೧
ಮೂಡಣ ಬಾನಿನ ಕರೆ ನಗಲು,
ಕತ್ತಲೆ ಮೊತ್ತವೆ ಪರಿದುಗಲು,
ಉಷೆರಮೆ ನಿಶೆರಮೆಯನು ಜಯಿಸಿ
ಮುಂದಕೆ ಬಂದಳು ಛವಿ ಹರಿಸಿ!
೨
ಕತ್ತಲೆ ಕಡಲಲಿ ತಿರೆ ಮುಳುಗಿ.
ನಿಶ್ಚೇಷ್ಟಿತವಾಗಿರಲುಡುಗಿ,
ಬೆಳಕಿನ ತಿಕಿಳಿವನು ಕರುಣಿಸುತ
ಎಬ್ಬಿಸುತಿರುವಳು ನಸುನಗುತ!
೩
ಹೊಸದಾಗರಳಿದ ತಾವರೆವೋಲ್
‘ಲಕ-ಲಕ’ ಹೊಳೆವಳು ಉಷೆಯಿವಳು.
ಮಗುವಿನ ನಿರ್ವ್ಯಾಜ ಸ್ಮಿತವೋಲ್
`ಕಿಲ-ಕಿಲ’ ನಗುವಳು ನಲಿಯುವಳು
೪
ಈ ವರೆಗಾದರೆ ತೆರೆದಿರುವ
ಚುಕ್ಕಿಗಳಾಲಿಯ ನಭವಧುವ
ಕಣ್ಣೆವೆ ಕೀಲಿಸಿ, ಕರಿಹೊದಿಕೆ
ತೆಗೆಯುತ ಕೊಟ್ಟಳು ಬಿಳಿರವಕೆ.
೫
ಅರುಣನ ರೌದ್ರದ ರಕ್ತತೆಯು,
ಸೂರ್ಯನ ಸೋಜ್ವಲ ಪ್ರಖರತೆಯು,
ಉಷೆಯಲಿ ಬೆಸೆಯದು; ಶಾಂತತೆಯ
ಮಾರ್ದವವೆಸೆವುದು ಸೌಮ್ಯತೆಯ!
೬
ಅರುಣನ ಭಗಿನಿಯು ಉಷೆ ತರುಣಿ,
ನೇಸರ ಮಾತೆಯು ಉಷೆ ರಮಣಿ,
ಮಗನನು ಪಡೆಯುತ, ‘ಈ ಜಗದ
ಸೇವೆಯನೆಸಗೆಂ’ ದಾದರದ
ಹರಕೆಯನರುಹುತ, ತಾಯ್ತನದ
ತನ್ನಧಿಕಾರದಿ ನೆರೆವ ಮುದ.
೭
ಎ೦ದೋ ಹಿ೦ದಿನ ಕಾಲದಲಿ,
ಜಗದಲಿ ಜೀವಿಯ ಶೂನ್ಯದಲಿ,
ಅಂಧ ತಮಸ್ಸಿನ ಸಮಯದಲಿ,
ಪೊಡವಿಗೆ ಸರ್ವ ಪ್ರಥಮದಲಿ,
ಬೆಳಕಿನ ಅನುಭವವಾರಿಂದ?
ಉಸೆವೆಳಗಿನ ಕಿರುಗೆರೆಯಿಂದ!
೮
ಅಂದಿಂದೀವರೆಗಾ ಉಷೆಯು
ನಿತ್ಯ ಸನಾತನೆಯಾಗಿಹಳು!
*****
೧೯೩೭

















