ವಿಜಯ ವಿಲಾಸ – ಪ್ರಥಮ ತರಂಗ

ವಿಜಯ ವಿಲಾಸ – ಪ್ರಥಮ ತರಂಗ

ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ ಮಾರ್ತಾಂಡನು ಉದಯಿಸಿ ಲೋಕಕ್ಕೆ ಆನಂದವನ್ನುಂಟುಮಾಡಿದನು. ಇಂತಹ ಶುಭ ಸಮಯದಲ್ಲಿ ರಾಣಿಯಾದ ಶೀಲವತೀದೇವಿಯು ಪ್ರಭಾಕರನಂತೆ ಪ್ರಭಾಮಯನಾದ ಪುತ್ರರತ್ನವನ್ನು ಪ್ರಸವಿಸಿದಳು. ಪುತ್ರೋದಯ ವಾರ್ತೆಯನ್ನು ಚೇಟಿಯ ಮುಖದಿಂದ ಕೇಳಿದ ಚಂದ್ರಸೇನರಾಯನ ಆನಂದ ಸಾಗರವು ಉಕ್ಕಿ ಮೇರೆ ಮೀರಿತು. ಶೀಲವತಿಯ ಅಭ್ಯುದಯವನ್ನು ನೋಡಿ ಸಹಿಸಲಾರದೆ ಇದ್ದ ಆಕೆಯ ಸವತಿಯರಾದ ಸೌದಾಮಿನಿ ಕಾದಂಬಿನಿಯರೆಂಬ ರಾಜನ ಕಿರಿಯ ಹೆಂಡಿರಿಬ್ಬರ ಅಸೂಯಾ ಕ್ರೋಧಗಳೂ ಮೇರೆ ಮೀರಿದುವು. ಶಿಶುವಿನ ಜಾತಕವನ್ನು ಪರಿಶೀಲಿಸಿದ ದೈವಜ್ಞರು, ಇವನು ಪ್ರಯತ್ನಿಸಿದ ಸಕಲ ಕಾರ್ಯಗಳಲ್ಲಿಯೂ ಅರ್ಜುನನಂತೆ ವಿಜಯಶಾಲಿಯಾಗುವನೆಂದು ಹೇಳಿದರು. ಇದನ್ನು ಕೇಳಿ ರಾಜರಾಜ್ಞಿಯರು, ಈ ಕುಮಾರನು ವಿಜಯದಶಮಿಯ ಶುಭದಿನದಲ್ಲಿ ಜನಿಸಿದವನಾಗಿ, ವಿಜಯನಾದ ಅರ್ಜುನನಂತೆ ವಿಜಯಶಾಲಿಯೂ ಆಗುವುದರಿಂದ ‘ವಿಜಯಕುಮಾರ’ನೆಂಬ ಹೆಸರು ಇವನಿಗೆ ಅನ್ವರ್ಥವಾಗುವುದೆಂದಾಲೋಚಿಸಿ, ಶಿಶುವಿಗೆ ವಿಜಯಕುಮಾರನೆಂದೇ ಹೆಸರಿಟ್ಟರು. ಅನಂತರ ಶುಕ್ಲ ಪಕ್ಷದ ಸುಧಾಕರನಂತೆ ದಿನದಿನಕ್ಕೆ ಕಳೆಯೇರಿ ವರ್ಧಿಸುತ್ತಿದ್ದ ಮಗನನ್ನು ಅತ್ಯಂತ ಪ್ರೀತಿಯಿಂದ ಲಾಲಿಸಿ ಪಾಲಿಸುತ್ತ ಅವನ ಬಾಲಲೀಲೆಗಳಿಂದ ಆನಂದ ಪಡುತ್ತಿದ್ದರು.

ಕೆಲವು ಕಾಲದ ಮೇಲೆ ಈ ಕಿರಿಯ ಹೆಂಡಿರಿಬ್ಬರಿಗೂ ಒಬ್ಬೊಬ್ಬ ಕುಮಾರನು ಜನಿಸಿದನು. ಸೌದಾಮಿನಿಯ ಕುಮಾರನಿಗೆ ಭಾನುತೇಜ ನೆಂತಲೂ, ಕಾದಂಬಿನಿಯ ಮಗನಿಗೆ ರಾಜಹಂಸನೆಂತಲೂ ಹೆಸರಿಟ್ಟು ರಾಜ ರಾಜ್ಞಿಯರು ಇವರನ್ನೂ ಬಹಳ ಪ್ರೀತಿಯಿಂದ ಪೋಷಿಸುತ್ತಿದ್ದರು. ಹೀಗೆ ಮೂರು ಮಂದಿ ಪುತ್ರರೂ ತೇಜಸ್ವಿಗಳಾಗಿ ದಿನದಿನಕ್ಕೆ ಅಭಿವೃದ್ಧಿ ಹೊಂದುತಿರುವಲ್ಲಿ ರಾಜನು ಇವರಿಗೆ ಕಾಲೋಚಿತ ಶುಭ ಕರ್ಮಗಳನ್ನು ನಡೆಯಿಸಿ ಅಕ್ಷರಾಭ್ಯಾಸವನ್ನು ಮಾಡಿಸಿ, ಶಾಸ್ತ್ರ ವಿದ್ಯೆಯನ್ನೂ, ಶಸ್ತ್ರಾಸ್ತ್ರ ಕಲೆಗಳನ್ನೂ ಕಲಿಸಲು ಗುರುಗಳ ವಶಕ್ಕೆ ಒಪ್ಪಿಸಿದನು. ಈ ಮೂವರು ಸಹೋದರರಲ್ಲಿ ವಿಜಯಕುಮಾರನು ಅತ್ಯಂತ ಪ್ರತಿಭಾಶಾಲಿಯಾಗಿಯೂ ಇಂಗಿತಜ್ಞನಾಗಿಯೂ ಇದ್ದುದರಿಂದ ಗುರುಗಳು ಬೋಧಿಸಿದ ವಿದ್ಯೆಯನ್ನು ಚೆನ್ನಾಗಿ ಕುಲಿತು ಗುರುಗಳಿಗೂ ತಂದೆಗೂ ಅತ್ಯಾನಂದವನ್ನುಂಟು ಮಾಡಿದನು. ಭಾನುತೇಜನೂ ರಾಜಹಂಸನೂ ವಿದ್ಯಾವಂತರಾದರೂ ವಿಜಯ ಕುಮಾರನಷ್ಟು ಶಾಂತಿಸ್ಥೈರ್ಯಗಳೂ, ವಿವೇಕವೂ ಅವರಲ್ಲಿರಲಿಲ್ಲ. ಅವನಂತೆ ಸುಂದರರಾಗಿಯೂ ಇರಲಿಲ್ಲ. ಕುಮಾರರು ವಿದ್ಯಾವಂತರೂ, ವಯೋವಂತರೂ, ಆದುದನ್ನು ನೋಡಿ ರಾಜನು ಇವರಿಗೆ ವಿವಾಹ ಮಾಡಬೇಕೆಂಬ ಉದ್ದೇಶದಿಂದ ತಕ್ಕ ಕನ್ಯೆಯರನ್ನು ಹುಡುಕಲು, ಮಂತ್ರಿಯಾದ ಧುರಂಧರನೊಡನೆ ಆಲೋಚಿಸುತ್ತಿದ್ದನು. ಆದರೆ ಬಾಲ್ಯದಿಂದಲೂ ಒಬ್ಬರೇ ಗುರುಗಳಲ್ಲಿ ರಾಜಪುತ್ರರ ಜೊತೆಯಲ್ಲಿಯೇ ಶಾಸ್ತ್ರ ವಿದ್ಯಾಭ್ಯಾಸ ಮಾಡುತಿದ್ದ ಮಂತ್ರಿ ಪುತ್ರಿಯಾದ ವಿದ್ಯಾಧರಿಯ ಚಿತ್ರವು, ಸೌಂದರ್ಯ ಪರಾಕ್ರಮ ಶೋಭಿತನಾದ ವಿಜಯನಲ್ಲಿ ಸಂಪೂರ್ಣವಾಗಿ ನೆಲೆಸಿದ್ದಿತು. ಹಾಗೆಯೇ ವಿದ್ಯಾಧರಿಯ ಸೌಂದರ್ಯ ಸೌಭಾಗ್ಯವು ವಿಜಯನ ಮನಸ್ಸನ್ನು ಚೆನ್ನಾಗಿ ಅಪಹರಿಸಿ ಬಿಟ್ಟಿತ್ತು. ಹೀಗೆ ಇವರ ಪರಸ್ಪರಾನುರಾಗವು ದಿನದಿನಕ್ಕೆ ಹೆಚ್ಚುತ್ತಿರುವುದನ್ನು ಸಖೀಜನರ ಮುಖದಿಂದ ತಿಳಿದ ಶೀಲವತೀ ದೇವಿಯು ಪತಿಯಾದ ಚಂದ್ರಸೇನರಾಯನಿಗೆ ರಹಸ್ಯವಾಗಿ ತಿಳಿಸಲು ರಾಯನು ಬಹಳ ಸಂತೋಷಪಟ್ಟು, ಈ ದಾಂಪತ್ಯವು ಎಲ್ಲ ವಿಚಾರಗಳಲ್ಲಿಯೂ ಉತ್ತಮವಾಗಿರುವುದೆಂದು ಅಂಗೀಕರಿಸಿದನು. ಅನಂತರ ಮಂತ್ರಿಯಾದ ಧುರಂಧರನೊಡನೆ ಈ ವಿಚಾರವನ್ನು ತಿಳಿಸಲು, ಆತನೂ ಸಹ ರಾಜ ಸಂಬಂಧವೊದಗಿದುದಕ್ಕಾಗಿ ಸಂತೋಷಪಟ್ಟು ವಿದ್ಯಾಧರಿಯನ್ನು ವಿಜಯ ಕುಮಾರನಿಗೆ ಕೊಟ್ಟು ವಿವಾಹಮಾಡಲು ಒಪ್ಪಿದನು.

ಲಾವಣ್ಯದಲ್ಲಿ ಸುರಕಾಮಿನಿಯರನ್ನು ತಿರಸ್ಕರಿಸುತ್ತಿದ್ದ ವಿದ್ಯಾಧರಿಯ ರೂಪಕ್ಕೆ ಸೋತು ವಿಜಯನ ತಮ್ಮಂದಿರಾದ ಭಾನುತೇಜನೂ, ರಾಜ ಹಂಸನೂ ಸಹ ಅವಳ ಅನುರಾಗಕ್ಕೆ ಪಾತ್ರರಾಗಬೇಕೆಂದು ಆಲೋಚಿಸಿ ಒಬ್ಬನು ಮತ್ತೊಬ್ಬನಿಗೆ ತಿಳಿಯದಂತೆ ನಾನಾ ಪ್ರಯತ್ನಗಳನ್ನು ಮಾಡುತ್ತ ಸಮಯ ಸಿಕ್ಕಿದಾಗಲೆಲ್ಲವೂ ಆಕೆಯಲ್ಲಿ ಸರಸೋಕ್ತಿಗಳನ್ನಾಡಲು ಹೋಗಿ ಆಕೆಯಿಂದ ತಿರಸ್ಕೃತರಾಗಿ ಜೋಲುಮೋರೆ ಹಾಕಿಕೊಂಡು ಹಿಂದಿರುಗುತ್ತಿದ್ದರು. ವಿದ್ಯಾಧರಿಯ ವಿಶ್ವಾಸ ಪ್ರೀತಿಗಳಾದರೋ ವಿಜಯಕುಮಾರನಲ್ಲಿ ದಿನದಿನಕ್ಕೆ ಅತಿಶಯವಾಗುತ್ತ ಬಂದವು. ವಿಜಯನಿಗೆ ಕನಸು ಮನಸ್ಸುಗಳಲ್ಲಿ ಯಾವಾಗಲೂ ವಿದ್ಯಾಧರಿಯ ಬಿಂಬವೇ ಕಾಣಿಸುತ್ತಿತ್ತು. ಇಬ್ಬರೂ ತಮ್ಮ ವಿವಾಹ ಸಮಯವನ್ನು ಅತಿ ಕುತೂಹಲದಿಂದ ಎದುರುನೋಡುತ್ತ ದಿನಗಳನ್ನು ಯುಗಗಳಂತೆ ಕಳೆಯುತ್ತಿದ್ದರು.

ಹೀಗಿರುವಲ್ಲಿ ಚಂದ್ರಸೇನರಾಜನ ಆಸ್ಥಾನಕ್ಕೆ ಶಂಕರಾನಂದನೆಂಬ ಸಿದ್ಧನು ಬಂದು ರಾಜನಿಂದ ಸತ್ಕೃತನಾಗಿ ಆತನ ಜನ್ಮಾದಿಯಾಗಿ ಜೀವ ಮಾನದ ಫಲಗಳೆಲ್ಲವನ್ನೂ ವಿವರವಾಗಿ ತಿಳಿಸಿ ರಾಜನನ್ನು ಕುರಿತು “ಎಲೈ ರಾಜೇಂದ್ರಾ! ನೀನು ಹಿಮಾಚಲ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ಶಂಕರನನ್ನು ಕುರಿತು ತಪಸ್ಸನ್ನಾಚರಿಸು, ಅದರಿಂದ ಸಂತುಷ್ಟನಾದ ಪರಮೇಶ್ವರನು ನಿನಗೆ ನಿತ್ಯವಿಜಯಕಾರಣವಾದ ವರವೊಂದನ್ನು ಕರುಣಿಸುವನು. ಅದರಿಂದ ಮುಂದೆ ನೀನು ಬಹಳ ಸುಖದಿಂದ ಬಾಳುವೆ.” ಎಂದು ಹೇಳಿ ಆತನಿಗೆ ಶಿವಪಂಚಾಕ್ಷರೀ ಮಂತ್ರವನ್ನುಪದೇಶಿಸಿ, ರಾಜನಿಂದ ಪಾರಿತೋಷಿಕವನ್ನು ಪಡೆದು ಪ್ರಯಾಣ ಮಾಡಿದನು. ತನ್ನ ಅನುಭವಗಳೆಲ್ಲವನ್ನೂ ನಿಜವಾಗಿ ತಿಳಿಸಿದ ಸಿದ್ಧ ಪುರುಷನ ಪ್ರತಿಭಾಶಕ್ತಿಗಳಿಗಾಶ್ಚರ್ಯಾನಂದ ಪರವಶನಾದ ರಾಜನಿಗೆ ತಪಸ್ಸಿಗೆ ಹೊರಡುವ ಕುತೂಹಲವು ಪ್ರಬಲವಾಯಿತು. ಇದರಿಂದ ಮಗನ ವಿವಾಹ ವಿಚಾರವನ್ನು ತತ್ಕಾಲಕ್ಕೆ ನಿಲ್ಲಿಸಿ ಧುರಂಧರನ ವಶಕ್ಕೆ ರಾಜ್ಯವನ್ನೊಪ್ಪಿಸಿ ಪತ್ನಿ ಪುತ್ರರಿಗೆ ಕಾಲೋಚಿತವಾದ ಎಚ್ಚರಿಕೆಯನ್ನೂ ಬುದ್ದಿವಾದಗಳನ್ನೂ ಹೇಳಿ ಚಂದ್ರಸೇನರಾಯನು ಹಿಮಾಚಲ ಪ್ರಾಂತ್ಯಕ್ಕೆ ಪ್ರಯಾಣ ಮಾಡಿದನು.

ರಾಜನು, ಮಂಜುಮುಚ್ಚಿ ಸ್ಪಟಿಕರಾಶಿಗಳಂತೆ ಕಂಗೊಳಿಸುತ್ತ ಮುಗಿಲನ್ನು ಮುಟ್ಟುವಂತಿರುವ ಕೋಡುಗಲ್ಲುಗಳಿಂದ ಕೂಡಿದ್ದ, ನಿರ್ಜನವಾದ ಆ ಹಿಮಾಚಲದ ಬಳಿಯನ್ನು ಸೇರಿ, ಹಗಲಿರುಳೂ ಅವಿಚ್ಛಿನ್ನವಾಗಿ ಸುರಿಯುತ್ತಿರುವ ಮಂಜಿಗೂ, ಚಳಿಗಾಳಿಗಳಿಗೂ ಸ್ವಲ್ಪವೂ ಹಿಂದೆಗೆಯದೆ ಬದರಿಕಾಶ್ರಮದಲ್ಲಿ ಪರಮಭಕ್ತಿಯಿಂದ ಮಹಾದೇವನನ್ನು ಕುರಿತು ಮಹಾ ತಪಸ್ಸನ್ನಾಚರಿಸುತ್ತಿದ್ದನು. ಅದೇ ಕಾಲದಲ್ಲಿಯೇ ರತ್ನ ದೀಪಾಧಿಪತಿಯಾದ ಅಗ್ನಿಶಿಖನೆಂಬ ರಾಕ್ಷಸೇಂದ್ರನೂ ಸಹ ತಾನು ಅಜೇಯ ನಾಗಿರುವಂತೆ ಶಂಕರನಿಂದ ವರವನ್ನು ಪಡೆಯಬೇಕೆಂದು ಘೋರ ತಪಸ್ಸನ್ನಾಚರಿಸುವುದಕ್ಕಾಗಿ ಚಂದ್ರಸೇನರಾಜನು ಕುಳಿತಿದ್ದ ಕಡೆಯಲ್ಲಿಯೇ ಬಂದು ಕುಳಿತನು. ಹೀಗೆ ಮಾನವೇಂದ್ರ ದಾನವೇಂದ್ರರಿಬ್ಬರೂ ಘೋರ ತಪಸ್ಸಿನಲ್ಲಿ ಕುಳಿತಿರಲು ಅನೇಕ ದಿನಗಳು ಕಳೆದುಹೋದುವು. ಕಡೆಗೆ ಪರಮೇಶ್ವರನು ಇವರ ಭಕ್ತಿಗೆ ಮೆಚ್ಚಿ ಇಬ್ಬರಿಗೂ ಏಕಕಾಲದಲ್ಲಿ ಪ್ರಸನ್ನನಾಗಿ ಪ್ರತ್ಯಕ್ಷನಾದನು. ಸ್ಪಟಿಕ ವಿಗ್ರಹದಂತಿರುವ ತನ್ನ ಶರೀರದಲ್ಲಿ ಬಳ್ಳಿ ಮಿಂಚುಗಳಂತೆ ಕಂಗೊಳಿಸುವ ವಿಭೂತಿ ಪುಂಡ್ರಗಳಿಂದಲೂ, ಸರ್ಪಾಭರಣಗಳ ರತ್ನ ಕಾಂತಿಗಳಿಂದಲೂ, ಶಿರದಲ್ಲಿ ಧರಿಸಿರುವ ಬಾಲಚಂದ್ರನ ಕಳೆಗಳಿಂದ ಥಳಥಳಿಸುವ ದೇವಗಂಗೆಯಿಂದೊಪ್ಪುವ ಜಟಾಮುಕುಟದಿಂದಲೂ, ಮನೋಹರ ಸ್ಪಟಿಕಮಾಲಾ ಕಲಾಪಗಳಿಂದಲೂ, ತೇಜೋ ಮಯನಾಗಿ, ಶೂಲ ಖಡ್ಗ ಡಮರುಗ ಪರಶು ಮೃಗಾಲಂಕೃತ ಹಸ್ತನಾಗಿ ಪ್ರಕಾಶಿಸುತ್ತ, ಬೆಳ್ದಿಂಗಳನ್ನು ಧಿಕ್ಕರಿಸುವ ಸುಂದರ ಮಂದಹಾಸದಿಂದ ಬಂದು ನಿಂತು ಮಹಾದೇವನು ಭಕ್ತರಿಬ್ಬರನ್ನೂ ಆದರದಿಂದ ಮೈದಡವಿ ಎಚ್ಚರಿಸಿದನು. ಆಗ ಆ ತಪಸ್ವಿಗಳಿಬ್ಬರೂ ಆಶ್ಚರ್ಯದಿಂದೆದ್ದು, ಶಂಕರನ ದಿವ್ಯಾಕಾರವನ್ನು ನೋಡಿ, ಪರಮಾನಂದ ಪರವಶರಾಗಿ, ಸಾಷ್ಟಾಂಗ ನಮಸ್ಕಾರಮಾಡಿ ಕೈ ಮುಗಿದು ವಿಧವಿಧವಾಗಿ ಸಾಂಬಶಿವನನ್ನು ಸ್ತುತಿಸಿ ಆನಂದಾಶ್ರುಗಳಿಂದ ನೆನೆದರು. ಆಗ ಭಕ್ತವತ್ಸಲನಾದ ಶಂಕರನು, ರತ್ನ ಖಚಿತವಾದ ಸುವರ್ಣಬಾಣವೊಂದನ್ನು ಕೈಯಲ್ಲಿ ಹಿಡಿದು ಭಕ್ತರಿಬ್ಬರನ್ನೂ ನೋಡಿ, “ಎಲೈ ಭಕ್ತಶಿರೋಮಣಿಗಳಾದ ದನುಜೇಂದ್ರ ಮನುಜೇಂದ್ರರೇ ! ನಾನು ನಿಮ್ಮ ಭಕ್ತಿಗೆ ಮೆಚ್ಚಿದೆನು. ಇದೋ ಈ ರತ್ನ ಖಚಿತವಾದ ಸುವರ್ಣಬಾಣವು ಯಾರಲ್ಲಿರುವುದೋ ಆತನು ನಿತ್ಯವಿಜಯ ಶಾಲಿಯಾಗಿ ಇಷ್ಟಾರ್ಥಗಳನ್ನು ಪಡೆದು ಸುಖದಿಂದಿರುವನು. ಆದುದರಿಂದ ಈಗ ನೀವಿಬ್ಬರೂ ನಿಮ್ಮ ನಿಮ್ಮ ಶಕ್ತಿಗಳನ್ನು ತೋರಿಸಿದರೆ ನಿಮ್ಮಲ್ಲಿ ಹೆಚ್ಚು ಬಲಶಾಲಿಯಾದವನಿಗೆ ಈ ಶರವನ್ನು ಕೊಡುವೆನು” ಎಂದನು. ಇದನ್ನು ಕೇಳಿದ ಕೂಡಲೇ ಅಹಂಕಾರ ಮತ್ತನೂ ಘೋರಾಕಾರನೂ ಆದ ಅಗ್ನಿ ಶಿಖನಿಗೆ ಬಹಳ ಸಂತೋಷವಾಯಿತು. ಆದಕಾರಣ ಅವನು ಶಂಕರನನ್ನು ನೋಡಿ “ಎಲೈ ಸ್ವಾಮಿಯೇ, ಈ ನಿನ್ನ ನಿಬಂಧನೆಯಿಂದಲೇ ನಿನಗೆ ನನ್ನಲ್ಲಿ ಅತಿಶಯವಾದ ಪ್ರೀತಿಯಿರುವುದೆಂದು ವ್ಯಕ್ತವಾಯಿತು. ಕುಲಗಿರಿಗಳನ್ನು ಚೆಂಡಾಡಬಲ್ಲ ಬಾಹು ಬಲದಿಂದ ಪ್ರಚಂಡ ಪರಾಕ್ರಮಿಯೆನಿಸಿರುವ ಲೋಕವಿಖ್ಯಾತನಾದ ಈ ಅಗ್ನಿ ಶಿಖನ ಮುಂದೆ ಈ ಬಡಮಾನವನು ಧೈರ್ಯದಿಂದ ನಿಂತು ಹೋರಾಡಬಲ್ಲನೆ! ಈ ತೃಣಪ್ರಾಯನಾದ ನರನೆಷ್ಟರವನು! ಈ ಅಲ್ಪನ ಬಲವೆಷ್ಟರದು! ಅಗ್ನಿಯ ಮುಂದೆ ತೃಣದ ಪೌರುಷವೇ? ಇದೋ ಈಗಲೇ ನನ್ನ ಪೌರುಷಾಗ್ನಿ ಜ್ವಾಲೆಗಳಿಂದ ಈ ಬಡಮಾನವನನ್ನು ಸುಟ್ಟು ವಿಜಯಶಾಲಿಯಾಗಿ ನಿನಗೆ ನೇತ್ರೋತ್ಸವವನ್ನುಂಟುಮಾಡಿ ನಿನ್ನಿಂದ ರತ್ನ ಶರವನ್ನು ಪಡೆಯುವೆನು” ಎಂದು ಅಪರಿಮಿತವಾಗಿ ಆತ್ಮ ಪ್ರಶಂಸೆ ಮಾಡಿಕೊಳ್ಳುತ್ತ, ಹೂಂಕರಿಸಿ ಬಳಿಯಲ್ಲಿ ನಿಂತಿದ್ದ ಚಂದ್ರಸೇನ ರಾಜನ ಕೈಯನ್ನು ಹಿಡಿದು ಮಲ್ಲಯುದ್ಧಕ್ಕೆ ಸಿದ್ಧನಾಗೆಂದು ಎಳೆದು ಮೂದಲಿಸಿದನು. ರಾಜನು ಮಹಾ ಪ್ರತಾಪಶಾಲಿಯಾದರೂ ತ್ರಿಪುರಾಂತಕನ ಮುಂದೆ ಅಲ್ಪನಾದ ತನ್ನ ಪೌರುಷವೆಷ್ಟರದೆಂಬ ದೈನ್ಯದಿಂದಲೂ, ಯುದ್ಧದಲ್ಲಿ ಜಯಪರಾಜಯಗಳು ದೈವಾಧೀನವೆಂದು ತಿಳಿದವನಾದುದರಿಂದಲೂ, ಸ್ವಲ್ಪವೂ ಅಹಂಕಾರಪಡದೆ ಮಹಾದೇವನ ಪಾದಾರವಿಂದಗಳಿಗೆ ನಮಸ್ಕರಿಸಿ “ಪರಮೇಶ್ವರಾ! ಭಕ್ತವತ್ಸಲನಾದ ನೀನು ನಿನ್ನ ಭಕ್ತನಲ್ಲಿ ಕಟಾಕ್ಷ ವನ್ನಿಟ್ಟು ಪಾಲಿಸು” ಎಂದು ಪ್ರಾರ್ಥಿಸಿ ಅಗ್ನಿ ಶಿಖನೊಡನೆ ಮಲ್ಲಯುದ್ಧವನ್ನಾರಂಭಿಸಿದನು. ಮಹಾ ಪರಾಕ್ರಮಿಗಳಾದ ಆ ವೀರರ ಪಾದಘಾತಗಳಿಂದ ಭೂಮಿಯು ಅದಿರುವಂತಾಯ್ತು. ಭುಜಾಸ್ಛಾಲನ ಶಬ್ದದಿಂದ ದಿಕ್ತಟವು ಒಡೆಯುವಂತಾಯಿತು. ವಿಧವಿಧ ಬಂಧಗಳಿಂದ ಮಹಾ ಚಾತುರ್ಯವನ್ನು ತೋರಿಸಿ ಹೋರಾಡಿದ ಅವರಿಬ್ಬರ ಪರಾಕ್ರಮ ಕೌಶಲಗಳಿಗೆ ಪರಮೇಶ್ವರನು ಮೆಚ್ಚಿ ಸಂತೋಷಪಡುತ್ತಿದ್ದನು. ರಾಕ್ಷಸನು ರಾಜನನ್ನು ಹೆಮ್ಮೆಯಿಂದ ಅವಹೇಳನಮಾಡುತ್ತ, ಪೌರುಷೋಕ್ತಿಗಳನ್ನಾಡುತ್ತ, ಆತನ ಬೆನ್ನನ್ನು ಕಚ್ಚಿ ಮೇಲಕ್ಕೆ ಎತ್ತಿ ನೆಲಕ್ಕೆ ಅಪ್ಪಳಿಸಬೇಕೆಂದು ಹೋಗಲು ರಾಜನು ಈ ದಡಿಗನನ್ನು ಯುಕ್ತಿಯಿಂದ ಒಂದೇಸಲಕ್ಕೆ ಫಕ್ಕನೆ ಮೇಲಕ್ಕೆ ಚಿಮ್ಮಿ ಎರಡು ಕಾಲುಗಳನ್ನೂ ಹಿಡಿದು ಗಿರಿಗಿರನೆ ತಿರುಗಿಸಿ ಬೀಸಿ ನೆಲಕ್ಕೆ ಬಡಿದೆಸೆದನು. ಆಗ ಅಗ್ನಿಶಿಖನು ರಕ್ತ ಮುಖನಾಗಿ, ಬಳಲಿ ಬೆಂಡಾಗಿ ಮೂರ್ಛೆ ಬಿದ್ದನು. ಶಂಕರನು ಚಂದ್ರಸೇನರಾಜನ ಪರಾಕ್ರಮಕ್ಕೆ ಆಶ್ಚರ್ಯಪಟ್ಟು ಆನಂದದಿಂದ ರತ್ನ ಬಾಣವನ್ನಾತನಿಗೆ ಕೊಟ್ಟು ವಿಜಯಶಾಲಿಯಾಗೆಂದಾಶೀರ್ವದಿಸಿ, ಅಂತರ್ಧಾನನಾದನು. ಚಂದ್ರಸೇನರಾಯನು ಪರಮಾನಂದದಿಂದ ಬಾಣವನ್ನು ತೆಗೆದುಕೊಂಡು ಭವಿಷ್ಯವನ್ನು ಹೇಳಿದ ಸಿದ್ಧ ಪುರುಷನನ್ನು ಮನಸ್ಸಿನಲ್ಲಿ ಕೊಂಡಾಡುತ್ತ ತನ್ನ ರಾಜಧಾನಿಯಾದ ವೇದವತೀ ನಗರವನ್ನು ಕುರಿತು ಪ್ರಯಾಣಮಾಡಿದನು. ಬಳಲಿ, ಶವದಂತೆ ಮೂರ್ಛೆ ಬಿದ್ದಿದ್ದ ಅಗ್ನಿಶಿಖನಿಗೆ ಇಷ್ಟು ಹೊತ್ತಿಗೆ ಮೂರ್ಛೆಯಿಂದೆಚ್ಚರವಾಯಿತು. ಆ ಕೂಡಲೇ ಎದ್ದು, ಮತ್ತೆ ಚಂದ್ರಸೇನನೊಡನೆ ಯುದ್ಧ ಮಾಡಿ ಅವನನ್ನು ಸದೆಬಡಿದು ರತ್ನ ಶರವನ್ನು ಶಿವನಿಂದ ತಾನೇ ಪಡೆದುಕೊಳ್ಳಬೇಕೆಂಬ ಕ್ರೊಧಾತುರಗಳಿಂದ, ಅವನು ಮುಂದೆ ಬಂದು ಸುತ್ತಲೂ ನೋಡುವಲ್ಲಿ ಚಂದ್ರಸೇನನೂ ಇರಲಿಲ್ಲ, ಚಂದ್ರಶೇಖರನೂ ಇರಲಿಲ್ಲ. ಸ್ವಲ್ಪ ಹೊತ್ತು ಸ್ತಬ್ಧನಾಗಿ ನಿಂತಿದ್ದು, ಕಡೆಗೆ ಚಂದ್ರಸೇನನಿಗೆ ಶರವು ಲಭಿಸಿತೆಂದು ತಿಳಿದು ಅಗ್ನಿಶಿಖನು ಭಗ್ನ ಮನೋರಥನಾಗಿ ಕ್ರೋಧಾಗ್ನಿಯಿಂದ ಬೇಯುತ್ತ ಚಂದ್ರಸೇನನಿಗೆ ತಕ್ಕುದನ್ನು ಮಾಡಿ ಅವನಿಂದ ಹೇಗಾದರೂ ಆ ರತ್ನ ಬಾಣವನ್ನು ಅಪಹರಿಸದೆ ಬಿಡೆನೆಂದು ಶಪಥಮಾಡಿಕೊಂಡು ಹೊರಟನು. ಅನಂತರ ಕಾಮರೂಪಿಯಾದ ಆ ರಾಕ್ಷಸನು ತಾನು ಒಂದು ಹದ್ದಿನರೂಪವನ್ನು ಧರಿಸಿ ಅಂತರಿಕ್ಷಕ್ಕೆ ಹಾರಿಹೋಗಿ ಅಲ್ಲಿಂದ ನೋಡಿ ರಾಜನಿರುವ ಸ್ಥಳವನ್ನು ಕಂಡುಹಿಡಿದು ಉಪಾಯದಿಂದ ಶರವನ್ನು ಅಪಹರಿಸಬೇಕೆಂದು ಸಂಕಲ್ಪಿಸಿದನು. ಆದರೆ ಇಷ್ಟು ಹೊತ್ತಿಗೆ ಸಂಧ್ಯಾಕಾಲವಾಗುತ್ತ ಬಂತು. ಸೂರ್ಯನು ಅರುಣ ಕಿರಣಗಳಿಂದ ಕೂಡಿ ಅಸ್ತಾಚಲದಿಂದ ಅಪರಾಂಬುಧಿಗೆ ಇಳಿಯುತ್ತಿದ್ದನು. ರಾಕ್ಷಸನೂ ಸಹ ಕಾಂತಿಗುಂದಿ, ಮಲ್ಲಯುದ್ಧದಿಂದ ಮೈನೊಂದು ಬಳಲಿ ಬೆಂಡಾಗಿ ವಿಶ್ರಾಂತಿಯನ್ನು ಬಯಸುತ್ತಿದ್ದನು. ಇದರಿಂದ ಆ ರಾತ್ರಿಯನ್ನು ಕಳೆದು ಮಾರನೆಯ ದಿನ ತನ್ನ ಮಾಯಾ ಗೃಧ್ರವೇಷದಿಂದ ಶರಾನ್ವೇಷಣಕ್ಕೆ ಹೊರಡಬೇಕೆಂದು ನಿಶ್ಚಯಿಸಿ ಅಗ್ನಿಶಿಖನು ತನ್ನ ರಾಜಧಾನಿಯಾದ ರತ್ನ ದ್ವೀಪಕ್ಕೆ ಹೊರಟುಹೋದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಟ್ಟಿಯೊಳಗಿನ ಹಾಡು
Next post ಮಗು ಚಿತ್ರ ಬರೆಯಿತು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys