‘ಬಲ್ಲಿದರೊಡನೆ’ ಲಕ್ಷ್ಮಣಕೊಡಸೆ

‘ಬಲ್ಲಿದರೊಡನೆ’ ಲಕ್ಷ್ಮಣಕೊಡಸೆ

ಪತ್ರಿಕಾ ರಂಗವನ್ನು ಪ್ರವೇಶಿಸಿದ ಅನೇಕ ಲೇಖಕರು ಪೂರ್ಣ ಪತ್ರಕರ್ತರಾಗಿ ಪರಿವರ್ತನೆ ಹೊಂದುವುದು ಅಥವಾ ಪತ್ರಿಕಾ ಲೇಖಕರಾಗಿ ರೂಪಾಂತರಗೊಳ್ಳುವುದು ಒಂದು ಅನಿವಾರ್ಯ ಪ್ರಕ್ರಿಯೆಯೆಂಬಂತೆ ಭಾವಿಸಲಾಗಿದೆ. ಇದು ಬಹುಪಾಲು ನಿಜವಾಗುತ್ತಿರುವುದು ಇಂತಹ ಭಾವನೆಗೆ ಸಮರ್ಥನೆಯಾಗಿ ಒದಗಿ ಬರುತ್ತಿದೆ. ಈ ಮಧ್ಯೆ ಅಪವಾದಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಆದರೆ ಪತ್ರಕರ್ತರಾಗಿದ್ದು ಮೂಲ ಲೇಖಕನ / ಲೇಖಕಿಯ ಸತ್ವ ಮತ್ತು ಸಂವೇದನೆಗಳನ್ನು ಉಳಿಸಿಕೊಳ್ಳುವುದು ಒಂದು ಒಳಹೋರಾಟವೇ ಸರಿ. ಯಾವುದೋ ಅಧಿಕಾರಿಯಾಗಿರುವವರು, ಕಂಪನಿ ಕೆಲಸಗಾರರಾಗಿರುವವರು ಅಥವಾ ಅಂತಹ ಮಾದರಿಯ ಉದ್ಯೋಗ ಹಾಗೂ ವೃತ್ತಿಗಳಲ್ಲಿ ತೊಡಗಿರುವವರು ತಮ್ಮ ದೈನಂದಿನ ಕ್ರಿಯೆಯಲ್ಲಿ ‘ಬರವಣಿಗೆ’ಯಲ್ಲಿ ನಿರತರಾಗಿರುವುದಿಲ್ಲ. ಹೀಗಾಗಿ ‘ಬರವಣಿಗೆ’ಯು ಅವರಿಗೆ ಒಂದು ‘ಬಿಡುಗಡೆ’ಯಾಗ ಬಹುದು; ವೃತ್ತಿಯನ್ನು ಮೀರಿದ ಪ್ರವೃತ್ತಿಯಾಗಬಹುದು. ಹೊಸ ಸುಖವನ್ನು ಕೊಡುವ ಸಾಧನ ವಾಗಬಹುದು; ವಿಶೇಷ ಹೊಣೆಗಾರಿಕೆಯೂ ಆಗಬಹುದು. ಪತ್ರಕರ್ತರ ಪರಿಸ್ಥಿತಿ ಬೇರೆ. ವರದಿಗಾರರಾದರೆ ತಮ್ಮ ಇಷ್ಟಾನಿಷ್ಟಗಳನ್ನು ಬದಿಗೊತ್ತಿ ಯಾರ್‍ಯಾರದೊ ಭಾಷಣಗಳನ್ನು ವರದಿ ಮಾಡಬೇಕು; ಉಪಸಂಪಾದಕರು ಪುಟಗಳನ್ನು ಸಂಯೋಜಿಸಬೇಕು. ಸಂಪಾದಕರು ಉಸ್ತುವಾರಿಯ ಉರಿಯ ಉಯ್ಯಾಲೆಯಲ್ಲಿರಬೇಕು. ಇವರೆಲ್ಲರೂ ಕೆಲವೊಮ್ಮೆ ವಿಶೇಷ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿರಬೇಕು. ಅಂದರೆ ವೃತ್ತಿಯಲ್ಲೂ ಬರವಣಿಗೆಯ ಕಾಯಕ; ಈ ಕಾಯಕವೇ ‘ಕೈಲಾಸ’ವಾದರೆ ಭೂಮಿ ಬದುಕಿನ ಸಂವೇದನೆಗಳ ಅಭಿವ್ಯಕ್ತಿ ಮಣ್ಣುಪಾಲಾಗುತ್ತದೆ. ಮಣ್ಣನ್ನು ಮರೆಯದ ಮನಸ್ಸು ಎಚ್ಚರವಾಗಿದ್ದರೆ, ಕತೆ-ಕವಿತೆಗಳ ಕಣ್ಣು ತೆರೆಯುತ್ತದೆ. ವರದಿ, ವಿಶೇಷ ವರದಿ, ಸುದ್ದಿ ವಿಶ್ಲೇಷಣೆಗಳಾಚೆಗಿನ ಹಾದಿ ಕಾಣುತ್ತದೆ. ಇಷ್ಟೆಲ್ಲ ಆಗಬೇಕಾದರೆ ಒಂದು ಒಳಹೋರಾಟ ನಡೆಯುತ್ತದೆ. ಈ ಹೋರಾಟ ಪ್ರಜ್ಞಾಪೂರ್ವಕವಾಗಿರಬಹುದು ಅಥವಾ ಅಪ್ರಜ್ಞಾಪೂರ್ವಕವಾಗಿರಬಹುದು.

ಹಾಗಾದರೆ ಪತ್ರಿಕಾ ಬರವಣಿಗೆಯ ಕಿಮ್ಮತ್ತು ಕಡಿಮೆಯೆ ? ನಾನು ಹಾಗೆಂದು ಭಾವಿಸಿಲ್ಲ. ಪತ್ರಿಕಾ ಬರವಣಿಗೆಯು ತನ್ನದೇ ಆದ ಜವಾಬ್ದಾರಿಯೊಂದನ್ನು ನಿರ್ವಹಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಜನರ ನಾಡಿಮಿಡಿತವನ್ನು ಅರಿಯುವ ಅವಕಾಶಗಳನ್ನು ಕಲ್ಪಿಸುತ್ತದೆ. ಪತ್ರಿಕಾ ಬರವಣಿಗೆಗೆ ಸಿಗಬೇಕಾದಷ್ಟು ಮಾನ್ಯತೆ ಸಿಗದೆ ಇದ್ದಾಗ ಕೆಲವರು ಅರೋಚಿಗಳೂ ಅಹಂಕಾರಿಗಳೂ ಆಗುವುದುಂಟು. ಜೊತೆಗೆ ಸಿನಿಕತನವನ್ನೇ ವಿಶಿಷ್ಟ ನೋಟವೆಂದು ಬಿಂಬಿಸುವುದುಂಟು. ಪತ್ರಕರ್ತರ ಮುಂದೆ ಭಯ ಮತ್ತು ವಿನಯಗಳನ್ನು ಅಭಿನಯಿಸುವುದನ್ನು ಬಿಟ್ಟು ಅವರ ಬರವಣಿಗೆಗೆ ಸಲ್ಲಬೇಕಾದ ‘ಸಾಂಸ್ಕೃತಿಕ ನ್ಯಾಯ’ವನ್ನು ಸಲ್ಲಿಸಿದರೆ ಅದು ನಿಜವಾದ ಗೌರವವಾಗುತ್ತದೆ. ನಿಜ, ಇದು ಬೇರೆಯದೇ ಚರ್ಚೆ. ಆದರೆ ಸಾಂಸ್ಕೃತಿಕ ನ್ಯಾಯದ ಬಗ್ಗೆ ಚಿಂತಿಸುವ ಪತ್ರಕರ್ತರಿಗೆ ಒಳತುಡಿತಗಳಿರುತ್ತವೆಯಾದ್ದರಿಂದ ಇಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ್ದೇನೆ. ಹೆಚ್ಚು ಜನರೊಂದಿಗೆ ಸಂವಾದಿಸಲು ಸಾಧ್ಯವಾಗುವ ಪತ್ರಿಕಾ ಬರವಣಿಗೆಯನ್ನು ನಾನು ಗೌರವಿಸುತ್ತೇನೆ.

ಪತ್ರಿಕಾ ಬರವಣಿಗೆಯ ಮಾದರಿಗಳಲ್ಲಿ ಮುಳುಗಿ ಮಣ್ಣಾಗದೆ, ಆ ಮಣ್ಣಲ್ಲೇ ಹೊಸ ಆಕಾರಗಳನ್ನು ಅರಳಿಸಲು ಸಾಧ್ಯವಾದ ಲೇಖಕರು ಪತ್ರಿಕೆಯ ನೆಲದಲ್ಲೇ ಮೂಲ ಸಂವೇದನೆಯ ಹಂಬಲಗಳಿಗೆ ಜಾಗ ಮಾಡಿಕೊಳ್ಳುತ್ತಾರೆ. ಇಂಥವರ ಸಾಲಿನಲ್ಲಿರುವವರಲ್ಲಿ ಗೆಳೆಯರಾದ ಲಕ್ಷ್ಮಣ ಕೊಡಸೆಯವರೂ ಒಬ್ಬರು. ಬಹಳ ಹಿಂದೆಯೇ ಭರವಸೆಯ ಕತೆಗಾರರಾಗಿ ಬೆಳೆಯುತ್ತಿದ್ದ ಕತೆಗಾರ ಕೊಡಸೆಯವರು ಪತ್ರಿಕೆಯ ಕೆಲಸಗಳಲ್ಲಿ ಕಳೆದುಹೋಗುತ್ತಿದ್ದಾರೆಂದು ಅನ್ನಿಸುತ್ತಿರುವಾಗಲೇ ವಿವಿಧ ಅಭಿವ್ಯಕ್ತಿ ವಿನ್ಯಾಸಗಳ ಮೂಲಕ ಹೊರಬಂದು ಸಮತೋಲನ ಸಾಧಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸಾಹಿತ್ಯ ಕೃಷಿಯ ಆಂತರಿಕ ತುಡಿತ ಮತ್ತು ಪತ್ರಿಕಾ ಬರವಣಿಗೆಯ ಪ್ರಾಮಾಣಿಕ ಅನಿವಾರ್ಯತೆಗಳ ನಡುವೆ ಸಾಧಿಸಿದ ಸಮತೋಲನದ ರೂಪವಾಗಿ, ‘ಬಲ್ಲಿದರೊಡನೆ’ ಎಂಬ ಅವರ ಈ ಕೃತಿ ಮೂಡಿಬಂದಿದೆ.

ಲಕ್ಷ್ಮಣಕೊಡಸೆ ಅವರಿಗೆ ಪತ್ರಿಕಾ ಬರವಣಿಗೆಯ ವ್ಯಾಪ್ತಿ ಮತ್ತು ಮಿತಿಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯಿದೆ. ಅದನ್ನವರು ಮೊದಲ ಲೇಖನದಲ್ಲೇ ಅನಾವರಣಗೊಳಿಸಿದ್ದಾರೆ. ಪತ್ರಿಕಾ ಭಾಷೆ, ಬರವಣಿಗೆ – ಇತ್ಯಾದಿಗಳನ್ನು ಕುರಿತು ಅವರು ಸಾದರಪಡಿಸಿರುವ ಅಭಿಪ್ರಾಯಗಳು ಮನನೀಯವಾಗಿವೆ. ಕೆಲವನ್ನು ಇಲ್ಲಿ ಉಲ್ಲೇಖಿಸುತ್ತೇನೆ :

‘ಪತ್ರಿಕಾ ಭಾಷೆ ಏನೇ ಇದ್ದರೂ ಅದರಲ್ಲಿ ಸಂವಹನದ ಗುಣವೇ ಬಹುಮುಖ್ಯವಾದದ್ದು. ಸಾಹಿತ್ಯದ ಭಾಷೆಗೆ ನಿರ್ದಿಷ್ಟ ಓದುಗ ವರ್ಗದ ನಿರೀಕ್ಷೆ ಇರುತ್ತದೆ. ಪತ್ರಿಕಾ ಭಾಷೆಗೆ ಅಕ್ಷರ ಬಲ್ಲ ಎಲ್ಲ ವರ್ಗವೂ ಸೇರುತ್ತದೆ…. ಯಾವುದೇ ವರ್ಗದ ಓದುಗನಿಗೂ ಗ್ರಹಿಸಲು ಸುಲಭವಾಗುವಂತೆ ಭಾಷೆಯನ್ನು ಬಳಸುವುದು ಪತ್ರಕರ್ತನ ಸವಾಲು?

‘ಸಮೂಹ ಮಾಧ್ಯಮಗಳಿಗೆ ಭಾಷೆಯೇ ಪ್ರಮುಖ ವಾಹಕ. ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಅವುಗಳ ಯಶಸ್ಸು ಅಡಗಿದೆ. ಸ್ಥಳೀಯ ಬಳಕೆಗೆ ಅನುಗುಣವಾದ ಭಾಷೆ ಸೃಷ್ಟಿಸುವ ಆಪ್ತ ಧಾಟಿ ಬೇಕು’.

‘ಬಹುಸಾಮಾನ್ಯ ಸಂಗತಿಯಲ್ಲಿಯೂ ವಿಶೇಷತೆಯನ್ನು ಕಾಣುವ ವರದಿಗಾರ ವಿಶೇಷ ಸಂದರ್ಭಗಳಲ್ಲಿ ಮಹತ್ವದ ಸಂವಹನ ಸಾಮರ್ಥ್ಯವನ್ನೇ ಪ್ರದರ್ಶಿಸಬಲ್ಲ. ಇತಿಹಾಸ ಪ್ರಸಿದ್ಧ ಸಂಗತಿಗಳನ್ನು ಕಣ್ಣಾರೆ ಕಂಡು ಸಮಯದ ಮಿತಿಯಲ್ಲಿ ವರದಿ ಮಾಡುವ ವ್ಯಕ್ತಿ ಹೃದಯಕ್ಕೆ ತಟ್ಟುವಂಥ ವರದಿ ಬರೆದನೆಂದರೆ ಅದು ಸಾರ್ಥಕ ಸಾಧನೆ.’

‘ಪತ್ರಿಕಾ ಬರವಣಿಗೆ ಅವಸರದ ಸೃಷ್ಟಿ. ಅದಕ್ಕೆ ಸಾಹಿತ್ಯಕ ಚೌಕಟ್ಟು ಅಷ್ಟಾಗಿ ಇರುವುದಿಲ್ಲ…. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸನ್ನಿವೇಶಗಳನ್ನು ಕಟ್ಟಿಕೊಡುವ ಚಿತ್ರಕ ಶಕ್ತಿ ಪತ್ರಿಕಾ ಬರಹಗಳಲ್ಲಿ ಇರುತ್ತದೆ. ಅದಕ್ಕೆ ವಿಶೇಷ ಸಂದರ್ಭಗಳಿರುತ್ತವೆ.’

‘ಪತ್ರಿಕಾ ವಿಮರ್ಶೆಗೆ ಸ್ಥಳದ ಮಿತಿ ಇದೆ. ಅದೇ ಕಾರಣಕ್ಕೆ ಪತ್ರಿಕಾ ವಿಮರ್ಶೆ ಯಾವುದೇ ಸಾಹಿತ್ಯ ಕೃತಿಯ ಎಲ್ಲ ಆಯಾಮಗಳನ್ನೂ ಓದುಗರ ಎದುರು ತೆರೆದು ಇಡುವುದು ಕಷ್ಟ. ಹಾಗೆ ಮಾಡುವುದು ಸಾಧ್ಯವಿಲ್ಲ. ಅದಕ್ಕೆಂದೇ ವಿದ್ವಾಂಸರ ವಲಯಗಳಲ್ಲಿ ಸೂಕ್ತ ವೇದಿಕೆಗಳಿವೆ; ಸಾಹಿತ್ಯಕ ಪತ್ರಿಕೆಗಳಿವೆ; ನಿಯತಕಾಲಿಕೆಗಳಿವೆ.’

– ಹೀಗೆ ಅಭಿಪ್ರಾಯಗಳನ್ನು ಸಮರ್ಥವಾಗಿ ಮಂಡಿಸುವ ಲಕ್ಷ್ಮಣ ಕೊಡಸೆಯವರಿಗೆ ಅನುಭವದ ಆಸರೆಯಿದೆ; ಅರಿವಿನ ಅಂತರಂಗವಿದೆ. ಇವರ ಎಲ್ಲ ಮಾತುಗಳೂ ಪತ್ರಿಕಾ ಬರಹಗಳ ಸಂವಹನಾ ಸಾಧ್ಯತೆ, ಮತ್ತು ಸ್ಥಳ ಮಿತಿಯ ಸುತ್ತ ರೂಪುಗೊಂಡಿವೆ. ಇಲ್ಲಿಯೇ ಇನ್ನೊಂದು ಮಾತನ್ನು ಹೇಳಬೇಕು : ನಮ್ಮ ಪತ್ರಿಕೆಗಳು ಎಲ್ಲ ವರ್ಗದ ಜನರನ್ನು ತಲುಪುವ ಭಾಷಾ ಬಳಕೆಗೆ ಆದ್ಯತೆ ನೀಡುವ ಅನಿವಾರ್ಯತೆಯಲ್ಲಿ ಭಾಷೆಗೊಂದು ಸಾಮಾನ್ಯ ವಿನ್ಯಾಸವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಕೆಲವೊಮ್ಮೆ ಹೊಸ ಪದ ಸಂಪದವನ್ನೂ ಹುಟ್ಟು ಹಾಕುತ್ತವೆ. ಹೀಗಾಗಿ, ಈಗಾಗಲೇ ಜನರಲ್ಲಿ ಇವೆಯೆಂದು ಭಾವಿಸಲಾದ ಭಾಷಾ ಪ್ರಯೋಗಗಳ ಜೊತೆಗೆ ಹೊಸ ಪ್ರಯೋಗಗಳೂ ರೂಪುತಾಳುತ್ತ ಬಂದಿವೆ. ಇಂತಹ ಹೊಸ ಪ್ರಯೋಗಗಳು ಮತ್ತು ಬರವಣಿಗೆಯ ವಿವಿಧ ಮಾದರಿಗಳು ಪತ್ರಿಕಾ ಬರಹವು ಜಡವಾಗದಂತೆ ಮಾಡಿವೆ. ಇಷ್ಟಕ್ಕೂ ಜನರಿಗೆ ಅರ್ಥವಾಗುವ ಭಾಷಾ ಸಂಪತ್ತನ್ನು ಇದಿಷ್ಟೇ ಎಂದು ನಿಖರಗೊಳಿಸುವುದು ಸಾಧ್ಯವೆ ಎಂಬ ಪ್ರಶ್ನೆಯೂ ಇದೆ. ಆದರೆ, ಪತ್ರಿಕಾ ಬರಹಗಾರರಿಗೆ ತಾನು ತಲುಪಬೇಕು ಎಂಬ ತಹತಹವು ಆಂತರಿಕ ಒತ್ತಾಸೆಯಾಗಿ ಕೆಲಸ ಮಾಡಿದರೆ ಸಂವಹನೆಯ ಸಾಧ್ಯತೆಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಹೀಗಾಗಿ ಪತ್ರಿಕಾ ಭಾಷೆಯು ಚಲಾವಣೆಯಲ್ಲಿರುವ ರೂಪಗಳನ್ನು ಒಳಗೊಳ್ಳುತ್ತಲೇ ಆಗಾಗ್ಗೆ ಹೊಸ ರೂಪಗಳನ್ನು ಚಲಾವಣೆಗೆ ತರುವುದರಿಂದ ಜೀವಂತವಾಗಿರುತ್ತದೆ; ಲಕ್ಷ್ಮಣ ಕೊಡಸೆಯವರಿಗೆ ಇದೆಲ್ಲ ಗೊತ್ತಿರುವ ವಿಚಾರವೇ ಆಗಿದೆ. ಅವರು, ಮುಖ್ಯವಾಗಿ ಪತ್ರಿಕಾ ಬರಹದ ಸ್ವರೂಪವನ್ನು ಅರ್ಥೈಸುವ ಆಶಯವನ್ನು ಹೊಂದಿದ್ದು, ಅದನ್ನು ಸಾರ್ಥಕವಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಲೇಖನವು ಈ ಪುಸ್ತಕದ ಉಳಿದ ಲೇಖನಗಳ ಬಗ್ಗೆ ಲೇಖಕರೇ ಮಾಡಿಕೊಂಡ ಸ್ವವಿಮರ್ಶೆಯಂತೆಯೂ ಇದೆ.

ಲಕ್ಷ್ಮಣ ಕೊಡಸೆಯವರ ಈ ಕೃತಿಯ ಬಹುಪಾಲು ಲೇಖನಗಳು ಸಾಮಾಜಿಕ-ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ನೋಡಿದ ನೋಟಗಳಾಗಿವೆ. ಪತ್ರಕರ್ತರಾಗಿ ಸಂಪರ್ಕಿಸಬೇಕಾಗಿ ಬಂದವರನ್ನೂ ಒಳಗೊಂಡಂತೆ, ಸಹಜ ಆಸಕ್ತಿಯಿಂದ ಭೇಟಿ ಮಾಡಿದ ಕುವೆಂಪು ಅವರಂಥವರನ್ನು ಕುರಿತ ನೋಟಗಳು ಇಲ್ಲಿ ದಾಖಲಾಗಿವೆ. ಕೆಲವರ ಬಗ್ಗೆ ಟಿಪ್ಪಣಿ ರೂಪದ ಬರಹಗಳಿದ್ದು, ಆಯಾ ಬರಹದ ಕೊನೆಯಲ್ಲಿ ಅವರ ಅಥವಾ ಅವರಿಗೆ ಸಂಬಂಧಿಸಿದ ಕೃತಿಯ ಪರಿಚಯ/ವಿಶ್ಲೇಷಣೆ ಯನ್ನೂ ಕೊಡಲಾಗಿದೆ. ಕೆಲವು ಬರಹಗಳಲ್ಲಿ ಸಂದರ್ಶನಗಳನ್ನೂ ದಾಖಲಿಸಲಾಗಿದೆ. ಪ್ರಧಾನವಾಗಿ ‘ಪತ್ರಕರ್ತ’ ಕೊಡಸೆಯವರು ಕಾಣಿಸಿಕೊಂಡರೂ ‘ಲೇಖಕ’ ಕೊಡಸೆಯವರ ಒಳಗಣ್ಣು ತೆರೆದುಕೊಂಡಿರುವುದು ಸ್ಪಷ್ಟವಾಗಿದೆ. ಇಡೀ ಪುಸ್ತಕದಲ್ಲಿ ಮೈ ಮತ್ತು ಮನಸ್ಸುಗಳ ಹೊಂದಾಣಿಕೆಯ ತಾಕಲಾಟವನ್ನು ಗುರುತಿಸಬಹುದಾಗಿದೆ. ಕೆಲವು ಲೇಖನಗಳಲ್ಲಿ ‘ಲೇಖಕ’ ಮೈಯ್ಯಾದರೆ ‘ಪತ್ರಕರ್ತ’, ಮನಸ್ಸಾಗುತ್ತಾನೆ. ಇನ್ನು ಕೆಲವು ಲೇಖನಗಳಲ್ಲಿ ಇದು ಅದಲು ಬದಲಾಗಿ ‘ಪತ್ರಕರ್ತ’ ಮೈಯ್ಯಾಗುತ್ತಾನೆ. ‘ಲೇಖಕ’ ಮನಸ್ಸಾಗುತ್ತಾನೆ. ಈ ಹೊಂದಾಣಿಕೆಯ ಸ್ವರೂಪಕ್ಕೂ ಬರಹಗಳ ರೂಪಕ್ಕೂ ಸಂಬಂಧ ಕಲ್ಪಿತವಾಗುತ್ತದೆ.

ತಮ್ಮ ಕೃತಿಗೆ ‘ಬಲ್ಲಿದರೊಡನೆ’ ಎಂದು ಹೆಸರಿಡುವುದರ ಮೂಲಕ ಬರಹಗಳಲ್ಲಿ ಮೂಡಿ ಬಂದ ಎಲ್ಲ ವ್ಯಕ್ತಿಗಳ ಬಗ್ಗೆಯೂ ತಮಗಿರುವ ಗೌರವವನ್ನು ಲೇಖಕರು ಪ್ರಕಟಿಸಿದ್ದಾರೆ. ಕೆಲವು ಬರಹಗಳಲ್ಲಿ ವಿಮರ್ಶಾತ್ಮಕ ಅಥವಾ ಟೀಕಾತ್ಮಕ ಮಾತುಗಳಿರಬಹುದು. ಇದರರ್ಥ ಲೇಖಕರಿಗೆ ಅವರ ಬಗ್ಗೆ ಗೌರವವಿಲ್ಲವೆಂದಲ್ಲ. ಇಲ್ಲಿನ ಬರಹಗಳಲ್ಲಿ ಮೂಡಿಬಂದವರೆಲ್ಲ ಬಲ್ಲಿದರೇ ಆಗಿದ್ದಾರೆ. ಇವರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬಲ್ಲಿದರು – ಇದು ಲಕ್ಷ್ಮಣ ಕೊಡಸೆಯವರ ನೋಟ. ಇನ್ನೊಂದು ವಿಶೇಷವೆಂದರೆ ಈ ಕೃತಿಯಲ್ಲಿರುವ ಬರಹಗಳ ಶೀರ್ಷಿಕೆಗಳು ಆಯಾ ವ್ಯಕ್ತಿಯ ವ್ಯಕ್ತಿತ್ವದ ಮುಖ್ಯ ಅಂಶವೊಂದನ್ನು ಸೂಚಿಸುತ್ತವೆ. ಗಮನಿಸಿ : ‘ಕುವೆಂಪು : ಏಕಲವ್ಯರ ಸೃಷ್ಟಿಯಲ್ಲಿ’ ‘ದೇಜಗೌ : ಎಲ್ಲಾ ಕನ್ನಡದ ಹೆಸರಲ್ಲಿ’ ‘ಆರ್.ಸಿ. ಹಿರೇಮಠ : ನವ್ಯಕ್ಕೆ ಹಿಡಿಸದ ದಕ್ಷತೆ’ ‘ಯು.ಆರ್. ಅನಂತಮೂರ್ತಿ : ಇ-ಮೇಲ್ ಪದ ಸಂಪದ’ ‘ಟಿ.ವಿ. ವೆಂಕಟಾಚಲಶಾಸ್ತ್ರಿ : ಪ್ರಖರ ಪಾಂಡಿತ್ಯ’ ‘ಬಿ.ವಿ. ವೈಕುಂಠರಾಜು : ಬಹು ಮುಖೀ ಬರವಣಿಗೆ’ ‘ಲಂಕೇಶ್ : ಬಹುಮುಖ ಪ್ರತಿಭೆ’ ‘ಎಂ.ಡಿ. ನಂಜುಂಡಸ್ವಾಮಿ : ದಣಿವರಿಯದ ಹೋರಾಟಗಾರ’ ‘ಪೂರ್ಣಚಂದ್ರ ತೇಜಸ್ವಿ : ಹಿರಿಯಣ್ಣನ ಗದರಿಕೆ’ ‘ಕೆ.ವಿ. ಸುಬ್ಬಣ್ಣ : ದೇಸೀಯ ಜಾಗತಿಕ ಚಿಂತಕ’ – ಹೀಗೆ ಉದಾಹರಿಸಬಹುದು.

ಇಡೀ ಪುಸ್ತಕದಲ್ಲಿ ಕುವೆಂಪು, ಕೆ.ವಿ. ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಆರ್.ಸಿ. ಹಿರೇಮಠ, ಯು.ಆರ್. ಅನಂತಮೂರ್ತಿ – ಇವರನ್ನು ಕುರಿತ ಬರಹಗಳು ತುಂಬಾ ಗಮನಾರ್ಹವಾಗಿವೆ; ಈ ಉಳಿದ ಲೇಖನಗಳು ತಾವಾಗಿಯೇ ಹೇರಿಕೊಂಡ ಪುಟ ಮಿತಿಯಲ್ಲಿ ತಕ್ಕುದಾದ ಚಿತ್ರವನ್ನು ಕಟ್ಟಿಕೊಡುತ್ತವೆ. ಆದರೆ ಪುಟ ಮಿತಿಯನ್ನು ಮೀರಿದ ಬರಹಗಳು ಭೌತಿಕವಾಗಿಯಷ್ಟೇ ಅಲ್ಲ, ಅಂತಃಸತ್ವದಿಂದಲೂ ಮುಖ್ಯವಾಗಿರುವುದು ಕಂಡುಬರುತ್ತದೆ. ಈ ಮಾದರಿಯ ಬರಹಗಳಲ್ಲಿ ‘ಲೇಖಕ’ ಮನಸ್ಸು ಕೇಂದ್ರದಲ್ಲಿರುವುದು ಗಮನಿಸಬೇಕಾದ ಅಂಶವಾಗಿದೆ. ಕುವೆಂಪು ಅವರನ್ನು ಕುರಿತು ಬರೆದಿರುವ ಲೇಖನ ಎಷ್ಟು ಸಹಜವಾಗಿದೆಯೆಂದರೆ ಕೊಡಸೆಯವರ ಜಾಗದಲ್ಲಿ ನಾನೇ ಇದ್ದೇನೆಂದು ಅನಿಸತೊಡಗಿತು. ಹಳ್ಳಿಗಾಡಿನ ಹುಡುಗನೊಬ್ಬನ ಕನಸಿನ ಕಣ್ಣು ಅರಳುತ್ತಲೇ ಸ್ವಾಭಾವಿಕ ಹಿಂಜರಿಕೆಯಲ್ಲಿ ಮೊಗ್ಗಾಗುವ ಮನಸ್ಥಿತಿಯನ್ನು ಕೊಡಸೆಯವರು ಕತೆಗಾರನಂತೆ ಕಟ್ಟಿಕೊಡುತ್ತಾರೆ. ಈ ಅಭಿವ್ಯಕ್ತಿ ಸಾಧ್ಯತೆಯನ್ನು ತೇಜಸ್ವಿಯವರನ್ನು ಕುರಿತ ಬರಹದಲ್ಲೂ ಕಾಣಬಹುದಾಗಿದೆ. ‘ಬಲ್ಲಿದರೊಡನೆ’ ಕಳೆದ ಕ್ಷಣಗಳಲ್ಲಿ ಕೊಡಸೆಯವರಿಗೆ ನಿಜಕ್ಕೂ ಬಲ್ಲಿದರಾಗಿ ಕಂಡವರು ಯಾರೆನ್ನುವುದನ್ನು ಆಯಾ ಬರಹಗಳ ಅಂತಃಸತ್ವವೇ ಅನಾವರಣಗೊಳಿಸುತ್ತದೆ. ಕುವೆಂಪು, ತೇಜಸ್ವಿ, ಲಂಕೇಶ್, ನಂಜುಂಡಸ್ವಾಮಿ – ಇಂಥವರನ್ನು ಕುರಿತು ಬರೆಯುವಾಗಿನ ‘ಮೈಮನಗಳ ಹೊಂದಾಣಿಕೆ’ ಸಹಜವೆನ್ನುವಂತೆ ಮೂಡಿಬಂದಿದೆ. ಯಾಕೆ ಸಹಜ, ಯಾಕೆ ಆಪ್ತ, ಎಂಬ ಪ್ರಶ್ನೆಗಳಿಗೆ ಲಕ್ಷ್ಮಣ ಕೊಡಸೆಯವರ ಸಾಮಾಜಿಕ – ಸಾಂಸ್ಕೃತಿಕ ನೆಲೆ-ನಿಲುವುಗಳಲ್ಲೇ ಉತ್ತರವಿದೆ. ಹೀಗೆಂದ ಕೂಡಲೆ ಉಳಿದವರ ಬಗ್ಗೆ ಅನಾದರ ಅಥವಾ ಅನಾಸಕ್ತಿಯಿಂದ ಬರೆದಿದ್ದಾರೆಂದು ಭಾವಿಸ ಬೇಕಾಗಿಲ್ಲ. ಒಂದೊಮ್ಮೆ ಪತ್ರಿಕೆಗಾಗಿ ಬರೆದಿದ್ದರೂ ತಮಗೆ ಗೌರವವಿಲ್ಲವೆಂದಿದ್ದರೆ, ಅಂಥವರನ್ನು ಕುರಿತ ಬರಹಗಳನ್ನು ಈ ಕೃತಿಯಲ್ಲಿ ಕೈಬಿಡಬಹುದಿತ್ತು. ಕೊಡಸೆಯವರು ಹಾಗೆ ಮಾಡಿಲ್ಲ ಎನ್ನುವುದೇ ಅವರೆಲ್ಲರೂ ಬಲ್ಲಿದರು. ಅವರೆಲ್ಲರ ಬಗ್ಗೆಯೂ ಸಕಾರಾತ್ಮಕವಾಗಿಯೇ ಮಾಹಿತಿ ನೀಡುವ ಮೂಲಕ ಲೇಖಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಕೆಲವರ ಬಗ್ಗೆ ಇರಬಹುದಾದ ‘ಪೂರ್ವಾಗ್ರಹ’ಗಳನ್ನು ಎದುರು ಹಾಕಿಕೊಂಡು ಬೇರೊಂದು ನೆಲೆಯಲ್ಲಿ ಬರೆದಿದ್ದಾರೆ. ಈಗ ನೋಡಿ : ಆರ್.ಸಿ. ಹಿರೇಮಠ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ‘ಸಾಹಿತ್ಯದ ಶ್ರೇಷ್ಠತೆ’ಗೆ ತಕ್ಕ ಆಯ್ಕೆಯಲ್ಲವೆಂದು ಭಾವಿಸಿದ ಕೆಲವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇನ್ನೊಂದು ಸಮ್ಮೇಳನವನ್ನು ನಡೆಸಿದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆಲವರನ್ನು ಗಮನಿಸಿದಾಗ ಆ ವಿಷಯ ಇರಲಿ, ಲಕ್ಷ್ಮಣ ಕೊಡಸೆಯವರು ಆರ್.ಸಿ. ಹಿರೇಮಠರ ಬಗ್ಗೆ ಬರೆಯುತ್ತ ‘ನವ್ಯಕ್ಕೆ ಹಿಡಿಸದ ದಕ್ಷತೆ’ ಎಂಬ ಶೀರ್ಷಿಕೆಯಲ್ಲೇ ‘ಶ್ರೇಷ್ಠತೆ’ಯ ಪ್ರತಿಪಾದಕರ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ಹಿರೇಮಠರು ಸಾಂಸ್ಥಿಕವಾಗಿ ಮಾಡಿದ ಅನೇಕ ಕೆಲಸಗಳನ್ನು ಸಾದರಪಡಿಸುತ್ತಾರೆ. ಈ ಬರಹವು ಹಿರೇಮಠರ ಆಯ್ಕೆಯ ಸಾಂಪ್ರದಾಯಿಕ ಸಮರ್ಥನೆಯಷ್ಟೇ ಆಗದೆ ‘ನವ್ಯರ ನೋಟ’ದ ಕೊರತೆಯನ್ನು ಪರೋಕ್ಷವಾಗಿ ಹೇಳುತ್ತದೆ. ಅಂತೆಯೇ ಕೆ.ವಿ. ಸುಬ್ಬಣ್ಣನವರ ಬಗ್ಗೆ ಬರೆದ ಬರಹವು ಇತಿಮಿತಿಗಳ ಚೌಕಟ್ಟಿನಲ್ಲಿ ಅವರನ್ನು ಗೌರವಯುತ ಸ್ಥಾನದಲ್ಲಿ ನಿಲ್ಲಿಸುತ್ತದೆ. ನಿಸಾರ್, ವೈಕುಂಠರಾಜು, ವೆಂಕಟಾಚಲಶಾಸ್ತ್ರಿ, ಜಿ. ವೆಂಕಟಸುಬ್ಬಯ್ಯ, ಶಂಕರ ಮೊಕಾಶಿ ಪುಣೇಕರ – ಮುಂತಾದವರನ್ನು ಕುರಿತ ಬರಹಗಳು ಪುಟಮಿತಿಯಲ್ಲೇ ಅವರವರ ವ್ಯಕ್ತಿತ್ವ ಮತ್ತು ಸಾಧನೆಯ ಕೆಲ ಅಂಶಗಳನ್ನು ಪರಿಚಯಿಸುತ್ತವೆ.

ಯು.ಆರ್. ಅನಂತಮೂರ್ತಿಯವರನ್ನು ಕುರಿತ ಬರಹದಲ್ಲಿ ಪತ್ರಕರ್ತರ ಇಕ್ಕಟ್ಟುಗಳನ್ನು ಏನೂ ಆಗಿಲ್ಲವೆನ್ನುವಂತೆ ನಿರುಮ್ಮಳವಾಗಿ ನಿರೂಪಿಸಿದ್ದಾರೆ – ಲಕ್ಷ್ಮಣ ಕೊಡಸೆಯವರು. ಅನಂತಮೂರ್ತಿಯವರು ತಮ್ಮ ಕೃತಿಯೊಂದರ ಬಗ್ಗೆ ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾದ ವಿಮರ್ಶೆಗೆ ಕೊಟ್ಟ ಶೀರ್ಷಿಕೆಯ ಬಗ್ಗೆ ತಕರಾರು ಎತ್ತಿ ಪ್ರಕ್ಷುಬ್ಬರಾದ ‘ಕಥಾನಕ’ವು ಸ್ವಾರಸ್ಯಕರವಾಗಿದೆ. ಲೇಖಕರಿಗೆ ಆಗುವ ನಿಜವಾದ ಅಥವಾ ಆರೋಪಿತ ಮುಜುಗರಗಳಿಂದ ಪತ್ರಕರ್ತ ಮಿತ್ರರು ಎದುರಿಸಬೇಕಾಗಿ ಬರುವ ಆಕ್ಷೇಪ ಅಥವಾ ಇಕ್ಕಟ್ಟುಗಳನ್ನು, ಅನಂತಮೂರ್ತಿಯವರನ್ನು ಕುರಿತ ಬರಹದಲ್ಲಿ ಕಾಣಬಹುದು. ಒಂದು ಸ್ವಾರಸ್ಯಕರ ಅಂಶವೆಂದರೆ ಹಿಂದೆ ಲಕ್ಷ್ಮಣ ಕೊಡಸೆಯವರು ಮೈಸೂರಲ್ಲಿ ಕೆಲಸ ಮಾಡುತ್ತಿದ್ದಾಗ ದೇ.ಜವರೇಗೌಡರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡಿರುತ್ತಾರಾದರೂ ಮೈಸೂರಲ್ಲೇ ಇದ್ದ ಅನಂತ ಮೂರ್ತಿ ಯವರನ್ನು ಒಮ್ಮೆಯೂ ಮುಖತಃ ಭೇಟಿಯಾಗಿರುವುದಿಲ್ಲ. ಇದಕ್ಕೆ ಕೊಡಸೆಯವರು ಕೊಡುವ ಕಾರಣ : ಜಿ.ಪಿ. ಬಸವರಾಜು ಅವರು ಸಾಹಿತ್ಯ ಸಂಬಂಧಿ ವರದಿಗಳನ್ನು ಮಾಡುತ್ತಿದ್ದುದರಿಂದ ಅನಂತಮೂರ್ತಿಯವರ ಸಂಪರ್ಕ ಬರಲಿಲ್ಲ. ಇದು ಒಂದು ತಾಂತ್ರಿಕ ಕಾರಣದಂತೆ ಕಾಣುವುದು ಸಹಜ. ‘ಬಲ್ಲಿದರೊಡನೆ’ ಪುಸ್ತಕವನ್ನು ಓದಿದಾಗ ಲಕ್ಷ್ಮಣ ಕೊಡಸೆಯವರ ಆಸಕ್ತಿಯ ಆದ್ಯತೆಗಳು ಕಾಣಿಸಿಕೊಳ್ಳುವ ಕ್ರಮವನ್ನು ಕಂಡಾಗ ದೇಜಗೌ ಅವರನ್ನು ಸಮೀಪದಿಂದ ಕಂಡದ್ದು, ಅನಂತಮೂರ್ತಿಯವರನ್ನು ದೂರದಿಂದ ಕಂಡದ್ದು ಸ್ವಯಂ ಸಾಮಾಜಿಕ ವ್ಯಾಖ್ಯಾನ ವಿರಬಹುದೆ ಎನ್ನಿಸುತ್ತದೆ. ಹಾಗೇ ಇದ್ದ ಪಕ್ಷದಲ್ಲಿ ತಪ್ಪೇನೂ ಇಲ್ಲ. ಅಂತೆಯೇ ‘ದೇಜಗೌ’ ಕುರಿತ ಲೇಖನಕ್ಕೆ ಕೊಟ್ಟಿರುವ ‘ಎಲ್ಲಾ ಕನ್ನಡದ ಹೆಸರಲ್ಲಿ’ ಎಂಬ ಶೀರ್ಷಿಕೆಯಲ್ಲಿ ವ್ಯಂಗ್ಯವೂ ಇರಬಹುದಾದರೆ, ಸರಿಯಾಗಿದೆ ಎನ್ನಿಸುತ್ತದೆ!

ಒಟ್ಟಿನಲ್ಲಿ ಹೇಳುವುದಾದರೆ, ಸುಲಲಿತ ಶೈಲಿ ಮತ್ತು ಸುಲಭ ಸಂವಹನೆಗಳ ನೆಲೆಯಲ್ಲಿ ವಿಶ್ಲೇಷಣೆಯ ಒಳ ಆಯಾಮವುಳ್ಳ ಬರಹಗಳನ್ನು ಕೊಡುವುದರ ಮೂಲಕ ಕೊಡಸೆಯವರು ಒಂದು ಉಪಯುಕ್ತ ಕೆಲಸ ಮಾಡಿದ್ದಾರೆ; ಈ ಕೆಲಸವನ್ನು ಸಂತೋಷದಿಂದ ನಿರ್ವಹಿಸಿದ್ದಾರೆ; ಸಂತೋಷ ಕೊಟ್ಟಿದ್ದಾರೆ.

ಮಾತು ಮುಗಿಸುವುದಕ್ಕೆ ಮುಂಚೆ ಒಂದು ವಿಷಯವನ್ನು ಪ್ರಸ್ತಾಪಿಸುವುದು ಅಗತ್ಯವಾಗಿದೆ. ಲೇಖಕರ ಆಶಯ ಸರಿಯಾಗಿದ್ದರೂ ಪದ ಬಳಕೆ ಸರಿಯಾಗಿಲ್ಲದಿದ್ದರೆ ತಪ್ಪು ಅರ್ಥಕ್ಕೆ ಕಾರಣವಾಗುವುದುಂಟು ಅಥವಾ ಪದಗಳನ್ನು ಅನ್ಯಾರ್ಥ ಮಾಡಿಕೊಂಡು ಬಳಸಿದರೆ ತಪ್ಪಾಗುವುದುಂಟು. ಕುವೆಂಪು ಅವರನ್ನು ಕುರಿತ ಲೇಖನದಲ್ಲಿ ಒಂದು ಕಡೆ ಕೊಡಸೆಯವರು ಹೀಗೆ ಬರೆದಿದ್ದಾರೆ : “ಕೆಲವು ವಿಮರ್ಶಕರು ಕುವೆಂಪು ಪ್ರಧಾನಧಾರೆಗೆ ಪರ್ಯಾಯವಾದ ಮಾರ್ಗವನ್ನು ತುಳಿದರೆಂದು ಬರೆಯುತ್ತಾರೆ. ಈ ಬಗೆಯ ವಿಮರ್ಶಕರು ದೃಷ್ಟಿಯಲ್ಲಿ ವಿದ್ಯೆಗೆ ವಾರಸುದಾರರಾಗಿದ್ದವರು ಅನುಸರಿಸುತ್ತಿದ್ದುದೇ ಪ್ರಧಾನಧಾರೆ. ಉಳಿದವರು ಆರಂಭಿಸಿದ್ದು ಅದಕ್ಕೆ ಪ್ರತಿಯಾದ ಪರ್ಯಾಯ ಧಾರೆ. ಜನಸಂಖ್ಯೆಯ ಶೇಕಡಾ ಮೂರು – ನಾಲ್ಕರಷ್ಟಿದ್ದ ಜನತೆ ನಿರ್ಣಯಿಸುತ್ತಿದ್ದುದೇ ಸಾಹಿತ್ಯದ ಮೌಲಿಕತೆ. ಅವರು ಅನುಸರಿಸುತ್ತಿರುವುದೇ ನಿಜವಾದ ಸಂಸ್ಕೃತಿ, ಉಳಿದ ಬಹು ಸಂಖ್ಯಾತರದೇನಿದ್ದರೂ ಉಪ ಸಂಸ್ಕೃತಿ.” ಲಕ್ಷ್ಮಣ ಕೊಡಸೆಯವರ ಆಶಯ ಮತ್ತು ಆಕ್ಷೇಪವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆಶಯದ ಹಂತದಲ್ಲಿ ಅದರ ಯಥಾರ್ಥತೆಯನ್ನು ಸಾಮಾಜಿಕವಾಗಿ ಒಪ್ಪಬಲ್ಲೆ. ಆದರೆ ಇಲ್ಲಿ ‘ಪರ್ಯಾಯಧಾರೆ’ ಮತ್ತು ‘ಉಪಸಂಸ್ಕೃತಿ’ ಎಂಬ ಪದಗಳನ್ನು ತಪ್ಪಾಗಿ ಬಳಸಲಾಗಿದೆ ಅಥವಾ ತಪ್ಪಾಗಿ ಅರ್ಥಮಾಡಿಕೊಂಡು ಬಳಸಲಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಪರ್ಯಾಯಧಾರೆ ಮತ್ತು ಉಪಸಂಸ್ಕೃತಿ – ಎಂಬ ಪದ ಮತ್ತು ಪರಿಕಲ್ಪನೆಗಳನ್ನು ಶ್ರೇಷ್ಠವಲ್ಲದ್ದು, ಮೌಲಿಕವಲ್ಲದ್ದು ಎಂದು ತಿಳಿಯಬೇಕಾಗಿಲ್ಲ. ಈ ಪದ ಮತ್ತು ಪರಿಕಲ್ಪನೆಗಳು ಹೀಗೆ ನಕಾರಾತ್ಮಕ ನೆಲೆಯಲ್ಲಿ ಬಳಕೆಗೆ ಬಂದಿಲ್ಲ. ‘ಪರ್ಯಾಯ ಧಾರೆ’ ಎನ್ನುವುದನ್ನು ಪ್ರತಿಷ್ಠಿತ ವಲಯದ ಜಡ ಮೌಲ್ಯ ವ್ಯವಸ್ಥೆಯ ವಿರುದ್ಧವಾದ ಪ್ರತಿಭಟನಾತ್ಮಕ ಧಾರೆ – ಎಂದು ಗುರುತಿಸಲಾಗಿದೆ. ಅದೇ ಅರ್ಥದಲ್ಲಿ ಪರ್ಯಾಯಧಾರೆ ಎಂಬ ಪದವನ್ನು ಬಳಸುತ್ತ ಬರಲಾಗಿದೆ. ಆದ್ದರಿಂದ ಪರ್ಯಾಯಧಾರೆ ಎನ್ನುವುದು ಹೊಸ ಹಾದಿ ತೆರೆಯುವ ಮೌಲಿಕ ಮಾರ್ಗ ಇನ್ನು ‘ಉಪಸಂಸ್ಕೃತಿ’ ವಿಷಯ. ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ‘ಉಪಸಂಸ್ಕೃತಿಗಳ ಅಧ್ಯಯನ ಮಾಲೆ’ಯನ್ನು ಆರಂಭಿಸಿ ಸುಮಾರು ೪೦ ಸಂಶೋಧನ ಗ್ರಂಥಗಳನ್ನು ವಿವಿಧ ಲೇಖಕರಿಂದ ಬರೆಯಿಸಿ, ಪ್ರಧಾನ ಸಂಪಾದಕನಾಗಿ ಪ್ರಕಟಿಸಿದೆ. ಆಗ ‘ಉಪಸಂಸ್ಕೃತಿ’ ಎಂಬುದು ಬಳಕೆಗೆ ಬಂತು. ಉಪಸಂಸ್ಕೃತಿಗಳ ಅಧ್ಯಯನವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುತ್ತ ಬಂದಂತೆ ಕೆಲ ‘ಜಾನಪದ ತಜ್ಞರು’ ಅಲ್ಲಲ್ಲೇ ‘ಉಪಸಂಸ್ಕೃತಿ’ಯೆಂಬ ಪದ ಬಳಕೆಗೆ ಆಕ್ಷೇಪವೆತ್ತಿದರು. ಇಂಥವರು ‘ಉಪಸಂಸ್ಕೃತಿ’ ಯನ್ನು ಒಂದು ವಾಚ್ಯಾರ್ಥದ ಪದವಾಗಿ ನೋಡಿದರೇ ಹೊರತು ಧ್ವನ್ಯಾರ್ಥದ ಪರಿಕಲ್ಪನೆಯಾಗಿ ನೋಡಲಿಲ್ಲ. ಇಷ್ಟಕ್ಕೂ ಬುಡಕಟ್ಟು ಹಾಗೂ ಅಲೆಮಾರಿ ಜನಾಂಗಗಳ ಸಂಸ್ಕೃತಿಗಳನ್ನು ‘ಉಪಸಂಸ್ಕೃತಿಗಳು’ ಎಂದು ಗುರುತಿಸಲಾಗಿತ್ತು. ವಿವಿಧ ಜಾತಿ-ಜನಾಂಗಗಳಲ್ಲಿ ಹುಟ್ಟಿ ಮಧ್ಯಮ ವರ್ಗವನ್ನು ಮುಟ್ಟಿದವರು ಮೇಲ್ ಮಧ್ಯಮವರ್ಗಕ್ಕೆ ಏರಿದವರು ಇಡೀ ದೇಶದಲ್ಲಿ ಕೆಲವು ನಿರ್ದಿಷ್ಟ ಜೀವನ ಮಾದರಿಗಳನ್ನು ಅನುಸರಿಸುತ್ತಿದ್ದು ಯಾರಾದರೂ ಒಪ್ಪಲಿ ಬಿಡಲಿ, – ಈ ಮಾದರಿಗಳೇ ಪ್ರಧಾನವಾಗಿವೆ. ಇದರರ್ಥ ಅವು ಶ್ರೇಷ್ಠವಾಗಿವೆ ಎಂದಲ್ಲ. ‘ಉಪ’ ಎಂದ ಕೂಡಲೇ ಕನಿಷ್ಠ, ಎಂದರ್ಥವೂ ಅಲ್ಲ. ಹಾಗೆ ಭಾವಿಸಿ ‘ಉಪಸಂಸ್ಕೃತಿ’ ಎನ್ನಬಾರದು ಎಂದು ವಾದಿಸುವವರು ಹುಸಿ ವೈಭವೀಕರಣದ ವಾರಸುದಾರರಾಗುತ್ತಾರೆ. ಕೊಡಸೆಯವರು ಪ್ರಸ್ತಾಪಿಸಿರುವ ‘ಶೇಕಡಾ ಮೂರು-ನಾಲ್ಕರಷ್ಟಿದ್ದ ಜನತೆ’ಯನ್ನು ವಿರೋಧಿಸುವುದಕ್ಕೆ ಜನರ ಹುಸಿ ವೈಭವೀಕರಣವೂ ಒಂದು ಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು. ‘ಉಪ ಸಂಸ್ಕೃತಿ’ ಎನ್ನುವ ಬದಲು ತಳಮೂಲ, ನೆಲಮೂಲ ಎನ್ನುವುದು ಯಾಕೆ ಸರಿಯಲ್ಲವೆಂದರೆ ಈಗಿನ ಅಲೆಮಾರಿ, ಬುಡಕಟ್ಟು ಜೀವನ ಮಾದರಿಯೇ ಸಂಸ್ಕೃತಿಯ ಅಥವಾ ಮನುಷ್ಯನ ಮೂಲವಲ್ಲ, ಇದೊಂದು ಸಾಮಾನ್ಯ ತಿಳುವಳಿಕೆಯ ಸಂಗತಿಯೆಂದು ತಜ್ಞರಿಗೆ ತಿಳಿಯಬೇಕಷ್ಟೆ. ಉಪಭಾಷೆ, ಕಿರುಸಂಸ್ಕೃತಿ ಎಂಬ ಪದಗಳು ಹೇಗೆ ಕಡಿಮೆ, ಕನಿಷ್ಠ ಎಂಬ ಅರ್ಥವನ್ನು ಕೊಡುವುದಿಲ್ಲವೊ ‘ಉಪಸಂಸ್ಕೃತಿ’ ಎಂಬ ಪದ-ಪರಿಕಲ್ಪನೆ ಖಂಡಿತ ಕಡಿಮೆ, ಕನಿಷ್ಠ ಎಂಬ ಅರ್ಥ ಕೊಡುವುದಿಲ್ಲ. ಇಷ್ಟಕ್ಕೂ ಒಂದೇ ಉಪಸಂಸ್ಕೃತಿಯಿಲ್ಲ. ಲಕ್ಷ್ಮಣ ಕೊಡಸೆಯವರೇ ಈ ಪುಸ್ತಕದಲ್ಲಿ ಒಂದು ಕಡೆ ‘ಸಣ್ಣಕತೆ (ಅದು ನಿಜಕ್ಕೂ ದೊಡ್ಡದೇ)’ ಎಂದು ಹೇಳಿದ್ದಾರೆ.
‘ಉಪಸಂಸ್ಕೃತಿ’ ಪದವನ್ನು ಅನ್ಯಾರ್ಥ ಮಾಡಿಕೊಂಡವರಿಗೆ ಇದೂ ಒಂದು ಉತ್ತರವಾದೀತು. ನಾನು ಇಷ್ಟು ಮಾತುಗಳನ್ನು ಹೇಳಿದ್ದು ಕೊಡಸೆಯವರಲ್ಲಿ ತಪ್ಪು ಹುಡುಕಲು ಖಂಡಿತ ಅಲ್ಲ. ‘ಉಪಸಂಸ್ಕೃತಿ’ಯೆಂಬ ಪದ ಮತ್ತು ಪರಿಕಲ್ಪನೆಯನ್ನು ಚಾಲ್ತಿಗೆ ಕೊಟ್ಟವನಾಗಿ ನಾನು ಇಷ್ಟು ಹೇಳಬೇಕಾಯಿತು. ಕೆಲವರು ಅನ್ಯಾರ್ಥ ಮಾಡಿ ಪ್ರಚುರಪಡಿಸಿದ್ದರಿಂದ ಕೊಡಸೆಯವರೂ ಅದೇ ಅರ್ಥದಲ್ಲಿ ಬಳಸುವಂತಾಗಿದೆ; ಅಷ್ಟೆ. ‘ಪರ್ಯಾಯಧಾರೆ’ಗೂ ಇದೇ ಮಾತನ್ನು ಹೇಳಬಹುದು.

ಕಡೆಯಲ್ಲಿ ಒಂದು ಮುಜುಗರದ ಮಾತು : ನನಗೆ ಲೇಖನಗಳನ್ನು ಕಳಿಸಿ ಎಲ್ಲಾ ಮುಗಿದ ಮೇಲೆ ಲಕ್ಷ್ಮಣ ಕೊಡಸೆಯವರು – ‘ಈ ಪುಸ್ತಕದಲ್ಲಿ ನಿಮ್ಮ ಬಗ್ಗೆಯೂ ಒಂದು ಲೇಖನ ಇದೆ. ನಿಮಗೆ ಕಳಿಸಿಲ್ಲ. ಅಷ್ಟೆ’ ಎಂದರು. ಅವರು ಏನಾದರೂ ಬರೆದಿರಲಿ ನನ್ನನ್ನು ಕುರಿತ ಲೇಖನವನ್ನು ಒಳಗೊಂಡ ಪುಸ್ತಕಕ್ಕೆ ನಾನೇ ಮುನ್ನುಡಿ ರೂಪದ ಮಾತುಗಳನ್ನು ಬರೆದದ್ದು ಸಂಕೋಚವನ್ನುಂಟು ಮಾಡುತ್ತದೆ. ಆದರೇನು ಮಾಡಲಿ – ನನ್ನನ್ನು ಸಂಕೋಚದಿಂದ ಪಾರು ಮಾಡುವುದು ಬಿಡುವುದು ಗೆಳೆಯ ಲಕ್ಷಣ ಕೊಡಸೆಯವರ ಕೈಯ್ಯಲ್ಲಿದೆ. ಅದು ಅವರ ಹಕ್ಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭೨
Next post ಅಡುಗೆ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys