ಬೇರೊಂದು ದಾರಿಯ ಬಯಕೆ

ಬೇರೊಂದು ದಾರಿಯ ಬಯಕೆ

ಅನೇಕ ಬಾರಿ ಇಂಥ ಕನಸು ಬಿದ್ದಿದೆ. ನನ್ನ ಎಡಗಡೆಗೆ ದೊಡ್ಡದೊಂದು ಬೆಟ್ಟ. ಅದರ ತುಂಬ ದೊಡ್ಡ ಕಲ್ಲು ಬಂಡೆಗಳು. ನುಣ್ಣನೆಯ, ಕಪ್ಪನೆಯ ಬಂಡೆಗಳು. ಅಲ್ಲಲ್ಲಿ ಬಂಡೆಯ ಮೇಲೆ ಮಳೆಯ ನೀರು ಇಳಿದು, ಹರಿದ ಆಗಿರುವ ಗುರುತುಗಳು. ಬೆಟ್ಟದ ಬುಡಕ್ಕೆ ಹೋಗಲು ಮಣ್ಣಿನ ದಾರಿ. ಅಲ್ಲೆ ಎಲ್ಲೋ ಮಸುಕು ಮಸುಕಾಗಿ ಕಾಣುವ ಕಲ್ಲಿನ ಮಂಟಪ. ಅದರೆ ಬೆಟ್ಟದ ಮೇಲೆ ಏರುವ ದಾರಿಯಲ್ಲಿ ಬಹಳ ಸ್ಪಷ್ಟವಾಗಿ ಕಾಣುವ ಮಂಟಪದ ಆಕಾರ. ಬಂಡೆಗಳ ನಡುವೆ ನುಸುಳಿ ಸಾಗುವ ಕಾಲು ಹಾದಿ. ಕೆಲವೊಮ್ಮೆ ಮೆಟ್ಟಿಲುಗಳು. ಬಹಳ ಜನ. ಅಯ್ಯೋ ಇಷ್ಟೊಂದು ಜನ ಆಗಲೇ ಸೇರಿದ್ದಾರೆಯಲ್ಲ! ನಾನು ಇದ್ದೇನೆ ಆದರೆ ಕಾಣುತ್ತಿಲ್ಲ. ಬೆಟ್ಟ ಹತ್ತುತ್ತಿದ್ದಂತೆ ಎರಡೂ ಬದಿಗೆ ಕೋಟೆ ಗೋಡೆಗಳು. ಯಾವುದೋ ಮನೆಯಂಥ ಮಠ. ಅಲ್ಲೊಬ್ಲ ಪಂಚೆ ಉಟ್ಟ ಮಧ್ಯವಯಸ್ಸು ಮೀರಿದ ಮನುಷ್ಯ. ಯಾರೋ ಒಬ್ಬಾಕೆ ಮಹಿಳೆ. ಅಡುಗೆ ಮಾಡುತ್ತಲೋ ಮನೆ ಕೆಲಸ ಮಾಡುತ್ತಲೋ ಇದ್ದಾಳೆ. ಗೋಡೆಯಲ್ಲಿ ಒಂದು ಗೂಡು. ಅದು ಗೂಡಲ್ಲ. ಗುಹೆ. ಗುಹೆಯಲ್ಲ. ಎಲಿಗೋ ಕರೆದೊಯ್ಯುವ ದಾರಿ. ತಟ್ಟನೆ ಎಚ್ಚರ. ಇದು ಈಗ ಹೇಳುತ್ತಿರುವಂತಿಯೇ ಬಿದ್ದ ಕನಸಲ್ಲ. ಆಗಾಗ ಅಷ್ಟಿಷ್ಟು ಬಿದ್ದದ್ದು. ಹಲವು ಕನಸುಗಳ ವಿವರ ನೆನಪಲ್ಲಿ ಸೇರಿ, ಬೆರೆತು ಹೀಗೆ ಒಂದು ಕತೆಯಾಗಿ ಅಕ್ಷರ ರೂಪ ಪಡೆದು ನೀವು ಅದನ್ನು ಓದುತ್ತಿದ್ದೀರಿ. ಆದರೆ ನನ್ನ ಕನಸಿನಲ್ಲಿ ನಾನು ಎಂದೂ ಅ ದಾರಿಯಲ್ಲಿ ಹೋಗಿಲ್ಲ. ಬೆಟ್ಟದ ತುದಿ ತಲುಪಿದ್ದೂ ಇಲ್ಲ. ಈ ಕನನು ಶಿವಗಂಗೆಯ ಬೆಟ್ಟ, ಗುಜರಾತ್‍ನಲ್ಲಿರುವ ಗಿರಿನಾರ್, ದೌಲತ್ತಾಬಾದ್, ಚಿತ್ರದುರ್ಗದ ಕೋಟೆ, ಹಂಪಿಯಲ್ಲಿ ಕಂಡ ಬಂಡೆಗಳು, ಮೊಳಕಾಲ್ಮೂರುವಿನ ಸುತ್ತಲ ಭೂದೃಶ್ಯ ಎಲ್ಲ ಸೇರಿ ಆದವು ಇರಬಹುದು.

ಈಗ ಹೇಗೋ ಚಿಕ್ಕವನಾಗಿದ್ದಾಗಲೂ ಹಾಗೇ ಇದ್ದೆ ಅನ್ನಿಸುತ್ತದೆ. ಈಗ ಬರೆಯುತ್ತಿರುವಾಗ ಅನ್ನಿಸುತ್ತಿದೆ-ಈ ಅಂಕಣಕ್ಕಾಗಿ ಬರೆಯುತ್ತಿದ್ದೇನಲ್ಲ, ಅದನ್ನು ಬಿಟ್ಟು ಬೇರೆ ಇನ್ನೇನೋ ಮಾಡುತ್ತಿರಬೇಕಿತ್ತೋ ಏನೋ. ಚಿಕ್ಕ ಹುಡುಗನಾಗಿದ್ದಾಗ ಅನಿಸುತ್ತಿತ್ತು-ನಮ್ಮ ಮನೆಗಿಂತ, ನನ್ನ ಅಪ್ಪ ಅಮ್ಮನಿಗಿಂತ ಪಕ್ಕದ ಮನೆಯ ಮಂಜುನಾಥ, ಅವನ ಅಪ್ಪ ಅಮ್ಮ ಅವರ ಮನೆಯಲ್ಲಿ ನಾನು ಇರುವಂತಿದ್ದರೆ ಎಂದು. ಒಳ್ಳೆಯ ಬರಹ ಓದಿದಾಗ ಅನ್ನಿಸುತ್ತದೆ -ನಾನು ಇದನ್ನು ಬರೆಯಬೇಕಿತ್ತು ಎಂದು. ಚಳ್ಳಕೆರೆಯ ಸಮೀಪದ ದೊಡ್ಡೇರಿಯಲ್ಲಿ ಇರುವ ಅಸಾಮಾನ್ಯ ಸಾಮಾನ್ಯ ಮಲ್ಲಣ್ಣನವರನ್ನು ನೋಡಿದಾಗ ಹೀಗೆ ನಾನೂ ಇರಬಹುದಿತ್ತಲ್ಲವೆ ಅನ್ನಿಸುತ್ತದೆ. ಅಪ್ಪ ಹೇಳಿದಂತೆ ಕೇಳಿದ್ದರೆ ದೊಡ್ಡ (ಹಾಗೆಂದರೇನೋ?) ಅಧಿಕಾರಿಯಾಗಬಹುದಾಗಿತ್ತಲ್ಲವೇ? ಬೇರೆ ಯಾರನ್ನು ನೋಡಿದರೂ ಅವರ ಕೆಲಸಗಳನ್ನು ಕಂಡರೂ ನಾನೂ ಇದನ್ನು ಮಾಡಬೇಕಿತ್ತಲ್ಲ, ಮಾಡಬಹುದಿತ್ತಲ್ಲ ಅನ್ನಿಸುತ್ತದೆ. ತೈಲಧಾರೆಯಂತೆ ನನ್ನ ಮನಸ್ಸನ್ನು ನಿನ್ನಲ್ಲಿ ಅನುಗೊಳಿಸು ಎಂಬ ಹಾಡಿನ ಸಾಲು ಕೇಳಿದಾಗ ಅರೆ, ಅದೇಕೆ ನನ್ನ ಮನಸ್ಸು ತೈಲಧಾರೆಯಂತೆ ಇರುವುದೇ ಇಲ್ಲ, ನೆಲದ ಮೇಲೆ ಎರಚಿ ಚೆಲ್ಲಿದ ನೀರಿನಂತೆ ಆಗಿಬಿಟ್ಟಿದೆ ಅನ್ನಿಸುತ್ತದೆ. ನೀರು ಎಣ್ಣೆಯಾದೀತೆ? ಹಿಡಿಯಬಹುದಾಗಿದ್ದ ದಾರಿಗಳನ್ನು ಆಯ್ಕೆ ಮಾಡಿಕೊಂಡೆನೋ ಅಥವ ಕಾಲಿನ ಕೆಳಗಿನ ದಾರಿಗಳಿಗೇ ವಶವಾಗಿ ಒಯ್ದತ್ತ ಸಾಗುತ್ತ ಹೋಗಿದ್ದೇನೋ ಗೊತ್ತೇ ಆಗುತ್ತಿಲ್ಲ. ರೈಲಿನಲ್ಲಿ ಪ್ರಯಾಣ ಮಾಡುತ್ತಾ ಸ್ಟೇಶನ್ನುಗಳು ಬಂದಾಗ ಅಶ್ಚರ್ಯವಾಗುತ್ತದಲ್ಲ ಹಾಗೆ. ನಾವು ಕುಳಿತಿರುವ ರೈಲು ಕಂಬಿಗಳನ್ನು ಬದಲಾಯಿಸಿದ್ದು ಗೊತ್ತೇ ಆಗುವುದಿಲ್ಲ.

ಬಸವಣ್ಣನ ವಚನಗಳಲ್ಲಿ ದಾರಿಯ ಮಾತು ಮತ್ತೆ ಮತ್ತೆ ಬರುತ್ತದೆ. ಮುನ್ನಿನವರು ಹೋದ ಪಥ ಕಷ್ಟ ಕಾಣಿರಣ್ಣ ಅನ್ನುತ್ತಾನೆ ಒಂದು ವಚನದಲ್ಲಿ. ಹೋಗುತ್ತಿರುವುದೇ ದಾರಿಯೋ? ಮುನ್ನಿನವರು ಹೋಗಿರದ ದಾರಿ ಇದೆಯೋ? ದಾರಿ ಅಂದರೇನೇ ಹಲವು ಜನ ನಡೆದು ಆದದ್ದಲ್ಲವೇ? ದಾರಿಯಲ್ಲದ ಖಾಲಿ ಜಾಗ ಯಾವುದಾದರೂ ಈ ಭೂಮಿಯ ಮೇಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಎಲ್ಲರೂ ನಡೆಯುತ್ತಿರುವುದು ಒಂದೇ ದಾರಿ ಇರಬಹುದೋ ಏನೋ. ನನಗೆ ಬಿದ್ದಂಥವೇ ಬೀಳುವಂಥವೇ ಕನಸುಗಳು ಎಲ್ಲರಿಗೂ ಬಿದ್ದಿದ್ದಾವು. ನಾವು ಸುಮ್ಮಸುಮ್ಮನೆ ನಮ್ಮ ದಾರಿ, ನಿಮ್ಮ ದಾರಿ, ಬೇರೆ ಇನ್ನೊಂದು ದಾರಿ ಎಂದೆಲ್ಲ ಕಲ್ಪಿಸಿಕೊಳ್ಳುತ್ತೇವೋ? ಇನ್ನು ಯಾವುದೋ ದಾರಿ ಹಿಡಿದಿದ್ದರೆ ಇನ್ನು ಎಲ್ಲಿಗೋ ತಲುಪುತ್ತಿದ್ದೆವು ಎಂದು ಸುಮ್ಮ ಸುಮ್ಮನೆ ಕಸಿವಿಸಿ ಪಡುತ್ತೇವೆಯೋ ಏನೋ.

ಅಮೆರಿಕದ ರಾಬರ್‍ಟ್ ಫ್ರಾಸ್ಟ್ ಎಂಬ ಕವಿಯ ಸುಪ್ರಸಿದ್ಧ ಕವನವೊಂದಿದೆ. ಕಾಡಿನಲ್ಲಿ ಎರಡು ದಾರಿಗಳು ಎದುರಾಗುತ್ತವೆ. ಒಂದರ ತುಂಬ ಎಲೆ ತರಗು. ಇನ್ನೊಂದು ಹೆಚ್ಚು ಜನ ನಡೆದ ಗುರುತು ಉಳ್ಳ ಸಾಫಾದ ದಾರಿ. ಜನ ನಡೆದಾಡಿರದ ದಾರಿಯನ್ನೇ ಆರಿಸಿಕೊಳ್ಳುತ್ತಾನೆ ಪಥಿಕ. ಇನ್ನೊಂದು ದಾರಿಯಲ್ಲಿ ಮತ್ತೊಂದು ದಿನ ಸಾಗೋಣ ಅಂದುಕೊಳ್ಳುತ್ತಾನೆ. ಆದರೆ ದಾರಿ ಮತ್ತೊಂದು ದಾರಿಗೆ, ಅದು ಇನ್ನೊಂದಕ್ಕೆ ಕರೆದೊಯ್ಯುತ್ತ ಮತ್ತೆ ಅದೇ ಜಾಗಕ್ಕೆ ವಾಪಸ್ಸು ಬರಲು ಆಗುವುದೇ ಇಲ್ಲ. ಆರಿಸಿಕೊಂಡ ದಾರಿಯಿಂದಲೇ ಏನೇನೆಲ್ಲ ವ್ಯತ್ಯಾಸಗಳಾಗಿಬಿಟ್ಟವು ಎಂದು ಅಚ್ಚರಿಪಡುತ್ತಾನೆ.

ಪುಣ್ಯವಂತ ಆ ಪಥಿಕ. ದಾರಿಯನ್ನು ಆಯ್ಕೆ ಮಾಡಿಕೊಂಡೆ ಎಂಬ ಎಚ್ಚರ ಅವನಿಗೆ ಇದೆ. ಎಲ್ಲೋ ತಲುಪಿಬಿಟ್ಟೆ ಎಂದೂ ಅವನಿಗೆ ಗೊತ್ತಿದೆ. ಆದರೆ ಹೌದೆ? ದಾರಿಯನ್ನು ನಾವು ಆಯ್ದುಕೊಳ್ಳುತ್ತೇವೆಯೋ ಅಥವ ಸುಮ್ಮನೆ ಮಾರ್ಗವಶ ಆಗುತ್ತೇವೆಯೋ? ನೋಡಿ. ಮಾರ್ಗ ಎಂಬ ಮಾತಿಗೆ ಮೃಗಗಳು, ಅಂದರೆ ಜಿಂಕೆಗಳು, ಸಾಗುವ ಜಾಡು ಎಂಬ ಅರ್ಥವೂ ಇದೆಯಂತೆ. ಮಾರ್ಗವಶ ಅಗುವುದೆಂದರೆ ದಾರಿಯೊಬ್ಬ ಬೇಟೆಗಾರ, ಮತ್ತೆ ದಾರಿಯ ಬೇಟೆಗೆ ತುತ್ತಾಗುವ ಜಿಂಕೆಗಳೋ ನಾವೆಲ್ಲ! ಹೋಗಲಿ ನಾವು ಬಂದು ತಲುಪಿದ್ದಾದರೂ ಎಲ್ಲಿಗೆ ಎಂದಾದರೂ ತಿಳಿಯುತ್ತದೆಯೋ ನಮಗೆ?

ನಾವು ತುಳಿಯಬಹುದಾಗಿದ್ದ, ಸಾಗಬಹುದಾಗಿದ್ದ ದಾರಿಗಳ ನೆನಪು, ಕಲ್ಪನೆಗಳಿಂದ ಬಿಡುಗಡೆಯೇ ಇಲ್ಲವೋ ಏನೋ. ಚಿಕ್ಕ ಹುಡುಗನಾಗಿದ್ದಾಗ ಓದಿದ್ದ ಮಕ್ಕಳ ಕಥೆ ನೆನಪಾಗುತ್ತಿದೆ. ಒಂದು ನರಿ ಇತ್ತಂತೆ. ಅದು ಒಂದು ಬಾರಿ ಭೂಮಿಯ ಬಳಿ ಒಂದು ಪೈಸೆ ಸಾಲ ತಗೆದುಕೊಂಡಿತ್ತಂತೆ. ಅಮೇಲೆ ದುಡ್ಡು ಸಿಕ್ಕಾಗ ಸಾಲ ವಾಪಸ್ಸು ಕೊಡುವ ಮನಸ್ಸಾಗಲಿಲ್ಲವಂತೆ. ತಪ್ಪಿಸಿಕೊಂಡು ಓಡಿಬಿಡುತ್ತೇನೆ ಎಂದು ಓಡಿತಂತೆ. ಎಲ್ಲಿ ಓಡಿದರೂ ನೆಲ ಕಾಲಕೆಳಗೇ ಇತ್ತಲ್ಲ, ಅದು ಕೊಡು ನನ್ನ ಸಾಲ, ಕೊಡು ನನ್ನ ಸಾಲ ಎಂದು ಕೇಳುತ್ತಲೇ ಇತ್ತಂತೆ. ಓಡಿ ಓಡಿ ಸುಸ್ತಾಗಿ ನರಿ ಸತ್ತುಹೋಯಿತಂತೆ. ದಾರಿಯೆಲ್ಲ ಭೂಮಿಯೇ ಆಗಿದ್ದರೆ, ಅಥವ ಭೂಮಿಯೆಲ್ಲ ದಾರಿಯೇ ಆಗಿದ್ದರೆ ಪಥಭ್ರಷ್ಟ, ದಾರಿ ತಪ್ಪಿದವರು ಅನ್ನುವ ಮಾತಿಗೆ ಏನರ್ಥ? ದಾರಿಯೇ ಇಲ್ಲವೇನೋ. ದಾರಿ ಎಂಬುದೇ ನಮ್ಮ ಕಲ್ಪನೆಯೋ ಏನೋ.

ಬಹುಶಃ ಅದಕ್ಕೇ ಇರಬೇಕು ಅಲ್ಲಮ ಪ್ರಭು ಹೀಗೆ ಹೇಳಿದ್ದು. ಅವನು ಹೇಳುತ್ತಾನೆ, ಅರಿವು ಎಂಬುದು ಸಾಮಾನ್ಯವಲ್ಲ. ಅದು ನೆಲವನ್ನು ಬಿಟ್ಟು ಮುಗಿಲಲ್ಲಿ ಮಿಂಚಾಗುವ ಕ್ರಿಯೆ ಎಂದು. ಆಕಾಶದಲ್ಲಿ ದಾರಿಗಳು ಇರಲಾರವೇ? ಅಕಾಶ ಗೊತ್ತಿಲ್ಲ. ಅದರೆ ಮಿಂಚಿಗೆ ನಿಗದಿಯಾದ ದಾರಿ ಇಲ್ಲ ಎಂದೇನೋ ತಿಳಿಯುತ್ತದೆ. ಹೊಳಪಿಗೆ ಹೊಳೆಯುವುದಷ್ಟೇ ಕೆಲಸ. ಬೆಳಕಿಗೆ ಎಲ್ಲೆಡೆ ವ್ಯಾಪಿಸುವುದೇ ಗುಣ.

ದಾರಿಗೆ ಬೆಳಕು ಬೇಕು ಎಂಬ ಪ್ರಾರ್ಥನೆ ಓದಿದ್ದೇನೆಯೇ ಹೊರತು ದಾರಿಯ ಹಂಗು ತೊರೆದು ನಾನೇ ಬೆಳಕು ಆಗುವುದು ಸಾಧ್ಯ ಎಂದು ಎಂದಾದರೂ ಅನ್ನಿಸಿದಂತಿಲ್ಲ. ಬೆಟ್ಟ ಹೆತ್ತಿಬಿಟ್ಟಿದ್ದೇನೆಯೋ, ಅಥವ ತುದಿ ತಲುಪಿ ಕೆಳಗೆ ಕಣಿವೆಗೆ ಬಂದುಬಿಟ್ಟಿದ್ದೇನೆಯೋ ಗೊತ್ತಿಲ್ಲ. ಹರಿವ ನದಿಗೆ ಮೈಯೆಲ್ಲ ಕಾಲು-ಅಂತೆ. ಅದರೆ ಇಷ್ಟು ಗೊತ್ತು. ಎಷ್ಟು ಕಷ್ಟಪಟ್ಟರೂ ಬೊಗಸೆಯಲ್ಲಿ ಹಿಡಿದ ನೀರು ನಿಲ್ಲದೆ ಚೆಲ್ಲಿಯೇ ಹೋಗುವಂತೆ ಈಗ
ಹಿಡಿದಿರುವುದನ್ನು ಬಿಟ್ಟು ನಾನು ಸಾಗಬಹುದಾಗಿದ್ದ ಇನ್ನೊಂದು ದಾರಿಯನ್ನು ಬಯಸುತ್ತಾ, ಕಲ್ಪಿಸಿಕೊಳ್ಳುತ್ತಾ ಬಹುಶಃ ಸುಮ್ಮಸುಮ್ಮನೆ ವ್ಯಥೆಪಡುತ್ತಾ, ಹತ್ತಬೇಕಾಗಿರುವ ಬೆಟ್ಟದ ಕನಸು ಕಾಣುತ್ತಾ ಇದ್ದೇಬಿಡುತ್ತೇನೆಯೋ ಏನೋ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣದ ಕನಸು
Next post ಎಂದಿನಂತಲ್ಲ

ಸಣ್ಣ ಕತೆ

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…