ಗೌರಿ ಮೆಸ್ಸು

ಗೌರಿ ಮೆಸ್ಸು

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನೇ ದಿವಾನನೂ ಅವನೇ ಅರ್ಥಾತ್‌ ಸೀಮೆಸುಣ್ಣ ಹಿಡಿದಂತೆ ಪೊರಕೆಯನ್ನೂ ಹಿಡಿಯಬೇಕಿತ್ತು. ಎರಡು ಕೋಣಗಳ ವಿಶಾಲ ಬಯಲಿನ ಶಾಲೆಯಾದರೂ ಎಲ್ಲರನ್ನೂ ಒಂದೇ ಕೋಣಯಲ್ಲಿ ಕೂಡಿಹಾಕಿ ತನ್ನ ಕಣ್ಣಳತಯಲ್ಲೇ ಹುಡುಗರನ್ನು ಹಿಡಿತದಲ್ಲಿರಿಸಿ ಕೊಳ್ಳಬೇಕಿತ್ತು. ಹೇಗೋ ಹಳ್ಳಿ ಹೈಕಳ ವಿದ್ಯಾಭ್ಯಾಸವಂತೂ ಸಾಗಿತ್ತು. ಸರ್‍ಕಾರ ಶಾಲೆ ಮುಚ್ಚಬಹುದೆಂಬ ‘ಸ್ಮೆಲ್’ ಹೊಡಯುತ್ತಲೇ ಇದ್ದೊಬ್ಬ ಗುರುವೂ ಅಲ್ಲಿಂದ ಕಂಬಿಕಿತ್ತಿದ್ದ. ಮೊಬಳ್ಳಿಯವರಷ್ಟೇ ಅಲ್ಲ ಶಿವನಂಜೇಗೌಡರೂ ಆತಂಕಿತರಾಗಿದ್ದರು. ಕಾರಣ ಮೊಮ್ಮಗಳು ಅದೇ ಶಾಲೆಯಲ್ಲಿ ಓದುತ್ತಿದ್ದಳಲ್ಲ. ಶಾಲೆ ಮುಚ್ಚದಂತೆ ತಮ್ಮ ವ್ಯಾಪ್ತಿಗೆ ಬರುವ ಶಾಸಕನನ್ನು ಕಂಡು ದುಂಬಾಲುಬಿದ್ದರು. ಹುಡುಗರಂತೂ ಈಗ ಸರ್‍ವ ಸ್ವತಂತ್ರರು. ಹೂಲದಲ್ಲೂ ಗೇಯ್ಯದೆ ಸಗಣಿಯೂ ಎತ್ತದೆ ಕೂಲಿಗೂ ಹೋಗದೆ ತೋಪುಗಳಲ್ಲಿ ಅಂಡಲೆಯುತ್ತಾ ಕೆರೆಯಲ್ಲಿ ಈಜುತ್ತಾ ಪೋಲಿಬಿದ್ದವು. ಇಂತಹ ದುರ್‍ಭಿಕ್ಷದ ದಿನಗಳಲ್ಲೇ ರಾಮಮೂರ್‍ತಿ ಇಲ್ಲಿಗೆ ಶಿಕ್ಷಕನಾಗಿ ವರ್‍ಗಾವಣೆಯಾಗಿ ಬಂದಿದ್ದು. ಬ್ರಾಂಬ್ರ ಹುಡುಗನಂತೆ ತೆಳ್ಳಗೆ ಬೆಳ್ಳಗಿದ್ದ. ಅಬ್ಬಬ್ಬಾ ಅಂದರೆ ಮೂವತ್ತರ ಆಸುಪಾಸಿನವ. ಜೀನ್ಸ್‌ ಮೇಲೊಂದು ಜುಬ್ಬ ಬಗಲ ಚೀಲ ಅವನ ಪರ್‍ಮನಿಂಟ್‌ ಕಾಸ್ಟ್ಯೂಮ್. ಅವನ ನಡೆನುಡಿ ನಯನಾಜೂಕು ನೋಡಿದ ಗೌಡರು ಈ ಇಸುಂ ಭಾಳೋಟುದಿನ ಕಾಲ ಹಾಕಾಕಿಲ್ಲ ಕಣ್‌ ಶಾನುಭೋಗ ಅಂತ ಅಪಸ್ಪರ ತೆಗೆಯುತ್ತಲೇ ಬರಮಾಡಿ ಕೊಂಡಿದ್ದರು. ಆದರೆ ಅವರ ಊಹೆ ಹುಸಿಯಾಗಿತ್ತು.

ತಾನೇ ಮನೆಮನೆಗೆ ಹೋಗಿ ಹುಡುಗರ ಮಾತಾಪಿತೃಗಳ ಮನ ಒಲಿಸಿ ಮಸ್ಕಾ ಹೊಡೆದು ತೋಪುಸೇರಿದ್ದ ಕೆರೆ ಪಾಲಾಗಿದ್ದ ಹೈಕಳನ್ನೆಲ್ಲಾ ತಂದು ಶಾಲೆಯಲ್ಲಿ ಕೂಡಿಹಾಕಿದ್ದವನ ಪ್ರಥಮ ಸಾಹಸ. ಮೂರ್‍ತಿ ಮನಮುಟ್ಟುವಂತೆ ಪಾಠ ಮಾಡಿದ್ದಲ್ಲದೆ ಸ್ಲೇಟು ಬಳಪ ಪಠ್ಯಪುಸ್ತಕಗಳಿಲ್ಲದವರಿಗೆ ತಾನೇ ಸಿಟಿಯಿಂದ ತಂದುಕೊಟ್ಟು ಓದುವ ಆಸೆ ಅವರಲ್ಲಿ ಚಿಗುರೊಡೆಸಿದ. ಎ.ಇ.ಒ ಕಛೇರಿಗೆ ಅಲೆದಾಡಿ ಬಿಸಿಯೂಟದ ವ್ಯವಸ್ಥೆಗೆ ಮರುಜನ್ಮವಿತ್ತಿದ್ದವನ ದ್ವಿತೀಯ ಸಾಹಸ. ಆದರೆ ಪಾಠ ಮಾಡೋದೆ ಪುಳಿಯೊಗರೆ ಮಾಡೋದೆಯೆಂದು ಒಬ್ಬಂಟಿಗ ಹೊಯ್ದಾಡಿದ. ಕೆಲವರಿಗೆ ಬರೆಯಲು ಹಚ್ಚಿ, ಹಲವರಿಗೆ ಮಗ್ಗಿ ಹೇಳಿಸುತ್ತಲೇ ತರಕಾರಿ ಕತ್ತರಿಸಿದ. ಶಾಲೆಯ ಕಾರಿಡಾರ್‌ನಲ್ಲೇ ಸ್ಟವ್‌ ಹಚ್ಚಿ ದಿನವೂ ಚಿತ್ರಾನ್ನ ಪುಳಿಯೊಗರೆ, ಬಿಸಿಬೇಳಬಾತ್‌, ಉಪ್ಪಿಟ್ಟು ಅಂತ ತೋಚಿದ್ದನ್ನು ಮಾಡಿ ಬಡಿಸಿದ. ಕೆಲವು ಉಂಡವು. ಭಾಳೋಟು ಮಂದಿ ಅಂಗಿ ಒಡ್ಡಿ ಹಾಕಿಸಿಕೂಂಡು ಓಟಕಿತ್ತವು. ಮಕ್ಕಳಂತೂ ಈಗ ಶಾಲೆಯತ್ತ ಮುಖಮಾಡಿದವು. ಗೌಡರ ಮೊಮ್ಮಗಳು ಹದಿನಾರರ ಮಗ್ಗಿಯನ್ನು ಗಟ್ಟಿಮಾಡಿ ಹೇಳೋವಾಗ ಅಂಗಾಲಿನಿಂದ ನಡುನತ್ತಿವರಗೂ ಪುಳಕಿತರಾದ ಗೌಡರ ಸವಾರಿಯು ಶಾಲೆಯವರೆಗೂ ಬಿಜಯಂಗೈದಿತು. ಒಳಗಿನಿಂದ ಕಾಗುಣಿತದ ಕಲರವ, ಒಂದು ಎರಡು ಬಾಳಲೆ ಹರಡು, ಹದಿನೇಳ ಎರಡ್ಲ ಮೂವತುನಾಕು ಎಂಬ ಗದ್ದಲ ಬೀದಿವರೆಗೂ ಕೇಳಿಬರುತ್ತಿತ್ತು. ಶಾಲೆಯ ಹೊರಗಡೆಯ ಕಂಬಗಳ ಮೇಲ ಬುದ್ಧ ಬಸವ ಅಂಬೇಡ್ಕರರ ಉಕ್ತಿಗಳನ್ನು ಬಣ್ಣದಲ್ಲಿ ಮೂಡಿಸುವಲ್ಲಿ ರಾಮಮೂರ್‍ತಿ ತನ್ಮಯನಾಗಿದ್ದ. ಗೌಡರು ಕನ್ನಡಕ ಮೇಲೆತ್ತಿ ಬಂದೋಟು ಬಾಯಾಡಿಸಿದರು. ಇಂವಾ ನಾರವ ಇಂವಾ ನಮ್ಮವ, ಅಸೆಯೇ ದುಃಖಕ್ಕೆ ಕಾರಣ, ದುಡ್ಡೇದೊಡ್ಡಪ್ಪ ವಿದ್ಯೆ ಅದರಪ್ಪ! ‘ಭಲಾ ನಮ್ಮಪ್ಪನೆ’ ಅಂದುಕೊಂಡರು. ಗೌಡರಂತಹ ಗೌಡರನ್ನು ಕನ್‌ಪ್ಯೂಸ್‌ ಮಾಡಿದ್ದು ಅವನ ಊಟದ ಸಮಸ್ಯೆ, ಹೈಕಳಿಗೆ ಬಿಸಿಯೂಟ ಮಾಡಿ ಹಾಕುವ ನೆಪದಲ್ಲಿ ತನ್ನ ಹೊಟ್ಟೆಪಾಡನ್ನೂ ಅದರಲ್ಲೇ ನೀಗಿಸಿಕೊಳ್ಳುತಿರಬಹುದೆಂದೇ ನಂಬಿದ್ದ ಗೌಡರ ನಂಬಿಕೆ ಸುಳ್ಳೆಂದರಿವಾದ ಮೇಲಂತೂ ಗೌಡರಿಗೆ ಭಾಳೋಟು ಹಿಡಿಸಿಬಿಟ್ಟ. ಮೊಬ್ಬಳ್ಳಿ ಬಸ್‌ಸ್ಟಾಂಡಿನಾಗೆ ಇರೋದೇ ಏಕೈಕ ವೀರಶೈವರ ಗೌರಿ ಮೆಸ್ಸು. ಬೆಳಗಿನ ಸಮಯದಾಗೆ ತಿಂಡಿ ಸಫ್ಲೈಮಾಡುತ್ತಿದ್ದುದರಿಂದ ಗೌರಿ ಟಿಫಿನ್‌ ರೂಂ, ಮಧ್ಯಾಹ್ನ ಊಟ ಹಾಕುತ್ತಿದ್ದುದರಿಂದ ಗಂರಿ ಮೆಸ್ಸು, ಹೀಗ ಅದರದ್ದು ಡಬಲ್‌ ರೋಲ್‌. ದಿನದಲ್ಲಿ ಐದಾರು ಬಸ್ಸುಗಳು ನಿಲ್ಲುತ್ತಿದ್ದುದರಿಂಂದ ಗಿರಾಕಿಗಳ ಊಟ ತಿಂಡಿ ಖರ್‍ಚಿನಲ್ಲೇ ಗೌರಿ ಮನೆಯವರದ್ದೂ ಕಳೆದು ಹೋಗೋದು. ಗೌರಿ ಚಂದವಾದ್ ದಿವಿನಾದ ಹುಡುಗಿ. ಅದಕ್ಕೆ ಗಿರಾಕಿಗಳು ಶುಚಿರುಚಿ ಕುರಿತು ಕ್ಯಾತೆ ತೆಗೆಯುತ್ತಿರಲಿಲ್ಲವಾಗಿ ಸದಾ ಹೋಟೆಲ್‌ ರಶ್ಯೋರಶ್ಶು. ನಾಲ್ಕು ಮೈಲಿ ದಾಟಿದರೆ ಸಿಗುವ ಕುರುಡಿಹಳ್ಳಿನಲ್ಲಿ ತಾಜಾ ಉಡುಪಿ ಹೋಟಲ್‌ ಇದ್ದರೂ, ಪ್ರಯಾಣಿಕರು ಹಿಡಿಶಾಪ ಹಾಕಿದರೂ ಬಸ್‌ ಡ್ರೈವರ್‌ ಕಂಡಕ್ಟರ್‌ಗಳಿಗೆ ಇದುವೆ ಪೆಟ್‌ ಹೋಟೆಲ್‌. ಬಸ್ಸಿನ ಟೈರುಗಳು ಅಲ್ಲಿಗೆ ಬರುವುದರೊಳಗಾಗಲೇ ಟೈರ್‍ಡ್ ಆಗಿಬಿಡುತ್ತಿದ್ದವು. ಬರುವಂಥ ಅತಿರಥ ಮಹಾರಥಿಗಳ ಕಣ್ಣಿನ, ಹೊಟ್ಟೆಯ ಹಸಿವನ್ನು ನೀಗಿಸಬಲ್ಲ ಗೌರಿಮೆಸ್ಸು ಮೇಸ್ಟ್ರನ್ನು ಮಾತ್ರ ಸಳಯದಿದ್ದರೆ ಗೌರಿ ಮೆಸ್ಸಿಗೇ ಅಪಮಾನವಲ್ಲವೆ. ರಾಮಮೂರ್‍ತಿ ಕೂಡ ಮೊದಲಿಗೆ ತಾನೇ ಪಕ್ಕದ ರೂಮಲ್ಲಿ ಕುಕ್ಕರ್‌ ಇಟ್ಟುಕೂಂಡು ತಿಳಿಸಾರು ಅನ್ನ ಬೇಯಿಸಿಕೊಂಡು ತಿಂದು ಶಾಲೆಯಲ್ಲೇ ಮಲಗುತ್ತಿದ್ದ. ಇದು ಸೇರಿಕೆಬಾರದೆ ಒಮ್ಮೆ ಶಾನುಭೋಗರು ಗೌಡರ ಬಳಿ ದೂರಿದರೂ. ಮೊಮ್ಮಗಳು “ಕಿತ್ತೂರಿನ ರಾಣಿ” ಪಾಠ ಪಟಪಟಾಂತ ಓದೋವಾಗ ಅವರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳುವ ಮೂಡ್‌ನಲ್ಲಿರಲಿಲ್ಲ. ಹೆಂಗೋ ನಮ್ಮ ಹಳ್ಳಿ ಹೃಕಳಿಗೆ ನಾಕು ಅಕ್ಷರ ಕಲಿಸೋಕೆ ಒಬ್ಬ ಬಂದಾನಲ್ಲ ಬಿಡ್ರಿ… ಎಲ್ಲಾರ ಇದ್ಕೊಂಡು ಸಾಯ್ಲಿ. ನಮ್ಗೇನ್ರಿ ಲುಕ್ಸಾನು?’ ಅಂದುಬಿಟ್ಟಿದ್ದರು.

ಯಾವಾಗ ರಾಮಮೂರ್‍ತಿ ಸ್ವಯಂಪಾಕ ಮಾಡಿಕೊಳ್ಳದೆ ಮಸ್ಸಿನ ಹಾದಿ ಹಿಡಿದನೋ ಆಗ ಮಾತ್ರ ಶಾನುಭೋಗರ ಕರಳು ಕಿವುಚಿಹೋಯಿತು. ಬಿಸಿಯೂಟ ಉಳಿದರೆ ಕೊಳಗೇರಿ ಮಕ್ಕಳನ್ನೆಲ್ಲಾ ಕರಸಿ ಇವನಪ್ಪನ ಜಹಗೀರು ಎಂಬಂಂತ ಹಂಚುತ್ತಿದ್ದುದನ್ನು ನೋಡಿದಾಗಲಂತೂ ತಳಮಳ ತಡಯದಾಯಿತು. ತಾಳ್ಮೆಗೆಟ್ಟು ಕೇಳಿಯೇ ಬಿಟ್ಟರು. “ಏನ್‌ಮಾಡ್ಲಿ ಸ್ವಾಮಿ? ಉಳಿದಿದ್ದನ್ನು ಅವರು ಬಿಟ್ರೆ ಯಾರು ಹೊಯ್ತಾರೇಳಿ?’ ಇವನೂ ಕೇಳಿದ. ಏನು ಹೇಳಬೇಕೆಂಬುದು ತೋಚಲಿಲ್ಲವಾಗಿ “ಸರ್‍ಕಾರಿ ಪದಾರ್‍ಥ ಹೀಗೆ ವೇಸ್ಟ್‌ ಆಗಬಾರದಲ್ಲವೆ?” ಮೂಲಕ್ಕೆ ಇಕ್ಕಳ ಇಟ್ಟರು ಶಾನುಭೋಗ. ‘ಚೆಲ್ಲುವುದಕ್ಕಿಂತ ಇದೇ ಎಷ್ಟೋ ವಾಸಿಯಲ್ಲವೆ ಸ್ವಾಮಿ…… ಪಾಪ ಬಡವರು’ ಮೂರ್‍ತಿಯ ಅನುಕಂಪ. ‘ನೀನೇನ್‌ ಮಹಾ ಶ್ಫ಼್ರೀಮಂತನೇನಯ್ಯ? ಹೆಂಗೂ ಪ್ರಿಪೇರ್‌ ನೀನೇ ಮಾಡ್ತಿಯಾ ಅದನ್ನೇ ತಿನ್ನೋಕೇನ್‌ ಧಾಡಿ… ಮಸ್‌ ಬೇರೆ ಕೇಡು’ ಅದವರ ಅನುಕಂಪ. ‘ಆದರೆ ಸರ್‍ಕಾರದ್ದನ್ನು ಸ್ವಂತಕ್ಕೆ ಬಳಸೋದು ದ್ರೋಹವಲ್ಲವೆ ರಾಯರೆ?’ ಕೇಳಿದ ‘ಮೊದ್ಲು ನೀನೇ ಅಡಿಗೆ ಮಾಡ್ಕೋತಿದ್ದೆಯಂತೆ…. ನಿಜವಾ?’ ಪ್ರಶ್ನೆ ಬದಲಿಸಿದರು. ‘ಹೌದ್ರಿ, ಬೆಳಿಗ್ಗೆ ಅನ್ನ ಮಾಡಿ ಒಗ್ಗರಣೆ ಹಾಕಿದ್ರೆ ಚಿತ್ರಾನ್ನ ಗೊಜ್ಜು ಕಲಿಸಿದರೆ ಪುಳಿಯೊಗರೆ ಅದೇ ಟಿಫಿನ್ನು. ಮಧ್ಯಾಹ್ನ ಅದೇ ಅನ್ನಕ್ಕೆ ತಿಳಿಸಾರು ಸುರುವಿಕೊಂಡ್ರೆ ನನ್ನ ಮೀಲ್ಸ್‌ ಫಿನಿಶ್‌. ಆದರೆ ಬರ್‍ತಾಬರ್‍ತಾ ವರ್‍ಕ್‌ಲೋಡು ಹೆಚ್ಚಾತು. ನಾಲ್ಕು ತರಗತಿಗಳಿಗೆ ಪಾಠ ಬಿಸಿಯೂಟದ ಕಾಟ ಸಿಟಿನಲ್ಲಿರೋ ಕಛೇರಿಗೆ ಅಲೆದಾಟ ಊಟದ ಸಾಮಾಗ್ರಿಗಳನ್ನು ಹೊತ್ತು ತರೋದು, ಹಸನ ಮಾಡೋದು. ಯಾಕೋ ಇಲ್ಲಿಂದ ಓಡಿಬಿಡಲೆ ಅನ್ನಿಸಿತು’ ಅಂದು ಮೋರೆ ಮೋಡಿದ. ‘ಅಯ್ಯಯ್ಯೋ ಹಾಗೆಲ್ಲಾದರೂ ಮಾಡಿಯಪಾ’ ಹೌಹಾರಿದ್ದು ಶಾನುಭೋಗ. ‘ಆದ್ರೂ ಸಂಜೆ ಇತ್ತಾಕಡೆ ಬಸ್ಸುಗಳೂ ಬರೋಲ್ಲ, ಮೆಸ್‌ ಏಳು ಗಂಟೆಗೇ ಬಂದ್‌. ರಾತ್ರಿಗೇನಯ್ಯಾ ಮಾಡ್ತಿ?’ ಕಕ್ಕುಲಾತಿ ತೋರಿದರು. ಬಾಗಿಲು ಹಾಕೋ ಟೈಮಿಗೆ ಸರಿಯಾಗಿ ಹೋಗಿ ಕ್ಯಾರಿಯರ್‌ನಲ್ಲಿ ಊಟ ತಗೊಂಡು ಬಂದುಬಿಡ್ತೀನಿ. ರಾತ್ರಿ ರೂಮಲ್ಲೇ ಖಾನಾ ಪೀನಾ ಸೋನಾ’ ವಿವರಿಸಿದ. ‘ಹೂಂ…. ಖಾನಾ ಸೋನಾ ಸರಿ. ಪೀನಾನೂ ಉಂಟೋ? ಬಲಗೈ ಅರ್‍ಧ ಮಡಿಚಿ ಬಾಟಲ್‌ ಸಿಂಬಲ್‌ ತೋರಿದ ಶಾನುಭೋಗ. ‘ಅಯ್ಯಯ್ಯೋ, ನಾನಿನ್ನ ಚಿಕ್ಕ ಹುಡ್ಗ ಸ್ವಾಮಿ. ಬೀಡಿ ಸಿಗರೇಟು ಬಿಯರೂ ಎಲ್ಲಾ ವರ್‍ಜ್ಯ” ರಾಮಮೂರ್‍ತಿ ನಕ್ಕಾಗ ಶಾನುಭೋಗರು ನಕ್ಕು ಶೇರ್‌ ಮಾಡಿಕೊಂಡರು. ‘ರಾತ್ರಿ ಬೇಸರವಾಗೋಲ್ವೇನಯ್ಕಾ? ಹೋಗ್ಲಿ ಮಾಭಾರತ ಗೊತ್ತಾ?’ ಹುಬ್ಬು ಕುಣಿಸಿದರು. ‘ಶ್ಯೂರ್‌ ಅದರಲ್ಲಿ ಸೂತಪುತ್ರ ಕರ್‍ಣನ ಕ್ಯಾರೆಕ್ಟರ್‌ ನಂಗೆ ತುಂಬಾ ಇಷ್ಟ’ ಅಂದ. ‘ಅದಲ್ಲೋಗೂಸ್ಲೆ, ಇದು’ ಬರಿಗೈಲಿ ಎಲೆ ಕಲೆಸಿ ಹಾಕಿ ಅಭಿನಯಿಸಿದರು. ‘ಅದಾ! ಗೊತ್ತಿಲ್ಲ ಸ್ವಾಮಿ’ ನಕ್ಕ. ‘ಕಲಿತ್ಕೋತಿಯೇನಯ್ಯ? ಗೌಡರು ಮನೆ ಅಟ್ಟದ ಮೇಲೆ ನಾನು ವಿಲೇಜ್‌ ಅಕೌಂಟೆಂಟು ಪಟೇಲ್ರು ಎಲ್ಲಾ ಟೆಂಟ್‌ ಹಾಕ್ತೀವಿ’ ಲೊಟ್ಟೆ ಹೊಡೆದರು. ‘ಸಾರಿಸಾರ್‌, ಕಥೆ ಕಾದಂಬರಿ ತಂದು ಓದ್ಕೋತೀನಿ….. ಬರ್‍ತೀನಿ’ ಅಂದವನೆ ಅಲ್ಲಿಂದ ಕಳಚಿಕೂಂಡ. ಶಾನುಭೋಗರಿಗೆ ಅವನು ೭೫% ಓಕೆ ಆಗಿದ್ದ ಇನ್ನುಳಿದ ೨೫% ಓಕೆ ಆಗದಿರಲು ತಮ್ಮವನಾಗಿಯೂ ಲಿಂಗಾಯಿತರ ಮೆಸ್ಸಲ್ಲಿ ಉಂಬೋದೆ ಎಂಬ ಕೋಪವೋ ಅಸಹನೆಯೋ ಅಸೂಯೆಯೋ ಮೇಲಿರಿಮೆಯೋ ತಾತ್ಸಾರವೋ ಅಥವಾ ಇವೆಲ್ಲವೋ ಅರ್‍ಥವಾಗದೆ ತೊಳಲಾಡುವಾಗಲೇ ಮೂವತ್ತಾದರೂ ಮದುವೆಯಾಗದೆ ಮನೆಯಲ್ಲುಳಿದಿರುವ ಮಗಳು ಶ್ಯಾಮಲೆ ನೆನಪಾಗಿ ಎದೆಯಲ್ಲೆಲ್ಲಾ ಭಗಭಗನೆ ಉರಿ. ಇತೀಚ್ಚೆಗೆ ಗ್ಯಾಸ್ಟ್ರಿಕ್ ಜಾಸ್ತಿಯಾಯಿತೆಂದು ಕೊಂಡರು. ಅಪಾನವಾಯು ಹೊರಹಾಕಲು ಯಮಸಾಹಸ ಪಟ್ಟು ಸೋತು ಮನೆದಾರಿಗೆ ಹಿಡಿದರು. ಇವನನ್ನು ರಾತ್ರಿ ಊಟಕ್ಕೆ ಮನೆಗೆ ಕರೆವುದರ ಮೂಲಕ ಮಗಳಿಂದಲೇ ಬಡಿಸಿ ಮೋಡಿ ಮಾಡಿ ಆಳಿಯನೆಂಬ ಹಳ್ಳಕ್ಕೇಕೆ ಕೆಡವಬಾರದೆಂಬ ಕನಸಿಗಿಳಿದರು. ಒಮ್ಮೆ ಅವನ ಕುಲಗೋತ್ರ ಊರುಕೇರಿ ಹೆತ್ತೋರ ಬಗ್ಗೆ ವಿಚಾರಿಸಬೇಕೆಂಬ ಧೃಡ ನಿಶ್ಚಯಕ್ಕೆ ಬಂದರು.

ಗೌರಿಗೆ ಮಾತ್ರ ಈವರೆಗೆ ಯಾವುದೇ ಧೃಡನಿಶ್ಚಯಕ್ಕೆ ಬರಲಾಗಿರಲಿಲ್ಲ. ರಾಮಮೂರ್‍ತಿ ತೆಳ್ಳಗೆ ಬಡಕಲಿನಂತಿದ್ದರೂ ಸರ್‍ಕಾರಿ ನೋಕರಿದಾರನ ಕಳೆಯ ಮುಂದೆ, ಸದಾ ತನ್ನ ಮುಂದೆ ಹಲ್ಲುಗಿಂಜುವ ಕೆಟ್ಟಾಕೊಳಕಾ ಜೋಕ್‌ ಮಾಡುವ ಖಾಸಗಿ ಬಸ್ಸಿನ ಕಟ್ಟುಮಸ್ತಾದ ಡ್ರೈವರ್‌ ಕಂಡಕ್ಟರ್‌ಗಳು ಸುಮಾರು ಅನ್ನಿಸಿದ್ದರು. ಆದರೂ ಆಕೆ ಬಡಿಸುವಾಗ ಪಕ್ಷಪಾತಮಾಡದೆ ಎಲ್ಲರೆದುರು ಇಷ್ಟಗಲ ನಗುತ್ತಾ ದುಂಬಿ ಕಂಗಳ ಪಟಪಟಿಸುತ್ತಾ ತುಟಿಕಚ್ಜಿ ಓರೆನೋಟ ಬೀರಿ ದುರ್‍ಬಲಿಗಳನ್ನು ಉದ್ರೇಕಿಸುತ್ತಾ ತೆಳುವಾದ ಸೀರೆಯನ್ನು ಮೈಗೆ ಅಂಟಿಕೊಂಡಂತೆ ಉಟ್ಟು ತೋರ ಮೊಲೆಗಳನ್ನು ಒನೆಯುತ್ತಾ ವಯ್ಯಾರ ತೋರುವಾಗ ಅವರೇನು ಉಣ್ಣುತ್ತಿದ್ದರೋ ನೋಡಿಯೇ ಹೊಟ್ಟೆ ಲೋಡ್‌ ಮಾಡಿಕೊಳ್ಳುತ್ತಿದ್ದರೋ! ಪ್ರಯಾಣಿಕರು ಗದ್ದಲ ಮಾಡುವಾಗ ಕೈತೊಳೆದು ಓಡುತ್ತಿದ್ದರು. ಇನ್ನು ಹಳ್ಳಿಯ ಹರೇದ ಪೋಲಿಬಡ್ಡೆತ್ತೋವು ಮಾತ್ರ ಹೆಂಗೆ ಸುಮ್ನಿದ್ದಾವು. ಬೈಟು ಟೀ ಕಾಫಿಗಂತ ಬಂದರೂ ಜಾಸ್ತಿ ಅಂಡೂರು ವಂತಿರಲಿಲ್ಲ. ಕಾರಣ ಗೌಡರು ಮಾತ್ರ ಆಕೆಯ ಲೈಸನ್ಸ್‌ ಹೋಲ್ಡರ್‌ ಎಂಬ ಗುಮಾನಿ ಪ್ಲಸ್ಫ಼್ ಭಯ. ಮೇಲಾಗಿ ಗೌರಿ ಅಪ್ಪ ಸಂಗಪ್ಪ ಅವ್ವ ಮಂಗಳವ್ವನಂಗೆ ಅವಳಣ್ಣ ಕೊಟ್ರ ಮೆದು ಸ್ವಭಾವದನಲ್ಲವೆಂಬ ಭಯವೇ ನಿಂತಲ್ಲೇ ಮೂತ್ರ ವಿಸರ್‍ಜನೆಗೀಡು ಮಾಡಿಬಿಡುತ್ತಿತ್ತು. ಕೊಟ್ರ ಕೆರೆಯಿಂದ ಅಡ್ಡೆಯಲ್ಲಿ ನೀರು ಹೂತ್ತು ತಂದು ಹೊರಗಿನ ಡ್ರಮ್‌ ತುಂಬಿಸುತ್ತಿದ್ದರೆ ನೋಡುವ ಕಣ್ಣುಗಳಿಗಿವನ ತೋಳುಗಳು ಕಬ್ಬಿಣದ ತೊಲೆಗಳು. ಗೌರಿ ಬಡಿಸಿದರೆ ಇಂವಾ ತಿಂದ ತಟ್ಟಿ ಲೋಟಗಳನ್ನೆತ್ತಿ ಹಿತ್ತಲಿಗೆಸುರಿವ ಪರಿಗೆ, ಪಾತ್ರೆಗಳ ಡಬಡಬ ಸದ್ದಿಗೇ ಗೌರಿಯನ್ನು ನೋಡುತ್ತಾ ಮೈಮರೆತವರ ಕನಸುಗಳು ಗರ್‍ಭಪಾತವಾಗಿ ಬಿಡುತ್ತಿದ್ದವು. ಅಡಿಗೆ, ಪಾತ್ರೆಗೆ ಖಾಯಂ ಆಗಿ ತಾಯಿ ಇದ್ದರೂ, ಕೂಟ್ರ ಒಲೆಯ ಮುಂದೆ ಬೇಯಲೂ, ಬರಿಗೈಲಿ ಒಣ ಸೌದೆ ಸಿಗಿಯಲೂ ಸೈ. ಅವನ ಈ ತೆರೆನಾದ ಎಲ್ಲಾ ಸಾಹಸಗಳೇ ಗೌರಿಗೆ ಶ್ರೀರಕ್ಷೆ. ಹಳೆ ಪಿಚ್ಚರ್‌ಗಳ ಮಾಲಾಶ್ರೀ ಟೈಪ್‌ ಗೌರಿ ಜಿಗಿದಾಡುವಾಗ ಗಿರಾಕಿಗಳು ಕಣ್ಣನಿಂದವಳನ್ನು ನೆಕ್ಕಿದರೂ ಸೆರಗು ಮುಟ್ಟಲೂ ಪ್ರಾಣಭಯ. ಅದಕ್ಕೆ ಕಾರಣವೂ ಅದೇ ಕೂಟ್ರನೆಂಬ ಅಪಾಯಕಾರಿ. ಒಮ್ಮೆ ಡ್ರೈವರ್‌ ಒಬ್ಬ ‘ಬಿಲ್‌’ ಕೊಡುವಾಗ ಐನೂರರ ನೋಟು ಕೂಟ್ಟವನು, ಚಿಲ್ಲರೆಯಿಲ್ಲ ಅಂತ ಗೌರಿ ಪೇಚಾಡಿದರೆ ನೀನೇ ಇಟ್ಕೋ ನಿನ್ನ ಸೇಫ್‌ ಲಾಕರ್‍ನಾಗೆ’ ಎಂದು ಅವಳ ಎದೆ ನೋಡಿದ್ದ. ಅಲ್ಲೇ ಟೇಬಲ್‌ ವರಸುತ್ತಿದ್ದ ಕೊಟ್ರನ ಕಣ್ಣಿಗೆ ಬಿದ್ದ. ಡ್ರೈವರನ ಮಕಮೂತಿಯೆಲ್ಲಾ ಪಂಕ್ಚರ್‌. ತನ್ನದೇ ತಪ್ಪಾಗಿದ್ದರಿಂದ ಹಳ್ಳಿಮಂದಿ ಸಿಗಿದಾರೆಂದು ದುಸರಾ ಮಾತಾಡದೆ ‘ತಪ್ಪಾತಣ್ಣ ತಪ್ಪಾತು ಕಣಕ್ಕಾ’ ಅಂತ ಮೂಗು ಮುಸಡಿಯಿಂದ ಸುರಿಯುತ್ತಿದ್ದ ನೆತ್ತರು ವರೆಸಿಕೊಂಡು ಬಸ್‌ ಹತ್ತಿದ್ದ. ಆಗೀಗ ಅವರಿವರ ಮೇಲೆ ಅಡ್ಡಾಡಿ ಗಿರಾಕಿಗಳ ಮೇಲೆ ಕೂಟ್ರ ಕೈಮಾಡುತ್ತಾ ಒಂದರ್‍ಥದಲ್ಲಿ ಭಯಾಂಕುರಿಸಿದ್ದ ನಾದರೂ ಗೌರಿಯೆಂಬ ಬೆಂಕಿ ಸುತ್ತಾ ಸುಟ್ಟೇವೆಂಬುದನ್ನೂ ಕೇರ್‌ ಮಾಡದೆ ಪತಂಗಗಳು ಪತರಗುಟುತ್ತಲೇ ಇದ್ದವು. ಒಮ್ಮೆ ಗೌರಿಗೆ ತಡಯಲಾರದ ಹೊಟ್ಟಿ ಬ್ಯಾನೆ. ಸಣ್ಣ ಆಸ್ಪತ್ರೆ ಒಂದಿತ್ತು. ಅಲ್ಲಿ ಇದ್ದದ್ದೇ ಒಬ್ಬ ಡಾಕ್ಟರ್‌, ನರ್‍ಸು, ಪೀವನ್‌. ಅಲ್ಲಿಗೇ ಕರದೊಯ್ದ ತಂಗಿಯನ್ನು ಎತ್ತರದ ಮಂಚದ ಮೇಲೆ ಮಲಗಿಸಿ ಸೀರೆಗಂಟು ಕಳಕ್ಕೆ ಸರಿಸಿ ಹೊಟ್ಟೆ ಅಮುಕಾಡಿಸಿದ್ದಕ್ಕೆ ಕೂಟ್ರನ ಪಿತ್ತ ನಿತ್ತಿಗೇರಿತ್ತು. ‘ಇನ್ನು ಇಂಜಕ್ಷನ್‌ ಮಾಡ್ತೀನಿ ಅತ್ತಾ ಮಕನಾಗೆ ತಿರುಕ್ಕಾ. ಸೀರೆ ಸಡಿಲ ಮಾಡ್ಕೋ ಅಂಡಿಗೆ ಮಾಡ್ತೀನಿ’ ಅಂದ ಡಾಕ್ಟರ್‌. ‘ತೋಳಿಗೇ ಮಾಡ್ರಿರೀ’ ಕೂಟ್ರ ಗುರುಗುಟ್ಟಿದ. ‘ಭಾಳ ನೋವಾಗುತ್ತಯ್ಯಾ ಆಮೇಲೆ ರೆಟ್ಟಿ ಬಡಿದಂಗೆ ಆಗ್ತಾಳೆ. ಕೀಪ್‌ ಕ್ವಯಟ್‌’ ಎಂದು ಅಂಡಿಗೆ ಸೂಜಿ ಚುಚ್ಚಿದ ಡಾಕ್ಟರ್‌ ಹಲಗೆಪ್ಪ ಗಸಗಸ ಉಜ್ಜುವಾಗ ಕೊಟ್ರ ‘ಬ್ಲಾಸ್ಟ್‌’ ಆದ. ‘ಸೂಳಿಮಗ್ನೆ ಮಷ್ಕಿರಿ ಮಾಡ್ತಿಯಾ? ದೊಡ್ಡ ಕುಲಸ್ಥರ ಹೆಂಗಸರು ಅಂದ್ರೆ ಸದರವಾಗೋತೇನ್ಲೆ’ ಹಿಡಿದು ಕೆನ್ನೆಗೆ ರಪರಪನೆ ಬಾರಿಸುವಾಗ ಗೌರಿಯೇ ಅವನ ಕೈಕಾಲಿಗೆ ಬಿದ್ದು ಡಾಕ್ಟರನ ಜೀವ ಉಳಿಸಿದ್ದಳು. ಆಸ್ಪತ್ರೆಯವರಿಗೆ ಸಿಟ್ಟು ಬಾರದೆ ಇದ್ದೀತೆ. ‘ಡ್ಯೂಟಿ ಮೇಲಿರೋರ ಮ್ಯಾಲೆ ಕೈಮಾಡವನೆಸಾ. ಪೊಲೀಸ್ಗೆ ಕಂಪ್ಲೇಂಟ್ ಮಾಡಿ ಸಾ. ಅದರಾಗೂ ನೀವು ಎಸ್‌ಸಿ ಜನಾಂಗ’ ನರ್‍ಸ್‌ ಹುರಿದುಂಬಿಸಿದ್ದಳು. ಡಾ. ಹಲಗೆಪ್ಪ ಸಿದ್ದನಾಗುವಷ್ಟರಲ್ಲೇ ಸಾಕ್ಷಾತ್‌ ಗೌಡರೇ ಆಸ್ಪತ್ರಗೆ ನುಗ್ಗಿ ಬಂದರು. “ಏನ್ಲಾ ಮಾಡ್ದೆ ಗೌರಿಗೆ ಚೋದಿಮಗ್ನೆ” ನೀನೇನ್‌ ಡಾಕುಟ್ರಾ? ಡಾಕುನಾ? ಅಂತೆಲ್ಲಾ ಅರಚಾಡುವಾಗ ಕಂಗಾಲದ ಡಾ. ಹಲಗೆಪ್ಪ ನಡೆದ ಮ್ಯಾಟರನ್ನು ಬಣ್ಣಿಸಿ, ಕಂಪ್ಲೇಂಟ್‌ ಕೂಡೋಂವಾ ಅಂತಿದೀನಿ ಗಾಡರೆ ಅಂದ. ‘ಕೊಡು, ನನ್ನ ಹಿಡ್ಕೊಂಬೋಕೆ ಬಂದಿದ್ದ ಅಂತ ಅವಳೂ ಕೊಡ್ತಾಳೆ. ಹಂಗೆಲ್ಲಾ ಮಣ್ಣು ತಿನ್ನೋ ಕಲಸ ಮಾಡ್ಬೇಡ. ಆದ್ದಾತು ತೆಪ್ಪಗಿದ್ದು ನೋಕರಿ ಮಾಡ್ಕೊಂಡು ಹೋಗು’ ಗೌಡರು ಆವಾಜ್‌ ಹಾಕಿದಾಗ ಡಾ. ಹಲಗೆಪ್ಪ ತನ್ನ ಹಲಗೆ ಬಾರಿಸಲೇಯಿಲ್ಲ. ಇಂಥ ಅದೆಷ್ಟೋ ಇನಿಸಿಡೆಂಟ್‌ಗಳು ಕೊಟ್ರನಿಗಿರೋ ಮೀಟರ್‌ ಅವನ ರೇಂಜ್‌ ಸಾಬೀತು ಪಡಿಸಿದ್ದರೂ ತಮ್ಮ ಭರವಸೆಯನ್ನು ಕಳೆದುಕೊಳ್ಳದೆ ಗೌರಿ ಸುತ್ತ ಗಿರ್‍ಕಿ ಹೊಡಯುತ್ತಲೇ ಇದ್ದವು ಬೆದೆಗೆ ಬಂದ ನಾಯಿಗಳು.

ಇಂತಹ ಕಾಂಪಿಟೀಟರ್‍ಸ್‌ ನಡುವೆ ಹೋಟೆಲ್ಲಿಗೆ ಬರುವ ರಾಮಮೂರ್‍ತಿ ಮೇಸ್ಟ್ರು ಮಾತ್ರ ಗೌರಿಯನ್ನು ನೋಡಿದರೂ ‘ಚಿತ್‌’ ಆಗಲಿಲ್ಲ. ಅವನ ನಡೆನುಡಿ ಸಂಭಾವಿತನ ಸಂಪನ್ನತೆಗಳಿಗೆ ಕೊಟ್ರನೂ ಉಪ್ಪು ಹಾಕಲಿಲ್ಲ. ಹೋಟಿಲಿನ ಆದಾಯ ಲಾಭನಪ್ಟ, ದಿನವಿಡೀ ಅವರುಗಳು ಪಡುವ ಶ್ರಮದ ಬಗ್ಗೆ ಕನಿಕರಿಸುವ ಚೌಕಾಸಿ ಮಾಡದೆ ‘ಬಿಲ್‌’ ತೆತ್ತು ಎದ್ದು ಹೋಗುವ, ಗೌರಿಯ ಬಗ್ಗೆ ಚೇಷ್ಟೆ ಮಾತುಗಳನ್ನಾಡದ ಕೆಟ್ಟದಾಗಿ ನೋಡದ ಮೇಸ್ಟ್ರು ಬಗ್ಗೆ ಮೊದಲು ಆಕರ್‍ಷಿತರಾಗಿದ್ದು ಗೌರಿಯ ಮಾತಾಪಿತೃಗಳು. ಬಿಲ್‌ ಕರಕ್ಟ್‌ ತಿಂಗಳಾ ತಿಂಗಳು ಚುಕ್ತ ಮಾಡುತ್ತಾ ಬಂದಾಗ ನಂತರ ಮೃದುವಾದವನು ಕೊಟ್ರ. ತನ್ನನ್ನು ನೋಡಿದೊಡನೆ ಪುಟದೇಳುವ ಗಂಡಸರನ್ನಷ್ಟೆ ಕಂಡಿದ್ದ ಗೌರಿಗೆ ಮೊದಮೊದಲಿಗೆ ಬೋರ್‌ ಅನ್ನಿಸಿದ ಮೇಸ್ಟ್ರು ದಿನಗಳೆದಂತೆ ಹಿಡಿಸಿದ. ‘ಸಾಂಬಾರ್‌ ಚೆನ್ನಾಗಿ ಮಾಡಿದ್ದಿರಾ ಗೌರಿ. ಇಂಥ ಸೊಗಸಾದ ರೊಟ್ಟಿ ಸಿಟೀಲಿ ಎಲ್ಲಿ ಸಿಕ್ಕೀತು. ಉಪಿಟ್ಟು ಏ-ವನ್‌ ಇದೆ’ ಅಂತೆಲ್ಲಾ ತಾರೀಪು ಮಾಡೋವಾಗ ಅವಳೂ ತಬ್ಬಿಬ್ಬು. ಈವರೆಗೆ ತನ್ನ ಚೆಂದ ಚೈನಿಯನ್ನಷ್ಟೆ ತಾರೀಪು ಮಾಡೋ ಆಸೆಬುರುಕರ ಮಧ್ಯೆ ‘ಸಾಂಬಾರ್‍ಗೆ ಸ್ವಲ್ಪ ಇಂಗು ತೆಂಗು ಹಾಕಿಬಿಟ್ರೆ’ ಎಂದು ಲೊಟ್ಟೆ ಹೂಡೆವ ಮೇಸ್ಟ್ರು ತಿಳಿಸಾರು ಮಾಡುವ ವೈಖರಿಯ ಬಗ್ಗೆ ಒಮ್ಮೆ ಕ್ಲಾಸ್‌ ತಗೊಂಡಿದ್ದ. ಆಮೇಲಂತೂ ಸಾಂಬಾರಿನ ಗಮಗಮಕ್ಕೆ ಸ್ಟಾಪ್‌ ಕೊಡದ ಬಸ್ಸುಗಳೂ ಈಗ ಸ್ಟಾಪ್‌ ಕೂಡುವುದನ್ನವಳು ಸೂಕ್ಷ್ಮವಾಗಿ ಗಮನಿಸಿದ್ದಳು. ಹೀಗಾಗಿ ಹಬ್ಬಹರಿ ದಿನಗಳಲ್ಲಿ ಹೋಟೆಲ್‌ ರಜಾ ಮಾಡಿದರೂ ಕ್ಯಾರಿಯರ್‌ ತಂದು ಊಟ ಹೊಯ್ಯಬಹುದೆಂದು ಮೇಸ್ಟ್ರಿಗೆ ಕೂಟ್ರನೇ ಪರ್‍ಮಿಶನ್‌ ಕೂಟ್ಟಿದ್ದ. ಈವಯ್ಯ ನಮ್ಮೂನಾಗಿದ್ರೆ ಹೆಂಗಾರ ತಾಜ ಮಾಡಿ ಗೌರಿನಾ ಗಂಟು ಹಾಕಬೋದಿತ್ತೆಂದು ಮಾತಾಪಿತೃಗಳು ಬಿಡುವ ನಿಟ್ಟುಸಿರು ಗೌರಿಯನ್ನೂ ತಾಕಿ ಬೆಚ್ಚಗಾಗಿಸಿತ್ತು. ಮನಸ್ಸಿನಲ್ಲೇ ಮಂಡಿಗೆ ಮೆಲ್ಲುವ ಮೇಸ್ಟ್ರು ಸಮಸ್ತ ಗಿರಾಕಿಗಳಂತೆ ತಾನೂ ನಿಟ್ಟುಸಿರು ಬಿಡುವವರಲ್ಲಿ ಒಬ್ಬನೆಂಬುದನ್ನು ಬಯಲಾಗದಂತೆ ನೋಡಿಕೊಂಡಿದ್ದವನ ವೈಶಿಷ್ಟ್ಯವೆನ್ನಲೇಬೇಕು. ಅದೇಕೋ ಏನೋ ಇತ್ತೀಚಿಗೆ ಕೂಟ್ರನಿಗೆ ಗೌರಿಯ ಮೇಲೇ ಡವಟು. ಫಾಂಟಾ ಹೀರುವ ಪರಿ ಅವಳು ಮೇಸ್ಟ್ರನ್ನೇ ನೋಡುವುದನ್ನವನು ಗ್ರಹಿಸಿದ್ದ. ರಾತ್ರಿ ಏಳುಗಂಟೆಗೆ ಊಟ ಹೊಯ್ಯಲು ಬರುತ್ತಿದ್ದ ಮೇಸ್ಟ್ರು ‘ಹೊಸರುಚಿ’ ಪಾಠ ಮಾಡುತ್ತಾ ನೋಟ ಮಾತ್ರದಿಂದಲೇ ಗೌರಿಯ ಏನೆಲ್ಲಾ ಸವರಾಡುವಾಗ ಗೌರಿಗಂತೂ ತಡೆಯಲಾರದ ಕಿಕ್ಕು. ದೇವಸ್ಥಾನದ ಬಾಗಿಲು ದಬಾಕಿ ಅದೇ ಹಾದಿಯಲ್ಲಿ ಬರುವ ಶಾನುಭೋಗ ಸೀನಪ್ಪರ ಕಣ್ಣಿಗೆ ಇದು ಪದೆಪದೆ ಬಿದ್ದಾಗ ಕಣ್ಣಲ್ಲಷ್ಟೇ ಅಲ್ಲ ಹೊಟ್ಟೆಯಲ್ಲೂ ಖಾರದ ಪುಡಿ ಕದಡಿದಷ್ಟು ಕಿಕ್ಕು. ತಮ್ಮ ಹುಡುಗ ಅನ್ಯರ ಪಾಲಾಗಬಾರದೆಂಬ ನಿರ್‍ಧಾರಕ್ಕೆ ಸಡನ್‌ ಆಗಿ ಬಂದ ಅವರು ಒಂದು ದಿನ ಶಾಲೆಯ ಬಳಿಗೇ ಹೋದರು. ‘ಅಯ್ಯಾ ಈ ದಿನ ದೀಪಾವಳಿ ನಮ್ಮ ಮನೆಗೆ ಊಟಕ್ಕೆ ಬಾಪ್ಪಾ’ ಅಂತ ಕರೆಯೂ ಕೂಟ್ಟರು. ಅವನು ಗುಂಜಾಡಿದಾಗ ಕಡಕ್‌ ಆದ ಶಾನುಭೋಗರು ‘ಸುಮ್ನೆ ಬಾರಯ್ಯ. ಉಪಚಾರ ಮಾಡಿಸ್ಕೋಬೇಡ ಅಳಿಯನಂತೆ’ ಅಂತ ಗದರುತ್ತಲೇ ನಕ್ಕರು. ಅನ್ಯಥಾ ಶರಣಂ ನಾಸ್ತಿ ಎಂದವನೂ ಮಧ್ಯಾಹ್ನ ಅವರಲ್ಲಿಗೆ ಹೋದ. ಚಾಪೆ ಹಾಸಿದಾಗ ಜೀನ್ಸ್‌ಧಾರಿಗೆ ಕೂರಲು ಕಷ್ಟವಾಯಿತು. ತಳಿರು ತೋರಣಗಳಿಂದ ಸಿಂಗಾರವಾದ ಮನೆ ಚಿಕ್ಕದಾದರೂ ಒಪ್ಪವಾಗಿತ್ತು ಎಲ್ಲಾ ನನ್ನ ಮಗಳದ್ದೇ ಅಲಂಕಾರ. ಈ ಶ್ಲೋಕಗಳನ್ನೆಲ್ಲಾ ಅವಳೇ ಗೋಡೆಯ ಮೇಲೆ ಬರೆದದ್ದು. ರಂಗವಲ್ಲಿಯೂ ಅವಳದ್ದೇ ಎಂದು ಕೊಂಡಾಡುತ್ತಾ, ‘ಶ್ಯಾಮಲಾ ಬಾಮ್ಮಾ’ ಎಂದು ಕರೆದು ಮಗಳನ್ನು, ಸತಿ ಅನುಸೂಯಳನ್ನೂ ಪರಿಚಯಿಸಿದರು. ‘ಈ ಮಹಾನುಭಾವನಿಂದಾಗಿ ನಮ್ಮ ಹಳ್ಳಿಶಾಲೆ ಉಳೀತು’ ಎಂದವನನ್ನೂ ಪ್ರಶಂಸಿಸಿದರು. ಉಪಚಾರದ ಭಾರದಿಂದ ರಾಮಮೂರ್‍ತಿ ನಲುಗಿದ. ‘ಯಾವ ಕಡೆಯೋರಯ್ಯಾ ತಾವು?’ ಅನಿರೀಕ್ಷಿತ ಪ್ರಶ್ನೆ ಶಾನುಭೋಗರಿಂದ ಬಂತು. ‘ನಾನಾ…. ನಾವು ಮೈಸೂರ ಬಳಿಯ ಪಾಂಡವಪುರದೋರು’ ಅಂದ. ತಂದೆಯ ಹೆಸರು ಕೇಳಿದಾಗ ಅವರಿಲ್ಲ ಅಂದ. ‘ಹೆಸರಂತೂ ಇರಬೇಕಲ್ಲ’ ನಕ್ಕರು. ‘ನರಸಿಂಹ ಮೂರ್‍ತಿಗಳು’ ಅಂದು ತಾನೂ ನಕ್ಕ. ‘ಅವರ ತಂದೆ ನಾಮಧೇಯ?’ ಮೂರ್‍ತಿ ಈಗ ತಡಬಡಾಯಿಸುತ್ತಾ ‘ರಂಗಪ್ಪ’ ಅಂದ. ಮೂರ್‍ತಿಯ ಅಸಲಿ ಜಾತಿ ಯಾವುದೆಂಬುದೇ ತಿಳಿಯದೆ ಶಾನುಭೋಗ ಕಳವಳಕ್ಕೀಡಾದರೂ ತೋರಗೊಡಲಿಲ್ಲ. ಬೇರೆ ದಾರಿ ತುಳಿದರು. ‘ಅಂದ್ಹಾಗೆ ಈ ಕೊಳವೆ ಪ್ಯಾಂಟು ಜುಬ್ಬಾದಲ್ಲಿ ಊಟಕ್ಕೆ ಹೇಗೆ ಕೂರ್‍ತಿರಪ್ಪಾ? ಅಭ್ಯಂತರವಿಲ್ಲದಿದ್ದರೆ ಪಂಚೆ ಕೊಡ್ತೀನಿ ಉಟ್ಕೋಳಿ. ತುಂಬಾ ಸಖೆಯಲ್ರಿ. ಜುಬ್ಬ ಕಳಚಿ ಆ ಮೊಳೆಗೆ ನೇತುಹಾಕಿ’ ಎಂದೆಲ್ಲಾ ಪೀಡಿಸಹತ್ತಿದಾಗ ಸರ್‍ವಥಾ ಒಪದೆ ‘ನೊ…ನೊ… ಪರ್‍ವಾಗಿಲ್ಲ’ ಎಂದು ತಾನೂ ಮೊಂಡು ಹಿಡಿದ. ಸೋತ ಶಾನುಭೋಗ ‘ಆಯ್ತು ಬನ್ನಿ ಅಡಿಗೆ ಮನೇಲೇ ಕೂತು ಊಟಮಾಡೋಣ. ಮಣೆ ತಟ್ಟೆ ಅಲ್ಲೇ ಹಾಕಿದ್ದಾರೆ ಅಂದಾಗ ಮಾತ್ರ ಗಾಬರಿಬಿದ್ದ. ‘ಬನ್ನೀಪ್ಪಾ ಸಂಕೋಚ ಎಂತಕ್ಕೆ’ ಕೈ ಹಿಡಿದೆಳೆವಾಗಲಂತೂ ಹಾವು ಮಟ್ಟಿದ ಪರಿ ಹಿಂದೆ ಸರಿದ. ‘ಕ್ಷಮಿಸಿ. ನಮ್ಮಂತವರು ಅಡಿಗೆ ಕೋಣೆಗೆ ಬರೋದೆ?’ ಹಿಡಿಯಷ್ಟಾದ. ‘ಏಕಯ್ಯಾ ಮೂರ್‍ತಿ ನೀನು ನಮ್ಮೋನಲ್ವೆ… ಬಾಪ್ಪಾ’ ಪ್ರೀತಿ ತೋರಿದರು. ‘ಇಲ್ಲ ಸ್ವಾಮಿ….. ನಾನು…..ನಾನು ಎಸ್‌ಸಿ ಜನಾಂಗ’ ತೊದಲುತ್ತಾ ದೂರ ಸರಿದ. ಶಾನುಭೋಗರ ಮನೆಮಂದಿಗೆಲ್ಲಾ ಬರಸಿಡಿಲು ಬಡಿದ ಅನುಭವ. ‘ಅಯ್ಯೋ ಮೊದಲೇ ಬೊಗಳೋಕೇನಯ್ಯಾ ನಿನಗೆ ದಾಡಿ’ ಉಕ್ಕಿ ಬರುವ ಕ್ರೋಧವನ್ನು ಹತ್ತಿಕ್ಕಿ ಪಡಸಾಲೆಯಲ್ಲೇ ಕೂರಿಸಿ ಮುತ್ತಗದ ಎಲೆ ಹಾಕಿ ತಾವೇ ಬಡಿಸಿದರು. ಅವರೇನು ಬಡಿಸಿದರೋ ಇವನೇನು ಉಂಡನೋ. ಕೈತೊಳೆಯಲು ಅವರೇ ಹೂರಗೆ ನೀರು ಹಾಕಿದರು. ಹಳೆ ಸಿಲಾವರ್‌ ಲೋಟದಲ್ಲಿ ನೀರು ಕೂಟ್ಟರು. ಕುಡಿದ. ‘ಬರ್‍ತೀನಿ ರಾಯರೆ ಊಟ ತುಂಬಾ ಸೂಗಸಾಗಿತು’ ಎಂದು ಹೂರಟ. ಇವರು ಕಟ್ಟಿಗೆಯಲ್ಲಿ ಸಿಲಾವರ್‌ ಲೋಟ ಹಿಡಿದು ತೊಳೆವ ಸರ್‍ಕಸ್‌ ಮಾಡುವುದನ್ನು ದೂರದಿಂದಲೇ ನೋಡಿ ರಾಮಮೂರ್‍ತಿ ಬಿದ್ದು ಬಿದ್ದು ನಕ್ಕ.

ಸಂಜೆ ಏಳು ಗಂಟಿಗೆ ಕ್ಯಾರಿಯರ್‌ ಹಿಡಿದು ಗೌರಿ ಮೆಸ್ಸಿಗೆ ಹೊರಟಾಗ ಇವರಿಗೂ ನನ್ನ ಜಾತಿ ತಿಳಿದರೆ ಭರತನಾಟ್ಯವೋ ಕಥಕ್ಕಳಿಯೋ ಯಕ್ಷಗಾನವೋ ಯಾವುದು ಮಾಡಿಯಾರೆಂದು ಊಹಿಸಿಯೇ ಪುಸಕ್ಕನೆ ನಕ್ಕ. ಬಾಗಿಲಲ್ಲೇ ಪಟಾಕಿ ಹಚ್ಚುತ್ತಿದ್ದ ಕೊಟ್ರ. ‘ಏನು ಕೂಟ್ರಣ್ಣ ಹಬ್ಬ ಜೋರಾ?’ ಕೇಳಿದ. ಉತರಿಸಿದ್ದು ಮಂಗಳವ್ವ. ‘ಮುಂದಿನ ವರ್‍ಷ ಇನ್ನೂ ಜೋರು ಕಣ್ರಪ್ಪ. ಯಾಕೇಳಿ? ಆಗ ಹೆಂಡ್ರ ಜೊತೆ ಸೇರಿ ಪಟಾಕಿ ಹಚ್ತಾನೆ’ ಅಂತು ಮುದುಕಿ. ‘ನಮ್ಮ ಹುಡ್ಗನ ಲಗ್ನ ಸೆಟ್ಲ್‌ ಆಗೇತಿ’ ಅಂದಿದ್ದು ಸಂಗಪ್ಪ. ‘ಅಯ್ಯೋ ಸಿವ್ನೆ ತಂಗೀನ ಇಟ್ಕೊಂಡು ಅಣ್ಣನ ಲಗ್ನನಾ?’ ಮೇಸ್ಟ್ರು ತನಗೇ ಗೊತ್ತಿಲ್ಲದೆ ನಿಟ್ಟುಸಿರು ಬಿಡುವಾಗಲೇ ಗೌರಿಯೂ ಕ್ಯಾರಿಯರ್‌ ಹೊಯ್ಯಲು ಬಂದಳು. ಅವಳ ಚೆಂದದ ಕಣ್ಣುಗಳ ತುಂಬಾ ನೀರು ನಿಂತಿವೆ. ಮೂರ್‍ತಿಗೆ ಯಾರಿಂದಲೂ ಉತ್ತರವೇ ಬಾರದಿದ್ದರೂ ಕ್ಯಾರಿಯರ್‌ ಒಳ ಹೋಗಿ ಹೊರಬಂತು. ನೇರವಾಗಿ ಅವಳನ್ನೊಮ್ಮೆ ದಿಟ್ಟಿಸಿದ. ಅವಳದ್ದೂ ದೀನನೋಟ. ನೊಂದುಕೊಂಡ. ರಾತ್ರಿ ಊಟ ರುಚಿಸಲಿಲ್ಲ. ರಾತ್ರಿ ನಿದ್ದೆ ಹತ್ತದಂತಾದಾಗ ಮಂಗಳವ್ಹನೂ ಗಂಡನೊಡನೆ ನೋವು ತೋಡಿಕೊಂಡಳು. ‘ಮೇಸ್ಟ್ರು ಹೇಳಿದ್ದು ಕೇಳ್ದ್ಯಾ? ಎದೆ ಉದ್ದ ಬೆಳೆದ ಮಗಳನ್ನ ಇಟ್ಕೊಂಡು ಮಗನಿಗೆ ಲಗ್ನ ಮಾಡೋದು ನ್ಯಾಯವಾ?’ ಸಂಗಪ್ಪ ಮಾತಾಡಲಿಲ್ಲ. ಮಾತಾಡಿದ್ದು ಭಾವಿ ವರ ಕೊಟ್ರ. ‘ಸುಮ್ಗ ಬಿದ್ಕಳ್ರಲೆ ಮುದಿಗೂಬೆಗಳಾ, ಅವಳಿಗೆ ಲಗ್ನ ಮಾಡಿ ಕಳಿಸಿದ್ರೆ ಹೋಟ್ಲಾಗೆ ದುಡಿಯೋರು ಯಾರು?’ ‘ನಿನ್ನ ಹೆಂಡ್ರು ಬರ್‍ತಾಳಲಪ್ಪಾ’ ಅಂತು ಮುದುಕಿ. ‘ಇದ್ದಂತೋರ ಮನೆ ಹುಡುಗಿ ಅವಳ್ಯಾಕ್‌ ಮಾಡ್ಯಾಳು? ಇವಳರೋದು ಯಾಕೆ? ಜಾಡಿಸಿ ಎದಿಗೆ ಒದ್ದೆ ಅಂದ್ರೆ…..’ ಗಕ್ಕನೆ ಗದರಿಕೊಂಡ. ‘ಮೆಲ್ಲಗೆ ಮಾತಾಡಲೆ…. ಕೇಳಿಸಿಕೊಂಡಾಳು’ ಸಂಗಪ್ಪ ಉಸುರಿದ. ‘ಕೇಳಿಸಿಕೊಳ್ಳೇಳು. ಅವಳನ್ನು ಕಟ್ಟಕೂಂಬಾಕ ಯಾವ ನನ್ಮಗ ರಡಿಯಾಗವ್ನೆ?’ ಮುಸಿಮುಸಿ ನಕ್ಕ. ಗೌರಿ ಮುಸುಮುಸು ಅತ್ತಳು.

ಸಂಜೆ ಮೇಸ್ಟ್ರು ಕ್ಯಾರಿಯರ್‌ ತಂದಾಗ ಗೌರಿಯ ಮೋರೆ ಕಂದಿತ್ತು. ಇತ್ತೀಚೆಗೆ ಅವಳು ಕುಲುಕುಲು ನಕ್ಕದ್ದೇ ಕಡಿಮೆ. ‘ನಿಮ್ಮ ಪರ್‍ಸನಲ್‌ ವಿಷಯದ ಬಗ್ಗೆ ಮಾತಾಡ್ತಾ ಇದೀನಿ. ದಯವಿಟ್ಟು ಕ್ಷಮಿಸಿ. ನಿಮ್ಮ ಮನೇಲಿ ನಿಮಗೆ ಗಂಡು ನೋದಲ್ವೆ?’ ಮರುಗಿದ. ‘ಈ ಜನ್ಮದಾಗೆ ನೋಡಲ್ಲ ಬಿಡ್ರಿ. ನಾನು ಹುಟ್ಟಿರೋದೇ ಗೇಯ್ಯೋಕೆ’ ಕಣ್ಣೀರು ಕಪಾಳಕ್ಕಿಳಿಸಿದಳು. ‘ನೀವು ಸಿಟ್ಟು ಮಾಡದಿದ್ದರೆ ಒಂದು ಮಾತು ಕೇಳ್ಳಾ?’ ಅಂಜಿದ. ತಲೆಯಾಡಿಸಿದಳು. ‘ನಾನು ಯಾವತ್ತೂ ಸ್ಟ್ರ್‍ಐಟ್ ಫಾರ್‍ವರ್‍ಡ್. ನೇರವಾಗಿ ಕೇಳಿಬಿಡ್ತೀನಿ. ಇಷ್ಟವಿದ್ದರೆ ಹೂಂ ಅನ್ನಿ, ಇಲ್ಲ ಅಂದರೂ ನನಗೇನು ಬೇಸರ ಇಲ್ಲ’ ಕ್ಷಣ ತನ್ನ ಮಾತಿಗೆ ‘ಪಾಸ್‌’ ಕೊಟ್ಟು ಹೇಳಿದ. ‘ನಾನು ನಿಮಗೆ ಒಪ್ಪಿಗೆನಾ?’ ಕ್ಷಣ ಕಂಪಿಸಿದ ಅವಳ ದೇಹ ನಂತರ ಗರಿಗೆದರಿದ ನವಿಲಾಯಿತು. ‘ಆದರೆ ನೀವು ನಮ್ಮೋರಲ್ಲ. ಮನೆಯೋರು ಒಪ್ತಾರೋ ಇಲ್ಲೋ. ನಿಮ್ದು ದೂಡ್ಡ ಜಾತಿ’ ನಿಡುಸುಯ್ದಳು. ‘ನೀವು ಒಪ್ಪೋದು ಮುಖ್ಯ ಕಣ್ರಿ. ನಂದು ದೊಡ್ಡಜಾತಿ ಅಂತ ನಿಮಗ್ಯಾರು ಹೇಳಿದೋರು! ಮನುಷ್ಯತ್ವವೇ ದೊಡ್ಡದು ಅಂತ ನಂಬಿದೋನು ನಾನು… ನಂದು ಎಸ್‌ಸಿ ಜನಾಂಗ. ನನ್ನ ಜೊತೆ ಬರ್‍ತೀರಾ? ಎಲ್ಲಾರ ದೂರ ಹೋಗಿ ಮದುವೆಯಾಗೋಣ’ ‘ನಿಮ್ಮನ್ನು ನಂಬಬಹುದಾ?’ ಗೊಂದಲಕ್ಕೀಡಾಗಿದ್ದಳು ಗೌರಿ. ‘ಶ್ಯೂರ್‌, ಇನ್ನೊಂದೆರಡು ದಿನದಲ್ಲಿ ಸಿಟಿಗೆ ಹೋಗಿ ನನ್ನ ಫ್ರೆಂಡ್‌ ಬೈಕ್‌ ತರ್‍ತೀನಿ. ಆವತ್ತು ರಾತ್ರಿಯೇ….. ತಿಳೀತಲ್ಲ’ ಅವಳ ಕಣ್ಣಲ್ಲಿ ಕಣ್ಣಿಟ್ಟು ಭಾಷೆ ಪಡೆದ.

ಬಂದವರಿಗೆಲ್ಲಾ ಮಂಕಾಗಿ ಬಡಿಸಿದಳು. ನಗೆ ನುಲಿತ ನೆಗೆತ ಇತ್ಯಾದಿಗಳೆಲ್ಲವೂ ಅವಳ ದೇಹದಿಂದ ಒಂದೊಂದಾಗಿ ದೂರವಾಗುತ್ತಿರುವುದನ್ನು ಗಮನಿಸಿದ ಕೂಟ್ರನಿಗೆಂತದೋ ಗುಮಾನಿ. ಮೇಸ್ಟ್ರು ಮಧ್ಯಾಹ್ನದ ಊಟಕ್ಕೆ ಬೈಕಲ್ಲಿ ಬಂದಾಗ ಸೋಜಿಗ. ಸೆಕಂಡ್‌ ಹ್ಯಾಂಡ್‌ ಬೈಕ್‌ ತಗೊಂಡೆ’ ತಾವಾಗಿಯೇ ಮೇಸ್ಟ್ರು ಹೇಳೋವಾಗ ಅವನ ಕಣ್ಣೆಲ್ಲಾ ಗೌರಿಯ ಮೇಲಿತ್ತು. ಗೌರಿ ಬಡಿಸುವಾಗ ತನ್ನ ಮೂಬೈಲ್‌ನಲ್ಲಿ ಜೋರಾಗಿ ಸಾಂಗ್‌ ಹಾಕಿದ ಮೇಸ್ಟ್ರು ‘ಈವತ್ತು ರಾತ್ರಿ ಹನ್ನೂಂದಕ್ಕೆ ರೆಡಿಯಾಗಿರಿ ಗೌರಿ. ಬೈಕ್‌ ಶಬ್ದ ಕೇಳಿದೊಡನೆ ಆಚೆ ಬನ್ನಿ’ ಅಂದ. ಆಕೆ ಸೂರಕ್‌ ಸೊರಕ್‌ಯೆಂದು ಮೂಗೇರಿಸಿದಳು. ಶಾಲೆಗೆ ಬಂದರೂ ಹೈಕಳಿಗೆ ಪಾಠಮಾಡಲು ಮನಸಿಲ್ಲ. ತನ್ನದೇನು ಲವ್ವಾ? ಮಾನವೀಯತೆಯಾ? ಗೌರಿಯ ಪೊಗದಸ್ತಾದ ದೇಹದ ಮೇಲಿನ ಆಸೆಯ? ಮೇಲು ಜಾತಿಯವಳೆಂಬ ಆಕರ್‍ಷಣೆಯಾ ಪ್ರಶ್ನಿಸಿಕೊಂಡ. ಕತ್ತಲಾಗುತ್ತಿದ್ದಂತೆ ಅಧೀರತೆ ಅವನನ್ನಾವರಿಸಿತು. ಆದರೂ ಗಂಡಸುತನ ತುಂಬಿಕೊಂಡು ಗೌರಿ ಮೆಸ್‌ ಮುಂದೆ ಬೈಕ್‌ ತಂದು ನಿಲ್ಲಿಸಿದ. ಅದಕ್ಕೆಂದೇ ಕಾದಿದ್ದ ಗೌರಿ ಸರಕ್ಕನೆ ಆಚೆ ಬಂದಾಗ ಸ್ವರ್‍ಗ ಮೂರೇ ಗೇಣು. ‘ಬೈಕ್‌ ಮೇಲೆ ಕೂತು ಅಭ್ಯಾಸ ಉಂಟಾ? ಕೇಳುತ್ತಾ ಬೈಕನ್ನು ಅಷ್ಟುದೂರ ತಳ್ಳಿಕೂಂಡು ಹೋಗಿ ನಿಲ್ಲಸಿದ. ‘ಗಾಬರಿಯಾಗಬೇಡಿ. ಭಯವಾದ್ರೆ ನನ್ನನ್ನು ಬಿಗಿಯಾಗಿ ಹಿಡ್ಕೂಳ್ಳಿ…. ಹತ್ತಿ ಬೇಗ’ ಧೈರ್‍ಯ ತುಂಬಿದ. ಹತ್ತಿಕೂತು ರಾಡ್‌ ಹಿಡಿದಳು. ಸ್ಟಾರ್‍ಟ್‌ ಮಾಡಿ ಓಡಿಸಿದ. ಬೈಕ್‌ ಶಬ್ದ ಕೇಳುತ್ತಲೇ ಆಚೆ ಎದ್ದುಬಂದ ಕೂಟ್ರ, ‘ಅಲ ಬೊಸುಡಿ ಮಗ್ನೆ….. ನಿಲ್ಲಲೇ’ ಎಂದು ಕೂಗುತ್ತಲೇ ಬಿದ್ದಿದ್ದ ಹಿಡಿಗಾತ್ರದ ಕಲ್ಲನ್ನೆತ್ತಿ ಬಿರ್ರನೆ ಬೀಸಿದ. ಹಾರಿ ಬಂದ ಕಲ್ಲು ಗೌರಿಯ ತಲೆಗೆ ಬಡಿದಾಗ ಜಿಲ್ಲನೆ ರಕ್ತ ಚಿಮ್ಮಿತು. ಮೊದಲೇ ಬೆದರಿದ ಹರಿಣಿಯಂತಾಗಿದ್ದ ಗೌರಿ ತಲೆಗೆ ಬಿದ್ದ ಏಟಿಗೆ ಆಯತಪ್ಪಿ ಉರುಳಿಬಿದ್ದಳು. ಅಷ್ಟುದೂರ ಬೈಕನ್ನು ಓಡಿಸಿಬಿಟ್ಟಿದ್ದ ಮೇಸ್ಟ್ರು ಅದನ್ನಲ್ಲೇ ಬಿಟ್ಟು ಓಡಿ ಬಂದು ಅವಳನ್ನು ಎತ್ತುವಾಗಲೇ ಕೊಟ್ರ ಓಡಿ ಬಂದಾಗಿತ್ತು. ಅವನೀಗ ವೀರಭದ್ರನ ಅಪರಾವತಾರ. ಇಬ್ಬರನ್ನು ಹಿಡಿದು ಈಡಾಡಿ ಬಡಿದ. ಗೌರಿ ಚೀರಾಟ ಮೇಸ್ಟ್ರು, ಬೊಬ್ಬೆಗೆ ತಣ್ಣಗೆ ಮಕ್ಕಂಡಿದ್ದ ಮಂದಿ ಮಕ್ಕಳು ಮರಿಯೊಂದಿಗೆ ಎದ್ದು ಬಂದರು. ಮೇಸ್ಟ್ರು ಅಂಬೋ ಅಭಿಮಾನದಿಂದ ಕೆಲವರು ಬಿಡಿಸಲು ಹರಸಾಹಸ ಮಾಡಿದರಾದರೂ ಕೂಟ್ರನನ್ನು ತಡೆಯಲಾಗದೆ ತಾವೂ ಏಟು ತಿಂದರು. ತಮ್ಮ ಊರಿನ ಹುಡ್ಗಿನಾ ಹಾರಿಸ್ಕೊಂಡು ಹೊಂಟಾನೆಂಬುದು ಅರಿವಾಗುತ್ತಲೆ ನೆರೆದವರಲ್ಲೂ ಕೋಪದ ತಾಂಡವ. ಯಾರೋ ಗೌಡರಿಗೆ ಸುದ್ದಿ ಮುಟ್ಟಿಸಿದಾಗ ಅವರೂ ತಮ್ಮ ಮಂದಿಮಾರ್‍ಬಲದೊಂದಿಗೆ ಬಿರುಗಾಳಿಯಂತೆ ಬಂದರು. ಅವರಿಗಂತೂ ನಖಶಿಖಾಂತ ಉರಿ. ‘ಎಲಲೆ ಬೆರ್‍ಕೆಮುಂಡೆ, ನಾನು ಒಂದೀಟು ಮುಟ್ಟಿದ್ರೆ ಶಿವಶರಣಯಂಗೆ ಆಡ್ತಿದಲ್ಲೆ’ ಗದರಿಸಿ ಕನ್ನೆ ಕೆನ್ನೆಗೇ ಬಾರಿಸಿದರು. ‘ಮರಕ್ಕೆ ಕಟ್ರಲೆ ಇವರನ್ನಾ’ ಆಲ್ಡರ್‌ ಪಾಸ್‌ಮಾಡಿದರು. ಗೌರಿ ಮತ್ತು ಮೇಸ್ಟರನ್ನು ಹುಣಿಸೆಮರಕ್ಕೆ ಬಿಗಿದರು. ‘ಗೌಡ್ರೆ, ಇವರ್‍ನ ಜೀವ ಬೆರ್‍ಕೆಲೆ ಬಿಡಂಗಿಲ್ರಿ. ನಾಳೆ ಎಲ್ಲರೂವೆ ಇದ್ನೆ ಕಲಿತಾರು. ಇದು ನಮ್ಮ ಹಳ್ಳಿ ಮಾನ ಮರ್‍ವಾದಿ ಪ್ರಶ್ನೆ. ಕೊಟ್ರ ಎಗರಾಡುತ್ತ ಕೈಗೆ ಸಿಕ್ಕ ಕಲ್ಲುಗಳಿಂದ ಗೌರಿ, ಮೇಸ್ಟ್ರು ಮೇಲೆ ಕಲ್ಲಿನ ಮಳೆಗೆರೆದ. ಹಳ್ಳಿ ಮರ್‍ಯಾದಸ್ಥರಲ್ಲಿ ಕಿಚ್ಚುಹತ್ತಿ ಹಲವರು ಕಲ್ಲನ್ನೆತ್ತೆ ಬೀಸುತ್ತಾ ಸಾಮೂಹಿಕ ಸನ್ನಿಗೆ ಒಳಗಾದರು. ಗದ್ದಲ ಗಲಾಟಿಗೆ ಶಾನುಭೋಗ ಪಟೀಲ ತಳವಾರ ಹಿಂಗೆ ಊರಿಗೆ ಊರೇ ಸೇರಿತು. ಮಗಳು ಮತ್ತು ಮೇಸ್ಟರನ್ನು ಬಿಡಿಸಲು ಬಾಯಿಬಡಿದುಕೊಳ್ಳುತ್ತಾ ಹೋದ ತಂದೆತಾಯಿಯರನ್ನು ಮಕಮುಸಡಿ ನೋಡದೆ ಕೂಟ್ರ ಬಡಿದಾಚೆಗೆ ನೂಕಿದ. ಕೊಳಗೇರಿ ಜನವೂ ಬಂತು. ಪಾಪ ಮೇಟ್ರು ಒಳ್ಳೇರು. ನಮ್ಮ ಹೈಕಳಿಗೆಲ್ಲಾ ಉಪ್ಪಿಟ್ಟು ಕೊಡೋರು ಎಂದು ಲೂಚಗುಟ್ಟೋವಾಗ ಒಬ್ಬ ಅವರುಗಳ ಮನಸ್ಸಿಗೇ ಹುಳಿ ಹಿಂಡಿದ. ‘ಆ ಪ್ಯಾಟಿನನ್ಮಗ ನಮ್ಮೋನಂತೆ ಕಣ್ರಾ, ಒಂದಿನಾನಾರ ನಮ್ಮ ಕೇರಿಗೆ ಬಂದ್ನೆ? ದೊಡ್ಡೋರ ಜೊತೆ ಸೇರ್‍ಕಂಡು ಬಿಳಿಬಟ್ಟಿನಾಗೆ ಅಡ್ಡಾಡೋನು. ಇಕ್ಕಲಿಬಿಡ್ರಲಾ’ ಕೇರಿ ಮುಖಂಡನಾದ ತುಕ್ರನೇ ಹಿಂಗಂದಾಗ ತಕರಾರು ತೆಗೆಯೋ ದಮ್ಮು ಯಾರಗೈತೆ? ಗೌರಿ, ಮೇಸ್ಟ್ರು ರಕ್ತದಲ್ಲಿ ತೊಯ್ದು ತೊಪ್ಪೆಯಾದರು. ‘ಅಯ್ಯೋ ಅಪ್ಪಾ ಅಮ್ಮ ಸತ್ವಿ ಕಾಪಾಡ್ರಪಾ’ ಎಂದರಚಾಡುತ್ತಿದ್ದ ಅವರುಗಳ ನಾಲಿಗೆ ಕ್ರಮೇಣ ಬಿದ್ದುಹೋಗಿ ಸ್ವರವೇ ಉಡುಗಿ ಹೋದಾಗ ಗೌಡರು ಕೂಂಚ ಅದರುಬದರಾದರು. ‘ಅಯ್ಯೋ ನನ್ನಮಕ್ಳಾ ಸತ್ತುಗಿತ್ತು ಹೋದ್ರೇನ್ಲಾ?’ ಅವರಿವರ ಮುಖ ನೋಡಿದರು. ಹಲವರು ಭೀಕರ ದೃಶ್ಯ ನೋಡಲಾರದೆ ಅಲ್ಲಿಂದ ಕಂಬಿಕಿತ್ತಿದ್ದರು. ‘ಅಲೆ, ಆ ಡಾಕ್ಟರನಾರ ಕರ್‍ಕೊಂಬರ್ರಲಾ ವಸಿ ಟೆಸ್ಟ್‌ ಮಾಡ್ಯಾರ ಬೊಗಳ್ಳಿ’ ಗೌಡರ ಪೇಚಾಟ. ಬೈಕ್‌ ನಿಲ್ಲಿಸಿಕೊಂಡು ಈ ಅಮಾನುಷ ಕೃತ್ಯವನ್ನು ಎವೆಯಿಕ್ಕದೆ ನೋಡುತ್ತಿದ್ದ ಡಾ. ಹಲಗೆಪ್ಪನಿಗೆ ಮಾತೇ ಮರೆತು ಹೋಗಿದ್ದವು. ಅಲ್ಲಿಗೂ ಅಂಜುತಲೇ ಮುಂದೆ ಬಂದು ಆತ ಪರೀಕ್ಷಿಸಿದ. ‘ಸಾರಿ ಗೌಡರೆ… ಸತ್ತುಹೋಗಿಬಿಟ್ಟವರೆ’ ಅಂದ. ಮತ್ತೊಂದಷ್ಟು ಜನ ಸರಕ್ಕನೆ ಜಾಗ ಖಾಲಿ ಮಾಡಿದರು. ‘ಇವರನ್ನ ಸುಟ್ಟುಹಾಕಿ ಬಿಡ್ರಲೆ ಅತ್ತ’ ಗೌಡರು ತಮ್ಮ ಗ್ಯಾಂಗ್‌ಗೆ ಆಲ್ಡರ್‌ ಮಾಡಿದರು. ಅಡ್ಡಬಂದರು ಶಾನುಭೋಗ. ಅವರೇ ಸಮಸ್ತರನ್ನೂ ಜಬರಿಸಿ ‘ಮಲಿಕ್ಕಳಿ ಹೋಗ್ರಲಾ’ ಎಂದು ಓಡಿಸಿದರು. ಉಳಿದದ್ದು ಗೌಡ, ಅವರ ಗ್ಯಾಂಗ್‌ ಮತ್ತು ಕೊಟ್ರ ಮಾತ್ರ ‘ಗೌಡ್ರೆ, ಆಗಿದ್ದಾಗೋತು….. ಕಾನೂನಿಂದ ತಪಿಸಿಕೊಳ್ಳೋ ಜಾಡು ನೋಡಬೇಕಲ್ವಾ? ರಾತ್ರಿ ನಾಲ್ಕು ಗಂಟೆಗೇ ಬಂದು ಇದೇ ಮರಕ್ಕೆ ಇಬ್ಬರನ್ನೂ ಹಗ್ಗತಗೊಂಡು ನೇತುಹಾಕ್ಸಿ. ಪ್ರೇಮಿಗಳು ಆತ್ಮಹತ್ಯೆ ಮಾಡ್ಕೂಂಡವೆ ಅಂತ ಪುಕಾರು ಹಬ್ಬಿಸಿ. ಆಮೇಲೆ ಸರ್‍ವರ ಸಮಕ್ಷಮ ಬೆಂಕಿ ಇಟರಾತು’ ಐಡಿಯಾ ಕೊಟ್ಟ ಶಾನುಭೋಗಪ್ಪ ‘ಅಲ್ಲಯ್ಯಾ ನಾಳೆ ಪೋಸ್ಟ್‌ಮಾರ್‍ಟಂ ಮಾಡಬೇಕು ಅಂತ ಪೊಲೀಸರು ಕ್ಯಾತೆ ತೆಗೆದ್ರೆ?’ ಗೌಡರ ತಹತಹ. ‘ಮಾಡೋರು ಯಾರು? ಡಾ.ಹಲಗೆಪ್ಪನಲ್ವೆ? ಅವನು ನೀವು ಹೇಳಿದ್ದೇ ಬರಿತಾನೇಳಿ’ ನಕ್ಕ ಶಾನುಭೋಗಪ್ಪ. ಗೌಡರು ಕೊಟ್ರನನ್ನು ದುರುಗುಟ್ಟಿದರು. ಬಳಲಿಬೆಂಡಾಗಿದ್ದ ಕೊಟ್ರ, ಅರ್‍ಥವಾಯಿತೆಂಬಂತೆ ಗೋಣು ಆಡಿಸಿದ.

ಬಂದು ಮಲಗಿದ ಕೊಟ್ರನಿಗೆಲ್ಲಿಯ ನಿದ್ದೆ. ತಂದೆತಾಯಿ ಒಳಕೋಣಯಲ್ಲಿ ಮುದುಡಿಕೊಂಡಿದ್ದರು. ನಾಲ್ಕುಗಂಟೆ ಆಗುವುದನ್ನೇ ಕಾದು ಎರಡು ಹಗ್ಗದ ಸಿಂಬೆಯನ್ನು ಹಿಡಿದು ಸದ್ದಾಗದಂತೆ ಹೂರಬಾಗಿಲು ದೂಡಿ ಹುಣಸೆಮರದ ಬಳಿ ಬಂದ. ಅತ್ತಿಂದ ಗೌಡರ ಆಳುಗಳು ಬರುವುದೂ ಕಂಡಿತು. ಆದರೆ ಮರಕ್ಕೆ ಕಟ್ಟಿದ್ದ ಶವಗಳೇ ಕಾಣಲಿಲ್ಲ. ನೆಲಕ್ಕುರುಳಿದ್ದ ಬೈಕೂ ನಾಪತ್ತೆ! ದಿಕ್ಕೆಟ್ಟ ಎಲ್ಲರೂ ಗೌಡರ ಮನೆಯತ್ತ ಓಡಿ ಸುದ್ದಿ ಮುಟ್ಟಿಸಿದರು. ಪರಪರನೆ ತಲೆಕೆರೆದುಕೊಂಡರು ಗೌಡರು. ‘ಹಂಗಾರೆ ಹಗ್ಗ ಬಿಚ್ಕೊಂಡು ಓಡಿ ಹೋದರು! ಅವರು ಸತ್ತಿರಲಿಲ್ವಾ?’ ನೆರೆದ ಗ್ಯಾಂಗನ್ನು ಹುಳಿಹುಳಿ ನೋಡಿದರು. ‘ಹಂಗಾರೆ ಆ ಡಾಕಟ್ರು ಹಲಗೆಪ್ಪ ಯಾಕಂಗೆ ಸುಳ್ಳು ಬೊಗಳ್ದ?’ ಏಕ್‌ಧಂ ರಾಂಗ್‌ ಆದರು. ‘ಇವನವ್ನು. ದರದರ ಎಳ್ಕೊಂಡು ಬರ್ರಲಾ ಅವನ್ನ ಅವನ ಹಂಡ್ರನ್ನಾ…. ಇಲ್ಲಾ ನಿಮ್ಮನ್ನೆಲ್ಲಾ ಸಿಗಿದು ತೋರಣ ಕಟ್ಟಿಬಿಡ್ತಿವ್ನಿ ನಾಯ್ಗುಳಾ’ ಅಬ್ಬರಿಸಿದರು. ಆಳುಗಳು ಕೂಟ್ರನೊಂದಿಗೆ ಡಾಕ್ಟರನ ಕ್ವಾರ್‍ಟರ್‍ಸ್‌ನತ್ತ ದಮ್ಮುಕಟ್ಟಿ ರನ್ನಿಂಗ್‌ರೇಸ್‌ ಮಾಡಿದರು. ಮನೆಗೆ ಬೀಗ ಜಡಿದಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೫
Next post ಸಂಕ್ರಾಂತಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys