ನಿಂತವರು

ನಿಂತವರು

ಇಸರಪ್ಪನನ್ನು ಅಯ್ಯಾ ಅವರು ಬರಹೇಳಿದ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಆ ಪುಟ್ಟ ಊರಲ್ಲಿ ಬಹಳ ಬೇಗ ಎಲ್ಲರಿಗೂ ತಿಳಿದು ಹೋಯಿತು. ನಾಲ್ಕು ದಿನಾ ರಜಾ ಹಾಕಿ ಊರಿಗೆ ಹೋಗಿ ಆಗ ತಾನೆ ನೇರವಾಗಿ ಕಾಲೇಜಿಗೆ ಬಂದ ಮಲ್ಲಪ್ಪನಿಗೆ ಅದನ್ನು ಹೇಳಿದ್ದು ಸೋಶಿಯಾಲಜಿಯ ಸಾವಿತ್ರಮ್ಮ. ಅದರೊಂದಿಗೆ ಒಂದು ಖಚಿತವಾದ ಮಾತು ಕೂಡಾ. ಸಸ್ಪೆಂಡ್‌ ಅಲ್ಲವಂತೆ. ಒದ್ದು ಓಡಿಸೇ ಬಿಡ್ತಾರಂತೆ.

ಮಲ್ಲಪ್ಪನಿಗೆ ಗರಂ ಆಯ್ತು. ಆರಾಮವಾಗಿ ನಾಲ್ಕು ದಿನ ಹೆಂಡ್ತಿ ಮಕ್ಕಳ ಜತೆ ಕಳೆದು ಬಂದಿದ್ದವನಿಗೆ ಇಂಥದ್ದೊಂದು ಸುದ್ದಿ ಕೇಳಬೇಕಾಗಿ ಬರಬಹುದು ಅನ್ನುವ ಕಲ್ಪನೆ ಇರಲಿಲ್ಲ. ಅಯ್ಯ ಅವರ ಕಾಲೇಜಿನಲ್ಲಿ ಕೆಲ್ಸಾ ಸಿಕ್ಕಿ ಹತ್ತು ವರ್ಷ ಆಗಿದ್ರೂ ಅವ ಹೆಂಡ್ತಿ ಮಕ್ಕಳನ್ನು ಕರೆಸಿ ಕೊಂಡಿರಲಿಲ್ಲ. ಅಯ್ಯ ಅವರೇ ಒಮ್ಮೆ ಕೇಳಿದ್ದಕ್ಕೆ ನಮ್ಮೆಂಡ್ರಿಗೆ ಮೈಗುಸಾರಿಲ್ಲ. ಸ್ವಂತ ಊರು ಬಿಟ್ರೆ ಬೇರೆಲ್ಲೂ ಸೇರ್‍ಕೆ ಯಾಗಲ್ದು ಎಂದು ಬೂಸಿ ಬಿಟ್ಟು ತಪ್ಪಿಸಿಕೊಂಡಿದ್ದ. ನಿಮ್ಮೆಂಡ್ರಿಗೂ ಏನಾರ್‌ ಮಾಡಿ ಕೆಲ್ಸ ಕೊಡಿಸಾನ. ಕರ್‍ಕೊಂಬನ್ನಿ ಎಂದು ಅಯ್ಯವ್ರು ಒತ್ತಾಯ ಮಾಡಿದಾಗ ಅವಳನ್ನೇ ಒಂದು ಮಾತು ಕೇಳಿ ನೋಡ್ತೀನಿ ಎಂದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ. ರಜಾ ಸಿಕ್ಕಿದಾಗಲೆಲ್ಲಾ ಊರಿಗೆ ಹೋಗಿ ಹಾಯಾಗಿ ಸಮಯ ಕಳೆದು ಬರುತ್ತಿದ್ದ. ಇವತ್ತು ಮಾತ್ರ ಏನೇನೆಲ್ಲಾ ಬದಲಾವಣೆಗಳಾಗುತ್ತಿವೆ. ಒಳ್ಳೇದಕ್ಕೋ, ಕೆಟ್ಟದಕ್ಕೋ?

ಯೋಚಿಸುತ್ತಾ ಸ್ಟಾಫ್‌ ರೂಮಿಗೆ ಬಂದ. ಕನ್ನಡದ ನಾಗಣ್ಣ ಸಿಗರೇಟು ಹಚ್ಚಿ ಗಾಢವಾಗಿ ಚಿಂತಿಸುತ್ತಾ ಕೂತಿದ್ದ. ಅವನನ್ನು ನೋಡಿ ಮಲ್ಲಪ್ಪ ಗೆಲುವಾದ. ನಾಗಣ್ಣನ ಹತ್ತಿರ ಬಂದು ಕುರ್ಚಿಯಲ್ಲಿ ಕೂತ. ಏನ್ಮಾಡೋದೀಗ ನಾಗಣ್ಣ? ಇಸರಪ್ಪನಿಗೆ ಇಂಗಾಯ್ತಲ್ಲಾ ಎಂದು ಕೇಳಿದ.

ನಾಗಣ್ಣ ಫೋಸ್‌ ಬದಲಾಯಿಸಿದ. ಒಂದು ದಮ್ಮು ಎಳ್ಕೂಂಡು ನಿರಾಳವಾದ. ಆಯ್‌…. ಅದ್ಕೇನ್ಮಾಡೋದೀಗ? ಈ ಬಡ್ಡಿ ಮಗಂಗೆ ತೆವಲು ಹೆಚ್ಚಾತು. ಆ ಪುಳ್ಚಾರು ಮುಂಡೆಗೆ ಇವನ್ಯಾಕೆ ಹೋಗಿ ಗಂಟು ಬೀಳ್ಬೇಕಾಗಿತ್ತು?

ಮಲ್ಲಪ್ಪ ದಂಗಾದ. ಕ್ರಾಂತಿ ಕ್ರಾಂತಿ ಅಂತ ಯಾವತ್ತೂ ಕೊರೆಯುವ, ಮಾತು ಮಾತಿಗೆ ಬಸವಣ್ಣನನ್ನು ಕೋಟ್‌ ಮಾಡುವ ನಾಗಣ್ಣ ಇದ್ಯಾಕೆ ಹೀಗೆ ಮಾತಾಡುತ್ತಿದ್ದಾನೆ? ಯಾಕೋ ಹೊತ್ತು ಸರಿಯಿಲ್ಲ ಎನಿಸಿ ಧ್ವನಿಯನ್ನು ಮತ್ತಷ್ಟು ತಗ್ಗಿಸಿ, ಏನ್‌ ನಾಗಣ್ಣ……… ನೀನು ಇಂಗನ್ನೋದು ಎಂದ.

ನಾಗಣ್ಣ ಗತ್ತಿನಲ್ಲೇ ಉತ್ತರಿಸಿದ. ನಿಜ ಕಣಯಯ್ಯ…… ನಾವನ್ನೋದೆನಲ್ಲಾ ಮಾಡೋಕಾಗುತ್ತಾ? ಈ ಐಡಿಯಲ್ಸು ಬೇರೇನೇ…… ಬದುಕು ಬೇರೆನೇ. ಅಯ್ಯ ಅವ್ರ ಇನ್‌ಸ್ಟಿಟ್ಯೂಟಾಗಿದ್ಕೂಂಡು ಅವ್ರುದ್ದೆ ಜಾತಿ ಉಡ್ಗೀ ಮೇಲೆ ಕಣ್ಣಾಕೋದ ಆ ದರ್ವೇಸಿ?

ಮಲ್ಲಪ್ಪ ಮತ್ತೂ ಮೆತ್ತಗಾದ. ಪ್ರೀತಿ ಜಾತೀನ ನೋಡುತ್ತಾ ನಾಗಣ್ಣಾ? ಎಲ್ರೂ ಇಂಟರ್‌ಕ್ಯಾಸ್ಟು ಮ್ಯಾರೇಜಾದ್ರೇನೇ ಈ ದರಿದ್ರ ದೇಸ ಉದ್ಧಾರಾಗೋದು ಅಂದೋನು ಈಗ ಇಂಗೆ ಏಳ್‌ಬೋದಾ?

ನಾಗಣ್ಣ ಸ್ವಲ್ಪ ಹೊತ್ತು ಸುಮ್ಮನಾದ. ಆಮೇಲೆ ನಿಧಾನವಾಗಿ ಹೇಳಿದ. ನಾಯೋಳಿದ್ದೆಲ್ಲಾ ನಿಜ ಕನಾ. ಆದ್ರೂನುವೇ ಅಯ್ಯ ಅವರ್‍ನ ಎದ್ರು ಹಾಕೊಳ್ಳೋದು ತಪ್ಪು. ಇಸರಪ್ಪ ತಪ್ಪು ದಂಡ ಕಟ್ಟಿ ಅವಳನ ಬುಟ್ಟ್ ಬುಡೋದೆ ಸರಿ. ಹೋಗೀ ಹೋಗೀ ಅದ್ಯಾಕೆ ಇವುನು ಆಕಿಗೆ ಗಂಟುಬಿದ್ದನೋ? ಆ ಎಲುಬುಗೂಡನ್ನ ಮದ್ವಿಯಾದ್ರೆ ಇಸರಪ್ಪ ನಾಲ್ಕೇ ದಿನ್‌ಕೆ ಇನ್ನೊಬ್ಬಳನ್ನ ನೋಡ್ಕೋಬೇಕಾಗುತ್ತೆ ಅಷ್ಟೆ. ಈಗ ನಾಗಣ್ಣ ಗಹಗಹಿಸಿ ನಕ್ಕ.

ಮಲ್ಲಪ್ಪ ಅವನನ್ನೇ ಸ್ವಲ್ಪ ಹೊತ್ತು ನೋಡಿದ. ನಾಗಣ್ಣ ಮತ್ತೊಂದು ಸಿಗರೇಟು ಹಚ್ಚಿ ಆರಾಮಾವಾಗಿ ಹೊಗೆ ಉಗುಳತೊಡಗಿದ. ಮಲ್ಲಪ್ಪನಿಗೆ ಇನ್ನೇನು ಮಾಡುವುದು ಎಂದು ಹೊಳೆಯಲಿಲ್ಲ. ರೂಮಿಗೆ ಹೋಗಿಬಿಡಲೇ ಅಂದ್ಕೊಂಡು ಹೊರಬಂದ. ಸ್ಟಾಫಿಗೆ ನೋಟೀಸ್‌ ತರುತ್ತಿದ್ದ ಪ್ಯೂನು ಮಲ್ಲಪ್ಪನನ್ನು ಕಂಡು ಅಲ್ಲೇ ನೋಟೀಸು ತೋರಿಸಿದ. ಅಹಿತಕರ ಘಟನೆಗಳು ಸಂಭವಿಸಬಹುದಾದುದರಿಂದ ಕಾಲೇಜಿಗೆ ಮೂರು ದಿನ ರಜಾ ಸಾರಲಾಗಿದೆ ಎಂದಿದ್ದ ನೋಟೀಸು ನೋಡಿ ದಂಗಾದ. ಈ ಪ್ರಿನ್ಸಿಪಾಲು ಏನಾದ್ರೂ ಮಸಲತ್ತು ಮಾಡುತ್ತಿದ್ದಾನೇನೋ ಅನಿಸಿ ಛೇಂಬರಿಗೆ ಹೋಗಿ ಕೇಳಿಯೇ ಬಿಡೋಣವೆಂದು ಹೆಜ್ಜೆ ಹಾಕಿದ. ಬಾತ್‌ರೂಮಿಗೆ ಹೋಗಲೂ ಅಯ್ಯ ಅವರ ಪರ್ಮಿಶನ್‌ ಕೇಳುವ ಪ್ರಿನ್ಸಿಪಾಲು ಅಯ್ಯ ಅವರು ಹೇಳದೆ ಮೂರು ದಿನ ರಜಾ ಕೊಡಲು ಸಾಧ್ಯವೇ ಇಲ್ಲ ಎನ್ನುವುದು ಹೊಳೆದು ಹೆಜ್ಜೆ ಬದಲಿಸಿದ. ವಾಪಸ್‌ ಊರಿಗೆ ಹೋಗಿ ಬಿಡಲೇ ಅಂದು ಕೊಂಡ. ಇಲ್ಲ ಇಲ್ಲಿದ್ದುಕೊಂಡೇ ಏನ್ನಾನದರೂ ಮಾಡಬೇಕು. ಇಸರಪ್ಪನನ್ನು ಅಯ್ಯ ಅವರಿಂದ ರಕ್ಷಿಸಬೇಕು ಎನ್ನುವ ಭಾವನೆ ತೀವ್ರವಾಗಿ ಕಾಲೇಜಿನಿಂದ ಹೊರಬಿದ್ದ.

ಎದುರಿಗೆ ಸ್ವಲ್ಪ ದೂರದಲ್ಲಿ ಕಂಡದ್ದು ಧರ್ಮ ಸಂರಕ್ಷಣಾ ಪರಿಷತ್ತಿನ ಆಫೀಸು. ಅಲ್ಲಿಗೆ ನುಗ್ಗಿದ. ಶೇಷಾದ್ರಿ, ರಾಮಣ್ಣ, ಮೂರ್ತಿ, ವೆಂಕಟಾದ್ರಿ, ಅನಂತ, ರಾಮಸ್ವಾಮಿ ಬಹಳ ಗಟ್ಟಿಯಾಗಿ ಅದೇನನ್ನೊ ಚರ್ಚಿಸುತ್ತಿದ್ದವರು ಇವನನ್ನು ನೋಡಿ ಮಾತು ನಿಲ್ಲಿಸಿದರು. ಅವರ ಮುಖ ಹುಳ್ಳಗಾಯಿತು. ಮಲ್ಲಪ್ಪ ಅದನ್ನು ಗಮನಿಸಿದ. ಬೇರೇನನ್ನೂ ಹೇಳದೆ ನೇರವಾಗಿ ವಿಷಯಕ್ಕೆ ಬಂದ. ಇಸರಪ್ಪ ಕೆಲ್ಸ ಕಳ್ಕೋತಾನಂತೆ. ನೀವೆಲ್ಲಾ ಏನ್ಮಾಡ್ಬೇಕೂಂತಿದ್ದೀರಿ?

ಒಂದು ಕ್ಷಣದ ಮೌನದ ಬಳಿಕ ಅವರು ಮುಖ ಮುಖ ನೋಡಿಕೊಂಡರು. ಮತ್ತೆ ಶೇಷಾದ್ರಿ ನಿರಾಳವಾದ ದನಿಯಲ್ಲಿ ಹೇಳಿದ. ಅವನ್‌ ಕರ್ಮ. ಅವನ ಹಣೇಲಿ ಹಂಗಂತ ಬರ್‌ದಿದ್ರೆ ನಾವೇನ್‌ ಮಾಡೋಕಾಗತ್ತೆ. ಅನುಬೋಸ್ತಾನೆ.

ಉಕ್ಕಿಬಂದ ಸಿಟ್ಟನ್ನು ಮಲ್ಲಪ್ಪ ಕಷ್ಟಪಟ್ಟು ನಿಯಂತ್ರಿಸಿಕೊಂಡು ಕೇಳಿದ. ಅಂದ್ರೆ ಇಸರಪ್ಪ ಮಾಡಿದ್ದು ತಪ್ಪುಂತೀರಾ ?

ಈಗ ರಾಮಸ್ವಾಮಿ ಉತ್ತರಿಸಿದ. ಇದನ್ನೂ ಬಿಡ್ಸಿ ಹೇಳ್ಬೇಕೇನಯ್ಯ? ಹೋಗಿ ಕಣೀ ಕೇಳು. ವರ್ಣ ಸಂಕರ ಮಾಡೋದು ಮಹಾಪಾಪ ಕಣಯ್ಯ.

ಮಲ್ಲಪ್ಪ ದಂಗಾದ. ಈ ಮಂದಿಗಳು ಆಗಾಗ ಸಭೆ ನಡೆಸಿ ಎತ್ತರೆತ್ತರಕ್ಕೆ ಪತಾಕೆ ಕಟ್ಟಿಸಿ, ನಾವೆಲ್ಲಾ ಒಂದು ಎಂದು ಹೇಳುವುದು ನೆನಪಾಯಿತು. ಆದರೆ ಇಂಥ ಸಂದರ್ಭದಲ್ಲಿ ಹೀಗಂತಾರಲ್ಲಾ ಕೇಳಿಯೇ ಬಿಟ್ಟ. ನಾವೆಲ್ಲರೂ ಒಂದೇ ಅನ್ನೋರು ನೀವೇಯಾ. ವರ್ಣ ಸಂಕರ ಆಗುತ್ತೆ ಅನ್ನೋರೂ ನೀವೇಯಾ. ಇದ್ರಲ್ಲಿ ಯಾವ್ದು ಸರಿ? ನಾವೆಲ್ಲಾ ಒಂದೇ ಅನ್ನೋದಾದ್ರೆ ವರ್ಣಸಂಕರ ಎಂಗಾಗತ್ತೆ?

ವೆಂಕಟಪ್ಪ ಗಹಗಹಿಸಿ ನಕ್ಕ. ಪೆಕ್ರು ಮುಂಡೇದು ಕಣಯಯ್ಯ ನೀನು. ಸ್ಮೃತಿ ಓದಿದ್ರೆ ನೀನು ಹಿಂಗನ್ನುತಿರ್‍ಲಿಲ್ಲ. ನಾವೆಲ್ಲರೂ ಯಾವತ್ತೂ ಒಂದೇ. ಆ ತುರುಕ್ರೋರು ಈ ದೇಸಕ್ಕೆ ಬಂದೇ ನಾವೆಲ್ಲಾ ಬೇರೆಯಾಗಿರೋದು. ನಾವು ಪುನಾ ಒಂದಾಗ್ಬೇಕು. ಅದ್ಕೇ ಸಾಮೂಹಿಕ ಪೂಜೆ ಮಾಡ್ಸೋದು. ಅಡ್ಡಪಲ್ಲಕ್ಕಿ ಹೊರೋದು, ಪಾದ ಪೂಜೆ ಮಾಡಿ ತೀರ್ಥ ಸೇವೆನೆ ಮಾಡೋದು, ಪತಾಕೆ ಹಾರ್‍ಸೋದು. ಹಂಗಂತ ಜಾತಿ ಬಿಟ್ಟು ಮದ್ವೆ ಆಗೋದುಂಟೇನಯ್ಯಾ? ಗೀತೆ ಓದಿದ್ದೀಯಾ? ನಾಲ್ಕು ವರ್ಣಗಳನ್ನು ತಾನೇ ಸೃಷ್ಟಿಸಿದೆ ಅಂತ ಕೃಷ್ಣ ಏಳಿದ್ದಾನೆ. ಅವನ್ಯಾಕೆ ಒಂದೇ ವರ್ಣ ಸೃಷ್ಟಿಸಿಲ್ಲ? ಅಂದ್ರೆ ನಾಲ್ಕು ವರ್ಣಗಳೂ ಬೇರೆ ಬೇರೆಯಾಗೇ ಉಳೀಬೇಕೂಂತಾನೇ ಭಗವಂತನ ಸಂಕಲ್ಪ. ಈಗ ನೋಡು ಇಸರಪ್ಪ ಎಲ್ಲಾದ್ರೂ ಅವಳ್ನೇ ಮದ್ವೆಯಾದ್ರೆ ಬ್ರಹ್ಮಶಾಪ. ವರ್ಣಸಂಕರಂ ಮಹಾಪಾಪಂ ಅಂತ ಏಳ್ತಾರೆ. ಈ ಬಡ್ಡೀ ಮಗ ನರಕಕ್ಕೆ ಓಯ್ತನೆ. ಅವನ ಕುಲಸ್ಥರಿಗೆ ಏಳೇಳು ಜನ್ಮಕ್ಕೂ ಪಾಪ ಅಂಟಿಕೊಳ್ಳುತ್ತೆ. ಓಗ್ಹೋಗು. ಅಯ್ಯ ಅವ್ರಿಗೆ ತೆಲಿ ಇಲ್ಲಾಂದ್ಕೂಡಿದ್ದೀಯಾ? ಅವ್ರು ಮಾಡ್ತಿರೋದೇ ಸರಿ.

ಮಲ್ಲಪ್ಪನಿಗೆ ಮತ್ತೆ ಅಲ್ಲಿ ನಿಲ್ಲಲಾಗಲಿಲ್ಲ. ಅಲ್ಲಿಂದ ಹೊರಬಿದ್ದ. ಉದ್ದಕ್ಕೆ ಬಿದ್ದ ಬೀದಿಯನ್ನು ನೋಡಿದ. ಎಲ್ಲಿಗೆ ಹೋಗುವುದು? ಕಾಲೇಜಿಗೆ ವಾಪಾಸಾಗೋಣವೇ ಅನ್ನಿಸಿತು. ಬೇಡ. ಆ ವಟಗುಟ್ಟುವ ಸೋಶಿಯಾಲಜಿ ಸಾವಿತ್ರಮ್ಮನ ಹತ್ತಿರ ಕೂತುಕೊಂಡರೆ ಈಗ ಹುಚ್ಚೇ ಹಿಡಿಯುತ್ತದೆ ಅಂದುಕೊಂಡು ರೂಮಿನತ್ತ ಕಾಲೆಳೆದ.

ಹೋಗುತ್ತಿರುವಂತೆ ಅವನಿಗೆ ಪಕ್ಕನೆ ನೆನಪಾದದ್ದು ಪೋಲೀಸು ಸ್ಟೇಶನ್ನು. ಈಗ ದಿಕ್ಕು ಬದಲಿಸಿ ಸ್ಟೇಶನ್‌ ಒಳಹೊಕ್ಕ. ಎಸ್ಸೈ ಸ್ಟೇಶನ್‌ನಲ್ಲೇ ಇದ್ದ. ಮಲ್ಲಪ್ಪನನ್ನು ನೋಡಿ ಏನ್ರೀ ಮೇಸ್ಟ್ರೇ, ಕಾಲೇಜಿಗೆ ಐದು ಪೀಸಿಗಳನ್ನು ಕಳಿಸಿದ್ದೀನಿ. ಎಡ್ಕಕ್ವಾರ್ಟರ್ಸಿಗೆ ವಯರ್‌ಲೆಸ್ಸು ಮೆಸ್ಸೇಜು ಓಗೈತೆ. ರಿಸರ್ವು ಬರ್ಬೋದು. ಪ್ರಿನ್ಸಿಪಾಲೇ ಫೋನು ಮಾಡಿದ್ರಲ್ಲಾ? ನೀವ್ಯಾಕ್‌ ಬಂದ್ರಿ? ಅಂದ.

ಆತನ ಎದುರಿದ್ದ ಕುರ್ಚಿಯಲ್ಲಿ ಕೂರುತ್ತಾ ಮಲ್ಲಪ್ಪ ಹೇಳಿದ. ಅದ್ಕಲ್ಲ ಸಾ. ಇಸರಪ್ಪನ್ನ ಕೆಲ್ಸದಿಂದ್ಲೇ ತೆಗೀಬೋದು ಅಂತ ಆಡ್ಕೊಂತಿದ್ದಾರೆ. ಏನಾರ ಮಾಡೋಕಾಗೊಲ್ವ ಸಾ….?

ಎಸ್ಸೈ ನಕ್ಕು ಬಿಟ್ಟ. ಏನ್ರಿ ಮಲ್ಲಪೊನೋರೇ ಇದೇನ್‌ ಏಳ್ತಿದ್ರಿ ನೀವು? ಇಸರಪ್ಪಂಗೆ ಅವುನ್‌ ಜಾತಿ ಎಣ್ಣು ಎಲ್ಲೂ ಸಿಗಂಗಿಲ್ಲೇನು? ಅವನವ್ಪನ್‌… ತಥ್‌!! ಪುಳ್ಚಾರಲ್ಲಿ ಎಲುಬು ಬಿಟ್ರೆ ಇನ್ನೇನಿದೇಂತ ಆ ದರವೇಶಿ ಈ ಚಿನಾಲಿ ರಂಭೆ ಹಿಂದ್‌ ಬಿದ್ದ ಇವುನ? ನೀವಾರು ಒಸಿ ಏಳ್‌ಬಾರ್‌ದೇನ್ರಿ?

ಮಲ್ಲಪ್ಪನಿಗೆ ಒಂದು ಕ್ಷಣ ಏನುತ್ತರಿಸಬೇಕೆಂದು ಗೊತ್ತಾಗಲಿಲ್ಲ. ಈ ಮಂದಿ ಗಳಿಗೆ ಪ್ರೀತಿ, ಪ್ರೇಮದ ಬಗ್ಗೆ ಹೇಗೆ ಹೇಳಬೇಕೆಂದು ತಿಳಿಯದೆ ಪೇಚಾಡಿಕೊಂಡ. ಆಮೇಲೆ ಮೆಲುದನಿಯಲ್ಲಿ ಹೇಳಿದ. ಜಾತಿ ಅನ್ನೋದು ನಾವೇ ಮಾಡಿ ಕೊಂಡದ್ದಲ್ವಾ ಸಾ? ಪ್ರೀತಿ ಮಾತ್ರ ದೇವ್ರು ಕೊಟ್ಟಿದ್ದು. ಇಸರಪ್ಪ ಆಕೀನ ತುಂಬಾ ಪ್ರೀತಿಸ್ತಿದ್ದ ಸಾ. ಅವ್ಳೂ ಅಂಗೆ ಸಾ. ಇಸರಪ್ಪ ಅಂದ್ರೆ ಜೀವ ಬಿಡೋಳು. ನೀವು ಮನ್ಸು ಮಾಡಿದ್ರೆ ಇಲ್ಲೇ ಮದ್ವೇನೂ ಮಾಡ್ಬೋದು. ನಿಮ್ಗೂ ಎಸ್ರು ಬರತ್ತೆ. ಅವುನ ಕೆಲ್ಸಾನೂ ಉಳಿಯುತ್ತೆ. ಅಲ್ದೇ ಅವರಿಬ್ರೂ ಯಾವತ್ತೋ ಮೆಜಾರಿಟಿಗೆ ಬಂದಿರೋರು ಸಾ.

ಈಗ ಎಸ್ಸೈ ಸೀರಿಯಸ್ಸಾದ. ಇದು ಲಾ ಪ್ರಾಬ್ಲೆಮ್ಮು ಅಲ್ಲಾ ಕಂಡ್ರಿ, ಆರ್ಡರ್‌ ಪ್ರಾಬ್ಲೆಮ್ಮು. ನಾನೇ ಮದ್ವಿ ಮಾಡಿಸ್ಬುಟ್ರೆ ಅವ್ನ ಕೆಲ್ಸ ಉಳಿಯುತ್ತೆ. ನಂದು? ನಂದು ಹೋಗತ್ತೆ. ನಂ ಸೀಯೆಮ್ಮೆ ಆವಗಾವಾಗ ಇಲ್ಲಿಗೆ ಬರ್ತಿರ್ತಾನೆ. ಈ ಅಯ್ಯಾ ಅವರ ಕಾಲಿಗೆ ಬೀಳ್ತಾನೆ. ಇನ್ನು ನಾನು ಅಯ್ಯಾ ಅವ್ರ ಎದ್ರು ನಿಲ್ಲೋಕಾಗುತ್ತೇನ್ರೀ?

ಮಲ್ಲಪ್ಪನಿಗೆ ಏನೂ ಉತ್ತರ ಹೊಳೆಯಲಿಲ್ಲ. ಅಯ್ಯ ಅವರ ಬೇರು ಎಷ್ಟು ಆಳ ಎಂದುಕೊಳ್ಳುತ್ತಾ ಹತಾಶನಾದ. ಅವನಿನ್ನೂ ಏಳದ್ದನ್ನು ಕಂಡು ಎಸ್ಸೈ ಜಬರದಸ್ತು ಮಾಡಿದ. ನೀವೆಲ್ಲಾ ನಾಲಾಯಕ್ಕು ಮಂದಿ ಕಂಡ್ರಿ. ಅದೇನೇನೋ ಓದ್ಕೂಂಡು ಅದೇನೇನೋ ಮಾಡ್ಕೂಂಡು ನಂ ತಲಿಗೇ ತಂದಾಕ್ತೀರಾ? ಈ ಸಣ್ಣ ಸ್ಟೇಶನ್ನಲ್ಲಿ ಇರೋದೇ ಆರು ಮಂದಿ ಪೀಸಿಗಳು. ಐದೂ ಜನಾನೂ ಕಾಲೇಜಿಗೆ ಓದ್ರೆ ಇಲ್ಲಿ ನಾನು ಹ್ಯಾಗ್ರಿ ಏಗ್ಬೇಕು? ನಿಮ್ಗೆ ಈ ಲೋಕದ ರೀತಿ ರಿವಾಜು ಏನೂ ಗೊತ್ತಿಲ್ಲ. ಬರೀ ಪುಸ್ತಕದ ಬದೆನೇಕಾಯಿ ಮಾತ್ರ ನಿಮ್ಗೊತ್ತಿರೋದು. ಓಗ್ರಿ….. ಓಗ್ರಿ…. ನಿಂ ಕೆಲ್ಸಾ ನೋಡೋಗ್ರಿ.

ಮಲ್ಲಪ್ಪ ತಕ್ಷಣ ಕುರ್ಚಿ ಬಿಟ್ಟೆದ್ದು ಹೊರ ಬಂದ. ತಲೆಯೆಲ್ಲಾ ಜುಂ ಅನ್ನತೊಡಗಿತು. ಇನ್ನು ಯಾವುದೇ ದಾರಿ ಉಳಿದಿಲ್ಲ ಅಂದ್ಕೊಂಡು ಸಾಗುತ್ತಿದ್ದವನಿಗೆ ನೆನಪಾದದ್ದು ಜವರಪ್ಪ. ಅವ ಇಸರಪ್ಪನ ಜಾತಿ ಸಂಘದ ಅಧ್ಯಕ. ಯಾವುದೋ ನೀಲಿ ಚಿತ್ರದ ಕ್ಯಾಸೆಟ್ಟು ಹಾಕಿ ವಿಡಿಯೋ ನೋಡುತ್ತಿದ್ದ ಜವರಪ್ಪ ಮಲ್ಲಪ್ಪನನ್ನು ಕಂಡು ಹಜಾರಕ್ಕೆ ಬಂದ. ಏನ್‌ ಮೇಸ್ಟ್ರೇ ? ಊರಿಗೋಗಿದ್ರಂತೆ. ಎಂಗವ್ರೆ ಎಂಡ್ರು ಮಕ್ಳುಲು ಇತ್ಯಾದಿ ಲೋಕಾಭಿರಾಮಕ್ಕೆ ಉತ್ತರಿಸಿ ಮಲ್ಲಪ್ಪ ನೇರವಾಗಿ ವಿಷಯಕ್ಕೆ ಬಂದ.

ನೋಡಿ ಯಜಮಾನ್ರೆ, ಇಸರಪ್ಪ ನಿಮ್ಮೋನು. ಅವಂಗೆ ಇಂಗಾಗ್ತಿರೋದು ಇಡೀ ಜಾತಿಗೇ ಅವ್ಮಾನ. ನಿಮ್ಮ ಜಾತಿ ಸಂಘ ಗಟ್ಟಿಯಾಗಿ ನಿಂತ್ರೆ ಇಸರಪ್ಪ ಅವಳ್ನೆ ಮದ್ವೆ ಆಗ್ಬೋದು. ಇದೇ ಕಾಲೇಜಲ್ಲಿ ಉಳ್ಕೋಬೋದು ಅಂದ.

ಜವರಪ್ಪ ಸೀರಿಯಸ್ಸಾದ. ಏನೇಳ್ತೀರಾ ಮೇಸ್ಟ್ರೇ ನೀವು? ಜಾತಿ ಸಂಘ ಇರೋದು ಇದ್ಕೆಲ್ಲಾ ಓರಾಟ ಮಾಡೋದಿಕ್ಕಲ್ಲ? ಜಾತಿ ಉಳ್ಸೋಕೆ ಕಂಡ್ರಿ. ನಮ್ಮಲ್ಲಿ ಎಜುಕೇಟೆಡ್ಡೇ ಕಮ್ಮಿ. ಅಂಥಾದ್ರಲ್ಲಿ ಈ ಚಿನ್ಕುರುಳಿ ಮಿಂಡ್ರುಗುಟ್ಟಿದೋನು ಆ ಮಿಟಕಿಲಾಡಿ ಪುಳ್ಚಾರ್‌ ಮುಂಡೇನ ಮದ್ವೆಯಾದ್ರೆ ನಷ್ಟ ಆಗೋದು ನಂಜಾತಿಗೇ ಕಂಡ್ರಿ. ನಂಜಾತಿ ಎಣ್ಣೊಂದಕ್ಕೆ ಒಂದು ಗಂಡು ತಪ್ಪೋಗುತ್ತೆ. ಅವನ್‌ ಮನೆ ಎಕ್ಕುಟ್ಟು ಹೋಗ. ಅವನ್‌ ಬಾಯಿಗೆ ಮಣ್ಣುಬೀಳ. ಅವನವ್ವನ್‌ ನಾ ಹಡ.

ಮಲ್ಲಪ್ಪ ಜವರಪ್ಪನ ಹಾವ ಭಾವಗಳನ್ನೇ ಗಮನಿಸುತ್ತಿದ್ದ. ಇಸರಪ್ಪ ಇವನ ಬಗ್ಗೆ ಹೇಳುತ್ತಿದ್ದುದೆಲ್ಲಾ ನೆನಪಾದವು. ಇವನ ಮಗಳು ವನಜಾಳನ್ನು ಎರಡು ಲಕ್ಷ ಕೊಟ್ಟು ಇಸರಪ್ಪನಿಗೆ ಮದುವೆ ಮಾಡಿಸುವ ಪ್ರಪೋಸಲ್ಲು ಬಂದದ್ದು, ಇಸರಪ್ಪ ಒಪ್ಪದ್ದು….. ಮಲ್ಲಪ್ಪ ಚಿಂತಿಸಿದ. ಇವ್ರಿಗೆಲ್ಲಾ ಜಾತಿ, ತತ್ವ, ಧರ್ಮ ಎಲ್ಲವೂ ಕೇವಲ ಸ್ವಾರ್ಥಕ್ಕಾಗಿ ಮಾತ್ರ. ಇವನನ್ನು ಹೇಗೆ ದಾರಿಗೆ ತರುವುದು?

ಮಲ್ಲಪ್ಪ ಇನ್ನಷ್ಟು ದನಿ ತಗ್ಗಿಸಿ ಹೇಳಿದ. ಏನ್‌ ಯಜಮಾನ್ರೇ? ನೀವು ಲೋಕ ಕಂಡೋರು. ಪ್ರೀತಿ ಮುಂದೆ ಜಾತಿ ಮುಖ್ಯಾಂತೀರ? ಜಾತೀನ ಹುಟ್ಟಿಸ್ದೋರು ನಾವು. ಪ್ರೀತೀನ ಕೊಟ್ಟೋನು ದೇವ್ರು. ಹೇಳಿ ಜಾತಿ ಮುಖ್ಯಾನೋ, ಪ್ರೀತೀನೋ? ನೀವು ಮನ್ಸು ಮಾಡಿದ್ರೆ ಈಗ್ಲೂ ಇಸರಪ್ಪನ್ನ ಉಳಿಸ್ಬೋದು. ನಿಂ ಜನಗಳ್ದೇ ಇಲ್ಲಿ ಮೆಜಾರಿಟಿ. ಮಠಕ್ಕೆ ಎಚ್ಚು ಕಾಣಿಕೆ ಕೊಡೋರು ನೀವೇಯಾ. ನೀವೊಂದು ಮಾತು ಏಳಿದ್ರೆ ಅಯ್ಯಾ ಅವ್ರು ಇಲ್ಲಾ ಅನ್ನಾಕಿಲ್ಲಾ.

ಜವರಪ್ಪ ಗುಡುಗಿದ. ಕಲೀಬೇಕು ಮೇಸ್ಟ್ರೇ. ಇಸರಪ್ಪ ಪಾಠ ಕಲೀಬೇಕು. ಮೇಲ್ವಂಸ ದೋರನ ಮದ್ವೆ ಆದ್ರೆ ನಂವಂಸ ನಿರ್ವಂಸ ಆಗುತ್ತೆ ಕಂಡ್ರಿ. ಆ ಪುಳ್ಚಾರನ ಬುಟ್ಟುಬುಡ್ಳಿ. ಅವಳಕ್ಕನ್‌! ಗುಡಸೆಟ್ಟಿ ಮುಂಡೆ! ನಂ ಜಾತೀಲಿ ಉಡ್ಗೀರು ಸತ್ತೋಗಿದ್ದಾರೇನ್ರೀ ? ಅದೇನ್‌ ಉಚ್ಚು ಕಂಡ್ರಿ ನಿಮ್ ಓದ್ದೋರ್‍ಗೆ?

ಮಾತು ವನಜಾಳ ಬಳಿಯೇ ಸುಳಿಯಬಹುದೆಂದು ಹೆದರಿ ಮಲ್ಲಪ್ಪ ಕೊನೆಯದಾಗಿ ಎಂಬಂತೆ ಕೇಳಿದ. ಅಂದ್ರೆ ನೀವು ಏನೂ ಮಾಡೋ ಹಂಗಿಲ್ಲೇನು? ಜವರಪ್ಪ ನಾ ಯಾಕ್ ಮಾಡ್ಲಿಲ, ಇವುನ ಲವ್ವು ಮಾಡೋವಾಗ ಜಾತಿಯೋರ್‍ನ ಕೇಳೋದ್ನ? ಜಾತಿ ಮೀಟಿಂಗಿಗೆ ಅವನೇನು ಬರ್ತಿದಾನ? ಬಡ್ಡೀ ಮಗ ಕಂಡ್ರಿ. ಅವನೆಂಡ್ರನ್ನಾ ಕೇಯ. ಪ್ರೀತಿ ಇರ್ಬೇಕಾಗಿರೋದು ಉಡ್ಗೀ ಮೇಲಲ್ಲ ಕಂಡ್ರಿ, ಜಾತಿ ಮೇಲೆ. ಓಗ್ಲಿ ಬುಡಿ. ಅದ್ಕೆ ನೀವ್ಯಾಕೀಟೊಂದು ಒದ್ದಾಡ್ಬೇಕು? ಓಗಿ ಆಯಾಗಿ ಮಕ್ಕೊಳ್ಳಿ ಅಂದುಬಿಟ್ಟ.

ಮಲ್ಲಪ್ಪ ತೀರಾ ಹತಾಶನಾದ. ಇನ್ನೇನೂ ದಾರಿಯೇ ಇಲ್ಲ ಅಂದುಕೊಳ್ಳುವಾಗ ಅವನ ಕಣ್ಣಾಲಿಗಳು ತುಂಬಿ ಬಂದವು. ಇಸರಪ್ಪ ಕೆಲಸ ಕಳಕೊಳ್ಳುತ್ತಾನೆ. ಆ ಹುಡುಗಿ ಯನ್ನು ಮದುವೆಯಾಗೋದಕ್ಕೆ ಈ ಜನ ಬಿಡುವುದಿಲ್ಲ. ಈ ಊರು ನಿಂತ ನೀರು. ಇಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅದೇ ಮುಖಗಳು, ಅದೇ ನಡವಳಿಕೆಗಳು.

ಮತ್ತೆ ಮಲ್ಲಪ್ಪನಿಗೆ ಅಲ್ಲಿ ನಿಲ್ಲಲಿಕ್ಕಾಗಲಿಲ್ಲ. ರೂಮಿಗೆ ಹೋಗೋದೇ ವಾಸಿ ಎಂದುಕೊಂಡು ತಲೆ ಎತ್ತದೆ ನಡೆದ. ಏನೋ ಸ್ಪೋಟ ಕೇಳಿದಂತಾಗಿ ತಲೆ ಎತ್ತಿ ನೋಡಿದರೆ ಅವನು ಕಾಲೇಜು ಗೇಟಿನ ಮುಂದೆಯೇ ನಿಂತಿದ್ದ. ಕಾಲೇಜು ಪ್ರಿಮಿಸಿಸ್ಸಿನಲ್ಲಿ ಮಕ್ಕಳೆಲ್ಲಾ ಅಯ್ಯಾ ಅವರಿಗೆ ಜೈಕಾರ ಹಾಕುತ್ತಿದ್ದರು. ಮತಾಪು ಸುಡುತ್ತಿದ್ದರು. ಕೇಕೇ ಹಾಕಿ ನಗುತ್ತಿದ್ದರು. ಮಲ್ಲಪ್ಪನಿಗೆ ಏನೊಂದೂ ಅರ್ಥವಾಗಲಿಲ್ಲ. ಥರಗುಟ್ಟುವ ಕಾಲುಗಳಿಂದ ಸ್ಟಾಫ್‌ ರೂಮಿನತ್ತ ಧಾವಿಸಿದ.

ಎದುರಾದದ್ದು ಸೋಶಿಯಾಲಜಿ ಸಾವಿತ್ರಮ್ಮ. ನಗುತ್ತಾ ಹತ್ತಿರ ಬಂದು ಅಂತೂ ಮುಗೀತಲ್ಲಾ ಮಲ್ಲಪ್ನೋರೇ ಅಂದಾಗ ಏನು, ಹೇಗೆ ಎಂದು ಗೊತ್ತಾಗದೆ ಕಣ್ಣು ಕಣ್ಣು ಬಿಟ್ಟ.

ಸಾವಿತ್ರಮ್ಮ ಇನ್ನಷ್ಟು ನಗುತ್ತಾ, ನಿಮ್ಗಿನ್ನೂ ಗೊತ್ತಾಗಿಲ್ಲೇನ್ರಿ? ಇಸರಪ್ಪನ್ನ ದ್ಯಾವ್ರಾಣೆಗೂ ಬುಟ್‌ ಬುಡ್ತೀನೀಂತ ಅಯ್ಯಾ ಅವ್ರ ಪಾದ ಮುಟ್ಟಿ ಆ ಉಡ್ಗಿ ಪ್ರಮಾಣ ಮಾಡಿದ್ಲಂತೆ. ಅಯ್ಯಾ ಅವ್ರು ಅದೇನೋ ಅಳ್ದೀದಾರ ತಂದು ಅವ್ಳಿಂದ ಅವನ ಕೈಗೆ ಕಟ್ಟಿಸಿ ಇನ್ಮುಂದೆ ನಾನು ನಿನ್ನ ತಂಗಿಪ ಅಂತ ಏಳಿಸಿದ್ರಂತೆ. ಆಮ್ಯಾಕೆ ಮಠದ ಮಾಣಿ ಎಂಕ್ಟೇಶನ್ನ ಕರ್‍ದು ಎಲ್ಡು ಆರ ತರ್‍ಸಿ ಒಂದನ್ನು ಉಡ್ಗಿ ಕೈಗೆ ಕೊಟ್ಟು ಎಂಕ್ಟೇಸಂಗೆ ಆಕೋಕ್‌ ಏಳಿದ್ರಂತೆ. ಎಂಕ್ಟೇಸು ಒಂದು ಆರ ಆಕಿಗೆ ಆಕುದನಂತೆ. ಅಯ್ಯಾ ಅವ್ರು ತಾಳೀನೂ ಮಾಡಿಸಿಟ್ಟಿದ್ರಂತೆ. ಎಂಕ್ಟೇಸು ಕೈಲಿ ಆಕಿಗೆ ತಾಳೀನೂ ಕಟ್ಟಿಸಿಬಿಟ್ರಂತೆ. ಮಠದಲ್ಲಿರೋರೆಲ್ಲಾ ಮಂತ್ರದ್‌ ಕಾಳು ಆಕಿದ್ರಂತೆ. ಅಂತೂ ಗಲಾಟೆ ಇಲ್ದೆ ಎಲ್ಲಾ ತಣ್ಣಗೆ ಮುಗ್ದೇ ಓಯ್ತು ಕಂಡ್ರಿ. ಅಯ್ಯಾ ಅವ್ರು ಏನ್‌ ಗ್ರೇಟು! ಅಲ್ವೇನ್ರಿ? ಅಂದ್ಲು.

ಮಲ್ಲಪ್ಪನಿಗೆ ದಂಗು ಬಡಿದಂತಾಯ್ತು. ಪ್ರೀತಿಸಿದವರನ್ನು ಅಗಲಿಸಿ ಅಯ್ಯಾವ್ರು ಗ್ರೇಟ್‌ ಆಗಿಬಿಟ್ರು! ತಾನೊಬ್ಬ ಬೆಳಗ್ಗಿನಿಂದ ಸುತ್ತಿದ್ದಕ್ಕೆ ಅರ್ಥವೇ ಇಲ್ಲ. ಈ ಅಯ್ಯಾವ್ರು, ಪ್ರಿನ್ಸಿಪಾಲು, ಸಾವಿತ್ರಮ್ಮ, ಜವರಪ್ಪ, ಪರಿಷತ್ತಿನ ಮಂದಿಗಳು, ಎಸ್ಸೈ, ನಾಗಣ್ಣ, ಆ ಹುಡುಗಿ, ಎಂಕ್ಟೇಸು ಇವ್ರೆಲ್ಲಾ ಎಲ್ಲಿದ್ದರೋ ಅಲ್ಲೇ ಇದ್ದಾರೆ. ಇವರ ನಡುವೆ ನಡೆಯಲು ಯತ್ನಿಸುವ ತನಗೆ ಹುಚ್ಚು ಎಂಬ ಭಾವ ಬರುತ್ತಲೇ ಅವನಿಗೆ ತನ್ನ ಕಾಲುಗಳಿಂದ ಬೇರುಗಳು ಹೊರಟು ಭೂಮಿಯ ಒಳಗೆ ಸೇರಿಕೊಂಡಂತಾಯಿತು. ಕಾಲುಗಳು ಭಾರವಾಗಿ ಮಲ್ಲಪ್ಪ ಅಲ್ಲೇ ನಿಂತುಬಿಟ್ಟ.

ಸಂಕರೋ ನರಕಾಯೈವ
ಕುಲಘಾನ್ನಾಂ ಕುಲಸ್ಯಚ
ಪತಂತಿ ಪಿತರೋ ಹ್ಯೇಷಾಂ
ಲುಪ್ತ ಪಿಂಡೋದಕ ಕ್ರಿಯಾಃ
ಶ್ರೀಮದ್ಭಗವದ್ಗೀತಾ
*****
೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರು
Next post ಕಾಲಿಗೆ ಕಟ್ಟಿದ ಗುಂಡು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…