ಚುನಾವಣೆಯೆಂಬ ಚಂಚಲೆ

ಚುನಾವಣೆಯೆಂಬ ಚಂಚಲೆ

ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಚುನಾವಣೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿದೆ, ಚುನಾವಣೆ ಖಂಡಿತವಾಗಿ ಪ್ರಜಾಪ್ರಭುತ್ವದ ಒಂದು ಪ್ರಮುಖ ಸಾಧನ- ಆದರೆ ಅದು ತೋರಿಕೆಯ ಸಾಧನವಾದರೆ ಪ್ರಜಾಪ್ರಭುತ್ವವೆನ್ನುವುದು ಒಂದು ಫೋಜು ಮಾತ್ರವಾಗುತ್ತದೆ. ನಮ್ಮಲ್ಲಿ ಚುನಾವಣೆಯ ಆಕರ್ಷಣೆ ಎಷ್ಟಿದೆಯೆಂದರೆ ಅದನ್ನು ಒಂದು ಸಾಧನವೆಂದು ಭಾವಿಸುವುದಕ್ಕಿಂತ ಅಂತಿಮ ಗುರಿಯೆಂದು ನಂಬುವುದೇ ಹೆಚ್ಚು. ಈ ನಂಬುಗೆಯ ನಿಲುವು ಎಂಥ ಒತ್ತಡವನ್ನು ನಿರ್ಮಾಣ ಮಾಡಬಲ್ಲುದೆಂಬುದಕ್ಕೆ ಇಂದಿರಾ ಗಾಂಧಿಯವರ ಒಂದು ಉದಾಹರಣೆಯನ್ನು ಕೊಡಬಹುದು. ತುರ್ತುಪರಿಸ್ಥಿತಿಯನ್ನು ಹೇರಿ ಅಂಬಾರಿ ಹತ್ತಿದ ಇಂದಿರಾ ಗಾಂಧಿಯವರು ನಂತರ ತಾನು ಪ್ರಜಾಪ್ರಭುತ್ವವಾದಿಯೆಂದು ತೋರಿಸಿಕೊಳ್ಳುವುದಕ್ಕಾದರೂ ಚುನಾವಣೆ ಘೋಷಿಸಬೇಕಾಗಿ ಬಂದಿತು. ದೇಶದ ಉದ್ದಗಲಕ್ಕೆ ತುರ್ತುಪರಿಸ್ಥಿತಿಯ ವಿರುದ್ಧದ ವಾತಾವರಣ ರೂಪುಗೊಳ್ಳುತ್ತಿದ್ದಾಗ ಚುನಾವಣೆಯನ್ನು ನಡೆಸಬೇಕಾದ ಮಾನಸಿಕ ಒತ್ತಡಕ್ಕೆ ಅವರು ಒಳಗಾಗಿದ್ದರು. ಸರ್ವಾಧಿಕಾರಿಯೆಂಬ ಪಟ್ಟದಲ್ಲಿ ಸಂಭ್ರಮಿಸಲಾಗದ ಅವರಿಗೆ ಚುನಾವಣೆ ಒಂದು ತೋರಿಕೆಯ ಸಾಧನವಾಯಿತು. ತಾವು ಮತ್ತು ತಮ್ಮ ಪಕ್ಷ ಸೋಲೊಪ್ಪಿದರೂ ತುರ್ತು ಪರಿಸ್ಥಿತಿಯು ತಾತ್ಕಾಲಿಕ ಅನಿವಾರ್ಯತೆಯೆಂದು ಪ್ರತಿಪಾದಿಸಲು ತಾವು ಪ್ರಜಾಪ್ರಭುತ್ವವಾದಿಯೆಂದು ತೋರಿಸಲು ಚುನಾವಣೆ ಸಾಧನವನ್ನು ಬಳಸಿಕೊಳ್ಳಲು ಹಿಂಜರಿಯಲಿಲ್ಲವೆನ್ನುವುದು ಇಲ್ಲಿ ಗಮನಾರ್ಹ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ನೇತೃತ್ವದ ಸರ್ಕಾರವು ತುರ್ತು ಪರಿಸ್ಥಿತಿಯಲ್ಲಿಗಳಿಸಿದ ಅಪರಿಮಿತ ಅಧಿಕಾರವನ್ನು ಭೂಸುಧಾರಣೆಯಂಥ ಅನೇಕ ಜನಮುಖಿ ಕಾರ್ಯ ಯೋಜನೆಗಳಿಗಾಗಿ ಬಳಸಿಕೊಂಡಿದ್ದರಿಂದ ಚುನಾವಣೆಯಲ್ಲಿ ಕಾಂಗೈ ಗೆದ್ದಿತು. ಆದರೆ ದೇಶದ ಅನೇಕ ಕಡೆ ಕಾಂಗೈಗೆ ಕಂಡಲ್ಲಿ ಗುಂಡು ಎಂಬಂಥ ಪರಿಸ್ಥಿತಿ ಉಂಟಾಯಿತು. ತುರ್ತು ಪರಿಸ್ಥಿತಿಯ ತಂಗಳನ್ನು ತಿನ್ನಿಸಲಾಯಿತು.

ಈಗ ತೋರಿಕೆಯ ಸರದಿ ಶ್ರೀ ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದ್ದಾಗಿದೆ. ಪಂಚಾಯತ್‌ರಾಜ್ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಬದ್ಧವಾಗಿರುವುದಾಗಿ ಹೇಳಿಕೊಂಡು ಬರುತ್ತಿದ್ದ ಮೊಯಿಲಿಯವರು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಿದರು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ವಿಳಂಬವಾಗತೊಡಗಿದಾಗ ಟೀಕೆಯನ್ನು ಎದುರಿಸಿದರು. ಅನ್ನಲೋ ಬೇಡವೋ ಎಂದು ಅನುಮಾನಿಸುತ್ತಲೇ ಟೀಕಾಸ್ತ್ರಗಳನ್ನು ಹೊರತೆಗೆದು ಆಗೊಮ್ಮೆ ಈಗೊಮ್ಮೆ ಗುರಿತಪ್ಪಿಸಿ ಪ್ರಯೋಗಿಸುವ ಕರ್ನಾಟಕದ ವಿರೋಧ ಪಕ್ಷಗಳು ಬಲವಾಗಿ ಬಾಯಿ ಮಾಡ ತೊಡಗಿದಾಗ ಚುನಾವಣೆ ದಿನಾಂಕವನ್ನು ಘೋಷಿಸಲಾಯಿತು. ಮೇ ಕೊನೆಯ ವಾರಕ್ಕೆ ಚುನಾವಣೆ ನಿಗದಿಯಾಯಿತು. ಈ ನಿರ್ಧಾರದ ಬೆನ್ನ ಹಿಂದೆ ಚಿನ್ನಪ್ಪರೆಡ್ಡಿ ವರದಿಯನ್ನು ವಿಸ್ತರಿಸಿದ ‘ಸರ್ಕಾರಿ ಶೈಲಿಯ ವರದಿ’ಯನ್ನು ರೂಪಿಸಿ ಚಿನ್ನಪ್ಪರೆಡ್ಡಿ ವರದಿ ಎಂಬ ಹೆಸರಿನಲ್ಲಿ ಅನುಷ್ಠಾನ ಗೊಳಿಸಲಾಯಿತು. ಚಿನ್ನಪ್ಪರೆಡ್ಡಿ ವರದಿಯನ್ನಷ್ಟೇ ಅಲ್ಲ, ಯಾವುದೇ ವರದಿಯನ್ನು ಸರ್ಕಾರಗಳು ಪರಿಷ್ಕರಿಸಬೇಕಾಗಬಹುದು. ಇದು ಸರ್ವ ಸಾಮಾನ್ಯವಾದರೂ ಮೂಲವರದಿಯ ಸತ್ವವನ್ನು ನಾಶಮಾಡಬಾರದು; ಹಾಗೇನಾದರೂ ಆಗುವಂತಿದ್ದರೆ ವರದಿಯನ್ನು ಒಪ್ಪಲೇಬಾರದು. ವಿಷಯದ ವಿವರವಾದ ಚರ್ಚೆ ಇಲ್ಲಿ ಬೇಡ. ನೇರವಾಗಿ ಚುನಾವಣೆ ವಿಷಯಕ್ಕೆ ಬರೋಣ. ಚಿನ್ನಪ್ಪರೆಡ್ಡಿ ವರದಿಯ ಅನುಷ್ಠಾನದಿಂದ ಚುನಾವಣಾ ಸ್ಥಾನಗಳ ಮೀಸಲಾತಿಯಲ್ಲಿ ಪುನರ್ ಸಂಯೋಜನೆ ಯಾಗಬೇಕಾದ ಕಾರಣವೊಡ್ಡಿ ಚುನಾವಣೆಯನ್ನು ಮುಂದೂಡಲು ಮೊದಲೇ ನಿರ್ಧರಿಸಿ ಕೊಂಡಿದ್ದಂತೆ ಮೊಯಿಲಿಯವರ ಸರ್ಕಾರ ವರ್ತಿಸಿತು. ಚುನಾವಣೆಯಲ್ಲಿನ ಮೀಸಲಾತಿಯ ಪ್ರಶ್ನೆ ಎತ್ತಿ ಹೈಕೋರ್ಟಿನಲ್ಲಿ ಹಾಕಿದ್ದ ರಿಟ್‌ಗಳು ಸೋಲಪ್ಪಿದಾಗ, ಸುಗ್ರೀವಾಜ್ಞೆಯ ಮೂಲಕ ಚುನಾವಣೆಗಳನ್ನು ಮುಂದೂಡಲಾಯಿತು. ಅಷ್ಟಕ್ಕೇ ನಿಲ್ಲಿಸಿದ್ದರು ಅವಮಾನದ ಹಂತ ಅಷ್ಟಕ್ಕೇ ನಿಲ್ಲುತ್ತಿತ್ತು. ವಿರೋಧ ಪಕ್ಷದ ಖಂಡನೆ, ಪಂಚಾಯತ್‌ರಾಜ್ ಮಂತ್ರಿ ಘೋರ್ಪಡೆ ರಾಜೀನಾಮೆ ಸಲ್ಲಿಕೆ, ಹೈಕಮಾಂಡ್‌ನ ಕಿವಿಮಾತು ಮುಂತಾದುವೆಲ್ಲ ಸೇರಿ ಮತ್ತೆ ಚುನಾವಣೆ ನಡೆಸುವ ಬಗ್ಗೆ ಮರು ಚಿಂತನೆ ಪ್ರಾರಂಭ. ಕಡೆಗೆ ಆಗಿರುವ ಅವಮಾನವಷ್ಟನ್ನೇ ಉಳಿಸಿಕೊಳ್ಳಲು ಚುನಾವಣೆ ಮುಂದೂಡಿಕೆಯ ನಿರ್ಧಾರ.

ಚುನಾವಣೆಯ ಬಗ್ಗೆ ಇಷ್ಟೆಲ್ಲ ಯಾಕೆ ತಲೆ ಕೆಡಿಸಿ ಕೊಳ್ಳಲಾಯಿತು? ಪ್ರಜಾಪ್ರಭುತ್ವವನ್ನು ಸಮಾನತೆಯ ಸಮಾಜದ ಮೂಲಕ ಕಾಣಲಾಗದ ಸನ್ನಿವೇಶದಲ್ಲಿ ಚುನಾವಣೆ ಒಂದು ಸಾಧನ ಮಾತ್ರವಾಗದೆ ಸರ್ವಸ್ವವೂ ಆಗುತ್ತದೆ. ನಮ್ಮ ದೇಶದಲ್ಲಿ ಆಗಿರುವುದು ಅದೇ. ಚುನಾವಣೆಯೆನ್ನುವುದು ಚಂಚಲ ಗುಣಗಳನ್ನು ಅಂತರ್ಗತ ಮಾಡಿಕೊಂಡಿರುವುದರಿಂದ, ಸರ್ಕಾರಗಳು ಚಂಚಲವಾಗುತ್ತವೆ. ಚುನಾವಣೆ ನಡೆಸುವುದೆ ಬೇಡವೆ ಎಂಬ ಚಂಚಲತೆಯ ಚುನಾವಣೆಯು ಗೆಲ್ಲಿಸುವುದೆ ಅಥವಾ ಸೋಲಿಸುವುದೆ ಎಂಬ ಚಂಚಲತೆಯ ಪ್ರೇರಣೆಯಾಗಿದೆ. ಅನಿಶ್ಚಿತ ಗುಣಲಕ್ಷಣಗಳ ಚುನಾವಣೆಯನ್ನು ಎದುರಿಸುವ ಧೈರ್ಯ ಸರ್ಕಾರಕ್ಕೆ ಇಲ್ಲ; ವಿರೋಧಪಕ್ಷಗಳಿಗೂ ಇಲ್ಲ. ಆದರೆ ಇಬ್ಬರೂ ಚುನಾವಣೆ ಪರವಾದ ಮಾತನ್ನೇ ಆಡುತ್ತಾರೆ, ಚುನಾವಣೆ ಎಲ್ಲಿ ಬಂದೀತೊ ಎಂದು ಮೈಪರಚಿಕೊಳ್ಳುತ್ತಾರೆ. ಯಾಕೆಂದರೆ ಗೆಲುವಿಗಿಂತ ಸೋಲಿಗೆ ಸಿದ್ಧವಾದ ‘ಸೇವೆ’ ಮಾಡಿದ ಕೀರ್ತಿ ಗಳಿಸಿರುತ್ತಾರೆ, ಚುನಾವಣೆಯಲ್ಲಿರುವ ಚಂಚಲತೆಯ ಕಾರಣಕ್ಕಾಗಿ ಇವರು ಆಧೀರರಾಗುತ್ತಾರೆ.

ಹಾಗೆ ನೋಡಿದರೆ ಚುನಾವಣೆಯ ಪರಿಕಲ್ಪನೆಯಲ್ಲಿ ಚಂಚಲತೆಗೆ ಸ್ಥಾನವಿಲ್ಲ. ಅದೊಂದು ಮೌಲ್ಯ ನಿರ್ಣಯದ ಮಾರ್ಗ, ಜನತೆಯು ತನ್ನ ಹಕ್ಕನ್ನು ಚಲಾಯಿಸಿ ತನ್ನನ್ನು ತಾನೇ ಆಳಿಕೊಳ್ಳುವ ಒಂದು ಮಾಧ್ಯಮ; ಸೈದ್ಧಾಂತಿಕ ಸೆಣಸಿನ ಅಖಾಡ. ಆದರೆ ಇಂಡಿಯಾದ ರಾಜಕೀಯ, ಚುನಾವಣೆಯನ್ನು ಚಂಚಲೆಯನ್ನಾಗಿಸಿದೆ. ಯಾಕೆಂದರೆ ಇಲ್ಲಿನ ರಾಜಕೀಯವೇ ಚಂಚಲವಾಗಿದೆ. ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳನ್ನು ಬಿಟ್ಟರೆ ಉಳಿದ ಪಕ್ಷಗಳಿಗೆ ಚುನಾವಣೆಗೊಂದು ಪ್ರಣಾಳಿಕೆ ಸಿದ್ಧವಾಗುತ್ತದೆಯೇ ಹೊರತು ಗಟ್ಟಿ ಸೈದ್ಧಾಂತಿಕ ಬದ್ಧತೆಯಿಲ್ಲ. ಬಿ.ಜೆ.ಪಿ.ಯಂಥ ಬಲಪಂಥೀಯ ಮತ್ತು ಕಮ್ಯುನಿಸ್ಟ್ ಮಾರ್ಕ್ಸ್‌ವಾದಿಗಳಂಥ ಎಡಪಂಥೀಯ ಪಕ್ಷಗಳಿಂದ ಯಾರಾದರೂ ಪಕ್ಷಾಂತರ ಮಾಡಿದರೆ ಆಗ ‘ಪಕ್ಷಾಂತರ’ ಎನ್ನುವುದಕ್ಕೂ ಒಂದು ಅರ್ಥವಿರುತ್ತದೆ. ಆದರೆ ಉಳಿದ ಮಧ್ಯ ಪಂಥೀಯ ಪಕ್ಷಗಳ ನಡುವಿನ ಪಕ್ಷಾಂತರ ಒಂದು ರೀತಿಯಲ್ಲಿ ಪಕ್ಷಾಂತರ ಅಲ್ಲ. ಏಕೆಂದರೆ ಇಲ್ಲಿ ಸೈದ್ಧಾಂತಿಕವಾಗಿ ಯಾವ ಭಿನ್ನಾಭಿಪ್ರಾಯವೂ ಇರಲಾರದು. ಕೇವಲ ವೈಯಕ್ತಿಕ ಆಸೆ, ನಿರಾಸೆ, ನಿರೀಕ್ಷೆಗಳು ಪಕ್ಷ ಬದಲಾವಣೆಗೆ ಕಾರಣವಾಗುತ್ತವೆ. ಈಗ ಇಲ್ಲಿದ್ದವರು ಅಲ್ಲಿಗೆ ಹೋಗಿ, ಮತ್ತೆ ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿರುವಂಥ ‘ಪಕ್ಷ’ಗಳ ಸಂದರ್ಭದಲ್ಲಿ ‘ಪಕ್ಷಾಂತರ’ ಎಂಬ ಪರಿಕಲ್ಪನೆಗೆ ಆರ್ಥವೆಲ್ಲಿದೆ. ಹೀಗೆ ಹೋಗಿ ಬರಲು ಸಾಧ್ಯವೆಂಬುದೇ ಮಧ್ಯ ಪಂಥೀಯವೆನ್ನಿಸಿಕೊಳ್ಳುವ ಪಕ್ಷಗಳ ಸ್ವರೂಪವಾಗಿದ್ದು ಅವು ಎಡ ಅಥವಾ ಬಲ ಪಂಥೀಯರಂತೆ ದೃಢವಾದ ರಾಜಕೀಯ ಪಕ್ಷಗಳಾಗಿಲ್ಲ; ಸಂಘಟಿತ ರಾಜಕೀಯ ಗುಂಪುಗಳಾಗಿವೆ. ಈಗ ಎಡ ಮತ್ತು ಬಲ ಪಕ್ಷಗಳು ಸ್ವಲ್ಪ ಸಡಿಲಗೊಳ್ಳುತ್ತಿರುವಾಗ- ಅದರಲ್ಲೂ ಬಿ.ಜೆ.ಪಿ.ಯಂಥ ಪಕ್ಷಗಳು ಎಲ್ಲರಿಗೂ ಬಾಗಿಲು ತೆರೆದು ಕೂತಿರುವಾಗ, ನಮ್ಮ ದೇಶದ ರಾಜಕೀಯ ಚಂಚಲತೆಯ ಅಗಾಧತೆ ಅರಿವಾಗುತ್ತದೆ. ರಾಜಕೀಯವೇ ಚಂಚಲವಾಗಿರುವುದರಿಂದ ಈ ರಾಜಕೀಯವನ್ನು ಪ್ರಕಟಿಸುವ ಪ್ರಮುಖ ಸಾಧನವಾಗುವ ಚುನಾವಣೆ ಚಂಚಲವಾಗಿದೆ.

ಈ ದೇಶದಲ್ಲಿ ಚಂಚಲತೆಯದೇ ಒಂದು ವಿಶೇಷ ಆಕರ್ಷಣೆ. ದಿನದಿನಕ್ಕೆ ಬಣ್ಣ ಬದಲಾಯಿಸುವುದು ಬೆಳವಣಿಗೆಯೆಂಬ ಭ್ರಮೆ ಬೇರೆ. ಶಾರೀರಿಕ ಹಾಗೂ ಮಾನಸಿಕ ಚಂಚಲತೆಗಳು ವಾಯ್ಯಾರದಲ್ಲಿ ವ್ಯಕ್ತವಾಗುವ ರೀತಿಯಿಂದ ರೋಚಕ ಗೊಳ್ಳುವ ಮನಸ್ಥಿತಿಗೆ ಚುನಾವಣೆಯ ಒಳ ಹೂರಣಕ್ಕಿಂತ ಹೊರ ವಯ್ಯಾರವೇ ಮುಖ್ಯವಾಗುತ್ತಿದೆ. ಹೊರ ವಯ್ಯಾರದ ಚಂಚಲತೆಗೆ ಜನರು ಒಲಿದು ಒತ್ತುವ ಓಟು ಮಾತ್ರ ಬೇಕಾಗುತ್ತದೆ. ಇದನ್ನು ಮೀರಿದ ಒಳಸತ್ವ ಮತ್ತು ಸಮಾನತೆ ಮಣ್ಣು ಮುಕ್ಕುತ್ತದೆ.

ಚುನಾವಣೆಗೆ ಈ ದೇಶದಲ್ಲಿ ಎಂಥ ವಯ್ಯಾರ ಬಂದಿದೆಯೆಂದರೆ ಅದರ ಆಕರ್ಷಣೆಗೆ ಅಡ್ಡ ಬೀಳದ ಜನ-ನಾಯಕರು ಕಡಿಮೆಯಾಗುತ್ತಿದ್ದಾರೆ. ಚುನಾವಣೆಯೆನ್ನುವುದು ಈಗ ಅಭಿಪ್ರಾಯ ಪ್ರಕಟಣೆಯ ಹಕ್ಕು ಮಾತ್ರವಾಗಿ ಉಳಿದಿಲ್ಲ. ಕಣ್ಣು ಹೊಡೆದು ಕರೆಯುವ ಕಾಮಿನಿ ಆಗಿದೆ. ತನ್ನಲ್ಲಿ ಹಣದ ಆಕರ್ಷಣೆ, ಹೆಂಡದ ಹೊಂಡ, ಭಂಡತನದ ಬಿನ್ನಾಣ- ಇಂಥ ಆಯಸ್ಕಾಂತ ಅವಗುಣಗಳಲ್ಲಿ ಹಕ್ಕು ಹಾರಿಹೋಗುತ್ತದೆ. ಚುನಾವಣೆಯನ್ನು ರಾಜನರ್ತಕಿಯಂತೆ ಕಾಣಿಸುವ ಕೋಟ್ಯಾಧಿಪತಿಗಳು ಈ ದೇಶದಲ್ಲಿದ್ದಾರೆ. ಅವರು ತಮಗೆ ಅನುಕೂಲವಾಗುವ ವ್ಯಕ್ತಿ ಮತ್ತು ಪಕ್ಷಗಳಿಗೆ ಪಿಂಡದಾನ ಮಾಡಿ ಪರೋಕ್ಷ ಪ್ರಸಿದ್ಧಿ ಪಡೆಯುತ್ತಾರೆ. ಜನಪ್ರತಿನಿಧಿಗಳ ನಿಯಂತ್ರಣ ಸಾಧಿಸಿ ಬಂಡವಾಳ ಬುದ್ದಿಯನ್ನು ಮರೆಯುತ್ತಾರೆ. ಇನ್ನು ಹಳ್ಳಿಗಳಲ್ಲಿ ಊಳಿಗಮಾನ್ಯ ಪ್ರಭುತ್ವವು ಪೂರ್ಣ ಅವನತಿ ಹೊಂದಿಲ್ಲದ ಕಾರಣ ಭೂಮಾಲಿಕರ ಹಿಡಿತದಿಂದ ಸಾಮಾನ್ಯ ಜನತೆಯು ಸಂಪೂರ್ಣವಾಗಿ ತಪ್ಪಿಸಿ ಕೊಂಡಿಲ್ಲ. ಆದರೆ ಮೊದಲಿನಷ್ಟು ಬಿಗಿ ಹಿಡಿತವು ಇಲ್ಲ. ಬಿಗಿ ಹಿಡಿತ ತಪ್ಪುತ್ತಿರುವ ಸಂದರ್ಭದಲ್ಲಿ ಆಟಗಾರರನ್ನು ಕೇವಲ ಸಾಂಪ್ರದಾಯಿಕ ಸ್ಥಾನ ಮಾನದಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಊರ ಪಟೇಲ, ಪುರೋಹಿತರು ಹೇಳಿದ ಮಾತನ್ನು ಮೀರಿ ಮತದಾನ ಮಾಡಬಾರದೆಂಬ ಭಾವನೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿರುವುದರಿಂದ ಚುನಾವಣೆಯನ್ನು ಆಕರ್ಷಣೀಯ ವನ್ನಾಗಿ ಮಾಡಲಾಗುತ್ತಿದೆ. ಒಮ್ಮೆ ಧನಲಕ್ಷ್ಮಿಯಾಗಿ, ಇನ್ನೊಮ್ಮೆ ಸುರಾಲಕ್ಷ್ಮಿಯಾಗಿ, ಮತ್ತೊಮ್ಮೆ ನಿರಾಭರಣ ಸುಂದರಿ ಯಾಗಿ -ಹೀಗೆ ವಿವಿಧ ರೂಪಗಳಲ್ಲಿ ರೋಮಾಂಚನ ತರುವ ಚುನಾವಣೆ ಒಂದಲ್ಲ ಒಂದು ವಿಧದಲ್ಲಿ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸುತ್ತದೆ. ಮತದಾರ, ಅಭ್ಯರ್ಥಿ, ವಿವಿಧ ಪಕ್ಷಗಳು ಎಲ್ಲರೂ ಚುನಾವಣೆ ಏನು ಮಾಡುತ್ತದೆಯೋ ಎಂಬ ಅನಿಶ್ಚತತೆಯಲ್ಲಿ ಚುನಾವಣೆ ಚಂಚಲತೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸುತ್ತಾರೆ. ಅದಕ್ಕಾಗಿ ವಿವಿಧ ಉಪಾಯಗಳನ್ನು ಹುಡುಕ ತೊಡಗುತ್ತಾರೆ.

ಇನ್ನೊಂದು ಅಂಶವನ್ನು ಇಲ್ಲಿ ಗಮನಿಸಬೇಕು. ನಮ್ಮ ದೇಶದಲ್ಲಿ ವಿವಿಧ ಪಕ್ಷಗಳಿಗೆ ಬದ್ಧವಾದ ಮತದಾರರನ್ನು ಬಿಟ್ಟರೆ ಬಹುಸಂಖ್ಯೆಯ ಮತದಾರರ ತಟಸ್ಥರು -ಅವರು ಆಯಾ ಚುನಾವಣೆಯ ಸಂದರ್ಭದಲ್ಲೇ ನಿರ್ಧಾರ ತೆಗೆದುಕೊಳ್ಳುವ ಜನ, ಚುನಾವಣೆಯ ಫಲಿತಾಂಶವನ್ನು ಏರು ಪೇರು ಮಾಡುವ ಶಕ್ತಿ ಅವರಿಗಿದೆ. ಚುನಾವಣೆಗೆ ಚಂಚಲತೆ, ರಂಜಕತೆಗಳನ್ನು ತರುವ ಶಕ್ತಿ ಈ ತಟಸ್ಥ ಮತದಾರರಿಗಿದೆ. ನಮ್ಮ ಸಂದರ್ಭದಲ್ಲಿ ಚುನಾವಣೆಯೆನ್ನುವುದು ಪ್ರಜಾಪ್ರಭುತ್ವದ ಪ್ರದರ್ಶನಕ್ಕಾಗಿ ಬಳಸಲ್ಪಡುವ ಸಾಮಗ್ರಿಯಾಗಿದೆ, ಚುನಾವಣೆ ಮಾತ್ರ ಪ್ರಜಾಪ್ರಭುತ್ವ ಎಂಬ ಭಾವನೆ ಮೂಡಿಸಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯು ಒಂದು ಪ್ರಮುಖ ಅಂಗ, ಆದರೆ ಅದು ಮಾತ್ರ ಪ್ರಜಾಪ್ರಭುತ್ವವಲ್ಲ. ಚುನಾವಣೆಯ ಚಂಚಲತೆಯನ್ನು ಕಡಿಮೆ ಮಾಡುತ್ತ, ಸಮಾನತೆ ಮತ್ತು ಸ್ಥಿರತೆ ತರುವ ಪ್ರಯತ್ನದ ಪ್ರಕ್ರಿಯೆಯೇ ಪ್ರಜಾಪ್ರಭುತ್ವವಾಗಬೇಕು. ಸ್ಥಿರತೆ ಎಂದರೆ ಸ್ಥಗಿತತೆಯಲ್ಲ ಎಂಬ ಎಚ್ಚರವೂ ಬೇಕು.
*****
೨೨-೦೫-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಿಗ್ರಿ
Next post ಒಂದೇ ಒಂದು ಮನದಾಳದ ಮಾತು

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys