ಕಳಲೆಯೆಂಬ ಗ್ರಾಮದಲ್ಲಿ ಒಡೆಯರ ಜ್ಞಾತಿಗಳಿರುತ್ತಿದ್ದರು. ರಾಜ ಒಡೆಯರ ಕಾಲದಲ್ಲಿ ಆ ಗ್ರಾಮವನ್ನು ಲಕ್ಷ್ಮಿ ಕಾಂತಯ್ಯ ನೆಂಬಾತನು ಅನುಭವಿಸುತ್ತ ಭಿನ್ನೋದರರಾದ ತನ್ನ ಸಹೋದರರನ್ನು ಪೋಷಿಸುತ್ತಿದ್ದನು. ಆ ಸಹೋದರರಲ್ಲಿ ನಂದಿನಾಥಯ್ಯ, ಕಾಂತಯ್ಯ, ಚಂದ್ರಶೇಖರಯ್ಯರೆಂಬ ಮೂವರು-ಲಕ್ಷ್ಮೀ ಕಾಂತಯ್ಯನ ಬಲತಾಯಿ ಚನ್ನಾಜಯಮ್ಮಯ್ಯನ ಮಕ್ಕಳು-ಆ ಗ್ರಾಮವನ್ನು ತಾವೇ ಅನುಭವಿಸಬೇಕೆಂದು ದುರಾಲೋಚನೆಮಾಡಿ ಲಕ್ಷ್ಮೀ ಕಾಂತಯ್ಯನನ್ನು ಮೋಸದಿಂದ ಕೊಂದುಬಿಟ್ಟರು. ತರುವಾಯ ಮಲ್ಲರಾಜಯ್ಯನೆಂಬ ೫ ವರ್ಷದ ಹುಡುಗನನ್ನು ಕೊಲ್ಲಲು ಸಿದ್ದರಾದರು; ಆ ಹುಡುಗನು ರಾಜ ಒಡೆಯರ ಅಕ್ಕಂದಿರು ದೇವಾಜಮ್ಮಣ್ಣಿಯ ಮಗನೂ-ಲಕ್ಷ್ಮಿ ಕಾಂತಯ್ಯನ ಸಹೋದರನೂ ಆಗಿದ್ದನು. ಈ ಹುಡುಗನ ಕೊಲೆಗೆ ಈ ಮೂವರು ಸಿದ್ದರಾಗಿದ್ದು ಅವನನ್ನು ಹುಡುಕುತ್ತಲಿದ್ದರು.
ಆ ಕಾಲದಲ್ಲಿ ಆ ಹುಡುಗನು ಕುರುಬಗೇರಿಗೆ ಓಡಿದನು. ಅಲ್ಲಿ ಕುರುಬರ ‘ಹುಚ್ಚನ ಕರಿಯ’ ಎಂಬವನು ಆ ಬಾಲಕನನ್ನು ಗೋಪ್ಯವಾಗಿ ಸಂರಕ್ಷಿಸಿ, ರಾಜರ ಸೋದರಳಿಯನೆಂದು ತಿಳಿದು, ರಾತ್ರಿ ವೇಳೆಯಲ್ಲಿ ಹೊರಟು ಆ ಬಾಲಕನನ್ನು ತಂದು ರಾಜರಿಗೊಪ್ಪಿಸಿದನು. ರಾಜರು ಮಲ್ಲರಾಜಯ್ಯನ ವೃತ್ತಾಂತವನ್ನು ತಿಳಿದು ವ್ಯಸನ ಪಟ್ಟು ಆ ಮೂವರನ್ನು ಶಿಕ್ಷಿಸಲು ಸಂಕಲ್ಪ ಮಾಡಿಕೊಂಡರು.
ಅತ್ತಲಾಗಿ ಲಕ್ಷ್ಮೀಕಾಂತಯ್ಯನು ದುರ್ಮರಣಕ್ಕೆ ಸಿಕ್ಕ ಮೇಲೆ ಆತನ ಹೆಂಡತಿ ಲಿಂಗಾಜಮ್ಮಯ್ಯನೆಂಬುವಳು ಸಹಗಮನಕ್ಕೆ ಸಿದ್ಧಳಾದಳು. ಅಗ್ನಿಕುಂಡದಲ್ಲಿ ಧುಮುಕುವ ಮುನ್ನ ಆಕೆಯು “ನನ್ನ ಗಂಡನನ್ನು ಅನ್ಯಾಯದಿಂದ ವಧಿಸಿದ ಬಲ ಅತ್ತೇ ಮಕ್ಕಳ ಮೂವರ ವಂಶವೂ ನಷ್ಟವಾಗಲಿ; ಕಳಲೇ ಅರಸುಗಳು ಕೂಡ್ಲಾಪುರ ಬತ್ತದ ಅಕ್ಕಿಯನ್ನೇ ವಿಶ್ವಾಸದಿಂದ ಊಟಮಾಡುವದರಿಂದ ಆ ಅನ್ನವು ರಕ್ತದ ಕೂಳಿನಂತೆ ಆಗಲಿ; ನನ್ನ ಬಾಳು ತಪ್ಪಿಸಿದ ನನ್ನ ಗಂಡನ ವಂಶದ ಹೆಣ್ಣು ಮಕ್ಕಳು ಚನ್ನಾಗಿ ಬಾಳದೆ ಇರಲಿ; ಮತ್ತು, ಧರ್ಮಾತ್ಮರಾದ ಮಹೀಶರ ಮನೆತನದಲ್ಲಿ ಹುಟ್ಟಿದ ನನ್ನ ಬಲ ಅತ್ತೆಯಾದ ದೇವಾಜಮ್ಮಣ್ಣಿಯವರಿಗೆ ಪುತ್ರನ ವಂಶವು ನಡೆಯಲಿ” ಎಂದು ನುಡಿದಳು.
ವಯಸ್ಸು ಬಂದಮೇಲೆ ಮಲ್ಲರಾಜಯ್ಯನನ್ನು ರಾಜರು ದಳವಾಯಿತನಕ್ಕೆ ಗೊತ್ತುಮಾಡಿದರು. ಆದರೆ ಮಲ್ಲರಾಜಯ್ಯನು ಆ ಪದವಿಗೆ ಅಯೋಗ್ಯನಾಗಿದ್ದನು. ಕೆಲವು ದಿನಗಳಲ್ಲಿಯೇ ತನ್ನ ಮೊಮ್ಮಗನ ಮೂಲಕ ದಳವಾಯತನದ ಉಂಗುರವನ್ನು ರಾಜರಿಗೆ ಕಳಹಿಸಿಟ್ಟು ತಾವು ಸೋಮಾರಿಯಾಗಿಯೇ ಇದ್ದನು.
*****
[ವಂಶರತ್ನಾಕರ ಪುಟ ೪೬-೪೭ ; ವಂಶಾವಳಿ ಸಂ. ೧, ಪುಟ ೪೬, ೪೭ ಹೊಸ ಗೆಜಟಿಯರ್ ಸಂಪುಟ ೫, ಪುಟ ೬೮೭]