ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು ಹೋಗುತ್ತಿದ್ದವು. ಕರಿಬಿಳಿ ಮಿಶ್ರಿತ ಆ ಜೂಲು ನಾಯಿಗಳು ಅಣ್ಣ ತಮ್ಮಂದಿರಂತೆ ನಡೆದು ಮಳೆಯ ಹೊಡೆತ ತಪ್ಪಿಸಿಕೊಳ್ಳಲು ಆಶ್ರಯಕ್ಕಾಗಿ ಹುಡುಕುತಿದ್ದವು. ಬೋನಿ ನಾಯಿ ಚುರುಕಾಗಿದ್ದು ಕುರುಡು ನಾಯಿ ಕ್ಲೈಡ್ ದೇಹಕ್ಕೆ ದೇಹವನ್ನು ತಗಲಿಸಿಕೊಂಡು ಹೋಗುತ್ತಿತ್ತು. ಕುರುಡು ನಾಯಿ ಕ್ಲೈಡ್ ತನ್ನ ಆಪ್ತಮಿತ್ರನ ಹಾದಿಯಲ್ಲೇ ನಡೆಯುತ್ತಿತ್ತು. ಸ್ವಲ್ಪ ದೇಹದ ಸ್ಪರ್‍ಶ ಹೋದರೆ ತತ್ತರಿಸುತ್ತಿತ್ತು.
ಆಹಾರ, ವಿಹಾರದ ತಿರುಗಾಟಕ್ಕೆ ಬೋನಿಯ ಮೇಲೆ ಆಶ್ರಯಿಸಿತ್ತು. ಅದಕ್ಕೆ ಯಾವ ದಿಕ್ಕಿಗೆ, ಎಲ್ಲಿ ಹೋಗಬೇಕೆಂದು ತಿಳಿಯದಿದ್ದಾಗ ಬೋನಿಯ ಕುತ್ತಿಗೆಯ ಮೇಲೆ ತಲೆ ಇಡುತಿತ್ತು. ಅದರ ದೈನ್ಯಾವಸ್ತೆಗೆ ಬೋನಿ ಸ್ಪಂದಿಸಿ ಮುನ್ನಡೆಸುತ್ತಿತ್ತು. ಬೋನಿ ಹತ್ತಿರವಿದ್ದಾಗ ಅದು ಕಣ್ಣು ಕಾಣುವ ನಾಯಿಯಂತೆ ಓಡಾಡುತ್ತಿತ್ತು. ಎರಡು ವರ್‍ಷದ ಬೋನಿ ಇಲ್ಲದಾಗ ಒಂದು ಹೆಜ್ಜೆಯೂ ಮುಂದಿಡುತ್ತಿರಲಿಲ್ಲ. ಕೈಡ್‌ಗೆ ಎರಡು ವರ್‍ಷದ ಹಿಂದೆ ಕಣ್ಣಿಗೆ ಸೋಂಕಿದ ರೋಗದಿಂದಾಗಿ ಕಣ್ಣು ಕಾಣದೆ ಹೋಯಿತು. ತನ್ನ ಒಡೆಯನ ಮನೆಯಿಂದ ಒಮ್ಮೆ ಹೊರಹೋದಾಗ ದಾರಿತಪ್ಪಿ ನಿರಾಶ್ರಯವಾದಾಗ ಅದಕ್ಕೆ ಬೋನಿಯ ಸ್ನೇಹವಾಗಿ ಅದರೊಡನೆ ಜೀವಿಸುತಿದ್ದಿತು.
ಶ್ವಾನಪ್ರಿಯ ವಿಲಿಯಮ್‌ಗೆ ಚುರುಕು ಬೋನಿಯ ಮೇಲೆ ಕಣ್ಣು ಬಿದ್ದು, ಅದನ್ನು ತನ್ನ ಮನೆಗೆ ಕೊಂಡೊಯ್ದು ಮನೆಯಲ್ಲಿ ಇಟ್ಟುಕೊಂಡ. ಬೋನಿಗೆ ಮಿತ್ರನ ನೆನಪು ಕಾಡುತ್ತಿತ್ತು. ಅದು ವಿಲಿಯಮ್ ಕೊಟ್ಟ ಆಹಾರವನ್ನು ತಿನ್ನುತ್ತಿರಲಿಲ್ಲ. ಬೆಟ್ಟನ್ನು ಕಳಚಿಕೊಂಡು ಓಡಿಹೋಗಿ ಕ್ಲೈಡ್ ಅನ್ನು ಸೇರಲು ತವಕಿಸುತ್ತಿತ್ತು. ಇತ್ತ ಕ್ಲೈಡ್ ಅನಾಥವಾಗಿ ಒಂದು ಪೊದೆಯಲ್ಲಿ ನಿಶ್ವೇಷ್ಟಿತವಾಗಿ ಬಿದ್ದುಕೊಂಡಿತ್ತು. ಆಹಾರವಿಲ್ಲದೆ ಅದರ ದೇಹ ಸೊರಗಿತ್ತು. ಕಣ್ಣಿಗೆ ಆದ ಸೋಂಕು ಕಣ್ಣನ್ನು ಕುರುಡು ಮಾಡಿ ಸದಾ ನೀರು ಸುರಿಸುತ್ತಿತ್ತು. ಚಿಕ್ಕ ಕ್ರಿಮಿಗಳು ಅದರ ಕಣ್ಣಿನ ಸುತ್ತಾ ಹಾರಾಡಿ ಅದಕ್ಕೆ ತೊಂದರೆ ಮಾಡುತ್ತಿದ್ದವು. ಮೈ ಜೂಲಿನಲ್ಲಿ ಧೂಳು ತುಂಬಿ ಅಲ್ಲಲ್ಲಿ ಕೂದಲು ಉದುರಿ ಮೈ ಸೊರಗಿಹೋಗಿರುವುದನ್ನು ಸ್ಪಷ್ಟಪಡಿಸುತ್ತಿತ್ತು. ಬೋನಿ ಬಂದೇ ಬರುವ ಎಂಬ ದೃಢ ನಂಬಿಕೆ ಹೊತ್ತು ತಲೆ ಭೂಮಿಗೆ ಇಟ್ಟು ಮಲಗಿತ್ತು. ಅದಕ್ಕೆ ಬೋನಿಯೇ ದೈವವಾಗಿತ್ತು. ದೈವದ ಬರುವಿಗಾಗಿ ಉಸುರು ಬಿಡುತ್ತಾ ಕಾದು ಕುಳಿತಿತ್ತು. ಅದರ ನಂಬಿಕೆ ಸುಳ್ಳಾಗಲಿಲ್ಲ.
ಒಮ್ಮೆ ವಾಯುವಿಹಾರಕ್ಕೆ ಕರೆದೊಯ್ದಾಗ ಕಣ್ಣು ಕಾಣದೆ ವಿಲಿವಿಲಿ ಒದ್ದಾಡುತ್ತಿದ್ದ ಕ್ಲೈಡ್ ಅನ್ನು ನೋಡಿತು. ಅದರ ಸಂತೋಷಕ್ಕೆ ಪಾರವಿರಲಿಲ್ಲ. ವಿಲಿಯಮ್ ಕೈಯಿಂದ ಬೆಲ್ಟನ್ನು ಕಳಿಚಿಕೊಂಡು ಅದರ ದೇಹಕ್ಕೆ ತನ್ನ ದೇಹವನ್ನು ತಗುಲಿಸಿ, ತನ್ನ ಇರುವನ್ನು ಕ್ಲೈಡ್‌ಗೆ ತೋರಿಸಿತು. ಕೈಡ್ ಒಡನೆ ತನ್ನ ಆಪ್ತ ಮಿತ್ರ ಬಂದಿರುವುದು ನೋಡಿ ಬಾಲವನ್ನು ಅಲ್ಲಾಡಿಸುತ್ತ ನಾಲಿಗೆಯಿಂದ ನೆಕ್ಕುತ್ತಾ ನಿಂತಲ್ಲೇ ಎಗರಿ ಕುಣಿಯಿತು. ಅದಕ್ಕೆ ಹೋದ ಕಣ್ಣು ಬಂದಂತಾಯಿತು ಬೋನಿಯ ಬರುವಿಕೆಯಿಂದ. ವಿಲಿಯಮ್‌ಗೆ ಈ ನಾಯಿಗಳ ಮಧ್ಯೆ ಇರುವ ಬಾಂಧವ್ಯ ನೋಡಿ ಅವುಗಳನ್ನು ಬೇರ್‍ಪಡಿಸಿ ತಾನು ತಪ್ಪು ಮಾಡಿದೆನೆಂದು ತಿಳಿಯಿತು. ತನಗಿಂತಲು ಕ್ಲೈಡ್‌ಗೆ ಬೊನಿಯ ಅವಶ್ಯಕತೆ ಇದೆ ಎಂದು ತಿಳಿದು ಎರಡನ್ನು ಒಟ್ಟಿಗೆ ಇರಿಸಲು ಬೋನಿಯ ಬೆಲ್ಟಿನ ಕೊಂಡಿಯನ್ನು ಕ್ಲೈಡಿನ ಕತ್ತಿನ ಪಟ್ಟಿಗೆ ಸಿಗಿಸಿದ. ಮೂಕಪ್ರಾಣಿಯ ಅಸಹಾಯಕತ್ವ, ಅದರ ನೋವಿನ ಅರಿವು ಅವನ ಕಣ್ಣನ್ನು ತೇವವಾಗಿಸಿದವು. ಕುರುಡು ಮಾನವರು ಕೈ ಹಿಡಿದು, ಕೋಲು ಹಿಡಿದು ನಡೆಯಬಹುದು. ಮೂಕಪ್ರಾಣಿಗೆ ಮತ್ತೊಂದು ಮೂಕ ಪ್ರಾಣಿ ನೆರವಾಗುವುದನ್ನು ನೋಡಿದಾಗ, ಪ್ರಾಣಿ ಜಗತ್ತಿನ ಮನೋಸ್ಪಂದನದ ಅರಿವಾಯಿತು. ಅವುಗಳ ಮೈ ಸವರಿ ಬೆನ್ನು ತಟ್ಟಿದಾಗ ಎರಡೂ ಬಾಲ ಅಲ್ಲಾಡಿಸುತ್ತಾ ಅವನ ಮನೆಯ ಕಡೆಗೆ ನಡೆದು ಬಂದವು.
ಬೋನಿ ಜೊತೆ ಕ್ಲೈಡ್ ಮನೆಗೆ ಬಂದದ್ದು ವಿಲಿಯಮ್‌ಗೆ ಬಹಳ ಸಂತಸವಾಯಿತು. ಅವನ ಹೃದಯ ಕುರುಡು ನಾಯಿಯ, ನೋವಿಗೆ ಅಸಹಾಯಕತೆಗೆ ಸ್ಪಂದಿಸಿತು. ಪ್ರಾಣಿಪ್ರಿಯನಾದ ವಿಲಿಯಮ್, ಅದನ್ನು ಒಡನೆ ವೆಟರ್‌ನರಿ ವೈದ್ಯರ ಹತ್ತಿರ ಕರೆದುಕೊಂಡು ಹೋದರು. ನಾಯಿಯ ಕಣ್ಣಿಗೆ ಸೋಂಕು ತಗಲಿ ಅದು ಆರೈಕೆ ಇಲ್ಲದೆ ಉಲ್ಬಣವಾಗಿತ್ತು. ದಿನವೂ ವೈದ್ಯರಲ್ಲಿ ಕೊಂಡೊಯ್ದು ಕಣ್ಣಿಗೆ ಔಷಧಿಯ ತೊಟ್ಟುಗಳನ್ನು ಹಾಕಿ, ಅದಕ್ಕೆ ಒಳ್ಳೆಯ ಆಹಾರವನ್ನು ವಿಲಿಯಮ್ ಮನಃಪೂರ್‍ವಕ ಮಾಡುತ್ತಿದ್ದ. ಹದಿನೈದು ದಿನದಲ್ಲಿ ಕ್ಲೈಡ್‌ನ ಕಣ್ಣು ಸುಧಾರಿಸುತ್ತಾ ಬಂತು. ಕಣ್ಣು ಕಾಣಿಸಲು ತೊಡಗಿದಾಗ ಕ್ಲೈಡ್ ಬೋನಿ ಮತ್ತು ವಿಲಿಯಮ್ ಜೊತೆಗೆ ಅತಿ ಉತ್ಸಾಹದಿಂದ ಎಲ್ಲಾ ಕಡೆ ಓಡಾಡಿ ಬರುತ್ತಿತ್ತು. ವಿಲಿಯಮ್‌ಗೆ ಈ ಎರಡು ನಾಯಿಗಳು ಸತತವಾಗಿ ಒಡನಾಟವನ್ನು ನೀಡುತ್ತಿದ್ದವು. ವಿಲಿಯಮ್‌ನ ಪ್ರೇಯಸಿ ಸ್ಕಾಟ್‌ಲೆಂಡಿನಲ್ಲಿ ಕೆಲಸ ಮಾಡುತ್ತಿದ್ದಳು. ವಿಲಿಯಮ್ ಬರ್‌ಮಿಂಗ್‌ಹ್ಯಾಮ್‌ನಲ್ಲಿ ಹೊಸ ಕೆಲಸದ ಮೇಲೆ ಬಂದು ಒಂಟಿತನವನ್ನು ಅನುಭವಿಸುವಾಗ ಬೋನಿ, ಕ್ಲೈಡ್ ಅವನ ಮನೆಯನ್ನು ತುಂಬಿಸಿ ಮನಸ್ಸಿಗೆ ನೆಮ್ಮದಿ ಕೊಟ್ಟಿದ್ದವು.
ಅದು ಡಿಸೆಂಬರ್ ತಿಂಗಳು, ಆಗಿಂದಾಗೈ ಹಿಮ ಬೀಳುತ್ತಿತ್ತು. ಚಳಿ ಜಾಸ್ತಿಯಾಗಿತ್ತು ಕ್ರಿಸ್‌ಮಸ್ ಗೆ ವಿಲಿಯಮ್‌ನ ಪ್ರೇಯಸಿ ಕ್ಲಾರಾ ಬರುವುದಾಗಿ ಹೇಳಿದ್ದಳು. ವಿಲಿಯಮ್ ಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡುವುದರಲ್ಲಿ ಅತ್ಯಂತ ಉತ್ಸಾಹಿಯಾಗಿದ್ದ. ತನ್ನ ಪ್ರಿಯತಮೆಯ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಿ ಕ್ಲಾರಾಳನ್ನು ಕರೆತಂದ. ಕ್ಲೈಡ್ ಮತ್ತು ಬೋನಿ ಕೂಡ ಹೊಸ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸಿದವು. ಕ್ಲಡ್‌ನ ಕಣ್ಣುಬೇನೆಯ ಬಗ್ಗೆ, ಬೋನಿಯ ಜೊತೆಗೆ ಅದರ ಆತ್ಮೀಯ ಸಂಬಂಧದ ಬಗ್ಗೆ ಕೇಳಿ ಕ್ಲಾರಾಗೆ ಅದ್ಭುತವೆನಿಸಿತ್ತು. ಎರಡನ್ನು ಮೈದಡವಿ ಮುದ್ದಿಸಿ ಕ್ಷಣದಲ್ಲಿ ಅವುಗಳನ್ನು ತನ್ನ ಪ್ರಿಯ ಮಿತ್ರರನ್ನಾಗಿ ಮಾಡಿಕೊಂಡಳು. ತಾಯಿಯನ್ನು ಕಂಡ ಮಕ್ಕಳಂತೆ ನಾಯಿಗಳು ಎರಡು ಅವಳ ಹಿಂದೆ ಹಿಂದೆ ಬಾಲ ಅಲ್ಲಾಡಿಸಿ ಹೋಗಿ ಮನೆ ತುಂಬಾ ಓಡಾಡುತ್ತಿದ್ದವು. ಅವಳಿಗೆ ಏನು ಬೇಕು ಎಂದು ಗಮನಿಸಿ ಅವಳಿಗೆ ನೆರ ವಾಗುತ್ತಿದ್ದವು. ಕ್ರಿಸ್‌ಮಸ್ ಹಬ್ಬವನ್ನು ವಿಲಿಯಮ್ ಮತ್ತು ಕ್ಲಾರಾ ನಾಯಿಗಳ ಜೊತೆ ಅತಿ ವಿಜೃಂಭಣೆಯಿಂದ ಮಾಡಿ ಸಂತಸಪಟ್ಟರು.
ತನ್ನ ರಜೆ ಮುಗಿದು ಕಾರಾ ಐರ್‌ಲೆಂಡಿಗೆ ತೆರಳುವವಳಿದ್ದಳು. ಮಹಡಿಯಿಂದಿಳಿಯುವಾಗ ಅವಳ ಪಾದ ಹೊರಳಿ ಮೆಟ್ಟಲಲ್ಲಿ ಉರುಳಿ ಅವಳ ಕಾಲಿನ ಮೂಳೆ ಮುರಿದು ಅಸ್ವಸ್ಥಳಾದಳು. ವಿಲಿಯಮ್‌ಗೆ ಆಘಾತವಾಯಿತು. ಅವಳಿಗೆ ವೈದ್ಯಕೀಯ ನೆರವನ್ನು ಕೊಟ್ಟು ವಿರಮಿಸಲು ಅವಳಿಗೆ ಒಂದು ವೀಲ್ ಚೇರನ್ನು ತಂದನು. ಅತ್ತ ಇತ್ತ ಸೇವಕ ಪರಿಚಾರಿಕರಂತೆ ಕೈಡ್ ಮತ್ತು ಬೋನಿ ಅವಳಿಗೆ ನೆರವಾದವು. ಅವಳೊಡನೆ ಆಟವಾಡಿ ಮುದವಿತ್ತವು. ವೀಲ್‌ಚೇರ್‌ನಲ್ಲಿ ಕುಳಿತಿರುವೆ ಎಂಬ ಬೇಸರ ಬಾರದಂತೆ ಎರಡೂ ನಾಯಿಗಳು ನೋಡಿಕೊಂಡವು. ಅವಳಿಗೆ ತಿಂಗಳುಗಳು ಕಳೆದುದೇ ಗೊತ್ತಾಗಲಿಲ್ಲ. ಅವಳ ಈ ಅಪಘಾತ ವಿಲಿಯಮ್ ಮತ್ತು ಅವಳ ಪ್ರೇಮವನ್ನು ಮತ್ತಷ್ಟು ಪಕ್ವಗೊಳಿಸಿತ್ತು. ಅವರ ನಡುವಿನ ಬೆಸುಗೆ, ನಾಯಿಗಳ ಜೊತೆ ಬೆಸುಗೆ ಬಾಂಧವ್ಯ ಭದ್ರವಾಗಿತ್ತು.
ಕ್ಲಾರಾ ವೈದ್ಯರ ಹತ್ತಿರ ಹೋಗಿ ಎಕ್ಸರೇ ತೆಗೆಸಿಕೊಂಡು ಬಂದಾಗ ಮೂಳೆ
ಸರಿಯಾಗಿ ಜೋಡಣೆಯಾಗಿದೆ ಎಂದು ತಿಳಿಯಿತು. ಅವಳ ಎರಡು ತಿಂಗಳ ರಜೆ ಮುಗಿದಿತ್ತು. ಅವಳು ಊರಿಗೆ ಹೋಗುವ ತಯಾರಿಯಲ್ಲಿ ತೊಡಗಿದಳು. ಅದು ವಿಲಿಯಮ್ ಹಾಗೂ ನಾಯಿಗಳಿಗೂ ಖಿನ್ನತೆ ತಂದಿತ್ತು. ಅನಿವಾರ್‍ಯವಾಗಿ ಹೊರಟುಹೋಗಬೇಕಾಯಿತು ಕ್ಲಾರಾ. ಅವಳ ಹೊರಟುಹೋಗುವಿಕೆಯಿಂದ ವಿಲಿಯಮ್ ಮನದಲ್ಲಿ, ಮನೆಯಲ್ಲಿ ಶೂನ್ಯ ಆವರಿಸಿತು.
ಕ್ಲೈಡ್ ಮತ್ತು ಬೋನಿ ಮಂಕಾಗಿ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕತೊಡಗಿದವು. ಆಹಾರವನ್ನು ತಿನ್ನಲು ತಿರಸ್ಕರಿಸತೊಡಗಿದವು. ಹೀಗೆ ಕೆಲವು ದಿನಗಳು ಕಳೆದವು. ವಿಲಿಯಮ್‌ಗೆ ನಾಯಿಗಳ ಪ್ರೀತಿ ಬಾಂಧವ್ಯ ಅವನ ಹೃದಯವನ್ನು ಸ್ಪಂದಿಸಿತು. ‘ನೀನಿಲ್ಲದೆ ನಾನು, ನಾಯಿಗಳು ಸಾಯುತ್ತೇವೆ’ ಎಂದು ಪದೇಪದೇ ದೂರವಾಣಿಯಲ್ಲಿ ಹೇಳುತ್ತಿದ್ದ.
ಕ್ಲಾರಾಗೂ ಅತ್ತ ವಿಲಿಯಮ್ ಇಲ್ಲದೆ ವಿರಹದಲ್ಲಿ ಸೊರಗುತ್ತಿದ್ದಳು. ಅವಳ ಮನವನ್ನು ಪದೇಪದೇ ಕ್ಲೈಡ್ ಮತ್ತು ಬೋನಿ ಕಾಡುತ್ತಿದ್ದರು. ಅವಳಿಗೆ ಜೀವನದಲ್ಲಿ ತನ್ನ ಹುದ್ದೆ ದೊಡ್ಡದೆನಿಸಲಿಲ್ಲ. ಪ್ರಿಯನಿಂದ, ಪ್ರೀತಿಯ ನಾಯಿಗಳಿಂದ ದೂರವಿರುವುದು ಸಾಧ್ಯವಿಲ್ಲವೆನಿಸಿ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟು ಬಂದು ಬಿಟ್ಟಳು.
ಹೃದಯಬಾಂಧವ್ಯಗಳು ಮನುಷ್ಯರಲ್ಲಿ ಆದರೇನು, ಪ್ರಾಣಿಗಳಿಗಳಿಗಾಗಿ ಆದರೇನು, ಅದನ್ನು ಬಿಟ್ಟು ಬಾಳಬಹುದೇ?
*****