ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು.
ಬೇರುವರಿಯಿತ್ತು. ಅದಕೆ ಶತಕೋಟಿ ಶಾಖೆ ಬಿಟ್ಟಿತ್ತು.
ಆಸೆ ಬೆಂಬಳಿಗೊಂಡು, ಆಡುವರೆಲ್ಲ ಮುಂದುಗಾಣದೆ, ಸಂದು ಹೋದರು.
ನಮ್ಮ ಶರಣರು ಇದನರಿದು, ಹಿಂದೆ ನೋಡಿ,
ಮುಂದೆ ಲಿಂಗದಲ್ಲಿ ಬೆರೆದ ಭೇದವ ಕಂಡು,
ಮನವೆಂಬ ಮರದ ಬೇರನಗಿದು, ಶತಕೋಟಿ ಶಾಖೆಯನು ಸವರಿ,
ತುಟ್ಟತುದಿಯ ಮೇಲೆ ನಿಂದು, ನೋಡುವನ್ನಕ್ಕ,
ನಾನೆತ್ತ ಹೋದೆನೆಂದರಿಯೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****