ಗಾಂಧಿ ಮತ್ತು ಪ್ರಸ್ತುತತೆ

ಗಾಂಧಿ ಮತ್ತು ಪ್ರಸ್ತುತತೆ

“If your face is askew don’t blame the mirror” (ನಿನ್ನ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂರಬೇಡ) -Russia’s popular saying.

ಗಾಂಧೀಜಿ ಅವರ ಪ್ರಸ್ತುತತೆಯನ್ನು ಕುರಿತು ನಾವು ಎಚ್ಚರಿಕೆಯಿಂದ ಚಿಂತಿಸಬೇಕಾಗಿದೆ. ಇಂದಿನ ಈ ಕಾರ್ಯಕ್ರಮ ’ಗಾಂಧಿ-ಒಂದು ಚಿಂತನೆ’ ಆಗಿರುವುದರಿಂದ ಇದು ಚಿಂತನೆ, ಆರಾಧನೆ ಅಲ್ಲ. ಸಮಾಜದ ಇಂದಿನ ಅಗತ್ಯ ಬಂದರೆ ಉತ್ಪ್ರೇಕ್ಷೆಯಲ್ಲ ಉತ್ಸವವಲ್ಲ ವಿವೇಕಯುತ ವಿಮರ್ಶೆ. ಅಂತಹ ವಿಮರ್ಶೆ ಮಾತ್ರ ಗಾಂಧಿಯನ್ನು ನಿಜವಾಗಿ ಅರ್ಥೈಸಿಕೊಳ್ಳಲು ಹಾಗೂ ಅರಗಿಸಿಕೊಳ್ಳಲು ಸಹಕಾರಿಯಾಗಿ ನಿಲ್ಲಬಲ್ಲದು.

ನಮ್ಮ ಪರಂಪರೆಯ ನಾಡಿಯನ್ನು ಹಿಡಿದು ನೋಡಿದರೆ ವೈದಿಕಧರ್ಮದ ಪರವಾಗಿ ವಾಲಿದವರನ್ನ ಅದು ವೈಭವೀಕರಿಸಿಕೊಂಡು, ಖಂಡಿಸಿದವರನ್ನು ಕಣ್ಮರೆಯಾಗಿಸಿಕೊಂಡು ಬಂದಿದೆ. ಇದು ಐತಿಹಾಸಿಕ ಸತ್ಯ. ಅಷ್ಟೇ ಏಕೆ ವೈದಿಕ ಕರ್ಮಮಾರ್ಗವನ್ನು -ಯಾಗ, ಯಜ್ಞ. ಬಲಿ-ಇತ್ಯಾದಿ. ಖಂಡಿಸಿ ಹಾಗೂ ಜೀವಪರವಾದ ನೀತಿ ಮಾರ್ಗವನ್ನು ಬೋಧಿಸಿದ ಗೌತಮ ಬುದ್ಧ ಈ ದೇಶದಿಂದಲೇ ಉಚ್ಛಾಟಿಸಲ್ಪಟ್ಟ. ಈ ಕುತಂತ್ರಕ್ಕೆ ಬಸವಣ್ಣ ಬಲಿಯಾದ. ನಾರಾಯಣ ಗುರು, ಜ್ಯೋತಿಬಾಪೂಲೆ, ಪೆರಿಯಾರ್, ಡಾ|| ಲೋಹಿಯಾ, ಡಾ|| ಅಂಬೇಡ್ಕರ್, ಕುವೆಂಪು ಮುಂತಾದವರು ಅವಜ್ಞೆಗೆ ಗುರಿಯಾದರು. ವೈಧಿಕ ಧರ್ಮದ ಅನಿಷ್ಟವನ್ನು ತೊಡೆದು ಆರ್ಯಸಮಾಜ ಹುಟ್ಟುಹಾಕಿದ ದಯಾನಂದ ಸರಸ್ವತಿಗೆ ವಿಷ ಉಣ್ಣಿಸಲಾಯ್ತು. ಹೀಗೇಕೆ?

ಇವಕ್ಕೆ ಕಾರಣ ಸ್ಪಷ್ಟವಾಗಿದೆ. ವಿಚಾರ ಮತ್ತು ಆಚಾರಗಳಿಗೆ ದೂರವಾದ :ಭಾರತದ ಮನಸ್ಸು ಆರಾಧನೆ ಹಾಗೂ ಅಂಧಾನುಕರಣೆಗೆ ಒಳಗಾಗಿ ಮನುಕುಲದ ಒಳಿತಿಗಾಗಿ ಬಂದವರನ್ನೆಲ್ಲಾ ಉಪೇಕ್ಷೆಗೈದು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿರುವದು. ಇಂತಹ ಆರಾಧಕ ಭಾವವಿರುವ ಸಮಾಜದಲ್ಲಿ ಗಾಂಧಿಯಂತವರು ಅಪಾಯಕ್ಕೆ ಗುರಿಯಾಗಿ ಅಪಾಯವನ್ನು ತಂದೊಡ್ಡುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

ಮಾನವ ಸಂಸ್ಕೃತಿಯ ಮರಣಾಂತಿಕ ಸ್ವರೂಪಕ್ಕೆ ಕಾರಣಗಳನ್ನು ಗುರುತಿಸುತ್ತಾ ಡಾ|| ಶಂಭಾ ಜೋಷಿಯವರು “ಧಾರ್ಮಿಕತೆ, ಕಪಟ, ಮೋಸ, ವಂಚನೆ, ಅಪ್ರಮಾಣಿಕತೆಗಳು ವಾಸ್ತವ ಮೌಲ್ಯಗಳಾಗಿ ಆರಾಧಕ ಭಾವವನ್ನೂ ತಳೆದು ಬಿಡುತ್ತವೆ.” ಎಂದಿದ್ದಾರೆ. ಆ ಕಾರಣದಿಂದಲೇ ಅಂತಹ ಅಪಾಯದಿಂದ ಪಾರುಮಾಡಲು ವಿಮರ್ಶೆ ಹಾಗೂ ಆ ವಿಮರ್ಶೆ ಮೂಡಿಸುವ ಎಚ್ಚರ ಅನಿವಾರ್ಯವಾಗುತ್ತದೆ. ಮರಣೋನ್ಮುಖಿಯಾಗಿರುವ ಸಮಾಜ ಮತ್ತೆ ಜೀವೋನ್ಮುಖಿಯಾಗಲು ಅದು ಸಹಕಾರಿಯಾಗುತ್ತದೆ.

ಅಸ್ವತಂತ್ರ ಬೇರುಗಳು: ಗಾಂಧಿಗೆದ್ದರು, ಅವರಿಂದಾಗಿ ಭಾರತ ಸ್ಪಾತಂತ್ರ್ಯ ಪಡೆಯಿತು ಎಂದು ಮೇಲ್ನೋಟಕ್ಕೆ ಕಂಡರೂ ಅದು ಪೂರ್ಣ ಸತ್ಯವಲ್ಲ. ಗಾಂಧೀಜಿಯವರ ಕೊಡುಗೆ ಇದೆ, ಅದರೆ ಅದರ ಒಡಲಿನಲ್ಲಿ ಸುತ್ತಿಕೊಂಡು ಬಂದ ಅವ್ಯಕ್ತ ಅಸ್ವತಂತ್ರ ಬೇರುಗಳು ಭಾರತವನ್ನು ನಿರ್ವೀರ್ಯಗೊಳಿಸುತ್ತಿವೆ.

ಮಾಧ್ಯಮಗಳಿಂದ ಹಿಡಿದು ಗಾಂಧಿಯನ್ನು ವೈಭವೀಕರಿಸುವವರ ಅಂತರಂಗದಲ್ಲಿ ಬಂಡವಾಳ ಶಾಹಿಗಳ ಬೇರುಗಳಿವೆ. ಕೋಮು ಕಿರಾತನ ಕಣ್ಕಟ್ಟಿದೆ. ಅಂತರ ರಾಷ್ತ್ರೀಯ ಬೇಹುಗಾರಿಕೆಯಿದೆ. ವೇದೋಪನಿಷತ್ತುಗಳ, ಅಧ್ಯಾತ್ಮದ, ವೇದಾಂತ ಸತ್ವಗಳಿಂದ ಪರಿಪುಷ್ಟಗೊಂಡಿದ್ದ ಭಾರತವನ್ನು ಸಾವಿರಾರು ವರ್ಷಗಳ ಕಾಲ ಗುಲಾಮೀಯತೆಗೆ ತಳ್ಳಿದ ಭಾರತದ ಕುಲೀನಪುತ್ರರ ಕೈವಾಡವಿದೆ. ಇವರುಗಳ ವ್ಯೂಹವೇ ಇಂದೂ ಗಾಂಧಿಯನ್ನು ಮಾತ್ರ ವೈಭವೀಕರಿಸಲು ಕಾರಣವಾಗಿವೆ.

ಸುವರ್ಣ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತದಲ್ಲಿ ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಜಾತಿಮತಗಳೆ ನಗ್ನ ನರ್ತನ ತಾಂಡವವಾಡುತ್ತಿದೆ. ಜನಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಬಾನಗಲವನ್ನೂ ಮೀರಿ ಭ್ರಷ್ಟಾಚಾರ ಬೆಳೆಯುತ್ತಿದೆ. ಹಗರಣಗಳ ಮೇಲೆ ಹಗರಣಗಳು ಹಾಸುಹೊಕ್ಕಾಗಿವೆ. ಅಕ್ರಮಗಳು ಸಕ್ರಮಗಳಾಗುತ್ತಿವೆ. ಹೊರದೇಶಗಳ ಸಾಲ ಹೆಗಲ ಮೇಲೆ ಹೆಣವಾಗಿ ಹೇರಿಕೊಳ್ಳುತ್ತಿದೆ. ರಾಜಕಾರಣಿಗಳು ರಾಕ್ಷಸರಾಗಿದ್ದಾರೆ. ರಕ್ಷಿಸುವ ಪೋಲೀಸ್ ಭಯೋತ್ಪಾದಕರ ಬೀಡಾಗುತ್ತಿದೆ. ವಕೀಲರು, ವೈದ್ಯರು ಸುಲಿಗೆಯ ಸುಲ್ತಾನರಾಗುತ್ತಿದ್ದಾರೆ. ನ್ಯಾಯಾಲಯದ ತಕ್ಕಡಿ ಏರುಪೇರಾಗುತ್ತಿದೆ. ಅಧಿಕಾರದ ಅಮಲು ಅಂಧರಿನ್ನಾಗಿಸಿದೆ. ಧರ್ಮದ ಹೆಸರಿನ ಕೋಮುವಾದದ ದಳ್ಳುರಿ ದೇಶವನ್ನು ದಹಿಸುತ್ತಿದೆ. ಕಾಳಸಂತೆಕೋರರ ಕಪ್ಪು ಹಣ, ಚಲನ ಚಿತ್ರಗಳ ಜಾಹಿರಾತಿನ ಮೋಹಕ ಜಾಲಗಳಿಂದಾಗಿ ವಾಸ್ತವತೆಯಿಂದ ವಂಚಿತವಾದಸಮಷ್ಟಿ ಮನಸ್ಸು ಭ್ರಮಾಲೋಕದಲ್ಲು ಬಂಧಿಯಾಗಿ ನರಳುತ್ತಿದೆ. ಒಗ್ಗಟ್ಟಿನಿಂದ ಒಂದಾಗಿದ್ಧ ಹಳ್ಳಿಗಳು ಒಡೆದು ಹೋಳಾಗಿ ಸಂಘರ್ಷದ ಸಂಕಟದಿಂದ ಸೊರಗುತ್ತಿವೆ, ವಿದ್ಯೆ ವ್ಯಾಪಾರವಾಗಿದೆ. ಅಗತ್ಯ ವಸ್ತುಗಳ ಬೆಲೆ ನೆಲಕಿತ್ತುಕೊಂಡು ಹಿಡಿತಕ್ಕೆ ಸಿಗದೆ ಆಕಾಶಕ್ಕೆ ಹಾರುತ್ತಿವೆ. ಅಂದು ಒಂದು ಈಸ್ಟ್‌ ಇಂಡಿಯಾ ಕಂಪೆನಿ ಇದ್ದರೆ ಇಂದು ಅಸಂಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳು ಭಾರತೀಯ ರಿಗೆ ಜಿಗಣೆಗಳಾಗುತ್ತಿವೆ. ಅಸ್ಪೃಶ್ಯತೆ ಅಳಿವ ಬದಲು ಆಳವಾಗಿ ಬೇರು ಬೀಡುತ್ತಿದೆ.

ಸ್ವತಂತ್ರವಾದ ಒಂದು ರಾಷ್ಟ್ರ ಇಂಥ ಹೀನ ಸ್ಥಿತಿಗೆ ತಲುಪಲು ಇರುವ ಕಾರಣವೇನು? ಅಹಿಂಸೆಯನ್ನು ಸಾರಿದ ಗಾಂಧಿಯ ನಾಡಿನಲ್ಲಿ ಹಿಂಸೆ ಉಗ್ರರೂಪ ತಾಳಲು ಇರುವ ಆಂತರಿಕ ನ್ಯೂನತೆಗಳು ಯಾವು? ಗಾಂಧಿ ಅಪ್ರಸ್ತುತವಾಗಲು ಏನಾದರೂ ಒಳದೋಷಗಳು ಇದ್ದುವೆ? ಇವುಗಳನ್ನು ಕುರಿತು ಕೊಂಚ ಸಾವಧಾನವಾಗಿ ಯೋಚಿಸಬೇಕಾಗುತ್ತದೆ.

ರಾಮನಾಮ-ರಾಜ್ಯ-ಗೀತೆ- ರಾಮನಾಮ ಗಾಂಧಿಗೆ ತಾರಕ ಮಂತ್ರವಾಗಿತ್ತು. ರಾಮರಾಜ್ಯ ಅವರ ಕನಸಾಗಿತ್ತು ಗೀತೆ ಉಸಿರಾಗಿತ್ತು.

ತ್ರೇತಾ:- ಭಾರತದ ಇತಿಹಾಸವನ್ನು ಗಮನಿಸಿದರೆ ಧರ್ಮದ ಹೆಸರಿನಲ್ಲಿ ಕೊಲ್ಲುವ ಕ್ರಿಯೆ ತ್ರೇತಾಯುಗದವರಗೆ ಇರಲಿಲ್ಲ. ವರ್ಣ ವ್ಯವಸ್ಥೆಯ ಕರಾಳ ಮುಖದ ಸ್ಪಷ್ಟದರ್ಶನವಾಗುವುದು ತ್ರೇತಾಯುಗದಲ್ಲೆ. ವರ್ಗ ಸಂಘರ್ಷ ತನ್ನ ಕ್ರೌರ್ಯದ ಮೈಪಡೆದದ್ದು ಇಲ್ಲೆ. ಆರ್ಯ-ದ್ರಾವಿಡ, ಉತ್ತರ-ದಕ್ಷಿಣ, ಶಿಷ್ಟ-ದುಷ್ಟ ಎಂಬ ಕಲ್ಪನೆ ಕೊನರಿದ್ದು ಇಲ್ಲೆ. ಶೂದ್ರ ಶಂಬೂಕನ ಶಿರಶ್ಚೇದನ, ರಾವಣವಧೆ ಇದಕ್ಕೆ ಸ್ಪಷ್ಟನಿದರ್ಶನಗಳು. ಇದು ರಾಮನ ಅವಿವೇಕದ ಪರಮಾವಧಿ. ಇದರಿಂದ ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುವ ವೈದಿಕಧರ್ಮ ವಿಜಯ ಸಾಧಿಸಿತು. ವರ್ಣವ್ಯವಸ್ಥೆ ಗಟ್ಟಿಗೊಂಡಿತು. ಗಾಂಧಿ ವರ್ಣ ವ್ಯವಸ್ಥೆಯ ವಿರೋಧಿ ಎಂದು ಕಂಡರೂ ಅದು ಮೇಲ್ನೋಟಕ್ಕೆ. ಅವರಿಗರಿವಿಲ್ಲದಂತೆ ಅವರು ಅದರ ಪರವಾಗಿಯೇ ಇದ್ದರು. ಆ ಕಾರಣದಿಂದಲೇ ಅವರಿಗೆ ರಾಮನಾಮ ತಾರಕ ಮಂತ್ರವಾಗಿ, ರಾಮರಾಜ್ಯ ಆದರ್ಶವಾಗಿತ್ತು.

ದ್ವಾಪರ:-. ದ್ವಾಪರ ಯುಗದಲ್ಲಿ ಸ್ಥಿತಿ ಇನ್ನೂ ಸಂಕೀರ್ಣಗೊಂಡು ವರ್ಗವ್ಯವಸ್ಥೆಯಿಂದ ಸ್ವಲ್ಪ ಹೊರಳಿ ದಾಯಾದಿಗಳೊಳಗಿನ ಸಂಘರ್ಷಕ್ಕೆ ಒತ್ತುಕೊಟ್ಟು ಸರ್ವನಾಶಕ್ಕೆ ನಾಂದಿ ಹಾಡಿತು. ಅಹಿಂಸೆಯ ನಿಲುವನ್ನು ತಾಳಿದ ಅರ್ಜುನ ಶಸ್ತ್ರಾಸ್ತ್ರಗಳನ್ನೆ ಬಿಸುಟ. ಹಿಂಸೆಗೆ ಒಲಿದ ಕೃಷ್ಣ ಧರ್ಮದ ಹೆಸರಿನಲ್ಲಿ ಯುದ್ದಕ್ಕೆ, ಪ್ರೇರೇಪಿಸಿದ. ಗೀತೆಯ ಮೂಲಕ ಹಿಂಸೆಗೆ ಧರ್ಮದ ಹೆಸರಿನಲ್ಲಿ ಪ್ರಚೋದನೆ ನೀಡಿದ ಗೀತೆ ಗಾಂಧಿಗೆ ಉಸಿರಾದದ್ದು ಹೇಗೆ?

ಅಪರೂಪದ ಸಂಸ್ಕೃತಿ ಸಂಶೋಧಕರಾದ ಡಾ|| ಶಂಬಾಜೋಷಿ ಅವರು “ವೇದ, ಭಗವದ್ಗೀತೆ, ರಾಮಾಯಣ, ಮಹಾಭಾರತಗಳು ಮನುಷ್ಯನ ಸ್ವತಂತ್ರ ಚಿಂತನವನ್ನು ಹಾಳುಮಾಡಿವೆ. ಅವುಗಳ ಮೂಲಭೂತ ತತ್ವವಿನ್ಯಾಸ ಇರುವುದು ಕೇವಲ ಕೆಲವೇ ಜನರ ಹಿತಾಸಕ್ತಿಯ ನೆಲೆಗಳಲ್ಲಿ” ಎಂದಿದ್ದಾರೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದು ಶಂಬಾ ಅವರು “ಉಪನಿಷತ್ತು’ಗಳನ್ನು ಅವುಗಳೊಂದಿಗೆ ಸಮೀಕರಿಸಿಲ್ಲ ಎನ್ನುವುದು. ಏಕೆಂದರೆ ಉಪನಿಷತ್ತುಗಳು ಎಂದೂ ಮನುಷ್ಕನ ಸ್ವತಂತ್ರ ಚಿಂತನವನ್ನು ಹಾಳು ಮಾಡಿಲ್ಲ ಬದಲಿಗೆ ಉದ್ದೀಪನಗೊಳಿಸುತ್ತವೆ. ಗೀತೆಯಾದರೋ ಶರಣಾಗು ಎನ್ನುತ್ತದೆ. ಆದು ಎಂಧೂ ಸ್ವತಂತ್ರನಾಗು ಎನ್ನುವುದಿಲ್ಲ. ಅಂತಿಮವಾಗಿ ತಮ್ಮ ಜಿಗುಟು ಸ್ಪಭಾವದಿಂದಾಗಿ ಗಾಂಧಿ ಎತ್ತಿ ಹಿಡಿದದ್ದು ಕೇವಲ ಕೆಲವರ ಹಿತಾಸಕ್ತಿಯನ್ನೇ;- ಅವರೆ ಬಂಡವಾಳಶಾಹಿಗಳು, ಸ್ವಾರ್ಥ ರಾಜಕಾರಣಿಗಳು. ಆದ ಕಾರಣವೆ ತಮ್ಮ ಹಿಡಿತ ಮೀರಿ ಇವರ ಕೈ ಮೇಲಾದುದನ್ನ ಕಂಡ ಗಾಂಧಿ ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾಗುವ ವೇಳೆಯಲ್ಲಿ ಬಹುದೂರ ಕಲ್ಕತ್ತಾದಲ್ಲಿ ಇದ್ದದ್ದು.

ಕಲಿ:- ಕಲಿಯುಗದಲ್ಲಿ ಸಂಕೀರ್ಣ ಸ್ಥಿತಿ ಅತ್ಯಂತ ಸೂಕ್ಷ್ಮಾವಸ್ಥೆಗೆ ತಲುಪಿ ಆತ್ಮವಂಚನೆ ತನ್ನ ಪಾರಾಕಾಷ್ಠೆಯನ್ನು ಮುಟ್ಟಿ ಕ್ಷಣಕ್ಷಣವೂ ಅಂತಃಸಾಕ್ಷಿಯನ್ನು ಕೊಲ್ಲುತ್ತಾ ಸಾಗುತ್ತಿರುವುದು ಮನುಕುಲದ ದುರಂತ. ಇದು ಗಾಂಧಿಯನ್ನೂ ಬಿಡಲಿಲ್ಲ.

“ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ” ಗಾಂಧೀಜಿಯವರ ಶ್ರೇಷ್ಠ ಕೃತಿ ಎಂದು ಕೊಂಡಾಡುವ ಗ್ರಂಥದಲ್ಲಿ ಬರುವ ಈ ಕೆಳಗಿನ ಮಾತುಗಳು ಸತ್ಯವನ್ನು ಕಂಡುಕೊಳ್ಳಲು ಆ ಕೃತಿಯ ಬಗ್ಗೆ ಅವರಿಗೇ ಇದ್ದ ಅನುಮಾನವನ್ನು ಸ್ಪಷ್ಟಪಡಿಸುತ್ತವೆ. “ಆತ್ಮಕಥೆಗಳು, ಚರಿತ್ರೆಗಳಾಗುವುದಿಲ್ಲ ಎಂಬುದಾಗಿ ಬಹಳ ಹಿಂದೆ ನಾನು ಓದಿದ್ದರ ಅರ್ಥ ಇಂದು ನನಗೆ ಚೆನ್ನಾಗಿ ಆಗುತ್ತಿವೆ. ನನಗೆ ನೆನಪಿರುವುದನ್ನೆಲ್ಲಾ ನಾನು ಈ ಕಥೆಯಲ್ಲಿ ಬರೆಯುತ್ತಿಲ್ಲ ಎಂಬುದು ನನಗೆ ಗೊತ್ತು. ಸತ್ಯದ ಸಲುವಾಗಿ ಎಷ್ಟನ್ನು ಹೇಳಬೇಕು, ಎಷ್ಟನ್ನು ಬಿಡಬೇಕು ಎಂಬುದನ್ನು ಹೇಳಬಲ್ಲವರಾರು’.’ ಮತ್ತು ನನ್ನ ಕೆಲವು ಸಂಗತಿಗಳ ವಿಷಯದಲ್ಲಿ, ನಾನು ಕೊಟ್ಟಿರುವ ಏಕಪಕ್ಷೀಯವಾದ ವಿವರಣೆಗೆ, ನ್ಯಾಯಾಸ್ಥಾನದ ದೃಷ್ಟಿಯಲ್ಲಿ ಬೆಲೆ ಏನು?”

ಜಿಗುಟು ಸ್ವಭಾವ- ಗಾಂಧಿ ಜಿಗುಟು ಸ್ವಭಾವದ ವ್ಯಕ್ತಿ. ತಾನು ನಂಬಿದ ಮೌಲ್ಯಗಳ ಪ್ರತಿಪಾದನೆಗಾಗಿ ಕಟು ಸತ್ಯವಾಗಿದ್ದರೂ ಯಾವ ಹೊಂದಾಣಿಕೆಗೂ ಮನ ತೆರೆಯದ, ಅದಕ್ಕಾಗಿ ಎಂಥದ್ದನ್ನಾದರೂ ಕಡೆಗೆ ರಾಷ್ಟ್ರವನ್ನಾದರೂ ಬಲಿಗೊಡಲು ಹಿಂದೆಗೆಯದ ವ್ಯಕ್ತಿತ್ವ. ಅದಕ್ಕೆ ಕಾರಣ ಅವರೇ ಹೇಳುವಂತೆ ’My parents were staunch vaishnavas’. ಈ ಪ್ರಭಾವ ಆವರ ಮೇಲೆ ಎಷ್ಟಾಗಿತ್ತೆಂದರೆ ” ….. .. ಮಾಂಸಾಹಾರವನ್ನು ತಿನ್ನುವುದು ಅವಶ್ಯಕ ಎಂದು ನಾನು ಒಪ್ಪುತ್ತೇನೆ. ಆದರೆ ನನ್ನ ಪ್ರತಿಜ್ಞೆಯನ್ನು ನಾನು ಭಂಗಗೊಳಿಸಲಾರೆ ….. .. ನಾನೊಬ್ಬ ಮೂರ್ಖ, ಹಠವಾದಿ ಎಂದು ನನ್ನನ್ನು ದಯವಿಟ್ಟು ಬಿಟ್ಟು ಬಿಡಿ …… .. ಇದಕ್ಕೆ ಉಪಾಯವಿಲ್ಲ, ಪ್ರತಿಜ್ಞೆ ಪ್ರತಿಜ್ಞೆಯೆ, ಅದನ್ನು ಮುರಿಯಲಾಗದು.” ಹಾಗಿದ್ದರೆ ಗಾಂಧೀಜಿ ತಮ್ಮ ಪ್ರತಿಜ್ಞೆಯನ್ನು ಎಂದೂ ಮುರಿಯಲಿಲ್ಲವೇ ಪ್ರಾಮಾಣಿಕರಾಗಿಯೆ ಉಳಿದರೆ? ಎಂದು ನೀವು ಪ್ರಶ್ನಿಸಿದರೆ ನಿರಾಶಾದಾಯಕ ಉತ್ತರ ನಿಮ್ಮದಾಗುತ್ತದೆ. ಈ ಕೆಳಗಿನದು ಅವರು ಮಾಡಿಕೊಂಡ ಆತ್ಮವಂಚನೆಗೆ ಸ್ಪಷ್ಟನಿದರ್ಶನ ಹಾಗೂ ಸಾಕ್ಷಿ. “ಮನುಷ್ಕ, ಮಗುವಾಗಿ ಕುಡಿದ ತಾಯಿಯ ಹಾಲಿನ ಹೊರತು ಆತನಿಗೆ ಬೇರೆ ಹಾಲು ಅವಶ್ಯಕವಿಲ್ಲವೆಂಬುದು ನನ್ನ ದೃಢನಂಬಿಕೆ ….. .. ಹೇಗೆ ಆಹಾರವೋ ಹಾಗೆ ಆಚಾರ …. .. ನಾನು ವ್ರತವನ್ನು ಹಿಡಿದಿದ್ದುದರಿಂದ ಹಸು ಅಥವಾ ಎಮ್ಮೆಯ ಹಾಲನ್ನು ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಆ ವ್ರತಕ್ಕೆ ಅನುಗುಣವಾಗಿ ನಾನು ಎಲ್ಲಾ ಬಗೆಯ ಹಾಲನ್ನು ಬಿಡಬೇಕಾಯಿತು. ವ್ರತವನ್ನು ಹಿಡಿಯುವಾಗ ನನ್ನ ಮನಸ್ಸಿನಲ್ಲಿ ಗೋಮಾತೆ ಮತ್ತು ಮಹಿಷಿಯ ಹಾಲು ಮಾತ್ರ ಇದ್ದುದರಿಂದಲೂ, ವ್ರತವನ್ನು ಮತ್ತು ಹೇಗಾದರೂ ಪ್ರಾಣವುಳಿಸಿಕೊಳ್ಳಬೇಕೆಂಬ ಆಸೆ ನನಗೆ ಇದ್ದುದರಿಂದಲೂ, ವ್ರತವನ್ನು ಅಕ್ಷರಶಹ ಪಾಲಿಸಲು ಆಗದೆ ನನ್ನ ಮನಸ್ಸನ್ನು ವಂಚಿಸಿ ಮೇಕೆಯ ಹಾಲನ್ನು ತೆಗೆದುಕೊಳ್ಳಲು: ನಿಶ್ಚಯಿಸಿದೆನು. ನಾನು ಮೇಕೆಯ ಹಾಲನ್ನು ಕುಡಿಯಲು ನಿಶ್ಚಿಯಿಸಿದಾಗ ನನ್ನ ವ್ರತದ ಆತ್ಮನಾಶವಾಯತು ಎಂದು ನನಗೆ ಗೊತ್ತಾಯಿತು..

ಗಾಂಧಿ ಮತ್ತು ದ್ವಂದ್ವ:- ಗಾಂಧೀಜಿ ಸತ್ಯದ ಕಟುಪ್ರತಿಪಾದಕರು, ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಿದವರು, ಅವರು ಎಂದೂ ಪ್ರಜಾಪ್ರಭುತ್ವ ತತ್ವದ ವೈರಿಯಾಗಿರಲಿಲ್ಲ ಎನ್ನುವ ಭಾವನೆ ಅವಿರೋಧವಾಗಿ ಚಾಲನೆಯಲ್ಲಿದೆ. ಅದು ಕಿಂಚಿತ್ ಬದಲಾವಣೆಗೂ ಒಳಗಾಗದಷ್ಟು ಗಟ್ಟಿಯಾಗಿ ಇಂದಿಗೂ ಚಾಲನೆಗೊಳ್ಳುತ್ತಿದೆ. ಇದು ಜನ ಆವರ ಬಗ್ಗೆ ನಿರ್ವಿವಾದವಾಗಿ ತಾಳಿರುವ ಪೂಜ್ಯಭಾವನೆ. ಆದರೆ ವಾಸ್ತವ ಸತ್ಯಗಳೇ ಬೇರೆ ಎಂದಾಗ ಅದು ಸಹಿಸಿಕೊಳ್ಳಬೇಕಾದ ಆಘಾತ. ಅಂತಹ ಆಘಾತಗಳು ರೋಗವನ್ನು ಗುಣಪಡಿಸಲು ಮಾಡುವ ಶಸ್ತ್ರ ಚಿಕಿತ್ಸೆಯಂತೆ, ನೋವಾದರೂ ಅದರ ಪರಿಣಾಮ ಫಲಕಾರಿ.

೧. ಕಾಂಗ್ರೆಸ್ ಚುನಾವಣೆ ಮತ್ತು ಗಾಂಧಿ.- ಭಾರತ ಕಾಂಗ್ರೆಸ್ ೧೯೩೯ ರಲ್ಲಿ ಅದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿತು. ಸ್ಪರ್ಧಿಸಿದ್ದವರು ಇಬ್ಬರು, ಪಟ್ಟಾಭಿಸೀತಾರಾಮಯ್ಯ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್. ಗಾಂಧಿ ಹಾಗೂ ಉಳಿದ ರಾಷ್ಟ್ರೀಯ ನಾಯಕರೆಲ್ಲರೂ ಪಟ್ಟಾಭಿ ಸೀತಾರಾಮಯ್ಯನವರ ಪರ ನಿಂತರೆ ನೇತಾಜಿ ಒಂಟಿಯಾಗಿದ್ದರು. ಚುನಾವಣೆ ಪ್ರಚಾರಕ್ಕೆ ಹೋಗಲಾಗದಂತೆ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದ ನೇತಾಜಿ ಆಸ್ಪತ್ರೆಯಿಂದಲೆ ಕರೆಕೊಟ್ಟರು. ಜನ ನೇತಾಜಿಯನ್ನು ಗೆಲ್ಲಿಸಿದರು. ಆಗ ಗಾಂಧಿ ಮಾಡಿದ್ದೇನು! ಪ್ರಜಾಭಿಪ್ರಾಯಕ್ಕೆ ಮನ್ನಣೆ ಕೊಟ್ಟರೆ? ಖಂಡಿತಕೊಡಲಿಲ್ಲ. “ಪಟ್ಟಾಭಿ ಸೀತಾರಾಮಯ್ಯನ ಸೋಲು ನನ್ನ ಸೋಲು ಎಂದು ತಮ್ಮ ವ್ಯಕ್ತಿತ್ವಕ್ಕೆ ಆದ ದೊಡ್ಡ ಪೆಟ್ಟು ಎಂದು ಪರಿಭಾವಿಸಿ ಮಾಡಿದ ರಾಜಕೀಯಕ್ಕೆ ಹೇಸಿದ ನೇತಾಜಿ ಸ್ವ‌ಇಚ್ಛೆಯಿಂದ ರಾಜೀನಾಮೆಕೊಟ್ಟು INA ಕಟ್ಟಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾರೆ. ಇದು ಇತಿಹಾಸ. ಇಲ್ಲಿ ಗಾಂಧಿ ದಾರ್ಶನಿಕ ಕವಚ ತೊಟ್ಟ ದೊಡ್ಡ ರಾಜಕಾರಣಿಯಾಗಿ ಪ್ರಕಟವಾಗುತ್ತಾರೆ.

ಗಾಂಧಿಯ ಕೃತ್ಯಕ್ಕೆ ಹೇಸಿ ಅಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭವನ್ನು ನೇತಾಜಿ ಆಗಿನ ಸಂದರ್ಭವನ್ನು ಗಮನಿಸಿದರೆ ಎರಡನೆ ಮಹಾಯುದ್ಧದ ಆರಂಭ ಕಾಲ. ಈಗ ನಾವು ನಮ್ಮೊಳಗೆ ಒಡೆದು ಹೋಳಾಗಿಹೋದರೆ ದೇಶದಲ್ಲಿ ಅಂತರ್ ಯುದ್ಧ ಪ್ರಾರಂಭವಾಗುತ್ತದೆ. ಅದು ಆದಲ್ಲಿ ಅದರಿಂದ ಹೆಚ್ಚು ಅನುಕೂಲ ನಮ್ಮ ಶತ್ರುವಾದ ಬ್ರಿಟಿಷರಿಗೆ ಹೊರತು ಭಾರತಕ್ಕಲ್ಲ ಎಂದು ಸ್ವಯಂ ಇಚ್ಚೆಯಿಂದ ರಾಜೀನಾಮೆ ನೀಡಿ, INA ಕಟ್ಟಿ ತಮ್ಮದೇ ಆದ ಮಾರ್ಗದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾರೆ. ನೇತಾಜಿ ಅವರನ್ನು ಕಾಂಗ್ರೆಸ್‌ನಿಂದ ಮೂರು ವರ್ಷಗಳ ಕಾಲ ಉಚ್ಛಾಟಿಸುತ್ತಾರೆ.

ಸ್ವತಂತ್ರ ಭಾರತದ ಪ್ರಜಾಪ್ರತಿನಿಧಿಗಳಿಗೂ ಅದೇ ರೋಗ ತಟ್ಟಿ ಈಗ ಉಲ್ಬಣಗೊಂಡಿದೆ. ಅವರು ಇಂದು ಪ್ರಜೆಗಳ ಅಭಿಮತಕ್ಕೆ ವಿರುದ್ಧವಾಗಿ ತಮ್ಮ ಸ್ವಾರ್ಥಕ್ಕಾಗಿ ಪಕ್ಷಾಂತರ ಹಾಗೂ ಇನ್ನಿತರ ದುಷ್ಕೃತ್ಯಗಳಲ್ಲಿ ತೊಡಗಿದ್ದಾರೆ, ಎನ್ನುವುದು ಬಿತ್ತಿದಂತೆ ಬೆಳೆ ಎನ್ನುವ ತತ್ವಕ್ಕೆ ಅನುಗುಣವಾಗಿದೆ.

೨. ಗಾಂಧಿ ಮತ್ತು ಬಿರ್ಲಾ ಭವನ:- ಸಾದಾ ಜೀವನದ ಆದರ್ಶ ಕುರಿತು ೧೯೧೪ ರಲ್ಲಿ ಗಾಂಧಿ ಹಾಗೂ ಕಲ್ಲನ್‌ಬಾಕ್ ಅವರ ನಡುವೆ ನಡೆದ ಘಟನೆ ಆವರ ಆತ್ಮ ಕಥೆಯಲ್ಲಿ ಹೀಗಿದೆ. “ನಾವು ಸಾಧಿಸಲು ಪ್ರಯತ್ನ ಪಡುತ್ತಿರುವ ಸಾದಾ ಜೀವನದ ಆದರ್ಶಕ್ಕೆ ಈ ಬೈನಾಕ್ಯಲರ್‌ಗಳನ್ನು ಇಟ್ಟುಕೊಂಡಿರುವುದು ಅನುಗುಣವಾಗಿಲ್ಲವೆಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆನು. ನಮ್ಮ ಕ್ಯಾಬಿನ್‌ನಲ್ಲಿದ್ದ ಕಿಟಕಿ ಕಿಂಡಿಯ ಬಳಿ ನಿಂತು ಒಂದು ದಿನ ಚರ್ಚೆ ಮಾಡುತ್ತಿದ್ದಾಗ ನಮ್ಮವಾದ ತೀವ್ರಗತಿಗೆ ಮುಟ್ಟಿತ್ತು.

“ನಮ್ಮಿಬ್ಬರೊಳಗೆ ಇವನ್ನು ಚರ್ಚೆಯ ವಿಷಯವಾಗಿ ಮಾಡಿಕೊಳ್ಳುವುದಕ್ಕಿಂತ ,ಇವನ್ನು ಏಕೆ ಸಮುದ್ರಕ್ಕೆ ಎಸೆದು ನಾವು ಶಾಂತವಾಗಿರಬಾರದು” ಎಂದೆನು ನಾನು.

“ಈ ವ್ಯಾಜ್ಯಕ್ಕೆ ಕಾರಣವಾದ ಹಾಳು ಪದಾರ್ಥವನ್ನು ಅವಶ್ಶಕವಾಗಿ ಎಸೆದು ಬಿಡಿ” ಎಂದರು ಕಲ್ಲನ್ ಬಾಕರು. “ನಾನು ಹೇಳುವುದು ನಿಜವಾಗಿಯೂ ಎಸೆದು ಬಿಡೋಣ ಎಂದು” ಎಂದೆನು. “ನಾನು ಹೇಳುವುದು ನಿಜವಾಗಿಯೇ” ಎಂದರು ಅವರು, ತತ್‌ಕ್ಷಣ. “ನಾನು ಕೂಡಲೇ ಅವುಗಳನ್ನು ಸಮುದ್ರಕ್ಕೆ ಎಸೆದು ಬಿಟ್ಟೆನು. ಅವುಗಳ ಬೆಲೆ ಸುಮಾರು ಏಳು ಪೌಂಡು ಇದ್ದಿರಬಹುದು.” ಉಪಯೋಗಿಯಾಗಬಹುದಾದ ಬೈನಾಕ್ಯುಲರ್ ಹೊರತಾದ ಸಾದಾ ಜೀವನವನ್ನು ಪ್ರತಿಪಾದಿಸುವ ಗಾಂಧಿ ಶ್ರೀಮಂತ ಹಾಗೂ ಅದ್ದೂರಿಯ ಜೀವನ ನಡೆಸುತ್ತಿದ್ದ ಬಿರ್ಲಾ ನೀಡದ್ದ ಬೃಹತ್ ಭವನದಲ್ಲಿ ವಾಸ್ತವ ಹೂಡಿದ್ದು ಏಕೆ? ಹೇಳಿ ಕೇಳಿ ಬಿರ್ಲಾ ಘನಶಾಮದಾಸ್ ದಳ್ಳಾಳಿ. ತಮ್ಮ ಹನ್ನೆರಡನೆ ವಯಸ್ಸಿನಲ್ಲೆ ಆ ವೃತ್ತಿಗೆ ತೊಡಗಿಸಿಕೊಂಡಿದ್ದವ. ದಳ್ಳಾಳಿಗಳು ಎಂದರೆ ತಮಗೆ ಗಿಟ್ಟಿದಲ್ಲದೆ ಏನೊಂದನ್ನು ಮಾಡದ ಮನೋಧರ್ಮದವರು. ಈ ಬಿರ್ಲಾ ಸಂಸ್ಥೆಗಳು ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗುವ ತನಕದ ಅವಧಿಯಲ್ಲಿ ಕಾಂಗ್ರೆಸ್‌ಗೆ, ಗಾಂಧಿಗೆ ಒಟ್ಟು ಇಪ್ಪತ್ತು ಕೋಟಿ ಹಣವನ್ನು ನೀಡಿದ್ದುವು ಎಂಬ ವರದಿ ವಿಶ್ವಕೋಶದಲ್ಲಿ ದಾಖಲಾಗಿದೆ.

ಈ ದಳ್ಳಾಳಿ ರೋಗ ಇಂದು ’ಪಾರ್ಟಿಫಂಡ್’ ಹೆಸರು ಪಡೆದು ಆ ಈ ಪಾರ್ಟಿಗಳೆನ್ನದೆ ಎಲ್ಲ ಪಾರ್ಟಿಗಳೂ ದಳ್ಳಾಳಿಗಳಿಂದ ಇರಲಿ, ಸರ್ಕಾರದ ಇಲಾಖೆಗಳಲ್ಲಿ ಕಡ್ಡಾಯ ವಸೂಲಾಗುವ ಸ್ಥಿತಿ ಪ್ರಾಪ್ತವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರದ ಸ್ಟಾತಂತ್ರ್ಯಕ್ಕಾಗಿ ನಿಧಿ ಸಂಗ್ರಹಿಸುವುದು ಅಷ್ಟು ಕಷ್ಟವೇನೂ ಆಗಿರಲಿಲ್ಲ. ನೇತಾಜಿ ನೇತೃತ್ವದ INAಗೆ ಸ್ತ್ರೀಯರು ತಮ್ಮ ಪ್ರೀತಿ ಪಾತ್ರವಾದ ಒಡವೆಗಳನ್ನು ಅರ್ಪಿಸಿದ್ದಾರೆ. ಅನೇಕರು ಆನೇಕ ವಿಧದಲ್ಲಿ ನಿಸ್ವಾರ್ಥವಾಗಿ ಅರ್ಪಿಸಿದ್ದಾರೆ. ಆ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ ಮಾಡದ ಧನ ಮೋಹಿಗಳೂ ಇದ್ದರು. ಅವರನ್ನು ಕುರಿತು ೨೫-೧ಂ-೧೯೪೩ರಂದು ಮಲಯದ ವೇದಿಕೆಯಿಂದ ನೇತಾಜಿ ಈ ರೀತಿ ಎಚ್ಚರಿಸಿದ್ದರು. “ಕಾನೂನು ಬದ್ಧವಾಗಿ ಹೇಳಬೇಕೆಂದರೆ ರಾಷ್ಟ್ರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಸ್ವಂತ ಆಸ್ತಿ ಎನ್ನುವುದು ಇರುವುದಿಲ್ಲ. ನಿಮ್ಮ ಹತ್ತಿರ ಇರುವ ಸಂಪತ್ತು ನಿಮ್ಮದು ಎಂದು ಭಾವಿಸಿದ್ದರೆ ನೀವು ಮೋಹದಲ್ಲಿ ಮುಳುಗಿದ್ದೀರಿ. ನಿಮ್ಮ ಜೀವ ಹಾಗೂ ಸಂಪತ್ತು ಈಗ ನಿಮಗೆ ಸೇರಿಲ್ಲ. ಅವು ಭಾರತ ಕೇವಲ ಭಾರತಕ್ಕೆ ಮಾತ್ರ ಸೇರಿವೆ. ಈ ಸರಳ ಸತ್ಯ ನಿಮಗೆ ಗೊತ್ತಿದೆ ಎಂಬ ನಂಬಿಕೆ ನನಗಿದೆ. ಯಾವುದೇ ಮಾರ್ಗವಾಗಲೀ ನಾವು ನಮ್ಮ ಸ್ವಾತಂತ್ರ್ಯವನ್ನು ಗಳಿಸಲೇಬೇಕು. ಈ ಸರಳ ಸತ್ಯವನ್ನು ನೀವು ಅರಿತುಕೊಳ್ಳದೆ ಹೋದರೆ ಆಗ ನಿಮಗೆ ಸ್ಪಷ್ಟವಾಗಿ ಸಿದ್ಧಪಡಿಸಿದ ಮತ್ತೊಂದು ಮಾರ್ಗವಿದೆ. ಅದು ನಮ್ಮನ್ನು ಆಳಿದ ಬ್ರಿಟಿಷರಿಗೆ ಸಿದ್ಧಪಡಿಸಿರುವ ಜೈಲು. ನಿಮ್ಮ ಆಯ್ಕೆ ಜೈಲಾದರೆ ಅಲ್ಲಿ ನೀವು ಬ್ರಿಟಿಷರೊಂದಿಗೆ ಒಟ್ಟಾಗಿ ಇರಬಹುದು. ಆದರೆ ಇದನ್ನು ಜ್ಞಾಪಕದಲ್ಲಿಡಿ, ಯುದ್ಧ ಮುಗಿದು ಭಾರತ ಸ್ವಾತಂತ್ರ್ಯಗಳಿಸಿದ ಮೇಲೆ ಆ ಸ್ವತಂತ್ರ ಭಾರತದಲ್ಲಿ ನಿಮಗೆ ಸ್ಥಳವಿರುವುದಿಲ್ಲ”

ಇದು ನೇತಾಜಿ ಅವರ ಶುದ್ಧ ರಾಷ್ಟ್ರಪ್ರೇಮದ, ಅವರ ನಿಷ್ಕಳಂಕವಾದ ಅಂತರಂಗ ಬಹಿರಂಗಗಳ ಅಭಿವ್ಯಕ್ತಿಯಾಗಿದೆ.

ಸ್ವಾತಂತ್ರ್ಯಾನಂತರ ಎಲ್ಲ ಭ್ರಷ್ಠತೆಯನ್ನು ಮೈಗೂಡಿಸಿಕೊಂಡು ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಕೇವಲ ನಾಲ್ಕಾಣೆ ಚಂದ ನಿಗಧಿಪಡಿಸಿ ಡಾ|| ಲೋಹಿಯಾ ಸಮಾಜವಾದಿ ಪಕ್ಷವನ್ನು ರಾಷ್ಟ್ರಾದ್ಯಂತ ಕಟ್ಟಿ ಆದರ್ಶದ ಮಾರ್ಗದರ್ಶಿಯಾಗಿದ್ದಾರೆ. ಆದರೆ ಗಾಂಧಿ ದಳ್ಳಾಳಿಗಳ ಮೊರೆ ಹೋದದ್ದು ಏಕೆ? ದಳ್ಳಾಳಿಗಳು ಅರ್ಥಾತ್ ಬಂಡವಾಳಶಾಹಿಗಳು ಪ್ರಜಾಪ್ರಭುತ್ವದ ಆಂತರಿಕ ಶತ್ರುಗಳು ಎಂದು ಗಾಂಧಿಗೆ ಏಕೆ ಗೊತ್ತಾಗಲಿಲ್ಲ?

೩. ಚರಕ- ಉದ್ದಿಮೆ; ಭ್ರಮೆ; ವಾಸ್ತವ:- ಗಾಂಧಿಯ ಹಿಂದೆ ಇದ್ದವರು ಚರಕ-ಎಂದರೆ ಗುಡಿ ಕೈಗಾರಿಕೆಗಳ ಮೂಲಕ ಸರ್ವೋದಯವನ್ನು ಪ್ರತಿಪಾದಿಸಿದವರಲ್ಲ, ಹೃದಯದಲ್ಲಿ ಬೃಹತ್ ಗಿರಣಿಗಳು, ಉದ್ದಿಮೆಗಳನ್ನು ಹೊತ್ತವರು. ಗಾಂಧಿಯ ಚರಕವನ್ನು ಅವರು ಬೆಂಬಲಿಸುತ್ತಿದ್ದುದು ಮೇಲೆ.ನೋಟಕ್ಕಷ್ಟೆ. ಅವರು ಗ್ರಾಮ ಸ್ವರಾಜ್ಯದ ಸೋಗಿನ ಬಂಡವಾಳ ಶಾಹಿಗಳೇ ಹೊರತು ಗ್ರಾಮಸ್ಪರಾಜ್ಯದ ಪ್ರತಿಪಾದಕರಲ್ಲ-ಗಾಂಧಿಗೆ ಈ ಆಂತರಿಕ ಶತ್ರುಗಳ ಅರಿವಿಲ್ಲದಿದ್ದುದು ಒಂದು ದುರಂತವೇ. ಅವರ ಸುತ್ತ ಮುತ್ತಿದ್ದ ಸ್ವಾರ್ಥಿಗಳ ಅರಿವು ಆಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಸ್ವಾತಂತ್ರ್ಯ ಪ್ರಾಪ್ತವಾಗುವ ಒಂದು ವರ್ಷಕ್ಕೂ ಮೊದಲು ಅಂದರೆ ಜುಲೈ ೧೯೪೬ರಲ್ಲಿ “ಒಂದು ದುರಂತಕಾರಿ ವಿದ್ಯಮಾನ” ಎಂಬ ಟಿಪ್ಪಣಿಯಲ್ಲಿ ಗಾಂಧೀಜಿ ಹೀಗೆ ಬರೆಯುತ್ತಾರೆ. “ಸಂವಿಧಾನ ಸಭೆಯಲ್ಲಿ ಇರ ಬಯಸುವ ವ್ಯಕ್ತಿಗಳ ಎಷ್ಟೊಂದು ಪತ್ರಗಳು ನನ್ನ ಟಪಾಲಿನಲ್ಲಿರುತ್ತವೆಂದರೆ ನನಗೆ ಹೆದರಿಕೆಯಾಗುತ್ತದೆ. ಬುದ್ಧಿ ಜೀವಿ ವರ್ಗ ಭಾರತದ ಸ್ವಾತಂತ್ರ್ಯಕ್ಕಿಂತ ವೈಯಕ್ತಿಕ ಸುಖಲೋಲುಪತೆಯ ಬಗ್ಗೆ ಹೆಚ್ಚು ಆತುರದಲ್ಲಿದೆ, ಎಂಬ ಸಾರ್ವತ್ರಿಕ ಭಾವನೆಯ ಸೂಚಕವೂ ಇದು ಎಂದು ಸಂಶಯ ಬರುತ್ತಿದೆ.”

ನೇತಾಜಿಗೆ ಜನರ ನಾಡಿಯ ಮಿಡಿತಗೊತ್ತಿದ್ದರೆ ಗಾಂಧಿಗೆ ಆ ಅರಿವು ಆಗುವ ಹೊತ್ತಿಗೆ ಅನರ್ಥದ ಅಂತರಂಗ ವಿದ್ಯಮಾನಗಳು ಬೆಳೆದು ಬಲಗೊಂಡಿದ್ದವು. ಹೀಗೆ ಗಾಂಧಿ ಪ್ರಯೋಗಶೀಲರಾಗಿದ್ದರೆ ಹೊರತು ನೇತಾಜಿ ಅವರ ರೀತಿ ಪ್ರಾಕ್ಟಿಕಲ್ ಆಗಿರಲಿಲ್ಲ. ಇದು ಐತಿಹಾಸಕ ಸತ್ಯ. ರಾಷ್ಟ್ರಕಟ್ಟಲು ಬೇಕಾದ್ದು ಪ್ರಯೋಗವಲ್ಲ, ಪೂರ್ವಸಿದ್ಧತೆ, ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು.

“ನಾನು ಯಾವ ಭಾರತಕ್ಕೆ ನನ್ನ ಶ್ರಮವನ್ನು ಧಾರೆ ಎರೆಯುತ್ತೇನೋ ಆ ಭಾರತದಲ್ಲಿ ಶ್ರೀಮಂತ, ಬಡವ ಎಂಬ ವರ್ಗಭೇದವಿರುವುದಿಲ್ಲ; ಎಲ್ಲ ಜನಾಂಗದವರೂ ಪರಸ್ಪರ ಸೌಹಾರ್ದದಿಂದ ಜೀವಿಸುತ್ತಾರೆ; ಅಲ್ಲಿಯ ಕಡು ಬಡವನೂ ಇದು ನನ್ನ ರಾಷ್ಟ್ರ ಎಂದು ಆದರ ಪ್ರಗತಿಗೆ ತನ್ನ ದನಿಗೂಡಿಸುತ್ತಾನೆ. ನನ್ನ ಕನಸಿನ ಭಾರತ ಎಂದರೆ ಇದು.” ಗಾಂಧಿಯ ಈ ಕನಸು ಕನಸಾಗಿಯೆ ಉಳಿದಿದೆ. ಅಷ್ಟೇ ಅಲ್ಲ ಅದು ಇನ್ನೂ ಉಗ್ರ ರೂಪತಾಳಿ ಶ್ರೀಮಂತ ಬಡವ ವರ್ಗಗಳ ಅಂತರ ಹೆಚ್ಚಿದೆ; ಜನಾಂಗ ಜನಾಂಗಗಳ ನಡುವಿನ ಬಾಂಧವ್ಯ ಬೆಸೆಯಲಾರದಷ್ಟು ಬಿರುಕು ಬಿಟ್ಟಿದೆ; ಕಡು ಬಡವನ ದನಿಗೆ ಕವಡೆ ಬೆಲೆಯೂ ಇಲ್ಲದಂತಾಗಿದೆ. ಕೇವಲ ಕನಸುವುದಲ್ಲ. ಕನಸನ್ನು ನನಸಾಗಿಸುವ ಪೂರ್ವ ತಯಾರಿಯ ರಾಜಕೀಯ ಚಾಣಾಕ್ಷತನ ಹಾಗೂ ಧೀಮಂತಿಕೆ ಇಲ್ಲದವರು ಒಂದು ರಾಷ್ಟ್ರವನ್ನು ಎಂತಹ ದುರಂತಕ್ಕೆ ತಳ್ಳಬಹುದು ಎಂಬುದಕ್ಕೆ ಗಾಂಧಿ ಹಾಗೂ ಗಾಂಧಿಯ ಭಾರತ ಇಂದು ಸಾಕ್ಷಿಯಾಗಿ ನಿಂತಿದೆ. ಈ ಅಂಶವನ್ನು ಮುಂದಿನ ಪುಟಗಳಲ್ಲಿ ಇನ್ನೂ ವಿವರವಾಗಿ ನಿರೂಪಿಸಲಾಗಿದೆ.

೪. ಲೈಂಗಿಕ ದ್ವಂದ್ವ:- ” ಬ್ರಹ್ಮಚರ್ಯವನ್ನು ಕುರಿತು ಬರೆಯುತ್ತಾ ಗಾಂಧಿ ಹೀಗೆ ಹೇಳಿದ್ದಾರೆ “ನನಗೆ ಇನ್ನು ಹೆಚ್ಚು ಮಕ್ಕಳಾಗಬೇಕೆಂಬ ಆಸೆ ಇಲ್ಲದುದರಿಂದ ನಾನು ಆತ್ಮ ಸಂಯಮವನ್ನೇ ಸಾಧಿಸತೊಡಗಿದೆನು. ಈ ಸಾಧನೆಯಲ್ಲಿ ಅಸಂಖ್ಯಾತ ಕಷ್ಟಗಳಾದುವು. ನಾವು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗತೊಡಗಿದೆವು ದಿವಸದ ಕೆಲಸವೆಲ್ಲ ಮುಗಿದು ನನಗೆ ಪೂರ್ಣವಾಗಿ ಆಯಾಸವಾದ ತರುವಾಯ ನಾನು ಮಲಗಿ ಕೊಳ್ಳುತ್ತಿದ್ದೆನು ……… .. ಬ್ರಹ್ಮಚರ್ಯ ಆಚರಣೆ ನನಗೆ ಸುಲಭವಾಗಿದ್ದಿತೆಂದು ಯಾರೂ ಭಾವಿಸದಿರಲಿ. ಈಗ ನನಗೆ ೫೬ ವರ್ಷಗಳಾಗಿದ್ದರೂ ಅದು ಎಷ್ಟು ಕಷ್ಟ ಎಂಬುದು ನನಗೆ ಮನವರಿಕೆಯಾಗುತ್ತಿದೆ …… .. ಬ್ರಹ್ಮಚರ್ಯ ವ್ರತವನ್ನು ಪಾಲಿಸುವವರಿಗೆ ಸ್ವಾದೇಂದ್ರಿಯ (ನಾಲಿಗೆಯ ರುಚಿಯಮೇಲೆ ಹತೋಟಿ) ಮೊಟ್ಟ ಮೊದಲು ವಶವಾಗಿರಬೇಕು …. .. ಆದುದರಿಂದ ನಾನು ಈಗ ಆಹಾರದ ವಿಷಯದಲ್ಲಿ ನನ್ನ ಪ್ರಯೋಗಗಳನ್ನು ಬರಿಯ ಶಾಕಾಹಾರದ ದೃಷ್ಟಿಯಿಂದ ಮಾತ್ರವೇ ಅಲ್ಲದೆ ಬ್ರಹ್ಮಚರ್ಯದ ದೃಷ್ಟಿಯಿಂದಲೂ ನಡಸತೊಡಗಿದೆನು. ಈ ಪ್ರಯೋಗಗಳ ಪರಿಣಾಮವಾಗಿ. ಬ್ರಹ್ಮಚಾರಿಯ ಆಹಾರ ಮಿತವಾಗಿರಬೇಕು. ಸರಳವಾಗಿರಬೇಕು. ಸಾಂಬಾರ ವಸ್ತು ರಹಿತವಾಗಿರಬೇಕು ಮತ್ತು ಸಾಧ್ಯವಾದರೆ ಸ್ವಾಭಾವಿಕವಾಗಿ (ಬೇಯಿಸದ) ಇರಬೇಕು ಎಂಬುದನ್ನು ನಾನು ಮನಗಂಡೆನು. ”

ಇದು ಗಾಂಧಿಯ ಅಳುಕು ಮನಸ್ಸಿನ ಪ್ರತಿಬಿಂಬವಾಗಿದೆ. ಅಲ್ಲದೆ ಗಾಂಧಿ ತಮ್ಮ ಇಳಿವಯಸ್ಸಿನಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಲಗಿಸಿಕೊಂಡು ತಮ್ಮ ಇಂದ್ರಿಯ ನಿಗ್ರಹದ ಪ್ರಯೋಗವನ್ನೂ ಕೂಡ ಮಾಡಿದರು. ಇಂಥ ಪ್ರಯೋಗಗಳು ಬಾಲಿಷವಷ್ಟೆ ಅಲ್ಲ ಹಿಂಸೆಯ ಪ್ರತೀಕವೂ, ಆತ್ಮವಂಚಕವೂ ಆಗಿವೆ. ಪ್ರಯೋಗದ ನಂತರ ಆ ಇಬ್ಬರೂ ಮಹಿಳೆಯರು ಮಾನಸಿಕ ಅಸ್ವಸ್ಥತೆಯಿಂದ ಉಳಿದ ಜೀವನ ಕಳೆಯಬೇಕಾದ ದುರಂತಕ್ಕೆ ಒಳಗಾದದ್ದು ಈಗ ಇತಿಹಾಸ. ಬುದ್ಧ ವಿವೇಕಾನಂದರ ಮುಂದೆ ಗಾಂಧಿಯ ಇಂಥ ಪ್ರಾಯೋಗಿಕ ಮನಸ್ಸು ಹಾಸ್ಯಾಸ್ಪದವಾಗುತ್ತದೆ. ಸುಂದರ ಹೆಂಡತಿಯನ್ನ, ಮಗನನ್ನ, ಸಾಮ್ರಾಜ್ಯವನ್ನ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ತುಂಬು ಯೌವನವನ್ನ ತೊರೆದು ಕಠಿಣ ತಪಸ್ಸಿನ ಮೂಲಕ ದಾರ್ಶನಿಕನಾಗಿ ಬೆಳಕು ನೀಡಿದವನು. ವಿವೇಕಾನಂದರು ಮಾಂಸವನ್ನು ತಿಂದೂ ಇಂದ್ರಿಯವನ್ನು ನಿಗ್ರಹಿಸಿದವರು. ಖೇತ್ರಿ ಮಹಾರಾಜನ ಅರಮನೆಯಲ್ಲಿ ಆಸ್ಥಾನ ನರ್ತಕಿ ನೀಡಿದ ಆತಿಥ್ಯವನ್ನು ನಿರಾಕರಿಸಿದಾಗ ಆಕೆ ಹೇಳಿದ ಸೂರದಾಸರ ಹಾಡು ಕೇಳಿ ನನ್ನ ಕಣ್ಣು ತೆರೆಸಿದ ’ತಾಯಿ’ ಎಂದು ಆಕೆಯನ್ನು ಸಂಬೋಧಿಸಿ ’ಈಗ ನಾನು ವೇಶ್ಯೆಯ ಮನೆಯಲ್ಲಿ ನಿರ್ಭಯವಾಗಿ ನಿದ್ರಿಸಬಲ್ಲೆ’ ಎನ್ನುವ ನಿರ್ಧರಿತ ದೃಢಮನಸ್ಸನ್ನು ಪ್ರಕಟಸಿದವರು. ಸಹಧರ್ಮಿಣಿಯನ್ನು ಆದಿಶಕ್ತಿ ಎಂದು ಆರಾಧಿಸಿದ ರಾಮಕೃಷ್ಣ ಪರಮ ಹಂಸರ ಈ ದೇಶದಲ್ಲಿ ಗಾಂಧಿಯ ಬ್ರಹ್ಮಚರ್ಯದ ಪ್ರಯೋಗಗಳು ಬಾಲಿಷವಾಗುತ್ತವೆ. ಬುದ್ಧ ವಿವೇಕಾನಂದರು ಬೆಳಗುತ್ತಿದ್ದರೆ ಗಾಂಧಿಯ ಆದರ್ಶಗಳು ಕತ್ತಲೆ ಬೆಳೆಕಿನಾಟವಾಡುತ್ತಿದೆ.

ಗಾಂಧಿ ಸೋಲಿಗೆ ನೇತಾಜಿ ಗುರುತಿಸಿದ ಕಾರಣಗಳು:- ಗಾಂಧಿಯ ಸೋಲಿಗೆ ನೇತಾಜಿ ಐದು ಕಾರಣಗಳನ್ನು ಗುರುತಿಸಿದ್ದಾರೆ. ನೇತಾಜಿಯವರಿಗೆ ಗಾಂಧೀಜಿಯವರ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಗಾಂಧೀಜಿಯವರ ವ್ಯಕ್ತಿತ್ವವನ್ನು ಗೌರವಿಸುತ್ತಿದ್ದರು. ಸೈದ್ಧಾಂತಿಕವಾಗಿ ಅವರು ಗುರುತಿಸಿದ ಕಾರಣಗಳೆಂದರೆ:- ೧. ಶತ್ರುಗಳು ಯಾರು ಎಂದು ಗಾಂಧಿಗೆ ಗೊತ್ತಿರಲಿಲ್ಲ. ೨. ಯೋಜನೆಗಳನ್ನು ರೂಪಿಸಿಕೊಳ್ಳದಿರುವುದು. ೩.. ಅಂತರಾಷ್ಟ್ರೀಯ ಸಹಕಾರ ಕೇಳದಿದ್ದುದು. ೪. ಬ್ರಿಟಿಷರನ್ನು ನಂಬುವ ಪ್ರವೃತ್ತಿ ೫. ರಾಜಕೀಯ ವ್ಯಕ್ತಿಯಾಗಿದ್ದುಕೊಂಡು ಅದೇ ಸಮಯದಲ್ಲಿ ದಾರ್ಶನಿಕನಾಗಿ ನಿಂತದ್ದು.

ಇವುಗಳನ್ನು ಕುರಿತು ಕೊಂಚ ವಿಷದವಾಗಿ ಚರ್ಚಿಸುವ ಅಗತ್ಯವಿದೆ.

೧. ಶತ್ರುಗಳು ಯಾರು ಎಂದು ಗಾಂಧಿಗೆ ಗೊತ್ತಿರಲಿಲ್ಲ:- ಬ್ರಿಟಿಷರು ನಮ್ಮ ಶತ್ರುಗಳು ಎಂಬುದನ್ನು ನೇತಾಜಿ ಮನಗಂಡಿದ್ದ. ಆಂತರಿಕ ಶತ್ರುಗಳ ಬಗ್ಗೆ ಅವರಿಗೆ ಅರಿವಿತ್ತು. ಆದರೆ ಗಾಂಧೀಜಿ ಬ್ರಿಟಿಷರನ್ನು ಪೂರ್ಣವಾಗಿ ಒಪ್ಪಿಕೊಂಡು ಆವರ ಮನಃ ಪರಿವರ್ತನೆಗೆ ಪ್ರಾರ್ಥಿಸುತ್ತಿದ್ದರು. ಅಲ್ಲದೆ ಗಾಂಧಿಗೆ ಅವರ ಚರಕದ ಹಿಂದೆ ಬೆನ್ನು ಬಿದ್ದಿದ್ದ ಬಂಡವಾಳಶಾಹಿ ಮನೋಧರ್ಮದ ಆಂತರಿಕ ಶತ್ರುಗಳ ಅರಿವೂ ಇರಲಿಲ್ಲ. ಅಲ್ಲದೆ ತಮ್ಮ ಸುತ್ತ ಮುತ್ತಿಕೊಂಡಿದ್ದ ರಾಜಕೀಯ ಹಾಗೂ ಧಾರ್ಮಿಕ ಕವಚದ ಸ್ವಾರ್ಥಿಗಳನ್ನು ಗುರುತಿಸುವಲ್ಲಿ ಸೋತಿದ್ದರು.

೨. ಯೋಜನೆಗಳನ್ನು ರೂಪಿಸಿಕೊಳ್ಳದಿರುವುದು:- ಭಾರತ ಯಾವ ನೆಲೆಗಟ್ಟಿನಲ್ಲಿ ತನ್ನ ಪುನರ್ ನಿರ್ಮಾಣವನ್ನು ಹಮ್ಮಿಕೊಳ್ಳಬೇಕೆಂಬುದಕ್ಕೆ ನೇತಾಜಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ೧೯೪೪ರಲ್ಲಿ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿ ಎಂಟು ಜನ ಮಂತ್ರಿಗಳನ್ನು ನೇಮಿಸಿದ್ದರು. ಕೋಮುವಾದವನ್ನು ಹತ್ತಿಕ್ಕಲು ಸಮಿತಿ ರಚಿಸಿದ್ದರು. ರಾಣಿಝಾನ್ಸಿ ರೆಜಿಮೆಂಟಿನಲ್ಲಿ ಸಾವಿರಾರು ಮಹಿಳೆಯರನ್ನು ತೊಡಗಿಸಿದ್ದರು. ಭಾಷೆಯ ಬಗ್ಗೆ ಕೂಡ ಆವರಿಗೆ ಸ್ಪಷ್ಟತೆ ಇತ್ತು. ಹಿಂದೂ ಸ್ತಾನಿಯನ್ನು ರಾಷ್ಟ್ರೀಯ ಭಾಷೆಯಾಗಿಸಬೇಕು, ಉರ್ದು ಮತ್ತು ಹಿಂದಿಯನ್ನು ಪ್ರತ್ಯೇಕಿಸುವುದು ಕೃತಕ ಎಂದಿದ್ದರು. ರೋಮನ್ ಲಿಪಿಯನ್ನು ನಮ್ಮ ಐಕ್ಯತೆಯ ಹಾಗೂ ಅಂತರರಾಷ್ಟ್ರೀಯ ಸಂಪರ್ಕ ಭಾಷೆಯಾಗಿಸಬೇಕೆಂದಿದ್ದರು.

’ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಜೊತೆ ಎಂದೂ ಹೊಂದಾಣಿಕೆ ಮಾಡಿಕೊಳ್ಳದ ಹೋರಾಟ’ ಎನ್ನುವ ನೇತಾಜಿ ಬ್ರಿಟಿಷರೊಂದಿಗೆ ಹೊಂದಾಣಿಕೆ ಎಂದರೆ ಮತ್ತೆ ಗುಲಾಮೀಯತೆ ಜೊತೆ ಹೊಂದಾಣಿಕೆ ಎಂದು ಗುಡುಗುತ್ತಿದ್ದರು. ಗಾಂಧೀಜಿಯವರ ಗುರಿ ಕೇವಲ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಸ್ವತಂತ್ರ ಭಾರತ ಯಾವ ದಿಕ್ಕಿನಲ್ಲಿ ಕ್ರಮಿಸಬೇಕೆಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ. ಕಾಂಗ್ರೆಸ್ ಗುರಿ ಸ್ವಾತಂತ್ರ್ಯಗಳಿಸುವುದು, ಸ್ವತಂತ್ರ ಭಾರತವನ್ನು ಅನಂತರ ಯಾರಾದರೂ ನಡೆಸುವುದು ಎಂಬುದಾಗಿತ್ತು. ಆ ಕಾರಣಕ್ಕಾಗಿಯೆ ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಹೆಸರನ್ನು ಬಳಸಬಾರದು ಎಂದು ಗಾಂಧಿ ಹೇಳಿದ್ದು. ಆದರೆ ನೇತಾಜಿ ಜಾತಿ, ಮತ, ಕೋಮು, ಭಾಷೆ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳಿಂದ ಶತಶತಮಾನಗಳಿಂದ ನರಳುತ್ತಿರುವ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕಾದರೆ ಯಾವ ನೆಲೆಗಟ್ಟಿನಲ್ಲಿ ನಿಂತು ಕೆಲಸ ಮಾಡಬೇಕೆಂಬ ಪೂರ್ಣ ದೃಷ್ಟಿ ಅವರಿಗಿತ್ತು. ವಿವೇಕಾನಂದರ ತಂದೆ ವಿಶ್ವನಾಥದತ್ತ ವಿವೇಕಾನಂದರಿಗೆ “ಅನ್ಯರು ಬಂದು ಭೂಮಿಯನ್ನು ಆಕ್ರಮಿಸಿಕೊಂಡರೆ ಅವರು ನಮ್ಮನ್ನು ಗೆದ್ದಂತಲ್ಲ. ಆದರೆ ಅವರು ಯಾವಾಗ ನಮ್ಮ ಸಂಸ್ಕೃತಿಯನ್ನು ಆಕ್ರಮಿಸಿಕೊಳ್ಳಲು ತೊಡಗುತ್ತಾರೋ ಆಗ ಅವರು ಎಲ್ಲವನ್ನೂ ಗೆದ್ದಂತೆ” ಎಂದು ಹೇಳಿದ ಮಾತುಗಳು ನೇತಾಜಿಯವರ ಆದರ್ಶವಾಗಿತ್ತು. ಆದರೆ ಈ ಯಾವೊಂದೂ ಯೋಜನೆಯನ್ನು ರೂಪಿಸಿಕೊಳ್ಳದ ಗಾಂಧಿ ಸಾಮರ್ಥ್ಯ ಇರಲಿ ಇಲ್ಲದಿರಲಿ ಕೋಮು ಸಾಮರಸ್ಯಕ್ಕಾಗಿ ’ಜಿನ್ನಾ ಈ ದೇಶದ ಪ್ರಧಾನಿ ಆಗಲಿ’ ಎಂಬ ರಾಜಕೀಯ ತಂತ್ರಗಾರಿಕೆಯಿಂದ ದೇಶವನ್ನು ಬಲಿಗೊಡಲು ಹಿಂದೆಗೆಯಲಿಲ್ಲ. ಆದರೆ ಗಾಂಧಿಯನ್ನು ನುಂಗಿ ನೊಣೆಯ ಬಲ್ಲ ಶಕ್ತಿ ಇದ್ದ ನೆಹರೂ ಯಾವ ತಂತ್ರ ಮಾಡಿದರು ಎಂಬುದು ಈಗ ಇತಿಹಾಸ.

೩. ಅಂತರ ರಾಷ್ಟ್ರೀಯ ಸಹಕಾರ ಕೇಳದಿದ್ದುದು:- ಗಾಂಧಿ ಬ್ರಿಟಿಷರನ್ನು ನಂಬುವ ಹಾಗೂ ಓಲೈಸುವ ಪ್ರವೃತ್ತಿಯನ್ನು ಬಿಟ್ಟರೆ ಅಂತರ ರಾಷ್ಟ್ರೀಯವಾಗಿ ಯಾವ ಅಥವಾ ಯಾರ ಸಹಕಾರವನ್ನೂ ಕೇಳಲಿಲ್ಲ. ಅದು ಅವರ ಸೀಮಿತ ದೃಷ್ಟಿಯ ದ್ಯೋತಕವಾಗಿದೆ. ಅಲ್ಲದೆ ಅವರ ಏಕಮುಖ ಪ್ರತಿಬಿಂಭವೂ ಕೂಡ. ಆದರೆ ಪ್ರಾಚ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಸ್ಪಷ್ಟ ಅರಿವಿದ್ದ ಸುಭಾಷ್ ಅವರಿಗೆ ದ್ವಿಮುಖ ನೀತಿಯ ಬ್ರಿಟಿಷರನ್ನು ಒದ್ದೋಡಿಸುವುದರ ಮೂಲಕ ಇಡೀ ಪೂರ್ವ ಏಷ್ಯಾವನ್ನು ಬಿಡುಗಡೆ ಗೊಳಿಸಬೇಕೆಂಬ ದೂರ ದೃಷ್ಟಿ ಇದ್ದಕಾರಣ ಪ್ರಪಂಚದ ಬ್ರಿಟಿಷ್ ವಿರುದ್ಧದ ಶಕ್ತಿಗಳನ್ನು ಒಂದು ವೇದಿಕೆಗೆ ತರುವ ಸಾಮರ್ಥ್ಯ ಅವರಿಗಿತ್ತು. ಭಾರತ ವನ್ನೊಳಗೊಂಡಂತೆ ಸರ್ವತಂತ್ರ ಸ್ವತಂತ್ರವಾದ ಪೂರ್ವ ಏಷ್ಯಾದ ಬಿಡುಗಡೆ ಅವರ ಗುರಿಯಾಗಿತ್ತು.

ನೇತಾಜಿ ಜರ್ಮನಿಯ ಸಹಾಯ ಕೇಳಿದ್ದು ಸರಿಯಲ್ಲ ಎನ್ನುವ ವಾದವಿದೆ. ಹಿಟ್ಲರನ ಧೋರಣೆ ಏನೇ ಇದ್ದರೂ ಐತಿಹಾಸಿಕ ಸಂದರ್ಭದಲ್ಲಿ ಜರ್ಮನಿಯ ಸಹಾಯ ಭಾರತಕ್ಕೆ ಹೆಚ್ಚು ಅರ್ಥಪೂರ್ಣವಾಗಿತ್ತು ಎನ್ನುವುದನ್ನು ರಾಷ್ಟ್ರ ಕವಿ ಕುವೆಂಪು ಅಂಥ ಮೇಧಾವಿಗಳು ಗುರುತಿಸಿದ್ದಾರೆ.

ಆಹಿಂಸಾ ಮಾರ್ಗಕ್ಕೆ ಓತ, ಯುದ್ಧವಿರೋಧಿ ನಿಲುವನ್ನು ತಳೆದ ಗಾಂಧೀಜಿ ಎರಡನೆ ಮಹಾಯುದ್ಧದಲ್ಲಿ ಭಾರತ ಬ್ರಿಟಿಷ್ ಪರ ನಿಲ್ಲಬೇಕೆಂದು ಯುದ್ಧಕ್ಕೆ ಅರ್ಥಾತ್ ಹಿಂಸೆಗೆ ಬೆಂಬಲ ಸೂಚಿಸಿದ್ದಾದರೂ ಹೇಗೆ? ಗಾಂಧಿಗೆ ಯುದ್ಧ ಜರುಗುವುದು ಬೇಕಿದ್ದರೆ ಬ್ರಿಟಿಷ್‌ನವರ ವಿರುದ್ಧ ಯುದ್ಧ ಬೇಡ ಏಕೆ? ಇದು ಅವರ ವ್ಯಕ್ತಿತ್ವದ ಚಿದಂಬರ ರಹಸ್ಯವಾಗಿದೆ. ಹಾಗೆ ನೋಡಿದರೆ ಜರ್ಮನರು ಭಾರತದ ಸಂಸ್ಕೃತಿಯನ್ನು ಗೌರವಿಸಿ ಅವರು ಭಾರತಕ್ಕೆ ಸಲ್ಲಿಸಿರುವ ಸೇವೆ ಅಪಾರವಾದುದು. ವೇದೋಪನಿಷತ್ತುಗಳನ್ನು ಸಂಗ್ರಹಿಸಿ ವ್ಯಾಖ್ಯಾನಿಸಿದ ಕೀರ್ತಿ ಜರ್ಮನಿಯ ಮ್ಯಾಕ್ಸ್‌ ಮುಲ್ಲರ್‌ಗೆ ಸಲ್ಲುತ್ತದೆ. ವಿಶ್ವದಲ್ಲಿ ಸಂಸ್ಕೃತದ ಮೊದಲ ವಿಶ್ವವಿದ್ಯಾಲಯವನ್ನು ತೆರೆದ ಕೀರ್ತಿ ಜರ್ಮನಿಗೆ ಸಲ್ಲುತ್ತದೆ. ಕನ್ನಡದ ಸಾಹಿತ್ಯ ಚರಿತ್ರೆಯನ್ನು ಬರೆದ- ಬಿ. ಎಲ್. ರೈಸ್ ಜರ್ಮನ್‌, ಕನ್ನಡ-ಕನ್ನಡ, ಇಂಗ್ಲಿಷ್ ಬೃಹತ್ ನಿಘಂಟನ್ನು ಮೊದಲಿಗೆ ಕೊಟ್ಟ ಕೀರ್ತಿ ಜರ್ಮನಿಯ ಕಿಟ್ಟಲ್‌ಗೆ ಸಲ್ಲುತ್ತದೆ.

’ಅತ್ಯಂತ ಆಳವಾದ ಚಿಂತನೆಗಳಿಂದ ಪರಿಹಾರ ರೂಪದಲ್ಲಿ ಮಾನವ ಪ್ರಗತಿಗೆ, ಬದುಕಿನ ಮೂಲಭೂತ ಸಮಸ್ಯೆಗಳಿಗೆ ಪ್ಲೇಟೋ ಮತ್ತು ಕಾಂಟ್ ಅವರನ್ನು ಅಧ್ಯಯನ ಮಾಡಿರುವವರ ಗಮನವನ್ನೂ ಸೆಳೆವ ಕೊಡುಗೆ ಯಾವ ದಿಗಂತದಡಿಯಲ್ಲಿ ಗರಿಗೆದರಿವೆ ಎಂದು ನನ್ನನ್ನು ಕೇಳಿದರೆ ನಾನು ಭಾರತವನ್ನು ಸೂಚಿಸುತ್ತೇನೆ; ಯೂರೋಪಿನಲ್ಲಿರುವ ನಾವು ಯಾವ ಗ್ರೀಕ್ ಮತ್ತು ರೋಮನ್ ಹಾಗೂ ಸೆಮಿಟಿಕ್ ಜನಾಂಗ ಜ್ಯೂಗಳ ಚಿಂತನೆಯನ್ನು ಪೂರ್ಣವಾಗಿ ಒಪ್ಪಿರುವೆವೋ ಆ ನಮ್ಮ ಅಂತರಂಗದ ಜೀವನ ಪಾವನಗೊಳ್ಳಲು, ವಿಶ್ವವ್ಯಾಪಕವಾಗಲು, ವಾಸ್ತವವಾಗಿ ಹೆಚ್ಚು ಮಾನವೀಯವಾಗಲು, ಬೌತಿಕ ಪ್ರಪಂಚಕ್ಕಷ್ಟೇ ಅಲ್ಲ ಆಧ್ಯಾತ್ಮಿಕ ಪ್ರಪಂಚದ ದಿವ್ಯ ರೂಪ ಪಡೆಯಲು ಯಾವ ಸಾಹಿತ್ಯದಿಂದ ಸಾಧ್ಯ ಎಂದು ನನ್ನನ್ನು ಕೇಳಿದರೆ ನಾನು ಮತ್ತೆ ಭಾರತವನ್ನು ಸೂಚಿಸುತ್ತೇನೆ. ” ಎಂದು ಜರ್ಮನಿಯ ಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ೧೮೮೨ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ “ಭಾರತ ನಮಗೆ ಏನು ಕಲಿಸಬಹುದು ಎಂಬ ವಿಷಯ ಕುರಿತು ನೀಡಿದ ಉಪನ್ಯಾಸದಲ್ಲಿ ಭಾರತದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದಿದ್ದಾರೆ.

ವಿವೇಕಾನಂದರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉಂಟುಮಾಡಿದ ಪ್ರಾಭವವನ್ನು ಕುರಿತು “ಆತನ ಪ್ರಭಾವ ಇನ್ನೂ ದೈತ್ಯ ಶಕ್ತಿಯಾಗಿ ಕೆಲಸ ಮಾಡುತ್ತಿದೆ ….. .. ವಿವೇಕಾನಂದರ ಅಮೇರಿಕಾ ಭೇಟಿಯ ನಂತರ ಆತನನ್ನು ಅನುಸರಿಸಿದವರು ಭಾರತಕ್ಕೆ ಮಾಡುತ್ತಿರುವ ಕೆಲಸ ಲಂಡನ್ನಿನ ನೂರು ಕಾಂಗ್ರೆಸ್ ಮಾಡುವ ಪ್ರಭಾವಕ್ಕಿಂತ ಹೆಚ್ಚು ಪ್ರಭಾವವನ್ನುಂಟು ಮಾಡಿದೆ” ಎಂದು ಅರವಿಂದ ಘೋಷರು ಭಾರತಕ್ಕೆ ಇಂಗ್ಲಿಂಡ್‌ಗಿಂತ ಅನ್ಯಕರಾಷ್ಟ್ರಗಳ ಕೊಡುಗೆಯನ್ನು ಕಂಡರಿಸಿದ್ದಾರೆ.

೪. ಬ್ರಿಟಿಷರನ್ನು ನಂಬುವ ಪ್ರವೃತ್ತಿ:- ಬ್ರಿಟಿಷರನ್ನು ನಂಬುವ ಪ್ರವೃತ್ತಿ ಗಾಂಧಿಗೆ ರಕ್ತದ ಕಣಕಣದಲ್ಲಿ ತುಂಬತ್ತು. ಇದನ್ನ ಬ್ರಿಟಿಷರು ಅತಿ ಬುದ್ಧಿವಂತಿಕೆಯಿಂದ ಬಳಸಿಕೊಂಡರು. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಗಾಂಧಿಯ ಅಹಿಂಸಾಮಾರ್ಗ ಒಂದೇ ಕಾರಣವಾಗಿರಲಿಲ್ಲ. ಎರಡನೆ ಮಹಾಯುದ್ಧದ ನಂತರ ಪ್ರಪಂಚದ ಸ್ಥಿತಿ, ಬ್ರಿಟಿಷರ ಅಸಹಾಯಕತೆ, ಭಾರತದ ಉಗ್ರವಾದಿಗಳ ಪ್ರಾಭಲ್ಯ ಮುಂತಾದ ಆನೇಕ ಕಾರಣಗಳೂ ಇವೆ. ಹೆಚ್ಚಾಗಿ ಅಂತರ ರಾಷ್ಟ್ರೀಯ ಪರಿಸ್ಥಿತಿ ಬ್ರಿಟಿಷರಿಗೆ ಭಾರತವನ್ನು ಆದಷ್ಟು ಬೇಗ ಬಿಟ್ಟು ಹೋಗುವ ಒತ್ತಡವನ್ನುಂಟು ಮಾಡಿತ್ತು. ಅದು ಅವರಿಗೆ ಐತಿಹಾಸಿಕ ಅನಿವಾರ್ಯವಾಗಿತ್ತು.

ಆದರೆ ಅವರು ಅವರನ್ನು ನಂಬಿದ್ದ ಗಾಂಧಿಗೆ ಕೊಟ್ಟದ್ದೇನು? ಜಲಿಯನ್‌ವಾಲಾಬಾಗ್‌ನಂತ ಘಟನೆಗಳನ್ನು, ಭಗತ್‌ಸಿಂಗ್‌ನಂತ ಸ್ವಾತಂತ್ರ್ಯ ಪ್ರೇಮಿಗಳ ಕೊರಳಿಗೆ ಉರುಳನ್ನು, ಭಾಷೆಯ ಗುಲಾಮಗಿರಿಯನ್ನು, ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮೊಳಗೆ ಸದಾ ದ್ವೇಷಾಸೂಯೆಯ ದಳ್ಳುರಿಯಲ್ಲಿ ಬೇಯುವಂಥ ಭಾರತದ ವಿಭಜನೆಯನ್ನು. ಎಲ್ಲಕ್ಕಿಂತ ಹೆಚ್ಚಾಗಿ ಒಡೆದಾಳುವ ನೀತಿಯನ್ನು.

ಬ್ರಿಟಿಷರ ಈ ಒಡೆದಾಳುವ ನೀತಿಯನ್ನು ರಾಷ್ತ್ರೀಯ ಕಾಂಗ್ರೆಸ್ ಮೈಗೂಡಿಸಿಕೊಂಡಿತ್ತು. ಈ ಅನಿಷ್ಟ ಪರಂಪರೆಯ ವಿರುದ್ಧ ೧೯೫೬ ರಷ್ಟು ಹಿಂದೆಯೇ ಆಚಾರ್ಯ ಕೃಪಲಾನಿ ಅಧಿಕಾರ ರೂಢವಾಗಿದ್ದ ಕಾಂಗ್ರೆಸ್‌ಗೆ “ಗೂಂಡಾಗಳೂ ಅಲ್ಲ ಕಾಳಸಂತೆಕೋರರೂ ಅಲ್ಲ, ಕಮ್ಯುನಿಸ್ಟರೂ ಅಲ್ಲ; ಆದರೆ ಕಾಂಗ್ರಸ್ಸಿಗರಾದ ನೀವು ಈ ಶೈಶವ ಪ್ರಜಾಪ್ರಭುತ್ವದ ಬದ್ಧ ವೈರಿಗಳಾಗಿದ್ದೀರಿ. ಭಾರತದಲ್ಲಿ ಪ್ರಜಾಪ್ರಭುತ್ವವೇನಾದರೂ ಅಳಿದು ಹೋದರೆ ಅದಕ್ಕೆ ಜವಾಬ್ದಾರರು ನೀವೇ ಆಗುತ್ತೀರಿ. ನೀವು ಒಂದುದಿನ ಬದುಕಬಹುದು ಅದಕ್ಕಿಂತ ಹೆಚ್ಚಾಗಿ ಅಲ್ಲ. ಆದರೆ ನಿಮ್ಮ ನಾಚಿಕೆಗೇಡಿತನಕ್ಕೆ ಇದು ಇತಿಹಾಸದ ತೀರ್ಪಾಗುತ್ತದೆ” ಎಂದು ಎಚ್ಚರಿಸಿದ್ದರು. ಆದರೆ ಕಾಲಕಳೆದಂತೆ ಮತ್ತಾವ ಪಕ್ಷವೂ ಕಾಂಗ್ರೆಸ್‌ಗಿಂತ ಭಿನ್ನವಾಗಲಿಲ್ಲ ಎನ್ನುವುದು ವಿಷಾದದ ಸಂಗತಿ.

ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಸಂದರ್ಭದಲ್ಲಿ ಚರ್ಚಿಲ್ “ಸ್ವತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗೂ ನಿರಂಕುಶ ದರೋಡೆ ಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟರೆ ಒಂದು ತುಂಡು ಬ್ರೆಡ್ಡಾಗಲೀ, ಸೀಸೆ ನೀರಾಗಲೀ ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ ……. .. ಕೆಲವು ಕಾಲಾನಂತರ ಈ ಜಳ್ಳು ಜನರ ಗುರುತೂ ಉಳಿಯುವುದಿಲ್ಲ. ಅವರು ತಮ್ಮ ತಮ್ಮೊಳಗೆ ಹೊಡೆದಾಡುತ್ತಾರೆ. ಈ ಬಹಿರಂಗ ಕಾದಾಟದಿಂದಾಗಿ ಭವ್ಯ ಭಾರತ ಕಳೆದು ಹೋಗುತ್ತದೆ.” ಎಂದು ಹೇಳಿದ್ದ. ಇಂತಹ ಪರಿಸ್ಥಿಯನ್ನು ಗಾಂಧಿ ಊಹಿಸಿರಲಿಲ್ಲ. ಆದರೆ ಚರ್ಚಿಲ್‌ಗಿಂತ ಮೊದಲೆ ಮನಗಂಡಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ “ಸಾವಿರಾರು ವರ್ಷಗಳಿಂದ ಜಾತಿ, ಮತ, ಕೋಮು, ಭಾಷೆ, ಅಜ್ಞಾನ, ಅನಕ್ಷರತೆ, ಮೂಢನಂಭಿಕೆಗಳಿಂದ ನರಳುತ್ತಿರುವ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕಾದರೆ ತ್ಯಾಗ ಮನೋಭಾವದ ಉಕ್ಕಿನ ಸರ್ವಾಧಿಕಾರಿಯೊಬ್ಬ ಕನಿಷ್ಟ ಇಪ್ಪತ್ತು ವರ್ಷಗಳ ಕಾಲ ಭಾರತವನ್ನು ಆಳಬೇಕು ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದರು.

೫. ರಾಜಕೀಯ ವ್ಯಕ್ತಿ ಯಾಗಿದ್ದುಕೊಂಡು ಅದೇ ಸಮಯದಲ್ಲಿ ಪ್ರಪಂಚದ ದಾರ್ಶನಿಕನಾಗಿ ನಿಂತದ್ದು ಗಾಂಧಿ ತಮ್ಮ ದಾರ್ಶನಿಕ ವ್ಯಕ್ತಿತ್ವದೊಳಗೆ ರಾಜಕೀಯವನ್ನ, ರಾಜಕೀಯ ವ್ಯಕ್ತಿತ್ವ ದೊಳಗೆ ಸೈದ್ಧಾಂತಿಕ ಪ್ರಯೋಗಗಳನ್ನು ಮಾಡ ಹೊರಟು ಎರಡರಲ್ಲೂ ಪೂರ್ಣ ಯಶಸ್ಸು ಕಾಣದ ವ್ಯಕ್ತಿಯಾಗಿ ಕಾಣಿಸುತ್ತಾರೆ. ಬುದ್ಧನ ದಾರ್ಶನಿಕತೆಯಾಗಲೀ, ಮಾವೋತ್ಸೆ ತುಂಗನ ರಾಜಕೀಯ ಮುತ್ಸದ್ಧಿ ತನವಾಗಲೀ ಗಾಂಧಿಗೆ ಇರಲಿಲ್ಲ. ಆದ್ದರಿಂದ ಅವರ ಪ್ರಯೋಗ ಅವರ ಕಣ್ಣೆದುರಿನಲ್ಲೇ ಮಣ್ಣುಮುಕ್ಕಿದ್ದು ಇತಿಹಾಸ.

“ನಾನು ರಾಜಕೀಯ ವ್ಯಕ್ತಿಯ ವೇಷಧರಿಸಿದ್ವರೂ ನಿಜವಾಗಿಯೂ ಅಂತರಂಗದಲ್ಲಿ ನಾನು ಧಾರ್ಮಿಕ ವ್ಯಕ್ತಿ ಎಂದು ಗಾಂಧಿ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೆಚ್ಚು ಒತ್ತು ಕೊಟ್ಟದ್ದು ಧಾರ್ಮಿಕ ನಿಷ್ಠೆಗೆ. ರಾಜಕೀಯದಿಂದ ಹೊರತಾಗಿದ್ದರೆ ಈ ಶತಮಾನ ಕಾಣುತ್ತಿದ್ದ ಪ್ರಪಂಚದ ಅತ್ಯತ್ತಮ ದಾರ್ಶನಿಕನಾಗಬಹುದಾಗಿದ್ದ ಗಾಂಧಿ ರಾಜಕೀಯ ಕೆಸರಿನಲ್ಲಿ ಸಿಕ್ಕಿ ಭೂಮಿಯಲ್ಲಿ ಹೂತು ಹೋಗುತ್ತಿದ್ದರೆ ಆತನ ದಾರ್ಶನಿಕ ಕೈಗಳು ಆಕಾಶದ ಅನಂತತೆಗೆ ಚಾಚಿವೆ.

“ಓ ಭಾರತೀಯರೆ, ಗಾಂಧೀಜಿ ನಮಗೆ ಶತ್ರುವಾಗಿದ್ದರೂ ದೇಹದ ಒಂದು ಕೂದಲೂ ಕೊಂಕದಂತೆ ನೋಡಿಕೊಂಡೆವು. ಆದರೆ ಗಾಂಧೀಜಿ ನಿಮಗೆ ರಾಷ್ಟ್ರಪಿತನಾಗಿದ್ದರೂ ಸ್ವಾತಂತ್ರ್ಯ ಪಡೆದ ಐದು ತಿಂಗಳಲ್ಲಿ ಅವರ ಕೊಲೆ ಮಾಡಿದಿರಿ” ಎಂದು ಚರ್ಚಿಲ್ ಹೇಳಿದ್ದು ವಾಸ್ತವ ಸತ್ಯ. ಗೋಡ್ಸೆ ಕೊಂದದ್ದು ರಾಜಕೀಯದ ಗಾಂಧಿಯನ್ನೋ ಇಲ್ಲ ದಾರ್ಶನಿಕ ಗಾಂಧಿಯನ್ನೋ? ರಾಜಕೀಯದ ಗಾಂಧಿ ಕೊಲೆಯಾಗಿದ್ದರೆ ಅದು ದುರಂತ….. ದಾರ್ಶನಿಕನ ಕೊಲೆಯಾಗಿದ್ದರೆ ಅದು ಅಮರ. ಇಬ್ಬರ ಕೊಲೆಯೂ ಆಗಿದ್ದರೆ ಅದು ಇತಿಹಾಸದ ವ್ಯಂಗ್ಯ.

ಅಹಿಂಸೆ, ಗಾಂಧಿ, ವಾಸ್ತವ:- ಅಹಿಂಸಾ ತತ್ವ ಭಾರತದ ಸ್ಥಿತಿ ಮತ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಷ್ಟುವಾಸ್ತವ? ಹಣ, ದರ್ಪ, ಕ್ರೌರ್ಯ, ದಬ್ಬಾಳಿಕೆ ಒಂದು ಕಡೆ; ಬಹುಸಂಖ್ಯಾತ ದುರ್ಬಲರ ದೈನ್ಯಸ್ಥಿತಿ ಮತ್ತೊಂದು ಕಡೆ. ಇದನ್ನ ಅರಿವಿದ್ದ ಮೌಲಾನ ಅಜಾದ್ “ಗಾಂಧಿಯವರಿಗೆ ಅಹಿಂಸಾವಾದ ನಂಬಿಕೆಯ ಪ್ರಶ್ನೆ. ಆದರೆ ನಮಗೆ ಇದು ರಾಜಕೀಯದ ಪ್ರಶ್ನೆ” ಎಂದು ಎಚ್ಚರಿಕೆ ನೀಡಿದ್ದರು. “ಒಂದು ಆಂದೋಲನದ ಕ್ರಮಬದ್ಧತೆಯನ್ನು ಅದು ಸಂವಿಧಾನಾತ್ಮಕವೆ ಅಥವಾ ಸಂವಿಧಾನ ಬಾಹಿರವೆ ಎಂಬ ಮಾತುಗಳಿಂದ ಪ್ರಶ್ನಿಸಬೇಕೇ ಹೊರತು ಅದು ಹಿಂಸಾಮಾರ್ಗವೆ ಅಥವಾ ಅಹಿಂಸಾಮಾರ್ಗವೆ ಎಂಬ ಮಾತುಗಳಿಂದ ಅಲ್ಲ. ಗಾಂಧಿಯ ಈ ಅಹಿಂಸಾವಾದ ರಾಷ್ಟ್ರದ ಚೈತನ್ಯವನ್ನ ದುರ್ಬಲಗೊಳಿಸಿತು. ಕಾನೂನಿಗೆ ಅಗೌರವವೆಸಗಿದ್ದು ಮಾತ್ರವಲ್ಲ, ರಾಷ್ಟ್ರವನ್ನು ಅಸಾಧ್ಯ ದುರಂತಕ್ಕೆ ತಳ್ಳಿದುದು ಗಾಂಧಿಯ ಅಹಿಂಸಾವಾದವೇ. ಇಂಥ ವಿಧಾನಗಳನ್ನು ಪ್ರೋತ್ಸಾಹಿಸಿದ ಯಾವ ರಾಷ್ಟ್ರದಲ್ಲೂ ಪ್ರಗತಿಪರ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು” ಎಂದು ಡಾ|| ಅಂಬೇಡ್ಕರ್ ಮನಗಂಡಿದ್ದರು.

ಜರ್ಮನಿಯ ಶ್ರೇಷ್ಠ ಚಿಂತಕನಾದ ಫೆಡ್ರಿಕ್ ನೀಷೆ “What is more harmful thanany vice? Active sympathy for the ill constitutedand week” (ಎಲ್ಲ ದೋಷಕ್ಕಿಂತ ಹೆಚ್ಚು ಉಪದ್ರವ ಕಾರಿಯಾದುದು ಯಾವುದೆಂದರೆ ದುಷ್ಟರಿಗೆ ಹಾಗೂ ಅಶಕ್ತರಿಗೆ ಹೆಚ್ಚು ಮರುಕ ತೋರುವುದಾಗಿದೆ) ಎಂದಿದ್ದಾನೆ. ಬಹುಶಃ ಇದು ಗಾಂಧಿಯಲ್ಲಿ ಇದ್ದ ದೊಡ್ಡ ದೋಷ. ಇದನ್ನು ಮನಗಂಡಿದ್ದ ಡಾ|| ರಾಮ ಮನೋಹರ ಲೋಹಿಯಾ “ನಾನು ಅಣುಭಾಂಬನ್ನು ಅದು ಸಿಗುವುದಿದ್ದರೆ ದೊರಕಿಸಿಕೊಳ್ಳಬೇಕೆಂದು ಕೇಳಿದ್ದೇನೆ. ನಾನು ಎಂದೆಂದೂ ಇನ್ನೊಬ್ಬನ ಮನೆಯನ್ನು ವಶಪಡಿಸಿಕೊಳ್ಳಲು ಆಯುಧಗಳನ್ನು ಉಪಯೋಗಿಸಲಾರೆ. ಆದರೆ ನನ್ನ ಮಾತೃಭೂಮಿಯೇ ಶತ್ರುಗಳ ಆಕ್ರಮಣಕ್ಕೆ ತುತ್ತಾದಾಗ ನಾನು ಯಾವುದೇ ಅವಶ್ಶವಿರುವ ಹಾಗೂ ದೊರಕುವ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಹಿಂದೆಗೆಯಲಾರೆ. ನಾನು ಅಹಿಂಸೆಗೆ ಬದ್ಧನಾಗಲು ಇಚ್ಛಿಸುತ್ತೇನೆ. ಆದರೆ ಈ ಕ್ರೂರ ಅಮಾನುಷ, ಬರ್ಬರ ಹಿಂಸೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಸಂಘಟಿತ ಹಿಂಸೆಯನ್ನೇ ಅವಲಂಭಿಸಬೇಕಾದುದು ಏಕೈಕ ಮಾರ್ಗವಾದರೆ, ಅದನ್ನು ಪ್ರಯೋಗಿಸಲು ನಾನು ಇಚ್ಛಿಸುತ್ತೇನೆ.

ಉಳ್ಳವರ, ಶೋಷಕರ, ಪ್ರಭುಗಳ ಮತ್ತು ಉತ್ತಮರ ಮನಸ್ಸನ್ನು ಪರಿವರ್ತಿಸುವುದು ಒಳ್ಳೆಯದೇನೋ ಸರಿ. ಆದರೆ ದರಿದ್ರನ, ದುಃಖತನ, ಶೋಷಿತನ, ತುಳಿತಕ್ಕೆ ಒಳಗಾಗಿರುವವನ ಮನಸ್ಸನ್ನು ಪರಿವರ್ತಿಸಿ ಅವನ ಕ್ಲೈಬ್ಯಕ್ಕೆ ಬದಲು ಧೈರ್ಯಸ್ಥೈರ್ಯಗಳನ್ನು ತುಂಬುವುದು ಮುಖ್ಯ. ಬಂಜೆ ಗಾಂಧಿವಾದವೊಂದು ಈಗ ಅಸ್ಥಿತ್ವಕ್ಕೆ ಬಂದು ಅದು ಮುಖ್ಯವಾಗಿ ಶ್ರೀಮಂತರ, ಉಳ್ಳವರ ಪರಿವರ್ತನೆಗೇ ಹೆಚ್ಚಾಗಿ ಪ್ರಾರ್ಥಿಸುತ್ತದೆ. ಬಡತನ, ದಲಿತನ ಅಂತರಂಗದ ಪರಿವರ್ತನೆಗೆ ಆದು ಯತ್ನಿಸುತ್ತಲೇ ಇಲ್ಲ. ಭಾರತದ ಮತ್ತು ಅಗಾಧ ವಿಶ್ವದ ಬಹುಪಾಲು ಜನಸ್ತೋಮವು ಸಾಕು ಪ್ರಾಣಿಯಂತ ಚಿರಂತನ ಶರಣಾಗತಿಯಲ್ಲಿಯೂ ಮತ್ತು ಒಮ್ಮೊಮ್ಮೆ ಇದ್ದಕ್ಕಿದ್ದಂತೆಯೇ ಮೇಲೆದ್ದು ಕಾದಾಡುವ ಮೃಗೀಯ ಕ್ರೌರ್ಯಕ್ಕೆ ಸಿಕ್ಕಿಕೊಂಡಿದೆ.” ಎಂದು ಯಾವುದೇ ಒಬ್ಬ ವ್ಯಕ್ತಿಯಾಗಲೀ, ಒಂದು ರಾಷ್ಟ್ರವಾಗಲೀ ತಾಳಬೇಕಾದ ನಿಲುವಿನ ಪ್ರಾಕೃತಿಕ ಸತ್ಯವನ್ನು ಅಭಿವ್ಯಕ್ತಿಸುತ್ತಾ ವಸ್ತು ಸ್ಥಿತಿಯನ್ನ ಕಣ್ಣಮುಂದೆ ಕಟ್ಟಿಕೊಟ್ಟಿದ್ದಾರೆ.

ತಟಸ್ಥ ವ್ಯಕ್ತಿತ್ವ:- ಗಾಂಧಿಯವರದು ಕೆಲವು ವಿಷಯಗಳಲ್ಲಿ ತಟಸ್ಥ ವ್ಯಕ್ತಿತ್ವ. ದಕ್ಷಿಣ ಆಫ್ರಿಕಾದಲ್ಲಿ ವಿನಾಕಾರಣ ಅವರಿಗೆ ಹೊಡೆದ ಸಂದರ್ಭಗಳಲ್ಲೆಲ್ಲಾ ಅವರು ತಟಸ್ಥ ನಿಲುವನ್ನು ತಾಳಿದ್ದಾರೆ. ಅವರೇ ಹೇಳುವಂತೆ “ನನಗೆ ಸಂಭವಿಸುವ ವೈಯಕ್ತಿಕ ಅನ್ಯಾಯಕ್ಕಾಗಿ ಯಾರ ಮೇಲೂ ಮೊಕದ್ದಮೆ ಹೂಡುವುದಿಲ್ಲವೆಂಬ ನಿಯಮವನ್ನು ನಾನು ಮಾಡಿಕೊಂಡಿದ್ದೇನೆ. ತಮ್ಮ ತಪ್ಪು ಅವರಿಗೆ ತಿಳಿದ ಕೂಡಲೇ ಅವರು ಶಾಂತವಾಗಿ ಸುಮ್ಮನಾಗುತ್ತಾರೆ. ಅವರ ನ್ಯಾಯ ಬುದ್ಧಿಯಲ್ಲಿ ನನಗೆ ವಿಶ್ವಾಸವಿದೆ.” ಎನ್ನುವ ನಿಲುವು ಅವರದು. ಇವು ಅವರ ದಾರ್ಶನಿಕ ವ್ಯಕ್ತಿತ್ವಕ್ಕೆ ಪೂರಕವಾಗುವ ಗುಣಗಳು.

ಅಹಿಂಸೆ ಮತ್ತು ಯುದ್ಧ:- ಅಹಿಂಸೆ ನೈಸರ್ಗಿಕ ಗುಣ. ಅನಿವಾರ್ಯ ಹಿಂಸೆ ಪ್ರಾಕೃತಿಕ ಸತ್ಯ. ಹಿಂಸೆ ಮನುಷ್ಯನ ಮೂಲಗುಣವಲ್ಲ. ಹಾಗೆ ಅನಿವಾರ್ಯವಾದ ಯುದ್ಧ ಕ್ರೌರ್ಯವಲ್ಲ. ಅದು ಅನಿವಾರ್ಯವಾದ ಪ್ರಕ್ರಿಯೆ. ನೇತಾಜಿಯವರದು ಹಿಂಸಾಮಾರ್ಗ ಎಂದು ಅರ್ಧೈಸುವವರಿದ್ದಾರೆ. ಅವರದು ಹಿಂಸಾಮಾರ್ಗ ಅಲ್ಲ. ಯುದ್ಧ ಅನಿವಾರ್ಯವಾದಾಗ ಯುದ್ಧ. ಸ್ವಾತಂತ್ರ್ಯಕ್ಕಾಗಿ, ಸ್ವಾತಂತ್ರದ ಸಂರಕ್ಷಣೆಗಾಗಿ ರಾಷ್ಟ್ರ ರಾಷ್ಟ್ರಗಳ ನಡುವಣ ಕ್ರೌರ್ಯವಲ್ಲ. ಅದು ಹಿಂಸೆಯೂ ಅಲ್ಲ. ಹಿಂಸೆ ಎಂದು ಪರಿಗಣಿಸುವುದಾದರೆ ಅದು ಅನಿವಾರ್ಯವಾದ ಹಿಂಸೆ. ಅದು ತಾತ್ಕಾಲಿಕವಾದದ್ದು. ಇದನ್ನ ಎರಡು ಜಾಗತಿಕ ಯುದ್ಧಗಳ ನಂತರದ ಸ್ಥಿತಿಗತಿಗಳು ಸ್ಥಿರಪಡಿಸಿವೆ. ಯುದ್ಧದಲ್ಲಿ ಕೈ ಕೈ ಮಿಲಾಯಿಸಿದ ರಾಷ್ಟ್ರಗಳು ಯುದ್ಧಾ ನಂತರ ಕೈ ಕೈ ಕುಲುಕುತ್ತಿವೆ. ಈ ಪ್ರಾಕೃತಿಕ ಸತ್ಯವನ್ನ ಮನಗಂಡು ಮಾನ್ಯ ಮಾಡಬೇಕಾಗುತ್ತದೆ. ’ಅಹಿಂಸೆ’ ಸ್ಥಿತಪ್ರಜ್ಞನಿಂದ ಮಾತ್ರಸಾಧ್ಯ. ಸ್ಥಿತಪ್ರಜ್ಞತೆ ಗಳಿಸಿಕೊಳ್ಳಬೇಕಾದ ಗುಣವೇ ಹೊರತು ಪ್ರಕೃತಿ ದತ್ತವಾದುದಲ್ಲ ಎಂಬ ಅರಿವು ಅಗತ್ಯ.

ಶ್ರೇಷ್ಠ-ಕನಿಷ್ಠತೆಗಳು:- ಭಾರತದಲ್ಲಿ ಎರಡು ರೀತಿಯ ಸಂಸ್ಕೃತಿಗಳು ಪ್ರಧಾನವಾಗಿವೆ. ಅವೆ Work culture- ಶ್ರಮ ಸಂಸ್ಕೃತಿ; ethic culture- ನೈತಿಕ ಸಂಸ್ಕೃತಿ. ಭಾರತದ ಉಸಿರಿಗೆ ಕಾರಣವಾದದ್ದು ಈ ಶ್ರಮ ಸಂಸ್ಕೃತಿ. ಇದು ಸ್ವತಂತ್ರ್ಯಾನಂತರವೂ ರಾಷ್ಟ್ರ ಭೌತಿಕವಾಗಿ ಪ್ರಗತಿ ಪಥದಲ್ಲಿ ಸಾಗಲು ತನ್ನ ಶ್ರಮ ಶಕ್ತಿಯನ್ನು ನಿರಂತರ ನೀಡುತ್ತಲೇ ಬಂದಿದೆ. ಆದರೆ ನೈತಿಕ ಸಂಸ್ಕೃತಿ ಈ ದೇಶದ ಕಳಂಕವಾಗಿ ಬೆನ್ನತ್ತಿ ಬಂದದ್ದು ಸ್ವಾತಂತ್ರ್ಯಾ ನಂತರ ಪಾತಾಳಕ್ಕೆ ಕುಸಿದು ಹೋಗಿದೆ. ಇಂದಿಗೂ ಈ ಅಲ್ಪ ಸಂಖ್ಯಾತ ಮೇಲ್ವರ್ಗದ ಕೈ ಹಿಡಿಯಷ್ಟು ಜನ ಹುಸಿ ಶ್ರೇಷ್ಠತೆಯಲ್ಲಿ ಕಮರಿ ಹೋಗುತ್ತಿದ್ದರೆ ಬಹುಸಂಖ್ಯಾತ ಕೆಳವರ್ಗದ ಜನ ಶ್ರಮಶಕ್ತಿಯ ಸಾಮರ್ಥ್ಯವಿದ್ದೂ ಕೀಳರಿಮೆಯಲ್ಲಿ ಕನಲಿ ಹೋಗುತ್ತಿದ್ದಾರೆ. ಸಾಮರಸ್ಯ, ಗಾಂಧಿ ಪ್ರತಿಪಾದಿಸಿದ ’ಅಹಿಂಸೆ’ ಇಂದ ಸಾಧ್ಯವೆ? ಇಲ್ಲಾ ಸಂಘರ್ಷದಿಂದಲೆ? ಪರಿವರ್ತನೆಯ ಮಾರ್ಗ ಯಾವುದು?

ಉಪಸಂಹಾರ:- ಈ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ ಗಾಂಧಿ ಮತ್ತು ಪ್ರಸ್ತುತತೆಯನ್ನು. ಗಾಂಧೀಜಿ ವ್ಯಕ್ತಿಯಾಗಿ ಒಡ್ಡಿಕೊಂಡ ಪ್ರಯೋಗ ಮೆಚ್ಚಿಗೆಯಾದರೂ ಅವರ ನಿಲುವುಗಳನ್ನು ವಿಮರ್ಶಿಸಿಯೇ ತೀರ್ಮಾನಕ್ಕೆ ಬರಬೇಕಾಗುತ್ತದೆ. ಏಕೆಂದರೆ ದಾರ್ಶನಿಕತೆಗೆ ಏರಲು ಗಾಂಧಿಯವರ ಸತ್ಯಾನ್ವೇಷಣೆಯ ಪ್ರಯೋಗ ಸ್ವಾಗತಾರ್ಹವಾದರೂ ಅಂತಿಮವಾಗಿ ಅದನ್ನು ಇತಿಹಾಸ ನಿರ್ಣಯಿಸುತ್ತದೆ. ಅದರಿಂದ ಯಾರಿಗೂ ಯಾವುದಕ್ಕೂ ಅಪಾಯವಿಲ್ಲ. ಆದರೆ ಒಂದು ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಹಾಗೂ ಸ್ವಾತಂತ್ರ್ಯಾ ನಂತರದ ಅದರ ಆಂತರಿಕ ಸ್ವರೂಪಕ್ಕೆ ಗಾಂಧೀಜಿಯವರ ’ಪ್ರಯೋಗ ಮನಸ್ಸು’ ಅಪ್ರಸ್ತುತವಷ್ಟೇ ಅಲ್ಲ ಅದು ಅತ್ಯಂತ ಅಪಾಯಕಾರಿಯಾದದ್ದು. ಭಾರತ ಗಾಂಧಿಯೊಂದಿಗೆ ತನ್ನತನವನ್ನು ಕಳೆದುಕೊಂಡು ಅನಾಥವಾಯ್ತು. ಬ್ರಿಟಿಷರು ಹೋದರೂ ಬ್ರಿಟಿಷ್ ಸಂಸ್ಕೃತಿ ಭಾರತವನ್ನು ಬಿಟ್ಟು ತೊಲಗಲಿಲ್ಲ.

ಸ್ವಾತಂತ್ರ್ಯಸುವರ್ಣ ಸಂದರ್ಭದಲ್ಲಿ ಭಾರತ ಎದುರಿಸುತ್ತಿರುವ ದೊಡ್ಡ ಗಂಡಾಂತರ ಯಾವುದೆಂದರೆ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಕಳೆದು ಹೋಗುತ್ತಿರುವ ಅವಶ್ಯವಿದ್ದಷ್ಟು ಆಧುನಿಕತೆಯನ್ನು ಅಳವಡಿಸಿಕೊಂಡ ಉಪನಿಷತ್ ಸತ್ಯದ, ಬುದ್ಧನ ಬೆಳಕಿನ ಭಾರತವನ್ನು. ಅದು ಸಿಕ್ಕೀತೆ?

ಆಕರ ಗ್ರಂಥಗಳು ೧. ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ – ಮೋ.ಕ. ಗಾಂಧಿ. ೨. ಸಂಸ್ಕೃತಿ ಮತ್ತು ಶಂಭಾ – ಮಲ್ಲೇಪುರಂ ಜಿ. ವೆಂಕಟೇಶ್ ೩.. ಕನ್ನಡ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ ೪. ಸಂಕ್ರಮಣ ೩ಂ೭, ಮಾರ್ಚಿ ೧೯೯೮ ೫. ವಿವೇಕಾನಂದರ ಕ್ರಾಂತಿಕಾರಿವಿಚಾರಗಳು- ಜಹೋನಾ ೬. ಡಾ|| ಅಂಬೇಡ್ಕರ್ ವಿಚಾರಧಾರೆ- ಡಾ || ಅರವಿಂದ ಮಾಲಗತ್ತಿ ೭. ’ವಿವೇಕಾನಂದ’ ಜೀವನ ಚರಿತ್ರೆ – ಜಹೋನಾ ೮. The Anti Christ – F.Nietzsche ೯. The Springing Tiger – Hugh Toye ೧ಂ. We the people – N.A.palkivala
-೧೯೯೮

[ದಿನಾಂಕ ೭. ೧ಂ. ೯೮ ರಂದು ಮಂಡ್ಯದ ರೈತಭವನವಲ್ಲಿ ’ಕರ್ನಾಟಕ ರೈತ ಸಂಘ’ ಹಾಗೂ ’ಜನದನಿಯ’ ಸಂಯುಕ್ತಾಶ್ರಯದಲ್ಲಿ ನಡೆದ ’ಗಾಂಧಿ-ಒಂದು ಚಿಂತನೆ’ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿವೇಕಾನಂದ ಮತ್ತು ಅಂಬೇಡ್ಕರ್ ತೌಲನಿಕ ಚಿಂತನೆ
Next post ತೊಟ್ಟು ಕಳಚಿತು.

ಸಣ್ಣ ಕತೆ

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys