ನೀನು ನಡೆಯುವ ದಾರಿ ನನ್ನದಿರಲೆಂದು ನಾ
ಬೇಡುವೆನು ಅನುದಿನವು. ನಿನ್ನ ಹೆಜ್ಜೆಯ ಗುರುತು
ನನ್ನ ಬಿಜ್ಜೆಯದಾಗಲೆಂಬ ಹರಕೆಯ ಹೊರತು
ಮತ್ತಾವುದನ್ನು ತಿಳಿಯೆ. ಬಯಲಿನಾ ಕಾಡಿನಾ
ಸುಳಿವಿನಲಿ ನೀನಿರುವ ಹೊಳವಿರಲಿ ಚಿದ್ಘನಾ!
ನನ್ನ ಸಂಗಡಿಗ ನೀನೆಂಬ ಸಂಗತಿಯರಿತು
ನಡೆದ ದಾರಿಯೆ ದಾರಿ. ಸಾಗುವೆನು ಮೈಮರೆತು
ನಿನ್ನ ಜೊತೆಯಲಿ ಬೆರೆತು. ನೀನೆ ಇಲ್ಲದ ವಿನಾ
ಬಾಳುವೆ ವಿನಾಶವದು! ಕಂಡು ಬಿಡಬೇಕೆಂಬ
ಹಂಬಲವು ನನಗಿಲ್ಲ. ಬಾ ಬಳಿಗೆ ನೆಳಲಾಗಿ
ಕಾಣದಲೆ, ಸುಳಿಗಾಳಿಯಾಗಿ ಮೈಸೋಂಕದಲೆ!
ನಿನ್ನ ದನಿಯಲೆಯಂಚೆ ಬರಲು ನಿನ್ನನು ಕಾಂಬ
ಹಿಗ್ಗು ಬರುವದು ತಡವೆ? ಪಯಣ ಮುಗಿದಿರಲಾಗಿ
ನಲುಮೆಯಿಂದೊರಗುವದು ತಡವೆ ನಿನ್ನಂಕದಲಿ?
*****