ಆಮಿಷ

ಆಮಿಷ

ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು.

“ತಾನೇಕೆ ದುಡುಕಿಬಿಟ್ಟೆ? ತಾನು ಮಾಡಿದ್ದು ಎಂಥಾ ಘೋರ! ಅಸಹ್ಯ ಬೀಸಿ ಬಂದ ಗಾಳಿಗೆ ಕಿಟಕಿ ಬಾಗಿಲುಗಳಿಗೆ ಹಾಕಿದ್ದ ಪರದೆಗಳು ಪಟ ಪಟನೆ ಬಡಿದವು.

ಹೊರಗಡೆ ಬಾಗಿಲು ತಟ್ಟಿದ ಶಬ್ದವಾಯಿತು.

“ರಮಾ…” ಸದಾನಂದ ಕರೆಯುತ್ತಿದ್ದ.

ದೇಹದಲ್ಲಿ ತಣ್ಣನೆಯ ರಕ್ತ ಹರಿದಂತಾಯಿತು. ಅವಳ ತುಟಿಗಳು ಕೈಗಳು ಕಾಲುಗಳು ದೇಹವಿಡೀ ಮಂಜಿನ ಗಡ್ಡೆಯಂತಾಯಿತು.

“ರಮಾ ಬಾಗಿಲು ತೆಗಿ” ಪುನಃ ತಟ್ಟಿದ. ಯಾರಿಂದಲೋ ತಳ್ಳಲ್ಪಟ್ಟವಳಂತೆ ಮುಂದೆ ನಡೆದಳು. ನಡುಗುತ್ತಿದ್ದ ಕೈಗಳು ಬೋಲ್ಟನ್ನು ತೆಗೆದವು.

“ಅದೆಷ್ಟು ಹೊತ್ತು ಮಾಡುತ್ತೀಯಾ! ನಿನ್ನನ್ನು ನೋಡಲು ಎಷ್ಟು ಕಾತುರ ಗೊತ್ತೆ.. ಈ ನಿನ್ನ…”

ಮಾತು ನಿಲ್ಲಿಸಿ ಅವಳ ಮುಖ ನೋಡಿದ. ಅವನ ಮುಖದ ಮೇಲಿನ ಹೊನಗೆ ಮುದುಡಿತು. ಹತ್ತಿರ ಬಂದ.

“ಯಾಕೆ ಹೀಗೆ? ಹುಷಾರಿಲ್ಲವಾ…?” ಅವನ ಕೈಗಳು ಅವಳ ಕುತ್ತಿಗೆ… ಮುಖ ಹಣೆಯನ್ನು ಸವರಿದವು.

ಹಣೆ ಮಂಜಿನಷ್ಟು ತಣ್ಣಗಿತ್ತು.

“ಜ್ವರ ಇಲ್ಲ… ಏನೂ ಇಲ್ಲ… ಆದರೂ ಮುಖವೇಕೆ ಬಾಡಿದೆ? ನನ್ನ ಮೇಲೆ ಕೋಪವೇ?” ಅವನ ಮಾತು ಮುಗಿಯುವ ಮುನ್ನ ರಮಾ ಅವನ ಕೈಗಳನ್ನು ಕಿತ್ತುಹಾಕಿ.

“ನಂಗೇನೂ ಆಗಿಲ್ಲ…” ಅಂದು ಅವನನ್ನು ತಳ್ಳಿಕೊಂಡು ಬಾಗಿಲು ದಾಟಿದ ಹೆಂಡತಿಯನ್ನೇ ನೋಡಿದ.

ರಮಾ ಎಂದಿನಂತಿಲ್ಲ. ನಾನು ಬಂದರೆ ನಗುತ್ತಾ ಓಡಿ ಬಂದು ಕೊರಳಿಗೆ ಜೋತುಬಿದ್ದ, ಅನುರಾಗದ ಜೇನು ಸುರಿಸುವ ರಮಾ ಎಷ್ಟು ಒರಟಾಗಿ ಕೈ ಕೊಸರಿಕೊಂಡು ಹೋದಳಲ್ಲ!

ಅಡಿಗೆಯ ಮನೆಯಿಂದ ಪಾತ್ರೆಗಳ ಸದ್ದು ಕೇಳಿಸಿತು. ಸ್ವಲ್ಪ ಹೊತ್ತು ಮಂಕನಂತೆ ಕುಳಿತಿದ್ದ ಸದಾನಂದ ಬಟ್ಟೆ ಬದಲಿಸಿ ಅಡಿಗೆ ಮನೆಗೆ ಬಂದ… ಊಟಕ್ಕೆ ತಟ್ಟೆಯಿಟ್ಟು ಲೋಟಗಳಿಗೆ ನೀರು ಬಗ್ಗಿಸುತ್ತಿದ್ದಳು.

ಚಪಾತಿ ಪಲ್ಯ ತುಂಬಿದ್ದ ಒಂದೇ ತಟ್ಟೆಯನ್ನು ಪ್ರಶ್ನಾರ್ಥಕವಾಗಿ ನೋಡಿದ. ಅವಳು ನೀರು ತುಂಬುತ್ತಿದ್ದ ಲೋಟವನ್ನೇ ನೋಡುತ್ತಿದ್ದಳು.

“ನೀನು ಊಟ ಮಾಡಲ್ವಾ?” ಸದಾನಂದ ಕೇಳಿದ.

“ನಂಗೆ ಹಸಿವಿಲ್ಲ” ಎಂದಳು ಮೊಟುಕಾಗಿಯೆ.

“ನೀನೂ ಕುಳಿತುಕೋ ರಮಾ ಒಟ್ಟಿಗೆ ಊಟ ಮಾಡೋಣ.”

“ಬೇಡ.”

“ನಾನೇ ಮಾಡಿಸುತ್ತೇನೆ ಸರೀನಾ?”

ರಮಾ ಮುಖ ಬೇರೆ ಕಡೆ ತಿರುಗಿಸಿದಳು.

ಕೆಂಪು ಬಳೆಗಳು ತುಂಬಿದ ಅವಳ ದುಂಡು ಕೈಯನ್ನು ಹಿಡಿದು ಹತ್ತಿರಕ್ಕೆ ಎಳೆದುಕೊಂಡ. ಬಿಳುಪೇರಿದ ಮುಖ ಹೆದರಿಕೆಯಿಂದ ತುಂಬಿದ್ದ ಕಣ್ಣುಗಳು ಬೆವರು ಹನಿಗಳು ಮೂಡಿದ ಹಣೆ ನವಿರಾಗಿ ಕಂಪಿಸುತ್ತಿದ್ದ ರಮಾಳನ್ನು ಕಂಡು ಸದಾನಂದನಿಗೆ ಗಾಬರಿಯಾಯಿತು.

“ಯಾಕೆ? ಏನಾಗಿದೆ ಇವತ್ತು?” ಗಂಡನ ಆತಂಕ ತುಂಬಿದ ಮುಖ ಕಂಡು ರಮಾಳ ಗಂಟಲು ಕಟ್ಟಿ ಬಂದಿತು. ಎದುರಿಗೆ ನಿಂತಿದ್ದ ಅವನನ್ನು ಬಳ್ಳಿಯಂತೆ ಸುತ್ತಿಕೊಳ್ಳಬೇಕು ಎದೆಗೊರಗಿ ಮನದಣಿಯೇ ಅಳಬೇಕು ತುಂಬಾ ಅಳಬೇಕು ಪಾಪವೆಲ್ಲಾ ಕೊಚ್ಚಿಕೊಂಡು ಹೋಗುವ ಹಾಗೆ…

“ರಮಾ ಇಲ್ಲಿ ನೋಡು ಯಾಕೆ ಹೀಗಾಡ್ತಿ? ನನ್ನ ಮೇಲೆ ಕೋಪಾನ? ಊರಿಂದ ಏನಾದ್ರೂ ಕಹಿ ಸುದ್ದಿ ಬಂದಿದೆಯಾ? ಅಳು ಯಾಕೆ? ಆ೦?” ಹೇಳುತ್ತಾ ಅವನ ಕೈಗಳು ಅವನನ್ನು ಹಗುರವಾಗಿ ಬಳಸಿದವು.

“ಐದಾರು ವರ್ಷಗಳಿಂದ ಎಂದೂ ಹುಬ್ಬು ಗಂಟಿಕ್ಕದ ರಮಾ ಅಲ್ಲವೇ ಅಲ್ಲ. ಇವತ್ತು ಈ ಆಳು ಈ ಮೌನ ಇದೆಲ್ಲಾ ಏನು? ನಂಗೆ ತುಂಬಾ ಬೇಸರವಾಗತ್ತೆ ರಮಾ…” ಹೇಳುತ್ತಿದ್ದಂತೆಯೇ ಅವನ ಧ್ವನಿ ಭಾರವಾಯಿತು. ಕೈಗಳು ಅವಳನ್ನು ಇನ್ನೂ ಹತ್ತಿರವಿದ್ದ ಗಂಡನನ್ನೇ ನೋಡಿದಳು ರಮಾ, ತನ್ನ ವರ್ತನೆಯಿಂದ ಅವರಿಗೆ ಬೇಸರವಾಗುತ್ತಿದೆಯೆಂದು ತನಗೆ ತಿಳಿಯದೇ? ಮಗುವಿನಂತೆ ಮುಗ್ಧವಾಗಿ ಕೇಳುತ್ತಿದ್ದ ಗಂಡನನ್ನು ಕಂಡು ಅವಳ ಎದೆ ತುಂಬಿ ಬಂದಿತು.

ಎಲ್ಲವನ್ನೂ ಹೇಳಿಬಿಡಲೇ? ತಾನಾಗಿ ಹೇಳದಿದ್ದರೆ ಅದು ಮುಂದೆಂದೂ ಗಂಡನಿಗೆ ಗೊತ್ತಾಗುವುದಿಲ್ಲ. ಹೇಳದೆ ಪಾಪದ ಹೊರ ಹೊತ್ತು ಬಾಳುವುದೇ? ಮಗುವಿನ ಮನಸ್ಸಿನ ಅತಿ ಸೂಕ್ಷ್ಮ ಹೃದಯದ ಗಂಡನಿಗೆ ಮೋಸ ಮಾಡಲೇ? ಹೇಳಿದರೆ ಅವರ ಮೃದು, ದುರ್ಬಲ ಹೃದಯ ಈ ಭಾರಿ ಹೊಡೆತವನ್ನು ಸಹಿಸೀತೇ? ಎಂದೂ ಕಲ್ಪನೆಯನ್ನು ಮಾಡದ ಘಟನೆಯನ್ನು ಹೇಳಿದರೆ ಹೇಗೆ ಎದುರಿಸುತ್ತಾರೆ? ಒಂದು ವೇಳೆ… ತನ್ನನ್ನು ತಿರಸ್ಕರಿಸಿ ಹೊರಗೆ ತಳ್ಳಿದರೆ?

ಅವರಿಂದ ದೂರವಿರಲು ತನ್ನಿಂದ ಸಾಧ್ಯವೇ? ಹೇಳದಿರುವುದೇ ಮೇಲು… ಆದರೆ ಕ್ಷಣ ಕ್ಷಣಕ್ಕೂ ಗಳಿಗೆ ಗಳಿಗೆಗೂ ದಿನದಿನಕ್ಕೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಈ ಪಾಪದ ಹೊರೆ!

ಮೈಮೇಲೆ ಹಿಮಸುರಿದಂತಾಯಿತು.

ಹೊಟ್ಟೆಯಲ್ಲಿ ಏನೋ ಮಿಸುಕಾಡಿದಂತೆ… ಕೈಕಾಲು ಬಡಿದು ಜೋರಾಗಿ ಅಳಲು ಪ್ರಾರಂಭಿಸಿದಂತಾಗಿ ಅವಳು ಬೆಚ್ಚಿ ಹಿಂದೆ ಸರಿದಳು. ಅವಳ ಎರಡೂ ಕೈಗಳು ಕೆಳಹೊಟ್ಟೆಯನ್ನು ಬಲವಾಗಿ ಹಿಡಿದುಕೊಂಡವು.

“ಯಾಕೆ ರಮಾ? ಹೊಟ್ಟೆ ನೋಯುತ್ತಾ?”

ಆತಂಕದಿಂದ ಕೇಳುತ್ತಿದ್ದ ಗಂಡನ ಮೇಲೆ ಅವಳಿಗೆ ವಿನಾಕಾರಣ ಕೋಪ ಬಂದಿತು.

“ಏನಾದ್ರೂ ಆಗಲಿ ಬಿಡಿ… ಯಾಕೆ ಕೊರಗ್ತೀರಿ.. ಸತ್ತು ಹೋದ್ರೆ ನಿಮಗೆ ಒಳ್ಳೆಯದು.” ಕಹಿಯಾಗಿ ನುಡಿದು ಗಂಡನಿಂದ ಬಲವಂತವಾಗಿ ಬಿಡಿಸಿಕೊಂಡು ಅಡಿಗೆ ಮನೆಯಿಂದ ಹೊರಗೆ ಬಂದಳು.

ಸದಾನಂದನಿಗೆ ನಿಜಕ್ಕೂ ಬೇಸರವಾಯಿತು. ತಾನೆಷ್ಟು ಕಳಕಳಿಯಿಂದ ಕೇಳದರೂ ಹೇಳದೆ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಎಂದೂ ಜೋರಾಗಿ ಕೂಗಿ ಮಾತನಾಡಿದವಳಲ್ಲ. ಎಷ್ಟೋ ಸಹಿ ಸಂದರ್ಭಗಳು ಬಂದರೂ ಎಂದೂ ತನ್ನ ಮನೊವೇದನೆಯನ್ನು ತೋರಿಸಿಕೊಂಡವಳಲ್ಲ. ಏನು ಕಾರಣವಿರಬಹುದು? ಕೇವಲ ಹೊಟ್ಟೆ ನೋವಿಗೆ ಇಷ್ಟು ಸಂಕಟವೇ? ಒಂದೇ ದಿನದಲ್ಲಿ ತಿಂಗಳುಗಟ್ಟಲೆ ಖಾಯಿಲೆ ಬಿದ್ದವಳಂತೆ ಬಳಲಿದ್ದಳು. ಮುಖ ರಸ ಹಿಂಡಿದ ಕಬ್ಬಿನಂತಾಗಿತ್ತು.

ಇಷ್ಟು ವರ್ಷಗಳ ದಾಂಪತ್ಯದಲ್ಲಿ ಅವಳಿಗೆ ಒಂದು ಬಾರಿಯೂ ಬರಡು ಜೀವನದ ವ್ಯಥೆ ಇರಲಿಲ್ಲ. ತನಗೆ ಮಕ್ಕಳಾಗದ ಕೊರಗು ಭಾದಿಸುತ್ತಿದ್ದರೂ ಎಂದೂ ತೋರಿಸಿಕೊಂಡವಳಲ್ಲ ನಗುನಗುತ್ತಾ ಓಡಾಡುತ್ತಿದ್ದಳು.

“ನೀವೇ ನನ್ನ ಮಗು ಅಂದ್ಕೋಳ್ತೀನಿ. ಬೇರೆ ಮಕ್ಕಳು ಯಾಕೆ?” ಎಂದವಳು ಮುದ್ದಿನಿಂದ ಎದೆಗೊರಗಿಸಿಕೊಂಡರೆ ದಿನದ ದಣಿವೆಲ್ಲಾ ದಾರಿ ಹೋಗುತ್ತಿತ್ತು. ಅವಳ ಪ್ರೀತಿಯ ನುಡಿಗಳಲ್ಲಿ ಕರಗಿಹೋಗುತ್ತಿದ್ದ ಅವಳ ಒಳವಿನಲ್ಲಿ ಪರಿಪೂರ್ಣತೆ ಕಂಡಿದ್ದ.

ಲೇಡಿ ಡಾಕ್ಟರ್ ಜೋಶಿಯವರ ಬಳಿಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಂದ ದಿನದಿಂದಲೂ ಅನ್ಯಮನಸ್ಕಳಾಗುತ್ತಾ ಬಂದಿದ್ದು ಗಮನಕ್ಕೆ ಬಂದಿದ್ದರೂ ಕಾಣದವನಂತಿದ್ದ. ಕ್ರಮೇಣ ಅವನ ನಡೆ, ನುಡಿ, ಮಾತು, ಕೆಲಸ ಎಲ್ಲದರಲ್ಲೂ ನಿರಾಸಕ್ತಿ. ಒಮ್ಮೊಮ್ಮೆ ವಿನಾಕಾರಣ ಬೆಚ್ಚಿ ಬೀಳುತ್ತಿದ್ದಳು. ಹೆದರಿಕೆಯಿಂದಾ ಬಲವಾಗಿ ತಬ್ಬಿಹಿಡಿಯುವಾಗ ಸೂಕ್ಷ್ಮವಾಗಿ ನಡುಗುತ್ತಿದ್ದಳು. ಕಾರಣ ಕೇಳಬೇಕು ಎನ್ನುವಾಗಲೇ ಈ ವಿಪರೀತ ವರ್ತನೆ!

ಇದ್ದಕ್ಕಿದ್ದಂತೆ ಏನೋ ನೆನಪಾದವನಂತೆ ಸದಾನಂದ ಎದ್ದು ರೂಮಿಗೆ ಬಂದ.

ರಮಾ ಬೋರಲಾಗಿ ಮಲಗಿದ್ದಳು. ಅವಳ ನೀಳ ಕೂದಲು ಅರ್ಧ ಬೆನ್ನಿನವರೆಗೆ ಹರಿದು ಬಂದು ಹೊರಳಿ ಮಂಚದ ಮೇಲಿಂದ ಕೆಳಗೆ ಜೋತಾಡುತ್ತಿತ್ತು. ಬಿಕ್ಕಳಿಕೆಯೊಂದಿಗೆ ಮೆಲ್ಲನೆ ಅಳುವಿನ ಸ್ವರ ಕೇಳಿ ಬರುತ್ತಿತ್ತು. ಸದಾನಂದನಿಗೆ ಇನ್ನು ತಡೆಯದಾಯಿತು.

“ರಮಾ-ಇಲ್ಲಿ ನೋಡು ಏನಾಗ್ತಿದೇಂತ ಬಾಯಿಬಿಟ್ಟು ಹೇಳು ಈ ತರಹ ಅತ್ತು ಸುಮ್ಮನೆ ನನ್ನನ್ನು ಕೊಲ್ಲಬೇಡ. ಈಚೀಚೆಗೆ ಡಾಕ್ಟರ್ ರವರ ಬಳಿಗೆ ಹೋಗಿ ಬಂದರೂ ಏನನ್ನು ಹೇಳುತ್ತಿಲ್ಲ… ನೆನ್ನೆ ಏನು ಹೇಳಿದರು? ಹೇಳು ರಮಾ…”

ಅವಳ ಭುಜ ಹಿಡಿದು ತನ್ನತ್ತ ತಿರುಗಿಸಿಕೊಂಡ ಅವಳ ಎದೆಯಲ್ಲಿ ಯಾರೋ ಚೂರಿ ಹಾಕಿ ಇರಿದಂತಾಯಿತು. ಸದಾನಂದನನ್ನೇ ಕಣ್ಣರಳಿಸಿ ನೋಡಿದಳು. ತನ್ನ ಖಾಯಿಲೆ ಡಾಕ್ಟರ್ ಕೊಟ್ಟ ಸಲಹೆ.. ಟ್ರೇಟ್ಮೆಂಟ್ ಅದರ ಪ್ರಭಾವ ಈ ನೋವು ಎಲ್ಲವನ್ನು ಹೇಳಿಬಿಡಲೇ? ಹೇಳಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅಸಹ್ಯಕರ ಘಟನೆಯನ್ನು ಕೇಳಿದರೆ ಅವರು ಬದುಕಿ ಉಳಿಯುವುದೇ ಇಲ್ಲ. ಆ ವ್ಯಥೆಯ ಕಿಚ್ಚಿನಲ್ಲಿ ಅವರು ಬಹಳ ದಿನ ಉಳಿಯಲಾರದು. ಊಹುಂ ಹೇಳಲಾರೆ ಖಂಡಿತ ಸಾಧ್ಯವಿಲ್ಲ. ಅವರು ಸಂತೋಷವಾಗಿರಬೇಕು. ಹಾಲಿನಂಥ ಮನಸ್ಸಿಗೆ ವಿಷಹಿಂಡಲಾರೆ. ತಾನೇ ಬೇಕೆಂದು ಬಯಸಿ ಕುಡಿದ ವಿಷವನ್ನು ತಾನೆ ಜೀರ್ಣಿಸಿಕೋಬೇಕು ತನ್ನೊಂದಿಗೇ ಈ ಬೆಂಕಿ ಸುಟ್ಟುಹೋಗಬೇಕು.

ರಮಾಳ ಕೋಮಲ ಹೃದಯ ತತ್ತರಿಸಿತು. ಸಿಡಿಯುತ್ತಿದ್ದ ತಲೆಯನ್ನು ಬಲವಾಗಿ ಒತ್ತಿ ಹಿಡಿದುಕೊಂಡಳು.

ತನ್ನಲ್ಲೇ ಪ್ರೀತಿ, ವಿಶ್ವಾಸ, ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡಿದ್ದ ಗಂಡನತ್ತ ಪುನಃ ನೋಡಿದಳು.

“ಮಕ್ಕಳಿಲ್ಲದಿದ್ದರೆ ಏನಂತೆ? ನೀನೇ ನನ್ನ ಮಗು ಅಂದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದ ತಾನು ಆಮಿಷಕ್ಕೆ ಬಲಿಯಾಗಿ ಮಗುವಿಗಾಗಿ ಮಾಡಿದ್ದಾದರೂ ಎಂಥಾದು!…

ಆ ದಿನ…!

ಅವರಿಬ್ಬರನ್ನೂ ಕೂಲಂಕುಷವಾಗಿ ಪರೀಕ್ಷೆ ಮಾಡಿ ನೋಡಿ ದಿನ ಡಾ. ಜೋಶಿಯವರು ರಮಾಳೊಬ್ಬಳನ್ನೇ ಏಕಾಂತದಲ್ಲಿ ಕರೆದು,

“ನಿನಗೆ ಮಕ್ಕಳೂಂದ್ರೆ ತುಂಬಾ ಇಷ್ಟವೇನಮ್ಮಾ?” ಎಂದು ಕೇಳಿದರು.

ರಮಾಳಿಗೆ ನಗು ಬಂದಿತು.

“ಇದೇನ್ ಡಾಕ್ಟ್ರೆ ಹೀಗೆ ಕೇಳುತ್ತೀರಿ? ಇದಕ್ಕಾಗಿಯೇ ಏನೆಲ್ಲಾ ಹರಕೆ ಹೊತ್ತು ಸಾಧ್ಯವಾಗದೆ ನಿಮ್ಮ ಬಳಿಗೆ ಓಡಿ ಬಂದಿದ್ದೇವೆ” ರಮಾ ಹೇಳಿದಳು.

“ಸತ್ಯ ಹೇಳಿದರೆ ಸಹಿಸಿಕೊಳ್ಳುವ ಶಕ್ತಿಯಿದೆಯೇನು?”

“ಹಾಗಂದ್ರೆ!” ರಮಾ ಗಾಬರಿಯಿಂದ ಎದ್ದು ನಿಂತಳು.

“ಹೆದರೊಬೇಡಿ. ಕೂತ್ಕೊಳ್ಳಿ” ಡಾಕ್ಟರ್ ಪ್ರಾರಂಭಿಸಿದರು.

ಒಂದು ವಾರದಿಂದಲೂ ನಡೆಸಿದ ನನ್ನ ಎಲ್ಲಾ ಪರೀಕ್ಷೆಗಳಲ್ಲಿ ನಿಮ್ಮ ಯಜಮಾನರಲ್ಲಿ ದೋಷವಿದೆ. ಅದರಿಂದ ನಿಮಗೆ ಮಕ್ಕಳಾಗುವ ಸಾಧ್ಯತೆಯಲ್ಲ, ಸಾಧ್ಯವೇ ಇಲ್ಲ…” ಆಕೆ ಹೇಳುತ್ತಿದ್ದರು. ರಮಾ ಕುಸಿದು ಕುಳಿತಳು.

“ನಿಮಗೆ ಯಾವುದೇ ಒಂದು ದೋಷವೂ ಇಲ್ಲ”

“ಡಾಕ್ಟರ್… ಅದನ್ನು ಸರಿಪಡಿಸಲು ಸಾಧ್ಯವಿಲ್ಲವಾ?”

….ಚೇತನವನ್ನೆಲ್ಲ ಒಟ್ಟುಗೂಡಿಸಿ ಕೇಳಿದರು. ಅವಳ ಸ್ವರ ನಡುಗುತ್ತಿತ್ತು ಹೃದಯ ಜೋರಾಗಿ ತುಡಿಯುತ್ತಿತ್ತು.

“ಊಹಂ ಸಾಧ್ಯವಿಲ್ಲ. ಹಾಗಿದ್ದರೆ ನಿನಗೆ ಹೇಳದೆಯೇ ನಾನು ಸರಿಮಾಡಿ ಬಿಡುತ್ತಿದ್ದೆ. ನಾವೆಷ್ಟು ಓದಿದರೂ ಪ್ರಕೃತಿಗೆ ಸವಾಲು ಹಾಕಲು ಸಾಧ್ಯವೇ? ಅವರು ನತದೃಷ್ಟರೆಂದೇ ಹೇಳಬೇಕು.”

ಆಕೆಯ ಕರುಣೆಯ ನುಡಿಗಳು ಅವಳೆದೆಯನ್ನು ಅಲಗಿನಂತೆ ಇರಿದವು.

ಯಾರಿಗೂ ಎಂದೂ ಕೇಡು ಬಯಸದ ಜೇನಂಥ ಹೃದಯದ ಹೂ ಮನಸ್ಸಿನ ತನ್ನ ಸದಾನಂದನಿಗೆ ಪ್ರಕೃತಿ ಈ ರೀತಿ ಸೇಡು ತೀರಿಸಿಕೊಳ್ಳಬೇಕೆ? ಅವರಿಗೆ ತಿಳಿದರೆ ದುಃಖದಿಂದ ಅವಳ ಎದೆ ಬಿರಿಯಿತು.

“ಡಾಕ್ಟರ್… ಅವರಿಗೆ ಮಕ್ಕಳೊಂದ್ರೆ ತುಂಬಾ ಇಷ್ಟ… ಏಕೆ ಹೀಗಾಗುತ್ತೆ? ಹೀಗೇಕಾಯ್ತು ಡಾಕ್ಟರ್” ಮೇಜಿನ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಡಾಕ್ಟರಿಗೆ ಏನೂ ಹೇಳಲು ತೋಚಲಿಲ್ಲ. ದುಃಖನೋವು ನಿರಾಶೆಯಿಂದ ಹಿಡಿಯಾಗಿ ಅಳುತ್ತ ಕುಳಿತಿದ್ದ ರಮಾಳನ್ನು ಕಂಡು ಪಿಚ್ಚೆನಿಸಿತು. ಅದೇ ಜಾಗದಲ್ಲಿ ರಮಾಳಂತೆಯೇ ಅಸಹಾಯಕರಾಗಿ ಕುಳಿತು ಅತ್ತು ಹೋದವರೆಷ್ಟೋ ಕಿಲಕಿಲ ನಗುವ ಹಸು ಕಂದನೊಂದಿಗೆ ತೃಪ್ತಿಯಿಂದ ಬಂದು ತೋರಿಸಿದವರೆಷ್ಟೋ.

ತಟ್ಟನೆ ಯೋಚನೆಯೊಂದು ಅವರ ಮನಸ್ಸಿಗೆ ಹೊಳೆಯಿತು. ಅದಕ್ಕೆ ಈಕೆ ಒಪ್ಪಿಯಾಳೆ? ಆದರೂ ಅವರು,

“ನೀವು ಧೈರ್ಯ ಮಾಡಿದರೆ ಅದೃಷ್ಟವಿದ್ದರೆ ಯಾಕಾಗಬಾರದು?.. ಪರೀಕ್ಷಕರಂತೆ ಅವಳತ್ತ ನೋಡುತ್ತಾ ಕೇಳಿದರು.

“ಏನಂದಿರಿ?” ಚಕಿತಳಾಗಿ ಕೇಳಿದಳು. ಅವಳ ನೀರು ತುಂಬಿದ ಕಣ್ಣುಗಳಲ್ಲಿ ಆಸೆಯ ಬೆಳಕು ಮಿಂಚಿತು. ಹೇಳಲೋ ಬೇಡವೋ ಎನ್ನುವಂತೆ ಅವಳ ಮುಖವನ್ನೇ ನೋಡುತ್ತಾ ಆಕೆ ಹೇಳ ತೊಡಗಿದರು…

“ಈ ಪ್ರಯೋಗವನ್ನು ನಾನು ಕೆಲವರಿಗೆ ಅವರೊಪ್ಪಿಗೆಯಿಂದಲೇ ಮಾಡಿದ್ದೇನೆ ಜಯಶಾಲಿಯೂ ಆಗಿದ್ದೇನೆ. ಆದರೆ ಅದು ಬೇರೊಬ್ಬ ವ್ಯಕ್ತಿಯ ಮೇಲೆ ಅವಲಂಭಿಸಿರುತ್ತದೆ. ಕೆಲವರಿಗೆ ಸಾಧ್ಯವಾಗುವುದಿಲ್ಲ. ಮಕ್ಕಳ ಹುಚ್ಚು ಹೆಚ್ಚಾಗಿ ಧೈರ್ಯದಿಂದ ಬಂದು ಹೋದವರೂ ಇದ್ದಾರೆ. ಅವರೀಗ ಎಲ್ಲರಂತೆ ಹಾಯಾಗಿ ತೃಪ್ತಿಯಿಂದ.”

“ಅದೇನು ಪ್ರಯೋಗ ಡಾಕ್ಟರ್” ಅವರ ವಾಗ್ಜರಿಯನ್ನು ಕಡಿದು ಆತುರದಿಂದ ಕೇಳಿದಳು ರಮಾ.

ಒಂದು ಕ್ಷಣ ತಡೆದರು ಜೋಶಿಯವರು,

“ಕೃತಕ ವೀರ್ಯಧಾರಣೆ ಅಂತಾ ಕೇಳಿದ್ದೀರಾ? ಬೇರೆ ಪುರುಷರ ವೀರ್ಯವನ್ನು ಗರ್ಭಕೋಶಕ್ಕೆ ಸೇರಿಸುತ್ತೇವೆ”

ಹಾವು ತುಳಿದವರಂತೆ ಮೆಟ್ಟಿ ಬಿದ್ದಳು.

ಹಸು ಪ್ರಾಣಿಗಳಿಗೆ ಈ ರೀತಿ ಗರ್ಭಧಾರಣೆ ಮಾಡಿಸುತ್ತಾರೆಂದು ಮನೆಯಲ್ಲಿ ಕೇಳಿದ ನೆನಪು… ಅಂತಹುದರಲ್ಲಿ ಮನುಷ್ಯರಲ್ಲೂ ಉಂಟೇ?

ಹೇಸಿಗೆಯನ್ನು ಮೈಮೇಲೆ ಚೆಲ್ಲಿದಂತಾಯಿತು.

“ಎಂಥಾ ಅಸಹ್ಯ ಬೀಭತ್ಯ!!”

ಒಂದು ನಿಮಿಷವೂ ಅಲ್ಲಿ ನಿಲ್ಲಲಾಗಲಿಲ್ಲ ಅವಳಿಗೆ.

“ಅಳುತ್ತಾ ಕೂತರೆ ನಿವಾರಣೆ ಆಗುವುದಿಲ್ಲ. ನೀವೇ ಅಧೈರ್ಯ ಪಟ್ಟರೆ ಹೇಗೆ? ನಿಮ್ಮವರಷ್ಟು ಅಸಹಾಯಕರು ಯೋಚಿಸಿ.”

“ಡಾಕ್ಟರ್… ಅವರಿಗೆ ಅಸಹಾಯಕರು ಎನ್ನಬೇಡಿ, ಕರುಣೆಯ ನುಡಿಗಳೂ ಬೇಡ. ಅವರಿಗೆ ಈ ವಿಷಯ ತಿಳಿಸದಿದ್ದರೆ ಸಾಕು. ಹಾಗಂತ ನನಗೆ ಮಾತುಕೊಡಿ. ಅವರು ತುಂಬಾ ಮೃದು. ಈ ಕಠೋರ ಸತ್ಯ ಅವರ ಕಿವಿಯಲ್ಲಿ ಬಿದ್ದರೆ ನನ್ನ ಸೌಭಾಗ್ಯ ಸಮಾಪ್ತಿಯಾಗುತ್ತದೆ.”

ಅವಳ ಸ್ವರ ಉದ್ವೇಗದಿಂದ ಏರಿತು.

“ನಾನು ಹೇಳಿದ್ದು ಕೇಳಿ ಎಲ್ಲಾ ಸರಿಯಾಗುತ್ತೆ” ಅವಳತ್ತ ತೀಕ್ಷ್ಣವಾಗಿ ನೋಡಿದ ರಮಾ.

“ಈ ಪ್ರಯೋಗವನ್ನು ಬೇರೆಯವರಿಗೇ ಇಡಿ. ನಾನಿನ್ನು ಬರುತ್ತೇನೆ ಡಾಕ್ಟರ್ ನಮಸ್ಕಾರ”

ಬಿರುಗಾಳಿಯಂತೆ ಎದ್ದು ಹೋದ ಅವಳ ದಿಕ್ಕನ್ನೆ ಅದೆಷ್ಟೋ ಹೊತ್ತು ನೋಡುತ್ತಾ ಕುಳಿತಿದ್ದರು.

ಮನಗೆ ಬಂದ ರಮಾ,

“ನೋಡಿ ನಮಗೆ ಮಕ್ಕಳು ಆದರೆ ಆಗಲಿ ಬಿಟ್ಟರೆ ಬಿಡಲಿ… ಅದೃಷ್ಟವಿದ್ದಂತಾಗುತ್ತದೆ ನೀವು ಮಾತ್ರ ಕೊರಗು ಹಚ್ಚಿಕೊಳ್ಳಬೇಡಿ. ನಿಜಕ್ಕೂ ನಂಗೆ ಆ ಬಗ್ಗೆ ಒಂದಿಷ್ಟು ಯೋಚನೆಯಿಲ್ಲ. ಮಕ್ಕಳಾದ್ರೆ ಎಲ್ಲಾದಕ್ಕೂ ಅಡ್ಡಿ ಆತಂಕ ಏನಂತೀರಾ?” ರಸಿಕತೆಯ ಮುಖವಾಡ ಧರಿಸಿ ತುಟಿಗಳಿಗೆ ತುಟಿ ನಗೆ ಲೇಪಿಸಿ, ಗಂಡನ ಕುತ್ತಿಗೆಯನ್ನು ತನ್ನ ತೋಳುಗಳಿಂದ ಬಳಸಿದಳು.

“ಡಾಕ್ಟರ್ ಭರವಸೆ ಕೊಟ್ಟಿದ್ದಾರಲ್ಲ ರಮಾ… ನಿಧಾನವಾಗಿಯಾದರೂ ಆಗುತ್ತೆ ಅಲ್ಲವ?”

ಮುಗ್ಧವಾಗಿ ಕೇಳುತ್ತಿದ್ದ ಗಂಡನ ಮುಖ ನೋಡಿ, ಅವಳ ಕೊರಳು ತುಂಬಿ ಬಂತು.

“ನೀವೇ ನನ್ನ ಮಗು ಎಂದು ತಿಳಿದುಕೊಳ್ಳುತ್ತೇನೆ… ಬೇರೆ ಮಕ್ಕಳು ಯಾಕೆ? ಅವುಗಳಿದ್ದರೆ ನಿಮ್ಮ ಪ್ರೀತಿ ಹಂಚಿ ಹೋಗುತ್ತೆ. ಅದು ನಂಗಿಷ್ಟವಿಲ್ಲ… ಅದು ನಂಗೆ ಮಾತ್ರ ಬೇಕು…”

ಅವನೆದೆಯಲ್ಲಿ ಮುಖ ಹುದುಗಿಸಿ ಹೇಳಿದಳು.

ಸದಾನಂದ ನಕ್ಕುಬಿಟ್ಟ.

“ಸ್ವಾರ್ಥಿ ನೀನು…”

ಅವನ ಅಪ್ಪುಗೆಯಲ್ಲಿ ಮುಖ ಶಾಂತವಾಗಿದ್ದರೂ ಅವಳೆದೆಯಲ್ಲಿ ಜ್ವಾಲಾಮುಖಿ ಎದ್ದಿತ್ತು.

“ಆಂಟೀ ಆಂಟೀ” ಪಟಪಟನೆ ಪುಟ್ಟ ಕೈಗಳಿಂದ ಬಾಗಿಲು ಬಡಿಯುವ ಶಬ್ಧ…
ಜೊತೆಗೆ ಕೀರಲು ಧ್ವನಿ.

“ಶೋಭಾ ಬಂದಿದ್ದಾಳೇಂತ ಕಾಣುತ್ತೆ…” ಎಂದ ಸದಾನಂದ.

“ಹೌದು…” ಎಂದಳು.

ಒಂದು ದಿನ ಶೋಭಾ ಬರದಿದ್ದರೆ ಅವಳ ಪುಟ್ಟ ಹೆಜ್ಜೆಗಳು ಮನೆಯ ತುಂಬಾ ಓಡಾಡದಿದ್ದರೆ ಏನನ್ನೋ ಕಳೆದುಕೊಂಡವರಂತೆ ಆಚೀಚೆ ಕಾಲುಸುಟ್ಟ ಬೆಕ್ಕಿನಂತೆ ಒಳಗೂ ಹೊರಗೂ ಓಡಾಡುತ್ತಿದ್ದ ರಮಾಳ ನಿರಾಸಕ್ತಿ ಕಂಡು ಸದಾನಂದನಿಗೆ ಆಶ್ಚರ್ಯ.

“ಆಂಟೀ… ಬಾಗ್ಲು… ಆಂಟೀ…”

ರಮಾ ಕುಳಿತೇ ಇದ್ದಳು.

“ಆಂಟೀ…”

ಸದಾನಂದ ರಮಾಳನ್ನು ಬಾಗಿಲ ಬಳಿ ತಳ್ಳಿದ. ರಮಾ ನಿಧಾನವಾಗಿ ಬಾಗಿಲು ತೆರೆದಳು.

ನೆರಿಗೆ ತುಂಬಿದ ಅಚ್ಚ ಬಿಳಿಯ ಫ್ರಾಕು.. ಗಾಳಿಗೆ ಹಾರಾಡುತ್ತಿದ್ದ ಗುಂಗುರು ಕೂದಲು, ಪುಟ್ಟ ಬಾಯಿ, ಅರಳಿದ ಕಣ್ಣುಗಳು, ಹೊಸಬಳನ್ನು ನೋಡಿದಂತೆ ನೋಡಿದಳು ರಮಾ.

ಶೋಭಾಳನ್ನು ಜೊತೆಯಲ್ಲಿ ಕೈಹಿಡಿದು ಕರೆದುಕೊಂಡು ಹೋದರೆ.

“ನಿಮ್ಮ ಮಗೂನಾ? ತುಂಬಾ ಚೆನ್ನಾಗಿದೆ. ಎಲ್ಲಾ ನಿಮ್ಮವರ ತರಹ ಇದ್ದಾಳೆ…” ಎಂದಾಗ ಅವಳ ಮನಸ್ಸು ಸಂತಸದಿಂದ ಬೀಗುತ್ತಿತ್ತು. ಅವಳಿಗೆ ಅವಳು ಬೇರೆಯವರ ಮಗು ಎಂಬುದು ಮರೆತುಹೋಗುತ್ತಿತ್ತು.

ಸಾಯಂಕಾಲ ವಾಕಿಂಗ್ ಹೊರಟರೆ ಶೋಭಾ ಬೇಕು. ಸಮಾರಂಭಗಳಿಗೆ ಹೊರಟರೆ ಶೋಭಾ ಇರಬೇಕು. ನಂಟರಿಷ್ಟರ ಮನೆಗೆ ಹೊರಟರೂ ಶೋಭಾ ಜೊತೆಗಿರಬೇಕು.

“ಆ ಮಗು ಅಪ್ಪಿ ತಪ್ಪಿ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದೆ, ಅದು ರಮಾಳಿಗೆ ಹುಟ್ಟಬೇಕಿತ್ತು” ಎಂದು ಯಾರಾದರೂ ಹೇಳಿದರೆ ಶೋಭಾಳ ತಾಯಿ ನಕ್ಕು ಒಳಗೆ ಹೋಗುತ್ತಿದ್ದರು.

“ಆಂಟೀ ಮನೆಗೆ ಹೋಗಲ್ವಾ ಈವತ್ತು? ಹೋಗು ಕಾಯ್ತಾ ಇದ್ದಾರೆ…” ಎಂದು ಎಷ್ಟೋ ಬಾರಿ ಮಲಗಿದ ಮಗಳನ್ನು ಏಳಿಸಿ ಕಳುಹಿಸುತ್ತಿದ್ದರು. ಅವರ ನಿರೀಕ್ಷೆಯಂತೆ ರಮಾ ಬಾಗಿಲ ಬಳಿ ನಿಂತು ಶೋಭಾಳಿಗಾಗಿ ಕಾಯುತ್ತಿರುತ್ತಿದ್ದಳು. ಅರೆನಿದ್ದೆಯಿಂದ ಕಣ್ಣು ತಿಕ್ಕಿಕೊಳ್ಳುತ್ತಾ ಬಂದ ಶೋಭಾಳ ಮುಖ ತೊಳೆದು… ಪೌಡರ್ ಹಾಕಿ, ಮುದ್ದುಗರೆಯುತ್ತಾ ತಿಂಡಿ ತಿನ್ನಿಸಿ ತಾನೂ ಅವಳ ಜೊತೆಯಲ್ಲಿ ತಿಂದರೆ ಮಾತ್ರ ರಮಾಳಿಗೆ ಸಮಾಧಾನ… ತೃಪ್ತಿ.

“ಇದು ಏನು ಆಂಟೀ ಇದು ಯಾಕೆ?… ಎನ್ನುತ್ತಾ ಕೈಕಾಲುಗಳಿಗೆ ಸುತ್ತಿಕೊಳ್ಳುತ್ತಾ ಹಿಂದೆ ಮುಂದೆ ತಿರುಗುವ ಶೋಭಾ “ಯಾಕೆ? ಏನು?” ಗಳಿಗೆ ತಾಳ್ಮೆಯಿಂದ ಉತ್ತರ ಕೊಡುತ್ತಾ ಕೆಲಸ ಮಾಡುತ್ತಿದ್ದರೆ ಇಡೀ ದಿನ ಉರುಳುತ್ತಿದ್ದುದೇ ತಿಳಿಯುತ್ತಿರಲಿಲ್ಲ.

“ಶೋಭಾನ ಗಲಾಟೆಯಲ್ಲಿ ಈ ಸದಾನಂದನ್ನ ಮರೆತುಬಿಟ್ಟಿರಪ್ಪ ಎನ್ನುತ್ತಿದ್ದ ಗಂಡನಿಗೆ ಸಿಗುತ್ತಿದ್ದುದು ಒಂದು ಹೂ ನಗೆ ಮಾತ್ರ

“ರಮಾ ಏ ರಮಾ ಏನು ಯೋಚಿಸುತ್ತಿದ್ದೀಯಾ?” ಸದಾನಂದನ ಕರೆಗೆ ಬೆಚ್ಚಿಬಿದ್ದು ತಿರುಗಿ ನೋಡಿದಳು. ಪ್ರಶ್ನೆ ಅವಳ ಕಣ್ಣುಗಳಲ್ಲಿ ಕುಣಿಯಿತು.

“ಏನು ಯೋಚನೆ ಮಾಡ್ತಾ ಇದ್ದೀಯಾ?” ಪುನಃ ಕೇಳಿದ.

“ಏನಿಲ್ಲ…” ಎಂದಳು ತೇಲಿಸುತ್ತಾ, ಶೋಭಾ ಆಗಲೇ ಸದಾನಂದನ ತೊಡೆ ಏರಿ ಕುಳಿತಿದ್ದಳು. ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದಳು.

“ಹೌದು ಅಂಕಲ್ ಅಜೀಹಾಗೇ ಇದೆ” ಕಣ್ಣರಳಿಸಿ ಪುಟ್ಟ ತುಟಿಗಳನ್ನು ತಿರುಗಿಸಿ ಹೇಳುತ್ತಿದ್ದಳು. ಸದಾನಂದ ನಗುತ್ತಿದ್ದ.

“ಏನಂತೆ ಅವಳದು…” ರಮಾ ಹತ್ತಿರ ಬಂದು ಬಿಟ್ಟಿದೆ.

“ಅದೇ ಆಂಟೀ ರಾತ್ರಿ ನಮ್ಮನೆಗೆ ಒಂದು ಅಜ್ಜಿ ಬಂದು ಬಿಟ್ಟಿದೆ. ನಮ್ಮ ಪಾಪಚ್ಚಿ ತರಾನೆ. ಅದಕ್ಕೆ ಬಾಯಲ್ಲಿ ಒಂದೂ ಹಲ್ಲೂ ಇಲ್ಲ. ತಲೇಲಿ ಒಂದು ಕೂದ್ಲೂ ಇಲ್ಲಾ, ಗೊತ್ತಾ? ಅಜ್ಜಿ ಮಾತ್ರ ಫ್ರಾಕು ಹಾಕಲ್ಲ… ಯಾಕೆ ಆಂಟೀ?”

ಉತ್ತರಕ್ಕಾಗಿ ರಮಾಳತ್ತ ತಿರುಗಿದಳು ಶೋಭಾ.

“ಅಜ್ಜೀನಾ ಕೇಳಬೇಕಿತ್ತು” ನಗುವಡಗಿಸಿ ಕೇಳಿದಳು ರಮಾ.

“ಕೇಳ್ದೆ ಆಂಟಿ ಅಜ್ಜಿ ಬೈದು ಬಿಡ್ತು… ಪಪ್ಪಾನ ಹತ್ತಿರ ಹೋಗಿ ಚಾಡಿ ಬೇರೆ ಹೇಳುತ್ತೆ ಗೊತ್ತಾ?” ಮುಖ ದುಮ್ಮಿಸಿಕೊಂಡು ದೂರು ಹೇಳುತ್ತಿದ್ದ ಶೋಭಾಳನ್ನು ಕಂಡು ರಮಾಳಿಗೆ ಮುದ್ದು ಉಕ್ಕಿ ಬಂತು. ಪ್ರೀತಿಯಿಂದ ಗಂಡನ ಬಳಿಯಿಂದ ತನ್ನ ಬಳಿಗೆ ಎಳೆದುಕೊಂಡು,

“ನನ್ನ ಜಾಣ ಮಗಳು” ಎನ್ನುತ್ತಾ ಅವಳ ದುಂಡು ಕೆನ್ನೆಗಳಿಗೆ ಮುತ್ತಿಟ್ಟಳು.

“ಇಲ್ಲಾ ಆಂಟಿ ಅಜ್ಜಿ ಹೇಳುತ್ತೆ… ನಾನು ಅಮ್ಮನ ಮಗಳಂತೆ. ನಿಮ್ಮ ಮಗಳು ಅಲ್ಲಾಂತೆ…”

ರಮಾಳ ಮುಖ ಪೆಚ್ಚಾಯಿತು.

“ಯಾವಾಗ ಹೇಳಿದ್ದು?” ಸದಾನಂದ ಕೇಳಿದ.

“ಬೆಳಿಗ್ಗೆ ಅಮ್ಮ ನಂಗೆ ಹೋಗು ಅಂದ್ರೆ… ಅಜ್ಜಿ ಬೇಡಾಂತ ಹೇಳುತ್ತೆ… ನಾನು ಓಡಿ ಬಂದುಬಿಟ್ಟೆ ಕೆಟ್ಟ ಅಜ್ಜಿ ಅಲ್ವಾ ಆಂಟೀ…?”

ರಮಾಳಿಗೆ ಏನೂ ಹೇಳಲು ಉಸಿರಿಲ್ಲದಂತಾಗಿತ್ತು.

“ಶೋಭಾ ಏ ಶೋಭಾ..” ಹೊರಗಡೆಯಿಂದ ಬಂದ ಅಜ್ಜಿಯ ಕರೆಗೆ ಛಂಗನೆ ನೆಗೆದ ಶೋಭಾ,

“ಬಂದೆ” ಎನ್ನುತ್ತಾ ಓಡಿದಳು.

ಬರಿದಾದ ತನ್ನ ಮಡಿಲನ್ನು ನೋಡಿಕೊಂಡ ಹೆಂಡತಿಯ ಮುಖ ನೋಡಿದ. ಅವನ ನೋಟವನ್ನು ಎದುರಿಸಿದ ರಮಾ ನೋವಿನ ನಗೆ ನಕ್ಕಳು ನೂರು ಮಾತುಗಳಲ್ಲಿ ಹೇಳದ ಅವಳ ಮಾತುಗಳನ್ನು ನೀರು ತುಂಬಿದ ಕಣ್ಣುಗಳಲ್ಲಿ ಓದಿದ ಸದಾನಂದನ ಕಣ್ಣುಗಳಲ್ಲೂ ತೆಳ್ಳನೆಯ ನೀರಿನ ಪರೆಯಿತ್ತು.

ದಿನವಿಡಿ ಶೋಭಾ ಕಾಣದಿದ್ದಾಗ ಮನಸ್ಸು ತಡೆಯದ ರಮಾ ಅವರ ಮನೆಗೆ ಹೊರಟಳು.

ಹಾಲಿನಲ್ಲಿದ್ದ ಸೋಫಾದ ಮೇಲೆ ಶೋಭಾ ಬೋರಲಾಗಿ ಮಲಗಿದ್ದಳು. ಅವಳ ಪಕ್ಕದಲ್ಲಿ ತೆರೆದು ಬಿದ್ದಿದ್ದ ಬಣ್ಣ ಬಣ್ಣದ ಚಿತ್ರಗಳು ತುಂಬಿದ್ದ ಪುಟ್ಟ ಪುಸ್ತಕ, ಪ್ಲೇಟು, ಮುರಿದು ಬಿದ್ದಿದ್ದ ಬಳಪ, ಕೆದರಿದ ಕೂದಲು… ದಣಿದ ಮುಖ ಸೋಫಾದಿಂದ ಕೆಳಗೆ ಜೋತಾಡುತ್ತಿದ್ದ ಪುಟ್ಟ ಕೈ…

ವಾತ್ಸಲ್ಯ ಮಾರ್ದವತೆಯಿಂದ ಅವಳ ಹೃದಯ ತುಂಬಿ ಬಂದಿತು. ಹತ್ತಿರ ಹೋದಳು. ಹಣೆಗೆ ಕವಿದಿದ್ದ ಕೂದಲನ್ನು ಸರಿಸಿ, ಮೃದುವಾಗಿ ಹೂಮುತ್ತನ್ನಿಟ್ಟಳು. ಪಕ್ಕದ ರೂಮಿನಿಂದ ಮಗುವಿನ ಅಳು ಧ್ವನಿಯೊಂದಿಗೆ ಮಾತು ಕೇಳಿಬರುತ್ತಿತ್ತು.

“ಅದೆಷ್ಟು ಅಳುತ್ತೆ ನೋಡಮ್ಮ ಈ ಮಕ್ಕಳು ಬೇಡಾ ಏನೂ ಬೇಡಾ ಬೆಳಗಿನಿಂದ ಒಂದೇ ಸಮನೆ ಹಾಲು ಕುಡಿತಾ ಇದೆ. ನಾನೇನು ಇರ್‍ಬೇಕೋ.. ಸಾಯ್ಬೇಕೋ?”… ಶೋಭಾಳ ತಾಯಿಯ ರೋಸಿ ಹೋದ ಧ್ವನಿ.

“ಮಕ್ಕಳಿಗೆ ಹಾಲು ಕುಡಿಸಿದ್ರೆ ಸಾಯ್ತರೇನು? ನೀವೆಲ್ಲಾ ಹಾಲು ಕುಡಿದೇ ಅಲ್ವಾ ಬೆಳದದ್ದು…” ಅಜ್ಜಿಯ ಸ್ವರ.

“ನೀನೇನೇ ಹೇಳಮ್ಮ, ಈ ಜಂಜಾಟ ಸಾಕಾಗಿ ಹೋಗಿದೆ. ಎದುರು ಮನೆ ರಮಾ ತರಹಾ ಇರಬಾರದಿತ್ತೆ, ಅನ್ನಿಸುತ್ತೆ ಎಷ್ಟು ಶಾಂತ, ಸಂಸಾರ ಅವರದು…”

“ಬಿಡ್ತು ಅನ್ನು ನಿಂಗೇನಾದ್ರು ತಲೆ ಕೆಟ್ಟಿದೆಯಾ?” ಅರ್ಧದಲ್ಲೇ ಕಡಿದು ಸಿಡುಕಿದ ಆಕೆ,

“ಹೆಣ್ಣು ತಾಯಿಯಾದ್ರೇನೇ ಮೋಕ್ಷ ಕಣೆ ಸ್ವರ್ಗದ ಬಾಗಿಲು ತೆರೆಯುತ್ತೆ ಅಂತಾರೆ, ಮುತ್ತುಗದ ಹೂ ಪೂಜೆಗುಂಟಾ? ನಂಗೆ ಆಕೆ ಶೋಭಾನ್ನ ಮುಟ್ಟೋದು ಹಿಡಿಸೋಲ್ಲ… ಬಂಜೆ ಮುಟ್ಟಿದರೆ ಮಕ್ಕಳು ಸೊರಗಿ ಕಡ್ಡಿಯಂತಾಗುತ್ತವೆ.

“ಅಮ್ಮ ಹಾಗೆಲ್ಲಾ ಮಾತಾಡ್ಬೇಡಾ ಆಕೆಗೆ ಶೋಭಾಂದ್ರೆ ಪ್ರಾಣ…”

“ಇಷ್ಟು ವರ್ಷ ಮಕ್ಕಳಾಗದಿದ್ದ ಮೇಲೆ ಆತ ಬೇರೆ ಮದ್ವೇನಾದ್ರೂ ಮಾಡ್ಕೊಬಹುದಿತ್ತು.”

ಮುಂದೆ ಕೇಳಿಸಿಕೊಳ್ಳುವ ಶಕ್ತಿ ರಮಾಳಿಗಿರಲಿಲ್ಲ. ಹುಚ್ಚು ಹಿಡಿದವಳಂತೆ ಓಡಿಬಂದಳು. ಮನೆಗೆ ಬಂದು ಎಷ್ಟೋ ಹೊತ್ತಿನ ತನಕ ಅವಳೆದೆ ನಡುಗುತ್ತಿತ್ತು. ನಿಲ್ಲಲು ಶಕ್ತಿಯಿಲ್ಲದವಳಂತೆ ಕುಸಿದು ಕುಳಿತಳು…

ಎಂಥಾ ಮಾತುಗಳು!

ತನ್ನಿಂದ ಚೇತರಿಸಿಕೊಳ್ಳಲು ಸಾಧ್ಯವೇ? ಎಂದೂ ಯಾರೂ ಅವಳನ್ನು ಇಷ್ಟು ಕಟುವಾಗಿ ನಿಂದಿಸಿರಲಿಲ್ಲ. ನಿಂದಿಸುವ ಜನಗಳಿಗೆ ಕೋಮಲ ಹೃದಯಗಳ ತುಡಿತ ಹೇಗೆ ಅರ್ಥವಾಗಬೇಕು?

ಹೌದು ಆಕೆ ಹೇಳಿದುದು ನಿಜ ತಾನು ಬಂಜೆ ತಾಯಿಯಾಗಲಾರೆ ತಾಯ್ತನದ ಸುಖ ತನಗಿಲ್ಲ ಆದರೆ ಇದಕ್ಕೆ ಹೊಣೆ ಯಾರು? ಯಾವ ಕುಂದೂ ಇಲ್ಲದ ತಾನು ಎಂದಿಗೂ ತಾಯಿಯಾಗಲಾರೆ. ಇದರಲ್ಲಿ ತನ್ನ ತಪ್ಪೇನಾದರೂ ಇದೆಯೇ? ಮಕ್ಕಳಾಗದಿದ್ದರೆ ಗಂಡಿಗೆ ಮತ್ತೆ ಮತ್ತೆ ಮದುವೆ ಮಾಡಲು ಹಾತೊರೆಯುತ್ತಾರೆ ಈ ಜನ, ಆದರೆ ಹೆಣ್ಣಿಗಾದರೆ? ಇಷ್ಟಕ್ಕೆ ಹೆಣ್ತನದ ಬೆಲೆ ಕಟ್ಟಬೇಕೆ? ಒಂದು ಜೀವದ ಬೆಲೆ ಇಷ್ಟೇನಾ? ಹೀಗೆ ಬಿಟ್ಟರೆ ತನ್ನ ಸದಾನಂದನಿಗೂ ಮತ್ತೊಂದು ಮದುವೆ ಮಾಡಿಸಿಯೇ ಬಿಡುತ್ತಾರೆ.

ಯೋಚನೆಯಿಂದಲೇ ಅವಳ ಹೃದಯ ಚಲನೆ ನಿಂತಂತಾಯಿತು.

“ನೀವು ಧೈರ್ಯ ಮಾಡಿದರೆ ಮಕ್ಕಳಾಗಬಹುದು.” ಡಾಕ್ಟರರ ನುಡಿಗಳು. ಥೂ ಅಸಹ್ಯ, ಹಸಿವೂಂತ ಹೊಲಸು ತಿನ್ನಬಹುದೇ?

ಊಹೂಂ ಸಾಧ್ಯವಿಲ್ಲದ ಮಾತು. ಈ ಯೋಚನೆಯಾದರೂ ತನಗೆ ಯಾಕೆ ಬಂತು? ಅವರಿಗೆ ಅನ್ಯಾಯ ಮಾಡಿದರೆ ಹೇಗೇ? ತನ್ನ ಪತಿ ತನ್ನವನೇ ಆಗಿರುವಾಗ ಉಳಿದವರ ಮಾತುಗಳಿಗೆ ತಾನೇಕೆ ಇಷ್ಟು ಬೆಲೆ ಕೊಡಬೇಕು? ಯಾವ ಸ್ವರ್ಗವೂ ಬೇಡಾ ತಾನೂ ಪ್ರೀತಿಸುವ ಅವರು ಜೊತೆಗಿದ್ದರೆ ಸಾಕು ಎಲ್ಲರನ್ನೂ ಎದುರಿಸಬಲ್ಲೆ.

ಬೀದಿಯರ, ನೆರೆಯವರ ಕಿರುನೋಟ, ಪಿಸು ಮಾತುಗಳ ಮುಖ ಪರಿಚಯವಿದ್ದರೂ ಅಷ್ಟು ಮನಸ್ಸಿಗೆ ತಾಕುತ್ತಿರಲಿಲ್ಲ. ಅದೇ ಜನಗಳು ಅದೇ ಮುಖಗಳು ಆದರೂ ಈಗ ಏಕೆ ಅಷ್ಟು ಹೆದರಿಕೆ ಹುಟ್ಟಿಸುತ್ತಿವೆ. ಈಗ ಉಂಟಾಗಿರುವ ದೊಡ್ಡ ಕೊರಕಲಿನ ಭಯ ಕೊರತೆಯೇ ಎದ್ದು ಕಾಣುತ್ತಿರುವುದರಿಂದಲೇ? ಸತ್ಯ ತಿಳಿದು ಮಾನಸಿಕವಾಗಿ ಬಳಲಿ, ಬಹಳ ಸೂಕ್ಷ್ಮವಾಗುತ್ತಿದ್ದೇನೆಯೇ, ಇದೆಲ್ಲಾ ತಾಯ್ತನದ ಹಂಬಲವೇ?

ಕೈ ತುಂಬಾ ತುಂಬಿ ಕುಲುಕುಲು ನಗುವ ಹವಳದ ತುಟಿಗಳ ಕಂದನನ್ನು ಹಿಡಿದು ಹೆಮ್ಮೆಯಿಂದ ಬೀಗಿ ಇವರೆಲ್ಲರ ಮುಂದೆ ತಲೆ ಎತ್ತಿ ನಡೆಯುವಂತಾದರೆ? ಮನೆಯತುಂಬಾ ಕೇಕೆ ಹಾಕುತ್ತಾ ಹರಿದಾಡುವ ಮುದ್ದು ಮಗು ಬಂದರೆ ತನ್ನ ಸದಾನಂದನಿಗೂ ಬೇರೆ ಮದುವೆ ಮಾಡಿಸುವ ಧೈರ್ಯವಿರುವುದಿಲ್ಲ ತಾನು ತನ್ನ ಸದಾನಂದ… ಅವನಂತೆಯೇ ಇರುವ ಮಗು ಮಾತು ಮಾತಿಗೂ ನಗುವ ಅಳುವ ಕೈಕಾಲಿಗೆ ಸುತ್ತುವ ತನ್ನ ಮಗು.

ತೆರೆದ ಬಾಗಿಲು ಕತ್ತಲು ಮನೆ ಶಿಲಾ ಪ್ರತಿಮೆಯಂತೆ ಕುಳಿತ ಹೆಂಡತಿಯನ್ನು ಕಂಡು ಮನೆಗೆ ಬಂದ ಸದಾನಂದನಿಗೆ ಗಾಬರಿಯಾಯಿತು.

“ರಮಾ” ಹತ್ತಿರ ಬಂದು ಭುಜಹಿಡಿದು ಅಲುಗಿಸಿದ. ಬೆಚ್ಚಿ ಬಿದ್ದು ನೋಡಿದಳು. ಕತ್ತಲೆ ರೂಮು ಎದುರು ನಿಂತಿದ್ದ ಗಂಡ; ಒಂದು ಕ್ಷಣ ಏನೂ ತಿಳಿಯದೆ ಕಣ್ಣು ಪಿಳುಕಿಸಿದಳು.

ಹೌದು ಏನಾಯ್ತು? ಇದ್ದಕ್ಕಿದ್ದ ಹಾಗೆ ಏನಾಯ್ತು? ಈ ದಿನ ಶೋಭಾ ಬಂದಿರಲಿಲ್ಲ. ನಂತರ ಆ ಮನೆ, ಮಾತುಗಳು ಕೃತಿಯಂತೆ ಇರಿದ ನುಡಿಗಳು ಗಂಟಲುಬ್ಬಿ ಬಂದಿತು. ಹತ್ತಿರ ಕುಳಿತಿದ್ದ ಗಂಡನ ಬೊಗಸೆಯಲ್ಲಿ ಮುಖವಿಟ್ಟು ಬಿಕ್ಕಿದಳು.

“ಏನಾಯ್ತು ಹೇಳು ರಮಾ..” ಆತಂಕದಿಂದ ಕೇಳಿದ.

“ನಾನೊಂದು ಮಾತು ಕೇಳಲಾ…” ಕಣ್ಣೀರು ತುಂಬಿದ ಮುಖ ಮೇಲೆತ್ತಿ ಗಂಡನ ಮುಖ ನೋಡುತ್ತಾ ಕೇಳಿದಳು.

“ಒಂದೇಕೆ? ನೂರು ಮಾತು ಕೇಳು… ಆದರೆ ಈ ಕತ್ತಲಲ್ಲಿ ಯಾಕೆ? ತಾಳು ದೀಪ ಹಾಕ್ತೇನೆ…” ಮೇಲೇಳಲು ಯತ್ನಿಸಿದ ಗಂಡನನ್ನು ಕೂಡಿಸಿದ ರಮಾ, “ದೀಪ ಬೇಡಾ ನಂಗೆ ಉತ್ತರ ಬೇಕು…” ಮೊಂಡು ಮಗುವಿನ ಧ್ವನಿಯಲ್ಲಿ ಕೇಳಿದಳು.

“ಅದೇನು ಹೇಳು…” ಎನ್ನುತ್ತಾ ಅವಳ ಪಕ್ಕಕ್ಕೆ ಸರಿದು ಕುಳಿತ ಸದಾನಂದ.

ನಂಗೆ ಮಕ್ಕಳಾಗದಿದ್ದರೆ ನೀವು ಬೇರೆ ಮದ್ವೆ ಮಾಡಿಕೊಳ್ತಿರೇನು?…” ಕತ್ತಲಿನಲ್ಲಿಯೇ ಗಂಡನ ಮುಖದ ಭಾವನೆಗಳನ್ನು ಓದಲು ಯತ್ನಿಸಿದಳು. ಸದಾನಂದನಿಗೆ ಕುಚೋದ್ಯ ಮಾಡಬೇಕೆನಿಸಿತು.

“ಹೌದು… ನನ್ನ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗಿಯಿದ್ದಾಳೆ… ಮಕ್ಕಳೂ ಇದ್ದಾರೆ. ಆದರೆ ಗಂಡ ಇಲ್ಲ. ಮುಂದೆ ಮಕ್ಕಳಾಗುವ ತೊಂದರೆ ತಪ್ಪುತ್ತೆ. ಆಗಲಾ?”

“ಹಾಸ್ಯ ಸಾಕು…” ಅಸಹನೆಯಿಂದ ನುಡಿದಳು.

“ಮತ್ತೇನು ಬೇಕು..” ತುಂಟ ನಗೆ ಅವನ ಕಣ್ಣುಗಳಲ್ಲಿ ಕುಣಿಯಿತು.

“ನನ್ನಾಣೆ… ಮಾಡಿ ಹೇಳಿ ಮದ್ದೆ ಆಗ್ತಿರಾ?” ಅವನ ಕೈಗಳೆರಡನ್ನು ಬಿಗಿಯಾಗಿ ಹಿಡಿದು ಕೇಳಿದ ಸ್ವರ ನಡುಗುತ್ತಿತ್ತು. ಸದಾನಂದನ ಮುಖ ಗಂಭೀರವಾಯಿತು.

ಎರಡೂ ಕೈಗಳಿಂದ ಅವಳ ಮುಖವನ್ನು ಹಿಡಿದು ತನ್ನತ್ತ ತಿರುಗಿಸಿಕೊಂಡ.

“ಈ ಯೋಚನೆ ಯಾಕೆ ಬಂತು ನಿನಗೆ? ನನ್ನ ರಮಾಳಿಂದ ನನಗೆ ಪ್ರೀತಿ… ತೃಪ್ತಿ ಪೂರ್ಣತೆ ಎಲ್ಲಾ ಸಿಕ್ಕಿದೆ ಬೇರೆ ಯಾರಿಂದ ಏನನ್ನು ನಾನು ಬಯಸುವುದಿಲ್ಲ.”

“ಆದರೆ, ಮಕ್ಕಳು ಸಿಕ್ಕಿಲ್ಲ” ನಕ್ಕು ಹೇಳಿದಳು ರಮಾ. ಆ ನಗುವಿನ ಹಿಂದಿದ್ದ ನೋವು ಅವನ ಹೃದಯ ಹಿಂಡಿದಂತಾಯಿತು.

“ಅನಾವಶ್ಯಕ ಮಾತು ಬೇಡಾ ಏಳು ಹೊರಗಡೆ ಹೋಗಿ ಊಟ ಮಾಡಿ ಬರೋಣ..” ಮಾತನ್ನು ಬೇರೆ ಕಡೆಗೆ ತಿರುಗಿಸಿದ ಸದಾನಂದ ಎದ್ದು ದೀಪ ಹಾಕಿದ. ಝಗ್ಗನೆ ಬೆಳಗಿದ ದೀಪದ ಪ್ರಖರತೆ ಕಣ್ಣು ಕುಕ್ಕಿದಂತಾದರೂ ಕಣ್ಣು ಹೊಸಕಿಕೊಂಡು ಗಂಡನನ್ನು ನೋಡಿದಳು.

ಎಷ್ಟು ಆಕರ್ಷಕ! ಎಷ್ಟು ಮನಮೋಹಕವಾಗಿದ್ದಾನೆ!! ಚಿನ್ನದ ಹೂವಿಗೆ ಪರಿಮಳವೂ ಇದ್ದಿದ್ದರೆ? ಎಂಥಾ ನಿಪ್ರಯೋಜಕತೆ!

“ಹೋಗೋಣವಾ…?” ಹತ್ತಿರ ಬಂದು ಸದಾನಂದ ಕೇಳಿದ.

“ಊಹುಂ…”

“ಏಳು ಪ್ಲೀಸ್…”

ಸದಾನಂದ ಪ್ರೀತಿ, ಪ್ರೇಮ, ಕಕ್ಕುಲತೆ, ತನ್ನ ಮುಖದ ಮೇಲೆ ಒಂದು ಗೆರೆ ಬದಲಾವಣೆಯಾದರೂ ಕಂಡು ಹಿಡಿದು ಬಿಡುವ ಚಾಣಾಕ್ಷತೆ ಎಲ್ಲವೂ ತುಂಬಿದ್ದರೂ, ಈಚೀಚೆಗೆ ಅರ್ಧ ಕೊಡ ತುಂಬಿದಂತೆ ಏನೇನೋ ಶಬ್ದಗಳು ಅಲೆಗಳ ಏರಿಳಿತಳು. ಏನೋ ಒಂದು ಬಗೆಯ ಶೂನ್ಯತೆ ಅಪೂರ್ಣತೆ ಸದಾನಂದನ ಭರವಸೆ ನೀಡುವ ಅಪ್ಪುಗೆ ಸಮಾಧಾನ ತಂದರೂ ಒಂದು ಕ್ಷಣ ಅಷ್ಟೇ… ಎಲ್ಲವೂ ಅವನೊಂದಿಗೆ ಮಾಯ… ಎಲ್ಲದರಲ್ಲೂ ನಿರಾಸಕ್ತಿ ಈಗಲ್ಲದಿದ್ದರೂ ಮುಂದಾದರೂ ಹೂಗೊಂಚಲು ತನಗೆ ಸಿಗಬಹುದೆಂಬ ಭರವಸೆ. ಈಗ ಪೂರ್ತಿ ಮಾಯ ಎಲ್ಲವೂ ಗಗನ ಕುಸುಮ. ಬೇರೆ ಗಿಡಗಳಲ್ಲಿನ ಸುಂದರ ಹೂಗಳನ್ನು ನೋಡಿಯೇ ಆನಂದಿಸಬೇಕು. ತನ್ನ ಮನೆಯಂಗಳದಲ್ಲಿ ಹೂಗಿಡಗಳು ಬೆಳೆಯಲು ಸಾಧ್ಯವೇ ಇಲ್ಲ… ಬರೀ ಎಲೆ ಮುಳ್ಳುಗಳು ತುಂಬಿದ ಕುರುಚುಲು ಗಿಡಗಳ ಗುಂಪು ಎಲ್ಲದರಲ್ಲೂ ಎಂಥದ್ದೋ ಅತೃಪ್ತಿ, ಅಸಮಾಧಾನ, ಅಸಹನೆ.

ದಿನ ಕಳೆದಂತೆ ಎದುರಿಸಬಲ್ಲೆ ಮಕ್ಕಳಾಗದಿದ್ದರೇನಾಯಿತು?

ಅವಳ ನಿರ್ಧಾರದ ಗೋಡೆ ನಿಧಾನವಾಗಿ ಬಿರುಕು ಬಿಡಲು ಪ್ರಾರಂಭವಾಗಿತ್ತು.

ಯಾವುದಾದರೂ ಸಣ್ಣಪುಟ್ಟ ಸಮಾರಂಭಗಳಾದರೂ ಅಲಂಕರಿಸಿಕೊಂಡು ನಗುತ್ತಾ ಹೋಗಿ ಬರುತ್ತಿದ್ದ ರಮಾ ಜನಗಳ ಗುಂಪಿನಿಂದಲೇ ದೂರವಿರತೊಡಗಿದಳು.

“ಎಷ್ಟು ಮಕ್ಕಳು?”

“ಯಾರಿಗಾದರೂ ಕೇಳಿದರೆ, ನಿಮಗೆ ಮನೆಯೆಷ್ಟು.. ಹೊಲವೆಷ್ಟು ಅಂತ ಕೇಳುವಾಗ ಹೆಣ್ಣಿಗೆ ಕೇಳೋದು ಮಕ್ಕಳೆಷ್ಟು ಎಂದೇ ಅಲ್ವೇ?”

“ಇನ್ನೂ ಚಿಕ್ಕ ವಯಸ್ಸು ಮುಂದೆ ಮಕ್ಕಳಾಗಬಹುದು ಬಿಡಿ”

“ಗಂಡ ಹೆಂಡತಿ ಅದೆಷ್ಟು ಸುಂದರವಾಗಿದ್ದಾರೆ ಮಕ್ಕಳಾದ್ರಂತೂ ಚಿನ್ನದ ಗೊಂಬೆಗಳೇ ಆಗುತ್ತವೆ…”

ಇನ್ನು ಏನೇನೋ ಮಾತುಗಳು ಕುತೂಹಲದ ನೋಟಗಳು ರಮಾ ಬೆವತು ನೀರಾಗುತ್ತಿದ್ದಳು, ಆಗೆಲ್ಲಾ.

“ನಾನು ಬಂಜೆಯಲ್ಲ ನಂಗೂ ಮಕ್ಕಳಾಗುತ್ತವೆ. ನಾನು ತಾಯಿಯಾಗುತ್ತೇನೆ” ಎಂದೆಲ್ಲಾ ಹೇಳಲು ಅವಳ ನಾಲಿಗೆ ತವಕಿಸಿದರೂ ಸ್ವರ ಹೊರಡುತ್ತಿರಲಿಲ್ಲ.

ಇವರೆಲ್ಲರಿಂದ ತಪ್ಪಿಸಿಕೊಂಡು ದೂರ ಓಡಬೇಕು. ಆಕಾಶದ ಎತ್ತರಕ್ಕೂ ನಿಂತ ತನ್ನ ಸದಾನಂದನ ತೋಳುಗಳಲ್ಲಿ ಹುದುಗಿಹೋಗಬೇಕು. ಆದರೆ? ಅವನ ತೋಳುಗಳು ಕತ್ತರಿಸಿ ಬಿದ್ದಿವೆಯಲ್ಲ! ಎಂತಹ ಅಸಹಾಯಕತೆ.

ನಿರ್ಧಾರದ ಗೋಡೆ ಬಿರುಕು ಬಿಟ್ಟು ಚೂರು ಚೂರಾಗಿ ಕುಸಿಯತೊಡಗಿತ್ತು. ಹೌದು ತನ್ನಲ್ಲಿ ಯಾವ ಕುಂದೂ ಇಲ್ಲ ತನಗೆ ಮಕ್ಕಳಾಗುತ್ತವೆ, ಇದೇ ಮಾತುಗಳನ್ನು ಬೇರೆ ಯಾರೋ ಒತ್ತಿ ಒತ್ತಿ ಹೇಳಿದರಲ್ಲ? ಡಾಕ್ಟರ್ ಜೋಶಿಯವರ ಮುಖ ತೇಲಿ ಬಂದಿತು.

ಅವಳ ಕಣ್ಣುಗಳು ಮಿಂಚಿದವು, ಯಾವುದೋ ನಿರ್ಧಾರ ಅವಳ ಮುಖದಲ್ಲಿ ಮೂಡಿತು. ಅದೇ ಬಿಗುವಿನಲ್ಲಿ ದಡದಡನೆ ಒಳಗೆ ಬಂದಳು. ಕೈಗೆ ಸಿಕ್ಕ ಸೀರೆಯನ್ನು ಸುತ್ತಿಕೊಂಡಳು. ಪರ್ಸು ಕೈಗೆ ತೆಗೆದುಕೊಂಡು ಬಾಗಿಲಿಗೆ ಬೀಗ ಸಿಕ್ಕಿಸಿ ಹೊರಗೆ ಹೊರಟಿದ್ದು ಡಾ. ಜೋಶಿಯವರ ನರ್ಸಿಂಗ್ ಹೋಮಿಗೆ.

ಕೊನೆಗೊಂದು ದಿನ, ಡಾಕ್ಟರ್ ಜೋಶಿಯವರು,

“ಅಂತೂ ಪ್ರಯೋಗದಲ್ಲಿ ಜಯಶಾಲಿಯಾದೆವು. ಪ್ರತಿ ತಿಂಗಳು ಬಂದು ಚೆಕಪ್ ಮಾಡಿಸಿಕೊಂಡು ಹೋಗ್ತಾ ಇರಿ… ಈ ಮಾತ್ರೆಗಳನ್ನು ವೇಳೆಗೆ ಸರಿಯಾಗಿ ತೆಗೆದುಕೊಳ್ಳಿ…” ಅತ್ಯಂತ ಉತ್ಸಾಹದಿಂದ ಹೇಳಿದಾಗ, ತಾನು ಗರ್ಭಿಣಿಯಾಗಿದ್ದೇನೆಂದು ತಿಳಿದೊಡನೆ ರಮಾಳಿಗೆ ಹುಚ್ಚು ಹಿಡಿದಂತಾಯಿತು.

ದುಃಖದ ಆವೇಗ ಆವೇಶದಲ್ಲಿ ಓಡಿಬಂದುದಾಗಿತ್ತು. ಮಡಿಲಲ್ಲಿ ಆಡುವ ಮಗುವಿನ ಹೂ ನಗುವಿಗಾಗಿ ಹಾವು ನುಂಗಿಯಾಗಿತ್ತು. ಈಗ ಸಹಿಸಿಕೊಳ್ಳಬೇಕು. ಅದು ನಂಜು ಉಗಳಿದಾಗಲೆಲ್ಲಾ ಜೀರ್ಣಿಸಿಕೊಳ್ಳಬೇಕು. ಆ ಶಕ್ತಿ ಇದೆಯೇ?

ದಿನ ಕಳೆದಂತೆ ಮನೋವ್ಯಥೆಯೊಂದಿಗೆ ದುಗುಡ ಆತಂಕ ಹೆಚ್ಚಾಯಿತು ಗಂಡನ ಪ್ರೀತಿಯ ತೋಳುಗಳಲ್ಲಿ ಹಾವು ಸುತ್ತಿದವಳಂತೆ ಚಡಪಡಿಸುತ್ತಿದ್ದಳು. ಅವನ ನೆರಳು ಹತ್ತಿರ ಬಂದರೆ ಮೆಟ್ಟಿ ಬೀಳುತ್ತಿದ್ದಳು. ಎಷ್ಟೋ ಬಾರಿ ಕನಸುಗಳಲ್ಲಿ ಚೀರಿ ಏಳುತ್ತಿದ್ದಳು. ಮೈಯೆಲ್ಲಾ ಬೆವರಿ, ಹೆದರಿ ನಡುಗುತ್ತಿದ್ದ ತನ್ನನ್ನು ಸಂತೈಸಲು ಗಂಡ ಹತ್ತಿರ ಬಂದರೆ “ನನ್ನನ್ನು ಮುಟ್ಟಬೇಡಿ ಈ ಮಗು ನಿಮ್ಮದಲ್ಲ” ಎಂದು ಹುಚ್ಚಿಯಂತೆ ಕೂಗಿ ಹೇಳಬೇಕೆನಿಸುತ್ತಿತ್ತು. ಗಂಡನ ಪ್ರೀತಿ, ಆತಂಕ ಹೆಚ್ಚಿ ತನ್ನ ಹತ್ತಿರ ಬಂದಂತೆಲ್ಲಾ ಅವನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು.

ಮಗು ಯಾರದ್ದಿರಬಹುದು? ಯಾವ ಜಾತಿಯವನದ್ದೋ? ಯಾವುದೋ ಮಗುವಿನ ಮುಖ ಅಸ್ಪಷ್ಟವಾಗಿ ತೇಲಿ ಬರುತ್ತಿದ್ದರೆ ಭೀತಿಯಿಂದ ಬಲವಾಗಿ ಕಣ್ಣು ಮುಚ್ಚಿಕೊಂಡುಬಿಡುತ್ತಿದ್ದಳು.

“ಮಗು ಯಾರದು? ಬೇರೆ ತರಹಾ ಇದೆಯಲ್ಲ ರಮಾ?” ಎಂದು ತನ್ನ ಗಂಡ ಕೇಳಿದರೆ?

“ಮಗು ಗಂಡನ ತರಹವೂ ಇಲ್ಲ, ತಾಯಿಯ ಹಾಗೂ ಇಲ್ಲ. ಬೇರೇನೆ ಇದೆ” ಎಂದು ಬೀದಿಯವರೆಲ್ಲಾ ಬಂದು ನೋಡಿದರೆ?

ರಮಾ ಉಬ್ಬೆಗೆ ಹಾಕಿದವಳಂತೆ ಬಂದಳು. ಮಾತ್ರೆಗಳನ್ನು ಕಿಟಕಿಯಿಂದಾಚೆ ದೂರ ಕಣ್ಣಿಗೆ ಕಾಣಿಸದ ಹಾಗೆ ಬೀಸಿ ಎಸೆದಳು. ತನ್ನ ಮೇಲೆ, ತನ್ನನ್ನು ಪ್ರೀತಿಸುವ ಸದಾನಂದನ ಮೇಲೆ ಈ ಜನಗಳ ಮೇಲೆ ರೋಷ ಉಕ್ಕಿತು ಜಿಗುಪ್ಸೆಯಿಂದ ಯಾರಿಗೂ ಕಾಣದ ಹಾಗೆ ತನ್ನನ್ನೇ ದಂಡಿಸಿಕೊಳ್ಳುತ್ತಿದ್ದಳು. ಆದರೂ ಅವಳ ಹೃದಯದಲ್ಲಿ ಹೊತ್ತಿದ್ದ ಕಿಚ್ಚು ಆರಲಿಲ್ಲ. ಬೆಂಕಿ ತಣ್ಣಗಾಗಲಿಲ್ಲ ಪಾಪಕ್ಕೆ ಪ್ರಾಯಶ್ಚಿತ್ತವಾಗಬೇಕು… ಕಹಿ ಸತ್ಯ ಹೇಳಲೇಬೇಕು ಬೇರು ಸಮೇತ ಕಿತ್ತೆಸೆಯಬೇಕು. ಈಗ ಅದೊಂದೇ ಮಾರ್ಗವಿರುವುದು. ಆದರೆ ಹೇಳುವುದಾದರೂ ಹೇಗೆ?

ಉನ್ಮಾದಿನಿಯಂತೆ ತನ್ನತ್ತ ನೋಡುತ್ತಾ, ತಲೆ ಗಟ್ಟಿಯಾಗಿ ಹಿಡಿದು ಕುಳಿತ ರಮಾಳ ಮುಖ ನೋಡಿ ಸದಾನಂದನಿಗೆ ಹೆದರಿಕೆಯಾಯಿತು.

“ರಮಾ…” ಹಿಂಜರಿಯುತ್ತಲೇ ಹತ್ತಿರ ಕುಳಿತ. ಅವನ ಕೈಗಳು ಅವಳ ಸೆರಗನ್ನು ಸರಿಪಡಿಸಿದವು. ಹತ್ತಿರ ಬಂದ ಗಂಡನನ್ನು ಬಲುವಾಗಿ ಅಪ್ಪಿ ಹಿಡಿದುಕೊಂಡಳು.

“ಯಾಕೆ? ಏನಾಗ್ತಿದೆ ಹೇಳು ರಮಾ…

“ಅವನ ತೋಳುಗಳಲ್ಲಿದ್ದ ಮುಖ ಮೇಲೆತ್ತಿ ನೋಡಿದ ರಮಾ.

“ನಾನು ನನ್ನ ಹೊಟ್ಟೆಯಲ್ಲಿ…” ತಡವರಿಸಿದಳು.

“ಏನಾಗ್ತಿದೆ ಹೇಳು” ಅವಳನ್ನು ಇನ್ನು ಹತ್ತಿರಕ್ಕೆಳೆದುಕೊಂಡ.

“ಮಗು ಇದೆ ಬೆಳಿತಾ ಇದೆ…” ಪ್ರಯಾಸದಿಂದ ನುಡಿದಳು.

ಆನಂದದಿಂದ ಸದಾನಂದನ ಮುಖ ಹುಚ್ಚು ಹುಚ್ಚಾಯಿತು.

“ಓಹ್! ಎಷ್ಟು ಕೆಟ್ಟ ಹುಡುಗಿ ನೀನು? ಈ ಸುದ್ದಿ ತಿಳಿಸಲು ಅದೆಷ್ಟು ಹೆದರಿಸಿಬಿಟ್ಟೆ?”

“ಆದರೆ ನಂಗೆ ಈ ಮಗೂ ಬೇಡಾ…”

ಅವನ ತೋಳುಗಳು ಕತ್ತರಿಸಿ ಹಾಕಿದಂತೆ ಕೆಳಗೆ ಬಿದ್ದವು… ದಿಗ್ಭ್ರಾಂತನಾಗಿ ರಮಾಳತ್ತ ನೋಡಿದ.

ಈ ಸುದಿನಕ್ಕಾಗಿ ತಾವಿಬ್ಬರೂ ಎಷ್ಟು ದಿನಗಳಿಂದ ಕಾಯುತ್ತಿದ್ದೆವು. ಮೊದಲಿನಿಂದಲೂ ಆಗಾಗ್ಗೆ ರಮಾ ನೀವೇ ಮಗ ನಂಗೆ ಮಗು ಬೇಡ” ಎನ್ನುತ್ತಿದ್ದುದು ಕೇವಲ ತನ್ನನ್ನು ಸಮಾಧಾನ ಪಡಿಸಲು ಆಡುವ ನಾಟಕ ಎಂದುಕೊಂಡಿದ್ದ. ನಿಜವಾಗಿಯೂ ರಮಾಳಿಗೆ ಮಗು ಬೇಕಿರಲಿಲ್ಲವೇ? ಅವಳಿಗೆ ಹುಚ್ಚು ಹಿಡಿದಿಲ್ಲವಷ್ಟೇ? ಹಾಸ್ಯ ಮಾಡುತ್ತಿರುವಳೇ?

“ನೀನು ಹೇಳ್ತಾ ಇರೋದು ಏನೂಂತಾ ತಿಳಿದಿದೆಯಾ?” ಚೇತರಿಸಿಕೊಂಡು ಕೇಳಿದ. ಅವನ ಧ್ವನಿ ಉದ್ವೇಗದಿಂದ ನಡುಗುತ್ತಿತ್ತು.

“ನಿಜಕ್ಕೂ ನಂಗೆ ಮಗೂ ಬೇಡಾ ತೆಗೆಸಿ ಹಾಕಿಬಿಡಿ, ಇಲ್ಲದಿದ್ದರೆ ನಾನು ಸತ್ತೇ ಹೋಗುತ್ತೇನೆ.”

ದುಃಖದ ಆವೇಗದಲ್ಲಿ ಗಡಬಡಿಸತೊಡಗಿದಳು. ಸದಾನಂದ ನಿಸ್ತೇಜನಾದ. “ನಂಗೆ ನೀವು ಬೇಕು ಬೇರೆ ಏನೂ ಬೇಡ, ಈಗಲೇ ಡಾಕ್ಟರ್ ಬಳಿಗೆ ಹೋಗೋಣ ಈ ಮಗು ಬೇಡಾ. ಇಲ್ಲದಿದ್ದರೆ ನಾನು ವಿಷ ಕುಡಿದು ಬಿಡ್ತೀನಿ…”

ಸದಾನಂದ ಏನೂ ಉತ್ತರ ಹೇಳದೆ ಹೊರ ಬಂದು ಎರಡು ಕೈಗಳಲ್ಲಿ ತಲೆ ಇಟ್ಟುಕೊಂಡು ಕುಳಿತ. ತನಗೆ ತನ್ನ ಪ್ರೀತಿಯ ಹೆಂಡತಿ ಬೇಕು. ಅವಳ ನಿರ್ಧಾರ ಒಪ್ಪಿಕೊಳ್ಳಲೇ ಬೇಕಾಗಿತ್ತು.

….ಆದರೆ ಕಬ್ಬಿಣದ ತೆರೆ ಸತ್ಯಾಂಶವನ್ನು ದೂರ ಮಾಡಿರುವುದನ್ನು ಮನಗಾಣದಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿಗಿ
Next post ದರುಶನ

ಸಣ್ಣ ಕತೆ

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys