ನಂದಿಯ ಬೆಟ್ಟದ ಮೇಲುಗಡೆ

ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ
ಕೆಳ ಕೆಳಗಾಳದ ಕಣಿವೆಯೊಳು;
ಕಪ್ಪೆಯ ಗೂಡೋ, ಹುತ್ತವೊ ಇದು ಎನೆ
ನಗೆಗೇಡಾಯಿತು ನೆರೆಹೊಳಲು;
ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ,
ಹಳುವೋ ಹುಲ್ಗಾವಲ ಹರಹೋ?
ಎನ್ನುತ ಭ್ರಮಿಸುವ ತೆರವಿಂದಾಯಿತು
ನಂದಿಯ ಬೆಟ್ಟದ ಮೇಲುಗಡೆ.

ಐರಾವತವೆನೆ ಬಿಳಿಮುಗಿಲಾನೆಯ
ಸದರದಿ ಮುಟ್ಟುತ ನೇವರಿಸಿ,
ಕುಸುಮಾವಳಿಯೆನೆ ಬಾನಿನ ನೀಲವ
ಟೊಂಗೆಯ ತುದಿಯೊಳು ದೋಲಯಿಸಿ,
ಚಿರ ಯೌವನವೆನೆ ಹಸುರನು ಮೆರೆಯಿಸಿ,
ಜುಮ್ಮೆನೆ ಸುರಭಿಯ ನಿಃಶ್ವಸಿಸಿ,
ದನಿಯೊಳು ನೆಳಲೊಳು ಚೋದ್ಯಂಗೊಳಿಸುವ
ಬನವಿದಿಗೋ ಮಲೆ ಮೇಲುಗಡೆ!

ಕಿರುದೆರೆಕುದುರೆಯ ರವಿರಾವುತರನು
ಕೊಳದಂಗಣದೊಳಗೋಡಿಸುತ,
ಚಣಕೂ ಚೆದರುವ ಮೋಡದ ಮಂದೆಗೆ
ಬಾನಿನ ಬಯಲೊಳಗೂಳಿಡುತ,
ತಲೆ ಕೆದರುತ, ಮೈ ಕುಣಿಸುತ ತರುಗಳ
ಹುಡುಗಾಟಕೆ ಹುಯಿಲಿಡಿಸುತ್ತ,
ತಿಣ್ಣನೆ ಮಂದಿಯ ತುಡುಕುತ, ಜಡತೆಯ
ಕಸಿಯುವೆಲರ್ ಮಲೆ ಮೇಲುಗಡೆ.

ಪಗಲಿರುಳಾಗಿಸಿ ದೆಸೆಯೊಗ್ಗೂಡಿಸಿ
ಲೋಕವ ಮೋಹಿಸುತುರವಣಿಸಿ,
ಘುಡು ಘುಡಿಸುತಸುತಲಾರ್ಭಟಿಸುತ ಫಳ್ಳನೆ
ಪಲ್ಕಿಯುತ ಭೀಕರನೆನಿಸಿ,
ಬುದ್ಧನ ಮಾರನೊಲಚಲವ ತಾಗುತ
ಹಮ್ಮುಳಿದೋಡಲು ಕಾರ್ಮುಗಿಲು,
ನಗುತಿಹ ದೇವರ ದಿವ್ಯಸ್ಮಿತವೆನೆ
ಮಳೆಬಿಸಿಲಿದೂ ಮಲೆ ಮೇಲುಗಡೆ.

ಸೊದೆಯಂತಸುವನು ಬಿಸಿಲುದ್ದೀಪಿಸೆ
ನಲಿದುಲಿದಾಡುವೆ-ಸುರನವೊಲು;
ಕೈಯೆಡೆ ಕೋಡೊಳು ರೆಕ್ಕೆಯಗೊಳ್ಳಲು
ಮುಗಿಲುತ್ಸುಕಿಸುವೆ-ಯಕ್ಷನೊಲು;
ಗಿರಿಶನೊಲದ್ರಿಯ ನಡೆವ ಮಹಾತ್ಮನ
ಹಿಂಬಾಲಿಸುವೆನು- ಗಣರವೊಲು;
ಅಮರ್ತ್ಯಚೇತನರನೇಕಭಾವಗ-
ಳಿಂತೆನಗಹುದೈ ಮೇಲುಗಡೆ.

ಮೆಲ್ಲನೆ ಮೆಲ್ಲನೆ ಬೆಳುದೆಸೆ ದಳಗಳ
ತಿರೆ ಹೂ ಮುಚ್ಚಲು, ಇರುಳಿಳಿಯೆ,
ಶಾಂತನ ತೇಜಸ್ವಿಯ ಸಾನ್ನಿಧ್ಯದಿ
ತಮ್ಮೊಳಬೆಳಕೊಳು ಜನವೆಸೆಯೆ,
ಶ್ರುತಿ ನುಡಿಯಲು, ನುತಿಯೊಗೆಯಲು, ಕರಣಗ-
ಳಮಿತಾಚರಣೆಯ ಸುತನವೊಲು
ದಣಿದಾತ್ಮದ ಬಳಿಗೈತರ-ಅಹ ಏ-
ನುತ್ಸವವೋ ಮಲೆ ಮೇಲುಗಡೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತ್ತೆಸೊಸೆಯರ ಜಗಳ
Next post ಕಟ್ಟುತಾವೆ ಹಕ್ಕಿ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…