ಪುಂಸ್ತ್ರೀ – ೪

ಪುಂಸ್ತ್ರೀ – ೪

ಶಿಶುವ ಬಲಿಗೊಂಡಳಾ ರಣಮಾರಿ

ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗಿದೆ. ಎರಡು ದಿನಗಳಾದವು ಬಾಣ ಚುಚ್ಚಿ. ಆ ಭಾಗ ನಿಧಾನವಾಗಿ ಕೊಳೆಯಲಾರಂಭಿಸಿದೆ. ಇನ್ನು ಕೀವು ತುಂಬಿ ಅಸಹ್ಯವಾಸನೆಯನ್ನು ಹಬ್ಬಿಸಲಿದೆ. ಅದನ್ನು ಸಹಿಸುವುದಕ್ಕಿಂತ ಈ ಬಾಣವನ್ನು ಎಳೆದು ಬಿಟ್ಟರೇನು?

ಭೀಷ್ಮರು ಪ್ರಶ್ನಿಸಿಕೊಂಡರು. ಬಾಣ ಎಳೆದು ತೆಗೆದರೆ ಯಮಯಾತನೆಯಿಂದ ಮುಕ್ತಿ ಸಿಗುತ್ತದೆ. ಆದರೆ ಈ ಯುಧ್ಧ ನಿಲ್ಲುವುದಿಲ್ಲ. ಸಾಯುವುದಕ್ಕಿಂತ ಮೊದಲು ಯುದ್ಧ ನಿಲ್ಲಿಸಲು ಸಾಧ್ಯವಾದರೆ? ಆಗ ತೃಪ್ತಿಯಿಂದ ಕಣ್ಣುಮುಚ್ಚಬಹುದು. ಶಯ್ಯಯೆಯಲ್ಲೊರಗಿ ಮೃತ್ಯುವನ್ನು ನಿರೀಕ್ಷಿಸಬೇಕಾಗಿದೆ. ದ್ರೋಣರ ನಾಯಕತ್ವದಲ್ಲಿ ಯುದ್ಧ ಸಾಗುತ್ತಿದೆ. ದ್ರೋಣರು ಕೌರವರಿಗಿಂತಲೂ ಪಾಂಡವರನ್ನು ಹೆಚ್ಚು ಹಚ್ಚಿಕೊಂಡವರು. ಈಗ ಅನ್ಯದಾರಿಯಿಲ್ಲದೆ ಪಾಂಡವರನ್ನು ಎದುರಿಸಬೇಕಾಗಿದೆ. ಅವರ ಮನಸ್ಥತಿ ಹೇಗಿದೆಯೊ?

ಭೀಷ್ಮರಿಗೆ ಗುರುದ್ರೋಣರು ಹಸ್ತಿನಾವತಿಗೆ ಆಗಮಿಸಿದ ದಿನಗಳು ನೆನಪಾದವು. ಹೊರ ಲೋಕಕ್ಕೆ ಅವರೊಬ್ಬ ಬ್ರಾಹ್ಮಣ. ಆದರೆ ಅವರೆಂದೂ ಬ್ರಾಹ್ಮಣ್ಯವನ್ನು ಪ್ರಕಟಪಡಿಸಿದವರಲ್ಲ. ಬ್ರಾಹ್ಮಣ ಶ್ರೇಷ್ಠತೆಯನ್ನು ನಂಬುತ್ತಲೂ ಇರಲಿಲ್ಲ. ಲೋಕದಲ್ಲಿ ಇರುವುದು ಎರಡೇ ಜಾತಿ: ಒಂದು ಶ್ರೀಮಂತರದ್ದು, ಇನ್ನೊಂದು ಬಡವರದ್ದು ಎಂದು ಅವರು ನಿರ್‍ಭೀತಿಯಿಂದ ಹೇಳುತ್ತಿದ್ದರು. ಬದುಕು ಕಲಿಸಿದ ಪಾಠ ಅದು.

ಪಾಂಚಾಲ ದೇಶದ ದ್ರುಪದ ಮತ್ತು ಇವರು ಒಟ್ಟಿಗೆ ಕಲಿತವರು. ವಿದ್ಯಾಭ್ಯಾಸ ಕಾಲದಲ್ಲಿ ರಾಜಕುಮಾರ ದ್ರುಪದ ಬಡ ವಟು ದ್ರೋಣರಲ್ಲಿ ಏನೇನೋ ಆಸೆಗಳನ್ನು ತುಂಬಿದ್ದ. ತಾನು ರಾಜನಾದ ಮೇಲೆ ಪಾಂಚಾಲಕ್ಕೆ ಬಂದರೆ ದ್ರೋಣರನ್ನು ಆಸ್ಥಾನ ವಿದ್ವಾಂಸರನ್ನಾಗಿ, ಕುಲಪುರೋಹಿತರನ್ನಾಗಿ ಮಾಡುವುದಾಗಿ ಆಮಿಷ ಒಡ್ಡಿದ್ದ. ಬಡಪಾಯಿ ದ್ರೋಣರು ದ್ರುಪದನ ಮಾತನ್ನು ನಂಬಿಬಿಟ್ಟರು. ದ್ರುಪದ ಪಾಂಚಾಲದ ದೊರೆಯಾದಾಗ ತನ್ನ ಬಡತನ ತೊಲಗಿತೆಂದು ಲೆಕ್ಕ ಹಾಕಿದ್ದರು. ಪಾಂಚಾಲಕ್ಕೆ ಹೋದಾಗ, ಅರಸೊತ್ತಿಗೆಯ ಮದದಿಂದ ದ್ರುಪದ ಇವರ ಗುರುತೇ ಇಲ್ಲದಂತೆ ನಡೆದುಕೊಂಡು ಇವರನ್ನು ಅಪಮಾನಿಸಿದ್ದ. ಅಂದಿನಿಂದ ದ್ರೋಣರು ಹುಡುಕಾಟಕ್ಕೆ ಆರಂಭಿಸಿದ್ದರು, ದ್ರುಪದನನ್ನು ಗೆಲ್ಲಬಲ್ಲ ಓರ್ವ ಸಾಮಥ್ರ್ಯಶಾಲಿಯನ್ನು.

ಅವರನ್ನು ಹಸ್ತಿನಾವತಿಗೆ ಬರುವಂತೆ ಮಾಡಿದ್ದೇ ಆ ಹುಡುಕಾಟ. ಅದನ್ನವರು ಒಂದು ಸಲವೂ ಹೇಳಿರಲಿಲ್ಲ. ಅವರೊಡನೆ ನಡೆದ ಮೊದಲ ಮಾತುಕತೆಯಲ್ಲಿ ತಾನವರಿಂದ ಪ್ರಭಾವಿತ ನಾದದ್ದು, ನೂರ ಒಂದು ಮಂದಿ ಕೌರವರಿಗೆ, ಐವರು ಪಾಂಡವರಿಗೆ ಅವರೇ ಚಾಪಗುರುವೆಂದು ತೀರ್ಮಾನಿಸಿದ್ದು ಅದು ಸಮರ್ಪಕ ತೀರ್ಮಾನವೆಂದು ಮೂರೇ ದಿನಗಳಲ್ಲಿ ತನಗೆ ಮನವರಿಕೆಯಾದದ್ದು ಭೀಷ್ಮರಿಗೆ ನೆನಪಾಯಿತು. ದ್ರುಪದನಿಂದಾಗಿದ್ದ ಅಪಮಾನವನ್ನು ಒಂದು ಸಲವಾದರೂ ಅವರು ಹೇಳುತ್ತಿದ್ದರೆ ಅವನನ್ನು ಕರೆಸಿ ದ್ರೋಣರ ಕಾಲಿಗೆ ಬೀಳಿಸಿ ಪ್ರಕರಣವನ್ನು ಮುಗಿಸಬಹುದಿತ್ತು. ದ್ರೋಣರು ಅರ್ಜುನನಲ್ಲಿ ಜಗದೇಕವೀರನನ್ನು ಗುರುತಿಸಿ ತಮ್ಮ ವಿದ್ಯೆಯೆಲ್ಲವನ್ನೂ ಧಾರೆಯೆರೆದು ಬಿಟ್ಟರು. ಹಟವಾದಿಯಾಗಿ ದ್ರುಪದನ ಮೇಲೆ ಪ್ರತೀಕಾರ ತೀರಿಸಿಕೊಂಡರು. ಆ ದ್ರುಪದ ಪುತ್ರನಿಂದಾಗಿ ಇಂದು ಈ ಸ್ಥತಿಯಲ್ಲಿ ಮರಣವನ್ನು ನಿರೀಕ್ಷಿಸಬೇಕಾಗಿದೆ.

ಭೀಷ್ಮರಿಗೆ ಏಕಲವ್ಯನ ನೆನಪಾಯಿತು. ದಸ್ಯು ಹುಡುಗ ಬಿಲ್ಗಾರನಾಗುವ ಮಹತ್ವಾಕಾಂಕ್ಷೆಯಿಂದ ದ್ರೋಣರನ್ನರಸಿಕೊಂಡು ಹಸ್ತಿನಾವತಿಗೆ ಬಂದಿದ್ದ. ದ್ರೋಣರು ಅವನಿಗೆ ಶಸ್ತ್ರಾಭ್ಯಾಸ ಮಾಡಿಸಲು ಒಪ್ಪಿಕೊಂಡರು. ಅವರೆಂದೂ ಜಾತಿಮೂಲವನ್ನು ಕೆದಕಿದವರಲ್ಲ; ಜಾತಿಭೇದ ಮಾಡಿದವರೂ ಅಲ್ಲ. ಪರಿಶುದ್ಧ ಜಾತಿ, ಶ್ರೇಷ್ಠ ಜಾತಿ ಎಂಬುದೆಲ್ಲಾ ಭ್ರಮೆಯೆನ್ನುತ್ತಿದ್ದರು. ಎಲ್ಲವೂ ಸಂಕರವರ್ಣಗಳು ಮತ್ತು ಸಂಕರ ಜಾತಿಗಳೆಂದು ಧೈರ್ಯದಿಂದ ಹೇಳುತ್ತಿದ್ದರು. ದಸ್ಯು ಹುಡುಗನೊಬ್ಬನನ್ನು ಧನುರ್ವಿದ್ಯಾ ನಿಪುಣನನ್ನಾಗಿ ಪರಿವರ್ತಿಸಿ ಆರ್ಯಾವರ್ತದಲ್ಲೊಂದು ಸಂಚಲನವುಂಟು ಮಾಡಬೇಕೆಂದಿದ್ದರು. ಆದರೆ ಏಕಲವ್ಯನ ಕಲಿಕೆಯ ವೇಗವನ್ನು ಕಂಡು, ಈತ ತನಗಿಂತ ಹೆಚ್ಚಿನ ಬಿಲ್ಗಾರನಾಗುತ್ತಾನೆಂದು ಅಸೂಯಾಪರನಾಗಿ ಅರ್ಜುನ ದಸ್ಯುಗಳಿಗೆ ಧನುರ್ವೇದ ಕಲಿಯುವ ಹಕ್ಕಿಲ್ಲವೆಂದು ದೊಡ್ಡ ಜಗಳ ತೆಗೆದ. ಕ್ಷತ್ರಿಯ ಬೀಜಕ್ಕೆ ಹುಟ್ಟದ ಅರ್ಜುನನಿಗೂ ಧನುರ್ವೇದ ವಿದ್ಯೆಯ ಹಕ್ಕಿಲ್ಲವೆಂದು ದುರ್ಯೋಧನ ವಾದಿಸಿದ. ವಿವಾದ ಬಗೆಹರಿಸಲು ಆಸ್ಥಾನ ವಿದ್ವಾಂಸರುಗಳ ಅಭಿಪ್ರಾಯ ಕೇಳಬೇಕಾಯಿತು. ಅದು ದೊಡ್ಡ ವಾದ ವಿವಾದಕ್ಕೆ ಕಾರಣವಾಯಿತು.

ಭೀಷ್ಮರಿಗೆ ಆ ವಾದವಿವಾದಗಳು ನೆನಪಾಗಿ ನಗುಬಂತು. ವಿದ್ವಾಂಸರಲ್ಲಿ ಕೆಲವರು ಹುಟ್ಟಿಗೆ ಬೀಜ ಕಾರಣವಾದುದರಿಂದ ಪಿತೃಕಾರಣವಾಗಿ ಕ್ಷತ್ರಿಯತ್ವ ಪ್ರಾಪ್ತವಾಗುತ್ತದೆಂದು ವಾದಿಸಿದರು. ಇನ್ನು ಕೆಲವರು ಕ್ಷೇತ್ರವಿಲ್ಲದಿದ್ದರೆ ಬೀಜಕ್ಕೆ ಮಹತ್ತ್ವ ಲಭ್ಯವಾಗದುದರಿಂದ, ಮಾತೃಕಾರಣವಾಗಿ ಕ್ಷತ್ರಿಯತ್ವ ಲಭ್ಯವಾಗುತ್ತದೆಂದರು. ಸಮನ್ವಯವಾದಿಗಳು ಬೀಜ ಅಥವಾ ಕ್ಷೇತ್ರದಲ್ಲೊಂದು ಕ್ಷತ್ರಿಯ ವರ್ಗಕ್ಕೆ ಸೇರಿದರೆ ಸಾಕು, ಸಂತತಿಗೆ ಕ್ಷತ್ರಿಯತ್ವ ಬರುತ್ತದೆಂದು ಪರಿಹಾರ ಸೂಚಿಸಿದರು. ಆಗ ಯದುಕುಲಕ್ಕೆ ಸೇರಿದವಳಾದುದರಿಂದ ಕುಂತಿ ಕ್ಷತ್ರಿಯಳಾಗುವುದಿಲ್ಲದ ಅರ್ಜುನನಿಗೆ ಪಿತೃ ಮತ್ತು ಮಾತೃಕಾರಣಗಳಿಂದ ಕ್ಷತ್ರಿಯತ್ವ ಲಭ್ಯವಾಗುವುದಿಲ್ಲವೆಂದು ಚತುರ್ವೇದಿಗಳೊಬ್ಬರು ಹೇಳಿದ್ದು ಮತ್ತೆ ಗೊಂದಲಕ್ಕೆ ಕಾರಣವಾಯಿತು. ಯದುವಿನ ತಂದೆ ಯಯಾತಿ ಚಂದ್ರವಂಶೀಯದ ಕುಂತೀಭೋಜ ರಾಜನಾದುದರಿಂದ ಗುಣ ಕರ್ಮಾನುಸಾರ ಕುಂತಿ ಕ್ಷತ್ರಿಯಳಾಗುತ್ತಾಳೆ; ಕ್ಷೇತ್ರಮೂಲವಾಗಿ ಅರ್ಜುನನಿಗೆ ಕ್ಷತ್ರಿಯತ್ವ ಲಭ್ಯವಾಗುತ್ತದೆಂದು ಘನಪಾಠಿಗಳೊಬ್ಬರು ಘೋಷಿಸಿದರು. ದಸ್ಯು ಏಕಲವ್ಯ ಕ್ಷತ್ರಿಯನಲ್ಲದ ಕಾರಣ ಅವನಿಗೆ ಧನುರ್ವಿದ್ಯೆ ನೀಡುವುದಕ್ಕೆ ಶಾಸ್ತ್ರ ಸಮ್ಮತಿಯಿಲ್ಲವೆಂಬ ಬಗ್ಗೆ ಅವರಾರಲ್ಲೂ ಭಿನ್ನಾಭಿಪ್ರಾಯವಿರಲಿಲ್ಲ. ಎಳೆಯ ಹುಡುಗ ಏಕಲವ್ಯ ಅಪಮಾನಿತನಾಗಿ ನಿರಾಶೆಯಿಂದ ಹೊರಟುಹೋಗಿದ್ದ. ಹಸ್ತಿನಾವತಿಯ ಸಂರಕ್ಷಕನಾಗಿ ಆಗ ತನ್ನಿಂದ ಏನನ್ನೂ ಮಾಡಲಾಗದ್ದನ್ನು ನೆನಪಿಸಿಕೊಂಡು ಭೀಷ್ಮರು ವ್ಯಥಿಸಿದರು.

ಆದರೆ ದ್ರೋಣರಿಗೆ ಏಕಲವ್ಯನ ಬಗೆಗೊಂದು ಮಮತೆ ಬೆಳೆದುಹೋಗಿತ್ತು. ಅವರು ಏಕಲವ್ಯನಿಗೆ ಗುಟ್ಟಾಗಿ ಧನುರ್ವಿದ್ಯೆಯ ಪಾಠ ಹೇಳಿಕೊಡುತ್ತಿದ್ದುದು ಭೀಷ್ಮರ ಗಮನಕ್ಕೆ ಬಂದಿತ್ತು. ವಿಷಯ ಅರ್ಜುನನಿಗೂ ಗೊತ್ತಾದಾಗ ಪರಿಸ್ಥತಿ ವಿಕೋಪಕ್ಕೆ ಹೋಯಿತು. ಅರ್ಜುನನನ್ನು ಸಂತೃಪ್ತಿಪಡಿಸಲು ದ್ರೋಣರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆಯಬೇಕಾಯಿತು. ಪ್ರತೀಕಾರಕ್ಕೆ ಹಾತೊರೆಯುವಾತ ಮೌಲ್ಯಗಳನ್ನು ಮರೆತು ಬಿಡಬೇಕಾಗುತ್ತದೆ. ದ್ರೋಣರು ದ್ರುಪದನನ್ನು ತಮ್ಮ ಶಿಷ್ಯರಿಂದ ಸೋಲಿಸಿ ಪ್ರತೀಕಾರ ತೀರಿಸಿಕೊಂಡರು. ಆ ಏಕಲವ್ಯ ಈಗ ಕೌರವ ಪಾಳಯದಲ್ಲಿದ್ದಾನೆ. ಗುರುದ್ರೋಣರ ನಾಯಕತ್ವದಲ್ಲಿ ಅರ್ಜುನನ ವಿರೋಧಿ ಸೇಡು ತೀರಿಸಲು ಹಾತೊರೆಯುತ್ತಿದ್ದಾನೆ!

ಭೀಷ್ಮರಿಗೆ ದ್ರೋಣರ ಬಗ್ಗೆ ಮೆಚ್ಚುಗೆಯಿತ್ತು. ದ್ರೋಣರೆಂದೂ ಮುಖಕ್ಕೆ ತಕ್ಕಂತೆ ಮಾತಾಡುತ್ತಿರಲಿಲ್ಲ. ಜ್ಞಾನವಂತರು ಮಾತ್ರ ಬ್ರಾಹ್ಮಣರು. ನಾನು ಚಾಪವಿದ್ಯಾ ನಿಪುಣ ನೆನಿಸಿಕೊಂಡರೂ ನಿಮ್ಮಷ್ಟಲ್ಲ. ನಿಮ್ಮ ಜ್ಞಾನದ ತಿಲಮಾತ್ರವೂ ನನ್ನಲ್ಲಿಲ್ಲ. ಜ್ಞಾನವಂತರು ಮಾತ್ರ ಪಾದನಮಸ್ಕಾರಕ್ಕೆ ಅರ್ಹರು ಎಂದು ಅವರು ಹೇಳಿದ್ದು ಅದೆಷ್ಟು ಬಾರಿಯೋ. ಮೊನ್ನೆ ಅವರನ್ನು ಸೇನಾಧ್ಯಕ್ಷನನ್ನಾಗಿ ಮಾಡುವಾಗ ಪಾದ ನಮಸ್ಕಾರ ಮಾಡಿಯೇಬಿಟ್ಟರು. ಕುಲಶ್ರೇಷ್ಠತೆಯ ಅಹಂ ತುಂಬಿರುವ ಯಾವ ಬ್ರಾಹ್ಮಣ ಬ್ರಾಹ್ಮಣೇತರನೊಬ್ಬನ ಕಾಲು ಮುಟ್ಟಿ ನಮಸ್ಕರಿಸುತ್ತಾನೆ? ದ್ರೋಣರಲ್ಲಿ ತಾನು ಕಂಡ ದೋಷವೆಂದರೆ ಅದೊಂದೇ. ದ್ರುಪದನಿಂದಾದ ಅಪಮಾನವನ್ನು ಮರೆಯಲಾಗದ್ದು. ಕ್ಷಮೆ ಅತ್ಯಂತ ದೊಡ್ಡ ಗುಣ. ಹಸ್ತಿನಾವತಿಯ ರಾಜಗುರುಗಳಾಗಿ ದ್ರೋಣರು ದ್ರುಪದನನ್ನು ಕ್ಷಮಿಸಿಬಿಡಬಹುದಿತ್ತು. ದ್ರುಪದನ ಮಗಳು ದ್ರೌಪದಿಯ ಸೆರಗಿಗೆ ದುಶ್ಶಾಸನ ಕೈಯಿಕ್ಕಿದ್ದಕ್ಕೆ ಕುರುಕ್ಷೇತ್ರ ಸಮರ ನಡೆಯುತ್ತಿದೆ. ದ್ರುಪದನ ಮಗ ಶಿಖಂಡಿ ಅಜೇಯನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ನನ್ನನ್ನು ಮಂಚದಿಂದ ಏಳದಂತೆ ಮಾಡಿಬಿಟ್ಟ. ಇನ್ನೊಬ್ಬನಿದ್ದಾನೆ. ಪಾಂಡವ ಸೇನಾಧ್ಯಕ್ಷ ಧೃಷ್ಟದ್ಯುಮ್ನ. ಅವನು ಅದೇನು ಅನಾಹುತ ಮಾಡಿಹಾಕುತ್ತಾನೆಯೊ?

ದ್ರೋಣರು ಮಗ ಅಶ್ವತ್ಥಾಮನಿಗಿಂತಲೂ ಹೆಚ್ಚು ಅರ್ಜುನನ್ನು ಪ್ರೀತಿಸಿದರು. ಗುರು ಪರಶುರಾಮರಿಂದ ಕಲಿತದ್ದೆಲ್ಲವನ್ನೂ ಅವನಿಗೆ ಧಾರೆಯೆರೆದರು. ಅರ್ಜುನ ಆರ್ಯಾವರ್ತ ಮತ್ತು ದಕ್ಷಿಣಾಪಥಗಳಲ್ಲಿ ಸಂಚರಿಸಿ ಲೋಕಜ್ಞಾನ ಹೆಚ್ಚಿಸಿಕೊಂಡ. ಅನೇಕ ಶಸ್ತ್ರವಿದ್ಯಾ ಕೌಶಲಗಳನ್ನು ತನ್ನದಾಗಿಸಿಕೊಂಡ. ಈಗ ಅವನನ್ನು ಸೋಲಿಸಬಲ್ಲವರು ಯಾರಿದ್ದಾರೆ?

ಅಂದು ಕೌರವ ಪಾಂಡವರ ಶಸ್ತ್ರವಿದ್ಯೆ ಕೊನೆಗೊಂಡಂದು ಎಲ್ಲರ ಸಾಮರ್‍ಥ್ಯ ಪರೀಕ್ಷೆಗಾಗಿ ಗುರುದ್ರೋಣರು ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಭೀಮ ಗದಾಯುದ್ಧದಲ್ಲಿ ಏಕಮೇವಾದ್ವಿತೀಯನೆನಿಸಿದ. ಅರ್ಜುನ ಚಾಪವಿದ್ಯೆಯಲ್ಲಿ ವಿಜೃಂಭಿಸಿದ. ಆಗ ಎಲ್ಲಿದ್ದನೋ ಅವ, ಆ ಕರ್ಣ, ಅವನು ಸ್ಪರ್ಧಾಕಣ ಪ್ರವೇಶಿಸಿದ. ತನ್ನನ್ನು ಸೋಲಿಸೆಂದು ಪಂಥಾಹ್ವಾನ ವೊಡ್ಡಿದ. ತಾನು ಪರಶುರಾಮರ ಶಿಷ್ಯನೆಂದು ಪರಿಚಯ ಹೇಳಿಕೊಂಡ. ತನಗಿಂತ ಹಿರಿಯನಂತೆ, ಅತುಲ ಪರಾಕ್ರಮಿಯಂತೆ ಕಾಣುವ ಕರ್ಣನನ್ನು ನೋಡಿ ಅರ್ಜುನ ಹಿಂಜರಿದ. ಆಗ ಕರ್ಣನ ಕುಲಗೋತ್ರಗಳನ್ನು ವಿಚಾರಿಸಿದ್ದು ಇದೇ ದ್ರೋಣರ ಭಾವ ಕೃಪಾಚಾರ್ಯರು. ಹಸ್ತಿನಾವತಿಯ ಸೂತ ಅಧಿರಥನ ಸಾಕುಮಗ ತಾನೆಂದು ಹೇಳುವಾಗ ಕರ್ಣನ ಮುಖದಲ್ಲಿ ಸೋಲಿನ ಛಾಯೆಯಿತ್ತು. “ಧೃತರಾಷ್ಟ್ರ ದೊರೆಯ ಸೂತನ ಪುತ್ರನೊಡನೆ ಕ್ಷತ್ರಿಯ ಕುವರನಾದ ನಾನು ಕಾದಾಡಲಾರೆ” ಎಂದು ಹೇಳಿ ಅರ್ಜುನ ಸಂಭಾವ್ಯ ಮುಖಭಂಗದಿಂದ ಪಾರಾಗಿದ್ದ. ಅರ್ಜುನನ ಸೊಕ್ಕು ಮುರಿಯುವ ಅವಕಾಶಕ್ಕಾಗಿ ಕಾಯುತ್ತಿದ್ದ ದುರ್ಯೋಧನ ಕರ್ಣನನ್ನು ಸಂತೈಸಿ ಅವನನ್ನು ಅಂಗರಾಜ್ಯಾಧಿಪತಿಯೆಂದು ಘೋಷಿಸಿ, ಅವನಿಗೆ ಕ್ಷತ್ರಿಯತ್ವವನ್ನು ದಯಪಾಲಿಸಿದ. ಆದರೆ ಅರ್ಜುನ ಮಹಾಜಾಣ. ಏಕಲವ್ಯ ಪ್ರಕರಣವನ್ನು ಉದಾಹರಿಸಿ, ಬೀಜಕ್ಷೇತ್ರ ವಾದವನ್ನು ಮುಂದೊಡ್ಡಿ ಕರ್ಣನನ್ನು ಕ್ಷತ್ರಿಯನೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದ. ಕೃಪಾಚಾರ್ಯರು ಅರ್ಜುನನನ್ನು ಬಲವಾಗಿ ಸಮರ್ಥಿಸಿಕೊಂಡರು. ಯಾರೂ ಅರ್ಜುನನ ವಾದವನ್ನು ಖಂಡಿಸಲಿಲ್ಲ. ಕರ್ಣ ಯಾರೆಂಬುದು ಅರ್ಜುನನಿಗೆ ಈಗಲೂ ತಿಳಿದಿಲ್ಲ!

ಅದೇ ಅರ್ಜುನ ಗುರುದ್ರೋಣರ ಆದೇಶದಂತೆ ಹಸ್ತಿನಾವತಿಯ ನೂರನಾಲ್ಕು ರಾಜಕುಮಾರರ ನೇತೃತ್ವ ವಹಿಸಿ ಪಾಂಚಾಲಕ್ಕೆ ಅನಿರೀಕ್ಷಿತವಾಗಿ ನುಗ್ಗಿ, ರಕ್ಷಕ ಭಟರನ್ನು ಸದೆ ಬಡಿದು ದ್ರುಪದನನ್ನು ಹೆಡೆಮುರಿ ಕಟ್ಟಿತಂದು ಗುರುಗಳ ಪಾದಕ್ಕೆ ಕೆಡವಿದ್ದ. ಬಡತನದ ಕಾರಣಕ್ಕಾಗಿ ಹಿಂದೆ ದ್ರುಪದನಿಂದ ಭಂಗಿತರಾಗಿದ್ದ ದ್ರೋಣರು ಅವನನ್ನು ಮನಸೋ ಇಚ್ಚೆ ಬಯ್ದು, ಎಡಗಾಲಿನಿಂದ ಅವನ ಪೃಷ್ಠಕ್ಕೆ ಒದ್ದು ಅಪಮಾನಕ್ಕೆ ಪ್ರತೀಕಾರ ಮಾಡಿದ್ದರು. ಪಾಂಚಾಲದೇಶವನ್ನು ಇಬ್ಭಾಗ ಮಾಡಿ ಅರ್ಧವನ್ನು ಹಸ್ತಿನಾವತಿಗೆ ಸೇರಿಸಿದ ಮೇಲೆ ದ್ರುಪದನನ್ನು ಬಿಡುಗಡೆ ಮಾಡಿ ಕಳಿಸಿದರು. ಅಂಥ ಅಪಮಾನವನ್ನು ಯಾರೂ ಮರೆಯಲಾರರು. ದ್ರುಪದ ತನ್ನ ಮಕ್ಕಳಲ್ಲಿ ಹಸ್ತಿನಾವತಿಯ ಬಗ್ಗೆ ವಿದ್ವೇಷ ತುಂಬಿರಬೇಕು. ಶಿಖಂಡಿಯನ್ನು ಅನೂಹ್ಯವಾಗಿ ನನಗೆದುರಾಗಿ ಕಳುಹಿಸಿದ್ದು ಅವನ ಗುಪ್ತ ರಾಜನೀತಿಯ ಒಂದು ಅಂಗವಾಗಿರಬೇಕು. ಈ ಕುಟಿಲತೆಯಲ್ಲಿ ಪಾಂಡವರು ಭಾಗಿಗಳಾಗಿರಲಾರರು. ಇದು ದ್ರುಪದನ ಕೃತ್ಯ. ಹಾಗಂದುಕೊಂಡರೂ ಮನದಾಳದಿಂದ ಒಂದು ಶಂಕೆ ಉದ್ಭವಿಸುತ್ತಲೇ ಇರುತ್ತದೆ; ಅಂಬೆಯೇ ಶಿಖಂಡಿಯಾಗಿ ಜನ್ಮತಾಳಿದಳೇ? …… ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ.”

ಭೀಷ್ಮರು ಮಗ್ಗಲು ಬದಲಾಯಿಸಿದರು. ಹತ್ತು ದಿನ ಕುರುಸೇನಾಧ್ಯಕ್ಷನಾಗಿ ಯುದ್ಧವೆಸಗಿದೆ. ಒಬ್ಬ ಪಾಂಡವನನ್ನು ಕೊಲ್ಲಲಾಗಲಿಲ್ಲ. ಎತ್ತಿ ಆಡಿಸಿದ ಮಕ್ಕಳನ್ನು ಕೊಲ್ಲುವುದಾದರೂ ಹೇಗೆ? ಪಾಂಡುವನ್ನು ಅಪ್ಪನೆಂದು ನಂಬಿ ಬೆಳೆದವರು. ಸತ್ಯವತೀದೇವಿ ತನ್ನ ವಿವಾಹಪೂರ್ವದಲ್ಲಿ ಪರಾಶರ ಮಹಾಮುನಿಗಳಿಂದ ದ್ವೈಪಾಯನರನ್ನು ಪಡೆದಳು. ವಿಚಿತ್ರವೀರ್ಯ ರೋಗಿಷ್ಠನಾಗಿ ಕಾಲವಶನಾದ ಮೇಲೆ ಸತ್ಯವತೀದೇವಿಯ ಆದೇಶದಂತೆ, ನಿಯೋಗ ಧರ್ಮಪ್ರಕಾರ ದ್ವೈಪಾಯನರು ಅಂಬಿಕೆ, ಅಂಬಾಲಿಕೆಯರಿಗೆ ಗರ್ಭದಾನ ಮಾಡಿದರು. ಅಂಬಿಕೆಯ ಉದರದಲ್ಲಿ ಧೃತರಾಷ್ಟ್ರ ಜನಿಸಿದ. ಹುಟ್ಟುಕುರುಡ! ಅಂಬಾಲಿಕೆ ಪಾಂಡುವಿಗೆ ಜನ್ಮಕೊಟ್ಟಳು. ಅವನು ಹುಟ್ಟಾ ರೋಗಿಷ್ಠ! ಕೌರವರು ಧೃತರಾಷ್ಟ್ರನ ಮಕ್ಕಳು. ಪಾಂಡವರು ಪಾಂಡುವಿನ ಮಕ್ಕಳಲ್ಲ. ಪಾಂಡುವಿನ ಅಪ್ಪಣೆಯಿದ್ದೇ ಕುಂತಿ ಯುಧಿಷ್ಠಿರ, ಭೀಮ ಮತ್ತು ಅರ್ಜುನರನ್ನು, ಮಾದ್ರಿ ನಕುಲಸಹದೇವರನ್ನು ಪಡೆದದ್ದು. ಆದರೆ ದುರ್ಯೋಧನ ಪಾಂಡವರ ಜನನ ಧರ್ಮಬಾಹಿರವೆಂದು ಎಲ್ಲಿ ಬೇಕೆಂದರಲ್ಲಿ ಹೇಳಿ ಬಿಡುತ್ತಾನೆ. ಸೂತಪುತ್ರನೆಂದು ಲೋಕ ಭಾವಿಸುವ ಕರ್ಣನನ್ನು ದುರ್ಯೋಧನ ಅಂಗರಾಜನನ್ನಾಗಿ ಮಾಡುತ್ತಾನೆ. ಪಾಂಡವರಿಗೆ ಸೂಜಿಮೊನೆಯೂರುವಷ್ಟೂ ಸ್ಥಳವನ್ನು ಕೊಡಲಾರೆ ಎನ್ನುತ್ತಾನೆ. ತಾನು ಸಾಯುವುದರೊಂದಿಗೆ ಕುರು ಸಾಮ್ರಾಜ್ಯದ ಪತನಕ್ಕೆ ಕಾರಣನಾಗುತ್ತಿದ್ದಾನೆ.

ದುರ್ಯೋಧನನ ಪಾಂಡವದ್ವೇಷಕ್ಕೆ ಅವರ ಹುಟ್ಟು ಕಾರಣವಾಗಿದ್ದಿರಲಾರದೆಂದು ಭೀಷ್ಮರು ಅದೆಷ್ಟೋ ಬಾರಿ ತರ್ಕಿಸಿದ್ದರು. ಗಂಗಾದೇವಿ, ಸತ್ಯವತೀದೇವಿ, ದ್ವೈಪಾಯನರು – ಇವರಲ್ಲಿ ಯಾರೂ ಕ್ಷತ್ರಿಯರಲ್ಲ. ಬೀಜ ಕ್ಷೇತ್ರವಾದದ ತಾತ್ತ್ವಿಕ ನೆಲೆಗಟ್ಟು ಅತ್ಯಂತ ದುರ್ಬಲವಾದುದು. ಹಾಗಿದ್ದೂ ದುರ್ಯೋಧನ ಪಾಂಡವರನ್ನು ಅಷ್ಟೊಂದು ದ್ವೇಷಿಸುತ್ತಾನೆಂದರೆ ಅದಕ್ಕೆ ಯುಧಿಷ್ಠಿರನ ಯೌವರಾಜ್ಯಾಭಿಷೇಕ ಕಾರಣವಾಗಿರಬೇಕು. ಕುರುಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನನ್ನು ಯುವರಾಜನೆಂದು ಧೃತರಾಷ್ಟ್ರ ಅನಿವಾರ್ಯವಾಗಿ ಅಂಗೀಕರಿಸಿದ್ದ. ಧೃತರಾಷ್ಟ್ರನ ದೇಹಾಂತ್ಯವಾದ ಬಳಿಕ ಯುಧಿಷ್ಠಿರ ಕುರು ಸಾಮ್ರಾಜ್ಯದ ಸಮ್ರಾಟನಾಗಿ ಬಿಡುತ್ತಾನೆ. ಅದಕ್ಕೇ ಯುದ್ಧದಲ್ಲಿ ಪಾಂಡವರನ್ನು ಮುಗಿಸಿಬಿಡಲು ಪ್ರಯತ್ನಿಸುತ್ತಿದ್ದಾನೆ.

ಈ ಯುದ್ಧ ಅಂತ್ಯವಾಗಬೇಕಾದರೆ ದುರ್ಯೋಧನನ ಅಂತ್ಯವಾಗಬೇಕು. ಒಬ್ಬ ಸತ್ತರೂ ಯುದ್ಧ ಮುಂದುವರಿಸುವುದಿಲ್ಲವೆಂದು ಯುಧಿಷ್ಠಿರ ಯುದ್ಧ ನಿಶ್ಚಯ ಕಾಲದಲ್ಲಿ ಸಾರಿದ್ದ. ಆದರೆ ಪಾಂಡವರಲ್ಲಿ ಯಾರನ್ನು ಕೊಲ್ಲುವುದು? ಯುಧಿಷ್ಠಿರ, ನಕುಲಸಹದೇವರನ್ನು ಕೊಲ್ಲಲು ಸ್ವಯಂ ದುರ್ಯೋಧನನಿಗೇ ಮನಸ್ಸು ಬರಲಾರದು. ಗುರುದ್ರೋಣರು ಅವರನ್ನು ಕೊಂದಾರೆಯೆ? ಕರ್ಣನಿಗೆ ತನ್ನ ಹುಟ್ಟಿನ ರಹಸ್ಯ ಗೊತ್ತಾದ ಬಳಿಕ ಅವನು ಹಲ್ಲು ತೆಗೆದ ನಾಗರದಂತಾಗಿದ್ದಾನೆ. ಇನ್ನು ಭೀಮಾರ್ಜುನರನ್ನು ಕೊಲ್ಲಲು ಯಾರಿಂದ ಸಾಧ್ಯ? ನನ್ನ ಹಾಗೆ ದ್ರೋಣರು ಒಂದಷ್ಟು ದಿನ ಉದ್ದೇಶರಹಿತ ಹೋರಾಟ ನಡೆಸುತ್ತಾರೆ. ಈ ಯುದ್ಧಕ್ಕೆ ಯಾವ ಅರ್ಥವೂ ಇಲ್ಲ.

ಬಿಡದಿಯ ಪ್ರವೇಶದ್ವಾರದಲ್ಲಿ ಹೆಜ್ಜೆ ಸಪ್ಪಳವಾಯಿತು. ಗುರುದ್ರೋಣರು ದುರ್ಯೋಧನನೊಡನೆ ಒಳ ಪ್ರವೇಶಿಸಿದರು. ಇಬ್ಬರ ಮುಖಗಳೂ ಬಾಡಿದ್ದವು. ಏನಿದರ ಅರ್ಥ? ಗುರು ದ್ರೋಣರು ಪರಾಜಿತರಾಗಿಬಿಟ್ಟರೆ? ಇವರನ್ನು ಸೋಲಿಸಬಲ್ಲವ ಪಾಂಡವಪಾಳಯದಲ್ಲಿ ಇರುವವ ಒಬ್ಬನೆ, ಅರ್ಜುನ. ಮುದುಕ ಗುರುವಿಗೆ ತರುಣ ಶಿಷ್ಯ ತಿರುಮಂತ್ರ ಪ್ರಯೋಗಿಸಿದನೆ?

ಬಂದವರು ಮಂಚದ ಎದುರಿದ್ದ ಆಸನಗಳಲ್ಲಿ ಕುಳಿತರು. ಸ್ವಲ್ಪ ಹೊತ್ತು ಯಾರೂ ತುಟಿಬಿಚ್ಚಲಿಲ್ಲ. ಭೀಷ್ಮರಿಗೆ ಏನನ್ನು ಕೇಳಬೇಕೆಂದೇ ತೋಚಲಿಲ್ಲ. ಕೊನೆಗೂ ದ್ರೋಣರು ತಲೆ ಎತ್ತದೆ ಹೇಳಿದರು : “ಆಚಾರ್ಯರೆ, ಹೇಗೆ ಹೇಳಬೇಕೆಂದೇ ತೋಚುತ್ತಿಲ್ಲ. ಇಂದು ಅಭಿಮನ್ಯುವಿನ ಅವಸಾನವಾಯಿತು.”

ಭೀಷ್ಮರಿಗೆ ಸಿಡಿಲಾಘಾತವಾದಂತಾಯಿತು. ಅವರಿಗದನ್ನು ನಂಬಲು ಸಾಧ್ಯವಾಗಲಿಲ್ಲ. ಅವರ ಕಣ್ಣರೆಪ್ಪೆಗಳು ರಪರಪ ಬಡಿದುಕೊಂಡವು. ಮಾತಾಡಬೇಕೆಂದರೆ ಗಂಟಲು ಕಟ್ಟಿದಂತಾಯಿತು. ಉದ್ವೇಗದಿಂದ ಎದೆ ವೇಗವಾಗಿ ಏರಿಳಿಯಲಾರಂಭಿಸಿತು. ಎದೆಗೆ ಚುಚ್ಚಿದ್ದ ಬಾಣ ತೀವ್ರ ನೋವನ್ನು ಕೊಡತೊಡಗಿತು. ಯಾತನಾಪೂರಿತ ದನಿಯಲ್ಲಿ ಅವರು ಕೇಳಿದರು : “ನೀವು ಹೇಳುತ್ತಿರುವುದು ನಿಜವೇ ಗುರುಗಳೆ? ಭೀಮಾರ್ಜುನರು ಬದುಕಿರುವಾಗ ಅಭಿಮನ್ಯುವಿನ ವಧೆಯಾಯಿತೆಂದರೆ ಅದು ನಂಬುವ ಮಾತೆ?”

ದ್ರೋಣರು ತಲೆಯೆತ್ತಿದರು : “ಆಚಾರ್ಯರೇ, ನಾನು ಹೇಳುತ್ತಿರುವುದು ನಿಜವಾದ ಮಾತು. ಇದೊಂದು ನಿರ್ಣಾಯಕ ಯುದ್ಧ ನಡೆಸಿ ಪಾಂಡವರಲ್ಲಿ ಯಾರನ್ನಾದರೂ ಒಬ್ಬನನ್ನು ಕೊಲ್ಲಲೇ ಬೇಕೆಂದು ದುರ್ಯೋಧನ ಆದೇಶಿಸಿದ. ಕೃಷ್ಣಾರ್ಜುನರು ಕುರುಕ್ಷೇತ್ರಕ್ಕೆ ಬಾರದಿದ್ದರೆ ಆ ಪ್ರಯತ್ನ ನಡೆಸಬಹುದೆಂದೆ. ದುರ್ಯೋಧನನ ಅಪ್ಪಣೆಯಂತೆ ತ್ರಿಗರ್ತದ ಮಹಾರಾಜ ಸಂಶಪ್ತಕ ತನ್ನ ಅನುಜರೊಡನೆ ಕುರುಕ್ಷೇತ್ರದ ಹೊರವಲಯದಲ್ಲಿ ಬೀಡುಬಿಟ್ಟು ಅಲ್ಲಿಗೆ ಯುದ್ಧಕ್ಕೆ ಬರುವಂತೆ ಕೃಷ್ಣಾರ್ಜುನರನ್ನು ಆಹ್ವಾನಿಸಿದ. ಅವರು ಕುರುಕ್ಷೇತ್ರದಿಂದ ದೂರವಾದ ಮೇಲೆ ನಾನು ಚಕ್ರಾಕಾರವಾಗಿ ವ್ಯೂಹವೊಂದನ್ನು ಬಲಿದೆ. ಒಳಹೊಕ್ಕವರು ಹೊರಗೆ ಬರಲಾಗದಂತಹ ರಣವ್ಯೂವಹವದು. ವ್ಯೂಹದ ಮುಂಭಾಗದಲ್ಲಿ ಸಿಂಧೂ ದೇಶಾಧಿಪತಿ ಜಯದ್ರಥ ಮತ್ತು ಅವನ ಇಪ್ಪತ್ತು ಸಹೋದರರನ್ನು ನಿಲ್ಲಿಸಿದೆ. ಒಳಗೆ ವರ್ತುಲಾಕಾರದಲ್ಲಿ ದುರ್ಯೋಧನ, ಕರ್ಣ, ದುಶ್ಶಾಸನ ಮತ್ತು ಅವರ ಪುತ್ರರನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಪಾಂಡವರಾರಿಗೂ ಜಯದ್ರಥನನ್ನು ಮತ್ತವನ ಬಲಾಢ್ಯ ಸಹೋದರರನ್ನು ಸೋಲಿಸಿ ಒಳಬರಲಾಗಲಿಲ್ಲ. ಆಗ ನಿರ್ಮಾಣವಾದ ಗೊಂದಲದ ವಾತಾವರಣದಲ್ಲಿ ಅಭಿಮನ್ಯು ಅದು ಹೇಗೋ ನುಣುಚಿಕೊಂಡು ರಥವನ್ನು ಒಳಗೆ ನುಗ್ಗಿಸಿಬಿಟ್ಟ. ಒಳಗೆ ನಡೆದ ಕೂಟಯುದ್ಧದಲ್ಲಿ ಅವನ ಹತ್ಯೆಯಾಯಿತು.

ಭೀಷ್ಮರಿಗೆ ತುಂಬಾ ನೋವಾಯಿತು. ಎದೆಯ ನೋವಿಗಿಂತಲೂ ಮನಸ್ಸಿಗಾದ ಆಘಾತ ದೊಡ್ಡದಾಗಿತ್ತು. ಅಭಿಮನ್ಯುವನ್ನು ಎಳವೆಯಿಂದಲೇ ಗಮನಿಸುತ್ತಿದ್ದವರು ಅವರು. ಅವನಲ್ಲಿ ಕುರು ಸಾಮ್ರಾಜ್ಯದ ಚಕ್ರವರ್ತಿಯಾಗುವ ಲಕ್ಷಣಗಳನ್ನು ಗುರುತಿಸಿದ್ದರು. ಹತ್ತು ದಿನಗಳ ಯುದ್ಧದಲ್ಲಿ ಒಂದು ಬಾರಿ ಎದುರಾಗಿದ್ದ. ಅವನು ಕೃಷ್ಣನ ತಂಗಿ ಸುಭದ್ರೆಯ ಗರ್ಭದಲ್ಲಿ ಅರ್ಜುನನಿಗೆ ಹುಟ್ಟಿದವ. ಅಭಿಮನ್ಯುವಿನ ಚಲನೆ, ಬಾಣ ಪ್ರಯೋಗದ ಗತಿ ಮತ್ತು ಕೌಶಲಕ್ಕೆ ಯಾರಾದರೂ ಬೆರಗಾಗಲೇಬೇಕು. ಅವನಲ್ಲಿ ಯವ್ವನವಿತ್ತು, ಉತ್ಸಾಹವಿತ್ತು: ಆದರೆ ಯುದ್ಧ ರಂಗದ ಅನುಭವದ ಕೊರತೆಯಿತ್ತು. ಅವನನ್ನು ಸೋಲಿಸಲು ಭೀಷ್ಮರು ತಮ್ಮೆಲ್ಲಾ ಅನುಭವಗಳನ್ನು ಬಳಸಬೇಕಾಯಿತು. ಸೋತರೂ ಅವನು ನಗುತ್ತಿದ್ದ. ಇನ್ನೊಂದು ಸಲ ಎದುರಾದಾಗ ನಿಮ್ಮನ್ನು ಗೆದ್ದೇನು ಎಂಬ ಆತ್ಮವಿಶ್ವಾಸದ ನಗು ಅದು. ಶಿಖಂಡಿಯ ಬಾಣ ಎದೆಗೆ ನಾಟಿದಂದೇ ಯುದ್ಧ ನಿಂತು ಬಿಡುತ್ತಿದ್ದರೆ ಅಭಿಮನ್ಯು ಬದುಕಿಕೊಳ್ಳುತ್ತಿದ್ದ. ಅವನ ಹತ್ಯೆಯಿಂದ ಕುರು ಸಾಮ್ರಾಜ್ಯದ ಭವಿಷ್ಯ ಮಸುಕಾದಂತಾಗಿದೆ. ದುರ್ಯೋಧನನ ಛಲ ಯಾರ್ಯಾರನ್ನು ಬಲಿತೆಗೆದುಕೊಳ್ಳುತ್ತದೆಯೊ? ಭೀಷ್ಮರು ಅವನನ್ನು ನೋಡಿದರು. ಮುಖ ಬಾಡಿದೆ. ಅಭಿಮನ್ಯುವಿನ ವಧೆಯಿಂದ ದುಃಖಿತನಾಗಿದ್ದಾನೆಯೆ?

ಈಗ ದುರ್ಯೋಧನ ಮಾತಾಡಿದ : ಅಭಿಮನ್ಯುವನ್ನು ಕೊಲ್ಲುವುದು ನನ್ನ ಉದ್ದೇಶವಾಗಿರಲಿಲ್ಲ ತಾತಾ. ಚಕ್ರವ್ಯೂಹವನ್ನು ಯುಧಿಷ್ಠಿರನೋ, ಭೀಮನೋ, ನಕುಲಸಹದೇವರೋ ಭೇದಿಸಿದರೆ ಕೂಟ ಯುದ್ಧದಲ್ಲಿ ಅವರನ್ನು ಮುಗಿಸಬೇಕೆಂದುಕೊಂಡಿದ್ದೆ. ದುರದೃಷ್ಟಕ್ಕೆ ಒಳಬಂದವನು ಅಭಿಮನ್ಯು. ಅವನು ಅಷ್ಟೊಂದು ಪರಾಕ್ರಮಿಯಾಗಿರಬಹುದೆಂದು ನಾನು ಊಹಿಸಿಯೂ ಇರಲಿಲ್ಲ. ಒಳನುಗ್ಗಿದವನು ಯುದ್ಧದಲ್ಲಿ ನಮ್ಮನ್ನೆಲ್ಲಾ ಸೋಲಿಸಿಬಿಟ್ಟ. ನನ್ನ ಮಗ ಲಕ್ಷ್ಮಣ ಕುಮಾರನನ್ನು ಕೊಂದ. ಅವನನ್ನು ಹಾಗೇ ಬಿಟ್ಟರೆ ನಮಗೆ ಉಳಿಗಾಲವಿಲ್ಲವೆಂದು ಮತ್ತೊಮ್ಮೆ ಕೂಟ ಯುದ್ಧ ಮಾಡಿದೆವು. ಆಗ ದುಶ್ಶಾಸನನ ಮಗನಿಂದ ಅಭಿಮನ್ಯು ಹತನಾದ. ಹೇಳಿ ತಾತಾ, ಇದರಲ್ಲಿ ಯಾರದಾದರೂ ತಪ್ಪಿದೆಯೆ?”

ಏನು ಹೇಳುವುದು? ಯುದ್ಧವೆಂದಾದ ಮೇಲೆ ಸಾವು ಅನಿವಾರ್ಯ. ಯಾರು ಸಾಯುತ್ತಾರೆನ್ನುವುದನ್ನು ಕಾಲ ನಿರ್ಧರಿಸುತ್ತದೆ ಎಂದುಕೊಂಡು ಭೀಷ್ಮರು ಪ್ರತಿಯಾಡಲಿಲ್ಲ. ಅವರ ಕಣ್ಣಮುಂದೆ ತುಂಟ ನಗುವಿನ ವೀರ ಯುವಕ ಅಭಿಮನ್ಯುವಿನ ಮುದ್ದಾದ ಮುಖ ತೇಲಿ ಹೋಯಿತು. ಸಂಬಂಧದಲ್ಲಿ ಮರಿಮಗನಾಗುತ್ತಾನೆ. ಸರದಿ ಮುರಿದು ಸತ್ತುಹೋದ. ಸಮರಾಂಗಣದಲ್ಲಿ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆಯಿರುವುದಿಲ್ಲ. ಆದರೆ ದುರ್ಯೋಧನನ ಮುಖದಲ್ಲಿ ಹೆಪ್ಪುಗಟ್ಟಿರುವ ನೋವು ಅಭಿಮನ್ಯುವಿನ ಮರಣದ ಪರಿಣಾಮವಲ್ಲ. ಇವನ ಮಗ ಲಕ್ಷಣಕುಮಾರ ಸತ್ತಿದ್ದಾನೆ! ದ್ರೋಣರತ್ತ ನೋಡಿದರೆ ಅವರು ಆಗಾಗ ಎಡಗೈಯನ್ನು ನೋಡಿಕೊಳ್ಳುತ್ತಿದ್ದಾರೆ. ಹ್ಹೊ! ಅವರ ಎಡಗೈ ಹೆಬ್ಬೆರಳು ಕಾಣೆಯಾಗಿ ಅದು ಇರಬೇಕಾಗಿದ್ದಲ್ಲಿ ರಕ್ತ ಹೆಪ್ಪುಗಟ್ಟಿದೆ. ನೋವಿನಿಂದ ಮುಖ ಕಿವುಚಿಕೊಂಡಿದೆ. ಇದು ಹೇಗಾಯಿತು?

ದ್ರೋಣರು ತಾವಾಗಿಯೇ ಹೇಳಿದರು : ಅಭಿಮನ್ಯುವಿನೊಡನೆ ಮೊದಲಿಗೆ ಮುಖಾಮುಖಿ ಹೋರಾಟ ನಡೆಸಿದವನು ನಾನು. ಅವನು ಅವನ ಅಪ್ಪನಿಗಿಂತಲೂ ಪ್ರಚಂಡ. ಪುಂಖಾನುಪುಂಖವಾಗಿ ಬಾಣ ಪ್ರಯೋಗಿಸಿ ನನ್ನ ಬಿಲ್ಲನ್ನೇ ಮುರಿದುಬಿಟ್ಟ. ಮತ್ತೊಂದು ಬಾಣದಿಂದ ನನ್ನ ಎಡಗೈ ಹೆಬ್ಬೆರಳನ್ನೇ ಹಾರಿಸಿದ. ಹುಸಿ ನಗುತ್ತಾ ಗುರುಗಳೇ, ಆ ಹೆಬ್ಬೆರಳು ಎಲ್ಲಿದೆಯೆಂದು ಹುಡುಕಿ ಏಕಲವ್ಯನಿಗೆ ಕೊಟ್ಟುಬಿಡಿ ಎಂದ. ಈ ದುರ್ಯೋಧನನನ್ನು ಸೋಲಿಸಿ ದೊಡ್ಡಪ್ಪನಿಂದ ತೊಡೆ ಮುರಿಸಿಕೊಳ್ಳುವವರೆಗೆ ಬದುಕಿಕೋ ಎಂದು ಮೂದಲಿಸಿದ. ಕರ್ಣನ ಬಿಲ್ಲನ್ನು ಮುರಿದು ನಿನ್ನನ್ನು ಕೊಲ್ಲಬೇಕಾದದ್ದು ನನ್ನ ಅಪ್ಪ ಎಂದು ಹಂಗಿಸಿದ. ಅಭಿಮನ್ಯುವನ್ನು ಮುಗಿಸದೆ ಅನ್ಯ ಮಾರ್ಗವೇ ಇರಲಿಲ್ಲ.”

ಭೀಷ್ಮರಲ್ಲಿ ವಿಷಾದ ಮೂಡಿತು. ಎಳೆತರುಣ ಅಭಿಮನ್ಯು ದುರ್ಯೋಧನ, ದ್ರೋಣ, ಕರ್ಣರಂತಹ ಮಹಾರಥಿಕರನ್ನು ಗೆಲ್ಲಬಲ್ಲವನಾಗಿದ್ದ. ಭವಿಷ್ಯದಲ್ಲಿ ಎಂತಹಾ ವೀರನಾಗುತ್ತಿದ್ದನೊ? ಬದುಕಿರುತ್ತಿದ್ದರೆ ಕುರು ಸಾಮ್ರಾಜ್ಯವನ್ನು ಸಮಸ್ತ ಆರ್ಯಾವರ್ತಕ್ಕೆ ಮಾತ್ರವಲ್ಲ, ದಕ್ಷಿಣಾಪಥಕ್ಕೂ ವಿಸ್ತರಿಸಿಬಿಡುತ್ತಿದ್ದ. ಅವನ ಪರಾಕ್ರಮ ಬೆಳಕಿಗೆ ಬರುವಷ್ಟರಲ್ಲೇ ಜ್ಯೋತಿ ಆರಿಹೋಯಿತು. ಯುದ್ಧ ಹೆಮ್ಮಾರಿ ಅದೆಷ್ಟು ಬಲಿಗಳನ್ನು ಬೇಡುತ್ತಿದೆ! ಸಮಸ್ತ ಆರ್ಯಾವರ್ತ ಪಾಲ್ಗೊಂಡಿರುವ ಈ ಮಹಾಯುದ್ಧ ಮುಗಿಯುವಾಗ ಎಳೆಯ ಮಕ್ಕಳು ಮತ್ತು ವಿಧವೆಯವರು ಮಾತ್ರ ಉಳಿದಿರುತ್ತಾರೆ. ಕೂಡದು, ಈ ಯುದ್ಧ ಮುಂದುವರಿಯಕೂಡದು.

ಭಾವನೆಗಳು ವ್ಯಕ್ತವಾಗದ ಶಾಂತಸ್ವರದಲ್ಲಿ ಭೀಷ್ಮರೆಂದರು : “ಆಚಾರ್ಯ ದ್ರೋಣರೇ, ಆದದ್ದು ಆಗಿಹೋಯಿತು. ಎದೆಗೆ ಚುಚ್ಚಿರುವ ಈ ಬಾಣ ನಿಧಾನ ವಿಷಪ್ರಾಶನದಂತೆ ಹಂತಹಂತವಾಗಿ ನನ್ನನ್ನು ಕೊಲ್ಲುತ್ತಿದೆ. ನೀವೀಗ ಎಡಗೈ ಹೆಬ್ಬೆರಳು ಕಳೆದುಕೊಂಡಿದ್ದೀರಿ. ಮೊದಲಿನಂತೆ ಯುದ್ಧ ಮಾಡಲು ಇನ್ನು ನಿಮ್ಮಿಂದಾಗದು. ಬೆರಳಿಗೆ ಬಂದದ್ದು ಕೊರಳಿಗೆ ಬರಲು ಎಷ್ಟು ಹೊತ್ತು? ಲಕ್ಷಣಕುಮಾರ ಮತ್ತು ಅಭಿಮನ್ಯು ಕುರುಸಾಮ್ರಾಜ್ಯವನ್ನು ಆಳಬೇಕಿದ್ದವರು. ಅಭಿಮನ್ಯು ಕುರುಸಾಮ್ರಾಜ್ಯವನ್ನು ಸಮಸ್ತ ಭರತಖಂಡಕ್ಕೆ ವಿಸ್ತರಿಸಬಲ್ಲ ಪರಾಕ್ರಮಿಯಾಗಿದ್ದ. ಈ ದುರ್ಯೋಧನನ ಹಟದಿಂದ ಭರತಖಂಡಕ್ಕೆ ಅಂಧಕಾರ ಕವಿದಂತಾಗಿದೆ. ನೀವಾದರೂ ದುರ್ಯೋಧನನಿಗೆ ವಾಸ್ತವವನ್ನು ಮನಗಾಣಿಸಿ ಯುದ್ಧ ನಿಲ್ಲಿಸಲು ಬುದ್ಧಿ ಹೇಳಿ.

ದುರ್ಯೋಧನ ತಲೆತಗ್ಗಿಸಿ ಹೇಳಿದ: “ಆದರೆ ತಾತಾ, ಈಗ ಪರಿಸ್ಥತಿ ಕೈಮೀರಿ ಹೋಗಿದೆ. ಈ ಹಂತದಲ್ಲಿ ಯುದ್ಧವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.”

ಭೀಷ್ಮರಿಗೆ ದುರ್ಯೋಧನನ ಮಾತಿನಿಂದ ಸಿಟ್ಟು ಬಂತು. ಆದರೆ ಸಿಟ್ಟಿನಿಂದ ಕಾರ್ಯ ಸಾಧನೆಯಾಗುವುದಿಲ್ಲವೆಂದು ಅವರ ವಿವೇಕ ಎಚ್ಚರಿಸಿತು. ಆಕ್ಷೇಪಣೆಯ ಸ್ವರದಲ್ಲಿ ಅವರೆಂದರು : “ಅಂಥಾದ್ದೇನಿಲ್ಲ. ನೀನು ಒಪ್ಪಿದರೆ ನಾನು ಯುದ್ಧ ನಿಲ್ಲಿಸಬಲ್ಲೆ. ನಾನೊಂದು ಮಾತು ಹೇಳಿದರೆ ಸಾಕು, ಯುಧಿಷ್ಠಿರ ಕೃಷ್ಣನನ್ನು ಕರಕೊಂಡು ಇಲ್ಲಿಗೇ ಬಂದು ಬಿಡುತ್ತಾನೆ. ಅವರಿಬ್ಬರನ್ನು ನಾನು ಒಪ್ಪಿಸುತ್ತೇನೆ. ಅವರು ಒಪ್ಪಿದರೆ ಪಾಂಡವರಾರೂ ಆಕ್ಷೇಪಿಸುವುದಿಲ್ಲ. ಹೇಳು ಮಗೂ, ಯುದ್ಧ ನಿಲುಗಡೆಗೆ ನಿನ್ನ ಒಪ್ಪಿಗೆಯಿದೆಯೆ?”

ಈ ಮಾತಿಗೆ ದ್ರೋಣರು ಉತ್ತರಿಸಿದರು : “ಆಚಾರ್ಯರೇ, ದುರ್ಯೋಧನ ಸುಳ್ಳು ಹೇಳಿಲ್ಲ. ಈಗ ಪಾಂಡವರು ಸಂಧಾನಕ್ಕೆ ಒಪ್ಪಲು ಸಾಧ್ಯವೇ ಇಲ್ಲ. ಅಭಿಮನ್ಯು ಹತನಾದ ಸುದ್ದಿ ತಿಳಿದು ಅರ್ಜುನ ಕ್ರರೋಧೋನ್ಮತ್ತನಾಗಿದ್ದಾನೆ. ಭೀಮಾದಿಗಳು ಚಕ್ರವ್ಯೂಹದ ಒಳಹೊಗದಂತೆ ತಡೆಹಿಡಿದ ಜಯದ್ರಥನೇ ಇದಕ್ಕೆ ಕಾರಣ ಎಂದು ಭಾವಿಸಿ ಪ್ರತಿಜ್ಞಾಬ್ಧಿನಾಗಿದ್ದಾನೆ. ನಾಳೆ ಸೂರ್ಯಾಸ್ತಕ್ಕಿಂತ ಮೊದಲು ಜಯದ್ರಥನ ಶಿರಚ್ಛೇದ ಮಾಡದಿದ್ದರೆ ಅಗ್ನಿಪ್ರವೇಶ ಮಾಡಿ ಬಿಡುತ್ತಾನಂತೆ. ಹೇಳಿ ಆಚಾರ್ಯರೇ, ಈಗ ಯುದ್ಧ ನಿಲ್ಲಿಸಿ ಸಂಧಾನದ ಮಾತುಕತೆ ನಡೆಸಲು ಅವಕಾಶವಿದೆಯೆ?”

ಭೀಷ್ಮರು ನಿಟ್ಟುಸಿರುಬಿಟ್ಟರು : “ದುರ್ಯೋಧನಾ, ಯುದ್ಧವೆಂದರೆ ಹಾಗೇ ಮಗೂ. ಒಮ್ಮೆ ಆರಂಭವಾಯಿತೆಂದರೆ ಮತ್ತೆ ಯಾರ ನಿಯಂತ್ರಣಕ್ಕೂ ಸಿಗುವುದಿಲ್ಲ. ನೀನು ಅಭಿಮನ್ಯು ವನ್ನು ಕೊಲ್ಲಿಸಿ ಎಂಥಾ ಅನಾಹುತವನ್ನು ಆಹ್ವಾನಿಸಿಕೊಂಡೆ?”

ದುರ್ಯೋಧನ ಸಿಡಿದು ಬಿದ್ದ : “ತಾತಾ, ನನ್ನ ಮಗ ಲಕ್ಷಣನೂ ಸತ್ತಿದ್ದಾನೆ. ನೀವು ಅಭಿಮನ್ಯುವಿನ ಹತ್ಯೆಗೆ ಮಾತ್ರ ಮರುಗುತ್ತಿದ್ದೀರಿ. ಇಂದು ನಾನು ಪುತ್ರವಿಹೀನನಾಗಿದ್ದೇನೆ. ನಾಳೆ ನನ್ನ ತಂಗಿ ದುಶ್ಶಳೆ ವಿಧವೆಯಾಗುವುದರಲ್ಲಿದ್ದಾಳೆ. ನಾವೀಗ ಕಳೆದುಹೋದುದಕ್ಕೆ ಚಿಂತಿಸಿ ಸಮಯ ಕಳೆಯಬೇಕೆ? ಅಥವಾ ನಾಳೆ ಸಂಭವಿಸಲಿರುವ ಅನಾಹುತವನ್ನು ತಪ್ಪಿಸುವುದು ಹೇಗೆಂದು ಯೋಚಿಸಿ ಒಂದು ತೀರ್ಮಾನಕ್ಕೆ ಬರಬೇಕೆ?”

ದುರ್ಯೋಧನನ ಮಾತು ಭೀಷ್ಮರ ಅಂತಃಕರಣಕ್ಕೆ ನಾಟಿತು. ಅವರು ಯೋಚಿಸತೊಡಗಿದರು. ಲಕ್ಷಣಕುಮಾರ ಯಾವುದರಲ್ಲೂ ಅಭಿಮನ್ಯುವಿಗೆ ಸಾಟಿಯಲ್ಲ. ಆದರೆ ಪುತ್ರಶೋಕಂ ನಿರಂತರಂ. ದುರ್ಯೋಧನನ ಚಿತೆಗೆ ಕೊಳ್ಳಿ ಇಡಬೇಕಾಗಿದ್ದವ ಆ ಲಕ್ಷಣಕುಮಾರ. ಈಗ ಮಗನ ಚಿತೆಗೆ ಅಪ್ಪ ಕೊಳ್ಳಿ ಇಡಬೇಕಾಗಿದೆ. ಯುದ್ಧ ಪಡೆದುಕೊಳ್ಳುತ್ತಿರುವ ಆಯಾಮಗಳನ್ನು ನೋಡಿದರೆ ಲಕ್ಷಣಕುಮಾರನ ಚಿತೆಗೆ ಕೊಳ್ಳಿ ಇಡಲು ಇವನಿಂದ ಆಗುತ್ತದೆಯೋ ಇಲ್ಲವೊ? ಇವನಿಗೆ ಹೇಳಿಕೊಳ್ಳಲು ತೊಂಬತ್ತೊಂಬತ್ತು ಸೋದರರು. ಗಾಂಧಾರ ದೇಶದ ಸುಬಲರಾಜನ ಹನ್ನೊಂದು ಪುತ್ರಿಯರಲ್ಲಿ ಧೃತರಾಷ್ಟ್ರನಿಗೆ ಜನಿಸಿದವರು. ಅವರಲ್ಲಿ ದುಶ್ಶಾಸನನ ಮೇಲೆ ದುರ್ಯೋಧನನಿಗೆ ಇನ್ನಿಲ್ಲದ ಅಕ್ಕರೆ. ನೂರು ಮಂದಿಗೆ ಒಬ್ಬಳೇ ಸೋದರಿಯೆಂದು ದುಶ್ಶಳೆಯನ್ನು ಎಲ್ಲರೂ ಅಪಾರವಾಗಿ ಪ್ರೀತಿಸುವವರೆ. ಅವಳು ಪಾಂಡವರಿಗೂ ತಂಗಿಯೇ. ತನ್ನ ತಂಗಿಯ ಪತಿಯನ್ನು ನಾಳೆ ಕೊಲ್ಲುವುದಾಗಿ ಅರ್ಜುನ ಪ್ರತಿಜ್ಞೆ ಮಾಡಿದ್ದಾನೆ. ಪ್ರತೀಕಾರವನ್ನು ಮನಸ್ಸಲ್ಲಿ ತುಂಬಿಕೊಂಡವನಿಗೆ ಸಂಬಂಧಗಳು ಗೌಣವಾಗುತ್ತವೆ. ಆದರೆ ಈಗ ಇವನು ಜಯದ್ರಥನನ್ನು ಕೊಂದೇನು ಫಲ? ಇವ ಜಯದ್ರಥನನ್ನು ಕೊಂದರೆ ಸತ್ತುಹೋಗಿರುವ ಅಭಿಮನ್ಯುವೇನು ಎದ್ದು ಬರುತ್ತಾನೆಯೆ?

ಭೀಷ್ಮರ ಯೋಚನಾಲಹರಿ ಮುಂದುವರಿಯಿತು. ಯುದ್ಧ ಭೀಕರ ತಿರುವನ್ನು ಪಡ ಕೊಂಡಾಗಿದೆ. ನಾನು ಸೇನಾಧಿಪತಿಯಾಗಿದ್ದಷ್ಟು ದಿನ ಕೌರವ ಪಾಳಯದಲ್ಲಾಗಲೀ, ಪಾಂಡವ ಪಾಳಯದಲ್ಲಾಗಲೀ ದೊಡ್ಡ ನಷ್ಟ ಸಂಭವಿಸಿರಲಿಲ್ಲ. ಈಗ ಮೃತ್ಯುವಿನ ಆಪೋಶನ ಆರಂಭವಾಗಿದೆ. ಇಂದು ಎಳೆಯ ಎರಡು ಅಮೂಲ್ಯ ಜೀವಗಳು ನಷ್ಟವಾಗಿವೆ. ಜಯದ್ರಥ ಅದಕ್ಕೊಂದು ನಿಮಿತ್ತ ಮಾತ್ರ. ಅವನನ್ನು ಕೊಲ್ಲಲಾಗದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆಂದು ಪ್ರತಿಜ್ಞೆ, ಮಾಡ ಬೇಕಾದರೆ ಅರ್ಜುನನಿಗೆ ಅವನ ಪರಾಕ್ರಮದಲ್ಲಿ ಅದೆಷ್ಟು ವಿಶ್ವಾಸವಿರಬೇಡ! ಅದು ಆತ್ಮ ವಿಶ್ವಾಸವೋ, ಅಭಿಮನ್ಯುವಿನ ಅಗಲಿಕೆಯ ದುಃಖ ಭರಿಸಲಾಗದೆ ಹೊರಬಿದ್ದ ನೋವೊ?

ನಾನು ಸೇನಾಧಿಪತಿಯಾಗಿರುತ್ತಿದ್ದರೆ ಅಭಿಮನ್ಯು ವಧೆ ನಡೆಯಗೊಡುತ್ತಿರಲಿಲ್ಲ. ಯುದ್ಧ ಮಾಡುವ ಸ್ಥತಿಯಲ್ಲಿರುತ್ತಿದ್ದರೆ ಈಗಲೂ ಜಯದ್ರಥನನ್ನು ರಕ್ಷಿಸಬಲ್ಲೆ. ಹೆಬ್ಬೆರಳು ಕತ್ತರಿಸಿ ಹೋಗಿರುವ ಗುರುದ್ರೋಣರಿಂದ ಅದು ಸಾಧ್ಯವಿಲ್ಲವೆಂಬುದನ್ನು ಅರ್ಜುನನ ಪ್ರತಿಜ್ಞೆ ಸೂರ್ಯನ ಬೆಳಕಿನಷ್ಟೇ ನಿಚ್ಚಳಗೊಳಿಸಿದೆ. ಜಯದ್ರಥನನ್ನು ಕೃಷ್ಣಾರ್ಜುನರಿಂದ ರಕ್ಷಿಸಲು ಸಾಧ್ಯವಾಗದಿದ್ದರೆ ಈ ಮಹಾಯುದ್ಧದ ಫಲಿತಾಂಶವೇನೆಂಬುದನ್ನು ನಾಳೆಯೇ ಹೇಳಲು ಸಾಧ್ಯವಾಗುತ್ತದೆ. ಇಷ್ಟಕ್ಕೂ ಈ ಜಯದ್ರಥ ಬದುಕಲು ಯೋಗ್ಯನೆ?

ಭೀಷ್ಮರಿಗೆ ಜಯದ್ರಥನ ಕತೆ ನೆನಪಾಯಿತು. ಸಿಂಧೂ ದೇಶದ ಮಹಾಬಲಾಢ್ಯ ಆಜಾನುಬಾಹು ವ್ಯಕ್ತಿತ್ತ್ವದ ದೊರೆ ಜಯದ್ರಥ ತನ್ನ ಇಪ್ಪತ್ತು ಮಂದಿ ಭೀಮಕಾಯದ ಅತಿಬಲಿಷ್ಠ ಸೋದರರೊಡನೆ ಯುದ್ಧಕ್ಕೆ ಹೊರಟರೆ ಅವನನ್ನು ಗೆಲ್ಲಬಲ್ಲವರೇ ಇರಲಿಲ್ಲ. ತನ್ನ ತಾಯಿಯ ಗಾಂಧಾರ ದೇಶಕ್ಕೆ ಹೋಗುವಾಗ ನಡುವೆ ಸಿಗುವ ಸಿಂಧೂ ದೇಶ ಎಂದೂ ಬತ್ತಿಹೋಗದ ಸಿಂಧೂ ನದಿಯಿಂದಾಗಿ ಸಮೃದ್ಧವಾಗಿತ್ತು. ಅದನ್ನು ಕುರುಸಾಮ್ರಾಜ್ಯಕ್ಕೆ ಸೇರಿಸಿ ಬಿಡಬೇಕು ಎಂದು ಅವನು ಎಷ್ಟೋ ಬಾರಿ ಭೀಷ್ಮರಲ್ಲಿ ಹೇಳಿದ್ದ. ನಾವಾಗಿ ಕಾಲುಕೆರೆದು ಜಗಳಕ್ಕೆ ಹೋಗಿ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುವುದು ಬೇಡ. ಜಯದ್ರಥನೇ ಸಂದರ್ಭ ಸೃಷ್ಟಿಸಿದರೆ ಮತ್ತೆ ಬಿಡುವುದು ಬೇಡ ಎಂದು ಭೀಷ್ಮರು ದುರ್ಯೋಧನನ ಆಶಾಗ್ನಿಗೆ ತಣ್ಣೀರು ಎರಚಿದ್ದರು. ಯುದ್ಧದಿಂದಾಗದ್ದು ಸಂಬಂಧದಿಂದಾದೀತೆಂದು ಕರ್ಣ ಹೇಳಿದ್ದಕ್ಕೆ ತಾನಾಗಿಯೇ ಪ್ರಸ್ತಾಪ ಮಾಡಿ ದುಶ್ಶಳೆಯ ವಿವಾಹವನ್ನು ಜಯದ್ರಥನೊಡನೆ ನೆರವೇರಿಸಿದ್ದ. ಎಂದಾದರೂ ಉಪಯೋಗಕ್ಕೆ ಬಂದೀತೆಂದು ಪಾಂಡವದ್ವೇಷವನ್ನು ಅವನ ಮನಸ್ಸಲ್ಲೂ ಬಿತ್ತಿದ್ದ. ದ್ರೌಪದಿಯ ಸ್ವಯಂವರಕ್ಕೆ ಜಯದ್ರಥ ಹೋಗಿದ್ದವ, ಮತ್ಸ್ಯಯಂತ್ರವನ್ನು ಭೇದಿಸಲಾಗದೆ ಮುಖಭಂಗಿತನಾಗಿದ್ದ. ಆದರೆ ದ್ರೌಪದಿಯ ಅನುಪಮ ಚೆಲುವನ್ನು ಮರೆಯಲು ಅವನಿಂದಾಗಿರಲಿಲ್ಲ. ಕಪಟದ್ಯೂತ ಪ್ರಕರಣದ ಬಳಿಕ, ದ್ರೌಪದಿಯನ್ನು ಒಂದು ಬಾರಿಯಾದರೂ ಅನುಭವಿಸದಿದ್ದರೆ ತನ್ನ ಗಂಡು ಜನ್ಮ ವ್ಯರ್ಥವೆಂದು ದುರ್ಯೋಧನನೆದುರು ಎಷ್ಟು ಬಾರಿ ಹೇಳಿದ್ದನೊ? ತುಂಬಿದ ಸಭೆಯಲ್ಲಿ ನಗ್ನಳನ್ನಾಗಿಸಿ ದ್ರೌಪದಿಯನ್ನು ಅಪಮಾನಿಸಬೇಕೆಂದು ಹಾತೊರೆದಿದ್ದ ದುರ್ಯೋಧನ ಒಂದು ಬಾರಿಯೂ ತನ್ನ ತಂಗಿ ದುಶ್ಶಳೆಯ ಗಂಡನ ಅಸಂಬದ್ಧ ಪ್ರಲಾಪವನ್ನು ಖಂಡಿಸಿರಲಿಲ್ಲ.

ಪಾಂಡವರ ವನವಾಸ ಕಾಲದಲ್ಲಿ ದ್ರೌಪದಿ ತನಗೆ ಒಂಟಿಯಾಗಿ ಸಿಕ್ಕಾಳೆಂದು ಎಷ್ಟೋ ಸಲ ಜಯದ್ರಥ ಹೊಂಚು ಹಾಕಿ ಕಾದಿದ್ದ. ಅದೊಂದು ದಿನ ಋಷಿ ಧೌಮ್ಮರ ರಕ್ಷಣೆಯಲ್ಲಿ ದ್ರೌಪದಿಯನ್ನು ಪರ್ಣಕುಟಿಯಲ್ಲಿ ಬಿಟ್ಟು ಪಾಂಡವರು ಬೇಟೆಗೆಂದು ಹೋಗಿದ್ದರು. ದ್ರೌಪದಿಯ ಅಂಗಸುಖದ ಬಯಕೆಯನ್ನು ಧಮನಿ ಧಮನಿಗಳಲ್ಲಿ ತುಂಬಿಕೊಂಡಿದ್ದ ಜಯದ್ರಥ ಭಯಲಜ್ಜಾ ರಹಿತನಾಗಿ ಆಶ್ರಮಕ್ಕೆ ನುಗ್ಗಿ ಒಂದೇಟಿಗೆ ಧೌಮ್ಮರನ್ನು ನಿವಾರಿಸಿ ದ್ರೌಪದಿಯನ್ನು ಎತ್ತಿಕೊಂಡು ದೂರದಲ್ಲಿ ನಿಲ್ಲಿಸಿದ್ದ ತನ್ನ ರಥದ ಬಳಿಗೆ ನಡೆದಿದ್ದ. ಅವಳ ಬೊಬ್ಬೆ ಹೆಚ್ಚಾದಾಗ ಬಾಯಿಗೆ ಅಂಗವಸ್ತ್ರ ಜಡಿದು ಅಲ್ಲೇ ನೆಲದ ಮೇಲೆ ಕೆಡವಿಕೊಂಡು ಬಹುದಿನಗಳ ತನ್ನ ಕನಸನ್ನು ಸಾಕ್ಷಾತ್ಕರಿಸುವ ಪ್ರಯತ್ನ ನಡೆಸಿದ್ದ. ಅಷ್ಟು ಹೊತ್ತಿಗೆ ದ್ರೌಪದಿಯ ಬೊಬ್ಬೆ ಕಿವಿಗೆ ಬಿದ್ದು ಧಾವಿಸಿ ಬಂದ ಭೀಮಸೇನ ಜಯದ್ರಥನನ್ನು ಒದ್ದು ಒದ್ದು ಏಳಲಾಗದ ಸ್ಥತಿಗೆ ತಂದಿಟ್ಟಿದ್ದ. ಇನ್ನೇನು ಜಯದ್ರಥನ ತಲೆಯನ್ನು ಗದೆಯಿಂದ ನುಚ್ಚುನೂರು ಮಾಡಬೇಕೆಂದಿದ್ದಾಗ ಯುಧಿಷ್ಠಿರ ಅವನನ್ನು ತಡೆದಿದ್ದ. ಇಲ್ಲದಿದ್ದರೆ ದುಶ್ಶಳೆ ಅಂದೇ ವಿಧವೆಯಾಗಿ ಬಿಡುತ್ತಿದ್ದಳು. ಅಷ್ಟಕ್ಕೂ ಬಿಡದ ಭೀಮಸೇನ ಜಯದ್ರಥನ ತಲೆಯನ್ನು ಅಲ್ಲಲ್ಲಿ ಬೋಳಿಸಿ, ಪಂಚಶಿಖೆಗಳನ್ನು ನಿರ್ಮಿಸಿ, ಬೋಳಿಸಿದ ಭಾಗಗಳಿಗೆ ಸುಣ್ಣದ ಬೊಟ್ಟಿಟ್ಟು ಪೃಷ್ಠಕ್ಕೊಂದು ಒದ್ದು ಕಳಿಸಿದ್ದ. ಅಪಮಾನಿತನಾದ ಜಯದ್ರಥ ಹಿಮಾಲಯದ ಸಾಧಕರಿಂದ ವಿಶೇಷ ಯುದ್ಧ ಕೌಶಲವನ್ನು ಕರಗತ ಮಾಡಿಕೊಂಡಿದ್ದ. ತಮ್ಮಂದಿರಿಗೂ ಅದನ್ನು ಧಾರೆ ಎರೆದಿದ್ದ. ಇಲ್ಲದಿರುತ್ತಿದ್ದರೆ ಭೀಮನನ್ನು ಚಕ್ರವ್ಯೂಹ ಪ್ರವೇಶಿಸದಂತೆ ತಡೆಯಲು ಅವನಿಂದಾಗುತ್ತಿರಲಿಲ್ಲ.

ಅರ್ಜುನ ನಾಳೆ ಜಯದ್ರಥನನ್ನು ಕೊಲ್ಲುತ್ತಾನೆಂದಿಟ್ಟುಕೊಳ್ಳೋಣ. ಆಗ ಪ್ರತೀಕಾರ ಭಾವ ಇನ್ನಷ್ಟು ತೀವ್ರವಾಗಿ ಈ ದುರ್ಯೋಧನ ಅದೇನೇನು ತಂದು ಹಾಕುತ್ತಾನೊ? ಜಯದ್ರಥ ಸತ್ತರೆ ಯುದ್ಧದ ಗತಿ ಇನ್ನಷ್ಟು ತೀವ್ರವಾಗುತ್ತದೆ. ಜಯದ್ರಥನನ್ನು ಕೊಲ್ಲಲಾಗದಿದ್ದರೆ ತನ್ನ ಪ್ರತಿಜ್ಞೆಯಂತೆ ಅರ್ಜುನ ಅಗ್ನಿಪ್ರವೇಶ ಮಾಡಬೇಕಾಗುತ್ತದೆ. ಅರ್ಜುನ ಸತ್ತುಹೋದರೆ ಯುದ್ಧ ಮುಂದುವರಿಸಲು ಯುಧಿಷ್ಠಿರನಿಗೆ ಮನಸ್ಸು ಬರಲಾರದು. ಆಗ ಯುದ್ಧ ನಿಲ್ಲುತ್ತದೆ. ಆದರೆ ಹಾಗಾಗುವ ಸಂಭವ ಬಹಳ ಕಡಿಮೆ. ನಾಳೆ ಜಯದ್ರಥ ಸಾಯುವ ಸಂಭವವೇ ಹೆಚ್ಚು. ದುರ್ಯೋಧನ ಲಕ್ಷಣಕುಮಾರನ ಸಾವಿನಿಂದ ಕಂಗೆಟ್ಟಿದ್ದಾನೆ. ಅಭಿಮನ್ಯು ವಧೆಯಿಂದಾಗಿ ಇವನನ್ನು ಪಾಪಪ್ರಜ್ಞೆ ಕಾಡುತ್ತಿದೆ. ಅರ್ಜುನನ ನಿರ್‍ಭೀತ ಪ್ರತಿಜ್ಞೆ, ಇವನ ಮನೋಬಲವನ್ನು ರಸಾತಳಕ್ಕೆ ಮುಟ್ಟಿಸಿದೆ. ಈಗ ಒಂದೆರಡು ಸಾಂತ್ವನದ ಮಾತುಗಳನ್ನಾಡದಿದ್ದರೆ ಪೂರ್ತಿಯಾಗಿ ಕುಸಿದು ಹೋಗುತ್ತಾನೆ.

ಸಂತೈಕೆಯ ಸ್ವರದಲ್ಲಿ ಭೀಷ್ಮರೆಂದರು: “ನಿನ್ನ ನೋವು ನನಗರ್ಥವಾಗುತ್ತದೆ ಮಗೂ. ತಪ್ಪು ತಿಳಿಯಬೇಡ. ಸಮಷ್ಟಿಯಾಗಿ ಕುರು ಸಾಮ್ರಾಜ್ಯದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಲಕ್ಷಣ ಕುಮಾರನಾದರೇನು, ಅಭಿಮನ್ಯುವಾದರೇನು ನನಗೆ ಇಬ್ಬರೂ ಒಂದೇ. ಈಗ ನನ್ನನ್ನು ವೈಯಕ್ತಿಕ ಸಂಬಂಧಗಳು ಕಾಡುವುದಿಲ್ಲ ಮಗೂ. ಮಾನವೀಯ ಅನುಕಂಪದಿಂದ ನಾನಾಡಿದ ಮಾತುಗಳಿಗೆ ನೀನು ನೋಯಬೇಕಾಗಿಲ್ಲ. ಆದರೆ ಮಗೂ, ಯುದ್ಧದ ಭೀಕರತೆಯನ್ನೊಮ್ಮೆ ನೋಡು. ಕನಸುಗಳನ್ನೂ ಕಾಣಲಾಗದ, ಎಂದೋ ಮಣ್ಣಲ್ಲಿ ಮಣ್ಣಾಗಿ ಹೋಗಬೇಕಾಗಿದ್ದ ನಿನ್ನ ತಾತನಂಥವರು ಬದುಕಿ ಉಳಿಯುತ್ತಾರೆ. ಸಾವಿರ ಸಾವಿರ ಕನಸುಗಳನ್ನು ಕಾಣುತ್ತಿದ್ದ ಲಕ್ಷಣಕುಮಾರ, ಅಭಿಮನ್ಯುನಂಥವರು ನಮ್ಮ ಕಣ್ಣೆದುರೇ ಸತ್ತು ಹೋಗುತ್ತಾರೆ.

ಒಂದೆರಡು ಗಳಿಗೆಗಳ ವಿಷಾದದ ಮೌನದ ಬಳಿಕ ಭೀಷ್ಮರು ದುರ್ಯೋಧನನನ್ನು ಸಮಾಧಾನಪಡಿಸಿದರು: “ನೀನು ಚಿಂತಿಸಬೇಕಾಗಿಲ್ಲ ಮಗೂ. ಜಯದ್ರಥನನ್ನು ನೀನು ಉಳಿಸಿ ಕೊಳ್ಳಬಲ್ಲೆ. ಭೀಮಸೇನನನ್ನು ತಡೆಹಿಡಿದ ಜಯದ್ರಥ ಮತ್ತವನ ಬಲಾಢ್ಯ ಸಹೋದರರು ಅರ್ಜುನನಿಗೆ ಹೆದರುವ ಅಗತ್ಯವೇ ಇಲ್ಲ. ಗಮನವಿಟ್ಟು ಕೇಳು. ನಾಳೆ ಜಯದ್ರಥನನ್ನು ಕುರುಸೇನೆಯ ಅತ್ಯಂತ ಹಿಂಭಾಗದಲ್ಲಿ ಬಚ್ಚಿಡು. ಆಚಾರ್ಯ ದ್ರೋಣರು ಮುಂಭಾಗದಲ್ಲಿ ಅರ್ಜುನನೊಡನೆ ಕಾಳಗ ಆರಂಭಿಸಲಿ. ಅರ್ಜುನ ಗುರುಗಳನ್ನು ಗೆದ್ದ ಮೇಲಲ್ಲವೇ ಮುಂದಿನ ಮಾತು? ಆದರೂ ನೀನು, ದುಶ್ಶಾಸನ, ಕರ್ಣ, ಅಶ್ವತ್ಥಾಮ ಮತ್ತು ಇತರ ವೀರರೊಡನೆ ಎರಡನೆಯ ಹಂತದಲ್ಲಿ ಅರ್ಜುನನನ್ನು ತಡೆಯಿರಿ. ಜಯದ್ರಥನ ಇಪ್ಪತ್ತು ಬಲಾಢ್ಯ ಸೋದರರು ಅವನಿಗೆ ಕಟ್ಟುನಿಟ್ಟಿನ ಭದ್ರತೆ ನೀಡಲಿ. ನೋಡೋಣ, ಆ ಅರ್ಜುನ ಅದು ಹೇಗೆ ತನ್ನ ಪ್ರತಿಜ್ಞೆಯನ್ನು ಈಡೇರಿಸುತ್ತಾನೆಂದು.”

ಈಗ ದುರ್ಯೋಧನನ ಮುಖ ಬಿರಿಯಿತು. ಅವನು ಎದ್ದು ನಿಂತು ನಮಸ್ಕರಿಸಿದ : “ತಾತಾ, ಈಗ ನನಗೆ ಧೈರ್ಯ ಬಂತು. ನಿಮ್ಮ ಆಶೀರ್ವಾದ ನಮಗಿರಲಿ. ಅರ್ಜುನನ ಪ್ರತಿಜ್ಞೆ ಯನ್ನು ಭಂಗಗೊಳಿಸಿ ನಾಳೆಯೇ ಯುದ್ಧ ಮುಕ್ತಾಯವಾಗುವಂತೆ ನೋಡಿಕೊಳ್ಳುತ್ತೇವೆ.”

ಭೀಷ್ಮರು ಆಶೀರ್ವದಿಸಿದರು, ಧರ್ಮಕ್ಕೆ ಜಯವಾಗಲಿ ಎಂದು! ಗುರುದ್ರೋಣರೊಡನೆ ದುರ್ಯೋಧನ ಹೊರಟು ಹೋದ ಮೇಲೆ ಬಿಡದಿ ಖಾಲಿಯಾದಂತೆನಿಸಿತು. ಆಗ ಅವರ ಕಿವಿಯಲ್ಲಿ ಆ ಮಾತುಗಳು ಅನುರಣಿಸಿದವು : “………. ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ!”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯ ಚೆಂಡು
Next post ಪೂರ ಪಳಗದ ನಟ ಅಭಿನಯದ ಹೊತ್ತಿನಲಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys