ಗುಲ್ಬಾಯಿ

ಗುಲ್ಬಾಯಿ

ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ ಔಷಧಾಲಯದ ಬಳಿಯಲ್ಲಿಯೇ ಇರುವದೊಂದು ಮನೆ ಹಿಡಿಯುವದು ನಮಗೆ ಅವಶ್ಯವಾಗಿತ್ತು. ಅಂಥ ಪ್ರಶಸ್ತವಾದ ಮನೆ ದೊರಕಿಲ್ಲದು. ಪ್ರಶಸ್ತವಾದದೊಂದು ಬಂಗಲೆ ಮಾತ್ರ ನಮಗೆ ಅನುಕೂಲವಾಗಿತ್ತು. ಆದರೆ ಅದರ ಯಜಮಾನನು ಅದನ್ನು ಬಾಡಿಗೆಗಾಗಿ ಯಾರಿಗೂ ಕೊಡುವದಿಲ್ಲೆಂದು ಅಲ್ಲಿಯ ಜನರು ಹೇಳಿದರು. ಯಜಮಾನರಾರೆಂದು ವಿಚಾರಮಾಡಲಾಗಿ ಕೊಲ್ಲಾಪುರದಲ್ಲಿ ರುವ ನಾನಾಸಾಹೇಬ ದೇಶಪಾಂಡೆ ಎಂಬ ವಕೀಲರ ಬಂಗಲೆ ಅದೆಂದು ತಿಳಿಯಬಂದಿತು. ನಾನಾಸಾಹೇಬರೂ ನಾನೂ ಕೂಡಿಯೇ ಮುಂಚೆ ಪುಣೆಯ ಫರ್ಗ್ಯುಸನ್ ಕಾಲೇಜದಲ್ಲಿ ಕಲಿಯುತ್ತಿದ್ದೆವು. ಅರ್ಥಾತ್ ಆ ಬಂಗಲೆಯು ನಮಗೆ ಸಿಕ್ಕೇಸಿಕ್ಕುವದೆಂದು ಹೇಳಿ ನಾವೆಲ್ಲರೂ ನಾನಾಸಾಹೇಬ ರನ್ನು ಕೇಳುವದಕ್ಕಾಗಿ ಮಿರ್ಜಿಯಿಂದ ಕೊಲ್ಲಾಪುರಕ್ಕೆ ಹೊರಟೆವು.

ಸಾಯಂಕಾಲದ ಐದು ಗಂಟೆಯ ಗಾಡಿಗೆ ಸೆಕಂಡ ಕ್ಲಾಸದ ಡಬ್ಬೆಗಳಿಲ್ಲ. ಇದ್ದ ಡಬ್ಬಿಗಳಲ್ಲಿ ಅಂದು ಅತಿಶಯವಾದ ದಟ್ಟಣೆಯು, ಗಿಬ್ರಾ ಯಲ್‌ನೆಂಬ ಟಿಕೆಟ ಕಲೆಕ್ಟರನಿಗೆ ಬಹುಪರಿಯಾಗಿ ಹೇಳಿಕೊಂಡು ನಾವು ಮೂವರು ಒಂದು ಕಂಪಾರ್ಟಮೆಂಟದಲ್ಲಿ ಆರಾಮವಾಗಿ ಕುಳಿತುಕೊಂಡೆವು. ಗಾಡಿ ಹೊರಡುವದರೊಳಗಾಗಿ ಮತ್ತೆ ಮಂದಿ ಬಂದು ತುಂಬುವದೋ ಎಂಬ ಭೀತಿಯು ನಮಗೆ ಇದ್ದೇ ಇತ್ತು. ಅನೇಕ ಜನರು ಬಂದು ನಮ್ಮ ಬಾಗಿಲವನ್ನು ತಟ್ಟಿಯೇ ತಟ್ಟಿದರು. ಆ ಜನರ ವೇಷ-ಸ್ಥಿತಿಗಳನ್ನು ಕಂಡು ಇದು ರಿರುರ್ವ ಕಂಪಾರ್ಟ” ಎಂದೂ, ಇಲ್ಲಿಯವರು ಕೆಲವರು ಏನೋ ನಿಮಿತ್ತ ವಾಗಿ ಹೊರಗೆ ಹೋಗಿರುವರು” ಎಂದೂ, ಯಾಕೆ ತೊಂದರೆ ಮಾಡಿ ಕೊಳ್ಳುತ್ತೀರಿ? ಮುಂದೆ ಎಥೇಷ್ಟ ಡಬ್ಬಿಗಳು ತೆರವೇ ಇವೆ” ಎಂದೂ ಹೇಳಿ ಅವರನ್ನು ದೂಡಿಹಾಕಿದೆವು. ಇಂಥ ಸುಸಮಯದಲ್ಲಿ ಗಾಡಿಯು ನಡೆಯಲಾ ರಂಭಿಸಿದರೆ ಬಂಗಾರದಂತಾಗುವದೆಂದು ನಾವು ಉದ್ಗಾರ ತೆಗೆಯುವಷ್ಟರಲ್ಲಿಯೇ ಸುಧಾರಿಸಿದ ವಿದುಷಿಯ ವೇಷವನ್ನು ಧರಿಸಿದವಳಾದ ತರುಣಿ ಯೋರ್ವಳು ಮತ್ತೊಬ್ಬ ಸ್ತ್ರೀಯನ್ನೂ ಮಧ್ಯಮವಯಸ್ಕನಾದ ಗೃಹಸ್ಥ ನೊಬ್ಬನನ್ನೂ ಕೂಡಿಕೊಂಡು ನೆಟ್ಟನೆ ನಾವಿದ್ದಲ್ಲಿಗೆ ಬಂದು ನಿಂತಳು.

“ಸ್ಥಳವೇ ಇಲ್ಲ, ಮಾಡುವದಿನ್ನೇನು? ಈ ಸಭ್ಯಗೃಹಸ್ಥರಿಗೆ ನಮಗೋಸ್ಕರವಾಗಿ ಕೊಂಚ ತೊಂದರೆಯಾದರೂ ಇವರು ನಮ್ಮನ್ನು ಕ್ಷಮಿಸುವರು” ಎಂದ ಆ ಯುವತಿ ಯು ಮಂದಸ್ಮಿತವಾಗಿ ನುಡಿದಳು.

ನಿಷೇಧಿಸಲಂತೂ ನಾವು ಸರ್ವಥಾ ಅಸಮರ್ಥರಾಗಿಹೋದೆವು. ನಮ್ಮ ಶ್ಯಾಮರಾಯರು ಆ ನವತರುಣಿಯನ್ನು ಕುರಿತು: “Most welcome! ( ಅವಶ್ಯವಾಗಿ ಬನ್ನಿರಿ, ಸ್ಥಳವು ನಿಮ್ಮದೇ ಇದೆ)” ಎಂದು ಹೇಳಿದವರೇ ತಾವಾಗಿ ಎದ್ದು ಆ ಲಲನಾ ಜನರಿಗೆ ಒಳಗೆ ಬರಲನುವಾಗುವಂತೆ ಕಂಪಾರ್ಟಮೆಂಟದ ಬಾಗಿಲನ್ನು ತೆರೆದಿಟ್ಟರು. ಆ ತರುಣಿಯು ಸಾವಕಾಶವಾಗಿ ಒಳಗೆ ಬಂದು ಕಿಟಕೆಯನ್ನು ಹಿಡುಕೊಂಡು ಆಧ್ಯತೆಯಿಂದ ಕುಳಿತುಕೊಂಡು “ರಾವಸಾಹೇಬ, ನೀವು ಮೂವರೂ ಒಂದು ಬೆಂಚದ ಮೇಲೆ ದಯಮಾಡಿ ಕುಳಿತರೆ ಈಚೆಯ ಬೆಂಚು ಸ್ವತಂತ್ರವಾಗಿ ನಮ್ಮ ಜನರಿಗಾಗುತ್ತದೆ” ಎಂದು ಕೇಳಿಕೊಂಡಳೋ ಆಜ್ಞೆ ಮಾಡಿದಳೋ ನಮಗೆ ಚನ್ನಾಗಿ ತಿಳಿಯದಿದ್ದರೂ ನಾವು ಒಂದು ಸಮಗ್ರವಾದ ಬೆಂಚವನ್ನು ಅವರಿಗೆ ಬಿಟ್ಟು ಬಿಟ್ಟದ್ದು ಸರಿ. ಆ ಮೂವರು ಯಥಾಸ್ಥಿತವಾಗಿ ಕುಳಿತ ಬಳಿಕ.

“ನಮ್ಮ ಗುಲ್ ಬಾಯಿ ಇದ್ದರೆ ಸ್ಥಳಕ್ಕೇನು ಕಡಿಮೆ ? ಇಂದು ಎತ್ತ ನೋಡಿದತ್ತ ದಟ್ಟಣೆ ಬಹಳ” ಎಂದು ಗುಲ್ ಬಾಯಿಯ ಸಂಗಡ ಬಂದ ಸ್ತ್ರೀಯು ತನ್ನ ಮಗುವನ್ನು ಚುಂಬಿಸುತ್ತೆ ಸಂತೋಷದಿಂದ ನುಡಿದಳು.

“ಮಾಣಿಕಬಾಯಿ, ಯಾರಾದರೇನು? ಒಳ್ಳೆ ಮಾತಾಡಿದರೆ ಒಳ್ಳೆ ಕೆಲಸಗಳಾಗುತ್ತವೆ. ಆಹುದಲ್ಲರೀ ಅಣ್ಣಾಸಾಹೇಬ” ಎಂದು ಗುಲ್ ಬಾಯಿಯು ಮೇಲ್ಕಂಡ ಬಿರುದನ್ನು ನನಗೆ ಕೊಟ್ಟು ಕೇಳಿದಳು.

“ನಿಮ್ಮಂಥ ಒಳ್ಳೇ ಜನರು ಬಂದರೆ ಯಾರು ಬೇಡೆನ್ನುತ್ತಾರೆ? ಗ್ರಾಮ್ಯರಾದ ಜನರು ಬಂದು ಸೇರಿದರೆ ಮಾತ್ರ ಬಹು ವ್ಯತ್ಯಾಸವಾಗುತ್ತದೆ. ನೀವು ಬಂದದ್ದೂ ವಿಹಿತವೇ ಆಯಿತು” ಎಂದು ನಾನು ಸಮ್ಮತಿಸಿ ನುಡಿದೆನು.

ಮುಂದೆ ಒಂದೇ ನಿಮಿಷದಲ್ಲಿ ಗಾಡಿಯು ತನ್ನ ಸ್ಥಾನವನ್ನು ಬಿಟ್ಟು ಒಳ್ಳೆ ವೇಗದಿಂದ ಧಾವಿಸಲಾರಂಭಿಸಿತು. ಮಾರ್ಗದ ಬದಿಗಿದ್ದ ಗಿಡಗಳು ಗಾಡಿಗೆ ಇದಿರಾಗಿ ಓಡುತ್ತಿರುವದನ್ನು ಮಾಣಿಕಬಾಯಿಯ ಚಿಕ್ಕಮಗಳಾದ ರತನಬಾಯಿಯು ನೋಡಿ ತಾನೂ ಹೊರಗಿನ ಚಮತ್ಕಾರವನ್ನು ನೋಡುವೆನೆಂದು ಕುಣಿಕುಣಿದಾಡಿ ಕೂಗಿದಳು. ಈಚೆಯ ಕಿಟಕೆಗೆ ಕುಳಿತಿದ್ದ ಗುಲ್ ಬಾಯಿಯು ಅವಳನ್ನು ಕರಕೊಳ್ಳಲೊಲ್ಲಳು. ಮತ್ತೊಂದು ಕಿಟಕಿಗೆ ಹೊಂದಿ ಕೊಂಡು ಕುಳಿತ ಗೃಹಸ್ಥನು ಮಕ್ಕಳನ್ನೆತ್ತಿಕೊಳ್ಳುವದು ತನ್ನ ಕರ್ತವ್ಯವಲ್ಲೆಂದು ತಿಳಿದಿದ್ದನೋ ಏನೋ, ಆ ಮಗುವನ್ನು ಅವನು ಕಣ್ಣೆತ್ತಿ ನೋಡಲೊಲ್ಲನು. ಆರ್ತೆಯಾದ ಅವಳ ಮಾತೆಯು ಅಭಿಪ್ರಾಯ ವ್ಯಂಜಕವಾದ ದೃಷ್ಟಿಯಿಂದ ನನ್ನನ್ನು ನೋಡಿದಳು. ಸದ್ಗುಣಿಯಾದ ಸ್ತ್ರೀಯ ಕಳೆಯುಳ್ಳವಳಾದ ಮಾಣಿಕಬಾಯಿಯ ಆ ಅವ್ಯಕ್ತವಾದ ಪ್ರಾರ್ಥನೆಯನ್ನು ಮನ್ನಿಸಿ ನಾನು ರತನಬಾಯಿಯನ್ನು ಎತ್ತಿಕೊಂಡು ಜೋಕೆಯಿಂದ ಆ ಮಗುವಿಗೆ ಹೊರಗಿನ ನೋಟವನ್ನು ತೋರಿಸಲಾರಂಭಿಸಿದೆನು. ಈ ಅಲ್ಪ ಉಪಕಾರವು ಆ ತಾಯಿಗೆ ಬಹಳಾಯಿತು. ಕೃತಜ್ಞತೆಯಿಂದ ಅವಳು ನನ್ನನ್ನು ನೋಡಿ, “ಆಣ್ಣಾ, ನೀವು ಮಕ್ಕಳಂದಿಗರಾಗಿ ತೋರುವಿರಿ” ಎಂದು ನುಡಿದು ಮುಖದಲ್ಲಿ ಶುಚಿಸ್ಮಿತವನ್ನು ತಳೆದಳು.

“ಬಂಗಾರದರಗಿಳಿಯಂಥ ಮಗುವನ್ನು ಯಾರಾದರೂ ಪ್ರೇಮದಿಂದ ಎತ್ತಿಕೊಳ್ಳುವರು. ಅದಕ್ಕಿಷ್ಟೇಕೆ ಕೃತಜ್ಞತೆ?” ಎಂದು ಗುಲ್‍ಬಾಯಿಯು ನಮ್ಮಿರ್ವರನ್ನು ನೋಡಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದಳು.

“ಹಾಗಾದರೆ ನೀವೇಕೆ ಆ ಕೂಸನ್ನು ಎತ್ತಿಕೊಳ್ಳಲಿಲ್ಲ ಗುಲ್‍ಬಾಯಿ?” ಎಂದು ನಾನು ಮಾತಿಗೆ ಮಾತಾಡಿದೆನು. ಬಲು ಮಾತಿನವಳಾದ ಆ ತರುಣಿ ಯೊಡನೆ ಮಾತಾಡಲು ನನಗೆ ಸಂಕೋಚವೆನಿಸಲಿಲ್ಲ.

ಅದಕ್ಕೆ ಗುಲ್ ಬಾಯಿಯು ನಕ್ಕು : “ರತನಬಾಯಿಯನ್ನು ನಾನೆತ್ತಿ ಕೊಳ್ಳುವದನ್ನು ನೀವೇನು ಹೇಳುವಿರಿ? ಅವಳು ನಮ್ಮ ಮನೆಯವಳೇ, ಆದರೆ ನಾನುಟ್ಟು ಕೊಂಡಿರುವ ಈ ಸೂಕ್ಷ್ಮವಾದ ಜರದ ಪತ್ತಲವು ಮಾಸುವದೆಂದು ತಿಳಿದು ನಾನಾಕೆಯನ್ನು ಎತ್ತಿಕೊಳ್ಳಲಿಲ್ಲ” ಎಂದು ನುಡಿದು ತನ್ನ ಮಹಾ ವಸ್ತ್ರವನ್ನು ತೀಡಿ ಸಮಮಾಡಿಕೊಂಡಳು.

“ಗುಲ್ಬಾಯಿ, ನಿಮಗಿಷ್ಟು ಉಡಿಗೆ ತೊಡಿಗೆಗಳ ಚಿಂತೆಯಾಗಿದ್ದರೆ ನೀವು ಮತ್ತೊಂದು ಸಮಯದಲ್ಲಿ ಸೆಕಂಡಕ್ಲಾಸ ಡಬ್ಬೆಯುಳ್ಳ ಗಾಡಿಗೆ ಬರಬೇಕಾಗಿತ್ತು!” ಎಂದು ನಮ್ಮ ಮಾಧವರಾಯರು ಸೂಚಿಸಿದರು.

“ನಾನೆಂದೂ ಮೂರನೆಯ ವರ್ಗದ ಡಬ್ಬಿಯಲ್ಲಿ ಕುಳಿತು ಪ್ರವಾಸ ಮಾಡಿದವಳಲ್ಲ. ಇಂದು ರಾತ್ರಿ ಒಂಬತ್ತು ಗಂಟೆಗೆ ಕೊಲ್ಲಾಪುರದಲ್ಲಿ ನಾಟಕವಿರುವದರಿಂದ ಅನಿರ್ವಾಹಕ್ಕಾಗಿ ಈ ಗಾಡಿಯಲ್ಲಿ ಪ್ರವಾಸಮಾಡ ಬೇಕಾಯಿತು. ಯುರೋಪಿಯನ್ ಥರ್ಡ ಕ್ಲಾಸದಲ್ಲಿಯಾದರೂ ನನಗೆ ಪ್ರವೇಶವಿಲ್ಲ.

“ನೀವು ಯುರೋಪಿಯನ್ನರ ಝಗ ಟೊಪ್ಪಿಗೆಗಳನ್ನು ಮಾಡಿಸಿರುವಿರಿ; ಹಾಕಿಕೊಂಡು ಬಂದಿದ್ದರೆ ಈ ಸಮಯದಲ್ಲಿ ಉಪಯೋಗವಾಗುತ್ತಿತ್ತು?” ಎಂದು ಮಾಣಿಕಬಾಯಿಯು ಚೇಷ್ಟೆ ಮಾಡಿ ನುಡಿದು ನಕ್ಕಳು.

“ಝಗ ಟೊಪ್ಪಿಗೆಗಳನ್ನು ಹೇಗಾದರೂ ಸಂಪಾದಿಸಬಹುದು. ಆದರೆ ಯುರೋಪಿಯನ್ನರ ಬಿಳಿದಾದ ಮೈ ಬಣ್ಣ ಎಲ್ಲಿಂದ ತರಲಿ ಮಾಣಿಕಬಾಯಿ>”

ಇದೇ ಸಮಯವೆಂದು ನೆನೆದು ನಾನು : “ಯಾಕೆ ಗುಲ್ಬಾಯಿ, ನೀವು ಗೌರವರ್ಣದವರೇ ಆಗಿರುವಿರಿ. ನಿಮ್ಮ ಸುಂದರವಾದ ಮುಖಕ್ಕೆ ಕೊಂಚ ‘ಚರಿಬ್ಲಾಸಮ್’ ಬಣ್ಣವನ್ನು ತಗಲಿಸಿದರೆ ನೀವು ಯುರೋಪಿಯನ್ನರಲ್ಲವೆಂದು ಸಹಸಾ ಯಾರೂ ಹೇಳರು” ಎಂದು ವಿನೋದಗೈದು ನುಡಿದೆನು.

ನನ್ನ ಮಾತಿನಿಂದ ಗುಲ್‍ಬಾಯಿಯ ಮನಸ್ಸಿಗೆ ಕೋಪ ವಿಷಾದಗಳೇನೂ ತಟ್ಟಿದಂತೆ ತೋರಲಿಲ್ಲ. ಅವಳು ಕಿಂಚಿತ್ ಮಂದಸ್ಮಿತೆಯಾಗಿ “ಅಣ್ಣಾಸಾಹೇಬ, ಬಣ್ಣವನ್ನು ಹಚ್ಚಿಕೊಳ್ಳಲು ನನಗೆ ನಾಚಿಕೆ ಬರುತ್ತದೆ” ಎಂದು ನುಡಿದಳು. ಆದರೂ ಆ ತರುಣಿಯ ಕಪೋಲಗಳಲ್ಲಿ ಎಷ್ಟು ಮಟ್ಟಿಗೆಯ ಲಜ್ಜೆಯ ಛಟೆಯು ವ್ಯಕ್ತವಾಗಿ ಕಾಣಲಿಲ್ಲ.

“ನಾಚಿಕೆ ಬಂದರಂತೂ ನಿಮ್ಮ ಚಲುವಾದ ಮುಖವು ಹೆಚ್ಚಾಗಿ ಗೌರವರ್ಣವನ್ನು ತಳೆಯುವದು, ಲಜ್ಜೆ ಬಾರದಿದ್ದರಂತೂ ನೀವು ನಿಃಸಂಶಯವಾಗಿ ಯುರೋಪಿಯನ್ನರೇ. ಸಣ್ಣ ಪುಟ್ಟ ಮಾತುಗಳಿಗಾಗಿ ಯುರೋಪಿಯನ್ನ ಸ್ತ್ರೀಯರು ತಮ್ಮ ಮುಖಕ್ಕೆ ಲಜ್ಜೆಯ ಲಾಂಛನವು ತಗಲದಂತೆ ಎಚ್ಚರವುಳ್ಳವರಾಗಿರುವರು” ಎಂದು ನಾನು ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆನು.

ನನ್ನ ಮಾತು ಕೇಳಿ ನಮ್ಮ ಶ್ಯಾಮರಾಯರು ಒಳಿತಾಗಿ ನಕ್ಕರು. ಅದನ್ನು ಕಂಡು ಮಾತ್ರ ಗುಲ್‍ಬಾಯಿಯು ಲಜ್ಜಾವತನಮುಖಿಯಾದಳು. ಅವಳ ತಗ್ಗಿದ ಮೊಗದಲ್ಲಿ ಕೊಂಚ ಮುಗುಳನಗೆಯ ಜುಳುಕಾದರೂ ತೋರಿದಂತಾಯಿತು.

“ಗುಲ್ ಬಾಯಿ, ಇದೆಲ್ಲ ಹಾಗಿರಲಿ, ಇಂದು ನಾಟಕದವರು ಯಾವ ಪ್ರಯೋಗವನ್ನು ಮಾಡತಕ್ಕವರು?” ಎಂದು ಮಾಧವರಾಯರು ವಿಷಯಾಂತರವನ್ನು ಮಾಡಲಿಚ್ಚಿಸಿ ಕೇಳಿದರು.

“ಇಂದು ಮಹಾರಾಷ್ಟ್ರ ಅಭಿನವ ನಾಟಕ ಮಂಡಳಿಯವರ ‘ವಿನೋದ’ ನಾಟಕದ ಪ್ರಯೋಗವಿರುವದು, ನಿಮಗೆ ಗೊತ್ತೇ ಇಲ್ಲವೇನು? ಊರತುಂಬ ಹಸ್ತಪತ್ರಿಕೆಗಳನ್ನು ಹಂಚಿದರಲ್ಲ.

“ವಿನೋದ!” ಎಂದು ಉದ್ಗಾರ ತೆಗೆದು ಮಾಧವರಾಯರಂದದ್ದು : “ಗುಲ್ಬಾಯಿ, ವಿನೋದ ನಾಟಕದಲ್ಲಿ ಕಥಾಭಾಗವಿಲ್ಲ; ನೀತಿಯ ಮಾತುಗಳಿಲ್ಲ; ಕಲಿತುಕೊಳ್ಳತಕ್ಕ ಸಂಗತಿಗಳಿಲ್ಲ. ಕೈಗೆ ಸಿಕ್ಕಿದ ಚೂರುಗಳನ್ನು ಹಾಕಿ ಹೊಲಿದ ಕಂತೆಯೇ ಆದು.”

ಗುಲ್‍ಬಾಯಿಗೆ ಈ ಮಾತು ರುಚಿಸಲಿಲ್ಲ. ಅವಳು ಉದ್ರೇಕದಿಂದ ಮುಖವನ್ನೆತ್ತಿ “ಕಥಾಭಾಗ ತತ್ವನಿರೂಪಣಗಳೇ ನಿಮಗೆ ಬೇಕಾಗಿರುವಲ್ಲಿ ನೀವು ಬಿಟ್ಟು ಬಿಡದೆಲೆ ಪುರಾಣಗಳನ್ನು ಕೇಳಿರಿ! ನಾಟಕದ ಮುಖ್ಯ ಉದ್ದೇಶವು ಮನೋರಂಜವೇ ಹೊರತಾಗಿ ಮತ್ತೊಂದಿಲ್ಲ. ಅದು ಹಾಗಿರಲಿ, ನಿಮಗೆ ಮಾನ್ಯವಾಗಿರುವ ಸೌಭದ್ರ ನಾಟಕದಲ್ಲಿ ಅಂಗಭೂತನಾಗಿರುವ ನೀತಿ ತತ್ವಗಳಾವವು? ಯಾಕೆ, ತೊಂದರೆಯಲ್ಲಿ ಬಿದ್ದಿರುವಿರೇನು?” ಎಂದು ನುಡಿದಳು.

ಮಾಧವರಾಯರು ಮುಗುಳುನಗೆ ನಕ್ಕು “ಗುಲ್ ಬಾಯಿ, ನಾಟಕದಲ್ಲಿ ಕೇವಲವಾದ ಮನೋರಂಜನವನ್ನೇ ಹುಡುಕುವವರಾದ ನಿಮಗೆ ಬೇರೆ ಸಂಗತಿಗಳ ಅರಿಕೆಯಾಗುವದೆಂತು? ನೀವಿನ್ನೂ ಚಿಕ್ಕವರು. ಈ ವಿಷಯವು ಸದ್ಯಕ್ಕೆ ಹಾಗಿರಲಿ.” ಎಂದು ನುಡಿದು ಗುಲ್ಬಾಯಿಯ ಉತ್ಸಾಹವನ್ನೆಲ್ಲ ಕೆಡಿಸಿಬಿಟ್ಟರು.

ಮಾಣಿಕಬಾಯಿಯು ಮಧ್ಯದಲ್ಲಿಯೇ ಬಾಯಿಹಾಕಿ ಹೇಳಿದ್ದು : “ವಿನೋದ ನಾಟಕದ ಮೇಲೆ ಗುಲ್‍ಬಾಯಿಯ ಮನಸ್ಸು ಇಷ್ಟೇಕೆಂಬದನ್ನು ಹೇಳುತ್ತೇನೆ ಕೇಳಿರಿ. ನಾಟಕದಲ್ಲಿ ಪಿಯಾನೋ ಬಾರಿಸುವವನು ಬಲು ಇಂಪಾಗಿ ಬಾರಿಸುವನಂತೆ; ನಾಯಕ ನಾಯಿಕೆಯರು ಬಲು ‘ಮಧುರವಾಗಿಯೂ ಶಾಸ್ತ್ರೋಕ್ತವಾಗಿಯೂ ಹಾಡುವರಂತೆ, ಗಾನಪ್ರಿಯರಾದ ನಮ್ಮೀ ಬಾಯಿಯವರು ನಾಟಕವೆಂದರೆ ಮೂಗು ಕೊಯ್ಯಿಸಿಕೊಳ್ಳುತ್ತಾರೆ.”

“ಹೆಚ್ಚಿನಾಕೆ ನೀನು ಮಾಣಿಕಬಾಯಿ” ಎಂದು ಗುಲ್‍ಬಾಯಿಯು ಮಾಣಿಕಳನ್ನು ನಿಷೇಧಿಸಿ ನನ್ನನ್ನು ಕುರಿತು ಅಂದದ್ದು “ಅಣ್ಣಾಸಾಹೇಬ,

ರಮ್ಯಾಣಿ ವಿಶ್ಯ ಮತುರಶ್ರ್ ನಿಶಮ್ಯಶದ್ವಾನು|
ಪರ್ಯತ್ಸಕಿಬವತಿ ಯಃ ಸುಖಿತೋ ಪಿಜಂತುಃ||

ಎಂಬ ಉಕ್ತಿಯು ಸಂಪೂರ್‍ಣವಾದ ವ್ಯಾಪ್ತಿಯುಳ್ಳದ್ದಾಗಿದೆಯಷ್ಟೆ? ನಮ್ಮ ಮಾಣಿಕಬಾಯಿಯು ರಾಗಜ್ಞಾನದಲ್ಲಿ ಶುಂಠಳಾಗಿದ್ದರೂ ಇವಳು ಗಾನ ವಾದನಗಳನ್ನು ಕೇಳಿದಾಗಲೆಲ್ಲ “ಆಹಹಾ, ಏನು ಚಂದ ಬಾರಿಸುತ್ತಾನೆ!” “ಔ ನೋಡೆ! ಕೋಗಿಲ ಬೇರೆಯಲ್ಲ ಈಕೆ ಬೇರೆಯಲ್ಲ” ಎಂದು ಹಾವ ಭಾವಗಳನ್ನು ಮಾಡಿ ಉದ್ಗಾರ ತೆಗೆಯುತ್ತಾಳೆ. ಮತ್ತೆ ಹೇಳುತ್ತಾಳೆ, ನಾನೇ ಮೂಗು ಕೊಯಿಸಿಕೊಳ್ಳುವೆನೆಂದು!”

ಗುಲ್‍ಬಾಯಿಯು ಸಮಯೋಚಿತವಾಗಿ ಶಾಕುಂತಲದಲ್ಲಿಯ ಶ್ಲೋಕಾರ್ಧವನ್ನು ಉದಾಹರಿಸಿದ್ದು ಕೇಳಿ ಅವಳು ಚನ್ನಾಗಿ ಕಲಿತವಳಾಗಿರಬಹುದೆಂದು ನಾವು ತರ್ಕಿಸಿ ಅವಳ ಸ್ತುತಿ ಮಾಡಿದೆವು.

“ಯಾತರದರಿ! ನನ್ನ ಅಧ್ಯಯನವೆಷ್ಟರದು, ನಾನೆಷ್ಟರವಳು? ಹಾಗೂ ಹೀಗೂ ಮಾಡಿ ಮ್ಯಾಟ್ರಿಕ್ಯೂಲೇಶನ್ನ ಪರೀಕ್ಷೆಯೊಂದನ್ನು ದಾಟಿದ್ದೇನೆ. ಇಲ್ಲಿ ಕುಳಿತವರೇ ನನ್ನ ಗುರುಗಳು ಕಾಲೇಜದ ಅಭ್ಯಾಸವನ್ನು ಕೈಕೊಳ್ಳಬೇಕೆಂದರೆ, ಹೆಣ್ಣು ಮಕ್ಕಳಿಗಾಗಿ ಸ್ವತಂತ್ರವಾದ ಕಾಲೇಜವಿಲ್ಲ. ಗಂಡುಮಕ್ಕಳ ಕಾಲೇಜಕ್ಕೆ ಹೋದರೆ ‘ಇವಳು ಹದಿನೆಂಟು ವರ್ಷದ ದೊಡ್ಡ ಹೆಂಗಸಾಗಿದ್ದರೂ ಇವಳಿಗಿನ್ನೂ ಮದುವೆ ಇಲ್ಲವೆ’ಂದು ಕುಚೇಷ್ಟೆ ಮಾಡುತ್ತಾರೆ.”

“ಇನ್ನೂ ನಿಮ್ಮ ಮದುವೆಯಾಗಿಲ್ಲವೆ? ಏಕೆ? ಕೇಳಿದ್ದಕ್ಕೆ ಕ್ಷಮೆ ಇರಲಿ?” ಎಂದು ನಾನು ಕೇಳಿಕೊಂಡೆನು.

ಗುಲ್ಬಾಯಿಯು ಮಂದಸ್ಮಿತೆಯಾಗಿ ಇಷ್ಟಕ್ಕೇಕೆ ಕ್ಷಮೆ ಅಣ್ಣಾ ಸಾಹೇಬ? ಮದುವೆಯಾದ ಕೂಡಲೆ ಪತಿರಾಯರ ಮನೆಯ ವಾರಂಟು ಬಂದಿತೇ! ಬಳಿಕ ವಿದ್ಯಾರ್ಜನವೆಲ್ಲಿ, ಆನಂದ ವಿನೋದಗಳೆಲ್ಲಿ?” ಎಂದು ನುಡಿದಳು.

“ಬಹು ಸೂಕ್ಷ್ಮವಾದ ವಿಚಾರವಿದು ಗುಲ್‍ಬಾಯಿ. ಹೆಚ್ಚಾಗಿ ಮಾತಾಡಲು ನಮಗೆ ಬಾಯಿ ಬಾರದು. ಆದರೂ ಪತಿಯ ಮನೆಗೆ ಹೋದ ಮೇಲೆ ನಿಮ್ಮ ಆಕ್ಷೇಪಗಳೆಲ್ಲ ನಿರಾಧಾರವಾದವುಗಳಾಗಿ ನಿಮಗೆಯೇ ಕಾಣುವವು” ಎಂದು ನಾನು ತೂಕದ ಮೇಲೆ ಮಾತಾಡಿದೆನು.

ನನ್ನ ಮಾತು ಕೇಳಿ ಆ ಸುದತಿಯು ಸುಮ್ಮನೆ ಮುಗುಳುನಗೆ ನಕ್ಕು ಕಿಟಕಿಯಲ್ಲಿ ಮೊರೆಯನ್ನು ಹಾಕಿ ಹೊರಗಿನ ಶೋಭೆಯನ್ನು ನೋಡುವದರಲ್ಲಿ ಮಗ್ನಳಾಗಿರುವಂತೆ ನಟಿಸಿದ್ದು ನೋಡಿ, ಹೊಸ ಪರಿಚಯದವರೂ ಪರ ಪುರುಷರೂ ಆದವರೊಡನೆ ಇಂಥ ಮಾತುಗಳನ್ನು ಅವಳು ಬೆಳಿಸಲಿಚ್ಚಿಸಲಿಲ್ಲವೆಂದು ಗ್ರಹಿಸಿ ನಾವೂ ಕೂಡ ಆ ಮಾತನ್ನು ಅಲ್ಲಿಯೇ ನಿಲ್ಲಿಸಿದೆವು. ಮುಂದೆ ಮೂರು ನಾಲ್ಕು ನಿಮಿಷಗಳ ವರೆಗೆ ಸಂಪೂರ್ಣವಾದ ಸ್ತಬ್ಧತೆಯು ವ್ಯಾಪಿಸಿ ಕೊಂಡಿತು. ಮಾಧವರಾಯರಿಗೆ ಈ ಪರಿಸ್ಥಿತಿಯು ಸೇರಲಿಲ್ಲಾದ ಕಾರಣ ಅವರು ಮೆಲ್ಲನೆ ಗುಲ್ಬಾಯಿಯ ಮಾಸ್ತರರನ್ನು ಕುರಿತು, “ಯಾಕೆ ಮಾಸ್ತರರೆ, ನಿಮ್ಮ ಸೊಲ್ಲೇ ಇಲ್ಲ. ತನ್ನ ಪರಿಚಯವಾದರೂ ನಮಗಿರಬೇಕೆಂದು ನಾವು ಬಯಸುತ್ತೇವೆ. ತಮ್ಮ ಅಭಿಧಾನವೇನು?” ಎಂದು ಕೇಳಿದರು.

“ನನ್ನ ಹೆಸರು ಕೇಳಿದಿರಾ? ನನ್ನನ್ನು ಧೋಂಡೋ ಮೈರಾಳ ಢಮ್ ಢೇರೆ ಎಂದು ಕರೆಯುವರು.”

ಧೋಂಡೋಪಂತ ಢಮ್ ಡೇರೆಯವರು ತಮ್ಮ ಹೆಸರಿಗನುರೂಪವಾಗಿ ಕಲ್ಲಿನಲ್ಲಿ ಒಡಮೂಡಿದ ಮೂರ್ತಿಯೇ ಆಗಿ ಕಾಣಿಸುತ್ತಿದ್ದರು. ಮುಳ್ಳಾಡಿಸಿದ ಆಸೆಯ ಕಲ್ಲಿನಂತೆ ಅವರ ಮೋರೆಯ ತುಂಬೆಲ್ಲ ಹುಳುಕು ಮೆತ್ತಿತ್ತು. ಮೆಂತೆಯನ್ನಾದರೂ ಅವರು ಅಗ್ಗ ಮಾಡಿದ್ದರು. ಮೀಸೆಯೊಡೆದ ಹೆಂಗಸಿಗಿಂತ ಕೊಂಚ ಹೆಚ್ಚಾದ ಕೂದಲುಗಳು ಅವರ ಮೇಲ್ದುಟಿಯ ಮೇಲೆ ವಿರಳವಾಗಿ ಕಾಣುತ್ತಿದ್ದವು. ಅವರ ಕಿರಿಗಣ್ಣುಗಳ ದೃಷ್ಟಿಯು ಯಾವಾಗಲೂ ನೆಲವನ್ನೇ ನೋಡುತ್ತಿರುವದಾಗಿ ತೋರಿತು. ದಪ್ಪವಾಗಿರುವ ಕೆಳ ದುಟಿಯ ಮೂಲಕವಾಗಿಯೂ ಕಸಿ ಬಿದ್ದ ಕುತ್ತಿಗೆಯ ಮೂಲಕವಾಗಿಯ ಧೋಂಡೋಪಂತರು ಗೊಗ್ಗರ ಧ್ವನಿಯಿಂದ ತಮ್ಮ ಹೆಸರನ್ನು ಹೇಳಬೇಕಾದರೆ ತುಸು ಪ್ರಯಾಸವನ್ನು ಹೊಂದಿದರು. ರಾ. ಥಂಡೇರೆಯವರು ಘೋರ ಸ್ವರದಲ್ಲಿ ತಮ್ಮ ಹೆಸರು ಹೇಳಿದ್ದು ಕೇಳಿ ಕುಚೇಷ್ಟೆಗಾಗಿಯೋ ಏನೋ ಹುಡುಗಾಟಗೆಯ ಹೊಸಪ್ರಾಯದವರಾದ ನಮ್ಮ ಶ್ಯಾಮರಾಯರು ಅವರನ್ನು ಕುರಿತು, “ಧೋಂಡೋಪಂತ, ನಿಮ್ಮ ಶಿಷ್ಯರಾದ ಈ ಗುಲ್‍ಬಾಯಿಯವರಿಗೆ ಗಾನವನ್ನಾದರೂ ನೀವೆ ಕಲಿಸುವಿರೇನು?” ಎಂದು ಕೇಳಿದರು. ವಿಪರೀತವಾಗಿರುವ ಈ ಪ್ರಶ್ನವನ್ನು ಕೇಳಿದಾಕ್ಷಣವೇ ಗುಲ್ ಬಾಯಿಗೆ ಹುಚ್ಚು ನಗೆ ತುಂಬಿತು. ಯಥೇಷ್ಟವಾಗಿ ನಗುವಳೇ, ಅದು ಆಪ್ರಶಸ್ತವಾದ ಮಾತಾಗಿತ್ತು. ಆ ನಗೆಯನ್ನು ಬಿಗಿದುಹಿಡಿಯುವಳೇ ಅದು ಅಸಾಧ್ಯವಾಗಿತ್ತು. ಅವಳು ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿ ಕುಳಿತಳು. ಗುಲ್ಬಾಯಿಯ ಆಚರಣವನ್ನು ಕಂಡು ಶ್ಯಾಮರಾಯರ ಪ್ರಶ್ನವು ಕುಚೇಷ್ಟಾಯುತವಾಗಿರುವದೆಂದು ಶಂಕಿಸಿ, ಕುಚೇಷ್ಟೆ ಮಾಡುವಿರೇನೆಂದು ಧೋಂಡೋಪಂತರು ಕ್ರುದ್ಧರಾಗಿ ಕೇಳಿದರು.

“ಕ್ಷಮಿಸಿರಿ ಮಾಸ್ತರರೆ, ತಮ್ಮೊಡನೆ ಕುಚೇಷ್ಟೆಯೇ? ತಮ್ಮ ವೇಷವನ್ನು ನೋಡಲಾಗಿ ತಾವು ಗಾನಶಾಸ್ತ್ರಿಗಳ ಮನೆತನದಲ್ಲಿ ಹುಟ್ಟಿದವರಾಗಿ ತೋರಿದ್ದರಿಂದ ಹಾಗೆ ಪ್ರಶ್ನೆ ಮಾಡಿದೆನು.” ಎಂದು ಶ್ಯಾಮರಾಯರು ವಿನೀತರಂತೆ ನುಡಿದರು.

ಢಂಢೇರೆಯವರ ತಲೆಯ ಮೇಲೆ ಪೇಶ್ವಾಯಿ ಕಾಲದ ಕಂಪು ಮುಂಡಾಸವಿತ್ತು. ಜಗನ್ನಾಥೀ ಅರಿವೆಯ ಅವರ ಉದ್ದಂಗಿಯು ಮೊಳಕಾಲ ಕೆಳಗೆ ಒಂದು ಗೇಣು ಇಳಿ ಬಿದ್ದಿತ್ತು. ಉಟ್ಟಿರುವ ಸೊಲ್ಲಾಪುರದ ಗಿರಣಿಯ ದೋತರವು ಕಲ್ಲು ನೀರುಗಳ ಹೊಡೆತವನ್ನು ಎರಡು ವರ್ಷಗಳವರೆಗೆ ಸಹಿಸಿದ್ದರೂ ಹಣಿದಿದ್ದಿಲ್ಲ. ಗಾದಿಯ ಮೇಲೆ ಹಾಸುವ ಮಗ್ಗಲಾಸಿಗೆಯಂಥ ಉರುಟಾದ ಚಾದರವನ್ನು ಅವರು ಮೈ ಮೇಲೆ ಹೊತ್ತು ಕೊಂಡಿದ್ದರು. ಧೋಂಡೋಪಂತರು ತಮ್ಮ ವೇಷವನ್ನು ನೋಡಿಕೊಂಡರು, ಕರ್ಮ-ಧರ್ಮ ಸಂಯೋಗದಿಂದ ಅವರ ತಂದೆಯಾದ ಮೈರಾಳ ಶಾಸ್ತ್ರಿಯು ಹೆಸರಾದ ಗಾಯಕನಾಗಿದ್ದನು. ಶ್ಯಾಮರಾಯರ ತರ್ಕವು ಯಥಾರ್ಥವಾಗಿರುವದು ಕಂಡು ಮಾಸ್ತರರ ಕೋಪವೆಲ್ಲ ಇಳಿದುಹೋಯಿತು. ಆದರೂ ಅವರ ಮುಖದಲ್ಲಿ ನಗೆಯ ಚಿಹ್ನವಾಗಲಿ ಮಾತಾಡುವ ಯತ್ನವಾಗಲಿ ಕಂಡು ಬರಲಿಲ್ಲ.

“ಗುಲ್ಬಾಯಿ, ನಿಮಗೆ ಗಾಯನ ವಾದನಗಳಲ್ಲಿ ಪರಿಶ್ರಮ ಉಂಟೇನು ಎಂದು ನಾನು ಕೇಳಿದೆನು.

“ಅವರ ಬೆರಳಲ್ಲಿರುವ ತಂತಿಯ ಉಗುರುಂಗುರವೇ ಸಾಕ್ಷಿಯು, ಸತಾರವನ್ನು ಬಾರಿಸುವದರಲ್ಲಿ ಅವರಿಗೆ ಪರಿಶ್ರಮವಿರುವದರಿಂದಲೇ ಅವರು ಯಾವಾಗಲು ಅದನ್ನು ತಮ್ಮ ಬೆರಳಿನಲ್ಲಿಟ್ಟು ಕೊಂಡಿರುವರು” ಎಂದು ಶ್ಯಾಮರಾಯರು ತರ್ಕಿಸಿ ಹೇಳಿದರು.

“ಇಷ್ಟು ಸೂಕ್ಷ್ಮವಾಗಿ ಅನ್ಯರ ಅಂಗಾಂಗಗಳನ್ನು ನಿರೀಕ್ಷಿಸುವವರು ಇಲ್ಲಿ ಇರುವರೆಂದು ತಿಳಿದಿದ್ದರೆ ನಾನು ನೆನಪಿನಿಂದ ಈ ಉಂಗುರವನ್ನು ಮನೆಯಲ್ಲಿ ಬಿಟ್ಟು ಬರುತ್ತಿದ್ದೆನು..” ಎಂದು ಗುಲ್‍ಬಾಯಿಯು ನುಡಿದು ಲೀಲೆಯಿಂದ ಆ ಉಂಗುರವನ್ನು ತೆಗೆದು ತನ್ನ ರೌಗೆಯ ಜೇಬಿನಲ್ಲಿಟ್ಟು ಕೊಂಡಳು.

ಗುಲ್‍ಬಾಯಿಯು ಉಡಿಗೆ ತೊಡಿಗೆಗಳ ಸೊಬಗಿನವಳೂ ಅಲಂಕಾರ ಪ್ರಿಯಳೂ ಎಂಬದು ಅವಳು ಧರಿಸಿದ ಮೇಲ್ತರದ ವಸ್ತ್ರಲಂಕಾರಗಳಿಂದ ಕಂಡು ಬಂದಿತು. ಅವಳ ಎಗ್ಗಳವಾದ ಮಾತಿನಿಂದ ಅವಳು ದಿಟ್ಟೆಯಾದ ಹುಡಿಗೆಯೆಂದಾದರೂ ನಮ್ಮ ನಂಬಿಗೆಯಾಯಿತು. ಆದರೂ ಅವಳಲ್ಲಿ ಕಾಮಿನಿಯರ ವಿಲಾಸ-ಚೇಷ್ಟೆಗಳೆಷ್ಟು ಮಾತ್ರವೂ ಇರಲಿಲ್ಲ. ನೋಡಿದರೆ, ಅವಳು ಸರ್ವಾಂಗ ಸುಂದರಿಯೂ ತುಂಬಿದ ಅವಯವಗಳುಳ್ಳವಳಾದ ತರುಣಿಯೂ ಆಗಿದ್ದಳು. ಅವಳ ಮಾತುಗಳು ಬಾಣ ಹೊಡೆದಂತೆ ಸರಳವಾಗಿದ್ದವಲ್ಲದೆ ಅವುಗಳಲ್ಲಿ ಕೊಂಕು, ಕೌಟಿಲ್ಯಗಳಿರಲಿಲ್ಲ. ಸುಶಿಕ್ಷಿತಳಾದ ಸ್ತ್ರೀಯು ಹೇಗೆ ನಡಕೊಳ್ಳುತ್ತಿರಬೇಕೆಂಬ ಮಾತಿನ ತಪ್ಪು ತಿಳುವಳಿಕೆಯಿಂದಾಗಲಿ, ಶ್ರೀಮಂತನೂ ಅಪತ್ಯವತ್ಸಲನೂ ಆಗಿರುವ ತಂದೆಯ ಆಜ್ಞೆಯಲ್ಲಿ ವಿಶೇಷವಾಗಿ ಬೆಳೆದವಳಾಗಿದ್ದ ಗುಲ್‌ಬಾಯಿಯು ಸ್ತ್ರೀಸ್ವಾತಂತ್ರ್ಯದ ಆಡಂಬರವನ್ನು ಅಧಿಕವಾಗಿ ಬೆಳೆಸಿಕೊಂಡಿರಬಹುದೆಂದು ನಾವು ತರ್ಕಿಸಿದೆವು.

ಪರರ ಅಂಗಾಂಗಗಳನ್ನು ನಿರೀಕ್ಷಿಸುವವರೆಂಬ ಆರೋಪವು ತಮ್ಮ ಮೇಲೆ ಹೊತ್ತಿತೆಂಬದನ್ನು ಅರಿತು ಶ್ಯಾಮರಾಯರು ಒಳಿತಾಗಿ ನಾಚಿಕೊಂಡು ಅಬಲೆಯರಂತೆ ಅಧೋ ಮುಖರಾಗಿ ಕುಳಿತರು. ಮಾಧವರಾಯರು ಅವರ ಪಕ್ಷವನ್ನು ವಹಿಸಿ “ಗುಲ್‍ಬಾಯಿ, ಶ್ಯಾಮರಾಯರ ಮೇಲೆ ನೀವು ಅನ್ಯಾಯವಾಗಿ ಆರೋಪವನ್ನು ತೋರಿಸಿದಿರಿ. ಇವರೊಳ್ಳೆ ಗಾನಕಲಾಪಟುಗಳೂ ಸತಾರ-ರುದ್ರವೀಣಾದಿಗಳನ್ನು ಬಾರಿಸುವದರಲ್ಲಿ ಒಳ್ಳೆ ನಿಪುಣರೂ ಆಗಿರುವರು. ಅವರವರಿಗೆ ಪ್ರಿಯವಾದ ವಸ್ತುಗಳೇ ಬೇಗನೆ ಕಾಣುವವೆಂಬಂತೆ ನಿನ್ನು ಉಗುರುಂಗುರವು ಶ್ಯಾಮರಾಯರ ಕಣ್ಣಿಗೆ ಕಂಡಿತೇ ಹೊರತಾಗಿ, ನೀವು ಧರಿಸಿರುವ ಹಾರ-ಕಂಕಣಾದಿಗಳ ಮೇಲೆ ಅವರ ಲಕ್ಷ್ಯವಿಲ್ಲವೆಂದು ನಾನು ಹೇಳುತ್ತೇನೆ.”

ಗುಲ್‍ಬಾಯಿಯ ತೊಂದರೆಯಲ್ಲಿ ಬಿದ್ದಳು. ಕೊಂಚ ವಿಚಾರ ಮಾಡಿ “ಮಾಧವರರೆ, ಕ್ಷಮಿಸಿರಿ. ಶ್ಯಾಮರಾವ್‌ಜೀಯವರಿಗೆ ಗಾನ ಕಲೆಯಲ್ಲಿ ಅಭಿರುಚಿಯಿರುವದೆಂದು ನಾನು ತಿಳಿದಿದ್ದಿಲ್ಲ.” ಎಂದು ನುಡಿದು ಮುಗ್ಧೆಯಂತೆ ನಕ್ಕಳು.

“ಬಾಯಿ, ನಿಮಗೆ ಪಾಶ್ಚಾತ್ಯ ಜನರ ಆಚಾರ ವಿಚಾರಗಳ ಸೇರಿಕೆಯಾಗಿರುವಂತೆ ಕಾಣುತ್ತದೆ. ನೀವೂ ಗಾನಕಲಾಭಿಜ್ಞರು; ನಮ್ಮ ಶ್ಯಾಮರಾಯರೂ ಆ ಕಲೆಯಲ್ಲಿ ನಿಷ್ಣಾತರು. ನಿಮ್ಮಿಬ್ಬರಲ್ಲಿ ವಿಶೇಷವಾದ ಪರಿಚಯ ವಿರಬೇಕೆಂದು ನಾನು ಬಯಸಿದರೆ ಅದು ನಿಮಗೆ ಪ್ರಿಯವಾಗಿ ತೋರಲಿಕ್ಕಿಲ್ಲವೆಂದು ನಂಬುತ್ತೇನೆ. ನಮ್ಮ ಶ್ಯಾಮರಾಯರಂಥ ಪಿಯಾನೋ ವಾದನ ನಿಪುಣರು ಮಹಾರಾಷ್ಟ್ರ-ಕರ್ನಾಟಕ ದೇಶಗಳೆರಡರಲ್ಲಿಯೂ ಇಲ್ಲ ವೆಂದರೆ ಅತಿಶಯೋಕ್ತಿಯಾಗದು” ಎಂದು ನಾನು ಹೇಳಿದೆನು.

“ಅವಶ್ಯ ಆವಶ್ಯ! ನನಗೂ ಪಿಯಾನೋ ವಾದನವನ್ನು ಕೇಳುವ ಅಭಿಲಾಷೆ ಬಹಳ”

ಆಷ್ಟರಲ್ಲಿ ಗಾಡಿಯು ಗಕ್ಕನೆ ನಿಂತಿತು. ಪೋರ್ಟರನು “ಕೊಲ್ಲಾಪೂರ ಕೊಲ್ಲಾಪೂರ” ಎಂದು ಕೂಗಿದನು.

“ಇಷ್ಟರಲ್ಲಿ ಕೊಲ್ಲಾಪುರ ಬಂತೆ?” ಎಂದು ಗುಲ್‍ಬಾಯಿಯು ಚಕಿತಳಾಗಿ ಕೇಳಿದಳು.

“ನಿಮ್ಮಾ ಹರಟೆಗೆ ಮುಂಬಯಿ ಪಟ್ಟಣವು ಕೂಡ ಹೇಳದೆ ಕೇಳದೆ ಬರಬಹುದು” ಎಂದು ಮಾಣಿಕಬಾಯಿಯು ನಗುತ್ತ ನುಡಿದು ತನ್ನ ಮಗುವನ್ನು ಎತ್ತಿ ಕೊಂಡು ಎದ್ದು ನಿಂತಳು.

ನಾವೆಲ್ಲರೂ ಕೆಳಗಿಳಿದು ಪ್ಲಾಟಫಾರ್ಮದ ಮೇಲೆ ಬಂದೆವು. ನಾಟಕಕ್ಕೆ ಬರುವಿರೇನೆಂದು ಗುಲ್ಬಾಯಿಯು ನಮ್ಮನ್ನು ಕೇಳಿದಳು. ಕೆಲಸದ ಮೂಲಕ ನಮಗೆ ನಾಟಕಕ್ಕೆ ಹೋಗುವಂತಿದ್ದಿಲ್ಲ.

“ಉಪಾಯವಿಲ್ಲ. ಅಣ್ಣಾಸಾಹೇಬ ಮಾಧವರಾವ ಶ್ಯಾಮರಾವಜೀ, ನೀವು ನಾಳೆಗೆ ನಮ್ಮ ಮನೆಗೆ ದಯಮಾಡಿ ಬಂದರೆ ಒಳ್ಳೇದಾಗುವದು. ನಿಮ್ಮಂಥ ಸಜ್ಜನರ ಪರಿಚಯವೇ ದುರ್ಲಭ. ಯಾವ ಸಮಯವು ನಿಮಗೆ ಅನುಕೂಲವಾಗುವದೆಂದು ಹೇಳಿದರೆ ಆ ಸಮಯಕ್ಕೆ ನಾನು ತಮ್ಮ ಸ್ವಾಗತದ ಸಿದ್ಧತೆ ಮಾಡಿಕೊಂಡಿರುವೆನು” ಎಂದು ಮುಂದಾಗತಕ್ಕವಳದ ಆ ಸ್ತ್ರೀ ಕುಲಾವತಂಸೆಯು ಒಳ್ಳೇ ಆದರದೊಂದಿಗೆ ಬೆಸಗೊಂಡಳು.

“ಅವಶ್ಯ ಅವಶ್ಯ” ಎಂದು ಶ್ಯಾಮರಾಯರು ಒಳ್ಳೇ ಉತ್ಸಾಹದಿಂದ ಒಪ್ಪಿ ಕೊಂಡರು.

ಗುಲ್ಬಾಯಿ ಮುಂತಾದವರು ನೆಟ್ಟಗೆ ನಾಟಕ ಗೃಹದ ಮಾರ್ಗವಾಗಿ ನಡೆದರು. ನಾವು ನಾರಾಯಣರಾಯರ ಮನೆಗೆ ಬಂದೆವು. ನನ್ನನ್ನು ಕಂಡ ಕೂಡಲೆ ನಾರಾಯಣರಾಯರು ಸ್ನೇಹಾತಿರೇಕದಿಂದ “ಅಲಭ್ಯಲಾಭ, ಅಲಭ್ಯಲಾಭ! ಏನಿದು ರಾಯರೆ, ನಮ್ಮ ನಿಮ್ಮ ದರ್ಶನಗಳಾಗದೆ ಅನೇಕ ಶತಮಾನಗಳು ಕಳೆದುಹೋದಂತೆ ಭಾಸವಾಗುತ್ತದೆ.” ಎಂದು ಉದ್ಗಾರ ತೆಗೆದರು.

“ನಾರಾಯಣರಾವ, ತಾರುಣ್ಯವೆಲ್ಲ ಅಳಿದುಹೋದ ಬಳಿಕ ಏಕತ್ರರಾದ ವಿರಹಿಗಳ ನಿರರ್ಥಕವಾದ ಸಂದರ್ಶನದಂತೆ ಸ್ನೇಹಿತರ ಸಂದರ್ಶನವಲ್ಲ. ಆದು ಯಾವಾಗಲೂ ಇಷ್ಟವೆ.”

“ಕಾಲೇಜದೊಳಗಿರುವಾಗಿನ ಕುಚೇಷ್ಟಿತಗಳೆಲ್ಲ ಅಖಂಡವಾಗಿ ಉಳಿದಿವೆ.” ಎಂದು ಹೇಳಿ ನಾರಾಯಣರಾಯರು ನಕ್ಕರು.

“ಇನ್ನೊಂದು ಹತ್ತು ನಿಮಿಷಗಳು ಹೋಗಲಿ, ನಿಮ್ಮ ಗುಣಗಳಾದರೂ ಹೊರಬೀಳದೆ ಇರವು.”

“ಹಾ… ಹಾ… ಹಾ” ಎಂದು ನಕ್ಕು “ಇಂದು ದಯ ಮಾಡಿದ ಕಾರಣವೇನು?” ಎಂದು ಮನೆಯ ಯಜಮಾನರು ಕೇಳಿದರು.

ಮಿರ್ಜಿಯಲ್ಲಿಯ ಬಂಗಲೆಯು ಬೇಕಾಗಿವೆಂಬದನ್ನು ಕೇಳಿದ ಕೂಡಲೆ ನಾರಾಯಣರಾಯರು ಸಂತೋಷದಿಂದ ಯಾಕಾಗಲೊಲ್ಲವೆಂದು ಒಪ್ಪಿಕೊಂಡು ಬಂಗಲೆಯ ಬೀಗದಕೈಯ್ಯನ್ನು ಆಗಿಂದಾಗಲೇ ತರಿಸಿ ನನ್ನ ಸ್ವಾಧೀನ ಮಾಡಿದರು. ಸಮೀಚೀನವಾದ ಭೋಜನವೂ ಆವರೋಪಚಾರಗಳ ಹರಟೆಯೂ ಪರಸ್ಪರರ ಗೃಹಕೃತ್ಯಗಳ ಪರಾಮರ್ಶಗಳೂ ಆಗುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆಯಾಯಿತು. ಸುಖನಿದ್ರೆಗೈದು ನಾವು ಬೆಳಗು ಮುಂಜಾವಿನ ಗಾಡಿಗೆ ಮಿರ್ಜಿಗೆ ಹೊರಟೆವು. ನಾಳಿನ ಆದಿತ್ಯವರ ನಮ್ಮ ಅನುಕೂಲತೆಯನ್ನು ಅವಲೋಕಿಸುವದಕ್ಕಾಗಿ ತಾವೂ ಮಿರ್ಜಿಗೆ ಬರುವೆವೆಂದು ನಾರಾಯಣರಾಯರು ಅಭಿವಚನವನ್ನಿತ್ತರು.

ಸ್ಟೇಶನದಲ್ಲಿ ಸೆಕಂಡ ಕ್ಲಾಸದ ಡಬ್ಬಿಯೊಂದು ತೆರವೇ ಇತ್ತು. ಅದನ್ನು ನಾವು ಆಕ್ರಮಿಸಿಕೊಂಡು ಕುಳಿತು ಯಥೇಷ್ಟವಾಗಿ ಸಿಗರೆಟ್ಟು ಸೇದುತ್ತೆ ಕುಳಿತೆವು. ಅಷ್ಟರಲ್ಲಿ ಯುರೋಪಿಯನ್ನ ನಾದ ಸ್ಟೇಶನ ಮಾಸ್ಟರನು ನಾವಿದ್ದಲ್ಲಿಗೆ ಬಂದು “I am sorry gentlemen, you will have to get down. This is reserved for ladies. (ಉಪಾಯವಿಲ್ಲ ರಾಯರೆ, ತಮಗೆ ಇಳಿಯಬೇಕಾಗಿರುವದು. ಇದು ಮಹಿಲಾ ಜನರಿಗಾಗಿ ಬೇರಿರಿಸಲ್ಪಟ್ಟ ಡಬ್ಬೆಯು)” ಎಂದು ಹೇಳಿದನು.

“ಮಹಿಲಾ ಜನರೆಲ್ಲಿ? ಸುಮ್ಮನೆ ನನಗೇಕೆ ತೊಂದರೆ ಕೊಡುವಿರಿ?” ಎಂದು ಶ್ಯಾಮರಾಯರು ಆಕ್ಷೇಪ ತೆಗೆದುಕೊಂಡರು.

“ಇಕೋ, ಇಲ್ಲಿಯೇ ಇಬ್ಬರಿದ್ದಾರೆ ಕಾಣಿರೋ? ಸುಮ್ಮಸುಮ್ಮನೆ ನಾನೇಕೆ ನಿಮಗೆ ತೊಂದರೆ ಕೊಡಲಿ?” ಎಂದು ಸ್ಟೇಶನ್ ಮಾಸ್ತರನು ನುಡಿಯುವಷ್ಟರಲ್ಲಿ ಗುಲ್‍ಬಾಯಿಯು ಬಂದು ನಮ್ಮನ್ನು ನೋಡಿ, ಸ್ಟೇಶನ್ ಮಾಸ್ತರನನ್ನು ಕುರಿತು “O! Never mind master, these gentlemen are our friends. Do’nt disturb them please. (ಏನು ಚಿಂತೆಯಿಲ್ಲ ಮಾಸ್ತರರೆ, ಈ ಮಹನೀಯರು ನಮ್ಮ ಸ್ನೇಹಿತರೇ ಆಗಿರುವರು, ಕುಳ್ಳಿರಲೊಲ್ಲರೇಕೆ) ಎಂದು ವಿಧಿಸಿದಳು. ಶಂಭು ಸ್ವಯಂಭು ಹರರೇ ಉರುಳಾಡುವಾಗ, ಪಾಪ ಬಡ ಸ್ಟೇಶನ್ ಮಾಸ್ತರನ ಪಾಡೇನು? ಅವನು ಸುಮ್ಮನೆ ಹೊರಟು ಹೋದನು. ಗುಲ್‍ಬಾಯಿ, ಮಾಣಿಕಬಾಯಿಯರು ಒಳಗೆ ಬಂದು ಒಂದು ಮಗ್ಗಲಿಗೆ ಕುಳಿತರು. ನಾವು ಮೂವರು ಮತ್ತೊಂದು ಮಗ್ಗಲಿಗೆ ಕುಳಿತೆವು.

“ಹೇಗೆ ರಾಯರೆ? ನಾನಿಲ್ಲದಿದ್ದರೆ ಸ್ಟೇಶನ್ ಮಾಸ್ತರನು ನಿನ್ನನ್ನು ಇಳಿಸಿಬಿಡುತ್ತಿದ್ದನು. ನಿನ್ನಿನ ಉಪಕಾರವು ಮುಟ್ಟಿತು.” ಎಂದು ಗುಲ್‍ಬಾಯಿಯು ವಿನೋದಗೈದು ನುಡಿದಳು.

“ಮುಟ್ಟಿತು, ಮುಟ್ಟಿತು. ನಾಟಕವು ಹೇಗಾಯಿತು?” ಎಂದು ಮಾಧವರಾಯರು ಕೇಳಿದರು.

“ಅಪ್ರತಿಮವಾಯಿತು! ನಾಟಕವೆಂದರೆ ವಿನೋದ ನಾಟಕವೇ ನಾಟಕವು.”

“ಮೊದಲೇ ನೀವು ಅದನ್ನು ಕೊಂಡಾಡುತ್ತಿದ್ದಿರಿ; ಪ್ರತ್ಯಕ್ಷವಾಗಿ ನೋಡಿದ ಬಳಿಕೇನು ಕೇಳುವದು? ರಂಗಭೂಮಿಯ ದೀಪ್ತಿಯೇ ಬೇರೆ.” ಎಂದು ನಾನು ಆಡಿದೆನು.

“ಅಣ್ಣಾಸಾಹೇಬ, ಪಾತ್ರಗಳ ವೇಷ-ವೈಚಿತ್ರ್ಯವೇನು, ಭಾಷಾ ಸರಣಿಯೇನು, ಮಾತುಮಾತಿಗೆ ಹೊಸ ಮಾದರಿಯ ಉಪಮೆಗಳೇನು, ಎಲ್ಲವೂ ಒಳ್ಳೇ ಮನೋ ವೇಧಕವಾಗಿತ್ತು.”

“ಪಿಸ್ಸಾ! ಅನುರಕ್ತಳಾದ ಸ್ತ್ರೀಗೆ ಟಾರ್‍ಪೆಡೋದ ಉಪಮೆ, ಮತ್ತೇ ತಕ್ಕೆಯೋ ತೋಫಿನ ಗುಂಡುಗಳ ಉಪಮೆ, ಗುಲ್ ಬಾಯಿ, ಅದೆಲ್ಲ ನಿಮಗೆ ಚಂದ ಕಾಣಿಸಿದ್ದೀತು ನೋಡಿರಿ!” ಎಂದು ಮಾಣಿಕಬಾಯಿಯು ಹಳಿದು ನುಡಿದಳು.

ಮಿರ್ಜಿಯ ಸ್ಟೇಶನಕ್ಕೆ ಬರುವವರೆಗೆ ನಾಟಕದ ಮಾತೇ ಮಾತುಗಳು. ಗಾಡಿಯಿಂದಿಳಿದು ನಾವು ಸ್ಟೇಶನದ ಹೊರಗೆ ಬಂದ ಕೂಡಲೆ ಗುಲ್‍ಬಾಯಿಯು ನಮ್ಮನ್ನು ಕರೆದು “ಅಣ್ಣಾ ಸಾಹೇಬ, ನೋಡಿರಿ, ಇದೇ ನಮ್ಮ ಬಂಗಲೆಯು,” ಎಂದು ಸ್ಟೇಶನಕ್ಕೆ ಸಮೀಪವಾಗಿರುವದೊಂದು ರಮ್ಯವಾದ ಮಂದಿರವನ್ನು ತೋರಿಸಿ “ಇಂದು ಮೂರು ಘಂಟೆಗೆ ಅವಶ್ಯವಾಗಿ ದಯಮಾಡಬೇಕು ಕಂಡಿರೋ” ಎಂದು ಪ್ರಾರ್ಥಿಸಿ ಹೊರಟು ಹೋದಳು.

ನಾವು ನೆಟ್ಟಗೆ ನಮಗೆ ದೊರಕಿದ ಹೊಸ ಬಂಗಲೆಗೆ ಬಂದು ಅಲ್ಲಿ ಉಡುಗುವದು, ಹಾಸುವದು ಮುಂತಾದ ವ್ಯವಸ್ಥೆಗಳನ್ನು ಮಾಡಿಸಿದೆವು. ಬಂಗಲೆಯು ನಿಜವಾಗಿ ನಮ್ಮ ಸಾಧೀನಕ್ಕೆ ಬಂದಿರುವದೆಂಬ ನೆಚ್ಚಿಗೆಗಾಗಿ ಅಲ್ಲಿಯೇ ನಾವು ಕ್ಷಣ ಹೊತ್ತು ಸ್ಟೇಚ್ಛೆಯಿಂದ ಕೈ ಕಾಲು ಚಾಚಿಕೊಂಡು ಮಲಗಿ ಸುತ್ತಲೂ ಔತ್ಸುಕ್ಯದಿಂದ ನೋಡಿದೆವು. ಕಟ್ಟಡವು ಭದ್ರವಾಗಿಯೂ ರಮಣೀಯವಾಗಿಯೂ ಕಟ್ಟಿದ್ದಾಗಿತ್ತು, ಅಲ್ಲಲ್ಲಿ ಬೆಲೆಯುಳ್ಳ ಕುರ್ಚಿ, ಮೇಜುಗಳೂ ಪಲಂಗು-
ಕೋಚಗಳೂ ಚಿತ್ರ ಪಟ- ಕನ್ನಡಿಗಳೂ ಒಳ್ಳೇ ವ್ಯವಸ್ಥೆಯಿಂದ ಇರಿಸಲ್ಪಟ್ಟಿದ್ದವು. ಸುತ್ತಲಿನ ಗಿಡಗಳೊಳಗಿಂದ ಹಾಯ್ದು ಬಂದಿರುವ ತಂಗಾಳಿಯು ಒಳ್ಳೇ ಸುಖಪ್ರದವಾಗಿತ್ತು. ಅದನ್ನೆಲ್ಲ ನೋಡಿ ದೊಡ್ಡ ದೊಂದು ಸಂಪತ್ತೆ ಪ್ರಾಪ್ತವಾದಷ್ಟು ಸಂತೋಷವು ನಮಗಾಯಿತು. ಇಳಿಯಲಿಕ್ಕೆ ಮುರುಕ ಧರ್ಮಸಾಲೆ ಕೂಡ ಸಿಕ್ಕದಿರುವಾಗ ಅಂಥ ಸುರಮ್ಯವಾದ ಮಂದಿರವನ್ನು ಕಂಡು ಸಂತೋಷವಾಗದಿರುವದೆ? ನಮ್ಮ ಜನರೆಲ್ಲರೂ ಬಂದು ಕೆಳಗಿನ ಮನೆಯಲ್ಲಿ ಅಡಿಗೆಯನ್ನು ಹೂಡಿದರು. ಇನ್ನೇನ ಚಿಂತೆಯಿಲ್ಲವೆಂದು ನೆನೆದು ಗುಂಡೇರಾಯರ ಸಮಾಚಾರಕ್ಕಾಗಿ ನಾವು ಔಷಧಾಲಯಕ್ಕೆ ನಡೆದೆವು.

ಏನಿದ್ದ ಸಮಾಚಾರವನ್ನು ನಾವು ಡಾಕ್ಟರ ಸಾಹೇಬರ ಮುಖಾಂತರವಾಗಿಯೇ ಅರಿತುಕೊಳ್ಳಬೇಕಾಗಿತ್ತು. ರೋಗಿಯಿದ್ದಲ್ಲಿಗೆ ಹೋಗಿ ಅವರನ್ನು ಮಾತಾಡಿಸಲು ನಮಗೆ ಅಪ್ಪಣೆಯಿದ್ದಿಲ್ಲ. ಗುಂಡೇರಾಯರ ಕಣ್ಣಿಗೆ ಡಾಕ್ಟರರು ಶಸ್ತ್ರ ಪ್ರಯೋಗವನ್ನು ಮಾಡಿ, ಗೋಡೆಗಳನ್ನೆಲ್ಲ ಹಸರು ಬಣ್ಣ ದಿಂದ ಸಾರಿಸಿದ ಕೋಣೆಯಲ್ಲಿ ಅವರನ್ನು ಮಲಗಿಸಿದ್ದರು. ಅವರ ಆರೈಕೆಗಾಗಿ ತಜ್ಞಳಾದ ಯುರೋಪಿಯನ್ ಸ್ತ್ರೀಯೊಬ್ಬಳೇ ಅವರ ಬಳಿಯಲ್ಲಿ ಇರತಕ್ಕವಳು. ಅವಳಾಗಲಿ, ಡಾಕ್ಟರ ವಾಲ್ನೇಸ್ ಸಾಹೇಬರಾಗಲಿ ಇಬ್ಬರೇ ರೋಗಿಯ ಸಮೀಪಕ್ಕೆ ಹೋಗತಕ್ಕವರು, ನಾವು ನೆಟ್ಟಗೆ ಡಾಕ್ಟರರ ಬಳಿಗೆ ಹೋಗಿ ಸಮಾಚಾರವನ್ನು ಕೇಳಲಾಗಿ, ಅವರು “O! He is progressing well! Good morning (ಅವರಿಗೋ, ವಾಸಿಯಾಗುತ್ತಲೇ ನಡೆದಿದೆ. ನೀವಿನ್ನು ಹೋಗಬಹುದು)” ಎಂದವರೇ ಮತ್ತೆಲ್ಲಿಗೋ ಹೊರಟುಹೋದರು.

ಮನೆಗೆ ಬಂದು ಭೋಜನವನ್ನು ತೀರಿಸಿಕೊಂಡು ತಾಂಬೂಲಾದಿಗಳನ್ನು ಸೇವಿಸಿ, ವಾಮಕುಕ್ಷಿಗಾಗಿ ಅಟ್ಟದ ಮೇಲೆ ಬಂದು ಅಡ್ಡಾದೆವು. ಶ್ಯಾಮರಾಯರು ಮಲಗಿದಲ್ಲಿಯೇ “ಜಗತ್ತಿನ ಇಂಗಿತ (Riddle of the Universe)” ಎಂಬ ಪುಸ್ತಕವನ್ನೋದುವದರಲ್ಲಿ ತೊಡಗಿದಂತೆ ಕಂಡರು. ನರ್ನ ಮಾಧವರಾಯರಿಗೂ ಬೇಗನೆ ಜಂಪು ಹತ್ತಿತು. ಕೆಲಹೊತ್ತಿನ ಮೇಲೆ ಶ್ಯಾಮರಾಯರ ಬೂಟುಗಾಲಿನ ಚರ್ರಚರ್ರೆಂಬ ಸಪ್ಪಳಕ್ಕೆ ನಾನು ಎಚ್ಚತ್ತೆನು. ರಾಯರು ಅಂಗಾಲಿನಿಂದ ಕುತ್ತಿಗೆಯ ವರೆಗೆ, ಪ್ರತಿಷ್ಠಿತನಾದ ಯುರೋಪಿಯನ್ನನಂತೆ, ಬೂಟು ಪ್ಯಾಂಟ್ ಕೋಟ ಜಾಕೆಟ್ ನೆಕ್‍ಟಾಯ ಕಾಲರ ಮುಂತಾದವುಗಳನ್ನು ಧರಿಸಿಕೊಂಡು ನಿಲುವುಗನ್ನಡಿಯ ಮುಂದೆ ನಿಂತಿದ್ದರು. ಅವರನ್ನು ಕಂಡು ನಾನು “ಏನು ರಾಯರೆ, ನಿಮ್ಮ ಕಣ್ಣಿಗೆ ಕಣ್ಣು ಹತ್ತಿದಂತೆ ಕಣುವದಿಲ್ಲ. ಈಗಾಗಲೇ ಈ ವೇಷವೇಕೆ?” ಎಂದು ಕೇಳಿದೆನು.

“ಗುಲ್‍ಬಾಯಿಯ ಮನೆಗೆ ಹೋಗುವ ಸಿದ್ಧತೆ ಕಾಣುತ್ತದೆ” ಎಂದು ಮಲಗಿದವರಾದ ಮಾಧವರಾಯರು ಮುಸುಗು ತೆಗೆಯದೆ ಸೂಚಿಸಿದರು.

“ಮಾಧವರಾವಜೀ, ಏಳಿರಿನ್ನು, ಚೇಷ್ಟೆ ಮಾಡಿದಂತಲ್ಲ. ಇಲ್ಲಿ ನೋಡಿರಿ, ಎರಡೂಕಾಲು ಘಂಟೆಯಾಗಿದೆ” ಎಂದು ಹೇಳಿ ಶ್ಯಾಮರಾಯರು ಜೇಬಿನೊಳಗಿಂದ ತಮ್ಮ ಚಿನ್ನದ ಗಡಿಯಾರವನ್ನು ತೆಗೆದು ತೋರಿಸಿದರು.

“ಅಯ್ಯೋ! ಗುಲ್‌ಬಾಯಿಯ ಮನೆಗೆ ಹೋಗಬೇಕಾದರೆ ಇನ್ನೂ ನಾಲ್ಕತ್ತೈದು ನಿಮಿಷಗಳಿವೆ. ಇಷ್ಟೇಕೆ ಅವಸರ?” ಎಂದು ಮಾಧವರಾಯರು ಎದ್ದು ಕೂಡಲು ಪ್ರಯತ್ನ ಮಾಡದೆ ಮಾತಾಡಿದರು.

“ನೀವು ಎದ್ದು ಮುಖ ತೊಳೆದುಕೊಂಡು ಪೋಷಾಕು ಮಾಡಿಕೊಳ್ಳುವಷ್ಟರಲ್ಲಿ ನಾಲ್ಕತ್ತೈದು ಮಿನಿಟುಗಳಾಗಲಿ ಇಪ್ಪತ್ತೇಳುನೂರು ಸೆಕಂಡಗಳಾಗಲಿ, ಹೊರಟುಹೋಗುವವು.”

ಮಾಧವರಾಯರು ಎದ್ದು ಕುಳಿತು “ನನ್ನ ಪೋಷಾಕಿಗೆ ಸಮಯವೇ ಬೇಡ. ಆ ಕೋಟು ತೊಟ್ಟು ಕೊಂಡು ರುಮಾಲು ಸುತ್ತಿಕೊಳ್ಳಲಿಕ್ಕೆ ಎರಡೇ ನಿಮಿಷಗಳು ಸಾಕು. ರಥವನ್ನು ತರಿಸಲಿಕ್ಕೆ ಆಳಿಗೆ ಹೇಳಿರುವಿರೇನು?” ಎಂದು ಕೇಳಿದರು.

“ಹೊರಗೆ ಫೈಟನ್ (ಒಂದು ಪ್ರಕಾರದ ರಥ) ಬಂದು ನಿಂತೇ ಇದೆ, ಏಳಿರಿ.”

ಮೂರು ಗಂಟೆಗೆ ಸರಿಯಾಗಿ ನಾವು ಗುಲ್‍ಬಾಯಿದು ಮಂದಿರಕ್ಕೆ ಹೋದೆವು. ರಮಣೀಯವಾಗಿರುವ ಪುಷ್ಪೋದ್ಯಾನದ ಮಧ್ಯದಲ್ಲಿ ಮೆರೆಯುತ್ತಿರುವ ಆ ಮಂದಿರವು ಅತಿ ರಮಣೀಯವಾಗಿ ತೋರಿತು. ರಥದಿಂದಿಳಿದ ಕೂಡಲೆ ಮನೆಯ ಗುಮಾಸ್ತನು ನಮ್ಮನ್ನು ಆದರದಿಂದ ಉಪ್ಪರಿಗೆಯ ಮೇಲೆ ಕರೆದೊಯ್ದನು. ಶ್ರೀಮಂತರ ಮನೆಯೇ ಅದು. ಅಲ್ಲಿ ಶೋಭೆಯನ್ನು ವರ್ಣಿಸುವದೇತಕ್ಕೆ? ಗುಲ್‍ಬಾಯಿಯ ತಂದೆಯವರಾದ ಲಲ್ಲೂ ಭಾಯಿಯವರು ಗುಜರಾಥೀ ಸಭ್ಯಗೃಹಸ್ಥರಿಗುಚಿತವಾದ ಪೋಷಾಕು ಮಾಡಿಕೊಂಡು ತೂಲಿಕಾಮಯವಾದ ಆರಾಮಕುರ್ಚಿಯಲ್ಲಿ ಕುಳಿತಿದ್ದರು. ಅವರ ಬಳಿಯಲ್ಲಿ ಅವರ ಮುಖ್ಯ ಮನೀಮನಾದ ಶ್ಯಾಮಲದಾಸನೂ ಅವನ ಹೆಂಡತಿಯಾದ ಮಾಣಿಕಬಾಯಿಯೂ ಕುಳಿತಿದ್ದರು. ಲಲ್ಲೂಭಾಯಿಯವರ ಬಲಕ್ಕೆ ವಸ್ತ್ರಾಲಂಕಾರ ವಿಭೂಷಿತೆಯಾಗಿ ಕುಳಿತ ಗುಲ್‍ಬಾಯಿಯ ಮೂರ್ತಿಮತಿಯಾದ ಈಪ್ಸಿತಾರ್ಥ -ದೇವತೆಯಂತೆ ನಯನಾಭಿರಾಮೆಯಾಗಿ ಕಂಗೊಳಿಸಿದಳು. ಆ ಸುಂದರಿಯ ದಿವ್ಯವಾದ ರೂಪಕ್ಕೆ ಕೆಟ್ಟ ಜನರ ದೃಷ್ಟಿ ತಗಲಬಾರದೆಂದು ಅಲ್ಲೊಂದು ದೃಷ್ಟಿಯ ಗೊಂಬೆಯನ್ನು ಕುಳ್ಳಿರಿಸಿರುವರೋ ಎಂಬಂತೆ ನಮ್ಮ ಧೋಂಡೋಪಂತ ಢಂಢರೆಯವರ ಮಹಾಗ್ರಸ್ಥವು ಗುಲ್ ಬಾಯಿಯ ಬಳಿಯಲ್ಲಿ ಕುಳಿತಿತ್ತು. ಗಾಯಕನೋರ್ವನು ತಂಬೂರಿಯ ಸ್ವರವನ್ನು ಸರಿಯಾಗಿ ಮಾಡುವದರಲ್ಲಿ ನಿಮಗ್ನನಾಗಿ ಕುಳಿತು, ಮದ್ದಲೆಯವನಿಗೆ ಆಗಾಗ್ಗೆ ಪೆಟ್ಟು ಹಾಕಿ ತೋರಿಸೆಂದು ಸೂಚಿಸುತ್ತಿದ್ದನು.

ನಾವು ಒಳಕ್ಕೆ ಬಂದದ್ದನ್ನು ಕಂಡು ಗುಲ್‍ಬಾಯಿಯು ನಗೆಮೊಗವನ್ನು ತಾಳಿ ನಮಗೆ ಇದಿರಾಗಿ ಬಂದು ನಮ್ಮನ್ನು ತನ್ನ ತಂದೆಯ ಬಳಿಗೆ ಕರೆ ದೊಯ್ದು “ಇವರೇ ಆ ಸದ್‍ಗೃಹಸ್ಥರು,” ಎಂದು ಹೇಳಿದಳು. ಲಲ್ಲೂ ಭಾಯಿಯವರು ಆದರದಿಂದೆದ್ದು ನಿಂತು ನಮ್ಮ ಕರಸ್ಪರ್ಶಮಾಡಿ “ಹೀಗೆ ವಿಶ್ರಮಿಸಿಕೊಳ್ಳಬೇಕು” ಎಂದು ಹೇಳಿ ನಮಗೆ ಕುಳ್ಳಿರಲು ಕುರ್ಚಿಗಳನ್ನು ತೋರಿಸಿದರು. ನಾವು ಆಸನಸ್ಥರಾದ ಬಳಿಕ ಎಲ್ಲರೊಡನೆ ಆವರೋಪಚಾರಗಳ ಮಾತುಗಳು ನಡೆದವು.

ಗಾಯಕನು ತಂಬೂರಿಯನ್ನು ಸರಿಮಾಡುವಷ್ಟರಲ್ಲಿಯೇ ಅದರದೊಂದು ತಂತಿಯು ತಟ್ಟನೆ ಹರಿದುಹೋಯಿತು. ಹೊಸ ತಂತಿಯನ್ನು ತರಿಸಬೇಕೆಂದು ಬುವಾನವರು (ಗಾಯಕನು) ಹೇಳಿದನು.

“ಬುವಾ, ಪಿಯಾನೋದ ಸ್ವರದೊಡನೆ ಹಾಡಿರಿ. ಇನ್ನು ತಂತಿಯನ್ನು ತರಿಸಲು ಅವಕಾಶವಿಲ್ಲ. ಇಲ್ಲಿ ಬಂದಿರುವ ಮಹನೀಯರಾದ ಶ್ಯಾಮ ರಾಯರು ಪಿಯಾನೋ ಬಾರಿಸುವದರಲ್ಲಿ ಹೆಸರಾದವರಂತೆ!?” ಎಂದು ಹೇಳಿ ನಮ್ಮ ಶ್ಯಾಮರಾಯರನ್ನು ಕುರಿತು : “ರಾಯರೆ, ನನ್ನದಿಷ್ಟು ವಿಜ್ಞಾಪನೆಯನ್ನು ಮನ್ನಿಸುವಿರೆಂದು ಕೋರುತ್ತೇನೆ” ಎಂದು ಮೃದುಹಾಸವನ್ನು ತಳೆದು ಮನವೊಲಿಸುವಂತೆ ಬೇಡಿಕೊಂಡಳು.

ಒಲ್ಲೆನೆನ್ನಲು ಶ್ಯಾಮರಾಯರಿಗೆ ಎದೆ ಸಾಲದು. ಅವರು ಮತ್ತೊಂದು ಮಾತಾಡದೆ ಪೇಟಿಯ ಮೇಲೆ ಕುಳಿತು, ಸಾ,ರಿ,ಗ,ಮ,ಪ,ಧ,ನಿ,ಸ ಎಂದು ಸ್ವರಸ್ಥಾನಗಳ ಮೇಲೆ ಕೈಯಾಡಿಸಿ ಸ್ವರಗಳು ಸರಿಯಾಗಿವೆಯಿಲ್ಲವೋ ನೋಡಿದರು. ಅಷ್ಟರಿಂದಲೇ ಅವರು ಆ ಕಲೆಯಲ್ಲಿ ಒಳ್ಳೇ ನಿಷ್ಟತರೆಂಬದು ಎಲ್ಲರಿಗೆ ತಿಳಿದುಹೋಯಿತು. ಗುಲ್‍ಬಾಯಿಯ ಮುಖದಲ್ಲಿ ಸಮಾಧಾನದ ಚಿಹ್ನವು ವ್ಯಕ್ತವಾಗಿ ತೋರಿತು. ಗಾಯಕನು “ಢೋಲನ ಮೇರೆ ಘರ ಆವೆ” ಎಂದು ಗಾನಕ್ಕೆ ಪ್ರಾರಂಭ ಮಾಡಿದನು. ಇದು ಪರೀಕ್ಷೆಯ ಸಮಯವೆಂದರಿತು ಶಾಮರಾಯರು ಒಳ್ಳೆ ಮನಸ್ಸು ಕೊಟ್ಟು ತಮ್ಮ ಕೌಶಲ್ಯವನ್ನೆಲ್ಲ ವೆಚ್ಚ ಮಾಡಿ ಬಾರಿಸಿದರು. ಗಾಯಕನಾದರೂ ಕಡಿಮೆಯವನಲ್ಲ. ಗಾಯನವು ಭರಕ್ಕೆ ಬಂದಹಾಗೆ ಹಾಡುವವನಿಗಿಂತಲೂ ಬಾರಿಸುವವನ ಜಾಣ್ಮೆಯು ಅಧಿಕವಾದದ್ದೆಂಬ ಮಾತು ಎಲ್ಲರ ಮನಸ್ಸಿಗೂ ತಟ್ಟಿತು. ಒಂದು ಸಂಧಿಯಲ್ಲಿ ಶ್ಯಾಮಲದಾಸನು ಆನಂದೋದ್ರೇಕದಿಂದ “ವಾಃವಾ, ವಾಃವಾ! ರಾವಸಾಹೇಬ, ಕ್ಯಾಬಾತ್ ಹಾಯ್!” ಎಂದು ಶ್ಯಾಮರಾಯರ ಕಡೆಗೆ ತನ್ನ ಎರಡೂ ಕೈಗಳನ್ನು ಚಾಚಿ ಸಂಭಾವಿಸಿದನು. ಶ್ಯಾಮಲದಾಸನು ಗಾಯನಕಲಾಭಿಜ್ಞನು. ಅವನ ಉದ್ಗಾರವನ್ನು ಕೇಳಿ ಗಾಯಕನ ಹೊಟ್ಟೆಯಲ್ಲಿ ಮತ್ಸರವು ಹೊಕ್ಕಿತು. ಅವನು ಅಡ್ಡತಿಡ್ಡವಾಗಿ ಹಾಡಿ ಶ್ಯಾಮರಾಯರ ಕೈ ನಿಂದಿರಸಬೇಕೆಂದು ಜಿಗಿದಾಡಿ ಪ್ರಯತ್ನ ಮಾಡಿದರೂ ಅದೆಲ್ಲ ವ್ಯರ್ಥವಾಯಿತು. ಗಾಯಕನ ಇಂಗಿತವನ್ನರಿತು “ಬುವಾ, ಶ್ಯಾಮರಾಯರನ್ನು ತಪ್ಪಿಸಹೋಗಿ ನೀವೇ ಅಡ್ಡ ಹಾದಿಗೆ ಬಿದ್ದು ನಗೆಗೇಡಾಗುವಿರಿ. ಕೆಲಸವು ಸರಳವಾಗಿ ನಡೆಯಲಿ. ರಾಯರು ಹೊಟ್ಟೆ ತುಂಬಿಸಿಕೊಳ್ಳಲೆಂದು ಬಾರಿಸಬಂದಿಲ್ಲ. ಅವರು B, A, LL B, ಇದ್ದಾರೆ. ನಾಳೆ ಈ ಸಂಸ್ಥಾನದ ನ್ಯಾಯಾಧೀಶರಾವರೂ ಆಗುವರು.” ಎಂದು ಸೂಚಿಸಲಾಗಿ ಬುವಾನವರು ಹಾದಿಗೆ ಬಂದರು. ಕೆಲಸವು ಯಥಾ ಪ್ರಕಾರವಾಗಿ ಸಾಗಿತು. ಗಾಯಕನು ಹಾಡುವದನ್ನು ಮುಗಿಸಿದಕೂಡಲೆ ಶ್ಯಾಮರಾಯರು ಅದೇ ಪದವನ್ನು ಪಿಯಾನೋದಲ್ಲಿ ಬಹು ಸುಶ್ರಾವ್ಯವಾಗಿ ಬಾರಿಸಿ, ಬೆರಗಾಗಿ ಕುಳಿತಿರುವ ಗುಲ್‍ಬಾಯಿಯನ್ನು ಕುರಿತು “How is that unpire ಹೇಗಾಯಿತು ನಿರ್ಣಾಯಕರೆ?)” ಎಂದು ಆಢ್ಯತೆಯಿಂದ ಕೇಳಿದರು.

ತಾನಾದರೂ ಉತ್ತಮಳಾದ ಬಾರಿಸುವಾಕೆಯೆಂಬ ಜಂಬವು ಗುಲ್‍ಬಾಯಿಗೆ ಇತ್ತು. ಆದರೆ ಈಗ ಶ್ಯಾಮರಾಯರು ತೋರಿಸಿದ ನಿಃಸೀಮವಾದ ಪ್ರಾವೀಣ್ಯವನ್ನು ಕಂಡು ಅವಳ ಹೃದಯದೊಳಗಿನ ಅಭಿಮಾನವೆಲ್ಲ ಕರಗಿ ನೀರಾಗಿ ಹರಿದು ಹೋಯಿತು. ತನಗೂ ಅವರಿಗೂ ಅಜಗಜ ನ್ಯಾಯವೆಂದು ತನ್ನೊಳಗೆ ತಾನೇ ಒಪ್ಪಿಕೊಂಡಳು. ಅವಳು ಅನಿರ್ವಾಹಕ್ಕಾಗಿ ಶ್ಯಾಮರಾಯರ ಪ್ರಶ್ನಕ್ಕೆ ಉತ್ತರ ಕೊಡಲೆಂದು ತನ್ನ ಮುಖವನ್ನು ಮೆಲ್ಲನೆ ಮೇಲಕ್ಕೆತ್ತಿ “O! Most exquisite (ಉತ್ತಮೋತ್ತಮ)” ಎಂದು ಹೇಳಿದರೂ ನೆಟ್ಟನೆ ಶ್ಯಾಮರಾಯರ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ.

ಆಗ ಲಲ್ಲೂಭಾಯಿಯವರು ಎದ್ದು ಶ್ಯಾಮರಾಯರ ಬಳಿಗೆ ಬಂದು ಅವರ ಹಸ್ತ ಸ್ಪರ್ಶವನ್ನು ಮಾಡಿ “ರಾವಸಾಹೇಬ, ನಮ್ಮ ಗುಲ್‍ಬಾಯಿಯು ಅನ್ಯರ ಸ್ತುತಿಮಾಡಿದ್ದನ್ನು ನಾನು ಇದೇ ಮೊದಲು ಕೇಳಿದೆನು. ಅರ್ಥಾತ್ ನಿಮ್ಮಂಥ ವಾದನ ಕಲಾಪ್ರವೀಣರು ದುರ್ಲಭರೆಂಬದರಲ್ಲಿ ಸಂದೇಹವಿಲ್ಲ.” ಎಂದು ಮನಃಪೂರ್ವಕವಾಗಿ ನಮ್ಮ ಮಿತ್ರನನ್ನು ಸಂಭಾವಿಸಿದರು.

ಗಾಯನವಾದ ಬಳಿಕ ಉಪಹಾರಕ್ಕೆ ಪ್ರಾರಂಭವಾಯಿತು. ಅಂಜೂರಿ, ದ್ರಾಕ್ಷ, ಮಾವು, ನಾರಿಂಗ ಮುಂತಾದ ಫಲಗಳೂ ಒಡೆ, ಚಕ್ಕಲಿ, ಗುಳ್ಳೋರಿಗೆ ಮುಂತಾದ ಪದಾರ್ಥಗಳೂ ಬೆಳ್ಳಿಯ ತಟ್ಟೆ ಪಟ್ಟೆಗಳಲ್ಲಿ ತುಂಬಿಬಂದವು. ಗುಲ್‍ಬಾಯಿ ಮಾಣಿಕಬಾಯಿಯರದ್ದು ಆ ಪದಾರ್ಥಗಳನ್ನೆಲ್ಲ ನಮ್ಮ ಹರಿವಾಣಗಳಲ್ಲಿ ಒಳ್ಳೇ ಉಬ್ಬಿನಿಂದ ಬಡಿಸಿದರು. ಉಪಹಾರವು ಯಥೇಚ್ಛವಾಗಿ ಸಾಗಿತು, ವಾಚಕರೇ, ನಗಬೇಡಿರಿ. ಲಲ್ಲೂ ಭಾಯಿಯವರೆಂದರೆ ಗುರ್ಜರಾಷ್ಟ್ರದೇಶದ ವಣಿಜರೆಂದು ನೀವು ತಿಳಿದಿರುವಿರಾದೀತು ಹಾಗಲ್ಲ. ಅವರು ಆ ದೇಶದಲ್ಲಿ ಶ್ರೇಷ್ಠರೆಂದೆನಿಸಿಕೊಂಡ ನಾಗರ ಬ್ರಾಹ್ಮಣರ ವರ್ಗಕ್ಕೆ ಸೇರಿದವರು. ಇಷ್ಟು ಮಾತ್ರ ಸರಿ, ಅವರಾದರೂ ನನ್ನಂತೆಯೂ ನನ್ನ ಸ್ನೇಹಿತರಂತೆಯೂ ಸುಧಾರಣಾಪ್ರಿಯರು. ಇಲ್ಲವಾದರೆ ನಾಗರ ಬ್ರಾಹ್ಮಣರು ನಮ್ಮ ಬ್ರಾಹ್ಮಣರೊಡನೆ ಉಣ್ಣುವದಿಲ್ಲ; ನಾವು ಅವರೊಡನೆ ಉಣ್ಣುವದಿಲ್ಲ.

ಫಲಾಹಾರ ತಾಂಬೂಲ ಗಂಧಪುಷ್ಪಗಳ ಸಮರ್ಪಣಗಳಾದ ಬಳಿಕ ನಾವು ನಮ್ಮ ಮನೆಗೆ ಹೋಗಲು ಯಜಮಾನರ ಅಪ್ಪಣೆ ಕೇಳಿದೆವು. ಲಲ್ಲೂ ಭಾಯಿಯವರೆದ್ದು ನಿಂತು ಕೈಜೋಡಿಸಿ “ತಮ್ಮ ಪರಿಚಯದಿಂದ ನಾನು ಕೃತಾರ್ಥನಾಗಿರುವೆನು, ಹೇಗೋ ತಾವಿನ್ನು ನಮ್ಮ ಸ್ನೇಹಿತರಾಗಿರುವಿರಿ. ಕೂಡಿದಾಗ ಈ ಮನೆಗೆ ಬಂದು ಹೋಗುತ್ತಲಿರಬೇಕೆಂದು ಪ್ರಾರ್ಥಿಸುತ್ತೇನೆ” ಎಂದು ಬಹು ಸೌಜನ್ಯಯುತರಾಗಿ ಹೇಳಿಕೊಂಡರು. “ನಾಳಿಗೆ ನಮ್ಮ ಮನೆಯಲ್ಲಿ ತಾವೆಲ್ಲರೂ ತಮ್ಮ ಪಾದಧೂಳಿಯನ್ನು ಕೆಡಹುವಿರೆಂದು ಬೇಡಿ ಕೊಳ್ಳುತ್ತೇವೆ” ಎಂದು ನಾನು ಕೇಳಿಕೊಂಡೆನು. ಅದಕ್ಕೆ ಅವರಾದರೂ ಒಪ್ಪಿಕೊಂಡರು. ನಾವು ನಮ್ಮ ಮನೆಗೆ ಬಂದೆವು.

ಲಲ್ಲೂ ಭಾಯಿಯವರೂ ಅವರ ಮನೆಯವರಾದ ಗುಲ್‍ಬಾಯಿ ಮುಂತಾದವರೂ ಇಂದು ನಮ್ಮ ಮನೆಗೆ ಬರುವರೆಂದು ಅವರ ಸ್ವಾಗತಕ್ಕಾಗಿ ನಾವು ಬಹುಪರಿಯಾಗಿ ವ್ಯವಸ್ಥೆಗಳನ್ನು ಮಾಡಿದ್ದೆವು. ಮುಖ್ಯವಾಗಿ ನಾವಿರುವ ಬಂಗಲೆಯು ಪ್ರಶಸ್ತವಾಗಿಯೂ ಹಾಸಿಗೆ ದಿಂಬ ಕುರ್ಚಿ ಮೇಜು ಕೋಚಗಳಿಂದ ಪರಿಷ್ಕೃತವಾಗಿಯೂ ಇತ್ತು. ಉಪಹಾರದ ವ್ಯವಸ್ಥೆಯನ್ನಾದರೂ ನಮ್ಮ ಅಡಿಗೆಯವನು ಬಲು ಚನ್ನಾಗಿ ಮಾಡಿದ್ದನು. ತಾಂಬೂಲ ಹಾರತುರಾಯಿಗಳಿಗೆ ಮಿರ್ಜಿಯ ಗ್ರಾಮವು ಆಗರವೇ ಆಗಿತ್ತು. ನಮ್ಮ ಸತ್ಕಾರಕ್ಕೆ ಮೆಚ್ಚಿದವರಾಗಿ ಲಲ್ಲೂ ಭಾಯಿಯವರು ನಮ್ಮೊಡನೆ ಯಥೇಚ್ಛವಾಗಿ ಹರಟೆಯನ್ನು ಬಿಚ್ಚಿದರು. ಅತ್ತಿತ್ತ ಸುತ್ತಾಡಿ ಹರಟೆಯು ಅಶ್ವಮೇಧದ ಕುದುರೆಯಂತೆ ಸ್ಟೇಚ್ಛೆಯಿಂದ ಸ್ತ್ರೀಸ್ವಾತಂತ್ರದ ವಿಷಯವನ್ನು ಪ್ರವೇಶಿಸಿತು. ಆ ವಿಷಯದ ಸ್ವಾಮಿನಿಯಾದ ಗುಲ್‍ಬಾಯಿ ಪ್ರಮಿಲೆಯು ತನ್ನ ಬತ್ತಳಿಕೆಯೊಳಗಿನ ಪ್ರಮಾಣಾಸ್ತ್ರಗಳನ್ನು ತೆಗೆತೆಗೆದು ಎಸೆಯಲಾರಂಭಿಸಿದಳು. ಆಗ ನಮ್ಮ ಶ್ಯಾಮರಾಯರು ಮುಂದರಿದು ಬಂದು “ಗುಲ್‍ಬಾಯಿ ಸ್ತ್ರೀಸ್ವಾತಂತ್ರ್ಯವೆಂದರೇನು? ಪುರುಷರೆಲ್ಲರನ್ನು ನರ್ಮದೆಯ ಆಚೆಗೆ ಅಟ್ಟಿ, ಈಚೆಗೆ ನೀವೆಲ್ಲರೂ ನಿಂತುಕೊಂಡು ಪರಸ್ಪರರೊಡನೆ ಪರಸ್ಪರರ ಸಂಬಂಧವಿಲ್ಲದಂತೆ ಇರತಕ್ಕದ್ದೆಂಬದು ನಿಮ್ಮ ಅಭಿಪ್ರಾಯವೊ?” ಎಂದು ಕೇಳಿದರು.

ಪರಿ ಚಮತ್ಕಾರವಾದ ಪ್ರಶ್ನೆಕ್ಕೆ ಉತ್ತರವನ್ನೀಯಲು ಗುಲ್‍ಬಾಯಿಗೆ ಸಹಸಾ ಬುದ್ಧಿ ಸಾಲದೆ ಅವಳು ಮೂಢೆಯಂತೆ ಶ್ಯಾಮರಾಯರ ಮುಖವನ್ನು ನೋಡಿ “ಹಾಗಲ್ಲ….” ಎಂದು ಉಪಕ್ರಮಿಸಿದರೂ ಮುಂದೆ ಮಾತೇ ಬರಲೊಲ್ಲವು.

“ತಿಳಿಯಿತು. ಹಾಗೆ ನಮ್ಮನ್ನು ನಿಷ್ಟುರತೆಯಿಂದ ಅಟ್ಟಿ ಕೊಡಲು ನಿಮಗೆ ಧೈರ್ಯವಿಲ್ಲ. ಆದರೂ ಸ್ತ್ರೀ ಪುರುಷರು ಒಂದೇ ಊರಿನಲ್ಲಾಗಲಿ, ಮನೆಯಲ್ಲಾಗಲಿ ಇದ್ದು ಕೊಂಡರೂ ಅವರು ಅನ್ನೋನ್ಯರ ಅರಿಕೆಯಿಲ್ಲದಂತೆ ಸ್ವತಂತ್ರರಾಗಿರಬೇಕೆಂಬದು ನಿಮ್ಮ ಅಭಿಪ್ರಾಯವು.”

“ಹೀಗೆ ತೋರುತ್ತದೆ” ಎಂದು ಆಯತ್ತವಾಗಿ ಉದ್ಭವಿಸಿದ ಆಧಾರದ ಮೇಲೆ ಕಾಲೂರಿ ನಿಂತುಕೊಂಡಂತೆ ನಟಿಸಿ ಗುಲ್ಬಾಯಿಯು ನುಡಿದಳು.

“ಗುಲ್‍ಬಾಯಿ, ಹೀಗೆ ಮಾತಾಡಿದರೆ ನಿಮಗೆ ಅರ್ಥಶಾಸ್ತ್ರದ ನಿಯಮಗಳಾಗಲಿ ಇತಿಹಾಸದ ತತ್ವಗಳಾಗಲಿ ವ್ಯವಹಾರದ ಜ್ಞಾನವಾಗಲಿ ಚನ್ನಾಗಿ ವಿದಿತವಾಗಿಲ್ಲವೆನ್ನ ಬೇಕಾಗುವದು.”

“ಅದೇಕೆ?” ಎಂದು ಆ ಬಾಲೆಯು ಕಿಂಚಿತ್ ಕ್ರುದ್ಧಳಾಗಿ ಕೇಳಿದಳು.

ಶ್ಯಾಮರಾಯರು ನಕ್ಕು “ಬಾಯಿಯವರೇ, ನೇಕಾರನಾಗು ಜವಳಿಯವನಾಗಲಿ ಇಲ್ಲದಿದ್ದರೆ ನಿಮಗೆ ಆ ಅಂದವಾದ ಸೀರೆ ಕುಪ್ಪಸಗಳು ಸಿಕ್ಕುತಿದ್ದಿಲ್ಲ, ಅಕ್ಕಸಾಲಿಗನಿಲ್ಲದಿದ್ದರೆ ನೀವು ಆಧ್ಯತೆಯಿಂದಿಟ್ಟುಕೊಂಡಿರುವ ಆ ವಜ್ರ ಕಂಕಣಗಳೇ ಹುಟ್ಟುತ್ತಿದ್ದಿಲ್ಲ. ಇದು ಹಾಗಿರಲಿ, ಇಂಗ್ಲಂಡ, ಫ್ರಾನ್ಸಗಳಂಥ ಸ್ವತಂತ್ರವಾದ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಬೇಕಾದ ಸೌಕರ್ಯಗಳನ್ನು ಗಳಿಸಿಕೊಳ್ಳುತ್ತಿದ್ದರೂ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರಕ್ಕೆ ಅನುಕೂಲವಾಗದಿದ್ದರೆ ಈ ಎರಡೂ ರಾಷ್ಟ್ರಗಳಿಗೂ ಅನೇಕವಾದ ತೊಂದರೆಗಳುಂಟಾಗುವವು”

ಆಗ ಲಲ್ಲಭಾಯಿಯವರು ತಮ್ಮ ಮಗಳನ್ನು ಕುರಿತು “ಗುಲ್, ಈ ಮಾತುಗಳನ್ನು ನೀನು ಪುಸ್ತಕಗಳಲ್ಲಿ ಓದಿಕೊಳ್ಳಲಿಲ್ಲವೇನು?” ಎಂದು ಕೇಳಿದರು.

“ಓದಿಕೊಂಡಿದ್ದೇನೆ. ಅದಕ್ಕಾಗಿಯೇ ಈ ರಾಯರ ವಾದಕ್ಕೆ ನಾನು ನಿರುತ್ತರಳಾಗಿರುವೆನು.”

“ಹಾಗಾದರೆ ಇನ್ನು ಸ್ತ್ರೀ ಸ್ವಾತಂತ್ರ್ಯವೆಂದರೆ ಹೇಗಿರಬೇಕು ಹೇಳಿರಿ. ಮದುವೆಯಾದ ಪತಿಯ ಮನೆಯಲ್ಲಿ ನೀವು ಸೇರಿಕೊಂಡು ಅವನನ್ನೇ ಹೊರಗೆ ಹಾಕಬೇಕೆನ್ನುವಿರಾ?” ಎಂದು ಶ್ಯಾಮರಾಯರು ಕುಚೇಷ್ಟೆಗಾಗಿ ಕೇಳಿದರು.

ಗುಲ್ ಬಾಯಿಯು ಒಳಿತಾಗಿ ನಾಚಿಕೊಂಡು ದೃಷ್ಟಿಯನ್ನು ಕೆಳಗಿರಿಸಿ “ಹಾಗಲ್ಲ, ಈ ಲೋಕದಲ್ಲಿ ಸ್ತ್ರೀಪುರುಷರು ಒಬ್ಬರೊಬ್ಬರಿಗೆ ಸಮಾನರಾದವರಲ್ಲೆ?” ಎಂದು ಮಂದಸ್ಮಿತೆಯಾಗಿ ಕೇಳಿದಳು.

“ಈ ಮಾತಿಗೆ ನನ್ನ ಒಪ್ಪಿಗೆಯಿಲ್ಲ. ಪುರುಷನು ಹೆಂಗಸಿಗೆ ಸಮಾನನೆಂದು ಹೇಳಿದರೆ ಅದು ಅವನ ನಿಂದೆಯು.”

ಶ್ಯಾಮರಾಯರು ಆಡಿದ ಈ ಮಾತಿಗೆ ಗುಲ್‍ಬಾಯಿಯು ಬಹು ವಿನೋದಪಟ್ಟು ನಕ್ಕು “ಸ್ತ್ರೀಯು ಪುರುಷನಿಗೆ ಸಮಾನಳೆಂದು ಹೇಳಿದರಾದರೂ ಒಪ್ಪುವಿರೋ ಇಲ್ಲವೊ?” ಎಂದು ಕೇಳಿದಳು.

“ಸ್ತ್ರೀಯು ಪುರುಷನಿಗೆ ಸಮಾನಳೇ ಆಗಿದ್ದ ಪಕ್ಷದಲ್ಲಿ ಹಾಗೆ ಒಪ್ಪಬಹುದು. ಪುರುಷರೊಡನೆ ಸಮಾನತೆಯನ್ನು ಪಡೆದರೆ ನೀವು ಧನ್ಯರಾಗುವಿರಷ್ಟೆ? ನಿಮ್ಮ ಸುಂದರವಾದ ಮುಖವು ಚಂದ್ರನಿಗೆ ಸಮಾನವಾಗಿರುವದೆಂದು ಹೇಳಿದರೂ ನೀವು ಧನ್ಯರಾಗುವಿರಿ. ಆದರೆ ಏನು ಮಾಡಿದರೂ ನಿಮ್ಮ ಮುಖವು ಚಂದ್ರಮಂಡಲವಾಗದೆಂಬದನ್ನು ಮಾತ್ರ ನೀವು ಒಪ್ಪಿ ಕೊಳ್ಳಲೇಬೇಕು.”

“ಅಂದರೆ ಸ್ತ್ರೀಯರೆಲ್ಲರೂ ನಿಮ್ಮ ಚರಣದಾಸಿಯರೆಂದು ನೀವು ತಿಳುಕೊಂಡಿರುವಿರಾಗಿ ತೋರುತ್ತದೆ!” ಎಂದು ಗುಲ್‍ಬಾಯಿಯು ಕೋಪವನ್ನು ತಾಳಿ ಕೇಳಿದರೂ ಅಪಜಯದಿಂದ ಅವಳ ಮುಖವು ಸೋತು ಬಾಡಿ ಹೋಗಿತ್ತು.

“ಹಾಃ ಹಾಃ! ನಮ್ಮ ಉಪಕಾರಕ್ಕಾಗಿ ನೀವು ಹೀಗೆ ಹೇಳಬೇಕಾಗಿಲ್ಲ. ನಿಮ್ಮ ಮಾತೆಯವರನ್ನು ಮೊದಲುಮಾಡಿಕೊಂಡು ಜಗನ್ಮಾತೆಯರಾದ ಪಾರ್ವತೀ ಲಕ್ಷ್ಮೀದೇವಿಯರು ಕೂಡ ತಾವು ತಮ್ಮ ಪತಿರಾಯರ ಚರಣದಾಸಿಯರೆಂದು ಒಪ್ಪಿಕೊಂಡಿರುವರು. ಇನ್ನು ನೀವು ಒಬ್ಬ ಗುಣ ಹೀನೆಯನ್ನಾಗಲಿ ಚಂಡಿಯನ್ನಾಗಲಿ ನಿಮ್ಮ ಗುರುವನ್ನಾಗಿ ಮಾಡಿಕೊಂಡರೆ ನನ್ನ ಯತ್ನವಿಲ್ಲ.”

ಲಲ್ಲೂ ಭಾಯಿಯವರು ಈ ಮಾತು ಕೇಳಿ ಉದ್ರೇಕದಿಂದ ಚಪ್ಪಳೆ ಹೊಡೆದು ಅಂದದ್ದು: “ವಾಃ ವಾಃ! ಈ ವಾದದ ನಿರ್ಣಯವಾದಂತಾಯಿತು. ಇತಿಶ್ರೀ ಗುಲ್‍ಬಾಯಿ ಶಾಮರಾವ ಸಂವಾದೇ ಶ್ಯಾಮರಾವ ವಿಜಯೋ ನಾಮ ಪ್ರಥಮೋಧ್ಯಾಯಃ! ಇಂಥದೇ ಬೇರೊಂದು ವಾದವನ್ನು ಮತ್ತೊಂದು ಪ್ರಸಂಗದಲ್ಲಿ ತೆಗೆಯೋಣ.”

ತನ್ನ ತಂದೆಯು ಕೂಡ ಪರ ಪಕ್ಷಕ್ಕೆ ಸೇರಿದ್ದು ಕಂಡು ಗುಲ್ಬಾ ಯಿಯು ನಿರ್ವಿಣ್ಣಳಾದಳು. ಅವಳ ಮುಖದಲ್ಲಿಯ ಅಢ್ಯತೆಯೆಲ್ಲ ಅಳಿದು ಹೋಗಿ ಅಲ್ಲಿ ಲಜ್ಜೆಯ ಆಧಿಷ್ಠಾನವು ನಿರಂತರವಾಗಿ ಸ್ಥಾಪಿತವಾಯಿತು. ವಿಷಾದದ ಭರಕ್ಕಾಗಿ ಅವಳು ಅವನತಮುಖಿಯಾಗಿ ಸುಮ್ಮನೆ ಕುಳಿತು ಕೊಂಡಳು. ಶ್ಯಾಮರಾಯರು ಅವಳ ಸ್ಥಿತಿಯನ್ನು ಕಂಡು ಕನಿಕರವುಳ್ಳವರಾಗಿ ಅವಳ ಮನಸ್ಸಿಗೆ ಉತ್ಸಾಹ ಬರಲೆಂದು ಚಿಂತಿಸಿ, ಅಂದದ್ದು :

“ಗುಲ್ ಬಾಯಿ, ಪತಿಯಲ್ಲಿ ಪತ್ನಿಯ ದಾಸೀಭಾವವು ಸ್ಥಾಪಿತವಾಯಿತೆಂದು ನೀವು ವಿಷಾಪಡಬೇಡಿರಿ, ಪ್ರೇಮದ ಪರವಶತೆಗಾಗಿ ಉತ್ತಮೆಯರಾದ ಸತಿಯರು ತಾವು ತಮ್ಮ ಪತಿಯ ದಾಸಿಯರೆಂದು ಹೇಳುವದು ಆದರಮೂಲವಾದ ಮಾತು. ಪ್ರೀತಿಯುತನಾದ ಪತಿಯು ಕೂಡ ತಾನು ತನ್ನ ಅರ್ಧಾಂಗಿಯ ದಾಸನೆಂದು ಹೇಳಿಕೊಂಡಿರುವದನ್ನು ನೀವು ಪುರಾಣೇತಿಹಾಸಗಳಲ್ಲಿಯೂ, ಕಾವ್ಯನಾಟಕಗಳಲ್ಲಿಯೂ ಓದಿರಬಹುದು. ಅದು ಹಾಗಿರಲಿ, ಸ್ತ್ರೀಯರು ಪುತ್ರವತಿಯರಾದರೆಂದರೆ ಅವರ ಯೋಗ್ಯತೆ ಮಿತಿ ಮೀರಿ ಬೆಳೆಯುವದು, ಸಮರವಿಜಯಿಯಾದ ವೀರನಾಗಲಿ, ಭೂಮಂಡಲವನ್ನಾಳುವ ಸಾರ್ವಭೌಮನಾಗಲಿ, ಅವನು ತನ್ನ ಮಾತೆಯನ್ನು ಪರದೈವತವೆಂದರಿತು ನಿತ್ಯದಲ್ಲಿಯೂ ಪೂಜಿಸುತ್ತಾನೆ. ಮೊದಲು ತಾಯಿಯನ್ನು ಪೂಜಿಸೆಂದೂ ಅನಂತರದಲ್ಲಿ ತಂದೆಯನ್ನು ಪೂಜಿಸೆಂದು ಗುರುಮಂತ್ರವು (ಶಿಕ್ಷಾ) ನಮಗೆ ಆಜ್ಞಾಪಿಸುತ್ತಿರುವದರಿಂದ ತಂದೆಗಿಂತಲೂ ತಾಯಿಯ ಯೋಗ್ಯತೆಯು ಹೆಚ್ಚಾಗಿರುವದು ಶಾಸ್ತ್ರ ಸಮ್ಮತವಾದ ಮಾತು, ತಂದೆಗೆ ವಿರೋಧಿಯಾಗಿದ್ದ ಅಲೆಕ್‍ಝಾಂಡರ ಬಾದಶಹನು ತನ್ನ ತಾಯಿಯ ದಾಸಾನುದಾಸನು. ಆ ಬಾದಶಹನು ದಿಗ್ವಿಜಯಕ್ಕಾಗಿ ಹೊರಗೆ ಹೊರಟಾಗ ತನ್ನ ರಾಜ್ಯದ ವ್ಯವಸ್ಥೆಯನ್ನು ತನ್ನ ಮುಖ್ಯ ಪ್ರಧಾನನಾದ ಫಾರ್ಮೆನಿ ಯೋನ ಕೈಯಲ್ಲಿ ಕೊಟ್ಟು ಹೋಗಿದ್ದನು. ಆದರೆ ಬಾದಶಹನ ತಾಯಿಯು ರಾಜ್ಯ ಕಾರಭಾರದಲ್ಲಿ ಆಗಾಗ್ಗೆ ಕೈ ಹಾಕುತ್ತಿದ್ದಳಾದ ಕಾರಣ ಅವಳ ವಿರುದ್ದವಾಗಿ ಫಾರ್ಮನಿಯೋನು ಅನೇಕವಾದ ಪತ್ರಗಳನ್ನು ಬಾದಶಹನಿಗೆ ಬರೆದನು. ಆಗ ಅಲೆಕ್‍ಝಾಂಡರನು ಫಾರ್ಮೆನಿಯೋನಿಗೆ ಒಂದೇ ಉತ್ತರವನ್ನು ಕೊಟ್ಟಿದ್ದೇನೆಂದರೆ ‘ಪಾರ್ಮೆನಿಯೋ, ನನ್ನ ತಾಯಿಯ ಕಣ್ಣೀರಿನ ಒಂದೇ ಹನಿಯು ನೀನು ಬರೆದ ಸಾವಿರ ಪತ್ರಗಳನ್ನೆಲ್ಲ ಒಮ್ಮೆಲೆ ಅಳಿಸಿಬಿಡುವದು, ಗೊತ್ತಿರಲಿ.’ ಇದು ಮಾತೆಯ ಆಧಿಕಾರವು; ಇದು ಮಾತೆಯ ಯೋಗ್ಯತೆಯು; ಇದೇ ಮಾತೆಯ ಧನ್ಯತೆಯು!

ಈ ಮಾತು ಕೇಳಿ ಗುಲ್ ಬಾಯಿಯು ಒಂದು ಬಗೆಯ ನಗೆ ತೋರಿದಳಲ್ಲದೆ ಅವಳು ಮತ್ತೊಂದು ಮಾತಾಡಲಿಲ್ಲ. ಆಗ ಮಾಧವರಾಯರು ಮುಂದಾಗಿ ಬಂದು “ಗುಲ್‍ಬಾಯಿ, ಇಷ್ಟೆಯೇ ಅಲ್ಲ. ಪತ್ನಿಯು ತಾನು ಪತಿಯ ದಾಸಿಯೆಂದು ಹೇಳುಹೇಳುತ್ತಿರುವಾಗಲೇ ಅವನನ್ನು ತನ್ನ ದಾಸನಾಗಿಯೇ ಮಾಡಿಕೊಂಡಿರುವ ಮಾತು ಎಲ್ಲ ಪತ್ನಿಯರ ಹೃದ್ಗತವು. ಬೇಕಾದರೆ ಈ ನಿಮ್ಮ ಮಾಣಿಕಬಾಯಿಯ ಮುಖದಿಂದಲೇ ಕೇಳಿಕೊಳ್ಳಿರಿ” ಎಂದು ನುಡಿದು ಕುಳಿತವರೆಲ್ಲರ ಮುಖವನ್ನು ನೋಡಿದರು.

ಲಲ್ಲೂಭಾಯಿಯವರು ಗಹಗಹಿಸಿ ನಕ್ಕು ಈ ಮಾತಿಗೆ ತಾವು ಸಾಕ್ಷಿಗಳೆಂದು ಹೇಳಿದರು. ಮಾಣಿಕಬಾಯಿಯು ಮುಗುಳುನಗೆಯ ಮಿಷದಿಂದ ನಿಜ ಸ್ಥಿತಿಯು ಹೀಗೆಯೇ ಎಂದು ಸೂಚಿಸಿದಳು. ಶ್ಯಾಮಲದಾಸನು ತನ್ನ ಹೆಂಡತಿಯಾದ ಮಾಣಿಕಬಾಯಿಯ ಮುಖವ ನೋಡಿ ಸಂತೋಷದಿಂದ ನಕ್ಕು ತಾನು ಸ್ವಸಂತೋಷದಿಂದಲೇ ತನ್ನ ಪ್ರಿಯಭಾರ್ಯೆಯ ದಾಸನಾಗಿರುವೆನೆಂದು ಪ್ರತ್ಯಕ್ಷವಾದ ಸಾಕ್ಷಿಯನ್ನು ಹೇಳಿದನು. ಬಳಿಕ ಲಲ್ಲೂಭಾಯಿಯವರು ನಮ್ಮೆಲ್ಲರ ಅಪ್ಪಣೆ ತೆಗೆದುಕೊಂಡು ಸಹಪರಿವಾರವಾಗಿ ತಮ್ಮ ಮನೆಗೆ ದಯಮಾಡುವವರಾದರು.

ಬಸಂತರಾಜನ ಆಡಳಿತದ ಕಾಲವದು. ಗಿಡಬಳ್ಳಿಗಳೆಲ್ಲ ಹೊಸ ತಳಿರು ಹೂಮೊಗ್ಗೆಗಳನ್ನಾಂತು ಸೊಬಗಿನಿಂದ ಜಗಜಗನೆ ಹೊಳೆಯುತ್ತಿದ್ದವು. ಗಿಳಿ ಕೋಗಿಲೆ ಮುಂತಾದ ಚಲುವಕ್ಕಿಗಳು ಇನಿದಾದ ಸರಗೈದು ಉಬ್ಬಿನಿಂದ ಹಾಡುತ್ತಿದ್ದವು. ಮುಂಜಾವಿನ ಎಳೆಬಿಸಿಲಿನ ಹೊಂಬಣ್ಣದಿಂದೊಪ್ಪುವ ಹಸಿರು ಬಣ್ಣದ ಹೊಸ ಸೀರೆಯನ್ನುಟ್ಟು, ಒಯ್ಯಾರದಿಂದ ಮೆಲ್ಲಡಿಗಳನ್ನಿಕ್ಕುತೆ ಅತ್ತಿತ್ತ ಸುಳಿದಾಡಿ ತನ್ನ ಐಸಿರಿಯನ್ನು ಕಂಡು ಹಿಗ್ಗಿ ಮುಗುಳು ನಗೆ ದೋರುತ್ತಿರುವ ಬನಸಿರಿಯ ಚಲುವಿಕೆಯನ್ನು ಕಂಡು ಮನಸೋತವನಾಗಿ ಮಾರುತನು ಮೆಲ್ಲನೆ ಬಂದು ಆ ಗಾಡಿಕಾರತಿಯನ್ನು ಬಿಗಿದಪ್ಪಿ ಅವಳ ಪೂ ಗಂಪಿನ ಮೊಗಕ್ಕೆ ಮುದ್ದಿಟ್ಟನು. ಎರಳೆನೋಟದ ಆ ಹರದೆಯು ಬೆದರಿ ನಿಂತು ತನ್ನ ಮೈ ಮುಟ್ಟ ಬಂದ ಅರಿವುಗೇಡಿ ಯಾರೆಂದು ಮುನಿಸಿನಿಂದ ಹೊರಳಿ ನೋಡಿದಳು. ಇದಿನ್ನು ಸರಿಯಲ್ಲವೆಂದು ತಂಬೆಲರನು ಆ ತಾಣವನ್ನು ಬಿಟ್ಟೋಡಿ ಗಿಡಬಳ್ಳಿಗಳನ್ನೆಡವುತ್ತೆ ನುಗ್ಗುತ್ತೆ ಹೇಗೋ ನಮ್ಮ ಗುಲ್‍ಬಾಯಿಯು ಕುಳಿತಿರುವ ಮನೆಯಲ್ಲಿ ಹೊಕ್ಕು ಅಡಗಿಕೊಂಡನು.

ಗುಲ್ಬಾಯಿಯು ತನ್ನ ವಿಚಾರಗಳಲ್ಲಿಯೇ ನಿಮಗ್ನಳಾಗಿ ಹೋಗಿರುವದರಿಂದ ಅವಳಿಗೆ ಆ ಮಾರುತನ ಔದ್ಧತ್ಯವು ಕಾಣಲಿಲ್ಲ; ತನಗುಂಟಾದ ಮಾನಭಂಗವನ್ನು ಸಹಿಸದೆ ಕೋಪಯುಕಳಾಗಿ ನಿಂತಿರುವ ಆ ಬನಸಿರಿಯ ಆರಕ್ತವಾದ ಮುಖದ ಶೋಭೆಯು ಕಾಣಲಿಲ್ಲ. ಗುಲ್ ಬಾಯಿಯು ಒಂದು ಮಾಸಿಕ ಪುಸ್ತಕವನ್ನು ತೆರೆದು ಓದುತ್ತಿರುವಂತೆ ಕಂಡರೂ ಶೂನ್ಯನಾದ ಅವಳ ದೃಷ್ಟಿಗೆ ಒಂದು ಅಕ್ಷರವಾದರೂ ತೋರಲಿಲ್ಲ. ಓದುವ ಹವ್ಯಾಸವನ್ನು ಬಿಟ್ಟು ಅವಳು ತನ್ನ ಕೆನ್ನೆಯ ಮೇಲೆ ಕೈಯಿಟ್ಟು ಕೊಂಡು ಮಂದ ದೃಷ್ಟಿಯಿಂದ ಅತ್ತಿತ್ತ ನೋಡಿದಳು. ಬಳಿಯಲ್ಲಿಯೇ ಕುಳಿತಿರುವ ಮಾಣಿಕ ಬಾಯಿಯನ್ನು ನೋಡಿ “ಮಾಣಿಕ, ಏನು ಮಾಡುತ್ತಿರುವಿ?” ಎಂದು ಕೇಳಿದಳು.

“ಕುಪ್ಪಸವನ್ನು ಹೊಲಿಯುತ್ತೇನೆ ಕಾಣದೆ? ಗುಲ್‍ಬಾಯಿ, ಇಂದು ನಿನ್ನ ಚಿತ್ತವೃತ್ತಿಯು ಚಮತ್ಕಾರವಾಗಿ ತೋರುತ್ತದೆ.”

“ಮಾಣಿಕ, ನಾನೊಂದು ಪ್ರಶ್ನವನ್ನು ಕೇಳುತ್ತೇನೆ. ನಿರ್ವಂಚನದಿಂದ ಉತ್ತರವನ್ನು ಕೊಡುವಿಯಾ?”

“ನಮ್ಮ ನಿಮ್ಮ ನಡುವೆ ವಂಚನೆಯೇ? ಸತ್ಯವಾಗಿ ನನಗೆ ತಿಳಿದದ್ದನ್ನೇ ಹೇಳುವೆನು.”

“ಆರ್ಯಕನ್ನಿಕೆಯರು ಅವಿವಾಹಿತರಾಗಿ ಉಳಿಯಕೂಡದೆಂಬ ಶಾಸ್ತ್ರ ನಿರ್ಬಂಧನಕ್ಕಾಗಿ ನಮ್ಮ ವಿವಾಹವೊ? ಅಥವಾ ನಾವು ಅಬಲೆಯರಾಗಿರುವದರಿಂದ ನಮ್ಮ ಯೋಗಕ್ಷೇಮವನ್ನು ಸ್ವತಂತ್ರವಾಗಿ ಗಳಿಸಿಕೊಳ್ಳಲು ಆಸಮರ್ಥರಾಗಿರುವ ನೆವಕ್ಕಾಗಿ ಪುರುಷರ ದಾಸ್ಯವನ್ನು ಸ್ವೀಕರಿಸಿ ಅವರ ಹೆಂಡರಾಗಿರಬೇಕೆ? ಏನು ಸಮಾಚಾರವಿದು?” ಎಂದು ಗುಲ್‍ಬಾಯಿಯು ಚಿಂತಾಕ್ರಾಂತವಾದ ಮುಖವುಳ್ಳವಳಾಗಿ ಕೇಳಿದಳು.

“ವಿವಾಹದ ಉದ್ದೇಶಗಳಿವೆರಡೇ ಎಂದು ನೀವು ತಿಳಿದಿರುವಿಯೇನು?” ಎಂದು ಮಾಣಿಕಬಾಯಿಯು ಮೃದುಸ್ಮಿತೆಯಾಗಿ ಗುಲ್ ಬಾಯಿಯ ಮುಖವನ್ನು ಬಿಟ್ಟು ಬಿಡದಲೆ ನೋಡುತ್ತ ಕೇಳಿದಳು. ಗುಲ್‍ಬಾಯಿ ಯಾದರೂ ತನ್ನ ಮುಖದಲ್ಲಿ ಮಂದಹಾಸವನ್ನು ತಳೆದು ಮಾತಾಡದೆ ಸುಮ್ಮನಿದ್ದಳು.

“ಪ್ರಿಯಸಖಿ, ವಿವಾಹದ ರಹಸ್ಯವೇ ಬೇರೆ. ನವತರುಣಿಯಾದ ನಿನಗೆ ಆ ರಹಸ್ಯದ ಆಕಲನವೆಷ್ಟು ಮಾತ್ರವೂ ಇಲ್ಲವೆಂದು ನಾನು ಹೇಳಲಾರೆನು. ಆದರೂ ನನಗೆ ತಿಳಿದದ್ದನ್ನು ಹೇಳುತ್ತೇನೆ ಕೇಳು, ಭರದಿಂದ ಬೆಳೆದ ಬಳ್ಳಿಯು ಪ್ರಫುಲ್ಲಿತವಾಗಿ ಪುಷ್ಪಗಳ ಮಕರಂದವನ್ನು ಬೀರುತ್ತಿರುವಂತೆ ನವ ತರುಣಿಯರು ಅಂಗಸೌಷ್ಟವವನ್ನು ಹೊಂದಿ ನಿಸರ್ಗಜನ್ಯವಾದ ಪ್ರೇಮವೆಂಬ, ಹೃದ್ಯವಾದ ಭಾವವನ್ನಾಂತು ನವಾವತಾರನೂ ಸುಂದರನೂ ಗುಣಮಣಿಯೂ ಆದ ಪುರುಷನಲ್ಲಿ ಅನುರಾಗವನ್ನು ತಳೆದು ಅವನ ಪಾಣಿಗ್ರಹಣವನ್ನು ಮಾಡುವದು ಭಗವದಾಜ್ಞೆಯ ಮಾತು.”

“ಮಾಣಿಕಬಾಯಿ, ಇದನ್ನೆಲ್ಲ ನಾನು ಸೇಕ್ಸಪೀಯರನ ನಾಟಕಗಳಲ್ಲಿಯೂ ಕಾಲಿದಾಸನ ಕಾವ್ಯಗಳಲ್ಲಿಯೂ ಓದಿ ಅರಿತುಕೊಂಡಿದ್ದೇನೆ. ಆದರೆ ಸ್ಟೇಚ್ಛೆಯಿಂದ ವಿಹರಿಸುವ ಚಕ್ರವಾಕಿಯು ಪ್ರೇಮದಿಂದ ತನ್ನ ಪ್ರಿಯತಮ
ನನ್ನೊಡಗೂಡುವಂತೆ ಮನುಷ್ಯರಲ್ಲಿ ನಿಜವಾದ ಅನುರಾಗವುಳ್ಳ ಸತಿ ಪತಿಯರ ಸಮಾಗಮದ ವಾರ್ತೆಯೇ ಅಪರೂಪ. ಸುಧಾರಣೆಯ ಅತ್ಯುಚ್ಛವಾದ ಶಿಖರದ ಮೇಲಿರುವ ಇಂಗ್ಲಂಡದಲ್ಲಿ ಪ್ರೀತಿವಿವಾಹಗಳಿಗೆ ಮುಕ್ತದ್ವಾರವಿರುವದೆಂದು ಹೇಳುತ್ತಾರೆ ಮಾತ್ರ! ಆದರೆ ಅಲ್ಲಿ ಕೂಡ ಸ್ವಾರ್ಥವಲವಾದ ವಿವಾಹಗಳೇ ಬಹಳ, ಸುಶಿಕ್ಷಿತಳೂ ರೂಪವತಿಯ ಆದ ನವತರುಣಿ ಯೋರ್ವಳು ಎಂಬತ್ತು ವರ್ಷದ ಮುದಿಹದ್ದಾಗಿರುವ ಅರ್ಗಾಯಿಲದ ಡ್ಯೂಕನ ಕೊರಳಿಗೆ ಮಾಲೆ ಹಾಕಿದ್ದು ಸ್ವರ್ಗೀಯ ಪ್ರೇಮದ ಸಮಾಚಾರವೆ? ಆಶ್ರಮವಾಸಿನಿಯಾಗಿದ್ದು ಕೊಂಡು ನಗರವಾಸಿಗಳ ಕೌಟಿಲ್ಯವನ್ನರಿಯದ ಶಕುಂತಲೆಯೆಂಬ ಮುಗ್ಧ ವಧುವನ್ನು ಹಿಂಡು ಹೆಂಡರ ಗಂಡನಾದ (ಪರಿಗ್ರಹ ಬಹುತ್ವೇಪಿ) ದುಷ್ಯಂತನು ವಂಚಿಸಲಿಲ್ಲೆ?”

“ಗುಲ್‍ಬಾಯಿ, ಇಷ್ಟು ದಿನ ನೀನು ಮದುವೆಯನ್ನೇ ಒಲ್ಲೆನೆಂದು ಹೇಳುತ್ತಿದ್ದಿ, ಈಗ ಮಾತ್ರ ನಿನಗೆ ಅನುರೂಪನಾದ ಪತಿಯು ದೊರಕಿದರೆ ನೀನು ವಿವಾಹಕ್ಕೆ ಸಿದ್ಧಳಾಗಿರುವ ಸುವಾರ್ತೆಯನ್ನು ಕೇಳಿ ನನಗೆ ತುಂಬಾ ಸಂತೋಷವಾಗಿದೆ.”

“ನಾನು ಅನುರೂಪನಾದ ಪ್ರಿಯನಿಗೆ ಕೈ ಕೊಡುವೆನೋ ಆರ್ಗಾಯಿಲದ ಡ್ಯೂಕನಂಥ ಮೃತಗಜದಾನವನ್ನು ಸ್ವೀಕರಿಸುವೆನೋ ಅದರ ಗೊಡವೆ ನಿನಗೇಕೆ? ಯುಕ್ಲಿಡನ ಪ್ರಮೇಯಗಳನ್ನು ಕುರಿತು ವಿಚಾರ ಮಾಡುವಂತೆಯೇ ಈ ಪ್ರಶ್ನದ ವಿಚಾರವನ್ನಾದರೂ ನಾನು ನಿರಭಿಲಷವಾಗಿ ಮಾಡುವೆನೆಂದು ತಿಳಿ”.

“ಯುಕ್ಲಿಡವು ನನಗೆ ತಿಳಿಯುವದಿಲ್ಲ. ಆದರೆ ಪ್ರೇಮದ ಪ್ರಮೇಯಗಳನ್ನು ಕುರಿತು ಆಸ್ಥೆಯಿಂದ ವಿಚಾರ ಮಾಡುವ ಪ್ರಮದೆಯು ಪ್ರಿಯಾಭಿಲಾಷಿಯಾಗಿಯೇ ಇರುವಳೆಂಬದು ರೂಡಿಯಲ್ಲಿ ಅನುಭವಜನ್ಯವಾದ ಸಂಗತಿಯು.” ಎಂದು ಮಾಣಿಕಬಾಯಿಯು ಪರಿಹಾಸ ಮಾಡಿ ನಕ್ಕಳು.

“ಮೋರೆ ಮೋರೆ ಬಡಿಸಿಕೊಳ್ಳುವಿ, ಎಚ್ಚರಿಕೆ!” ಎಂದು ನುಡಿದು ಗುಲ್ ಬಾಯಿಯು ತಾನು ಸಿಟ್ಟಾಗಿರುವೆನೆಂದು ತೋರಿಸಲು ಯತ್ನ ಮಾಡಿದರೂ ಅದು ಸಾಧಿಸಲಿಲ್ಲ. ಅವಳು ಸುಮ್ಮನೆ ನಕ್ಕು ಬಿಟ್ಟಳು.

“ನೋಡಿದಿಯಾ ಗುಲ್, ನೀರಲ್ಲಿ ಹಾಕಿದ ಸಕ್ಕರೆಯಂತೆ ನಿನ್ನ ಹುಡುಗಾಟಿಗೆಯೆಲ್ಲ ಕರಗಿ ನೀರಾಗಿ ಹೋಗಿದೆ. ಪ್ರೇಮದ ಮಹಿಮೆಯೇ ಬೇರೆ”

“ಸಾಕು ಮಾಡು ಮಾಣಿಕ್, ನನೊಂದು ಪ್ರಶ್ನವನ್ನು ಕೇಳಿದ್ದಕ್ಕೆ ನೀನು ನನ್ನನ್ನು ಕ್ಷಮಿಸು, ನಿನ್ನ ಪತಿಯಲ್ಲಿ ನಿನ್ನ ಪ್ರೇಮವು ನಿಜವಾಗಿ ನೆಲಸಿರುವದೇನು? ಸತ್ಯವಾಗಿ ಹೇಳು.”

“ದೇವರನ್ನು ಸ್ಮರಿಸಿ ಕೇಳುತ್ತೇನೆ ಗುಲ್! ನಾನು ನನ್ನ ಪತಿರಾಯರನ್ನು ಅನನ್ಯಭಾವದಿಂದ ಪ್ರೀತಿಸುತ್ತೇನೆ. ಅವರ ಪ್ರೇಮವಾದರೂ ನನ್ನಲ್ಲಿ ದೃಢವಾಗಿ ನೆಲೆಸಿರುವದು.” ಎಂದು ಮಾಣಿಕಬಾಯಿಯು ಒಳ್ಳೇ ಗಾಂಭೀರ್‍ಯದಿಂದ ಹೇಳಿದಳು.

“ಪುಣ್ಯವಂತಿಯು ನೀನು! ನಿನ್ನಂತೆಯೇ ಸುಖಿಗಳಾಗಿರುವವರು ನಮ್ಮ ದೇಶದಲ್ಲಿ ಮತ್ತಿನ್ನಾರಾದರೂ ಇರುವರೇನು?”

“ರವಷ್ಟು ಹೆಚ್ಚುಕಡಿಮೆಯ ಪ್ರಮಾಣದಿಂದ ಅನೇಕ ಜನ ಗೃಹಿಣಿಯರು ಸುಖಿಗಳಾಗಿರುವರು. ಅಸುಖಿಗಳೇ ಕಡಿಮೆಯೆಂದು ನಾನು ನಂಬುತ್ತೇನೆ.”

ಅಷ್ಟರಲ್ಲಿ ಸೇವಕಳೋರ್ವಳು ಬಂದು, ಆ ಗೆಳತಿಯರೀರ್ವರನ್ನು ಉಪಹಾರಕ್ಕೆ ಕರೆದೊಯ್ದಳು. ಅದೇ ದಿವಸವೇ ಸಾಯಂಕಾಲದಲ್ಲಿ ಮಾಣಿಕ ಬಾಯಿಯು ಪಾರ್ಕಿನಲ್ಲಿ (ಉಪವನದಲ್ಲಿ) ನನಗೆ ಭೆಟ್ಟಿಯಾದಾಗ ಮೇಲ್ಕಂಡ ಸಂವಾದದ ಸಮಾಚಾರವನ್ನೆಲ್ಲ ನನಗೆ ಹೇಳಿದ ಮೇರೆಗೆ ನಾನದನ್ನು ಇಲ್ಲಿ ನಿರೂಪಿಸಿದ್ದೇನೆ.
* * *

ಮೇಲಿನ ಸಂವಾದವಾದ ಬಳಿಕ ಒಂದೆರಡು ದಿವಸಗಳಲ್ಲಿ ನಾವು ಸರತಿಯ ಮೇರಿಗೆ ಲಲ್ಲೂಭಾಯಿಯವರ ಮನೆಗೆ ಹೋದೆವು. ಭಾಯಿಯವರು ಸಾಮಾಜಿಕ ಸುಧಾರಣೇಚ್ಛುಗಳಾಗಿದ್ದು ಆ ವಿಷಯವನ್ನು ಕುರಿತು ಸಂವಾದ ಮಾಡಲು ಅವರಿಗೆ ಅಪೇಕ್ಷೆ ಬಹಳ. ಆದರೆ ಪಚಾರದ ಮಾತುಗಳ ಪ್ರಸ್ತಾವನೆಯಾದ ಬಳಿಕ ಸ್ತ್ರೀಶಿಕ್ಷಣದ ವಿಷಯವನ್ನು ಅವರು ತೆಗೆದರು. ನಮ್ಮ ಪಕ್ಷದಲ್ಲಿ ವಾದ ನಡಿಸುವವರು ಶಾಮರಾಯರೇ ಆಗಿದ್ದರು. ವಾದವೆಂದರೆ ಸ್ತ್ರೀ ಶಿಕ್ಷಣವು ಬೇಕೋ ಬೇಡವೋ ಎಂಬದಲ್ಲ. ಸ್ತ್ರೀ ಶಿಕ್ಷಣದ ಇತಿಕರ್ತವ್ಯತೆ ಯಾವದೆಂಬದೇ ನಮ್ಮ ವಾದದ ವಿಷಯವು. ಸರಕಾರದ ಸೇವೆಯಲ್ಲಿಯ ಅಧಿಕಾರಸ್ಥರ ಸ್ಥಾನಗಳನ್ನು ಪಡಕೊಳ್ಳಬೇಕಾಗಿ ಸ್ತ್ರೀಯರು ಶಿಕ್ಷಣವನ್ನು ಬಯಸುವರೇನೆಂಬ ಪ್ರಶ್ನಕ್ಕೆ ಗುಲ್ಬಾ‍ಯಿಯು ಇಲ್ಲವೆಂದು ಹೇಳಿದಳು. ಮುನಿಸಿಪಾಲಿಟಿ ಲೋಕಲ್‍ಬೋರ್ಡ ಕಾಯಿಡೇ ಕೌನ್ಸಿಲ್‌ಗಳಲ್ಲಿ ಸೇರಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವದಾದರೂ ಸ್ತ್ರೀಯರ ಮನೀಷೆಯಲ್ಲವೆಂದು ಆ ಮಹಿಲೆಯು ಒಪ್ಪಿಕೊಂಡಳು. ಶ್ಯಾಮರಾಯರ ಚಮತ್ಕಾರವಾದ ಕೂಟಪ್ರಶ್ನೆಗಳಿಗೆ ವಿಭ್ರಮಗೊಂಡವಳಾಗಿಯೋ, ಇಲ್ಲವೆ ಅವಳ ಅಭಿಪ್ರಾಯದಲ್ಲಿಯೇ ಅಕಸ್ಮಾತಾಗಿ ವಿಲಕ್ಷಣವಾದ ಹೆಚ್ಚು ಕಡಿಮೆಯಾಗಿ ಶ್ಯಾಮರಾಯರಿಗೆ ಬೇಕಾದ ಉತ್ತರಗಳನ್ನೆ ಗುಲ್‍ಬಾಯಿಯು ಕೊಡಲಾರಂಭಿಸಿದಳು. ಗ್ರಹಮೇಧಿಗಳ ಕರ್ತವ್ಯವನ್ನು ಸತಿಯರು ಚತುರತೆಯಿಂದ ನೆರವೇರಿಸಲು ಸಮರ್ಥರಾಗಬೇಕೆಂತಲೂ ಗೃಹಕರ್ಮಗಳನ್ನು ಮಾಡಿ, ಉಳಿದ ಕಾಲದಲ್ಲಿ ಗೃಹಿಣಿಯರು ಅಬಲಾ ಜನರ ಉನ್ನತಿಗೆ ಸಹಾಯಕರ್ತ್ರಿಗಳಾಗಬೇಕಂತಲೂ, ಕೋಮಲಾಂತಃಕರಣೆಯರಾದ ನಾರಿಯರು ರೋಗಿಗಳ ಆರೈಕೆ, ಬಡಜನರ ಪರಾಮರಿಕೆ ಮುಂತಾದ ಸಾತ್ವಿಕವಾದ ಜನಸೇವೆಯನ್ನು ಮಾಡಲು ಆಸ್ಥೆ ಯುಳ್ಳವರಾಗಬೇಕೆಂತಲೂ, ತಮ್ಮ ಚಿಕ್ಕ ಮಕ್ಕಳು ದೊಡ್ಡವರಾದ ಬಳಿಕ ಲೋಕೋಪಕಾರಕವಾದ ಮಹತ್ಕಾರ್ಯಗಳನ್ನು ನೆರವೇರಿಸಲು ಕಾರ್‍ಯಕ್ಷಮರಾಗುವಂತೆ ಅವರಿಗೆ ಚಿಕ್ಕಂದಿನಲ್ಲಿಯೇ ಬೌದ್ಧಿಕ ಹಾಗೂ ನೈತಿಕ ಶಿಕ್ಷಣವನ್ನು ಕೊಡಲು ಮಾತೆಯರು ಸಮರ್ಥರಾಗಿರಬೇಕೆಂತಲೂ ಸ್ತ್ರೀಯರಿಗೆ ಶಿಕ್ಷಣವನ್ನು ಕೊಡತಕ್ಕದ್ದೆಂದು ಅವಳು ನಿವೇದಿಸಿದಳು.

“ಏನಿದು ಗಲ್, ಹೀಗೆಂತು ವಿಪರೀತವಾದ ಮಾತುಗಳನ್ನಾಡುವಿ? ‘ಮರ್ಚಂಟ್ ಆಫ್ ವೇಸಿಸ್’ ( ಒಂದು ನಾಟಕ ) ದಲ್ಲಿಯ ಪೋರ್ಸಿಯಾ ಎಂಬ ನಾಯಿಕೆಯಂತೆ ನೀನು ಬ್ಯಾರಿಸ್ಟರಳಾಗಬೇಕೆನ್ನುತಿದ್ದಿ, ಹಿಂದೂ ಗೃಹಿಣಿಯರ ಶೋಚನೀಯವಾದ ಸ್ಥಿತಿಯನ್ನು ಬಯಲಿಗಿರಿಸಿ ಹಿಂದುಸ್ಥಾನದಲ್ಲೆಲ್ಲ ಪ್ರೀತಿವಿವಾಹದ ಪ್ರಚಾರವನ್ನು ಮಾಡತಕ್ಕದ್ದೆಂದು ಹವಣಿಸುತ್ತಿದ್ದಿ. ನ್ಯಾಯಾಧೀಶ, ವಕೀಲ, ಮುಲಕೀ ಅಮಲದಾರರೆಲ್ಲ ಸ್ತ್ರೀಯರೇ ಆದರೆ ಸ್ತ್ರೀ ಸಾತಂತ್ರ್ಯದ ಧ್ವಜವು ಹಿಂದುಸ್ಥಾನದಲ್ಲೆಲ್ಲ ಅವ್ಯಾಹತವಾಗಿ ಮೆರೆಯುವದೆಂದು ನೀನು ಪ್ರತಿಪಾದಿಸುತ್ತಿ. ಅದೆಲ್ಲ ಈಗ ಎಲ್ಲಿ ಹೋಯಿತು?” ಎಂದು ಲಲ್ಲೂಭಾಯಿಯವರು ಮಗಳಲ್ಲಿ, ಉಂಟಾಗಿರುವ ವಿಚಾರಕ್ರಾಂತಿಯನ್ನು ಕಂಡು ಸಮಾಧಾನಗೊಂಡವರಾಗಿ ಕೇಳಿದರು. ಲಲ್ಲೂಭಾಯಿ ಯವರಿಗೆ ಸಾಮಾಜಿಕ ಸುಧಾರಣೆಗಳಲ್ಲಿ ಕೆಲವು ಸುಧಾರಣೆಗಳು ಇಷ್ಟವಾಗಿದ್ದರೂ ಸ್ತ್ರೀಸ್ವಾತಂತ್ರ್ಯದ ಅತಿರೇಕವು ಅವರಿಗೆ ಸೇರುತ್ತಿರಲಿಲ್ಲ.

ಗುಲ್‍ಬಾಯಿಯು ತನ್ನ ತಂದೆಯಾಡಿದ ಪರಿಹಾಸೋಕ್ತಿಯನ್ನು ಕೇಳಿ ಮೆಲ್ಲಗೆ ನಕ್ಕು ನಮ್ಮ ಮೂವರ ಕಡೆಗೆ ಕೈಮಾಡಿ ತೋರಿಸಿ “ಅಪ್ಪಾ, ಈ ಜನರು ಪಾದ್ರಿಗಳಂತೆ ಸಂವಾದಗೈಯುತ್ತಲೂ ಬೋಧಿಸುತ್ತಲೂ ಉಪನ್ಯಾಸಗಳನ್ನು ಮಾಡುತ್ತಲೂ ಬೆಂಬಲವಿಲ್ಲದವಳಾದ ನನ್ನನ್ನು ಸೋಲಿಸಿ ನನ್ನ ವಿಚಾರ ಸರಣಿಯಲ್ಲಿ ಹೆಚ್ಚು ಕಡಿಮೆ ಮಾಡಿ ಬಿಟ್ಟಿದ್ದಾರೆ.” ಎಂದು ಕೊಂಚ ನಾಚಿಕೊಂಡವಳಾಗಿ ಹೇಳಿದಳು.

“ಮಗಳೇ, ಸ್ತ್ರೀಯರು ಪುರುಷರಿಗೆ ಸಮಾನರೆಂದು ಈ ನನ್ನ ಸ್ನೇಹಿತರು ಒಪ್ಪುತ್ತಾರಾಗಿ ತೋರುತ್ತದೆ; ಆಮೇಲಾದರೂ ನಿನಗೆ ಸಮಾಧಾನವಷ್ಟೆ? ಆ ದಿವಸ ಶ್ಯಾಮರಾಯರು ವಾದದ ಮಿಷಕ್ಕಾಗಿ ಪ್ರತಿಕೂಲವಾದ ಅಭಿಪ್ರಾಯವನ್ನು ಕೊಟ್ಟಿರಬಹುದು; ಅಹುದಲ್ಲವೆ ಶ್ಯಾಮರಾವಜಿ?” ಎಂದು ಲಲ್ಲೂಭಾಯಿಯವರು ನುಡಿದರು.

“ಭಾಯಿಜೀ, ಸ್ತ್ರೀಯರು ವಿನೀತೆಯರಾಗಿ ನಡೆದುಕೊಂಡರೆ ಜಗತ್ತೇ ಅವರದಾಗಿದೆ. ವಿಲಾಯತಿಯಲ್ಲಿ ಸ್ತ್ರೀಯರ ಆಧಿಕಾರವೆಷ್ಟೇ ಇರಲಿ, ಶ್ರುತಿ-ಸ್ಮೃತಿ-ಪುರಾಣಾದಿಗಳನ್ನು ನೋಡಲಾಗಿ ಆರ್ಯಸ್ತ್ರೀಯರ ಅಧಿಕಾರವು ಅತಿ ಸ್ಪೃಹಣೀಯವಾಗಿರುವದೆಂಬುದರಲ್ಲಿ ಸಂದೇಹವಿಲ್ಲ.” ಎಂದು ಶ್ಯಾಮರಾಯರು ಗುಲ್‍ಬಾಯಿಯ ಮುಖದಲ್ಲಿ ದೃಷ್ಟಿಯುಳ್ಳವರಾಗಿ ಹೇಳಿದರು.

“ಅಹಾಹಾ ನಿಮ್ಮ ಸ್ಮೃತಿಗಳೇ! ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂಬದು ಪರಮ ಉದಾರವಾದ ವಚನವಲ್ಲೆ?” ಎಂದು ಗುಲ್ಬಾಯಿಯು ವಿನೋದದಿಂದ ನಕ್ಕು ಶ್ಯಾಮರಾಯರನ್ನು ಓರೆಗಣ್ಣಿನಿಂದ ನೋಡುತ್ತೆ ಕೇಳಿದಳು.

“‘ನ ಸ್ತ್ರಿ ಸ್ವಾತಂತ್ರ್ಯಮರ್ಹತಿ’ ಎಂದು ಪ್ರಥಮತಃ ನಾರದರ ತಲೆಯೊಳಗಿಂದ ಹೊರಟಿರಬಹುದಾಗಿ ತೋರುತ್ತದೆ. ಕಲಹಪ್ರಿಯರೇ ಅವರು. ಅವರ ಮಾತುಗಳನ್ನು ಕಟ್ಟಿ ಕೊಂಡೇನು ಮಾಡುವಿರಿ?” ಎಂದು ಮಾಧವ ರಾಯರು ನಗುತ್ತೆ ನುಡಿದರು.

“ಗುಲ್ಬಾಯಿ, ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ | ಮುಂತಾದ ಆಧಾರಗಳ ಮೇಲಿಂದ ಆರ್ಯರು ತಮ್ಮ ನಾರಿಯರನ್ನು ಎಷ್ಟು ಸರಿಯಾಗಿ ಸಂಭಾವಿಸುತ್ತಿದ್ದರೆಂಬದನ್ನು ಊಹಿಸಬಹುದು. ಇಂದಿಗಾದರೂ ನಾವು ನಮ್ಮ ಹೆಂಡರನ್ನು ಗೃಹಲಕ್ಷ್ಮಿಯೆಂದು ಅಕ್ಕರದಿಂದ ಕರೆಯುತ್ತೇವೆ. ‘ನ ಗೃಹಂ ಗೃಹಮಿತ್ಯಾಹುಃ ಗೃಹಿಣಿ ಗೃಹಮುಚ್ಯತೆ’ ಎಂದು ಮನ್ವಾದಿಗಳು ಗೃಹಿಣಿಯನ್ನು ಬಣ್ಣಿಸಿದ್ದಾರೆ.” ಎಂದು ಶ್ಯಾಮರಾಯರು ನಿಷ್ಪಕ್ಷಪಾತವಾಗಿರುವ ತಮ್ಮ ಅಭಿಪ್ರಾಯವನ್ನು ಹೇಳಿದರು.

ಅಂದಿನ ವಿಷಯವನ್ನು ಅಲ್ಲಿಗೆಯೇ ನಿಲ್ಲಿಸಿ ನಾವು ನಮ್ಮ ಮನೆಗೆ ಬಂದೆವು. ಆ ತರುವಾಯದಲ್ಲಿ ಗುಲ್‍ಬಾಯಿಗೂ ನಮಗೂ ಆದ ಸಂವಾದಗಳಲ್ಲಿ ಈರ್ಷೆಯ ಲೇಶವಿರಲಿಲ್ಲ. ಒಂದೇ ಪಕ್ಷದವರು ತಮ್ಮ ತಮ್ಮೊಳಗೆ ಆಪ್ತಾಲೋಚನವನ್ನು ಮಾಡುತ್ತಿರುವಂತೆ ನಮ್ಮ ವಿಚಾರಗಳು ನಡೆದವು. ಇಷ್ಟು ಮಾತ್ರ ಸರಿ, ಗುಲ್ ಬಾಯಿಯು ಅಂದಿನಿಂದ ನಮ್ಮೊಡನೆ ಹೆಚ್ಚಾಗಿ ಮಾತಾಡಲು ನಾಚಿಕೊಳ್ಳಲಾರಂಭಿಸಿದಳು. ಗಟ್ಟಿ ಗಟ್ಟಿಸಿ ಮಾತಾಡುವದನ್ನು ಬಿಟ್ಟು ಅವಳು ವಿನೀತೆಯಾಗಿ ಬಲು ಮೆಲ್ಲಗೆ ಮಾತಾಡಲಾರಂಭಿಸಿದಳು. ವಿಲಾಯತಿಯ ಸ್ತ್ರೀಯರ ದರ್ಪದ ಆವಿರ್ಭಾವಗಳೆಲ್ಲ ಅವಳಲ್ಲಿ ಇಲ್ಲದಾಗಿ ಹೋದವು.

ಗುಂಡೇರಾಯರ ನೇತ್ರವಿಕಾರವೆಲ್ಲ ಹೊರಟುಹೋಯಿತು. ಅವರ ದೃಷ್ಟಿಯು ಸ್ವಚ್ಛವಾಯಿತು. ಇನ್ನೊಂದು ಹದಿನೈದು ದಿವಸ ಮಿರ್ಜಿಯಲ್ಲಿ ಇದ್ದರೆ ಒಳ್ಳೇದಾಗುವದೆಂದು ಡಾಕ್ಟರ ವಾಲ್ನೇಸ್ ಸಾಹೇಬರು ಸೂಚಿಸಿದ್ದ ಮೇರೆಗೆ ನಮ್ಮ ಮಿರ್ಜಿಯ ನಿವಾಸವು ಬೆಳೆಯಿತು. ಗುಂಡೇರಾಯರಿಗೆ ಗಂಜೀಪ ಆಡುವ ನಾದವಿರುವದರಿಂದ ನಾನೂ ಅವರೂ ಮಾಧವರಾಯರೂ ದಿನಾಲು ಭೋಜನೋತ್ತರ ಅಖಂಡವಾಗಿ ಮರು ನಾಲ್ಕು ಗಂಟೆಯವರೆಗೆ ಅದೇ ಆಟವನ್ನು ನಡಿಸುತ್ತಿದ್ದೆವು. ಗುಂಡೇರಾಯರು ಬಹಳ ಹೊತ್ತು ಪುಸ್ತಕದಲ್ಲಿ ಕಣ್ಣಿಟ್ಟು ಓದಲಾಗದೆಂದು ಡಾಕ್ಟರರು ವಿಧಿಸಿದ್ದರಾದ ಕಾರಣ ನಾನೂ ಮಾಧವರಾಯರೂ ಬೇಸರವನ್ನು ಲೆಕ್ಕಿಸದೆ ಗಂಜಿಪದ ಆಟವನ್ನಾಡ ಬೇಕಾಗಿತ್ತು. ಶ್ಯಾಮರಾಯರಿಗೆ ನಮ್ಮ ವ್ಯವಸಾಯವು ಸೇರಲಿಲ್ಲ. ಅವರು ತಮ್ಮ ವಾಚನದಲ್ಲಿಯೂ, ಮಿರ್ಜಿಯಲ್ಲಿ ನಮಗೆ ಹೊಸ ಪರಿಚಯದವರಾದ ಬೇರೆ ಸ್ನೇಹಿತರೊಡನೆ ಮಾತುಕಥೆಯಾಡುವದರಲ್ಲಿಯೂ, ವನೋಪವನ ನದೀ ತೀರದಲ್ಲಿ ವಿಹರಿಸುವದರಲ್ಲಿಯೂ ಕಾಲ ಕಳೆಯುತ್ತಿದ್ದರು.

ಗಂಜೀಪದ ಆಟಕ್ಕೆ ಬೇಸತ್ತು ಸಾಯಂಕಾಲದ ನಾಲ್ಕು ಗಂಟೆಗೆ ನಾನೂ ಮಾಧವರಾಯರೂ ಗುಂಡೇರಾಯರೂ ಕೂಡಿ ಸದಾಶಿವೋದ್ಯಾನದ ಕಡೆಗೆ ತಿರುಗಾಡಲಿಕ್ಕೆ ಹೋದೆವು. ಇಳಿಬಿಸಿಲಾಗಿ ಹೋಗಿದ್ದರೂ ಶಕೆ ಕುಚ್ಚುತ್ತಲೇ ಇತ್ತು. ತೋಟದಲ್ಲಿ ಅತ್ತಿತ್ತ ಸುಳಿದಾಡಿ ಬಿಡಿ ಹೂಗಳನ್ನೂ ಹೂಗೊಂಚಲಗಳನ್ನೂ ದವನ ಪಾಚ ಮುಂತಾದ ಸುಗಂಧಮಯವಾದ ಹಳಗಳನ್ನೂ ಕೊಟ್ಟು ಕೊಂಡು ಕೊಡೆಯಂತೆ ಗುಂಡಗೆ ಬೆಳೆದಿರುವ ಮಾಮರದ ದಟ್ಟಾದ ನೆಳಲಿಗೆ ಬಂದೆವು. ತೋಟಿಗನು ಆ ಗಿಡದಡಿಯಲ್ಲಿರುವ ಕಸಕಡ್ಡಿಗಳನ್ನೆಲ್ಲ ತೆಗೆದು ನೆಲವನ್ನು ಚೆನ್ನಾಗಿ ಉಡುಗಿ ಇಟ್ಟಿದ್ದನಾದ್ದರಿಂದ ನಾವು ನಮ್ಮ ರುಮಾಲುಗಳನ್ನು ತಲೆದಿಂಬಿಗಿಟ್ಟು ಕೊಂಡು ಅಡ್ಡಾಗಿ ತಂಪಾಗಿ ಸೂಸುತ್ತಿರುವ ಸುಳಿಗಾಳಿಯನ್ನು ಯಥೇಚ್ಛವಾಗಿ ಸೇವಿಸಲಾರಂಭಿಸಿದೆವು.

ತುಸು ಹೊತ್ತಿನಲ್ಲಿಯೇ ನಾವೊಂದು ಚಮತ್ಕಾರವನ್ನು ಕಂಡೆವು. ರಂಗಭೂಮಿಯನ್ನು ಪ್ರವೇಶಿಸುವ ನಾಯಿಕೆಯಂತೆ ವಸ್ತ್ರಾಲಂಕಾರಗಳಿಂದ ವಿಭೂಷಿತೆಯಾದ ಲಲನೆಯೋರ್ವಳು ಆ ತೋಟದ ಮಧ್ಯ ಬೀದಿಯನ್ನು ಹಿಡಿದು ಮೆಲ್ಲಡಿಗಳನ್ನು ಚೆಲ್ಲುತ್ತೆ ನಡೆತಂದಳು. ಅವಳ ವನಪು ಒಯ್ಯಾರಗಳನ್ನೂ ಉಡಿಗೆ ತೊಡಿಗೆಗಳ ಸೊಬಗನ್ನೂ ಗೌರವರ್ಣದಿಂದ ತೊಳಗುವ ಅವಳ ದುಂಡು ಮೊಗವನ್ನೂ ಕಂಡು ಕುತೂಹಲಯುತರಾಗಿ ನಾವು ಮಲಗಿದಲ್ಲಿಯೇ ತಲೆಯೆತ್ತಿ ಆ ಸುಂದರಿಯು ಯಾರಿರಬಹುದೆಂದು ನಿರೀಕ್ಷಿಸಲಾರಂಭಿಸಿದೆವು. ಆ ಲೋಲೆಯು ತುಸು ಸಮೀಪಕ್ಕೆ ಬಂದ ಬಳಿಕ ಅವಳು ಗುಲ್‍ಬಾಯಿಯೇ ಎಂದು ಮಾಧವರಾಯರು ಗುರುತು ಹಿಡಿದು ಹೇಳಿದರು. ಇಂಥ ಸಮಯದಲ್ಲಿ ಅವಳನ್ನು ಮಾತಾಡಿಸುವದು ವಿಹಿತವಲ್ಲವೆಂದು ತಿಳಿದು ನಾವು ದಬ್ಬಿಕೊಂಡು ಮಲಗಿದೆವು. ಗುಲ್‍ಬಾಯಿಯು ಸಮೀಪದಲ್ಲಿರುವದೊಂದು ಮಲ್ಲಿಗೆಯ ಮಂಟಪದ ಬಳಿಗೆ ಬಂದು ಮೆಲ್ಲನೆ ಹಣೆಯಿಕ್ಕಿ ನೋಡಿ ಒಳಕ್ಕೆ ಪ್ರವೇಶಮಾಡಲು ಬಾಧಕವಿಲ್ಲೆಂದು ತಿಳಿದ ಬಳಿಕ ಒಳ ಹೊಕ್ಕಳು.

ಗುಲ್‍ಬಾಯಿಯ ತಂದೆಯು ಬೇಗನೆ ಅಲ್ಲಿಗೆ ಬರುವವನಿರಬಹುದೆಂದೂ ಅವನು ಬಂದ ಬಳಿಕ ನಾವೂ ಲತಾ ಮಂಟಪಕ್ಕೆ ಬಂದು ಎಲ್ಲರೂ ಮಿಲಿತರಾಗಿ ಯಥೇಚ್ಛವಾಗಿ ಹರಟೆಯನ್ನು ನಡಿಸಬಹುದೆಂದೂ ತಿಳಿದು ನಾವು ಕುಳಿತಲ್ಲಿಯೇ ಕುಳಿತು ಲಲ್ಲೂಭಾಯಿಯ ಮಾರ್ಗ ಪ್ರತಿಕ್ಷೆ ಮಾಡಿದೆವು. ಅರ್ಧ ಗಂಟೆಯವರೆಗೆ ಹಾದಿಯನ್ನು ನೋಡಿ ಬೇಸತ್ತು ನಾವಿನ್ನು ಮನೆಗೆ ತೆರಳುವವರು, ಅಷ್ಟರಲ್ಲಿ ಅಕೋ! ಜಾದುಗಾರನ ಮಾಟದ ಮನೆಯೊಳಗಿಂದಲೋ ಎಂಬಂತೆ ಆ ಮಂಟಪದೊಳಗಿಂದ ಒಬ್ಬ ಗುಲ್ ಬಾಯಿಯ ಸ್ಥಳದಲ್ಲಿ ಇಬ್ಬರು ಹೊರಬಿದ್ದರು. ಗುಲ್ಬಾಯಿಯ ಜೊತೆಗಾರನೆಂದರೆ ಮತ್ತೊಬ್ಬನಲ್ಲ ಮಗುದೊಬ್ಬನಲ್ಲ. ನಮ್ಮ ಮಿತ್ರನಾದ ಶ್ಯಾಮರಾಯನೇ! ಆ ಬೂಟು ಆ ಪಾಟಲೋನು ಆ ವೆರಿನಿಶಿಯನ್ ಕೋಟುಗಳನ್ನು ಧರಿಸಿದವನು ಶ್ಯಾಮ ರಾಯನಲ್ಲದೆ ಮತ್ತೊಬ್ಬನಲ್ಲವೆಂದು ಮುಖ ನೋಡದೆ ಹೇಳಬಹುದಾಗಿತ್ತು. ನಾವಂತು ಅವನ ಪರಿಚಿತವಾದ ಮುಖವನ್ನು ನೋಡಿ ಮನಗಂಡೆವು. ನಾವಿನ್ನು ಆ ಪ್ರಣಯಿಗಳ ಕಣ್ಣಿಗೆ ಬೀಳುವದು ಸರ್ವಥಾ ಸರಿಯಲ್ಲವೆಂದು ಗುಲ್‍ಬಾಯಿ ಶ್ಯಾಮರಾಯರ ಕಡೆಗೆ ಬೆನ್ನು ಮಾಡಿ ಮಲಗಿದೆವು. ಅವರು ಒಬ್ಬೊಬ್ಬರೊತ್ತಟ್ಟಿಗಾಗಿ ಲಗಬಗೆಯಿಂದ ಆ ತೋಟವನ್ನು ಬಿಟ್ಟು ಹೊರ ಬಿದ್ದು ನಡೆದರು.

ನಮಗೆ ಹುಚ್ಚುನಗೆ ತುಂಬಿತು. ಅವರು ಕಣ್ಮರೆಯಾದ ಕೂಡಲೆ ನಾವು ಬಿದ್ದು ಬಿದ್ದು ನಕ್ಕೆವು. “ಇದು ಕೋರ್ಟಶಿಪ್ ಕಂಡಿರೋ?” ಎಂದು ಗುಂಡೇರಾಯರು ಉಪಕ್ರಮಿಸಿ ಇಂಗ್ಲಿಶ್ ಫ್ರೆಂಚ್ ಮುಂತಾದ ಕಾದಂಬರಿಗಳನ್ನೋದಿ ಪಾಶ್ಚಾತ್ಯರ ಪ್ರಿಯಾರಾಧನದ ಪದ್ಧತಿಯು ಬಹು ಸ್ವಾರಸ್ಯಮಯವಾಗಿರುವದೆಂಬ ಗ್ರಹವು ನಮ್ಮ ತರುಣರಲ್ಲಿ; ಆ ಸ್ವಾರಸ್ಯವನ್ನು ಕಂಡುಕೊಳ್ಳುವ ಲವಲವಿಕೆಯು ಗುಲ್‍ಬಾಯಿಯಲ್ಲಾದರೂ ಹುಟ್ಟಿರ ಬಹುದು.” ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು.

“ಕಥೆ ಕಾದಂಬರಿಗಳು ಸಾಲದೆ ‘ಕೋರ್ಟಶಿಪ್’ (ಪ್ರಿಯಾರಾಧನ) ಎಂಬುದೊಂದೇ ವಿಷಯದ ಮೇಲೆ ತಜ್ಞರಾದ ಆಂಗ್ಲ ಸ್ತ್ರೀ ಪುರುಷರು ಶಾಸ್ತ್ರಗಳನ್ನೇ ಬರೆದಿರುತ್ತಾರೆ. ನನ್ನ ಪ್ರೇಮವು ಹೀಗಿದೆ, ನನ್ನ ಪ್ರೇಮವು ಇಂತಿಷ್ಟಾಗಿದೆ, ಇಂಥದೊಂದು ಪ್ರಸಂಗದಾರಭ್ಯ ನಾನು ನಿನಗೆ ಮೋಹಿತನಾದೆನು, ಎಂಬಂಥ ಮಾತುಗಳನ್ನು ಹೇಳುವದಾದರೆ ವಾಕ್ಯ ರಚನೆ ಹೇಗಿರಬೇಕು, ಅಲಂಕಾರಗಳೆಂಥವಿರಬೇಕು, ಇಂಥ ಮಾತುಗಳನ್ನು ಹೇಳುವಾಗ ಧ್ವನಿ ಹೇಗೆ ಹೊರಡಬೇಕು, ಎಂಬ ಮಾತುಗಳ ನಿರ್ಣಯವು ಆ ಶಾಸ್ತ್ರ ಗ್ರಂಥಗಳಲ್ಲಿ ಹೇಳಿದೆ. ಇದಲ್ಲದೆ ಮೊದಲು ಚುಂಬನವನ್ನಿಕ್ಕುವ ಅಧಿಕಾರವಾರದು, ಇಕ್ಕುವದಾದರೆ ಅದು ಕೆನ್ನೆಯಮೇಲೋ ಕೆಂದುಟಿಯ ಮೇಲೋ, ಒಬ್ಬರೊಬ್ಬರ ಮೇಲೆ ಭುಜಗಳನ್ನು ಚಲ್ಲುವ ಬಗೆ ಹೇಗೆ ಎಂಬದನ್ನು ಆ ಗ್ರಂಥಗಳು ನಿರೂಪಿಸುವದಲ್ಲದೆ ಆ ಪ್ರಣಯಿಗಳು ಅಗಲುವಾಗ ಪ್ರಿಯನು ಪ್ರಿಯಳ ಕೊಡೆಯನ್ನು ಮರೆತು ಎತ್ತಿಕೊಂಡು ಹೋಗಬೇಕೆಂತಲೂ, ಅವಳು ಅವನ ಕೈಯಲ್ಲಿಯ ಬೆತ್ತವನ್ನು ಮರೆತು ತೆಗೆದುಕೊಂಡು ಹೋಗಬೇಕೆಂತಲೂ ಅವುಗಳ ನಿರ್ಬಂಧನವಿರುತ್ತದೆ. ಅಂಥ ಗ್ರಂಥಗಳನ್ನು ಓದಿ ಪ್ರವೀಣರಾದವರೇ ಪ್ರಿಯಾರಾಧನ ಸುಖವನ್ನು ಸೇವಿಸಬಲ್ಲರು. ನಮ್ಮ ನಿಮ್ಮಂಥವರಿಗೆ ಅದು ಸರ್ವಥಾ ಸಾಧ್ಯವಲ್ಲ.” ಎಂದು ಮಾಧವರಾಯರು ಹೇಳಿದರು.

ಸಾಯಂಕಾಲದ ಭೋಜನವು ತೀರುವವರೆಗೆ ನಾವು ಶ್ಯಾಮರಾಯರ ಹೆಸರು ತೆಗೆಯಲಿಲ್ಲ. ಉಂಡು ಕವಳವನ್ನು ಹಾಕಿಕೊಂಡು ನಾನೂ ಮಾಧವ ರಾಯರೂ ಗುಂಡೇರಾಯರು ಕೋಚಗಳ ಮೇಲೆ ಕುಳಿತುಕೊಂಡು ಸಾವಕಾಶವಾಗಿ ಧೂಮಪಾನವನ್ನು ನಡೆಸಿದೆವು. ಶ್ಯಾಮರಾಯರು ಆ ಗೋಡೆಯಿಂದ ಈ ಗೋಡೆಗೆ ಅಡ್ಡಾಡುತ್ತೆ ನೂರಡಿ ಮಾಡುತ್ತಿದ್ದರು. ಅವರ ಬೆನ್ನು ನನ್ನ ಕಡೆಗಾಗುತ್ತಲೆ ಗುಂಡೇರಾಯರು ಮಾಧವರಾಯರ ಭುಜವನ್ನು ಮೆಲ್ಲನೆ ಚಿವುಟ ಹೇಗೆ ತದೇಕಧ್ಯಾನರಾಗಿ ಅಡ್ಡಾಡುತ್ತಿರುವರು ನೋಡಿರಿ,” ಎಂದು ನುಡಿದರು. ಹೊಸದೇನು ಹೇಳಿದಿರಿ? ಪ್ರಿಯಾ ಸಮೇತರಾಗಿ ತಾವು ಉಪವನದಲ್ಲಿ ವಿಹರಿಸುತ್ತಿರುವೆವೆಂದು ಅವರು ತಿಳು ಕೊಂಡಿದ್ದಾರೆ!” ಎಂದು ಮಾಧವರಾಯರು ವಿನೋದಗೈದರು. ಶ್ಯಾಮ ರಾಯರು ನನ್ನ ಕಡೆಗೆ ಮುಖ ಮಾಡಿ ಈಚೆಗೆ ಬರುವಾಗ ನಾವು ಗಾಂಭೀರದ ಮೌನವನ್ನು ತಳೆಯುತ್ತಿದ್ದೆನು. ಅವರ ಬೆನ್ನು ನಮ್ಮ ಕಡೆಗಾದ ಕೂಡಲೆ ನಾವು ಮತ್ತೆ ಗುಜುಗುಜು ನಡಿಸುತ್ತಿದ್ದೆವು. ಶ್ಯಾಮರಾಯರಿಗೆ ಸಂಶಯ ಬಂದು ತಲೆಯ ಮೇಲೂ ಬೆನ್ನು ಮೇಲೂ ಕೈಯಾಡಿಸಿ ತನ್ನ ಹಿಂಭಾಗಕ್ಕೆ ಏನಾದರೂ ಅಂಟಿಕೊಂಡಿರುವದೋ ಎಂದು ನೋಡಿಕೊಂಡರು. ನಾವು ಮೂವರು ಖೊಳ್ಳನೆ ನಕ್ಕೆವು.

“ಏನಾದರೂ ವಿಪರೀತವಾಗಿದೆಯೇನು? ಏತಕ್ಕಿಷ್ಟು ನಗೆ ರಾಯರೆ?” ಎಂದು ಶ್ಯಾಮರಾಯರು ಹುಚ್ಚರಾಗಿ ಕೇಳಿದರು.

“ಏನೂ ಇಲ್ಲ! ‘ಗುಲ್ನೇ ಸುನೋವರ್ಸೆ ಕ್ಯಾ ಕಿಯಾ?’ ಎಂಬ ಗುಲ್ ಸುನೋವರದಲ್ಲಿಯ ಪ್ರಶ್ನಕ್ಕೆ ನಿಮ್ಮಲ್ಲಿ ಉತ್ತರವುಂಟೊ?” ಎಂದು ಗುಂಡೇರಾಯರು ನಗುತ್ತೆ ಕೇಳಿದರು.

ಶ್ಯಾಮರಾಯರ ಎದೆಗೆ ಬಾಣ ಬಡಿದಂತಾಯಿತು. ಅವರು ಚಕಿತರಾಗಿ “ರಾಯರೆ, ನೀವು ಏನನ್ನುವಿರೋ ನನಗೆ ತಿಳಿಯಲೊಲ್ಲದು!” ಎಂದು ನುಡಿದರು.

“ಲೇಡಿ ಒಲಿವಿಯಾ ಕೋ ಕೆಟ್ ಎಂಬ ಚತುರೆಯು ಬರೆದಿರುವ ‘ಪ್ರಿಯಾರಾಧನವೂ ಅದರ ಸ್ವಾರಸ್ಯವೂ’ ಎಂಬ ಶೃಂಗಾರರಸ ಪ್ರಚುರವಾದ ಗ್ರಂಥವನ್ನು ನೀವು ಮೊನ್ನೆ ಮೊನ್ನೆ ಓದುತ್ತಿದ್ದೀರಿ. ಆದೀ ಎಲ್ಲಿಯೂ ಕಾಣುವದಿಲ್ಲ. ಗುಲ್‍ಬಾಯಿಗೆ ಕೊಟ್ಟಿರುವಿರೇನು?” ಎಂದು ಮಾಧವ ರಾಯರು ಕೇಳಿದರು.

ಶ್ಯಾಮರಾಯರ ಮುಖಕ್ಕೆ ಲಜ್ಜಾದೇವಿಯು ಒಂದು ಪ್ರಕಾರದ ಆವರಣವನ್ನಿಕ್ಕಿದಳು. ತಮ್ಮ ಹುಟ್ಟಿದ ವಿಕಾರವನ್ನು ಅಡಗಿಸಿಕೊಳ್ಳಲು ಅವರು ಹಃ ! ಹಾಃ ! ಹಾಃ ! ಎಂದು ಒಳಿತಾಗಿ ನಕ್ಕು “ನಮ್ಮ ರಹಸ್ಯವು ನಿಮಗೆ ತಿಳಿದದ್ದು ಹೇಗೆ?” ಎಂದು ಕೇಳಿದರು.

“ಹೇಗಾದರೂ ತಿಳಿಯಿತು! ನೀವು ನಿಮ್ಮ ವಾಕ್ಚಾತುರ್ಯದ ಬಲದಿಂದ ವಿದುಷಿಯಾದ ಸೌಂದರ್ಯಲಕ್ಷ್ಮಿಯನ್ನು ಗೆದ್ದು ಕೊಂಡಿರಿ, ಒಳ್ಳೇ ಸಂತೋಷದ ಮಾತು.” ಎಂದು ನಾನು ನನ್ನ ಮಿತ್ರನನ್ನು ಸಂಭಾವಿಸಿದೆನು.

ಬಳಿಕ ಪಂಚಗೌಡರೂ ಪಂಚದ್ರಾವಿಡರೂ ಆಗಿರುವ ದಶವಿಧ ಬ್ರಾಹ್ಮಣರಲ್ಲಿ ಅನ್ಯೋನ್ಯ ವಿವಾಹಗಳು ಸಂಕೋಚವಿಲ್ಲದೆ ನಡೆಯಬೇಕೋ ಬಾರದೋ ಎಂಬ ವಿಷಯದ ಶಾಸ್ತ್ರರ್‍ಥವು ನಡೆಯಿತು. ಧರ್ಮಶಾಸ್ತ್ರಗಳ ಇಂಗಿತವನ್ನು ನೋಡಲಾಗಿ ಇಂಥ ವಿವಾಹಳಿಗೆ ಪ್ರತಿ ಬಂಧವಿಲ್ಲವೆಂಬ ನಿಷ್ಕರ್ಷೆಯಾಯಿತು. ಇನ್ನು ಆಂಗ್ಲ ವಿವಾಹ ಪದ್ದತಿಯ ಪೂರ್ವ ಪೀಠಿಕೆಗೆ ಅನುಸರಿಸಿ ವರನೇ ವಧುವಿನ ತಂದೆಯ ಬಳಿಗೆ ಹೋಗಿ ಕನ್ಯಾದಾನವನ್ನು ಬೇಡಿಕೊಳ್ಳಬೇಕಾಗಿರುವ ಮೇರೆಗೆ ಶ್ಯಾಮರಾಯರೇ ಲಲ್ಲೂಭಾಯಿಯ ಬಳಿಗೆ ಕನ್ಯಾರ್ಥಿಗಳಾಗಿ ಹೋಗತಕ್ಕದ್ದೆಂದು ಮಾಧವರಾಯರು ವಿನೋದಗೈದರು.

“ಆಂಗ್ಲ ಪದ್ದತಿಯೇಕೆ? ಆರ್ಯರ ಪದ್ಧತಿಯೇ ಇದು ವಾಚ ಚತ್ತ ಮ್ಯ್ ಕನ್ಯಾ ಪುತ್ರಾತಿ ಯಾಚಿತ ತ್ವಯ (ಅಂದರೆ ಸಂತತಿಗಾಗಿ ನೀನು ನನ್ನ ಕನ್ಯೆಯನ್ನು ಬೇಡಿಕೊಂಡ ಮೇರೆಗೆ ಅವಳನ್ನು ನಾನು ನಿನಗೆ ವಚನ ಪೂರ್ವಕವಾಗಿ ಕೊಟ್ಟಿದ್ದೇನೆ) ಎಂಬುದು ನಮ್ಮಲ್ಲಿಯ ವಾಗ್ದಾನದ ವಿಧಿಯಾಗಿರುವದಷ್ಟೇ? ಆಧುನಿಕರೇ ಕನ್ನೆಯರ ಯೋಗ್ಯತೆಯನ್ನು ಕಡಿಮೆ ಮಾಡಿದ್ದರಿಂದ ನನ್ನ ಮಗಳನ್ನು ‘ನೀವು ಸ್ವೀಕರಿಸುವಿರಾ?’ ಎಂದು ಕಂಡಕಂಡವರನ್ನು ಕೇಳಿಕೊಳ್ಳುತ್ತೆ ಕನ್ನೆಯ ಪಿತನು ಊರೂರು ತಿರುಗಬೇಕಾಗಿದೆ.” ಎಂದು ಶ್ಯಾಮರಾಯರು ವಿಷಾದದಿಂದ ನುಡಿದರು.

“ವಾಃ ವಾಃ ! ಈ ಮೇರೆಗೆ ಇಂದು ನೀವು ಲಲ್ಲೂ ಭಾಯಿಯವರ ಕಡೆಗೆ ಹೋಗಿ ಅವರ ಸಮ್ಮತಿಯನ್ನು ಪಡೆದು ಬನ್ನಿರಿ, ಅವರಾದರೂ ಸುಧಾರಣೆಚ್ಚುಗಳೇ ಆಗಿರುವರು. ರೂಢಿಯಲ್ಲಿ ಹಿತಾವಹವಾದ ಹೆಚ್ಚು ಕಡಿಮೆ ಮಾಡಲು ಅವರು ಸಿದ್ದರೇ ಇರುವರು. ನಿಮ್ಮಂಥ ಸಂಪನ್ನರಾದ ಅಳಿಯಂದಿರನ್ನು ಕಂಡಾಕ್ಷಣವೇ ಅವರು ತಮ್ಮ ಮಗಳನ್ನು ನಿಮಗೆ ಪ್ರೇಮ ಪೂರ್ವಕವಾಗಿ ಸಮರ್ಪಿಸುವರು.” ಎಂದು ನಾನು ಅಭಿಪ್ರಾಯಪಟ್ಟೆನು.

“ಓ! ಗುಲ್, ನಾನು ನಿನ್ನನ್ನು ಕರಿಸಿದನೋ ಇಲ್ಲವೋ ಅಷ್ಟರಲ್ಲಿಯೇ ಬಂದುಬಿಟ್ಟೆಯಲ್ಲ!” ಎಂದು ಲಲ್ಲೂ ಭಾಯಿಯವರು ತಮ್ಮ ಮಗಳ ಮುಖವನ್ನು ನೋಡಿ ಸಂತೋಷದಿಂದ ನುಡಿದರು.

“ಆಜ್ಞೆಯಾದ ಮೇಲೆ ಬರಬೇಡವೆ?” ಎಂದು ಗುಲ್‍ಬಾಯಿಯು ವಿನೀತೆಯಾಗಿ ನಿಂತುಕೊಂಡು ನುಡಿದಳು.

“ಪಿತ್ರಾಜ್ಞೆಯನ್ನು ನೀನು ಮೀರಿದವಳಲ್ಲ; ಆದರೂ ಇಷ್ಟು ಸೌಜನ್ಯ, ಇಷ್ಟು ವಿನಯ, ಇಷ್ಟು ನಮ್ರತೆಗಳನ್ನು ನೀನೆಲ್ಲಿ ಕಲಿತುಕೊಂಡಿ? ಹಾಗೆ ಕೋಚದ ಮೇಲೆ ಕೂಡು.”

ಗುಲ್ಬಾಯಿಯು ಕೋಚದ ಮೇಲೆ ಕುಳಿತುಕೊಂಡು “ನನ್ನನ್ನು ಕರಿಸಿದ್ದೇಕೆ?” ಎಂದು ಕೇಳಿದಳು.

“ಗುಲ್, ನಿನ್ನ ಪೂರ್ವದ ವಿಚಾರಗಳೆಲ್ಲ ತೊಳೆದು ಹೋಗಿ ನೀನು ಪುರಾತನ ಪದ್ದತಿಯ ನಾರಿಯಂತೆ ಆಚರಿಸಲಾರಂಭಿಸಿರುವಿ. ಅಣ್ಣಾ ಸಾಹೇಬ, ಮಾಧವರಾವ, ಶ್ಯಾಮರಾವ ಮುಂತಾದ ನಮ್ಮ ಹೊಸ ಸ್ನೇಹಿತರೊಡನೆ ವಾದ ವಿವಾದಗಳನ್ನು ಮಾಡುತ್ತೆ ತಿಂಗಳು ಹದಿನೈದು ದಿವಸಗಳಲ್ಲಿಯೇ ಇಷ್ಟು ವಿಚಾರಕ್ರಾಂತಿಯಾಯಿತೆ?”

“ಅಪ್ಪಾ, ನಮ್ಮ ಹೊಸ ಸೈತರು ಒಳ್ಳೇ ಚತುರರಾದ ವಿವಾದ ಪಟುಗಳು. ಅವರ ವಿಶುದ್ಧವಾದ ಆಚರಣಗಳನ್ನೂ ಅವರಲ್ಲಿರುವ ಆರ್ಯ ಧರ್ಮದ ಅಭಿಮಾನವನ್ನೂ ಸಾರಾಸಾರ ವಿಚಾರಗಳನ್ನು ತೂಗಿ ಸುಧಾರಣೆಯ ಪಥದಲ್ಲಿ ಅವರಿಡುತ್ತಿರುವ ಹೆಜ್ಜೆಗಳನ್ನೂ ಚನ್ನಾಗಿ ನಿರೀಕ್ಷಿಸಲಾಗಿ ಅವರು ಬೋಧಿಸಿದ ಎಲ್ಲ ಮಾತುಗಳು ನನಗೆ ಸಮ್ಮತವೇ ಆದವು.”

“ಸ್ತ್ರೀಸ್ವಾತಂತ್ರ್ಯದ ವಾದವೆಂಬ ಪ್ರಬಲವಾದ ಅಸ್ತ್ರವನ್ನಾದರೂ ನೀನು ಹಾಗೆ ಕೆಳಗಿಡಬಾರದಾಗಿತ್ತು” ಎಂದು ಲಲ್ಲೂಭಾಯಿಯವರು ಮುಗುಳುನಗೆ ನಗುತ್ತೆ ನುಡಿದರು.

“ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಸ್ತ್ರವು! ಪುರಷರಾದರೂ ಸ್ತ್ರೀಯರನ್ನು ಬಿಟ್ಟು ಸ್ವತಂತ್ರರಾಗಿ ಇರಲಾರರಷ್ಟೆ?” ಎಂದು ಗುಲ್‍ಬಾಯಿಯು ತಂದೆಯ ಮುಖವನ್ನು ನೋಡುತೆ ಮಂದಸ್ಮಿತೆಯಾಗಿ ಕೇಳಿದಳು.

“ಓ ಹೋ! ಲಗ್ನ ಮಾಡಿಕೊಳ್ಳುವದಿಲ್ಲೆಂದು ನೀನು ಸಾಧಿಸಿ ಹೇಳುತ್ತಿದ್ದಿ. ಆ ವಿಚಾರವನ್ನಾದರೂ ನೀನು ಕಳೆದುಕೊಂಡಿಲ್ಲವಷ್ಟೆ?”

ಕೆಂಪು ಹಗಲು ಪಂಜಿನ ಬೆಳಕಿನಲ್ಲಿ ಎಲ್ಲ ವಸ್ತುಗಳು ಕೆಂಪಾಗಿ ಕಾಣುವಂತೆ ಲಲ್ಲೂಭಾಯಿಯವರ ಮಾತು ಕೇಳುತ್ತಲೆ ಗುಲ್‍ಬಾಯಿಯ ಸುಂದರವಾದ ಮುಖವು ವಿಲಕ್ಷಣವಾದ ರಕ್ತಿಮೆಯನ್ನು ತಳೆದಿತು. ಸಲಜ್ಜಸ್ಮಿತಳಾಗಿ ಅವಳು ಮುಖವನ್ನು ತಗ್ಗಿಸಿಕೊಂಡು ಕುಳಿತಳೇ ಹೊರತಾಗಿ ತಂದೆಯ ಪ್ರಶ್ನಕ್ಕೆ ಮತ್ತೊಂದು ಉತ್ತರವನ್ನು ಹೇಳಬಲ್ಲಳೆ?

“ಉತ್ತರವಿಲ್ಲವೆ? ಹಾಗಾದರೆ ವಿವಾಹದ ವಿಷಯದಲ್ಲಾದರೂ ನೀನು ಶ್ಯಾಮರಾಯರ ಮತಕ್ಕೆ ಒಳಗಾಗಿರುವಿಯೆಂದು ನಾನು ಗ್ರಹಿಸುತ್ತೇನೆ.” ಎಂದು ತಂದೆಯು ಒಳಿತಾಗಿ ನಕ್ಕು ಕೇಳಿದನು.

ಗುಲ್‍ಬಾಯಿಯು ಭ್ರಾಂತಳಂತೆ ದಿಂಗು ಬಡಿದು ಕುಳಿತಳು. ತಲೆಯೆತ್ತಿ ತಂದೆಯ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ. “ನೀವು ಏನೆನ್ನುವಿರೋ ನನಗೆ ತಿಳಿಯಲೊಲ್ಲದು” ಎಂದಿಷ್ಟು ನುಡಿಯ ಬೇಕಾದರೆ ಅವಳಿಗೆ ಸಾಕುಬೇಕಾಗಿಹೋಯಿತು.

“ನನಗಾದರೂ ಎಲ್ಲಿ ತಿಳಿಯುತ್ತಿತ್ತು? ಇಂದು ಪ್ರಾತಃಕಾಲದಲ್ಲಿ ಶ್ಯಾಮರಾಯರೇ ನನ್ನ ಬಳಿಗೆ ಬಂದು ನಿನ್ನನ್ನು ತಮಗೆ ಕೊಡಬೇಕೆಂದು ಕೇಳಿಕೊಂಡರು. ನೀನು ಅಕ್ಕರತೆಯಿಂದ ಅವರ ಪಾಣಿಗ್ರಹಣಕ್ಕೆ ಒಪ್ಪಿರುವಿಯಂತೆ!”

“ಇದರಲ್ಲಿ ನನ್ನದೇನಿದೆ? ನೀವು ಕೊಡುವವರು ಅವರು ಸ್ವೀಕರಿಸತಕ್ಕವರು.”

“ಗುಲ್, ಈ ಸಂವಾದವು ಇಷ್ಟಕ್ಕೆಯೇ ಸಾಕು. ಹೆಚ್ಚಾಗಿ ವಿನೋದಗೈದು ನಿನ್ನ ಮುಖದ ಆರಕ್ತತೆಯನ್ನು ಹೆಚ್ಚಿಸುವದು ವಿಹಿತವಲ್ಲ. ಕೆಳಗೆ ಹೋಗಿ ನನಗಾಗಿ ಚಹಾ ತೆಗೆದುಕೊಂಡು ಬಾ” ಎಂದು ಲಲ್ಲೂಭಾಯಿಯವರು ಕೃತಕೃತ್ಯರಾಗಿ ನುಡಿದರು.

ಗುಲ್‍ಬಾಯಿಯು ಚಹ ತೆಗೆದುಕೊಂಡು ಮರಳಿ ಬರುವಷ್ಟರಲ್ಲಿ ಅವಳ ಚಿತ್ತವು ಕಿಂಚಿತ್ ಶಾಂತವಾಗಿತ್ತು. ಲಜ್ಜೆಯ ರಕ್ತಿಮೆಯು ಕಡಿಮೆಯಾಗಿತ್ತು.

“ಗುಲ್, ಲಗ್ನ ಮಾಡಿಕೊಳ್ಳದೆ ಹಾಗೆಯೆ ಇರತಕ್ಕದ್ದೆಂದು ನಿನಗೆ ಯಾರು ಬೋಧಿಸಿದ್ದರು?”

“ಯಾರೂ ಇಲ್ಲ. ನನ್ನ ಶಿಕ್ಷಕರಾದ ಧೋಂಡೋಪಂತ ಧಂಢೇರೆಯವರ ಪರಿಚಯವಾದಂದಿನಿಂದ ಅವರಂತೆಯೇ ಎಲ್ಲ ಪುರುಷರ ಮನೋವೃತ್ತಿಗಳಿರುವವೆಂಬ ದುರ್ಗ್ರಹವಾದ ಅಭಿಪ್ರಾಯವು ನನ್ನಲ್ಲಿ ಸೇರಿತು. ಅದರಂತೆ ಎಲ್ಲ ಪುರುಷರು ಸೆಟಮ್ಮನೆ ಸೆಟ ಕೊಂಡಿರುವರೆಂದೂ ಅವರಂತೆಯೇ ಎಲ್ಲರೂ ಸ್ತ್ರೀಯರ ವಿಷಯವಾಗಿ ಅನಾದರವುಳ್ಳವರೆಂದೂ ಅವರಂತೆಯೇ ಎಲ್ಲ ಪುರುಷರು ಅರಸಿಕರೆಂದೂ ನಾನು ತಿಳಿದಿದ್ದೆನು. ನಿಮ್ಮ ಸ್ನೇಹಿತರು ಬಂದು ನನ್ನಲ್ಲಿ ವಿಚಾರ ಕ್ರಾಂತಿಯನ್ನುಂಟು ಮಾಡಿದ್ದು ಸುಯೋಗವೇ ಎಂದು ತಿಳಿದು ಅವರಿಂದ ನಾನು ಉಪಕೃತಳಾಗಿದ್ದೇನೆ.”

ವಾಚಕರೆ, ಇದೇ ತಿಂಗಳಲ್ಲಿ ಗುಲ್‍ಬಾಯಿ ಶ್ಯಾಮರಾಯರ ವಿವಾಹವಾಗತಕ್ಕದ್ದು. ನೀವು ಬಂದು ವಧೂವರರ ಮೇಲೆ ಅಕ್ಷತೆಗಳನ್ನು ಹಾಕಿದರೆ ವಿಹಿತವೇ. ಬರಲಿಕ್ಕೆ ಅನುಕೂಲವಿಲ್ಲದಲ್ಲಿ ನೀವಿದ್ದ ಸ್ಥಳಗಳಿಂದಲೇ ಆಶೀರ್ವಚನಯುಕ್ತವಾದ ಪತ್ರಗಳನ್ನು ಹಾಕಿರಿ. ನಿಮ್ಮೆಲ್ಲರಿಗೂ ಲೇಖನದ್ವಾರಾ ರಸಪೂರ್ಣವಾದ ಪಕ್ವಾನ್ನಗಳನ್ನು ಕಳಿಸಲು ಲಲ್ಲೂಭಾಯಿಯವರು ನಮಗೆ ‘ಮಕ್ತೆ’ ಕೊಟ್ಟ ಮೇರೆಗೆ ಅಂಥ ಪಕ್ವಾನ್ನಗಳನ್ನು ‘ಸಚಿತ್ರ ಭಾರತದಲ್ಲಿ’ ತುಂಬಿ ಕಳಿಸುವೆವು, ಸ್ವೀಕರಿಸಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಬ್ಬ
Next post ಶಿರೀಷ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys