳಿಸಿದನು; ಏನಾದರೂ ಹೇಳಿಕೊಳ್ಳುವ ಅಹವಾಲಿದ್ದರೆ ಇನ್ಸ್ಪೆಕ್ಟರ್ ಸಾಹೇಬರ ಹತ್ತಿರ ಹೋಗಬಹುದೆಂದು ಬುದ್ದಿ ಹೇಳಿದನು; ಬೀದಿಯಲ್ಲಿ ಏನಾದರೂ ಮಾರಾಮಾರಿ ನಡೆಸಿ ಶಾಂತಿ ಭಂಗ ಮಾಡುವುದಾದರೆ ದಸ್ತಗಿರಿ ಮಾಡಿ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದನು. ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪ ಮತ್ತು ಇತರರು ಉಗ್ರಪ್ಪನನ್ನು ಸಮಾಧಾನಗೊಳಿಸಿ ಕಚೇರಿಯ ಬಳಿಗೆ ಹೋಗೋಣವೆಂದು ಕರೆದುಕೊಂಡು ಹೊರಟರು. ಹಿಂದೆ ಜನರ ಗುಂಪೂ ಹೊರಟಿತು. ಆದರೆ ಕಚೇರಿಯ ಹತ್ತಿರ ಇಬ್ಬರು ಕಾನ್ ಸ್ಟೇಬಲ್ಲುಗಳು ಮಾತ್ರ ಇದ್ದರು. ಇನ್‌ಸ್ಪೆಕ್ಟರು ಮನೆಗೆ ಹೊರಟು ಹೋಗಿದ್ದರು. ಆದ್ದರಿಂದ ಚೆನ್ನಪ್ಪನೂ ಉಗ್ರಪ್ಪನೂ ರಂಗಣ್ಣನ ಮನೆಯ ಕಡೆಗೆ ಹೊರಟರು. ಪೇಟೆಯ ಬೀದಿಗಳಲ್ಲಿ ಜನರ ಗುಂಪು ಹಿಂದೆ ಹಿಂದೆ ಹೋಗುತ್ತಿದ್ದುದರಿಂದ ಸಸ್ಪೆಂಡ್ ಆಗಿರುವ ವಿಚಾರವನ್ನು ಬೇರೆ ರೀತಿಗಳಲ್ಲಿ ಪ್ರಕಟಮಾಡಬೇಕಾಗಿಯೇ ಇರಲಿಲ್ಲ! ಕಡೆಗೆ ಕೆರೆಯ ಹತ್ತಿರ ಪಾತ್ರೆಗಳನ್ನು ಬೆಳಗುತ್ತಿದ್ದ ಮತ್ತು ಬಟ್ಟೆಗಳನ್ನು ಒಗೆಯುತ್ತಿದ್ದ ಹೆಂಗಸರಿಗೂ ಆ ವರ್ತಮಾನ ಮುಟ್ಟಿತು; ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿದ್ದ ಭಕ್ತಾದಿಗಳಿಗೂ ಪೂಜಾರಿಗಳಿಗೂ ಆ ಸಮಾಚಾರ ಮುಟ್ಟಿತು; ಅಮಲ್ದಾರರ ಕಚೇರಿ ಮತ್ತು ಕೋರ್ಟುಗಳ ಹತ್ತಿರ ಸೇರಿದ್ದ ಜನರಿಗೆಲ್ಲ ಆ ಸಮಾಚಾರ ಮುಟ್ಟಿತು, ಜನರು ವಿಧವಿಧವಾಗಿ ಆಡಿ ಕೊಳ್ಳುತ್ತಿದ್ದರು. ದಿಣ್ಣೆಗಳ ಮೇಲೆ, ಕಟ್ಟೆಗಳಮೇಲೆ, ಹೆಂಗಸರೂ ಗಂಡಸರೂ ನಿಂತುಕೊಂಡು ಆ ಮೆರೆವಣಿಗೆಯನ್ನು ನೋಡುತ್ತಿದ್ದರು. ಇನ್ಸ್ಪೆಕ್ಟರ ಮನೆಯ ಹತ್ತಿರಕ್ಕೆ ಚೆನ್ನಪ್ಪನೂ ಉಗ್ರಪ್ಪನೂ ಬ೦ದರು ರಂಗಣ್ಣ ಆ ಜನವನ್ನೂ, ಆ ಇಬ್ಬರನ್ನೂ ಕಿಟಕಿಯ ಮೂಲಕ ನೋಡಿದನು. ಹೊರಕ್ಕೆ ಬಂದು, `ಮನೆಯ ಹತ್ತಿರ ನಾನು ಯಾರಿಗೂ ಭೇಟಿ ಕೊಡುವುದಿಲ್ಲ; ಕಚೇರಿಗೆ ಬಂದು ಅಹವಾಲನ್ನು ಹೇಳಿಕೊಳ್ಳಬಹುದು ; ಈಗ ಇಲ್ಲಿ ನಿಲ್ಲದೆ ಹೊರಟು ಹೋಗಿ’ ಎ೦ದು ಹೇಳಿದನು.

`ಸ್ವಾಮಿ ! ಒಂದು ನಿಮಿಷ, ಒಂದೇ ನಿಮಿಷ ನಾನು ಹೇಳುವುದನ್ನು ಕೇಳಿ’ ಎಂದು ಚೆನ್ನಪ್ಪನು ಹೇಳಿದನು.

`ಇಲ್ಲಿ ಆಗುವುದಿಲ್ಲ ಚೆನ್ನಪ್ಪನವರೇ! ಕಚೇರಿಯ ಹತ್ತಿರ ದಯವಿಟ್ಟು ಬನ್ನಿ, ನೀವು ಹೇಳುವುದನ್ನೆಲ್ಲ ನಾನು ಸಾವಧಾನವಾಗಿ ಕೇಳುತ್ತೇನೆ’ ಎಂದು ಉತ್ತರ ಕೊಟ್ಟು ರಂಗಣ್ಣನು ಹಿಂದಿರುಗಿದನು. ಎತ್ತ ಕಡೆಯಿಂದಲೋ ಇಬ್ಬರು ಕಾನ್ ಸ್ಟೇಬಲ್ಲುಗಳು ಮುಂದೆ ಬಂದು,
`ಇನ್‌ಸ್ಪೆಕ್ಟರ್‌ ಸಾಹೇಬರು ಹೇಳಿದಂತೆ ಮಾಡಿ, ಇಲ್ಲಿ ನಿಂತು ಕೊಳ್ಳ ಬೇಡಿ, ಹೋಗಿ’ ಎ೦ದು ಕೇಳಿ ಎದುರಿಗೆ ನಿಂತು ಕೊಂಡರು. ಚೆನ್ನಪ್ಪನೂ ಉಗ್ರಪ್ಪನೂ ಬಹಳ ಅಪಮಾನ ಪಟ್ಟುಕೊಂಡು ಹಿಂದಿರುಗಬೇಕಾಯಿತು. ಜನ ಸಂದಣಿ ಕ್ರಮಕ್ರಮವಾಗಿ ಕರಗಿ ಹೋಯಿತು

ಚೆನ್ನಪ್ಪನೂ ಉಗ್ರಪ್ಪನೂ ಹಿಂದಿರುಗಿ ಬರುತ್ತ ತಂತಮ್ಮಲ್ಲಿ ಆಲೋಚನೆ ಮಾಡತೊಡಗಿದರು. ಉಗ್ರಪ್ಪನು, `ಈ ಇನ್‌ಸ್ಪೆಕ್ಟರಿಗೆ ಸಸ್ಪೆಂಡ್ ಮಾಡುವ ಅಧಿಕಾರವೇ ಇಲ್ಲ. ಅದು ಹೇಗೆ ಮಾಡಿದರು? ಸಾಹೇಬರನ್ನು ಕಂಡು ಬರೋಣ, ನಡೆ. ಈ ಇನ್ಸ್ಪೆಕ್ಟರ ಆರ್ಡರ್ ರದ್ದು ಮಾಡಿಸಿ ಆಮೇಲೆ ಮುಯ್ಯ ತೀರಿಸಿ ಕೊಳ್ಳೋಣ’ ಎಂದು ಹೇಳಿದನು. ಚೆನ್ನಪ್ಪನಿಗೆ ಅದು ಯುಕ್ತವಾಗಿ ತೋರಿತು. ಸಾಹೇಬರ ಬಳಿ ಇನ್ಸ್ಪೆಕ್ಟರ ಮೇಲೆ ಚಾಡಿ ಹೇಳಿ ಅವರ ಮನಸ್ಸನ್ನು ಕೆಡಿಸುವುದಕ್ಕೂ ಅವಕಾಶ ದೊರೆಯುವುದೆಂದು ನಿಷ್ಕರ್ಷೆ ಮಾಡಿಕೊಂಡು ಮಾರನೆಯ ದಿನ ಇಬ್ಬರೂ ಸಾಹೇಬರ ಕಚೇರಿಗೆ ಹೋಗಿ ಅಹವಾಲನ್ನು ಹೇಳಿಕೊಂಡರು. ಸಾಹೇಬರು ರಂಗಣ್ಣನನ್ನು ಚೆನ್ನಾಗಿ ಬಲ್ಲವರು. ಹಿಂದೆ ರಂಗನಾಥ ಪುರದ ಸಂಘದ ಸಭೆಯಲ್ಲಿ ಸಾಕ್ಷಾತ್ತಾಗಿ ರಂಗಣ್ಣನ ಕೆಲಸವನ್ನೂ ದಕ್ಷತೆಯನ್ನೂ ಪಾಂಡಿತ್ಯವನ್ನೂ ಆತ ಸಂಪಾದಿಸಿದ್ದ ಜನಾನುರಾಗವನ್ನೂ ನೋಡಿ ಮೆಚ್ಚಿಕೊಂಡಿದ್ದವರು. ಎರಡನೆಯದಾಗಿ, ಚೆನ್ನಪ್ಪನ ಮತ್ತು ಉಗ್ರಪ್ಪನ ಪೂರ್ವ ಚರಿತ್ರೆಗಳನ್ನೆಲ್ಲ ತಿಳಿದುಕೊಂಡಿದ್ದವರು, ಆದ್ದರಿಂದ ಅವರು ಮಾಡಿದ ಅಹವಾಲುಗಳಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ.

ಸಾಹೇಬರು,
`ಸಸ್ಪೆಂಡ್ ಮಾಡುವ ಅಧಿಕಾರ ಇನ್‌ಸ್ಪೆಕ್ಟರಿಗೆ ಇದೆ. ಒಂದು ತಿಂಗಳು ಕಾಲ ಸಸ್ಪೆಂಡ್ ಮಾಡಬಹುದು. ಈಚೆಗೆ ಆ ವಿಚಾರಗಳಲ್ಲೆಲ್ಲ ಸರ್ಕಾರದ ಆರ್ಡರ್ ಆಗಿದೆ. ಆದ್ದರಿಂದ ನಾನು ಮಧ್ಯೆ ಪ್ರವೇಶಿಸುವ ಹಾಗಿಲ್ಲ. ಅವರಿಂದ ರಿಪೋರ್ಟು ಬಂದಮೇಲೆ ಕೇಸಿನ ವಿಮರ್ಶೆ ಮಾಡಿ ಯುಕ್ತವಾದುದನ್ನು ನಾನು ಮಾಡಬಹುದು. ನೀವುಗಳು ಅರ್ಜಿ ಕೊಟ್ಟರೆ ಅದನ್ನು ಇನ್ಸ್ಪೆಕ್ಟರಿಗೆ ಕಳಿಸಿ ವರದಿಯನ್ನು ತರಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

`ಇದು ಬಹಳ ಅನ್ಯಾಯ ಸ್ವಾಮಿ! ವಿಚಾರಣೆಯಿಲ್ಲದೆ ಏಕದಂ ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ! ತಾವು ಖುದ್ದು ಬಂದು ವಿಚಾರಣೆ ಮಾಡುವುದಾಗಿಯೂ ಅಲ್ಲಿಯವರೆಗೆ ಸಸ್ಪೆನ್ಷನ್ ಆರ್ಡರನ್ನು ತಡೆದಿಟ್ಟರ ಬೇಕೆಂದೂ ಒಂದು ಕಾಗದವನ್ನಾದರೂ ಬರೆದು ನಮ್ಮ ಕೈಗೆ ಕೊಡಿ. ನಾನು ಜವಾಬ್ದಾರಿಯ ಮನುಷ್ಯ; ಜನಾರ್ದನಪುರದ ಮುನಿಸಿಪಲ್ ಕೌನ್ಸಿಲರು! ಕಲ್ಲೇಗೌಡರು, ಕರಿಯಪ್ಪನವರು ನಮ್ಮ ಮುಖಂಡರು! ಅವರಿಗೂ ಈ ವರ್ತಮಾನ ಕೊಟ್ಟಿದ್ದೇವೆ. ಇಂದೋ ನಾಳೆಯೋ ಇನ್ ಸ್ಪೆಕ್ಟರ ಆರ್ಡ‌್ರ ರದ್ದಾಗಿ ಅವರಿಗೆ ತಕ್ಕ ಶಾಸ್ತಿಯಾಗುತ್ತದೆ!’

`ಮಧ್ಯೆ ನಾನು ಪ್ರವೇಶಿಸುವಹಾಗಿಲ್ಲ ಚೆನ್ನಪ್ಪನವರೇ! ಇನ್ ಸ್ಪೆಕ್ಟರಿಗೆ ಅಧಿಕಾರವಿರುವಾಗ ನಾನು ಕೈ ಹಾಕಬಾರದು.’

`ನಾವು ಅಪೀಲು ಮಾಡಿಕೊಳ್ಳಬಾರದೇ ಸ್ವಾಮಿ?’ ಎಂದು ಉಗ್ರಪ್ಪ ಕೇಳಿದನು.

`ಅಗತ್ಯವಾಗಿ ಅಪೀಲು ಮಾಡಿಕೊಳ್ಳಿ, ಅರ್ಜಿಯನ್ನು ಕೊಡಿ ಎಂದು ಹೇಳಿದೆನಲ್ಲ! ಅದನ್ನು ಇನ್‌ಸ್ಪೆಕ್ಟರಿಗೆ ಕಳಿಸಿ ವಿವರಗಳನ್ನು ಕೇಳುತ್ತೇನೆ. ಅವರು ಮಾಡಿರುವುದು ನ್ಯಾಯವಾಗಿದ್ದರೆ ದಂಡನೆ ಸ್ಥಿರಪಡುತ್ತದೆ.’

`ಇನ್‌ಸ್ಪೆಕ್ಟರಿಗೆ ನಮ್ಮ ಅರ್ಜಿಯನ್ನು ಕಳಿಸದೆ ನೀವೇ ವರದಿಯನ್ನು ತರಿಸಿಕೊಳ್ಳಲಾಗುವುದಿಲ್ಲವೇ ಸ್ವಾಮಿ?’

`ಕೈಯಲ್ಲಿ ಕಾಗದವಿಲ್ಲದೆ ನಾನೇನನ್ನೂ ಮಾಡುವುದಿಲ್ಲ.’

`ಒಳ್ಳೆಯದು ಸ್ವಾಮಿ! ಅರ್ಜಿಯನ್ನು ಕೊಟ್ಟು ಹೋಗುತ್ತೇನೆ’ ಎಂದು ಹೇಳಿ ಉಗ್ರಪ್ಪನು ಒಂದನ್ನು ಬರೆದು ಸಾಹೇಬರ ಕೈಗೆ ಕೊಟ್ಟನು. ತರುವಾಯ ಚೆನ್ನಪ್ಪನೂ ಉಗ್ರಪ್ಪನೂ ಸಾಹೇಬರ ಕೊಟಡಿಯಿಂದ ಹೊರಬಿದ್ದರು.

ಎರಡು ಮೂರು ದಿನಗಳೊಳಗಾಗಿ ರೇ೦ಜಿನ ಮೂಲೆಮೂಲೆಗಳಲ್ಲಿ ಉಗ್ರಪ್ಪನ ಸಸ್ಪೆಂಡು ವರ್ತಮಾನ ಡಂಗುರವಾಗಿ ಹೋಯಿತು. ಕರಿಯಪ್ಪ ಮತ್ತು ಕಲ್ಲೆಗೌಡರ ಕಡೆಯವರಾಗಿ ಸ್ವಲ್ಪ ತುಂಟಾಟ ಮಾಡುತ್ತಿದ್ದ ಮೂರು ನಾಲ್ಕು ಜನ ಉಪಾಧ್ಯಾಯರು ಪಾತಾಳಕ್ಕೆ ಇಳಿದು ಹೋದರು. ಉಳಿದ ಸಾಮಾನ್ಯ ಉಪಾಧ್ಯಾಯರಲ್ಲಿ ಹಲವರು ಆ ದಂಡನೆಯನ್ನು ಮೆಚ್ಚಿಕೊಂಡು, `ಭಾರಿ ಹುಲಿಯ ಷಿಕಾರಿ ಮಾಡಿ ಬಿಟ್ಟರು ಇನ್ ಸ್ಪೆಕ್ಟರು!’ ಎಂದು ಹೊಗಳುತ್ತಿದ್ದರು. ಆದರೆ ಅವರೂ ಸ್ವಲ್ಪ ಭಯಗ್ರಸ್ತರಾದರು. ಭೀರುಗಳಾಗಿದ್ದ ಉಪಾಧ್ಯಾಯರಂತೂ ತಲ್ಲಣಿಸಿಹೋದರು. ಒಟ್ಟಿನಲ್ಲಿ ಇನ್ಸ್ಪೆಕ್ಟರನ್ನು ಕಂಡರೆ ಹಿಂದೆ ಇದ್ದ ವಿಶ್ವಾಸ ಮತ್ತು ಸಲಿಗೆಗಳು ಗೌರವ ಮತ್ತು ಭಯಗಳಿಗೆ ಪರಿವರ್ತನವಾದುವು. ವಿವರಗಳನ್ನು ತಿಳಿದು ಕೊಳ್ಳುವುದಕ್ಕಾಗಿ ಜನಾರ್ದನಪುರಕ್ಕೆ ಕೆಲವರು ಉಪಾಧ್ಯಾಯರು ಬಂದು ಹೋದರು; ಆದರೆ ಇನ್ ಸ್ಪೆಕ್ಟರಿಗೆ ಕಾಣಿಸಿಕೊಳ್ಳಲಿಲ್ಲ.

ನಡೆದ ಸಂಗತಿಯನ್ನು ತಿಳಿದು ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರಕ್ಕೆ ಆಗಮಿಸಿ ಚೆನ್ನಪ್ಪನ ಮನೆಯಲ್ಲಿ ಸಭೆ ಸೇರಿದ್ದರು. ಅತ್ತ ಕಡೆ ಗಂಗೇ ಗೌಡರು, ದೊಡ್ಡ ಬೋರೇಗೌಡರು, ಮತ್ತು ಬೊಮ್ಮನಹಳ್ಳಿ, ಗರುಡನ ಹಳ್ಳಿ, ಭೈರಮಂಗಲ, ಕೆಂಪಾಪುರ, ಗುಂಡೇನಹಳ್ಳಿ ಮೊದಲಾದ ಕಡೆಗಳಿಂದ ಚೇರ್ಮನ್ನರುಗಳು ಜನಾರ್ದನಪುರಕ್ಕೆ ಬಂದರು. ಹೀಗೆ ಎಂದೂ ಕಾಣದ ಮುಖಂಡರುಗಳ ಆಗಮನ ಸಮಾರಂಭಗಳು ಜನಾರ್ದನಪುರದ ಜನರನ್ನು ಆಕರ್ಷಿಸಿದುವು. ಬೆಂಗಳೂರಿಂದ ತಿಮ್ಮರಾಯಪ್ಪನು ಸಿದ್ದಪ್ಪನನ್ನು ಜೊತೆಗೆ ಕರೆದುಕೊಂಡು ರೈಲಿನಲ್ಲಿ ಬಂದಿಳಿದನು! ಒಬ್ಬ ಮೇಷ್ಟ್ರ ಸಸ್ಪೆನ್ಷನ್ನಿನ ಪ್ರಕರಣದಲ್ಲಿ ಮದುವೆಗೆ ಬರುವ ಬಂಧು ಬಳಗದಂತೆ ಇಷ್ಟ ಮಿತ್ರರು ಬಂದಿಳಿಯುತ್ತಿದ್ದರು! ಯಾವ ಬೀದಿಯಲ್ಲಿ ನೋಡಲಿ, ಹೊರಗಿಂದ ಬಂದ ಮುಖಂಡರಲ್ಲಿ ಇಬ್ಬರು ಮೂವರು ಜನರ ಕಣ್ಣಿಗೆ ಬೀಳುತ್ತಲೇ ಇದ್ದರು! ಈ ಸಂಭ್ರಮಗಳ ಜೊತೆಗೆ ಪ್ರೈಮರಿ ಸ್ಕೂಲಿನ ಮುಂದುಗಡೆಯ ಚೌಕದಲ್ಲಿ, ಸ್ಕೂಲ್ ಇನ್‌ಸ್ಪೆಕ್ಟರವರ ಕಚೇರಿಯ ಮುಂಭಾಗದಲ್ಲಿ, ರಂಗಣ್ಣನ ಮನೆಯ ಎದುರು ಜಗಲಿಯ ಮೇಲೆ ಹಿಂದೆ ಎಂದೂ ಕಾಣದಿದ್ದ ಕಾನ್ಸ್ಟೇಬಲ್ಲುಗಳು! ಗಳಿಗೆ ಗಳಿಗೆಗೂ ಕಲ್ಲೇಗೌಡನಿಗೂ ಕರಿಯಪ್ಪನಿಗೂ ವರ್ತಮಾನವನ್ನು ತಂದು ಹೇಳುತ್ತಿದ್ದ ಅವರ ಗುಪ್ತಚಾರರ ಓಡಾಟ! ಹಲವು ಹಳ್ಳಿಗಳಿಂದ ಪಂಚಾಯತಿ ಚೇರ್ಮನ್ನರು ಮೊದಲಾದವರು ಇನ್ಸ್ಪೆಕ್ಟರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಹೊರಟುಬಂದರೆಂಬ ವರ್ತಮಾನ ಕೊಟ್ಟವನೊಬ್ಬ! ಬೆಂಗಳೂರಿ೦ದ ಯಾರೋ ಇಬ್ಬರು ರೈಲಿಳಿದು ಇನ್ ಸ್ಪೆಕ್ಟರ ಮನೆಗೆ ಹೋದರೆಂದು ವರ್ತಮಾನ ತಂದವನು ಮತ್ತೊಬ್ಬ! ಆವಲ ಹಳ್ಳಿಯ ದೊಡ್ಡ ಬೋರೇಗೌಡರು ಇನ್ ಸ್ಪೆಕ್ಟರ ಮನೆಯಲ್ಲಿದ್ದಾರೆಂದು ವರ್ತಮಾನ ತ೦ದವನು ಮಗದೊಬ್ಬ! ರಂಗನಾಥಪುರದ ಗಂಗೇಗೌಡರೂ ಸಹ ಅಲ್ಲಿಗೆ ಹೋದರೆಂದು ಹೇಳುತ್ತಿದ್ದವನು ಒಬ್ಬ! ಕಲ್ಲೇಗೌಡನೂ ಕರಿಯಪ್ಪನೂ ರುಜು ಮಾಡಿದ ಟೆಲಿಗ್ರಾಮುಗಳನ್ನು ದಿವಾನರಿಗೂ ಮಹಾರಾಜರಿಗೂ ರವಾನಿಸಿ ಹಿಂದಿರುಗಿದ ಬಂಟನೊಬ್ಬ! ಚೆನ್ನಪ್ಪನ ಮನೆಯಲ್ಲಿ ಸಭೆ ವಿದ್ಯುದಾವೇಗಭರಿತವಾಗಿತ್ತು! ಮಧ್ಯೆ ಮಧ್ಯೆ ಸ್ಫೋಟಗಳಾಗುತ್ತಿದ್ದುವು!

ಇತ್ತ ರಂಗಣ್ಣನ ಮನೆಗೆ ಪಂಚಾಯತಿ ಚೇರ್ಮನ್ನರುಗಳು ಹಲವರು ಬಂದು, ‘ತಾವು ಮಾಡಿದ್ದು ಭೇಷಾಯಿತು ಸ್ವಾಮಿ! ತುಂಟರನ್ನ ಮಟ್ಟಾ ಹಾಕಬೇಕು. ನಾವೆಲ್ಲ ತಮ್ಮ ಬೆಂಬಲಕ್ಕಿದ್ದೇವೆ. ಈ ಊರಲ್ಲೇ ಇನ್ನೂ ಒಂದು ವಾರ ನಾವುಗಳು ಇದ್ದು ತಮಗೆ ಧೈರ್ಯ ಕೊಡುತ್ತೇವೆ’ ಎಂದು ಮುಂತಾಗಿ ಭರವಸೆಗಳನ್ನು ನೀಡಿದರು. ಅವರ ಭರವಸೆಗಳಿಗೆ ಕೃತಜ್ಞತೆಯನ್ನು ತಿಳಿಸಿ ಯಥಾಶಕ್ತಿ ಅವರಿಗೆ ಕಾಫಿ ತಿಂಡಿಗಳ ಉಪಚಾರಮಾಡಿ ರಂಗಣ್ಣ ಕಳಿಸಿಕೊಟ್ಟನು. ಬಳಿಕ ತಿಮ್ಮರಾಯಪ್ಪ ಸಂಗಡಿಗನೊಬ್ಬನೊಡನೆ ಮತ್ತು ಹಾಸಿಗೆಗಳನ್ನು ಹೊತ್ತು ಕೊಂಡು ಬಂದ ಕೂಲಿಯವನೊಡನೆ, ಗೇಟು ತೆಗೆದು ಒಳಕ್ಕೆ ಬರುತ್ತಿದ್ದುದು ರಂಗಣ್ಣನ ದೃಷ್ಟಿಗೆ ಬಿತ್ತು. ಒಡನೆಯೆ ಸರಸರನೆ ಹೋಗಿ, `ಇದೇನು ತಿಮ್ಮರಾಯಪ್ಪ! ಹೇಳದೇ ಕೇಳದೇ ಏಕದಂ ಬಂದಿಳಿದು ಬಿಟ್ಟಿದ್ದೀಯೆ? ಇವರು ಯಾರು? ಕಾಗದ ಬರೆದಿದ್ದರೆ ನಾನೇ ಸ್ಟೇಷನ್ನಿಗೆ ಬರುತಿದ್ದೆನಲ್ಲ! ನನ್ನ ಮನೆ ಹೇಗೆ ಗೊತ್ತಾಯಿತು?’ ಎಂದು ಬಹಳ ಸಂಭ್ರಮದಿಂದ ಕೇಳಿದನು.

`ಈತನೇ ಸಿದ್ದಪ್ಪ! ಇವರೇ ನನ್ನ ಸ್ನೇಹಿತರು ರಂಗಣ್ಣ!’ ಎಂದು ತಿಮ್ಮರಾಯಪ್ಪ ಪರಸ್ಪರ ಪರಿಚಯ ಮಾಡಿಕೊಟ್ಟನು ರಂಗಣ್ಣನು ಸಿದ್ದಪ್ಪನವರ ಕೈ ಕುಲುಕಿ, ‘ಬಹಳ ಸಂತೋಷ ನೀವು ಬಂದದ್ದು? ಎಂದು ಉಪಚಾರೋಕ್ತಿಯನ್ನಾಡಿ ಇಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋದನು. ತನ್ನ ಕೊಟಡಿಯಲ್ಲಿ ಅವರಿಗೆಲ್ಲ ಸ್ಥಳ ಮಾಡಿಕೊಟ್ಟನು. ಕೂಲಿಯವನಿಗೆ ದುಡ್ಡು ಕೊಟ್ಟು ಕಳಿಸಿದನಂತರ, `ತಿಮ್ಮರಾಯಪ್ಪ! ಈ ದಿನ ನನಗೆ ಆಗಿರುವ ಸಂತೋಷವನ್ನು ಮಾತಿನಲ್ಲಿ ವರ್ಣಿಸಲಾರೆ’ ಎಂದನು.

‘ನೋಡು ರಂಗಣ್ಣ! ನೀನು ಆ ದಿನ ಸಾಯಂಕಾಲ ನನ್ನನ್ನು ಬಿಟ್ಟು ಹೋದಮೇಲೆ ರಾತ್ರಿಯೆಲ್ಲ ನಿನ್ನ ಯೋಚನೆಯೇ ಯೋಚನೆ! ಕಣ್ಣು ಮುಚ್ಚಿದ್ದರೆ ಶಿವನಾಣೆ! ಈ ಎರಡು ಮೂರು ದಿನ ನನ್ನ ಪೇಚಾಟವನ್ನು ವರ್ಣಿಸಲಾರೆ! ನಿನ್ನ ಕಾಗದ ಕೈ ಸೇರಿತು. ಒಡನೆಯೇ ಸಿದ್ದಪ್ಪ ನಲ್ಲಿಗೆ ಹೋಗಿ,- ಹೊರಡು, ಈ ಕ್ಷಣ ಇದ್ದಂತೆಯೇ ಹೊರಡು, ಮಾತು ಗೀತು ಆಮೇಲೆ – ಎಂದು ಒತ್ತಾಯ ಮಾಡಿ ಹೊರಡಿಸಿಕೊಂಡು ಬಂದು ಬಿಟ್ಟೆ. ನಿನಗೆ ಹೇಗೆ ಕಾಗದ ಬರೆಯಲಿ ? ಬರೆದಿದ್ದರೆ ತಾನೆ ಏನು ? ಇನ್ನು ಎರಡು ಗಂಟೆಯಮೇಲೆ ನಿನ್ನ ಕೈ ಸೇರುತ್ತಿತ್ತು. ಕಾಗದಕ್ಕಿಂತ ಮೊದಲೇ ನಿನ್ನ ಮನೆಯಲ್ಲಿ ನಾವಿದ್ದೇವೆ ನೋಡು! ಈ ಜನಾರ್ದನಪುರದಲ್ಲಿ ನಿನ್ನ ಮನೆ ಪತ್ತೆ ಮಾಡುವುದು ಏನು ಕಷ್ಟ? ಯಾರ ಮನೆ ಮುಂದೆ ಕಾನ್ ಸ್ಟೇಬಲ್ಲುಗಳಿದ್ದಾರೆ? ಹೇಳು’ ಎಂದು ನಗುತ್ತಾ ತಿಮ್ಮರಾಯಪ್ಪ ಕೇಳಿದನು.

`ಕಲ್ಲೇಗೌಡ ಮತ್ತು ಕರಿಯಪ್ಪ ಬಂದಿದ್ದಾರೆಯೇ? ನಿಮ್ಮನ್ನೇ ನಾದರೂ ಬಂದು ಕಂಡರೇ?’ ಎಂದು ಸಿದ್ದಪ್ಪ ಕೇಳಿದನು.

`ಅವರು ಈ ಊರಿಗೆ ಬಂದಿದ್ದಾರೆ. ಇಲ್ಲಿಯ ಮುನಿಸಿಪಲ್ ಕೌನ್ಸಿಲರ್ ಚೆನ್ನಪ್ಪನವರ ಮನೆಯಲ್ಲಿ ಇಳಿದು ಕೊಂಡಿದ್ದಾರೆ. ನನ್ನನ್ನು ಕಾಣಲು ಅವರು ಬರಲಿಲ್ಲ.’

`ಏನೇನು ನಡೆಯಿತು ? ವಿವರವಾಗಿ ತಿಳಿಸು’ ಎಂದು ತಿಮ್ಮರಾಯಪ್ಪ ಕೇಳಿದನು.

`ಎಲ್ಲ ಸಮಾಚಾರಗಳನ್ನೂ ನಿಧಾನವಾಗಿ ತಿಳಿಸುತ್ತೇನೆ. ಮೊದಲು ಕೈ ಕಾಲು ಮುಖಗಳನ್ನಾದರೂ ತೊಳೆದು ಕೊಂಡು ಕಾಫಿ ತೆಗೆದುಕೊಳ್ಳಿ. ನೀನು ಮಾಡುತ್ತಿದ್ದಂತೆಭಾರಿ ಸಮಾರಾಧನೆ ಮಾಡಲು ಶಕ್ತಿಯಿಲ್ಲ! ಏನೋ ಕೈಲಾದಷ್ಟು ಆತಿಥ್ಯ ಮಾಡುತ್ತೇನೆ!’ ಎಂದು ಹೇಳಿ ಅವರ ಕೈಗೆ ಟವಲ್ಲುಗಳನ್ನು ಕೊಟ್ಟು ನೀರ ಮನೆಗೆ ಕರೆದು ಕೊಂಡು ಹೋದನು. ಅಲ್ಲಿಂದ ಹಿಂದಿರುಗುವ ವೇಳೆಗೆ ಕೊಟಡಿಯಲ್ಲಿ ಉಪಾಹಾರ ಸಿದ್ದವಾಗಿತ್ತು: ಬೆಳ್ಳಿಯ ತಟ್ಟೆಗಳಲ್ಲಿ ಉಪ್ಪಿಟ್ಟು, ಬೋಂಡ, ಮೈಸೂರು ಪಾಕು ಮತ್ತು ಓಮ ಪುಡಿ; ಬೆಳ್ಳಿಯ ಲೋಟಗಳಲ್ಲಿ ನೀರು ಮತ್ತು ಕಾಫಿ. ಆ ಹೊತ್ತಿಗೆ ದೊಡ್ಡ ಬೋರೇಗೌಡರೂ ಗಂಗೇಗೌಡರೂ ಗೇಟು ತೆಗೆದು ಒಳಕ್ಕೆ ಬರುತ್ತಿದ್ದರು. ರಂಗಣ್ಣ ಅವರನ್ನು ಎದುರುಗೊಂಡು ಸ್ವಾಗತವನ್ನು ನೀಡಿ ಕೊಟಡಿಗೆ ಕರೆದುಕೊಂಡು ಬಂದನು. ಇನ್ನೆರಡು ತಟ್ಟೆಗಳಲ್ಲಿ ಉಪಾಹಾರ ಬಂದು ಕುಳಿತುಕೊಂಡಿತು.

`ಏನು ಸ್ವಾಮಿ ! ಇಲ್ಲಿಯೂ ಸಂಘದ ಸಭೆ ಸೇರಿಸಿರುವಂತೆ ಕಾಣುತ್ತದೆಯಲ್ಲ!’ ಎಂದು ದೊಡ್ಡ ಬೋರೇಗೌಡರು ನಗುತ್ತ ಕೇಳಿದರು.

‘ನಮ್ಮ ಇನ್ಸ್ಪೆಕ್ಟರು ಇದ್ದ ಕಡೆ ತಿಂಡಿ ಸಭೆ ಇದ್ದೇ ಇರುತ್ತೆ!’ ಎಂದು ಗಂಗೇಗೌಡರು ಹೇಳಿದರು.

ಆ ಮುಖಂಡರು ಸಿದ್ದಪ್ಪನವರಿಗೆ ಅಪರಿಚಿತರೇನೂ ಅಲ್ಲ. ರಂಗಣ್ಣನೇನೋ ಎಲ್ಲರ ಪರಿಚಯಗಳನ್ನೂ ಪರಸ್ಪರವಾಗಿ ಮಾಡಿ ಕೊಟ್ಟನು. ಆಮೇಲೆ, ‘ಇಂಥ ಮಿತ್ರಗೋಷ್ಠಿ ನನ್ನ ಮನೆಯಲ್ಲಿ ಸೇರುವುದು ಅಪರೂಪ. ಈ ದಿನ ಬೆಂಗಳೂರಿ೦ದ ಸ್ನೇಹಿತರು ಬಂದಿದ್ದಾರೆ. ಬೋರೇಗೌಡರೂ ಗಂಗೇಗೌಡರೂ ಇಲ್ಲಿಯೇ ಊಟಕ್ಕೆ ನಿಲ್ಲಬೇಕು’ ಎಂದು ಹೇಳಿದನು. ಅವರು ‘ಆಗಲಿ ಸ್ವಾಮಿ!’ ಎಂದು ಒಪ್ಪಿಕೊಂಡರು. ಉಪಾಹಾರ ಮಾಡುತ್ತ ರಂಗಣ್ಣ ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿಸಿದನು. ಆ ಮಾತುಗಳು ಮುಗಿದಮೇಲೆ ಸಿದ್ದಪ್ಪ ಎದ್ದು , `ತಿಮ್ಮರಾಯಪ್ಪ ! ನೀನು ಇಲ್ಲೇ ಇರು. ನಾನು ಆ ಕಲ್ಲೇಗೌಡನನ್ನೂ ಕರಿಯಪ್ಪನನ್ನೂ ಕಂಡು ಬರುತ್ತೇನೆ. ನಮ್ಮ ಒಕ್ಕಲಿಗ ಜನಾಂಗಕ್ಕೇನೆ ಕಟ್ಟ ಹೆಸರು ತಂದುಬಿಟ್ಟರು ಆ ನೀಚರು!’ ಎಂದು ಹೇಳಿ ಹೊರಬಿದ್ದನು.

ದಾರಿಯಲ್ಲಿ ಹೋಗುತ್ತಿದ್ದಾಗ ಚೆನ್ನಪ್ಪನ ಮನೆಯಲ್ಲಿ ಸಭೆ ಮುಗಿಸಿ ಕೊಂಡು ಆ ಮುಖಂಡರು ಪೇಟೆಯ ಕಡೆಗೆ ಹೊರಟಿದ್ದರು. ಅವರ ಜೊತೆಯಲ್ಲಿ ಚೆನ್ನಪ್ಪನೂ ಉಗ್ರಪ್ಪನೂ ಇದ್ದರು. ದೂರದಿಂದಲೇ ಕರಿಯಪ್ಪ ಸಿದ್ಧಪ್ಪನನ್ನು ನೋಡಿ ಗುರುತಿಸಿ, ಕಲ್ಲೇಗೌಡನ ಕಡೆಗೆ ತಿರುಗಿಕೊಂಡು, `ನೋಡಿದೆಯಾ? ಸಿದ್ದಪ್ಪ ಬಂದಿದ್ದಾನೆ! ಬೆಂಗಳೂರಿಂದ ಬಂದ ಇಬ್ಬರಲ್ಲಿ ಇವನೊಬ್ಬನೆಂದು ಕಾಣುತ್ತದೆ! ಇನ್ನೊಬ್ಬನು ಯಾವನೋ? ಇಸ್ಕೂಲ್ ಇನ್ ಸ್ಪೆಕ್ಟರ್ ಆದರೂ ಕೂಡ ಬಹಳ ಪ್ರಚಂಡರಾಗಿದ್ದಾರಲ್ಲ! ಭಾರಿ ಭಾರಿ ಮುಖಂಡರು ಅವರ ಮನೆ ಬಾಗಿಲಿಗೆ ಹೋಗಿ ಸಲಾಮು ಹಾಕುತ್ತಾರಲ್ಲ!’ ಎಂದು ಬೆರಗಾಗಿ ಹೇಳಿದನು.

`ಅವರ ಮನೆಗೆ ಯಾರು ಬಂದರೋ! ಇವನು ಯಾರಲ್ಲಿಗೆ ಬಂದನ! ಇಬ್ಬರಿಗೂ ನೀನೇಕೆ ಗಂಟು ಹಾಕುತ್ತೀಯೆ? ಅಂತೂ ಈ ಸಂದರ್ಭದಲ್ಲಿ ಇವನು ಜನಾರ್ದನಪುರದಲ್ಲಿರುವುದು ಆಶ್ಚರ್ಯವೇ ಸರಿ.’

ಸಿದ್ದಪ್ಪನೂ ಆ ಮುಖಂಡರನ್ನು ದೂರದಿಂದ ನೋಡಿ, ‘ಇಲ್ಲಿಯೇ ಸಿಕ್ಕಿದರು, ಒಳ್ಳೆಯದಾಯಿತು’ ಎಂದುಕೊಂಡನು. ಒಬ್ಬರನ್ನೊಬ್ಬರು ಸಮಿಾಪಿಸಿದ ಮೇಲೆ, ‘ಏನು ಸಿದ್ದಪ್ಪ! ಆರೋಗ್ಯವಾಗಿದ್ದೀಯಾ? ಏನಿದು ಅಪರೂಪವಾಗಿ ಜನಾರ್ದನಪುರಕ್ಕೆ ಭೇಟಿ?’ ಎಂದು ಕಲ್ಲೇಗೌಡ ಕೇಳಿದನು.

‘ಕೆಲಸವಿತ್ತಪ್ಪ! ಬಂದಿದ್ದೇನೆ. ಬಂದಮೇಲೆ ನೀವೂ ಈ ಊರಿಗೆ ಬಂದಿದ್ದೀರಿ ಎಂದು ಗೊತ್ತಾಯಿತು. ಭೇಟಿ ಮಾಡೋಣ ಎಂದು ಹೊರಟುಬರುತ್ತಿದ್ದೆ.’

`ಇಲ್ಲಿ ಎಲ್ಲಿ ಇಳಿದುಕೊಂಡಿದ್ದೀಯೆ?’

‘ಇನ್‌ಸ್ಪೆಕ್ಟರ್ ರಂಗಣ್ಣನವರ ಮನೆಯಲ್ಲಿ, ಅವರು ನನಗೆ ತಿಳಿದವರು! ಬೇಕಾದವರು!’

ಕಲ್ಲೇಗೌಡನೂ ಕರಿಯಪ್ಪನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮಗೆ ಎದುರು ಕಕ್ಷಿಯಾಗಿ ಸಿದ್ದಪ್ಪ! ದಿವಾನರ ಹತ್ತಿರ ಸಲಿಗೆಯಿಂದ ಓಡಾಡುವ, ಮುಖಂಡರಲ್ಲಿ ಹೆಸರುವಾಸಿಯಾದ, ನ್ಯಾಯವಿಧಾಯಕ ಸಭೆಯ ಸದಸ್ಯನಾದ ಸಿದ್ದಪ್ಪ! ಇಬ್ಬರ ಮುಖಗಳೂ ಸ್ವಲ್ಪ ಕಳೆಗುಂದಿದುವು. `ನೀನು ಬಂದದ್ದು ಒಳ್ಳೆಯದೇ ಆಯಿತು. ಬಾ! ಚೆನ್ನಪ್ಪನ ಮನೆಗೆ ಹೋಗೋಣ, ಬೀದಿಯಲ್ಲೇನು ಮಾತು! ಚೆನ್ನಪ್ಪನ ಮನೆಯಲ್ಲೇ ಊಟ ಮಾಡುವಿಯಂತೆ.’

`ಊಟಕ್ಕೆ ನಾನು ಇನ್‌ಸ್ಪೆಕ್ಟರ ಮನೆಗೇನೆ ಹೋಗಬೇಕು. ಅಲ್ಲಿ ಅವಲಹಳ್ಳಿಯ ಗೌಡರು, ರಂಗನಾಥಪುರದ ಗೌಡರು ಇದ್ದಾರೆ!’

‘ಎಲ್ಲರೂ ಸೇರಿ ಮಿಾಟಿಂಗ್ ನಡೆಸುತ್ತಿದ್ದೀರೇನೋ! ಒಕ್ಕಲಿಗ ಮೇಷ್ಟರುಗಳನ್ನು ಸಸ್ಪೆಂಡ್ ಮಾಡಿಸಿ, ನೀವುಗಳು- ಒಕ್ಕಲಿಗ ಮುಖಂಡರು-ಆ ಇನ್ಸ್ಪೆಕ್ಟರ ಮನೆಯಲ್ಲಿ ಔತಣದ ಭೋಜನ ಮಾಡುತ್ತೀರೋ! ಸಂತೋಷದಿಂದ ನಲಿಯುತ್ತೀರೋ!’

‘ಕಲ್ಲೇಗೌಡ ! ನಿನಗೆ ಈ ಕೋಮುವಾರು ಭಾವನೆ ಬಿಟ್ಟು ಬೇರೆ ಸದ್ಭಾವನೆ ಏನೂ ಇಲ್ಲವೇ? ಈಗ ರೇ೦ಜಿನಲ್ಲಿ ನೂರಾರು ಜನ ಒಕ್ಕಲಿಗ ಮೇಷ್ಟರುಗಳಿದ್ದಾರಲ್ಲ. ಎಷ್ಟು ಜನಕ್ಕೆ ಸಸ್ಪೆಂಡ್ ಆಗಿದೆ ? ನೂರಾರು ಜನ ಒಕ್ಕಲಿಗರು ಗ್ರಾಮ ಪಂಚಾಯತಿ ಚೇರ್ಮನ್ನರುಗಳಾಗಿದ್ದಾರಲ್ಲ! ಯಾರು ನಿನ್ನ ಹಾಗೆ ಇನ್ಸ್ಪೆಕ್ಟರನ್ನು ದೂರುತ್ತಾರೆ? ಎಲ್ಲರೂ ಅವರನ್ನು ಪ್ರಶಂಸೆ ಮಾಡುತ್ತಾರಲ್ಲ! ನೀವಿಬ್ಬರು ಮಾತ್ರ ನಮ್ಮ ಜನಾಂಗಕ್ಕೆ ಕಳಂಕ ತಂದಿದ್ದೀರಿ. ಯಾರ ಬಾಯಲ್ಲಿ ನೋಡಲಿ ನಿಮ್ಮ ನೀಚತನದ ಮಾತೇ ಆಗಿದೆ!’

‘ಏನು ಹೆಚ್ಚು ಮಾತನಾಡುತ್ತೀ ಸಿದ್ದಪ್ಪ! ನೀನೇನು ನಮ್ಮ ನೀಚತನ ಕಂಡದ್ದು ?

`ಲೇ ಕರಿಯಪ್ಪ! ಹುಷಾರಾಗಿರು! ಕಂಡಿದ್ದೀನಿ ನಿಮ್ಮ ಬಂಡವಾಳವನ್ನೆಲ್ಲ! ಹಿಂದೆ ನೀವಿಬ್ಬರೂ ಸೇರಿಕೊಂಡು ದಿವಾನರಿಗೆ ಔತಣ ಏರ್ಪಾಟುಮಾಡಿ ಹಳ್ಳಿಯವರ ಹತ್ತಿರವೆಲ್ಲ ಚಂದಾ ವಸೂಲುಮಾಡಿ ಅರ್ಧ ಹಣ ಜೇಬಿಗಿಳಿಸಿ, ನಿಮ್ಮ ಕೈಯಿಂದ ಔತಣ ಮಾಡಿಸಿದ ಹಾಗೆ ದಿವಾನರಿಗೆ ಭ್ರಾಂತಿ ಹುಟ್ಟಿಸಿದಿರಲ್ಲ! ಅದೇನು ನೀಚತನ ಅಲ್ಲವೇ? ನಿನ್ನ ಅಣ್ಣ ಬಡವ, ಗ್ಯಾಂಗ್ ಕೂಲಿ ಎಂದು ಸುಳ್ಳು ಸರ್ಟಿಫಿಕೇಟು ಬರೆದು, ಆ ಅಣ್ಣನ ಮಗನಿಗೆ- ಫೇಲಾದ ಹುಡುಗನಿಗೆ-ಸ್ಕಾಲ‌ರ್‌ಷಿಪ್ಪು ಕೊಡಿಸಿದೆಯಲ್ಲ! ಬಡವನಾದ ಒಕ್ಕಲಮಗನಿಗೆ – ಪ್ಯಾಸಾದವನಿಗೆ – ಸ್ಕಾಲರ್ ಷಿಪ್ ತಪ್ಪಿಸಿದೆಯಲ್ಲ! ನಾಚಿಕೆಯಿಲ್ಲ ನಿನಗೆ? ಆ ಸೂಳೆ ಮುಂಡೆ ಯಾವಳೋ ಒಬ್ಬಳಿಗೆ ಜನಾರ್ದನಪುರಕ್ಕೆ ಪುನಃ ವರ್ಗ ಮಾಡಿಸಿ ಕೊಡಬೇಕು ಅಂತ ಶಿಫಾರಸ್ ಪತ್ರ ಕೊಟ್ಟಿದ್ದಲ್ಲದೆ ಅವಳನ್ನ ಇನ್‌ಸ್ಪೆಕ್ಟರ ಮೇಲೆ ಎತ್ತಿ ಕಟ್ಟಿ ಡೈರೆಕ್ಟರ ಹತ್ತಿರ ಕರೆದುಕೊಂಡು ಹೋಗಿ ಚಾಡಿ ಹೇಳಿಸಿದೆಯಲ್ಲ! ಯಾವ ಚಂಡಾಲ ಮಾಡೋ ಕೆಲಸ ಅದು? ಕಟ್ಟಡವನ್ನು ಸ್ಕೂಲಿಗೆ ಬಾಡಿಗೆಗೆ ತೆಗೆದುಕೊಂಡರೆ ಆ ಶಿಕಸ್ತು ಕಟ್ಟಡವನ್ನು ದುರಸ್ತು ಮಾಡದೆ ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತಾ ಜಬರ್ದಸ್ತಿ ಮಾಡಿ ದಿವಾನರಿಗೆ ಕಾಗದ ಬರೆದನಲ್ಲ ಈ ಕಲ್ಲೇಗೌಡ! ಪುಂಡ ಮೇಷ್ಟರು ಪೋಕರಿ ಮೇಷ್ಟರುಗಳನ್ನೆಲ್ಲ ಏಜೆಂಟರನ್ನಾಗಿ ಮಾಡಿಕೊಂಡು, ಅವರನೆಲ್ಲ ಇನ್ಸ್ಪೆಕ್ಟರ ಮೇಲೆ ಎತ್ತಿಕಟ್ಟಿ, ಸ್ಕೂಲು ಕೆಲಸಗಳೇ ನಡೆಯದಂತೆ ಬದ್ಮಾಷ್ ಕೆಲಸ ಮಾಡಿದ್ದೀರಲ್ಲ! ನಮ್ಮ ಜನಾಂಗದ ಮುಖಂಡರು, ದೇಶೋದ್ದಾರಕರು ಎಂದು ಓಟಿನ ಬೇಟೆಗೆ ಹೊರಡುತ್ತೀರಿ! ಸುಳ್ಳು ಸುಳ್ಳು ಅರ್ಜಿಗಳನ್ನು ದಿವಾನರಿಗೆ ಬರೆಯುತ್ತೀರಿ! ದಿನಬೆಳಗಾದರೆ ಅವರ ಮನೆ ಬಾಗಿಲು ಕಾಯುತ್ತ ಚಾಡಿಗಳನ್ನು ಹೇಳುತ್ತೀರಿ! ಏನು ನಿಮ್ಮ ಬಾಳು! ನೀಚತನ ಅಲ್ಲವೇನು? ಕಷ್ಟ ಪಟ್ಟು ಕೆಲಸ ಮಾಡುತ್ತಿರುವ ಆ ಇನ್ಸ್ಪೆಕ್ಟರಿಗೆ ಬೆಂಬಲಿಗರಾಗಿ ನಿಂತು, ಮಕ್ಕಳಲ್ಲಿ ವಿದ್ಯಾಭಿ ವೃದ್ಧಿಯುಂಟಾಗುವಂತೆ ಸಹಾಯ ಮತ್ತು ಪ್ರೋತ್ಸಾಹಗಳನ್ನು ಮಾಡುವ ಬದಲು, ಒಂಟಿಯಾಗಿ ಸಿಕ್ಕಾಗ ಅವರನ್ನು ಕಡಿದು ಹಾಕಿಬಿಡೋಣವೆಂದು ಹಂಚಿಕೆ ಮಾಡುತ್ತಿರುವ ಪಾಪಿಗಳು ನೀವು! ನಿಮ್ಮಲ್ಲಿ ಒಂದು ದೊಡ್ಡ ಗುಣ ಹೇಳಿ.’

ಕಲ್ಲೇಗೌಡನೂ ಕರಿಯಪ್ಪನೂ ಮಾತೇ ಆಡಲಿಲ್ಲ. ಸ್ವಲ್ಪ ಹೊತ್ತಾದಮೇಲೆ ಸಿದ್ದಪ್ಪನು,

`ನಾನು ಎಲ್ಲ ವಿಚಾರಗಳನ್ನೂ ಕೌನ್ಸಿಲರಿಗೆ, ದಿವಾನರಿಗೆ ತಿಳಿಸಿದ್ದೇನೆ! ನಾಳೆ ಬೆಂಗಳೂರಿಗೆ ಹೋಗಿ ಅವರನ್ನು ನೀವು ಕಂಡರೆ, ನಿಮಗೆ ತಕ್ಕ ಮರ್ಯಾದೆ ಮಾಡುತ್ತಾರೆ! ನಾಳೆ, ನ್ಯಾಯವಿಧಾಯಕ ಸಭೆ ಸೇರಿದಾಗ ನಾನೇ ಸರಕಾರಕ್ಕೆ ನಿಮ್ಮ ವಿಚಾರಗಳಲ್ಲಿ ಪ್ರಶ್ನೆಗಳನ್ನು ಹಾಕಬೇಕೆಂದಿದ್ದೇನೆ.’

‘ಸಿದ್ದಪ್ಪ ! ಆ ಕೆಲಸ ಮಾತ್ರ ಮಾಡಬೇಡ!’

ತನ್ನ ಮುಖಂಡರ ದೈನ್ಯಾವಸ್ಥೆಯನ್ನು ಉಗ್ರಪ್ಪ ನೋಡಿದನು! ಅವರ ಬೆಂಬಲ ತನಗಿದೆಯೆಂದು, ಅವರ ಪ್ರೇರಣೆಯಿಂದ ತಾನು ಧೂರ್ತನಾಗಿ ನಡೆದುಕೊಂಡೆನಲ್ಲ! ಊರಲ್ಲೆಲ್ಲ ಅಪಮಾನ ಪಟ್ಟೆನಲ್ಲ! ಎಂದು ವ್ಯಸನಪಟ್ಟನು.

‘ಸಿದ್ದಪ್ಪ! ಈಗ ನೀನು ಬಂದಿದ್ದೀಯೆ. ನಿನಗೆ ಇನ್ಸ್ಪೆಕ್ಟರು ಬೇಕಾದವರು. ಅವರಿಗೆ ಹೇಳಿ ಈ ಉಗ್ರಪ್ಪನ ಸಸ್ಪೆನ್ಷನ್ ವಜಾ ಮಾಡಿಸು.’

`ಈ ಮೇಷ್ಟ್ರು ಕ್ಷಮಾಪಣೆ ಕಾಗದವನ್ನು ಬರೆದು ನನ್ನ ಕೈಗೆ ಕೊಡಲಿ! ನನ್ನೊಡನೆ ಬಂದು ಇನ್ಸ್ಪೆಕ್ಟರ ಕಾಲಿಗೆ ಬೀಳಲಿ! ವಜಾ ಮಾಡಿಸುತ್ತೇನೆ. ನೀವೂ ಬನ್ನಿರಿ; ದ್ವೇಷ ಬಿಟ್ಟು ಅವರ ಸ್ನೇಹ ಸಂಪಾದನೆ ಮಾಡಿಕೊಳ್ಳಿ.’

`ನಾನು ಕ್ಷಮಾಪಣೆ ಪತ್ರ ಬರೆದು ಕೊಡುವುದಿಲ್ಲ’ ಎಂದು ಉಗ್ರಪ್ಪ ಹೇಳಿಬಿಟ್ಟನು. ‘ನಮಗೆ ಆ ಇನ್ಸ್ಪೆಕ್ಟರ ಸ್ನೇಹ ಗೀಹ ಬೇಕಾಗಿಲ್ಲ. ಆವರಲ್ಲಿಗೆ ಬರುವುದಿಲ್ಲ’ ಎಂದು ಮುಖಂಡರು ಹೇಳಿಬಿಟ್ಟರು.

`ಹಾಗಾದರೆ ಮುಂದಕ್ಕೂ ದ್ವೇಷವನ್ನೇ ಸಾಧಿಸುತ್ತೀರೋ?’

`ಮುಂದೆ ಏನು ಮಾಡುತ್ತೇವೆಯೋ ಹೇಳಲಾರೆವು! ಅಂತೂ ಈಗ ನೀನು ನನಗೆ ಎದುರು ಕಕ್ಷಿ ಎಂಬುದನ್ನು ತಿಳಿದುಕೊಂಡಿದ್ದೇವೆ! ಇನ್‌ಸ್ಪೆಕ್ಟರಿಗೂ ಜನಕಟ್ಟು ಇದೆ; ಆದ್ದರಿಂದಲೇ ಅವರು ಹೀಗೆ ನಮಗೆ ಸವಾಲ್ ಹಾಕುತ್ತಿದಾರೆ! ಎಂಬುದನ್ನು ತಿಳಿದುಕೊಂಡಿದ್ದೇವೆ’ ಎಂದು ಕಲ್ಲೇಗೌಡ ಹೇಳಿದನು.

ತಿಳಿದುಕೊಂಡಿದ್ದರೆ ವಿವೇಕದಿಂದ ನಡೆದುಕೊಳ್ಳಿ’ ಎಂದು ಹೇಳಿ ಸಿದ್ದಪ್ಪ ರಂಗಣ್ಣನ ಮನೆಗೆ ಹಿಂದಿರುಗಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರ್‍ಜಿಸುವುದನು ಕಲಿತು ಸಿಂಹವಾಗಿ
Next post ಆಹಾ!

ಸಣ್ಣ ಕತೆ

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys