Home / ಕಥೆ / ಕಾದಂಬರಿ / ಮಲ್ಲಿ – ೪

ಮಲ್ಲಿ – ೪

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು ಕಟ್ಟು ಕಾಗದ. ಜೊತೆಗೆ ಆಳು ಕಾಳು ಎಲ್ಲರೂ ಅಂಗಳದಲ್ಲಿ ಕಾದಿದ್ದರು.

“ಹಂಗಾದರೆ, ಸುಬೇದಾರ ತನ್ನ ಮಾತು ಉಳಸಿಕೊಂಡ?”

“ಹೌದು ಬದ್ಲಿ.”

“ನಾವು ಹೊರಟರೆ ಯಾವೊತ್ತು ಹೊರಡಬೇಕು?”

ಬ್ರೇಸ್ಪತಿವಾರ ಹೊರಡಬೇಕು! ”

“ಶುಕ್ರ ವಾರದ ಲಕ್ಷ್ಮೀಪೂಜೆ? ”

“ಜನಾನಾದಲ್ಲೇ ನಡೀಬೋದು, ಅಪ್ಪಣೆಯಾದರೆ ?”

“ಅಂಯ್ ! ಉಂಟಾ ನಂಜಪ್ಪಾ ! ಆ ತಾಯಿಯಲ್ಲವಾ ನಮ್ಮ ನ್ನೆಲ್ಲಾ ಕಾಪಾಡೋಳು? ಅವಳ ಪೂಜೆ ತಪ್ಪೋದು ಡಕ ಸಂಜೆ ಅಷ್ಟು ಹೊತ್ತದೆ ಅನ್ನುವಾಗ ಬರೋದು; ಮಡಿಗಿಡಿ ಮಾಡಿ ಪೂಜೆ ತೀರಿಸಿ ಬೆಳಗಿನ ಝಾವಕ್ಕೆ ಎದ್ದು ಶಿವಪೂಜೆ ನಾಷ್ಠಾ ಮುಗಿಸಿಕೊಂಡು ಊಟದ ಹೊತ್ತಿಗೆ ಅಲ್ಲಿಗೆ ಹೋಗಿ ಸೇರಿ ಬುಡೋದು ?”

“ಸರಿ. ಅವರೂ ಅಲ್ಲಿಗೆ ಶನಿವಾರವೇ ಬರೋದು! ಡೆಪ್ಯುಟೀ ಕಮೀಷನರು ಮಾತ್ರ ಶುಕ್ರವಾರ ಬರುತ್ತಾರೆ.”

“ಸರಿ, ಯಾರು ಯಾರು ಹೊರಡೋರು? ?

“ಬಿಡದಿಯೋರನಕ ಹೊರಟೇ ತೀರಬೇಕು. ಅವರು ಬುಧುವಾರ ರಾತ್ರೀನೇ ಹೊರಡುತ್ತಾರೆ. ಇನ್ನು ನಾಲ್ಕು ಆಳು ಅದಕೆ ಸಾಕು ಅಂತ ಕಾಣ್ತದೆ.”

“ಆಮೇಲೆ? ”

“ದಣಿ ಚಿತ್ತ.”

“ನಮ್ಮವು ನಾಲ್ಕು ಕುದುರೆಗೆ ಎರಡೆರಡಾಳು. ಜೋಡುನಲ್ಲಿ ಬಂದೂಕು ನಾಲ್ಕು, ಎರಡು ಬಾಕು ಹಲಗೆ ಕತ್ತಿ, ಎರಡು ಭಲ್ಯ, ಗುರಾಣಿ, ಮಿಣಿ, ಒಂದು ರಿವಾಲ್ವರ್, ಇಷ್ಟು ಹೋಗಬೇಕು ಅದರದರ ಸಿಬ್ಬಂದಿ ಸಮೇತ. ಇವೆಲ್ಲ ಯಾಕೆ ತಿಳೀತೋ? ಸರಿ. ಅದಕ್ಕೆ ಬೇಕಾದ ಸಿಬ್ಬಂದಿಯೆಲ್ಲ ಜೊತೇಲೇ ಇರಲಿ.”

“ಒಂದು ಡಬ್ಬಲ್ ಪೋಲ್ ಟೆಂಟ್, ಒಂದು ಸಿಂಗಲ್ ಪೋಲ್ ಕೊಡುತೀನಿ ಅಂತ ಬರೆದಿದ್ದಾರೆ.”

“ನಾವು ಅವರ ಟೆಂಟ್ ಕಾದು ಕುಳಿತರೆ ಆಗುತದಾ. ನೀವು ಇವೊತ್ತೆ ಹೋಗಿ, ಪಕ್ಕದ ಊರಲ್ಲಿ ನಮ್ಮ ಕುದುರೆ ಎತ್ತು, ಇವಕ್ಕೆ ಭದ್ರವಾದ ಒಂದು ತಡಿಕೆ ಗೋಡೆ ಮನೆ ಮಾಡಿಸಿ ಬುಡಿ. ಬರುವಾಗ ಯಾರಾದರೂ ಬಡವರಿಗೆ ಕೊಟ್ಟು ಬರೋವ. ನಮಗೆ ಇಲ್ಲಿಂದ ಎರಡು ಟೆಂಟ್ ತೆಗೆಸಿಕೊಂಡು ಹಾಕಿಸಿಬುಡಿ. ನಾವು ಬೇರೆ ಇಲ್ಲದಿದ್ದರೆ ನಮಗೆ ಮಾನ ಬಂದೀತಾ? ನಾಳೆ ಡೆಪ್ಯುಟೀಕಮೀಷನರೂ ಇಲ್ಲೇ ಇರುತೀನ್ರಿ ಅನ್ನೋ ಹಂಗೆ ಇರಲಿ.”

“ಅಪ್ಪಣೆ ಬುದ್ಧಿ ! ”

“ಹಣ ಎಷ್ಟು ತಕೊಂಡು ಹೋಗೋದು ??

“ಮೂರು ಸಾವಿರ ಸಾಕು ಅಂತ ಕಾಣ್ತದೆ.”

“ಅಂಯ್ ! ಉಂಟಾ! ಹೋಗೋದು ಭಾರೀ ಜಾಗ ಐದಾ ದರೂ ಇರಲಿ.”

“ಮಾದೇಗೌಡರೂ ಅಪ್ಪಣೆಯಾದರೆ….”

“ಬರಲಿ, ಆದರೆ ನಮ್ಮ ಕ್ಯಾಂಪ್ನಲ್ಲಿ ಇರೋದಾ. ಅವರಿಗೆ ಬೇರೆ ಒಂದು ಟೆಂಟ್ ಹಾಕಿಸಿಬುಡಿ. ಜನಾನಾದೋರು ಅನೆ ಕಟ್ಟೋ ದಿನ ಬರುತ್ತಾರೆ. ಆದಿನ ಮಂಟಪ ಗರೀಲಾದರೂ ಕಟ್ಟಿಸಿರಬೇಕು. ಅವನೋ ? ಅವನನ್ನೇನು ಮಾಡುತ್ತೀರಿ? ”

“ಯಾರು ಮಲ್ಲಣ್ಣನ್ನೇ?”

“ಹೂ! ಅವನೂ ಅವನ ಮಗಳೂ ಬರಬೇಕಲ್ಲ ? “.

“ಅಪ್ಪಣೆ ಆದರೆ ಲಾಯದ ಮಗ್ಗುಲಲ್ಲಿ ಒಂದು ಅಂಕಣ ಹಾಕಿ ಸೋದೆ.”

” ಬೊಡ್ಡೀಮಗ ಪೂರಾಮಗ. ಬೋ ರಸಿಕ. ಆ ಹೆಂಡತಿ ಬಿಟ್ಟಿರಲಾರ.. ಅವನು ಹೆಂಡ್ತೀನೂ ಕರಕೊಂಡು ಬರೋದಾದರೆ ಲಾಯದ ಮಗ್ಗುಲಲ್ಲೇ ಅವನಿಗೆ ಜಾಗಾಕೊಡಿ. ಇಲ್ಲದಿದ್ದರೆ ನಮ್ಮ ಜೊತೇಲೆ ಇದ್ದು ಬುಡಲಿ.?

“ಅವನೇ ಬಂದಿದ್ದಾನೆ.”

“ಬರಹೇಳಿ.”

ಮಲ್ಲಣ್ಣ ಬಂದು ಕಾಲೂರಿ ಕೈಚಾಚಿ ಶರಣುಮಾಡಿ ನಿಂತು ಕೊಂಡನು. ನಾಯಕನು ನಗುತ್ತಾ “ಇನ್ನು ಮೇಲೆ ನಿನ್ನ ಏನನ್ನ ಬೇಕು ಮಲ್ಲಣ್ಣ ? ಈಗ ಏನು ನೀನು ಬಾನು ಮುಟ್ಟುತಿದ್ದೀ” ಎಂದನು. ಮಲ್ಲಣ್ಣನು ಗಂಭೀರವಾಗಿ ನಗುತ್ತಾ ಕೈ ಮುಗಿದುಕೊಂಡು “ಬುದ್ಧಿಯವರು ಬಾನುಮುಟ ಬೆಳೆದವರೆ ಅಂತ ತಾನೇ ನಾವೂ ಹತ್ತುಕೊಂಡು ಹೋಗೋದು!” ಎಂದನು.

ಪಟೇಲನು ಆ ಸ್ತುತಿಯನ್ನು ಒಪ್ಪಿಕೊಳ್ಳುತ್ತಾ ಕೇಳಿದನು: “ಅಯಿತು. ಏನು? ಹೊರಡೋಡು ಯಾವೊತ್ತು ? ಯಾರ್ಯಾರು ಹೊರಡುತೀರಿ? ಹೆಂಗೆ?”

ಮಲ್ಲಣ್ಣನೂ ವಿನಯದಿಂದ ಹೇಳಿದನು: “ಬುದ್ದಿಯೋರು ಅಪ್ಪಣೆ ಕೊಡಿಸತಾ ಇದ್ದದ್ದೆಲ್ಲ ಕೇಳಿದೆ. ಸೊರ್ಗದಲ್ಲಿ ಎರಡು ದಿನ ಇರಬೇಕು ಅಂದರೆ ಬೇಡ ಅನ್ನೋರು ಯಾರು ? ಮೊಗಾ ಕರಕೊಂಡು ನಾನೊ ಬ್ಬನೇ ಬರುತೀನಿ.”

“ಆಮೇಲೆ ನಮ್ಮನ್ನೇ ಅಡಕೆಲೇ ತತ್ತಾ ಅಂದರೆ?”

ಎಲ್ಲರಿಗೂ ನಗುಬಂತುಃ ಕೆಲವರು ತಡೆಯಲಾರದೆ ನಕ್ಕು ಬಿಟ್ಟರು. ಮಲ್ಲಣ್ಣಮಾತ್ರ ಗಾಬರಿಯಾಗಿ, “ಶಿವ ಶಿವಾ! ಬುದ್ದಿ ಯೋರು ಅಡಕೆಲೆ ಉಗಿದಕಡೆ ನಿಲ್ಲೋರು ನಾವು?” ಎಂದು ಅಡ್ಡ ಬಿದ್ದನು.

“ಹಂಗಾದರಿ, ನೀನೊಬ್ಬನೇ ಬರೋನು? ಆಗಲೇಳು. ಬಿಡದೀಲಿರೋ ಯಾರಾದರೂ ಆ ಹೆಣ್ಣು ನೋಡಿಕೊಳ್ತಾರೆ. ಹೆಂಗೇ ಮಾಡು. ಎನ್ರೀ! ಈ ಮಲ್ಲಣ್ಣನಿಗೆ ಒಂದು ಮೆತ್ತೆ, ಒಂದು ಉಜ್ಜು ಗಂಬಳಿ ಒಂದು ಜೊತೆ ದುಪ್ಪಟಿ ಇವೊತ್ತೇ ಕೊಡಿಸಿ. ಬಟ್ಟೆಬರೇಗೆಲ್ಲ ಒಂದು ಐನತ್ತುರೂಪಾಯಿ ಸಾಕೋ ?”

“ಐವತ್ತುರೂಪಾಯಿ ಆದರೆ. ಒಂದು ಮನೆಕಟ್ಟಬಹುದು. ಬೇಕಾದಷ್ಟು ಆಯಿತು.?

“ಆ ಏಕನಾದಕ್ಕೆ ಒಂದಷ್ಟು ಬಣ್ಣಗಿಣ್ಣ ಹಾಕಿಸಿ ಎಲ್ಲಾ ಪಸಂದುಮಾಡು.”

ಹೌದು ಬುದಿ. ರಾಣಿ ಮೊಮ್ಮಗನ ಮುಂದೆ ಹಿಡಿಯೋವಾಗ ಅದೂ ಅಲ್ಲಿಗೆ ತಕ್ಕಂತೇ ಇರಬೇಡವಾ? ”

ಈ ಸರಿ. ನಿಂದಾಯಿತು. ಎಲ್ಲ್ರಿ? ನೀವು ಏಳಿ. ನಾನು ಹೋಗಿ ಕುದುರೆಲಾಯ ನೋಡುತೀನಿ.?

ಮಲ್ಲಣ್ಣ ಅಡ್ಡ ಬಿದ್ದು ಹೊರಟನು. ನಾಯಕರು ಏನೋ ಯೋಚಿಸಿಕೊಂಡು “ನಿನ್ನ ಹೆಂಡ್ರೂನೂನೂ ಕರಕೊಂಡು ಬಾರೋ. ಆಮೇಲೆ ಬಯ್ಕೋ ಬೇಡ” ಅಂದನು.

ಮಲ್ಲಣ್ಣ ಬಹು ಸಂತೋಷಪಟ್ಟು ಕೊಂಡು ಆ ಸಂತೋಷ ತೋರಿಸಿಕೊಳ್ಳುತ್ತಾ ‘ಅಪ್ಪಣೆ! ಪಾದ’ ಎಂದು ಕೈಮುಗಿದು ಹೋದನು, ಮನೆವಾರ್ತೆ ಎಲ್ಲರ ಮೊಕನೋಡಿದನು. ಒಬ್ಬೊಬ್ಬ ರಾಗಿ ಸಡಿಲಿದರು. ಎಲ್ಲರೂ ಹೊರಟುಹೋದಮೇಲೆ, ಅವನು ಕೊಂಚ ಹತ್ತಿರ ಬಂದ್ಕು ಬಾಯಿಗೆ ಕೈ ಅಡ್ಡವಾಗಿ ಹಿಡಿದು “ಹೋಗುವಾಗ ದಾರೀಲಿ ಮೂಗೂರಿಗೆ ಹೋಗಲೋ ? ತಿರುಮಕೂಡ್ಲಿಗೆ ಹೋಗ ಲೋ ಎಂದು ಕೇಳಿದನು

ಪಟೇಲನು ಒಂದು ಗಳಿಗೆ ಸುಮ್ಮನಿದ್ದು “ಅದಕ್ಕೇ ನಾನು ಬೇರೆ ಇರೋವ ಅಂದದ್ದು. ಈ ದೊಡ್ಡ ಸಾಹೇಬರಿಗೆ ನಮಗಿಂತ ಚಪಲ. ಕಾಗೆ ತಂದದ್ದು ಹದ್ದುಹಾರಿಸಿಕೊಂಡು ಹೋದಂಗಾದೀತು. ಆ ಸುತ್ತಮುತ್ತಿನವೇ ಯಾವಾದರೂ ನೋಡಿ.”

“ಬಂಡೀಪುರದ ಮಗ್ಗುಲಲ್ಲಿ ಸೂಳೇರು ಪೊಗದಸ್ತಾಗಿರುತಾರೆ ಅಂತಾರೆ.”

“ಸರಿ ಅಲ್ಲೇ ಒಂದು ಗೊತ್ತುಮಾಡಿ. ಹೋದ ಹೋದ ಕಡೇಲೆಲ್ಲಾ ಒಬ್ಬೊಬ್ಬ ಸೂಳೆ ಬೇಕು ಇವನಿಗೆ ಅಂತ ಸುಮ್ಮ ಸುಮ್ಮನೆ ಗೋ ದ ಮಾತು ನಿಜವಾದರೂ ಆಗಲಿ.”

ವಾರ್ತೆ ಕೈಮುಗಿದು ಹೊರಟನು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್