ಹಬ್ಬಾ ಮಾಡ್ತಾರಪ್ಪಾ ಇವ್ರು ಹಬ್ಬಾ ಮಾಡ್ತಾರೆ
ಗಬ್ಬು ಗಬ್ಬು ನಾತಾ ಹೊಡೆಯೊ ಹಬ್ಬಾ ಮಾಡ್ತಾರೆ

ಗಂಟೆಗಟ್ಲೆ ದಿವಸಗಟ್ಲೆ ಆಯುಷ್ದಾಗೆ ವರುಷಗಟ್ಲೆ
ಪೂಜಾ ಪುನಸ್ಕಾರ್ ಮಾಡಿ ಮಾಡಿ ಕಾಲ ಕೊಲ್ತಾರೆ

ಹೂವು ಪತ್ರೀ ಹರದು ತರದು, ಗಿಡಗಳ ಕೊಂದು ಪೂಜೆಗೆಂದು
ಜೀವಕ್ಕಲ್ಲ ಶವಕ್ಕವ್ರು ಸಿಂಗಾರ್ ಮಾಡ್ತಾರೆ

ದೇವ್ರನ್ ಮೆರೆಸ್ಬೇಕಂತಾ ತಾವೇ, ದೆವ್ವಗಳಂಗೆ ಕುಣದೂ ಕುಣದೂ
ಮೈಯಾಗ ಬಂದು ವದರಾಡಿದ್ರೆ ವರಾ ಅಂತಾರೆ

ಮಂದೆ ಮಂದೆ ಜನರಾ ಮುಂದೆ, ಕಣ್ಣು ಕುಕ್ಕೋ ಹಂಗೆ ಮೆರೆದು
ಬಣ್ಣದ ಬಡಿವಾರ್ ಮಾಡಿ ದೇವ್ರ ಮೆರೆಸೇವಂತಾರೆ

ರಾತ್ರಿಯಲ್ಲಾ ನಿದ್ದೆಗೆಟ್ಟು ಹುಚ್ಚುಚ್ಚಾರಾ ಹಬ್ಬಮಾಡಿ
ದುಡಿಯೋಕಂದ್ರೆ ಮೈನೋವಂತ ಹಗಲು ನರಳ್ತಾರೆ

ವರುಷದನ್ನದ ಚಿಂತಿಯಿಲ್ದೆ ಹರಷಣ ಕೂಳು ತಿಂಡಿಗಾಗಿ
ಸಾಲಾ ಸೂಲಾ ಮಾಡಿ ತಿಂದು ರೋಗಾ ಬೀಳ್ತಾರೆ

ಮಂತ್ರಾ ಅಲ್ಲ ತಂತ್ರಾ ಅಲ್ಲ ಒಡಕಲ ಗಡಿಗೆ ನುಡಿಸೀದಂಗೆ
ಖಟಿಪಿಟಿಯಂತ ಪೂಜೀ ಮಾಡಿ ಸೋಗ್ಹಾತ್ಕಾರೆ

ಹೊಟ್ಟೆಗಾಗೇ ಮೆರೆಯೋದ್ಕಾಗೆ ಇಷ್ಟು ಎಲ್ಲ ಮಾಡಿದ್ರೂನು
ದೇವರ ಹೆಸರ ಹೇಳಿಕೊಂಡು ಹಾಳು ಮಾಡ್ತಾರೆ
*****