ಪೂರ ಪಳಗದ ನಟ ಅಭಿನಯದ ಹೊತ್ತಿನಲಿ
ಹೆದರಿ, ಪಾತ್ರಕ್ಕೆ ಹೊರತಾಗಿ ನಟಿಸಿದ ಹಾಗೆ,
ಇಲ್ಲ , ಭಾವವೇಶವಶನಾಗಿ ನಟನೆಯಲಿ
ಅಭಿನಯದ ಪರಿಣಾಮವನ್ನೆ ಕಳೆಯುವ ಹಾಗೆ,
ನನ್ನಲ್ಲೆ ವಿಶ್ವಾಸ ತಪ್ಪಿ, ನಾ ತಪ್ಪುವೆನು
ಹೃದಯದೊಲುಮೆಯ ಜೇನ ನುಡಿಯೊಳಗೆ ಇಳಿಸಲು,
ಪ್ರೀತಿಯೊಳಗದ್ದಿ ಭಾವಾವಿಷ್ಟನಾಗುವೆನು
ಸೋಲುವೆನು ನನ್ನ ನಿಜಪ್ರೀತಿಯನು ತಿಳಿಸಲು.
ಹೀಗಿರುತ ನನ್ನ ಕೃತಿಗಳೆ ನಿಂತು ನನ್ನ ಪರ
ಸತ್ಯಕ್ಕೆ ಮೂಕಸಾಕ್ಷಿಗಳಾಗಿ ವಾದಿಸಲಿ,
ಇದಕು ಹೆಚ್ಚಿಗೆ ನುಡಿದು ಇತರ ನಾಲಿಗೆ ಪಡೆದ
ಭಾಗ್ಯಕ್ಕೆ ಮೀರಿದುದ ನನ್ನ ಕೃತಿ ಸಾಧಿಸಲಿ.
ಮೂಕ ಪ್ರೇಮವು ಬರೆದ ಮಾತನ್ನೋದಲು ಕಲಿ
ಕಣ್ಣಿಂದ ಕೇಳುವುದೆ ಪ್ರೇಮದ ವಿಶೇಷ ತಿಳಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 23
As an unperfect actor on the stage