ಮಠಾಧಿಪತಿಗಳಿಗೇನಾಗಿದೆ?

ಇತ್ತೀಚಿನ ದಿನಗಳಲ್ಲಿ ಮಠಾಧಿಪತಿಗಳಿಗೇನಾಗಿದೆ ಎಂಬ ಪ್ರಶ್ನೆ ನಮ್ಮ ನಿಮ್ಮಂತವರನ್ನು ಕಾಡುತ್ತಿರಬಹುದಲ್ಲವೆ. ‘ಹೇಳುವುದು ಒಂದು ಮಾಡುವುದು ಮತ್ತೊಂದು’ ಎಂಬ ದಾಸವಾಣಿಯನ್ನು ನೆನಪಿಸುವಂತೆ ನಡೆದುಕೊಳ್ಳುತ್ತಿರುವ ಮಠಾಧಿಪತಿಗಳ ನಡೆಯಲ್ಲಿ ಆತಂಕ, ನುಡಿಯಲ್ಲಿ ಹುಸಿ ಆಚಾರ ವಿಚಾರಗಳಲ್ಲಿ ಬೂಟಾಟಿಕೆ, ಆಡಂಬರದ ಹವ್ಯಾಸ, ವಿದೇಶ ಪ್ರವಾಸ, ರಾಜಕಾರಣಿಗಳ ಸಹವಾಸ, ಐಷರಾಮಿ ಜೀವನದ ಅಭ್ಯಾಸ, ಇತ್ಯಾದಿ ಇತ್ಯಾದಿಗಳಿಂದ ಧಾರ್ಮಿಕತೆಯ ಹಾದಿ ತಪ್ಪುತ್ತಿರುವ ಇವರುಗಳು ಪಕ್ಕಾ ರಾಜಕಾರಣಿಗಳ ನಕಲಿನಂತೆ ತೋರಿಬರುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಖಂಡಿತ ಶೋಭೆಯಲ್ಲ. ಜಗದ್ಗುರುಗಳು ಎಂದು ಕರೆದುಕೊಳ್ಳುವ ಮಠಾಧಿಪತಿಗಳು ತಾವು ಜಾತಿಗುರುಗಳು ಮಾತ್ರವೆ ಎಂದು ಅವರೇ ದೃಢೀಕರಿಸಿಕೊಳ್ಳುತ್ತಿರುವುದು ಈವತ್ತಿನ ವಿಪರ್ಯಾಸ.

ಪೇಜಾವರ ಮಠಪತಿಗಳಿಗಂತೂ ಪರ್ಯಾಯ, ಜಪತಪಕ್ಕಿಂತ ರಾಜಕೀಯ ತೆವಲುಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಪರಯಾಸಕ್ತಿ. ಮಸೀದಿ ನಿರ್ಮಾಣದ ಸುದ್ದಿ ಎದ್ದರೆ ಉಡುಪಿಯಿಂದ ದೆಹಲಿಗೆ ಕ್ಯಾಂಪ್ ಬದಲಿಸಿಬಿಡುವ ಸಾಮಿಗಳು ಆರ್.ಎಸ್.ಎಸ್.ನವರಿಗಿಂತ ಒಂದು ಕೈ ಹೆಚ್ಚೆ ಜಾತಿವಾದಿಗಳಂತೆ ಭಾಸವಾಗುತ್ತಾರೆ. ಮನುಷ್ಯ ನೆಮ್ಮದಿಯಿಂದ ಬದುಕಲು ರಾಮಮಂದಿರವಾಗಲಿ, ಮಸೀದಿಯಾಗಲಿ, ಅನಗತ್ಯವೆಂಬ ಹಂತಕ್ಕೆ ಶ್ರೀಸಾಮಾನ್ಯ ತಲುಪಿದ್ದರೂ, ಬ್ರಾಹ್ಮಣ ಮಠಪತಿಗಳಿಗೆ ಮಂದಿರ ಸಮಸ್ಯೆಯನ್ನು ಜೀವಂತವಾಗಿ ಉಳಿಸಲು ಚಪಲ. ಕಂಚಿಶ್ರೀಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ನಾಯಕರೊಂದಿಗೂ ಮಾತುಕತೆಯಾಡುವಷ್ಟು ಔದಾರ್ಯ ತೋರುತ್ತಿರುವರಾದರೂ ಅಂತರಂಗದಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರತಿಷ್ಠೆಯೆಂಬಂತೆ ಪರಿಭಾವಿಸುತ್ತಾರೆ. ಮಹಂತ ರಾಮಚಂದ್ರ ಪರಮಹಂಸರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಪ್ರಧಾನಿ ವಾಜಪೇಯಿ ಮತ್ತೊಮ್ಮೆ ಮಂದಿರ ನಿರ್ಮಾಣ ಮಾಡೇ ತೀರುತ್ತೇವೆಂದು ಘೋಷಿಸಿ ಮುಂಬರುವ ಚುನಾವಣೆಯ ಓಟಿಗೆ ಈಗಲೇ ಗಾಳ ಹಾಕಿದ್ದಾರೆ. ರಾಮಮಂದಿರವೂ ಬೇಡ ಮಸೀದಿಯೂ ಬೇಡವೆಂದು ಒಂದೇ ಮಾತಿನಲ್ಲಿ ಪೇಜಾವರರೇ ಆಗಲಿ, ಕಂಚಿ ಶ್ರೀಗಳಾಗಲಿ ಅದೇಕೆ ಹೇಳಿಕೆ ನೀಡಬಾರದು? ಇಂಥ ಹೇಳಿಕೆ ನೀಡಿ ಕೇಂದ್ರ ಸರ್ಕಾರದ ಅವಕೃಪೆಗೆ ಪಾತ್ರರಾಗಲು ಸರ್ವಸಂಘ ಪರಿತ್ಯಾಗಿಗಳಿಗೂ ಇಷ್ಟವಿದ್ದಂತಿಲ್ಲ.

ಇನ್ನು ವೀರಶೈವ ಮಠಾಧೀಶರಂತೂ ರಾಮಮಂದಿರ ಬಗ್ಗೆ ತಲೆ ಹಾಕಿಯೂ ಮಲಗಿದವರಲ್ಲ. ಯಾಕೆಂದರೆ ಅವರದು ಗೊಡ್ಡು ಸಂಸ್ಕೃತಿಯಲ್ಲ, ಹಾಗೆನ್ನುತ್ತಲೇ ಭಕ್ತರು ಕಟ್ಟುವ ಗುಡಿಗುಂಡಾರಗಳನ್ನು ಉದ್ಘಾಟಿಸುತ್ತಲೇ ಇರುತಾರೆ. ‘ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಯ್ಯ ಬಡವನು’ ಎಂದು ಬಸವಣ್ಣ ಹೇಳಿದ್ದರಲ್ಲಿ ದೇವಾಲಯಗಳನ್ನೇ ಕಟ್ಟಬಾರದೆಂಬ ದನಿಯಿಲ್ಲವೆಂದು ಹೊಸ ದನಿ ತೆಗೆದರೊಬ್ಬ ಫಾರಿನ್ ಸ್ವಾಮೀಜಿ. ಅವರೂ ಅಸಹಾಯಕರು ; ಭಕ್ತಾದಿಗಳನ್ನು ಎದುರು ಹಾಕಿಕೊಂಡರೆ ಸಿಗುವ ವರಮಾನ ದವಸಧಾನ್ಯಗಳಿಗೆ ಸಂಚುಕಾರವೆಂಬ ಲೆಕ್ಕಾಚಾರ. ಬ್ರಾಹ್ಮಣ ಮಠಾಧಿಪತಿಗಳಲ್ಲಿ ಸೀಸನಬಲ್ ಕಿರಿಟಪತಿಗಳಿದ್ದಾರೆ ? ಮಣಗಟ್ಟಲೆ ಬಂಗಾರ ಹೇರಿಕೊಳ್ಳದ ಅಡ್ಡ ಪಲ್ಲಕ್ಕಿ ಏರದೆ ಹೊರಬರಲಾರದಷ್ಟು ಸಿನಿಕರಾಗಿದ್ದಾರೆ. ಸಂಪ್ರದಾಯಕದವರಾಗಿದ್ದಾರೆ.

ಬಸವಣ್ಣನಿಂದ ಪ್ರಭಾವಿತರಾದಂತೆ ತೋರ್ಪಡಿಸ ಹತ್ತಿರುವ ಇನ್ನು ಕೆಲವರು ಕಿರೀಟ – ಅಡ್ಡಪಲ್ಲಕಿ – ಕನಕಾಭಿಷೇಕಗಳನ್ನು ತ್ಯಜಿಸಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಧರ್ಮಪ್ರಚಾರದ ಹೆಸರಿನಲ್ಲಿ ಫಾರಿನ್ ಟೂರ್ ಮಾಡುವಲ್ಲಿ ಪೈಪೋಟಿಗಿಳಿದಿದ್ದಾರೆ. ಭಕಾದಿಗಳಿಗೂ (ಸಿರಿವಂತ) ಆ ಹುಚ್ಚು ಹಿಡಿಸುತ್ತಿದ್ದಾರೆ. ಇವರು ಎಲ್ಲಿ ಯಾರಿಗೆ ಬೇಕಾದರೂ ಲಿಂಗಧಾರಣೆಮಾಡಬಹುದು. ವಿದೇಶಗಳಲ್ಲೂ ದೇವಾಲಯಗಳನ್ನು ನಿರ್ಮಿಸಬಹುದು. ಅದು ಧರ್ಮಜಾಗೃತಿಯ ಸತ್ಯಶುದ್ಧ ಕಾಯಕ. ಅದೇ ಕಾರ್ಯವನ್ನು ಕ್ರಿಶ್ಚಿಯನ್ನರು ಮಾಡಿದರೆ ಸೈರಣೆಗೆಡುತ್ತಾರೆ. ಬಲವಂತವಾಗಿ ಮತಾಂತರ ನಡೆಯುತ್ತಿದೆ ಎಂದು ಘಟ್ಟೆ ತಗ್ಗಿನಿಂದ ಅಟ್ಟದವರೆಗೂ ಬೊಂಬಡಾ ಬಜಾಯಿಸುತ್ತಾರೆ. ಬೌದ್ಧ ಧರ್ಮವನ್ನು ದೇಶದಿಂದ ಹೊರಗಟ್ಟಿದ ಶಂಕರಾಚಾರ್ಯನಂತೆ ಮತ್ತೊಬ್ಬ ಆಚಾರ್ಯ ಹುಟ್ಟಿಕೊಳ್ಳದಿದ್ದರು ವೀರಶೈವ ಧರ್ಮ ಮಾತ್ರ ಕರ್ನಾಟಕದಿಂದಾಚೆ ಬೆಳೆಯಲಾರದೆ ತಳಮಳಿಸುತ್ತಿರುವುದಕ್ಕೆ ಏನು ಕಾರಣ ? ಮಠಪತಿಗಳೇ ಉತ್ತರಿಸಬೇಕು. ಮುಖ್ಯವಾಗಿ ಇವರುಗಳಲ್ಲೇ ಒಗ್ಗಟ್ಟಿಲ್ಲ. ಹುಬ್ಬಳ್ಳಿ ಯ ಮೂಜಗಂ ಸಿರಿಗೆರೆಮಠದ ಸಾಮಿಗಳನ್ನು ಪುಂಡಸ್ವಾಮಿ ಎಂದರೆಂದು ಸಂಕೇಶ್ವರರ ‘ವಿಜಯ ಕರ್ನಾಟಕ’ ಬಹಿರಂಗಪಡಿಸಿತು. ಪತ್ರಿಕೆಯವರ ರಾಜಕೀಯವನ್ನು ಮೆಟ್ಟಿ ಇವರಿಬ್ಬರೂ ಸ್ವಾಮಿಗಳು ಒಟ್ಟಿಗೆ ಕೂತು ಚರ್ಚಿಸಿ ಬಗೆಹರಿಸಿಕೊಳ್ಳುವಷ್ಟೂ ಸಂಯಮ ಅಭಾವದಿಂದಾಗಿ ಸ್ವಾಮಿ ಸ್ವಾಮಿಗಳಲ್ಲಿ ಉಂಟಾದ ಪತ್ರಿಕಾ ಕದನ ಹಲವು ಸ್ವಾಮಿಗಳ ನಾಲಿಗೆಗೆ ರಸಗವಳವಾಗಿದ್ದಷ್ಟೆ ಲಾಭವೆನಿಸಿತು. ತಮ್ಮ ತಮ್ಮಲ್ಲೇ ಮೇಲು ಕೀಳು ಭಾವನೆ,  ಒಳಗೊಳಗೆ ಅಸೂಯೆ-ಮತ್ಸರ, ಆಶೆಬುರುಕತನ ತೀರದ ಧನದಾಹದಿಂದ ಬಳಲುತ್ತಿರುವ ಗುರುವಿರಕ್ತರುಗಳೀಗ ಒಂದಾಗುವ ಪ್ರಹಸನಕ್ಕಿಳಿದಿದ್ದೂ ೨೧ನೇ ಶತಮಾನದ ಚೋದ್ಯವೆನಿಸಿತು. ಗುರುವಿರಕ್ತರು ತಮ್ಮತಮ್ಮಲ್ಲಿನ ಕಚ್ಚಾಟಗಳನ್ನು ಕೈಬಿಟ್ಟು ಕೂಡಲ ಸಂಗಮದಲ್ಲಿ ಕೂಡಾವಳಿ ಮಾಡಿಕೊಂಡು ಅಕ್ಕರಾಸ್ತೆ ತೋರಿದ್ದು ಪ್ರಗತಿಯ ಹೆಜ್ಜೆ ಎಂದುಕೊಳ್ಳುವಷ್ಟರಲ್ಲೇ ಪಂಚಪೀಠದವರಿಂದ ಒಡಕಿನ ಮಾತುಗಳು ಉದ್ಭವಿಸಬೇಕೆ!

ಕೂಡಲ ಸಂಗಮದಲ್ಲಿ ನಡೆದ ಸಮಾವೇಶದ ಮರುದಿನವೆ ಕಾಶಿಯ ಜಗದ್ಗುರುಗಳು ಹೌಹಾರಿ, ‘ಬಸವಣ್ಣ ನಮ್ಮ ಧರ್ಮಗುರುವಲ್ಲ ಕೇವಲ ಧರ್ಮಪ್ರಚಾರಕನೆಂದು ಮಾತ್ರ ಒಪ್ಪಿಕೊಂಡಿದ್ದೇವೆ’ ಎಂದು ಹಪಹಪಿಸಿದರು. ಕಳೆದ ವಾರಗಳಲ್ಲಿ ರಂಭಾ ಪುರಿ ಶ್ರೀಗಳು ತಡಬಡಾಯಿಸುತಾ ಹೇಳಿದ್ದೇನೆಂದರೆ, ‘ಬಸವಣ್ಣನವರ ಬಗ್ಗೆ ನಮಗೆ ಗೌರವವಿದೆ. ಆದರೆ ರೇಣುಕಾಚಾರ್ಯರೇ ನಮ್ಮ ಗುರು. ಬಸವಣ್ಣ ವೀರಶೈವ ಮತವನ್ನು ಬೆಳೆಸಿದ ಸುಧಾರಕ. ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.’ ಅಲ್ಲಿಗೆ ಎರಡು ಸಾವಿರಕ್ಕೂ ಹೆಚ್ಚು ಸೇರಿದ್ದ ಮಠಾಧಿಪತಿಗಳ ‘ಗೆಟ್ ಟುಗೆಧರ್’ಗೆ ಗೆಟಪ್ಪೆ ಸಿಗದಂತಾಯಿತು. ಇವರೆಲ್ಲಾ ಒಂದು ಜಾತಿಯ ಗುರುವರ್ಯರಷ್ಟೇ, ಜಗದ್ಗುರುಗಳಲ್ಲ ಎಂಬುದನ್ನು ಸದರಿ ಸಮಾವೇಶ ಸಾಬೀತು ಮಾಡಿದ್ದನ್ನು ಬಿಟ್ಟರೆ ಕೂಡಲಸಂಗಮ ಸಮಾವೇಶದಲ್ಲಿ ಮಠಾಧಿಪತಿಗಳ ಕಾಯಗಳ ಕೂಡಿಕೆಯಾಯಿತೇ ವಿನಹ ಮನಸ್ಸುಗಳ ಸಂಗಮವಾಗಲೇ ಇಲ್ಲವೆಂಬುದು ಕಟುಸತ್ಯ.

ಮತ್ತೊಂದು ಪ್ರಕರಣದಲ್ಲೂ ಇವರ ಜಾತಿಪ್ರೇಮದ ನಗ್ನ ದರ್ಶನವಾದ ಬಗ್ಗೆ ಅವರುಗಳೇ ಈಗ ಮರುಕಪಡುವಂತಾಗಿರಬಹುದು.

ಡಾ|| ರಾಜ್ ಅಪಹರಣವಾದಾಗ ಇವರಾರೂ ಉಸಿರೆತ್ತಲಿಲ್ಲ. ಜನಪದ ಕಾಳಜಿ ಡಾ|| ರಾಜ್‌ ಅವರನ್ನು ತಿರುಗಿಬರುವಂತೆ ಮಾಡಿದ್ದು ನಿಜ. ಆದರೆ ಜಾತಿಮೋಹದಿಂದಾಗಿ ಅಪಹರಣಗೊಂಡ ನಾಗಪ್ಪನವರ ಬಿಡುಗಡೆಗೆ ವೀರಶೈವ ಮಠಾಧಿಪತಿಗಳೆಲ್ಲಾ ಸುತ್ತೂರು ಸ್ವಾಮಿಗಳ ನೇತೃತ್ವದಲ್ಲಿ ಸಮಾವೇಶ ನಡೆಸಿ ಸರ್ಕಾರಕ್ಕೆ ಧಮಕಿ ಕೊಟ್ಟರು, ವೀರಪ್ಪನಿಗೂ ಶರಣಾಗುವಂತೆ ಪರಮಾನು ಹೊರಡಿಸಿದರು. ಕಾವಿಗಳ ಕಾವು ಸರ್ಕಾರಕ್ಕಾಗಲಿ, ಕಾಡುಗಳ್ಳನಿಗಾಗಲಿ ತಟ್ಟಲೇಯಿಲ್ಲ; ಪರಿಣಾಮವಾಗಿ ಇವರ ಜಾತಿಯೂ ಗೆಲ್ಲಲಿಲ್ಲ. ನಾಗಪ್ಪನೂ ಉಳಿಯಲಿಲ್ಲ. ಇಂತಹ ಕ್ಲೀಷೆಗಳಿಂದಾಗಿ ಮುಂದೊಂದು ದಿನ ಪ್ರತಿ ಜನಾಂಗದ ಮಠಾಧೀಶರೂ ಅವರವರ ಜಾತಿ ಮಠಪತಿಗಳ ಸಮಾವೇಶ ನಡೆಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಯಿತಷ್ಟೆ . ಬ್ರಾಹ್ಮಣ ಮತ್ತು ವೀರಶೈವರಲ್ಲಿರುವಷ್ಟು ಅಧಿಕ ಮಠಾಧಿಪತಿಗಳು ಬೇರೆ ಜನಾಂಗದಲ್ಲಿ ಇಲ್ಲವೆಂಬುದು ಕೂಡ ಪುಣ್ಯ ವಿಶೇಷವೇ ಸರಿ.

ಆದರೂ ಒಕ್ಕಲಿಗರಲ್ಲಿ ಒಬ್ಬರೇ ಮಠಾಧೀಶರೆನಿಸಿದ್ದ ಏಕವ್ಯಕ್ತಿ ಪ್ರಭಾವವನ್ನು ದೇವೇಗೌಡರು ಮುರಿದಿದ್ದು ಘೋರ ಅಪರಾಧವೇನಲ್ಲ. ಎಲ್ಲಾ ಜನಾಂಗದಲ್ಲೂ ಅನೇಕ ಸ್ವಾಮಿಗಳಿರುವಾಗ ಒಕ್ಕಲಿಗರಲ್ಲಿ ಮತ್ತೊಬ್ಬ ಸ್ವಾಮಿ ಬೆಳಕಿಗೆ ಬಂದಾಕ್ಷಣ ಬಾಲಗಂಗಾಧರರ ಪ್ರಭಾವಳಿಗೆಂತಹ ಕತ್ತಲೂ ಕವಿಯದು. ಅಂತಹ ಪ್ರಬಲರು ಇಷ್ಟಕ್ಕೆ ಧೃತಿಗೆಟ್ಟಂತಾಡುವುದು ಖಂಡಿತ ಅಚ್ಚರಿಯನ್ನುಂಟು ಮಾಡದಿರದು. ಇದನ್ನೆಲಾ ಅವಲೋಕಿಸುವಾಗ ಶ್ರೀಸಾಮನ್ಯರಂತೆಯೇ ಮಠಾಧಿಪತಿಗಳಿಗೂ ಸಹ ತೀರದ ಆಶೆ ದ್ವೇಷ ಅಸೂಯೆ ಮತ್ಸರ ಮೇಲುಕೀಳು, ಒಟ್ಟಾರೆ ಹೇಳುವುದಾದರೆ ಅರಿಷಡ್ವರ್ಗಗಳಿಂದ ಮುಕ್ತರಾಗಿಲ್ಲವೆಂದೇ ಮನದಟ್ಟಾಗುತ್ತದೆ. ಯಾರೂ ಬಸವತತ್ವಾನುಸಾರ ಬದುಕುತ್ತಿಲ್ಲವೇನೋ ಎಂದು ವೇದನೆಯುಂಟಾಗುತ್ತದೆ.

ಉಂಡಾಡಿಗಳಂತೆ ಸುತಾಡುವವರನ್ನೆಲಾ ಎಳೆದು ತಂದು ಜಾತಿಗೊಬ್ಬ ಜಗದ್ಗುರುಗಳನ್ನಾಗಿ ಮಾಡುವುದು, ಅದಕ್ಕಾಗಿ ಮಠದಲ್ಲಿಯೇ ತರಬೇತಿ ತರಗತಿಗಳು ಬೇರೆ. ಹಿಂಡುಗಟ್ಟಲೆ ಮಹಿಳೆಯರಿಗೂ ಸಂನ್ಯಾಸಿಗಳಾಗಲು ಸದಾವಕಾಶ. ಅವರಿಗೂ ವಿರಕ್ತಮಠದಲ್ಲಿ ತಾಣ, ತರಬೇತಿಗಳು ನಡೆದಿರುವುದು ಯಾವ ಪುರುಷಾರ್ಥಕ್ಕೆ ? ಇವರೆಲ್ಲಾ ಏನಾದರೊಂದು ನೌಕರಿ ಹಿಡಿದು ದುಡಿದು ತಿನ್ನುವುದನ್ನು ಬಿಟ್ಟು, ಬಿಟ್ಟಿ ಪ್ರಚಾರದಲ್ಲಿ ತೊಡಗಿಸಿಕೊಂಡು (ಥೇಟ್ ಕ್ರಿಶ್ಚಿಯನ್ ಮಿಷನರಿಗಳಂತೆ) ಮಠದಲ್ಲಿ ದಂಡಪಿಂಡಗಳಾಗಿ ಮಾರ್ಪಾಟಾಗುತ್ತಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಉಪಯೋಗ ಸಮಾಜಕ್ಕೆ ಆಗುತ್ತಿಲ್ಲವೆಂಬುದು ಶೋಚನೀಯ. ಬೆಂಕಿ ಮತ್ತು ಬೆಣ್ಣೆಯನ್ನು ಒಂದೆಡೆ ಇಟ್ಟರೆ ಬೆಂಕಿಯ ಸ್ಥಿತಿ ಏನು ? ಬೆಣ್ಣೆಯ ಗತಿ ಏನು ? ಕೈ ತುಂಬಾ ಕಾಣಿಕೆ ಪುಷ್ಕಳ ಭೋಜನ, ಓಡಾಡಲು ಕಾರು.. ಯಾರದೋ ಡಾಲರ್ ನಲ್ಲಿ ಫಾರಿನ್ ಟೂರು. ಅದೃಷ್ಟ ಖುಲಾಯಿಸಿತೋ ಹಾರಾಡಲು ಹೆಲಿಕಾಪ್ಟರ್ ಸಹ ಸಿಕ್ಕೀತೆನ್ನುವಾಗ ಹೆಣ್ಣಿನ ಸಂಗ ಸುಖ ಒಂದನ್ನು ತ್ಯಾಗಮಾಡುವುದು (?) ಯಾವ ಮಹಾ ? ಅದಕ್ಕೆಂದೇ ಸ್ವಾಮಿಗಳಾಗುವವರ ದಂಡೂ ಬೆಳೆಯುತ್ತಿರಬಹುದೆ? ಇದಕ್ಕೆಲ್ಲಾ ಏನೆನ್ನಬೇಕು!

ಹಲವು ಪ್ರಸಿದ್ದ ಪುರಾತನ ಮಠಗಳಲ್ಲಿ ಕೊಳೆಯುತ್ತಿರುವ ಕೋಟಿಗಟ್ಟಲೆ ಹಣ ಕೊಪ್ಪರಿಗೆಗಟ್ಟಲೆ ಚಿನ್ನಬೆಳ್ಳಿ, ಸಾವಿರಾರು ಎಕರೆ ಜಮೀನು, ಎಸ್ಟೇಟ್ ಮಠದಲ್ಲಿರುವ ಇಲಿ, ಹೆಗ್ಗಣಗಳ ಪಾಲಾಗುವುದೇ ಹೆಚ್ಚು, ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ (ಯೂನಿಫಾರಂ ಸಿವಿಲ್ ಕೋಡ್) ತರುವಂತೆ ಸರ್ವೊಚ್ಛ ನ್ಯಾಯಾಲಯ ನೀಡಿರುವ ಸಲಹೆ ಕೂಡ ಸ್ವಾಗತಾರ್ಹ. ಸದರಿ ಕಾನೂನು ಜಾರಿಯಾದರೆ ಮಠಮಂದಿರಗಳ ಉಸಿರು ಸಿಕ್ಕಿಕೊಳ್ಳುವುದು ಗ್ಯಾರಂಟಿ. ಇದಕ್ಕೆ ಮುನ್ನ ಮಠಾಧಿಪತಿಗಳೇ ಮುಂದಾಗಿ ತಮಗೆ ಸಾಕುಬೇಕಷ್ಟು ಹಣಕಾಸು, ಚಿನ್ನ ಭೂಮಿಯನ್ನು ತಮ್ಮಲ್ಲಿಟ್ಟುಕೊಂಡು ಹೆಚ್ಚುವರಿ ಹಣ ಮತ್ತು ಚಿನ್ನವನ್ನು ಸರ್ಕಾರಕ್ಕೆ ಒಪ್ಪಿಸಿ ಹಾಗೂ ತಮ್ಮ ಕಬ್ಜಾದಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಬಡಬಗ್ಗರಿಗೆ ಹಂಚುವ ಸತ್ಕಾರ್ಯದತ್ತ ಗಮನಹರಿಸಿ ನಿಜ ಅರ್ಥದಲ್ಲಿ ಜಗದ್ಗುರುಗಳಾಗಬಾರದು. ಸದಾ ಒಂಟಿ ಆಗಿರುವ ಸರ್ವಸಂಘ ಪರಿತಾಗಿಗಳಿಗಾದರೂ ಎಷ್ಟು ಬೇಕು ? ಈ ಮಾತನ್ನು ಏಕೆ ಹೇಳಬೇಕಾಗಿ ಬಂತೆಂದರೆ ಖಾದಿ ತೊಡದ ರಾಜಕಾರಣಿಗಳಂತಿರುವ ಮಠಾಧಿಪತಿಗಳು ತಮ್ಮ ಕಾವಿಯ ಕಿಮ್ಮತ್ತನ್ನು ಕಾಪಾಡುವಂತಹ, ಜನರ ಗುಮಾನಿ ಕಣ್ಣುಗಳಿಂದ ಪಾರಾಗುವಂತಹ ಸಂಕ್ರಮಣ ಕಾಲ ಎದುರಾಗಿದೆ.

ವೀರಶೈವ ಮಠಾಧೀಶರೇನೋ ಸರ್ಕಾರಕ್ಕೆ ಸವಾಲ್ ಒಡುವಂತಹ ಶೈಕ್ಷಣಿಕ ಸಂಸ್ಥೆಗಳನ್ನು ದಿವಿನಾಗಿ ಕಟ್ಟಿ ಬೆಳೆಸುತ್ತಿರುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ (ಸೀಟುಗಳ ವ್ಯಾಪಾರವೂ ನಡೆಯುತ್ತಿದೆ ಎಂಬುದನ್ನು ಬದಿಗಿರಿಸೋಣ), ಆದರೆ ವೈದಿಕ ಮಠಪತಿಗಳಲ್ಲಿ ಇಂತಹ ಕಾರ್ಯ ವಿಚಕ್ಷಣೆಗೂ ಬರಬಂದಿದೆ. ಈಗಲೂ ಬೋಳಮ್ಮನಂತೆ ಮಡಿ ಮಡಿ ಎಂದು ಜಂಪ್ ಮಾಡುತ್ತಾ ಜನರಿಂದ ಅಸ್ಪುರ್‍ಶ್ಯರಾಗಿಯೇ ಉಳಿದಿರುವ ಅವರಿನ್ನೂ ಕಲ್ಲಿನ ಮೂರ್ತಿಗಳಿಗೆ ವಜ್ರಾಭರಣಗಳ ಧಿರಿಸು, ತೊಡಿಸುತ್ತಾ ತಮ್ಮಲ್ಲೇ ಇರುವ ಬಡವರನ್ನು ಮರೆತು ವಿಗ್ರಹಗಳ ಪೂಜೆಯಲ್ಲಿಯೇ ಭಕಾಮುಕ್ತಿಯನ್ನು ಕಾಣುತ್ತಿರುವುದು ಅವರಲ್ಲಿನ ದೈವೀಶಕ್ತಿಯ (?) ದುರುಪಯೋಗವೆನ್ನದೆ ವಿಧಿಯಿಲ್ಲ. ಎಲಾ ಬಿಟ್ಟ ಮಗ ಭಂಗಿ ನೆಟ್ಟ ಎಂಬಂತಾಡುತ್ತಿರುವ ಈ ಮಠಾಧಿಪತಿಗಳಿಗೇನಾಗಿದೆ!?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕುನ
Next post ಹಬ್ಬಾ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys