ಮನಃಸಾಕ್ಷಿ- ಹೃದಯದ ಮಾತು

ಮನಃಸಾಕ್ಷಿ- ಹೃದಯದ ಮಾತು

ನಾವು ಕೈಗೊಳ್ಳುವ ಯಾವುದೇ ನಿರ್‍ಧಾರಗಳು ಅಥವಾ ಮಾಡುವ ಯಾವುದೇ ಕೆಲಸಗಳು ಸಮಾಧಾನ, ತೃಪ್ತಿ ನೀಡಬೇಕಾದರೆ ಅವು ಮನಸ್ಸಿಗೆ ವಿರುದ್ಧವಾಗಿ ಕಿರಿಕಿರಿ ಭಾವನೆಗಳಿಗೆ ಆಸ್ಪದ ಕೊಡುವಂತಹದ್ದಾಗಿರಬಾರದು. ಹೃದಯಕ್ಕೆ ಒಪ್ಪುವಂತಿರಬೇಕು. ಮುಖ್ಯವಾದ ನಿರ್‍ಧಾರ ತೆಗೆದುಕೊಳ್ಳುವಾಗ ಅಥವಾ ಮುಖ್ಯವಾದ ಕೆಲಸ ಹೃದಯದ ಒಳಗಿನಿಂದ ಏಳುವ ದನಿಗೆ ಮಾಡುವಾಗ ಕಿವಿಕೊಡಬೇಕು ಎನ್ನುವ ಒಂದು ಮಾತಿದೆ. ಯಾವುದೇ ಕೆಲಸ ಮಾಡುವಾಗ ಇದು ಸರಿಯಲ್ಲ ಎನ್ನುವ ಭಾವನೆಯನ್ನು ಒಂದು ಕ್ಷಣಕ್ಕಾದರೂ ಹೃದಯ ಮೂಡಿಸಿದರೆ ಆ ಕೆಲಸವನ್ನು ಮಾಡದಿರುವುದೇ ಒಳಿತು. ಇದು ಸರಿ ಎನ್ನುವ ನಿರಾಳತೆಯನ್ನು ಹೃದಯ ಮನಸ್ಸು ಎರಡೂ ತೋರಿದಾಗ ಮಾಡುವ ನಿರ್‍ಧಾರಗಳು, ಕೆಲಸಗಳು ಆ ಕ್ಷಣಕ್ಕೆ ಹೊರಗಿನ ಪರಿಸರಕ್ಕೆ ವಿರುದ್ಧವಾಗಿ ಕಷ್ಟವೆನಿಸಿದರೂ ಕಾಲಕ್ರಮೇಣದಲ್ಲಿ ಮನಸ್ಸಿಗೆ ತೃಪ್ತಿ ನೀಡುತ್ತವೆ. ಮುಂದೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸುತ್ತವೆ. ಇದನ್ನೇ ಮನಃಸಾಕ್ಷಿ ಪ್ರಜ್ಞೆ ಅನ್ನುವುದು.

ದೈನಂದಿನದ ವ್ಯವಹಾರಗಳನ್ನು ಹೊರತುಪಡಿಸಿ ಬೇರೆ ‘ಯಾವುದಾದರೂ ಮುಖ್ಯವಾದ ನಿರ್‍ಧಾರಗಳನ್ನು ತೆಗೆದುಕೊಳ್ಳುವಾಗ, ಕೆಲಸಗಳನ್ನು ಮಾಡುವಾಗ ಹೃದಯದ ಒಳಗಿನಿಂದ ಏಳುವ ದನಿ ಮುಖ್ಯವಾಗುತ್ತದೆ. ಈ ದನಿ ನಮ್ಮಲ್ಲಿ ತೀವ್ರವಾದ ತುಡಿತವನ್ನು ಹುಟ್ಟಿಸುತ್ತದೆ. ಇಂತಹ ತೀವ್ರವಾದ ತುಡಿತಗಳು ಎದ್ದಾಗ ಮಾತ್ರ ನಾವು ಮಾಡುವ ಕೆಲಸದಲ್ಲಿ, ನಿರ್‍ಧಾರದಲ್ಲಿ ತಾದಾತ್ಮವನ್ನು ಅನುಭವಿಸುತ್ತೇವೆ. ಹೊರ ಜಗತ್ತನ್ನು ಮರೆಯುತ್ತೇವೆ.

ಉದಾಹರಣೆಗೆ ಒಬ್ಬ ಕಲಾವಿದನಲ್ಲಿ ಚಿತ್ರ ಬಿಡಿಸುವ ಜಾಣ್ಮೆ ಇರಬಹುದು. ಆದರೆ ಯಾವಾಗ ಚಿತ್ರ ಬಿಡಿಸಲೇ ಬೇಕು ಎನ್ನುವ ತೀವ್ರವಾದ ತುಡಿತ ಉಂಟಾಗುವುದೋ ಆಗ ಅವನ ಕುಂಚದಿಂದ ಒಂದು ಉತ್ತಮ ಕಲಾಕೃತಿ ಮೂಡಿಬರುವುದು ಸಾಧ್ಯ. ಇಂತಹ ಸಂದರ್‍ಭಗಳಲ್ಲಿ ಮಾಡಿದ ಚಿತ್ರಗಳಲ್ಲಿ ಆಳ ಇರುತ್ತದೆ, ವೈಶಾಲ್ಯ ಇರುತ್ತದೆ. ಸೌಂದರ್‍ಯ ಇರುತ್ತದೆ, ಹೇಳಬೇಕಾದುದನ್ನು ಅದು ತನ್ನದೇ ಭಾಷೆಯಲ್ಲಿ ಹೇಳುತ್ತದೆ. ಯಾರೋ ಹೇಳಿದರೆಂದು ಚಿತ್ರ ಬಿಡಿಸಿದರೆ ಆ ಚಿತ್ರ ಬಣ್ಣದ ಓಕುಳಿಯನ್ನು ಚೆಲ್ಲಬಹುದು. ಆದರೆ, ಏನೂ ಹೇಳಲಾಗದೆ ಸೋಲುವ ಪ್ರಮೇಯವೇ ಹೆಚ್ಚು. ಜೀವನ ಒಂದು ವಿಶಾಲವಾದ ಕ್ಯಾನ್‌ವಾಸ್, ನಾವೆಲ್ಲರೂ ಕಲಾವಿದರು. ನಾವು ಮಾಡುವ ಕೆಲಸಗಳು ತೆಗೆದುಕೊಳ್ಳುವ ನಿರ್‍ಧಾರಗಳು ಬಣ್ಣಗಳು, ಒಳ್ಳೆಯ ಚಿತ್ರಕ್ಕೆ ಒಳ್ಳೆಯ ಬಣ್ಣಗಳು ಬೇಕು. ಜೀವನದ ಕ್ಯಾನ್‌ವಾಸಿನಲ್ಲಿ ಮೂಡುವ ಚಿತ್ತಾರಗಳ ಸೌಂದರ್‍ಯ ನಮ್ಮ ಕೆಲಸ ಹಾಗೂ ನಿರ್‍ಧಾರಗಳ ಮೇಲೆ ಅವಲಂಬಿತವಾಗಿರುತ್ತವೆ.

ತುಂಬಾ ಸಲ ನಾವು ಹೊರಗಿನ ಒತ್ತಡಗಳಿಗೆ ಮಣಿದು ಕೆಲವು ನಿರ್‍ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಕೆಲವು ಕೆಲಸಗಳನ್ನು ಮಾಡುತ್ತೇವೆ, ಮಾಡಬೇಕಲ್ಲ ಎಂದು ಮನಸ್ಸಿಲ್ಲದಿದ್ದರೂ ಮಾಡುತ್ತೇವೆ. ನಮ್ಮ ಒಳ ಮನಸ್ಸು ಬೇಡವೆಂದರೂ ಯಾರೋ ಹೇಳಿದರೆಂದು, ಒತ್ತಾಯಿಸಿದರೆಂದು ಮಾಡುತ್ತೇವೆ. ಆಗುವುದಿಲ್ಲ ಅಂದರೆ ಅವರಿಗೆ ನೋವಾಗುವುದೇನೋ ಎಂದು ಮಾಡುತ್ತೇವೆ. ಆದರೆ ಇದರಿಂದ ಮುಂದೆ ನಮಗೇ ನೋವಾಗುವುದು ಎನ್ನುವುದನ್ನು ಮರೆಯುತ್ತೇವೆ. ಆಮೇಲೆ ಯಾಕೆ ಮಾಡಿದೆವು ಎನ್ನುವ ತಪ್ಪಿತಸ್ಥ ಭಾವನೆಯಿಂದ ನರಳುತ್ತೇವೆ. ಒತ್ತಾಯಕ್ಕೆ ಮಾಡಿದ ನಿರ್‍ಧಾರಗಳು ಅಥವಾ ಕೆಲಸಗಳು ಯಾವತ್ತೂ ತೃಪ್ತಿದಾಯಕವಾಗಿರುವುದಿಲ್ಲ. ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇರುತ್ತವೆ. ಇದು ನಮಗೆ ನಾವೇ ಮಾಡಿಕೊಳ್ಳುವ ಮೋಸ. ಇದರಿಂದ ಜೀವನದ ಕ್ಯಾನ್‌ವಾಸ್‌ನ ಮೇಲೆ ಮೂಡುವ ಚಿತ್ರಗಳು ಬಣ್ಣ ಕೆಡುತ್ತವೆ.

ಗಾಂಧೀಜಿ ಹೇಳಿದಂತೆ, ನಿನ್ನ ಯೋಚನೆಗಳು ಸಕಾರಾತ್ಮಕವಾಗಿರಲಿ. ಯಾಕೆಂದರೆ ನಿನ್ನ ಯೋಚನೆಗಳೇ ನಿನ್ನ ಮಾತುಗಳಾಗುತ್ತವೆ; ನಿನ್ನ ಮಾತುಗಳು ಸಕಾರಾತ್ಮಕವಾಗಿರಲಿ ಯಾಕೆಂದರೆ ನಿನ್ನ ಮಾತುಗಳೇ ನಿನ್ನ ನಡತೆಗಳಾಗುತ್ತದೆ; ನಿನ್ನ ನಡತೆಗಳು ಸಕಾರಾತ್ಮಕವಾಗಿರಲಿ ಯಾಕೆಂದರೆ ನಿನ್ನ ನಡತೆಗಳೇ ನಿನ್ನ ಅಭ್ಯಾಸಗಳಾಗುತ್ತವೆ; ನಿನ್ನ ಅಭ್ಯಾಸಗಳು ಸಕಾರಾತ್ಮಕವಾಗಿರಲಿ ಯಾಕೆಂದರೆ ನಿನ್ನ ಅಭ್ಯಾಸಗಳೇ ನಿನ್ನ ಮೌಲ್ಯಗಳಾಗುತ್ತವೆ; ನಿನ್ನ ಮೌಲ್ಯಗಳು ಸಕಾರಾತ್ಮಕವಾಗಿರಲಿ ಯಾಕೆಂದರೆ ನಿನ್ನ ಮೌಲ್ಯಗಳೇ ನಿನ್ನ ಅದೃಷ್ಟವಾಗುತ್ತವೆ.’

ಏನನ್ನಾದರೂ ಮಾಡುವಾಗ ನಾವು ತಪ್ಪು ಮಾಡುತ್ತಿದ್ದೇವೆ ಎನ್ನುವ ತಪ್ಪಿತಸ್ಥ ಭಾವನೆ ನಮಗೆ ನಮ್ಮ ಹೃದಯ, ನಮ್ಮ ಮನಃಸಾಕ್ಷಿ ಕೊಡುವ ಮೊದಲ ಎಚ್ಚರಿಕೆಯ ಘಂಟೆ. ಈ ಎಚ್ಚರಿಕೆಯ ಘಂಟೆಯ ಸದ್ದನ್ನು ಆಲಿಸಲು ಶಕ್ತನಾದವನು ಯಾವತ್ತೂ ತಪ್ಪು ಕೆಲಸ ಮಾಡುವುದಿಲ್ಲ. ಹೃದಯದ ದನಿ ಮತ್ತು ಮನಃಸಾಕ್ಷಿಗಿಂತ ಮಿಗಿಲಾದ ಮಾರ್‍ಗದರ್‍ಶಕನಿಲ್ಲ. ಇದನ್ನು ನಿರ್‍ಲಕ್ಷಿಸಿದರೆ ಹಲವಾರು ತೊಂದರೆಗಳಿಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಒಮ್ಮೆ ತೊಂದರೆಗಳಿಗೆ ಸಿಕ್ಕಿಕೊಂಡರೆ ಅವುಗಳಿಂದ ಹೊರ ಬರುವುದು ಬಹಳ ಕಷ್ಟ. ತೊಂದರೆಗಳಿಗೆ ಸಿಕ್ಕಿ ಹಾಕಿಕೊಂಡು ಅದರಿಂದ ಹೊರಬರುವುದಕ್ಕೆ ಒದ್ದಾಡುವುದಕ್ಕಿಂತ ನಮ್ಮದೇ ಆದ ಹೃದಯದ ದನಿಗೆ, ಮನಃಸಾಕ್ಷಿಯ ಎಚ್ಚರಿಕೆಗೆ ಗಮನಕೊಟ್ಟು ತೊಂದರೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಜಾಣತನವಲ್ಲವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊನಲ ಹಾಡು
Next post ಉಮರನ ಒಸಗೆ – ೧೨

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…