ಒಂಟಿ ತೆಪ್ಪ

ಒಂಟಿ ತೆಪ್ಪ

ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ ಎಂದು ನನಗೆ ಖಾತ್ರಿಯಾಗಿ ಗೊತ್ತಿತ್ತು. ಕ್ಲೇರಾ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದು ಅಲ್ಲಿ ಜನ-ಜೀವನದಿಂದ ಬೇಸತ್ತು ಇಲ್ಲಿ ಉದ್ಯೋಗಕ್ಕೆ ಸೇರಿದ್ದಾಳೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಂಪನಿಯ ಮನೇಜಿಂಗ್ ಡೈರೆಕ್ಟರ್‌ರ ಉಪಪತ್ನಿ ಎಂಬ ಆಪಾದನೆಯನ್ನೂ ಅವಳ ಮೇಲೆ ಹೊರಿಸಿದ್ದರು. ಇದಾವುದರ ಪರಿವೆಯಿಲ್ಲದೆ ಕ್ಲೇರಾ ತನ್ನ ಕೆಲಸವನ್ನು ಕರ್ತವ್ಯವೆಂಬಂತೆ ನಿರ್ವಹಿಸುತ್ತಿದ್ದಳು.

ಕ್ಲೇರಾಳ ಸನಿಹದಲ್ಲೇ ಕುಳಿತು ಕೆಲಸ ಮಾಡುತ್ತಿರುವ ನನಗೆ ಅವಳಿಗೆ ಕೆಲಸದ ಬಗ್ಗೆ ಆಗಾಗ್ಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯೂ ಇತ್ತು. ಈ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಷಯಗಳು ಚರ್ಚೆಗೆ ಬರುತ್ತಿರಲಿಲ್ಲ. ಯಾವಾಗಲೂ ಗಂಭೀರ ಮುಖ ಮಾಡಿಕೊಂಡು ತನ್ನ ಪಾಡಿಗೆ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಿದ್ದಳು. ಬೆಳಗ್ಗೆ ಎಲ್ಲರಿಗಿಂತ ಮೊದಲು ಬಂದು ಕಂಪ್ಯೂಟರಿನ ಎದುರು ಆಸೀನಳಾದರೆ ಮತ್ತೆ ಎದ್ದು ಹೋಗುವುದು ಸಂಜೆ ಎಲ್ಲರೂ ಹೋದ ಮೇಲೆಯೇ. ಮಧ್ಯಾಹ್ನದ ಊಟವನ್ನು ಬ್ಯಾಗಿನಲ್ಲಿಟ್ಟ ಟಿಪಿನ್ ಕ್ಯಾರಿಯರ್ ಬಿಚ್ಚಿ ಕುಳಿತಲ್ಲಿಯೇ ಮುಗಿಸಿ ಬಿಡುತ್ತಿದ್ದಳು. ಯಾರೊಂದಿಗೂ ಮಾತಿಲ್ಲ, ಹರಟೆಯಿಲ್ಲ, ನಗುವಿಲ್ಲ, ಏನಾದರೂ ಮಾಡಿ ಅವಳ ವೈಯಕ್ತಿಕ ವಿಷಯವನ್ನು ಕೆದಕ ಬೇಕೆಂದು ನನ್ನ ಮನಸ್ಸು ಬಯಸಿದರೂ ಅವಳ ನಿರ್ಲಿಪ್ತ ಗಂಭೀರ ಮುಖ ನೋಡಿದೊಡನೆ ನನ್ನ ಧೈರ್ಯವೆಲ್ಲಾ ಕರಗಿ ಹೋಗುತ್ತಿತ್ತು, ಅವಳು ತನ್ನಷ್ಟಕ್ಕೆ ನನ್ನಲ್ಲಿ ಆಸಕ್ತಿ ಹೊಂದಲಿ ಎಂದು ನಾನು ಮಾಡಿದ ಹಲವು ಪರೋಕ್ಷ ಪ್ರಯೋಗಗಳು ಕೂಡಾ ಫಲ ನೀಡಲಿಲ್ಲ. ಬಹುಶಃ ನನ್ನ ಈ ಹುಚ್ಚಾಟಿಕೆ ಅವಳಿಗೆ ತಿಳಿದಿದೆಯೋ ಇಲ್ಲವೋ ಎಂದು ನನಗೆ ಧೈರ್ಯವಾಗಿ ಹೇಳಲಿಕ್ಕಾಗದು. ನನ್ನ ಈ ಪ್ರಯೋಗಕ್ಕೆ ಮುಖ್ಯ ಕಾರಣ ನಾನು ಅವಳನ್ನು ಮೆಚ್ಚಿಕೊಂಡದ್ದು. ಅವಳ ಎತ್ತರ, ಬಣ್ಣ, ರೂಪ ಯಾವ ಸಿನಿಮಾ ನಟಿಯರಿಗಿಂತಲೂ ಕಮ್ಮಿ ಇರಲಿಲ್ಲ. ಆದರೆ ನನ್ನ ಏಕಮುಖ ಪ್ರೀತಿಯನ್ನು ಅರುಹಲು ನನಗೆ ಅವಕಾಶವನ್ನೇ ಅವಳು ನೀಡಿರಲಿಲ್ಲ. ಅವಳು ಯಾವ ಊರಿನವಳು, ಎಲ್ಲಿ ವಾಸ, ಕುಟುಂಬದ ಮಾಹಿತಿ ಎಲ್ಲಾ ತಿಳಿದುಕೊಳ್ಳಬೇಕೆಂದು ಹಲವು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೆ. ಅಕಸ್ಮತ್ತಾಗಿ ತನ್ನ ವೈಯಕ್ತಿಕ ವಿಷಯ ಮಾತಿನಲ್ಲಿ ಬಂದಾಗಲೆಲ್ಲಾ ಗಂಭೀರವಾಗಿ ಬಿಡುತ್ತಿದ್ದಳು. ಅವಳ ನಗುವಿಲ್ಲದ ಮುಖ ಛಾಯೆಯಿಂದಾಗಿ ನನ್ನ ಮುಂದಿನ ಪ್ರಶ್ನೆ ತನ್ನಿಂದ ತಾನೇ ಮರೆತು ಹೋಗುತ್ತಿತ್ತು.

ಒಂದು ದಿನ ಬೆಳಿಗ್ಗೆ ಅವಳು ಎಂದಿನಂತೆ ಕಂಪ್ಯೂಟರ್ ಎದುರು ಕುಳಿತಿದ್ದಳು. ನಾನು ಬಂದವನೇ ನನ್ನ ಕೆಲಸದಲ್ಲಿ ಮಗ್ನನಾಗಿದ್ದೆ. ಅವಳು ನನ್ನ ಬಲಬದಿಗೆ ಬಾಗಿ ಮೆಲು ಸ್ವರದಲ್ಲಿ ಅಂದಳು. “ನಾಳೆ ಊರಿಗೆ ಹೋಗುತ್ತಿದ್ದೇನೆ, ಸಮಯವಕಾಶ ಇದ್ದರೆ ಬರುವಿರೇನು?” ನನಗೆ ಆಶ್ಚರ್ಯವಾಯಿತು. ಮೂರು ವರ್ಷದ ಕಚೇರಿ ಒಡನಾಟದಲ್ಲಿ ಅವಳು ಕೇಳಿದ ಮೊದಲ ವೈಯಕ್ತಿಕ ಪ್ರಶ್ನೆ ಅದಾಗಿತ್ತು. ಅಚಾನಕ್ ಬಿದ್ದ ಪ್ರಶ್ನೆಯಿಂದ ನಾನು ಒಮ್ಮೆ ದಿಗಿಲುಗೊಂಡರೂ ಕೂಡಲೆ ಸಾವರಿಸಿಕೊಂಡೆ. ಆದರೆ ನನಗಾದ ಸಂತೋಷವನ್ನು ನನ್ನ ಮುಖದಲ್ಲಿ ವ್ಯಕ್ತಪಡಿಸಲಿಲ್ಲ. ನನ್ನ ಮನಸ್ಸಿನ ಇಂಗಿತವನ್ನು ಅವಳಿಗೆ ಸುಲಭವಾಗಿ ತಿಳಿಸಬಾರದು. ನಾನು ಏನು ಎಂಬಂತೆ ಅವಳ ಮುಖ ನೋಡಿದೆ. ನಗುವಿಲ್ಲ, ಅದೇ ನಿರ್ಲಿಪ್ತ ಮುಖ.

ಅವಳಂದಳು “ಸ್ತ್ರೀ ಪುರುಷ ಸಂಬಂಧಗಳಲ್ಲಿ ಸ್ವಪ್ರೇರಿತ ಪ್ರಾಮಾಣಿಕತೆಯೇ ನಿಜವಾದ ಆದರ್ಶ, ಎಡರು ತೊಡರುಗಳು, ದುಃಖ ದುಮ್ಮಾನಗಳು ಮನುಷ್ಯನನ್ನು ಪರಿಶುದ್ಧನನ್ನಾಗಿಸುತ್ತದೆ. ನೀವು ನನ್ನೊಂದಿಗೆ ಖಂಡಿತ ಬರುತ್ತೀರಿ ತಾನೇ?” ನಾನು ತಲೆಯಲ್ಲಾಡಿಸಿ ಸಮ್ಮತಿ ಸೂಚಿಸಿದೆ. ಮತ್ತೆ ಮಾತಿಲ್ಲ, ಮೌನ, ನಾವು ಕಚೇರಿ ಕೆಲಸದಲ್ಲಿ ಲೀನವಾದೆವು.

ಮರುದಿನ ಸುಮಾರು ಒಂದು ಗಂಟೆಯ ಬಸ್ಸು ಪ್ರಯಾಣ ಮುಗಿಸಿ ನಾನು ಮತ್ತು ಕ್ಲೇರಾ ಯಾವುದೋ ಕುಗ್ರಾಮದಲ್ಲಿ ಇಳಿದೆವು. ಸುತ್ತಲೂ ಕಾಡು, ಸೂರ್ಯನ ಬಿಸಿಲನ್ನು
ತಡೆ ಹಿಡಿದು ಪ್ರಯಾಣಿಕನಿಗೆ ತಂಪೆರೆಯುವ ಆ ಬ್ರಹತ್ ಗಾತ್ರದ ಮರ-ಬಳ್ಳಿಗಳ ನಡುವಿನ ಕಾಲು ದಾರಿಯಲ್ಲಿ ನಡೆಯುತ್ತಿದ್ದೆವು. ಸುಮಾರು ಒಂದು ಫರ್ಲಾಂಗು ನಡೆದ ಮೇಲೆ ಒಂದು ಸಣ್ಣ ತೊರೆ ಅಡ್ಡ ಬಂತು. ಬಿದಿರಿನ ತೆಪ್ಪದಲ್ಲಿ ಪ್ರಯಾಣ “ಭಯವಾಗುತ್ತಿದೆ” ನಾನಂದೆ. ಕ್ಲೇರಾ ಉತ್ತರಿಸಲಿಲ್ಲ. “ಹೂ” ಅಂದಳು. ತೆಪ್ಪವನ್ನು ಅವಳೇ ನಡೆಸುತ್ತಿದ್ದಳು. ಅವಳ ಮುಖದಲ್ಲಿ ಏನೋ ಆಲೋಚನೆಯಿತ್ತು. ನಾನು ಸುತ್ತಲೂ ನೋಡಿದೆ. ಶಾಂತವಾದ ನೀರನ್ನು ಸೀಳಿಕೊಂಡು ತೆಪ್ಪ ಮುಂದೆ ಹೋಗುತ್ತಿತ್ತು. ನೀಲ ಆಕಾಶ, ಸುತ್ತಲೂ ಬೆಟ್ಟ ಹಾಗೂ ಬಯಲುಗಳು, ನೀಲ ಆಕಾಶಕ್ಕೆ ಹಸಿರಿನ ಹೊದಿಕೆ. ಮಧ್ಯದಲ್ಲಿ ತಣ್ಣಗೆ ಹರಿವ ತೊರೆ, ತಪ್ಪದಲ್ಲಿ ನಾವಿಬ್ಬರು ಮೌನದಲ್ಲಿ ಒಂದು ರೀತಿಯ ಸಂತೋಷ, ಕ್ಲೇರಾಳನ್ನು ಕೇಳಿಯೇ ಬಿಡೋಣ ಎಂದೆನಿಸಿದರೂ ಯಾವ ರೀತಿಯ ಪ್ರತಿಕ್ರಿಯೆ ಬರಬಹುದೆಂಬ ಗೊಂದಲದಲ್ಲಿ ಬಿದ್ದೆ. ತೆಪ್ಪ ದಡ ತಲುಪಿತು. ಇಳಿದು ಮುಂದೆ ನಡೆದೆವು, ಹಸಿರು ಜಮಾಖಾನ ಹರಡಿದಂತೆ ಕಾಣುವ ಭತ್ತದ ಗದ್ದೆಗಳು, ತೆನೆಗಳು ಗಾಳಿಗೆ ತೂಗುತ್ತಿದ್ದವು. ಗದ್ದೆಯ ಹುಣಿಯಲ್ಲಿ ಸಾಗುತ್ತಿದ್ದೆವು. ಕ್ಲೇರಾ ಮುಂದೆ, ನಾನು ಹಿಂದೆ, ಹುಣಿಯ ಮೇಲಿದ್ದ ಕಪ್ಪೆಗಳು ಆಗಂತುಕರ ಕಾಲ ಸಪ್ಪಳಕ್ಕೆ ಹೆದರಿ ಗದ್ದೆಯೊಳಗೆ ಒಂದೊಂದೇ ‘ಫಲಕ್…ಫಲಕ್’ ಎಂದು ನೆಗೆಯುತ್ತಿದ್ದವು. ಈ ಮೌನವನ್ನು ದೀರ್ಘಕಾಲದವರೆಗೆ ಮುಂದುವರಿಸಲು ನನ್ನಿಂದ ಸಾಧ್ಯವಾಗಲಿಲ್ಲ.

“ಕ್ಲೇರಾ” ಅಂದೆ. ಅವಳು ಒಮ್ಮೆಲೆ ನಿಂತು ತಿರುಗಿ ನೋಡಿದಳು. ಏನು ಎಂಬಂತೆ ಅವಳ ಮುಖ ಭಾವವಿತ್ತು. ಗಂಡಸು ನೂರು ಮಾತಿನಲ್ಲಿ ಹೇಳಿದುದನ್ನು ಸ್ತ್ರೀ ಒಂದೇ ನೋಟದಿಂದ ಹೇಳುತ್ತಾಳೆ.

“ನಾನೊಂದು ಪ್ರಶ್ನೆ ಕೇಳಲೇ?” ನಾನಂದೆ.

“ಬೇಡ. ನೀವು ಏನು ಕೇಳುವಿರಿ ಎಂದು ನನಗೆ ಗೊತ್ತಿದೆ” ಅವಳಂದಳು. ಅವಳ ಮುಖ ಗಂಭೀರವಾಯಿತು. ಸ್ವಲ್ಪ ಹೊತ್ತು ಮೌನ. ನಂತರ ಅವಳು ನಿಧಾನವಾಗಿ ನಡೆಯ ತೊಡಗಿದಳು. ಈ ನಡಿಗೆಯಲ್ಲಿ ಯೋಚನೆಗಳಿದ್ದುವು. ಕ್ಷಣ ತಡೆದು ಕ್ಲೇರಾ ಕೇಳಿದಳು.

“ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?”

ನನಗೆ ಆಶ್ಚರ್ಯವಾಯಿತು. ಇದುವರೆಗೂ ನಮ್ಮಲ್ಲಿ ವೈಯಕ್ತಿಕ ವಿಷಯದ ಬಗ್ಗೆ ಚರ್ಚೆ ನಡೆದಿರಲಿಲ್ಲ. ಬರೇ ನನ್ನ ಹಾವ-ಭಾವ, ಮುಖ ಚರ್ಯೆಯಿಂದಲೇ ನನ್ನ ಮನದಾಳಕ್ಕೆ ಕ್ಲೇರಾ ಲಗ್ಗೆ ಹಾಕಿದ್ದಳು. ಆಕಸ್ಮಿಕವಾಗಿ ಬಿದ್ದ ಪ್ರಶ್ನೆಯ ಹೊಡೆತದಿಂದ ಚೇತರಿಸಲು ನಾನು ಒದ್ದಾಡುತ್ತಿದ್ದೆ. ಅವಳು ಸ್ವಲ್ಪ ಏರಿದ ಧ್ವನಿಯಲ್ಲಿ ಮತ್ತೆ ಕೇಳಿದಳು.

“ಹೇಳಿ. ನೀವು ನನ್ನನ್ನು ಯಾಕೆ ಪ್ರೀತಿಸುತ್ತೀರಿ?”

“ಕ್ಲೇರಾ, ನಿಜ ಹೇಳುತಿದ್ದೇನೆ. ನಿಮ್ಮ ವ್ಯಕ್ತಿತ್ವ, ಗುಣ ನನಗೆ ಇಷ್ಟವಾಯಿತು ಅದಕ್ಕೆ.”

“ಸುಳ್ಳು. ನಾನಿದನ್ನು ನಂಬುವುದಿಲ್ಲ. ಬೇರೆಯವರ ಭಾವನೆಯ ಜೊತೆ ನೀವು ಆಟವಾಡುವುದು ಸರಿಯಲ್ಲ. ಆಟವನ್ನು ನೀವು ಗೆಲ್ಲಬಹುದು. ಆದರೆ ಆ ವ್ಯಕ್ತಿಯನ್ನು ಮಾತ್ರ ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಉದ್ದೇಶ ಸಾಧನೆಗೆ ಇತರರನ್ನು ಬಲಿಗೊಡದಿರುವುದು ಮಾನವೀಯತೆ, ಹಣದಿಂದ ಎಲ್ಲವನ್ನೂ ಪಡೆಯಬಹುದು. ಆದರೆ ಸ್ನೇಹ, ವಿಶ್ವಾಸ, ಮಮತೆಗಳನ್ನು ಪಡೆಯಲಾಗದು.” ಕ್ಲೇರಾ ನಡಿಗೆ ನಿಲ್ಲಿಸಿ ದೂರಕ್ಕೆ ಬೆರಳು ತೋರಿಸುತ್ತಾ ಅಂದಳು. “ಅದು ನನ್ನ ಮನೆ.”

ನಾನು ದೂರಕ್ಕೆ ಕಣ್ಣು ಹಾಯಿಸಿದೆ. ಒಂದು ಮಣ್ಣಿನ ಗೋಡೆಯ ಹಳೆಯ ಕಾಲದ ಹಂಚಿನ ಮನೆ. ಅದಕ್ಕೊಂದು ಪುಟ್ಟ ಅಂಗಳ, ಸಣ್ಣ ಮರದ ಕಿಟಕಿಗಳು. ತಲೆತಗ್ಗಿಸಿ ಒಳ ಹೊಕ್ಕಬೇಕಾದ ಬಾಗಿಲು, ಬೆಳಕಿನ ಅಭಾವ ಇಡೀ ಮನೆಯಲ್ಲಿ ಕಾಣುತ್ತಿತ್ತು. ನಾನು ಅಂಗಳದಲ್ಲಿ ನಿಂತೆ. ಅನತಿ ದೂರದಲ್ಲಿ ತರುಣಿಯೊಬ್ಬಳು ನೆಲದ ಮೇಲೆ ಕುಳಿತಿದ್ದಳು. ಅವಳ ತಲೆ ಹಾಗೂ ಕುತ್ತಿಗೆ ಮಾಮೂಲಿ ಗಾತ್ರಕ್ಕಿಂತ ದೊಡ್ಡದಿತ್ತು. ಕಣ್ಣುಗಳು ಈಗಲೋ ಆಗಲೋ ಹೊರ ಬೀಳುವಂತೆ ಕಾಣುತ್ತಿತ್ತು. ನಾಲಗೆಯನ್ನು ಅರ್ಧ ಹೊರಗೆ ಹಾಕಿದ್ದಳು. ಅವಳು ತೊಡೆಯ ಮೇಲೆ ಒಂದು ಬೊಂಬೆಯನ್ನು ಮಲಗಿಸಿ ಅದಕ್ಕೆ ನೀರು ಹೊಯ್ಯುತ್ತಿದ್ದಳು. ಸೋಪನ್ನು ಹಾಕಿ, ಉಜ್ಜಿ ತೊಳೆದು ನೀರು ಹೊಯ್ಯುತ್ತಿದ್ದಂತೆ ಏನೋ ಪದ್ಯ ಗುಣುಗುಟ್ಟುತ್ತಿದ್ದಳು. ಅವಳ ಹೊಟ್ಟೆ ತುಂಬು ಗರ್ಭಿಣಿಯರ ಹೊಟ್ಟೆಯಂತಿದ್ದು, ಎದೆಯು ಮಿತಿಗಿಂತ ಜಾಸ್ತಿ ಬೆಳೆದಿತ್ತು. ಅವಳು ನೀರು ಹೊಯ್ಯುತ್ತಿದ್ದುದನ್ನು ನಿಲ್ಲಿಸಿ, ನನ್ನತ್ತ ನೋಡಿದಳು. ಅವಳ ವಿಕಾರ ಮುಖ ನೋಡಿ ನನಗೆ ಭಯವಾಯಿತು. ನಾನು ಕ್ಲೇರಾಳ ಮುಖ ನೋಡಿದೆ.

“ಇವಳು ನನ್ನ ತಂಗಿ, ಇಪ್ಪತ್ತು ವರ್ಷ ತುಂಬಿದೆ. ಬುದ್ಧಿಮಾಂದ್ಯೆ, ನೀವು ಒಳಗೆ ಬನ್ನಿ” ಕ್ಲೇರಾ ನನ್ನನ್ನು ಮನೆಯೊಳಗೆ ಕರೆದಳು. ಬಾಗಿಲಲ್ಲಿ ನಿಂತು ನಾನು ಒಳಗೆ ಇಣುಕಿದೆ. ಬೆಳಕಿನಿಂದ ಬಂದ ನನಗೆ ಮನೆಯೊಳಗೆ ಬರೇ ಕತ್ತಲು ಕಾಣುತ್ತಿತ್ತು. ಅಡಗೆಕೋಣೆಯಿಂದ ಹೊಗೆ ಹೊರಗೆ ಬರುತ್ತಿದ್ದು ಅದು ಮನೆಯನ್ನೆಲ್ಲಾ ಆವರಿಸಿತ್ತು. ಕ್ಲೇರಾ ಮನೆಯೊಳಗೆಲ್ಲಾ ಓಡಾಡಿ ಒಂದು ಮುರುಕ ಸ್ಟೂಲು ತಂದು ನನ್ನನ್ನು ಕುಳ್ಳಿರಿಸಿದಳು. ಸ್ವಲ್ಪ ಹೊತ್ತು ಮೌನ, ನಾನು ಮನೆಯ ಗೋಡೆಯನ್ನು ದೃಷ್ಟಿಸಿದೆ. ಸುಣ್ಣ ಕಾಣದ ಹಳೆಯ ಮಣ್ಣಿನ ಗೋಡೆಗಳು, ಅಲ್ಲಲ್ಲಿ ತೂಗು ಹಾಕಿದ ಹಳೆಯ ಕ್ಯಾಲೆಂಡರ್‌ಗಳು. ಒಂದು ಸಣ್ಣ ಸ್ಟಾಂಡಿನ ಮೇಲೆ ಶಿಲುಬೆಗೆ ಹಾಕಿದ ಏಸುಕ್ರಿಸ್ತರ ಸಣ್ಣ ಮೂರ್ತಿ. ಮೊಳೆ ಹೊಡೆದು ಗೋಡೆಗೆ ತೂಗು ಹಾಕಿದ ಜೋಗಯ್ಯನ ಹಲವು ಜೋಳಿಗೆಗಳು. ನನಗೆ ಕ್ಲೇರಾಳ ಹಿನ್ನಲೆ ಆಶ್ಚರ್ಯವಾಗುತ್ತಿದ್ದಂತೆ ಯಾರೋ ಕೆಮ್ಮಿದಂತಾಯಿತು. ಅಡುಗೆ ಕೋಣೆಯಿಂದ ತೀರಾ ವಯಸ್ಸಾದ ಮುದುಕಿಯೊಬ್ಬಳು ಕೋಲಿನ ಆಧಾರದಲ್ಲಿ ಕುಂಟುತ್ತಾ ಕೆಮ್ಮುತ್ತಾ ಬಾಗಿಕೊಂಡು ಗೋಡೆಯನ್ನು ಆಧರಿಸಿ ಹೊರ ಬಂದಳು. ಅವಳು ನೇರವಾಗಿ ನಿಲ್ಲಲಾರದೆ ಅರ್ಧ ಬಾಗಿದ್ದಳು. ಅಲ್ಲಲ್ಲಿ ಹರಿದ ತೇಪೆ ಹಾಕಿದ ಸೀರೆಯನ್ನು ಉಟ್ಟುಕೊಂಡಿದ್ದು ಮಾತಾಡಲು ಬಹಳ ಪ್ರಯಾಸಪಡುತ್ತಿದ್ದಳು.

“ಇವರು ನನ್ನ ಅಮ್ಮ ಅಸ್ತಮ ರೋಗಿ, ಶ್ವಾಸಕೋಶದ ತೊಂದರೆಯಿದೆ. ಜಾಸ್ತಿ ಮಾತಾಡಿದರೆ ಸುಸ್ತಾಗುತ್ತದೆ.” ನಾನು ವಾಡಿಕೆಯಂತೆ ಅವಳ ಬಳಿ ಹೋದೆ. ವಯಸ್ಸಿಗೆ ಮೀರಿ ಮುದುಕಿಯಾಗಿದ್ದಳು. “ಏನಮ್ಮಾ?” ಎಂದು ಕೇಳಿದೆ. ಅವಳು ಮಾತಾಡಲು ಪ್ರಯತ್ನಿಸಿದಳು. ನನಗೆ ಅರ್ಥವಾಗಲಿಲ್ಲ. ಏನು ಎಂಬಂತೆ ಕ್ಲೇರಾಳನ್ನು ನೋಡಿದೆ. “ಊಟ ಮಾಡಿ ಹೋಗಲಿ” ಎಂದು ಹೇಳುತ್ತಿದ್ದಾಳೆ ಅಂದಳು. ಕ್ಲೇರಾ ತಾಯಿಯ ಕೈ ಹಿಡಿದು ಇನ್ನೊಂದು ಕೋಣೆಯತ್ತ ಸಾಗಿದಳು. ಮತ್ತೆ ಮನೆಯಿಡೀ ಮೌನ.

ಅಡುಗೆ ಕೋಣೆಯಿಂದ ಬರುವ ಹೊಗೆಯನ್ನು ನನ್ನಿಂದ ತಡೆಯಲಾಗಲಿಲ್ಲ. ಕಣ್ಣುರಿ ಶುರುವಾಗಿ ನಾನು ಹೊರಗೆ ಅಂಗಳಕ್ಕೆ ಬಂದೆ. ಕ್ಲೇರಾಳ ತಂಗಿ ಬೊಂಬೆಯ ಸ್ನಾನ ಮುಗಿಸಿ ಅದಕ್ಕೆ ಟವಲ್ ಹೊದಿಸಿ ಎತ್ತಿಕೊಂಡು ಮನೆಯೊಳಗೆ ನಡೆದಳು. ಅವಳ ಮುಖವನ್ನು ಮತ್ತೊಮ್ಮೆ ನೋಡುವ ಧೈರ್ಯ ನನಗೆ ಬರಲಿಲ್ಲ. ಕ್ಲೇರಾ ಸ್ಟೂಲನ್ನು ಹೊರಗೆ ತಂದು ಅಂಗಳದಲ್ಲಿ ಇಟ್ಟು ಹೋದಳು. ಸ್ವಲ್ಪ ಹೊತ್ತಿನ ನಂತರ ಲಿಂಬೆಹಣ್ಣಿನ ಪಾನಕ ತಂದು ಕೊಟ್ಟಳು. ಸ್ವಲ್ಪ ಆರಾಮವೆನಿಸಿತು.

ನಾನು ಸುತ್ತಲೂ ವೀಕ್ಷಿಸಿದೆ. ಎಲ್ಲಿ ನೋಡಿದರೂ ಭತ್ತದ ಗದ್ದೆಗಳು. ಸುಮಾರು ಎರಡು ಫರ್ಲಾಂಗಿಗೆ ಒಂದರಂತೆ. ಸಣ್ಣ ಸಣ್ಣ ಗುಡಿಸಲುಗಳು ಕಾಣುತ್ತಿದ್ದುವು.

“ನಿಮಗೆ ಗದ್ದೆಗಳಿಲ್ಲವೇ?” ನಾನು ಕ್ಲೇರಾಳನ್ನು ಕೇಳಿದೆ.

“ಇತ್ತು. ಆದರೆ ನನ್ನ ಹಾಗೂ ತಮ್ಮನ ವಿದ್ಯಾಭ್ಯಾಸ ಮತ್ತು ನಮ್ಮೆಲ್ಲರ ಮದ್ದಿಗಾಗಿ ಇದ್ದ ಉಳುವರಿ ಭೂಮಿಯನ್ನು ಮಾರಿದೆವು. ಈಗ ಈ ಗುಡಿಸಲು ಮಾತ್ರ ಉಳಿದಿದೆ.” ಕ್ಲೇರಾ ಹೊರಗೆ ಬೆರಳು ತೋರಿಸುತ್ತಾ ಅಂದಳು. “ಅವೆಲ್ಲಾ ನಮ್ಮ ಗದ್ದೆಗಳಾಗಿದ್ದವು. ಈಗ ಎಲ್ಲಾ ಕಳಕೊಂಡಿದ್ದೇವೆ.” ನಾನು ವಿಷಾದದಿಂದ ಕ್ಲೇರಾಳ ಮುಖ ನೋಡಿದೆ. ಆದರೆ ಅವಳ ಮುಖದಲ್ಲಿ ಯಾವುದೇ ಬೇಸರದ ಛಾಯೆ ಇರಲಿಲ್ಲ.

ಸ್ವಲ್ಪ ಹೊತ್ತು ಹೊರಗೆ ಹಾಗೆಯೇ ಕುಳಿತಿದ್ದೆ. ಕ್ಲೇರಾ ಬೈಬಲಿನ ಪ್ರತಿಯೊಂದನ್ನು ನನ್ನ ಕೈಗಿತ್ತಳು. “ಓದುತ್ತಾ ಇರಿ. ನಾನು ಅಡುಗೆಗೆ ಅಮ್ಮನಿಗೆ ಸಹಾಯ ಮಾಡುತ್ತೇನೆ.” ಮನಸ್ಸಿಲ್ಲದ ಮನಸ್ಸಿನಿಂದ ನಾನು ಬೈಬಲನ್ನು ತಿರುವಿ ಹಾಕುತ್ತಿದ್ದೆ. ಒಳಗಿಂದ ಜೋಗುಳದ ಹಾಡು ಅಸ್ಪಷ್ಟವಾಗಿ ಕೇಳುತ್ತಿತ್ತು. ಬಹುಶಃ ಕ್ಲೇರಾಳ ತಂಗಿ ತನ್ನ ಬೊಂಬೆಯನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಿರಬೇಕು. ಕ್ಲೇರಾ ಆಗಾಗ್ಗೆ ಬಂದು ಮಾತಾಡಿಸಿ ಹೋಗುತ್ತಿದ್ದಳು. ಒಮ್ಮೊಮ್ಮೆ ಕೆಮ್ಮಿನ ಶಬ್ದ ಜೋರಾಗಿ ಕೇಳುತ್ತಿತ್ತು. ಈ ಭಯಾನಕ ವಾತಾವರಣವನ್ನು ಮರೆಯಲು ನಾನು ಬೈಬಲಿನ ದೇವ ವಾಕ್ಯಗಳನ್ನು ಓದುತ್ತಿದ್ದೆ. ಕೆಲವು ಗಂಟೆಯ ನಂತರ ಕ್ಲೇರಾ ನನ್ನನ್ನು ಒಳಗೆ ಕರೆದಳು. ಅವಳು ನನ್ನನ್ನು ಇನ್ನೊಂದು ಕೋಣೆಗೆ ಕರಕೊಂಡು ಹೋದಳು. ಅಲ್ಲಿ ನನಗೆ ಆಶ್ಚರ್ಯ ಕಾದಿತ್ತು. ತೀರಾ ವಯಸ್ಸಾದ ಕೃಶ ದೇಹದ ಮುದುಕರೊಬ್ಬರು ನೆಲದಲ್ಲಿ ಹಾಕಿದ ಚಾಪೆಯಲ್ಲಿ ಕುತ್ತಿಗೆವರೆಗೂ ಬಟ್ಟೆ ಹೊದೆದು ಮಲಗಿದ್ದರು. ಕಣ್ಣುಗಳು ಒಳ ಸೇರಿದ್ದು, ಕನ್ನೆಗಳು ಗುಳಿಬಿದ್ದಿದ್ದುವು. ಮುಖ ತುಂಬಾ ಗಡ್ಡ ಮೀಸೆ, ತಲೆಯಲ್ಲಿ ಅಳಿದುಳಿದ ಕೂದಲು ಉದ್ದಕ್ಕೆ ಹರಡಿದ್ದುವು. ಬದುಕಿದ್ದಾರೆಯೋ, ಸತ್ತಿದ್ದಾರೆಯೋ ಏನೂ ಗೊತ್ತಾಗದೆ ನಾನು ಗಲಿಬಿಲಿಗೊಂಡೆ. ಬಾಗಿ ಹತ್ತಿರದಲ್ಲಿ ಅವರ ಮುಖ ನೋಡಿದೆ. ಕುತ್ತಿಗೆಯ ಕೆಳಗೆ ಶ್ವಾಸ ಮೇಲೆ ಕೆಳಗೆ ಹೋಗುತ್ತಿತ್ತು. ಕುತ್ತಿಗೆಗೆ ಹಾಕಿದ ಜಪಸರದ ಬುಡದಲ್ಲಿ ಶಿಲುಬೆ ನೇತಾಡುತ್ತಿತ್ತು. “ನನ್ನ ತಂದೆ. ಡಾಕ್ಟರರ ಲೆಕ್ಕದಲ್ಲಿ ಆಯುಷ್ಯ ಮುಗಿದಿದೆ. ಆಗ-ಈಗ ಶ್ವಾಸ ಮಾತ್ರ ಅಲ್ಲಾಡುತ್ತಿದೆ. ಬರೇ ಗ್ಲುಕೋಸಿನ ನೀರು ಮಾತ್ರ ಆಹಾರ.” ಕ್ಲೇರಾ ಅಂದಳು. ನನಗೆ ಭಯವಾಗತೊಡಗಿತು. ಊರಿನ ಸಮಸ್ಯೆಯೆಲ್ಲಾ ಈ ಒಂದು ಮನೆಯಲ್ಲಿ ತುಂಬಿದೆಯಲ್ಲಾ ಎಂದು ನೆನೆಸಿ ನನ್ನ ಕಣ್ಣು ಮಂಜಾಯಿತು. ಬಹುಶಃ ಕ್ಲೇರಾ ಇದನ್ನು ಗಮನಿಸಿರಬೇಕು.

“ಬನ್ನಿ, ಊಟ ಮಾಡುವ” ಕ್ಲೇರಾ ಅಂದಳು.

ಗಂಜಿ ಊಟ, ನೆಚ್ಚಿಕೊಳ್ಳಲು ಚಟ್ಟಿ, ಬಹುಶಃ ಬಾಲ್ಯದಲ್ಲಿ ಉಂಡ ಗಂಜಿ ಊಟದ ನೆನಪಾಯಿತು. ಶಾಸ್ತ್ರಕ್ಕೆ ಊಟ ಮುಗಿಸಿ ಅಂಗಳದಲ್ಲಿ ಬಂದು ಕುಳಿತೆ. ತಲೆಯ ತುಂಬಾ ಆಲೋಚನೆಗಳು. ನಾವು ನಿತ್ಯ ಕಾಣುವ ಚಿತ್ರಣಕ್ಕೂ ನಿಜ ಜೀವನಕ್ಕೂ ಎಷ್ಟೊಂದು ವ್ಯತ್ಯಾಸ. ಸುಖ ಅಪರೂಪಕ್ಕೆ ಬರುವ ನೆಂಟನಾದರೆ ದುಃಖ ಎಂದೂ ನಮ್ಮನ್ನು ಬಿಡುವುದಿಲ್ಲ. ಜೀವನದಲ್ಲಿ ಸಮಸ್ಯೆ ಇಲ್ಲದವರು ಇದ್ದಾರೆಯೇ? ಇದ್ದಾರೆ. ಇಬ್ಬರಿಗೆ ಸಮಸ್ಯೆಯೇ ಇಲ್ಲ. ಒಂದು ಇನ್ನೂ ಹುಟ್ಟದವರು. ಇನ್ನೊಂದು ಈಗಾಗಲೇ ಸತ್ತವರು.

ಸಂಜೆಯಾಗ ತೊಡಗಿತು. ನಾನು ಎದ್ದು ನಿಂತೆ. ಮನೆಯ ಒಳಗಿನ ಕೋಣೆಗೆ ಹೋಗಿ ಮಲಗಿದ ಮುದುಕನ ಕಾಲು ಮುಟ್ಟಿ ನಮಸ್ಕರಿಸಿದೆ. ಕ್ಲೇರಾಳ ತಾಯಿಯ ಕೈ ಎತ್ತಿಕೊಂಡು ತಲೆಗಿಟ್ಟುಕೊಂಡೆ. ಅವಳು ಶಿಲುಬೆಯನ್ನು ನನ್ನ ತಲೆಗೆ ತಾಗಿಸಿದಳು. ಕಣ್ಣು ಪುನಃ ಮಂಜಾಯಿತು. ಇನ್ನೊಂದು ಕೋಣೆಯತ್ತ ದೃಷ್ಟಿ ಹಾಯಿಸಿದೆ. ಕ್ಲೇರಾಳ ತಂಗಿ ಬೊಂಬೆಯನ್ನು ಬಲವಾಗಿ ಅಪ್ಪಿಕೊಂಡು ನೆಲದಲ್ಲೇ ನಿದ್ದೆ ಹೋಗಿದ್ದಳು. ಅವಳ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು. ನಾನು ಅಂಗಳಕ್ಕೆ ಬಂದೆ. ಅನತಿ ದೂರದಲ್ಲಿ ಸುಮಾರು ಹನ್ನೆರಡು-ಹದಿಮೂರು ವರ್ಷದ ಹುಡುಗ ಕುಂಟುತ್ತಾ ಮನೆ ಕಡೆ ಬಂದ. ಹೆಗಲಲ್ಲಿ ಸ್ಕೂಲ್ ಬ್ಯಾಗ್, ಎಡಕಾಲಿಗೆ ಕೃತಕ ಕಾಲನ್ನು ಜೋಡಿಸಲಾಗಿತ್ತು.

“ಇವನು ನನ್ನ ತಮ್ಮ. ಸಣ್ಣದಿರುವಾಗಲೇ ಪೋಲಿಯೋ ಕಾಯಿಲೆಗೆ ತುತ್ತಾಗಿ ಎಡಕಾಲಿನ ಸ್ವಾಧೀನತೆ ಕಳಕೊಂಡಿದ್ದಾನೆ.” ಕ್ಲೇರಾ ಅನ್ನುತ್ತಾ ಅವನತ್ತ ತಿರುಗಿ ಹೇಳಿದಳು. “ನಾನು ಕೆಲಸಕ್ಕೆ ಹೋಗುತ್ತೇನೆ. ಮಾತ್ರೆಗಳ ಕಟ್ಟು, ಹಣ ಅಮ್ಮನಲ್ಲಿ ಕೊಟ್ಟಿದ್ದೇನೆ” ಅವನ ಉತ್ತರವನ್ನು ಕಾಯದೆ ಅವಳು ನಡೆದುಬಿಟ್ಟಳು. ನಾನು ಹಿಂಬಾಲಿಸಿದೆ. ಗದ್ದೆ ದಾಟಿ ತೆಪ್ಪದಲ್ಲಿ ಕುಳಿತೆವು. ತೆಪ್ಪವನ್ನು ನಾನೇ ಮುನ್ನಡೆಸಿದೆ. ಕ್ಲೇರಾ ಆಗಾಗ್ಗೆ ತೆಪ್ಪ ಮುನ್ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಳು. ಆದರೂ ನನಗೆ ಸಮಾಧಾನ ಇರಲಿಲ್ಲ. ತೆಪ್ಪದಿಂದ ಹಾರಿ ಈ ಹರಿವ ನೀರಿನೊಂದಿಗೆ ಸೇರಿ ಹೋಗಬಾರದೇಕೆ ಎಂದೆನಿಸಿತು. ಇಬ್ಬರಲ್ಲೂ ಮಾತಿಲ್ಲ. ಮೌನ, ನನಗೂ ಮೌನವೇ ಹಿತವೆನಿಸಿತು. ಆದರೆ ಕ್ಲೇರಾ ಈ ಗಾಢ ಮೌನಕ್ಕೆ ಇತಿಶ್ರೀ ಹಾಡಿದಳು.

“ಈಗ ಹೇಳಿ, ನೀವು ನನ್ನನ್ನು ಪ್ರೀತಿಸುತ್ತಿರೇನು? ನನ್ನನ್ನು, ನನ್ನ ಕಾಯಿಲೆ ಇರುವ ತಂದೆಯನ್ನು, ಅಸ್ತಮ ರೋಗಿ ತಾಯಿಯನ್ನು, ಬುದ್ಧಿಮಾಂದ್ಯ ತಂಗಿಯನ್ನು ಹಾಗೂ ಅಂಗ ವೈಕಲ್ಯ ಹೊಂದಿದ ನನ್ನ ತಮ್ಮನನ್ನು ಪ್ರೀತಿಸುತ್ತಿರೇನು? ಹೇಳಿ, ನಮ್ಮೆಲ್ಲರನ್ನೂ ನೀವು ಪ್ರೀತಿಸುತ್ತಿರೇನು? ಹೇಳಿ?”

ಅವಳ ಪ್ರತೀಯೊಂದು ಶಬ್ದವೂ ನನ್ನ ಎದೆಗೆ ಸುತ್ತಿಗೆಯಲ್ಲಿ ಬಡಿದಂತೆ ಭಾಸವಾಗುತ್ತಿತ್ತು. ನಾನು ಉತ್ತರಿಸಬೇಕಾದ ಅನಿವಾರ್ಯತೆ. ನಾನು ನನ್ನ ಹೃದಯದಿಂದ ಉತ್ತರಿಸಬೇಕು. ನಾಟಕೀಯ ಉತ್ತರ ಕ್ಲೇರಾ ಖಂಡಿತ ಇಷ್ಟಪಡಲಾರಳು. ಪ್ರೀತಿ, ಪ್ರೇಮ, ಕಾಮದ ಈ ಹುಚ್ಚು ಆವೇಶದಲ್ಲಿ ಸತ್ಯ ಹೊರ ಬರಲೇಬೇಕಾಗಿದೆ.

“ಕ್ಲೇರಾ, ನಾನು ನಿನ್ನನ್ನು ಹಾಗೂ ನಿನ್ನ ಕುಟುಂಬವನ್ನು ಖಂಡಿತ ಪ್ರೀತಿಸುತ್ತೇನೆ. ನನ್ನನ್ನು ನಂಬು” ನಾನಂದೆ.

“ಸುಳ್ಳು, ಇದು ಖಂಡಿತ ಸುಳ್ಳು. ನೀವು ನನ್ನನ್ನು ಪ್ರೀತಿಸಿದಂತೆ ನನ್ನ ಕುಟುಂಬವನ್ನು ಖಂಡಿತ ಪ್ರೀತಿಸಲಾರಿರಿ, ಕಾಮ ಮತ್ತು ಹಸಿವಿನಿಂದ ಮನುಷ್ಯ ಎಲ್ಲವನ್ನೂ ಸೃಷ್ಟಿಸಿಕೊಂಡ. ಹೇಳಿ, ಕಾಮದ ಕಳಂಕವಿಲ್ಲದ ಪ್ರೀತಿ ಇದೆಯೇ? ಅಂತಹ ದಾಂಪತ್ಯವನ್ನು, ಪ್ರೀತಿಯನ್ನು ನೀವು ಸ್ವೀಕರಿಸುವಿರಾ? ಹೇಳಿ. ನಿಜ ಹೇಳಿ.” ಕ್ಲೇರಾ ಆವೇಶದಿಂದ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದಾಗ ನನ್ನ ಮಾತು ನಿಂತು ನಾನು ಮೌನಿಯಾದೆ. ಮರುದಿನ ಎಂದಿನಂತೆ ನಾವು ಕೆಲಸದಲ್ಲಿ ನಿರತರಾಗಿದ್ದೆವು. ಹಿಂದೆ ಯಾವುದೇ ಘಟನೆ ನಡೆಯದಂತೆ ನಾವು ನಮ್ಮಷ್ಟಕ್ಕೆ ಇದ್ದೆವು. ಆದರೆ ಕೆಲವು ವಾರ ಕಳೆದ ಮೇಲೆ ಕ್ಲೇರಾ ಕಚೇರಿಗೆ ಮೂರು ದಿನ ರಜೆ ಹಾಕಿ ಹೋದವಳು ಮತ್ತೆ ಬರಲೇ ಇಲ್ಲ. ಮತ್ತೆ ಕೆಲವು ದಿನದ ನಂತರ ಅವಳಿಂದ ಬಂದ ಇ-ಮೇಲ್ ನನಗೆ ಶಾಕ್ ನೀಡಿತು. ಕ್ಲೇರಾ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು.

ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಯಿತು. ನನ್ನ ಮಾತು ಕ್ಲೇರಾಳ ಮನಸ್ಸಿಗೆ ನೋವಾಗಿ ರಾಜೀನಾಮೆ ನೀಡಿದಳೇ? ಅವಳು ರಾಜೀನಾಮೆ ನೀಡಲು ಕಾರಣವೇನು ಎಂದು ತಿಳಿಯದೆ ಎಲ್ಲರಿಗೂ ಅಘಾತವಾಯಿತು. ನನಗೆ ಕಛೇರಿಯಲ್ಲಿ ಸಮಯ ಕಳೆಯುವುದೇ ಅಸಾಧ್ಯವಾಯಿತು. ಒಂದೊಂದು ಗಂಟೆಯೂ ಒಂದೊಂದು ದಿನದಂತೆ ಕಂಡಿತು. ದಿನ ಕಳೆದಂತೆ ಕ್ಲೇರಾಳ ಬಗ್ಗೆ ಎಲ್ಲರೂ ಮರೆತು ಬಿಟ್ಟರು. ಆದರೆ ನನಗೆ ಕ್ಲೇರಾಳಿಂದ ದೂರವಿರಲು, ಮರೆತು ಬಿಡಲು ಸಾಧ್ಯವಾಗಲಿಲ್ಲ. ಏನೇ ಆಗಲಿ ಅವಳ ರಾಜೀನಾಮೆಯ ಹಿಂದಿನಸತ್ಯವನ್ನು ತಿಳಿದುಕೊಳ್ಳಬೇಕೆಂದು ನಿರ್ಣಯಿಸಿ ರಜಾದಿನದಂದು ಅವಳ ಮನೆಗೆ ತೆರಳಿದೆ.

ಅಂಗಳದಲ್ಲಿ ಕ್ಲೇರಾಳ ತಂಗಿ ಬೊಂಬೆಯೊಂದಿಗೆ ಆಡುತ್ತಿದ್ದಳು. ಕ್ಲೇರಾಳ ತಮ್ಮ ತನ್ನ ಎಡಕಾಲಿನ ಕೃತಕ ಕಾಲನ್ನು ಕಳಚಿ, ಅದರ ಬೆಲ್ಟನ್ನು ಸರಿಪಡಿಸುತ್ತಿದ್ದ. ಕ್ಲೇರಾಳ ತಾಯಿ ಅಂಗಳದಲ್ಲಿನ ದಂಡೆಯ ಮೇಲೆ ಕುಳಿತಿದ್ದರು. ಹುಡುಗನೊಬ್ಬನೇ ನನ್ನನ್ನು ತಕ್ಷಣ ಗುರುತು ಹಿಡಿದ. ನಾನು ಅವನ ತಾಯಿಯ ಪಕ್ಕದಲ್ಲಿ ನೆಲದಲ್ಲಿ ಕುಳಿತುಕೊಂಡೆ. ಹುಡುಗ ತಾಯಿಯ ಕಿವಿಯಲ್ಲಿ ನನ್ನ ಪರಿಚಯ ಹೇಳಿದ. ಮುದುಕಿಯ ಕಣ್ಣಲ್ಲಿ ಕಣ್ಣೀರು ಮಡುಗಟ್ಟಿತು. ಅವಳು ಏನೇನೋ ಹೇಳತೊಡಗಿದಳು. ನನಗೆ ಅರ್ಥವಾಗದೆ ಹುಡುಗನ ಮುಖ ನೋಡಿದೆ.

“ತಂದೆ ತೀರಿ ಹೋಗಿ ವಾರವಾಯಿತು” ಅವನಂದ. ನಾನು ಸ್ವಲ್ಪ ಅಧೀರನಾದೆ. ಹುಡುಗನ ತಲೆ ನೇವರಿಸಿದೆ “ಎಲ್ಲಾ ಸರಿಯಾಗುತ್ತದೆ. ಧೈರ್ಯ ತಂದು ಕೋ” ಅಂದೆ. ಅವನು ತಲೆ ಕೆಳಗೆ ಹಾಕಿದ. ನಾನು ಸುತ್ತಲೂ ಕಣ್ಣಾಡಿಸಿದೆ. ಕ್ಲೇರಾಳ ಇರವೇ ಇಲ್ಲ. ನನಗೆ ಹೆಚ್ಚು ಹೊತ್ತು ಇರಲಾಗಲಿಲ್ಲ. ಮನೆಯಲ್ಲಿ ಇನ್ನೂ ಸ್ಮಶಾನ ಮೌನ ಉಳಿದಿತ್ತು. ನಾನು ಹುಡುಗನನ್ನು ಕೇಳಿದೆ “ಅಕ್ಕ ಎಲ್ಲಿ?” ಅವನು ತಡವರಿಸುತ್ತಾ ಹೇಳಿದ. “ಅಕ್ಕ ‘ನನ್’ ಆಗಿ, ಚರ್ಚಿನ ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದಾಳೆ.”

ನಾನು ಎದ್ದು ನಿಂತೆ. ಮುದುಕಿಯ ಪಾದ ಮುಟ್ಟಿ ‘ಬರುತ್ತೇನೆ’ ಅಂದಾಗ ನನ್ನ ಕಣ್ಣೀರು ಅವಳ ಪಾದವನ್ನು ಒದ್ದೆ ಮಾಡಿತು. ಗದ್ದೆಯ ಬದಿಯಲ್ಲಿ ನಡೆದು ಹೋಗುವಾಗ ಬತ್ತದ ತೆನೆಗಳೆಲ್ಲಾ ಬೆಂಕಿಯ ಕೆನ್ನಾಲಗೆಯಂತೆ ನನ್ನನ್ನು ಮುತ್ತಿಕೊಳ್ಳುತ್ತಿತ್ತು. ಅಷ್ಟು ಹೊತ್ತಿಗೆ “ಅಂಕಲ್” ಎಂದು ಕರೆದಂತಾಗಿ ತಿರುಗಿ ನೋಡಿದೆ. ಹುಡುಗ ಕುಂಟುತ್ತಾ ನನ್ನನ್ನು ಸಮೀಪಿಸಿದ.

“ನೀವು ಬಂದರೆ ಈ ಪೊಟ್ಟಣವನ್ನು ನಿಮಗೆ ಕೊಡಲು ಅಕ್ಕ ಹೇಳಿದ್ದಾಳೆ” ಅಂದ. ನಾನು ಅವನಿಂದ ಪೊಟ್ಟಣ ಪಡೆದು ಮುಂದೆ ನಡೆದೆ. ತೆಪ್ಪದಲ್ಲಿ ಕುಳಿತೆ. ಶಾಂತವಾಗಿ ಹರಿಯುವ ನೀರಿನ ಮಧ್ಯೆ ಒಂಟಿ ತೆಪ್ಪ ಒಂದರ ಮೇಲೆ ನಾನು ಒಂಟಿಯಾಗಿ ಸಾಗುತ್ತಿದ್ದೆ. ತೆಪ್ಪವು ಹೆಣ ಸುಡುವ ಕಟ್ಟಿಗೆ ರಾಶಿಯಾಗಿ ಅದರ ಮೇಲೆ ಮಲಗಿದ ಶವದಂತೆ ಭಾಸವಾಗಿ ನಾನು ತಲ್ಲಣಿಸಿದೆ. ಅಳು ತಡೆಯಲಾಗಲಿಲ್ಲ. ನಾನು ಅಳ ತೊಡಗಿದೆ. ಮನಸ್ಸು ಶಾಂತವಾಗುವವರೆಗೂ ಅತ್ತೆ, ಕ್ಲೇರಾ ಇಲ್ಲದ ಮೇಲೆ ಈ ಪೊಟ್ಟಣ ಯಾಕೆ ಎಂದು ನೀರಿಗೆ ಬಿಸಾಡಲು ಕೈ‌ಎತ್ತಿದೆ. ಯಾಕೋ, ಮನಸ್ಸಾಗಲಿಲ್ಲ. ಪೊಟ್ಟಣವನ್ನು ಬಿಚ್ಚಿದೆ. ಶಿಲುಬೆಗೇರಿದ ಏಸುವಿನ ಮೂರ್ತಿ, ಕೈ, ಕಾಲು, ಎದೆಯಿಂದ ನೆತ್ತರು ಚಿಮ್ಮುತ್ತಿದ್ದರೂ ಅದೇ ಸೌಮ್ಯ ನಿರ್ಲಿಪ್ತ ಮುಖ. ಅಲ್ಲೊಂದು ಸಣ್ಣ ಚೀಟಿ. ನಡುಗುವ ಕೈಯಿಂದ ಚೀಟಿಯನ್ನು ಬಿಡಿಸಿದೆ. ಕ್ಲೇರಾಳ ಅಕ್ಷರಗಳು.

“ಜೀವನದಲ್ಲಿ ನಮಗೆ ಬೇಕಾದುದು ಎಷ್ಟು “ಅಲ್ಪ” ಎಂಬುದನ್ನು ಅದು ಕಳೆದು ಹೋಗುವ ತನಕ ನಾವು ತಿಳಿಯುವುದಿಲ್ಲ. ಆದುದರಿಂದ ಜೀವನ ಏನು ಎಂಬುದರ ನಿರ್ಧಾರ ಅವರವರ ಮನೋಭಾವವನ್ನು ಅವಲಂಬಿಸಿರುತ್ತದೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳಲಿಲ್ಲ….
Next post ಅಲ್ಲೊಂದು ನವಿಲು, ಇಲ್ಲೊಂದು ನವಿಲು

ಸಣ್ಣ ಕತೆ

 • ರಾಧೆಯ ಸ್ವಗತ

  ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

 • ಆಮಿಷ

  ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys