ಚಿತ್ರ: ಕನ್ನಡ.ಒನ್ಇಂಡಿಯ
ಚಿತ್ರ: ಕನ್ನಡ.ಒನ್ಇಂಡಿಯ

ದಿನಾಂಕ : ೨೨-೦೫-೧೯೧೮ ರಂದು ಶ್ರೀ ಬೆಳಗೆರೆ ಚಂದ್ರಶೇಖರ ಶಾಸ್ತ್ರಿ ಮತ್ತು ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾನೆ ಕಿಟ್ಟಪ್ಪ ಮುಂದೊಂದು ದಿನ ಬೆಳಗೆರೆಯ ಜ್ಞಾನದ ಬೆಳಕಾಗುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಬೆಂಗಳೂರಲ್ಲಿ ಓದುತ್ತಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದು, ನಂತರ ೧೯೩೬ ರಲ್ಲಿ ಮಹಾತ್ಮ ಗಾಂಧೀಜಿ ಮೈಸೂರು ಸಂಸ್ಥಾನದ ಅತಿಥಿಯಾಗಿ ನಂದಿಬೆಟ್ಟದಲ್ಲಿ ತಂಗಿದಾಗ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿ, ಗಾಂಧೀಜಿಯಿಂದ ಪ್ರಭಾವಿತರಾದರು. ಮುಂದೆ ಆಚಾರ್ಯ ವಿನೋಬ ಅವರ ಪ್ರಭಾವಕ್ಕೆ ಒಳಗಾಗಿ ಅವರೊಂದಿಗೆ ಹಲವಾರು ತಿಂಗಳಿಂದ ಶಾಸ್ರಿಗಳು ಭೂದಾನದ ಚಳುವಳಿಯಲ್ಲಿ ಭಾಗವಹಿಸಿ ಅದರ ಸಾರ್ಥಕ್ಯವೇನೆಂಬುದನ್ನು ಅರಿತುಕೊಂಡರು. ಭೂದಾನ ಚಳುವಳಿಯಿಂದ ಆಕರ್ಷಿತರಾದ ಶಾಸ್ರಿಗಳು ತಾವು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗ್ರಾಮಗಳಲ್ಲಿಯೂ ಶ್ರಮದಾನವನ್ನು ಅನುಷ್ಠಾನಕ್ಕೆ ತಂದರು. ಅದರ ಫಲವೆಂಬಂತೆ ಚಳ್ಳಕೆರೆ ತಾಲ್ಲೂಕಿನಲ್ಲಿನ ಮೀರಾಸಾಬಿಹಳ್ಳಿಯಲ್ಲಿ ಐದು ಕೊಠಡಿಗಳ ಶಾಲಾ ಕಟ್ಟಡ, ಆಸ್ಪತ್ರೆ ಕಟ್ಟಡ, ಶಿಕ್ಷಕರ ವಸತಿಗೃಹಗಳನ್ನು ಸರ್ಕಾರದ ಹಂಗಿಲ್ಲದೆ ಸ್ಥಳೀಯರ ಸಹಕಾರದಿಂದಲೇ ನಿರ್ಮಿಸಿದ್ದು ಅವರ ಕ್ರಿಯಾಶೀಲತೆ ಸಾಕ್ಷಿ ಎನ್ನಿಸಿದೆ. ಹೆಗ್ಗೆರೆಯಲ್ಲಿ ಶ್ರಮದಾನದ ಮೂಲಕವೇ ಬಯಲು ರಂಗಮಂದಿರ, ಶಿವಾಲಯ, ಊರಿನವರಿಗೆ ರಸ್ತೆ ನಿರ್ಮಾಣವಾಯಿತಲ್ಲದೆ ಬೆಳಗೆರೆ ಪ್ರೌಢಶಾಲೆಯ ಕಟ್ಟಡ ನಿರ್ಮಾಣ ಮತ್ತು ಶಾಲೆಗೆ ನಿವೇಶನ ದಾನಕ್ಕೂ ಅದುವೇ ತಮಗೆ ಪ್ರೇರಣೆ ನೀಡಿತು ಎನ್ನುತಾರೆ ಕೃಷ್ಣಶಾಸ್ತ್ರಿ.

ತಿಪಟೂರಿನ ಅಂಗವಿಕಲ ಕವಿ ಎಂ.ಷಡಕ್ಷರಿ ಬರೆದ ‘ಮೌನ ಸ್ಪಂದನ’ ಮತ್ತು ‘ಆಸ್ಪತ್ರೆಯಲ್ಲಿ ಹತ್ತು ವರ್ಷ’ ಕೃತಿಗಳ ಪ್ರಕಟಣೆಗೆ ನೆರವಾಗಿದ್ದು ಮತ್ತು ಜಾನಪದ ಜಂಗಮ ಡಾII ಎಸ್.ಕೆ. ಕರೀಂಖಾನ್ ಅವರನ್ನು ಬೆಳೆಗೆರೆಗೆ ಕರೆಸಿ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಿದ್ದು ಸ್ಮರಣಾರ್ಹ. ಅಲ್ಲದೆ ಜಿಲ್ಲೆ ಮತ್ತು ತಾಲ್ಲೂಕಿನ ಜಾನಪದ ಸಾಹಿತ್ಯಕ್ಷೇತ್ರ ಮತ್ತು ಕಲಾವಿದರ ಜೊತೆ ಶಾಸ್ತ್ರಿಗಳದು ಅವಿನಾಭಾವ ಸಂಬಂಧ. ವಿದೇಶಿ ಸಂಶೋಧಕರಾದ ಡಿಮೇಟ ಕ್ರಿಸ್ಟೋಫರ್ ಕೆ.ಹಿಲ್, ಪೀಟರ್ ಜೆ ಕ್ಲಾವ್ರಸ್, ಆಂಡ್ರೂಸ್ ಮತ್ತು ಸ್ವದೇಶಿ ಸಂಶೋಧಕರಾದ ತೀ.ನಂ. ಶಂಕರನಾರಾಯಣ, ಆರ್. ಶೇಷಶಾಸ್ತ್ರಿ , ಡಾ|| ಕೃಷ್ಣಮೂರ್ತಿ ಹನೂರು, ಎಂ.ಜಿ.ಈಶ್ವರಪ್ಪ ಮುಂತಾದವರ ಜನಪದ ಸಂಶೋಧನೆಗೆ ಸಂಪನ್ಮೂಲ ವ್ಯಕ್ತಿಯಾಗಿ ನೆರವಾದದ್ದು ಜಾನಪದ ಸಾಹಿತ್ಯದ ಮೇಲೆ ಅವರಿಗೆ ಇರುವ ಒಲವಿನ ದ್ಯೊತಕ. ಚಳ್ಳಕೆರೆ ತಾಲ್ಲೂಕ್ ಯಲಗಟ್ಟಿ ಗೊಲ್ಲರಹಟ್ಟಿಯು ಸಿರಿಯಜ್ಜಿಯನ್ನು ಜಾನಪದ ಕ್ಷೇತ್ರಕ್ಕೆ ಪರಿಚಯಿಸಿದ್ದು, ಆಕೆಗೆ ಜಾನಪದ ಕಂಪ್ಯೂಟರ್ ಎಂಬ ಬಿರುದು ಬರಲು, ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾದುದರ ಹಿನ್ನೆಲೆಯಲ್ಲಿ ಶಾಸ್ತ್ರಿಗಳ ಪರಿಶ್ರಮವಿದೆ. ಆದ್ಯಾತ್ಮಿಕ ಕ್ಷೇತ್ರ ಅವರ ಮತ್ತೊಂದು ನೆಚ್ಚಿನ ಕ್ಷೇತ್ರ. ತಿರುವಣ್ಣಾಮಲೈನ ರಮಣ ಮಹರ್ಷಿಗಳು, ಹೃಷಿಕೇಶದ ಸ್ವಾಮಿ ಶಿವಾನಂದರು, ಮುಕುಂದೂರು ಮಹಾಸ್ವಾಮಿಗಳು ಮಲಾಡಿಹಳ್ಳಿ ಶ್ರೀಗಳು ಜಿಡ್ಡು ಕೃಷ್ಣಮೂರ್ತಿ ಇಂಥವರೊಂದಿಗೆ ಒಡನಾಡಿದ ಶಾಸ್ರಿಗಳು ರಸಾನುಭವದ ಗಣಿಯಾಗಿದ್ದಾರೆ.

ಶಾಸ್ತ್ರಿಗಳು ರಚಿಸಿದ ‘ಹಳ್ಳಿಚಿತ್ರ’ ನಾಟಕವು ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರ ಪಡೆದಿದೆ. ಹಳ್ಳಿಮೇಷ್ಟ್ರು, ಹಿಂಗು ಮಾಡಿ ನೋಡ್ರಿ, ಪಾಶುಪತಾಸ್ತ್ರ, ಆಕಸ್ಮಿಕ ಇತ್ಯಾದಿ ಹತ್ತಕ್ಕೂ ಹೆಚ್ಚು ನಾಟಕಗಳು, ತುಂಬಿ ಕವನ ಸಂಕಲನ, ಮಾತು ನನ್ನೋವು ಎಲ್ಡೇ, ಇದು ಎಂಥಾ ಜೀವನವಯ್ಯಾ ಸಂಪಾದಿತ ಕೃತಿಗಳಾಗಿವೆ. ಅನೇಕ ಅನುವಾದಿತ ಕೃತಿಗಳಲ್ಲದೆ ಅವರ ಲೇಖನಿಯಿಂದ ಮೂಡಿಬಂದ ಯೇಗ್ದಾಗೆಲ್ಲಾ ಐತೆ, ಸಾಹಿತಿಗಳ ಸ್ಮೃತಿ ಸಾಹಿತ್ಯಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿಯಬಲ್ಲಂತವು. ಎರಡುಬಾರಿ ಭಾರತ ಪರ್ಯಟನದ ಫಲವಾಗಿ ಅನುಭವ ಲೇಖನಗಳು ಅಂತೆಯೇ ಆಗಾಗ ನಾಡಿನ ಎಲ್ಲಾ ಪತ್ರಿಕೆಗಳಿಗೆ ಇಳಿವಯಸ್ಸಿನಲ್ಲೂ ಬರೆದ ಲವಲವಿಕೆ ಅದರಲ್ಲಿದೆ. ಚಳ್ಳಕೆರೆಯಲ್ಲಿ ನಡೆದ ನಾಲ್ಕನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಿಲ್ಲೆಯ ಜನತೆ ಆರಿಸಿ ಆದರಿಸಿ ಗೌರವಿಸಿದೆ.

ಬೆಳಗೆರೆಯ ನಾರಾಯಣಪುರದಲ್ಲಿ ಶ್ರೀ ಶಾರದಾ ವಿದ್ಯಾ ಸಂಸ್ಥೆ, ಅಣ್ಣ ಸೀತಾರಾಮ ಶಾಸ್ರಿಗಳ ಹೆಸರಿನ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮತ್ತು ವೃತ್ತಿಶಿಕ್ಷಣ ಕಾಲೇಜು ಸ್ಥಾಪನೆ ಹಾಗೂ ಶಾಲೆಗೆ ನಿವೇಶನವನ್ನು ನೀಡಿ ಶ್ರಮದಾನದಿಂದ ಕಟ್ಟಡ ನಿರ್ಮಿಸಿರುವುದು, ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ, ಮೇನೇಜಿಂಗ್‌ ಟ್ರಸ್ಟಿಯಾಗಿ ಕಳೆದ ಮೂವತ್ತು ವರ್ಷಗಳಿಂದ ಅವುಗಳ ಅಭಿವೃದ್ಧಿಗಾಗಿ ದುಡಿಯುತ್ತಿರುವ ನಿಸ್ವಾರ್ಥ ಜೀವ, ಬಡ ವಿದ್ಯಾರ್ಥಿಗಳಿಗಾಗಿ ವೇದಾವತಿ ವಿದ್ಯಾರ್ಥಿನಿಲಯ ಆರಂಭಿಸಿ ಯಾವುದೇ ಅನುದಾನವಿಲ್ಲದೆ ನಡೆಸಿಕೊಂಡು ಬರುತ್ತಿರುವುದು ಶಾಸ್ರಿಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಎನಿಸಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ, ಸಮಾಜ ಸುಧಾರಕರೂ ಆದ ಶಾಸ್ತ್ರಿ ಸದಾ ಶ್ವೇತ ವಸ್ತ್ರಧಾರಿಯಾಗಿ ತಲೆಗೆ ವಿಶೇಷ ಮಾದರಿಯಲ್ಲಿ ಬಿಳಿವಸ್ತ್ರವನ್ನು ಸುತ್ತಿಕೊಂಡು ಪಾದರಸದಂತೆ ಓಡಾಡುವ ಶಾಸ್ರಿಗಳಿಗೆ ಎರಡು ಸಲ ಹೃದಯ ಶಸ್ತ್ರಚಿಕಿತ್ಸೆಯಾಗಿದೆ ಅದೂ ಎಂಭತ್ತನೇ ವಯಸ್ಸಿನಲ್ಲಿ ಎಂದರೆ ನಂಬುವುದು ಕಷ್ಟವೆ. ನೋವಿನಲ್ಲೂ ನಲಿವು ಕಾಣುವ ನಿರಾಶೆಯಲ್ಲೂ ಹಸನ್ಮುಖಿಗಳಾಗಿ ಅಭಿವೃದ್ಧಿಯತ್ತ ಆಶಾಸೌಧ ಕಟ್ಟಲೆತ್ನಿಸುವ, ಕಿರಿಯ ಸಾಹಿತಿಗಳನ್ನು ಪ್ರೋತ್ಸಾಹಿಸುವ ಹಿರಿಯರನ್ನು ಗೌರವಿಸುವ ನಿಗರ್ವಿಗಳಾದ ಶಾಸ್ತ್ರಿಗಳು ಜಾತಿಮತ ಪಂಥಗಳನ್ನು ಮೀರಿ ಬೆಳೆದ ನಿಷ್ಕಾಮ ಕರ್ಮಯೋಗಿ, ಬೆಳೆಗೆರೆಯ ಜ್ಞಾನದ ಬೆಳಕಾದ ಅವರು ನಮ್ಮವರು ನಮ್ಮ ಜಿಲ್ಲೆಯವರು ಎಂಬುದು ಅತ್ಯಂತ ಅಭಿಮಾನದ ಸಂಗತಿ.