ಹಣ್ಣೊಂದು ಇತ್ತು ಮರದಿಂದ ಬಿತ್ತು
ಮಣ್ಣಿನಲಿ ಬಿದ್ದು ಹೋಯ್ತು
ಸಣ್ಣಾಗಿ ಸೋತು ಸುದ್ದಾಗಿ ಮತ್ತೆ
ಕಣ್ಣಿನಲಿ ನೀರು ಬಂತು

ಬೆಳೆದಂತೆ ಕಾಯಿ ತಾ ಭಾರವಾಯ್ತು
ಬೆಳೆದದ್ದೆ ಮುಳುವದಾಯ್ತು
ತಳೆದೀತೆ ಭಾರ ತೆಳ್ಳನೆಯ ತುಂಬು
ಕಳವಳದಿ ತಡೆಯದಾಯ್ತು

ತೊಯ್ದಾಡಿ ತೂಗಿ ಬಯ್ದಾಡಿ ವಿಧಿಯ
ಸುಯ್ದಾಡಿ ಹಗಲುರಾತ್ರಿ
ಕೊಯ್ದಂತೆ ತೊಟ್ಟು, ತಾಯ ಮರ ಬಿಟ್ಟು
ಹೊಯ್ದಾಡಿ ಬಿತ್ತು ಖಾತ್ರಿ

ಅಯ್ಯೋ ಎಂದು ಗೋಳಾಡುತಿತ್ತು
ಚುಯ್ಯೆಂದು ರಸವ ಸೋರಿ
ಬಯ್ಯುವುದು ಯಾರ ತನ್ನನ್ನೆ ತಾನು
ಮೈಯಾರ ನೆಲವ ಸಾರಿ

ದಿನ ತುಂಬಿದಾಗ ತುಂಬಿದ್ದ ಬಾಳು
ಬೇರ್ಪಡುವ ರೀತಿ ಬೇರೆ
ತನು ಮನವು ಬಲಿತು ಹಣ್ಣಾಗಿ ಕೊನೆಗೆ
ಮರ ಬಿಡುವ ರೀತಿ ಬೇರೆ

ಹೊಳೆದಿತ್ತು ತಥ್ಯ ಬಿದ್ದಾಗ ನೆಲಕೆ
ಸದ್ದಾಯ್ತು ಒಳಗೆ ಹೊರಗೆ
ಬಿದ್ದಾಗಲೊಡನೆ ಮರದಿಂದ ಕೆಳಗೆ
ತೆರೆದಿತ್ತು ಮೇಲೆ ಕರೆಗೆ

ವೃಕ್ಷ ಫಲ ಬಂಧ ಶಾಶ್ವತವು ಅಲ್ಲ
ತಕ್ಷಣಕೆ ಬಿಡುವುದಲ್ಲ
ಲಕ್ಷ ವರುಷಗಳ ಸ್ನೇಹವಿದ್ದರೂ
ಲಕ್ಷಣವು ಒಂದೆ ಅಲ್ಲ

ಸೃಷ್ಟಿಯಲಿ ಸಹಜ ಫಲಮರವ ಬಿಟ್ಟು
ಕಷ್ಟದಲಿ ಬೇರೆಯಾಗಿ
ಸೃಷ್ಟಿಸಲೆ ಬೇಕು ಹೊಸಫಲವ ಮತ್ತೆ
ಇಷ್ಟಾನಿಷ್ಟವಾಗಿ
***