ತರಂಗಾಂತರ – ೧

ತರಂಗಾಂತರ – ೧

ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ ಓಲಾಡುತ್ತಿವೆ-ಏನೂ ಮಾಡುವಂತಿಲ್ಲ. ದಿನಪತ್ರಿಕ ತೆರೆದರೆ ಹೈರೈಸ್ ಕಟ್ಟಡಗಳ ಪ್ಲಾನುಗಳು, ಆಕರ್ಷಕ ಕಂತುಗಳು, ಧನಸಹಾಯ, ಓನರ್ ಶಿಪ್ ಗ್ಯಾರಂಟಿ. ಅಮೃತ ಅಪಾರ್ಟ್ ಮೆಂಟ್ಸ್, ಕೈಲಾಸ್ ಅಪಾರ್ಟ್ ಮೆಂಟ್ಸ್, ಆಲ್ಫ಼್ಸ್, ಕಾಸಾ ಬ್ಲಾಂಕಾ ಎಂದು ಮುಂತಾದ ಹೆಸರುಗಳು ಈಗ ಗಗನಚುಂಬಿಗಳಿಗೆ. ಫ್ಲಾಟ್ ಎಂದು ಕರೆಯಲಾಗುವ ಈ ವಸತಿ ಗೃಹಗಳಲ್ಲಿ ಜನ ಹಕ್ಕಿಗಳ ಹಾಗೆ ವಾಸ ಮಾಡುತ್ತಾರೆ. ನೆಲದ ಮೇಲಿನ ಮನೆಗಳ ಅನುಕೂಲತೆಗಳು ಇಲ್ಲಿಲ್ಲ. ಕೈದೋಟ, ಹೂದೋಟ ಬೆಳೆಸುವಂತಿಲ್ಲ. ಸಂಜೆ ಆರಾಮವಾಗಿ ಕೂಡಲು ಹಿತ್ತಿಲಿಲ್ಲ. ಮನೆಯ ಸುತ್ತ ನಡೆಯುವಂತಿಲ್ಲ. ಮೇಲಿನ ಫ಼್ಲಾಟಿನವರು ಮಾಡುವ ಸದ್ದನ್ನು ಒಂದೋ ಸಹಿಸಿ ಸುಮ್ಮನಾಗ ಬೇಕು, ಇಲ್ಲಾ ಕೆಳಗಿನವರ ಮೇಲೆ ತೀರಿಸಿಕೊಳ್ಳಬೇಕು. ಫ಼್ಲಾಟಿನ ಮುಂದೆ ಕಟ್ಟಿದ ಚಿಕ್ಕದೊಂದು ಬಾಲ್ಕನಿಯನ್ನುಳಿದರೆ ಹೊರಜಗತ್ತಿನ ಸಂಪರ್ಕವಿಲ್ಲ. ಹೀಗಿದ್ದೂ ಜನ ಇಂಥ ಫ಼್ಲಾಟುಗಳನ್ನು ಹೇರಳ ಹಣ ಸುರುವಿ ಕೊಂಡುಕೊಳ್ಳುತ್ತಾರೆ. ಮುಂದೆ ಎಂದಾದರೊಂದು ದಿನ ನೆಲದ ಮೇಲೆ ಮನೆ ಕಟ್ಟಿಸುವ ಕನಸೊಂದು ಇಲ್ಲದಿರುತ್ತಿದ್ದರೆ ಅವರ ಬದುಕು ಅಸಹನೀಯವಾಗುತ್ತಿತ್ತು.

ಇಂಥದೊಂದು ಅಪಾರ್ಟ್ ಮೆಂಟ್ ನ ಐದನೇ ಹಂತದ ಫ಼್ಲಾಟಿನಲ್ಲಿ ವಿನಯಚಂದ್ರ ನೆಲಸಿದ್ದಾನೆ. ವಿನಯಚಂದ್ರ ಸದ್ಯ ಬಹಳ ಬೇಡಿಕೆಯಲ್ಲಿರುವ ವಿಷಯವಾದ ಇಲೆಕ್ಟ್ರಾನಿಕ್ಸ್ ಎಂಜನಿಯರಿಂಗ್ ಕಲಿಯುತ್ತಿದ್ದಾನೆ. ತಂದೆ ಹಾಗೂ ಅಣ್ಣ ಚಾರ್ಟರ್ಡ್ ಅಕೌಂಟೆಂಟ್ಸ್, ಜತೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ನಗರದ ಹೃದಯದಂತಿರುವ ಅಬೀಡ್ಸ್ ರೋಡ್ ನಲ್ಲಿ ಅವರ ಆಫ಼ೀಸು. ಆಫ಼ೀಸೆಗೆ ಸೇರಿಕೊಂಡೇ ಇರುವ ಎರಡು ರೂಮುಗಳನ್ನು ಮನೆ ಯಾಗಿ ಪರಿವರ್ತಿಸಿ ಅಣ್ಣ ತನ್ನ ಸಂಸಾರದೊಂದಿಗೆ ಅಲ್ಲಿ ವಾಸಮಾಡುತ್ತಿದ್ದಾನೆ. ತಂದೆ, ತಯಿ, ವಿನಯಚಂದ್ರ ಬಷೀರ್ ಬಾಗ್ ನ ಕೈಲಾಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರೆ. ಇನ್ನೊಂದು ವರ್ಷದೊಳಗೆ ವಿನಯಚಂದ್ರ ತನ್ನ ಪರೀಕ್ಷೆ ಮುಗಿಸಿ ಸ್ವತಂತ್ರನಾಗಿಬಿಡುತ್ತಾನೆ. ಈಗಾಗಲೆ ಕೆಲವು ಕಂಪೆನಿಗಳು ಅವನಿಗೆ ಕೆಲಸ ಕೊಡಲು ಮುಂದೆ ಬಂದಿವೆ. ಆದರೆ ಅವನು ಮಾತ್ರ ಯಾವ ತುರ್ತಿನಲ್ಲೂ ಇಲ್ಲ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬಂದರೆ ತುಸುಕಾಲ ಸಂಶೋಧನೆ ನಡೆಸುವ ಸಾಧ್ಯತೆಯೂ ಇದೆ.

ವಿನಯಚಂದ್ರನ ಬಳಿ ಸ್ಕೂಟರ್ ಇದೆ. ಅಪಾರ್ಟ್ ಮೆಂಟ್ ನ ಅಡಿಪಾಯದಲ್ಲಿರುವ ಜಾಗದಲ್ಲಿ ಅದನ್ನು ಪಾರ್ಕ್ ಮಾಡುತ್ತಾನೆ. ಅದಕ್ಕೋಸ್ಕರ ಪ್ರತಿ ತಿಂಗಳು ಮೂವತ್ತು ರೂಪಾಯಿಗಳಷ್ಟು ಬಾಡಿಗೆ ಕೊಡಬೇಕಾಗುತ್ತದೆ. ಕನ್ ಸ್ಟ್ರಕ್ಷನ್ ಕಂಪೆನಿ ಸ್ಥಿರಾದಾಯಕ್ಕೋಸ್ಕರ ನಡೆಸಿರುವ ತಂತ್ರ ಇದು. ಕಾರು ಅಥವ ಅದೇ ರೀತಿಯ ಇನ್ನಿತರ ನಾಲ್ಕು ಚಕ್ರಗಳ ವಾಹನಕ್ಕೆ ತಿಂಗಳಿಗೆ ಎಪ್ಪತ್ತೈದು ರೂಪಾಯಿ. ಯಾರೂ ಏನೂ ಹೇಳುವಂತಿಲ್ಲ. ವಿನಯಚಂದ್ರ ತನ್ನ ಸ್ಕೂಟರಿನಲ್ಲಿ ರುಮ್ಮನೆ ಹೋಗಿ ರುಮ್ಮನೆ ಬರುತ್ತಾನೆ. ಲೆಕ್ಚರು, ಲೆಬೊರೇಟರಿ, ಲ್ಯಾಬ್ರರಿ ಹೀಗೆ ಕೂತು, ನಿಂತು, ಅಲೆದು ಸುಸ್ತಾಗಿ ಮರಳಿದವನು ತನ್ನ ಕೋಣೇಹೊಕ್ಕು ಕೆಸೆಟ್ ಸಂಗೀತ ಹಚ್ಚಿ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಅಥವಾ ಬಾಲ್ಕನಿಯಲ್ಲಿ ಆರಾಮ ಕುರ್ಚಿ ಹಾಕಿ ಕಾಲುಗಳನ್ನು ಬಿಟ್ಟೆ ಮೇಲಿಟ್ಟು ಸಿಗರೇಟು ಸೇದುತ್ತಾನೆ. ಮನೆಯಲ್ಲಿ ತಂದೆ ಇರದಾಗ ಹಾಗೂ ತಾಯಿ ಅಡುಗೆ ಮನೆ ಸೇರಿದ್ದಾಗ ಮಾತ್ರ ಅವನು ಸಿಗರೇಟು ಸೇದುವುದು. ಸೇದಿದರೆ ಅವರು ಇವನನ್ನು ಜೋರು ಮಾಡುತ್ತಾರೆಂದೇನಲ್ಲ. ತಂದೆತಾಯಿಗಳಿಗೆ ಗೌರವ ಕೊಡುವ ಅನೇಕ ವಿಧಾನಗಳಲ್ಲಿ ಇದೂ ಒಂದು.

ಅವನಿರುವ ಕೈಲಾಸ್ ಅಪಾರ್ಟ್ ಮೆಂಟ್ ಗೆ ಹದಿನಾಲ್ಕು ಅಂತಸ್ತುಗಳು. ಹದಿನಾಲ್ಕರಲ್ಲಿ ಅವರು ಯಾಕೆ ನಿಲ್ಲಿಸಿದರೋ ಗೊತ್ತಿಲ್ಲ. ಹದಿನೈದು ಮಾಡಿಬಿಟ್ಟಿದ್ದರೆ ಒಂದು ಲೆಕ್ಕಕ್ಕೆ ಸರಿಯಾಗುತ್ತಿತ್ತು. ಗ್ರೌಂಡ್ ಫ್ಲೋರ್ ಅಂತ ಕರೆಯಬಹುದಾದ ಮೊದಲ ಅಂತಸ್ತಿನಲ್ಲಿ ಅನೇಕ ವಿಧದ ಅಂಗಡಿಗಳಿವೆ-ಕ್ಷೌರದಂಗಡಿಯಿಂದ ಹಿಡಿದು ರೆಸ್ಟೊರಾಂಟ್ ತನಕ. ಈ ರೆಸ್ಟೊರಾಂಟ್ ನ ಒಂದು ಹಾಲನ್ನು ಬಾರ್ ಮಾಡುವ ಯೋಜನೆಯಿತ್ತು. ಆದರೆ ಕೈಲಾಸದ ನಿವಾಸಿಗಳು ಒಕ್ಕೊರಲಿನಿಂದ ವಿರೋಧಿಸಿದ ಕಾರಣ ಅಂಥ ಯೋಜನೆ ಈ ತನಕ ಕಾರ್ಯಗತವಾಗಿಲ್ಲ. ಅಂತಸ್ತಿನಿಂದ ಅಂತಸ್ತಿಗೇರಲು ದಿನದ ಇಪ್ಪತ್ತನಾಲ್ಕು ತಾಸೂ ಚಾಲೂ ಆಗುವ ಲಿಫ಼್ಟು. ಇದನ್ನು ನಡೆಸಲು ಶಿಫ಼್ಟಿನ ಮೇಲೆ ಲಿಫ಼್ಟ್ ಬಾಯ್ಸ್. ಒಂದು ಬಾರಿಗೆ ಹನ್ನೆರಡು ಮಂದಿಯನ್ನು ಕೊಡಿಸಿ ಕರೆದೊಯ್ಯುವ ಶಕ್ತಿಯಿರುವ ಲಿಫ಼್ಟ್. ಅದು ಕೈಕೊಟ್ಟರಾಯಿತೆಂದು ಮೆಟ್ಟಲು. ಲಿಫ಼್ಟಿಗೆ ಕಾಯುವ ತಾಳ್ಮೆಯಿಲ್ಲದೆ ವಿನಯಚಂದ್ರ ಕೆಲವೊಮ್ಮೆ ಮೆಟ್ಟಿಲುಗಳನ್ನೇ ಉಪಯೋಗಿಸುತ್ತಾನೆ. ಅದೂ ಒಂದು ವ್ಯಾಯಾಮವೆಂದು ಅವನು ತಿಳಕೊಂಡಿದ್ದಾನೆ. ಯಾಕೆಂದರೆ ಜಾಗಿಂಗ್, ಯೋಗ ಮುಂತಾದ ಕಾರ್ಯಕ್ರಮಗಳಲ್ಲಿ ಅವನಿಗೆ ವಿಶ್ವಾಸವಿಲ್ಲ. ಒಂದು ಪಾಶ್ಚಾತ್ಯರ ಬಳುವಳಿಯಾದರೆ ಇನ್ನೊಂದು ಓರಿಯಂಟಲ್ ಫ಼್ಯಾಡ್ ಎಂದು ಅವನ ಅಭಿಪ್ರಾಯ. ವ್ಯಾಯಾಮವನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೊಂದಿಸಿಕೊಳ್ಳಬೇಕು. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಫ಼ರ್ನಿಚರುಗಳನ್ನು ಆಚೀಚೆ ಎತ್ತಿ ಇರಿಸುವುದು, ಡಸ್ಟಿಂಗ್, ಕ್ಲೀನಿಂಗ್ ಇತ್ಯಾದಿ ಇತ್ಯಾದಿ.

ಇಂಥ ವಿನಯಚಂದ್ರನಿಗೆ ಕಳೆದ ಕೆಲವು ದಿನಗಳಿಂದ ಸರಿಯಾಗಿ ನಿದ್ದೆಯಿಲ್ಲ. ಎಂದಿನಿಂದ ಇದು ಆರಂಭವಾಯಿತೆಂದರೆ ಖಚಿತವಾಗಿ ಉತ್ತರವಿಲ್ಲ. ಎಲ್ಲಿಂದಲೋ ಕೆಲವು ತರಂಗಾಂತರಗಳು ಬಂದು ತನ್ನನ್ನು ಸ್ಪಂದಿಸುವಂತೆ ಅವನಿಗೆ ಅನಿಸತೊಡಗಿತು. ಯಾಕೆ ಏನೆಂದೇ ತಿಳಿಯದು. ಅವೇನೂ ಬೆಚ್ಚಿ ಬೀಳಿಸುವ, ಭೀತಿ ಹುಟ್ಟಿಸುವ ತರಂಗಾಂತರಗಳಲ್ಲ. ಬಹಳ ಹಿತವಾದ ಅನುಭವವೆಂದೇ ಹೇಳಬೇಕು. ಅವನ ಚದ್ದರದ ಮೇಲ್ಪದರನ್ನೂ, ಮುಖದ ಮುಂಗುರಳನ್ನೂ ಮುಟ್ಟಿಹೋದ ಹಾಗೆ. ತಕ್ಷಣ ಅವನಿಗೆ ಎಚ್ಚರಾಗುವುದು. ಇನ್ನೂ ಮುಂಜಾನೆ ನಾಲ್ಕು ಗಂಟೆ ಕೂಡ ಆಗಿರುವುದಿಲ್ಲ. ಸ್ವಲ್ಪಹೊತ್ತು ಮಗ್ಗುಲು ಬದಲಾಯಿಸಿ, ಆಚೀಚೆ ಹೊರಳಿ ಸಮಯ ದೂಡುತ್ತಾನೆ. ನಂತರ ಎದ್ದು, ಚದ್ದರನ್ನು ಹೊದ್ದುಕೊಂಡೇ ಬಾಲ್ಕನಿಗೆ ಬಂದು, ಸಿಗರೇಟು ಹಚ್ಚಿ, ಕೆಳಗಿನ ಬೀದಿಯಲ್ಲಿ ಈಗಾಗಲೆ ಸುರುವಾಗಿರುವ ಟ್ರಾಫ಼ಿಕ್ ನೋಡುತ್ತ ಅನ್ಯಮನಸ್ಕನಾಗಿಬಿಡುತ್ತಾನೆ. ತನ್ನನ್ನು ತಲಪುವ ಈ ಸ್ಪಂದನೆಗಳು ಇದೇ ಕಟ್ಟಡದಿಂದ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇವನ್ನು ಕಳಿಸುತ್ತಿರುವವರು ಯಾರು, ಯಾತಕ್ಕೆ ಕಳಿಸುತ್ತಿದ್ದಾರೆ? ತನ್ನ ನಿದ್ದೆಯನ್ನು ಕಬಳಿಸುತ್ತಿರುವ ತರಂಗಾಂತರದ ಮೂಲವನ್ನು ಪತ್ತೆ ಹಚ್ಚಲೇಬೇಕೆಂದು ಅವನು ನಿರ್ಧರಿಸಿದ.

ಒಂದು ದಿನ ಅನಿರೀಕ್ಷಿತವಾಗಿ ಕಾಲೇಜಿಗೆ ಒದಗಿದ ರಜೆಯನ್ನು ಉಪಯೋಗಿಸಿಕೊಂಡು ಮನೆಯಿಂದ ಹೊರಬಿದ್ದು ಬೇಸ್ ಮೆಂಟ್ ಗೆ ಬಂದ. ಮೆಟ್ಟಲುಗಳು ಆರಂಭವಾಗುವುದೂ, ಲಿಫ಼್ಟ್ ಮೇಲೇರುವುದೂ ಅಲ್ಲಿಂದಲೇ. ಕೈಲಾಸಕ್ಕೆ ಬರಬೇಕಾದವರೂ, ಅಲ್ಲಿಂದ ಹೊರಬೀಳಬೇಕಾದವರೂ ಈ ಹಾದಿ ಯಾಗಿಯೇ ಹೋಗಬೇಕು. ಫ಼ೈರ್ ಎಕ್ಸಿಟ್ ಇಲ್ಲದ ಈ ವಿನ್ಯಾಸ ಅಂತಾ ರಾಷ್ಟ್ರೀಯ ಕಾನೂನು ರೀತ್ಯ ಸರಿಯಾದುದಲ್ಲ. ಆದರೆ ವಿಫುಲ ಜನಸಂಖ್ಯೆಯ ದೇಶಗಳಿಗೆ ಇಂಥ ಕಾನೂನುಗಳೊಂದೂ ಅನ್ವಯಿಸುವುದಿಲ್ಲ. ಪ್ರತಿಯೊಂದು ಅಂತಸ್ತಿನಲ್ಲೂ ಫ಼ೈರ್ ಎಂದು ಬರೆದು ಅದರ ಪಕ್ಕದಲ್ಲೊಂದು ಹೊಗೆಯಂತ್ರವನ್ನೂ, ಕೆಳಗೆ ಬಕೆಟ್ ನಲ್ಲಿ ಮರಳನ್ನೂ ಇರಿಸಲಾಗಿದೆ. ಈ ಮರಳು ಸಿಗರೇಟು ನಂದಿಸುವುದಕ್ಕೆಂದು ತಿಳಿದು ಕೆಲವರು ತುಂಡುಗಳನ್ನು ಅದರಲ್ಲಿ ಬಿಸಾಡುತ್ತಾರೆ. ವಿನಯಚಂದ್ರ ಬೇಸ್ ಮೆಂಟ್ ನಲ್ಲಿದ್ದ ಒಂದೇ ಒಂದು ಮುರುಕಲು ಕುರ್ಚಿಯ ಮೇಲೆ ಕುಳಿತುಕೊಂಡ. ಅದಕ್ಕಿರುವುದು ಒಂದೇ ಕೈ. ಆ ಕೈಯ ಮೇಲೇ ತೋಳಿರಿಸಿ ಇದ್ದಲ್ಲಿಗೆ ಸಮಾಧಾನಪಟ್ಟುಕೊಂಡ. ಜೇಬಿನಲ್ಲಿ ಎರಡು ಪ್ಯಾಕೇಟು ಸಿಗರೇಟು, ಬೆಂಕಿಪೊಟ್ಟಣ, ಮಡಿಲಲ್ಲಿ ಪುಸ್ತಕ. ರಟ್ಟುಹಾಕಿ ಅಲ್ಲಲ್ಲಿ ನಾಯಿಕಿವಿ ಯಂತೆ ಮೂತಿಮುರಿದಿದ್ದ ಅದು ಕತೆಯಲ್ಲ. ಕಾದಂಬರಿಯಲ್ಲ. ಅಶ್ಲೀಲ ಸಾಹಿತ್ಯವಲ್ಲ. ಇಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲ. ಇಲೆಕ್ಟ್ರಾನಿಕ್ ಯುಗಕ್ಕಿಂತಲೂ ಎಷ್ಟೋ ವರ್ಷಗಳ ಮೊದಲು ಅಚ್ಚಾಗಿದ್ದ ಆ ಪುಸ್ತಕವನ್ನು ಫುಟ್ ಪಾತ್ ನ ಪುಸ್ತಕದಂಗಡಿಯಿಂದ ಅವನು ಕೊಂಡುಕೊಂಡಿದ್ದ. ಅದಕ್ಕೆ ತೆತ್ತುದು ಕೇವಲ ಒಂದು ರೂಪಾಯಿ. ಫ಼ುಟ್ ಪಾತ್ ನ ಮೇಲೆ ಪುಸ್ತಕಗಳನ್ನು ಬೇರೆಬೇರೆ ದೂಪೆಹಾಕಿ ಅವುಗಳ ಬೆಲೆಯನ್ನು ಫ಼ಲಕದಲ್ಲಿ ಬರೆದು ಚುಚ್ಚಲಾಗಿತ್ತು. ಒಂದು ರೂಪಾಯಿಗೆ ಒಂದು ಎಕ್ಸ್ಪ್ರೆಸ್ಸೋ ಕಾಫ಼ಿ ಕೂಡ ಸಿಗಲಾರದ ಸಂದರ್ಭದಲ್ಲಿ ಪುಸ್ತಕ ಸಿಗುತ್ತದೆಯೆಂದು ತಿಳಿದು ಅಚ್ಚರಿಯಿಂದ ಅವನು ಒಂದನ್ನು ಎತ್ತಿಕೊಂಡಿದ್ದ. ಆಮೇಲೆ ಅದನ್ನು ತನ್ನ ಕೋಣೆಯಲ್ಲೆಲ್ಲೊ ಒಗೆದವನು ಇವತ್ತು ಏನೆಂದು ನೋಡುವ ಕುತೂಹಲದಿಂದ ತನ್ನ ಜತೆಗೆ ಒಯ್ದು ತಂದಿದ್ದ.

ಪುಸ್ತಕದ ಹೆಸರು ಹೆರಾಕ್ಲಿಟಸ್. ಸುಮಾರು ನೂರು ಪುಟಗಳಷ್ಟಿತ್ತು. ಒಂದು ಪುಟಕ್ಕೆ ಒಂದು ಫ಼ೈಸಾ ಅನ್ನೋದು ಎಂಥ ದಡ್ಡನೂ ಮಾಡಬಹುದಾದ ಲೆಕ್ಕ. ಪುಸ್ತಕದಂಗಡಿಯವನು ಇದನ್ನು ಒಂದು ರೂಪಾಯಿಗೆ ಮಾರಬೇಕಾದರೆ ಅವನಿಗದು ಎಂಟಾ‌ಅಣೆಗೆ ಸಿಕ್ಕಿರಬೇಕು. ಇಷ್ಟು ಚಿಲ್ಲರೆ ಕಾಸಿಗೆ ಇದನ್ನು ಅಂಗಡಿಯವನಿಗೆ ಮಾರಿದ ಪುಸ್ತಕಪ್ರಿಯ ಯಾರಿರಬಹುದೆಂದು ನೋಡಿದ. ಮೊದಲ ಪುಟದ ಮೇಲೆಯೇ ನಾಲ್ಕಾರು ಹೆಸರುಗಳು. ಒಂದರಮೇಲೊಂದರಂತೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಮಸಿಯಲ್ಲಿ ಬರೆದು ಹೊಡೆದುಹಾಕಲಾಗಿತ್ತು. ಇದೊಂದು ಪಠ್ಯಪುಸ್ತಕವಿದ್ದಿರಬೇಕು ಎಂದು ಅವನ ಶೆರ್ಲಾಕ್ ಹೋಮ್ಸ್ ಬುದ್ಧಿ ತರ್ಕಿಸಿತು. ಹೆರಾಕ್ಲಿಟಸ್ ಎಂಬ ತಲೆಬರಹದ ಕೆಳಗೆ ದೊಡ್ಡ ಅಕ್ಷರಗಳಲ್ಲಿ “A LOOF” ಅಂತ ಯಾರೋ ಬರೆದಿದ್ದರು. ಏನಿದರ ಅರ್ಥ ಎಂದು ಚಿಂತಿಸಿದ. ಹೆರಾಕ್ಲಿಟಸ್ ಒಬ್ಬ ಗ್ರೀಕ್ ಚಿಂತಕ, ಸಾಕ್ರೆಟೀಸ್ ಗಿಂತಲೂ ಪೂರ್ವದವ ಎಂದು ಮುನ್ನುಡಿಯಿಂದ ಗೊತ್ತಾಯಿತು. ಪಾಶ್ಚಾತ್ಯ ತತ್ವಜ್ಞಾನವನ್ನು ಸಾಕ್ರಟೇಸ್ ಪೂರ್ವವೆಂತಲೂ ಸಾಕ್ರಟೀಸ್ ಉತ್ತರವೆಂತಲೂ ಎರಡಾಗಿ ವಿಭಜಿಸುವುದು ಪದ್ಧತಿಯಂತೆ. ಸಾಕ್ರೆಟೀಸ್ ಪೂರ್ವದ ಚಿಂತನೆಯ ಪ್ರಕಾರ ಬುದ್ಧಿ ಮತ್ತು ಭಾವಗಳ ನಡುವೆ, ಚಿಂತನೆ ಮತ್ತು ಅನುಭವಗಳ ನಡುವೆ ಭಿನ್ನತೆಯಿಲ್ಲವಂತೆ. ಹೆರಾಕ್ಲಿಟಸ್ ಇಂಥ ಜೀವನದರ್ಶನದ ಪ್ರತಿನಿಧಿ. ಆದರೆ ಅವನ ವಿಚಾರಗಳಿಂದು ನಮಗೆ ದೊರಕುವುದು ಕೇವಲ ಬಿಡಿಬಿಡಿ ವಾಕ್ಯಗಳಲ್ಲಿ ಮಾತ್ರ. ಹೀಗೆಲ್ಲ ಇತ್ತು. ಎಂದರೆ ಆತ ಸ್ವಭಾವದಲ್ಲಿ ತುಸು A LOOF, ಅನ್ಯಮನಸ್ಕ ಇದ್ದಿರಬಹುದೆ? ಹಾಗಿದ್ದರೆ A ಮತ್ತು LOOF ಅನ್ನೋದನ್ನ ಬಿಡಿಸಿ ಬರೆದುದು ಯಾತಕ್ಕೆ? LOOF ಅನ್ನೋ ಒಂದು ಪದ ಇಂಗ್ಲಿಷಿನಲ್ಲಿದೆಯೆ? ಜತೆಯಲ್ಲಿ ನಿಘಂಟು ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸಿ, ಆ ಚಿಂತನೆಯನ್ನು ಅಲ್ಲಿಗೆ ಬಿಟ್ಟು ಆ ಮಹಾಶಯ ಹೇಳಿದ್ದಾದರೂ ಏನು ನೋಡೋಣವೆಂದು ಪುಸ್ತಕವನ್ನು ತೆರೆದ.

ಹೆರಾಕ್ಲಿಟಸ್ : “ಒಂದೇ ನದಿಯಲ್ಲಿ ಎರಡು ಸಲ ಸ್ನಾನ ಮಾಡುವಂತಿಲ್ಲ. ”

ಟಿಪ್ಪಣಿ : ಯಾಕೆಂದರೆ ನದೀ ನೀರು ಯಾವಾಗಲೂ ಹರಿಯುತ್ತಲೇ ಇರುತ್ತದೆ. ಹರಿಯದೇ ಇದ್ದರೆ ಅದು ನದಿಯಲ್ಲ. ನದೀ ನೀರು ಕ್ಷಣಕ್ಷಣಕ್ಕೂ ಬದಲಾಗುತ್ತಿರೋದರಿಂದ ಅದರಲ್ಲಿ ಎರಡು ಬಾರಿ ಇಳಿಯುವಂತಿಲ್ಲ. ಪ್ರತಿಯೊಂದು ಬಾರಿ ಇಳಿದಾಗಲೂ ನದಿ ಹೊಸತಾಗುತ್ತಲೆ ಇರುತ್ತದೆ. ಟಿಪ್ಪಣಿಕಾರನು ಮುಂದರಿಸುತ್ತ ಬದಕಿನ ನಿರಂತರ ಬದಲಾವಣೆಗಳನ್ನು ಗುರುತಿಸಿದ ದಾರ್ಶನಿಕ ಹೆರಾಕ್ಲಿಟಸ್ ಯಾವುದೂ ಇದ್ದ ಹಾಗೇ ಇರುವುದಿಲ್ಲ.ಗಿಡ ಬೆಳೆದು ಮರವಾಗುತ್ತದೆ; ಎಲೆಗಳು ಹಣ್ಣಾಗುತ್ತವೆ, ಉದುರುತ್ತವೆ. ಕಾಲಗತಿಯ ಅಂಗವಾಗಿರುವ ಮನುಷ್ಯನಿಗೆ ಮಾತ್ರ ಇದು ದೈನಂದಿನ ಅನುಭವ ವಾಗಿದ್ದರೂ ಯಾವುದೇ ಕ್ಷಣದಲ್ಲಿ ಗೋಚರಕ್ಕೆ ಬರುವುದಿಲ್ಲ. ಕ್ಷಣವೆಂದರೆ ಕ್ಷಣಿಕೆ. ಹೆರಾಕ್ಲಿಟಸ್ ನ ದರ್ಶನದಲ್ಲಿ ಚಲನೆಯೆನ್ನುವ ಪರಿಕಲ್ಪನೆ ಪ್ರಧಾನ ಪಾತ್ರವನ್ನು ವಹಿಸುತ್ತದೆ. ವಸ್ತುಗಳು ಪರಮಾಣುಗಳಿಂದ ರಚಿಸಲ್ಪಟ್ಟಿವೆ ಯೆಂದೂ, ಪ್ರತಿಯೊಂದು ಪರಮಾಣುವಿನೊಳಗೂ ಸದಾಕಾಲವೂ ಚಲಿಸುವ ಘಟಿಕಗಳಿವೆಯೆಂದೂ ಆಧುನಿಕ ಭೌತಶಾಸ್ತ್ರ ತೋರಿಸಿಕೊಟ್ಟಿದೆಯೆನ್ನುವುದನ್ನು ಗಮನಿಸಿದರೆ, ಹೆರಾಕ್ಲಿಟಸ್ ನ ಮಹತ್ವ ಅರಿವಾಗುತ್ತದೆ.

ಹೆರಾಕ್ಲಿಟಸ್ : “ಚಿನ್ನ ಹುಡುಕಿ ಹೋದವರು ಬಹಳಷ್ಟು ಮಣ್ಣು ಆಗೆಯುತ್ತಾರೆ. ದೊರಕುವ ಚಿನ್ನ ಅತ್ಯಲ್ಪ.”

ಟಿಪ್ಪಣಿ : “ಹತ್ತೊಂಬತ್ತನೆ ಶತಮಾನದ ಗೋಲ್ಡ್ ರಶ್ ನೆನಪು ಮಾಡಿಕೊಂಡರೆ ಹೆರಾಕಿ ಟಸನ ಮಾತು ತಟ್ಟನೆ ಅರ್ಥವಾಗುತ್ತದೆ. ತನ್ನ ದಾರ್ಶನಿಕ ದೃಷ್ಟಿಯಲ್ಲಿ ಹೆರಾಕ್ಲಿಟಸ್ ಇದನ್ನು ನೋಡಿದನೆಂದೇ ಹೇಳಬೇಕಾಗುತ್ತದೆ. ಹೆರಾಕ್ಲಿಟಸ್ ಹುಟ್ಟಿದ ಗ್ರೀಸ್ ದೇಶದಿಂದ ಅನೇಕ ಸಹಸ್ರ ಕಿಲೋ ಮೀಟರು ದೂರದ ಕ್ಯಾಲಿಫೋರ್ನಿಯಾ ದಲ್ಲಿ, ಹಾಗೂ ಅನೇಕ ನೂರು ವರ್ಷಗಳ ನಂತರ ಈ ಘಟನೆ ಸಂಭವಿಸಿತೆನ್ನುವುದನ್ನು ಮರೆಯದಿರಿ. ಕ್ಯಾಲಿಫೋರ್ನಿಯಾದಲ್ಲಿ ಚಿನ್ನ ಸಿಗುತ್ತದೆನ್ನುವ ಸುದ್ದಿ ದೊರಕಿದೊಡನೆಯೆ, ವೈದ್ಯರು, ರೋಗಿಗಳು, ವಕೀಲರು, ಅಪರಾಧಿಗಳು, ಸಂತರು, ಸೂಳೆಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಬಡಗಿಗಳು, ಕ್ಷೌರಿಕರು, ಕಮ್ಮಾರರು, ಕುಂಬಾರರು, ಉದ್ಯೋಗಿಗಳು, ನಿರುದ್ಯೋಗಿಗಳು ಎನ್ನುವ ಭೇದವಿಲ್ಲದೆ ಎಲ್ಲರೂ ಚೀಲ ಹೆಗಲಿಗೇರಿಸಿಕೊಂಡು ಅತ್ತಕಡೆ ತೆರಳಿದ್ದೇ. ಇಡೀ ಕುಟುಂಬಗಳು, ಗ್ರಾಮಗಳು, ಸಂಸ್ಥಾನಗಳು ಕೆಲಿಫೋರ್ನಿಯಾಗೆ ಬಂದಿಳಿದುವು. ಅಂತೆಯೇ ಕಳ್ಳರೂ, ಕಾಕರೂ. ಇವರಲ್ಲಿ ಎಷ್ಟು ಮಂದಿಗೆ ಚಿನ್ನ ದೊರಕಿತು, ಎಷ್ಟು ಮಂದಿ ಶ್ರೀಮಂತರಾದರು ಎನ್ನುವ ಖಚಿತ ವಿವರಗಳು ಅಲಭ್ಯವಾದರೂ, ಅನೇಕ ಜನರು ಕಾಲೆರಾ ಮುಂತಾದ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆನ್ನುವುದೂ, ಇನ್ನೆಷ್ಟೋ ಮಂದಿ ನಿರ್ಗತಿಕರಾಗಿ ಕೆಲಸ ಹುಡುಕುತ್ತ ಹೊರಟರೆನ್ನುವುದೂ ನಮಗೆ ಗೊತ್ತಿದೆ, ಇತ್ಯಾದಿ ಇತ್ಯಾದಿ. ಟಿಪ್ಪಣಿಕಾರನು ಮುಂದರಿಯುತ್ತ – ಇದ್ದಲಿ ಅಥವಾ ವಜ್ರದಂತೆ ಗಟ್ಟಿಗಳಲ್ಲಿ ಚಿನ್ನ ದೊರೆಯುತ್ತದೆಯೆಂದು ಜನಸಾಮಾನ್ಯರಲ್ಲೊಂದು ತಪ್ಪು ನಂಬಿಕೆಯಿದೆ. ಚಿನ್ನ ದೊರಕುವುದು ಮಣ್ಣು ಮಿಶ್ರಿತ ಅದಿರಿನ ರೂಪದಲ್ಲಿ. ಅದು ಬಹು ಸೂಕ್ಷ್ಮವಾಗಿದ್ದು ಬರಿಗಣ್ಣಿಗೆ ಕಾಣಿಸದೇ ಇರಬಹುದು. ಹಾಗೂ ಚಿನ್ನದ ಅದಿರು ತಾಮ್ರ, ಸೀಸ, ಸತುವಿನಂಥ ಇತರ ಖನಿಜ ವಸ್ತುಗಳೊಂದಿಗೆ ಬೆರೆತುಕೊಂಡಿರುವ ಸಾಧ್ಯತೆಯಿದೆ. ಇವುಗಳಿಂದ ಚಿನ್ನವನ್ನು ಪ್ರತ್ಯೇಕಿಸುವುದು ಒಂದು ದೊಡ್ಡ ಶಾಸ್ತ್ರೀಯ ಕೆಲಸ. ಚಿನ್ನದ ಬೆಲೆ ಅಪಾರವೆನಿಸುವುದಕ್ಕೆ ಒಂದು ಕಾರಣ ಇದೇ. ಆದ್ದರಿಂದ ಚಿನ್ನವು ಶ್ರೀಮಂತರ ಮತ್ತು ಸರಕಾರದ ಲೋಹ.

ಹೆರಾಕ್ಲಿಟಸ್ : “ಸ್ವಂತದ ವಿರೋಧಗಳು ಸ್ವಂತದೊಳಗೆ ಸಮ್ಮಿಳಿಸುವುದೂ ಸಾಧ್ಯ. ಬೆನ್ನಿನ ಬಾಗುವಿಕೆ ಯಲ್ಲೊಂದು ಮೇಳವಿದೆ, ಬಾಗಿದ ಬಿಲ್ಲಿನಲ್ಲಿ ಮತ್ತು ಶ್ರುತಿಪಡಿಸಿದ ತಂತಿಯಲ್ಲಿ ಇರುವಂತೆಯೇ.”

ಟಿಪ್ಪಣಿ: ನೇರವಾಗಿರುವುದು ಬೆನ್ನಿನ ಗುಣ. ಬಾಗುವಿಕೆಯೆಂದರೆ ಅದಕ್ಕೆ ವಿರುದ್ಧವಾದುದು. ಆದ್ದರಿಂದ ಬೆನ್ನಿನ ಬಾಗುವಿಕೆ ಸ್ವಂತದ ವಿರೋಧ. ಹಾಗಿದ್ದರೂ ಅದರ ಸೌಂದರ್ಯವನ್ನು ಅಲ್ಲಗಳೆಯುವಂತಿಲ್ಲ. (ಇಲ್ಲಿ ಹೆರಾಕ್ಲಟಸ್ ವಯೋವೃದ್ಧರ ಬೆನ್ನಿನ ಬಗ್ಗೆ ಹೇಳುತ್ತಿಲ್ಲವೆನ್ನುವುದು ಮುಖ್ಯ.) ಸುಪ್ರಸಿದ್ಧ ತೈಲಚಿತ್ರಕಾರರ ಕೃತಿಗಳನ್ನು ಗಮನಿಸಿ-ಟೆಶಿಯನ್, ಇಂಗ್ರೆಸ್, ರೀನ್ಟಾ. ಈಗಷ್ಟೆ ಮಿಂದ ಹೆಣ್ಣು ಟವೆಲಿನಿಂದ ಮೈಯೊರೆಸಿಕೊಳ್ಳುತ್ತಿದ್ದಾಳೆ. ಬಲಗೈ ಎಡಗಾಲನ್ನು ತಲುಪಿದೆ. ತೊಡೆಯಿಂದ ಕೊರಳುತನಕ ಮುಂದಕ್ಕೆ ಬಾಗಿದ ಮೈಯ ಒಟ್ಟಾರೆ ಭಂಗಿ ಜೀವಸತ್ವ ಮತ್ತು ಸೌಂದರ್ಯಕ್ಕೆ ಏಕಕಾಲದಲ್ಲಿ ಸಂಕೇತವಾಗಿದೆಯಲ್ಲವೆ? ಅದೇ ರೀತಿ ಹುರಿಮಾಡಿದ ಬಿಲ್ಲು ಹಾಗೂ ಶೃತಿಮಾಡಿದ ತಂತಿ. ಹೀಗೆ ಸ್ವಂತದ ವಿರೋಧದಲ್ಲೆ ಮೇಳ. ಎನರ್ಜೀ….

ಹೆರಾಕ್ಲಿಟಸ್: “ನಿದ್ದೆ ತೂಗುವವರೂ ಸಹಾ ಜಗತ್ತಿನ ಆಗುಹೋಗುಗಳಲ್ಲಿ ಸಹಭಾಗಿಗಳು.”

ಟಿಪ್ಪಣಿ : ಎಂದರೆ ಹೆರಾಕ್ಲಿಟಸ್ ಪ್ರತಿನಿಧಿಸುವ ಲೋಕದರ್ಶನ ಎಷ್ಟು ವಿಶಾಲವೂ ಉದಾರವೂ ಅದುದು ಎನ್ನುವುದನ್ನು ಬೇರೆ ಹೇಳಬೇಕಿಲ್ಲ! ನಿಂತು ನೋಡುವವರೂ ಕೂಡ ತಮ್ಮ ಸೇವೆ ಸಲ್ಲಿಸುವವರೇ. ನಿರಂತರ ಚಲನೆಯಲ್ಲಿ ನಂಬಿಕೆಯಿರುವ ಹೆರಾಕ್ಲಿಟಸ್ ಗೆ ಎಚ್ಚರವೂ ಒಂದೇ, ನಿದ್ರೆಯೂ ಒಂದೇ. ವಿರೋಧಗಳನ್ನು ಇಲ್ಲಗೊಳಿಸುವ ಈತನ ಫ಼ಿಲಾಸಫ಼ಿ ಯಾವುದನ್ನೂ ನಿರಾಕರಿಸುವುದಿಲ್ಲ. ಸಕಲವೂ ವಿಶ್ವದ ವಿದ್ಯಮಾನದಲ್ಲಿ ಪಾಲ್ಗೊಳ್ಳುವುವು. ಈ ಪಾಲ್ಗೊಳ್ಳುವಿಕೆಯೇ ಅವಕ್ಕೆ ಸಮರ್ಥನೆ, ಅವುಗಳ ಅಸ್ತಿತ್ವದ ಋಜುತ್ವ, ಇತ್ಯಾದಿ ಇತ್ಯಾದಿ.

ಎಂದರೆ ತಾನೀಗ ಇರುವಂಥ ಮುಕ್ಕಾಲು ಸ್ಥಿತಿ. ಹೆರಾಕ್ಲಿಟಸನನ್ನು ಓದುತ್ತಲೇ ಒಂದು ಕಣ್ಣು ಬೇಸ್ ಮೆಂಟ್ ಮೂಲಕ ಬಂದು ಹೋಗುವವರ ಮೇಲೂ ಇದೆ. ಹಾಗೂ ಹೆವಿ ಬ್ರೇಕ್ ಫ಼ಾಸ್ಟ್ – ಇಡ್ಡಲಿ, ಖಾರದ ಪುಡಿ, ಅದನ್ನು ಕಲಸಿದ ಎಣ್ಣೆ ಇತ್ಯಾದಿಗಳಿಂದಾಗಿಯೂ, ಕೈಮುರಿದ ಕುರ್ಚಿಯಲ್ಲಿ ಕೂತುಕೊಳ್ಳಬೇಕಾಗಿರುವ ಪರಿಸ್ಥಿತಿಯಿಂದಾಗಿಯೂ ಆಕ್ರಮಿಸಿ ಬರುತ್ತಿರುವ ಜೊಂಪು. ಹೀಗೆ ಮೂರು ಹಂತಗಳನ್ನು ನಿಭಾಯಿಸುತ್ತಿರುವ ಕಾರಣ ಇದು ಮುಕ್ಕಾಲು ಸ್ಥಿತಿ. ಈ ಒಂದೊಂದು ಹಂತವೂ ಇನ್ನುಳಿದ ಹಂತಗಳಿಗೆ ವಿರುದ್ಧ. ಪುಸ್ತಕ ಓದುತ್ತ ನಿದ್ರಿಸುವಂತಿಲ್ಲ, ಬೇರೆ ಕಡೆ ಗಮನ ಹರಿಸುವಂತೆಯೂ ಇಲ್ಲ- ಬೇರೆ ಕಡೆ ಗಮನ ಹರಿಸುತ್ತ ನಿದ್ರಿಸುವಂತಿಲ್ಲ. ಪುಸ್ತಕ ಓದುವಂತಿಲ್ಲ, ಇತ್ಯಾದಿ ಇತ್ಯಾದಿ. ಹೀಗಿದ್ದೂ, ಹೆರಾಕ್ಲಿಟಸ್ ಹೇಳುವಂತೆ ಒಂದು ರೀತಿಯ ಸಾಂಗತ್ಯ ಇವುಗಳ ಮಧ್ಯೆ ಅಥವಾ ಇವುಗಳಿಂದಾಗಿ ಸದ್ಯ ಉಂಟಾಗಿ ತಾನೊಂದು ಸಮತೋಲನಾವಸ್ಥೆ ಯನ್ನು ತಲಪುತ್ತಿದ್ದೇನೆ ಎಂದು ವಿನಯಚಂದ್ರನಿಗೆ ಅನಿಸಿತು.

ಈ ಖುಶಿ ಹೆಚ್ಚು ಕಾಲ ಉಳಿಯಲಿಲ್ಲ. ಧಡ್ ಎಂದು ಏನೋ ತಲೆ ಮೇಲೇ ಬಿದ್ದಂತೆನಿಸಿ ಪೂರ್ತಿಯಾಗಿ ಎಚ್ಚರಗೊಂಡ. ಏನೂ ಬಿದ್ದಿರಲಿಲ್ಲ. ಲಿಫ಼್ಟ್ ಬಂದು ನಿಂತಿತ್ತು. ಅಷ್ಟೇ ಕರ್ಕಶವಾಗಿ ಅದರ ಬಾಗಿಲು ತೆರೆದು ಜನ ಹೊರಬಂದರು. ತಟ್ಟನೆ ಅವನ ಮೈಯಲ್ಲಿ ಮಿಂಚು ಹರಿದಂಥ ತರಂಗಾಂತರದ ಅನುಭವ. ಲಿಫ಼್ಟಿನಿಂದ ಹೊರಬಿದ್ದವರ ನಡುವೆ ಅತ್ಯಂತ ಗಾಂಭೀರ್ಯದಿಂದ ನಡೆದುಬರುತ್ತಿರುವ ಗೋಧಿಬಣ್ಣದ ಯುವತಿಯೊಬ್ಬಳನ್ನು ನೋಡಿದ. ಇವಳನ್ನು ನೋಡಿದ ಮೇಲೆ ತನ್ನ ಮೈಮೇಲೆ ಮಿಂಚು ಹರಿಯಿತೇ ಅಥವಾ ಮಿಂಚು ಹರಿದದ್ದರಿಂದ ಇವಳು ಪ್ರತ್ಯಕ್ಷಳಾದಳೇ ಎಂದು ತುಸು ಗೊಂದಲದಲ್ಲಿ ಬಿದ್ದ. ಯಾವ ಸುಖದ ಅನುಭವವೂ ಹೆಚ್ಚು ಹೊತ್ತು ಉಳಿಯುವುದಿಲ್ಲ ಎನ್ನುವುದನ್ನು ಸಾಬೀತುಗೊಳಿಸುವವಳಂತೆ ಅವಳು ಕೆಳಗಿಳಿದು ಹೊರಟೇಹೋದಳು. ವಿನಯಚಂದ್ರ ಹೋಶಿಯಾರಿಗೆ ಬರುವುದು ತಡವಾಗಿ ಹೋಯಿತು. ಸಂದೇಹವಿಲ್ಲ. ತನ್ನ ಅಸ್ವಸ್ಥತೆಯ ಮೂಲ ಈಕೆಯೇ ಎಂದುಕೊಂಡು ಆತ ಹೆರಾಕ್ಲಿಟಸನನ್ನು ಈಚೆಗೆ ಬಿಸುಟು ಬೇಸ್ ಮೆಂಟ್ ಶಾಪುಗಳನ್ನು ಒಂದನ್ನೂ ಬಿಡದೆ ಹುಡುಕಿದ. ಗೋಧಿಬಣ್ಣದ ಹುಡುಗಿ ಎಲ್ಲೂ ಕಾಣಿಸದೆ ನಿರಾಶೆಯಾಯಿತು. ಹತ್ತಿರದ ಬಸ್ ಸ್ಟಾಪಿನಲ್ಲಿ ಎಡತಾಕಿದ. ಮಾರ್ಗದ ಉದ್ದಕ್ಕೂ ಅಷ್ಟು ದೂರ ಆಚಿಂದೀಚೆಗೆ ತಿರುಗಾಡಿದ. ಹತ್ತಿರದ ಬ್ಯಾಂಕು, ಪೋಸ್ಟಾಫ಼ೀಸುಗಳನ್ನು ಹೊಕ್ಕು ಹೊರಟ. ಸ್ಕೂಟರ್ ಇರೋದು ಯಾತಕ್ಕೆ ಎಂದುಕೊಂಡು ಅದನ್ನು ಹೊರತೆಗೆದು ಹತ್ತಿರದ ಜಾಗಗಳಲ್ಲೆಲ್ಲ ಎರಡೆರಡು ರೌಂಡ್ ಹೊಡೆದುಬಂದ. ಒಂದೇ ಒಂದು ಚಾನ್ಸು : ಆಕೆಯೂ ಕೈಲಾಸದ ನಿವಾಸಿಯೇ ಆಗಿದ್ದರೆ! ಹೊರಗಿನ ಡಾಬಾ ಒಂದರಲ್ಲಿ ಗಬಗಬನೆ ಟೀ ಕುಡಿದು ವಿನಯಚಂದ್ರ ಮತ್ತೆ ಯಥಾಸ್ಥಾನಕ್ಕೆ ಮರಳಿದ. ಅವನ ಕುರ್ಚಿ ಸದ್ಯ ಅಲ್ಲೇ ಇತ್ತು. ದೇವರು ದೊಡ್ಡವ. ಇಲ್ಲದಿದ್ದರೆ ಅಷ್ಟೂ ಹೊತ್ತೂ ನಿಂತೇ ಇರಬೇಕಾಗುತ್ತಿತ್ತು. ಇದರ ಒಂದು ಕೈ ಇಲ್ಲದ್ದೂ ಒಳಿತೇ ಆಯಿತು. ಯಾಕಂದರೆ, ಕುರ್ಚಿ ಸರಿಯಿರುತ್ತಿದ್ದರೆ ಅದನ್ನು ಖಂಡಿತವಾಗಿ ಯಾರಾದರೊ ಹೊತ್ತುಕೊಂಡು ಹೋಗಿ ಸದುಪಯೋಗಪಡಿಸುತ್ತಿದ್ದರು. ಆಶ್ಚರ್ಯವೆಂದರೆ, ಅಲ್ಲಿ ಒಗೆದಿದ್ದ ಹೆರಾಕ್ಲಿಟಸ್ ಕೂಡ ಹಾಗೆಯೇ ಬಿದ್ದುಕೊಂಡಿತ್ತು. ಅಶೋಕನ ರಾಜ್ಯದಲ್ಲಿರುವಂತೆ ಜನ ಒಳ್ಳೆಯವರಾಗುತ್ತಿದ್ದಾರೆ, ಕಳ್ಳಕಾಕರ ಭಯವಿಲ್ಲಾ, ಜನರು ಕದ ತೆಗೆದುಕೊಂಡೇ ಮಲಗುತ್ತಿದ್ದರು ಎಂದು ಮೊದಲಾಗಿ. ಪುಸ್ತಕವನ್ನು ಕೈಗೆತ್ತಿಕೊಂಡು ಕಡ್ಡಿಹಾಕಿ ಕಣಿ ಕೇಳುವವನಂತೆ ಮಧ್ಯದಲ್ಲಿ ಬಿಡಿಸಿದ. ಈ ಪುಟದಲ್ಲಿ ಗೋಧಿಬಣ್ಣದ ಹುಡುಗಿಯ ಸುಳಿವು ಸಿಗಬೇಕು, ಇಲ್ಲದಿದ್ದರ ಇಲ್ಲ.

ಹೆರಾಕ್ಲಿಟಸ್ : “ಹೋದ ದಾರಿಯೆ ಬರುವುದಕ್ಕೂ.”

ಎಂದರೆ, ಆಕೆ ವಾಪಸು ಬರುವ ಸಾಧ್ಯತೆಯಿದೆ ಎಂದಾಯಿತು ನಿಜ. ಈ ಕಡೆಯಿಂದ ಹೋದವರು ಈ ಕಡೆಯಿಂದಲೇ ಬರಬೇಕು. ಕಾರಣ ಬೇರೆ ದಾರಿಯೇ ಇಲ್ಲ. ಮೇಲಕ್ಕೇರಲು ಉಪಯೋಗಿಸುವ ಮೆಟ್ಟಲು ಕೆಳಗಿಳಿಯುವುದಕ್ಕೂ, ಅದೇ ರೀತಿ ಲಿಫ಼್ಟ್ ಕೂಡ. ಥ್ಯಾಂಕ್ಯೂ, ಹೆರಾಕ್ಲಿಟಸ್! ಥ್ಯಾಂಕ್ಯೂ! ಅವಳು ಶಾಪಿಂಗ್ ಗೆ ಹೋಗಿದ್ದರೆ ಇನ್ನರ್ಧಗಂಟಿಯೊಳಗೆ ಬರಬೇಕು. ನೌಕರರಿಗೆ ಹೋಗಿದ್ದರೆ ಮಧ್ಯಾಹ್ನ ಬರಬಹುದು ಅಥವಾ ಸಂಜೆಗೆ. ಕೈಯಲ್ಲಿ ಶಾಪಿಂಗ್ ಬ್ಯಾಗ್ ಇತ್ತೆ? ಅಥವಾ ಲಂಚ್ ಬಾಕ್ಸ್? ಅವನು ಯಾವುದನ್ನೂ ಸ್ಪಷ್ಟವಾಗಿ ನೋಡಿರಲಿಲ್ಲ. ಸೌಂದರ್ಯದ ರೀತಿಯೇ ಹಾಗೆ. ಅದು ಸಮಗ್ರವಾಗಿ ಬಂದು ಬಡಿಯುತ್ತದೇ ಹೊರತು ಬಿಡಿಯಾಗಿ ಅಲ್ಲ. ಸೌಂದರ್ಯ ಪೂರ್ತಿಯಾಗಿ ಎಂದೂ ಪರಿಚಯವಾಗುವುದಿಲ್ಲ, ಅಪರಿಚಿತತ್ವವೇ ಆದರ ಆಕರ್ಷಣೆ.

“ಸಾರ್ ! ಸಾರ್! ” ಎಂದು ಲಿಫ಼್ಟ್ ಬಾಯ್ ಒದರತೊಡಗಿದ.

“ನಾ ಬರಲ್ಲಪ್ಪ. ಯಾರನ್ನೋ ಕಾಯಬೇಕಾಗಿದೆ. ಆಯಿಯೇ ಇದರ್.”

ಜೇಬಿನಿಂದ ಐದು ರೂಪಾಯಿ ನೋಟು ತೆಗೆದು ಅವನ ಕೈಯಲ್ಲಿಟ್ಟ.

“ಖಯಾಮತ್ ಸೆ ಖಯಾಮತ್ ಪಿಕ್ಚರು ಬಂದಿದೆ. ಚೆನ್ನಾಗಿದೆ.”

ಅವನು ಮಿಲಿಟರಿ ಸ್ಟೈಲಿನಲ್ಲಿ ಸೆಲ್ಯೂಟ್ ಹೊಡೆದು ಹಣವನ್ನು ತನ್ನ ಜೇಬಿನಲ್ಲಿಳಿಸಿ ಮರಳಿದ. ಧಡ್ ಎಂದು ಸದ್ದು ಮಾಡುತ್ತ ಲಿಫ್ಟು ಮೇಲಕ್ಕೇರಿತು. ಹಿಂದೆಯೇ ಕೇಬಲುಗಳು ಸುತ್ತುವ ಸದ್ದು, ಕ್ಷಣದ ಹಿಂದೆ ತನ್ನಲ್ಲಿದ್ದ ಹಣ ಈಗ ಲಿಫ಼್ಟ್ ಬಾಯ್ ಯ ಕಸ್ಟಡಿಯಲ್ಲಿದೆ. ಅವನು ಸಿನಿಮಾಕ್ಕೆ ಹೋಗಿ ಈ ಹಣವನ್ನು ಖರ್ಚುಮಾಡಬಹುದು. ಅಥವಾ ಪ್ರೇಯಸಿಯ ಕೈಯಲ್ಲಿರಿಸಬಹುದು. ತನ್ನ ಮಗುವಿಗೋಸ್ಕರ ಒಂದು ಗೊಂಬೆ ಕೊಳ್ಳಬಹುದು. ಒಬ್ಬರಕೈಯಿಂದ ಇನ್ನೊಬ್ಬನ ಕೈಗೆ ಹಣ ರವಾನೆಯಾಗುವುದೇ ಜೀವನದ ರಹಸ್ಯ. ಸಾಮಾಜಿಕವಾದ ಪ್ರತಿಯೊಂದು ವಹಿವಾಟೂ ಹಣದ ವಿನಿಮಯದ ಮೇಲೆ ನಿಂತಿದೆಯೆಂದು ಶಂಕರ ದೀಕ್ಷಿತ ಆಗಾಗ್ಗೆ ಹೇಳುತ್ತಾನೆ. ಆತ ಕಾರ್ಲ್ ಮಾರ್ಕ್ಸ್ ನ ಹಿಜ್ ಮಾಸ್ಟರ್ಸ್ ವಾಯ್ಸ್.

ಹೆರಾಕ್ಲಿಟಸ್ ನನ್ನು ಮತ್ತೆ ತಿರುವು ಹಾಕತೊಡಗಿದ. ತಾನೆಂದಾದರೂ ಪುಸ್ತಕವೊಂದನ್ನು ಬರೆಯೋದಾದರೆ ಈ ವಿಧದಲ್ಲಿ ಬರೆಯಬೇಕು ಎಂದುಕೊಂಡ. ಸಂಕ್ಷಿಪ್ತವಾದ ಹೇಳಿಕೆಗಳು. ಅವು ಓದುಗರ ಮರ್ಮಕ್ಕೆ ತಾಕುವಂತಿರಬೇಕು. ಹಾಗೂ ನಾಲಿಗೀ ಮ್ಯಾಲ ಕುಣೀಬೇಕು. ಅವರ ಆಪತ್ಕಾಲವಂತಿರಬೇಕು. ಹಾಗೂ ನಾಲಿಗೀ ಮ್ಯಾಲ ಕುಣೀಬೇಕು. ಅವರ ಆಪತ್ಕಾಲದಲ್ಲಿ ನೆರವಾಗಬೇಕು. ಹೀಗೆಂದು ಹೊಸ ಹೊಸ ವಾಕ್ಯಗಳನ್ನು ರಚಿಸತೊಡಗಿದ. “ಮುಖ ತೋರಿಸಿ ಬಂದವಳು ತಿಕ ತೋರಿಸಿ ಹೋದಾಳು.” ಟಿಪ್ಪಣಿ : ಕಾರಣ ಸ್ಪಷ್ಟವೇ ಇದೆ, ಇತ್ಯಾದಿ, ಇತ್ಯಾದಿ. “ಮುರುಕು ಕುರ್ಚಿಯನ್ನು ಪೋರ್ಟಿಕೋದಲ್ಲಿರಿಸು, ಒಳ್ಳೆಯ ಕುರ್ಚಿಯನ್ನು ಒಳಗಿರಿಸು” ಟಿಪ್ಪಣಿ ಸ್ಪಷ್ಟವೇ ಇದೆ. “ಗುರಿ ಸಾಧಿಸಬೇಕೆನ್ನುವವರು ದೀರ್ಘಾವಧಿ ಕಾಯಲು ತಯಾರಿರಬೇಕು” ಟಿಪ್ಪಣಿ:ಅಷ್ಟೇನೂ ಸ್ಪಷ್ಟವಿಲ್ಲ; ಆದರೂ…. ಹೀಗೆ ತೊಡಗಿರುತ್ತ ರೆಪ್ಪೆಗಳು ಭಾರವಾಗತೊಡಗಿದುವು. “ಮಲಗಿದಾಗ ಬಾರದನಿದ್ದೆ ಕೂತಾಗ ಬರಬಹುದು.” ಟಿಪ್ಪಣಿ : ಬಹುದೇನು, ಬಂದೇ ಬರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾರಾಟ
Next post ನೆಮ್ಮದಿಗೂ ಬಿಡದ….

ಸಣ್ಣ ಕತೆ

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys