ಸ್ಪ್ರಿಂಗ್

ಸ್ಪ್ರಿಂಗ್

[ಗಿರಿಯಪ್ಪ ಗೋವಿಂದ ಮುದ್ರಣಾಲಯಕ್ಕೆ ಬರುತ್ತಾನೆ. ಮುದ್ರಣಾಲಯದಲ್ಲಿ ಟೆಲಿಫೋನು ಮೊದಲಾಗಿರುವ ಆಫೀಸು. ಹೆಸರಿನ ಹಲಗೆ ದೊಡ್ಡದಾಗಿರುತ್ತೆ. ಅದನ್ನು ಓದುತ್ತಾ ಒಳಗೆ ಬರುವನು.]

ಗಿರಿಯಪ್ಪ :- ಇದೇನೆ, ಗೋವಿಂದ ಮುದ್ರಣಾಲಯ! ಯಾಕೇಂದೆ ಇಷ್ಟು ದೊಡ್ಡ ಬೋರ್‍ಡು ಈ ಪ್ರೆಸ್ಸಿಗೆ ಓಹೋ, ನೆನೆದವರ ಮನದಲ್ಲೆ. ಬಂದೆಯ ಗೋಂದು, ಗೋಂದಪ್ಪ, ಇದೇನು ಇಲ್ಲೇ ಇದ್ದು ಬಿಟ್ಟಿದ್ದಿ? ಯಾಕೆ ತಪ್ಪಿಸಿಕೊಳ್ಳುವುದಕ್ಕೆ ಗಂಟೆ ಗೊತ್ತಾಗಲಿಲ್ಲವೆ.

ಗೋವಿಂದಪ್ಪ:- ಏನೋ ಗಿರಿಯಪ್ಪ ನೀನೂ ಬಂದು ಹಾಸ್ಯ ಮಾಡುತೀಯ ? ಮೊಳೆ ಜೋಡಿಸುವರಿಲ್ಲ, ಮಿಷನ್ ತುಳಿಯುವರಿಲ್ಲ, ಬಂದು ಹೋಗುವ ಜನ ಬಹಳ ಹೆಚ್ಚಾಯ್ತು. ಸುಳ್ಳೇ ಹೇಳಬಾರದು ಎಂತ ನನ್ನ ಹಟ. ಈ ಗಡಿಯಾರ ಸರಿಯಾಗಿದ್ದರೆ ಅದಾದರೂ ಎಚ್ಚರಿಕೆ ಕೊಡುತಿತ್ತು. ನಿನ್ನೆ ನಿಂತು ಹೋಯಿತು. ಸರಿಮಾಡಿಕೊಡೊ ನಿನ್ನ ಗುಮಾಸ್ತಗಿರೀ ಲೇಖಣೀನ ಹಾಗಿಟ್ಟು. ಹೀಗೆ ಬಾ, ಇಕ್ಕುಳ ಹಿಡಿದು ನನ್ನ ಕಾಲದ ಕೂಸಿಗೆ ಜೀವಕೊಡು, ನೀ ಕೇಳಿದ್ದೆಲ್ಲ ಕೊಡುತೇನಯ್ಯ, ಏನೋ ಗಿರಿ!

ಗಿರಿಯಪ್ಪ:- ಹಾಗೆ ಬಾ ತಮ್ಮ! ಮಾಡಿಕೊಡೋಣಂತೆ ಗಡಿ ಯಾರದ ರಿಪೇರಿ, ಆದರೆ ಮೊದಲು ಹೇಳು, ನನ್ನಾಕೆ ಪುಸ್ತಕ ಏನಾಯ್ತು, ಎಲ್ಲಿಗೆ ಬಂತು, ಅದು ಈ ದಿನವೇ ಬೇಕಂತೆ. ಅಚ್ಚು ಮಾಡದಿದ್ದರೆ ಅಷ್ಟೇ ಹೋಯ್ತೋ ಅಚ್ಯುತಾ, ನೀನು ಥೇಟು ಗೋಂದು ಕಣೋ ಗೋಂದು, ಬ್ಯಂಕ, ಅಂಟು! ನಿನ್ನ ಬಲೆ ಒಳಗೆ ಕಾಲಿಟ್ಟು ಕೆಟ್ಟೆ ನಾನು. ನನ್ನ ಜೀವ ಇಲ್ಲಿ ನೀನು ಹೀರುತಿ ಅಲ್ಲಿ ನನ್ನ ಮಾನ ಆಕೆ ಹಿಂಡುತಾಳೆ. ಚಂದ್ರಾವಳಿ ಇಷ್ಟು ಹೊತ್ತಿಗೆ ಅಚ್ಚಾಗಿದ್ದರೆ ಸಾವಿರಾರು ಪ್ರತಿ ಖರ್ಚಾಗಿ ಹೋಗುತಿತ್ತು. ಅದಿರಲಿ ಗಡಿಯಾರ ಯಾವದು, ರಿಪೇರಿಗೆ ಏನು ಕೊಡುತಿ? ಅದರ ರಿಪೇರಿ ಛಾರ್ಜು ಮಾತ್ರ ನಂದಲ್ಲ. ಅದೇ ಬೇರೆ ಲೆಕ್ಕ ನೋಡಪ್ಪ.

ಗೋವಿಂದಪ್ಪ:- ಅದೇನು ಸ್ತ್ರೀ ಧನವೋ ! ಹಾಗೇ ಆಗಲಿ : ಧಾರಾಳವಾಗಿ ಕೊಡೋಣ. ಹದಿನೈದಲ್ಲ, ಇಪ್ಪತ್ತು ರೂಪಾಯಿ ತಗೊಳ್ಳಯ್ಯ. ಅದಕೆಲ್ಲ ತಗಲುವಷ್ಟು ಶಕ್ತಿವರ್ಧಕವೆಲ್ಲ ನಾನೇ ಒದಗಿಸಿಬಿಡುತೇನಯ್ಯ, ಒಂದೇ ರಾತ್ರೀಲಿ ಗಡಿಯಾರ ಸರಿಮಾಡಿ ವಾಪಸುಮಾಡು ನಿನ್ನ ದಮ್ಮಯ್ಯ.

ಗಿರಿಯಪ್ಪ:- ನಿನ್ನ ಕೆಲಸಾಂದರೆ, ಅದೇನೆಲ್ಲ ದಮ್ಮಯ್ಯ ಗುಡ್ಡೆ ಹಾಕುತೀಯೋ ಗೋಂದೂ! ನನ್ನಾಕೆ ಪುಸ್ತಕ ನಿನ್ನಿ ಪ್ರೆಸ್ಸಿಗೆ ಬಂದು ಎಷ್ಟು ದಿನವಾಯ್ತು ಹೇಳು ನೋಡೋಣ. ಬಂದ ಬಂದಾಗೆಲ್ಲ ಮುದ್ದು
ಮುದ್ದಾಗಿ ಮಾತಾಡುತಿ. ಗೊಂದು ಎಂದರೆ ಗೋಂದೇ ನೀನು!

ಗೋವಿಂದಪ್ಪ:- ಲೋ ಗಿರಿ ನೀನಿಲ್ಲದೆ ಇದ್ದರೆ ನಾನೆಲ್ಲೋ! ಗಿರಿಯಿದ್ದರೆ ಗೋವಿಂದ ಅಲ್ಲವೆ? ನಿನ್ನ ಹತ್ತಿರ ಒಂದಾದರೂ ಸರಿಯಾದ ಸುಳ್ಳು ಹೇಳಿದ್ದೇನೆಯೆ?

ಗಿರಿಯಪ್ಪ:- ಓಹೋಹೋ! ಒಂದೇ ಎರಡೇ ಬಗೆ ಸುಳ್ಳು? ನೂರೆಂಟುಬಗೆ ಸುಳ್ಳಿವೆ ನಿನ್ನಲ್ಲಿ. ಪ್ರಸ್ಥಾಯಾಥ ಪ್ರಸ್ಸು ಮಾಲೀಕವದನೇ ಸಾನಂದಮಾಸ್ತೇನೃತಂ-ಎಂದೇ ಇರಬೇಕಾಗಿತ್ತು. ಆ ಸುಳ್ಳಿನ ಮೇಲೆ ಬರೆದಿರುವ ಆ ಶ್ಲೋಕದ ಕಡೆಯ ಸಾಲು.

ಗೋವಿಂದಪ್ಪ:- ಲೋ ಗಿರಿ! ಅಂತು ನಿನ್ನ ಚಂದ್ರಾವಳಿ ಮುಟ್ಟಿದ್ದಕ್ಕೆ ನನ್ನ ಕೊರಳಿಗೆ ಅನೃತಾವಳಿ ನೇತು ಹಾಕಿಬಿಟ್ಟೆ! ನಂದೇ ತಪ್ಪೇ ಅಥವ ನನಗಿರುವ ಸಾವಿರ ತೊಂದರೆಯ ತಪ್ಪೋ, ಕ್ಷಮಿಸಯ್ಯ, ತಪ್ಪಾಯಿತಯ್ಯ!

ಗಿರಿಯಪ್ಪ:- ಇರಲಿ! ಟೆಲಿಫೋನು ಬಳಿ ನಡಿ, ಈದಿನ ನಮ್ಮ ಕೂಸಿಗೆ ಹುಟ್ಟಿದ ಹಬ್ಬ, ಈಗಾಗಲೇ ಎಷ್ಟೋ ಹೊತ್ತಾಗಿ ಹೋಗಿದೆ. ಬೇಗಬೇಗ ಹೋಗಬೇಕು ಮನೆಗೆ, ನಿನ್ನ ಹತ್ತಿರ ಏನಾದರೂ ಕಾಂಚಾಣ ಇದ್ದರೆ ಕೊಡೋಮ್ಮ, ಮನೆಗೆ ಹೋಗೋಣ ನೇವೇದ್ಯಕ್ಕೆ, ರಥ ತರಿಸೋಣ!

ಗೋವಿಂದಪ್ಪ:- ಒಂದು ಬಿಡಿಕಾಸಿಲ್ಲ! ವಿಷ ತಗೊಳ್ಳೋಕ್ಕೂ ಕಾಸಿಲ್ಲ! ನನ್ನ ಮುದ್ರಾಲಯದಲ್ಲಿರೋ ದೇವತೆಗಳೆಲ್ಲ ನೈವೇದ್ಯ ಕಾಣಿಕೆ ಇಲ್ಲಾಂತ ನನ ಮೇರೆಗೆ ಮಂಗಳಾರತಿ ಮಾಡಿದ್ದು ನೀನು ನೋಡಲಿಲ್ಲವೇನೋ! ಹೋಗಲಿ, ನಿನ್ನ ಕೂಸಿನ ನಾಮಧೇಯ ! ವರ್ಧಂತಿಮಾಡಿಸಿ ಕೊಳ್ಳೋ ಪುಟ್ಟ ಬುದ್ದಿಯವರ ನಾಮಕರಣವೇನೊ?

ಗಿರಿಯಪ್ಪ:- ರೇಡಿಯೋ ಕಣಯ್ಯ ಅದರ ಹೆಸರು! ಅದು ಹುಟ್ಟಿದ ಮೇಲೆ ನಮ್ಮಿಬ್ಬರ ಸದ್ದೂ ಉಡಿಗಿಹೋಯ್ತು. ಅದರದೇ ಸದ್ದು ಎಲ್ಲೆಲ್ಲೂ ಯಾವಾಗಲೂ!

ಗೋವಿಂದಪ್ಪ:- ಹಾಗಾದರೇನು, ಒಂದೊಂದು ಸಾರಿ ರಾಗಹಿಡಿದರೂ ಒಂದೊಂದು ದೇಶದ್ದೇನು ಒಳ್ಳೆ ಹೆಸರು ಹಾಹಾಹಾ! ರೇಡಿಯೊ! ಹಾಹಾಹ!

ಗಿರಿಯಪ್ಪ:- ನಿನ್ನೂ ಈದಿನ ಕರಕೊಂಡು ಹೋಗುತ್ತೇನೆ! ಅದೇ ಶಿಕ್ಷೆ ನಿನಗೆ! ನೀನು ಬೇಡಾಂದರೆ ಬಿಡೆ! ನನ್ನ ರೇಡಿಯೋ ಕೂಸನ್ನೂ ನೋಡು, ಅದರ ಒಡತೀನೂ ನೋಡು, ನಿನ್ನ ಸಮಾಧಾನದ ಮಾತೆಲ್ಲ ಅದೇನಿದೆಯೋ ಅದೆಲ್ಲ ಅಲ್ಲೇ ಹೇಳಿಕೊ. ಚಂದ್ರಾವಳಿನ ಅಚ್ಚುಮಾಡುತೀ ಪುಸ್ತಕ ಕಳಿಸಿಬಿಡುತೀ ಎಂತ ಆಕೆ ಕಾದಿದಾಳೆ ಅಲ್ಲಿ. ನನಗಂತು ಮನೆಗೆ ಈದಿನ ಬರಿ ಕೈಲಿ ಹೋಗುವ ಧೈರ್ಯವೇ ಇಲ್ಲ.

ಗೋವಿಂದಪ್ಪ:- ಬರುತೇನಪ್ಪ! ತಾಯಿಂದರ ಹೃದಯ ತಂಪಾಗಿರುತ್ತೆ. ಅಲ್ಲೇ ಹೇಳಿಕೊತೇನಪ್ಪ. ನಡೀಲಾರೆ ನೋಡಪ್ಪ. ನನ್ನ ಗಡಿಯಾರ ಹೇಗೋ ಹಾಗೇ ನಾನೂ ಕೂಡ ನಿಂತಲ್ಲೇ ನಡಿಯೋ ಸ್ವಭಾವ ನನ್ನದು.

ಗಿರಿಯಪ್ಪ:- ಆಗಲೋ ಹಾಗೇ ಆಗಲಿ, ಘೋನುಬಳಿ ಹೋಗಿ ಮಾತಾಡಿಸೋಣ, ಮನೆಯಲ್ಲಿ ಏನಾಗಿ ಹೋಗಿದೆಯೋ ಕಾಣೆ.

ಗೋವಿಂದ:- ಮಕ್ಕಳ ತಾಯಂದಿರು ಮನೆ ಮನೆಯಲ್ಲೂ ಇರೋವರೆಗೂ ಪರವಾಯಿಲ್ಲಾಪ್ಪ ಏನೇನೂ ಬೆದರಬೇಡ ಅವರಲ್ಲಿ ಭಕ್ತಿ ಇಟ್ಟು ಅವರನ್ನೇ ನಂಬಿದರೆ ಇಹದಲ್ಲೇ ಸ್ವರ್ಗ.

ಗಿರಿಯಪ್ಪ:- ಫೋನು ಮುಟ್ಟಿ ಕರೀಬೇಕಾದರೇ, ಬೆದರಿಕೆಯಾಗುತಲ್ಲೊ. ಕೈ ನಡುಗುತ್ತೆ. ಎಂಟು, ನಾಲ್ಕು, ಎರಡು, ಎಂಟು, ಆರು! ಯಾರ್ರಿ, ಸರಿ ಸರಿ ನಮ್ಮ ನೆರೆಮನೆಯವರಲ್ಲವೆ, ಸರೀರಿ ದಯವಿಟ್ಟು ನಮ್ಮ ಮನೆಯವರನ್ನ ಕರೀತೀರಾ! ನಾನು ಇಲ್ಲೇ ಇದ್ದೇನಲ್ಲ……. ನಮ್ಮಾಕೆಯನ್ನ ದಯಮಾಡಿ ಕರೀರಿ, ಕಾದಿರುತೇನ್ರೀ, ಬೇಗ ಬರ ಹೇಳಿ………ಬಂದೆಯಾ, ಕಾವೂ, ಏನು ಮಾಡೋಣೆ ? ಈದಿನ ನಿನ್ನ ಊಟದ ಹೊತ್ತಿಗೆ ನಾನು ಬರಲಾರೆ. ನೀವೆಲ್ಲ ಊಟಮಾಡಿ, ನಾನು ಗೋವಿಂದರಾಯರನ್ನ ಕರಕೊಂಡು ಬರುತ್ತೇನೆ….ಎಲ್ಲೆ ಇದ್ದದ್ದು? ಇಷ್ಟು ಹೊತ್ತೂ ಪೇಟೆ ತಿರುಗಿಬಂದು ಇಲ್ಲೇ ಈ ಮುದ್ರಾರಾಕ್ಷಸನ ಕೋಟೆಯಲ್ಲಿ ಸೇರಿಕೊಂಡಿದ್ದೇನೆ. ಚಂದ್ರಾವಳಿ ನನ್ನ ಸಂಗಡ ಬರುವಂತಿಲ್ಲ. ಇನ್ನೂ ಮೇಲು ಹೊದ್ದಿಕೆವರೆಗೆ ಬಂದಿಲ್ಲ. ಅದಿಲ್ಲದೆ ಚಂದ್ರಾವಳಿ ಈಗ ನಿನ್ನ ಬಳಿ ಬರುವಂತಿಲ್ಲ. ಇಲ್ಲಿರುವಾತ ಅಚೂಹಾಕಲ್ಲ, ಕಚ್ಚೂ ಹಾಕುಲ್ಲ! ಈ ಗೋವಿಂದ ಕಾಗೆಯೂ ಅಲ್ಲ ಹುಲಿಯೂ ಅಲ್ಲ, ಥೇಟು ನರಿ. ಈಗ ರಿಪೇರಿಗೆಂದು ಗಡಿಯಾರ ತರಲೆ, ಸರಿ. ನಮ್ಮ ಗೋವಿಂದಪ್ಪ ರೇಡಿಯೋ ನೋಡಬೇಕಂತೆ. ಅವನೂ ಬರುತ್ತಾನೆ. ಹೊತ್ತಿಗೆ ಸರಿಯಾಗಿ ಬರಬೇಕೆ? ಟ್ಯಾಕ್ಸಿಮಾಡಿಕೊಂಡು ಬರುವಷ್ಟು ಐಶ್ವರ್ಯ ಎಲ್ಲಿದೆ. ಫೋನುಮಾಡಿದರೆ ಬರುತ್ತೆ, ದಿಟ, ಆದರೆ ಮುಂಗಡ ಹಣ ಬೇಕಲ್ಲ ಅಯ್ಯೋ, ನಿಮ್ಮ! ಎಂದರೆ ನಾನೇನು ಮಾಡಲೆ? ಇಲ್ಲಿ ಯಾರ ಜೇಬಲ್ಲಿ ಹಣವಿಲ್ಲ. ಗೋವಿಂದನೇ ಅವನು ಮುದ್ರಣ ಮಾಡುವುದೆಲ್ಲ ಓದಬಾರದ ಹಾಳೆಗಳೇ, ನೋಟಗಳಲ್ಲ. ಅವನಿಗೂ ಪರದಾಟ ಪಾಪ, ಏನು ನನ್ನ ಅಂಗಿಯಲ್ಲಿ! ನಾನು ಹಳೇ ಅಂಗಿ ಹಾಕಿಕೊಂಡು ಬಂದಿದೇನೆ. ಇದರಲ್ಲೇ ಇದೆಯೆ ? ಸರಿ ಎಲ್ಲಿ ಒಳಗಡೆ ಜೇಬಲ್ಲೆ ? ಅದನ್ನ ಹೊಲಿದೇ ಬಿಟ್ಟಿದ್ದಿಯಲ್ಲ ರೇಶ್ಮೀದಾರದಲ್ಲಿ! ದಾರ ಕೀಳಲೆ, ಹೂ, ಎಳೆದೆ ಒಳಗಿದೆ ಒಂದು ನೋಟು ಹತ್ತು ರೂಪಾಯಿ ನೋಟು ! ಯಾವಾಗ ಇಟ್ಟಿದ್ದೆನೆ ಇಲ್ಲಿ ನಾನು ? ನಾನಲ್ಲವೆ ? ತಪ್ಪಾಯ್ತು ನೀನೋ, ಆಗಲಿ ! ಸಾಹುಕಾರ ಹೆಂಡರ ಗಡಿಯಾರ ರಿಪೇರಿಮಾಡಿದ್ದಕ್ಕೆ ಬಂತೇ ? ಬಿಡು ಈ ಸಮಯಕ್ಕೆ ಸಿಕ್ಕಿತಲ್ಲ. ಗಮಘಮವಾಸನೆ ಫೋನಲ್ಲೂ ಬರುತ್ತಲ್ಲೆ? ನಿನ್ನ ಧನಿಯಲ್ಲೇ ಆವಾಸನೆ ಇದೆಯೋ ಏನೊ ಯಾವುದಾದರೂ ವಾಹನದಲ್ಲಿ ಇಕ್ಕೊ ಬರುತ್ತೇವೆ. ಇದೊ ಹೊರಟೆ ಜೈ ಪತಿಪಾವನೀ ಕಾವೇರೀ!………… ಗೋಂದು, ಏ ಗೋಂದೂ, ನಿನ್ನ ಗಡಿಯಾರದ ರೀಪೇರೀಗೆ ಏನೇನು ಸಾಮಾನು ಕೊಡಿಸುವೇ ಕೊಡಿಸು. ಅದರ ಸ್ಪ್ರಿಂಗೇ ಕಿತ್ತು ಹೋಗಿದೆ. ಅದನ್ನು ಸುತ್ತಿ ಒಳಗಿಡಬೇಕಾದರೆ ಕೇಳು ಬಲ ಉಡುಗುತ್ತೆ ನನ್ನ ಕರುಳೇ ಎದ್ದು ಬರುತ್ತೆ. ಇಡೀ ರಾತ್ರಿ ಕೂತು ಸರಿಮಾಡಬೇಕು ನೋಡು. ಅಲ್ಲದೆ ರಿಪೇರೀ ಛಾರ್ಜಿಗೆ ಬಿಲ್ಲು ಬೇರೆ ಒಂದೇ ಬರುತ್ತೆ, ಇಪ್ಪತ್ತು ರೂಪಾಯಿ ಸಿದ್ದವಾಗಿರಲಿ.

ಗೋವಿಂದಪ್ಪ:- ಆಗಲೋ ಆಗಲಿ! ನೀನು ಯಾವುದಾದರೂ ಗಾಡಿ ನೋಡು, ನಾನು ಉಳಿದ ವಿಚಾರ ನೋಡುತ್ತೇನೆ. ಬೇಗ ಹೋಗೋಣ. ನಿನ್ನ ರೇಡಿಯೋ ಮರಿ ಹಸೆಮೇಲಿದ್ದಾಗಲೆ ಹೋಗೋಣ!
ಅವನಿಗೊಂದು ಉಡುಗರೆ ಕೊಡೋಣಂತೆ.

-೨-
[ಕಾವೇರಮ್ಮ ಮತ್ತು ಗಿರಿಯಪ್ಪ ಇಬ್ಬರೂ ಇದ್ದಾರೆ ಮನೆಯಲ್ಲಿ, ರೇಡಿಯೋ ಅವರ ಕೂಸು, ಮೇಜಿನ ಮೇಲೆ ಗಡಿಯಾರದ ಸಾಮಾನು, ಒಂದು ಗಡಿಯಾರ ದೊಡ್ಡದು.]

ಕಾವೇರಮ್ಮ:- ಅಲ್ಲಾಂದ್ರೆ ನಿನ್ನೆದಿನ ಅದೇನು ಹಾಗೆ ಮಾಡಿದಿರಿ. ಎಲ್ಲರ ಮುಂದೆ ಮಾನ ಕಳೀಬಾರದು ಎಂತ ಸುಮ್ಮನಿದ್ದೆ, ಈಗ ಒಳ್ಳೇ ಮಾತಿನಲ್ಲಿ ನನ್ನ ಕಳ್ಳ ಜೇಬಿನ ಸಾಲ ಅದರ ಮೇಲಿನ ಸರಳಬಡ್ಡಿ, ಸುಸ್ತಿ ಬಡ್ಡಿ ಎಲ್ಲ ಒಟ್ಟಾಗಿ ಒಂದೇ ಗಂಟಲ್ಲಿ ಕೊಡುತೀರೋ ಇಲ್ಲವೋ, ಈ ಕ್ಷಣವೇ ಅದೆಲ್ಲಬೇಕು. ಪುನಹಾ ನಮ್ಮ ಬ್ಯಾಂಕಿಗೆ ಆ ಹಣ ಸೇರಿಸಬೇಕು.

ಗಿರಿಯಪ್ಪ:- ಗಡಿಯಾರ ಹೊತ್ತುಕೊಂಡು, ಗೋವಿಂದಪ್ಪನ ಕರಕೊಂಡು ನಡುರಾತ್ರಿ ಹೊತ್ತಿಗೆ ನಡುಕೊಂಡೇ ಬರುತ್ತಿದ್ದೆ. ನಿನ್ನ ಕಳ್ಳ ಜೇಬಿನ ಹಣ ಸಿಗದಿದ್ದರೆ, ಆಗ ನೋಡು ನಿನ್ನ ಮಜ್ಜಿಗೆ ಹುಳಿ, ನಿನ್ನ ಖೀರು, ನಿನ್ನ ಸಬ್ಜಾ ಭಾತೆಲ್ಲ ತಿನ್ನೋರಿಲ್ಲದೆ ಮೂಲೆಹಿಡಿದು ಗೋಳಾಡುತಿದ್ದುವು. ಇಷ್ಟರ ಮೇಲೆ ನಿನ್ನ ರೇಡಿಯೊ ವರ್ಧಂತಿಗೆ ಕಾತರಿಸಿ ಕರೆಸಿಕೊಂಡೆ. ಅಲ್ಲದೆ, ಮನೆ ಗಂಡಸರನ್ನ ಅತಿಥಿಗಳ ಹಾಗೆ ಕಂಡು ಕೊಳ್ಳಬೇಕಂತೆ. ಅದೆಲ್ಲ ತಿಳಿದು ತಿಳಿದೂ ಹೀಗೆ ಪೀಡಿಸ್ತಾ ಇದ್ದೀಯಲ್ಲ!

ಕಾವೇರಮ್ಮ:- ಪಾಪ ಅತಿಥಿಗಳಾಗೇ ಇರಿ. ಅತಿಥಿಗಳನ್ನೆಲ್ಲಾ ಕಳಿಸಿಬಿಟ್ಟ ಹಾಗೆ ನಿಮ್ಮನ್ನೂ ಆ ರಾತ್ರಿ ಹೊರಗಟ್ಟಿದ್ದರೆ, ಆಗ್ಗೆ ಗೊತ್ತಾಗುತಿತ್ತು ನಮ್ಮ ದೇವರ ಸತ್ಯ.

ಗಿರಿಯಪ್ಪ:- ಸಾಕು ಎಳೇ ಹುಡುಗಿ ಹಾಗೆ, ಹೇಳಿದ ಮಾತೇ ಹೇಳುತಿ. ಈ ರಾತ್ರಿಯಾದರೂ ಆ ಗಡಿಯಾರ ಸರಿಮಾಡಬೇಕು. ನಿನ್ನ ಸಹಾಯವೇನಾದರೂ ಉಂಟೇನು ಈ ಕೆಲಸಕ್ಕೆ ?

ಕಾವೇರಮ್ಮ:- ಸಹಾಯ ಬೇಕೋ ? ನಾನು ರೇಡಿಯೋ ಮಲಗಿಸಿ ಕೊಂಡು ಮಲಗಿಬಿಡುತ್ತೇನೆ. ಮನೆಯಲ್ಲಿ ಗದ್ದಲವೇ ಆಗದಂತೆ ಕಾದು ಕೊಳ್ಳುತ್ತೇನೆ. ನಾನು ಬಂದರೆ ನಿಮ್ಮ ಸಾಮಾನೆಲ್ಲ ಹಾಳಾಗುತ್ತೆ ಅದಕ್ಕೆ ದೂರ ಇದ್ದು ಸಹಾಯಮಾಡೋಣ ಎಂತ ಯೋಚನೆ.

ಗಿರಿಯಪ್ಪ:- ಅಷ್ಟಕ್ಕೆ ಎಷ್ಟಾಗುತ್ತೊ ಆಷ್ಟೆ ಛಾರ್ಜು ನಿನಗೆ ನಿನ್ನ ಪಾಲಿಗೆ.

ಕಾವೇರಮ್ಮ:- ಓಹೋಹೋ ! ನಿಮ್ಮ ಗಡಿಯಾರ ಕೊಟ ಕೊ ಟಾಂದು, ಅದರ ರಿಪೇರಿ ಛಾರ್ಜಿನಲ್ಲಿ ನನ್ನ ಪಾಲಿನ ಹಣಬಂದು ಅಯ್ಯೋ ನೋಡಿಕೊಳ್ಳೋಣ ಬಿಡೀಂದ್ರೆ!

ಗಿರಿಯಪ್ಪ:- ಹಾಗೆನ್ನ ಬೇಡ ಚಾರ್ಜು ತುಂಬ ಬರುತ್ತೆ! ಇನ್ನು ಮೇಲೆ ಒಂದರ ಮೇಲೆ ಒಂದಲ್ಲ ನೂರೆಂಟು ಗಡಿಯಾರ ತಂದು ಸರಿಮಾಡಿ ಕೊಟ್ಟು ತುಂಬ ಹಣ……..

ಕಾವೇರಮ್ಮ:- ತುಂಬಹಣ, ತಂಬಿಗೆ ಅಷ್ಟೊ, ಬಿಂದಿಗೆ ಅಷ್ಟೋ! ಬಂತಲ್ಲ ಗುಮಾಸ್ತೆಗಿರೀಲಿ ಒಂದು ಅರಳೀಕಟ್ಟೆಗೆ ಹಾಕುವಷ್ಟು ಸವರನ್ ಸವರನ್ ಸರಸರವಾಗಿ! ಹಾಗೇನೇ ಇದೂನೂ.

ಗಿರಿಯಪ್ಪ:- ಹಾಗೆಲ್ಲ ಹೇಳಿ ನನ್ನ ರೇಗಿಸಬೇಡ, ಗುಮಾಸ್ತಗಿರಿಯೇ ಸಾಕು ಈ ಗಿರಿಯಪ್ಪನಿಗೆ, ನನ್ನ ಗದ್ದುಗೆ ಬಳಿಗೆ ಬಾಯಿಗೆ ಬೀಗ ಹಾಕಿಕೊಂಡು ಬರಬೇಡವೇ ಭಕ್ತಾದಿಗಳು! ಇವತ್ತೊಬ್ಬ ಸಾವುಕಾರ ಬರುತ್ತಾನೆ. ಅವನ ಹಿಂಡಿದರೆ ಸಾಕು, ಸುರಿದು ಹೋಗುತ್ತೆ ಹೂನ್ನು ಹೂಳೆ.

ಕಾವೇರಮ್ಮ:- ನಡುವೆ ಏನಾದರೂ ಕೀಲು ತಪ್ಪಿದರೆ ನಿಲ್ಲಿಸಿ ಬಿಡುತಾರೆ ಕಂಬಿ ಹಿಂದೆ! ಬೇಡ ನನ್ನ ದೊರೆ, ಅಂಥಾದ್ದೆಲ್ಲ ಉಂಡು ತಿಂದು, ಉಟ್ಟು ತೊಟ್ಟು ಕಡೆಗೆ ನಿಮ್ಮನ್ನ ಕಳಕೊಂಡರೆ, ಆಗೇನುಗತಿ. ಹಿಂದಿನ ಕಾಲದಲ್ಲಾಗಿದ್ದರೆ ಮುಂದಿನ ಜನ್ಮ ಎನ್ನಬಹುದಾಗಿತ್ತು. ಹಾಗಲ್ಲ ಈಗ ಸ್ವರ್ಗ ನರಕ ಅಡಿಗೆಮನೆ ನಡುಮನೆ. ಮಾಡಿದ್ದುಣ್ಣೊ ಮಹಾ ರಾಯ, ಒಂಬತ್ತು ಗಂಟೇಲಿ ಕುದಿಸಿದ್ದನ್ನೇ ಹನ್ನೊಂದು ಗಂಟೇಲಿ ಉಣ ಬೇಕಾದೀತು. ಹಾಗೇನೂ ಅನ್ಯಾಯದ ಹಣ ಹೊಸಲೊಳಗೆ ತರಬೇಡಿ ನನ್ನ ದೇವರೇ, ಕಷ್ಟ ಪಟ್ಟು ದುಡಿಯೋಣ, ಅದೇ ಗಟ್ಟಿ ವರಹ. ಅದೇ ಸಾಕು.

ಗಿರಿಯಪ್ಪ:- ಹಾಗಾದರೆ ನಿನ್ನ ಸ್ಪ್ರಿಂಗ್ ಬಿಚ್ಚಿಕೊಂಡು ನಾನು ಹೇಳಿದಲ್ಲಿಗೇ ಬಂತಲ್ಲ ಬಿಡು. ಮುಂದಿನ ತಿಂಗಳು ಮುಂದಿನ ಮಳಿಗೆ ಬಿಡಿಸಿಕೊಂಡು ಮಗುವಿನ ಹೆಸರಲ್ಲಿ ಒಂದು ಬೋರ್‍ಡು ಹಾಕುತ್ತೇನೆ…. ಗುಮಾಸ್ತಗಿರೀಗೇ……..

ಕಾವೇರಮ್ಮ:- ರಾಜೀನಾಮೆಯೋ ಗುಮಾಸ್ತಗಿರೀಗೆ…….ಸಧ್ಯಕ್ಕೆ ಹಾಗೆ ಬೇಡ, ಅದೆಲ್ಲ ಸರಿ, ನಿಮ್ಮ ಬೋರ್ಡಿನಲ್ಲಿ ಕಾಲಪುರಷಂ ಎಂಡ್ ಕೋ……..ಎಂತ ಬರೆಸಿಬಿಡಿ……..

ಗಿರಿಯಪ್ಪ:-….ಡಾಕ್ಟರ್ ಆಫ್ ಟೈಂಸ್ ಅಥವ ಕೋನೋ ಫಾರ್ಮ ಸೀ-ಎಂತ ಇಡಬಹುದು; ಆದರೆ ನಮ್ಮ ದೇಶದವರು ಅಷ್ಟು ಮುಂದುವರಿದಿಲ್ಲ! ಇರಲಿ ಏನೋ ಇಡೋಣ, ಆಗ ಮನೆಮನೆಯಿಂದ ದುರಸ್ತಾಗ ಬೇಕಾದ ಗಡಿಯಾರಗಳೆಲ್ಲ ಸಾಲಿಟ್ಟು ಬರಬೇಡವೆ……..

ಕಾವೇರಮ್ಮ:- ಸರಿ ಸರೀ, ಆಗ ಊರೆಲ್ಲರ ಗಡಿಯಾರದ ಕಳು ಬಳ್ಳಿಗಳೂ ಹೂತು, ಕಾತು, ಹಣ್ಣಾಗಿ, ನಿಮ್ಮ ಕಂಪೆನಿ ಗೋಡೆಮೇಲೆ ನೋಡುನೋಡೆಲೆ ಮುಂಗಡೆ ನೇತಾಡುತಿರ್ಪವು ನೋಡಲೆ…. ಎಂತ ಇರುತ್ತವೆ. ಆ ಗಡಿಯಾರದ ಸ್ಪ್ರಿಂಗುಗಳೆಲ್ಲ ಕೈಗೆ ಕಾಲಿಗೆ ಸುತ್ತಿಕೊಂಡು…

ಗಿರಿಯಪ್ಪ:- ಆಹಾಹಾ, ನೋಡಿದೆಯಾ, ನಿನ್ನೊಂದೊಂದು ಮಾತೂ, ಒಂದೊಂದು ಹೊನ್ನು ಕಣೆ ಕಾವೇರಿ! ಆ ಹಳೇ ಅಂಗಿ ಜೇಬಲ್ಲಿ ನೋಟು ಬಚ್ಚಿಟ್ಟು ಕೊಂಡಿತ್ತು ನೋಡು, ಹಾಗೇ ಈ ನಿನ್ನ ಮಾತಿನಲ್ಲೂ….

ಕಾವೇರಮ್ಮ:- ನಾನು ಮೋಸಹೋಗಿ ನದಿಯಾಗಿ ಹಾರಿ ಬಿದ್ದಲ್ಲಿ, ನಿಮಗೆ ಮಿಂಚಿನ ಶಕ್ತಿ ಅಲ್ಲವೆ. ಅದೇನು ಹೊಳೀತು ಈಗ ಹೇಳಿನೋಡೋಣ.

ಗಿರಿಯಪ್ಪ:- ಸ್ಟ್ರಿಂಗಿನ ವಿಚಾರವೆ! ಭಾರಿ ಯೋಚನೆ ಅದು. ನಿನಗೆ ಹಿಡಿಸುಹಾಗಿಲ್ಲ.

ಕಾವೇರಮ್ಮ:- ಹಿಡಿಸದೆ ಏನು. ನಾನು ಕೂಡ ಸರಿಮಾಡಿದ್ದೇನೆ ಗಡಿಯಾರ. ಸ್ಪ್ರಿಂಗ್ ಸುತ್ತಿದ್ದೇನೆ. ಬಿಚ್ಚಿದ ಗಡಿಯಾರ ಜೋಡಿಸಿದ್ದೇನೆ. ನಮ್ಮ ತಂದೆಯವರ ಆಸ್ತಿಯೆಲ್ಲ ಗಡಿಯಾರದಲ್ಲೇ ದುಡಿದದ್ದಲ್ಲವೆ? ಆದರೆ ಅವರ ಹತ್ತಿರ ಆಯುಧಸಾಮಗ್ರಿ ಸಾಮಾನೆಲ್ಲ ತುಂಬ ಇತ್ತು. ನೀವೋ ಬರೀ ಕೈಲಿ…….

ಗಿರಿಯಪ್ಪ:- ಬರೀ ಕೈಲೇ ಮೊಳ ಹಾಕಬೇಕು ಒಂದೆರಡುದಿನ. ಅನಂತರ ಸರಿಹೋಗುತ್ತೆ. ಅದಲ್ಲದೆ ಜೊತೆಗೆ ನೀನಿದ್ದೀ ಎಂತ ಧೈರ್ಯದ ಮೇಲೆ, ನಾನೂ ಕೂಡ ಹತ್ತಾರು ಗಡಿಯಾರ ಬಿಚ್ಚಿಟ್ಟು ಹಾಳುಮಾಡಿದ್ದೇನಲ್ಲ ಆಗಲೆ. ಅಮೆರಿಕದಲ್ಲಿ ಒಬ್ಬನ ಹತ್ತಿರ ತುಂಬ ಗಡಿಯಾರಗಳು ಇವೆಯಂತೆ. ಅವಕ್ಕೆಲ್ಲ ಹಾಗೆ ಹೀಗೆ ಕೀಲು ಕೊಡುತ್ತಾ ಹೋದರೆ ಎರಡು ದಿನ ಹಿಡಿಯುತ್ತಂತೆ, ಹಿಂದಿನ ಚಕ್ರವರ್ತಿಗಳ ಹತ್ತಿರ………

ಕಾವೇರಮ್ಮ:- ಅದೆಲ್ಲ ಇರಲಿ. ನಿಮ್ಮ ಹೊಸ ಯೋಚನೆ ಏನದು?

ಗಿರಿಯಪ್ಪ:- ಹೊಸ ವಿಚಾರವೆ? ಕೇಳು ಹಾಗಾದರೆ – ನನಗೆ ತುಂಬ ಹಣ ಸಿಕ್ಕಿದಾಗ ತುಂಬ ಉಕ್ಕಿನ ತಗಡೆಲ್ಲ ಖರೀದಿಮಾಡಿ, ಸ್ಪ್ರಿಂಗ್ ಪಟ್ಟಿಯಾಗಿ ಕತ್ತರಿಸಿ, ಚಕ್ರಗಳಿಗೆಲ್ಲ ಸುತ್ತಿ ಸುತ್ತಿ…….

ಕಾವೇರಮ್ಮ:- ನಮ್ಮ ರೇಡಿಯೋ ಕೈಕಾಲಿಗೆಲ್ಲ ಸುತ್ತಿ ಸುತ್ತಿ, ನನಗೆ ಸಾಕಾದಷ್ಟು ಸುಸ್ತು ಮಾಡಿ…….. ಏನು ಹಾಗಾದರೆ…….. ಇದೂ ಒಂದು ತಾತನ ಕಂಪೆನಿಯೇ ಆಗಿಬಿಡುತ್ತೆ. ಬಿಡೀಂದ್ರೆ, ಗಗನಕ್ಕೆ ಹಾರಬೇಡಿ. ಈಗಿರೋ ಕೋಲು ಕರಟ ಚಾಪೆನೇ ಸಾಕಾಗಿದೆ.

ಗಿರಿಯಪ್ಪ:- ಆಗಲೂ ಹೀಗೇ ಇರುತ್ತೇನೆಯೆನೇ ಕಾವೇರಿ ? ಆಗ ಅರಮನೆಯಂಥ ಪ್ರಾಸಾದವನ್ನು ಕಟ್ಟಿಸಿ, ನಮ್ಮ ಘಟಿಕಾ ಯಂತ್ರಕ್ಕೊಂದು ಅಂತಸ್ತನ್ನು ಕಟ್ಟಿಸಿ, ಅಲ್ಲಿ ಚಿಮ್ಮುವ ಸ್ಪ್ರಿಂಗುಗಳಿಗಾಗಿ ಒಂದುನೆಲೆ ಯನ್ನೇ ಮಾಡಿಸುತ್ತೇನೆ. ಆ ಚಿಮ್ಮುವ ಸ್ಪ್ರಿಂಗುಗಳೆಲ್ಲ ನನ್ನ ಹೊಸ ನಿರ್ಮಾಣದ ಮಹಾ ಮೂಲ ಯಂತ್ರದಲ್ಲಿ ಚಕ್ರ ಚಿಮ್ಮಿಗಳಾಗಿ…….. ಇತ್ಯಾದಿ ನಮ್ಮ ಆಗಿನ ವೈಭವ……..

ಕಾವೇರಮ್ಮ:- ಅದೇನೋ ಅರ್ಥವೇ ಆಗುವುದಿಲ್ಲ. ಬಾಪೂಜಿ ಯವರ ಸತ್ಯಾಗ್ರಹದ ಮರ್ಮವನ್ನಾದರೂ ಅರ್ಥಮಾಡಿಕೊಂಡೇನು, ಆದರೆ ನಿಮ್ಮ ಚಿಮ್ಮಿಯ ಮರ್ಮ ಉಕ್ಕಿನ ಕಡಲೆಯಾಗಿಬಿಟ್ಟಿದೆ. ನಿಮ್ಮ ಧರ್ಮಕ್ಕೆ ಸಧ್ಯ ಸಾಕು ಸುಮ್ಮನಿರಿ. ಕೂಸಿಗೆ ರೇಡಿಯೋ ಎಂತ ಹೆಸರಿಟ್ಟಿರಿ…. ಅದರ ಕಿರುಚಾಟ ಕೇಳಲಾರೆ. ಇನ್ನು ನಿಮ್ಮ ವಿಶ್ವಾಮಿತ್ರ ಸೃಷ್ಟಿಯಾದ, ಆ ಚಿಮ್ಮಿ ಚಕ್ರಗಳೋ, ಸ್ಪ್ರಿಂಗ್ ಚಕ್ರಗಳೋ, ಅದೇನೋ ನನಗೆ ಭಯವಾಗುತ್ತೆ ಊಹಿಸಿಕೊಂಡರೆ.

ಗಿರಿಯಪ್ಪ:- ಕಾವೇರಿಯ ಕೂಸು ರೇಡಿಯೋ, ಗಿರಿಯಪ್ಪನ ಕೂಸು ಹೊಸ ಸ್ಪ್ರಿಂಗ್ ಯೋಜನೆಯ ಚಕ್ರ ಚಿಮ್ಮಿ. ನಿನ್ನ ಕೂಗು ಮನೆ ಉದ್ದಾರಕ್ಕೆ, ನನ್ನ ಕೂಸು ದೇಶೋದ್ದಾರಕ್ಕೆ. ನಾನು ಈಗ ಉಕ್ಕಿನ ಚಕ್ರ ಚಿಮ್ಮಿಗಳ ವಿಚಾರವನ್ನೇ ಹೇಳುತ್ತೇನೆ ಕೇಳು. ಪೂಜ್ಯ ಬಾಪೂಜಿ ಇದ್ದಾರಲ್ಲ ಅವರೇ ಭಾರತದ ಹಿರಿಯ ಸ್ಪ್ರಿಂಗ್. ದೇವರು ಅವರನ್ನ, ಒಂದು ಸಜೀವ ಚಕ್ರ ಚಿಮ್ಮಿಯನ್ನ ಮಾಡಿ, ನಮ್ಮ ದೇಶಕ್ಕೆ ಕಳಿಸಿದ್ದಾನೆ. ಇಂಡಿಯಾ ದೇಶದ ಸಣ್ಣ ದೊಡ್ಡ ಚಕ್ರಗಳೆಲ್ಲ, ಅವರ ಚಿಮ್ಮುವ ಶಕ್ತಿಯಿಂದ ತಿರುಗುತ್ತವೆ. ಹಾಗಿರುವುದರಿಂದಲೇ, ಭಾರತದ ಮೊರೆಯ ಮೇಲೆ ಜಗತ್ ಸಂಸ್ಕೃತಿಯ ಗಂಟೆ…..

ಕಾವೇರಮ್ಮ:- ಎಲ್ಲಿಂದೆಲ್ಲಿಗೆ……. ಅಯ್ಯೋ ಸಾಕು ಬಿಡೀಂದ್ರೆ ಉಪನ್ಯಾಸ.

ಗಿರಿಯಪ್ಪ:- ಶ್ರೀಮಾನ್ ಅಧ್ಯಕ್ಷರೆ, ಎರಡೇ ನಿಮಿಷ ಅವಕಾಶ ಕೊಟ್ಟರೆ ಸಾಕು, ನನ್ನ ಉದ್ಯಮವನ್ನು ವಿವರಿಸಿ ಈ ಸ್ಪ್ರಿಂಗುಪನ್ಯಾಸವನ್ನು ಮುಗಿಸಿಬಿಡುತ್ತೇನೆ.

ಕಾವೇರಮ್ಮ:- ಅಧ್ಯಕ್ಷರಂತೆ ಅಧ್ಯಕ್ಷರು! ಮುಗಿಸಿಬಿಡಿ, ಸಾರಿಗೆ ಒಗ್ಗರಣೆ ಹಾಕಿ ಆಯಿತು. ನಮ್ಮ ರೇಡಿಯೋ ರಾಜ ಹಾಲು ಕುಡಿದು ಮುಗಿಸುವಷ್ಟೇ ಕಾಲ ಇನ್ನುಳಿದಿದೆ ನಿಮ್ಮ ಚಿಮ್ಮಿ ಭಾಷಣಕ್ಕೆ.

ಗಿರಿಯಪ್ಪ:- ಈ ನಮ್ಮ ಮಾತೆ ಭಾರತದಲ್ಲಿರುವ ನರನಾರಿಯರೆಲ್ಲ ವರುಷದಲ್ಲಿ ಒಂಬತ್ತು ತಿಂಗಳೇ ಕೆಲಸವಿಲ್ಲದೆ ಇರುತ್ತಾರೆ. ಅವರೆಲ್ಲರಿಗೆ ನನ್ನಿಂದ ಸುಲಭ ಸಂಪಾದನೆಯಾಗುತ್ತದೆ, ನಮ್ಮ ಚಿಮ್ಮಿ ಕಂಪನಿಯ ಚಕ್ರ ಚಿಮ್ಮಿಗಳನ್ನು ತಲೆಗೆ ಹತ್ತೂಹತ್ತರಂತೆ ಪ್ರತಿ ಸಂಸಾರಕ್ಕೂ ಹಂಚಿ ಬಿಡುತ್ತೇವೆ. ಮನೆಯ ಮಕ್ಕಳು ಮುದುಕರೆಲ್ಲ ಕೂತಾಗ ನಿಂತಾಗ ಅವುಗಳನ್ನು ದಿನವೂ ಸುತ್ತಿ ಕೊಟ್ಟು ಬಿಡುತ್ತಾರೆ. ಹಾಗೆ ಸುತ್ತಿ ಕೊಟ್ಟ ಸ್ಪ್ರಿಂಗ್ ಚಕ್ರಗಳನ್ನು ನಮ್ಮ ಕೇಂದ್ರ ಕಾರ್ಖಾನೆಯಲ್ಲಿರುವ ಮೂಲ ಯಂತ್ರಕ್ಕೆ ಜೋಡಿಸಿಬಿಟ್ಟರೆ ಅಲ್ಲಿ ಅವು ಶಕ್ತಿ ಬೀಜಗಳಾಗುತ್ತವೆ. ಆ ನಮ್ಮ ಕಾರ್ಖಾನೆಗೆ ಇನ್ನಾವ ಜಲ, ತೈಲ, ವಿದ್ಯುತ್ ಶಕ್ತಿಗಳೂ ಬೇಕಿಲ್ಲ. ಅಲ್ಲಿರುವ ಚಕ್ರಗಳೆಲ್ಲ ಕೇವಲ ಮಾನವರ ನರಬಲ ಸ್ನಾಯ ಬಲಗಳಿಂದಲೇ ಶಕ್ತಿ ಪಡೆದು ಮಹತ್ತಾದ……..

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್‍ಮ ಮತ್ತು ಸೇಡು
Next post ರಾಮ-ಕೃಷ್ಣ-ಶಿವ

ಸಣ್ಣ ಕತೆ

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…