ಕೃಷ್ಣ, ಗೊಮ್ಮಟರ
ಬಗ್ಗೆ ನಮಗಿಲ್ಲ ಬೇಸರ
ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ!
ಇನ್ನೋರ್‍ವ ತ್ಯಾಗದ ಪ್ರತೀಕ
ಇವರೀರ್‍ವರು ಜಗತ್ಪ್ರಸಿದ್ಧ
ಕಲ್ಲಾಗಿದ್ದರೂ ಜೀವಂತ

ಛೇ, ಮರೆತಿದ್ದೆ
ಅವನೇನು ಕಡಿಮೆಯೇ
ಕೋಟಿ ಕೋಟಿ ನುಂಗುವ
ಆ ತಿಮ್ಮಪ್ಪನ ಬಗ್ಗೆಯೂ
ನಮಗಿಲ್ಲ ಬೇಸರ

ಆದರೆ!
ಕೃಷ್ಣನಿಗೇಕೆ ವಜ್ರ ಕಿರೀಟ? ಪೀತಾಂಬರ?
ದಿಗಂಬರನಿಗೇಕೆ ಕ್ಷೀರಾಭಿಷೇಕ, ಮಹಾಮಜ್ಜನ
ತಿಮ್ಮಪ್ಪನಿಗೇಕೆ ವಜ್ರ ಪಾದುಕೆ, ವಜ್ರಕಿರೀಟ?
ಹೇಳಿ!

ಅವರು ಕೇಳುವರೇ?
ಹಾಗೇ ಮಾಡಿ ಹೀಗೆ ಮಾಡಿ ಎಂದು,

ಧೂಳಿನಲ್ಲಿ ಹುಟ್ಟಿ ಬಂದವರ
ಹಸಿವ ನೀಗಿಸುವರೇ ಅವರು
ಹೇಳಿ?
ಸುನಾಮಿ, ಲಾಥೂರಿನಿಂದಾದ
ಘೋರ ದುರಂತವ ತಪ್ಪಿಸುವರೇ?
ಹೇಳಿ?
*****
ಏಪ್ರಿಲ್ ೯ ೨೦೦೬ರ ಸಾಗರ ಮಣ್ಣಿನವಾಸನೆ ಪತ್ರಿಕೆಯಲ್ಲಿ ಪ್ರಕಟ