“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದುದೊಂದು ಓಲೆ ಕಿಡಕಿಯ ಬಳಿಯಲ್ಲಿ ಬಾಲಕನು ಎಸೆದು ಓಡಿ ಹೋಗಹತ್ತಿದ್ದನು. ಓಲೆಯನ್ನು ಬಿಚ್ಚತೂಡಗಿದನು “ಕೊನೆಯ ಸಂದೇಶ” ವೆಂಬ ತಲೆಬರಹವು ಆತನನ್ನು ಗಾಬರಿಗೊಳಮಾಡಿತು.
“ಕುಮಾರ” ಎಂದು ಕೂಗುತ್ತ ತಂದೆಯು ಕೋಣೆಯ ಒಳಗೆ ಬಂದನು. ಗಾಬರಿಯಿಂದ ಕುಮಾರನು ಓಲೆಯನ್ನು ಮೇಜಿನ ಡ್ರಾಅರದಲ್ಲಿ ಇಟ್ಟನು. ಪಾಪ! ಕಿಡಕಿಯಿಂದ ಓಲೆ ಒಗೆದುದನ್ನು ಕಂಡುಕೊಂಡೇ ತಂದೆಯು ಬಂದಿರುವನೆಂಬುದನ್ನು ಕುಮಾರನೇನು ಬಲ್ಲ?
“ಎಲ್ಲರ ಊಟವಾಗಿ ಎರಡುತಾಸಾದರೂ ಇನ್ನೂ ನೀನು ಊಟಕ್ಕೇ ಏಳಲೊಲ್ಲೆಯಲ್ಲ, ಬೇಗನೆ ಊಟ ಮಾಡಿಕೋ ಸೋನೂನನ್ನು ಕರೆದು ಕೊಂಡು ಗೋವಿಂದರಾಯರು ಬರುವ ಹೊತ್ತಾಗಿದೆ”
“ತಂದೆಯವರೇ ನನಗೇಕೋ ಇಂದು ದೇಹಾಲಸ್ಯವಾಗಿದೆ. ಊಟವನ್ನು ಸಹ ಅದಕ್ಕಾಗಿಯೇ ಮಾಡಿಲ್ಲ. ಸೋನೂ ಬೇಡ; ನೀನೂ ಬೇಡಾ; ಯಾರೂ ಬೇಡ.”
“ಹೌದು ಗೊತ್ತುಂಟು. ಆ ದರಿದ್ರ ಮುಂಡೆ ಅಖಂಡಸೌಭಾಗ್ಯವತಿ ವತ್ಸಲಾನ ಚಿಂತೆ ಹತ್ತಿದೆಯಲ್ಲವೇ? ಅಲ್ಲವೋ ಮೂರ್‍ಖ, ಸೋನೂ ನಂಥಾ ರೂಪವತಿ ಹುಡಿಗೆ ನಿನಗೆಲ್ಲಿಯಾದರೂ ದೊರೆಯುವದುಂಟೇ? ಇಷ್ಟೇ ಅಲ್ಲ. ೨ ಸಾವಿರ ರೂಪಾಯಿ ವರದಕ್ಷಿಣೆ ಕೊಡುವಂಥಾ ಮನೆ!” “ಛೇ ನಿಜವಾದ ಪ್ರೇಮ ಹಾಗೂ ತತ್ವಗಳು ಸೌಂದರ್‍ಯ ಹಾಗು ಧನದ ಬೆನ್ನು ಹತ್ತುವದಿಲ್ಲ. ಪುನರ್‍ವಿವಾಹದ ತತ್ವಕ್ಕೆ ಸಮ್ಮತಿಯುಳ್ಳವನು. ನಾನು, ವತ್ಸಲೆಗೆ ಪ್ರೇಮದಾನವನ್ನು ಮನಸ್ಸಿನಿಂದ ಮಾಡಿರುವೆನು ನಾನು ಹೀಗಿರಲು ನನಗೆ ತಾವು ಇಲ್ಲದ ಆಶೆ ಹೆಚ್ಚಬೇಕೆನ್ನುವಿರಾ?
“ಸಾಕು ನಿನ್ನ ತತ್ವ! ಗಂಡಸತ್ತೂ ಕುಂಕುಮವನ್ನು ಹಚ್ಚಿ ಕೊಂಡು ಮೆರೆಯುವ ಆ ದರಿದ್ರಮುಂಡೆ…….
“ಹಿರಿಯರಾದರೇನಾಯಿತು. ತಡೆಯಿರಿ ನಿಮ್ಮ ಅಭದ್ರವಚನಗಳನ್ನು! ಆ ಪವಿತ್ರ ಬಾಲಿಕೆಗೆ ಗಂಡನ ಪರಿಚಯವಾದರೂ ಇದೆಯೇ ನೆಂಬುದನ್ನು ನೀವೇ ಹೇಳಿರಿ. ೮ ವರ್ಷದವಳಿದ್ದಾಗ ಲಗ್ನ ಮಾಡಿದ ನೀಚ ಸಮಾಜದ ತಪ್ಪಿಗಾಗಿ ಅವಳಿಗೆ ಮುಂಡೆಯನ್ನುವಿರಾ? ಬೇಡ ತಂದೆಯವರೆ ನಾನವಳನ್ನು ಮದುವೆಯಾಗುವೆನು. ತಾವು ಒಪ್ಪಿಗೆಯನ್ನು ಈಯಲೇಬೇಕು.”
“ಛೇ, ಅದೆಂದಿಗೂ ಆಗದು. ನನ್ನ ವಿರುದ್ಧ ವರ್‍ತನೆಮಾಡುವ ನೀನು ನನ್ನ ಮಗನೇ ಅಲ್ಲ. ಇದೇ ಕ್ಷಣಕ್ಕೆ ಮನೆಬಿಟ್ಟು ತೆರಳು.”
“ಇದೋ ಹೊರಟೆ?” ಎಂದವನೇ ಕುಮಾರನು ಹೊರಬಿದ್ದನು. ಪತ್ರದ ಅರಿವುಕೂಡ ಆತನಿಗುಳಿಯಲಿಲ್ಲ. ನೆಟ್ಟಗೆ ವತ್ಸಲೆಯ ಮನೆಗೆ ನಡೆದನು. ವತ್ಸಲೆಯ ತಾಯಿಯೊಬ್ಬಳೇ ಅಲ್ಲಿದಳು. “ವತ್ಸಲೆಯೆ”ಲ್ಲಿ ಎಂದು ಕೇಳಿದನು ಒಂದು ತಾಸಾಯಿತು. ಎಲ್ಲಿಯೋ ಹೋಗಿಬಿಟ್ಟಿದ್ದಾಳೆ ಎಂದು ಆಕೆ ಹೇಳಿದಳು.
“ವತ್ಸಲೆ, ವತ್ಸಲೆ” ಎಂದು ಧ್ಯಾನಿಸುತ್ತ ಅವಳನ್ನು ಹುಡುಕ ತೊಡಗಿದನು.
ಇತ್ತ ಕುಮಾರನ ತಂದೆಯು ಕುಮಾರನು ಹೊರಗೆ ಹೋಗುವದೊಂದೇ ತಡ ಡ್ರಾಅವರನ್ನು ಓಲೆಯನ್ನು ಬಿಚ್ಚಿದನು.
ಓಂ ಶಾಂತಿಃ ಶಾಂತಿಃ
ಕೊನೆಯ ಸಂದೇಶ
ಪ್ರಿಯ ಕುಮಾರ,
ನನ್ನ ಸಲುವಾಗಿ ನಿನಗೆ ೪-೬ ತಿಂಗಳಿಂದ ಬಹಳ ತೊಂದರೆಗೊಳಗಾಗಬೇಕಾಗಿದೆ. ನಮ್ಮಂಥ ಬಾಲವಿಧವೆಯರಿಗೆ ಈ ಕ್ರೂರಸಮಾಜವು ದುಃಖದಲ್ಲಿಯೇ ಇಡಬೇಕೆನ್ನುತ್ತಿರುವಾಗ ನೀನು ವ್ಯರ್‍ಥ ನನಗೋಸುಗ ಬಹಿಷ್ಕೃತನಾಗದೆ ನಿಮ್ಮ ತಂದೆಯವರ ಆಜ್ಞೆಯಂತೆ ಬೇಕಾದವರ ಜೊತೆಗೆ ವಿವಾಹವನ್ನು ಮಾಡಿಕೋ. ನೀನು ವಚನವನ್ನಿತ್ತದ್ದರಿಂದ ನಾನು ಈ ವರೆಗೆ ಪ್ರಾಣವನ್ನು ಹಿಡಿದಿದ್ದೆನು. ನಾನಿನ್ನು ಹೆಚ್ಚುಕಾಲ ಈ ಪೃಥ್ವಿಯ ಮೇಲೆ ಉಳಿಯಲಾರೆ, ಸಕೇಶಿಯರಿಗೆ ಈ ಭೂಮಿ ಮೇಲೆ ಯಾವಬಗೆಯ ಅಧಿಕಾರವೂ ಇಲ್ಲವಂತೆ. ಕೆಂಪು ಸೀರೆಯನ್ನುಟ್ಟುಕೊಂಡು ಒಕ್ಕಲಗಿತ್ತಿಯರಂತೆ ಮೈಮುರೆ ಕೆಲಸ ಮಾಡುತ್ತ ಒಂದು ಹೊತ್ತು ಕೂಳುತಿಂದು ನಾಯಿಯಂತೆ ಮನಿಹಿಡಿದುಕೊಂಡು ಬಿದ್ದಿರುವುದೆ ಅವರ ಕರ್‍ತವ್ಯವಂತೆ ಕಾರ್‍ಯಕಟ್ಟಳೆಗಳಲ್ಲಿ ನಮ್ಮ ಮೋರೆ ಅಶುಭ. ನಾವು ಮುಟ್ಟಿದ ನೀರು-ನಿಡಿ ಮೈಲಿಗೆ; ಇದೆಲ್ಲಿಯ ಧರ್‍ಮ, ಪುನರ್‍ವಿವಾಹ ಮಾಡಿಕೊಳ್ಳುವದೆಂದರ ಧರ್‍ಮವು ಹಾಳಾಗಿ ಕಲಿಯುಗದ ಸಮಾಪ್ತಿ ಬೇಗನೆ ಆಗುವದೆಂದು ಸ್ವಾರ್‍ಥಪರ ಸನಾತನಿಗಳ ಮತ. ನಿಮ್ಮ ತಂದೆಯವರು ೬ನೇ ಮದುವೆಯಾದರೂ ಕೇಳುವವರಾರಿರುವರು. ಮುಳ ಗೊಳಿಕಿಯಲ್ಲಿ ಶಿಶುವನ್ನು ಒಗೆದು ಅವಳು ಪಾರಾದಳು. ಇದನ್ನು ಅಡಗಿಸಿಡಲು ಧರ್‍ಮಿಷ್ಟರೆಂದು ಕೊಚ್ಚಿಕೊಳ್ಳುವ ಕ್ರೂರ ಪಿಶಾಚಿಗಳಿಗೆ ನಾಚಿಕೆಯೆಲ್ಲಿ ಬರಬೇಕು. ಶಿಶುವನ್ನು ಪತ್ತೆ ಹೆಚ್ಚಿದ ಅಧಿಕಾರಿಯೊಬ್ಬನಿಗೆ ನಿಮ್ಮ ತಂದೆಯವರೇ ಮಧ್ಯಸ್ಥರಾಗಿ ಬಂದು ಲಂಚಕೊಟ್ಟು ಕಳಿಸಿಕೊಟ್ಟದ್ದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ಮಾಡುವದೇನಿದೆ. ದುಡ್ಡಿದ್ದವರು ಏನು ಮಾಡಿದಲೂ ಛಂದ. ಶಾಸ್ತ್ರಿಗಳು ನಿಮ್ಮ ತಂದೆಯವರ ಪುರೋಹಿತರು, ನಾನು ಕುಲಕಂಟಿಕಿ….. ಬೇಡ. ಪರರಿಗೆ ದೋಷಕೊಡದೆ ಇನ್ನು ಅರ್‍ಧ ತಾಸಿನೊಳಗೆ ದೇವೀಘಟ್ಟಕ್ಕೆ ಹೋಗಿ ಗಂಗೆಯ ಮೊರೆಹೋಗುವೆನು.
ನೀನು ಸುಖಿಯಾಗಿದ್ದರೆ ಸಾಕು,
ಇದೇ ನನ್ನ ಕೊನೆಯ ಸಂದೇಶ
ನಿನ್ನ ವತ್ಸಲೆ
ಪತ್ರವನ್ನು ಒದಓದುತ್ತಿದ್ದಂತೆ ಕುಮಾರನ ತಂದೆಗೆ ವಿಷಾದವೂ ಬೊಧನೆಯೂ ಆಗತೊಡಗಿತು. ಕೂಡಲೇ ದೇವೀಘಟ್ಟದ ಕಡೆಗೆ ನಡೆದರು.
ಇನ್ನು ನಮ್ಮ ಕುಮಾರನ ಅವಸ್ಥೆ ಏನಾಗಿದೆ. ನೋಡೋಣ. ಕುಮಾರನು ಒಂದೆರಡು ಸ್ಥಳದಲ್ಲಿ ವತ್ಸಲೆಯನ್ನು ಹುಡುಕಿ ಕೊನೆಗೆ ದೇವೀಘಟ್ಟದ ಕಡೆಗೆ ನಡೆದನು. ದೇವೀಫಟ್ಟವೆಂದರೆ ಕುಮಾರ-ವತ್ಸಲೆ ಯರ ಮಿಲನ ಸ್ಥಾನ. ಬೇಸರ ಬಂದಾಗ ಅವರು ಆ ಬಂಡೆಗಲ್ಲ ಮೇಲೆ ಹೋಗಿ ಕುಳಿತುಕೊಳ್ಳವರು. ಬಿಸಲಲ್ಲಿ ಹೋಗುವ ಸಂಭವವಿಲ್ಲದಿದ್ದರೂ ಸಂದೇಹದಿಂದ ಆತನು ಅಲ್ಲಿ ತೆರಳಿದ್ದು.
ವತ್ಸಲೆಯು ಸಮಾಜದಲ್ಲಿಯ ಅನೇಕ ವೈಷಮ್ಯಗಳನ್ನು ವಿಚಾರ ಮಾಡುವದರಲ್ಲಿ ಕುಳಿತವಳು ಎದ್ದೇಳಲಿಲ್ಲ. ಅವಳಿಗೆ ಇನ್ನೂ ಒಂದು ಘಂಟೆ ಗಂಗೆಯ ನೀರಿನ ತೆರೆಗಳ ನಿರೀಕ್ಷಣೆ ಮಾಡುವದರಲ್ಲಿಯೇ ಕಾಲ ಕಳೆಯಬೇಕೆಂದಾಗಿದ್ದರಿಂದ ಇನ್ನೂ ಅದರಲ್ಲಿ ಹಾರಿಕೊಂಡಿರಲಿಲ್ಲ. ಕುಮಾರನು ಮೆಲ್ಲಗೆ ಇವಳ ಹತ್ತಿರದಲ್ಲಿ ಕುಳಿತುಕೊಂಡನು. ಒಮ್ಮೆಲೆ ಅವಳು ಬೆಚ್ಚಿಬಿದ್ದಳು. ಕೊನೆಗೆ ಕುಮಾರನು ಮನೆಯಲ್ಲಿ ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿದನು. ಅವಳಿಗೆ ಆನಂದವಾಯಿತು “ಕುಮಾರ ನನ್ನ ಸಲುವಾಗಿ ನಿನಗೆ ಮುಂದೆ ಎಷ್ಟೊಂದು ಸಂಕಟ ಬರುವದೋ ಯಾರು ಬಲ್ಲರು” ಎಂದು ಮರುಗಿದಳು.
“ನಾನಿರುವವರೆಗೆ ಯಾವ ಸಂಕಟವೂ ಬರಲಾರವು. ಸೌಭಾಗ್ಯವತಿ ಯಾಗಿ ಬಾಳು” ದೂರದಿಂದ ಧ್ವನಿಯೊಂದು ಕೇಳಿಸಿತು. ಅದಾರದಿರಬಹುದು? ಕುಮಾರನ ತಂದೆಯವರದಿರಬಹುದೆಂದು ವಾಚಕರು ತರ್‍ಕಮಾಡದೆ ಇರುವುದು ಸಾಧ್ಯವೆ?
*****