ನಿಮ್ಮ ಹೆಸರೇನು?

ನಿಮ್ಮ ಹೆಸರೇನು?

ಚಿತ್ರ: ಅಪರ್ವ ಅಪರಿಮಿತ
ಚಿತ್ರ: ಅಪರ್ವ ಅಪರಿಮಿತ

ದೇವರು ಮಾಡಿರುವ ಮನುಷ್ಯರೇ!
ಮನುಷ್ಯರು ಮಾಡಿರುವ ದೇವರೇ!
ನಿಮ್ಮ ಹೆಸರೇನು?

ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು “ಕೆಲಸಕ್ಕೆ ಬಾರದ ಓದು! ನಿಮ್ಮ ಬುದ್ಧಿಗಳೆಲ್ಲಾ ಹಾಳಾಗಿ ಹೋಗುತ್ತಿವೆ. ನೀವೆಲ್ಲಾ ಬರೀ ಬೌದ್ಧರು.” ಎನ್ನುತ್ತಿದ್ದರು.
“ಬೌದ್ಧರು ಎಂತಹವರು ಶಾಸ್ತ್ರಿಗಳೇ!” ಎಂದು ಕೇಳಿದ ರಾಮ್ಮೂರ್ತಿ, ಅವನೊಬ್ಬ ಹಠವಾದಿ.
“ನಾಳೆ ಭಾನುವಾರ ಹೂವಿನ ತೋಟದಲ್ಲಿ ನನ್ನ ಪ್ರಸಂಗವಿದೆ. ಎಲ್ಲರೂ ಬನ್ನಿ.” ಎಂದು ಆದೇಶ ನೀಡಿದರು.
ಭಾನುವಾರ ನಾಲ್ಕುಗಂಟೆಗೆ ಹೂವಿನತೋಟದಲ್ಲಿ ಒಂದು ಮಾವಿನ ಗಿಡದ ಕೆಳಗೆ ಮರಳಿನಲ್ಲಿ ನಾವು ಇಪ್ಪತ್ತೈದು ಜನ ಕುಳಿತ್ತಿದ್ದೆವು. ನಡುವೆ ಟವ್ವಾಲನ್ನು ಹಾಸಿಕೊಂಡು ಶಾಸ್ತ್ರಿಗಳು ಕುಳಿತಿದ್ದಾರೆ. ನಾನು ಚಿಕ್ಕ ಮೇಜಾ ಒಂದನ್ನು ತರಲು ಹೋಗುತ್ತಿದ್ದರೇ, “ನೀವೆಲ್ಲಾ ಕೆಳಗೆ ಕೂತಿರುವಾಗ ನಾನು ಹೇಗೆ ಮೇಲೆ ಕೂಡಲಿ!” ಎಂದರು. ಎರಡು ಎಳನೀರನ್ನು ಕುಡಿದು ತಾಂಬೂಲವನ್ನು ಜಡಿಯುತ್ತಾ ಶಾಸ್ತ್ರಿಗಳು ಬೌದ್ಧಮತದ ವಿಷಯವಾಗಿ ಪ್ರಸಂಗಕ್ಕೆ ಉಪಕ್ರಮಿಸಿದರು. ಹತ್ತು ನಿಮಿಷಗಳು ಕಳೆಯುವ ಹೊತ್ತಿಗೆ, ರಾಮ್ಮೂರ್ತಿ ತನ್ನ ಕೈಯಲ್ಲಿದ್ದ ಪುಸ್ತಕವನ್ನು ಬಿಚ್ಚಿನೋಡಿ “ಶಾಸ್ತ್ರಿಗಳೇ! ತಾವು ತಿಳಿಸುತ್ತಿರುವುದೆಲ್ಲಾ ಸರ್ವದರ್ಶನ ಸಂಗ್ರಹದಲ್ಲಿದೆ, ಅಲ್ಲವೇನ್ರಿ?” ಎಂದು ಕೇಳಿದ. ನಿಬ್ಬೆರಗಾದ ಶಾಸ್ತ್ರಿಗಳು “ಓಹೋ! ನಿನಗೆ ಹೇಗೆ ತಿಳಿಯುತೋ, ಅದೇನು ಭಾಷಾಂತರಗೊಂಡಿಲ್ಲವಲ್ಲಾ?” ಎಂದರು.
“ಹೌದ್ರಿ.”
“ಈ ಅಂಗ್ರೇಜಿಯವ ಒಳ್ಳೆ ಗಟ್ಟಿ ಪಿಂಡವೋ? ಆ ಎರಡನೇ ಪುಸ್ತಕವಾವುದೋ?”
“ಬುದ್ಧ ಚರಿತ್ರರೀ”
“ಎಲ್ಲಿಂದ್ ಗಳಿಸುತ್ತಿರೋ ಇಂಥ ಅಪೂರ್ವ ಗ್ರಂಥಗಳನ್ನು? ಎಲ್ಲಿ? ಇಲ್ಲಿ ಕೊಡು. “ಶಾಸ್ತ್ರಿಗಳು ಪುಸ್ತಕವನ್ನು ತೆಗೆದುಕೊಂಡು ಅತಿ ಮಧುರವಾದ ತಮ್ಮ ಕಂಠದಿಂದ ಹಾಡಿ ತಾತ್ಪರ್ಯ ಹೇಳಲು ಆರಂಭಿಸಿದರು.

ನಾಲ್ಕುದಿನಗಳು ಕಳೆದನಂತರ ಶಾಸ್ತ್ರಿಗಳು ಕ್ಲಾಸಿನಲ್ಲಿ ಹೀಗೆ ಹೇಳಿದರು.” ಎಲೇ, ಈ ಪುಸ್ತಕ ಓದುವ ತನಕಾ ನನಗದರಲ್ಲಿಯ ಮಹಿಮೆ ತಿಳಿಯಲಿಲ್ಲ. ಸಂದೇಹವಿಲ್ಲ. ಈ ಮಹಾನುಭಾವನು ಶ್ರೀ ಮಹಾ ವಿಷ್ಣುವಿನ ಅವತಾರವೇ ನಿಜ!”
ಅಂದಿನಿಂದ ಶಾಸ್ತ್ರಿಗಳು ನಮ್ಮನ್ನು ಬೌದ್ದರೆ ಎಂದು ದೂಷಿಸುವುದನ್ನು ಬಿಟ್ಟರು. ಕಿರಸ್ಥಾನರೆಂದು ಬಯ್ಯುತ್ತಾ ಹೋದರು. ಕ್ರಿಸ್ತನನ್ನು ವಿಷ್ಣುವಿನ ಹನ್ನೆರಡನೇ ಅವತಾರವನ್ನಾಗಿಸಲು ಸಾಧ್ಯವಾಗದೆ ರಾಜೀಗೆ ಬಂದು ಸುಮ್ಮನಾದರು.

ನಮ್ಮ ಗುರುಗಳಂಥವರು ಲೋಕದಲ್ಲಿನ್ನಿಲ್ಲ. ಬಹುಕಾಲ ಕಾಶೀಯಲ್ಲಿದ್ದುಕೊಂಡು ತರ್ಕ ಶಾಸ್ತ್ರವನ್ನು ಓದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಬೇರೆಲ್ಲೂ ಇಂತಹ ತಾರ್ಕಿಕನಿಲ್ಲವೆಂದು ಹೆಸರು. ಶಾಸ್ತ್ರಗಳ ಮಾತೇಕೆ? ಕಾವ್ಯಗಳಲ್ಲಿ ಒಳ್ಳೇ ರಸಗ್ರಾಹಿ. ಇನ್ನು ಸದ್ಗುಣ ಸಂಪತ್ತಿಯಲ್ಲಿ ಸತ್ಯಕಾಲದ ಮನುಷ್ಯ ಅಂದರೆ ಸತ್ಯಕಾಲದ ಮನುಷ್ಯ. ಅಂತಹ ಪಾಂಡಿತ್ಯ ಇಂತಹ ಸತ್ಯಕಾಲತ್ವ ಒಂದೇ ಮಿದುಳಿನಲ್ಲಿ ಹೇಗೆ ಅಡಿಗಿವೆಯೋ ಆಶ್ಚರ್ಯ!

ಇದೆಲ್ಲಾ ನಡೆದದ್ದು ಹತ್ತು ವರ್ಷಗಳ ಹಿಂದೆ. ಈಗ ಶಾಸ್ತ್ರಿಗಳು ಪಿಂಛಣಿಯನ್ನು ಪಡೆಯುತ್ತಿದ್ದಾರೆ. ನಮ್ಮಂಥಾ ಶಿಷ್ಯರ ಶುಶ್ರೂಷೆಯನ್ನು ಹೊಂದುತ್ತಾ ನಮಗೆ ಸಂಸ್ಕೃತ ಗ್ರಂಥಗಳ ಬಗ್ಗೆ ತಿಳಿಸುತ್ತಾ, ಸಂತೋಷಿಸ್ತುತ್ತಾ, ಸಂತೋಷಪಡಿಸುತ್ತಾ ಕಾಲವನ್ನು ತಳ್ಳುತ್ತಿದ್ದಾರೆ.

ನಾನು ವ್ಯಾಪಾರವನ್ನು ಮಾಡುತ್ತಿದ್ದೇನೆ. ರಾಮ್ಮೂರ್ತಿಗೆ ಬೇಕಾದಷ್ಟು ಭೂಮಿ ಇದೆ. ಹೊಸಹೊಸ ಮಾದಿರಿಗಳಲ್ಲಿ ಬೇಸಾಯ ಮಾಡುತ್ತಿದ್ದಾನೆ. ಊಟಗುಡ್ಡದ (ಒಂದು ಊರು) ಸನಿಹದಲ್ಲಿ ಸೀತಾರಾಮರ ಹೆಸರಿನಲ್ಲಿ ಒಂದು ಬ್ರಹ್ಮಾಂಡವಾದ ತೋಟ ಹಾಕಿದ್ದಾನೆ. ಅವು ಹೂಗಳಲ್ಲ! ಹಣ್ಣುಗಳಲ್ಲ! ಚೊಚ್ಚಲ ಫಲವನ್ನು ಗುರುಗಳು ಆರೋಗಣೆ ಮಾಡದೆ ರಾಮ್ಮೂರ್ತಿ ಗಿಡವನ್ನು ಮುಟ್ಟುವುದಿಲ್ಲ. ಆ ತೋಟದಲ್ಲಿ ವಿಹರಿಸುವುದೆಂದರೇ ಗುರುಗಳಿಗೆ ಆತ್ಮಾನಂದವೇ ಆತ್ಮಾನಂದ. ಅಲ್ಲಿಯೇ ನಾವು ಸದಾ ಚರ್ಚಾ ಗೋಷ್ಟಿಗಳನ್ನು ನಡೆಸಿತ್ತಿರುತ್ತೇವೆ. ವೆಂಕಯ್ಯ ಶಾಲಿಯಲ್ಲಿ ಮಾಸ್ತರ, ಖಾಯಿದಾ ಹೆಚ್ಚಾಗಿ ಬೈಗಳನ್ನು ತಿನ್ನುತ್ತಿರುತ್ತಾನೆ. ನನ್ನ ಶಾಲೆಯ ಗುಂಪಿನ ಆರೇಳುಮಂದಿ ಇಲ್ಲೇ ಇದ್ದೇವೆ. ನಾವು ಗುರುಗಳೂ ಸೇರಿದಾಗ ಸ್ವರ್ಗದ ತುಣುಕೊಂದು ಇಳಿದು ಬಂದಂತಿರುತ್ತದೆ.

ಇನ್ನು ಪ್ರಸ್ತುತ ಕಥೆ…..
ನಮ್ಮ ಪಟ್ಟಣಕ್ಕೆ ಎಂಟು ಮೈಲುಗಳ ದೂರದಲ್ಲಿ ‘ರಾಮಗಿರಿ’ ಎಂಬ ವಿಷ್ಣುಕ್ಷೇತ್ರವಿದೆ. ಅದನ್ನು ಕುರಿತು ಮತ್ತೊಮ್ಮ ಬಣ್ಣಿಸುತ್ತೇನೆ. ಇಂದಿನ ಮಟ್ಟಿಗೆ ನಿಮಗೆ ತಿಳಿಯಬೇಕಾದುದೇನೆಂದರೆ ಅಲ್ಲಿಯದು ಆಧುನಿಕ ವಿಷ್ಣುಕ್ಷೇತ್ರ. ಆ ಊರು ಕರಿಬೆಟ್ಟಗಳ ಸುತ್ತಲೂ ಶಿಥಿಲವಾದ ಬೌದ್ಧ ಕಟ್ಟಡಗಳೂ ಇವೆ. ಅಲ್ಲಿಯವರು ಅವುಗಳನ್ನು ಪಾಂಡವರ ಹಂಚುಗಳನ್ನುತ್ತಾರೆ. ಈ ದೇಶದಲ್ಲಿ ಪಾಂಡವರು ವಾಸ ಮಾಡದ ಗುಹೆಗಳೂ, ಸೀತಮ್ಮತಾಯಿ ಜಳಕವಾಡದ ಕೆರೆಗಳೂ ಇಲ್ಲವೇ ಇಲ್ಲ.

ಒಂದು ದೊಡ್ಡ ಗವಿಯೊಳಗಿದ್ದ ಬೌದ್ಧ ವಿಗ್ರಹವನ್ನು ಶಿವನೆಂದು, ಅದರ ಬಳಿಯಲ್ಲಿರುವ ದೇವೀವಿಗ್ರಹವನ್ನು ಗೌರಮ್ಮನೆಂದು ಭಾವಿಸಿ ಜಂಗಮಸ್ವಾಮಿಗಳು ಪೂಜೆ ಮಾಡುತ್ತಾರೆ.

ಹೀಗಿರುವಾಗ ಕೆಲದಿನಗಳಾದಮೇಲೆ ಒಬ್ಬದೊರೆ ಗುಮಾಸ್ತಾರೊಂದಿಗೆ, ಪತಕದ ಜವಾನರೊಂದಿಗೆ ಬಂದು ಬೈಲು ಹೊಲಗಳ ಪಶ್ಚಿಮದಲ್ಲಿದ ಗಟ್ಟಿ ಮಾವಿನ ಹಣ್ಣಿನ ತೋಟದಲ್ಲಿ ಕ್ಯಾಂಪು ಬಜಾಯಿಸಿದ್ದಾನೆ. ಅಷ್ಟಲ್ಲದೆ ನೂರಾರು ಕೂಲಿಗಳನ್ನು ಕರೆಸಿ ಆ ಬೆಟ್ಟಗಳ ನಡುವಿನಲ್ಲಿದ್ದ ದಿಬ್ಬಗಳನ್ನು ತೋಡಿಸಲು ಆರಂಭಿಸಿದ. ಹಣಕ್ಕಾಗಿ ಆ ತೊಡುವಿಕೆ ಎಂದು ಜನರಂದುಕೊಳ್ಳುತ್ತಿದ್ದರು. ಆದರೆ ಮುರಿದ ಪ್ರತಿಮೆಗಳೂ, ಮೆರುಗುವಂತ ಕಡೆದ ಶಿಲ್ಪ, ಹೂಳಿಹೋಗಿದ್ದ ಹಳೆಯ ಮಡೆಕೆಗಳೂ ಗಡಿಗೆಗಳೂ, ಮಂಡೆಗಳೂ, ಗಾಡಿಗಳ ಮೇಲೇರಿಸಿ ಧನಕ್ಕಿಂತಲೂ ಹೆಚ್ಚಿನ ಭದ್ರತೆಯಿಂದ ಅನುಕೂಲಗಳನ್ನು ಮಾಡಿದರು. ಅದನ್ನು ನೋಡಲೆಂದೇ ನಾವು ಹೋದೆವು.

ನಾವು ಹೋದಾಗ ಆ ಊರಿನ ಜಂಗಮಸ್ವಾಮಿಗಳು ಪೂಜೆ ಮಾಡುವ ಅಮೃತಶಿಲೆಯ ಬುದ್ಧಪ್ರತಿಮೆಯನ್ನು ಕುರಿತು ಊರಿನಲ್ಲಿ ಕೋಲಾಹಲವೇ ನಡೆದಿತ್ತು. ಆ ಗೊಂಬೆ ಬಹು ಸೊಗಸಾದುದು. ಇಂತಹ ಸೊಗಸಾದ ಮೂರ್ತಿಯು ಗಾಂಧಾರ ದೇಶದಕಡೆ ಬಿಟ್ಟರೆ ಮತ್ತೆಲ್ಲಿಯೂ ಕಾಣ ಸಿಗದೆಂದು ದೊರೆ ತಿಳಿಸಿದನು. ಅದರ ಪೀಠದಮೇಲೆ ಹೇ ಧರ್ಮಾ ಹೇ ಪ್ರಭುವೇ! ಮೊದಲಾದ ಬೌದ್ಧ ಸಿದ್ಧಾಂತಗಳು ಸೊಗಸಾಗಿ ಬರೆಯಲಾಗಿತ್ತು. ದೊರೆಯವರು ಅದರ ಮೇಲೆ ಕಣ್ಣಿಟ್ಟು “ಕೊಡುವಿರಾ” ಎಂದು ಕೇಳಲು ಶೈವರಲ್ಲಿ ಹಿರಿಯರು “ಪ್ರಾಣಗಳನ್ನಾದರೂ ಕೊಡಬಲ್ಲೆವೇ ಹೊರತು ಇದನ್ನು ಬಿಡಲಾಗದು” ಎಂದರು. ದೊರೆಗಳು ನಾಕು ಮಂದಿಯಲ್ಲಿ ಬೆರೆತು ಹೋಗಿ ತಿರುಗುವವರಾದ್ದರಿಂದ ಮರ್ಯಾದೆಯಿಂದ ಸಮಾಧಾನವನು ನೀಡಿದ್ದರು. ಬೇರೊಬ್ಬರಾಗಿದ್ದಲ್ಲಿ ಕಥೆ ಬಹಳ ದೊರವೇ ಹೋಗುತ್ತಿತ್ತು. ದೊರೆಯವರು ಅಷ್ಟರಿಂದ ಆ ಪ್ರಯತ್ನವನ್ನು ಕೈ ಬಿಟ್ಟರು.

ಹೀಗಿರುವಾಗ ಒಂದು ದಿನ ರಾತ್ರಿ ಪೂಜಿ ಮಾಡುವ ಜಂಗಮ ಶರಭಯ್ಯ ಆ ಪ್ರತಿಮೆಯನ್ನು ಕೀಳಿ ಹೊತ್ತೊಯ್ದು ದೊರೆಗೆ ಇನ್ನೂರು ರೂಪಾಯಿಗಳಿಗೆ ಮಾರಲು ಯತ್ನಿಸಿದ. ಕಳ್ಳತನದಿಂದ ತಂದಿರುವೆ. ತೆಗೆದುಕೊಳ್ಳಲಾರೆ, ಎಂದು ದೊರೆ ತನ್ನ ಮೇಲೆ ನಿಂದೆ ಬಾರದಂತೆ ಊರಿನ ಹಿರಿಯರಿಗೆ ಸುದ್ದಿ ತಲುಪಿಸಿದರು. ಇದೇನು ಈ ದೊರೆಗೆ ಬುದ್ಧಿ ಕಡಿಮೆಯೇ ಎಂದು ಶರಭಯ್ಯ ಆಶ್ಚರ್ಯ ಪಟ್ಟು ದೊರೆ ಸ್ವಲ್ಪ ಕಣ್ಣಿಗೆ ದೂರವಾದಾಗ, ಕೂಡಲೇ ಬಯಲು ಹೊಲಗಳ ಕಡೆ ದೌಡಾಯಿಸಿದ. ಅಂದಿಗೂ, ಇಂದಿಗೂ ಪತ್ತೆ ಇಲ್ಲ.

ಯಜಮಾನ ಶಾಯಣ್ಣರ ಮನೆಯಲ್ಲಿ ತಂಗಿದ್ದು ಆ ಊರಿನಲ್ಲಿ ನಾವು ಮೂರು ದಿನಗಳಿದ್ದೆವು. ಶಾಯಣ್ಣನವರು ಗುರುವಿನ ಕಡೆ ಕೆಲದಿನ ತರ್ಕವನ್ನು ಓದಿಕೊಂಡವರು. ಒಳ್ಳೆಯ ಸಾಹಿತ್ಯ ಪರಿಚಯವೂ ಅವರಿಗುಂಟು. ಕವನಗಳನ್ನು ಹೆಣೆಯುತ್ತಿದ್ದರು.

ಮೂರನೆಯ ದಿನದ ರಾತ್ರಿ ಊಟ ಮುಗಿಸಿಕೊಂಡು ಮಾಡಿಯ ಮೇಲೆ ನಾವು ನಾಕು ಮಂದಿ ಕುಳಿತಿದ್ದೇವೆ. ಗಾಳಿಯ ಕಿರು ಪ್ರಕಂಪನದಿಂದ ತೋಟದೊಳಗಿನ ತೆಂಗಿನ ಗೆರೆಗಳು ಚಲಿಸಲಾರಂಭಿಸಿದವು. ಎದುರಿನಲ್ಲಿ ದೇವರಬೆಟ್ಟ ಬ್ರಹ್ಮಾಂಡವಾದ ಲಿಂಗದಂತೆ ಕತ್ತಲನ್ನು ಸೀಳಿಕೊಂಡು, ಆಗಸವನ್ನು ತಾಗುತ್ತಾ, ಮಾನವನ ಅತ್ಯಲ್ಪತೆಯನ್ನು ಸೂಚಿಸುತ್ತಾ ಯಾವುದೋ ಕೇಳಲಾರದ ಚಿಂತೆಯಿಂದ ಭೀತಿಯನ್ನು ಮನಸ್ಸುಗಳಿಗೆ ಉಂಟುಮಾಡುತ್ತಿತ್ತು.

ದೇವತೆಗಳು ಪೂಜಿಸಿದ ದಿವ್ಯ ಕುಸುಮಗಳು ಎಂಬಂತೆ ಚಿಕ್ಕೆಗಳು ಶಿಖರದ ಸುತ್ತಲೂ ಚೆದುರಿ ಬೆಳಗಿದವು. ನಮ್ಮ ಮಾನಸಗಳು ಗತಕಾಲದ ಸ್ಥಿತಿಗತಿಗಳನ್ನು ಕುರಿತ ಊಹಗಳಿಂದ ತುಂಬಿದ್ದವು. ಸ್ವಲ್ಪ ಯೋಚಿಸುತ್ತಾ “ಆ ದಿನಗಳಲ್ಲಿ ಈ ತಾಣವು ಯಾಕಿತ್ತೋ ಬೌದ್ಧರು ಇಲ್ಲೇನು ಮಾಡಿತ್ತಿದ್ದರೋ” ಎಂದು ಮಾತಾಡಿದೆನು.

“ಆ ಹೆಣಗಳು ನಮ್ಮಂತೆಯೇ ಅಳುತ್ತಾ ಇದ್ದರು. ನಮಗಿಂತಲೂ ಅಧ್ವಾನವಾಗಿ ಇರುತ್ತಿದ್ದರು.” ಎಂದು ಸೂಕ್ಷ್ಮವಾದ ಭಾವಗಳು ಬೆದರಿ ಚೆದುರುವ ಮೊರಟು ಸ್ವರದಿಂದ ವೆಂಕಯ್ಯ ಕಿರುಚಿದ. ನನಗೆ ತುಂಬಾ ಸಿಟ್ಟು ಬಂದು “ನಿನ್ನ ಆಮೂಲ್ಯವಾದ ಊಹೆಗಳಿಂದ ನೀ ಆನಂದಿಸಬಾರದೇ! ನನ್ನ ತಲೆಯಲ್ಲಿ ರೂಪಿಸಿಕೊಂಡ ಬೌದ್ಧ ಪ್ರಪಂಚವನ್ನು ನಿನ್ನ ಒಡಕು ಮಾತುಗಳಿಂದೇಕೆ ಕೆದರುತ್ತೀಯಾ? ಎಂದು ಕೇಳಿದೆ.

“ಆದರೆ” ಶಾಸ್ತ್ರಿಗಳು ಅಂದರು. ” ಬುದ್ಧನು ವಿಷ್ಣುವಿನ ಅವತಾರವಲ್ಲಾ? ಈ ಜಂಗಮರು ಶಿವನೆಂದು ಏಕೆ ಪೂಜಿಸುತ್ತಿದ್ದಾರೋ” ಎಂದು ಸಂದೇಹ ಸಾರಿದರು.

ಯಜಮಾನ ಶಾಯಣ್ಣ ನಶ್ಯದ ಡಬ್ಬೀತೆಗೆದು ಒಂದು ದೊಡ್ಡಪಟ್ಟು ಹಿಡಿದು, ಟವಲಿನಿಂದ ಮೂಗೊರೆಸಿಕೊಂಡು “ಒಂದು ಕಥೆ ಇದೆ” ಎಂದರು. ಕಥೆಗಳೆಂದರೆ ಶಾಸ್ತ್ರಿಗಳಿಗೆ ಕುಶಾಲು! “ಹಾಗಾದರೆ ಹೇಳು” ಎಂದರು. ಕಿವಿ ಕೊಟ್ಟು ಕೇಳಿದೆವು.

ಈ ಗ್ರಾಮದಲ್ಲಿ ಶೈವವೈಷ್ಣವರಿಗೆ ಬಹುಕಾಲದಿಂದಲೂ ವೈರವಿತ್ತು. ಶಿವಮತಕ್ಕೆ ಮೊನೆಗಾರ ಜಂಗಂ ಶರಭಯ್ಯ. ಅಂದರೆ ಮೇಲೆ ತಿಳಿಸಿದಂತೆ ಓಡಿಹೋದ ಪೂಜಾರಿಯೇ! ಮೊನ್ನೆ ಪ್ರತಿಮೆಯನ್ನು ಕೇಳಿ ಪಲಾಯನವಾಗುವವರೆಗೂ, ಅವನು ಸಾಕ್ಷಾತ್ ಈಶ್ವರನ ಅವತಾರವೆಂದು, ರಾತ್ರಿಗಳು ಮನೆಗಳ ಎದುರಿನಲ್ಲಿ ವೃಷಭರೂಪದಿಂದ ಮೇಯುತ್ತಿರುತ್ತಾನೆಂದು ಜಂಗಮರಲ್ಲಿ, ದೇವಾಂಗರಲ್ಲಿ ಒಂದು ನಂಬಿಕೆ. ಇಂದಿಗೂ ಆ ದೊರೆ ಕಳೆದ ಜನ್ಮದಲ್ಲಿ ಪರಮ ಶಿವನಾಗಿದ್ದರಿಂದ, ಆ ಮೂರ್ತಿಯನ್ನು ಕೇಳಿದನೆಂದೂ, ಭಕ್ತಿವಾತ್ಸಲ್ಯಗಳಿಂದ ಶಿವನಿತ್ತ ಆದೇಶದಂತೆ ಮೂರ್ತಿಯನ್ನು ಕೇಳಿ ತೆಗೆದುಕೊಂಡು ಶರಭಯ್ಯನು ಹೋಗಿದ್ದನೆಂದೂ ದೊರೆಯ ಡೇರಾದಿಂದ ಹೋಗುವಾಗಲೂ ವೃಷಭರೂಪವನ್ನು ತಾಳಿ ರಂಕೆ ಹೊಡೆಯುತ್ತಾ ದಾಟಿ ಹೋದನೆಂದು ಒಂದು ಸುದ್ದಿಯನ್ನು ಅವನ ಶಿಷ್ಯಂದಿರು ಹುಟ್ಟಿಸಿದರು. “ನಾಳೆಯೋ ನಾಡಿದ್ದೋ ವೀರಾಸನದಲ್ಲಿದ್ದು ಧ್ಯಾನ ಗೈಯತ್ತಾ ಬೆಟ್ಟದಮೇಲೆಯೋ ಗೋಪುರದಮೇಲೆಯೋ ಆವಿರ್ಭವಿಸುತ್ತಾನೆ. ಬಾಜಾ ಬಜಂತ್ರಿಗಳೊಂದಿಗೆ ಹೋಗಿ ನಂದಿಕೋಲನ್ನು ಹಿಡಿದು ಕರೆದು ತರುತ್ತಾರೆ.” ಆಮೇಲೆ ಅಕ್ಕಸಾಲಿ ವೀರಯ್ಯ (ವೀರಣ್ಣಾಚಾರಿ ಎಂದು ಕರೆಯದಿದ್ದರೆ ಅವನಿಗೆ ಸಿಟ್ಟು ಬರುತ್ತದೆ) ಈ ಕಥೆಗೆ ಇನ್ನಷ್ಟು ಉಪ್ಪುಕಾರ ಬೆರೆಸಿ ದ್ವಿಪದ ಕಾವ್ಯವನ್ನು ಬರೆದು ಮುದ್ರಿಸುತ್ತಾರೆ. ಆ ಉಭಯರ ಕೀರ್ತಿ ದಿದ್ಗಿಗಂತಗಳಿಗೆ ಹರಡುತ್ತದೆ.

“ಬಾಪುರೇ! ಇವರ ಮೂಢಭಕ್ತಿ! ಈ ಪ್ರಪತ್ತಿ ಪಂಡಿತರಿಗಿರುವುದಿಲ್ಲ. ಇವರದೇನು ಅದೃಷ್ಟ!” ಎಂದು ಗುರುಗಳು ಹೇಳಿದರು. ಅದರ ಮೇಲೆ ವೆಂಕಯ್ಯ ಏನೋ ಹೇಳಲು ಹೋಗುತ್ತಿದ್ದಂತೆ ನಾನವನ ಬಾಯಿಯನ್ನು ಮುಚ್ಚಿದೆ. “ಯಾರ ಅಭಿಪ್ರಾಯ ಅವರು ಹೇಳದಂತೆ ನಿನ್ನ ಶಾಸನವೇನು? “ಎಂದು ಕೇಳಿದ ಯಜಮಾನ ಶಾಯಣ್ಣನವರು ಮತ್ತೆ ಮಾತೆತ್ತಿಕೊಂಡರು.

ಅಹುದು! ತಾವು ತಿಳಿಸಿದಂತೆ ಪಾಮರರಿಗಿರುವ ಗಾಡವಾದ ಭಕ್ತಿ ಪಂಡಿತರಿಗಿರುವುದಿಲ್ಲವಾಗಲಿ ಈ ಮೂಢಭಕ್ತಿ ಒಮ್ಮೊಮ್ಮೆ ಪ್ರಾಣಾಂತಕವಾಗಿ  ಪರಿಣಮಿಸುತ್ತದೆ. ಅದನ್ನೇ ಹೇಳಲು ಹೊರಟಿದ್ದೇನೆ. ಕೇಳಿ.

“ನಾನೂ ಈ ಮಾತನ್ನೇ ಹೇಳಬೇಕೆಂದಿರುವೆ. ಹೇಳಗೊಡಲಿಲ್ಲನಿವ” ಎಂದು ಉಸುರಿದ ವೆಂಕಯ್ಯ.
“ಹೌದು, ನಿನಗಂತೂ ತಿಳಿಯದ ವಿಚಾರವಿಲ್ಲ. ಸುಮ್ಮನೆ ಕೂಡು” ಎಂದು ಗದರಿದೆ.

ಶಿವಸ್ಥಲದ ಉತ್ಪತ್ತಿ ಕುರಿತು ತಮ್ಮಗೆಲ್ಲಾ ತಿಳಿದಿದ್ದೇ. ಪೂಜಾರಿ ಶರಭಯ್ಯ ಒಳ್ಳೆಯ ಕಥೆಗಾರನಾದ್ದರಿಂದಲೂ ಅವನಿದ್ದ ಕಾಲದಲ್ಲಿ ಶಿವಸ್ಥಲದ ಬಗ್ಗೆ ವಿಸ್ತೃತವಾದ ವೈಭವ ಉಂಟಾಗಿತ್ತು. ಸುತ್ತಮುತ್ತಲ ಗ್ರಾಮದವರೆಲ್ಲಾ ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ. ಉತ್ಸವದ ದಿನಗಳಲ್ಲಿ ದೊಡ್ಡ ಜಾತರೆಗಳು ನಡೆಯುತ್ತಲಿರುತ್ತವೆ. ಅಲ್ಲದೆ ಇಲ್ಲಿಯ ದೇವಾಂಗರು ಚೆನ್ನಾಗಿ ಉಳ್ಳವರು. ಜಂಗಮಪಾಡು ಎಲ್ಲರೂ, ದೇವರ ಪೇಟಿಯವರೂ ಶರಭಯ್ಯನ ಮಾತು ಮೀರುವುದಿಲ್ಲ, ಈ ಗ್ರಾಮದಲ್ಲಿರುವ ವಿಷ್ಣುಸ್ಥಲವೂ ಇನ್ನೂರು ವರ್ಷದ ಹಿಂದೆ ಈ ದೇಶವನಾಳುವ ಒಬ್ಬ ಮಹಾರಾಜರು ಕಟ್ಟಿಸಿ ರಾಗಭೋಗಗಳಿಗೆಂದು ಒಂದು ಗ್ರಾಮವನ್ನು ದತ್ತಿ ನೀಡಿದರು. ಅಂದಿನಿಂದ ನಮ್ಮ ರಂಗಾಚಾರ್ಯರ ಕುಟುಂಬದವರೇ ಈ ಸ್ಥಳಕ್ಕೆ ಧರ್ಮಕರ್ತರಾಗಿ ಉಳಿದು ಕೊಂಡಿದ್ದಾರೆ. ರಂಗಾಚಾರ್ಯರು ಇಬ್ಬರು ಮೂವರು ವೈಷ್ಣವರಿಗೆ ಸಂಬಳವನ್ನು ಕೊಟ್ಟು ಅವರಿಂದ ಹೆಚ್ಚಿನ ಭಕ್ತಿ ಶ್ರದ್ಧೆಗಳಿಂದ ಸ್ವಾಮಿಯವರ ಕೈಂಕರ್ಯವನ್ನು ನಡೆಸುತ್ತಾ ಬಂದಿದ್ದಾರೆ.

ರಂಗಾಚಾರ್ಯರು ಬಹಳ ಯೋಗ್ಯರು. ಅವರ ಸಂಸ್ಕೃತ ಸಾಹಿತ್ಯದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ದ್ರಾವಿಡ ವೇದಗಳಲ್ಲಿ ಕೂಡಾ ಪಳಗಿದವರೆಂಬ ಹೆಸರಿದೆ. ಅವರ ಮಗ ಕೃಷ್ಣಮಾಚಾರ್ಯರು ಅಷ್ಟೇ ಸುಸಂಸ್ಕೃತರಾದರೂ ವಿಶೇಷ ಪ್ರಯೋಜಕರಾಗಿಲ್ಲ.

ಆ ಮನೆಗೆ ಬೆಳಕು ತಂದಿದ್ದು ಈ ಕೃಷ್ಣಮಾಚಾರ್ಯರ ಹೆಂಡತಿ ನಾಂಚಾರಮ್ಮ. ಅವರ ತಂದೆ ತಾಯಂದಿರೂ ಪಂಡಿತರಿದ್ದುದರಿಂದ, ಆಂಧ್ರ ಸಂಸ್ಕೃತಗಳಲ್ಲಿ ಒಳ್ಳೆಯ ಪ್ರಾವೀಣ್ಯವನ್ನು ಪಡೆದಿದ್ದರು. ಪುರಾಣವನ್ನ ಆ ಮಹಾತಾಯಿ ಓದಿದಷ್ಟು ಶ್ರಾವ್ಯವಾಗಿಯೂ, ರಸಾತ್ಮಕವಾಗಿಯೂ ಬೇರಾರೂ ಓದಲಾರರು. ರೂಪವೂ, ರೂಪಕ್ಕೆ ತಕ್ಕಂತೆ ಗುಣಸಂಪತ್ತಿಯೂ ಅವಳಲ್ಲಿ ಇದೆ. ಅವಳಿಗೆ ಒಬ್ಬ ಮಗಳೂ, ಒಬ್ಬ ಮಗನೂ, ಮನೆಯನ್ನು ದೇವಾಲಯವನ್ನೂ ಕೂಡಾ ಅವಳೇ ಸರಿಯಾಗಿ ನೋಡುಕೊಳ್ಳುತ್ತಿದ್ದಳು.

“ಇದೇನು ಕವಿತ್ವವೋ? ನಿಜವೋ?” ಎಂದು ವೆಂಕಯ್ಯ ಕೇಳಿದ.
“ನಮಗೂ ಅವರಿಗೂ ಬಂದು ಹೋಗುವುದಿದೆ. ನನ್ನ ಹೆಂಡತಿ ಹೇಳಿದ ಮಾತುಗಳನ್ನೇ ನಿಮಗೆ ಹೇಳುತ್ತಿದ್ದೇನೆ. ಅವಳು ಪುರಾಣ ಪಠಿಸಿದ್ದು ಕಿವಿಯಾರ ಕೇಳಿದ್ದೇನೆ. ನಿಮಗೆ ಕೇಳಬೇಕೆಂಬ ಆಸಕ್ತಿ ಇದ್ದಲ್ಲಿ ನಾಳೆಯವರೆಗೂ ಇದ್ದು ಹೋಗಿ. ವಿಷ್ಣುಸ್ಥಳದ ಸ್ಥಿತಿ ಇದು. ಆದರೆ ಅಯ್ಯಂಗಾರರು ಮತ ಸಂಬಂಧವಾದ ಜಟ್ಟೇಗಳಲ್ಲಿ (ತಗಾದೆಗಳಲ್ಲಿ) ಎಂದೂ ತಲೆದೋರಿದವರಲ್ಲ. ವೈಷ್ಣವಪಕ್ಷಕ್ಕೆ ಕಪ್ತಾನ ಸಾತಾನಿಯವರ ಮನವಾಳ್ಳಯ್ಯ, ಅಂದರೆ ದಿನಾ ಮುಂಜಾವಿನಲ್ಲಿ ಉಪಾದಾನಗಳಿಗೆ ಬಂದು ಸ್ತೋತ್ರ ಪಾಠಗಳೊಂದಿಗೆ ಕಿಡಿ ಹಾರಿಸಬೇಕಾದ್ದೇ.

ಆತನೇ ಒಂದು ದಿನ ಕಲೆಕ್ಟರ್ ಅವರು ಕುದಿರೆ ಏರಿ ಬರುತ್ತಿರಲು, ಮನವಾಳ್ಳಯ್ಯನು ಗ್ರಾಮದ ಮೇರೆಯಲ್ಲೇ ಎದುರುಗೊಂಡು ಗಳಗಳನೆಂದು ಶ್ಲೋಕವನ್ನು ಎತ್ತಿಕೊಂಡಂತೆಯೆ ಅವನ ಸ್ಥೂಲ ದೇಹ, ದೊಡ್ಡನಾಮಗಳು, ರಾಗಿಧ್ವಜ ಮುಂತಾದ ಕೋಲಾಹಲವನ್ನು ಕಂಡು ಕುದಿರೆ ಬೆದರಿತು. ಸಿಟ್ಟು ಮಾಡಿದ ಕಲೆಕ್ಟರ್ ಐದು ರೂಪಾಯಿಗಳ ಜುಲ್ಮಾನೆಯನ್ನ ವಿಧಿಸಿದರಂತೆ. ಈ ಕಥೆ ಶುದ್ಧ ಅಸತ್ಯವೆಂದೂ, ತನ್ನಿಂದ ಶ್ಲೋಕಗಳನ್ನು ಹೇಳಿಸಿಕೊಂಡು ದೊರೆಯವರು ಐದು ರೂಪಾಯಿ ಬಹುಮಾನ ವಿತ್ತರೆಂದೂ, ಅವುಗಳಿಂದಲೇ ಹೊಸ ಯಾಯವಾರದ ಪಾತ್ರೆಯನ್ನು ಖರೀದಿಸಿದ್ದಾಗಿಯೂ ಮನವಾಳ್ಳಯ್ಯ ಹೇಳುತ್ತಾನೆ.

– ೨ –

ಶೈವರಲ್ಲಿಯ ಐಕಮತ್ಯ ವೈಷ್ಣವರಲ್ಲಿಲ್ಲ. ಸಾತಾನಿಗಳು ಬಹುತೇಕ ಮನವಾಳ್ಳಯ್ಯನ ಶಿಷ್ಯರೇ, ಹಾಗಿದ್ದೂ ಕೆಲವು ಜನ ಅವನನ್ನು ಅವತಾರ ಪುರುಷನೆಂದು ಹೇಳುವುದಿಲ್ಲ. ಆತನನ್ನುತ್ತಾನೆ, “ಶರಭಯ್ಯನೇ ವೃಷಭಾವತಾರನಾದಾಗ ನಾನು ಗರುಡಾಳ್ವಾರಿನ ಪೂರ್ವಾವತಾರವು ಆಗದಿದ್ದರು ಕೂಡಾ ಅದರ ಅತ್ಯಲ್ಪಾಂಶದಿಂದಲಾದರು ಹುಟ್ಟಿರಬೇಕಲ್ಲವೇ. ಗರುಡಾಳ್ವಾರಿನ ಉಗುರುಗಳ ತೇಜಸ್ಸು ನನ್ನಲ್ಲಿ ಆವಿರ್ಭವಿಸಿದೆಯಂತಲೇ ಶರಭಯ್ಯನನ್ನು ಹೀಗೆ ಸೀಳಿ ಒಗೆದಿರುತ್ತಾನೆ.”

ಅಯ್ಯಂಗಾರರು ಒಮ್ಮೆ ಈ ಮಾತು ಕಿವಿಗೆ ಬಿದ್ದು ಗಟ್ಟಿ ಬೈಗುಳನ್ನೂ ತಿನ್ನಿಸಿದ್ದರು. ಬೈಗುಳ ತಿಂದ ಮೇಲೆ ಬಂದು “ಈ ಬ್ರಾಹ್ಮಣರದು ಜ್ಞಾನವೂ ಅಲ್ಲ ಅಜ್ಞಾನವೂ ಅಲ್ಲ, ನಿಮ್ಮ ಜಾತಿಯವರೇ, ಭಕ್ತಿ ಪ್ರಭಾವದಿಂದ ಆಳ್ವಾರರು ಆಗಿದ್ದರಲ್ಲಾ! ಇಷ್ಟು ಕಾಲದಿಂದ ರಾಮನ ಧ್ವಜವನ್ನು ಹೊರುತ್ತಾ ದೇಶ ಸಂಚಾರ ಮಾಡಿದ ನಾನು ಶ್ರೀಮದ್ಗರುಡಾಳ್ವಾರರ ನಖಾಗ್ರದೆ ಅವತಾರವಾಗದಿರುವುದೆಂತು? ಗರುಡಾಳ್ವಾರು ಉಗುರುಗಳು ಬೆಳೆದು ಖಂಡನವಾದಾಗಲೂ ಆ ತುಣುಕುಗಳು ನನ್ನಂಥಾ ಭಕ್ತರಾಗಿ ಆವಿರ್ಭವಿಸಿ ಪರಮತ ಸಂಹಾರ ಗೈಯುವುದು ವ್ಯರ್ಥವಾಗುತ್ತವೆಯೇ? ಬರೀ ಮಾತು! “ಎಂದರು.

“ಹೌದೆ? ಏನೀ ಮೂರ್ಖತೆ? ಏನು ಅಹಂಭಾವ, ಈ ಅಲ್ಪರೇ ಅವತಾರ ಪುರುಷರು? ಹೀಗೆಂದುದಕ್ಕೆ ಅವರ ತಲೆಗಳು ಒಡೆದು ಹೋಗುತ್ತವೋ!” ಎಂದು ಗುರುಗಳು ಹೇಳಿದರು.

“ಶಾಸ್ತ್ರಿಗಳೇ! ಹಳೆಯ ದಿನಗಳಾಗಿದ್ದಲ್ಲಿ ಇವರೇ ಅವತಾರಗಳಾಗಿ ಹೋಗುತ್ತಿದ್ದರು. ಇವರ ಹೆಸರಿನಲ್ಲಿ ಮೂರ್ತಿಗಳನ್ನು ನಿಲ್ಲಿಸಿ ಗುಡಿಗಳನ್ನು ಕಟ್ಟಿ ನಾವೇ ಪೂಜಾರಿಗಳಾಗುತ್ತಿದ್ದೆವು. ಅಂದರೆ ಬುದ್ಧನೂ ಅಂತಹ ಮನುಷ್ಯನೇ ಅಲ್ಲವೇನ್ರಿ?” ಅಂದನು ವೆಂಕಯ್ಯ.
“ಅಗಸರ ಬೆಂಚಿಗೆ (ಮಡುವು) ಸಮುದ್ರಕ್ಕೆ ಸಾಪತ್ಯವನ್ನು ತರುವೆ!” ಎಂದರು ಗುರುಗಳು.

ಈ ಊರಿನ ಒಕ್ಕಲಿಗರು ಸ್ತೋಮತುವುಳ್ಳವರು. ಅವರಲ್ಲಿ ಸಾರಥಿ ನಾಯುಡು ಲಕ್ಷಾಧಿಕಾರಿ. ಅವನ ಬಾವಮೈದುನ ರಾಮಿನಾಯುಡು ಗ್ರಾಮಾಧಿಕಾರಿ. ಸಲ್ಪಧೂರ್ತನೂ ಕುಡುಕನೂ! ಭೋಜನಪ್ರಿಯನು. ಈ ತಾಲೂಕಾಗೆಲ್ಲಾ ದೊಡ್ಡ ಸೇಂದಿ ಅಂಗಡಿ ನಮ್ಮೂರಿನಲ್ಲಿಯೇ ಇದೆ. ಅವನನ್ನು ಗಮನಿಸಿ ಈ ಊರಿನ ಯೋಗ್ಯತೆಯನ್ನು ನೀನು ಊಹಿಸಕೊಳ್ಳಬಹುದು.

ನಾಕು ವರ್ಷಗಳ ಹಿಂದೆ ಇಲ್ಲಿಗೆ ದಕ್ಷಿಣ ದೇಶದಿಂದ ಒಬ್ಬ ಅಯ್ಯಂಗಾರರು ಬಂದು ಸಾರಥಿನಾಯುಡುರವರಿಗೆ ಚಕ್ರಾಂಕಿತವನ್ನು ಹಾಕಿ ವೈಷ್ಣವವನ್ನು ಕೊಟ್ಟರು. ಮುನಸಬು ರಾಮಿನಾಯುಡು ರಾಮಸ್ವಾಮಿ ಅವರ ಆಲಯದಲ್ಲಿ ಧಡೇವಷ್ಟು (೧೦ ಸೇರು) ಪುಳಿಯೋಗರೆ, ವೈಷ್ಣವವೂ ಏಕಕಾಲದಲ್ಲಿ ಪಡೆದ. ಅಂದಿಗೂ ಇಂದಿಗೂ ಎರಡರಲ್ಲೂ ಪ್ರಪತ್ತಿ ಏಕರೀತಿಯಲ್ಲೇ ಇದೆ. ದ್ವಾದಶಿ ದ್ವಾದಶಿಗೂ ಸ್ವಾಮಿಯವರಿಗೆ ರಾಗಭೋಗಗಳನ್ನು ನಡೆಸುತ್ತಾನೆ. ದ್ವಾದಶಿ ಬಂದರೆ ರಾಮಿನಾಯುಡುಗೆ ದೊಡ್ಡ ಹಬ್ಬ.

ನಾಯುಡುಗಳೆಲ್ಲಾ ವೈಷ್ಣವವನ್ನು ಸ್ವೀಕರಿಸಿ, ಶಿವಾಲಯದ ಕಡೆ ತಿರಿಗಿ ನೋಡದಂತಾಗಿ ಶರಭಯ್ಯ ಕಣ್ಣಿನಲ್ಲಿ ಕಾರ ಹಚ್ಚಿಕೊಂಡಂತೆ ಹಲುಬುತ್ತಿದ್ದನು. ಯೋಚಿಸಿ ಯೋಚಿಸಿ ಒಂದು ಉಪಾಯವನ್ನು ಕಂಡು ಹಿಡಿದ.

ಆ ದಿನಗಳಲ್ಲಿ ಹೈದರಾಬಾದು ರಾಜ್ಯದಿಂದ ಶಿವಾಚಾರ್ಯರು ಕೆಲವರು ದೇಶ ಸಂಚಾರಾರ್ಥವಾಗಿ ಈ ಸೀಮಗೆ ಬಂದರು. ಮತ್ತೆರಡು ತಿಂಗಳುಗಳಲ್ಲಿ ಪೀಠದೊಂದಿಗೆ, ಪ್ರಭೆಗಳನ್ನೂ, ರುಂಜಗಳನ್ನೂ (ಒಂದುವಾದ) ತಂದು ಹಿರಿ ಪ್ರಳಯವಾಗಿ ಇಳಿಬಿದ್ದರು. ದಿನವೂ ಅರ್ಧರಾತ್ರಿಯ ವೇಳೆ ಶಿವಪೂಜೆ ಮಾಡುವರು. ಅಂತಹ ಸಮಯದಲ್ಲಿ ಶಂಖಗಳೂ, ಜಯಘಂಟೆ, ಡಮರುಗವೂ ಬಾರಿಸುತ್ತಿದ್ದರು. ಪಾಮರರ ಎದೆಗಳಲ್ಲಿ ಈ ಧ್ವನಿ ನಡುಕವನ್ನು ಹುಟ್ಟಿಸುತ್ತಿತ್ತು. ಈ ಕರಿಬಂಡೆಗಳ ಬೆಟ್ಟೆಗಳಲ್ಲಿ ಈ ಧ್ವನಿಗೆ ಪ್ರತಿಧ್ವನಿ ಉಂಟಾಗಿ ಕೋಲಾಹಲ ವೆಬ್ಬಿಸುತ್ತಿತ್ತು. ಈ ಅಟ್ಟಹಾಸಕ್ಕೆ ವೈಷ್ಣವ ಸ್ವೀಕರಿಸಿದ ಒಬ್ಬ ನಾಯುಡು ನಾಮಗಳಿಗೆ ನಾಮಹಾಕಿ ವಿಬೂತಿ ರುದ್ರಾಕ್ಷಾಧಾರಣೆ ಮಾಡಲಾರಂಭಿಸಿದರು. ಬಂದ ಹತ್ತನೆಯದಿನದಿಂದ ಶಿವಾಚಾರ್ಯರು ಗುಂಡವನ್ನು ತುಳಿಯುವುದಕ್ಕೆ ದೊಡ್ಡ ಪ್ರಯತ್ನಗಳು ಸಾಗಿದವು. ಸಾರಥಿನಾಯುಡುವನ್ನು ಕದಲಿಸುವುದೇ ಅವರ ಪ್ರಯತ್ನದ ಉದ್ದೇಶವಾಗಿತ್ತು. ಆ ಸಮಯಕ್ಕಾಗಲೇ ಸಾರಥಿ ನಾಯುಡುವಿನ ಮನಸ್ಸು ಶಿವಮತದೆಡೆಗೆ ಜೋಕಾಲಿಯಾಡುತ್ತಿತ್ತು.

ಗುಂಡವನ್ನು ತುಳಿದದ್ದು ಕಂಡಮೇಲೆ ಸಾರಥಿ ಸಿದ್ಧಾಂತವಾಗಿ ಶೈವವನ್ನಪ್ಪುವನೆಂದು ಎಲ್ಲರೂ ರುಂಜಗಳೊಂದಿಗೆ ಸಾರಥಿನಾಯುಡುವಿನ ಮನೆಗೆ ಹೋಗಿ ಬಹಳವಾಗಿ ಕೈವಾರವನ್ನು ಮಾಡಿ ಉತ್ಸವ ನೋಡಲು ಬರಲೇಬೇಕೆಂದು ಅಹ್ವಾನ ವಿತ್ತರು.

ಈ ಮಾತು ಕೇಳಿದ ಅಯ್ಯಂಗಾರರು ಏನೆಂದರೆಂದರೆ, “ರಾಮನ ಆಜ್ಞೆ ಹೇಗಿದ್ದರೇ ಹಾಗಾಗಲಿ. ವೈಷ್ಣವನು ಶೈವನಾಗಲು ಬಯಸಿದರೆ ಅಡ್ಡಿಮಾಡಿ ಫಲವೇನು? ಕಾಶಿಯಲ್ಲಿ ಮೃತಪಟ್ಟವರಿಗೆ ಶಿವನೇ ಅಲ್ಲವೇ ತಾರಕ ಮಂತ್ರೋಪದೇಶ ಮಾಡುವುದು? ಅದ್ದರಿಂದ ಈ ಜನ್ಮದಲ್ಲಿ ಪರಮಶೈವನಾದವನಿಗೆ ಮುಂಬರುವ ಜನ್ಮದಲ್ಲಿ ತಾರಕ ಮಂತ್ರೋಪದೇಶ ಮಾಡಿ ಮುಕ್ತಿ ನೀಡದೇ ಹೋಗುವನೇ? ಯಾವಮತವಾದರೂ ಪ್ರಪತ್ತಿ ಉಳ್ಳವನಿಗೆ ದಾರಿ ಇದೆ. ಅದಿಲ್ಲದಾಗ ವೈಷ್ಣವನಾಗಿ ಪ್ರಯೋಜನವಿಲ್ಲ.” ಸಾತಾನಿಗಳಿಗೆ ಗುರುಗಳ ಔದಾಶೀನ್ಯ ತಮ್ಮ ಕೈಮುರಿದಂತಾಗಿತ್ತು. ಈ ಹಾರುವನಿಗೆ ವೈಷ್ಣವಾಭಿಮಾನವು ಕಡಿಮೆ! ಅದ್ದರಿಂದ ನಾವು ವಿಜೃಂಭಿಸಿದರೇ ಹೊರತು ವೈಷ್ಣವಮತ ಪ್ರಭಾವಕ್ಕೆ ಕುಂದು ಬರುವುದೆಂದು ಮನವಾಳ್ಳಯ್ಯ ಆಲೋಚಿಸಿ, ಶಿವಾಚಾರ್ಯರು ಗುಂಡವನ್ನು ತುಳಿಯುವ ದಿನದ ರಾತ್ರಿ ಎರಡು ಝಾಮುಗಳ ನಂತರ, ಗುಡಿಯ ಬದಿಯಲ್ಲಿರುವ ಅಶೋಕ ಮರದ ಕೆಳಗೆ ದೊಡ್ಡದೊಂದು ಮೀಟಿಂಗನ್ನು ಏರ್ಪಡಿಸಿದ. ಸಾತಾನಿಗಳು ನಾಯುಡುಗಳೂ ನೂರಾರು ಜನ ಸೇರಿದರು. ಅದರಲ್ಲು ಕೆಲ ಯೋಧರು ಸೇಂದಿ ಅಂಗಡಿಯಲ್ಲಿ ರಹಸ್ಯ ಸೇವನೆಮಾಡಿ ಒಬ್ಬೊಬ್ಬರೇ ಬಂದು ಕೂಡಿದರು. ಆಗ ಮನವಾಳ್ಳಯ್ಯ ರಚ್ಚೆಬಂಡೆಗಳಲ್ಲಿ ಮೊದಲನೆಯ ಕಲ್ಲಿನಮೇಲೆ, ಬಾಗಿನಿಂತು ಗಡ್ಡದ ಕೆಳಗೆ ಬಂದು ಕೇಲೂದಿ ಕೊಂಡು ಹೀಗೆಂದು ಮಾತನಾಡಿದ.

“ಪರಮ ಭಾಗವತೋತ್ತಮರೇ! ಕೇಳಿದಿರಾ ಈ ಶೈವರ ರಾಕ್ಷಸ ಮಾಯಗೆ ಸಿಲುಕಿ, ಆಗಲೇ ಅನೇಕಮಂದಿ ನಾಯುಡುಗಳು ವೈಕುಂಠಕ್ಕೆ ಹೋಗಲು ರಾಜಮಾರ್ಗವಾದ ವೈಷ್ಣವಮತವನ್ನು ತೊರೆದು ಅಂಧಕಾರ ಬಂಧುರವಾದ ಶೈವಮತದಲ್ಲಿ ಕುಸಿದುಬಿದ್ದಿದ್ದಾರೆ. ಇನ್ನು ನಮ್ಮ ಪರಮ ಮಿತ್ರನೂ ಮತ್ತೂ ಭಕ್ತಾಗ್ರೇಸರನೂ ಆದ ಸಾರಥಿನಾಯುಡುರವರನ್ನು ಮಾಯೆ ಬೀಸಿ ತಮ್ಮಲ್ಲಿ ಸೇರಿಸಿಕೊಳ್ಳಲು ಇಂದು ವಿಪುಲವಾದ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಈ ರಾತ್ರಿ ಆತನು ಹೋಗಿ ಶೈವರ ಘೋರ ಕೃತ್ಯಗಳು ಕಂಡನಾದರೆ, ಇನ್ನು ನಮ್ಮವನಲ್ಲ. ಅದ್ದರಿಂದಾತನನ್ನು ಕಾಪಾಡಿ, ಶ್ರೀ ಮಹಾ ವಿಷ್ಣುವಿನ ಮಹಿಮೆಯನ್ನು ಪ್ರಜ್ವಲಿಸುವಂತೆ ಮಾಡುವ ಸಾಧನವಾವುದೋ ತಾವೆಲ್ಲಾ ಆಲೋಚಿಸಿರಿ. ಸಾರಥಿ ಇಂದಿನ ರಾತ್ರಿ ಅಲ್ಲಿಗೆ ಹೋಗದಂತೆ ಉಪಾಯವನ್ನು ಹೂಡುವುದು ನಮ್ಮ ತಕ್ಷಣದ ಕರ್ತವ್ಯವಾಗಿದೆ ಎಂಬುದು ನನ್ನ ಅಭಿಪ್ರಾಯ. ಹೇಗೆ ಅಂದರೆ ಹೇಗೆಂದು ಎಲ್ಲರೂ ಯೋಚಿಸುತ್ತಿರಲು, ರಾಮಾನುಜಯ್ಯ ಎದ್ದುನಿಂತು ಹೀಗೆಂದ. “ಇದಕಿಷ್ಟು ಆಲೋಚನೆ ಏಕೆ? ಅವರು ಮಾಡುವ ಕೆಲಸವನ್ನು ನಮ್ಮಿಂದೇಕಾಗುವುದಿಲ್ಲ? ರಾಮಭಕ್ತನಾದ ಶಿವನಿಗೆ ಅಷ್ಟು ಮಹಿಮೆ ಇರುವಾಗ ಸರ್ವೇಶ್ವರನಾದ ಆ ರಾಮನಿಗೆ ಅದಕ್ಕಿಂತ ಸಾವಿರಪಟ್ಟು ಮಹಿಮೆ ಇರದೇ ಹೋಗುವುದೇನು? ಆದ್ದರಿಂದ ನಾನು ಹೇಳುವುದೇನೆಂದರೆ ಶ್ರೀ ಮದ್ಗುರುಡಾಳ್ವಾರರ ಅವತಾರವಾದ ಮನವಾಳ್ಳಯ್ಯ ರಾಗಿಧ್ವಜವನ್ನು ಕೈಯಲ್ಲಿ ಹಿಡಿದು, ನಾಲಾಯಿರಂ ಪಠಿಸುತ್ತಾ ಗುಂಡವನ್ನು ತುಳಿದರೆ ಸರಿಯಾದೀತು. ಶೈವ, ವೈಷ್ಣವ ಮತಗಳ ತಾರತಮ್ಯವೂ ಲೋಕದಲ್ಲಿ ವ್ಯಕ್ತವಾಗಲು, ಶಿವಾಚಾರ್ಯರ ಗುಂಡಕ್ಕಿಂತ ಇನ್ನೊಂದು ದೊಡ್ಡ ಗುಂಡವನ್ನು, ಈ ಮರದ ಕೆಳಗೆ ಈ ಕ್ಷಣದಲ್ಲೇ ಬ್ರಹ್ಮಾಂಡವಾದದ್ದನ್ನು ನಾನು ತಯಾರು ಮಾಡುತ್ತೇನೆ. ಇದಕ್ಕೆ ಅಡ್ಡಿ ಹೇಳುವವನನ್ನು ಶ್ರೀವೈಷ್ಣವನಲ್ಲನೆಂದು ಭಾವಿಸುವೆ.” ಎಂದು ಮುಗಿಸಿದನು.

ಕತ್ತಲಲ್ಲಿ ಯಾರಿಗೂ ನೋಡುವುದಾಗಲಿಲ್ಲವಾದರೆ, ಮನವಾಳ್ಳಯ ಬಾಯ್ತರೆದು ನಿಂತ. ನಾಕು ಮಂದೀ “ಚೆನ್ನಾಗಿದೆ ಚೆನ್ನಾಗಿದೆ” ಎಂದು ಹೇಳುತ್ತಿದ್ದಂತೆ ಅವನ ಪ್ರಾಣಗಳು ಹಾರಿಹೋದವು. ಒಂದುನಿಮಿಷ ಯೋಚನೆಮಾಡಿ, ಹೀಗೆಂದನು. “ಅಣ್ಣಗಳಿರಾ, ತಮ್ಮಂದಿರೇ, ಪರಮಭಾಗವತೋತ್ತಮರೇ! ರಾಮಾನುಜಯ್ಯ ನನ್ನನು ಆಕ್ಷೇಪಣೆ ಮಾಡುತ್ತಿದ್ದಾನೆ. ನಾನು ಹೋಗತಕ್ಕದ್ದೇ! ಈ ಶರಭಯ್ಯನು ಬಂದು ತಾನು ವೃಷಬಾವತಾರವೆಂದು ನಿಕ್ಕಿ ನೀಲುಗುತ್ತಿದ್ದಾನಲ್ಲಾ! ನಾವೂ ಮುಯ್ಯಿಗೆ ಮುಯ್ಯಿ ತೀರಿಸಬೇಕು, ಅದೂ ಕೇವಲ ವೈಷ್ಣವಾಭಿಮಾನದಿಂದ ನಾನು ಗರುಡಾಳ್ವಾರಿನ ವೇಷ ಹೊತ್ತನೇ ಹೊರತು ಇಷ್ಟು ಭಾರದ ಶರೀರದಿಂದ ನಾನು ಗರುಡಾಳ್ವಾರನೆಂದೂ ಆಗಲಾರೆ. ಆ ಮಾತು ನನಗೆ ತಿಳಿಯದೇ? ಪ್ರಾಜ್ಞರಾದ ನಿಮಗೆ ತಿಳಿಯದೇ? ರಾಮಾನುಜಯ್ಯ ನಾದರೆ ಸಲಾಕೆ ಯಂತೆ ಹುಷಾರಾಗಿದ್ದಾನೆ. ಹದ್ದಿನಂತೆ ಹಾರಬಲ್ಲವನಾಗಿದ್ದಾನೆ. ಆದ್ದರಿಂದ ಅವನದೇ ಗರುಡಾಳ್ವಾರಿನವತಾರ. ಅವನನ್ನೇ ಗುಂಡವನು ತುಳಿಯ ಹೇಳಿ. ನಾನು ಬೆಂಕಿಯಲ್ಲಿ ಕಾಲಿಟ್ಟೆನಾದರೆ  ಒಂದು ಗಜದ ಆಳಕ್ಕೆ ಕುಸಿದುಬಿದ್ದು ಸಾಯುತ್ತೇನೆ. ರಾಮಾನುಜಯ್ಯನು ಹಗುರುವಾಗಿದ್ದಾನೆ. ತಾಗಿ ತಾಗದಂತೆ ಚಸ್ ಚಸ್ ಅಡಿಹಾಕುತ್ತಾ ಹೋಗಬಲ್ಲನು. ಅಣ್ಣಗಳಿರಾ ನ್ಯಾಯವಾಗಿ ಆಲೋಚಿಸಿ.” ಎಂದು ನುಡಿಯುತ್ತಿದ್ದಂತೆಯೇ ರಾಮಾನುಜಯ್ಯ ಮೆಲ್ಲನೆ ನುಸುಳಿ ಕೊಂಡ.

ರಾಮಿನಾಯುಡು ಸರಕ್ಕನೆ ಮಾತಾಡಿದ. “ರಾಮಸ್ಸೋಮಿಗೆ ಮೈಮೆ ಇದೆಯೇ ಇಲ್ಲವೋ? ಈ ಬಡಿವಾರವೆಲ್ಲವನ್ನೂ ಬಿಟ್ಟು ನೆಟ್ಟಗೆ ಗುಂಡವನ್ನು ತುಳಿ.” ಆ ಮಾತು ಕೇಳುತ್ತಲೇ ಮನವಾಳ್ಳಯ್ಯನ ಎದೆ ಜಲ್ಲೆಂದಿತು. ರಾಮಾನುಜಯ್ಯನಂತೆ ನುಸುಳಿಕೊಳ್ಳೊಣವೆಂದರೆ ಅದಷ್ಟು ಸುಲಭವಲ್ಲ. ಹತ್ತಿಪತ್ತು ಮಣಗಳ ಭಾರ! ಹಾ! ದೈವವೇ ನಾನೊಂದು ಅರಕ್ಷಣ ಗರುಡಾಳ್ವಾರನೆ ಆಗಿದ್ದರೆ ಎಲ್ಲಿಗಾದರೂ ಹಾರಿಹೋಗಿ ಪ್ರಾಣವನ್ನುಳಿಸಿ ಕೊಳ್ಳುತ್ತಿದ್ದೆನಲ್ಲಾ.” ಎಂದುಕೊಂಡ!

“ಏನು? ಏಕೆ ಸುಮ್ಮನಿದ್ದೀ? ರಾಮಿನಾಯುಡು ಇರಿಯುದಕ್ಕಾರಂಭಿಸಿದ. ಅಲ್ಲಾಂಡಂ, ಬೆಲ್ಲಾಂಡಂ ಅಂತಾ ಬೆಳಗಿನ ಜಾವದಲ್ಲಿ ಬೋ ಹಾಡುತ್ತಿಯಲ್ಲಾ ಆ ನುಡಿಗಳೆಲ್ಲಾ ನಮ್ಮಂತೋರ್ನ ಬೆದಿರಿಸಿ ಸೊಪ್ಪು, ಪಲ್ಯ ಎಳೀಲಿಕ್ಕೇನಾ ಅಥವಾ ಬೇರೇನಾದಾರೂ ಇದೆಯೇ?” ಎಂದಾರ್ಭಟಿಸಿದ.

ಮನವಾಳ್ಳಯ್ಯ ನಿಟ್ಟುಸಿರುಬಿಟ್ಟು ರಾಮಾನುಜರನ್ನು ನೆನೆದುಕೊಂಡು ಇಂತೆಂದ “ರಾಮಿನಾಯುಡಣ್ಣಾ, ನೀವೂ ನಾನೂ ಬಹುಕಾಲದಿಂದಲೂ ಗೆಳೆಯರು. ನೀನು ಗವರ್ನಮೆಂಟು ವತಿಯಿಂದ ಮುನಸಬು (ಊರಗೌಡ) ಅಧಿಕಾರವನ್ನ ಬಹಳ ಕಾಲದಿಂದ ಚಲಾಯಿಸುತ್ತಿದ್ದೀಯೆ. ಯುಕ್ತಾಯುಕ್ತಗಳು ಬಲ್ಲವನು. ಅಹುದಾಗಲಿ ವೈಷ್ಣವಮತದ ಆಧಿಕ್ಯತ ತೋರಬೇಕೆಂದರೆ ಆ ಶರಭಯ್ಯನು ಮಾಡುವ ಅಲ್ಪ ಕೆಲಸವ ನನ್ನನೂ ಮಾಡಂತೀಯಾ? ಪೃಧಿವ್ಯಾಪಸ್ತೇಜೋ ವಾಯುರಾಕಾಶಾತ್ ಅಂದಿದ್ದಾರೆ. ವಿಷ್ಣುಭಕ್ತನಿಗೆ ಕರ್ತವ್ಯ, ಉತ್ತಮೋತ್ತಮ ಕೃತಿ ಎಂದರೆ ಪೃಥ್ವೀ ಎಂದರೆ ಭೂಮಿಯ ಮೇಲೆ ವೈಷ್ಣವನಾದವನು ಅಡಿ ಇಡಲೇ ಬಾರದು. ಅದಕ್ಕಿಂತ ಒಂದೆಳೆ ಕಡಿಮೆ ಆಪಃ ಎಂದಿದ್ದಾರೆ ಆಂದರೆ ನೀರಿನಲ್ಲಿ ಜಿಗಿಯುವುದು, ಒಂದು ಮಟ್ಟದ ಕರ್ತವ್ಯವಾದೀತು. ಅಧಮಾಧಮವೆಂದರೆ ಬೆಂಕಿಯ ಮೇಲೆ ಕೊಡುವುದು. ಅದ್ದರಿಂದ ನೀವು ಯಾವನ್ಮಂದೀ ನನ್ನಿಂದೆ ಬನ್ನಿ. ಈ ನಿಶೀಧಿ ಸಮಯದಲ್ಲಿ ನಾರಾಯಣ ನಾಮಸ್ಮರಣೆ ಮಾಡುತ್ತಾ ತಟಕ್ಕನೆ ಸೀತಮ್ಮನ ಕೊಳದಲ್ಲಿ ಜಿಗಿಯುತ್ತೇನೆ. ಆಗ ನನ್ನ ಮಹಿಮೆ ನಿಮಗರಿವಾಗುವುದು.”

ರಾಮಿನಾಯುಡು ಕೂಡಲೆ ಎದ್ದು ಬಂದು ಮನವಾಳ್ಳಯ್ಯ ನ ಕೈ ಹಿಡಿದು ಗಟ್ಟಿಯಾಗಿ ಅದುಮುತ್ತಾ ಹೀಗೆಂದ “ಕೇಳ್ತೀಯಾ ವೈಷ್ಣವದೋನೇ ನಮ್ಮ ಬೀಗ ಸಾರಥಿನಾಯುಡು ಜಂಗಮರೊಂದಿಗೆ ಸೇರಿಕೊಂಡರೆ, ದೋದಸಿ ಪುಳಿಯೋಗರೆ, ಸಕ್ಕರೆಯ ಪೊಂಗಲಿ ಹೋಗಿಬಿಡುತ್ತವೆ. ಆ ಮಾತು ನಿನಗೂ ನನಗೂ ಚೆನ್ನಾಗಿ ಗೊತ್ತು. ನೀನೂ ಸೀತಮ್ಮ ಕೊಳದಲ್ಲಿ ಸೋರೇಕಾಯಿ ದೊಪ್ಪಯಂತೆ ತೇಲಿ ಈಜಾಡಿದರೆ, ಅವನು ಒಪ್ಪುವನೇ. ಹುಚ್ಚುನಾಯಿ ಸುದ್ದಿ ಬಿಟ್ಟುಕೊಟ್ಟು ನಮ್ಮಬೀಗ ಎರಡೂ ಕಣ್ಣುಗಳಿಂದ ನೋಡುತ್ತಿದಾಗಲೇ ಅಲ್ಲಾಂಡಂ ಬೆಲ್ಲಾಂಡ ಎಂದು ಬೆಂಕಿ ತುಳಿ!

“ಸರೇ ಗೆಳೆಯಾ! ನಿನ್ನ ಅಭಿಪ್ರಾಯ ಹಾಗಿದ್ದಲ್ಲಿ ಹಾಗೆ ಆಗಲಿ. ಶ್ರೀಮಹಾವಿಷ್ಣುವಿನ ಮೈಮೆ ನಿಲ್ಲಿಸುವುದಕ್ಕೆ ಬೆಂಕಿಯನ್ನು ತುಳಿಯುತ್ತೇನೇ. ತುಳಿದು ನೋಡುತ್ತೇನೇ! ಈಗ ರಾತ್ರಿ ಬಹಳಷ್ಟು ಕಳೆದಿದೆ. ಮನೆಗಳಲ್ಲಿ ಹೋಗಿ ಮಲಗೋಣ. ನಾಳೆ ಈ ಸ್ಥಳದಲ್ಲೆ ಬ್ರಾಹ್ಮಾಂಡವಾದ ಗುಂಡವನ್ನು ತೋಡಿಸಿ, ದಂದಹ್ಯಮಾನವಾದ ಆ ಗುಂಡವನ್ನು ತುಳಿದು ವೈಷ್ಣವ ಮತ ಪ್ರಭಾವವನ್ನು ಮೆರೆಯುತ್ತೇನೆ. ಆ ಸಮಯದಲ್ಲಿ ಆ ಗರುಡಾಳ್ವಾರೇ ನನ್ನನ್ನಾವಹಿಸಿ ಆ ಗುಂಡವನ್ನು ಸರಕ್ಕನೆ ಒಂದೆ ಜಿಗಿತದಲ್ಲಿ ದಾಟಿಸುತ್ತಾನೆ.” ಎಂದ ಮನವಾಳ್ಳಯ್ಯನಿಗೆ.

“ಆ ಬೇಳೆ ಬೇಯುವುದಿಲ್ಲ. ಈ ರಾತ್ರಿ ನಮ್ಮವನು ಜಂಗಮರೊಂದಿಗೆ ಸೇರಿಹೋದರೆ ನಾಳೆ ನೀನು ತುಳಿದರೇನು, ತುಳಿಯದಿದ್ದರೇನು? ಆ ದಾಟುನ ಜಿಗಿತವನ್ನೋ ಇವತ್ತೇ ಅವರ ಗುಂಡದಲ್ಲೇ ದಾಟು. ಏಳ್ರಲೇ ಈ ವೈಷ್ಣವನನ್ನು ಹೊತ್ತು ಕೊಂಡು ಹೋಗಿ ಗುಂಡವನ್ನು ತುಳಿಸೋಣ” ಎಂದು ರಾಮಿನಾಯುಡು ತಡೆ ಹಾಕಿದ, ಕೂಡಲೇ ನಾಯುಡುಗಳ ನಾಲ್ವರು ಮನವಾಳ್ಳಯ್ಯ ರೆಕ್ಕೆ ಹಿಡಿದು ರಚ್ಚಬಂಡೆಯಿಂದ ಕೆಳಗಿಳಿಸಿದರು.

ಕೈಮೀರಿದೆ ಎಂದರಿತ ಮನವಾಳ್ಳಯ್ಯ ಮತ್ತೊಂದು ಪನ್ನಾಗವನ್ನು ಯೋಚಿಸಿದ. ನಿಲ್ಲಿ, ನಿಲ್ಲಿ ಗುಂಡವನ್ನು ತುಳಿಯಬೇಕಾದಾಗ, ಅದಕ್ಕೆ ಬೇಕಾದ ಸಾಮಗ್ರಿಯ ತಯಾರಿ ಬೇಡವೇ? ಇಲ್ಲದಿದ್ದರೆ ಉಟ್ಟುಬಟ್ಟೆಗಳಿಂದ ಗುಂಡದಲ್ಲಿ ಹಾಕಿ ನೂಕಿ ಮೈ ಸುಡುತ್ತೀರಾ? ಆ ಶಿವಾಚಾರಿಗಳು ವೀರಭದ್ರನ ಮೂರ್ತಿಯನ್ನು ಕೈಲಿ ಹಿಡಿದು, ಮಂತ್ರ ಪಠಣಮಾಡುತ್ತಾ ಶಂಖಧ್ವನಿಗೆ ವೀರಾವೇಶ ಬರಲು ಆ ಗುಂಡವನ್ನು ತುಳಿಯುತ್ತಾರೆ. ಅದರಂತೆ ಶ್ರೀ ರಾಮನ ಉತ್ಸವ ವಿಗ್ರಹವೊಂದನ್ನು ನನ್ನ ತಲೆಯ ಮೇಲೆ ಹೊಡೆಯದಿದ್ದರೆ ನಾನೆಂತು ಸಾಯಬೇಕು? ಗರುಡಾಳ್ವಾರಾದಾರೂ ಸಹ ಪೇರಿಯಾಳ್ವಾರನ್ನ ಬೆನ್ನುಮೇಲೆ ಹೊರುತ್ತಾ ಹೊರಡುತ್ತಾ ನಾಗಲಿ ಸುಮ್ಮನೆ ರೆಕ್ಕೆ ಚಲಿಸರು ನಿಮಗೆ ಗೊತ್ತಿಲ್ಲವೇ?” ಅನ್ನುವಲ್ಲಿಗೆ…..

ಸಾರಥಿ ನಾಯುಡು “ಆ ಮಾತು ನಿಜವೇನ್ರಪಾ! ಪ್ರತಿಮೆ ಕೊಡುತ್ತಾನೆ ಅಯ್ಯನವರನ್ನು ಎದ್ದೇಳಿಸಿಕೊಂಡು ಬನ್ನಿರೋ” ಎಂದ ನಾಲ್ವರು ನಾಯುಡುಗಳು ಅಯ್ಯನವರ ಮನೆಗೆ ಹೋಗಿ, ಮೈ ಮೇಲೆ ಟವಲನ್ನೂ ಹಾಕಿಕೊಳ್ಳಲು ಬಿಡದೆ ಅವರನ್ನು ಹೊತ್ತು ತಂದು ಅಶೋಕ ವೃಕ್ಷದ ಕೆಳಗಿನ ಬಂಡೆಯ ಮೇಲಿರಿಸಿದರು. ಆ ಗಲಾಟೆಯನ್ನು ಕಂಡು ಅವರ ಮಗ ಕೃಷ್ಣಮಾಚಾರಿ ಅಟಿಕೆಯನ್ನು ಎತ್ತಿ ಬಚ್ಚಿಟ್ಟುಕೊಂಡ.

ಅತಿ ವಿನಯವನ್ನು ನಟಿಸುತ್ತಾ ಮನವಾಳ್ಳಯ್ಯ ರಂಗಾಚಾರ್ಯರಿಗೆ ಪ್ರಸ್ತುತಾಂಶವನ್ನು ಬಿನ್ನವಿಸಿದ. ಉತ್ಸವ ಮೂರ್ತಿಯನ್ನು ಕೊಡಿರೆಂದು ಬೇಡಿದ. ರಂಗಾಚಾರ್ಯರಂದರು “ಎಲಾ ಮೂರ್ಖರೇ ನಿಮಗೆ ಮತಿಗಳು ಶುಭ್ರವಾಗಿ ತೊಳೆದು ಹೋಗಿವೆಯೇ? ಈ ಗುಂಡವನ್ನು ತುಳಿಯುವುದು ಗರ್ಹ್ಯನೀಯವಾದದ್ದು. ತಾಮಸವ್ಯಾಪಾರ. ವೈಷ್ಣವ ಮತದಲ್ಲಿ ನಿಷಿದ್ಧವಾದದ್ದು. ನಮ್ಮ ಗ್ರಂಥಗಳಲ್ಲೆಲ್ಲೂ ಈ ಪ್ರಕ್ರಿಯೆ ಇಲ್ಲ. ಗುಂಡವನ್ನು ತುಳಿಯಲು ಒಂದು ಪದ್ಧತೀ, ಮಂತ್ರ ಇದ್ದರಲ್ಲವೇ”
“ಚಕ್ರದಿಂದ ಮೈಸುಡಲು ಮಂತ್ರ ಬೇಕೆ. ಸುಮ್ಮನೆ ಹೆಚ್ಚಿಗೆ ಮಾತಾಡಬೇಡಿ. ಆ ವಿಗ್ರಹಯಾವುದೋ ಸಾತಾನಿಯವನಿಗೆ ಕೊಡಿ.” ರಾಮಿನಾಯುಡು ಕೇಳಿದ.
“ಛೀ, ಹೋಗ್ರೋ ಮೂರ್ಖರೇ,  ನಾನು ಕೊಡುವುದಿಲ್ಲ, ಉತ್ಸವ ವಿಗ್ರಹಗಳು ಶೂದ್ರರು ಮುಟ್ಟಬಾರದು. ಮುಟ್ಟಿದರೆ ಕಣ್ಣು ಹೋದಾವು” ಎಂದು ರಂಗಾಚಾರ್ಯ ಹೇಳುತ್ತಿದ್ದಂತೆ ಮನವಾಳ್ಳಯ್ಯನಿಗೆ “ಬದಿಕಿದೆಯಾ ಬಡಜೀವಾ” ಎನಿಸಿ ಸಾರಥಿನಾಯುಡು ನೊಂದಿಗೆ” ನೋಡಿದೆಯಾ ಗೆಳಯಾ! ಆ ಮಾತು ನಿಜವೇ ನಾನು ಉತ್ಸವ ಮೂರ್ತಿಗಳನ್ನು ಮುಟ್ಟಬಾರದು. ಆದ್ದರಿಂದ ಈಗ ಕರ್ತವ್ಯವೇನೆಂದರೆ ಆ ಮೂರ್ತಿಯನ್ನು ಹಿಡಿದು ಅಯ್ಯನವರು ಅವರೇ ಗುಂಡವನ್ನು ತುಳಿಯಬೇಕಾಗಿದೆ. ಈ ಹೆಚ್ಚಳಿಕೆ ಅವರಿಗೆ ಸಲ್ಲತಕ್ಕದ್ದು.” ಎಂದ.

ರಾಮಿನಾಯುಡು “ಮುದುಕರು ಪ್ರತಿಮೆ ಯನ್ನು ಹೊತ್ತು ಗುಂಡವನ್ನು ಹೇಗೆ ತುಳಿಯಬಲ್ಲರು? ಚಿಕ್ಕ ಸ್ವಾಮಿಯನ್ನು ಎಬ್ಬಿಸಿ ಕೊಂಡು ಹೋಗೋಣ ನಡಿಯಿರಿ.” ಎಂದನು.
“ಅವನ ತಂಟೆಗೆ ಹೋಗಬೇಡಿ. ಒಳ್ಳೆಯದು. ಉತ್ಸವ ಪ್ರತಿಮೆಯನ್ನು ಹೊತ್ತು ನಾನೇ ಗುಂಡವನ್ನು ತುಳಿಯುವೆ. ನಮ್ಮವನು ಪಟ್ಟಣಕ್ಕೆ ಹೋಗಿದ್ದಾನೆ. ಊರಲಿಲ್ಲ.” ಎಂದರು ರಂಗಾಚಾರ್ಯರು.

“ಹಾಗಾದರೇ ಎದ್ದೇಳಿರೋ” ಎಂದು ಮನವಾಳ್ಳಯ್ಯ ಬೊಬ್ಬೆ ಹಾಕಿದ. ಅಷ್ಟರೊಳಗೆ ಆ ಅಶೋಕ ವೃಕ್ಷದ ಮರುಗಿನಲ್ಲಿ ಗುಪ್ಪೆಂದು ಬೆಳಕೊಂದು ಹುಟ್ಟಿತು. ಎಲ್ಲರೂ ಭೀತರಾದರು. ನಿಷೆ ಎಲ್ಲಾ ಇಳಿಯಲಾರಂಭಿಸಿತು.

ಕೂಡಲೇ ಹಿಂದಿನಿಂದ ಒಂದು ಕೈಯಲ್ಲಿ ಕೈದೀಪ, ಎರಡನೆ ಕೈಯಲ್ಲಿ ಕತ್ತಿ ಯನ್ನು ಹಿಡಿದು, ಉಂಗರಗಳ ಕೂದಲು ಗಾಳಿಗೆ ತೂಗಾಡುತ್ತಿರಲು ನಿಬ್ಬರದಿಂದ ಅಡಿಯಿಡುತ್ತಾ ಬಂದು ನಾಂಚಾರಮ್ಮ ಮಾವನ ಬಗಿಲಿಗೆ ನಿಂತು, ಅವರ ರೆಟ್ಟೆಗಳನ್ನು ಹಿಡಿದು ನಿಂತ ನಾಯುಡುಗಳ ಕಡೆಗೆ ಕತ್ತಿ ಮೊನೆಯನ್ನು ತೋರುತ್ತಾ, “ದುಷ್ಟರೇ, ಈ ಪರಮ ಪವಿತ್ರನಾದ ಬ್ರಾಹ್ಮಣನನ್ನು ಬಿಡುತ್ತಿರೋ ಅಥವಾ ಈ ಕತ್ತಿಗೆ ಬಲಿಯಾಗುವಿರೋ” ಎಂದು ಬೊಬ್ಬಿಟ್ಟಳು.

ಹಠಾತ್ತನೆ ಈ ವೀರ ರೂಪವನ್ನು ನೋಡಿ ಎಲ್ಲರ ಧೈರ್ಯವೂ ಕುಗ್ಗಿಹೋಯಿತು. ಅಯ್ಯರವರನ್ನು ಹಿಡಿದು ನಿಂತ ನಾಯುಡುಗಳು ದೂರ ಸರಿದರು.

ಆಗ ಅವಳು ಕೈ ದೀವಿಗೆ ಯನ್ನು ರಚ್ಚಬಂಡೆಯ ಮೇಲಿರಿಸಿ ನಿನಗೇನು ಬೇಕೆಂದು ಮನವಾಳ್ಳಯ್ಯನನ್ನು ಕೇಳಿದಳು. ಮನವಾಳ್ಳಯ್ಯ ಎರಡಡಿ ಹಿಂದಕ್ಕೆ ಹಾಕಿ ತನಗೇನೂ ಬೇಕಾಗಿಲ್ಲವೆಂದು ಹೇಳಿದನು.
“ನಿನಗೆ ಉತ್ಸವ ಮೂರ್ತಿಗಳು ಬೇಕೆಂದೆಯಲ್ಲಾ”
“ನನಗೇಕೆ ತಾಯೀ! ಅಪವಿತ್ರನು ನಾನು! ಅವುಗಳ ಎತ್ತರದ ಬಂಗಾರವನ್ನು ಕರಗಿಸಿ ಕೊಟ್ಟರೂ ಬೇಕಿಲ್ಲ. ರಾಮಿನಾಯುಡು ಏನೋ ಸ್ವಪ್ಪ…..
ಅವಳು ಆ ಕಡೆಯಿಂದ ಈ ಕಡೆಗೆ ತಿರುಗು ರಾಮಿನಾಯುಡುನನ್ನು ನಿಸ್ಸಾರವಾಗಿ ನೋಡುತ್ತಾ “ನಿನಗೇನು ಬೇಕು ಊರಗೌಡ ನಾಯುಡು! “ಎಂದು ಕೇಳಿದಳು.
ಮುಖವನ್ನು ಬಗ್ಗಿಸಿ ರಾಮಿನಾಯುಡು ತನಗೇನೂ ಬೇಕಿಲ್ಲವೆಂದು ಗೊಣಿಗಿಕೊಂಡ. ರಾಮಿನಾಯುಡುನ ಹೆಂಡತಿ ಪರಮ ಗಯ್ಯಾಳಿ.
ನಾಂಚಾರಮ್ಮ ಯಾರಿಗೂ ಏನೂ ಬೇಕಿಲ್ಲದಿರುವಾಗ, ಈ ಮುದುಕ ಬ್ರಾಹ್ಮಣನನ್ನು ಮೈಮೇಲೆ ಹಚ್ಚಡವೂ ಇಲ್ಲದೆ ನಿದ್ದೆಯ ಮಂಚದ ಮೇಲಿಂದ ಏಕೆ ಎಳೆದು ತಂದಿರುವಿರಿ? ಯಾರೂ ಮಾತನಾಡೋದಿಲ್ಲವೇ?”

ರಾಮಿನಾಯುಡು ಕೊಂಚ ಧೈರ್ಯವನ್ನು ತುಂಬಿಕೊಳ್ಳುತ್ತಾ “ಹೆಂಗಸರೊಡೆನೆ ವಾದಿಸುವುದುದಿಲ್ಲವಾದರೂ ಈ ರಾತ್ರಿಯಲ್ಲಿ ಆ ಜಂಗಮರು ಶಿವನ ಹೆಸರಿನಲ್ಲಿ ಗುಂಡವನ್ನು ತುಳಿಯುತ್ತಾರಲ್ಲಾ, ನಮ್ಮ ರಾಮಸೋಮಿ ಹೆಸರಿನಲ್ಲಿ ನಾವೂ ಗುಂಡ ತುಳಿಯುದಿದ್ರೆ ನಮ್ಮ ಮರ್ಯಾದೆ ಹಾಳಾಗುತ್ತಲ್ಲಾ.” ಎಂದು ನುಡಿದನು.
ನಾಂಚಾರಮ್ಮ “ನೀನು ತುಳಿಯಬಾರದೇ”
“ನನಗೆ ಮಾಯಾ ಮಂತ್ರ ಗೊತ್ತಿಲ್ಲವಲ್ಲಾ! ಅದಕ್ಕೆಂದೇ ಸಾತಾನಿಯವನನ್ನು ತುಳಿ ಅಂತ ಹೇಳಿದೆ.”
ನಾಂಚಾರಮ್ಮ ಮನವಾಳ್ಳಯ್ಯನ ಕಡೆ ನೋಡುತ್ತಾ “ನೀನೀಕೆ ತುಳಿಯ ಬಾರದು” ಎಂದು ಕೇಳಿದಳು.
ಮನವಾಳ್ಳಯ್ಯ ಬಿಕ್ಕಳಿಸುತ್ತಾ ” ಅಮ್ಮಾ ನನ್ನ ಪ್ರಾರಬ್ಧ ಕೆಟ್ಟು ಈ ಸಭೆಯನ್ನು ಆಯೋಜಿಸಿದೆ. ಬುದ್ಧಿ ಹುಲ್ಲು ಮುಕ್ಕಿತ್ತು. ಇದೋ ಕೆನ್ನೆಗಳ ಮೇಲೆ ಪಟಪಟ ಬಾರಿಸಿಕೊಳ್ಳುತ್ತಿದ್ದೇನೆ. ತಾಯೀ ಇಂದಿಗೆ ಬಿಟ್ಟುಕೊಟ್ಟರೆ ಶ್ರೀರಂಗಕ್ಕೆ ಹೊರಡುತ್ತೇನೆ, ಈ ನಾಲ್ಕು ಗ್ರಾಮಗಳ ಯಾವ ಮೇರೆ ಯಲ್ಲಿ ಕಂಡರೂ ನನ್ನ ತಲೆಯ ಮೇಲೆ ಸಿಡಿಲು ಬೀಳಲಿ” ಎಂದ.

ನಾಂಚಾರಮ್ಮ “ನಿನಗೆ ಗುಡ್ಡದಷ್ಟು ಎದೆಯಿದೆ. (ರಾಮಿನಾಯುಡು ನೊಡನೆ) ಮುನಸಬುನಾಯುಡೂ, ನಿನ್ನ ಬೀಗ ಸಾರಥಿನಾಯುಡು ಆ ಕಡೆ ಹೋದರೆ ದ್ವಾದಶಿ ದ್ವಾದಶಿಗೆ ಸಕ್ಕರೆ ಪೊಂಗಲಿ ಪುಳಿಯೋಗರೆ ಸಿಗುವುದಿಲ್ಲವೆಂದಲ್ಲವೇ ನಿನ್ನ ಭಯ.”
ರಾಮಿನಾಯುಡು ತಲೆ ಕೆದರಿಕೊಳ್ಳುತ್ತಾ ” ನನಗೊಬ್ಬನಿಗೇ ಎಂಬ ಮಾತೇಕಮ್ಮಾ, ಆ ರಾಮಸ್ಯೋಮಿಯವರಿಗೆ ಮಾತ್ರ ಪುಳಿಯೋಗರೆ ಕುಂದಾಗುವುದಿಲ್ಲವೇ?”
ಮನವಾಳ್ಳಯ್ಯ -” ಅಮ್ಮಾ ಪೊಂಗಲಿ, ಪುಳಿಯೋಗರೆ ಪ್ರಮುಖವಲ್ಲ. ವೈಷ್ಣವ ಮತೋತ್ಕರ್ಷ ರುಜುಮಾಡಿ ಉದ್ಧರಿಸ ಬೇಕಾಗಿದೆ. ಅದೂ ಇಂದಿನ ಕರ್ತವ್ಯ.”
“ಆ ಉದ್ಧರಿಸುವುದೇನೋ ನೀನೇಕೆ ಮಾಡಬಾರದು. ನಿಮಗೆ ಉತ್ಸವ ಮೂರ್ತಿಯೇಕೆ ಬೇಕು. ಆಕಾಶದಷ್ಟು ರಾಗಿಧ್ವಜವನ್ನು ಹೊರುತ್ತಾ ತಿರುಗುತ್ತಿಯಲ್ಲಾ, ಅದರಲ್ಲಿ ಅರ್ಧಕಾಸಷ್ಟಾದರೂ ಮಹತ್ತಿಲ್ಲವೇ” ಎಂದು ನಾಂಚಾರಮ್ಮ ಪ್ರಶ್ನಿಸಲು ಮನವಾಳ್ಳಯ್ಯ ” ಪರಿಸ್ಥಿತಿ ಮತ್ತೆ ಮೊದಲಿಗೆ ಬಂದಂತಾಯಿತಲ್ಲಾ ಎಂದು ಬಡಬಡಿಸುತ್ತಾ ಕಷ್ಟಪಟ್ಟು ಗುಂಪಿನೊಳಗೆ ದೂರಿ ಅಂತರ್ಧಾನನಾಗಿ ಹೋದ.

ನಾಂಚಾರಮ್ಮ “ರಾಮನೇ ಅಲ್ಲ ಯಾವದೇವರ ಮೇಲಾಗಲಿ ನಿಜವಾದ ನಂಬಿಕೆ ಎಂಬುದೊಂದಿದ್ದರೆ ಒಂದು ಗುಂಡವೇ ಅಲ್ಲ. ನನ್ನ ಹಿಂದೆ ಬರಬಲ್ಲ ವೈಷ್ಣವರಾರಾದರೂ ಇದ್ದರೆ ಎದುರಿಗೆ ಬನ್ನಿ.”
ಯಾರು ತುಟಿ ಪಿಟಿಕ್ಕನ್ನಲಿಲ್ಲ.
ನಾಂಚಾರಮ್ಮ ಎಲ್ಲ ಕಡೆಗಳಗೂ ದೃಷ್ಟಿ ಹಾಯಿಸಿ “ಇಲ್ಲಿ ಪೀರು ಸಾಯಿಬು ಇಲ್ಲವಾ?” ಎಂದು ಕೇಳಿದಳು.

ಪೀರುಸಾಯಿಬನು ಕೂಡಲೇ ಎದುರಿಗೆ ಬಂದು “ತಾಯೀ! ಇಗೋ ನಿಮ್ಮ ದಾಸ” ಎಂದು ಕೈ ಜೋಡಿಸಿ ನಿಂತ. ಪೀರು ಸಾಯೇಬು ಪಿಂಜಾರಿ ಸಾಬನಾದರೂ ರಾಮಭಕ್ತ. ಕೀರ್ತನೆಗಳು ಹಾಡುತ್ತಾನೆ. ಹಠಯೋಗವನ್ನು ಅಭ್ಯಸಿಸುತ್ತಾನೆ. ರಸ್ತೆಯ ಬದಿಗೆ ಹಳ್ಳದ ದಡದ ತೋಟದಲ್ಲಿಯ ಮಠವು ಅವನದೇ. ಅವನಿಗೆ ಶಿಷ್ಯಸಮುದಾಯ ಬಹಳ ಹೆಚ್ಚು.

“ಸಾಯೇಬ, ನೀನು ಗುಂಡವನ್ನು ತುಳಿಯ ಬಲ್ಲೆಯಾ?” ಎಂದು ನಾಂಚಾರಮ್ಮ ಕೇಳಿದಳು. “ನಿಮ್ಮ ಶಲವಾದರೆ ಅನಾಯಾಸವಾಗಿ ತುಳಿಯುತ್ತೇನೆ ತಾಯಿ!” ಎಂದ.
ನಾಂಚಾರಮ್ಮ “ಎಲ್ಲಿ ಆ ಮನವಾಳ್ಳಯ್ಯ? ಗರುಡನ ಅವತಾರ ಅಂತರ್ಧಾನವಾಯಿತೇನು? ರಾಮಿನಾಯುಡೂ ಪರಮಭಾಗವತರಾಗಿದ್ದೂ ನಿಮ್ಮಲ್ಲಿ ಯಾರೂ ಗುಂಡವನ್ನು ತುಳಿಯುವುದಕ್ಕೆ ಬೇಕಾದ ಶಕ್ತಿ ಸಾಮರ್ಥ್ಯಗಳು ಇಲ್ಲ, ಆದರೆ ಅವು ಪೀರು ಸಾಬನಿಗೆ ನೀಡಿದ್ದಾನೆ ಎಂದಮೇಲೆ ನಿಮ್ಮ ವೈಷ್ಣವ ಮತವು ದೊಡ್ದದೋ ಅಥವಾ ಅವನ ತುರಕಮತ ದೊಡ್ಡದೋ, ರಾಮಿನಾಯುಡೂ ನಿನ್ನ ತಾಪತ್ರಯವೆಲ್ಲಾ ಈ ರಾತ್ರಿ ವೈಷ್ಣವರು ಶೈವರಿಗೆ ಪರಾಭವ ಮಾಡಲು ತವಕವಲ್ಲವೇ! ಅದಕ್ಕೆ ಒಂದು ಉಪಾಯವನ್ನು ಹೇಳುತ್ತೇನೆ ಕೇಳಿ! ಮತಗಳಲಿ ಸಾತ್ವಿಕಗಳು ತಾಮಸಗಳು ಎಂದು ಎರಡು ವಿಧಗಳು ಎರಡು ಬಗೆಯ ಮನುಷ್ಯರೂ ಶೈವರಲ್ಲಿ ವೈಷ್ಣವರಲ್ಲಿಯೂ ಇದ್ದಾರೆ. ನಮ್ಮ ವೈಷ್ಣವದಲ್ಲಿ ಅಂತಾ ತಾಮಸ ಕೃತ್ಯಗಳು ಮಾಡುವವರದೂ ಒಂದು ಪಂಗಡವಿದೆ. ನಿಮಗೆ ಗೊತ್ತೇ?

ಮನವಾಳ್ಳಯ್ಯ ಗುಂಪಿನಲ್ಲಿದ್ದುಕೊಂಡೆ ತನ ತಲೆಯನ್ನ ಮೇಲೆತ್ತಿ, “ಯಾರಮ್ಮಾ ಅವರು” ಎಂದು ಅತ್ಯವಸರದಲ್ಲಿ ಕೇಳಿದನು.

ರಾಮಿನಾಯುಡು “ಮತ್ತಿನ್ನಾರು ಸಾತಾನಿಯವರು ಅನುತ್ತಿರುವಾಗಲೆ ಮನ ವಾಳ್ಳಯ್ಯನ ತಲೆ ಗುಂಪಿನಲ್ಲಿ ಮಾಯವಾಯಿತು.”
ನಾಂಚಾರಮ್ಮ – ಆ ವೈಷ್ಣವರು ಯಾರಾ? ಮತ್ತಿನ್ನಾರು ತುರುಕರು? ಪೀರಂದರೇ ಏನೆಂದು ತಿಳಿದಿರಿ. ಶ್ರೀಸ್ವಾಮಿ ಯವರ ತಿರುನಾಮವೇ ! ಪಟ್ಟಣದಲ್ಲಿ ನಮ್ಮ ಮನೆಯ ಬದಿಗೆ ಒಬ್ಬ ಸಾತಾನಿ ಪೀರುಗಳನ್ನು ನಿಲ್ಲಿಸಿ ಗುಂಡವನ್ನು ತುಳಿಯುತ್ತಿದ್ದ. ಪಟ್ಟಣಗಳಲ್ಲಿ ಎಷ್ಟೋ ಜನ ಹಿಂದುಗಳೆ ಪೀರುಗಳ ಪಂಜಾ ಹಿಡಿದು ಗುಂಡಗಳನ್ನು ತುಳಿಯುವುರು. ಆದ್ದರಿಂದ ಶ್ರೀ ರಾಮಸ್ವಾಮಿ ಅವರ ನಾಮವನ್ನೂ ತಂದು ಪೀರು ಕಟ್ಟಿಕೊಡುತ್ತಾನೆ. ಆ ಪೀರನ್ನು ಹಿಡಿದು ಪೀರುಸಾಯೇಬ ಗುಂಡವನ್ನು ತುಳಿಯುತ್ತಾನೆ. ಪೀರುಸಾಯೇಬನ ಯೋಗ್ಯತೆ ನೀವರಿತಿದ್ದೇ. ಅವರು ಕಬೀರುದಸಾನಂತಹ ಭಕ್ತನು. ಅದ್ದರಿಂದ ಭಯ ತೊರೆದು ಅತನ ಹಿಂದೆ ಹೋಗಿ ಗೆದ್ದು ಬನ್ನಿ. ಸಮಯಕ್ಕೆ ಭಕ್ತಿ ನಿಲ್ಲುತ್ತೋ ಇಲ್ಲವೋ ಕೈಕೋಲುಗಳನ್ನು ಮಾತ್ರ ಮರೆಯದಿರಿ.

ಅವಳು ಸಾಕುಮಾಡುವ ಹೊತ್ತಿಗೆ ಗುಂಪುನಲ್ಲಿಂದ ಮನವಾಳ್ಳಯ್ಯ ಪೆಳಪೇಳಾಶ್ಲೋಕವನ್ನು ಪಠಿಸುತ್ತಾ ಎದುರಿಗೆ ಬಂದು ಸಾಷ್ಟಾಂಗಬಿದ್ದು “ಅಮ್ಮಾ ನೀವು ಸಾಕ್ಷಾತ್ತ್ ಮಹಾಲಕ್ಷ್ಮಿಯ ಅವತಾರವೇ ಸರಿ. ವೈಷ್ಣವ ಮತವನ್ನು ಉಳಿಸಿದಿರಿ. ಮತವೇ ಎನ್ನಲೇಕೆ. ನಮ್ಮ ಪ್ರಾಣಗಳೂ ಉಳಿಸಿದಿರಿ. ಇನ್ನು ನನ್ನ ವಿಜೃಂಭಣೆಯನ್ನು ನೋಡಿರಿ.” ಎಂದ. ಮನವಾಳ್ಳಯ್ಯ ದೊಡ್ಡ ಪಿಕಮತ್ಕಾರ (ಉದ್ಯಮಕಾರ) ಆ ರಾತ್ರಿ ವೈಷ್ಣವತಂತ್ರದ ತರುವಾಯ ಕಥೆ ಎಲ್ಲಾ ಅವನೇ ನಡೆಸಿದ.

ಎಲ್ಲವೂ ತಣ್ಣಗಾದ ಮೇಲೆ ಅಟಿಕೆ ಮೇಲಿಂದ ಕೃಷ್ಣಮಾಚಾರ್ಯರು ಇಳಿದು ಬಂದರು. ಕಷ್ಟಸಾಧ್ಯವನ್ನು ಸಾಧಿಸಿದ ಸಂತೋಷದಲ್ಲಿ ನಾಂಚಾರಮ್ಮ ಕೈದೀವಿಗೆ ಮತ್ತೆ ಕೈಯಲ್ಲಿ ಹಿಡಿದು, ಮನೆಗೆ ಸವಿಲಾಸವಾಗಿ ಹೋಗುತ್ತಿರಲು ಗಂಡನು ಎದರಿಗೆ ಬರಲು ಅವಳು ಪ್ರೇಮ, ಪರಿಹಾಸಗಳು ಹೆಣೆದ ದೃಷ್ಟಿಯಿಂದ ನೋಡಿದಳು. ಆ ದೃಷ್ಟಿ ತನಗೆ ದೈವತ್ವವನ್ನಿತ್ತು. ಅವತಾರ ಪುರುಷನನ್ನಾಗಿ ಮಾಡಿತೆಂದು ಕೃಷ್ಣಮಾಚಾರಿ ಮಾರನೆಯ ದಿನ ನನ್ನೊಂದಿಗೆ ಹೇಳಿ, ಆ ಅರ್ಥನೀಡುವ ಶ್ಲೋಕವನ್ನೂ ಹೇಳಿದ, ತಮ್ಮ ರಹಸ್ಯ ಶೃಂಗಾರ ಚೇಷ್ಟೆಗಳು ಮಿತ್ರರೊಡೆನೆ ಹಂಚಿಕೊಂಡಾಗಲೇ ಕೆಲವರಿಗೆ ತೃಪ್ತಿ.

ಆ ರಾತ್ರಿ ಶಿವಾಚಾರಿಗಳು ಗುಂಡವನ್ನು ತುಳಿಯುವುದನ್ನು ನೋಡಲು ನಾನು ಹೋಗಿದ್ದೆ. ಮುಂಜಾನೆ ನಾಲ್ಕುಗಂಟಿಯ ಸಮಯದಲ್ಲಿ ಕಿರುಕತ್ತಲಿನಲ್ಲಿ ಗುಂಡದಲ್ಲಿ ಬೆಂಕಿಯ ತುಂಡುಗಳು ಕಿಡಿಗಳನ್ನು ಹಾರಿಸುತ್ತಾ ಉರಿಯುತ್ತಿದ್ದವು. ಪ್ರಾತಃಕಾಲದ ಚಳಿಗಾಳಿ ಬೀಸುತ್ತಿತ್ತು. ಒಂದೇಸಲ ಗರ್ಭ ನಿರ್ಬೇಧವಾಗುವಂತೆ ಶಂಖಾದಿ ವಾದ್ಯಗಳು ಮೊಳಗಿದವು. ಇಂಗ್ಲೀಷು ಓದಿದ ನಾಗರಿಕರಾದ ನಾಸ್ತಿಕಾಗ್ರೇಸರರಿಗೆ ಆ ವೇಳೆಯಲ್ಲಿ ಭೀತಿ ಉಂಟಾಗಿತ್ತೆಂದು ಅವರೇ ಹೇಳಿಕೊಂಡರು.

ಹಂದರದೊಳಗಿಂದ ವೀರಗಂಧವನ್ನು ಪೂಸಿಕೊಂಡ ನಾಲ್ವರು ಶಿವಾಚಾರರು ಗುಂಡದ ಹತ್ತಿರಕ್ಕೆ ಬಂದು ನಿಂತುಕೊಂಡರು! ಒಬ್ಬನ ತಲೆಯಮೇಲೆ ಭೀಕರವಾದ ರಾಗಿಧ್ವಜವನ್ನು ಹೊತ್ತಿದ್ದಾನೆ. ಎದುರುಗಡೆ ನಿಂತು ಮತ್ತೊಬ್ಬನು ಕತ್ತಿಯನ್ನು ಝಳಿಪಿಸುತ್ತಾ ವೀರ ವಾಕ್ಯಗಳು ಹೇಳುತ್ತಿದ್ದನು. ಒಬ್ಬನು ಗುಂಡದಲ್ಲಿ ತುಪ್ಪವನ್ನು ಸುರಿದು ಕುಂಬಳಕಾಯಿಯ ತುಂಡುಗಳನ್ನೆಸಯುತ್ತಿದ್ದನು. ಕೂಡಲೇ ಶಿವಾಚಾರಿಗಳು ಗುಂಡವನ್ನು ಹೊಕ್ಕು ನಡೆದು ಹೋದರು. ಆ ಕಡೆಯ ದಡವನ್ನು ಸೇರಿ ಮತ್ತೆ ತುಳಿಯಲು ಅವರು ಈ ಕಡೆಗೆ ತಿರುಗುತ್ತಿರಲು ಅಲ್ಲಾ -ರಾಮ್ ಎಂಬ ಪ್ರಳಯದ ಕೂಗನ್ನು ಹಾಕಿ ತಕ್ಷಣವೇ ಶಿವಾಚಾರಿಗಳು ಗುಂಡದಲ್ಲಿಳಿದ ದೆಶೆಯಿಂದ ಜನರ ಗುಂಪನ್ನು ಸಿಳಿಕೊಂಡು ಬಂದು ಮನುಷ್ಯ ಪ್ರವಾಹ ಗುಂಡವನ್ನು ತುಳಿದು ದಾಟಿ ಹೋಯಿತು. ಅವರೆಲ್ಲರೂ ಮುಖದ ಮೇಲೆ ಮುಸುಕುಗಳನ್ನು ಧರಿಸಿದ್ದಾರೆ. ಆ ಮನುಷ್ಯ ಪ್ರವಾಹಕ್ಕೆ ಅಗ್ರಪೀಠದಲ್ಲಿ ನಿಂತು ಒಂದು ಬೆಳ್ಳಿಯ ಪೀರನ್ನು ಎರಡು ಕೈಗಳಿಂದ ಹಿಡಿದು ಒಬ್ಬ ವೀರನು ಭೀಮನಂತೆ ನಡೆದುಕೊಂಡು ಹೋದನು. ಇದೆಲ್ಲಾ ನಡೆಯಲು ಅರ್ಥ ನಿಮಿಷಕ್ಕಿಂತ ಕಡಿಮೆ ಸಮಯವೇ ಹಿಡಿಯಿತು.

ಗುಂಪು ಎತ್ತಿಂದೆತ್ತ ಚೆದುರಿ ಹೋಯಿತು. ಕೆಲವರು ಸಾತಾನಿಗಳಿಗೆ ಶಿವಾಚಾರಿ ಗಳಿಗೆ ಯತ್ಕಿಂಚಿತ್ ಕಾಲುಗಳು ಸುಟ್ಟಿದ್ದವು. ಅದನ್ನು ಭಕ್ತಿಯಲೋಪವೆಂದು ಪರಿಗಣಿಸಲಾಯಿತು. ತರುವಾಯ ಶರಭಯ್ಯ ಮನವಾಳ್ಳಯ್ಯರಿಗೆ ರಾಜೀ ಕುದಿರಿತ್ತೆಂದು ಜನಗಳಾಡಿಕೊಂಡರು. ಹೊರಗಡೆಗೆ ಮಾತ್ರ ಯಾವಾಗಲೂ ಗುದ್ದಾಡುತ್ತಿರುವಂತೆ ಕಾಣಿಸಿಕೊಳ್ಳುತ್ತಿದ್ದರು.

ಅದೋ! ನಮ್ಮ ಮನೆಯ ಎದುರಿನಲ್ಲಿ ಆ ಗ್ರಾಮ ಸಾವಿಡಿಯಲ್ಲಿ ನಿಲ್ಲಿಸಿದ ಪೀರು ಈ ಪೀರೇ. ಆ ದಿನದಿಂದ ಪ್ರತಿವರ್ಷವೂ ಆ ಪೀರಿನ ಹಬ್ಬವನ್ನಾಚರಿಸುತ್ತಾರೆ. ಊರಿನವರೆಲ್ಲಾ ಆ ಬಾಲಗೋಪಾಲವಾಗಿ ಶೈವವೈಷ್ಣವ ಭೇದವಿಲ್ಲದೆ ಪೀರುದೇವರಿಗೆ ಹರಕೆ ಹೊರುತ್ತಾರೆ. ತ್ರಿಶೂಲಾಕಾರವಾದ ಕಾರಣ ಆ ಪೀರು ಶಿವಪೀರುವೆಂದು ಶರಭಯ್ಯ ಕರೆಯುತ್ತಾರೆ. ಆ ವ್ಯವಸ್ಥೆ ಯಾವುದೋ ವೆಂಕಯ್ಯನವರೆ ಮಾಡಲು ಸಮರ್ಥರು.

ಶಿವನೂ ವಿಷ್ಣುವೂ ಪೀರುಗಳೇ ಅದಾಗ ಬುದ್ಧನು ಶಿವನಾಗಬಾರದಾ? ಎಂದು ಯಜಮಾನ ಶಾಯಣ್ಣ ಕಥೆಯನ್ನು ಪರಿಸಮಾಪ್ತಿ ಗೊಳಿಸಿದ.

ನಮ್ಮ ಗುರುಗಳು ಈ ಚರಿತ್ರೆಗೆ ಬಹಳ ಆಶ್ಚರ್ಯಪಟ್ಟು ಹೀಗೆಂದರು. “ಹೌದಾ! ಕಲಿಕಾಲದಲ್ಲಿ ಮನುಷ್ಯರು ಮಾತ್ರವಲ್ಲ ದೇವರು ಕೂಡಾ ಸಂಕರಗೊಳ್ಳುತಿದ್ದಾರೆಯೇ!”

“ಅದರಲ್ಲಿ ತಪ್ಪೇನು? ಶಿವನೆಂದರೂ, ವಿಷ್ಣುವೆಂದರೂ, ಪೀರೆಂದರೂ ಬುದ್ಧನೆಂದರೂ ಆ ಪರಮಾತ್ಮನು ಮಾತ್ರ ಒಬ್ಬನೇ ಅಲ್ಲವೇ!” ವೆಂಕಯ್ಯ ಸುಮ್ಮನಿರುತ್ತಾನೆಯೆ? “ಎಲ್ಲಾ ದೇವರೂ ಒಬ್ಬನೇ ಸರೇ!  ಆ ಹೆಣಗಳ್ಳೆನ್ನಾ ಒಂದೆ ಕಡೆ ನಿಲ್ಲಿಸಿ ಎಲ್ಲರೂ ಸೇರಿ ಪೂಜಿಸಿ ಸುಡಬಾರದೇ ಎಂದ.”

ಆಗ ಗುರುಗಳು “ಎಲೇ ಮುಠಾಳಾ ದೇವರನ್ನು ಹೆಣಗಳೆನ್ನುವೆಯಾ? ನೀನು ಬರೀ ಕಿರಸ್ತಾನ- ಇನ್ನೂ ಕಿರಸ್ತಾನರಿಗೆ ದೇವರೆಂದು ಒಬ್ಬನಿದ್ದಾನೆ. ಪೀರ್ರೋ ಕ್ರಾಸೂ ದೆವ್ವವೋ ದೇವನೇ, ಈ ಅಯೋಗ್ಯರಿಗೆ ಮೂಢಭಕ್ತಿಯಾದರೂ ಇದೆ. ನೀನು ಎಲ್ಲ ದೇವರಿಗಳಿಗೂ ಒಂದು ದೊಡ್ಡ ನಾಮ ಹಾಕಿಬಿಟ್ಟಿದ್ದೀ” ಎಂದು ನಕ್ಕರು.

“ನಿಮ್ಮೊಬ್ಬರನ್ನು ಬಿಟ್ಟು ಶಾಸ್ತ್ರಿಗಳೇ!” ಎಂದ ವೆಂಕಯ್ಯ.
“ನಿನ್ನ ಜನ್ಮಕ್ಕೆ ಬೆಲೆಯುಳ್ಳ ಮಾತನಾಡಿದೆಯೋ!” ಎಂದೆನ್ನುತ್ತಾ ನಾನು ಮುಂದೆ ನಡೆದೆ.
*****
ಕನ್ನಡಕ್ಕೆ: ಗುತ್ತಿ (ಜೋಳದರಾಶಿ) ಚಂದ್ರಶೇಖರ ರೆಡ್ಡಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಮನೆಯ ಪುಟ್ಟ ಬೆಕ್ಕು
Next post ಗ್ರಹಣ ಮತ್ತು ಸೂರ್ಯ

ಸಣ್ಣ ಕತೆ

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…