ಗಾಂಧೀಜಿ : ೧೨೫

ಗಾಂಧೀಜಿ : ೧೨೫

ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : “ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ.”

ತಾವು ಬರೆದಂತೆ ಬದುಕಿದ, ಆತ್ಮಸಾಕ್ಷಿಗೆ ಸದಾ ಬದ್ಧವಾದ ಮನುಷ್ಯನಾದುದರಿಂದಲೇ ಗಾಂಧೀಜಿಯವರನ್ನು ‘ಮಹಾತ್ಮ’ ಎಂದು ಕರೆದರು. ಆದರೆ ಗಾಂಧೀಜಿ ಅವರು ಅದರಿಂದ ಅಹಂಕಾರ ಪಡಲಿಲ್ಲ. ನಾನು ಮಹಾತ್ಮನಾದೆನೆಂದು ಬೀಗಿದ ಬೆಲೂನಾಗಲಿಲ್ಲ. ಬದಲಾಗಿ ಮತ್ತಷ್ಟು ವಿನಯಶೀಲರಾದರು. ಆತ್ಮಬದ್ದರಾದರು. ಸೌಜನ್ಯದಲ್ಲಿ ನಿಷ್ಠುರತೆಯನ್ನು ರೂಢಿಸಿಕೊಂಡರು. ನಾನು ಕೇವಲ ಮನುಷ್ಯ ಮಾತ್ರ ಎಂದು ಮತ್ತೆ ಮತ್ತೆ ಹೇಳಿದರು; ತಮಗೆ ತಾವೇ ಹೇಳಿಕೊಂಡರು. “ನನಗೆ ಯಾರಾದರೂ ಶತ್ರುಗಳಿದ್ದಾರೆಂದು ನಾನು ನಂಬುವುದಿಲ್ಲ. ನಾನು ಯಾರನ್ನು ಶತ್ರುವೆಂದು ಭಾವಿಸುವುದಿಲ್ಲ” (೧೭-೧೧-೧೯೩೩-ಹರಿಜನ) ಎಂದು ಬಲವಾಗಿ ಪ್ರತಿಪಾದಿಸುತ್ತ ಬಂದ ಗಾಂಧೀಜಿ ಯವರು ‘ಸಂತತನ’ದ ಸಾಕಾರಮೂರ್ತಿಯಂತೆ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಅವರು ಕಟ್ಟಿದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಸಂತತನದ ಅಂಶ ಕಾಣುತಿತ್ತು. ಅವರು ಅವಧೂತನಂತೆ, ಹೋರಾಟಗಾರನಂತೆ, ಪ್ರಬುದ್ಧ ರಾಜಕಾರಣಿಯಂತೆ ಏಕಕಾಲದಲ್ಲಿ ಕಾಣುತ್ತಿದ್ದರೂ ಆಳದಲ್ಲಿ ಆತ್ಮನಿಷ್ಠೆಯ ಸಂತತಿ ಕೆಲಸ ಮಾಡುತ್ತಿತ್ತು. ಜನರು ಇವರನ್ನು ‘ಮಹಾತ್ಮ’ರೆಂದು ಕರೆಯಲು ಪ್ರೇರಣೆ ನೀಡಿದ್ದು ಈ ಸಂತತನದ ಅಂಶವೆಂದು ನನ್ನ ಭಾವನೆ. ಯಾರಿಗೂ ಕೆಡುಕನ್ನು ಬಯಸದೇ, ಸದಾ ಕ್ರಿಯಾಶೀಲವಾದ ಆತ್ಮನಿಷ್ಠ ಬದುಕಿನ ಗಾಂಧೀಜಿ ಅವರು ಯಾವುದೇ ಬಹಿರಾಡಂಬರವನ್ನು ಒಪ್ಪದ ಸರಳ ಶೈಲಿಯಲ್ಲಿ ಪ್ರಕಟ ಗೊಂಡ ‘ಸನ್ಯಾಸಿ’ಯಾಗಿ ಜನರಿಗೆ ಕಂಡರು. ಆದರೆ ಅವರು ಜನ ದೂರವಾದ ಸಾಂಪ್ರದಾಯಿಕ ಸನ್ಯಾಸಿಯಾಗಿರಲಿಲ್ಲ. ಭಜನೆಯಲ್ಲೇ ಬದುಕನ್ನು ಕಳೆದು ಕೊಳ್ಳುವ ಭಕ್ತನಾಗಿರಲಿಲ್ಲ. ಕ್ರಿಯೆಯಲ್ಲಿ ಸಾಮಾಜಿಕ ಶಕ್ತಿಯಾಗಿದ್ದರು; ಹೋರಾಟಗಾರರಾಗಿದ್ದರು. ಸ್ವಭಾವದಲ್ಲಿ ಸನ್ಯಾಸಿಯಾಗಿದ್ದರು; ಸಂತನಾಗಿದ್ದರು. ಆದರೆ ತಮ್ಮನ್ನು ‘ಸಂತ’ರೆಂದು ಕರೆಯುವ ಪರಿಪಾಠವನ್ನು ಅವರು ಒಪ್ಪಲಿಲ್ಲ. ೨೦-೧-೧೯೨೭ರ ‘ಯಂಗ್ ಇಂಡಿಯಾ’ ದಲ್ಲಿ ಬರೆಯುತ್ತ “ನನಗೆ ಸಂತತನದ ಬಟ್ಟೆ ತೊಡುವುದು ತೀರಾ ಆತುರದ್ದು. ನನ್ನಲ್ಲಿ ನಾನು ಯಾವುದೇ ರೂಪದ ಸಂತತನವಿದೆಯೆಂದು ಭಾವಿಸುವುದಿಲ್ಲ.” ಎಂದು ಬರೆದರು. ಗಾಂಧೀಜಿಯವರು ತಮ್ಮ ಬಗೆಗಿನ ಪ್ರಶಂಸೆಗಳನ್ನು ವಿನಯದಿಂದ ದೂರ ಮಾಡುವ ರೀತಿ ಇದಾಗಿತ್ತು. ಮತ್ತಷ್ಟು ಆತ್ಮನಿಷ್ಟರಾಗಲು, ಆತ್ಮ ವಿಮರ್ಶಕರಾಗಲು ಇದು ಕಾರಣವಾಗಿತ್ತು.

ಗಾಂಧೀಜಿಯವರಲ್ಲಿ ಸಂತತನ ಮತ್ತು ಧಾರ್ಮಿಕ ಮನೋಧರ್ಮಗಳು ಜನಸಾಮಾನ್ಯರಲ್ಲಿ ಅಪಾರ ಜನಪ್ರಿಯತೆಯನ್ನು ರೂಪಿಸಿದ ಅಂಶಗಳಾಗಿದ್ದವು. ಅವರ ಸ್ವಾತಂತ್ರ್ಯ ಹೋರಾಟದ ರಾಜಕೀಯ ಸ್ವರೂಪದಾಗಿದ್ದರೂ ವೈಯಕ್ತಿಕ ನಡೆ, ನುಡಿಗಳ ನೆಲೆಯಲ್ಲಿ ಹೆಚ್ಚು ಧಾರ್ಮಿಕವಾಗಿ ಕಾಣುತ್ತಿದ್ದ ಗಾಂಧೀಜಿಯವರು ಈ ದೇಶದ ಮನಸ್ಥಿತಿಗೆ ಒಗ್ಗಿದರು. ಯಥಾಸ್ಥಿತಿಯ ಮನಸ್ಥಿತಿಯಲ್ಲಿ ಮನೆಮಾಡಿ ಮತ್ತೆ ಮೀರುವ ಕ್ರಿಯೆಯಲ್ಲಿ ತೊಡಗುವ ಗಾಂಧೀಜಿಯವರ ವಿಶಿಷ್ಟ ಸ್ವಭಾವ-ಶೈಲಿಗಳು ಬಹುಬೇಗ ಜನಸಾಮಾನ್ಯರಿಗೆ ಹಿಡಿಸಿದವು. ಆದರೆ ಗಾಂಧೀಜಿ ಧಾರ್ಮಿಕತೆಯ ಹೆಸರಿನಲ್ಲಿ ಜಡತೆಯನ್ನು ಎತ್ತಿ ಹಿಡಿಯಲಿಲ್ಲ. ಅವರ ಅರ್ಥ ‘ಧರ್ಮ’ವು ಹೆಚ್ಚು ಉದಾರವಾಗಿತ್ತು. ಧರ್ಮವೆಂದರೆ ದೇವರು ಮಾತ್ರವಲ್ಲ; ಯಾಂತ್ರಿಕ ಆಚರಣೆಯಲ್ಲ. ಅದೊಂದು ವಿಶಿಷ್ಟ ಮನೋಧರ್ಮವೆಂದು ಅವರು ಭಾವಿಸಿದ್ದರು; ಅದರಂತೆ ಬದುಕಿದರು. ಹಿಂದೂ ಧರ್ಮವನ್ನು ಮೆಚ್ಚಿದ ಗಾಂಧೀಜಿಯವರು ತಮ್ಮ ಕಲ್ಪನೆಯ ಧರ್ಮ ಅಂದರೆ ಹಿಂದೂ ಧರ್ಮ ಮಾತ್ರವಲ್ಲ ಎಂದು ಹೇಳಿದರು. ‘ಧರ್ಮವೆನ್ನುವುದು ಮನುಷ್ಯ ಸ್ವಭಾವದ ಖಾಯಂ ನೆಲೆ; ತನ್ನೊಳಗಿನ ಸತ್ಯಕ್ಕೆ ಬದ್ಧವಾದ ಅಂಶ; ಶುದ್ಧೀಕರಿಸುವ ಪ್ರಕ್ರಿಯೆ” (೧೨-೫-೧೯೨೦-ಯಂಗ್ ಇಂಡಿಯಾ) ಎಂದು ಭಾವಿಸಿದ್ದ ಗಾಂಧೀಜಿ ಧರ್ಮವನ್ನು ಒಂದು ಆಂತರಂಗಿಕ ಪ್ರಕ್ರಿಯೆಯಾಗಿ ಸ್ವೀಕರಿಸಿದರು. ಈ ಅರ್ಥದಲ್ಲಿ ಧರ್ಮವಿಲ್ಲದ ರಾಜಕೀಯವನ್ನು ಅವರು ಒಪ್ಪಲಿಲ್ಲ.

“ನನಗೆ ಧರ್ಮವಿಲ್ಲದ ರಾಜಕೀಯ ಒಪ್ಪಿತವಲ್ಲ. ಆದರೆ ನನ್ನ ದೃಷ್ಟಿಯಲ್ಲಿ ಧರ್ಮವೆಂದರೆ ಅಂಧಾನುಸರಣೆಯ, ಮೂಢಭಕ್ತಿಯ, ದ್ವೇಷದ, ಕಚ್ಚಾಟದ ನಲೆಯಲ್ಲ. ಸಹನೆ ಸಂಯಮಗಳ ಸಾರ್ವತ್ರಿಕ ಧರ್ಮವನ್ನು ನಾನು ಒಪ್ಪುತ್ತೇನೆ. ಈ ಅರ್ಥದಲ್ಲಿ ನೈತಿಕತೆಯಿಲ್ಲದ ರಾಜಕೀಯ ಯೋಗ್ಯವಲ್ಲವೆಂದು ನಂಬುತ್ತೇನೆ” (೨೭-೧೧-೧೯೨೪-ಯಂಗ್ ಇಂಡಿಯಾ).

ಗಾಂಧೀಜಿಯವರ ಧರ್ಮ ಕಲ್ಪನೆಯಲ್ಲಿ ನೈತಿಕತೆಯ ಮೊದಲ ಸ್ಥಾನವೆನ್ನುವುದು ಮೇಲಿನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಧರ್ಮ ಮತ್ತು ನೈತಿಕತೆಗಳನ್ನು ಸಂವಾದಿಯಾಗಿ ಸ್ವೀಕರಿಸಿದ ಆತ್ಮನಿಷ್ಠ ಗಾಂಧೀಜಿಯವರು ಹಿಂದೂಧರ್ಮಿಯಾಗಿದ್ದೂ ಮುಸ್ಲಿಮರನ್ನು ಪ್ರೀತಿ ವಿಶ್ವಾಸದಿಂದ ಕಾಣಲು ಸಾಧ್ಯವಾದದ್ದು ಇಂಥ ಉದಾರವಾದಿ ನೆಲೆಯ ನಡವಳಿಕೆಯಿಂದ; ಜಡ ಧರ್ಮದ ನೆಲೆಗಳನ್ನು ಮೀರಿದ ಮಾನವೀಯ ಅಂತಃಕರಣದಿಂದ.

ಮೀರುವ ಮನೋಧರ್ಮದಿಂದ ಚಲನಶೀಲತೆಗೆ ಕಾರಣವಾಗುವ ಗಾಂಧೀಜಿ ಕೆಲವು ವಿಷಯಗಳಲ್ಲಿ ಧಾರ್ಮಿಕ ಜಡತೆಗೆ ಜೋತುಬಿದ್ದರೇನೊ ಎಂಬ ಅನುಮಾನಕ್ಕೆ ಅವಕಾಶವಿದೆ. ನಮ್ಮ ದೇಶದ ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಚರ್ಚಾಸ್ಪದವಾಗಿವೆ. ವಿವಾದಕ್ಕೆಡೆಕೊಡುತ್ತವೆ. “ವಂಶಪಾರಂಪರ್ಯದ ನಿಯಮಗಳು ನಿತ್ಯನಿಯಮಗಳೆಂದು ನನ್ನ ಭಾವನೆ. ಅವುಗಳನ್ನು ಬದಲಾಯಿಸಲು ಮಾಡುವ ಪ್ರಯತ್ನದಿಂದ ಗೊಂದಲವುಂಟಾಗುತ್ತದೆ.” ಎಂದು ಅಭಿಪ್ರಾಯಪಡುವ ಗಾಂಧೀಜಿ ವರ್ಣಾಶ್ರಮದ ವಿಷಯಕ್ಕೆ ಬಂದಾಗ ಹಿಂದೂ ಸನಾತನಿಯಾಗಿ ಬಿಡುತ್ತಾರೆ. “ವರ್ಣಾಶ್ರಮ ಅಥವಾ ಜಾತಿಪದ್ಧತಿ ಮನುಷ್ಯ ಸ್ವಭಾವಕ್ಕೆ ಅಂಟಿಕೊಂಡಿದೆ. ಹಿಂದೂ ಧರ್ಮವು ಅದನ್ನು ವಿಜ್ಞಾನದ ಮಟ್ಟಕ್ಕೇರಿಸಿದೆ” ಎಂದು ಸಾರುತ್ತಾರೆ. ಸ್ವಭಾವಕ್ಕೆ ಅಂಟಿಕೊಂಡು ಬಂದಿರುವುದು ಒಂದು ವಾಸ್ತವವಾದರೂ ವರ್ಣಾಶ್ರಮವನ್ನು, ಜಾತಿಪದ್ಧತಿಯನ್ನು, ಹಿಂದೂ ಧರ್ಮವು ವಿಜ್ಞಾನವನ್ನಾಗಿಸಿದೆಯೆಂಬ ಪ್ರಶಂಸೆಯನ್ನು ಖಂಡಿತ ಒಪ್ಪಲಾಗದು. ಹಿಂದೂ ಧರ್ಮದ ಜಡತೆಯನ್ನು ಮೀರಿದ ಮಾತು ಮತ್ತು ನಡೆವಳಿಕೆಗಳನ್ನು ತೋರಿದ ಬದುಕಿದ, ಗಾಂಧೀಜಿ ಈ ವಿಷಯದಲ್ಲಿ ವಸ್ತುಸ್ಥಿತಿಯ ಬದಲಾವಣೆಗೆ ಬದಲಾಗಿ ವಸ್ತುಸ್ಥಿತಿಯ ಒಪ್ಪಿಗೆಯಲ್ಲಿ ಸಂತೃಪ್ತರಾದಂತೆ ಕಾಣುತ್ತದೆ. ಆದರೆ ಇದೇ ಗಾಂಧೀಜಿ ಅಸ್ಪೃಶ್ಯತೆಯನ್ನು ಕಟುವಾಗಿ, ದೃಢವಾಗಿ ವಿರೋಧಿಸುತ್ತಾರೆ. “ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಒಂದು ಪಾಪ ಕೃತ್ಯ” ವೆಂದು ಭಾವಿಸಿದ್ದ ಗಾಂಧೀಜಿ “ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಅಂಗವಾಗಿ ನಾವು ಉಳಿಸಿಕೊಂಡಿರುವವರೆಗೆ ನಮಗೆ ಸ್ವಾತಂತ್ರ್ಯ ದಕ್ಕದು. ನಮ್ಮ ಅಸಹಾಯಕ ಬಂಧುಗಳಿಗೆ ನಾವು ಮಾಡಿರುವ ಕ್ರೌರ್ಯದ ಪೂರ್ಣ ಪಾಪದಿಂದ ನೀವು ವಿಮೋಚಿತರಾಗದಿದ್ದರೆ ನಿಮಗೆ ಮೃಗಗಳಿಗೂ ಯಾವ ವ್ಯತ್ಯಾಸವೂ ಇಲ್ಲ” ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಹಾಗಾದರೆ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮವನ್ನು ಬದಲಾಗದ ವಾಸ್ತವವೆಂದು ನಂಬಿ, ಅದರಲ್ಲಿರುವ ಕ್ರೌರ್ಯದ ಕೆಲವು ಅಂಶಗಳ ನಿವಾರಣೆಯನ್ನು ಮಾತ್ರ ಗಾಂಧೀಜಿಯವರು ಇಷ್ಟಪಟ್ಟರೆ ಎಂಬ ಅನುಮಾನ ಮೂಡುತ್ತದೆ. ಇಲ್ಲಿ ಗಾಂಧೀಜಿ ವಾಸ್ತವವಾದಿಯೊ ವರ್ಣಾಶ್ರಮವಾದಿಯೊ ಎಂಬ ಪ್ರಶ್ನೆ ಏಳುತ್ತದೆ. ಅದೇನೇ ಇದ್ದರೂ ಅಸ್ಪೃಶ್ಯತೆ ವಿರೋಧದ ಬಗ್ಗೆ ಸ್ಪಷ್ಟ ನಿಲುವು ತಳೆದದ್ದು ಸಮಾಧಾನ ತರುತ್ತದೆ.

ಒಂದು ಅಂಶವನ್ನು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಳ್ಳಬೇಕು. ಗಾಂಧೀಜಿಯವರು ಪರಸ್ಪರ ವಿರುದ್ಧಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದುಂಟು. ಸಾಂದರ್ಭಿಕ ಹೇಳಿಕೆಗಳನ್ನು ಒಟ್ಟಿಗೇ ಇಟ್ಟು ನೋಡಿದಾಗ ಕೆಲವೊಮ್ಮೆ ಅಭಿಪ್ರಾಯಗಳ ಅಸಂಗತ ನೆಲೆ ಎದ್ದು ಕಾಣುತ್ತದೆ. ಈ ಅಂಶ ಗಾಂಧೀಜಿಯವರಿಗೂ ಗೊತ್ತಿತ್ತು. ‘ನಾನು ಪರಸ್ಪರ ಅಸಂಗತ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿರುವುದನ್ನು ಒಪ್ಪುತ್ತೇನೆ’ ಎಂದು ಅವರು ಹೇಳಿದ್ದಾರೆ. ಇಷ್ಟಾದರೂ ವರ್ಣಾಶ್ರಮ ಪದ್ಧತಿ ಬಗ್ಗೆ ಅವರ ಅಭಿಪ್ರಾಯವನ್ನು ಸಾಂದರ್ಭಿಕವೆಂದು ಹೇಳಿ ರಿಯಾಯಿತಿ ಕೊಡಲು ಸಾಧ್ಯವಿಲ್ಲ. ನಮ್ಮ ದೇಶದ ‘ಸಾಂಪ್ರದಾಯಿಕ ಮಠಾಧಿಪತಿ ಮನಸ್ಸು’ ಈ ‘ಮಹಾತ್ಮ’ರಲ್ಲಿ ಕೆಲಸ ಮಾಡಿದ ಪರಿಣಾಮ ದಿಂದ ವರ್ಣಾಶ್ರಮವನ್ನು ವೈಜ್ಞಾನಿಕವೆಂದೂ ವಾಸ್ತವವೆಂದು ಒಪ್ಪಿದ್ದಾರೆಂದು ಹೇಳಬೇಕಾಗುತ್ತದೆ. ಆದರೆ ಗಾಂಧೀಜಿಯವರನ್ನು ಅಪ್ರಸ್ತುತರೆಂದು, ಅಪಾಯಕಾರಿಗಳೆಂದೂ ಹೇಳಲು ಈ ಅಭಿಪ್ರಾಯವನ್ನು ಅಸ್ತ್ರವಾಗಿ ಬಳಸಲು ಶಕ್ತಿಗಳು ಅವರ ಒಟ್ಟು ವ್ಯಕ್ತಿತ್ವವನ್ನು ಮರೆಯುತ್ತಿದ್ದಾರೆಂದು ಇದೇ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ನಮಗೆ ಒಪ್ಪದ ಒಂದು ಮುಖ್ಯ ಅಭಿಪ್ರಾಯವನ್ನು ಮುಂದೆ ಮಾಡಿ ಗಾಂಧೀಜಿಯವರನ್ನು ನಿರಾಕರಿಸುವುದು ಚಾರಿತ್ರಿಕ ಹಂತವೊಂದನ್ನು ಅಲಕ್ಷ ಮಾಡಿದಂತಾಗುತ್ತದೆ. ವರ್ಣಾಶ್ರಮ ಮತ್ತು ಜಾತಿ ಪದ್ಧತಿಯ ಪರವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಗಾಂಧೀಜಿಯವರಲ್ಲಿ ಕೆಲಸ ಮಾಡಿದ ಹಿಂದೂಧರ್ಮಿಯತೆಯು ಅವರ ನಿತ್ಯ ನಡವಳಿಕೆಯಲ್ಲಿ ಮನೆಮಾಡಿಕೊಂಡಿತ್ತು ಎಂಬ ಪರಿಶೀಲನೆ ತುಂಬಾ ಮುಖ್ಯ. ಗಾಂಧೀಜಿಯವರು ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಪಡುತ್ತಿದ್ದರಾದರೂ ಅದರ ಜಡತ್ವವನ್ನು ಆರಾಧಿಸಲಿಲ್ಲ; ಜನ ವಿರೋಧಿ ನೆಲೆಗಳನ್ನು ಪೋಷಿಸಲಿಲ್ಲ. ಸ್ವತಃ ಹಿಂದೂ ಮೂಲಭೂತವಾದಿಗಳ ವಿರೋಧಕ್ಕೆ ಪಾತ್ರರಾದರು; ಅವರಿಂದ ಹತ್ಯೆಗೀಡಾದರು. ಆದ್ದರಿಂದ, ಚಾರಿತ್ರಿಕ ಮಹತ್ವದ ಪಾತ್ರ ವಹಿಸಿದ್ದ ಗಾಂಧೀಜಿಯವರ ವ್ಯಕ್ತಿತ್ವವನ್ನು ಇಡಿಯಾಗಿ ನಿರಾಕರಿಸುವ ಪ್ರವೃತ್ತಿ ಹಸಿ ಹಸಿ ಆತುರತನದಿಂದ ಕೂಡಿದೆ. ಹೀಗೆಂದ ಕೂಡಲೇ ಗಾಂಧೀಜಿಯವರ ಎಲ್ಲ ಅಭಿಪ್ರಾಯಗಳನ್ನು ನಾವು ಒಪ್ಪ ಬೇಕಾಗಿಲ್ಲ; ನನ್ನಂಥವರಿಗೆ ಅದು ಸಾಧ್ಯವೂ ಇಲ್ಲಾ. ಆದರೆ ಅವರ ಚಾರಿತ್ರಿಕ ಪಾತ್ರವನ್ನು ಗೌಣಗೊಳಿಸುವ ಪ್ರಯತ್ನಗಳು ಖಂಡಿತ ಪ್ರಬುದ್ಧ ಮನಸ್ಸಿನಿಂದ ಕೊಡಿರುವುದಿಲ್ಲ.

ಒಟ್ಟಾರೆ ಹೇಳುವುದಾದರೆ ಗಾಂಧೀಜಿಯವರು ವರ್ಣಾಶ್ರಮ ಮತ್ತು ಜಾತಿ ಪದ್ಧತಿಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಒಪ್ಪಲು ಸಾಧ್ಯವಾಗದು. ಭಗತ್‌ಸಿಂಗ್ ಮುಂತಾದ ಕ್ರಾಂತಿಕಾರಿಗಳನ್ನು ಬ್ರಿಟಿಷರು ಗಲ್ಲಿಗೆ ಏರಿಸುವಾಗ ಗಾಂಧೀಜಿ ವಹಿಸಿದ್ದ ದಿವ್ಯ ಮೌನವನ್ನು ಮನ್ನಿಸಲಾಗದು. ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣಾ ರಂಗವನ್ನು ಕಲ್ಪಿಸಿದ ವಿಚಾರ ವಿರುದ್ಧ ೧೯೩೨ ರಲ್ಲಿ ಗಾಂಧೀಜಿಯವರು ಕೈಗೊಂಡ ಆಮರಣಾಂತ ಉಪವಾಸ ಸತ್ಯ ಗ್ರಹವೂ ಚರ್ಚಾಸ್ಪದ ವಾದುದು. ಪಾಪ-ಪುಣ್ಯಗಳ ನೆಲೆಯಲ್ಲಿ ಎಲ್ಲವನ್ನೂ ನೋಡುತ್ತ ಹಿಂದೆ ಸಂಭವಿಸಿದ ಬಿಹಾರದ ಭೂಕಂಪವನ್ನು ‘ಅಲ್ಲಿನ ಜನರ ಪಾಪಕ್ಕೆ ದೇವರ ವಿಧಿಸಿದ ಶಿಕ್ಷೆ’ ಎಂದು ವ್ಯಾಖ್ಯಾನಿಸಿದ್ದನ್ನು ಒಪ್ಪಲಾಗದು. ಹೀಗೆ ನಾವು ಒಪ್ಪದ ಅನೇಕ ಅಭಿಪ್ರಾಯಗಳು ಗಾಂಧೀಜಿಯವರಲ್ಲಿದ್ದರೂ ಅವರ ಪ್ರಾಮಾಣಿಕತೆ ಪ್ರಶ್ನಾತೀತವಾದುದು. ಸ್ವದೇಶಿ ಚಳುವಳಿಯನ್ನು ಕಟ್ಟಿ ಬೆಳೆಸಿದ ಶ್ರಮ ಮತ್ತು ಕ್ರಮ ಅನನ್ಯವಾದುದು. ಗುಡಿ ಕೈಗಾರಿಕೆಗಳ ಸ್ಥಾಪನೆಯನ್ನು ಪ್ರತಿಪಾದಿಸಿದ ಸ್ವಾವಲಂಬಿ ಆರ್ಥಿಕ ನೀತಿ ಆದರ್ಶ ಪ್ರಿಯವಾದುದು. ಗಾಂಧೀಜಿಯವರ ೧೨೫ನೇ ಜನ್ಮದಿನದ ಸಂದರ್ಭದಲ್ಲಿ ಅವರನ್ನು ವಿಮರ್ಶಾತ್ಮಕವಾಗಿ ಒಪ್ಪಿಸುವ, ಚಾರಿತ್ರಿಕ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುವ ಗೌರವವನ್ನು ತೋರಬೇಕಾದ್ದು, ಮೌನದಲ್ಲೇ ಗಾಂಧೀಜಿ ಯವರೊಂದಿಗೆ ಮಾತುಕತೆಯಾಡುತ್ತ, ಸಂವಾದಿಸುತ್ತ, ಸ್ಮರಿಸಬೇಕಾದ್ದು ನಮಗೆ ಹೆಚ್ಚು ಗೌರವಯುತವಾದ ಸಂಗತಿಯಾಗಿದೆ.
*****
೦೯-೧೦-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೨
Next post ನವಿಲುಗರಿ – ೧೫

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys